ಎಂಟನೆಯ ಶತಮಾನದಲ್ಲಿ ಹಿಂದೂ ಧರ್ಮದ ಪುನರುತ್ಥಾನಕ್ಕೆ ಕಾರಣರಾದ ಮಹಾಪುರುಷರೊಬ್ಬರು ಅವತರಿಸಿದರು. ಅವರೇ ಶಂಕರಾಚಾರ್ಯರು.

ಕೇರಳದ ಪೂರ್ಣಾ ನದಿಯ ತೀರದ ಕಾಲಟಿಯೆಂಬ ಗ್ರಾಮದಲ್ಲಿ ನಂಬೂದರಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಶಂಕರರು ಎಂಟನೆಯ ವಯಸ್ಸಿನಲ್ಲೇ ಸಂನ್ಯಾಸ ಸ್ವೀಕರಿಸಿದರು. ಗುರುಪದತಲದಲ್ಲಿ ಕೆಲಕಾಲ ವಿದ್ಯಾಭ್ಯಾಸ ಮಾಡಿ ಕೇವಲ ಹನ್ನೆರಡನೆಯ ವಯಸ್ಸಿಗೇ ಧರ್ಮ ಪ್ರಚಾರದ ದೀಕ್ಷೆ ತೊಟ್ಟು ಹಿಂದೂಸ್ತಾನದ ಉದ್ದಗಲಕ್ಕೂ ಸಂಚರಿಸಿದರು. ಹೋದ ಹೋದಲ್ಲಿ ಹಿಂದೂ ಧರ್ಮದ ಅವನತಿಗೆ ಕಾರಣವಾಗಿದ್ದ ಆಚಾರ ವಿಚಾರಗಳ ಬಗ್ಗೆ ಜನತೆಗೆ ತಿಳುವಳಿಕೆ ನೀಡಿ ಅವರ ಮನ:ಪರಿವರ್ತಿಸಿದರು.

ತಮ್ಮ ಅನಂತರ ಇದೇ ರೀತಿ ಹಿಂದೂ ಧರ್ಮ ಜಾಗೃತಿಯನ್ನು ಸದಾ ಕಾಪಾಡಿಕೊಂಡು ಬರಲು ದೇಶದ ವಿವಿಧ ಭಾಗಗಳಲ್ಲಿ ಮಠಗಳನ್ನು ಸ್ಥಾಪಿಸಲು ಅವರು ನಿರ್ಧರಿಸಿದರು. ಅದರಂತೆ ಉತ್ತರದಲ್ಲಿ ಬದರೀನಾಥ್, ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕ ಮತ್ತು ದಕ್ಷಿಣದಲ್ಲಿ ಶೃಂಗೇರಿಗಳಲ್ಲಿ ಒಂದೊಂದು ಮಠವನ್ನು ಸ್ಥಾಪಿಸಿ, ಅಲ್ಲಿ ತಮ್ಮ ಖಾಸಾ ಶಿಷ್ಯರನ್ನು ಧರ್ಮಪ್ರಚಾರಕರಾಗಿ ನಿಯಮಿಸಿದರು. ಆ ಶಿಷ್ಯರು ತಮ್ಮ ಆನಂತರವೂ ಮಠದ ಅಧಿಪತಿಗಳಾಗಿದ್ದುಕೊಂಡು ಧರ್ಮಪ್ರಚಾರದಲ್ಲಿ ನಿರತರಾಗಿರುವಂತಹ ಯೋಗ್ಯ ಶಿಷ್ಯರಿಗೆ ಪೀಠಾಧಿಕಾರವನ್ನು ವಹಿಸಿಕೊಡುವಂತೆಯೂ, ಆ ಗುರುಪರಂಪರೆ ಅನೂಚಾನವಾಗಿ ನಡೆದು ಬರುವಂತೆಯೂ ನಿಯಾಮಕ ಮಾಡಿದರು.

ಶೃಂಗೇರಿ

ಹೀಗೆ ಅವರು ಸ್ಥಾಪಿಸಿದ ಮಠಗಳಲ್ಲಿ ದಕ್ಷಿಣದ ಮಠ ಶೃಂಗೇರಿಯಲ್ಲಿದೆ. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ತುಂಗಾತೀರದಲ್ಲಿರುವ ಶೃಂಗೇರಿ ಪ್ರಕೃತಿ ಸೌಂದರ್ಯದ ನೆಲೆವೀಡು. ಪಶ್ಚಿಮ ಘಟ್ಟಗಳ ತಪ್ಪಲಿನ ಅರಣ್ಯ ಪ್ರದೇಶದಲ್ಲಿರುವ ಈ ಗ್ರಾಮ ಅತ್ಯಂತ ಪ್ರಶಾಂತವಾದ ಪುಣ್ಯಭೂಮಿ. ತಪೋನಿರತರಾಗಿದ್ದುಕೊಂಡು ಧರ್ಮಪ್ರಚಾರ ಮಾಡುವ ಸಂನ್ಯಾಸಿಗಳಿಗೆ ಅತ್ಯಂತ ಸೂಕ್ತವಾದ ಸ್ಥಳವೆಂದು ಶಂಕರರು ಭಾವಿಸಿದ್ದು ಸಹಜವೆ. ಇದು ಪುರಾಣ ಪ್ರಸಿದ್ಧವಾದ ಸ್ಥಳವೂ ಹೌದು. ರಾಮಾಯಣದಲ್ಲಿ ಕೇಳಿ ಬರುವ ಋಷ್ಯಶೃಂಗನೆಂಬ ಋಷಿ ಇಲ್ಲಿಯ ಬೆಟ್ಟವೊಂದರ ಮೇಲೆ ಆಶ್ರಮ ನಿರ್ಮಿಸಿಕೊಂಡು ತಪಸ್ಸು ಮಾಡುತ್ತಿದ್ದನಂತೆ. ಆ ಋಶಿಯಿಂದಲೇ ಈ ಕ್ಷೇತ್ರಕ್ಕೆ ಶೃಂಗ-ಗಿರಿ ಎಂಬ ಹೆಸರು ಬಂತೆಂದು ಹೇಳುತ್ತಾರೆ. ಅದು ಕಾಲಕ್ರಮದಲ್ಲಿ ಶೃಂಗೇರಿ ಆಯಿತೆಂದೂ ಭಾವಿಸಲಾಗಿದೆ.

ಶಂಕರರ ನಾಲ್ಕೂ ಜನ ಆದ್ಯ ಶಿಷ್ಯರಲ್ಲಿ ಸುರೇಶ್ವರಾಚಾರ್ಯರೆಂಬುವವರೇ ಶೃಂಗೇರಿಯ ಮೊದಲ ಪೀಠಾಧಿಪತಿಗಳು. ಈ ಗುರು ಪರಂಪರೆಯಲ್ಲಿ ಮೂವತ್ತ ಮೂರನೆಯವರೇ ಶ್ರೀ ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹ ಭಾರತೀ ಅವರು. ಇವರ ಗುರುಗಳ ಹೆಸರೂ ನರಸಿಂಹ ಭಾರತೀಗಳೆಂದೇ. ಅವರನ್ನು ಉಗ್ರ ನರಸಿಂಹ ಭಾರತೀಗಳು ಎಂದೂ ಕರೆಯುತ್ತಾರೆ. ಅವರು ನೋಡುವುದಕ್ಕೆ ಸ್ವಲ್ಪ ಉಗ್ರವಾಗಿ ಕಾಣುತ್ತಿದ್ದುದರಿಂದ ಈ ಹೆಸರು ಬಂತೆಂದು ಪ್ರತೀತಿ.

ಗುರುಗಳು

ಉಗ್ರ ನರಸಿಂಹಭಾರತೀ ಅವರು ಶೃಂಗೇರಿಯವರೇ. ಅಷ್ಟೇನೂ ವಿದ್ಯಾವಂತರಲ್ಲ; ಆದರೆ ಮಹಾಸಾಹಸಿಗಳು. ರೈಲು ಮೋಟಾರುಗಳಿಲ್ಲದಿದ್ದ ಆ ಕಾಲದಲ್ಲಿ ಈ ೧೫-೧೬ ವರ್ಷದ ಯುವಕ ಕಾಲುನಡಿಗೆಯಲ್ಲಿ ಕಾಶೀಯಾತ್ರೆ ಮಾಡಿ ಬಂದಿದ್ದರು. ಇದರಿಂದಾಗಿ ಊರವರೆಲ್ಲರ ಮೆಚ್ಚಿಗೆಗೂ ಪಾತ್ರರಾಗಿದ್ದರು. ಅವರ ಈ ಸಾಹಸ ಅವರಿಗೊಂದು ಪ್ರಶಸ್ತಿಯೂ ಆಗಿತ್ತು. ೧೮೧೮ರಲ್ಲಿ ಶೃಂಗೇರಿಯ ಪೀಠಾಧಿಪತಿಗಳಾಗಿದ್ದವರಿಗೆ ತುಂಬಾ ವಯಸ್ಸಾಗಿತ್ತು. ಉತ್ತರಾಧಿಕಾರಿಯನ್ನು ಶೋಧಿಸಿಕೊಂಡು ಹೋಗುವ ಸ್ಥತಿಯಲ್ಲಿ ಅವರಿರಲಿಲ್ಲ. ತಮ್ಮ ಕಾಲ ಮುಗಿಯಿತು ಎಂಬ  ಭಾವನೆ ಅವರಿಗೆ ಬಲವತ್ತರವಾದಾಗ, ಆಗ ತಾನೆ ಕಾಶೀಯಾತ್ರೆ ಮುಗಿಸಿ ಊರಿಗೆ ಬಂದಿದ್ದು, ಎಲ್ಲರಿಗೂ ಮೆಚ್ಚುಗೆಯಾಗಿದ್ದ ಈ ವೈದಿಕ ತರುಣನನ್ನು ಕರೆಸಿ, ಸಂನ್ಯಾಸ ದೀಕ್ಷೆ ಕೊಟ್ಟು ಮಠಾಧಿಪತ್ಯವನ್ನು ಒಪ್ಪಿಸಿಬಿಟ್ಟರು. ಅವರಿಗೆ ನರಸಿಂಹ ಭಾರತೀ ಎಂದು ಹೆಸರಿಡಲಾಯಿತು.

ಮುಂದೆ ಆರೇ ದಿನಗಳಲ್ಲಿ ಗುರುಗಳು ದೈವಾಧೀನರಾದರು. ನರಸಿಂಹ ಭಾರತೀಯವರಿಗೆ ಕಾಶೀಯಾತ್ರೆಯ ಅನುಭವದ ವಿನಾ ಬೇರೇನೂ ಲೋಕಾನುಭವವಾಗಲಿ, ವೈದಿಕ ಶಿಕ್ಷಣ, ಧಾರ್ಮಿಕ ಆಚರಣೆ ಮತ್ತು ಮಠದ ಆಡಳಿತದ ತರಬೇತಿ ಏನೂ ಅವರಿಗೆ ಇರಲಿಲ್ಲ. ಅದನ್ನೆಲ್ಲ ಕಲಿಯಲು ಸಾಕಷ್ಟು ಕಾಲಾವಕಾಶವೂ ಅವರಿಗೆ ಇರಲಿಲ್ಲ. ಅನಿರೀಕ್ಷಿತವಾಗಿ ಬಂದ ಭಾರೀ ಜವಾಬ್ದಾರಿಯನ್ನು ಹೊತ್ತು ಏನಾಯಿತು, ಏನಾಗಬೇಕು ಎಂದು ತಿಳಿದುಕೊಳ್ಳುವುದರೊಳಗೇ ಗುರುಗಳು ಕಣ್ಮರೆ ಆಗಿಬಿಟ್ಟರು. ಈ ಪರಿಸ್ಥಿತಿಯಲ್ಲಿ ಬೇರೆ ಯಾರಾದರೂ ಆಗಿದ್ದರೆ ಕಂಗಾಲಾಗಿಬಿಡಬೇಕಾಗಿತ್ತು. ಆದರೆ ನರಸಿಂಹ ಭಾರತೀಗಳು ತುಂಬಾ ದೃಢನಿರ್ಧಾರದ ಸಾಹಸಿಗಳು. ಸ್ಥಳೀಯರೂ, ಮಠದಲ್ಲಿ ಸೇರಿಕೊಂಡು ಪ್ರಬಲರಾಗಿ ಅದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದವರೂ ಆದ್ದರಿಂದ ತಮ್ಮನ್ನೂ ಮಠವನ್ನೂ ಅವರು ರಕ್ಷಿಸಿಕೊಳ್ಳಲು ದಿಟ್ಟ ಪ್ರಯತ್ನ ಮಾಡಿದರು. ಒಳ್ಳೆಯ ವಿದ್ವಾಂಸರನ್ನು ಕರೆಸಿಕೊಂಡು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಸ್ವಾಮಿಗಳಾಗಿ ತಾವು ನಡೆಸಬೇಕಾದ ಧರ್ಮ, ಕ್ರಮಗಳನ್ನು ತಿಳಿದುಕೊಂಡರು.

