iii. ನಾನ್ಯದೇವ

ನಾನ್ಯದೇವ ಎಂಬುದು ನಾರಾಯಣದೇವ ಎಂಬ ಹೆಸರಿನ ಶಿಥಿಲೋಚ್ಚಾರದ ರೂಪ. ಇವನು ಕನ್ನಡಿಗ ದೊರೆ, ಆಗ್ನೇಯ ಭಾರತದ ಅಂಚಿನ ಮಿಥಿಲೆಯನ್ನು ಕ್ರಿ.ಶ.೧೦೯೭ ರಿಂದ ೧೧೪೭ವರೆಗೆ ಆಳಿ ಸುಮಾರು ೨೨೬ ವರ್ಷಗಳ ರಾಜ್ಯಭಾರ ಮಾಡಿದ ಕರ್ನಾಟಕ ರಾಜಮನೆತನವನ್ನು ಸ್ಥಾಪಿಸಿದನು. ನೆಹ್ರರಾಘೋಪುರದ ಬಳಿ ಕೊಇಲೀ ನಾನ್ಹಪುರ (=ನಾರಾಯಣಪುರ) ಎಂಬ ಊರನ್ನು ನಿರ್ಮಿಸಿ ಶಿವರಾಮಪುರ (ಇಂದಿನ ಸಿಮ್ರಾವ್)ವನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು. ಇದು ನೇಪಾಳಕ್ಕೆ ೧೦ ಕಿಮೀ.ದೂರದಲ್ಲಿದೆ. ಆಗ ಪ್ರಬಲವಾಗಿದ್ದ ಕಾಶಿಯ ಗಹಡವಾಲರಿಗೂ ಬಂಗಾಳ ಮತ್ತು ಮಗಧದ ಸೇನರಿಗೂ ನಡುವೆ ತಟಸ್ಥವೂ ಪ್ರಭಾವಶಾಲಿಯೂ ಆದ ಕರ್ನಾಟಕರಾಜ್ಯವನ್ನು ನಿರ್ಮಿಸಿ ಅದನ್ನು ಬಲಪಡಿಸುವಲ್ಲಿ ಯಶಸ್ವಿಯಾದನು; ಮಾಳವ, ಗೌಡ, ಬಂಗಾಲ ಮತ್ತು ಸೌವೀರದ ರಾಜರನ್ನು ಗೆದ್ದು ಮಹಾಸಾಮಂತಾಧಿಪತಿ, ಧರ್ಮಾವಲೋಕ ಎಂಬ ಬಿರುದುಗಳನ್ನು ವಹಿಸಿಕೊಂಡನು. ಅವನು ಕರ್ನಾಟಕದಿಂದ ಅನೇಕಶಾಸ್ತ್ರಗಳಲ್ಲಿ ವಿದಗ್ಧರಾದ ಪಂಡಿತರನ್ನು ಕರೆದುಕೊಂಡು ಹೋಗಿ ಅವರನ್ನು ಶಾಸ್ತ್ರಕಾವ್ಯರಚನೆಯಲ್ಲಿ ಪ್ರೋತ್ಸಾಹಿಸಿದನು. ಇವನೂ ಇವನ ಸಂತತಿಯವರೂ ಮಿಥಿಲೆಯಲ್ಲಿ ಸುಭದ್ರವೂ ನವೀನವೂ ಆದ ಸಾಮಾಜಿಕ, ಸಾಂಸ್ಕೃತಿಕ ವ್ಯವಸ್ಥೆಯನ್ನು ಏರ್ಪಡಿಸಿದರು. ನಾನ್ಯದೇವನ ತಮ್ಮನಾದ ಕೀರ್ತಿಧರನು ಕಾಶಿಯನ್ನು ಅದೇ ಕಾಲದಲ್ಲಿ ಆಳಿದನು; ಅವನು ನಾಟ್ಯಶಾಸ್ತ್ರಕ್ಕೆ ಪ್ರೌಢವಾದ ಒಂದು ವ್ಯಾಖ್ಯಾನವನ್ನು ರಚಿಸಿದ್ದಾನೆ. ನಾನ್ಯದೇವನನ್ನೂ ಕೀರ್ತಿಧರನನ್ನೂ ಶಾರ್ಙ್ಗದೇವನು ಪೂರ್ವಾಚಾರ್ಯರೆಂದು ಸ್ಮರಿಸಿ ಪುರಸ್ಕರಿಸಿದ್ದಾನೆ.

ನಾನ್ಯದೇವನು ಭರತಭಾಷ್ಯ, ಭರತವಾರ್ತಿಕ, ಸರಸ್ವತೀಹೃದಯಭೂಷಣ, ಸರಸ್ವತೀ ಹೃದಯಾಲಂಕಾರ, ಸರಸ್ವತೀಹೃದಯಲಂಕಾರಹಾರ ಎಂಬ ವಿವಿಧ ಹೆಸರುಗಳಿರುವ ಪ್ರೌಢ ಸಂಗೀಶಾಸ್ತ್ರಗ್ರಂಥವನ್ನು ರಚಿಸಿದ್ದಾನೆ. ಭಾಷ್ಯ, ವಾರ್ತಿಕ ಮುಂತಾದ ಹೆಸರುಗಳು ಇಲ್ಲಿ ಅನ್ವರ್ಥವಲ್ಲ; ಏಕೆಂದರೆ ಅದು ನಾಟ್ಯಶಾಸ್ತ್ರದ ವಾಚಿಕಾಂಶವೊಂದನ್ನೇ ಎತ್ತಿಕೊಡು ಗೀತವಾದ್ಯಗಳನ್ನು ಕುರಿತು ಸ್ವತಂತ್ರವಾಗಿ ರಚಿಸಿದ ಗ್ರಂಥ. ಇದರ ಏಕೈಕ ಹಸ್ತಪ್ರತಿಯು ದೊರೆತಿದ್ದು ಅದು ಲೋಪದೋಷಗಳಿಂದ ತುಂಬಿದೆ. ಗ್ರಂಥವು ೧೭ ಅಧ್ಯಾಯಗಳಲ್ಲಿ ಅಡಕವಾಗಿರುವ ಸು.೭೦೦೦ ಶ್ಲೋಕಗಳನ್ನು ಒಳಗೊಂಡಿದೆ. ಇದೇ ಅಲ್ಲದೆ ನಾನ್ಯದೇವನು ಭವಭೂತಿಯ ಮಾಲತೀಮಾಧವ ನಾಟಕಕ್ಕೆ ವ್ಯಾಖ್ಯಾನವನ್ನೂ ಗ್ರಂಥಮಹಾರ್ಣವವೆಂಬ ಇನ್ನೊಂದು ಉದ್ಗ್ರಂಥವನ್ನೂ ಬರೆದಿದ್ದಾನೆ.

ಭರತಭಾಷ್ಯದ ಪುಟಪುಟದಲ್ಲಿಯೂ ಕರ್ನಾಟಕದ ಸಂಗೀತ ಮತ್ತು ಸಂಸ್ಕೃತಿಗಳ ನೆರಳು ಸ್ಪಷ್ಟವಾಗಿ ಕಾಣುತ್ತದೆ. ಅದರಲ್ಲಿ ಪಾಣಿನಿ, ಅಪಿಶಲಿ, ಭರತ, ತುಂಬುರು, ಕಾಶ್ಯಪ, ಬೃಹತ್‌ಕಾಶ್ಯಪ, ಶಾತಾತಪ, ವಿಶಾಖಿಲ, ಯಾಷ್ಟಿಕ, ದತ್ತಿಲ, ಅಭಿವನಗುಪ್ತ, ಆಸ್ತಿಕ, ಛತ್ರಕ, ಕಾಲಿಕಾಪುರಾಣ ಮುಂತಾದ ಪ್ರಾಚೀನ ಪ್ರಾಮಾಣಿಕರ ಉಲ್ಲೇಖ, ಉದ್ಧೃತಿಗಳಿವೆ. ರಾಗಾಧ್ಯಾಯದಲ್ಲಿ ಮತಂಗನಿಂದ ಮತ್ತು ಬೃಹದ್ದೇಶಿಯಿಂದ ಮಾಡಿಕೊಂಡ ಉದ್ಧೃತಿಗಳಿಗೆ ಸಿಂಹಪಾಲಿದೆ. ಇಂತಹ ೪೭ ಉದ್ಧೃತಿಗಳನ್ನು ಬೃಹದ್ದೇಶಿಯ ರಾಗಾಧ್ಯಾಯದಲ್ಲಿಯೂ ಆರನ್ನು ವಾದ್ಯಾಧ್ಯಾಯದಲ್ಲಿಯೂ ಪ್ರಕೃತ ವಿಮರ್ಶಾತ್ಮಕ ಪೀಠಿಕೆಯಲ್ಲಿ. (ಪು. ೨-೯, ೧೦೫-೧೦೮) ಗಮನಿಸಲಾಗಿದೆ.

iv. ಹರಿಪಾಲದೇವ

ಹರಿಪಾಲದೇವನು ಪಶ್ಚಿಮ (ಗೂರ್ಜರ) ಚೌಳುಕ್ಯರ ವಂಶದವನು; ಮೊದಲನೆಯ ಭೀಮರಾಜ ಮತ್ತು ಬಕುಳಾದೇವಿಯರ ಮಗ. ಅವನಿಗೆ ಕ್ಷೇಮರಾಜನೆಂಬ ಹೆಸರೂ ಇತ್ತು. ಅವನು ಸನಾತನಧರ್ಮ, ಕಲೆ ಮತ್ತು ಸಂಸ್ಕೃತಿಗಳಲ್ಲಿ ಬಹಳವಾಗಿ ನಿಷ್ಠನಾಗಿದ್ದನು. ತನ್ನ ತಂದೆಯು ಇನ್ನೊಬ್ಬ ರಾಣಿಯಾದ ಉದಯಮತಿಯಲ್ಲಿ ಜನಿಸಿದ ಕರ್ಣನಿಗೆ ಸಾರಸ್ವತಮಂಡಲದ ಆಳ್ವಿಕೆಯನ್ನು ವಹಿಸಿಕೊಡಲು ಅನುವಾಗುವಂತೆ ತಾನು ರಾಜ್ಯಾಧಿಕಾರವನ್ನು ತ್ಯಾಗಮಾಡಿ ತನ್ನ ಮಗ ದೇವಪ್ರಸಾದನೊಡನೆ ದಧಿಸ್ಥಲಿಯಲ್ಲಿ ನೆಲೆಸಿದನು. ಇದು ಮೇರುತುಂಗನ ಪ್ರಬಂಧಚಿಂತಾಮಣಿಯಿಂದ (ಪ್ರಬಂಧ ೫೩-೭೭) ತಿಳಿದಬರುತ್ತದೆ. ಹರಿಪಾಲನು ಕ್ರಿ.ಶ. ಹನ್ನೊಂದನೆಯ ಶತಮಾನದ ಕೊನೆಯ ಮೂರು ಪಾದಗಳಲ್ಲಿ ಬಾಳಿ ತನ್ನ ವಂಶಜರಂತೆ ಜೈನಧರ್ಮದ ಪೋಷಕನಾಗುವುದರ ಬದಲು ಸನಾತನ ವೈದಿಕ ಧರ್ಮನಿರತನಾಗಿದ್ದನು.

