Categories
ಜಾನಪದ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಡಿ. ಎಸ್. ಗಂಗಾಧರಗೌಡ

ಬಣ್ಣ ಬಣ್ಣದ ಮುಖವಾಡಗಳೊಂದಿಗೆ ಆಕರ್ಷಿಸುವ ಸೋಮನ ಕುಣಿತವನ್ನು ಜನಪ್ರಿಯಗೊಳಿಸಿದ ಹೆಗ್ಗಳಿಕೆ ತುಮಕೂರಿನ ಡಿ. ಎಸ್. ಗಂಗಾಧರಗೌಡ ಅವರದು.
ಚಿಕ್ಕಂದಿನಿಂದಲೇ ಜನಪದ ಕಲಾವಿದರಾಗಿ ಯಕ್ಷಗಾನ ಪಟುವಾಗಿ ಸೋಮನ ಕುಣಿತವನ್ನು ಗಂಭೀರವಾಗಿ ಅಭ್ಯಾಸ ಮಾಡಿರುವ ದಂಡಿನ ಶಿವರದ ಶ್ರೀ ಗಂಗಾಧರಗೌಡರು ಜನಪದ ಕಲೆಗಳಿಗಾಗಿಯೇ ಸ್ವರ್ಣಶ್ರೀ ಯಕ್ಷಗಾನ ಕಲಾಶಾಲೆ ತೆರೆದವರು.
ಸೋಮನ ಕುಣಿತದಲ್ಲಿ ವೈವಿಧ್ಯತೆಯನ್ನು ತುಂಬುವ ಉದ್ದೇಶದಿಂದ ಅನೇಕ ಪ್ರಯೋಗಗಳನ್ನು ಕೈಗೊಂಡ ಗಂಗಾಧರಗೌಡರು ಒಂದೇ ಬಾರಿಗೆ ೨೫ ಸೋಮಗಳನ್ನು ಕುಣಿಸಿದ್ದರು.
ಒಂದೇ ವೇದಿಕೆಯಲ್ಲಿ ೨೫ ಮಂದಿ ಮೂಡಲಪಾಯ ಯಕ್ಷಗಾನ ಭಾಗವತರನ್ನು ಸೇರಿಸಿ ಕಾರ್ಯಕ್ರಮ ನೀಡಿದ್ದ ಗಂಗಾಧರ ಗೌಡರು ಒಂದೇ ಬಾರಿಗೆ ೧೦ ಯಕ್ಷಗಾನ ಪ್ರದರ್ಶನ ಏರ್ಪಡಿಸಿ ‘ಯಕ್ಷರಾತ್ರಿ’ ಎಂಬ ಪ್ರಶಂಸೆ ಪಡೆದ ಸಂಘಟಕರು.
ದೇಶದ ಅನೇಕ ನಗರಗಳಲ್ಲಿ ತಮ್ಮ ಸೋಮನ ತಂಡದ ಪ್ರದರ್ಶನ ನೀಡಿರುವ ಶ್ರೀ ಗಂಗಾಧರಗೌಡರು ತಮ್ಮ ಊರಿನ ಕೋಲಾಟ, ನಗಾರಿ, ತಮಟೆ, ಕಹಳೆ ವಾದ್ಯಗಳ ಪುನರುಜ್ಜಿವನಕ್ಕೂ ಕೈಹಾಕಿದ್ದಾರೆ.