. ಭರತ

ಭರತನ ನಾಟ್ಯಶಾಸ್ತ್ರವು ಈಗ ದೊರೆತಿರುವ ಕಲಾಶಾಸ್ತ್ರ ಗ್ರಂಥಗಳಲ್ಲಿ ಪ್ರಾಚೀನತಮವಾದುದು, ಕ್ರಿ.ಪೂ. ಎರಡನೆಯ ಶತಮಾನದಿಂದ ಕ್ರಿ.ಶ. ಎರಡನೆಯ ಶತಮಾನದವರೆಗಿನ ಅವಧಿಯಲ್ಲಿ ಯಾವಾಗಲೋ ರಚಿತವಾದುದು ಎಂಬುದು ಸಾಮಾನ್ಯವಾಗಿ ಸಮ್ಮತವಾದ ವಿದ್ವದಭಿಪ್ರಾಯ. ಅದರ ಕರ್ತೃತ್ವ ವಿಸ್ತಾರ, ವಿಶ್ವಸನೀಯತೆ, ಪ್ರಾಚೀನತೆ ಮುಂತಾದ ಹಲವು ವಿಷಯಗಳಲ್ಲಿ ಜಿಜ್ಞಾಸೆಯು ಇಂದಿಗೂ ನಡೆಯುತ್ತಿದೆ. ಇದನ್ನು ಸಂಕ್ಷೇಪವಾಗಿ ಪರಿಶೀಲಿಸಲಾಗುವುದು.

ಈಗ ದೊರೆತಿರುವ ನಾಟ್ಯಶಾಸ್ತ್ರದಲ್ಲಿ ಮೂವತ್ತಾರು ಅಥವಾ ಮೂವತ್ತೇಳು ಅಧ್ಯಾಯಗಳಿವೆ. ಆತ್ರೇಯಾದಿ ಮುನಿಗಳು ನಾಟ್ಯದ ಉತ್ಪತ್ತಿ ಇತ್ಯಾದಿಗಳನ್ನು ಕುರಿತು ಕೇಳಿದ ಪಂಚಪ್ರಶ್ನೆಗಳಿಗೆ ಭರತಮುನಿಯು ನೀಡಿದ ಉತ್ತರಗಳನ್ನು ಒಳಗೊಂಡಂತೆ ಸಂವಾದರೂಪದ ಪುರಾಣಶೈಲಿಯಲ್ಲಿ ಗ್ರಂಥವು ರಚಿತವಾಗಿದೆ.ಇದನ್ನು ಬ್ರಹ್ಮನು ನಿರೂಪಿಸಿದಂತೆ ತಾನು ಹೇಳುವುದಾಗಿ ಗ್ರಂಥಕಾರನ ಪ್ರತಿಜ್ಞೆಯಿದೆ. ಮಹೇಶ್ವರಬ್ರಹ್ಮರಿಬ್ಬರಿಗೂ ನಮಸ್ಕರಿಸಿ ಅವನು ಈ ಪ್ರತಿಜ್ಞೆಯನ್ನು ಮಾಡುತ್ತಾನೆ ; ಇಡೀ ಗ್ರಂಥದಲ್ಲಿ ಈ ಇಬ್ಬರೇ ಪ್ರಧಾನ ಶಾಸ್ತ್ರಪ್ರವರ್ತಕರು. ವಿಷ್ಣುವು ಅನುಷಂಗಿಕವಾಗಿ – ಉದಾ. ವೃತ್ತಿನಿರೂಪಣದಲ್ಲಿ – ಕಾಣಿಸಿಕೊಳ್ಳುತ್ತಾನೆ. ಲೋಕರು ಧರ್ಮಸಮ್ಮತವಾದ, ವೇದೋಪವಸತಿಯುಳ್ಳ ಕ್ರೀಡೆಗಳಿಂದ ಸನ್ಮಾರ್ಗದಲ್ಲಿ ನಡೆಯಲು ಅನುಕೂಲಿಸುವಂತೆ ಲೋಕವೃತ್ತಾನುಕರಣವೂ ನಾನಾವ ಸ್ಥಾಂತರಾತ್ಮಕವೂ ನಾನಾಭಾವಾನುಕೀರ್ತನವೂ ಸಕಲಕಲಾಸ್ಪದವೂ ಲೋಕೋಪದೇಶಜನನವೂ ಆಗಿರುವ ನಾಟ್ಯವೇದವೆಂಬ ಐದನೆಯ ವೇದವನ್ನು ಬ್ರಹ್ಮನು ಸೃಷ್ಟಿಸಿ ಭರತನೂ ಅವನ ನೂರು ಮಕ್ಕಳೂ ಅದನ್ನು ಲೋಕದಲ್ಲಿ ಪ್ರಚುರಪಡಿಸಿದರು ಎನ್ನುವುದು ಗ್ರಂಥರಚನೆಯ ಹಿನ್ನೆಲೆ. ಇಡೀ ಗ್ರಂಥವು ಸಂಸ್ಕೃತಭಾಷೆಯಲ್ಲಿ ಸುಲಭ, ನೇರ, ಸರಳ, ಶೈಲಿಯ ಅನುಷ್ಟುಪ್ ಶ್ಲೋಕಗಳಲ್ಲಿಯೂ ಅಲ್ಲಲ್ಲಿ ಪೂರ್ವಾಚಾರ್ಯಮತನಿರೂಪಕವಾದ ಆರ್ಯಾಶ್ಲೋಕಗಳಲ್ಲಿಯೂ ಕೆಲವು ಅಧ್ಯಾಯಗಳಲ್ಲಿ ಗದ್ಯಖಂಡಗಳಲ್ಲಿಯೂ ರಚಿತವಾಗಿದೆ. ಗದ್ಯವು ಶ್ಲೋಕಕ್ಕೆ ಕೆಲವೆಡೆ ಪೂರಕವಾಗಿಯೂ ಇನ್ನು ಕೆಲವೆಡೆ ವಿವರಣಾತ್ಮಕವಾಗಿಯೂ ಇದೆ; ಗ್ರಂಥಕರ್ತನು ತನ್ನನ್ನು ಶ್ಲೋಕಗಳಲ್ಲಿ ಏಕವಚನದಿಂದಲೂ ಗದ್ಯಗಳಲ್ಲಿ ಬಹುವಚನದಿಂದಲೂ ಸಾಮಾನ್ಯವಾಗಿ ನಿರ್ದೇಶಿಸಿಕೊಂಡಿದ್ದಾನೆ. ಉದ್ಧೃತಿಗಳನ್ನೂ ಮತಸಂಗ್ರಹವನ್ನೂ ಯಾರಿಂದ ಮಾಡಲಾಗಿದೆಯೆಂಬ ಬಗೆಗೆ ಗ್ರಂಥದಲ್ಲಿ ಸೂಚನೆಯಿಲ್ಲ.

ನಾಟ್ಯಶಾಸ್ತ್ರದಲ್ಲಿರುವ ಅಧ್ಯಾಯಗಳು ಈ ಮೂವತ್ತಾರು : ೧.ನಾಟ್ಯೋತ್ಪೊತ್ತಿ ೨.ನಾಟ್ಯಗೃಹರಚನೆ ೩.ರಂಗದೈವತಪೂಜೆ ೪.ತಾಂಡವಲಕ್ಷಣ ೫.ಪೂರ್ವರಂಗವಿಧಿ ೬.ರಸ ೭.ಭಾವ ೮.ಉಪಾಂಗಾಭಿನಯ ೯.ಹಸ್ತಾಭಿನಯ ೧೦.ಶರೀರಾಭಿನಯ ೧೧.ಚಾರೀ ೧೨.ಮಂಡಲ ೧೩.ಗತಿಪ್ರಚಾರ ೧೪.ಕಕ್ಷಾ(ಪ್ರವೃತ್ತಿ, ಧರ್ಮೀ) ೧೫.ಛಂದೋವಿಧಾನ ೧೬.ಛಂದೋವಿಚಿತಿ ೧೭.ಅಲಂಕಾರಲಕ್ಷಣ ೧೮.ಭಾಷಾವಿಧಾನ ೧೯.ಕಾಕು ೨೦.ದಶರೂಪಕಗಳು ೨೧.ಸಂಧ್ಯಂಗಗಳು ೨೨.ಭಾರತೀ ಮುಂತಾದ ವೃತ್ತಿಗಳು ೨೩.ಆಹಾರ್ಯ ೨೪.