Categories
ನೃತ್ಯ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಿ. ಕಮಲಾಕ್ಷ ಆಚಾರ್

ಕರ್ನಾಟಕದ ನೃತ್ಯ ಕಲಾಕ್ಷೇತ್ರದಲ್ಲಿ ನೃತ್ಯಪಟು, ಗುರು, ಸಂಘಟಕರಾಗಿ ಹೆಗ್ಗುರುತಿನ ಸಾಧನೆ ದಾಖಲಿಸಿದವರು ಪಿ.ಕಮಲಾಕ್ಷ ಆಚಾರ್, ಬಹುಕಲಾ ಆಸಕ್ತಿಯ ಬಹುಮುಖ ಪ್ರತಿಭೆ, ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಪಡ್ಡಿರೆಯಲ್ಲಿ ೧೯೪೭ರಲ್ಲಿ ಜನಿಸಿದ ಕಮಲಾಕ್ಷ ಆಚಾರ್ ವೃತ್ತಿಯಲ್ಲಿ ಶಿಕ್ಷಕರು, ಪ್ರವೃತ್ತಿಯಲ್ಲಿ ಬಹುಕಲಾವಿದರು. ಕುಲಕಸುಬು ಬಡಗಿ ಕೆಲಸ ಮಾಡುತ್ತಲೇ ಎಸ್‌ಎಸ್‌ಎಲ್‌ಸಿ ಪೂರೈಸಿದ ಕಮಲಾಕ್ಷ ಅವರು ಚಿತ್ರಕಲೆ, ಛಾಯಾಗ್ರಹಣದಲ್ಲೂ ದುಡಿದವರು. ಪ್ರಾಥಮಿಕ ಶಾಲಾಶಿಕ್ಷಕನಾಗಿರುವಾಗ ನೃತ್ಯಕಲೆಯ ಮೋಹಕ್ಕೊಳಗಾಗಿ ಹಲವು ಗುರುಗಳ ಗರಡಿಯಲ್ಲಿ ನೃತ್ಯಪಟುವಾಗಿ ರೂಪಗೊಂಡ ಹೆಗ್ಗಳಿಕೆ. ೧೯೭೮ರಲ್ಲಿ ನೃತ್ಯನಿಕೇತನ ಸಂಸ್ಥೆ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ನೃತ್ಯಶಿಕ್ಷಣ, ಅನೇಕ ಪ್ರತಿಭಾವಂತ ನೃತ್ಯಪಟುಗಳನ್ನು ಕ್ಷೇತ್ರಕ್ಕೆ ಕೊಟ್ಟ ಹಿರಿಮೆ, ಸಾವಿರಾರು ಕಲಾವಿದರನ್ನು ರೂಪಿಸಿದ ಗುರು. ಉತ್ತಮ ಶಿಕ್ಷಕನಾಗಿ ಗೌರವಿಸಲ್ಪಟ್ಟ ಸಂತೃಪ್ತಿ, ಬೆಳ್ತಂಗಡಿಯಲ್ಲಿ ದೇಶದ ಹೆಸರಾಂತ ನೃತ್ಯಗುರುಗಳ ಭರತನಾಟ್ಯ ಕಾರ್ಯಕ್ರಮವನ್ನು ಸಂಘಟಿಸಿ ಕಲಾರಸಧಾರೆ ಉಣಬಡಿಸಿದ ಕಮಲಾಕ್ಷ ಆಚಾರ್ ಸ್ವತಃ ನಡೆಸಿಕೊಟ್ಟ ಕಾರ್ಯಕ್ರಮಗಳು ಅಗಣಿತ. ಶಿಷ್ಯರನ್ನು ರಂಗಪ್ರವೇಶ ಮಾಡಿಸಿ ನೃತ್ಯಗಾರರಾಗಿಸುವಲ್ಲಿ ಸಾರ್ಥಕತೆ ಕಂಡ ಕಮಲಾಕ್ಷ ಆಚಾರ್ ಅವರು ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸಿಸಿರುವ ಬಹುಕಲಾಸಕ್ತರು, ನೃತ್ಯಕಲಾಸಂಸ್ಕಾರರತ್ನ, ನೃತ್ಯಸೌರಭ, ನೃತ್ಯನಿಧಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೆ ಸತ್ಪಾತ್ರರು.