Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ದೇವಿದಾಸ ಶೆಟ್ಟಿ

ಮುಂಬಯಿ ನೆಲದಲ್ಲಿ ಕನ್ನಡದ ಪ್ರತಿಭಾಶಕ್ತಿಯನ್ನು ಬೆಳಗಿದವರು ದೇವಿದಾಸ ಶೆಟ್ಟಿ, ಚಿತ್ತಕಲಾವಿದ, ಮುಖಪುಟ ವಿನ್ಯಾಸಕ, ಬರಹಗಾರ, ಮ್ಯೂರಲ್ ಕಲಾವಿದರಾಗಿ ಹೆಜ್ಜೆಗುರುತು ಮೂಡಿಸಿರುವ ಪ್ರತಿಭಾಶಾಲಿ. ಮುಂಬಯಿನಲ್ಲೇ ಹುಟ್ಟಿ ಬೆಳೆದ ದೇವಿದಾಸ ಶೆಟ್ಟಿ ಅವರು ಕನ್ನಡದಲ್ಲೇ ವಿದ್ಯಾಭ್ಯಾಸ ಕಲಿತವರು. ಬಾಲ್ಯದಲ್ಲೇ ಸೆಳೆದ ಚಿತ್ರಕಲೆಗೆ ಬದುಕು ಸಮರ್ಪಿಸಿಕೊಂಡವರು. ರೇಖಾಚಿತ್ರ, ಮ್ಯೂರಲ್ ಕಲಾಭಿವ್ಯಕ್ತಿ ಹಾಗೂ ಮುಖಪುಟ ವಿನ್ಯಾಸದಲ್ಲಿ ಕೈಚಳಕ ತೋರಿದ ಕಲಾವಿದರು. ದೇಶ-ವಿದೇಶಗಳಲ್ಲಿ ೭೮ ಏಕವ್ಯಕ್ತಿ ಪ್ರದರ್ಶನ, ೪೫ ಸಾಮೂಹಿಕ ಕಲಾಪ್ರದರ್ಶನದ ಜತೆಗೆ ೨೪೦ ಕಲಾಶಿಖರಗಳಲ್ಲಿ ಭಾಗಿಯಾದ ಹೆಗ್ಗಳಿಕೆ. ಕನ್ನಡ, ಇಂಗ್ಲೀಷ್, ಹಿಂದಿ, ಬಂಗಾಳಿ, ಮರಾಠಿಯ ೨೫೦ ಪುಸ್ತಕಗಳಿಗೆ ಮುಖಪುಟ ವಿನ್ಯಾಸ. ದೇವ್‌ಮಾಣಿಸ್ ಎಂದೇ ಜನಜನಿತರು. ಅತಿದೊಡ್ಡ ಲೋಹದ ಮ್ಯೂರಲ್ ಆರ್ಟ್, ಅತಿಎತ್ತರದ ಗಣೇಶ ಮ್ಯೂರಲ್ ಆರ್ಟ್ ಸೇರಿ ಹಲವು ವಿಭಿನ್ನ ಕಲಾಕೃತಿಗಳಿಂದ ಜನಪ್ರಿಯರು, ಬದುಕು ಬಿಡಿಸಿದ ಚಿತ್ರಗಳು, ಅರಳಿದ ಹೂವುಗಳು, ರೇಖೆಯಲ್ಲಿ ಜೀವನ ಪಯಣ ಮುಂತಾದ ೮ ಕೃತಿಗಳ ರಚನಾಕಾರರು. ೫೦೦೦ಕ್ಕೂ ಅಧಿಕ ರೇಖಾಚಿತ್ರಗಳನ್ನು ರಚಿಸಿರುವ ದೇವಿದಾಸ್ ಶೆಟ್ಟಿ ಬಾಂಬೆ ಆರ್ಟ್ ಸೊಸೈಟಿ, ಆರ್ಟ್ ಸೊಸೈಟಿ ಆಫ್ ಇಂಡಿಯಾದ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರು. ರಾಮಾಯಣ-ಮಹಾಭಾರತದ ರೇಖಾಚಿತ್ರಗಳಲ್ಲಿ ನಿರತರಾಗಿರುವ ಅವರು ೫೫ ವರ್ಷಗಳ ಹಿರಿತನವುಳ್ಳ ಕಲಾಚೇತನ.