Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಬಿ ಕೆ ಶ್ರೀನಿವಾಸ ವರ್ಮಾ

ಪಾದರಸದಂತೆ ಕೈಬೆರಳುಗಳನ್ನು ಕ್ಯಾನ್‌ವಾಸ್ ಮೇಲೆ ಚಲಿಸುತ್ತಾ ಕುಂಚದಿಂದಲೂ, ದಾರದಿಂದಲೂ, ಉಗುರಿನಿಂದಲೂ ಕ್ಷಣ ಮಾತ್ರದಲ್ಲಿ ಸುಂದರ ಕಲಾಕೃತಿಯನ್ನು ಮೂಡಿಸುವ ಅದ್ಭುತ ಚಿತ್ರ ಕಲಾವಿದ ಶ್ರೀ ಬಿ ಕೆ ಶ್ರೀನಿವಾಸ ವರ್ಮಾ ಅವರು.

ಹುಟ್ಟು ಕಲಾವಿದರಾದ ಶ್ರೀ ಬಿ ಕೆ ಎಸ್ ವರ್ಮಾ ಅವರ ಕಲಾಸಕ್ತಿಗೆ ನೀರೆರೆದು ಪೋಷಿಸಿದವರು ಕಲಾವಿದೆ ತಾಯಿ ಜಯಲಕ್ಷಮ್ಮ ಅವರು. ಶಿಲ್ಪಿ ಎ.ಸಿ.ಹೆಚ್. ಆಚಾರ್ಯ ಅವರಿಂದ ಚಿತ್ರಕಲೆಗೆ ಸ್ಫೂರ್ತಿ, ಗುರುಕುಲ ಪದ್ಧತಿಯಲ್ಲಿ ಪಾರಂಪರಿಕ ವರ್ಣ ಚಿತ್ರಣ, ಕ್ಷೇ ಮಾಡಲಿಂಗ್ ಮತ್ತು ಶಿಲಾ ಕೆತ್ತನೆಗಳ ಬಗ್ಗೆ ತರಬೇತಿ ಪಡೆದರು.

ಆದ್ದಿ ಹಿಂದಿ ಚಲನಚಿತ್ರದ ಸಹಾಯಕ ಕಲಾ ನಿರ್ದೇಶಕರಾಗಿ ಕನ್ನಡ ಚಲನಚಿತ್ರಗಳಲ್ಲಿಯೂ ಕಲಾ ನಿರ್ದೆಶಕರಾಗಿ ಕಲಾ ಪ್ರೇಮಿಗಳ ಕಣ್ಮನಗಳನ್ನು ಸೆರೆಹಿಡಿದಿದ್ದಾರೆ. ತಮ್ಮ ಕಲಾಕೃತಿಗಳನ್ನು ಕುರಿತು ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಗಳನ್ನು ಮತ್ತು ರಾಷ್ಟ್ರದ ಹಲವೆಡೆ ತಮ್ಮ ಚಿತ್ರಕಲಾ ಪ್ರದರ್ಶನವನ್ನು ನಡೆಸಿದ್ದಾರೆ. ಪರಿಸರ ಸಂರಕ್ಷಣೆಯ ಬಗೆಗೆ ನೂರಾರು ಚಿತ್ರಗಳನ್ನು ರಚಿಸಿದ್ದಾರೆ. ವ್ಯಕ್ತಿಗಳ, ದೇವತೆಗಳ ಚಿತ್ರಗಳಲ್ಲಿ ಜೀವಂತಿಕೆ ಉಕ್ಕಿ ಬರುತ್ತಿರುವ ಕಣ್ಣುಗಳು ಶ್ರೀ ವರ್ಮಾ ಅವರ ಕಲೆಯ ವೈಶಿಷ್ಟ್ಯ.

ಶ್ರೀ ವರ್ಮಾ ಅವರ ಚಿತ್ರಕಲಾ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಲಲಿತಕಲಾ ಅಕಾಡೆಮಿ ೧೯೮೬ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ. ೧೯೮೮ರ ಮೈಸೂರು ದಸರಾ ಪ್ರದರ್ಶನದ ಅತ್ಯುತ್ತಮ ಕಲಾವಿದ ಪ್ರಶಸ್ತಿ, ಅರಣ್ಯ ಇಲಾಖೆಯ ಪ್ರಶಸ್ತಿ ಕೆಂಪೇಗೌಡ ಪ್ರಶಸ್ತಿ ಹಾಗೂ ಆರ್ಯಭಟ ಪ್ರಶಸ್ತಿ ಮೊದಲಾದವು ಇವರಿಗೆ ಸಂದಿವೆ. ಕಾವ್ಯಚಿತ್ರ ಜುಗಲಬಂದಿ, ಕಾವ್ಯಚಿತ್ರ ಗೀತನೃತ್ಯ, ೨೪ ಗಂಟೆಗಳ ನಿರಂತರ ಕಾವ್ಯಚಿತ್ರ, ಚಿತ್ರ ಅವಧಾನ, ಕಾವ್ಯಚಿತ್ರ, ಯಕ್ಷನೃತ್ಯ ಇವುಗಳು ಅವರು ನೀಡಿದ ಪ್ರಮುಖ ಪ್ರದರ್ಶನಗಳು.

ಚಿತ್ರಕಲೆಯನ್ನೇ ಬದುಕನ್ನಾಗಿಸಿಕೊಂಡು, ಅನೇಕ ನವೀನ ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡ ಪ್ರತಿಭಾಸಂಪನ್ನ ಕಲಾವಿದ ಶ್ರೀ ಬಿ ಕೆ ಶ್ರೀನಿವಾಸ ವರ್ಮಾ ಅವರು.