. ಕಶ್ಯಪ / ಕಾಶ್ಯಪ

ಕಶ್ಯಪ, ಕಾಶ್ಯಪ ಎಂಬ ಎರಡೂ ಹೆಸರುಗಳ ಪ್ರಾಚೀನಾಚಾರ್ಯರು ಸಂಸ್ಕೃತವಾಙ್ಮಯದಲ್ಲಿ ಕಂಡುಬರುತಾರೆ. ವೈದೀಕಕಲ್ಪ, ವೈದ್ಯ, ಶಿಲ್ಪ, ಧರ್ಮಶಾಸ್ತ್ರ, ಜ್ಯೋತಿಷ, ಕಾವ್ಯಮೀಮಾಂಸೆ, ಅಲಂಕಾರ, ಛಂದಸ್ಸು, ಶಿಲ್ಪ, ವೇದಾಂತ, ವ್ಯಾಕರಣ, ಸ್ಮೃತಿ, ನಿಘಂಟು, ತಂತ್ರ, ಆಗಮ, ಶೈವಸಿದ್ಧಾಂತ, ಕೃಷಿ ಇತ್ಯಾದಿ ಹತ್ತು ಹಲವು ಶಾಸ್ತ್ರಗಳ ಪ್ರವರ್ತಕರೆಂದು ಅಥವಾ ಪ್ರಾಮಾಣಿಕರೆಂದು ಅವರ ಗ್ರಂಥಗಳು ಪ್ರಕಟಿತವಾಗಿ ಅಥವಾ ಹಸ್ತಪ್ರತಿಯಲ್ಲಿ ದೊರೆಯುತ್ತವೆ. ಚರಕಸಂಹಿತೆಯಲ್ಲಿ ಆಯುರ್ವೇದ ಪ್ರವರ್ತಕನೆಂದೂ ದಂಡಿಯ ಕಾವ್ಯಲಂಕಾರದ ಶ್ರುತಾನುಪಾಲಿನೀ, ಹೃದಯಂಗಮಾ ಎಂಬ ವ್ಯಾಖ್ಯಾನಗಳಲ್ಲಿ ದಂಡಿಗಿಂತ ಹಿಂದಿನ ಕಾವ್ಯಾಲಂಕಾರಚಾರ್ಯನೆಂದೂ ಉಲ್ಲೇಖಿಸಿದೆ. ಅವನ ಹೆಸರಿನ ಹಲವು ಸ್ತೋತ್ರಗಳು ಉಪಲಬ್ಧವಿವೆ. ಕಾಶ್ಯಪನೆಂಬ ಒಬ್ಬ ಭಿಕ್ಷುವಿನ ಪ್ರಾಚೀನೋಲ್ಲೇಖವೂ ದೊರೆಯುತ್ತದೆ. ಕಶ್ಯಪ, ಕಾಶ್ಯಪ ಎಂದು ಮೊದಲಾಗುವಕಲ್ಪ, ಪಟಲ, ಪರಿಚಿತ, ಪರಿವರ್ತ, ಗೀತ, ಜಾತಕ, ತಂತ್ರ, ಸಂಹಿತಾ, ಧರ್ಮ, ಜ್ಯೋತಿಷ, ವೈದ್ಯ, ವಿಷಚಿಕಿತ್ಸೆ, ವೈಖಾನಸಾಗಮ, ಪಾಂಚರಾತ್ರಾಗಮ, ಮಂತ್ರ, ತಂತ್ರ, ಶಿಲ್ಪ, ವೇದಾಂತ ಇತ್ಯಾದಿ ಶಾಸ್ತ್ರಗಳು, ಸೂತ್ರ, ಸ್ಮೃತಿ ಮುಂತಾದ ಅನೇಕ ಗ್ರಂಥಗಳು ಅಚ್ಚಿನಲ್ಲಿ ಅಥವಾ ಹಸ್ತಪ್ರತಿಯಲ್ಲಿ ಉಳಿದುಕೊಂಡಿವೆ. ಈ ಕ(ಕಾ)ಶ್ಯಪರೆಲ್ಲರೂ ಬಹುಶಃ ಬೇರೆ ಬೇರೆಯವರು, ಬೇರೆ ಬೇರೆ ಕಾಲದವರು.

ಸಂಗೀತಶಾಸ್ತ್ರದಲ್ಲಿ ಅವನು ವಿಶೇಷವಾಗಿ ಗೌರವಿತನಾದ ಪ್ರಾಚೀನಚಾರ್ಯ; ಭರತನಂತೆಯೇ ಮುನಿಯೆಂಬ ಪೂಜ್ಯ ಅಭಿದಾನವು ಇವನಿಗಿದೆ. ಇಬ್ಬರೂ ಸಮಕಾಲೀನರೆಂಬ ಒಂದು ಅಭಿಪ್ರಾಯವೂ ಇದೆ. ಬೃಹತ್-ದೇಶೀಯಂತೆ ಬೃಹತ್‌ ಕಾಶ್ಯಪನೆಂಬ ಆಕರವನ್ನು ನಾನ್ಯದೇವನು ಉದ್ಧರಿಸಿಕೊಳ್ಳುವುದರಿಂದ ಸಣ್ಣದೊಂದು (ಲಘುಕಾಶ್ಯಪ?), ದೊಡ್ದದೊಂದು (ಬೃಹತ್‌ಕಾಶ್ಯಪ) ಎಂಬ ಎರಡು ಗ್ರಂಥಗಳಿದ್ದುದು ಸಂಭಾವ್ಯವಾಗಿದೆ. ಎರಡೂ ಈಗ ದೊರೆಯುವುದಿಲ್ಲ. ಕಶ್ಯಪನನ್ನು ನಾರದೀಯಶಿಕ್ಷೆ, ನಾರದೀಯ ಸಂಗೀತಮಕರಂದ, ನಾನ್ಯದೇವ, ಅಭಿನವಗುಪ್ತ, ಶಾರ್ಙ್ಗದೇವ, ಭವನಾನಂದ (ವಿಶ್ವಪ್ರದೀಪ) ಮುಂತಾದವರು ಸ್ಮರಿಸುತ್ತಾರೆ ಅಥವಾ ಉದ್ಧರಿಸುತ್ತಾರೆ. ಇವುಗಳಲ್ಲಿ ಬೃಹತ್ ಪ್ರಮಾಣದ ಉದ್ಧೃತಿಗಳೆಂದರೆ ನಾನ್ಯದೇವನದು (೭೫ಸಲ ರಾಗಲಕ್ಷಣದಲ್ಲಿ, ಎರಡು ಸಲ ಪ್ರಬಂಧಲಕ್ಷಣದಲ್ಲಿ) ಮತ್ತು ಅಭಿನವಗುಪ್ತನದು (ದಶರೂಪಕಗಳಲ್ಲಿ ಬರುವವ ವಿವಿಧ ರಸಭಾವಗಳ ಪ್ರಸಕ್ತಿಯಲ್ಲಿ ಪ್ರಯೋಗಕ್ಕೆಂದು ೧೬೯ ರಾಗಗಳು). ಮತಂಗನು ಈ ಆಚಾರ್ಯನನ್ನು ಗೀತಿ, ಗ್ರಾಮರಾಗ, ಭಾಷಾರಾಗಲಕ್ಷಣಗಳಿಗಾಗಿ ಹನ್ನೊಂದುಬಾರಿ ಉಲ್ಲೇಖಿಸಿದ್ದಾನೆ. (ರಾಗಲಕ್ಷಣ ಪ್ರಸಕ್ತಿಯಲ್ಲಿ ಮುನಿಯೆಂದು ಅವನು ಕರೆದಿರುವುದು ಕಾಶ್ಯಪನನ್ನೇ ಎಂದು ಕಾಣುತ್ತದೆ.) ಮಥುರಾದ ಗೋವರ್ಧನ ಶಾಸ್ತ್ರಿಯವರಲ್ಲಿ ಹನ್ನೆರಡು ಪುಟಗಳ ಕಾಶ್ಯಪ ಸಂಹಿತಾ ಎಂಬ ಸಂಗೀತ ಶಾಸ್ತ್ರಗ್ರಂಥದ ಖಂಡವೊಂದು, ಇದ್ದುದಾಗಿ ತಿಳಿದುಬರುತ್ತದೆ. ಈಗ ಅದು ನಷ್ಟವಾಗಿದೆ.

.ಕೋಹಲ

ಭರತಮುನಿಯು ಕೋಹಲನನ್ನು ಭರತಪುತ್ರರಲ್ಲಿ ಒಬ್ಬನಾಗಿ ಎಣಿಸಿಕೊಂಡು ಅವನು ನಾಟ್ಯಶಾಸ್ತ್ರದ ಉಳಿದಭಾಗ (=ಉತ್ತರತಂತ್ರ)ವನ್ನು ಬರೆಯುವ ಆಶ್ವಾಸನೆಯನ್ನು ನೀಡುತ್ತಾನೆ. ಕೋಹಲನು ಪ್ರಾಕೃತಭಾಷಾಶಾಸ್ತ್ರಗ್ರಂಥವನ್ನು ಬರೆದಿದ್ದನೆಂದು ಮಾರ್ಕಂಡೇಯನು ಹೇಳುತ್ತಾನೆ. ಆದರೆ ಕೋಹಲನ ಪ್ರಸಿದ್ಧಿಯಿರುವುದು ಮುಖ್ಯವಾಗಿ ಅವನು ನಾಟ್ಯ, ನೃತ್ತ, ಅಭಿನಯ, ಸಂಗೀತ, ತಾಲ ಮಂತಾದ ಜ್ಞಾತಿಶಾಸ್ತ್ರಗಳಲ್ಲಿ ಪ್ರಾಮಾಣಿಕನೆಂದು. ದಾಮೋದರಗುಪ್ತ (ಕುಟ್ಟಿನೀಮತಂ), ಅಭಿನವಗುಪ್ತ, ರಾಜಶೇಖರ, ಶಾರ್ಙ್ಗದೇವ, ಶಾರದಾತನಯ, ಶಿಂಗಭೂಪಾಲ ಮುಂತಾದವರು ಅವನನ್ನು ಪೂರ್ವಾಚಾರ್ಯನೆಂದು ಗೌರವಿಸಿ ಉಲ್ಲೇಖಿಸುತ್ತಾರೆ ಅಥವಾ ಉದ್ಧರಿಸಿಕೊಳ್ಳುತ್ತಾರೆ. ತೋಟಕ, ಸಟ್ಪಕ, ರಾಸಕ ಮುಂತಾದ ಉಪರೂಪಕಗಳನ್ನು ಮೊದಲು ಹೇಳಿದ್ದು ಅವನೇ. ರಸ, ಭಾವಗಳ ಅಭಿನಯದಲ್ಲಿ ಹನ್ನೊಂದು ಅಂಗಗಳಿರುತ್ತವೆಂಬ ಅವನ ಮತವನ್ನು ಔಭಟರು ಉದ್ಧರಿಸಿಕೊಳ್ಳುತ್ತಾರೆ. ಅಭಿನವಗುಪ್ತನು ಕೋಹಲನನ್ನು ನೃತ್ತಾಚಾರ್ಯನೆಂದು ಉಲ್ಲೇಖಿಸಿ ನಾಟ್ಯ, ಸುಭದ್ರವೆಂಬ ಧ್ರುವತಾಲ, ರೌದ್ರರಸದ ಅಭಿನಯದಲ್ಲಿ ನರ್ತನಕ ಮತ್ತು ಉತ್ಫುಲಗಳೆಂಬ ಚಲನವಿಶೇಷಗಳು, ಜಂಭಟಿಕಾ ಎಂಬ ಲಯವಿಶೇಷ, ಖಂಜಕ, ಹೇಲಾ, ವಿಲಂಬಿತ ಎಂಬ ನಾಟ್ಯಭೇದಗಳು, ಅಂಕವೆಂಬ ರೂಪಕದ ತ್ರೈವಿಧ್ಯ, ಅರ್ಥೋಪಕ್ಷೇಪಗಳು, ವಿಷ್ಕಂಭಕ, ಶೃಂಗಾರಹಾಸ್ಯೋಪಯೋಗಿ ನೃತ್ತಕರಣಗಳ ವಿಷಯದಲ್ಲಿ ಭರತನಿಂದ ಭಿನ್ನಮತ, ವೀಥೀ, ದ್ವಿಪದೀ, ಸಾಮಾನ್ಯಾಭಿನಯ, ಚಿತ್ರಾಭಿನಯ ಮುಂತಾದ ವಿಷಯಗಳಲ್ಲಿ ಉದ್ಧರಿಸಿಕೊಳ್ಳುತ್ತಾನೆ. ಕಲ್ಲಿನಾಥನು ಶಾರ್ದೂಲ (ಪ್ರಶ್ನೆ)-ಕೋಹಲ(ಉತ್ತರ) ಸಂವಾದರೂಪದ ಸಂಗೀತಮೇರುವೆಂಬ ಬೃಹತ್ತಾದ ನೃತ್ತಶಾಸ್ತ್ರಗ್ರಂಥದ ಎರಡನೆಯ ಆಹ್ನಿಕವನ್ನು ಸುದೀರ್ಘವಾಗಿ ಸಂಗೀತರತ್ನಾಕರದ ನರ್ತನಾಧ್ಯಾಯದ ವ್ಯಾಖ್ಯಾನದಲ್ಲಿ ಉದ್ಧರಿಸಿಕೊಳ್ಳುತ್ತಾನೆ. ಅನುಷ್ಟುಪ್ ವೃತ್ತದಲ್ಲಿರುವ ಈ ಗ್ರಂಥಖಂಡವು ಭಟ್ಟತಂಡು, ಕೀರ್ತಿಧರ, ನಾರದ, ಮತಂಗ, ಸುಮಂತು, ಕ್ಷೇಮರಾಜ ಮತ್ತು ಲೌಹಿತ್ಯಭಟ್ಟರ ಮತಗಳನ್ನು ಸಂಗ್ರಹಿಸಿದೆ.

ಕೋಹಲರಚಿತವಾದ ಈ ಸಂಗೀತ-ನಾಟ್ಯಗ್ರಂಥಗಳು ಈಗ ಹಸ್ತಪ್ರತಿಯಲ್ಲಿ ದೊರೆಯುತ್ತವೆ: ಅಭಿನಯಶಾಸ್ತ್ರ (ತೆಲುಗು ಅರ್ಥಸಹಿತ), ಕೋಹಲಮತ(ರಾಗಾದಿ ವಿಷಯದಲ್ಲಿ ಮತಂಗನ ಪ್ರಶ್ನೆಗೆ ಕೋಹಲನ ಉತ್ತರ), ಕೋಹಲರಹಸ್ಯ (ಅದೇ ವಿಷಯ, ಅದೇ ಸಂವಾದಕರು, ರಾಗಗಳ ವಿನಿಯೋಗ), ಮತ್ತು ತಾಲಲಕ್ಷಣ. ಇವುಗಳಲ್ಲದೆ ದತ್ತಿಲಾಚಾರ್ಯರೊಡನೆ ಸಂವಾದರೂಪದಲ್ಲಿ ರಚಿಸಿದ ದತ್ತಿಲಕೋಹಲಿಯಂ ಶಾರ್ದೂಲ-ಕೋಹಲ ಸಂವಾದರೂಪದ ಸಂಗೀತಮೇರುವಿನ ಒಂದು ಖಂಡವು ಉದ್ಧೃತಿಯಲ್ಲೂ, ಭರತಶಾಸ್ತ್ರವೆಂಬ ನೃತ್ತಶಾಸ್ತ್ರಗ್ರಂಥವೂ ಅಪ್ರಕಟಿತವಾಗಿ ಉಳಿದಿವೆ. ಕೋಹಲೀಯಶಿಕ್ಷಾ ಎಂಬ ಪ್ರಾಚೀನ ವೇದಶಿಕ್ಷಾಗ್ರಂಥವು ಪ್ರಕಟವಾಗಿದೆ. ತೈತೀರೀಯಪ್ರತಿಶಾಖ್ಯೆಯಲ್ಲಿ ಕೋಹಲೀಪುತ್ರರದೆಂಬ ಒಂದು ಯಜುರ್ವೇದ ಶಾಖೆಯನ್ನು ಹೇಳಿದೆ. ಈ ಎಲ್ಲ ಕೋಹಲರೂ ಒಬ್ಬನೇ ಪೂರ್ವಾಚಾರ್ಯನಾಗಿರುವುದು ಅಸಂಭವ. ಬೃಹದ್ದೇಶಿಯಲ್ಲಿ ಕೋಹಲನು ಶ್ರುತಿ, ಸ್ವರ, ಮೂರ್ಛನೆ ಮತ್ತು ಗ್ರಾಮಗಳ ವಿಷಯದಲ್ಲಿ ಎಂಟು ಬಾರಿ ಉದ್ಧೃತನಾಗಿದ್ದಾನೆ.

. ತುಂಬುರು

ತುಂಬುರುವು ಪೌರಾಣಿಕ ವ್ಯಕ್ತಿಯೂ ಹೌದು, ಐತಿಹಾಸಿಕ ವ್ಯಕ್ತಿಯೂ ಹೌದು. ವಾಯುಪುರಾಣದಲ್ಲಿ ಅವನನ್ನು ದೇವಸಂಗೀತಜ್ಞನೆಂದು ಉಲ್ಲೇಖಿಸಿದೆ. ಭಾಗವತ ಪುರಾಣದಲ್ಲಿ ತುಂಬುರುವೆಂಬ ಗಂಧರ್ವನು ತನ್ನ ಗುರುವಾದ ನಾರದಮುನಿಯೊಡನೆ ಅನಂತನ ಮಹಿಮೆಗಳ ಗಾನವನ್ನು ಮಾಡಿದನೆಂದೂ ಗೋವರ್ಧನೋದ್ಧರಣ ಸಮಯದಲ್ಲಿ ಶ್ರೀಕೃಷ್ಣನನ್ನು ಸ್ತುತಿಸಿ ಹಾಡಿದನೆಂದೂ ಹೇಳಿದೆ. ರಾಮಾಯಣದಲ್ಲಿ ಅವನು ಸಂಗೀತಕೋವಿದನಾದ ಗಂಧರ್ವ, ಕುಬೇರನ ಸೇವಕ, ಮಹಾಭಾರತದಲ್ಲಿ ತುಂಬುರುವು ಅರಿಷ್ಟಾ ಎಂಬುವಳ ಮಗನಾದ ದೇವಗಂಧರ್ವ.

ಸಂಗೀತಶಾಸ್ತ್ರದಲ್ಲಿ ತುಂಬುರುವೆಂಬ ಐತಿಹಾಸಿಕ ಪೂರ್ವಾಚಾರ್ಯನ ಮತಗಳ ಉಲ್ಲೇಖಗಳೂ ಉದ್ಧೃತಿಗಳೂ ದೊರೆಯುತ್ತವೆ. ತುಂಬುರುವು ಭರತಮುನಿಯು ಉಲ್ಲೇಖಿಸುವ ಭರತಪುತ್ರರ ಪಟ್ಟಿಯಲ್ಲಿಲ್ಲ. ಅಭಿನವಗುಪ್ತನು ಅವನನ್ನು ತಾಂಡವಲಕ್ಷಣಕ್ಕಾಗಿ ಉದ್ಧರಿಸಿಕೊಳ್ಳುತ್ತಾನೆ. ಹರಿಪಾಲದೇವನು ಸಂಗೀತಸುಧಾಕರದಲ್ಲಿ ತುಂಬುರುವನ್ನು ಶ್ರುತಿಲಕ್ಷಣಕ್ಕಾಗಿ ಆಶ್ರಯಸುತ್ತಾನೆ; ಇದರ ಉಪೋದ್ಧೃತಿಯು ಮುಮ್ಮಡಿ ಚಿಕ್ಕಭೂಪಾಲನ ಅಭಿನವಭರತಸಾರಸಂಗ್ರಹದಲ್ಲಿಯೂ ಇದೆ. ಸಂಗೀತರತ್ನಾಕರದಲ್ಲಿ ಸಾರ್ಙ್ಗದೇವನು ಅವನನ್ನು ಪೂರ್ವಾಚಾರ್ಯನೆಂದು ಸ್ಮರಿಸುತ್ತಾನೆ. ಸಂಗೀತರಾಜದಲ್ಲಿ ಕುಂಭಕರ್ಣನೂ ಸಂಗೀತಮಕರಂದಕಾರನಾದ ನಾರದನೂ ಅಷ್ಟೇ. ನಾನ್ಯದೇವನು ಷಡ್ಜಕೈಶಿಕೀಜಾತಿಯ ಲಕ್ಷಣ ಸಂದರ್ಭದಲ್ಲಿಯೂ ತಂತಿವಾದ್ಯಗಳ ಅಧ್ಯಾಯದಲ್ಲಿಯೂ ಉದ್ಧರಿಸಿದ್ದಾನೆ. ಗೋವಿಂದದೀಕ್ಷಿತನು ಸಂಗೀತಸುಧಾದಲ್ಲಿ ತಾನಗಳ ಸಂಖ್ಯೆಯನ್ನು ನಿರ್ಣಯಿಸುವಾಗ ನಾರದನೊಡನೆ ಸ್ಮರಿಸುತ್ತಾನೆ. ಶ್ರುತಿತ್ರೈವಿಧ್ಯವಿಷಯದಲ್ಲಿ, ಕುಂಭಕರ್ಣನೂ, ಬಹುಶಃ ಕಲ್ಲಿನಾಥನ ಉಪೋದ್ಧೃತಿಯಿಂದ, ಸಂಗೀತಸಾರಾಮೃತದಲ್ಲಿ ತುಲಜೇಂದ್ರನೂ ತುಂಬುರುವನ್ನು ಸಂಗ್ರಹಿಸುತ್ತಾರೆ. ವಾದ್ಯಗಳು ನಾಲ್ಕು ಬಗೆಯೆಂಬುದನ್ನು ಹೇಳುವಾಗಲೂ ತುಲಜೇಂದ್ರನು ನಂದಿ, ಸ್ವಾತಿಗಳೊಡನೆ ಅವನನ್ನೂ ಉಲ್ಲೇಖಿಸುತ್ತಾನೆ. ತುಂಬುರುನಾಟಕವೆಂಬ ಆಕರದಿಂದ ಸಂಗೀತಸಾರವೂ ಶುಭಂಕರನ ಸಂಗೀತದಾಮೋದರವೂ ಕೆಲವು ಶ್ಲೋಕಗಳನ್ನು ಎತ್ತಿಕೊಂಡಿವೆ. (ವಿವರಗಳಿಗಾಗಿ ನೋಡಿ : ಸತ್ಯನಾರಾಯಣ., ರಾ., ವೀಣಾಲಕ್ಷಣವಿಮರ್ಶೆ, ಪು.೩೦೬-೩೦೮)