ನಲವತ್ತು ವಯಸ್ಸಿಗೇ ಊಟವನ್ನು ಬಿಟ್ಟು ದಿನವೂ ಒಂದೆರಡು ಚಮಚ ಹಾಗಲಕಾಯಿ ರಸವನ್ನು ಮಾತ್ರ ಸೇವಿಸುತ್ತಿದ್ದರು. ಆರೆಂಟು ಭಾಷೆಗಳನ್ನು ಕಲಿತುಕೊಂಡರು.

ಶ್ರೀಗಳವರಿಗೆ ಅರವತ್ತು ವರ್ಷವಾದಾಗ ಅವರಿಗೆ ತಮ್ಮ ಉತ್ತರಾಧಿಕಾರಿಯೊಬ್ಬರನ್ನು ಸಿದ್ಧಗೊಳಿಸಬೇಕು ಎನಿಸಿತೊಡಗಿತು. ಮುಂದೆ ಬರುವ ಪೀಠಾಧಿಕಾರಿ ತಮ್ಮ ಹಾಗೆ ಮಠದ ಸಂಪ್ರದಾಯ ಅರಿಯದ, ಲೌಕಿಕ ವ್ಯವಹಾರ ತಿಳಿಯದ ಮುಗ್ಧಯತಿಯಾತಿರಬಾರದು ಎಂಬ  ಅಭಿಲಾಷೆ ಉಂಟಾಗಿತ್ತು. ತಾವಿನ್ನೂ ಗಟ್ಟಿಮುಟ್ಟಾಗಿರುವಾಗಲೇ ಶಿಷ್ಯ ಸ್ವೀಕಾರ ಮಾಡಿ ಅವರಿಗೆ ತಾವೇ ಮಠದ ಸಂಪ್ರದಾಯ, ನೇಮ, ಪೂಜೆ, ಯೋಗ, ಆಧ್ಯಾತ್ಮ ಮತ್ತು ಆಡಳಿತದ ಬಗ್ಗೆ ಸಹ ತರಬೇತಿ ಕೊಡಬೇಕೆಂಬ ಇಚ್ಛೆ ಬಲವತ್ತರವಾಗಿ ಬೆಳೆಯಿತು. ಆದರೆ ಆರ್ಹ ಅಭ್ಯರ್ಥಿ ಯಾರೆಂಬ ಬಗ್ಗೆ ನಿರ್ಧರಿಸಲಾಗದ ಸ್ಥತಿಯಲ್ಲಿದ್ದರು. ಎಂಟು ವರ್ಷಗಳ ಕಾಲ ಹಲವಾರು ವಟುಗಳ ಜಾತಕಗಳನ್ನು ಪರಿಶೀಲಿಸಿ, ಕಡೆಗೆ ಮೈಸೂರಿನ ಶಿವಸ್ವಾಮಿ ಎಂಬ ಎಂಟು ವರ್ಷದ ವಟುವಿನ ಜಾತಕ, ಆತ ಈ ಯತಿ ಪೀಠಕ್ಕೆ ಅತ್ಯಂತ ಅರ್ಹನೆಂಬ ಭಾವನೆ ಉಂಟು ಮಾಡಿತು. ಆ ಬಾಲಕ ಮೈಸೂರಿನ ರಾಜರ ಆಸ್ಥಾನ ವಿದ್ವಾಂಸರೂ ಧರ್ಮಾಧಿಕಾರಿಗಳೂ ಆಗಿದ್ದ ದಿವಂಗತ ಕುಣಿಗಲು ರಾಮಾಶಾಸ್ತ್ರೀ ಎಂಬುವರ ಎರಡನೆಯ ಮಗ.

ಮನೆತನ

ಮೈಸೂರು ಜಿಲ್ಲೆಯ ಈಗಿನ ಕೃಷ್ಣರಾಜನಗರ ಎಂಬ ಊರಿಗೆ ಹಿಂದೆ ಎಡತೊರೆ ಎಂಬ ಹೆಸರಿತ್ತು. ಕಾವೇರಿ ತೀರದ ಈ ಊರಿನ ರಾಮಾಶಾಸ್ತ್ರೀ ಎಂಬುವರು ಇಡೀ ದಕ್ಷಿಣ ಭಾರತದಲ್ಲೇ ಮಹಾ ಪಂಡಿತರೆಂದೂ ಮೇಧಾವಿಗಳೆಂದೂ ಕೀರ್ತಿಶಾಲಿಗಳಾಗುದ್ದು, ಮೈಸೂರು ಮಹಾರಾಜರ ಮೆಚ್ಚಿಗೆಮ, ಗೌರವಗಳಿಗೆ ಪಾತ್ರರಾಗಿದ್ದರು. ಮಹಾರಾಜರು ರಾಮಾಶಾಸ್ತ್ರಿಗಳನ್ನು ಅರಮನೆಯ ಧರ್ಮಾಧಿಕಾರಿಗಳನ್ನಾಗಿ ನೇಮಿಸಿಕೊಂಡಿದ್ದರು.

ಅವರ ಮೊದಲನೆಯ ಮಗ ಲಕ್ಷ್ಮೀನರಸಿಂಹ. ೧೮೫೭ನೇ ವರ್ಷದಲ್ಲಿ (ಪಿಂಗಳ ಸಂವತ್ಸರ) ಅವರಿಗೊಂದು ಗಂಡು ಮಗು ಆಯಿತು. ಈ ಮಗುವಿಗೆ ಶಿವಸ್ವಾಮಿ ಎಂದು ಹೆಸರಿಟ್ಟರು.

ಬಾಲ್ಯ

ಮಾತಾಪಿತರ ಕಣ್ಮಣಿಯಾಗಿ ಶಿವಸ್ವಾಮಿ ಬೆಳೆಯುತ್ತಿದ್ದ. ತಂದೆ ನಿತ್ಯಕರ್ಮಾನುಷ್ಠಾನಗಳನ್ನು ನೋಡಿ ತಾನೂ ಮಾಡುವನು; ಮೈಗೆಲ್ಲ ವಿಭೂತಿಯನ್ನು ಬಳಿದುಕೊಂಡು ತೊದಲು ತೊದಲಾಗಿ ತಂದೆ ಹೇಳುತ್ತಿದ್ದ ಮಂತ್ರ-ಸ್ತೋತ್ರಗಳನ್ನು ಹೇಳಿ ಮನೆಯವರ ಮುದ್ದುಗಳಿಸುವನು. ಆದರೆ ಈ ಸುಪುತ್ರ ಬೆಳೆದು ದೊಡ್ಡವನಾಗುವುದನ್ನು ನೋಡುವ ಭಾಗ್ಯ ರಾಮಾಶಾಸ್ತ್ರೀಗಳಿಗಿರಲಿಲ್ಲ. ಶಿವಸ್ವಾಮಿ ಕೇವಲ ಎರಡು ವರ್ಷದವನಾಗಿರುವಾಗಲೇ ರಾಮಾಶಾಸ್ತ್ರೀಗಳು ದೈವಾಧೀನರಾದರು.

ಆಗ ಹಿರಯಣ್ಣ ಲಕ್ಷ್ಮೀನರಸಿಂಹ ಶಾಸ್ತ್ರಿಗೆ ಇನ್ನೂ ಹತ್ತೊಂಬತ್ತು ವರ್ಷಗಳಷ್ಟೆ. ಆದರೂ ಕುಟುಂಬದ ಪರಂಪರೆಯಂತೆ ವೇದವಿದ್ಯೆಯಲ್ಲಿ ಆತ ಸಾಕಷ್ಟು ಪರಿಣತಿ ಗಳಿಸಿದ್ದ. ತರ್ಕಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಿದ್ದ. ಮಹಾರಾಜನ ವಿಶ್ವಾಸಕ್ಕೂ ಪಾತ್ರನಾಗಿದ್ದ. ಮಹಾರಾಜರು ಈ ತರುಣನಿಗೆ ತಂದೆ ಇಲ್ಲವೆಂಬ ಕೊರತೆಯನ್ನು ತುಂಬಿದ್ದರು. ಈತನೇ ತನ್ನ ಕಿರಿಯ ತಮ್ಮನಿಗೆ ಮೊದಲ ಗುರು. ಶಿವಸ್ವಾಮಿಯ ಯೋಗಕ್ಷೇಮ, ಶಿಕ್ಷಣಗಳೆರಡನ್ನೂ ಲಕ್ಷ್ಮೀನರಸಿಂಹ ಶಾಸ್ತ್ರಿ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ದುರದೃಷ್ಟದಿಂದ ಶಿವಸ್ವಾಮಿಗೆ ಐದು ವರ್ಷ ತುಂಬುತ್ತಿದ್ದ ಹಾಗೆಯೇ ತಾಯಿಯೂ ಕಾಲವಾದಳು. ಆಗ ಅಣ್ಣನೇ ಶಿವಸ್ವಾಮಿಯ ಪೂರ್ಣ ಜವಾಬ್ದಾರಿಯನ್ನು ಹೊತ್ತ. ತಮ್ಮನಿಗೆ ಅಮರ ಸ್ತೋತ್ರಗಳನ್ನೂ,ಶಬ್ದ,ಧಾತು ಪಾಠವನ್ನೂ ಹೇಳಿ ಕೊಟ್ಟು ಅಕ್ಷರಾಭ್ಯಾಸ ಮಾಡಿಸಿದ. ಏಳನೆಯ ವರ್ಷದಲ್ಲೇ ಉಪನಯನ ಮಾಡಿ ವೈದಿಕ ವಿದ್ಯೆಯನ್ನೂ ಕಲಿಸತೊಡಗಿದ.

ಶಿವಸ್ವಾಮಿ ತುಂಬಾ ಚೂಟಿ ಒಮ್ಮೆ ಹೇಳಿಕೊಟ್ಟದ್ದನ್ನು ಮತ್ತೆ ಹೇಳಿ ಕೊಡಬೇಕಾಗಿರಲಿಲ್ಲ.

ಲಕ್ಷ್ಮೀನರಸಿಂಹ ಶಾಸ್ತ್ರಿಯನ್ನು ಕೇವಲ ೧೯ನೇ ವಯಸ್ಸಿಗೇ ಆಸ್ಥಾನ ವಿದ್ವಾಂಸನನ್ನಾಗಿ ಮಾಡಿಕೊಂಡಿದ್ದ ಮಹಾರಾಜರಿಗೆ ಈ ಇಬ್ಬರು ಸೋದರರ  ಬಗೆಗೂ ತುಂಬಾ ವಾತ್ಸಲ್ಯ. ಅವರು ಆಗಾಗ ಶಿವಸ್ವಾಮಿಯ ಶಿಕ್ಷಣ ಪ್ರಗತಿಯನ್ನು ವಿಚಾರಿಸಿಕೊಳ್ಳುವರು. ವಾರಕ್ಕೆ ಒಮ್ಮೆಯಾದರೂ ಸನ್ನಿಧಾನಕ್ಕೆ ಕರೆಸಿಕೊಂಡು, ಮೈದಡವಿ, ಪಕ್ಕದಲ್ಲಿ ಕೂಡಿಸಿಕೊಂಡು ಸ್ತೋತ್ರಗಳನ್ನೂ, ಸಂಸ್ಕೃತ ಶ್ಲೋಕಗಳನ್ನೂ ಹೇಳಿಸಿ ಕೇಳಿ ಸಂತೋಷಿಸುವರು. ಅಂತಃಪುರಕ್ಕೆ ಕರೆದೊಯ್ದು “ನೋಡಿ, ಈ ಶಿವಸ್ವಾಮಿ ಒಂದಲ್ಲ ಒಂದು ದಿನ ನಮಗೆಲ್ಲ ಸ್ವಾಮಿ ಆಗುತ್ತಾನೆ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಶಿವಸ್ವಾಮಿ ಹುಟ್ಟಿದಾಗ ಮಹಾರಾಜರು ಜಾತಕ ತರಿಸಿ ನೋಡಿ, ಈ ಬಾಲಕನಿಗೆ ಸಂನ್ಯಾಸ ಯೋಗವಿದೆ ಎಂದೂ, ತಮ್ಮೆಲ್ಲರಿಗೂ ಆತ ಗುರುವಾಗುತ್ತಾನೆಂದೂ ರಾಮಾಶಾಸ್ತ್ರಿಗಳಿಗೆ ಹೇಳಿದ್ದರಂತೆ.