ಹರಿಪಾಲನು ಗೀತವಾದನ ನೃತ್ತಗಳಲ್ಲಿ ಪಂಡಿತನಾಗಿದ್ದವನು. ನೃತ್ತಶಾಸ್ತ್ರದಲ್ಲಿ ವಿಶೇಷವಾದ ಒಲವಿದ್ದವನು. ಅವನು ವೀಣಾತಂತ್ರೀವಿಶಾರದ, ವಿಚಾರಚತುರಾನನ, ವಿಚಾರಪರಮೇಷ್ಠಿ ಎಂಬ ಬಿರುದುಗಳನ್ನು ವಹಿಸಿ ಷಡ್ಭಾಷಾವಿದ್ವಾಂಸನೂ ಮತ್ತು ಅಲಂಕಾರ, ಛಂದಶಾಸ್ತ್ರಗಳಲ್ಲಿ ಕೋವಿದನೂ ಆಗಿದ್ದನು. ಇವನ ಕಾಲದ ಹಿಂದೆ ಸುಮಾರು ೨೦೦ ವರ್ಷಗಳಿಂದಲೂ ಸಾಮಾಜಿಕ, ರಾಜಕೀಯ, ಐತಿಹಾಸಿಕ, ಸಾಂಸ್ಕೃತಿಕ ಇತ್ಯಾದಿ ಸಮಸಾಮಯಿಕ ವಿಷಯಗಳನ್ನೊಳಗೊಂಡ ಗಾಥೆಗಳನ್ನು ಪ್ರಬಂಧಗಳೆಂಬ ಹೆಸರಿನಲ್ಲಿ ರಚಿಸುವ ರೂಢಿಯಿತ್ತು. ಹರಿಪಾಲನು ಇಂತಹ ನೂರು ಪ್ರಬಂಧಗಳನ್ನು ತಾನು ರಚಿಸಿರುವುದಾಗಿ ಹೇಳಿಕೊಂಡಿದ್ದಾನೆ. ತಾನು ದಕ್ಷಿಣಭಾರತದಲ್ಲಿ ತೀರ್ಥಯಾತ್ರೆಯನ್ನು ಕೈಗೊಂಡಿದ್ದಾಗ ತಮಿಳುನಾಡಿನ ಶ್ರೀರಂಗದಲ್ಲಿ ನೃತ್ತಕಲಾವಿದರು ಕೇಳಿಕೊಂಡ ಮೇರೆಗೆ ಸಂಗೀತಸುಧಾಕರವನ್ನು ರಚಿಸಿದೆನೆಂದು ಗ್ರಂಥೋತ್ಪತ್ತಿಯ ಸಂದರ್ಭವನ್ನು ವಿವರಿಸಿದ್ದಾನೆ. ಅದರಲ್ಲಿ ನೃತ್ತ, ತಾಲ, ವಾದ್ಯ, ನಾಟ್ಯ ಮತ್ತು ಗೀತೆಗಳನ್ನು (ಈ ಅನುಕ್ರಮವು ಗಮನಾರ್ಹವಾಗಿದೆ) ಕ್ರಮವಾಗಿ ನಿರೂಪಿಸುವ ಐದು ಅಧಿಕರಣಗಳು ಒಟ್ಟು ೧೭೬೮ ಶ್ಲೋಕಗಳನ್ನು ಒಳಗೊಂಡಿವೆ; ಪ್ರತಿಯೊಂದು ಅಧಿಕರಣದಲ್ಲೂ ಅನೇಕ ಹೊಸ ಸಂಗತಿಗಳನ್ನು ನಿರೂಪಿಸಿದೆ. ಹರಿಪಾಲನು ಪೂರ್ವಾಚಾರ್ಯರನ್ನು ಸ್ಮರಿಸುವುದು ಅತ್ಯಲ್ಪ. ಅವರುಗಳ ಪೈಕಿ ಮತಂಗನನ್ನು ಮೂರ್ಛನಾಲಕ್ಷಣ ಮತ್ತು ಗೌಡರಾಗಗಳು ಮೂರು ಎಂಬಲ್ಲಿ ಉಲ್ಲೇಖಿಸಿದ್ದಾನೆ. ಸಂಗೀತಸುಧಾಕರವು ಈವರೆಗೆ ಅಪ್ರಕಟಿತವಾಗಿದ್ದು ಅದರ ವಿಮರ್ಶಾತ್ಮಕ ಸಂಪಾದನ ಮತ್ತು ಅನುವಾದಗಳನ್ನು ಪ್ರಕೃತ ಲೇಖಕನು ಅಚ್ಚಿಗೆ ಸಿದ್ಧಪಡಿಸಿದ್ದಾನೆ.

v. ಜಗದೇಕಮಲ್ಲ

ಇಮ್ಮಡಿ ಜಗದೇಕಮಲ್ಲನು ಚಾಳುಕ್ಯ ಸರ್ವಜ್ಞ ಮುಮ್ಮಡಿ ಸೋಮೇಶ್ವರ ಮತ್ತು ಎಕ್ಕಲದೇವಿಯರ ಹಿರಿಯ ಮಗ; ಅವನ ತಮ್ಮನು ಮುಮ್ಮಡಿ ತೈಲಪ ಅಥವಾ ತ್ರೈಲೋಕ್ಯಮಲ್ಲ. ಜಗದೇಕಮಲ್ಲನು ಪಶ್ಚಿಮಚಾಳುಕ್ಯರಾಜವಂಶದ ಒಂಭತ್ತನೆಯ ದೊರೆಯಾಗಿ ಕಲ್ಯಾಣರಾಜಧಾನಿಯಲ್ಲಿ ಕ್ರಿ.ಶ. ೧೧೩೯ ರಿಂದ ೧೧೪೯ರವರೆಗೆ ಆಳಿದನು. ಸರ್ವಜ್ಞಸೋಮೇಶ್ವರನು ಅಭಿಲಷಿತಾರ್ಥ ಚಿಂತಾಮಣಿ (ಅಥವಾ ರಾಜಮಾನಸೋಲ್ಲಾಸ) ಎಂಬ ವಿಶ್ವಕೋಶಗ್ರಂಥವನ್ನು ರಚಿಸಿ ಅದರ ನಾಲ್ಕನೆಯ ವಿನೋದವಿಂಶತಿಯಲ್ಲಿ ೫೬೭ ಶ್ಲೋಕಗಳಲ್ಲಿ ಗೀತವನ್ನೂ ೩೦೦ ಶ್ಲೋಕಗಳಲ್ಲಿ ವಾದ್ಯವನ್ನೂ (೧೧೨ ಶ್ಲೋಕಗಳಲ್ಲಿ ತಾಳವನ್ನೂ) ೫೫೭ ಶ್ಲೋಕಗಳಲ್ಲಿ ನೃತ್ಯವನ್ನೂ, – ಹೀಗೆ ಒಟ್ಟು ೧೪೩೨ ಶ್ಲೋಕಗಳಲ್ಲಿ ಸಂಗೀತವಿನೋದವನ್ನು ವರ್ಣಿಸಿದ್ದಾನೆ.

ಜಗದೇಕಮಲ್ಲನ ಜನ್ಮನಾಮವು ತಿಳಿಯದು. ಅವನ ಶಾಸನಗಳಲ್ಲೂ ಇತರ ಉಲ್ಲೇಖಗಳಲ್ಲೂ ಜಗದೇಕಮಲ್ಲ, ಪೆರ್ಮ, ಪ್ರತಾಪಪೃಥ್ವೀಭುಜ ಎಂಬ ಬಿರುದುಗಳೇ ಕಂಡುಬರುತ್ತವೆ. ಸೋಮೇಶ್ವರನ ಮರಣಾನಂತರದಲ್ಲಿ ಹೊಯ್ಸಳ ವಿಷ್ಣುವರ್ಧನನು ಹಾನುಗಲ್ಲು, ಬಂಕಾಪುರ ಮತ್ತು ಲಕ್ಕುಂಡಿಗಳನ್ನು ಗೆದ್ದು ಆಕ್ರಮಿಸಿಕೊಂಡಿದ್ದನು. ಜಗದೇಕಮಲ್ಲನು ಅವನನ್ನು ಯುದ್ಧದಲ್ಲಿ ಸೋಲಿಸಿ ಅವುಗಳನ್ನು ಪುನಃ ವಶಪಡಿಸಿಕೊಂಡನು. ಅವನು ಸಂಗೀತಚೂಡಾಮಣಿಯೆಂಬ ಪ್ರೌಢಗ್ರಂಥವನ್ನು ಐದು ಅಧ್ಯಾಯಗಳಲ್ಲಿ ರಚಿಸಿದ್ದಾನೆ. ಇವುಗಳ ಪೈಕಿ ಪ್ರಬಂಧ, ತಾಳ, ರಾಗಗಳನ್ನು ಕುರಿತ ಅಧ್ಯಾಯಗಳು ಪೂರ್ತಿಯಾಗಿಯೂ ನೃತ್ತಾಧ್ಯಾಯವು ಅಸಮಗ್ರವಾಗಿಯೂ ದೊರೆತಿವೆ. ಇವನು ಪ್ರಬಂಧವರ್ಣನೆಯಲ್ಲಿ ಪ್ರಾಮಾಣಿಕನೆಂದು ವಿಶೇಷವಾಗಿ ಪ್ರಸಿದ್ಧನಾಗಿದ್ದಾನೆ. ಶಾರ್ಙ್ಗದೇವನು ಇವನನ್ನು ಪೂರ್ವಾಚಾರ್ಯರ ಪಟ್ಟಿಯಲ್ಲಿ ಸೇರಿಸಿ ಗೌರವಿಸಿದ್ದಾನೆ. ಜಗದೇಕಮಲ್ಲನು ಮತಂಗನನ್ನು ಪ್ರಾಮಾಣಿಕರ ಪಟ್ಟಿಯಲ್ಲಿ ಸೇರಿಸಿ ಪಂಚವಿಧನಾದಗಳು, ಭಾಷಾರಾಗಗಳ ಸಂಖ್ಯೆ, ಅಭೀರೀ ಮತ್ತು ಸೌರಾಷ್ಟ್ರೀರಾಗಗಳ ಲಕ್ಷಣಗಳು, ವೃತ್ತಗಂಧಿಗದ್ಯ, ಏಲಾವಿಧಗಳು, ಕರ್ಣಾಟೈಲಾ, ಗಣೈಲಾ ಚತುಷ್ಟಯ, ಢೆಂಕೀ ಮತ್ತು ಹರವಿಲಾಸಪ್ರಬಂಧಲಕ್ಷಣಗಳು – ಇವುಗಳಿಗಾಗಿ ಅವನನ್ನು ಆಶ್ರಯಿಸಿದ್ದಾನೆ.