ಮತಂಗನು ವಾತಪಿತ್ತಕಫಸನ್ನಿಪಾತಗಳೆಂಬ ದೋಷಗಳಿಂದಾಗಿ ಶ್ರುತಿಯು ನಾಲ್ಕು ವಿಧವೆಂದು ಹೇಳುವಲ್ಲಿ ಚತುರನೆಂಬ ಪೂರ್ವಾಚಾರ್ಯನನ್ನು ಉದ್ಧರಿಸಿಕೊಳ್ಳುತ್ತಾನೆ. ಆದರೆ ಈ ಉದ್ಧೃತಿಯು ತುಂಬುರುವಿನದೆಂದು ಕಲ್ಲಿನಾಥನ ಉಪೋದ್ಧೃತಿಯಿಂದ ಸ್ಪಷ್ಟವಾಗುತ್ತದೆ. ಮತಂಗನು ತುಂಬುರುವೆಂಬ ಭಾಷಾರಾಗವನ್ನೂ (೧೦೦೫, ೧೦೨೪) ನಾರದ ತುಂಬುರುಗಳು ಹಾಡಿದರೆನ್ನಲಾದ ಕಲಿಂಗೀ ಎಂಬ ಮೂಲಭಾಷಾರಾಗವನ್ನೂ (ನೋಡಿ: ಪ್ರ.ಸಂ.ಪು. ೧೪೦; ಸಂಗೀತರಾಜ ೨.೨.೧.೧೦೨೮?) ವರ್ಣಿಸುತ್ತಾನೆಂಬುದನ್ನು ಇಲ್ಲಿ ಸ್ಮರಿಸಬಹುದು.ಸ

. ದತ್ತಿಲ

ದಾಮೋದರಗುಪ್ತನು ಕುಟ್ಟಿನೀಮತದಲ್ಲಿ ದತ್ತಕ ಎಂಬ ಆಚಾರ್ಯನನ್ನು ವಾತ್ಸ್ಯಾಯನಾದಿಗಳ ಜೊತೆಗೆ ಕಾಮಶಾಸ್ತ್ರತಜ್ಞನೆಂದು ಉಲ್ಲೇಖಿಸುತ್ತಾನೆ; ದಂತಿಲನೆಂಬ ಆಚಾರ್ಯನನ್ನೂ ಭರತಮುನಿಯೊಡನೆ ನಾಟ್ಯಶಾಸ್ತ್ರಪ್ರವರ್ತಕನೆಂದು ಹೇಳುತ್ತಾನೆ. ಭರತಮುನಿಯೇ ದಂತಿಲನನ್ನು ಭರತಪುತ್ರದಲ್ಲಿ ಪಠಿಸುತ್ತಾನೆ. ದಂತಿಲನು ಶಿಥಿಲೋಚ್ಚಾರಣದಲ್ಲಿ ಮತ್ತು ಲೇಖನಪರಂಪರೆಯಲ್ಲಿ ದತ್ತಿಲ ಎಂದಾಗಿರಬಹುದು. ಅಥವಾ ದತ್ತಿಲಂ ಎಂಬುದು ಉಪಲಬ್ಧವಾಗಿರುವ ಗ್ರಂಥದ ಹೆಸರಾದುದರಿಂದ ಅದೇ ಶಿಥಿಲವಾಗಿ ದಂತಿಲ ಎಂದೂ ಆಗಿರಬಹುದು. ಮತಂಗ, ಅಭಿನವಗುಪ್ತ, ನಾನ್ಯದೇವ, ಶಾರ್ಙ್ಗದೇವ, ಸಿಂಹಭೂಪಾಲ, ಕಲ್ಲಿನಾಥ, ಕುಂಭಕರ್ಣ, ಗೋವಿಂದದೀಕ್ಷಿತ, ತುಲಜೇಂದ್ರರಂತಹ ಎಲ್ಲ ನಂತರದ ಸಂಗೀತಲಾಕ್ಷಣಿಕರು ದತ್ತಿಲ ಎಂಬ ಹೆಸರನ್ನೇ ಬಳಸಿದ್ದಾರೆಂದು ಇಲ್ಲಿ ಹೇಳಿದರೆ ಸಾಕು.

ಈಗ ದೊರೆತಿರುವ ದತ್ತಿಲಂ ಗ್ರಂಥವು ಪ್ರಾಚೀನಸಂಗೀತದ ಗೀತಲಕ್ಷಣವನ್ನು ಮಾತ್ರ ಒಳಗೊಂಡ, ತುಂಬ ಸಂಕ್ಷೇಪಗೊಂಡ ಗ್ರಂಥ. ಗ್ರಂಥದಲ್ಲೇ ಅದನ್ನು ಗಾಂಧರ್ವಶಾಸ್ತ್ರಸಂಕ್ಷೇಪ ಎಂದು ಕರೆದಿದೆ. ಇದಕ್ಕಿಂತ ತುಂಬಾ ವಿಸ್ತಾರವಾದ ಗಾಂಧರ್ವವೇದಸಾರವೆಂಬ ದತ್ತಿಲರಚಿತವಾದ ಗ್ರಂಥವು ಉಪಲಬ್ಧವೆಂದೂ ಅದರಲ್ಲಿ ಧ್ರುವಾ ಮತ್ತು ತಾಲಗಳ ಲಕ್ಷಣಗಳಿವೆಯೆಂದೂ ರಾಮಕೃಷ್ಣಕವಿಯು ಹೇಳುತ್ತಾರೆ. ದತ್ತಿಲಂ(ಅಥವಾ ಗಾಂಧರ್ವವೇದಸಾರ)ದ ಮೇಲೆ ಪ್ರಯೋಗಸ್ತಬಕವೆಂಬ ವ್ಯಾಖ್ಯಾನವಿರುವುದಾಗಿ ಸಿಂಹಭೂಪಾಲನು ಎಂ. ಕೃಷ್ಣಮಾಚಾರ್ಯರೂ ಬರೆಯುತ್ತಾರೆ. ದತ್ತಿಲನನ್ನು ಪೂರ್ವಾಚಾರ್ಯನೆಂದು ಶಾರ್ಙ್ಗದೇವಾದಿಗಳು ಉಲ್ಲೇಖಿಸುತ್ತಾರೆ. ಸರ್ವಾನಂದನು ಮತ್ತು ಕ್ಷೀರಸ್ವಾಮಿಯು ಅಮರಕೋಶ ಟೀಕೆಯಲ್ಲೂ ಕೃಷ್ಣಭಟ್ಟನು ರಘುವಂಶಕಾವ್ಯ ಟೀಕೆಯಲ್ಲೂ ಅವನನ್ನು ಸ್ಮರಿಸುತ್ತಾರೆ. ಅಭಿನವಗುಪ್ತನು ಧ್ರುವಾಧ್ಯಾಯದಲ್ಲಿ ಒಮ್ಮೆಯೂ ಗೇಯಾಧಿಕಾರದಲ್ಲಿ ಹನ್ನೊಂದು ಸಲವೂ ನಾನ್ಯದೇವನು ಜಾತಿಗಳ ವಿಷಯದಲ್ಲಿ ಹದಿನೇಳು ಸಲವೂ ಗೀತಕಗಳಲ್ಲಿ ಏಳು ಸಲವೂ ಸ್ವರಗಳಲ್ಲಿ ಅನುಕ್ರಮದ ವಿಷಯದಲ್ಲಿ ಒಮ್ಮೆಯೂ ದತ್ತಿಲಾಚಾರ್ಯನನ್ನು ಉದ್ಧರಿಸಿಕೊಳ್ಳುತ್ತಾರೆ. ಕುಂಭಕರ್ಣನು ಅವನಿಂದ ಹನ್ನೊಂದುಸಲ ಮತಸಂಗ್ರಹವನ್ನು ಸಂಗೀತರಾಜದಲ್ಲಿ ಮಾಡಿದ್ದಾನೆ.

ದತ್ತಿಲನು ಗೀತ, ತಾಲ, ಧ್ರುವಾಗಳ ಮೇಲೆ ಗ್ರಂಥರಚನೆ ಮಾಡಿದ್ದಾನೆ. ನಾಟಕ, ನೃತ್ಯ, ಅಭಿನಯಗಳನ್ನೂ ಕುರಿತು ಬರೆದಿರಬಹುದೆಂಬ ಒಂದು ಊಹೆಯಿದೆ. ಆದರೆ ಈ ವಿಷಯದಲ್ಲಿ ದತ್ತಿಲನ ಉಲ್ಲೇಖಗಳು ಯಾವುದೂ ಉಪಲಬ್ಧವಿಲ್ಲ.

ದತ್ತಿಲನು ತನ್ನ ಗ್ರಂಥದಲ್ಲಿ ನಾರದ, ಕೋಹಲ, ವಿಶಾಖಿಲರನ್ನು ನೆನೆದಿದ್ದಾನೆ. ದತ್ತಿಲ-ಕೋಹಲೀಯಂ ಎಂಬ ಶೀರ್ಷಿಕೆಯುಳ್ಳ ರಾಗಸಾಗರವೆಂಬ ಅರ್ವಾಚೀನ ರಾಗವಿಷಯ ಗ್ರಂಥವು ಮೂರು ತರಂಗಗಳಲ್ಲಿ ರಚಿತವಾಗಿದೆ. ಇದರ ಒಂದು ಹಸ್ತಪ್ರತಿಯು ನನ್ನಲ್ಲಿದೆ. ಮತಂಗನು ದತ್ತಿಲನನ್ನು ತಾನಕ್ರಿಯೆ, ಮೂರ್ಛನಾಸಂಖ್ಯೆಯ ಅವಧಾರಣೆ, ತಾನಸಂಖ್ಯೆ, ತಾನಪ್ರಸ್ತಾರಗಳ ವಿಷಯದಲ್ಲಿ ನಾಲ್ಕು ಬಾರಿ ಉದ್ಧರಿಸಿಕೊಂಡಿದ್ದಾನೆ.