ಹೀಗೆ ಅಣ್ಣನ ಮತ್ತು ಮಹಾರಾಜರ ವಾತ್ಸಲ್ಯದ ಕೂಸಾದರೂ ಲೌಕಿಕಾನಂದದಾಯಕವಾದ ಆಟಪಾಟಗಳಿಗಿಂತ ಪೂಜೆ, ಪಾಠ, ಪ್ರವಚನಗಳಲ್ಲೇ ವಿಶೇಷ ಆಸಕ್ತನಾಗಿ ಶಿವಸ್ವಾಮಿ ಬೆಳೆಯುತ್ತಿದ್ದ. ಹೀಗಿದ್ದಾಗಲೇ ಯರೋ ಹಿತೈಷಿಗಳು ಈ ಬಾಲಕನ ಜಾತಕವನ್ನು ಉಗ್ರನರಸಿಂಹ ಭಾರತೀಸ್ವಾಮಿಗಳ ಸನ್ನಿಧಿಗೆ ಕಳಿಸಿದ್ದರು. ಅದನ್ನು ನೋಡಿ ಈ ಬಾಲಕನೇ ತಮ್ಮ ಉತ್ತರಾಧಿಕಾರಿಯಾಗಲು ಅರ್ಹನೆಂದು ನಿರ್ಧರಿಸಿದ ಸ್ವಾಮಿಗಳು ತಾವೇ ಖುದ್ದಾಗಿ ಬಾಲಕನನ್ನು ಕಂಡು, ಅವನ ಅಣ್ಣನೊಂದಿಗೆ ಮಾತನಾಡಲೆಂದು ಮೈಸೂರಿಗೆ ಬಂದರು. ಮಹಾರಾಜರನ್ನು ಕಂಡು ತಾವು ಬಂದಿರುವ ಉದ್ದೇಶವನ್ನು ತಿಳಿಸಿ ತಮ್ಮ ದೃಷ್ಟಿಯಲ್ಲಿರುವ ಬಾಲಕ ಯಾರೆಂಬುದನ್ನು ಸೂಚಿಸಿದರು. ಮಹಾರಾಜರಿಗೂ ಈ ಆಯ್ಕೆಯಿಂದ ತುಂಬಾ ಸಂತೋಷವಾಯಿತು.

ಲಕ್ಷ್ಮೀನರಸಿಂಹ ಶಾಸ್ತ್ರಿಗಳು ತಮ್ಮನಲ ಜೊತೆಯಲ್ಲಿಯೇ ಸ್ವಾಮಿಗಳ ದರ್ಶನಕ್ಕೆ ಬಂದರು. ಸ್ವಾಮಿಗಳು ಶಾಸ್ತ್ರಿಗಳ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಲೇ ಪಕ್ಕದಲ್ಲಿ ನಿಂತಿದ್ದ ತೇಜಸ್ವಿ ಶಿವಸ್ವಾಮಿಯನ್ನು ನೋಡಿ ಮೊದಲ ನೋಟಕ್ಕೇ ತೃಪ್ತಿ ಪಟ್ಟುಕೊಂಡರು. ಬಾಲಕನನ್ನು ಪಕ್ಕದಲ್ಲಿ ಕೂಡಿಸಿಕೊಂಡು ವಿಶ್ವಾಸದಿಂದ ಮೈದಡವಿ ಮಾತನಾಡಿಸಿ, “ನಿನಗೆ ಏನು ಬೇಕು ಮಗು?” ಎಂದು ಕೇಳಿದರು. ಶಿವಸ್ವಾಮಿ ಸಮಯಸ್ಫೂರ್ತಿಯಿಂದ

“ಭವದ್ಭಕ್ತಿಮೇವ ಸ್ಥಿರಂ ದೇಹಿ ಮಹ್ಯಂ
ಕೃಪಾಶೀಲ ಶಂಭೋ ಕೃತಾರ್ಥೋಸ್ಮಿ ತಸ್ಮಾತ್‌
||”

ಎಂಬ ಆಚಾರ್ಯ ಶಂಕರರ ಪ್ರಾರ್ಥನಾ ಶ್ಲೋಕ ಒಂದನ್ನು ಅಸ್ಖಲಿತ ವಾಣಿಯಿಂದ ಉದ್ಧರಿಸಿದನು.

ಅದು ಶಂಕರರು ಪರಶಿವನನ್ನು ಕುರಿತು ” ನಿನ್ನ ಮೇಲಿನ ನನ್ನ ಭಕ್ತಿ ಅಚಲವಾಗಿರುವಂತೆ ಕೃಪಾಶೀಲನಾದ ಪರಮೇಶ್ವರನೇ, ಅನುಗ್ರಹಿಸಲಿ ಎಂದು ಅನ್ವಯಿಸಿ ಹಾಡಿದ್ದು ಕೇಳಿ ಗುರುಗಳು ತುಂಬಾ ಅನಂದ ಪಟ್ಟರು. ಆ ಚಿಕ್ಕ ವಯಸ್ಸಿನ ಬಾಲಕನ ವಿನಯ ಸಂಸ್ಕಾರಶೀಲವಾದ ನಡೆ-ನುಡಿಗಳು ಶ್ರೀಗಳವರ ಮೇಲೆ ತುಂಬಾ ಪರಿಣಾಮ ಬೀರಿದವು. ಪ್ರತ್ಯಕ್ಷವಾಗಿ ಬಾಲಕನನ್ನು ಕಂಡು ತೃಪ್ತಿಯಾಗಿತ್ತು. ಅಣ್ಣ ಲಕ್ಷ್ಮೀನರಸಿಂಹಶಾಸ್ತ್ರಿಗಳಲ್ಲಿ ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು.

"ಭಗವದ್ಭಕ್ತಿಮೇವ......"

ತಂದೆ-ತಾಯಿಗಳಿಲ್ಲದ ಈ ಸೋದರನನ್ನು ಮಠಕ್ಕೆ ಒಪ್ಪಿಸಲು ಲಕ್ಷ್ಮೀನರಸಿಂಹ ಶಾಸ್ತ್ರಿಗಳು ಒಪ್ಪಲಿಲ್ಲ. ಈ ಚಿಕ್ಕ ವಯಸ್ಸಿನಲ್ಲೇ ಕಠಿಣವಾದ ಸಾಧನೆ, ಆಹಾರ ನಿಯಮ, ದೇಶಸಂಚಾರ ಮೊದಲಾದ ದೈಹಿಕ ಕಷ್ಟಗಳಿಗೆ ಬಾಲಕನನ್ನು ಗುರಿಪಡಿಸಲು ಅವರು ಇಚ್ಛಿಸಲಿಲ್ಲ. ಅಣ್ಣ, ಅತ್ತಿಗೆ, ಬಂಧು-ಬಳಗದ ಸಾಮೀಪ್ಯಕ್ಕೆ ಈ ಬಾಲಕ ಎರವಾಗುವುದನ್ನೂ ಸಹಿಸಲಾರದಾದರು.

ಸ್ವಾಮಿಗಳು ವಿಷಯವನ್ನೆಲ್ಲಾ ಮಹಾರಾಜರಿಗೆ ತಿಳಿಸಿದರು. ಮಹಾರಾಜರು ಲಕ್ಷ್ಮೀನರಸಿಂಹ ಶಾಸ್ತ್ರಿಗಳನ್ನು ಕರೆಸಿಕೊಂಡು ಸ್ವಾಮಿಗಳ ಅಪೇಕ್ಷೆ ಹಾಗೂ ತಮ್ಮ ಅಪೇಕ್ಷೆಗಳೆರಡೂ ಒಂದೇ ಎಂದು ಸ್ಪಷ್ಟಪಡಿಸಿದರು.

ಆದರೂ ಲಕ್ಷ್ಮೀನರಸಿಂಹ ಶಾಸ್ತ್ರಿಗಳಿಗೆ ತಮ್ಮ ಮೇಲಿನ ಪ್ರೀತಿ ಅಚಲವಾಗಿತ್ತು. ಅವನನ್ನು ಬಿಟ್ಟು ಕೊಡಲು ಅವರು ಒಪ್ಪಲಿಲ್ಲ. ಮಹಾರಾಜರು ಬಹಳ  ಹೇಳಿದ ಮೇಲೆ ಅವರ ಆಜ್ಞೆಗೆ ತಲೆ ಬಾಗಲೇಬೇಕಾಯಿತು.

ಆಗಲೇ ಮಹಾರಾಜರು ಸ್ವಾಮಿಗಳಿಗೆ  ಸಂತೋಷದ ಸುದ್ಧಿ ಮುಟ್ಟಿಸಿದರು. ಸೇವಕರನ್ನು ಕಳಿಸಿ, ಶಿವಸ್ವಾಮಿಯನ್ನು ಬರಮಾಡಿಕೊಂಡರು. ತೊಡೆಯ ಮೇಲೆ ಕೂಡಿಸಿಕೊಂಡು,” ಈ ದಿನ ಮಾತ್ರ  ನಮಗೆ ಈ ಭಾಗ್ಯ; ನಾಳೆಯಿಂದ ನೀವು ನಮ್ಮ ಗುರುಗಳು” ಎಂದು ಹೇಳಿ ಮೈದಡವಿ ಮುದಿಸಿದರು. ರಾಣೀವಾಸದವರನ್ನೆಲ್ಲ ಕರೆಸಿ “ಇದೋ, ಇವರು ನಾಳೆಯಿಂದ ಶೃಂಗೇರಿಯ ಚಿಕ್ಕ ಸ್ವಾಮಿಗಳು”  ಎಂದು ಪರಿಚಯ ಮಾಡಿಸಿ, ಎಲ್ಲರೂ ನಮಸ್ಕಾರ ಮಾಡುವಂತೆ  ತಿಳಿಸಿದರು. ತಾವೂ ಎದ್ದು ಶಿವಸ್ವಾಮಿಗೆ ದೀರ್ಘದಂಡ ನಮಸ್ಕಾರ ಮಾಡಿ ಬೀಳ್ಕೊಟ್ಟರು.

ಮಾರನೆಯ ದಿನ, ೧೮೬೫ನೆ ಅಕ್ಷಯ ಸಂವತ್ಸರ ಆಷಾಢ ಶುದ್ಧ ಷಷ್ಠಿಯಂದು, ಅರಮನೆ ಪ್ರಾಕಾರದಲ್ಲೇ ಇರುವ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲೇ ಶಿವಸ್ವಾಮಿಗೆ ಉಗ್ರನರಸಿಂಹ ಭಾರತೀ ಸ್ವಾಮಿಗಳು ಸಂನ್ಯಾಸವಿತ್ತು. ಶಿಷ್ಯ ಸ್ವೀಕಾರ ಮಾಡಿದರು.

ಕಿರಿಯ ಸ್ವಾಮಿಗಳಿಗೆ “ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹ ಭಾರತೀ” ಎಂಬುದಾಗಿ ಹೆಸರಿಟ್ಟರು.

ಒಂದು ಆಶ್ಚರ್ಯಕರ ಘಟನೆ ಎಂದರೆ, ಎಂಟು ವರ್ಷಗಳ ಹಿಂದೆ ಉಗ್ರನರಸಿಂಹ ಭಾರತೀ ಅವರು ತಮಗೊಬ್ಬ ಉತ್ತರಾಧಿಕಾರಿ ಬೇಕು ಎಂದು ಸಂಕಲ್ಪ ಮಾಡಿದ ವರ್ಷವೇ ಶಿವಸ್ವಾಮಿಯ ಜನನವಾದದ್ದು.

ಬಾಲ ಸಂನ್ಯಾಸಿ

ಸಂನ್ಯಾಸ ಸ್ವೀಕಾರದ ದಿನ ಸಂಜೆಯವರೆಗೂ ಬಾಲಕ ಶಿವಸ್ವಾಮಿ ಉಪವಾಸವಿದ್ದೂ ಹಲವಾರು ವೈದಿಕ ಕರ್ಮಗಳನ್ನು ನೆರವೇರಿಸಬೇಕಾಗಿತ್ತು. ಚಿಕ್ಕ ವಯಸ್ಸಾದರೂ ಬಾಲಕ ದಿಟ್ಟತನದಿಂದ ಆ ಎಲ್ಲ ಕರ್ಮಗಳನ್ನೂ ನೆರವೇರಿಸಿದ. ದೊಡ್ಡ ಗುರುಗಳು ದೀಕ್ಷೆ ಇತ್ತು ಮಹಾವಾಕ್ಯ ಉಪದೇಶವಿತ್ತರು. ಮಹಾರಾಜರೂ, ಆನಂತರ ನೆರೆದಿದ್ದ ಎಲ್ಲ ಪಂಡಿತರೂ, ಭಕ್ತರೂ ಸಾಷ್ಟಾಂಗ ನಮಸ್ಕಾರ ಮಾಡಿ ತಮ್ಮ ಭಕ್ತಿಯನ್ನು ಅರ್ಪಿಸಿದರು.

ಆನಂತರ ಸಂಜೆಯ ನಿತ್ಯ ಕರ್ಮಗಳೆಲ್ಲ ಮುಗಿದ ಮೇಲೆ ಕಿರಿಯ ಸ್ವಾಮಿಗಳಿಗೆ ಲಘುವಾದ ಆಹಾರವಿತ್ತು ವಿಶ್ರಮಿಸಲು ಹೇಳಲಾಯಿತು. ಹಿರಿಯ ಸ್ವಾಮಿಗಳ ಸಮೀಪದಲ್ಲೇ ಕೃಷ್ಣಾಜಿನವೊಂದರ ಮೇಲೆ ಮಲಗಿದರು. ಬೆಳಗಿನಿಂದ ಶಿಷ್ಯ ಸ್ವೀಕಾರದ ಕಲಾಪದಲ್ಲೇ ನಿರತರಾಗಿದ್ದ ಹಿರಿಯ ಸ್ವಾಮಿಗಳು ಆಗ ತಮ್ಮ ನಿತ್ಯ ಜಪ-ಪೂಜೆಗಳಲ್ಲಿ ನಿರತರಾದರು.

