Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಬಂಡೆಪ್ಪ ಗಣೇಶಪುರ

ಶ್ರೀಗಂಧದ ಮರದಿಂದ ಕಲಾಕೃತಿಗಳನ್ನು ನಿರ್ಮಿಸುವ, ಗ್ರಾಮೀಣ ಕುಶಲ ಕರ್ಮಿಗಳಿಗೆ ತರಬೇತಿ ನೀಡುವ, ರಫ್ತು ಉದ್ಯಮದಿಂದ ಭಾರತದ ಆರ್ಥಿಕ ವೃದ್ಧಿಗೆ ನೆರವಾಗುವ ಸಾರ್ಥಕ ಕಾಯಕವನ್ನು ಕೈಗೆತ್ತಿಕೊಂಡವರು ಶ್ರೀ ಬಂಡೆಪ್ಪ ಗಣೇಶಪುರ ಅವರು.

ಬೀದರ ಜಿಲ್ಲೆಯ ಗ್ರಾಮವೊಂದರಲ್ಲಿ ೧೯೬೨ರಲ್ಲಿ ಜನಿಸಿ, ಕಲೆಯಲ್ಲಿ ಬಿ.ಎ. ಪದವಿಯನ್ನು ಪಡೆದ ಶ್ರೀ ಬಂಡೆಪ್ಪ ಅವರು ರಚಿಸಿದ ಕಲಾಕೃತಿಗಳು ನಮ್ಮ ದೇಶದ ಕಲಾಪ್ರೇಮಿಗಳನ್ನಲ್ಲದೆ ಹೊರದೇಶದವರನ್ನೂ ಆಕರ್ಷಿಸಿವೆ. ಹೀಗಾಗಿ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲಾರಂಭಿಸಿದರು.

ಗ್ರಾಮೀಣ ಭಾಗದ ಪ್ರತಿಭಾವಂತರಿಗೆ ತರಬೇತಿ ನೀಡಿ ನೂರಾರು ಕುಶಲಕರ್ಮಿಗಳನ್ನು ತಯಾರು ಮಾಡಿದರು. ಗ್ರಾಮೀಣ ಪರಿಸರದಲ್ಲಿ ಸುಗಂಧದಿಂದ ಕಲಾಕೃತಿಗಳು ಆಕಾರ ಪಡೆದವು.

ಶ್ರೀ ಗಣೇಶಪುರ ಅವರ ಸಾಧನೆಗೆ ಅನೇಕ ಗೌರವ ಪುರಸ್ಕಾರಗಳು ಲಭಿಸಿವೆ. ರಾಜ್ಯ ಕೈಗಾರಿಕಾ ಮಾರುಕಟ್ಟೆ ಅಭಿವೃದ್ಧಿ ನಿಗಮದ ಪ್ರಶಸ್ತಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ‘ಜನ’ ಪ್ರಶಸ್ತಿ, ಜಿಲ್ಲಾ ಆಡಳಿತದಿಂದ ಉತ್ತಮ ಗ್ರಾಮೀಣ ಕರಕುಶಲ ಕರ್ಮಿ ಪ್ರಶಸ್ತಿ ಮುಂತಾದವು ಶ್ರೀಯುತರಿಗೆ ಸಂದ ಪ್ರಶಸ್ತಿ – ಪುರಸ್ಕಾರಗಳು.

ಶ್ರೀಗಂಧದ ಕೆತ್ತನೆಕಲೆಯಲ್ಲಿ ನಿಷ್ಣಾತರಾಗಿ, ಅನೇಕ ಕುಶಲಕರ್ಮಿಗಳಿಗೆ ಬಾಳದಾರಿಯನ್ನು ನಿರ್ಮಿಸಿ, ರಫ್ತು ಕಾರ್ಯದಿಂದ ಭಾರತ ದೇಶಕ್ಕೆ ಸೇವೆ ಸಲ್ಲಿಸಿ ಸುಗಂಧಮಯ ವ್ಯಕ್ತಿತ್ವದಿಂದ ಕಂಗೊಳಿಸುತ್ತಿರುವರು ಶ್ರೀ ಬಂಡೆಪ್ಪ ಗಣೇಶಪುರೆ ಅವರು.