. ದುರ್ಗಾಶಕ್ತಿ

ಇದು ಬೃಹದ್ದೇಶಿಯ ಮೂಲದಲ್ಲಿ ದುರ್ಗಶಕ್ತಿ, ದುರ್ಗಾಶಕ್ತಿ ಎಂಬ ರೂಪಗಳಲ್ಲಿದೆ. ಮೊದಲನೆಯದಕ್ಕೆ ಅಭೇದ್ಯವಾದ ಶಕ್ತಿ(ಯುಳ್ಳವನು / ವಳು) ಎಂದೂ ಎರಡನೆಯದಕ್ಕೆ ದುರ್ಗಾದೇವತೆಯ ಶಕ್ತಿರೂಪ(ದವನು / ದವಳು) ಎಂದೂ ಅರ್ಥವನ್ನು ಹೇಳಬಹುದು. ಅಧಿಕ ಗ್ರಂಥಸಂಭಾವ್ಯತೆಯಿಂದಾಗಿ ಎರಡನೆಯ ರೂಪವನ್ನೇ ಈ ಸಂಪಾದನದಲ್ಲಿ ಇಟ್ಟುಕೊಂಡಿದೆ. ಇದು ಪುರುಷನಾಮವೋ ಸ್ತ್ರೀನಾಮವೋ ತಿಳಿಯುವುದಿಲ್ಲ. ದುರ್ಗಾಶಕ್ತಿಯನ್ನು ಶಾರ್ಙ್ಗದೇವನು ಪೂರ್ವಾಚಾರ್ಯರಲ್ಲಿ ಪಠಿಸಿದ್ದಾನೆ ಮತ್ತು ನರ್ತರಾಗದ ವಿಷಯದಲ್ಲಿ ಉಲ್ಲೇಖಿಸಿದ್ದಾನೆ. ಬೃಹದ್ದೇಶಿಯಲ್ಲಿ ಇರುವ ಉದ್ಧೃತಿವಿಷಯಗಳನ್ನೇ ಸಾರಾಂಶಗೊಳಿಸಿ ಕುಂಭಕರ್ಣನು ದುರ್ಗಾಶಕ್ತಿಯನ್ನು ಉಲ್ಲೇಖಿಸಿ. ಅವನು ಎಂಟು ಉಪರಾಗಗಳನ್ನು ಹೇಳುತ್ತಾನೆಂಬ ಹಾಗೂ ಅನ್ಯ ಆಕರಗಳಲ್ಲಿ ದೊರೆಯದಿರುವ ಒಂದು ವಿಷಯವನ್ನು ಸ್ವತಂತ್ರವಾಗಿ ಬರೆದಿದ್ದಾನೆ.

ಮತಂಗನಲ್ಲಿ ಗೀತಿ, ವೇಸರರಾಗ, ಷಡ್ಜಕೈಶಿಕೀ, ನರ್ತ ಮತ್ತು ಗಾಂಧಾರಪಂಚಮವೆಂಬ ರಾಗ, ಇವುಗಳ ಬಗೆಗೆ ದುರ್ಗಾಶಕ್ತಿಯಿಂದ ಆರು ಉದ್ಧೃತಿಗಳಿವೆ.

. ನಂದಿಕೇಶ್ವರ

ನಂದಿ ಎಂಬ ಹ್ರಸ್ವ ನಾಮಾಂತರವುಳ್ಳ ನಂದಿಕೇಶ್ವರನು ಪೌರಾಣಿಕವ್ಯಕ್ತಿಯೂ ಹೌದು; ವಿವಿಧ ಶಾಸ್ತ್ರಗಳಲ್ಲಿ ಗ್ರಂಥಗಳನ್ನು ರಚಿಸಿರುವ ಐತಿಹಾಸಿಕ ವ್ಯಕ್ತಿಗಳೂ ಹೌದು. ಲಿಂಗಪುರಾಣ ಮುಂತಾದ ಶೈವಪುರಾಣಗಳಲ್ಲಿ ನಂದಿಯು ಶಿವನ ವಾಹನವಾದ ವೃಷಭ (=ಬಸವ)ನ ಹೆಸರಷ್ಟೇ; ರಾಮಾಯಣದಲ್ಲೂ ಭಾಗವತದಲ್ಲೂ ನಂದಿಯನ್ನು ಕುರಿತ ಆಖ್ಯಾನಗಳಿವೆ.

ನಂದಿ, ನಂದೀಶ್ವರ, ನಂದಿಕೇಶ್ವರ ಮುಂತಾದ ಹೆಸರುಗಳಿರುವ ಐತಿಹಾಸಿಕ ಶಾಸ್ತ್ರಕಾರರ ಅಕ್ಷರಪ್ರಶ್ನೆ, ಕಾಲೋತ್ತರ, ರಾಶಿನಕ್ಷತ್ರಫಲ, ರಾಶ್ಯಾಧಿಲಕ್ಷಣ, ಶಕುನಶಾಸ್ತ್ರ – ಈ ವಿಷಯಗಳ ‌ಜ್ಯೋತಿಷ ಗ್ರಂಥಗಳು, ಪಾಶುಪತತಂತ್ರ, ನಂದಿಕೇಶ್ವರಸಂಹಿತಾ ಎಂಬ ತಂತ್ರಶಾಸ್ತ್ರಗ್ರಂಥಗಳು, ನಂದಿತಂತ್ರವೆಂಬ ರಸವಾದವಿಜ್ಞಾನ, ನಂದಿಕೇಶ್ವರಕಾರಿಕಾ ಅಥವಾ ಕಾಶಿಕಾಸ್ತವ, ಸಿದ್ಧಾಂತದರ್ಪಣ ಎಂಬ ವ್ಯಾಕರಣಗ್ರಂಥಗಳು, ಕ್ಷೀರಸ್ವಾಮಿ ಮತ್ತು ಸಾಯಣರಿಂದ ವೈಯಾಕರಣ ಉದ್ಧೃತಿಗಳು, ಯೋಗತಾರವಲೀ, ಯೋಗಸಾರ ಎಂಬ ಯೋಗಶಾಸ್ತ್ರೀಯ ಗ್ರಂಥಗಳು, ನಂದಿಕೇಶ್ವರತಿಲಕ, ನಂ.ಮಂತ್ರ, ನಂ.ವಿದ್ಯಾ, ನಂ.ಗಾಯತ್ರೀ ಎಂಬ ಮಂತ್ರಶಾಸ್ತ್ರಗ್ರಂಥಗಳು, ರಸಮೀಮಾಂಸೆಯನ್ನು ಪ್ರಪ್ರಥಮವಾಗಿ ಕೈಗೊಂಡ ಆಲಂಕಾರಿಕನೆಂದು ರಾಜಶೇಖರನಿಂದ ಉದ್ಧೃತಿ, ನೇತ್ರಪ್ರಕಾಶಿಕಾ ಎಂಬ ವೈದ್ಯಗ್ರಂಥ, ವಾಗ್ಭಟನಿಂದ ಆಯುರ್ವೇದಿಯ ಉದ್ಧೃತಿಗಳು, ಪ್ರಾಭಾಕರವಿಜಯವೆಂಬ ಪೂರ್ವಮೀಮಾಂಸಾ ಶಾಸ್ತ್ರಗ್ರಂಥ (ಕ್ರಿ.ಶ.೧೨೦೦-೧೩೦೦) ಶಿವ (ಕರ್ಪೂರ)ಸ್ತವ, ಶಿವಸ್ತೋತ್ರ, ನಂದಿಕೇಶ್ವರಸ್ತವ ಎಂಬ ಸ್ತೋತ್ರಗಳು, ಪಾಶುಪತಾಗಮ ಎಂಬ ಶೈವಾಗಮ ಗ್ರಂಥ, ಶಿವಧರ್ಮ ಪುರಾಣ, ನಂದೀಶ್ವರಪುರಾಣ, ನಂದಿಪುರಾಣ ಎಂಬ ಪುರಾಣಗ್ರಂಥಗಳು – ಇವು ನಂದಿಕೇಶ್ವರನ ಹೆಸರಿನೊಡನೆ ಹೊಂದಿರುವ ಶಾಸ್ತ್ರೀಯ ವಿಸ್ತಾರವನ್ನು ತೋರಿಸುತ್ತದೆ. ಬೌದ್ಧರಲ್ಲೂ ಜೈನರಲ್ಲೂ ಪಾಂಡಿತ್ಯ ಮತ್ತು ಭಕ್ತಿಗಳಿಗಾಗಿ ನಂದಿ ಎಂಬ ಹೆಸರು ಚಿರಪರಿಚಿತವಾಗಿದೆ. ಉದಾಹರಣೆಗೆ, ಅಭಯನಂದಿ, ಜುಮರನಂದಿ, ದೇವನಂದಿ, ಸೋಮನಂದಿ, ನಂದಿಸ್ವಾಮಿ ಎಂಬವು ಪ್ರಸಿದ್ಧ ಜೈನಮುನಿಪಂಡಿತರ ಹೆಸರುಗಳು. ಜೈನಧರ್ಮದಲ್ಲಿ ನಂದಿಪುರಾಣ, ನಂದಿಯೋಗೀಶ್ವರ, ನಂದಿವಿದ್ಯಾ, ನಂದಿಸ್ತವನ, ನಂದಿಸ್ತುತಿ, ನಂದೀಶ್ವರ ಆರಾಧನ, ನಂದೀಶ್ವರಚೈತ್ಯಸಂಸ್ತವ, ನಂದೀಶ್ವರಭಕ್ತಿ, ನಂದಿಸೂತ್ರ ಎಂಬ ಪ್ರಮುಖ ಧಾರ್ಮಿಕ ಗ್ರಂಥಗಳಿವೆ.