ಸ್ವಲ್ಪ ಕಾಲಾನಂತರ ಬಾಲ ಸಂನ್ಯಾಸಿ ನಿದ್ದೆಯಲ್ಲೇ ‘ಸರ್ವೋಹಂ, ಸರ್ವೋಹಂ’ ಎಂದು ಮೆಲ್ಲನೆ ಹೇಳಿದುದು ಕೇಳಿಸಿತು. ಗುರುಗಳು ಅಚ್ಚರಿಯಿಂದ ಬಾಲಯತಿಯ ಮುಖವನ್ನು ವೀಕ್ಷಸಿದರು. ಬಾಲ ಶಂಕರರಂತೆ ಮುಗ್ಧಭಾವದಿಂದ ಬಾಲಕ ನಿದ್ರಿಸುತ್ತಿದ್ದ. “ಜಗತ್ತೆಲ್ಲ ನಾನೇ; ನಾನೇ ಬ್ರಹ್ಮ ನಾನೇ ಶಿವ” ಎಂಬುದು ಪರಮಾತ್ಮನೊಂದಿಗೆ ತಾನು ಸೇರಿ ಹೋದಾಗ ಉಂಟಾಗುವ ಅನುಭವದಿಂದ ಬರುವ ಉದ್ಗಾರ. ಇಷ್ಟು ಚಿಕ್ಕ ವಯಸ್ಸಿನ ಹುಡುಗನ ಬಾಯಿಂದ ನಿದ್ರೆಯಲ್ಲಿ ‘ಸರ್ವೋಹಂ’ ಎಂಬ ಉದ್ಗಾರ ಕೇಳಿ ಗುರುಗಳಿಗೆ ತುಂಬಾ ಆನಂದವಾಯಿತು. ತಾವು ಅತ್ಯಂತ ಯೋಗ್ಯ ಶಿಷ್ಯನಿಗೆ ದೀಕ್ಷೆ ನೀಡಿದ ತೃಪ್ತಿ ಉಂಟಾಯಿತು.

ಮಾರನೆಯ ದಿನ ಉತ್ತರಾಧಿಕಾರ ಸ್ವೀಕಾರದ ಸಮಾರಂಭ. ಮಹಾರಾಜರೇ ಆದಿಯಾಗಿ ಸರಕಾರದ ಎಲ್ಲ ಉನ್ನತಾಧಿಕಾರಿಗಳ ಸಮ್ಮುಖದಲ್ಲಿ ಗುರುಗಳು ಬಾಲಯತಿಯನ್ನು ಶೃಂಗೇರಿ ಶಾರದಾ ಪೀಠಕ್ಕೆ ಉತ್ತರಾಧಿಕಾರಿಗಳೆಂದು ಘೋಷಿಸಿದರು. ಮಹಾರಾಜರು ಅರಮನೆಯಲ್ಲಿದ್ದ ಆನೆಯೊಂದನ್ನು ಮಠದ ಸೇವೆಗೆ ಅರ್ಪಿಸಿದರು.

ಶಿಕ್ಷಣ ಸಾಧನೆ

ಒಂಬತ್ತು ವರ್ಷದ ಈ ಬಾಲಯತಿಗೆ ಮಹಾ ಸಂಸ್ಥಾನದ ಅಧಿಪತಿಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಬೇಕಾದ ಶಿಕ್ಷಣ-ತರಬೇತಿಗಳನ್ನು ನೀಡುವ ಹೊಣೆಯನ್ನು ಸ್ವಾಮಿಗಳೇ ವಹಿಸಿಕೊಂಡರು. ವೈದಿಕ ವಿದ್ಯೆಯಲ್ಲಿ, ಆಧ್ಯಾತ್ಮ ಸಾಧನೆಯಲ್ಲಿ, ಯೋಗಸಿದ್ಧಿಯಲ್ಲಿ, ಅವರನ್ನು ಪರಿಣತರನ್ನಾಗಿಸಬೇಕಾಗಿತ್ತು. ಜೊತೆಗೆ ಮಠದ ಆಡಳಿತ, ಅದರ ಗೌರವ, ಘನತೆಗಳನ್ನು ಎತ್ತಿ ಹಿಡಿದು ಸಾವಿರ ಸಾವಿರ ಶಿಷ್ಯರನ್ನು ಸಂತೃಪ್ತರನ್ನಾಗಿಟ್ಟುಕೊಳ್ಳುವ ಶಕ್ತಿ ದೊರಕಿಸಬೇಕಾಗಿತ್ತು. ಸಾವಿರಾರು ರೂಪಾಯಿಗಳ ಆದಾಯವಿದ್ದ ಮಠ. ಸಾವಿರಾರು ಮಂದಿ ಭಕ್ತರು ಶ್ರದ್ಧೆಯಿಂದ ಬರುವ ಮಠ. ಮಠದಲ್ಲಿ ಅನೇಕ ಮಂದಿ ಅಧಿಕಾರಿಗಳು ಇರದೆ ಕೆಲಸ ನಡೆಯುವಂತಿಲ್ಲ. ಆದರೆ ಅಹಂಕಾರಿಗಳು, ಕೆಟ್ಟವರು ಬಂದು ಸೇರಿಕೊಳ್ಳದ ಹಾಗೆ ನೋಡಿಕೊಳ್ಳಬೇಕಾಗಿತ್ತು. ಎರಡು ಅಲುಗಿನ ಕತ್ತಿಯ ಮೇಲೆ ನಡೆಯುವ, ಪೂರ್ವ-ಪಶ್ಚಿಮಗಳನ್ನು ಒಂದೆಡೆ ಸೇರಿಸುವ ಮಹಾ ಚಾತುರ್ಯದ ವಿದ್ಯೆ ಬೇಕು ಸ್ವಾಮಿಗಳಿಗೆ. ಈ ವಿದ್ಯೆಯಲ್ಲಿ ಕಿರಿಯ ಸ್ವಾಮಿಗಳನ್ನು ಸಿದ್ಧ ಹಸ್ತರನ್ನಾಗಿಸಬೇಕಾಗಿತ್ತು.

‘ಕಾಲಟಿಗೆ ತಕ್ಕ ಪ್ರಾಧಾನ್ಯ ಸಿಕ್ಕಬೇಕು’

ಕಿರಿಯ ಸ್ವಾಮಿಗಳಿಗೆ ಮೊದಲು ಸಾಹಿತ್ಯಾಭ್ಯಾಸ ಆರಂಭಿಸಲಾಯಿತು. ಅನಂತರ ಸ್ವಾಮಿಗಳ ಹಿರಿಯಣ್ಣ ಲಕ್ಷ್ಮೀನರಸಿಂಹ ಶಾಸ್ತ್ರಿಗಳನ್ನೇ ಕರೆಸಿ ತರ್ಕ ಮೀಮಾಂಸೆ ಪಾಠ ಹೇಳಲು ವ್ಯವಸ್ಥೆ ಮಾಡಿದರು. ಕಿರಿಯ ಸ್ವಾಮಿಗಳ ಸಮಾನ ವಯಸ್ಕರೂ, ಅಧ್ಯಯನ ಶೀಲರೂ ಆದ ಕೆಲ ಬಾಲಕರನ್ನು ಆರಿಸಿ ಅವರ ಸಹಪಾಠಿಗಳನ್ನಾಗಿ ಮಾಡಿದರು.

ಪ್ರತಿದಿನ ಪಾಠ ಪ್ರವಚನಗಳಾದ ಮೇಲೆ ಹಿರಿಯ ಗುರುಗಳು ತಾವೇ ಅವರನ್ನು ಹತ್ತಿರ ಕೂಡಿಸಿಕೊಂಡು ಸಂನ್ಯಾಸಧರ್ಮ, ಈಶ್ವರ ಪ್ರೇಮ, ಕಾರುಣ್ಯದ ಮಹತ್ವವನ್ನೂ, ವೈದಿಕ ಕರ್ಮ – ಧರ್ಮಗಳ ರಹಸ್ಯಾರ್ಥಗಳನ್ನೂ ವಿವರಿಸಿದರು. ಮಠದ ಜವಾಬ್ದಾರಿಯ ನಿರ್ವಹಣೆ, ಸಂಸ್ಥಾನದ ಸಂಪ್ರದಾಯಗಳು, ಮಠದ ಮರ್ಯಾದೆ – ಘನತೆಗಳನ್ನು ಕಾಪಾಡಲು ಅನಸರಿಸಬೇಕಾದ ರೀತಿ ರಿವಾಜುಗಳನ್ನು ಹೇಳಿಕೊಟ್ಟರು. ಉಪಾಸ್ಯ ದೇವತೆಗಳ ಮಂತ್ರಗಳನ್ನು ಉಪದೇಶಿಸಿ, ಅನುಷ್ಠಾನವಿಧಿಗಳನ್ನು ಬೋಧಿಸಿದರು. ಕಾಲಕ್ರಮದಲ್ಲಿ ಆಚಾರ್ಯ ಶಂಕರರ ಪ್ರಸ್ಥಾನತ್ರಯ ಭಾಷ್ಯಗಳ ಪಾಠವನ್ನೂ ತಾವೇ ಮಾಡಿದರು. ೧. ಹತ್ತು ಉಪನಿಷತ್ತುಗಳು, ೨. ಭಗವದ್ಗೀತೆ ಮತ್ತು ೩. ಬ್ರಹ್ಮ ಸೂತ್ರಗಳು – ಈ  ಮೂರನ್ನೂ ಸೇರಿಸಿ ಪ್ರಸ್ಥಾನತ್ರಯ ಎಂದು ಕರೆಯಲಾಗುವುದು. ಈ ಮೂರರ ಸಮಗ್ರ ಅಧ್ಯಯನ ಆಧ್ಯಾತ್ಮಿಕ ವಿದ್ಯೆಯಲ್ಲಿ ಪರಿಪೂರ್ಣತೆ ಗಳಿಸಿಕೊಡುತ್ತದೆ ಎಂಬುದು ನಂಬಿಕೆ.

ಹೊಣೆಯ ಅರಿವು

ಹನ್ನೆರಡು ವರ್ಷಗಳ ಸತತ ಪ್ರವಾಸದ ಅನಂತರ ಸ್ವಾಮಿಗಳು ಶೃಂಗೇರಿಗೆ ಹಿಂತಿರುಗಿದರು.

ಈ ವೇಳೆಗೆ ಮೈಸೂರಿನಲ್ಲಿ ಚಾಮರಾಜ ಒಡೆಯರು ಪಟ್ಟಭಿಷಕ್ತರಾಗಿದ್ದರು. ರಾಜಮಾತೆಯರು ಮಹಾರಾಜರಿಗೆ ಶಿವಪಂಚಾಕ್ಷರಿ ಮಂತ್ರೋಪದೇಶ ಮಾಡಿ ಆಶೀರ್ವದಿಸಿಲು ಮೈಸೂರಿಗೆ ಬರಬೇಕೆಂದು ಮನವಿ ಮಾಡಿಕೊಂಡರು. ಕಿರಿಯ ಸ್ವಾಮಿಗಳಿಗೂ ಹಾರ್ದಿಕ ಸಂಬಂಧ ಬೆಳೆಯಲು ಅಸ್ತಿಭಾರ ಹಾಕಿದರು.

ಶೃಂಗೇರಿಗೆ ಪುನಃ ಹಿಂತಿರುಗಿದ ಮೇಲೆ ಕಿರಿಯ ಸ್ವಾಮಿಗಳಿಗೆ ತಪಸ್ಸಿನ ಮೇಲೆ ಹೆಚ್ಚು ಒಲವು ಬೆಳೆಯಿತು. ಅರಣ್ಯಕ್ಕೆ ಹೋಗಿ ಏಕಾಂತದಲ್ಲಿ ತಪಸ್ಸು ಮಾಡಬೇಕೆಂಬ ಹಂಬಲ ಹೆಚ್ಚಿತು. ಸಹಪಾಠಿಗಳ ಬಗೆಗೆ ಮತ್ತು ಶಾಸ್ತ್ರಾಭ್ಯಾಸದ ಬಗೆಗೆ ಸಹಾ ಅನಾಸಕ್ತಿ ಕಾಣತೊಡಗಿತು. ಇದು ದೊಡ್ಡವರ ಗಮನಕ್ಕೂ ಬಂದಿತು.