vi. ಪಾರ್ಶ್ವದೇವ

ಪಾರ್ಶ್ವದೇವನು ಸಂಗೀತಸಮಯಸಾರವನ್ನು ರಚಿಸಿದ್ದಾನೆ. ಅವನು ಜೈನಮತಾನುಯಾಯಿ, ಬಹುಶಃ ದಿಗಂಬರಪಂಥದವನು. ಅವನ ತಂದೆ ಆದಿನಾಥ ಮತ್ತು ತಾಯಿಯು ಕಲಾಗೌರೀ. ಅವನ ಆಧ್ಯಾತ್ಮಗುರುವು ಮಹಾದೇವ ಮತ್ತು ಪರಮಗುರುವು ಅಭಯಚಂದ್ರಮುನಿ. ಸಂಗೀತನೃತ್ಯಗಳಲ್ಲಿ ಗುರುವು ಅಭಿನವಭರತಾಚಾರ್ಯ, ಸರವಿಮಲ ಹೆಮ್ಮಣಾರ್ಯ, (ಅಥವಾ ಹೇಮಣ್ಣಯ್ಯ; ಇದು ಕನ್ನಡದ ಹೆಸರೆಂಬುದನ್ನು ಗಮನಿಸಬೇಕು). ಅವನು ತನ್ನನ್ನು ನಾನಾ ರಾಜಸಭೆಗಳ ರಸಿಕರಿಂದ ಸ್ತುತ್ಯನಾದವನು, ಶ್ರತಿಜ್ಞಾನಚಕ್ರವರ್ತಿ, ರಸಭಾವಭೇದನಿಪುಣ, ಸಮ್ಯಕ್ತ್ವಚೂಡಾಮಣಿ, ಸಾಹಿತ್ಯ ವಿದ್ಯಾಪತಿ, ಸಂಗೀತಾಕರ, ಭರತಭಾಂಡಿಕಭಾಷಾಪ್ರವೀಣ ಎಂದು ವರ್ಣಿಸಿಕೊಂಡಿದ್ದಾನೆ ಇವನ ಕಾಲವು ೧೧೪೯-೧೩೩೦ರ ನಡುವೆ, ಬಹುಶಃ ೧೩ನೆಯ ಶತಮಾನದಲ್ಲಿ ಇರಬಹುದು. ಏಕೆಂದರೆ ಅವನು ಪ್ರತಾಪಪೃಥ್ವೀಪತಿ(=ಜಗದೇಕ)ಮಲ್ಲಯನ್ನು (ಕ್ರಿ.ಶ.೧೧೩೯-೧೧೪೯) ಸ್ಮರಿಸುತ್ತಾನೆ ಮತ್ತು ಸಿಂಹಭೂಪಾಲನಿಂದ (ಕ್ರಿ.ಶ.ಸು.೧೩೩೦) ಸ್ಮೃತನಾಗಿದ್ದಾನೆ. ಪಾರ್ಶ್ವದೇವನು ಪರಮರ್ದೀರಾಜನನ್ನು ಪ್ರಬಂಧಾಧ್ಯಾಯದಲ್ಲಿ (೪.೬., ಪು.೨೪) ಒಮ್ಮೆ ಸ್ಮರಿಸುತ್ತಾನೆ. ಈ ರಾಜನನ್ನು ಶಾರ್ಙ್ಗದೇವನೂ ಪೂರ್ವಾಚಾರ್ಯನೆಂದು ಪುರಸ್ಕರಿಸಿ ಗೌರವಿಸಿದ್ದಾನೆ. ಇವನು ಚಾಂಡೇಲ ರಾಜವಂಶದಿದೇ ಹೆಸರಿನ ದೊರೆಯಾಗಿದ್ದರೆ ಇವನ ಆಳ್ವಿಕೆಯ ಕಾಲವು. ಕ್ರಿ.ಶ. ೧೧೬೫ ರಿಂದ ೧೨೦೩ರವರೆಗೆ ಎಂದು ಸಿದ್ಧಪಟ್ಟಿದೆ. ಈ ಊಹೆಯು ಸರಿಯಾಗಿದ್ದರೆ ಸಂಗೀತಸಮಯಸಾರದ ರಚನಾಕಾಲವು ಕ್ರಿ.ಶ. ಸುಮಾರು ೧೨೫೦ರಷ್ಟಾಗುತ್ತದೆ, ಪಾರ್ಶ್ವದೇವನು ಶಾರ್ಙ್ಗದೇವನ ಸಮಕಾಲೀನನೆಂದಾಗುತ್ತದೆ. ಅವನು ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ, ಎಂದರೆ ಕುಂತಳದೇಶದಲ್ಲಿ ಇದ್ದನೆಂಬುದು ಸಂಭಾವ್ಯವಾಗಿದೆ.

ಜೈನದರ್ಶನದಲ್ಲಿ ಸಮಯವೆಂದರೆ ಒಂದು ಪರಮಾಣುವು ಲೋಕಾಕಾಶದಲ್ಲಿ ಒಂದೆಡೆಯಿಂದ ಅದಕ್ಕೆ ಹೊಂದಿಕೊಂಡ ಇನ್ನೊಂದೆಡೆಗೆ ಮಂದಗತಿಯಲ್ಲಿ, ಚಲಿಸುವುದಕ್ಕೆ ಬೇಕಾಗುವ ಕಾಲಾವಧಿ ಎಂಬ ಅರ್ಥವಿದೆ. ಆದರೆ ಇದಕ್ಕಿಂತ ಸಮಯಶಬ್ದಕ್ಕೆ ಆಚರಣೆ (ಲಕ್ಷ್ಯ=ಪ್ರಯೋಗ), ಸಂಪ್ರದಾಯ, ನಿಯಮ, ಕಟ್ಟಳೆ, ವ್ಯವಹಾರ, ರೂಢಿ ಎಂಬ ಅರ್ಥಗಳೇ ಇಲ್ಲಿ ಹೆಚ್ಚು ಪ್ರಾಶಸ್ತವಾಗಿವೆ. ಆದುದರಿಂದ ಸಂಗೀತಸಮಯವೆಂದರೆ ಸಂಗೀತದ ಸಂಪ್ರದಾಯ, ಲಕ್ಷ್ಯ, ಪದ್ಧತಿ, ಶಾಸ್ತ್ರ (=ನಿಯ) ಎಂಬ ಅರ್ಥವು ಹೊರಡುತ್ತದೆ. ಸಂಗೀತಸಮಯಸಾರವು ಶ್ರುತಿ-ಸ್ವರ-ಗ್ರಾಮ-ಜಾತಿ (೧) ದೇಶೀ (೨) ಆಲಪ್ತಿ ಠಾಯ (೩) ದೇಶೀರಾಗ (೪)ಪ್ರಬಂಧ (೫) ವಾದ್ಯ (೬) ನೃತ್ಯ (೭) ತಾಲಲಕ್ಷಣ, ದೇಶೀತಾಲಗಳು (೮) ವಾದನಿರ್ಣಯ (ಪ್ರಕೀರ್ಣಕ) (೯) ಕಾಂಸ್ಯತಾಲ, ತಾಲಪ್ರಾಣ, ತಾಲಪ್ರತ್ಯಯ (೧೦) ಎಂಬ ಹತ್ತು ಅಧಿಕರಣಗಳಲ್ಲಿ ಸುಮಾರು ೧೨೦೦ ಶ್ಲೋಕಗಳನ್ನೂ, ೨, ೩, ೪, ೬, ೭ನೆಯ ಅಧಿಕರಣಗಳಲ್ಲಿ ಗದ್ಯಖಂಡಗಳನ್ನೂ ಒಳಗೊಂಡಿದೆ.ಭರತ, ದತ್ತಿಲ, ಮತಂಗ, ತುಂಬುರು, ಕಾಶ್ಯಪ, ಹನುಮಾನ್, ಭೋಜ, ಪರಮರ್ಧೀ, ಸೋಮೇಶ್ವರ, ಪ್ರತಾಪಪೃಥ್ವೀಭುಜ(=ಜಗದೇಕಮಲ್ಲ)ರ ಪ್ರಾಮಾಣ್ಯಗಳನ್ನು ಗ್ರಂಥವು ಉಲ್ಲೇಖಿಸುತ್ತದೆ. ಸಂಗೀತಸಮಯಸಾರವು ಪ್ರತಾಪಪೃಥ್ವೀಪತಿಯ ಹೆಸರನ್ನು ಹೇಳಿಯೂ ಹೇಳದೆಯೂ ಸಂಗೀತಚೂಡಾಮಣಿಯಿಂದ ಗಣನೀಯವಾಗಿ ಉದ್ದರಿಸಿಕೊಳ್ಳುತ್ತದೆ. ದಿಗಂಬರ ಸೂರಿಯೆಂಬ (ಅನ್ಯತ್ರ ದೊರೆಯದಿರುವ) ಸಂಗೀತಶಾಸ್ತ್ರ ಕೋವಿದನನ್ನು ಸಂದಂಶವೆಂಬ ಗಾಯಕ (೬.೫೦, ಪು.೬೦), ಕೇಶಬಂಧವೆಂಬ ಸಂಯುತ್ತಹಸ್ತ (೬-೮೭, ಪು.೬೩), ದಂಡಪಕ್ಷವೆಂಬ ಸಂಯುತಹಸ್ತ (೬.೯೩, ಪು.೬೩), ಲಕ್ಷಣಗಳಲ್ಲಿ ಉಲ್ಲೇಖಿಸುತ್ತದೆ.

ಪಾರ್ಶ್ವದೇವನು ಮತಂಗನನ್ನು ಪೂರ್ವಾಚಾರ್ಯರಲ್ಲಿ ಒಬ್ಬನೆಂದೂ, ಪಂಚವಿಧನಾದಗಳು, ರಾಗದ ಸಾಮಾನ್ಯ ಮತ್ತು ವಿಶೇಷವೆಂಬ ದ್ವಿವಿಧಲಕ್ಷಣ, ರಾಗದ ಅಂಶಲಕ್ಷಣ, ರಾಗದ ದಶಲಕ್ಷಣ ಇವುಗಳಲ್ಲಿ ಪ್ರಾಮಾಣಿಕನೆಂದೂ ಉಲ್ಲೇಖಿಸುತ್ತಾನೆ. ಸಂಗೀತಸಮಯಸಾರದ ವಿಮರ್ಶಾತ್ಮಕ ಸಂಪಾದನವನ್ನು ಪ್ರಕೃತ ಲೇಖಕನು ಸಿದ್ಧಪಡಿಸುತ್ತಿದ್ದಾನೆ.

