ದೇಸೀ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ ಕಲಾವಿದ ಪುಟ್ಟಸ್ವಾಮಿ, ನಟನೆಯ ಜೊತೆಜೊತೆಗೆ ಗಾಯನದಲ್ಲೂ ಸೇವೆ ಸಲ್ಲಿಸಿರುವ ಸಾಧಕರು.
ರಾಮನಗರ ಜಿಲ್ಲೆಯ ಹಳ್ಳಿಗಾಡಿನ ಪ್ರತಿಭೆ ಪುಟ್ಟಸ್ವಾಮಿ, ಚನ್ನಪಟ್ಟಣ ತಾಲ್ಲೂಕಿನ ಮಳೂರು ಹುಟ್ಟೂರು. ಎಳವೆಯಿಂದಲೂ ರಂಗಭೂಮಿಯ ಸೆಳೆತಕ್ಕೆ ಒಳಗಾದವರು. ದೇಸೀ ರಂಗಭೂಮಿಯಲ್ಲಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚುತ್ತಲೇ ಅರಳಿದವರು. ದಶಕಗಳ ಕಾಲ ರಂಗಸೇವೆಗೈದವರು. ಶಾಲಾ ಕಾಲೇಜುಗಳು, ಸಂಘಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದವರು. ಶಾಲಾ ಮಕ್ಕಳಿಗೆ ನಗೆಹನಿಗಳು, ಶಿಶುಗೀತೆಗಳು, ದೇವರನಾಮಗಳನ್ನು ಹೇಳಕೊಟ್ಟು ತಮ್ಮಲ್ಲಿನ ಕಲೆಯನ್ನು ಹೊಸ ಪೀಳಿಗೆಗೆ ಹಂಚಿದವರು. ಇಳಿವಯಸ್ಸಿನಲ್ಲೂ ಅವರದ್ದು ಬತ್ತದ ಉತ್ಸಾಹ. ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಏರ್ಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನಗಳನ್ನು ಪಡೆದವರು. ಜಾನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವುದು ಪುಟ್ಟಸ್ವಾಮಿ ಅವರ ಪ್ರತಿಭೆಯ ಮತ್ತೊಂದು ಮಜಲು, ೮೫ರ ಇಳಿವಯಸ್ಸಿನಲ್ಲೂ ಸಕ್ರಿಯವಾಗಿರುವ ಅವರು ಅನೇಕ ಗೌರವಗಳಿಗೆ ಭಾಜನರು.
Categories