ನಟರಾಗಿ, ರಂಗ ನಿರ್ವಾಹಕರಾಗಿ, ನಿರ್ದೇಶಕರಾಗಿ, ಬೆಳಕು ವಿನ್ಯಾಸಕಾರರಾಗಿ, ರಂಗ ವಿನ್ಯಾಸಕಾರರಾಗಿ, ರಂಗ ಶಿಬಿರಗಳ ಸಂಘಟನಾಕಾರರಾಗಿ, ನಾಟಕೋತ್ಸವ, ವಿಚಾರ ಸಂಕಿರಣಗಳ ಸಂಘಟಕರಾಗಿ, ರಂಗಪುಸ್ತಕಗಳ ಪ್ರಕಾಶಕರಾಗಿ, ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಗಂಧದ ಕೊರಡಿನ ಹಾಗೆ ತಮ್ಮನ್ನು ತೇಯ್ದುಕೊಳ್ಳುತ್ತ ಕನ್ನಡ ರಂಗಭೂಮಿಯಲ್ಲಿ ಪರಿಮಳ ಪಸರಿಸಿ ಎಲೆಮರೆಯ ಹೂವಾಗಿ ನಿಂತವರು ದೀವಟಿಗೆ ಕೃಷ್ಣಪ್ಪ,
ಆನೇಕಲ್ ತಾಲ್ಲೂಕಿನ ಹೆನ್ನಾಗರದಲ್ಲಿ ೧೯೪೮ರಲ್ಲಿ ಹುಟ್ಟಿದ ಎಲ್. ಕೃಷ್ಣಪ್ಪ ಓದಿದ್ದು ಎಸ್.ಎಸ್.ಎಲ್.ಸಿ.ವರೆಗೆ ಮಾತ್ರ. ಚಿಕ್ಕಂದಿನಿಂದಲೇ ರಂಗಭೂಮಿಯ ಸೆಳೆತಕ್ಕೆ ಸಿಲುಕಿಕೊಂಡು ಮನೆ ತೊರೆದು ರಂಗಸ್ಥಳವನ್ನೇ ಆಸರೆಯಾಗಿಸಿಕೊಂಡವರು. ಪ್ರಜ್ವಲಿಸುವ ರಂಗ ಬೆಳಕಿನ ಮುಂದೆ ನಿಂತು ಮಿಂಚಲು ತುಡಿಯುತ್ತಿದ್ದವರೇ ಅಧಿಕವಾಗಿದ್ದ ದಿನಗಳಲ್ಲಿ ಬೆಳಕಿನ ಹಿಂದೆ ನಿಂತು ಅದನ್ನು ನಿರ್ದೇಶಿಸುವುದರಲ್ಲಿ ಕೃಷ್ಣಪ್ಪ ಪಡೆದ ಪ್ರಾವೀಣ್ಯದಿಂದಾಗಿ ರಂಗಾಸಕ್ತರು ಅವರನ್ನು ದೀವಟಿಗೆ ಕೃಷ್ಣಪ್ಪ ಎಂದೇ ಗುರುತಿಸುವಂತಾಯಿತು.
ಹೊಟ್ಟೆಪಾಡಿಗಾಗಿ ಸಿವಿಲ್ ಕಂಟ್ರಾಕ್ಟರ್ ಕೂಡ ಆಗಿರುವ ಕೃಷ್ಣಪ್ಪ ಕಟ್ಟುವುದೇ ಕಾಯಕ’ ಎನ್ನುವ ತತ್ವದಲ್ಲಿ ನಂಬಿಕೆಯಿರಿಸಿಕೊಂಡಿರುವವರು. ಸದ್ದುಗದ್ದಲವಿಲ್ಲದೆ ಕೆಲಸ ಮಾಡಿಕೊಂಡು ಹೋಗುವ ಸರಳ ವ್ಯಕ್ತಿ. ಜರ್ಮನಿಯ ಫಿಟ್ಸ್ ಬೆನವಿಡ್ಸ್ ಅವರ ನಿರ್ದೆಶನದ ರಂಗಶಿಬಿರದಲ್ಲಿ, ಲಂಡನ್‌ನ ಪೀಟರ್ ಬೂಕ್ ಅವರ ನಿರ್ದೇಶನದ ರಂಗ ಶಿಬಿರದಲ್ಲಿ, ನೀನಾಸಂ ಸಂಸ್ಥೆಯು ಯು.ಆರ್. ಅನಂತಮೂರ್ತಿಯವರ ನಿರ್ದೇಶನದಲ್ಲಿ ನಡೆಸಿದ ಸಂಸ್ಕೃತಿ ಶಿಬಿರದಲ್ಲಿ, ರಾಜ್ಯ ಸಂಗೀತ ನಾಟಕ ಅಕಾಡೆಮಿ ಶ್ರೀರಂಗರ ನಿರ್ದೇಶನದಲ್ಲಿ ನಡೆಸಿದ ಟ್ರೈನಿಂಗ್ ಆಫ್ ಡ್ರಮಾಟಿಕ್ಸ್‌ನಲ್ಲಿ ಭಾಗವಹಿಸಿ ಪಡೆದುಕೊಂಡ ಸಮೃದ್ದವೂ ವೈವಿಧ್ಯಮಯವೂ ಆದ ಅನುಭವಗಳನ್ನು ತಮ್ಮ ರಂಗ ಪ್ರಯೋಗಗಳಲ್ಲಿ ಅತ್ಯದ್ಭುತವಾಗಿ ಧಾರೆಯೆರೆದು ಜನರ ಮೆಚ್ಚುಗೆಗೆ ಪಾತ್ರರಾದರು. ಕೃಷ್ಣಪ್ಪನವರ ರಂಗಸೃಷ್ಟಿಯ ವಿರಾಟ್ ಸ್ವರೂಪದ ದರ್ಶನವಾದದ್ದು ಶ್ರೀರಂಗರ `ಸ್ವರ್ಗಕ್ಕೆ ಮೂರೇ ಬಾಗಿಲು’ ನಾಟಕದಲ್ಲಿ.
ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ಒಂದು ಅವಧಿಗೆ ಸದಸ್ಯರಾಗಿದ್ದ ಕೃಷ್ಣಪ್ಪ ಅವರನ್ನು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ವಿವಿಧ ಸಂಘ ಸಂಸ್ಥೆಗಳ ಪ್ರಶಸ್ತಿಗಳು ಅರಸಿ ಬಂದಿವೆ.
ನಾಟಕದ ಮಾತುಗಳಿಗೆ, ವಿದ್ಯಮಾನಗಳಿಗೆ ನೆರಳು-ಬೆಳಕಿನಾಟದಲ್ಲಿ ಹೊಸ ಅರ್ಥ- ಆಯಾಮಗಳನ್ನು ಕಲ್ಪಿಸಿಕೊಟ್ಟು ತಮ್ಮ ಪ್ರತಿಭಾ ಚಾತುರ ಮತ್ತು ಕಲ್ಪನಾ ಸಾಮರ್ಥ್ಯಗಳಿಂದ ಎಂಥವರನ್ನೂ ಬೆರಗುಗೊಳಿಸುವರು ಶ್ರೀ ದೀವಟಿಗೆ ಎಲ್. ಕೃಷ್ಣಪ್ಪನವರು.
Categories
ಶ್ರೀ ದೀವಟಿಗೆ ಎಲ್. ಕೃಷ್ಣಪ್ಪ