vii. ಶಾರ್ಙ್ಗದೇವ

ಅವನದ್ಯಾವಿದ್ಯಾವಿನೋದನೆಂದೂ ನಿಃಶಂಕನೆಂದೂ ಅನ್ವರ್ಥಬಿರುದಗಳನ್ನುಳ್ಳ ಶ್ರೀಶಾರ್ಙ್ಗದೇವನು ಸಂಗೀತನೃತ್ತಶಾಸ್ತ್ರಗಳಲ್ಲಿ ಅತ್ಯಂತಪ್ರಭಾವಶಾಲಿಯಾದ ಪ್ರಾಮಾಣಿಕ. ಅವನು ಸೋಢಲದೇವನ ಮಗ, ಭಾಸ್ಕರನ ಮೊಮ್ಮಗ; ಭಾಸ್ಕರನು ಕಾಶ್ಮೀರದಿಂದ ವಲಸೆಬಂದು ಯಾದವಪ್ರಭುವಾದ ಐದನೆಯ ಬಿಲ್ಲಮನ ಆಸ್ಥಾನದಲ್ಲಿ ಆಯುರ್ವೇದ ವಿಶಾರದನೂ ರಾಜವೈದ್ಯನೂ ಆಗಿದ್ದು ಮಾಂಡಲಿಕಪಿತಾಮಹನೆಂಬ ಬಿರುದನ್ನು ಗಳಿಸಿದ್ದನು. ಶಾರ್ಙ್ಗದೇವನು ಯಾದವ ದೊರೆಯಾದ ಸಿಂಘಣನಲ್ಲಿ ಶ್ರೀಕರಣಾಗ್ರಣಾಗ್ರಣಿ (=ಕಂದಾಯದ ಮಂತ್ರಿ ? ಲೆಕ್ಕಪತ್ರಗಳ ಅಧಿಕಾರಿ = ಆಡಿಟರ್ ಜನರಲ್?)ಯಾಗಿದ್ದನು. ಅನೇಕ ಶಾಸ್ತ್ರಗಳಲ್ಲಿ ಪಾರಂಗತನಾಗಿದ್ದವನು ಯೋಗಶಾಸ್ತ್ರದಲ್ಲಿ ಅಧ್ಯಾತ್ಮವಿವೇಕವೆಂಬ ಉದ್‌ಗ್ರಂಥವನ್ನು ರಚಿಸಿದ್ದಾನೆ. ಅವನು ಛಂದೋವಿಚಿತಿಯೆಂಬ ಛಂಧಃಶಾಸ್ತ್ರಗ್ರಂಥವನ್ನು ಬರೆದಿದ್ದಾನೆಂದು ಅವನ ವ್ಯಾಖ್ಯಾನಕಾರನಾದ ಸಿಂಹಭೂಪಾಲನು ಹೇಳು‌ತ್ತಾನೆ; ಆದರೆ ಶಾರ್ಙ್ಗದೇವನು ಇಲ್ಲಿ ಭರತಮುನಿಯ ನಾಟ್ಯಶಾಸ್ತ್ರದಲ್ಲಿ ಛಂದೋವಿಚಿತಿಯೆಂಬ ಹದಿನೈದನೆಯ ಅಧ್ಯಾಯವನ್ನು ಸೂಚಿಸಿರುವುದರ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಶಾರ್ಙ್ಗದೇವನು ಮುಖ್ಯವಾಗಿ ಪ್ರಸಿದ್ಧನಾಗಿರುವುದುಅವನ ಸಂಗೀತರತ್ನಾಕರಕ್ಕಾಗಿ. ಸಂಸ್ಕೃತ ವ್ಯಾಕರಣದಲ್ಲಿ ಪಾಣಿನಿಯ ಅಷ್ಟಾಧ್ಯಾಯಿಯಂತೆ ಸಂಗೀತದಲ್ಲಿ ಇದು ಸಪ್ತಾಧ್ಯಾಯಿಯೆಂದು ವಿಖ್ಯಾತವಾಗಿದೆ. ಅದು ಸ್ವರಗತಾಧ್ಯಾಯದಲ್ಲಿ ೫೭೦, ರಾಗವಿವೇಕಾಧ್ಯಾಯದಲ್ಲಿ ೨೪೧, ಪ್ರಕೀರ್ಣಕಾಧ್ಯಾಯದಲ್ಲಿ ೨೨೩, ಪ್ರಬಂಧಾಧ್ಯಾಯದಲ್ಲಿ ೪೦೮, ವಾದ್ಯಾಧ್ಯಾಯದಲ್ಲಿ ೧೨೧೯ ಮತ್ತು ನರ್ತನಾಧ್ಯಾಯದಲ್ಲಿ ೧೬೭೮ – ಹೀಗೆ ಒಟ್ಟು ೪೭೧೯ ಶ್ಲೋಕಗಳಲ್ಲಿ ರಚಿತವಾಗಿದೆ. ಇದರಲ್ಲಿ ಒಂದೊಂದು ಮಾತೂ ತುಂಬಾ ಸಂಕ್ಷೇಪವಾಗಿದ್ದು ಸೂತ್ರಪ್ರಾಯವಾಗಿದೆ. ಇದಕ್ಕೆ ಸಂಸ್ಕೃತ, ತೆಲುಗು ಮತ್ತು ಹಿಂದೀಗಳಲ್ಲಿ ಒಟ್ಟು ಏಳು ವ್ಯಾಖ್ಯಾನಗಳಿವೆಯೆಂದು ಹೇಳಲಾಗಿದ್ದರೂ ಸಿಂಹಭೂಪಾಲನ ಸಂಗೀತಸುಧಾಕರ ಮತ್ತು ಕಲ್ಲಿನಾಥನ ಸಂಗೀತಕಲಾನಿಧಿ ಎಂಬ ಸಂಸ್ಕೃತವ್ಯಾಖ್ಯಾನಗಳು ಮಾತ್ರ ಪ್ರಸಿದ್ಧವಾಗಿವೆ. ಶಾರ್ಙ್ಗದೇವನು ಸದಾಶಿವ, ಪಾರ್ವತಿ, ಬ್ರಹ್ಮ, ಭರತ, ಕಶ್ಯಪ, ಮತಂಗ, ಯಾಷ್ಟಿಕ, ದುರ್ಗಾಶಕ್ತಿ, ಶಾರ್ದೂಲ, ಕೋಹಲ, ವಿಶಾಖಿಲ, ದತ್ತಿಲ, ಕಂಬಲ, ಅಶ್ವತರ, ವಾಯು (ಪುರಾಣ), ವಿಶ್ವಾವಸು, ರಂಭಾ, ಅರ್ಜುನ, ನಾರದ, ತುಂಬುರು, ಆಂಜನೇಯ, ಮಾತೃಗುಪ್ತ, ರಾವಣ, ನಂದಿಕೇಶ್ವರ, ಸ್ವಾತಿ, ಗಣ, ಬಿಂದುರಾಜ, ಕ್ಷೇತ್ರರಾಜ, ರಾಹಲ, ರುದ್ರಟ, ನಾನ್ಯದೇವ, ಭೋಜ, ಪರಮರ್ದೀ, ಸೋಮೇಶ್ವರ, ಜಗದೇಕಮಲ್ಲ, ಭರತಮುನಿಯು ನಾಟ್ಯಶಾಸ್ತ್ರಕ್ಕೆ ವ್ಯಾಖ್ಯಾನಗಳನ್ನು ರಚಿಸಿರುವ ಉದ್ಭಟ, ಲೊಲ್ಲಟ, ಶಂಕುಕ, ಅಭಿನವಗುಪ್ತ, ಕೀರ್ತಿಧರ ಎಂಬ ಅನೇಕ ಪೂರ್ವಾಚಾರ್ಯರನ್ನೂ ಮಾರ್ಕಂಡೇಯಪುರಾಣ ಇತ್ಯಾದಿ ಪೌರಾಣಿಕ ಆಕರಗಳನ್ನೂ ಉಲ್ಲೇಖಿಸಿ, ಮತ್ತು ಈ ಪ್ರತಿಯೊಂದರ ಪ್ರಾಮಾಣ್ಯವನ್ನು ತನ್ನ ಗ್ರಂಥದಲ್ಲಿ ಬಳಸಿಕೊಂಡಿದ್ದಾನೆ. ಕೊನೆಯ ಆರು ಅಧ್ಯಾಯಗಳಲ್ಲಿ, ದೇಶೀ ಮತ್ತು ಮಾರ್ಗಪದ್ಧತಿಗಳೆರಡನ್ನೂ ಸಮಸಮವಾಗಿ ನಿರೂಪಿಸುತ್ತ ನಡೆಯುತ್ತಾನೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಇದು ಗೀತವಾದ್ಯನೃತ್ತಗಳಿಗೆ ಒಂದು ವಿಶ್ವಕೋಶ ಶಾಸ್ತ್ರಗ್ರಂಥಗಳಿಗೆ ಮಾದರಿ, ಶಾರ್ಙ್ಗದೇವನು ಮತಂಗನನ್ನು ಭಾಷಾರಾಗನಿರೂಪಣೆಯಲ್ಲಿ (ಇದೇ ಸಂದರ್ಭದಲ್ಲಿ, ಬೃಹದ್ದೇಶಿಯನ್ನು), ದ್ವಿತೀಯ ಲಲಿತಾ ರಾಗಲಕ್ಷಣಕ್ಕೂ ಗ್ರಾಮರಾಗಜನ್ಯ ಭಾಷಾರಾಗಗಳ ಪಟ್ಟಿಯಲ್ಲಿಯೂ ಏಲಾಸಾಮಾನ್ಯ ಲಕ್ಷಣ, ವರ್ಣೈಲಾಗಳು, ವಂಶವಾದನದಲ್ಲಿ ರಸಪ್ರತೀತಿ ಮತ್ತು ರುಂಜಾವಾದ್ಯ ಲಕ್ಷಣ ಇವುಗಳಲ್ಲೂ ಪ್ರಾಮಾಣಿಕನನ್ನಾಗಿ ಸ್ವೀಕರಿಸಿದ್ದಾನೆ.ಸ

viii. ಜಾಯಸೇನಾಪತಿ

ಜಾಯ, ಜಾಯನ ಅಥವಾ ಜಯಸೇನಾಪತಿಯು ಆಂಧ್ರ, ವೆಲನಾಡು ಜಾತಿಯ ಅಯ್ಯ ಎಂಬ ಮನೆತನದವನಾದ ಪಿನಚೋಡಿಯ ಮಗ; ಪಿನಚೋಡಿಯು ಕೃಷ್ಣಾನದೀಮುಖದ ಪ್ರಾಂತದ ಒಡೆಯನಾಗಿದ್ದು, ಅವನನ್ನು ವಾರಂಗಲ್ಲಿನ ದೊರೆ ಕಾಕತೀಯ ಗಣಪತಿದೇವನು ಯುದ್ಧದಲ್ಲಿ ಗೆದ್ದು, ಅವನ ಇಬ್ಬರು ಹೆಣ್ಣುಮಕ್ಕಳನ್ನು ಮದುವೆಯಾಗಿ, ವೀರನಾದ ಜಾಯನನ್ನು ತನ್ನ ಪಾಲನೆಗೆ ಕ್ರಿ.ಶ. ೧೨೧೩ರಿಂದ ತೆಗೆದುಕೊಂಡು ತನ್ನ ಆಸ್ಥಾನವಿದ್ವಾಂಸಾಗಿದ್ದ ಗುಂಡಯಾಮಾತ್ಯೆನೆಂಬ ಬ್ರಾಹ್ಮಣಾಧಿಕಾರಿಯಿಂದ ವಿದ್ಯಾಭ್ಯಾಸವನ್ನು ಕೊಡಿಸಿದನು ಮತ್ತು ತನ್ನ ಗಜದಳದ ಅಧಿಪತಿಯನ್ನಾಗಿ ನೇಮಿಸಿದನು.ಜಾಯನನು ಗೀತವಾದ್ಯನೃತ್ತಗಳಲ್ಲಿ ಕೋವಿದನಾಗಿದ್ದು ನೃತ್ತರತ್ನಾವಳಿಯೆಂಬ ಮುಖ್ಯಶಾಸ್ತ್ರಗ್ರಂಥವನ್ನು ಕ್ರಿ.ಶ. ೧೨೫೪ರಲ್ಲಿ ಗಣಪತಿದೇವನ ಆಳ್ವಿಕೆಯಲ್ಲಿ ರಚಿಸಿದ್ದಾನೆ. ಅದರಲ್ಲಿ ತಾನು ಗೀತರತ್ನಾವಳಿಯನ್ನೂ ರಚಿಸಿರುವುದಾಗಿ ಸೂಚಿಸಿದ್ದಾನೆ. ಅಂತೆಯೇ ಅವನು ವಾದ್ಯರತ್ನಾವಳಿಯನ್ನೂ ರಚಿಸಿದ್ದಾನೆಂದು ಊಹಿಸಲಾಗಿದೆ.

