Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪ್ರಸನ್ನ

ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ರಂಗಭೂಮಿಯ ಪ್ರಯೋಗಶೀಲ ಹಾಗೂ ಪ್ರತಿಭಾವಂತ ನಿರ್ದೇಶಕರು ಶ್ರೀ ಪ್ರಸನ್ನ ಅವರು.
ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ೧೯೫೧ರಲ್ಲಿ ಜನನ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎಸ್ಸಿ ., ಪದವಿ. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಡಿಪ್ಲೊಮಾ ಪಡೆದಿದ್ದಾರೆ.
೧೯೭೫ರಲ್ಲಿ ಸಮುದಾಯ ಆರಂಭಿಸಿ, ನಾಟಕವನ್ನು ಜನತೆಯ ಬಳಿಗೆ ಕೊಂಡೊಯ್ದವರು. ತಾಯಿ, ಕದಡಿದ ನೀರು, ಗೆಲಿಲಿಯೋ, ದಂಗೆಯ ಮುಂಚಿನ ದಿನಗಳು, ಮ್ಯಾಕ್ ಬೆತ್ ನಾಟಕಗಳ ನಿರ್ದೇಶನದ ಮೂಲಕ ಗಂಭೀರ ರಂಗಾಸಕ್ತರ ಗಮನ ಸೆಳೆದವರು. ತಮಿಳುನಾಡು, ಕೇರಳ, ಬಿಹಾರ, ಮಧ್ಯಪ್ರದೇಶಗಳಲ್ಲಿ ನಾಟಕ ಶಿಬಿರಗಳನ್ನು ಆಯೋಜಿಸಿದ್ದಾರೆ.
ತದ್ರೂಪಿ, ಒಂದು ಲೋಕದ ಕಥೆ, ಹದ್ದು ಮೀರಿದ ಹಾದಿ, ಜಂಗಮದ ಬದುಕು, ಮಹಿಮಾಪುರ ನಾಟಕಗಳನ್ನು, ನೌಟಂಕಿ, ಸ್ವಯಂವರ ಮುಂತಾದ ಕಾದಂಬರಿಗಳನ್ನು ಹಾಗೂ ‘ನಾಟಕ:ರಂಗಕೃತಿ’ ಎಂಬ ಬಹುಚರ್ಚಿತ ಕೃತಿಗಳನ್ನು ರಚಿಸಿದ್ದಾರೆ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಪ್ರಸನ್ನ ವಿದೇಶಗಳನ್ನೂ ಸುತ್ತಿ ಬಂದಿದ್ದಾರೆ.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗಳ ಗೌರವಕ್ಕೆ ಭಾಜನರಾಗಿರುವ ಶ್ರೀ ಪ್ರಸನ್ನ ಅವರು ನಮ್ಮ ಸಂದರ್ಭದ ರಂಗಭೂಮಿಯ ಅನನ್ಯ ಪ್ರತಿಭೆ.