ಕನ್ನಡ ರಂಗಭೂಮಿ ಕಂಡ ವಿಶಿಷ್ಟ ಕಲಾವಿದರು ಪಂಪಣ್ಣ ಕೋಗುಳಿ, ಸ್ತ್ರೀ ಹಾಗೂ ಪುರುಷ ಎರಡೂ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಪ್ರತಿಭಾವಂತರು. ನಾಟಕ ರಚನೆ, ನಿರ್ದೇಶನದಲ್ಲೂ ಛಾಪೊತ್ತಿದವರು.
ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗುಳಿ ಗ್ರಾಮದವರಾದ ಪಂಪಣ್ಣ ಅವರು ಓದಿದ್ದು ನಾಲ್ಕನೇ ತರಗತಿವರೆಗೆ ಮಾತ್ರ ಬೇಸಾಯವೇ ಬದುಕು, ಬಣ್ಣ ಹಚ್ಚಲು ಅಣ್ಣ ಉಮಾಪತಿಯೇ ಪ್ರೇರಣೆ. ಹದಿನಾಲ್ಕನೇ ವಯಸ್ಸಿನಲ್ಲಿ ಹುಟ್ಟೂರಿನಲ್ಲಿ ಸ್ತ್ರೀ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ರಂಗಭೂಮಿಗೆ ಅಡಿ, ಸಾಮಾಜಿಕ, ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳಲ್ಲಿ ಸ್ತ್ರೀ ಪಾತ್ರಗಳ ನಿರ್ವಹಣೆ. ಆನಂತರ ಪುರುಷ ಪಾತ್ರಗಳಲ್ಲೂ ಜನಪ್ರಿಯ. ಅಂಗುಲಿಮಾಲಾ ನಾಟಕದ ಅಂಗುಲಿಮಾಲಾ ಪಾತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯ ಹಿರಿಮೆ. ರಕ್ತರಾತ್ರಿ ನಾಟಕದ ಎಲ್ಲಾ ಪಾತ್ರಗಳಲ್ಲಿ ನಟಿಸಿದ ಖುಷಿ. ನಿರ್ದೇಶನದಲ್ಲೂ ಗುರುತು. ಮೂರು ನಾಟಕ, ಒಂದು ಕವನಸಂಕಲನ ಹೊರತಂದಿರುವ ಸೃಜನಶೀಲರು. ಆಕಾಶವಾಣಿಯಲ್ಲೂ ಧ್ವನಿಮುದ್ರಿತ ನಾಟಕಗಳ ಪ್ರಸಾರ, ನಾಟಕ ಅಕಾಡೆಮಿಯ ಗೌರವಪ್ರಶಸ್ತಿ ಸೇರಿ ಹಲವು ಗೌರವಗಳಿಂದ ಸಂಪನ್ನರು.
Categories
ಶ್ರೀ ಪಂಪಣ್ಣ ಕೋಗುಳಿ