ನೃತ್ತರತ್ನಾವಳಿಯು ಆಂಧ್ರಸಂಸ್ಕೃತಿಯ ಶ್ರೇಷ್ಠ ಕೊಡುಗೆ. ಅದು ಎಂಟು ಅಧ್ಯಾಯಗಳಲ್ಲಿ ರಚಿತವಾಗಿದ್ದು ಮೊದಲನೆಯ ನಾಲ್ಕು ಭರತಪ್ರಣೀತವಾದ ಮಾರ್ಗನೃತ್ತವನ್ನೂ ಉಳಿದ ನಾಲ್ಕು ದೇಶೀನೃತ್ತವನ್ನೂ ವರ್ಣಿಸುತ್ತವೆ. ಇವುಗಳ ಪೈಕಿ ಮೊದಲನೆಯ ಅಧ್ಯಾಯವು ನಾಟ್ಯಲಕ್ಷಣ, ಚತುರ್ವಿಧಾಭಿನಯ, ನೃತ್ತ, ನೃತ್ಯ, ಮಾರ್ಗ, ದೇಶೀ, ತಾಂಡವ ಮತ್ತು ಲಾಸ್ಯ-ಇವಗಳನ್ನೂ ಎರಡನೆಯದು ನೃತ್ತ-ನೃತ್ಯಗಳಿಗೆ ಆಂಗಿಕಾಭಿನಯದ ಅಂಗ – ಪ್ರತ್ಯಂಗ – ಉಪಾಂಗಗಳ ವಿಕ್ಷೇಪ ವಿಶೇಷಗಳನ್ನೂ ಅಸಂಯುತ-ಸಂಯುತ ಹಸ್ತಾಭಿನಯಗಳನ್ನೂ ವಿವರಿಸುತ್ತವೆ. ಮೂರನೆಯ ಅಧ್ಯಾಯದಲ್ಲಿ ಚಾರಿ, ಮಂಡಲ, ಪುರುಷಸ್ಥಾನಕ, ಸ್ತ್ರೀಸ್ಥಾನಕಗಳ ವರ್ಣನೆಯಿದೆ. ನಾಲ್ಕನೆಯದರಲ್ಲಿ ೧೦೮ ಕರಣಗಳ ಮತ್ತು ೩೨ ಅಂಗಹಾರಗಳ ನಿರೂಪಣೆಯಿದೆ. ಮುಂದಿನ ನಾಲ್ಕು ಅಧ್ಯಾಯಗಳಲ್ಲಿ ದೇಶೀನೃತ್ತದ ವಿವರಗಳಿವೆ. ಐದನೆಯ ಅಧ್ಯಾಯವು ಭರತೋತ್ತರಕಾಲದ ಸ್ಥಾನಕ, ಕರಣ, ಭ್ರಮರೀಗಳ ದೇಶೀಪ್ರಕಾರಗಳನ್ನೂ ಆರನೆಯದು ಇದನ್ನೇ ಮುಂದುವರೆಸಿ ಪಾದಭೇದಗಳು, ದೇಶೀಚಾರಿಗಳು ಮತ್ತು ದೇಶೀಲಾಸ್ಯಾಂಗಗಳನ್ನೂ ವಿವರಿಸುತ್ತದೆ. ಏಳನೆಯದರ ಪೂರ್ವಾರ್ಧವು ನೃತ್ತಶಿಕ್ಷಣಾರಂಭಕ್ಕೆ ಪ್ರಶಸ್ತವಾದ ತಿಥಿ, ನಕ್ಷತ್ರಗಳು, ರಂಗ, ಪೂರ್ವರಂಗ, ಶಿಕ್ಷಾಪದ್ಧತಿ, ನೃತ್ತಯೋಗ್ಯಶಿಕ್ಷಾರ್ಥಿಗಳು, ಉಡುಗೆತೊಡುಗೆಗಳು, ಶಿಕ್ಷಾಸಮಯದಲ್ಲಿ ಉಪಯುಕ್ತವಾದ ಹಸ್ತಮುದ್ರೆಗಳು ಇತ್ಯಾದಿ ಪ್ರಕೀರ್ಣವಿಷಯಗಳನ್ನು ಒಳಗೊಂಡಿದೆ; ಅದರ ಉತ್ತರಾರ್ಧವು ಪೇರಣಿ, ಪ್ರೇಕ್ಷಣ, ಸೂಡ, ರಾಸ, ಚರ್ಚರೀ, ನಾಟ್ಯರಾಸ, ಶಿವಪ್ರಿಯ, ಚಿಂದು, ಕಂದುಕ, ಭಾಂಡಿಕ, ಘಟಿಸಾನಿ, ಚಾರಣ, ಬಹುರೂಪ, ಕೋಲಾಟ, ಗೊಂಡಲೀ ಎಂಬ ದೇಶೀ ನೃತ್ತಗಳನ್ನು ವರ್ಣಿಸುತ್ತದೆ; ಅಂತ್ಯಭಾಗದಲ್ಲಿ ನಾಟ್ಯರಂಗದ ವಿವರಗಳನ್ನು ನೀಡುತ್ತದೆ. ಎಂಟನೆಯ ಅಧ್ಯಾಯವು ಉಳಿದ ಸಾಮಾನ್ಯ ಪ್ರಕೀರ್ಣಕಾಂಶಗಳನ್ನು ನಿರೂಪಿಸುತ್ತದೆ. ಜಾಯನನು ಅನುತಂತ್ರ, ಅಭಿನವಗುಪ್ತ, ಕೀರ್ತಿಧರ, ಕೋಹಲ, (ತನ್ನದೇ ಗೀತರತ್ನಾವಳಿ), ತಂಡು, ಭಟ್ಟತಂಡು, ತುಂಬುರು, ಭರತ (=ಮುನಿ), ಶಂಕುಕ ಮತ್ತು ಸರ್ವಜ್ಞಸೋಮೇಶ್ವರ ಎಂಬ ಪೂರ್ವಾಚಾರ್ಯರಿಂದ ಪ್ರಮಾಣಗಳನ್ನು ಉಲ್ಲೇಖಿಸುತ್ತಾನೆ. ಇವುಗಳ ಪೈಕಿ ಮತಂಗನನ್ನು ಐದು ಸಲವೂ, ಬೃಹದ್ದೇಶಿಯನ್ನು ಎರಡು ಸಲವೂ ನೃತ್ತವಿಷಯಗಳಿಗಾಗಿ (ದೇಶೀ ನೃತ್ತೋಪಯುಕ್ತವಾದ ಭಂಗಿಗಳು, ಪಾಟಲಕ್ಷಣಗಳನ್ನು ಹೇಳಿದಮೇಲೆ ‘ವಿದ್ವಾಂಸರು ಸ್ವಬುದ್ಧಿಯಿಂದ ಇಂತಹ ಪಾಟಗಳನ್ನು ತಾವೇ ರಚಿಸಿಕೊಳ್ಳಬೇಕು’ ಎಂಬ ಮತಂಗೋಕ್ತಿ, ವಾದ್ಯಪದ್ಧತಿಯ ಶುದ್ಧಾ ಮತ್ತು ವಿಚಿತ್ರಾ ಎಂಬ ಎರಡು ವಿಧಗಳು, ಶುದ್ಧ ಪದ್ಧತಿಯ ವಿವರಗಳು) ಅವಲಂಬಿಸುತ್ತಾನೆ.

ix. ವೇಮಭೂಪಾಲ

ಪೆದ್ದಕೋಮಟಿ ವೇಮಭೂಪಾಲನು ಆಂಧ್ರದ ಕೊಂಡವೀಟಿನಗರದ ರೆಡ್ಡಿಜಾತಿಯ ರಾಜ, ಕ್ರಿ.ಶ. ಹದಿನೈದನೆಯ ಶತಮಾನದವನು (ಕ್ರಿ.ಶ.೧೪೦೨-೧೪೨೦). ಇವನಿಗೆ ಸರ್ವಜ್ಞ ಚಕ್ರವರ್ತಿ, ವೀರನಾರಾಯಣ ಎಂಬ ಬಿರುದುಗಳಿದ್ದವು. ಅವನು ಸಂಗೀತಚಿಂತಾಮಣಿ, ಸಾಹಿತ್ಯಚಿಂತಾಮಣಿ, ಅಮರುಶತಕದ ತೆಲುಗುವ್ಯಾಖ್ಯೆ ಗಾಥಾಸಪ್ತಶತಿಯ ನೂರು ಶ್ಲೋಕಗಳಿಗೆ ತೆಲುಗು ವ್ಯಾಖ್ಯೆ ಮುಂತಾದವುಗಳನ್ನು ರಚಿಸಿದ್ದಾನೆ. ಸಂಸ್ಕೃತ, ತೆಲುಗು ಮತ್ತು ಪ್ರಾಕೃತಕವಿಗಳಿಗೂ ವಿದ್ವಾಂಸರಿಗೂ ಆಶ್ರಯದಾತ. ಅವನ ದಿಗ್ವಿಜಯಪ್ರಶಂಸಾರೂಪವಾದ ವೀರನಾರಾಯಣಚರಿತವನ್ನು ಅವನ ಆಸ್ಥಾನ ಕವಿ ವಾಮನಭಟ್ಟಬಾಣನು ರಚಿಸಿದ್ದಾನೆ. ಪ್ರಸಿದ್ಧನಾದ ತೆಲುಗು ಕವಿ ಶ್ರೀನಾಥನು ಅವನ ಆಸ್ಥಾನಕ್ಕೆ ಬಂದು ವೇಮಭೂಪಾಲನನ್ನು ಹೊಗಳಿದ್ದಾನೆ.

ಸಂಗೀತಚಿಂತಾಮಣಿಯು ಗೀತ, ವಾದ್ಯ ಮತ್ತು ನೃತ್ತಗಳನ್ನು ಕುರಿತ ಮೂರು ಖಂಡಗಳಲ್ಲಿ ರಚಿತವಾಗಿದ್ದು ಇವುಗಳ ಪೈಕಿ ಕೊನೆಯ ಎರಡು ಮಾತ್ರ ದೊರೆಯುತ್ತವೆ. ಇವೆರಡೂ ಸುಮಾರು ೬೦೦೦ ಶ್ಲೋಕಗಳಷ್ಟು ವಿಸ್ತಾರವಾಗಿವೆ. ನಡುವೆ ಗೀತಖಂಡದ ಉಲ್ಲೇಖಗಳು ಇವೆ. ಉಪಲಬ್ಧ ಗ್ರಂಥವು ನೃತ್ತ, ತತ, ವಾದ್ಯ, ಮಾರ್ಗತಾಳ, ದೇಶೀತಾಳ, ಸುಷಿರ, ಅವನದ್ಧ, ಘನ ಎಂಬ ಅಧಿಕರಣಗಳನ್ನು ಒಳಗೊಂಡಿದೆ. ವೇಮಕೃತ ಸಂಗೀತಚಿಂತಾಮಣಿಯಷ್ಟೇ ಅಲ್ಲದೆ ಕಮಲ ಲೋಚನನು ರಚಿಸಿದ, ಅಜ್ಞಾತರ್ತೃಕವಾದ ಇದೇ ಹೆಸರಿನ ಗ್ರಂಥಗಳೂ ದೊರೆಯುತ್ತವೆ. ವೇಮಭೂಪಾಲನು ಮತಂಗನನ್ನು ಪಾಟಮಣಿಗಳಿಗಾಗಿ ಉಲ್ಲೇಖಿಸಿ ಉದ್ಧರಿಸಿಕೊಂಡಿದ್ದಾನೆ. ಇದು ಜಾಯನನು ಈ ವಿಷಯದಲ್ಲಿ ಮಾಡಿರುವ ಉದ್ಧೃತಿಯನ್ನು ಅವಲಂಬಿಸಿರುವುದು ಸಂಭವನೀಯವಾಗಿದೆ.

x. ಸಿಂಹಭೂಪಾಲ

ಸಿಂಹಭೂಪಾಲನು ಆಂಧ್ರಮಂಡಲವನ್ನು ಕ್ರಿ.ಶ. ಹದಿನಾಲ್ಕನೆಯ ಶತಮಾನದಲ್ಲಿ ಆಳಿದ ವಿದ್ವತ್‌ಪ್ರಭು ರೇಚೆರ್ಲವಂಶದ ನಾಯುಡು ಜಾತಿಯವನು. ಈ ರಾಜಸಂತತಿಯನ್ನು ಸ್ಥಾಪಿಸಿದವನು. ಖಡ್ಗನಾರಾಯಣನೆಂಬ ಬಿರುದನ್ನು ವಹಿಸಿದ ದಾಚಯ. ಇವನಿಗೆ ಸಿಂಗ (I), ವೆನ್ನಮನಾಯಕ, ರೇಚನೆಂಬ ಮೂವರು ಪುತ್ರರು. ದಾಚಯನ ನಂತರ ಸಿಂಗನು ರಾಜನಾದನು. ಅವನಿಗೆ ಅನಂತ(=ಅನ್ನಪೋತ) ಮತ್ತು ಮಾಧವ (=ಮಾದ) ಎಂಬಿಬ್ಬರು ಮಕ್ಕಳು. ಅನಂತ ಮತ್ತು ಅನ್ನಮಾಂಬೆಯರಿಗೆ ವೇದಗಿರೀಶ್ವರ ಮತ್‌ಉತ ಸಿಂಹ (=ಸಿಂಗ II) ಎಂಬುವರು ಮಕ್ಕಳು. ಈ ಇಮ್ಮಡಿಸಿಂಹಭೂಪಾಲನಿಗೆ ಅನ್ನಪೋತ, ಕುಮಾರ ದಾಚಯ (II), ವಲ್ಲಭರಾಯ ಮತ್ತಿತರ ಮೂವರು ಮಕ್ಕಳು. ಈ ಸಂತತಿಯವರಿಗೆ ವೆಂಕಟ(ಗಿರಿ) ರಾಜರೆಂದು ಹೆಸರು. ಅವರು ಶ್ರೀಶೈಲದಿಂದ ವಿಂಧ್ಯಪರ್ವತದ ಮಧ್ಯದೇಶದವರೆಗಿನ ಆಂಧ್ರದೇಶವನ್ನು ಆಳಿದರು. ಈ ನಾಡಿಗೆ ರಾಜಾಚಲವೆಂಬುದು ಪಾರಂಪರಿಕವಾದ ರಾಜಧಾನಿ.