ದೊಡ್ಡ ಸ್ವಾಮಿಗಳು ಕಿರಿಯರನ್ನು ಕರೆಸಿ ಪ್ರಶ್ನಿಸಲಾಗಿ ಅವರೊಂದಗೂ ಅರಣ್ಯಕ್ಕೆ ಹೋಗಿ ತಪೋನಿರತರಾಗಬೇಕೆಂಬ ತಮ್ಮ ಅಭಿಲಾಷೆಯನ್ನೇ ತಿಳಿಸಿದರು. ಆಗ ಅವರು “ನೀವು ಸಾಮಾನ್ಯ ಬಿಡಿ ಸಂನ್ಯಾಸಿಗಳಲ್ಲ. ದೊಡ್ಡ ಸಂಸ್ಥಾನದ ಪೀಠಾಧಿಪತಿಗಳು. ಸಾವಿರಾರು ಜನ ನಿಮ್ಮಿಂದಲೇ ತಮ್ಮ ಉದ್ಧಾರವೆಂದು ನಂಬಿದ್ದಾರೆ. ನೀವು ನಿರ್ವಹಿಸಬೇಕಾದ ಜವಾಬ್ದಾರಿ ಗುರುತರವಾದುದು. ಆಚಾರ್ಯ ಶಂಕರರಿಂದಾಂಭಿಸಿ ಮಹಾನ್ ತಪಸ್ವಿಗಳನೇಕರ ಉತ್ತರಾಧಿಕಾರಿಗಳು ನೀವು. ಪೀಠದ ‌‌ಗೌರವಮ ಘನತೆಗಳು ನಿಮ್ಮಿಂದ ಹೆಚ್ಚಬೇಕಾಗಿದೆ. ಹಿಂದೂ ಧರ್ಮದ ಧ್ವಜದ ರಕ್ಷಕರು ನೀವಾಗಿದ್ದೀರಿ. ನಿಮ್ಮ ಅಪೇಕ್ಷೆ ಸಾಧನೆಗಳನ್ನು ನಾನು ಬಲ್ಲೆ. ಆಗಾಗ ಇಲ್ಲೆಯೇ ತುಂಗೆಯ ಆ ದಡದ ವಪ್ರದೇಶಕ್ಕೆ ಹೋಗಿ ಕೆಲ ಕಾಲ ಏಕಾಂತದಲ್ಲಿ ಯೋಗಾಭ್ಯಾಸ ಮುಂದುವರೆಸಬಹುದು. ಆದರೆ ನಿಮ್ಮ ಹೆಚ್ಚಿನ  ಕಾಲ ಇಲ್ಲಿ ವಿನಿಯೋಗವಾಗತಕ್ಕದ್ದು” ಎಂದು ಆಜ್ಞಾಪಿಸಿದರು.

ಕಿರಿಯ ಸ್ವಾಮಿಗಳಿಗೆ ಹೆಚ್ಚಿನ ಜವಾಬ್ದಾರಿವಹಿಸುವುದರ ಅಗತ್ಯವನ್ನವರು ಮನಗಂಡರು. ಅವರಿಗೂ ತುಂಬಾ ವಯಸ್ಸಾಗಿತ್ತು. ಮಠದ ನಿತ್ಯ ದೇವತಾರ್ಚನಾದಿ ಕರ್ತವ್ಯಗಳನ್ನು ಕಿರಿಯ ಸ್ವಾಮಿಗಳಿಗೆ ವಹಿಸಿದರು.

ಮುಂದೆ ಕೆಲವೇ ದಿನಗಳಲ್ಲಿ ಅವರು ಭಗವಂತನನ್ನು ಸೇರಿದರು.

ಗುರುಗಳ ಅನಿರೀಕ್ಷಿತ ಕಣ್ಮರೆಯಿಂದ ಕಿರಿಯ ಸ್ವಾಮಿಗಳಿಗೆ ತುಂಬಾ ದುಃಖವಾಯಿತು. ಸಂನ್ಯಾಸಿಗಳಾದರೇನು, ಹೃದಯ ಶೂನ್ಯವೇ? ಗುರುಗಳ ಮಮತೆ, ವಿಶ್ವಾಸ, ಪ್ರೀತಿಗಳು ಕಿರಿಯರ ಮನಸ್ಸನ್ನು ಸೂರೆಗೊಂಡಿದ್ದವು. ಕರ್ತವ್ಯ ನಿಷ್ಠೆಯಿಂದ ನಿತ್ಯ ಕಾರ್ಯಗಳಲ್ಲಿ ನಿರತರಾಗಿದ್ದರೂ ಸದಾ ಗುರುಗಳು ಅವರ ಕಣ್ಣಿಗೆ ಕಟ್ಟದಂತಿತ್ತು. ಆ ದುಃಖದ ದಿನಗಳಲ್ಲಿ ಒಂದು ದಿನ ಗುರುಗಳು ಸ್ವಪ್ನದಲ್ಲಿ ದರ್ಶನವಿತ್ತು, “ಏಕೆ ಈ ದುಃಖ, ಈ ಉಪವಾಸ, ಈ ಜಾಗರಣೆ? ಇಂಥ ಮೋಹ ಸಂನ್ಯಾಸಿಗಳಿಗೆ ಸಲ್ಲ. ಇಷ್ಟಕ್ಕೂ ನಾನೆಲ್ಲಿ ಹೋಗಿದ್ದೇನೆ? ಸದಾ ಇಲ್ಲಿಯೇ ಇರುವೆನಲ್ಲ” ಎಂದು ಅಪ್ಪಣೆ ಕೊಡಿಸಿದರು.

ಕಿರಿಯ ಸ್ವಾಮಿಗಳು ಎಚ್ಚತ್ತರು. ತಮ್ಮ ಜವಾಬ್ದಾರಿ ನೆನೆದು ದೃಢ ಸಂಕಲ್ಪದಿಂದ ಕಾರ್ಯೋನ್ಮುಖರಾದರು. ಆರು ವರ್ಷ ಕಾಲ ಶೃಂಗೇರಿಯಲ್ಲಿ ನಿಂತು ನಿತ್ಯವೂ ಗುರುಗಳ ಸಮಾಧಿಗೆ ತಾವೇ ಪೂಜೆ ಸಲ್ಲಿಸಿದರು. ಮಠದ ಎಲ್ಲ ಜವಾಬ್ದಾರಿಯನ್ನೂ ತಾವೇ ನಿರ್ವಹಿಸಲಾರಂಭಿಸಿದರು. ಶಿಷ್ಯರು, ಹೊರ ಊರುಗಳಿಂದ ಬರುವ ಭಕ್ತರುಗಳಿಗೆ ಊಟೋಪಚಾರಗಳನ್ನು ವಿಚಾರಿಸಿಕೊಳ್ಳುವರು. ಪೂಜೆ, ಅಭ್ಯಾಸ, ಜಪ-ತಪ-ಶಿಷ್ಯರಿಗೆ ಪಾಠ ಪ್ರವಚನಗಳು, ಮಠದ ಆಡಳಿತ ಎಲ್ಲಕ್ಕೂ ಗಮನ ನೀಡುವರು. ಸಂದೇಹಗಳು ಬಂದಾಗ ಅಂತರಂಗದಲ್ಲಿ ಗುರುಗಳ ಮಾರ್ಗದರ್ಶನ ಪಡೆಯುವರು. ಹೆಚ್ಚಿನ ಆತ್ಮ ಜ್ಞಾನ ಮತ್ತು ಸಾಕ್ಷಾತ್ಕಾಕ್ಕಾಗಿ ಯೋಗಾಭ್ಯಾಸ ಮಾಡಲು ನಿರ್ಧರಿಸಿದರು. ಅನಿರೀಕ್ಷಿತವಾಗಿ ಉತ್ತರ ಭಾರತದಿಂದ ಗಂಗಾದಾಸನೆಂಬ ಹಠಯೋಗಿ-ಬೈರಾಗಿಯೊಬ್ಬ ಶೃಂಗೇರಿಗೆ ಬಂದಿದ್ದ. ಅವನನ್ನು ಮಠದಲ್ಲಿ ಆರು ತಿಂಗಳಕಾಲ ಉಳಿಸಿಕೊಂಡು ಹಠಯೋಗದ ಎಲ್ಲ ರಹಸ್ಯಗಳನ್ನೂ ಅರಸಿಸಿಕೊಂಡರು. ಗೀತೆಯಲ್ಲಿ ವಿವರಿಸಿರುವಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಜ್ಞಾನವನ್ನು ಬೆಳೆಸಿಕೊಳ್ಳಲು ಪ್ರರಂಭಿಸಿದರು. ಉಪ್ಪು, ಖಾರಗಳನ್ನು ತ್ಯಜಿಸಿ ಕೇವಲ ಸಾತ್ವಿಕಾಹಾರ, ಕಟ್ಟುನಿಟ್ಟಾದ ದೈನಿಕ ಕಾರ್ಯಕ್ರಮಗಳಿಂದ ಸಾಧನೆಯನ್ನು ಮಾಡಿದರು.

ಆರು ವರ್ಷಗಳ ಸತತ ತಪಸ್ಸು, ಯೋಗಾಭ್ಯಾಸ, ಅಧ್ಯಯನಗಳಿಂದ ಅವರ ಆತ್ಮ ಪರಿಪಕ್ವವಾಗಿತ್ತು. ಇನ್ನ ಶಿಷ್ಯ ಸಂಗ್ರಹ, ಧರ್ಮಪ್ರಚಾರಗಳಿಗೆ ಪ್ರವಾಸ ಕೈಗೊಳ್ಳಬೇಕೆಂಬ ಅಭಿಲಾಷೆ ಉಂಟಾಯಿತು. ಮೊದಲು ಉತ್ತರ ಭಾರತದ ಪ್ರವಾಸ ಕೈಗೊಳ್ಳಲು ನಿರ್ಧರಿಸಿದರು.

ಸಂಚಾರ

ಸ್ವಾಮಿಗಳು ಗೋಕರ್ಣದಿಂದರಂಭಿಸಿ ಉತ್ತರದ ಹಲವಾರು ನಗರಗಳಿಗೆ ಭೇಟಿ ಇತ್ತು ಧರ್ಮ ಪ್ರವಚನಗಳನ್ನಿತ್ತು. ದಕ್ಷಿಣ ಭಾರತದಲ್ಲೂ ಅನೇಕ ಸ್ಥಳಗಳಿಗೆ ಭೇಟಿ ಕೊಟ್ಟು ಜನರಿಗೆ ಮಾರ್ಗದರ್ಶನ ಮಾಡಿದರು.

ರಾಮನಾಡಿನ ರಾಜರ ಕುಲದೇವತೆ ರಾಜರಾಜೇಶ್ವರಿಗೆ ದುರ್ಗಾಷ್ಟಮಿಯಂದು ಸಾವಿರಾರು ಕುರಿಗಳನ್ನು ಬಲಿ ಕೊಡುವ ಪದ್ಧತಿ ಬೆಳೆದು ಬಂದಿತ್ತು. ಕರುಣಾಶೀಲನಾದ ರಾಜನಿಗೆ ಈ ಪ್ರಾಣಿಹಿಂಸೆ ತಪ್ಪಿಸಬೇಕೆಂಬ ಅಪೇಕ್ಷೆ ಇದ್ದರೂ ಮನೆತನದ ಸಂಪ್ರದಾಯ ಮತ್ತು ಪ್ರಜೆಗಳ ಅಭಿಪ್ರಾಯಕ್ಕೆ ವಿರುದ್ಧ ನಿರ್ಧಾರ ಕೈಗೊಳ್ಳುವ ಧೈರ್ಯವಿರಲಿಲ್ಲ. ಸ್ವಾಮಿಗಳವರಲ್ಲಿ ತಮ್ಮ ಧರ್ಮ ಸಂಕಟವನ್ನವರು ನಿವೇದಿಸಿಕೊಂಡರು. ಸ್ವಾಮಿಗಳು ಮಾರನೆಯ ದಿನ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದರು. ಆ ರಾತ್ರಿ ತಮ್ಮ ಗುರುಗಳನ್ನೂ, ಆರಾಧ್ಯ ದೇವತೆಯಾದ ಶಾರದಾಂಬೆಯನ್ನೂ ಸ್ಮರಿಸಿಕೊಂಡು ಮಲಗಿದರು. ರಾತ್ರಿ ಮಲಿನವಾದ ವಸ್ತ್ರಗಳನ್ನುಟ್ಟ ಹೆಂಗಸು ತಾನು ಈ ಊರು ಬಿಟ್ಟು ಹೋಗುತ್ತಿರುವುದಾಗಿ ಹೇಳಿದಂತೆಯೂ, ಸರ್ವಾಲಂಕಾರ ಸಂಪನ್ನಳಾದ ಸುಂದರ ಹೆಣ್ಣೊಬ್ಬಳು ತಾನು ಅಲ್ಲಿ ನೆಲೆಸಲು ಬಂದಿರುವುದಾಗಿ ಹೇಳಿದಂತೆಯೂ ಸ್ವಪ್ನವಾಯಿತಂತೆ.