ನಾಟ್ಯವಿದ್ಯೆಯಲ್ಲಿ ನಂದಿಕೇಶ್ವರನದೆಂದು ನಂಬಲಾಗಿರುವ ಅಭಿನಯದರ್ಪಣ ಮತ್ತು ಭರತಾರ್ಣವಗ್ರಂಥಗಳು ಪ್ರಸಿದ್ಧವಾಗಿವೆ. ಇವೆರಡರ ಕರ್ತೃವಿನ ಹೆಸರು ಒಂದೇ ಎಂದು ನಂಬಲಾಗಿದ್ದರೂ ವಿಷಯ ವ್ಯಾಪ್ತಿ. ಸಮಾನವಿಷಯಗಳ ವರ್ಣನೆಗಳು ಮುಂತಾದವುಗಳಲ್ಲಿ ಇವು ಬೇರೆಯೇ ಆಗಿದ್ದು ಅವು ಭಿನ್ನಕರ್ತೃಕವೆಂಬ ಅನುಮಿತಿಯು ಅನಿವಾರ್ಯವಾಗಿದೆ. ಅಭಿನಯ ದರ್ಪಣವು ಭರತಾರ್ಣವದ ಒಂದು ಭಾಗವೆಂದೂ ಭರತಾರ್ಣವಕ್ಕೆ ನಂದಿಭರತವೆಂಬುದು ಬೇರೆಯ ಹೆಸರೆಂದೂ ಭಾವಿಸುವವರಿದ್ದಾರೆ. ಏಕೆಂದರೆ ಅಭಿನಯದರ್ಪಣದ ಸಮಾಪ್ತಿವಾಕ್ಯವು ನಂದಿಕೇಶ್ವರಭರತ ಎಂದು ಕೆಲವು ಹಸ್ತಪ್ರತಿಗಳಲ್ಲಿದೆ. ನಂದಿಭರತೋಕ್ತಸಂಕರಾದ್ಯಾಯ ಎಂಬುದೊಂದು ಗ್ರಂಥದ ಹಸ್ತಪ್ರತಿಯು ‘ನಂದಿಭರತ’ದ ಖಂಡವಾಗಿ ದೊರೆಯುತ್ತದೆ. ನಂದಿಕೇಶ್ವರನದೆಂದು ಹೇಳಲಾದ ತಾಲಲಕ್ಷಣವೆಂಬ ಗ್ರಂಥವು ಹಸ್ತಪ್ರತಿಯಲ್ಲಿದೆ. ನಂದಿಕೇಶ್ವರ ಮತ್ತು ಪಾರ್ವತಿಯರ ಸಂವಾದರೂಪದ ಭರತಾರ್ಥಚಂದ್ರಿಕಾ ಎಂಬುದು ವಿವಿಧ ಅಭಿನಯಹಸ್ತಗಳನ್ನು ಬೋಧಿಸುತ್ತದೆ. ಕರಣಭೂಷಣವೆಂಬ ತಾಂಡವನೃತ್ತವಿಷಯಕವಾದ ಒಂದು ಗ್ರಂಥವಿದೆಯೆಂದು ರಾಮಕೃಷ್ಣಕವಿಯು ಹೇಳಿ ಭರತಾರ್ಣವವು ಕ್ರಿ.ಶ.೧೧ನೆಯ ಶತಮಾನದ ನಂತರದ್ದೆಂದು ಊಹಿಸುತ್ತಾರೆ. ಅವರು ಹರಿಪಾಲದೇವನ ಸಂಗೀತಸುಧಾಕರಕ್ಕೂ ಭರತಾರ್ಣವಕ್ಕೂ ಹೋಲಿಕೆಗಳಿರುವುದೆಂದು ಪ್ರತಿಪಾದಿಸುತ್ತಾರೆ. ಆದರೆ ಹರಿಪಾಲೀಯ ಸಂಗೀತಸುಧಾಕರದ ಗ್ರಂಥವು ಭರತಾರ್ಣವದ ಸರಸ್ವತೀಮಹಲ್ ಲೈಬ್ರರಿಯ ಹಸ್ತಪ್ರತಿಯಲ್ಲಿ ಬೆರಕೆಯಾಗಿರುವುದರಿಂದ ಹೀಗಾಗಿದೆಯೆಂದು ನಾನು ಅನ್ಯತ್ರ ತೋರಿಸಿದ್ದೇನೆ. (‘ಸ್ಟಡೀಸ್ ಇನ್ ಇಂಡಿಯನ್ ಡ್ಯಾನ್ಸ್’ನಲ್ಲಿ ‘ಅಥೆಂಟಿಸಿಟಿ ಆಫ್ ನಂದಿಕೇಶ್ವರಸ್ ಭರತಾರ್ಣವ, ಪು. ೯೪-೯೮)

ಅಭಿನವಗುಪ್ತನು ರೇಚಕ ಅಂಗಹಾರವನ್ನು ನಿರೂಪಿಸುವ ಶ್ಲೋಕವೊಂದನ್ನು ನಂದಿಮತಾನುಸಾರವಾಗಿದೆಯೆಂದು ಉದ್ಧರಿಸಿಕೊಂಡು, ನಂದಿಕೇಶ್ವರನ ಮೂಲಗ್ರಂಥವನ್ನು ತಾನು ನೋಡಿಲ್ಲವೆಂದೂ ಚಿತ್ರಪೂರ್ವರಂಗವಿಧಿಯ ಬಗೆಗೆ ನಂದಿಕೇಶ್ವರನ ಮತವನ್ನು ಕೀರ್ತಿಧರಾಚಾರ್ಯನಿಂದ ಸಂಗ್ರಹಿಸಿರುವುದಾಗಿಯೂ ಬರೆಯುತ್ತಾನೆ. ನಾನ್ಯದೇವನು ಏಲಾವರ್ಣನದಲ್ಲೂ ತಾಲದ ನಾಲ್ಕು ಮಾರ್ಗಗಳಲ್ಲೂ ನಂದಿಕೇಶ್ವರನನ್ನು ಉದ್ಧರಿಸಿಕೊಳ್ಳುತ್ತಾನೆ. ಶಾರದಾತನಯನು ಭಾವಪ್ರಕಾಶನದಲ್ಲಿ ನಾಟ್ಯವೇದವನ್ನು ನಂದಿಕೇಶ್ವರನು ಬ್ರಹ್ಮನಿಗೆ ಉಪದೇಶಿಸಿ ಅದನ್ನು ಭರತರಿಗೆ ಬೋಧಿಸಬೇಕೆಂದು ಹೇಳಿದುದಾಗಿಯೂ ಬ್ರಹ್ನನು ತನ್ನ ಆಯಾಸವನ್ನು (ಬೇಸರವನ್ನು?) ನೀಗುವ ಉಪಾಯವನ್ನು ಶಿವನಲ್ಲಿ ಕೋರಿದಾಗ ಶಿವನು ಅವನಿಗೆ ನಾಟ್ಯವೇದವನ್ನು ಹೇಳಿಕೊಡುವಂತೆ ನಂದಿಕೇಶ್ವರನಿಗೆ ಆಜ್ಞೆನೀಡಿದನೆಂದೂ ಹೇಳಿದೆ. ಭರತನಿಗೆ ಅಂಗಹಾರಾದಿಗಳನ್ನು ಹೇಳಿಕೊಂಡೆಂದು ಶಿವನು ತಂಡುವಿಗೆ ಅಣತಿಯಿತ್ತನೆಂದು ಭರತನು ನಾಟ್ಯಶಾಸ್ತ್ರದಲ್ಲಿ ಹೇಳಿರುವುದನ್ನಿಲ್ಲಿ ಸ್ಮರಿಸಬಹುದು.

ಮತಂಗನು ನಂದಿಕೇಶ್ವರನನ್ನು ದ್ವಾದಶಸ್ವರಮೂರ್ಛನೆಯ ಲಕ್ಷಣಕ್ಕಾಗಿ ಮಾತ್ರ ಆಶ್ರಯಿಸಿದ್ದಾನೆ. ಕುಂಭಕರ್ಣನಾದರೋ ನಂದಿಕೇಶ್ವರಕೋಹಲರು ಮತಂಗಮತಾನುಸಾರವಾಗಿ ದ್ವಾದಶ ಸ್ವರಮೂರ್ಛನೆಯನ್ನು ನಿರೂಪಿಸುತ್ತಾರೆಂದು ಬರೆದಿದ್ದಾನೆ! ಅಷ್ಟೇ ಅಲ್ಲದೆ ಷಡ್ಜಮಧ್ಯಾಜಾತಿಯು ಸರ್ವರಸಾಶ್ರಯವೆಂದೂ ಎಲ್ಲಾ ರಾಗಗಳಿಗೂ ಪ್ರಕೃತಿಯೆಂದೂ ನಂದಿಕೇಶ್ವರಮತಾನುಸಾರವಾಗಿ ಉಲ್ಲೇಖಿಸುತ್ತಾನೆ. ಈ ಸಂಗತಿಯು ಬೇರೆಡೆ ದೊರೆಯುವುದಿಲ್ಲ.

. ನಾರದ

ನಾರದನೂ ಪೌರಾಣಿಕ ಹಾಗೂ ಐತಿಹಾಸಿಕ ವ್ಯಕ್ತಿಯೇ. ಪುರಾಣಗಳಲ್ಲಿ ಅವನು ಬ್ರಹ್ಮರ್ಷಿ, ದೇವರ್ಷಿ, ಮುನಿ, ಗಂಧರ್ವ, ಋಗ್‌ವೇದ ಕಾಲದಲ್ಲಿಯೇ ಅವನು ಮಂತ್ರದ್ರಷ್ಟಾರನಾಗಿ, ಛಾಂದೋಗ್ಯೋಪನಿಷತ್ತು ಹಾಗೂ ಐತರೇಯಬ್ರಾಹ್ಮಣಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಅವನನ್ನು ಕುರಿತ ಉಲ್ಲೇಖವು ರಾಮಾಯಣ, ಭಾರತ, ಭಾಗವತ, ದೇವೀಭಾಗವತ, ಸ್ಕಾಂದ ಮುಂತಾದ ಪುರಾಣಗಳಲ್ಲಿ ಹಲವೆಡೆ ಉಂಟು. ಆರ್ಯಸಂಸ್ಕೃತಿಯಲ್ಲೂ ದ್ರಾವಿಡಸಂಸ್ಕೃತಿಯಲ್ಲೂ ಅವನು ಬಹುಪ್ರಾಚೀನಗೌರವಿತನಾದ ಋಷಿ : ಸ್ಮೃತಿ, ಗೃಹ್ಯಸೂತ್ರ, ಶಿಕ್ಷಾ, ಉಪನಿಷತ್ತು, ಪುರಾಣ, ಭಕ್ತಿಸೂತ್ರ, ಮಂತ್ರಶಾಸ್ತ್ರ ಇತ್ಯಾದಿ ಹತ್ತು ಹಲವು ಶಾಸ್ತ್ರಗಳಲ್ಲಿ ನಾರದನೆಂಬ ಕರ್ತೃಗಳ ನೂರಾರು ಪ್ರಕಟಿತ ಮತ್ತು ಅಪ್ರಕಟಿತ ಗ್ರಂಥಗಳಿವೆ.

ನಾರದನು ಪ್ರಾಚೀನತಮ ಸಂಗೀತಶಾಸ್ತ್ರಪ್ರವರ್ತಕರಲ್ಲಿ ಮುಖ್ಯನಾಗಿದ್ದಾನೆ. ತಮಿಳರು ನಾರದನನ್ನು ಪಂಚಭಾರತೀಯ ಗ್ರಂಥದ ಕರ್ತೃ, ಪೆರುಂಗಳಂ ಎಂಬ ವೀಣೆಯ ವಾದಕ (ಆರ್ಯಸಂಸ್ಕೃತಿಯಲ್ಲಿ ನಾರದನು ಮಹತೀವೀಣೆಯ ವಾದಕ) ಎಂದು ಪರಿಭಾವಿಸುತ್ತಾರೆ. ಅಗಸ್ತ್ಯನು ನಾಟಕದ ವಿಷಯದಲ್ಲೂ ನಾರದನು ಸಂಗೀತದ ವಿಷಯದಲ್ಲೂ ರಚಿಸಿದ ಸೂತ್ರಗಳಲ್ಲಿ ಕೆಲವು ಈಗಲೂ ಉಳಿದುಬಂದಿವೆಯೆಂದು ನಂಬುತ್ತಾರೆ. ಶಿಲಪ್ಪದಿಕಾರಂನಲ್ಲಿ ಇಳಂಗೋಅಡಿಗಳ್ ಹಾಗೂ ಅವನ ವ್ಯಾಖ್ಯಾನಕಾರನಾದ ಅಡಿಯಾರ್ ಕುನಲ್ಲರ್ ನಾರದನು ಸಂಗೀತತಜ್ಞನೆಂದು ಉಲ್ಲೇಖಿಸುತ್ತಾರೆ.

