Categories
ಯಕ್ಷಗಾನ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಾಬುರಾವ್ ಕೋಬಾಳ

ಜಾನಪದ ಸಂಗೀತವನ್ನು ಮನೆಮನೆಗೆ ಬಿತ್ತರಿಸುವ ಸಾರ್ಥಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗ್ರಾಮೀಣ ಪ್ರತಿಭೆ ಶ್ರೀ ಬಾಬುರಾವ್ ಕೊಬಾಳ ಅವರು.
ಅತ್ಯಂತ ಹಿಂದುಳಿದ ಜನಾಂಗದಲ್ಲಿ ೨೬.೮.೧೯೬೮ರಂದು ಜನಿಸಿದ ಶ್ರೀ ಬಾಬುರಾವ್ ಅವರು ಗುಲ್ಬರ್ಗಾ ಜಿಲ್ಲೆಯವರು. ಎಸ್.ಎಸ್.ಎಲ್.ಸಿ.ಯವರೆಗೆ ವಿದ್ಯಾಭ್ಯಾಸ ಮಾಡಿರುವ ಶ್ರೀಯುತರು ಕನ್ನಡದ ಜೊತೆಗೆ ಹಿಂದಿ ಭಾಷೆಯ ಜ್ಞಾನವನ್ನೂ ಸಂಪಾದಿಸಿದ್ದಾರೆ.
ಶ್ರೀ ಕೋಬಾಳ ಅವರು ಬಾಲ್ಯದಿಂದಲೇ ಜಾನಪದ ಹಾಡುಗಳನ್ನು ಹಾಡುವ ಅಭ್ಯಾಸ ಮಾಡಿಕೊಂಡಿರುವುದೇ ಅಲ್ಲದೇ ಹಾರ್ಮೋನಿಯಂ ವಾದನದಲ್ಲೂ ಪರಿಣತಿ ಪಡೆದು ಸಾಥಿ ನೀಡಿದ್ದಾರೆ. ಗುಲ್ಬರ್ಗಾ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಬಹುತೇಕ ಎಲ್ಲ ರೀತಿಯ ಜಾನಪದ ಹಾಡುಗಳನ್ನು ಅದರ ಮೂಲ ಶೈಲಿಯಲ್ಲಿಯೇ ಹಾಡುವ ಶ್ರೀ ಬಾಬುರಾವ್ ಅವರು ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ, ಗ್ರಾಮದಲ್ಲಿ ತಮ್ಮ ಹಾಡುಗಾರಿಕೆಯ ಕಾಠ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.
ಪತಿಭಕ್ತಿ, ಬಂಜೆತೊಟ್ಟಿಲು, ವಂಶದೀಪ, ಮನ ಒಂದು ಮನೆ ಎರಡು ಹಾಗೂ ಕುಟುಂಬ ಕಲ್ಯಾಣ ಪ್ರಚಾರಾರ್ಥ ನಾಟಕ ಯಾರು ಹೊಣೆ, ಗೌಡರ ಗದ್ದಲ ನಾಟಕಗಳಿಗೆ ವಾದ್ಯ ಸಂಗೀತ ನೀಡಿದ್ದಾರೆ.
ಜಿಲ್ಲೆಯ ಜಾನಪದ ಸಂಸ್ಕೃತಿಯ ವಾಹಕ ಎಂದೇ ಜನ ಇವರನ್ನು ಗುರುತಿಸುತ್ತಾರೆ. ಯಾವ ಫಲಾಪೇಕ್ಷೆ ಇಲ್ಲದೇ ಊರೂರು ತಿರುಗುವ ಇವರನ್ನು ಜನ ಪ್ರೀತಿಯಿಂದ ಬರಮಾಡಿಕೊಂಡು ಕೈಲಾದ ಪ್ರೋತ್ಸಾಹ ನೀಡುತ್ತಿದ್ದಾರೆ.
ಗುಲ್ಬರ್ಗಾದ ಸರ್ವಜ್ಞ ಸಂಗೀತ ಕಲಾವೃಂದದ ಸಂಸ್ಥಾಪಕ ಪ್ರಧಾನ ಕಾವ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು ಜಾನಪದ ಕಲಾವಿದರ ಜಿಲ್ಲಾ ಮಟ್ಟದ ಸಮಾವೇಶವನ್ನು ನಡೆಸಿದ್ದಾರೆ. ಹೀಗೆ ಗ್ರಾಮೀಣ ಪ್ರತಿಭೆಯ ಹಳ್ಳಿಯ ಹಣತೆಯಾಗಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಶ್ರೀ ಬಾಬುರಾವ್ ಕೋಬಾಳ ಅವರು.