ಮಾರನೆಯ ದಿನ ಸ್ವಾಮಿಗಳು ರಾಜನನ್ನು ಕರೆಸಿಕೊಂಡು ಸ್ವಪ್ನ ವೃತ್ತಾಂತವನ್ನು ತಿಳಿಸಿ, “ರಕ್ತಾಸಕ್ತಳಾದ ಮಲಿನ ದೇವತೆ ನಿನ್ನ ರಾಜ್ಯದಿಂದ ತೆರಳಿ ರಾಜರಾಜೇಶ್ವರಿ ಇಲ್ಲಿ ನೆಲೆಸಲು ಬಂದಿದ್ದಾಳೆ. ಆದ್ದರಿಂದ ನೀನು ಪ್ರಾಣಿ ಬಲಿಯನ್ನು ನಿಲ್ಲಿಸಿ ನಿಶ್ಚಿಂತೆಯಿಂದ ಇರಬಹುದು” ಎಂದು ಹೇಳಿ ಆ ವರ್ಷ ತಾನೇ ದುರ್ಗಾಷ್ಟಮಿಯಂದು ರಾಜರಾಜೇಶ್ವರಿಯ ಪೂಜೆ ಮಾಡಿ ಪ್ರಜೆಗಳ ಭೀತಿ ನಿವಾರಿಸಿದರು. ಅನಂತರ ಅರಮನೆಯ ಪ್ರಾಕಾರದಲ್ಲಿ ಹೊಸ ದೇವಾಲಯವೊಂದನ್ನು ನಿರ್ಮಿಸಿ, ಅಲ್ಲಿಗೆ ದೇವಿಯ ವಿಗ್ರಹವನ್ನು ಸ್ಥಳಾಂತರಿಸಲಾಯಿತಲ್ಲದೆ ಸ್ವಾಮಿಗಳೇ ಅಲ್ಲೊಂದು ಶ್ರೀಚಕ್ರವನ್ನೂ ಪ್ರತಿಷ್ಠಾಪಿಸಿದರು.

ಕೊಯಿದೂರು ಎಂಬಲ್ಲಿ ಸ್ವಾಮಿಗಳು ತಂಗಿದ್ದಾಗ ಮೈಸೂರಿನ ಮಹಾರಾಜ ಚಾಮರಾಜ ಒಡೆಯರ್‌ರವರು ಹಠಾತ್ ನಿಧನರಾದ ಸುದ್ಧಿ ತಿಳಿಯಿತು. ಸ್ವಾಮಿಗಳು ಮಹಾರಾಣಿಯವರ ಬೇಡಿಕೆಯಂತೆ ಆದಷ್ಟು ಬೇಗ ಮೈಸೂರಿಗೆ ಪ್ರಯಾಣ ಮಾಡಿದರು. ಅಲ್ಲಿ ಮಹಾರಾಣಿಯವರಿಗೆ ದುಃಖ ಶಮವಾಗುವಂತೆ ಸಾಂತ್ವನದ ಉಪದೇಶವಿತ್ತು. ಬಾಲಕರಾದ ಕೃಷ್ಣರಾಜ ಒಡೆಯರ್ ಮತ್ತು ಕಂಠೀರವ ನರಸಿಂಹರಾಜ ಒಡೆಯರ್ ಅವರಿಗೆ ಶಿವಪೂಜಾ ವಿಧಾನವನ್ನು ಬೋಧಿಸಿ ಶೃಂಗೇರಿಗೆ ಹಿಂತಿರುಗಿದರು.

ಮಠಾಡಳಿತ

ಸುದೀರ್ಘಕಾಲ ಶೃಂಗೇರಿಯ ಹೊರಗಡೆಯೆ ಇದ್ದುದರಿಂದ ಇಲ್ಲಿ ಪುನಃ ಅವ್ಯವಸ್ಥೆಯಾಗಿತ್ತು. ಮಠದಿಂದ ಕೆಲವು ಬ್ರಾಹ್ಮಣರಿಗೆ ಜೀವನಾಂಶಕ್ಕೆಂದು ನೀಡಲಾಗಿದ್ದ ಜಮೀನುಗಳನ್ನು ಅವರು ಇತರರಿಗೆ ಮಾರಿದ್ದರು. ಮಠದ ಎಷ್ಟೋ ಭೂಮಿಯನ್ನು ಗೇಣಿದಾರರೇ ತಮ್ಮದನ್ನಾಗಿಸಿಕೊಂಡಿದ್ದರು. ಮಠದ ಭೂ ಆದಾಯ ವರ್ಷಕ್ಕೆ ಕೇವಲ ೬೦,೦೦೦ ರೂಪಾಯಿಗಳಿಗೆ ಇಳಿದಿತ್ತು. ಸ್ವಾಮಿಗಳು ಈ ವ್ಯವಹಾರಕ್ಕೆಲ್ಲ ಗಮನ ನೀಡಬೇಕಾಯಿತು. ಅವರು ದಿವಾನ್ ಕೆ. ಶೇಷಾದ್ರಿ ಅಯ್ಯರ್ ಅವರಿಗೆ ಈ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಲು ಆದೇಶವಿತ್ತರು. ಅದರಂತೆ ದಿವಾನರು ರೆವಿನ್ಯೂ ಅಧಿಕಾರಿಗಳನ್ನು ನೇಮಿಸಿ ಶೃಂಗೇರಿಯ ಇನಾಂಗಳನ್ನೂ, ಗೇಣಿದಾರರ ಮತ್ತು ಮಠದ ಹಕ್ಕುಗಳನ್ನೂ ಖಚಿತಗೊಳಿಸಿದರು. ಇದರಿಂದ ಮಠದ ಆದಾಯ ೧,೩೦,೦೦೦ ರೂಪಾಯಿಗಳಷ್ಟಾಯಿತು. ದಕ್ಷಿಣದ ಪ್ರವಾಸ ಕಾಲದಲ್ಲಿ ರಾಮನಾಡು ರಾಜರು ಜಹಗೀರಿಯೊಂದನ್ನಿತ್ತಿದ್ದರು. ಸ್ವಾಮಿಗಳು ಮಠದ ಎಲ್ಲ ಸಾಲವನ್ನೂ ತೀರಿಸಿ ಮಠಕ್ಕೆ ಬೇಕಾದ ಚಿನ್ನ ಬೆಳ್ಳಿ ಆಭರಣ, ತಟ್ಟೆ ಪಾತ್ರೆಗಳನ್ನು ಮಾಡಿಸಿದರು.

‘ನೀನು ಪ್ರಾಣ ಬಲಿಯನ್ನು ನಿಲ್ಲಿಸು’

ಶೃಂಗೇರಿಯಲ್ಲಿ ಸಂಸ್ಕೃತ ವೇದ ಶಿಕ್ಷಣ ನೀಡಲಿಕ್ಕಾಗಿ ‘ಸದ್ವದ್ಯಾ ಸಂಜೀವಿನಿ’ ಎಂಬ ಹೆಸರಿನ ಪಾಠಶಾಲೆಯನ್ನು ಆರಂಭಿಸಿ ಅದಕ್ಕೆ ವರ್ಷಕ್ಕೆ ೧೨ ಸಾವಿರ ರೂ.ಗಳನ್ನು ಮಠದಿಂದ ಕೊಡುವಂತೆ ವ್ಯವಸ್ಥೆ ಮಾಡಿದರು. ತಾವೇ ಕೆಲವಾರು ವಿದ್ಯಾರ್ಥಿಗಳಿಗೆ ಶಂಕರ ಭಾಷ್ಯಗಳ ಪಾಠ ಹೇಳುತ್ತಾ ಅಧ್ಯಯನ ಅಧ್ಯಾಪನಗಳಿಗೆ ಜೀವ ತುಂಬಿದರು.

ಏಕಾಂತದಲ್ಲಿ ತಪಸ್ಸು ಮಾಡಬೇಕೆಂಬ ಬಹಳ ವರ್ಷಗಳ ಅವರ ಹಂಬಲ ಈಗ ಪುನಃ ಅವರ ಮನಸ್ಸನ್ನು ಕೊರೆಯತೊಡಗಿತು. ಆಗ ಅವರು ತುಂಗೆಯ ದಕ್ಷಿಣದ ತಟದಲ್ಲಿನ ಅರಣ್ಯ ಪ್ರದೇಶದಲ್ಲಿ ಒಂದು ಸಣ್ಣ ಕುಟೀರವನ್ನು ನಿರ್ಮಿಸಲು ಆಜ್ಞಾಪಿಸಿದರು. ಒಂದು ಶುಭದಿನ ಅತ್ಯಂತ ಮಿತ ಪರಿವಾರದೊಡನೆ ಅಲ್ಲಿಗೆ ತೆರಳಿದರು. ಆ ಕುಟೀರದ ಪ್ರದೇಶಕ್ಕೆ ತಮ್ಮ ಗುರುಗಳ ಹೆಸರಿನಿಂದ ‘ನರಸಿಂಹ ವನ’ ಎಂದು ಹೆಸರಿಟ್ಟರು. ಅಕ್ಕಪಕ್ಕದಲ್ಲಿ ಖಾಯಂ ನಿವಾಸಕ್ಕೆ ಅಗತ್ಯವಾಗುವಂತೆ ಕುಟೀರಗಳನ್ನು ನಿರ್ಮಿಸಲು ವ್ಯವಸ್ಥೆ ಮಾಡಿದರು.

ಪ್ರತಿದಿನ ಮುಂಜಾನೆ ಸೂರ್ಯೋದಯಕ್ಕೂ ಮೊದಲೇ ಎದ್ದು ಸ್ನಾನಾದಿ ನಿತ್ಯಕರ್ಮಗಳನ್ನು ಪೂರೈಸುತ್ತಿದ್ದರು. ಬುದ್ಧಿವಂತರಾದ ಕೆಲವು ಶಿಷ್ಯರಿಗೆ ಭಾಷ್ಯಪಾಠಲಗಳನ್ನು ಹೇಳುತ್ತಿದ್ದರು. ಅಲ್ಪಾಹಾರ ಸ್ವೀಕರಿಸಿ ಕೆಲಕಾಲ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಸಂಜೆ ಸಮೀಪಿಸಿದಂತೆ ಆಪ್ತ ಪರಿಚಾರಕನೊಂದಿಗೆ ವನ ಪ್ರಾಂತಕ್ಕೆ ತೆರಳುತ್ತಿದ್ದರು. ಯಾವುದಾದರೂ ಮರದ ಕೆಳಗೆ ಅಥವಾ ಬಂಡೆಗಲ್ಲಿನ ಮೇಲೆ ಅಥವಾ ನದಿಯ ಶುಭ್ರವಾದ ಮರಳಿನ ಮೇಲೆ ಕುಳಿತು ಧ್ಯಾನನಿರತರಾಗುವರು. ಕತ್ತಲಾದಂತೆ ಕುಟೀರಕ್ಕೆ ಹಿಂತಿರುತ್ತಿದ್ದರು.

ಋಷಿಗಳಂತೆ ಅವರದು ಅತ್ಯಂತ ಸರಳ ಜೀವನವಾಗಿತ್ತು. ಚಿನ್ನ-ಬೆಳ್ಳಿ ಪಾತ್ರೆಗಳೊಂದನ್ನೂ ಅವರು ಬಳಸುತ್ತಿರಲಿಲ್ಲ. ಅಡವಿಯಲ್ಲಿ ಬೆಳೆಯುವ ಹೂ-ಎಲೆಗಳೇ ಅವರ ಪೂಜಾ ಸಾಧನಗಳಾದವು. ಉಪ್ಪು ಖಾರಗಳನ್ನು ಬಿಟ್ಟು ಅತ್ಯಂತ ಸಾತ್ವಿಕವಾದ ಆಹಾರವನ್ನು ಅವರು ಸ್ವೀಕರಿಸುತ್ತಿದ್ದರು.

ಹೀಗೆಯೇ ಇರುವಾಗ ಒಮ್ಮೆ ತರುಣ ಮಹಾರಾಜರು ಪಟ್ಟಾಭಿಷೇಕಕ್ಕೆ ಮುನ್ನ ರಾಜ್ಯದ ಪ್ರವಾಸ ಮಾಡಲು ನಿರ್ಧರಿಸಿ, ಶೃಂಗೇರಿಯಿಂದ ಪ್ರವಾಸ ಆರಂಭಿಸಲು ವ್ಯವಸ್ಥೆ ಮಾಡಿ, ಅದರಂತೆ ಶೃಂಗೇರಿಗೆ ಬಂದಿಳಿದರು, ಅವರೊಂದಿಗೆ ಅವರ ಆಂಗ್ಲ ಅಧ್ಯಾಪಕ ಫ್ರೇಸರ್ ಎಂಬುವರೂ ಬಂದಿದ್ದರು. ಮಠದ ವತಿಯಿಂದ ಅವರ ವಸತಿ ಊಟೋಪಚಾರಗಳಿಗೆ ವ್ಯವಸ್ಥೆ ಮಾಡಲಾಗಿತ್ತು.