ಸಿಂಹಭೂಪಾಲನಿಗೆ ಖಡ್ಗನಾರಾಯಣ, ಸರ್ವಜ್ಞ, ಭುಜಬಲಭೀಮ, ಪ್ರತಿಗಂಡ ಭೈರವ ಎಂಬ ಬಿರುದುಗಳಿದ್ದವು. ಅವನು ಚಮತ್ಕಾರಚಂದ್ರಿಕೆಯ ಕರ್ತೃ ವಿಶ್ವೇಶ್ವರನಂತಹ ವಿದ್ವಾಂಸಕವಿಗಳಿಗೆ ಆಶ್ರಯದಾತನಾಗಿದ್ದುದಲ್ಲದೆ ಸ್ವತಃ ಸಂಗೀತಸುಧಾಕರವೆಂಬ ಸಂಗೀತರತ್ನಾಕರ ವ್ಯಾಖ್ಯೆ. ಕುವಲಯಾವಲೀ ಅಥವಾ ರತ್ನಪಾಂಚಾಲಿಕಾ, ರಸಾರ್ಣವಸುಧಾಕರ, ಕಂದರ್ಪಸಂಭವವೆಂಬ ನಾಟಕ, ನಾಟಕಪರಿಭಾಷಾ (?) ಎಂಬ ಗ್ರಂಥಗಳನ್ನು ರಚಿಸಿದ್ದಾನೆ. ಅವನ ಎರಡು ಮುಖ್ಯಗ್ರಂಥಗಳಿಗೆ ಸುಧಾಕರವೆಂಬ ಹೆಸರನ್ನಿಟ್ಟಿರುವುದನ್ನು ಗಮನಿಸಬಹುದು. ಇದು ಅವನ ಜೀವನಕ್ಕೆ ಸಂಬಂಧಿಸಿದ ಯಾವುದೋ ಘಟನೆಯನ್ನೋ ಒಲವನ್ನೋ ಸೂಚಿಸುವುದು ಸಂಭಾವ್ಯವಾಗಿದೆ. ವಿಶ್ವೇಶ್ವರನು ಚಮತ್ಕಾರಚಂದ್ರಿಕೆಯ ಸಮಾಪ್ತಿವಾಕ್ಯವನ್ನು ‘ಶ್ರೀ ಸಿಂಹಭೂಪಾಲಕೀರ್ತಿಸುಧಾಸಾರ (-ಕರ?) ಶೀತಲಾಯಾಂ ಚಮತ್ಕಾರಚಂದ್ರಿಕಾಯಾಂ’ ಎಂದು ರಚಿಸಿದ್ದಾನೆ. ಸಿಂಹಭೂಪಾಲನು ಸಂಗೀತಸುಧಾಕರವನ್ನು ಕ್ರಿ.ಶ. ೧೩೩೦ ರ ಸುಮಾರಿನಲ್ಲಿಸ (ಎಂದರೆ ಮೂಲಗ್ರಂಥಕ್ಕೆ ಕೇವಲ ನೂರುವರ್ಷಗಳ ನಂತರದ) ಮತ್ತು ರಸಾರ್ಣವಸುಧಾಕರವನ್ನು ಕ್ರಿ.ಶ. ೧೩೩೨-೩ ರಲ್ಲಿ ರಚಿಸಿದ್ದಾನೆ. ಅನಪೋತಮಾಧವನಾಯಕನು ಶ್ರೀ.ಶ.೧೪೨೧ರಲ್ಲಿ ಬರೆಸಿರುವ ಶ್ರೀರಂಗಂ ತಾಮ್ರಪಟಶಾಸನವನ್ನು ಆಧರಿಸಿಕೊಂಡು ರಸಾರ್ಣವಸುಧಾಕರದ ರಚನೆಯು ಶ್ರೀ.ಶ. ೧೩೪೦ ರಿಂದ ೧೩೬೦ರ ಒಳಗೆ ಆಗಿರಬಹುದೆಂದು ಮವ.ಪಿ.ವಿ.ಕಾಣೆಯವರು (ಹಿಸ್ಟರಿ ಆಫ್ ಸಂಸ್ಕೃತ ಪೊಎಟಿಕ್ಸ್ ಪು.೪೩೩) ಊಹಿಸುತ್ತಾರೆ.

ರಸಾರ್ಣವಸುಧಾಕರವು ಪ್ರಸಿದ್ಧವಾದ ಅಲಂಕಾರಗ್ರಂಥ. ಇದು ನಾಟ್ಯಾಲಂಕಾರ ವಿಷಯಕವಾದದು, ಎಂಬುದು ಅದರ ಅಧ್ಯಾಯಸಮಾಪನ ವಾಕ್ಯಗಳಲ್ಲಿರುವ ‘- – – ರಸಾರ್ಣವ ಸುಧಾಕರನಾಮ್ನಿ ನಾಟ್ಯಾಲಂಕರೇ – – -‘ ಎಂಬ ಮಾತುಗಳಿಂದ ತಿಳಿಯುತ್ತೆದೆ. ಇದರಲ್ಲಿ ರಂಜಿಕೋಲ್ಲಾಸ, ರಸಿಕೋಲ್ಲಾಸ ಮತ್ತು ಭಾವೋಲ್ಲಾಸವೆಂಬ ಮೂರು ಉಲ್ಲಾಸಗಳಿವೆ. ಮೊದಲನೆಯ ಉಲ್ಲಾಸದಲ್ಲಿ ವಿಭಾವ, ಅನುಭಾವ, ಸಾತ್ತ್ವಿಕ ಭಾವಗಳ ಹಾಗೂ ಅವುಗಳ ಅವಾಂತರ ಭೇದಗಳ ಲಕ್ಷಣಗಳಿವೆ. ಎರಡನೆಯ ರಸಿಕೋಲ್ಲಾಸದಲ್ಲಿ ವ್ಯಭಿಚಾರಿಭಾವಗಳು, ಸ್ಥಾಯಿಭಾವಗಳು, ರಸಗಳು (ಸಿಂಹಭೂಪಾಲನು ಶಾಂತವನ್ನು ಬಿಟ್ಟು ಎಂಟು ರಸಗಳನ್ನು ಮಾತ್ರ ಸ್ವೀಕರಿಸಿದ್ದಾನೆ), ರಸಾಭಾಸಗಳು, ದಶರೂಪಕಗಳು-ಇವುಗಳನ್ನು ವಿವರಿಸಲಾಗಿದೆ. ಮೂರನೆಯ ಭಾವೋಲ್ಲಾಸದಲ್ಲಿ ವಸ್ತುವಿನ ಪಂಚಛೇದಗಳು, ಪಂಚಸಂಧಿಗಳು, ನಾಟಕಲಕ್ಷಣ, ವಿಷ್ಕಂಭಾಧಿಗಳು ಮತ್ತು ಪ್ರಕರಣಗಳು ಇವುಗಳ ಲಕ್ಷಣಗಳನ್ನು ನಿರೂಪಿಸಿದೆ. ಅವುಗಳಲ್ಲಿ ನಾಯಕ-ನಾಯಿಕಾ ಲಕ್ಷಣಗಳನ್ನು ಪ್ರತಿಪಾದಿಸಿ ಅವರುಗಳ ಭಾವಗಳನ್ನು ಹೃದ್ಯವಾಗಿ ನಿರೂಪಿಸಿದ್ದಾನೆ. ಇದಕ್ಕಾಗಿ ತನ್ನದೇ ಆದ ಕುವಲಯಾವಲಿಯಿಂದಲೂ ಇತರೆಡೆಗಳಿಂದಲೂ ಸುಂದರವಾದ ಸುಮಾರು ೨೫ ಶ್ಲೋಕಗಳನ್ನು ಉದಾಹರಿಸಿದ್ದಾನೆ. ಇವು ಧನಂಜಯನ ದಶರೂಪಕದ ಶ್ಲೋಕಗಳನ್ನು ತಕ್ಕಮಟ್ಟಿಗೆ ಹೋಲುತ್ತವೆ. ಇವುಗಳನ್ನು ಮಲ್ಲಿನಾಥಸೂರಿಯು ತನ್ನ ವ್ಯಾಖ್ಯಾನಗಳಲ್ಲಿ ಉದ್ಧರಿಸಿಕೊಂಡಿದ್ದಾನೆ.

ಸಂಗೀತಸುಧಾಕರವು ಸಂಗೀತರತ್ನಾಕರದ ಏಳೂ ಅಧ್ಯಾಯಗಳಿಗೆ ವಾಖ್ಯಾನವನ್ನು ಒಳಗೊಂಡು ಸಮಗ್ರವಾಗಿದೆ. ಅದು ನೇರವಾದ ಸರಳ ಶೈಲಿಯಲ್ಲಿದ್ದು ಅನೇಕ ವೇಳೆ ಮೂಲಗ್ರಂಥದ ಶ್ಲೋಕಗಳನ್ನು ಪ್ರಸನ್ನಬೋಧವಾಗುವಂತೆ ಗದ್ಯರೂಪದಲ್ಲಿಡುವುದರಲ್ಲಿ ನಿರತವಾಗಿದ್ದರೂ ವಿವರಣಾತ್ಮಕವೂ, ಸಮರ್ಥಕವೂ, ಜಿಜ್ಞಾಸಾತ್ಮಕವೂ, ಸೃಷ್ಟೀಕರಣವೂ ಆದ ವ್ಯಾಖ್ಯಾನವನ್ನೂ ಒಳಗೊಂಡಿದೆ. ಇದರಲ್ಲಿ ಮತಂಗ, ನಂದಿಕೇಶ್ವರ, ನೈಷಧ, ವೇದಾಂತ ಕಲ್ಪತರು ವಿಚಾರಚಿಂತಾಮಣಿ ವಾಚಸ್ಪತ್ಯ. ಸಂಗೀತಸಮಯಸಾರ, ಪ್ರಯೋಗಸ್ತಬಕವೆಂಬ ದತ್ತಿಲಂ ಗ್ರಂಥದ ವ್ಯಾಖ್ಯಾನ ಇತ್ಯಾದಿ ಪ್ರಮಾಣಗಳ ಉಲ್ಲೇಖವಿದೆ. ಮೊದಲಿನ ಎರಡೂ ಅಧ್ಯಾಯಗಳಲ್ಲಿ ಮತಂಗನನ್ನು ನಾದ, ಶ್ರುತಿ, ಸ್ವರ, ಗ್ರಾಮ, ತಾನ, ಜಾತಿ, ಗ್ರಾಮರಾಗ, ಭಾಷಾರಾಗ, ದೇಶೀರಾಗ ಮುಂತಾದ ಹಲವು ವಿಷಯಗಳಿಗಾಗಿ ಅಕ್ಷರಶಃ ಉದ್ಧರಿಸಿಕೊಂಡು ಉಪಕರಿಸಿದ್ದಾನೆ. ಈ ಉದ್ಧೃತಿಗಳು ಬೃಹದ್ದೇಶಿಯ ಸಂಪಾದನಕ್ಕೆ ಅಮೂಲ್ಯವಾದ ಪಾಠೋಪಕರಣವನ್ನು ಒದಗಿಸುತ್ತವೆ. ಇವುಗಳು ಸಂಗೀತರತ್ನಾಕರದ ವಿವಿಧ ಅಧ್ಯಾಯಗಳ ವ್ಯಾಖ್ಯಾನದ ಸಂದರ್ಭದಲ್ಲಿ ಹೀಗೆ ಹಂಚಿಹೋಗಿವೆ: ಸ್ವರಗತಾಧ್ಯಾಯದಲ್ಲಿ ೬೪ ಶ್ಲೋಕಾರ್ಧಗಳು (ಇವುಗಳಲ್ಲಿ ಎರಡು ಉಪೋದ್ಧೃತಿಗಳ ಒಟ್ಟು ಐದು ಶ್ಲೋಕಾರ್ಧಗಳು ಸೇರಿವೆ), ೩ ಗದ್ಯಖಂಡಗಳು; ರಾಗವಿವೇಕಾಧ್ಯಾಯದಲ್ಲಿ ೩೩ ಶ್ಲೋಕಾರ್ಧಗಳು, ೪ ಸಾಲುಗಳ ಒಂದು ಗದ್ಯಖಂಡ, ಎರಡು ಉಲ್ಲೇಖಗಳ ಪ್ರತಿಧ್ವನಿಗಳು), ಮತ್ತು ನರ್ತನಾಧ್ಯಾಯದಲ್ಲಿ ಎರಡು ಉಲ್ಲೇಖಗಳು.

xi. ಕಲ್ಲಿನಾಥ

ಕನ್ನಡಿಗ ಕಲ್ಲಿನಾಥನು ಜ್ಞಾನವೈರಾಗ್ಯನಿಧಿಯಾಗಿದ್ದ, ಶಾಂಡಿಲ್ಯಗೋತ್ರದ ವಲ್ಲಭದೇವನ ಮೊಮ್ಮಗ, ಲಕ್ಷ್ಮೀಧರ-ನಾರಾಯಣೀದೇವಿಯರ ಮಗ. ವಿಜಯನಗರದ ಯಾದವ ಪ್ರಭು, ಗಜವೇಂಟೆಕಾರ ಇಮ್ಮಡಿಪ್ರೌಢದೇವರಾಯನ (ಕ್ರಿ.ಶ.೧೪೪೬-೧೪೬೫) ಆಸ್ಥಾನ ಸಂಗೀತ ವಿದ್ವಾಂಸನಾಗಿದ್ದು ಅಭಿನವಭರತಾಚಾರ್ಯ ಮತ್ತು ರಾಯಬಯಕಾರನೆಂಬ ಬಿರುದುಗಳನ್ನು ಪಡೆದಿದ್ದವನು. ತೊಡರಮಲ್ಲನೆಂಬ ಪ್ರಶಸ್ತಿಯನ್ನೂ ಅವನು ಗಳಿಸಿದ್ದನು. ಇದರಿಂದ ಅವನು ಗೀತವಾದನನರ್ತನಗಳಲ್ಲಿ ಸಮಾನವಾದ ಪಾಂಡಿತ್ಯವನ್ನು ಸಂಪಾದಿಸಿಕೊಂಡಿದ್ದನೆಂಬುದು ತಿಳಿಯುತ್ತದೆ.ಅಲ್ಲದೆ ಅನೇಕ ಶ್ರೇಷ್ಠಗೇಯಪ್ರಬಂಧಗಳನ್ನೂ ರಚಿಸಿದ್ದನೆಂಬ ಅನುಮಾನವು ಸಿದ್ಧಪಡುತ್ತದೆ. ತೊಡರಮಲ್ಲ ಎಂಬುದು ಕನ್ನಡಶಬ್ದ; ಶಾಸ್ತ್ರ, ವಿದ್ಯೆ, ಶೌರ್ಯ ಮುಂತಾದವುಗಳಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿದವರಿಗೆ (ಹೆಂಗಸರಿಗೆ ನೂಪರವಿದ್ದಂತೆ) ಪೆಂಡೇರವೆಂಬ ರತ್ನಖಚಿತ ಸ್ವರ್ಣಮಯ ಕಾಲುಬಳೆಯನ್ನು ತೊಡಿಸಿ ಗೌರವಿಸುವುದು ಪ್ರಾಚೀನ ರಾಜಾಸ್ಥಾನಗಳಲ್ಲಿ ವಿಶೇಷವಾಗಿ ವಿಜಯನಗರಸಾಮ್ರಾಜ್ಯದಲ್ಲಿಯೂ ಅದಕ್ಕೆ ಅಧೀನವಾಗಿದ್ದ (ನಂತರ ಸ್ವತಂತ್ರವಾದ) ರಾಜ್ಯಗಳಲ್ಲಿಯೂ (ಉದಾ. ಮೈಸೂರು, ತಂಜಾವೂರು, ಬೊಬ್ಬಿಲಿ, ವಿಯನಗರಂ ಇತ್ಯಾದಿ)- ರೂಢಿಯಾಗಿತ್ತು. ಇಂತಹ ಕಾಲುಬಳೆಗೆ ತೊಡರು ಎಂದೂ ತೆಲುಗಿನಲ್ಲಿ ಪೆಂಡೇರವೆಂದೂ ಹೆಸರಿತ್ತು. ತಾನು ಇಂತಹ ತೊಡರನ್ನು ತೊಟ್ಟುದಾಗಿ ಕಲ್ಲಿನಾಥನು, ‘ಪಾದಾಗ್ರೇ ವೀರಭೂಷಾಮಣಿಗಣವಿಲುಠತ್’ ಎಂಬ ಮಾತುಗಳಲ್ಲಿಯೂ ಬಯಕಾರನೆಂಬುದನ್ನು ‘ಸರ್ವವಾಗ್ಗೇಯಕಾರಃ’ ಎಂದೂ ತನ್ನ ಸಂಗೀತವಿದ್ಯೆಯ ಉತ್ಕೃಷ್ಟತೆಯನ್ನು ‘ಸಾಕ್ಷಾತ್ ಸಂಗೀತದೇವತಾ’ ಎಂದೂ ಸೂಚಿಸಿದ್ದಾನೆ. ಅಭಿನವಭರತಾಚಾರ್ಯ, ರಾಯಬಯಕಾರ ಎಂಬ ಬಿರುದುಗಳನ್ನೂ ತೊಡರಮಲ್ಲ (‘ವೀರಭೂಷ’) ಎಂಬ ಪ್ರಶಸ್ತಿಯನ್ನು ತನ್ನ ದೊರೆಯು ನೀಡಿದುದನ್ನು ‘ಬಹುಮಾನತಃ’ ಎಂಬ ಮಾತಿನಿಂದಲೂ ನಿರ್ದೇಶಿಸಿ ಪ್ರಭುವಿನ ಕೋರಿಕೆಯ ಮೇರೆಗೆ ರತ್ನಾಕರವ್ಯಾಖ್ಯೆಯನ್ನು ರಚಿಸಿದೆನೆಂಬುದನ್ನು ‘ತಾಮಾಹ ಕಲ್ಲಿನಾಥಾರ್ಯಂ ಸ ರಾಜಾ ಬಹುಮಾನತಃ ರತ್ನಾಕರಂ ವ್ಯಾಕುರುಷ್ವ ಲಕ್ಷ್ಯಲಕ್ಷಣಕೋವಿದ’ ಎಂಬಲ್ಲಿ ಹೇಳಿದ್ದಾನೆ. ಅವನು ಸಂಗೀತವೆಂಬ ಗೀತವಾದನನೃತ್ತಗಳಲ್ಲಿ ಮೂರರ ಲಕ್ಷ್ಯ ಲಕ್ಷಣಗಳೆರಡರಲ್ಲೂ ಕೋವಿದನಾಗಿದ್ದನೆಂಬುದು ಅವನ ಸಂಗೀತರತ್ನಾಕರ ಕಲಾನಿಧಿಯೆಂಬ ವ್ಯಾಖ್ಯೆಯ ಪುಟಪುಟಗಳಲ್ಲಿಯೂ ಸ್ಪಷ್ಟವಾಗುತ್ತದೆ. ಮೂಲಗ್ರಂಥಕಾರನ ಅರ್ಥಗಳನ್ನೂ ಇಂಗಿತಗಳನ್ನೂ ಆಯಾ ಶಾಸ್ತ್ರಗಳಲ್ಲಿ ಪಾರಂಗತನಾಗಿ ಪ್ರವೇಶಿಸಿ ಕಲ್ಲಿನಾಥನು ವಿಸ್ತರಿಸಿ ವಿವರಿಸಿದ್ದಾನೆ. ಹೀಗೆ ಅವನು ಆಯುರ್ವೇದ, ಯೋಗ, ಮಂತ್ರ, ತಂತ್ರ, ವ್ಯಾಕರಣ, ತರ್ಕ, ಛಂದಸ್ಸು, ಅಲಂಕಾರ, ದರ್ಶನಗಳು, ಶ್ರುತಿ, ಸ್ಮೃತಿ, ಉಪನಿಷತ್ತು, ಭಗವದ್ಗೀತೆ ಇತ್ಯಾದಿಗಳಲ್ಲಿ ಅಸಾಧಾರಣವಾದ ಪರಿಣತಿಯನ್ನು ಹೊಂದಿದ್ದನು. ಸಂಗೀತರತ್ನಾಕರದ ಕಾಲದಲ್ಲಿಯೂ ಅದಕ್ಕೆ ಮುಂಚೆಯೂ ನಂತರವೂ ಸಂಗೀತಶಾಸ್ತ್ರ ಮತ್ತು ಪ್ರಯೋಗಗಳಲ್ಲಿ ಉದ್ಭವಿಸಿದ ಸಮಸ್ಯೆಗಳನ್ನು ತನ್ನ ಗಾಢ ಅಂತರ್ದೃಷ್ಟಿ ಮತ್ತು ಪಾಂಡಿತ್ಯಗಳನ್ನು ಮೇಳೈಸಿ ಕುಶಲವಾಗಿ ಪರಿಹರಿಸಿ, ಸಮಸ್ಯೆಗಳನ್ನೂ ಅವುಗಳ ಪರಿಹಾರವನ್ನೂ ಒಳಗೊಂಡ ಶ್ಲೋಕಗಳನ್ನು ಅಲ್ಲಲ್ಲಿ ರಚಿಸಿದ್ದಾನೆ. ಇದರಿಂದ ಸಂಗೀತದ ಲಕ್ಷ್ಯ ಲಕ್ಷಣಗಳ ಇತಿಹಾಸಗಳಲ್ಲಿ ಅವಿಚ್ಛಿನ್ನತೆಯು ಏರ್ಪಟ್ಟಿತು; ಅಲ್ಲದೆ ಕರ್ನಾಟಕ ಸಂಗೀತವೆಂದು ನಂತರದ ಕಾಲದಲ್ಲಿ ರೂಡಿವಡೆದ ಸಂಗೀಪದ್ಧತಿಯ ಬೇರುಗಳು ಈ ವ್ಯಾಖ್ಯಾನದಲ್ಲಿ ಕಾಣಸಿಗುತ್ತವೆ.

ಕಲಿನಾಥನು ಸಂಗೀತರತ್ನಾಕರದ ಸ್ವರಗತಾಧ್ಯಾಯ, ರಾಗವಿವೇಕಾಧ್ಯಾಯಗಳ ವ್ಯಾಖ್ಯಾನ ಸಮಯದಲ್ಲಿ ವಿಪುಲವಾಗಿಯೂ ಉಳಿದ ಅಧ್ಯಾಯಗಳಲ್ಲಿ ಶಾರ್ಙ್ಗದೇವನು ಉಲ್ಲೇಖಿಸುವ ಸಂದರ್ಭಗಳಲ್ಲಿ ಮಾತ್ರವೂ ಮತಂಗನನ್ನು ಉದ್ಧರಿಸಿಕೊಂಡಿದ್ದಾಣೆ. ಸಿಂಹಭೂಪಾಲನ ಉದ್ಧೃತಿಗಳಂತೆಯೇ ಕಲ್ಲಿನಾಥನವೂ ಬೃಹದ್ದೇಶೀಯ ಪಾಠಶೋಧನ ಪಾಠಸಂಯೋಜನಗಳಲ್ಲಿ ಅಮೂಲ್ಯವಾದ ಪಾಠೋಪಕರಣಗಳಾಗಿವೆ. ಇವು ಸಂಗೀತರತ್ನಾಕರದ ಸ್ವರಗತಾಧ್ಯಾಯದ ವ್ಯಾಖ್ಯಾನಸಂದರ್ಭದಲ್ಲಿ ೩೫ ಶ್ಲೋಕಾರ್ಥಗಳು, ೭ ಗದ್ಯಖಂಡಗಳು, ಒಂದು ಉಲ್ಲೇಖ ರಾಗವಿವೇಕಾಧ್ಯಾಯದ ವ್ಯಾಖ್ಯಾನದಲ್ಲಿ ೩೩ ಶ್ಲೋಕಾರ್ಥಗಳು, ೪ ಗದ್ಯಖಂಡಗಳು, ಎರಡು ಉಲ್ಲೇಖಗಳು, ವಾದ್ಯಾಧ್ಯಾಯದ ವ್ಯಾಖ್ಯಾನದಲ್ಲಿ ಐದು ಶ್ಲೋಕಾರ್ಥಗಳು, ಶಾರ್ಙ್ಗದೇವನು ನರ್ತನಾಧ್ಯಾಯದಲ್ಲಿ ಉಲ್ಲೇಖಿಸುವುದರ ಪ್ರತಿಧ್ವನಿ – ಹೀಗೆ ಸಂಭವಿಸುತ್ತದೆ.

