Categories
ಪತ್ರಿಕೋದ್ಯಮ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪದ್ಮರಾಜ್ ದಂಡಾವತಿ

ತೀಕ್ಷ್ಣ ರಾಜಕೀಯ ವಿಶ್ಲೇಷಕರಾಗಿ ಮಾತ್ರವಲ್ಲದೇ ಸದಭಿರುಚಿಯ ಸಾಹಿತ್ಯಕ ವರದಿಗಳಿಗೆ ಹೆಸರಾದ ಪತ್ರಕರ್ತರು ಪದ್ಮರಾಜ ದಂಡಾವತಿ ಅವರು.
ವಿಜಾಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಜನನ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅವರು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಪತ್ರಿಕೋದ್ಯಮ ಪ್ರವೇಶಿಸಿದ್ದು ಆಕಸ್ಮಿಕ. ‘ಶೂದ್ರ’ ಸಾಹಿತ್ಯಕ ಪತ್ರಿಕೆಯಲ್ಲಿ ನಾಲ್ಕು ವರ್ಷ ಉಪ ಸಂಪಾದಕರಾಗಿ ಕೆಲಸ. ೧೯೮೨ರಲ್ಲಿ ಪ್ರತಿಷ್ಠಿತ ದೈನಿಕ ‘ಪ್ರಜಾವಾಣಿ’ಗೆ ಸೇರ್ಪಡೆ. ೨೭ ವರ್ಷಗಳ ಕಾಲ ಈ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ. ಈಗ ಪತ್ರಿಕೆಯ ಸಂಪಾದಕೀಯ ವಿಭಾಗದ ಮುಖ್ಯಸ್ಥರಾದ ಸಹ-ಸಂಪಾದಕ ಹುದ್ದೆಗೆ ಬಡ್ತಿ. ಅವರು ಉತ್ತಮ ವಾಗಿಗಳೂ ಹೌದು.
ಹೇಳಬೇಕಾಗಿರುವ ವಿಷಯವನ್ನು ಸರಳವಾಗಿ, ಸಾಮಾನ್ಯ ಓದುಗನು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ನಿರೂಪಿಸಬಲ್ಲ ಬರವಣಿಗೆಯ ಶೈಲಿ ಅವರದು.
ಅತ್ಯುತ್ತಮ ಸುದ್ದಿ ವಿಶ್ಲೇಷಣೆಗಾಗಿ ಎರಡು ಬಾರಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಖಾದ್ರಿ ಶಾಮಣ್ಣ ಪ್ರಶಸ್ತಿ ಪುರಸ್ಕೃತರು.
ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ವರದಿಗಾರರ ಕೂಟದ ಪದಾಧಿಕಾರಿಯಾಗಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿಯೂ ಶ್ರೀಯುತರು ಕಾರ್ಯನಿರ್ವಹಿಸಿರುವರು.
ಮಾಧ್ಯಮ ಅಕಾಡೆಮಿಗಾಗಿ ಅವರು ಬರೆದ ಕೃತಿಗಳು ‘ಪತ್ರಿಕಾ ಭಾಷೆ’ ಮತ್ತು ‘ರಿರ್ಪೋಟಿಂಗ್’, ಅವರು ಬರೆದ ‘ಅವಲೋಕನ’ ಕೃತಿ ಬೆಂಗಳೂರು ಪ್ರೆಸ್‌ಕ್ಲಬ್‌ನಿಂದ ಪ್ರಕಟ. ೨೦೦೬ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಅವರು ಬರೆದ ‘ಗೊಮ್ಮಟ’ ಕೃತಿಯನ್ನು ವಾರ್ತಾ ಇಲಾಖೆಯು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸಿದೆ.
ವೃತ್ತಿಯಲ್ಲಿ ನಿಷ್ಠೆ, ಶ್ರದ್ಧೆ ಮತ್ತು ನಿತ್ಯ ಜೀವನದಲ್ಲಿ ಪ್ರಾಮಾಣಿಕತೆಯ ಮೌಲ್ಯಗಳನ್ನು ರೂಢಿಸಿಕೊಂಡು ಕಿರಿಯರಿಗೆ ಮಾದರಿಯಾಗಿ ಬದುಕುತ್ತಿದ್ದಾರೆ ಶ್ರೀ ಪದ್ಮರಾಜ ದಂಡಾವತಿ.