ಸಂಸ್ಕೃತವಾಙ್ಮಯದಲ್ಲಿ ‘ಮೌನೇಯಗಂಧರ್ವ’ನಾದ ನಾರದನನ್ನು ಭಾಗವತ, ಬ್ರಹ್ಮಾಂಡ, ವಾಯು, ಮತ್ತು ವಿಷ್ಣುಪುರಾಣಗಳು ಹೆಸರಿಸಿವೆ. ಮಹಾಭಾರತದಲ್ಲಿ ನಾರದನು ಒಬ್ಬ ಗಾಂಧರ್ವವೇದಪ್ರವರ್ತಕ. ಭರತಮುನಿಯೂ ನಾರದನನ್ನು ಒಬ್ಬ ಗಂಧರ್ವ, ಅಮೃತಮಂಥನವೆಂಬ ರೂಪಕದ ಪ್ರದರ್ಶನದಲ್ಲಿ ಭಾಗವಹಿಸಿದ್ದ ಪಾತ್ರಧಾರಿ, ನಾಟ್ಯಶಾಸ್ತ್ರವನ್ನು ಉಪದೇಶಿಸೆಂದು ಭರತನನ್ನು ಕೋರಿದ ಋಷಿಗಳಲ್ಲಿ ಒಬ್ಬ, ಗಾಂಧರ್ವಶಾಸ್ತ್ರಪ್ರವರ್ತಕ, ಧ್ರುವಾಗಾನವನ್ನು ಪರಿಷ್ಕರಿಸಿದ ಶಾಸ್ತ್ರಜ್ಞ, ವಾದ್ಯಸಂಗೀತಪಟು, ನಾಟ್ಯಾವತಾರದ ಸಮಯದಲ್ಲಿ ಇದ್ದವನು ಎಂದು ಉಲ್ಲೇಖಿಸುತ್ತಾನೆ. ಈ ನಾರದನು ಹೀಗೆ ಕೆಲವು ಸಲ ಭರತಮುನಿಯ ಸಮಕಾಲೀನನೂ ಇನ್ನು ಕೆಲವು ಸಲ ಅವನ ಪೂರ್ವಾಚಾರ್ಯನೂ ಆಗಿರುವುದು ನಾಟ್ಯಶಾಸ್ತ್ರದಲ್ಲಿ ಕಂಡುಬರುತ್ತದೆ. ದತ್ತಿಲನು ೮೪ ತಾನಗಳಿಗೆ ಯಜ್ಞಗಳ ಹೆಸರನ್ನು ಇಡುವಲ್ಲಿ ನಾರದನನ್ನು ನೆನೆಯುತ್ತಾನೆ. ಹಾಗೂ ಗಾಂಧರ್ವವೇದವನ್ನು ಬ್ರಹ್ಮನು ನಾರದನಿಗೆ ಕೊಟ್ಟನೆಂದೂ ಹೇಳುತ್ತಾನೆ. ಅಭಿನವಗುಪ್ತನು, ನಾರದನು ಗೀತಜ್ಞ, ಗಾಂಧರ್ವವು ದೇವತೆಗಳಿಗೆ ಪ್ರೀತಿಯನ್ನುಂಟುಮಾಡುತ್ತದೆ. ಷಡ್ಜಪಂಚಮಸ್ವರಗಳ ನಾಮನಿಷ್ಪತ್ತಿ, ೮೪ ಯಜ್ಞಗಳ ಹೆಸರುಗಳನ್ನು ೮೪ ತಾನಗಳಿಗೆ ಇಡುವುದರ ಸಮರ್ಥನೆ, ಸಾಮಗಾನ ಹಾಗೂ ಲೌಕಿಕ ಸಂಗೀತಗಳಲ್ಲಿ ಸ್ವರಗಳ ಪರಸ್ಪರತೆ, ರೇಚಿತ ಮತ್ತು ಕುಹರವೆಂಬ ವರ್ಣಾಲಂಕಾರಗಳ ಲಕ್ಷಣ – ಈ ವಿಷಯಗಳಲ್ಲಿ ನಾರದೀಯಶಿಕ್ಷೆಯನ್ನು ಪ್ರಮಾಣವಾಗಿ ಉಲ್ಲೇಖಿಸುತ್ತಾನೆ. ಅಷ್ಟೇ ಅಲ್ಲದೆ ಋಕ್‌ಗಾಥಾಪಾಣಿಕಾದಿಗಳಿಂದ ಧ್ರುವಾಗೀತಗಳನ್ನು ನಿರ್ಮಿಸಿದ ದ್ವಿಜಶ್ರೇಷ್ಠರಲ್ಲಿ ಒಬ್ಬನೆಂದೂ ಗಾಂಧರ್ವಶಾಸ್ತ್ರ ಪ್ರವರ್ತಕನೆಂದೂ ನಾರದನನ್ನು ಸ್ಮರಿಸುತ್ತಾನೆ. ನಾನ್ಯದೇವನೂ ನಾರದನು ಇಪ್ಪತ್ತು ಸಲಕ್ಕೂ ಹೆಚ್ಚಾಗಿ ವಿವಿಧ ಸಂಧರ್ಭಗಳಲ್ಲಿ ಉದ್ಧರಿಸಿಕೊಳ್ಳುತ್ತಾನೆ. ಶಾರದಾತನಯನು ರಸೋತ್ಪತ್ತಿ ವಿಷಯದಲ್ಲಿ ಅವನನ್ನು ಪ್ರಮಾಣವಾಗಿ ಇಟ್ಟುಕೊಳ್ಳುತ್ತಾನೆ. ಶಾರ್ಙ್ಗದೇವನು ಪೂರ್ವಾಚಾರ್ಯರ ಪಟ್ಟಿ, ಗಾಂಧಾರ ಗ್ರಾಮಲಕ್ಷಣ ತಾನಗಳಿಗೆ ನಾಮಾಂತರಗಳು – ಇವುಗಳನ್ನು ಹೇಳುವಲ್ಲಿ ನಾರದನನ್ನು ಪ್ರಾಮಾಣಿಕನೆಂದು ಸೂಚಿಸುತ್ತಾನೆ.

ಸಂಗೀತಪ್ರಸಕ್ತಿಯಲ್ಲಿ ವಿವಿಧ ನಾರದರಿಂದ ವಿವಿಧ ಕಾಲಗಳಲ್ಲಿ ರಚಿತವಾಗಿರುವ ಹಲವು ಗ್ರಂಥಗಳು ದೊರೆಯುತ್ತವೆ. ಹೀಗೆ, ನಾರದೀಯಶಿಕ್ಷೆಯು ನಾರದಕೃತ; ಅದು ನಾರದೀಯ ಮಹಾಪುರಾಣದ ಒಂದು ಖಂಡ; ಇವೆರಡರಲ್ಲಿ ಯಾವುದು ಮೊದಲು ಹುಟ್ಟಿತೆಂಬ ಜಿಜ್ಞಾಸೆಯು ಮುಖ್ಯವಾದರೂ ಇಲ್ಲಿ ಅಪ್ರಸಕ್ತ. ಸಂಗೀತಮಕರಂದವನ್ನು ರಚಿಸಿದ್ದೂ ಒಬ್ಬ ನಾರದನೇ. ಉಪಲಬ್ಧ ರೂಪದಲ್ಲಿ ಅದು ಮಿಶ್ರಿತ; ಪ್ರಾಚೀನ ಹಾಗೂ ೧೬-೧೭ನೆಯ ಶತಮಾನಗಳಷ್ಟು ಅರ್ವಾಚೀನ ವಿಷಯಗಳನ್ನು ಒಳಗೊಂಡಿದೆ, ತನಗಿಂತ ಪ್ರಾಚೀನನಾದ ಇನ್ನೊಬ್ಬ ನಾರದನ ಪ್ರಮಾಣ್ಯವನ್ನು ಹಲವೆಡೆಗಳಲ್ಲಿ ಉಲ್ಲೇಖಿಸುತ್ತದೆ. ಪಂಚಮಸಂಹಿತಾ ಅಥವಾ ಪಂಚಮಸಾರಸಂಹಿತಾ ಎಂಬ ಸಂಗೀತಶಾಸ್ತ್ರಗ್ರಂಥವು ನಾರದಪ್ರಣೀತ. ಚತ್ವಾರಿಂಶಶಚ್ಛತರಾಗನಿರೂಪಣಂ. ಷಟ್‌ತ್ರಿಂಶಚ್ಛತ ರಾಗನಿರ್ಣಯ (ರಾಗಮಾಲಾ), ನಾರದಸಂಹಿತಾ (=ಪಂಚಮಸಾರಸಂಹಿತಾ? ಸಂಗೀತನಾರಾಯಣದಲ್ಲಿ ಉದ್ಧೃತ) ಎಂಬ ಅರ್ವಾಚೀನ ಸಂಗೀತಶಾಸ್ತ್ರಗ್ರಂಥಗಳೂ, ನಾರದಭರತವೆಂಬ ಇನ್ನೊಂದು ಹ್ರಸ್ವಗ್ರಂಥವೂ ನಾರದಪ್ರಣೀತವೆಂದು ದೊರೆಯುತ್ತವೆ. ಹೀಗೆ ಸಂಗೀತಶಾಸ್ತ್ರದಲ್ಲಿ ಕಡೆಯಪಕ್ಷ ಹತ್ತು ಮಂದಿ ನಾರದರು ಬೇರೆ ಬೇರೆ ಕಾಲಗಳಲ್ಲಿ ಕಂಡುಬರುತ್ತಾರೆ.

ಬೃಹದ್ದೇಶಿಯಲ್ಲಿ ಧ್ವನಿಗೆ ದೇಶೀತ್ವವು ಹೇಗೆ ಉಂಟಾಗುತ್ತದೆ ಎಂಬ ಗ್ರಂಥೋದ್ಘಾಟಕ ಪ್ರಶ್ನೆಯನ್ನು ಕೇಳುವಲ್ಲಿ, ಆರ್ಚಿಕಗಾಥಿಕಾದಿ ಸಪ್ತಸ್ವರಯೋಗವನ್ನು ನಿರೂಪಿಸುವಲ್ಲಿ, ಗ್ರಾಮಗಳ ಕುಲ, ದೇವತೆಗಳನ್ನು ನಿರ್ಣಯಿಸುವಲ್ಲಿ ನಾರದನು ಮೂರು ಸಲ ಸ್ಮೃತನಾಗಿದ್ದಾನೆ. ಸಂಗೀತ ಮಕರಂದದಲ್ಲಿ ನಾರದನು ಮತಂಗನನ್ನು ಉಲ್ಲೇಖಿಸುತ್ತಾನೆ. ಆದರೆ ಮತಂಗನಿಂದ ಉಲ್ಲೇಖಿತನಾಗಿರುವ ನಾರದನು ಕ್ರಿ.ಶ. ಏಳನೆಯ ಶತಮಾನಕ್ಕಿಂತಹಿಂದೆ ಜೀವಿಸಿದ್ದವನೆಂಬುದು ಸ್ಪಷ್ಟವಾಗಿದೆ.

