Categories
ಜಾನಪದ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಸವರಾಜ ಅಲಗೂಡ

ಹೈದರಾಬಾದ್ ಕರ್ನಾಟಕ ಭಾಗದ ವಿಶಿಷ್ಟ ಪ್ರತಿಭೆ ಬಸವರಾಜ ಅಲಗೂಡ, ಶೋತೃಗಳ ಮನಗೆದ್ದ ಗೀಗೀ ಪದದ ಹಾಡುಗಾರರು. ದಶಕಗಳ ಕಾಲ ಕಲಾಸೇವೆಗೈದ ಕಲಾವಿದರು.
ಕಲಬುರಗಿ ಜಿಲ್ಲೆಯ ಕಲಬುರಗಿ ತಾಲ್ಲೂಕಿನ ಅಲಗೂಡದಲ್ಲಿ ೧೯೪೭ರ ಮೇ. ೪ರಂದು ಜನಿಸಿದ ಬಸವರಾಜ ಅಲಗೂಡ ಅವರು ಅನಕ್ಷರಸ್ಥರಾದರೂ ಕಲೆಯನ್ನೇ ಪಠ್ಯವಾಗಿಸಿಕೊಂಡವರು. ೨೦ನೇ ವಯಸ್ಸಿನಲ್ಲೇ ಕಲೆಗೆ ಮಾರು ಹೋಗಿ ಪ್ರಖ್ಯಾತ ಗೀಗೀ ಕಲಾವಿದರಾದ ಗುಂಡಪ್ಪ ಭದ್ರಪ್ಪ, ಶಿವಶರಣಪ್ಪ ಮತ್ತು ಹಜರತಸಾಬ ಅವರ ಮಾರ್ಗದರ್ಶನದಲ್ಲಿ ಗೀಗೀ ಪದ, ಲಾವಣಿಪದ, ಭಕ್ತಿಗೀತೆಗಳು, ದೇಶಭಕ್ತಿ ಗೀತೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದವರು. ಮೂರೂವರೆ ದಶಕಗಳ ಕಾಲ ಜನಪದ ಗಾಯನದ ಮೂಲಕ ಜನರಲ್ಲಿ ಮೂಢನಂಬಿಕೆ, ಜಾತೀಯತೆ, ಅಸಮಾನತೆಯ ಕುರಿತು ಜಾಗೃತಿ ಮೂಡಿಸಿದವರು. ಸರ್ಕಾರದ ವಿವಿಧ ಜನಪರ ಯೋಜನೆಗಳ ಪ್ರಚಾರದಲ್ಲಿ ತೊಡಗಿದವರು. ಕಲಬುರಗಿ ಜಿಲ್ಲೆ ಮಾತ್ರವಲ್ಲದೆ, ದೂರದ ಸೊಲ್ಲಾಪುರ, ಅಕ್ಕಲಕೋಟ, ನಾಗಪೂರಗಳಲ್ಲೂ ಕಲಾಪ್ರದರ್ಶನ ಮಾಡಿರುವ ಬಸವರಾಜ ಅಲಗೂಡ ಅವರ ಕಲಾಸೇವೆ ಸ್ಮರಿಸುವಂತಹುದು.