ಕನ್ನಡದ ಸಂವೇದನಾಶೀಲ ಕಥೆಗಾರ, ಚಿಂತಕ ಶ್ರೀ ಫಕೀರ ಮಹಮ್ಮದ್ ಕಟ್ಟಾಡಿ.
ದಕ್ಷಿಣ ಕನ್ನಡ ಜಿಲ್ಲೆಯ ಕಟಪಾಡಿಯಲ್ಲಿ ೧೯೪೮ರಲ್ಲಿ ಜನಿಸಿ ಅದೇ ಜಿಲ್ಲೆಯಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿರುವ ಶ್ರೀ ಫಕೀರ್ ಮಹಮ್ಮದ್ ಕಟ್ಟಾಡಿ ಅವರು ಈಗ ವೃತ್ತಿಯಲ್ಲಿ ಬ್ಯಾಂಕಿನಲ್ಲಿ ಅಧಿಕಾರಿಯಾದರೂ ಪ್ರವೃತ್ತಿಯಲ್ಲಿ ಮೂಲತಃ ಸೃಜನಶೀಲ ಲೇಖಕ.
ಯಾಂತ್ರಿಕ ಬದುಕನ್ನು ಹಸನಾದ ಸಾರ್ಥಕ ಜೀವನಕ್ಕೆ ತಿರುಗಿಸಲು ಸಾಹಿತ್ಯದ ಸಾಧನೆಗೆ ತೊಡಗಿದ ಲೇಖಕ. ತಮ್ಮ ಕಥೆ, ಕಾದಂಬರಿಗಳ ಮೂಲಕ ಮೂಕ ಮನಸುಗಳ ತಳಮಳವನ್ನು ಕಲಾತ್ಮಕವಾಗಿ ಹಿಡಿದುಕೊಟ್ಟ ಸಮರ್ಥ ಕಥೆಗಾರ, ಕಥೆ, ಕಾದಂಬರಿ, ನಾಟಕ, ಪ್ರಬಂಧ, ಪ್ರವಾಸ ಕಥನ ಹೀಗೆ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿ ಸೈ ಅನಿಸಿಕೊಂಡಿದ್ದಾರೆ.
ಗೋರಿ ಕಟ್ಟಿಕೊಂಡವರು, ನೋಂಬು ಇವರ ಎರಡು ಕಥಾಸಂಕಲನಗಳು; ಸರಕುಗಳು, ಕಚ್ಚಾದ, ನೆರೆ, ಮೂರು ಕಾದಂಬರಿಗಳು; ಕೇರಳದಲ್ಲಿ ಹದಿನೈದು ದಿನಗಳು ಪ್ರವಾಸಕಥನ ರಾಷ್ಟ್ರೀಯತೆ ಮತ್ತು ಮುಸ್ಲಿಮರು ಪ್ರಬಂಧ ಲೇಖನ; ದುಶ್ಯಾಸನ ರಾಜ್ಯ, ಕಾಗಕ್ಕ, ಆನೆ ಬಂತು ಆನೆ ನಾಟಕಗಳು ಮೊದಲಾದ ಕೃತಿಗಳು.
ಭಾರತೀಯ ಸ್ಟೇಟ್ ಬ್ಯಾಂಕಿನ ಕಾರ್ನಾಡ್ ಶಾಖೆಯಲ್ಲಿ ಅಧಿಕಾರಿಯಾಗಿ ಪ್ರಸಕ್ತ ಸೇವೆ ಸಲ್ಲಿಸುತ್ತಿರುವ ಶ್ರೀ ಫಕೀರ್ ಮಹಮ್ಮದ್ ಕಟ್ಟಾಡಿ ಅವರ ‘ನೋಂಬು’ ಕಥಾಸಂಕಲನಕ್ಕೆ ೧೯೯೧ರಲ್ಲಿ ರಾಷ್ಟ್ರೀಯ ಕಥಾ ಪುರಸ್ಕಾರ ದೊರಕಿದೆ.