Categories
ರಂಗಭೂಮಿ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಷೀರ್

ನಾಟಕಕಾರರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ, ನಟರಾಗಿ ೪೦ ವರ್ಷಗಳಿಂದ ಕಲಾಸೇವೆ ಮಾಡುತ್ತಿರುವ ಕನ್ನಡ ರಂಗಭೂಮಿಯ ಕ್ರಿಯಾಶೀಲ ಚೇತನ, ರಂಗಕರ್ಮಿ ಶ್ರೀ ಬಷೀರ್ ಅವರು.

ತಮ್ಮ ಎಳೆಯ ವಯಸ್ಸಿನಲ್ಲಿಯೇ ರಂಗಭೂಮಿಯ ಕಡೆಗೆ ಒಲವನ್ನು ಬೆಳೆಸಿಕೊಂಡ ಶ್ರೀ ಬಷೀರ್ ಅವರು ೧೯೫೯ರಿಂದ ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ನಾಟಕ ರಚನೆ, ನಿರ್ದೆಶನ ಮತ್ತು ಅಭಿನಯ ಮೂರರಲ್ಲೂ ಸಾಧನೆ ಮಾಡಿ ಮಾಗಿದ ವ್ಯಕ್ತಿತ್ವ ಇವರದು. ಸಾಮಾಜಿಕ ವಸ್ತುಗಳಿಗಿಂತಲೂ ಇತಿಹಾಸದ ಗಟ್ಟಿ ವಸ್ತುಗಳ ಕಡೆಗೆ ಶ್ರೀಯುತರ ಆಸಕ್ತಿ, ಚಾರಿತ್ರಿಕ, ಪೌರಾಣಿಕ ವಸ್ತುಗಳ ೩೦ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. ಸನ್ನಿವೇಶದ ಚಿತ್ರಣವನ್ನು ದೇಶ, ಕಾಲ, ಭಾಷೆ ಹಾಗೂ ಇತಿಹಾಸಕ್ಕೆ ಹೊಂದುವಂತೆ, ಪರಿಣಾಮಕಾರಿ ಸಂಭಾಷಣೆಯೊಂದಿಗೆ ಬರೆಯುವ ಕಲೆ ಶ್ರೀ ಬಷೀರ್ ಅವರಿಗೆ ಸಿದ್ಧಿಸಿದೆ. ಪ್ರೇಕ್ಷಕನ ಹೃದಯತಟ್ಟುವ ಶೈಲಿಯಲ್ಲಿ ಮತ್ತು ಆಕರ್ಷಕ ಪಾತ್ರ ಸೃಷ್ಟಿಯಲ್ಲಿ ಶ್ರೀಯುತರ ಸೃಜನಶೀಲತೆ ಮೇಲುಗೈ ಸಾಧಿಸುತ್ತದೆ. ಸ್ವತಃ ಕಲಾವಿದರಾಗಿರುವ ಶ್ರೀ ಬಷೀರ್ ಅವರು ಪ್ರತಿ ಪಾತ್ರವನ್ನೂ ಅನುಭವಿಸಿ, ದೃಶ್ಯವನ್ನು ಆದ್ರ್ರವಾಗಿಸಿ, ಪಾತ್ರಗಳಿಗೆ ಜೀವ ತುಂಬುತ್ತಾರೆ. ನಾಟಕ ನಿರ್ದೇಶನದಲ್ಲೂ ‘ಸೈ’ ಎನ್ನಿಸಿಕೊಂಡಿದ್ದಾರೆ. ಕಿತ್ತೂರ ರಾಣಿ ಚೆನ್ನಮ್ಮ, ಟಿಪ್ಪುಸುಲ್ತಾನ್, ಸಂಗೊಳ್ಳಿ ರಾಯಣ್ಣ ಶಿವಶಕ್ತಿ, ರಕ್ತಾಂಜಲಿ, ಅಮೋಘವರ್ಷ ನೃಪತುಂಗ, ರಣಕಹಳೆ, ಭೂಕೈಲಾಸ, ಕಚದೇವಯಾನಿ, ಚಂದ್ರೋದಯ, ದತ್ತುಮಗು, ರತ್ನಹಾರ, ಕ್ರಾಂತಿಪಂಜು, ಈದ್‌ಮಿಲಾದ್, ಧರ್ಮಜ್ಯೋತಿ ಮುಂತಾದವು ಇವರ ಜನಪ್ರಿಯ ಕೃತಿಗಳು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಚೇತನ ಪ್ರಶಸ್ತಿ ಮೊದಲಾದ ಪುರಸ್ಕಾರಗಳು ಇವರಿಗೆ ಸಂದಿವೆ.

ಕನ್ನಡದ ಕ್ರಿಯಾಶೀಲ, ನಿಷ್ಠಾವಂತ, ಪ್ರತಿಭಾಪೂರ್ಣ ಪ್ರಮುಖ ನಾಟಕಕಾರರಲ್ಲಿ ಶ್ರೀ ಬಷೀರ್ ಅವರೂ ಒಬ್ಬರು ಎಂಬುದು ಹೆಮ್ಮೆಯ ವಿಷಯ.