ಕಲ್ಲಿನಾಥನಿಗೆ ಒಬ್ಬ ಮಗಳಿದ್ದು ಆಕೆಯದು ತಿಮ್ಮರಸನೊಡನೆ ಮದುವೆಯಾಗಿತ್ತು. ಇವರ ಮಗನೇ ರಾಮಾಮಾತ್ಯ. ಹೀಗೆ ಕಲ್ಲಿನಾಥನು ರಾಮಾಮಾತೃನಿಗೆ ಮಾತಾಮಹ; ರಾಮಾಮಾತೃನಿಗೆ ಸಂಗೀತಕಲಾನಿಧಿಯನ್ನು ರಚಿಸೆಂದು ಪ್ರೇರಿಸಿದ ಅಳಿಯ ರಾಮರಾಯನು ಕಲ್ಲಿನಾಥನನ್ನು ‘ಕಲ್ಲಪದೇಶಿಕಃ ಸಾಕ್ಷಾತ್ ದತ್ತಿಲಮುನಿಃ’ ಎಂದು ಸ್ತುತಿಸುತ್ತಾನೆ.

xii. ಪಂಡಿತಮಂಡಲಿ

ಕ್ರಿ.ಶ. ೧೫ನೆಯ ಶತಮಾನದಲ್ಲಿ (೧೪೦೧-೧೪೪೦) ಶರ್ಕಿವಂಶದ ಇಬ್ರಾಹಿಂದೊರೆಯು ಚೌನ್‌ಪುರವನ್ನು ಆಳುತ್ತಿದ್ದಾಗ ಹಿಂದೂಪರಿವರ್ತನೆಯಿಂದ ಮುಸ್ಲಿಮನಾದ ಸುಲ್ತಾನ್ ಮಲಿಕಶಾಹಿಯು ಅವನ ಅಧೀನವಾಗಿ ಈಗಿನ ಅಲಹಾಬಾದ್‌ನಗರದ ಪಶ್ಚಿಮಕ್ಕಿದ್ದ ಪ್ರಾಂತ್ಯವನ್ನು (ಇದು ಗಂಗಾಯಮುನೆಗಳ ಸಂಗಮಸ್ಥಾನದಿಂದ ಐದು ಯೋಜನೆ – ಎಂದರೆ ೪೫ ಮೈಲಿ – ದೂರದ ಗಂಗಾತೀರದಲ್ಲಿ ಇತ್ತು.) ತಂದೆಯಾದ ಬಹಾದೂರ್ ಮಲ್ಲಿಕನಿಂದ ವಹಿಸಿಕೊಂಡು (ಅಲಹಬಾದ್‌ನಿಂದ ೫೦ ಕಿಮೀ. ದೂರದಲ್ಲಿರುವ) ಕಡಾ ಎಂಬ ರಾಜಧಾನಿಯಿಂದ ಆಳುತ್ತಿದ್ದನು. ಮತಾಂತರಗೊಂಡಿದ್ದರೂ ಅವನಿಗೆ ಹಿಂದೂಧರ್ಮ ಮತ್ತು ಸಂಸ್ಕೃತಿಗಳಲ್ಲಿ ಶ್ರದ್ಧಾಪ್ರೇಮಗಳು ಅಚಲವಾಗಿದ್ದವು. ಇವುಗಳ ಪೈಕಿ ಅವನ ಸಂಗೀತಪ್ರೇಮವು ವಿಶೇಷವಾಗಿ ಉಲ್ಲೇಖನಾರ್ಹವಾಗಿದೆ. ತನ್ನ ಕಾಲದಲ್ಲಿ ಉಪಲಬ್ಧವಾದ ಎಲ್ಲ ಸಂಗೀತಶಾಸ್ತ್ರ ಗ್ರಂಥಗಳನ್ನೂ ಅಪಾರ ಶ್ರಮ ಮತ್ತು ವೆಚ್ಚಗಳಿಂದ ಶೇಖರಿಸಿ, ಕ್ರಿ.ಶ.೧೪೨೮ರಲ್ಲಿ ಭಾರತದ ವಿವಿಧ ಭಾಗಗಳಲ್ಲಿದ್ದ ಸಂಗೀತ ಪ್ರಯೋಗಪಟುಗಳನ್ನೂ ಶಾಸ್ತ್ರಜ್ಞರನ್ನೂ ತನ್ನ ರಾಜಧಾನಿಗೆ ಬರಮಾಡಿಕೊಂಡು ತಾನು ಸಂಗ್ರಹಿಸಿದ್ದ ಸಂಗೀತಶಾಸ್ತ್ರಗ್ರಂಥಗಳ ಜಿಜ್ಞಾಸೆಗೆಂದೂ ಸಮಸಾಮಯಿಕವಾದ ಲಕ್ಷ್ಯಲಕ್ಷಣವಿರೋಧಗಳ ಸಮನ್ವಯಕ್ಕೆಂದೂ ಸಂಗೀತಸಮ್ಮೇಳವನ್ನು ಏರ್ಪಡಿಸಿದನು. ಮಧ್ಯಯುಗದ ಮಧ್ಯಭಾರತದಲ್ಲಿ ನಡೆದ ಈ ಪಂಡಿತಮಂಡಲಿಯ ಈ ತದ್ವಿದ್ಯಾಸಂಭಾಷವು ಶ್ರೇಷ್ಠವಾಗಿ ನಡೆಯಿತು; ಅದರ ತೀರ್ಮಾನಗಳನ್ನು ಸಂಗೀತಶಿರೋಮಣಿ ಎಂಬ ಹೆಸರಿನ ಗ್ರಂಥದಲ್ಲಿ ಕ್ರೋಡೀಕರಿಸುವಂತೆ ಮಲಿಕ್‌ಶಾಹಿಯು ಏರ್ಪಡಿಸಿದನು. ಇದು ಒಂದು ಅಭೂತಪೂರ್ವ ಘಟನೆ. ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಮೈಸೂರಿನ ಪ್ರಭು ರಾಜರ್ಷಿ ನಾಲ್ವಡಿ ಕೃಷ್ಣರಾಜವಡೆಯರು ನಂಜನಗೂಡಿನಲ್ಲಿಯೂ ಬರೋಡದ ಗಾಯಕವಾಡ ದೊರೆಗಳು ಇಂದೂರಿನಲ್ಲಿಯೂ ಇಂತಹ ಸಂಗೀತ ತದ್ವಿದ್ಯಾಸಂಭಾಷಗಳನ್ನು ಏರ್ಪಡಿಸಿದ್ದರೆಂಬುದನ್ನಿಲ್ಲಿ ಸ್ಮರಿಸಬಹುದು.

ಸಂಗೀತಶಿರೋಮಣಿಯನ್ನು ರಚಿಸುವುದಕ್ಕೆ ಬಳಸಿದ ಪ್ರಾಮಾಣಿಕ ಗ್ರಂಥಗಳನ್ನು ಮಲಿಕ್‌ಶಾಹಿಯು ಹೀಗೆ ಹೆಸರಿಸುತ್ತಾನೆ. ೧,೨೫,೦೦೦ ಶ್ಲೋಕಗಳಿದ್ದ ಭರತಗ್ರಂಥವನ್ನು ದಕ್ಷಿಣದೇಶದಿಂದ ತರಿಸಿದನು. ಒಟ್ಟಿನಲ್ಲಿ ಇದರ ಅರ್ಥದಷ್ಟು ವಿಸ್ತಾರವಿದ್ದ ಸಂಗೀತಸಾಗರ, ರಾಗಾರ್ಣವ, ಸಂಗೀತದೀಪಿಕಾ, ಸಂಗೀತಚೂಡಾಮಣಿ, ವಾದಿಮತ್ತಗಜಾಂಕುಶ, ಸಂಗೀತರತ್ನಾಕರ, ಸಂಗೀತ ದರ್ಪಣ, ತಾಲಾರ್ಣವ, ಸಂಗೀತಕಲ್ಪವೃಕ್ಷ, ಸಂಗೀತರತ್ನಾವಲೀ, ಸಂಗೀತಮುದ್ರಾ, ಸಂಗೀತೋಪನಿಷತ್‌ಸಾರ, ಸಂಗೀತಸಾರಕಲಿಕಾ, ಶ್ರೀ ಸಂಗೀತವಿನೋದಕ, ಆನಂದಸಂಜೀವನಿ ಮತ್ತು ಮುಕ್ತಾವಲೀ. ಇವುಗಳನ್ನೇ ಅಲ್ಲದೆ. ನಾಟ್ಯಶಾಸ್ತ್ರದ ವ್ಯಾಖ್ಯೆಯಾದ ಬಾಲಬೋಧವೆಂಬುದನ್ನೂ ಸಂಗ್ರಹಿಸಲಾಯಿತು. ಸಂಗೀತಶಿರೋಮಣಿಯನ್ನು ಈ ಗ್ರಂಥಗಳ ಆಧಾರದ ಮೇಲೆ ರಚಿಸುವಲ್ಲಿ ಒಂದು ಸ್ವಾರಸ್ಯಕರವಾದ ಮಾತನ್ನು ಅದರಲ್ಲಿ ಹೇಳಿದೆ : ರತ್ನಾಕರಾದಿ ಗ್ರಂಥಗಳಲ್ಲಿ ಹೇಳಿರುವ ಮಾತುಗಳನ್ನೇ ಪರಿವರ್ತನೆಗೊಳಿಸದೆ, ಅಂದರೆ ಬದಲಾಯಿಸದೆ, ಆದರೆ ಕ್ರಮವನ್ನು ವ್ಯತ್ಯಾಸಮಾಡಿ, ಇಲ್ಲಿ ಬಳಸಿದೆ. ಉಪಲಬ್ಧ ಸಂಗೀತಶಿರೋಮಣಿಯು ಅಸಮಗ್ರವಾಗಿದ್ದು ವಾದ್ಯ ಮತ್ತು ನರ್ತನಗಳನ್ನು ನಿರೂಪಿಸುವ ಅಧ್ಯಾಯಗಳು ನಷ್ಟವಾಗಿವೆ. ಉಳಿದಂತೆ ಹದಿನಾಲ್ಕು ಅಧ್ಯಾಯಗಳು ಈ ವಿಷಯವನ್ನು ವಿವರಿಸುತ್ತವೆ : ೧. ಶ್ರುತಿ ೨. ಸ್ವರ ೩. ಗ್ರಾಮ ೪. ಮೂರ್ಛನಾ ೫. ತಾನ ೬. ಸಾಧಾರಣ ೭. ವರ್ಣಾಲಂಕಾರ ೮. ಜಾತಿ ೯. ಗೀತಿ ೧೦. ಮತ್ತು ೧೧. ರಾಗವರ್ಗಗಳು ೧೨. ತಾಲ ೧೩. ಪ್ರಬಂಧ ೧೪. ಪ್ರಕೀರ್ಣ.

ಪಂಡಿತಮಂಡಲಿಯು ನಾಡಿಗಳಲ್ಲಿ ನಾದೋತ್ಪತ್ತಿ, ಮಾರ್ಗಗಳ ಕಾಲಪ್ರಮಾಣ, ಅನುಕ್ತಜನಕ ಅಂತರಭಾಷಾ ರಾಗಗಳು, ಮುಖ್ಯ ಸ್ವರಾಖ್ಯ ಇತ್ಯಾದಿ ಚತುರ್ವಿದ ರಾಗವರ್ಗಗಳು, ಪ್ರಥಮಲಲಿತಾ ಮತ್ತು ದ್ವಿತೀಯ ಲಲಿತಾ ರಾಗಗಳ ಲಕ್ಷಣಗಳು, ಏಲಪ್ರಬಂಧಲಕ್ಷಣದಲ್ಲಿ ಪ್ರಾಮಾಣಿಕ ಪೂರ್ವಾಚಾರ್ಯರು ನಾಲ್ಕು ವಿಧದ ಮಾತ್ರೈಲಾಗಳು-ಎಂಬ ವಿಷಯಗಳಲ್ಲಿ ಮತಂಗನನ್ನು ಉದ್ಧರಿಸಿಕೊಳ್ಳುತ್ತದೆ.