ಸಾಮಾನ್ಯಾಭಿನಯ ೨೫.ಬಾಹ್ಯೋಪಚಾರ ೨೬.ಚಿತ್ರಾಭಿನಯ ೨೭.ಸಿದ್ಧಿವ್ಯಂಜನ ೨೮.ಜಾತಿ ೨೯.ತತಾತೋದ್ಯವಿಧಾನ ೩೦.ಸುಷಿರಾತೋದ್ಯವಿಧಾನ ೩೧.ತಾಲ ೩೨.ಧ್ರುವಾ ೩೩.ಪುಷ್ಕರವಾದ್ಯ ೩೪.ಪಾತ್ರವೈವಿಧ್ಯ ೩೫.ಪಾತ್ರವಿನಿಯೋಗ ೩೬.(೩೬,೩೭) ನಾಟ್ಯಾವತರಣ, ನಾಟ್ಯವು ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕವೆಂಬ ನಾಲ್ಕು ಅಭಿನಯಗಳಿಂದಾಗುವ ಕರ್ಮ ಎಂದು ವರ್ಗೀಕರಿಸಿಕೊಂಡು ಭರತಮುನಿಯು ಆಂಗಿಕವನ್ನು ೮-೧೩ನೆಯ ಅಧ್ಯಾಯಗಳಲ್ಲೂ ವಾಚಿಕವನ್ನು ೧೫-೨೨ನೆಯ ಅಧ್ಯಾಯಗಳಲ್ಲೂ ಆಹಾರ್ಯವನ್ನು ೨೩ನೆಯದರಲ್ಲೂ ಸಾಮಾನ್ಯಾಭಿನಯ ಮತ್ತು ಚಿತ್ರಾಭಿನಯಗಳನ್ನು ೨೪-೨೬ರಲ್ಲೂ ಸಿದ್ಧಿಯನನ್‌ಉ ೨೭ನೆಯದರಲ್ಲೂ ನಿರೂಪಿಸುತ್ತಾನೆ. ಸಂಗೀತವನ್ನು ವಾಚಿಕಾಭಿನಯದ ಅಂಗವಾಗಿ ೨೮-೩೩ನೆಯ ಅಧ್ಯಾಯಗಳಲ್ಲಿ ಹೇಳುತ್ತಾನೆ. ಈ ಚತುರ್ವಿಧಾಭಿನಯಕ್ಕೆ ಅನುಷಂಗವಿರುವ ವಿಷಯಗಳನ್ನು ಉಳಿದ (೧,೩,೫,೩೪,೩೫,೩೬ / ೩೭) ಅಧ್ಯಾಯಗಳಲ್ಲಿ ಸೇರಿಸಿದ್ದಾನೆ. ಅಧ್ಯಾಯಗಳಲ್ಲಿ ವಿಷಯ ನಿರೂಪಣೆಯು ಅವ್ಯವಹಿತಕ್ರಮದಲ್ಲಿಲ್ಲ. ಉದಾ.೪ನೆಯ ಮತ್ತು ೧೪ನೆಯ ಅಧ್ಯಾಯಗಳಲ್ಲಿರುವ ವಿಷಯಗಳು ಕ್ರಮತಪ್ಪಿ ಬಂದಿವೆ. ಅಲ್ಲದೆ ಗ್ರಂಥದ ಪರಿವಿಡಿಯ ಸಂಗ್ರಹವು ಆರನೆಯ ಅಧ್ಯಾಯದ ೧೦ನೆಯ ಶೋಕದಲ್ಲಿ ರಸ, ಭಾವ, ಅಭಿನಯ, ಧರ್ಮೀ, ವೃತ್ತಿ, ಪ್ರವೃತ್ತಿ, ಸಿದ್ಧಿ, ಸ್ವರ, ಆತೋದ್ಯ, ಗಾನ, ರಂಗ ಎಂದಿದ್ದು ಗ್ರಂಥವು ಈ ಕ್ರಮದಲ್ಲಿಯೂ ರಚಿತವಾಗಿಲ್ಲ. ಈ ಎಲ್ಲ ಅಧ್ಯಾಯಗಳಲ್ಲಿ ವಾಸ್ತು, ಆಗಮ-ಪುರಾಣ, ಮನೋವಿಜ್ಞಾನ, ನೃತ್ತ, ಛಂದಸ್, ಕಾವ್ಯಾಲಂಕಾರ, ಭಾಷೆ, ವ್ಯಾಕರಣ, ರೂಪಕ (ನಾಟಕ)ಗಳು, ಪ್ರಸಾಧನ ಮತ್ತು ಸಂಗೀತವೆಂಬ ಹತ್ತು ಮುಖ್ಯವಾದ ಶಾಸ್ತ್ರಗಳನ್ನು ನಿರೂಪಿಸಿದೆ. ಇತ್ತೀಚಿನವರೆಗೆ ಈ ಎಲ್ಲ ಶಾಸ್ತ್ರಗಳಿಗೂ ನಾಟ್ಯಶಾಸ್ತ್ರವೇ ಆಕರಗ್ರಂಥವಾಗಿಯೂ ಪ್ರಮಾಣವಾಗಿಯೂ ಪರಿಣಮಿಸಿತ್ತು. ಅದು ತನ್ನ ಕಾಲದ ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ಅಮೂಲ್ಯವಾದ ಕೊಡುಗೆಯನ್ನು ಭಾಷೆ, ಕಾವ್ಯ (ಛಂದಸ್ಸು ಮತ್ತು ವೃತ್ತಗಳ ನಿದರ್ಶನಗಳು) ನಾಟಕ-ರೂಪಕಗಳ ಪ್ರಯೋಗವಿಧಾನ, ಸಮ-,ಅರ್ಧಸಮ-ಮತ್ತು ವಿಷಮ ವೃತ್ತಗಳ ಉದಾಹರಣೆಗಳು, ಕಾವ್ಯಗುಣದೋಷಗಳು – ಅಲಂಕಾರಗಳು, ವೇಷಭೂಷಣಗಳು, ಸಮಾಜದಲ್ಲಿದ್ದ ವಿವಿಧ ವ್ಯಕ್ತಿಜಾತಿಗಳು, ಪೌರಾಣಿಕವಾಗಿ ನಿಮ್ನ, ಅಮಾನುಷ, ಅತಿಮಾನುಷ, ಮುನಿವೈವಿಧ್ಯ, ದೇವತಾಮ್ನಾಯ, ಧಾರ್ಮಿಕ ಆಚರಣೆಗಳು, ಶ್ರದ್ಧೆಗಳು,ನಂಬುಗೆಗಳು, ಭೌಗೋಳಿಕ ವಿವರಗಳು, ಬುಡಕಟ್ಟುಜನಗಳು – ಇತ್ಯಾದಿ ಹಲವು ವಿವರಗಳಲ್ಲಿ ನೀಡುತ್ತದೆ. ನಾಟ್ಯಶಾಸ್ತ್ರವು ಗ್ರಥನಗೊಂಡು ಈಗ ಉಳಿದುಬಂದಿರುವ ರೀತಿಯಲ್ಲಿ ಕೆಲವು ಅಸಮಂಜಸತೆಗಳಿವೆ. ಸುಮಾರು ಎರಡು ಸಾವಿರ ವರ್ಷಗಳ ಸುದೀರ್ಘಕಾಲದಲ್ಲಿ ವಿವಿಧ ವ್ಯಾಖ್ಯಾನಕಾರರ, ವಾಚಕರ, ಲೇಖಕರ ಕೈಯಲ್ಲಿ ಏಕರೂಪದಲ್ಲಿ ಉಳಿದುಬಂದಿಲ್ಲವೆಂಬುದು ಸ್ಪಷ್ಟವಾಗಿದೆ. ಅದರ ಜಿಜ್ಞಾಸೆಯು ಪ್ರಕೃತ ಸಂದರ್ಭದ ವ್ಯಾಪ್ತಿಯನ್ನು ಮೀರಿದೆ.