೮ ಬ್ರಹ್ಮ

ಸೃಷ್ಟಿಕರ್ತನಾದ ಚತುರ್ಮುಖಬ್ರಹ್ಮನೇ ಗೀತವಾದ್ಯನೃತ್ತಗಳನ್ನೂ ಒಳಗೊಂಡು ಸಮಗ್ರಕಲೆಯೆನ್ನಿಸಿದ ನಾಟ್ಯವನ್ನು ಒಂದು ವೇದದ ರೂಪದಲ್ಲಿ ಸೃಷ್ಟಿ ಮಾಡಿದನು ಎಂಬ ಆಕ್ಯಾನವನ್ನು ಭರತಮುನಿಯು ನಾಟ್ಯಶಾಸ್ತ್ರದ ಮೊದಲಿನಲ್ಲಿಯೇ ಹೇಳುತ್ತಾನೆ. ತ್ರೇತಾಯುಗದ ವೈವಸ್ವತ ಮನ್ವಂತರದಲ್ಲಿಸ ಜನರು ಕಾಮಲೋಭವಶರಾಗಿ ಗ್ರಾಮ್ಯಧರ್ಮ (=ಇಂದ್ರಯಲೋಲುಪತೆ; ಅಶ್ರುತಶಾಸ್ತ್ರಾರ್ಥಜನಾಕೀರ್ಣದೇಶೋಚಿತೋ ಧರ್ಮಃ ಸ್ವಧರ್ಮಾನನುಪಾಲನಲಕ್ಷಣ ‘– ಅಭಿನವಗುಪ್ತ) ಪ್ರವೃತ್ತರಾಗಿ, ಈರ್ಷ್ಯೆ, ಕ್ರೋಧಾದಿಗಳಿಂದ ಸಂಮೂಢರಾಗಿ ಸುಖದುಃಖ ಮಿಶ್ರಿತವಾದ ಭೋಗಗಳನ್ನು ಅನುಭವಿಸುತ್ತಿರಲು ಜಂಬೂದ್ವೀಪದ ಸಮಸ್ತರೂ ಇಂದ್ರನನ್ನು ಮುಂದಿಟ್ಟುಕೊಂಡು ವೇದಸಮ್ಮತವೂ ಸರ್ವಲೋಕರಂಜಕವೂ ದೃಶ್ಯಶ್ರವಗಳೆರಡೂ ಆಗಿರುವ ಕ್ರೀಡೆಯನ್ನು ಸೃಷ್ಟಿಸಿಕೊಡುವಮತೆ ಪ್ರಾರ್ಥಿಸಿದರು. ಬ್ರಹ್ಮನು ತಪಸ್ಸುಮಾಡಿ ನಾಲ್ಕೂವೇದಗಳಿಂದ ಮಾತು, ಅಭಿನಯ, ಸಂಗೀತ ಮತ್ತು ರಸಗಳನ್ನು ಸಂಗ್ರಹಿಸಿ ಧರ್ಮಾರ್ಥಯಶಸ್ಸುಗಳನ್ನು ಕೊಡುವ, ಲೋಕೋಪದೇಶಜನನ, ಸರ್ವಕರ್ಮಾನುದರ್ಶಕ, ಸರ್ವಶಾಸ್ತ್ರಾರ್ಥಸಂಪನ್ನ, ಸರ್ವಶಿಲ್ಪ (=ಕಲೆ) ಪ್ರವರ್ತಕ, ಧರ್ಮ, ಕ್ರೀಡೆ, ಅರ್ಥ, ಶಮ, ಹಾಸ್ಯ, ಯುದ್ಧ, ಕಾಮ, ವಧೆ ಮುಂತಾದವುಗಳನ್ನು ಅಲ್ಲಲ್ಲಿ ಒಳಗೊಳ್ಳುವ, ನಾನಾಭಾವಸಂಪನ್ನ, ನಾನಾವಸ್ಥಾಂತರಾತ್ಮಕ, ಲೋಕವೃತ್ತಾನುಕರಣ, ನಾನಾ ಜನರ ಕರ್ಮಸಂಶ್ರಯ ಎಂಬ ಲಕ್ಷಣಗಳಿರುವ ಐದನೆಯ ವೇದವಾಗಿ ನಾಟ್ಯವನ್ನು ಸೃಷ್ಟಿಸಿಕೊಟ್ಟನು. ದೇವತೆಗಳು ಇದನ್ನು ಪ್ರಯೋಗಿಸಲು ಅಸಮರ್ಥರಾದುದರಿಂದ ಈ ವೇದವನ್ನು ಬ್ರಹ್ಮನು ಭರತನಿಗೆ ಕೊಟ್ಟನು. ಅವನು ತನ್ನ ಪುತ್ರರೊಡನೆ ದೇವಾಸುರಸಂಘರ್ಷದಲ್ಲಿ ದೇವತೆಗಳ ವಿಜಯವನ್ನು ಒಳಗೊಂಡ ರೂಪಕವನ್ನು ಪ್ರದರ್ಶಿಸಿದನು. ಆಗ ಅಸುರರು ರೋಷಗೊಂಡು ಭರತನನ್ನೂ ನಾಟ್ಯರಂಗವನ್ನೂ ನಾಶಪಡಿಸಲು ಉದ್ಯುಕ್ತರಾದರು.ಭರತನು ಭರತರಿಗೂ ನಾಟ್ಯಪ್ರಯೋಗಕ್ಕೂ ರಕ್ಷಣೆಯನ್ನು ಬ್ರಹ್ಮನಿಂದ ಬೇಡಿದನು. ಆಗ ಚತುರ್ಮುಖನು ನಾಟ್ಯಗೃಹವನ್ನು ರಚಿಸುವಂತೆ ದೇವಶಿಲ್ಪಿ ವಿಶ್ವಕರ್ಮನಿಗೆ ಆಜ್ಞಾಪಿಸಿದನು. ಆದುದರಿಂದಲೇ ಭರತಮುನಿಯು ನಾಟ್ಯಶಾಸ್ತ್ರದ ಮೊಟ್ಟಮೊದಲನೆಯ ಶ್ಲೋಕದಲ್ಲಿಯೇ ‘ನಾಟ್ಯಶಾಸ್ತ್ರಂ ಪ್ರವಕ್ಷ್ಯಾಮಿ ಬ್ರಹ್ಮಣಾ ಯದುದಾಹೃತಂ’ ಎನ್ನುತ್ತಾನೆ. ಮುಂದೆ ಪುನಃ ಭಾರತೀ ಮುಂತಾದ ನಾಟ್ಯವೃತ್ತಿಗಳ ಉತ್ಪತ್ತಿಯನ್ನು ಹೇಳುವಾಗ ವಿಷ್ಣುವು ಮಧುಕೈಟಭರೊಡನೆ ಯುದ್ಧದಲ್ಲಿ ತೊಡಗಿರುವಾಗ ಅವನನ್ನು ‘ಬರಿದೇ ಮಾತುಗಳಿಂದ (=ಬೈಗಳಿಂದ) ಯುದ್ಧಮಾಡಬೇಡ, ಅವರನ್ನು ಬೇಗ ಕೊಲ್ಲು’ ಎಂದು ಬ್ರಹ್ಮನು ಎಚ್ಚರಿಸುತ್ತಾನೆ. ಬೇರೆಡೆ ಧ್ರುವಾಗಾನಪ್ರಸಕ್ತಿಯಲ್ಲಿ ಸಪ್ತರೂಪಕಗೀತವನ್ನು ಬ್ರಹ್ಮನು ರಚಿಸಿದನು ಎಂದೂ ಭರತನು ಉಲ್ಲೇಖಿಸುತ್ತಾನೆ.