ಫ್ರೇಸರ್ ಅವರು ಸ್ವಾಮಿಗಳ ದರ್ಶನ ಬಯಸಿ ನದಿ ದಾಟಿ ಆಶ್ರಮಕ್ಕೆ ಬಂದರು. ದ್ವಿಭಾಷಿಯೊಬ್ಬನ ಸಹಾಯದಿಂದ ಸ್ವಾಮಿಗಳೊಂದಿಗೆ ನಾಲ್ಕು ಗಂಟೆಗಳ ಕಾಲ ಕುಳಿತು ಮಾತನಾಡಿದರು. ಸ್ವಾಮಿಗಳವರ ಸರಳತೆ, ಕ್ಲಿಷ್ಟ ವಿಷಯವನ್ನೂ ಅರ್ಥವಾಗುವಂತೆ ವಿವರಿಸುವ ಸಾಮರ್ಥ್ಯ,ಕಾರುಣ್ಯ ಭಾವಗಳಿಗೆ ಆತ ಮಾರು ಹೋಗಿ ಮುಂದೆ ಅನೇಕ ವರ್ಷಗಳ ಕಾಲ ಸ್ವಾಮಿಗಳ ಜೊತೆ ಪತ್ರವ್ಯವಹಾರ ನಡೆಸುತ್ತಿದ್ದರು.

ಅದ್ವೈತ ಸಿದ್ಧಾಂತದ ದ್ರಷ್ಟಾರರೂ ಮಠಗಳ ಮೂಲ ಪುರುಷರೂ ಆದ ಶಂಕರಾಚಾರ್ಯರನ್ನು ಜನ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುವುದೆಂತು ಎಂಬ ಬಗ್ಗೆ ಸ್ವಾಮಿಗಳು ಚಿಂತಿಸಿದರು. ಮೊದಲನೆಯದಾಗಿ ಪ್ರತಿ ವರ್ಷ ಅವರ ಜಯಂತಿ ಉತ್ಸವವನ್ನು ಆಚರಿಸುವ ಪದ್ಧತಿ ಆರಂಭಿಸಿದರು. ಆಗ ಶೃಂಗೇರಿಯಲ್ಲಿ ಆರಂಭವಾದ ಈ ಉತ್ಸವ ಈಗ ದೇಶದಲ್ಲೆಲ್ಲ ನಡೆಯುತ್ತಿದೆ.

ಶಂಕರಾಚಾರ್ಯರು ಪ್ರಸ್ಥಾನತ್ರಯಗಳಿಗೆ ಭಾಷ್ಯ ರಚಿಸಿರುವುದೇ ಅಲ್ಲದೆ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುವ ಅನೇಕ ಗ್ರಂಥಗಳನ್ನೂ ರಚಿಸಿದ್ದಾರೆ. ಅವುಗಳೆಲ್ಲವೂ ಆಗ ಮುದ್ರಿತವಾಗಿರಲಿಲ್ಲ. ಆದ ಹಲವು ಗ್ರಂಥಗಳು ತಪ್ಪುಗಳಿಂದ ಕೂಡಿದ್ದವು. ಇವು ಎಲ್ಲರಿಗೂ ದೊರೆಯುವಂತಾಗಬೇಕೆಂದು ಸ್ವಾಮಿಗಳು ಯೋಚಿಸಿದರು. ಅರ್ಹ ಪಂಡಿತರನ್ನು ನೇಮಿಸಿ ಗ್ರಂಥಗಳನ್ನು ಸಂಪಾದಿಸಿ, ಮುದ್ರಿಸಿ, ಪ್ರಕಟಿಸಲು ವ್ಯವಸ್ಥೆ ಮಾಡಿದರು.

ಕಾಲಟಿ

ಕೇರಳದ ಪೂರ್ಣಾನದೀ ತೀರದಲ್ಲಿನ ಕಾಲಟಿ ಎಂಬ ಗ್ರಾಮದಲ್ಲಿ ಆಚಾರ್ಯ ಶಂಕರರು ಜನಿಸಿದರು. ಸಾಕ್ಷಾತ್ ಪರಮೇಶ್ವರನ ಅವತಾರವೆಂದು ಪ್ರಸಿದ್ಧರಾದ ಅವರು ಹಿಂದೂ ಧರ್ಮದ ಪುನರುದ್ಧಾರಕರೂ, ಅದ್ವೈತ ದರ್ಶನದ ಆಚಾರ್ಯರೂ, ಇಡೀ ಭಾರತದಲ್ಲೇ ಜಗದ್ಗುರುಗಳೆಂದು ಭಕ್ತಿಯಿಂದ ಸ್ಮರಿಸುವಂತಹವರೂ ಆದರೂ ಅವರು ಹುಟ್ಟಿದ ಗ್ರಾಮ ಎಲ್ಲಿದೆ ಎಂಬುದೇ ಅನೇಕರಿಗೆ ತಿಳಿದಿರಲಿಲ್ಲ. ಅವರ ಜನ್ಮ ಸ್ಥಳ ಹೇಗಿತ್ತು ಎಂಬುದನ್ನು ‘ಶಂಕರ ವಿಜಯ’ದಲ್ಲಿ ಓದಿ ತಿಳಿದುಕೊಳ್ಳಬೇಕಾಗಿತ್ತೇ ವಿನಾ ನೋಡಿ ಆನಂದಿಸುವ ಭಾಗ್ಯ ಯಾರಿಗೂ ಇರಲಿಲ್ಲ. ಸ್ವಾಮಿಗಳಿಗೆ ಪದೇ ಪದೇ ಈ ವಿಷಯ ನೆನಪಿಗೆ ಬರುತ್ತಿತ್ತು. ಆದ್ಯ ಗುರುಗಳ ಜನ್ಮಸ್ಥಳ ಹುಡುಕಿ, ಅಲ್ಲಿ ಅವರದೊಂದು ಮಂದಿರ, ಅವರ ಆರಾಧ್ಯ ದೈವವಾದ ಶಾರದಾಮಾತೆಗೆ ಒಂದು ದೇವಾಲಯ ನಿರ್ಮಿಸಬೇಕು; ವೈದಿಕ, ಧಾರ್ಮಿಕ, ಆಧ್ಯಾತ್ಮಿಕ ವಿದ್ಯಾಭ್ಯಾಸ ಮಾಡುವರಿಗಾಗಿ ಅಲ್ಲಿ ಒಂದು ಪಾಠಶಾಲೆ ಆರಂಭಿಸಬೇಕು; ಕಾಲಟಿ, ಭಾರತದ ಪವಿತ್ರ ಯಾತ್ರಾಸ್ಥಳವಾಗುವಂತೆ ಮಾಡಬೇಕು ಎಂಬ ಹಂಬಲ ದಿನೇ ದಿನೇ ಹೆಚ್ಚಾಯಿತು. ತಾವು ಎಷ್ಟಾದರೂ ಕೇವಲ ಮಠಾಧಿಪತಿಗಳು ರಾಜಕೀಯ ಅಧಿಕಾರದ ಬಲವಿಲ್ಲದೆ ಇಂತಹ ಮಹತ್ಕಾರ್ಯ ಆಗಲಾರದು ಎಂದು ಅವರಿಗೆ ಅನಿಸಿದ್ದು ಸಹಜ.

ಆಗ ದಿವಾನ್ ಕೆ. ಶೇಷಾದ್ರಿ ಅಯ್ಯರ್ ಅವರನ್ನು ಕರೆಸಿಕೊಂಡು ಅವರಲ್ಲಿ, “ಕಾಲಟಿಗೆ ತಕ್ಕ ಪ್ರಧಾನ್ಯ ಸಿಕ್ಕಬೇಕು” ಎಂಬ ತಮ್ಮ ಮನೋಗತವನ್ನು ತಿಳಿಸಿದರು. ಶೇಷಾದ್ರಿ ಅಯ್ಯರ್ ಅವರಿಗೆ ತುಂಬ ಆನಂದವಾಯಿತು. ಸ್ವಾಮಿಗಳ ಆಪೇಕ್ಷೆಯನ್ನು ಪರಮ ಆಜ್ಞೆಯಂತೆ ತಾವು ಪಾಲಿಸುವುದಾಗಿ ಆಶ್ವಾಸನೆಯಿತ್ತರು. ತಾವೇ ಖುದ್ದಾಗಿ ಒಬ್ಬಿಬ್ಬರು ಆಪ್ತ ಪರಿಚಾರಕರೊಂದಿಗೆ ಕೇರಳಕ್ಕೆ ತೆರಳಿ ಅಲ್ಲಿ ಕೊಟ್ಟಾಯಂ ಡಿವಿಷನ್ನಿನಲ್ಲಿ ಪೂರ್ಣಾ ನದಿ ಬಳಿ ‘ಶಂಕರ ವಿಜಯ’ದಲ್ಲಿನ ವರ್ಣನೆಯ ಗುರುತುಗಳನ್ನು ಹುಡುಕಿದರು. ಅಲ್ಲಿ ಕುಗ್ರಾಮದಂತಿದ್ದ ಕಾಲಟಿಯ ಗ್ರಾಮಸ್ಥರ ನೆರವಿನಿಂದ ಶಂಕರರ ಮನೆ ಇದ್ದಿರಬಹುದಾದ ಸ್ಥಳ ಗುರುತಿಸಿ ಸ್ವಾಮಿಗಳಿಗೆ ಬಂದು ನಿವೇದಿಸಿಕೊಂಡರು.

ಆ ಪ್ರದೇಶವೆಲ್ಲ ವಿಶೇಷವಾಗಿ ಕಾಡು; ಅನ್ಯ ರಾಜ್ಯಕ್ಕೆ ಸೇರಿದ್ದು. ಅಲ್ಲಿ ಹಿಂದಿನ ಇತಿಹಾಸವನ್ನು ಗುರುತಿಸಿ ಗೌರವಿಸುವ ಮನೋಭಾವದ ಜನವೂ ಇರಲಿಲ್ಲ. ಹೀಗಾಗಿ ತತ್‌ಕ್ಷಣ ಅಲ್ಲಿ ಮಾಡಬೇಕೆನಿಸಿದ್ದನ್ನೆಲ್ಲ ಮಾಡುವುದು ಸಾಧ್ಯವಿರಲಿಲ್ಲ. ಮೊದಲು ಜನರ ಒಲವು ಸಂಪಾದಿಸಬೇಕು. ಸತ್ಕಾರ್ಯ ಒಂದರಲ್ಲಿ ಅವರ ಮನಸ್ಸು ನೆಲಸುವಂತೆ ಮಾಡಬೇಕು.

ಈ ದೃಷ್ಟಿಯಿಂದ ಅಲ್ಲಿ ಮೊದಲು ಶಂಕರ ಜಯಂತಿ ಆಚರಿಸಲು ವ್ಯವಸ್ಥೆ ಮಾಡಲಾಯಿತು. ಪಂಡಿತ ಶ್ರೀನಿವಾಸ ಶಾಸ್ತ್ರಿಗಳೆಂಬ ವಿದ್ವಾಂಸರು ಪ್ರತಿವರ್ಷ ಅಲ್ಲಿಗೆ ತೆರಳಿ ಪೂರ್ಣಾತೀರದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡು ೫ ದಿನಗಳ ಕಾಲ ಜಯಂತಿ ಉತ್ಸವ ನಡೆಸಲು ಏರ್ಪಾಡು ಮಾಡಲಾಯಿತು. ಐದು ವರ್ಷಗಳ ಕಾಲ ಈ ರೀತಿ ನಡೆದ ಮೇಲೆ ಸುತ್ತಮುತ್ತಲ ಜನಕ್ಕೆ ಇದೊಂದು ಆಕರ್ಷಣೆ ಆಯಿತು. ಹಾಗೆಯೇ ಅಲ್ಲಿ ಶಂಕರಾಚಾರ್ಯರ ನೆನಪಿಗಾಗಿ ದೇವಾಲಯಗಳನ್ನು ಕಟ್ಟಬೇಕೆಂಬ ಅಪೇಕ್ಷೆಯೂ ಬೆಳೆಯಿತು.

