Categories
ಪತ್ರಿಕೋದ್ಯಮ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ ವಿ ವೈಕುಂಠರಾಜು

ಶ್ರೀ ಬಿ ವಿ ವೈಕುಂಠರಾಜು ಪತ್ರಿಕೋದ್ಯಮ ಹಾಗೂ ಸಮಕಾಲೀನ ಕನ್ನಡ ರಂಗಭೂಮಿಗೆ ಪರಿಣಾಮಕಾರಿ ಸ್ಪಂದನ ನೀಡಿದ ಪ್ರಮುಖರಲ್ಲಿ ಒಬ್ಬರು.

೧೯೩೭ರಲ್ಲಿ ಚಿತ್ರದುರ್ಗ ಸಮೀಪದ ಗುಡ್ಡದರಂಗವ್ವನಹಳ್ಳಿಯಲ್ಲಿ ಜನಿಸಿದ ಶ್ರೀಯುತರು ಚಿಕ್ಕಂದಿನಿಂದಲೂ ಚಕಮಕಿಯ ಮಾತು, ವಾದ ಪ್ರತಿವಾದ, ಚರ್ಚೆಗಳಲ್ಲಿ ಕ್ರಿಯಾಶೀಲತೆಯನ್ನು ಬೆಳೆಸಿಕೊಂಡವರು.

ಹತ್ತಾರು ವರ್ಷಗಳಿಂದ ನಾಡಿನ ಸಾಂಸ್ಕೃತಿಕ ವಲಯ, ರಾಜಕೀಯ ವಲಯಗಳಲ್ಲಿನ ಆಗುಹೋಗುಗಳನ್ನು, ಏರುಪೇರುಗಳನ್ನು ಅತ್ಯಂತ ಸರಳವಾಗಿ, ಶ್ರೀಸಾಮಾನ್ಯನಿಗೂ ಮನಮುಟ್ಟುವಂತೆ ವಾರಪತ್ರಿಕೆಯ ಸಂಪಾದಕರ ಡೈರಿಯಲ್ಲಿ ಹೇಳುತ್ತಾ ಬಂದಿರುವ ವೈಕುಂಠರಾಜು ನಾಲ್ಕು ಕಾದಂಬರಿ, ಮೂರು ನಾಟಕಗಳು, ಪ್ರಬಂಧ, ವಿಮರ್ಶೆ ಹಾಗೂ ವ್ಯಕ್ತಿಚಿತ್ರಗಳನ್ನು ಬರೆದು ಹೆಸರುವಾಸಿಯಾದವರು. ಇವರ ‘ಸಂದರ್ಭ’ ನಾಟಕ ಕನಡದ ಕೆಲವೇ ಉತಮ ಉತ್ತಮ ನಾಟಕಗಳಲ್ಲೊಂದು. ಇವರ ‘ಉದ್ಭವ’

ಕೃತಿ ನಾಟಕವಾಗಿ ಇವರಿಗೆ ಅಪಾರ ಮನ್ನಣೆ ತಂದುಕೊಟ್ಟಿತು.

ಪ್ರಜಾವಾಣಿಯ ಪುರವಣಿಯನ್ನು ಸಾಂಸ್ಕೃತಿಕ ದಾಖಲೆಯಾಗುವಂತೆ ರೂಪಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ರಂಗಭೂಮಿ, ಸಿನಿಮಾ, ಕಥೆ, ಕಾವ್ಯ – ಹೀಗೆ ಸಾಂಸ್ಕೃತಿಕ ಚಟುವಟಿಕೆಗಳ ಆಸಕ್ತಮನಸ್ಸುಗಳಿಗೆ ಇಂಬು ನೀಡಿ ಭಾನುವಾರದ ಪುರವಣಿಯನ್ನು ಕಾದು ಓದುವಂತೆ ಮಾಡಿದ ಶ್ರೇಯಸ್ಸು ಇವರದು.

೧೯೬೪ರಿಂದ ೧೯೮೩ರ ವರೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ ತೊಡಗಿ ಕನ್ನಡಿಗರ ಮನೆಮಾತಾಗಿದ್ದ ವೈಕುಂಠರಾಜು ೧೯೮೪ರಲ್ಲಿ ತಮ್ಮದೇ ವಾರಪತ್ರಿಕೆ ಪ್ರಾರಂಭಿಸಿದರು. ಇವರ ನೇರ ನಿಷ್ಠುರ ಸಂಪಾದಕೀಯ ಸಮಾಜದ ಅಂಕುಡೊಂಕುಗಳಿಗೆ ನೀಡಿದ ಚಿಕಿತ್ಸೆ ಎಂದೇ ಹೇಳಬೇಕು. ರಾಜ್ಯದ ವೃತ್ತಿನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ೧೯೮೭ರಿಂದ ೧೯೮೯ರ ವರೆಗೆ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಇವರು ನೀಡಿರುವ ಕೊಡುಗೆ ಗಣನೀಯವಾದುದು.