Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀ ಭಾಸ್ಕರರಾವ್

ಚಿತ್ರಕಲಾ ಕ್ಷೇತ್ರದಲ್ಲಿ ಅಪಾರವಾದ ಪ್ರಸಿದ್ಧಿಯನ್ನು ಪಡೆದಿರುವ ಶ್ರೀ ಯು. ಭಾಸ್ಕರರಾವ್ ಅವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ.
೧೯೭೧ ಹಾಗೂ ೧೯೯೦ರಲ್ಲಿ ಬೆಂಗಳೂರು, ೧೯೯೪ರಲ್ಲಿ ಚೆನ್ನೈ ಹಾಗೂ ಇನ್ನಿತರ ಹಲವಾರು ಸ್ಥಳಗಳಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಿರುವ ಶ್ರೀ ಭಾಸ್ಕರರಾವ್ ಅವರು ಬೆಂಗಳೂರು ಮತ್ತು ಮುಂಬೈಗಳಲ್ಲಿ ಏಳಕ್ಕೂ ಹೆಚ್ಚು ಸಮೂಹ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ. ಇದಲ್ಲದೆ ಹತ್ತು ಹಲವು ಪ್ರದರ್ಶನಗಳ ಮೂಲಕ ಚಿತ್ರಕಲಾಸಕ್ತರ ಗಮನ ಸೆಳೆದಿರುವ ಶ್ರೀ ಯು. ಭಾಸ್ಕರರಾವ್ ಅವರು ಬೆಂಗಳೂರಿನ ದೊಡ್ಡ ಗಣೇಶ ದೇವಾಲಯ, ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್, ಮಂಜುನಾಥಸ್ವಾಮಿ ಚೌಲ್ಟಿ, ಸೇಂಟ್ ಮಾರ್ಕ್ಸ್ ಹೋಟೆಲ್ಗಳಲ್ಲಿನ ಭಿತ್ತಿಚಿತ್ರಗಳ ಮೂಲಕ ತಮ್ಮ ಚಿತ್ರಕಲಾ ಪ್ರತಿಭೆಯನ್ನು ಜನರ ಬಳಿಗೂ ಕೊಂಡೊಯ್ದವರು.
ಶ್ರೀಯುತರು ಕರ್ನಾಟಕ ಕಲಾ ಮೇಳದಲ್ಲಿ ೧೯೮೦ರಿಂದ ೯೩ರ ವರೆಗೂ ಆರು ಬಾರಿ ಭಾಗವಹಿಸಿರುವರಲ್ಲದೆ, ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಶಿಲ್ಪಕಲಾವಿದರ ಶಿಬಿರ, ಸಾರ್ಕ್ ಸಮ್ಮೇಳನ ಸಂದರ್ಭದ ಚಿತ್ರಕಲಾ ಪರಿಷತ್ತು ಸಂಘಟಿಸಿದ ರಾಷ್ಟ್ರೀಯ ಕಲಾವಿದರ ಶಿಬಿರದಂತಹ ಅತ್ಯಂತ ಮಹತ್ವದ ಶಿಬಿರಗಳಲ್ಲಿ ಭಾಗವಹಿಸಿದ ಹೆಮ್ಮೆ ಇವರದು.
ಕರ್ನಾಟಕ ಲಲಿತಕಲಾ ಅಕಾಡೆಮಿ ಪುರಸ್ಕಾರ ಪಡೆದಿರುವ ಶ್ರೀ ಯು. ಭಾಸ್ಕರರಾವ್ ಅವರು ನಾಡು ಹೆಮ್ಮೆಪಡುವ ಚಿತ್ರಕಲಾವಿದರಾಗಿದ್ದಾರೆ.