ಈ ಹೊತ್ತಿಗೆ ಕೆ. ಶೇಷಾದ್ರಿ ಅಯ್ಯರ್ ಅವರು ದೈವಾಧೀನರಾಗಿದ್ದರು. ಆದ್ದರಿಂದ ಕೆಲಕಾಲ ಕೆಲಸ ಸ್ಥಗಿತವಾದರೂ ತಿರುವಾಂಕೂರು ಸಂಸ್ಥಾನದ ಹೊಸ ದಿವಾನರಾದ ವಿ.ಪಿ. ಮಾಧವರಾಯರು ಸ್ವಾಮಿಗಳ ಶಿಷ್ಯರೇ ಆಗಿದ್ದುದು ಅವರ ಪ್ರಯತ್ನ ಮುಂದುವರೆಯಲು ಸಹಾಯಕವಾಯಿತು. ಮಠದ ಅಧಿಕಾರಿಗಳು ದಿವಾನರನ್ನು ಕಂಡು ಸ್ವಾಮಿಗಳ ಅಭಲಾಷೆಯನ್ನು ವಿವರಿಸಿದರು. ದಿವಾನರ ಸಹಕಾರದಿಂದ ಕಾಲಟಿಯಲ್ಲಿ ಶಂಕರರ ಜನ್ಮಗೃಹವಿದ್ದ ಸ್ಥಳವನ್ನು ನಿರ್ದಿಷ್ಟವಾಗಿ ಗುರುತಿಸಲಾಯಿತು. ಆ ಸ್ಥಳ ಮತ್ತು ಸುತ್ತಮುತ್ತಲ ಭೂಮಿ ಖಾಸಗಿಯವರ ಕೈವಶವಾಗಿತ್ತು. ಅದನ್ನು ತಿರುವಾಂಕೂರು ಮಹಾರಾಜದು ವಶಪಡಿಸಿಕೊಂಡು ಶೃಂಗೇರಿ ಮಠಕ್ಕೆ ದತ್ತಿಯಾಗಿ ನೀಡಿದರು. ಮುಂದೆ ಕೆಲಸಗಳು ಶೀಘ್ರಗತಿಯಿಂದಲೂ ಉತ್ಸಾಹದಿಂದಲೂ ಸಾಗಿದವು. ಸ್ವಾಮಿಗಳೇ ಕಾಲಟಿಗೆ ಪ್ರಯಾಣ ಬೆಳೆಸಲು ಸಿದ್ಧರಾದರು. ಭಕ್ತರ ಉತ್ಸಾಹ, ತಿರುವಾಂಕೂರು ಮಹಾರಾಜರ ಸಹಕಾರ ಮತ್ತು ಸ್ವಾಮಿಗಳ ಆಸಕ್ತಿಯ ಫಲವಾಗಿ ಕಾಲಟಿಯಲ್ಲಿ ಶಂಕರರ ದೇವಾಲಯ, ಶಾರದಾ ಮಂದಿರಗಳು ಶೀಘ್ರದಲ್ಲಿಯೇ ಸಿದ್ಧವಾದವು. ಸ್ವಾಮಿಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಲ್ಲಿ ವಿಗ್ರಹ ಪ್ರತಿಷ್ಠೆ ನಡೆಸಿದರು. ಮುಂದೆ ಮೂರು ತಿಂಗಳ ಕಾಲ ಅಲ್ಲಿಯೇ ನಿಂತು ಕಾಲಟಿಯನ್ನು ಜನಪ್ರಿಯ ಯಾತ್ರಾಸ್ಥಳ ಮಾಡಲು ಅಗತ್ಯವಾದ ಕ್ರಮಗಳಿಗೆ ವ್ಯವಸ್ಥೆ ಮಾಡಿದರು. ತಿರುವಾಂಕೂರು ಮಹಾರಾಜರೂ, ಮೈಸೂರು ಮಹಾರಾಜರೂ ಕಾಲಟಿಗೆ ಭೇಟಿ ನೀಡಿ ಜನರ ಗಮನವನ್ನು ಸೆಳೆದರು.

ಬೆಂಗಳೂರಿನಲ್ಲಿ

ಬೆಂಗಳೂರಿನಲ್ಲಿ ಶೃಂಗೇರಿ ಮಠಕ್ಕೆ ಸೇರಿದ ಮಠವಾಗಲೀ ಸ್ವಾಮಿಗಳು ಇಳಿದುಕೊಳ್ಳಲು ಅನುಕೂಲವಾದ ಭವನವಾಗಲೀ ಇರಲಿಲ್ಲ. ಸ್ವಾಮಿಗಳು ಕಾಲಟಿಗೆ ಪ್ರಯಾಣ ಮಾಡುವಾಗ ಬೆಂಗಳೂರಿನ ಮಾರ್ಗವಾಗಿ ಬಂದರು. ಆಗ ಈ ಮೊದಲು ತಿರುವಾಂಕೂರಿನಲ್ಲಿ ದಿವಾನರಾಗಿದ್ದ ವಿ.ಪಿ.  ಮಾಧವರಾಯರೇ ಮೈಸೂರಿನ ದಿವಾನರಾಗಿದ್ದರು. ಸ್ವಾಮಿಗಳು ಅವರ ಅತಿಥಿಯಾಗಿ‘ಪೂರ್ಣ ಪ್ರಸಾದ’ ವೆಂಬ ಮಾಧವರಾಯರ ಮನೆಯಲ್ಲಿ ತಂಗಿದ್ದರು. ಆಗ ಬೆಂಗಳೂರಿನ ನಾಗರಿಕರು, ನಗರದಲ್ಲಿ ಒಂದು ವಿಶಾಲವಾದ ಶಂಕರಮಠ ಮತ್ತು ಶಂಕರ ದೇವಾಲಯಗಳನ್ನು ನಿರ್ಮಿಸಲು ಮನವಿ ಮಾಡಿಕೊಂಡರು. ಸ್ವಾಮಿಗಳ ಒಪ್ಪಿಗೆ ದೊರೆತ ಮೇಲೆ ದಿವಾನರು ಸರಕಾರದಿಂದ ನಗರ ಮಧ್ಯದಲ್ಲಿ ವಿಶಾಲವಾದ ನಿವೇಶನವನ್ನು ಶೃಂಗೇರಿ ಮಠಕ್ಕೆ ಕೊಡಿಸಿಕೊಟ್ಟರು. ಸ್ವಾಮಿಗಳು ಕಾಲಟಿಯಿಂದ  ಹಿಂತಿರುಗುವ ವೇಳೆಗೆ ಇಲ್ಲಿ ಭವ್ಯವಾದ ಮಠ ಮತ್ತು ದೇವಾಲಯಗಳು ನಿರ್ಮಾಣವಾಗಿದ್ದವು. ಇಲ್ಲಿ ಒಂದು ‘ಗೀರ್ವಾಣ ಪ್ರೌಢವಿದ್ಯಾ ಅಭಿವರ್ಧಿನಿ’ ಎಂಬ ಸಂಸ್ಕೃತ ಶಾಲೆ ನಡೆಸಲು ಸ್ವಾಮಿಗಳು ವ್ಯವಸ್ಥೆ ಮಾಡಿ ಶೃಂಗೇರಿಗೆ ತೆರಳಿದರು.

ಶೃಂಗೇರಿಯಲ್ಲಿ ಎಂದಿನಂತೆ ನರಸಿಂಹವನಕ್ಕೆ ತೆರಳಿ ತಮ್ಮ ನಿತ್ಯಕರ್ಮಗಳಲ್ಲಿ ನಿರತರಾದರು. ಅವಿಶ್ರಾಂತವಾದ ಪ್ರವಾಸ, ಕಟ್ಟುನಿಟ್ಟಾದ ದೈನಂದಿನ ಕಾರ್ಯಗಳು ಮತ್ತು ತಣ್ಣೀರಿನ ಸ್ನಾನ ಮೊದಲಾದ ಕಾರಣಗಳಿಂದ ಸ್ವಾಮಿಗಳ ಆರೋಗ್ಯ ಮೊದಲಿನಂತಿರಲಿಲ್ಲ. ಶೀತದಿಂದ ಶ್ವಾಸನಾಳದ ಬಾಧೆ ಮತ್ತು ಮೈ ನೋವು ಅವರನ್ನು ಪೀಡಿಸುತ್ತಿತ್ತು. ಅವರಗೆ ತಮ್ಮ ಅನಂತರ ಸಂಸ್ಥಾನದ ಗೌರವ ರಕ್ಷಸಿ ಕಾಪಾಡಬಲ್ಲ ಉತ್ತರಾಧಿಕಾರಿಯನ್ನು ಆರಿಸಿಕೊಳ್ಳುವ ಇಚ್ಛೆ ಉಂಟಾಗಿತ್ತು.

ಉತ್ತರಾಧಿಕಾರಿ

ಶೃಂಗೇರಿಯ ಸಾತ್ವಿಕರೂ, ಧರ್ಮನಿಷ್ಠರೂ, ಮಠದ ಪಂಡಿತರೂ ಆಗಿದ್ದವರ ಮಗನೊಬ್ಬನ ಬಗ್ಗೆ ಸ್ವಾಮಿಗಳಿಗೆ ಮೊದಲಿನಿಂದಲೂ ಕಣ್ಣಿತ್ತು. ಆ ಬಾಲಕನ ಹೆಸರೂ ನರಸಿಂಹನೇ. ಅವನ ಓದು, ಚಟುವಟಿಕೆಗಳ ಮೇಲೆ ಸ್ವಾಮಿಗಳು ಗಮನವಿಟ್ಟಿದ್ದರು. ಮಠದ ನೆರವಿನಿಂದಲೇ ಆ ಬಾಲಕ ಸಂಸ್ಕೃತವನ್ನೂ, ತರ್ಕ ಮೀಮಾಂಸಾದಿ ಶಾಸ್ತ್ರಗಳನ್ನೂ ಕಲಿಯಲು ವ್ಯವಸ್ಥೆ ಮಾಡಿದ್ದರು. ಆತನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆತನನ್ನು ಬೆಂಗಳೂರಿನ ಶಂಕರ ಮಠಕ್ಕೆ ಕಳುಹಿಸಿದ್ದರು.

ಒಂದು ಮುಂಜಾನೆ ಸ್ನಾನ ಮಾಡಿ ಧ್ಯಾನಸಕ್ತರಾಗಿದ್ದಾಗ ಅಪಾರವಾದ ಕೆಮ್ಮು ಆರಂಭವಾಯಿತು. ಕೆಲಕಾಲಾನಂತರ ಅವರು ಬ್ರಹ್ಮನಲ್ಲಿ ಲೀನವಾಗಿ ಹೋದರು.

ಮುಂದೆ ಕೆಲವೇ ದಿನಗಳಲ್ಲಿ ನರಸಿಂಹಶಾಸ್ತ್ರಿ ಅವರಿಗೆ ಸಂನ್ಯಾಸವನ್ನಿತ್ತು ಪೀಠಾಧಿಕಾರ ವಹಿಸಲಾಯಿತು. ಅವರೇ ಗುರುಗಳಷ್ಟೇ ತಪಸ್ವಿಗಳೂ, ಯೋಗಿಗಳು ಎನಿಸಿದ ಶ್ರೀ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು.

ಕಡೆಯದಾಗಿ

ಆದಿಶಂಕರರ ಆದ್ಯ ಶಿಷ್ಯರಲ್ಲೊಬ್ಬರಾದ ಸುರೇಶ್ವರಾಚಾರ್ಯರಿಂದ ಆರಂಭವಾದ ಶೃಂಗೇರಿ ಶಾರದಾಪೀಠದ ಜಗದ್ಗುರುಗಳೊಬ್ಬೊಬ್ಬರೂ ಮಹಾನ್ ತಪಸ್ವಿಗಳು. ಈ ಮಹಾನುಭಾವರ ಸಾಲಿನಲ್ಲಿ ನರಸಿಂಹ ಭಾರತೀಗಳು ಒಬ್ಬರಾದರೂ ವಿಶಿಷ್ಟವಾದ ವ್ಯಕ್ತಿತ್ವದಿಂದ ಬೆಳಗಿದವರು.

ತಪಸ್ವಿಗಳಾಗಿ, ಯೋಗಸಾಧಕರಾಗಿ, ಧರ್ಮ ಪ್ರಚಾರಕರಾಗಿ ಅವರು ಎಲ್ಲ ಬಗೆಯ ಜನರ ಗೌರವ, ಭಕ್ತಿಗಳಿಗೆ ಪಾತ್ರರಾಗಿದ್ದರು. ದೀನ-ದಲಿತರ ಬಗ್ಗೆ ಅವರ ಕರುಣೆ ಅಪಾರವಾದುದು. ದುಃಖಾರ್ಥಿಗಳಾಗಿ ಬಂದವರನ್ನು ಸಾಂತ್ವಾನಗೊಳಿಸಿ ಎಲ್ಲ ರೀತಿಯಿಂದ ಅವರ ದುಃಖ ನಿವಾರಿಸುತ್ತಿದ್ದ ಮಹಾನುಭಾವರು. ಪವಾಡ ಸದೃಶವಾದ ಅವರ ಕೃಪೆಯಿಂದ ದೈಹಿಕ, ಮಾನಸಿಕ, ಬೌದ್ಧಿಕ ಸಮಾಧಾನ – ಸಂತೃಪ್ತಿಗಳನ್ನು ಪಡೆದವರು ಅನೇಕರು.

ಮೊದಲ ಬಾರಿಗೆ ಶಂಕರರ ಎಲ್ಲ ಗ್ರಂಥಗಳು ಅಭ್ಯಾಸಿಗಳಿಗೆ ಲಭ್ಯವಾಗುವಂತೆ ಮಾಡಿದ ಕೀರ್ತಿ ಅವರದು. ಕೇವಲ ಗ್ರಂಥಸ್ತವಾಗಿದ್ದ ಕಾಲಟಿಯನ್ನು ಶೋಧಿಸಿ ಭಾರತದ ಪವಿತ್ರ ಯಾತ್ರಾಸ್ಥಳವಾಗಿ ಮಾಡಿದ ಸಾಹಸಿ ಅವರು. ಶೃಂಗೇರಿಯ ‘ನರಸಿಂಹವನ’ ಅವರ ಹೆಸರನ್ನು ಶಾಶ್ವತವಾಗಿ ಉಳಿಸಿರುವ ಪ್ರಶಾಂತ ತಪೋಭೂಮಿಯಾಗಿದೆ.