ಬ್ರಹ್ಮನು ನಾಟ್ಯವೇದವನ್ನು ಸೃಷ್ಟಿಸಿ ಭರತನಿಗೆ ಕೊಟ್ಟನು ಎಂಬ ಮಾತನ್ನು ಅಭಿನಯದರ್ಪಣ, ಸಂಗೀತರತ್ನಾಕರ, ಸಂಗೀತಸುಧಾಕರ ಮತ್ತು ನಂತರದ ಎಲ್ಲ ನರ್ತನಶಾಸ್ತ್ರೀಯ ಗ್ರಂಥಗಳೂ ಪಾರಂಪರಿಕವಾಗಿ ಹೇಳುತ್ತವೆ. ಗೀತವಾದ್ಯಗಳ ಸೃಷ್ಟಿಯಲ್ಲೂ ಬ್ರಹ್ಮನ ಪಾತ್ರವಿದೆ: (ನಾಲ್ಕು ವೇದಗಳಿಂದ ಸಂಗ್ರಹಿಸಿ ಬ್ರಹ್ಮನು ನಾಟ್ಯವೇದವನ್ನು ಭರತನಿಗೆ ಕೊಟ್ಟಂತೆ) ಸಾಮವೇದದಿಂದ ಗಾಂಧರ್ವವೇದವನ್ನು ಸಂಗ್ರಹಿಸಿ ನಾರದನಿಗೆ ಕೊಟ್ಟನೆಂದು (ಭರತನು ಪರೋಕ್ಷವಾಗಿ ಮತ್ತು) ದತ್ತಿಲ ಶಾರ್ಙ್ಗದೇವಾದಿಗಳು ಮುಕ್ತೋಕ್ತಿಯಲ್ಲಿ ಹೇಳುತ್ತಾರೆ. ಬ್ರಹ್ಮನು ಹದಿನೆಂಟು ಜಾತಿಗಳನ್ನು ಹೇಳಿದ್ದಾನೆಂಬ ಭರತೋಕ್ತಿಯನ್ನು ಮತಂಗಶಾರ್ಙ್ಗದೇವರು ಪುನರುಚ್ಚರಿಸುತ್ತಾರೆ. ಇವುಗಳಲ್ಲಿ ಪ್ರತಿಯೊಂದಕ್ಕೂ ವೈದಿಕಛಂದಸ್ಸುಗಳಿರುವ ಚತುಷ್ಟದಿಗಳಲ್ಲಿ ಗಾನಪ್ರಯೋಜಕವಾದ ಮಾತುಗಳನ್ನು ಬ್ರಹ್ಮನು ರಚಿಸಿದನು. ಇವು ಬಹು ಪುರಾತನವಾದ ಧಾರ್ಮಿಕ ಗಾನಗಳಾಗಿದ್ದು ಬ್ರಹ್ಮಕೃತವಾದುದರಿಂದ ವೇದಸಮ್ಮಿತಗಾಳಗಿದ್ದವು. ಇದನ್ನು ಮಹಾಭಾರತದಲ್ಲಿಯೂ ಯಾಜ್ಞವಲ್ಕ್ಯಸ್ಮೃತಿಯಲ್ಲಿಯೂ ಉಲ್ಲೇಖಿಸಿದೆ. ಇದನ್ನು ಸಂಪ್ರದಾಯಶುದ್ಧವಾದ ಧಾತುಮಾತುಗಳಲ್ಲಿ ನಾನ್ಯದೇವನು ಭರತಭಾಷ್ಯದಲ್ಲಿ ಉಳಿಸಿಕೊಟ್ಟಿದ್ದಾನೆ. ಇವನ್ನು ಶಾರ್ಙ್ಗದೇವನು ಉದ್ಧರಿಸಿಕೊಂಡು ‘ಬ್ರಹ್ಮಪ್ರೋಕ್ತಪದೈಃ ಸಮ್ಯಕ್ ಪ್ರಾಗುಕ್ತಾಃ ಶಂಕರಸ್ತುತೌ | ಅಪಿ ಬ್ರಹ್ಮಹಣಂ ಪಾಪಾಜ್ಜಾತಯಃ ಪ್ರಪುನಂತ್ಯಮೂಃ – ಬ್ರಹ್ಮನು ಈಶ್ವರನ ಸ್ತುತಿಯಲ್ಲಿ ರಚಿಸಿರುವ ಇವನ್ನು ಹಾಡಿದರೆ ಬ್ರಹ್ಮಹತ್ಯಾ ಪಾಪದಿಂದ ಸಹ ಬಿಡಿಸಿ ಪವಿತ್ರಗೊಳಿಸುತ್ತವೆ ಎಂದು ಕೊಂಡಾಡುತ್ತಾನೆ. ಅಂತೆಯೇ ನಾನ್ಯದೇವನು ಶಂಕರಸ್ತುತಿಯಲ್ಲಿ ಬ್ರಹ್ಮನು ರಚಿಸಿರುವ ಕಪಾಲಗಳನ್ನು ಪರಂಪರಾಗತ ಧಾತುಮಾರ್ಗಗಳಲ್ಲಿ ರಕ್ಷಿಸಿ ನೀಡಿದ್ದಾನೆ. ಇವನ್ನು ಶಾರ್ಙ್ಗದೇವನು ‘ಕಪಾಲಾನಾಂ ಕ್ರಮಾದ್ ಬ್ರೂಮೋ ಬ್ರಹ್ಮಪೋಕ್ತ ಪದಾವಲೀಂ’ ಎಂಬ ಪೀಠಿಕೆಯೊಡನೆ ಉದ್ಧರಿಸಿಕೊಂಡು ಕಂಬಲಾಶ್ವತರರು ಇವನ್ನು ಹಾಡಿದಾಗ ಸುಪ್ರೀತನಾದ ಶಿವನು ಅವರಿಗೆ (ತನಗೆ ಆಭರಣವಾಗುವಂತೆ) ವರವನ್ನು ನೀಡಿದನೆಂದು ಹೇಳುತ್ತಾನೆ. ಕಪಾಲಶಬ್ದದ ನಿರ್ವಚನವನ್ನು ಹೇಳುವಲ್ಲಿ, ಕಲ್ಲಿನಾಥನು ಮಡಕೆಯ ಚೂರು (=ಕಪಾಲ)ಗಳು ಮಡಕೆಯ ಜ್ಞಾನವನ್ನು ಪ್ರತೀತಗೊಳಿಸುವಂತೆ ಅವಯವಿರೂಪದ ರಾಗವನ್ನು ಅವಯವರೂಪದ ಕಪಾಲಗಳು ಪ್ರತೀತಗೊಳಿಸುತ್ತವೆ ಎಂದು ಸನಾತನವಾದ ಒಂದು ಆಖ್ಯಾಯಿಕೆಯಿಂದಲೂ ಕಪಾಲಶಬ್ದದ ನಿಷ್ಪತ್ತಿಯನ್ನು ಹೊರಡಿಸುತ್ತಾನೆ: ಹಿಂದೆ ಭಿಕ್ಷಾಟನಸಮಯದಲ್ಲಿ ಶಂಭುವು ಷಾಡ್ಜೀ ಮುಂತಾದ (ಶುದ್ಧ) ಜಾತಿಗಳನ್ನು ಹಾಡುವಾಗ ಅತ್ಯಂತವಾದ ರಸಾಭಿವ್ಯಕ್ತಿಯಾಯಿತು;ಶಿವನ ಜಟಾಜೂಟದಲ್ಲಿರುವ ಚಂದ್ರನು ರಸಾತ್ಮಕನಷ್ಟೆ (=ಸುಧಾಂಶು). ಚಂದ್ರಕಲೆಯಿಂದ ಹರಿದು ಇಳಿದು ಬಂದ ಅಮೃತ ರಸದಿಂದ ತೊಯ್ದು ಹೋದ ಬ್ರಹ್ಮಕಪಾಲಗಳಲ್ಲಿ ಪ್ರಾಣಸಂಚಾರವಾಗಿ ಅವು ಮಹದಾನಂದದಿಂದ ಶಿವನ ಹಾಡನ್ನು ಅನುಕರಿಸಿ ಹಾಡಿದವು. ಬ್ರಹ್ಮಕಪಾಲಗಳು ಹಾಡಿ ಪುನೀತವಾದುದರಿಂದ ಇವಕ್ಕೆ ಕಪಾಲಗಳೆಂಬ ಹೆಸರಾಯಿತು. (ಭೀಮಸೇನನು ಭೀಮನಾದಂತೆ ಬ್ರಹ್ಮಕಪಾಲಗಳು ನಾಮೈಕ ದೇಶದಿಂದ ಕಪಾಲಗಳಾದವು.) ಬ್ರಹ್ಮನು ಶಿವನನ್ನು ಸ್ತುತಿಸಿದ ಸಂದರ್ಭವೆಂದರೆ ಇದೇ.

ಅಭಿವನಗುಪ್ತನು ನಾಟ್ಯವೇದದಲ್ಲಿ ಸದಾಶಿವ, ಬ್ರಹ್ಮ ಮತ್ತು ಭರತ – ಈ ಮೂರು ಮತಗಳಿದ್ದವೆಂದೂ ಅವುಗಳಲ್ಲಿ ಬ್ರಹ್ಮಮತದ ಸಾರವನ್ನು ಭರತನು ನಿರೂಪಿಸಿದ್ದಾನೆಂದೂ (‘ಪ್ರವಕ್ಷ್ಯಾಮಿ’) ಹೇಳುವುದನ್ನು ಈಗಾಗಲೇ ಸೂಚಿಸಿದೆ. (‘ಸದಾಶಿವಬ್ರಹ್ಮಭರತಮತತ್ರಯ) ವಿವೇಚನೇನ ಬ್ರಹ್ಮಮತಸಾರತಾ ಪ್ರತಿಪಾದನಾಯ ವಿಹಿತಮಿದಃ ಶಾಸ್ತ್ರಮ್. ಮಾರ್ಗಪದ್ಧತಿಯ ಗೀತವಾದ್ಯನೃತ್ತಗಳನ್ನು ಕಂಡುಹಿಡಿದವನೂ ಮಾರ್ಗಸಂಗೀತವಾದ ಜಾತಿಕಂಬಲಾದಿಗಳನ್ನು ಹಾಡಿದವನೂ ಬ್ರಹ್ಮನೇ ಎಂದು ಶಾರ್ಙ್ಗದೇವನು ಹೇಳುತ್ತಾನೆ. ಅರ್ವಾಚೀನ ರಾಗರಾಗಿಣೀ ವರ್ಗೀಕರಣವೊಂದನ್ನು ಬ್ರಹ್ಮಮತವೆಂದು ಹಿಂದೂಸ್ಥಾನೀಸಂಗೀತ ಲಾಕ್ಷಣಿಕರು ಉಲ್ಲೇಖಿಸುತ್ತಾರೆ. ಸಂಗೀತಮಕರಂದದಲ್ಲಿ ನಾರದನು ಬ್ರಹ್ಮನನ್ನು ನಾಟ್ಯಪ್ರವರ್ತಕ, ಋಷಭಸ್ವರದ ಗಾಯಕ, ಷಾಡವರಾಗಗಳ ಅಧಿದೇವತೆ, ಸಂಗೀತಶಾಸ್ತ್ರಪ್ರವರ್ತಕ, ರಾಗಗಳ ಗಾಯನದ ಶುಭಾಶುಭಸಮಯಗಳನ್ನು ನಾರದನಿಗೆ ಉಪದೇಶಿಸಿದವನು. ನಾರದನಿಗೆ ರಾಗಗಳ ಸ್ತ್ರೀಪುಂನಪುಂಸಕ ವರ್ಗೀಕರಣವನ್ನು ತಿಳಿಸಿದವನು. ತಾಲಪ್ರವರ್ತಕ ಇತ್ಯಾದಿಯಾಗಿ ಉಲ್ಲೇಖಿಸಿದ್ದಾನೆ. ಬ್ರಹ್ಮವೀಣಾ ಎಂಬ ಒಂದು ವೀಣಾಪ್ರಕಾರವನ್ನು ಸೃಷ್ಟಿಸಿ(ನುಡಿಸಿ)ದವನು ಎಂಬ ಒಂದು ಐತಿಹ್ಯವು ಸಂಗೀತದಲ್ಲಿದೆ. ಬ್ರಹ್ಮಮತವೆಂಬ ನಾಟ್ಯಶಾಸ್ತ್ರಗ್ರಂಥವಿತ್ತೆಂದೂಇದು ನಾಟ್ಯಶಾಸ್ತ್ರಪೂರ್ವವಾದುದು ಎಂದೂ ಅಭಿನವಗುಪ್ತನಮಾತಿನಿಂದ ತಿಳಿಯುತ್ತದೆ. ಈ ಹೆಸರಿನಲ್ಲಿ ಹ್ರಸ್ವವಾದ ನೃತ್ತಶಾಸ್ತ್ರಗ್ರಂಥವೊಂದು ದೊರೆಯುತ್ತದೆ. ಇದರ ಪ್ರತಿಯು ನನ್ನಲ್ಲಿದೆ. ಆದರೆ ಇದರಲ್ಲಿ ಹೆಸರೊಂದನ್ನು ಉಳಿದು ಮಿಕ್ಕೆಲ್ಲ ವಿಷಯಗಳಲ್ಲಿಯೂ ಏನೂ ವಿಶೇಷವಿಲ್ಲ. ಶಾರ್ಙ್ಗದೇವಾದಿಗಳು ಬ್ರಹ್ಮನನ್ನು ಸಂಗೀತಶಾಸ್ತ್ರಪ್ರವರ್ತಕರಲ್ಲಿ ಪಠಿಸುತ್ತಾರೆ.

ಮತಂಗನು ಬ್ರಹ್ಮನನ್ನು ಷಡ್ಜಸ್ವರದ ಅಧಿದೇವತೆ, ಋಷಭಸ್ವರದ ಗಾಯಕ, ಷಡ್ಜಗ್ರಾಮದ ಅಧಿದೇವತೆ, ಜಾತಿಗಳು ಹದಿನೆಂಟಿವೆ ಎಂದು ಹೇಳಿದ ಸಂಗೀತಶಾಸ್ತ್ರಪ್ರಾಮಾಣಿಕ ಎಂದು ನಾಲ್ಕು ಬಾರಿ ಉಲ್ಲೇಖಿಸಿದ್ದಾನೆ. ಕಡೆಯ ಉಲ್ಲೇಖವು ಭರತಮುನಿಯಿಂದ ಉಪೋದ್ಧೃತಿ.