ನಾಟ್ಯಶಾಸ್ತ್ರಕ್ಕೆ ಭಟ್ಟ ಶಂಕುಕ, ಭಟ್ಟನಾಯಕ, ಭಟ್ಟ ಲೋಲ್ಲಟ, ಭಟ್ಟ ಉದ್ಭಟ, ಟೀಕಾಕರ, ಕೀರ್ತಿಧರ, ಅಭಿನವಗುಪ್ತರುಗಳ ವ್ಯಾಖ್ಯಾನಗಳು ರಚಿತವಾಗಿದ್ದು ಅಭಿನವಗುಪ್ತನ ಅಭಿನವಭಾರತಿಯೆಂಬ ಅತ್ಯಂತ ಪ್ರೌಢವೂ ಅಮೂಲ್ಯವೂ ವ್ಯಾಪಕವೂ ಆಗಿರುವ ವ್ಯಾಖ್ಯಾನವೊಂದು ಮಾತ್ರ ಉಳಿದುಬಂದಿದೆ. ನಾಟ್ಯಶಾಸ್ತ್ರವು ಜಿಜ್ಞಾಸೆ ಎಂಬ ಅರ್ಥದಲ್ಲಿ ಶಾಸ್ತ್ರವಲ್ಲ, ಉಪದೇಶ ಎನ್ನುವ ಅರ್ಥದಲ್ಲಿ ಶಾಸ್ತ್ರ. ಒಂದೊಂದು ಮುಖ್ಯಘಟ್ಟದಲ್ಲೂ ನಿರೂಪಿತವಾಗಬೇಕಾದ ವಿಷಯಗಳನ್ನು ಸಂಗ್ರಹಶ್ಲೋಕದಲ್ಲಿ ಅಡಕಗೊಳಿಸಿ ನಂತರ ಅವುಗಳನ್ನು ಕ್ರಮವಾಗಿ ನೇರವಾದ, ಸುಲಭವಾದ, ಸಂಕ್ಷೇಪವಾದ ಶೈಲಿಯಲ್ಲಿ ಅದು ನಿರೂಪಿಸುತ್ತದೆ. ಅಭಿನವಭಾರತಿಯು ಶಾಸ್ತ್ರ ಅಧ್ಯಾಯ, ಅಧಿಕರಣ ಮುಂತಾದ ಸಂಗತಿಗಳನ್ನೂ ಇಂಗಿತಗಳನ್ನೂ ಸಮಸಾಮಯಿಕ ಪ್ರಯೋಗವನ್ನು ಹಿಂದಿನ ವ್ಯಾಖ್ಯಾನಕಾರರ, ಇತರ ಪ್ರಾಮಾಣಿಕರ ಮತಗಳ ಅಂತರಶಾಸ್ತ್ರೀಯ ಹಾಗೂ ಶಾಸ್ತ್ರಾಂತರೀಯ ಜಿಜ್ಞಾಸೆಗಳನ್ನೂ, ಒಳನೋಟಗಳನ್ನೂ, ಪರಂಪರೆ, ಸಂಪ್ರದಾಯಗಳ ಅವಿಚ್ಛಿನ್ನತೆಯನ್ನೂ ಒಳಗೊಂಡಿದೆ. ನಾನ್ಯದೇವನು ಭರತಭಾಷ್ಯವೆಂದ ತನ್ನ ಗ್ರಂಥವನ್ನು ಕರೆದಿದ್ದರೂ ನಾಟ್ಯಶಾಸ್ತ್ರದ ವಾಚಿಕಾಂಶವನ್ನು ಮಾತ್ರ ಗ್ರಹಿಸಿ ಸ್ವತಂತ್ರ ಗ್ರಂಥವನ್ನೇ ಬರೆದಿದ್ದಾನೆ. ಭಾಷ್ಯವೆಂಬುದು ಇಲ್ಲಿ ಕೇವಲ ಉಪಚಾರೋಕ್ತಿ.

ನಾಟ್ಯಶಾಸ್ತ್ರದಲ್ಲಿ ಸಂಗೀತವನ್ನು ವಾಚಿಕಾಭಿನಯದ ಅಂಗವನ್ನಾಗಿ ನಿರೂಪಿಸಲಾಗಿದೆಯೆಂದು ಈಗಾಗಲೇ ಸೂಚಿಸಿದೆ. ಅದರ ೨೮ನೆಯ ಅಧ್ಯಾಯದಲ್ಲಿ ಶ್ರುತಿ-ಸ್ವರ-ಗ್ರಾಮ-ಮೂರ್ಛನೆ-ಜಾತಿಗಳನ್ನೂ ೨೯ನೆಯದರಲ್ಲಿ ವೀಣಾದಿತತವಾದ್ಯಗಳ ನಿರೂಪಣೆಯನ್ನೂ ೩೦ನೆಯ ಹ್ರಸ್ವ ಅಧ್ಯಾಯದಲ್ಲಿ ಕೊಳಲುವಾದನದ ವಿವರಗಳನ್ನೂ ೩೧ನೆಯದರಲ್ಲಿ ತಾಲಪ್ರತ್ಯಯ ಮತ್ತು ತಾಲಪ್ರಯೋಗ ವಿಧಾನಗಳನ್ನೂ ೩೨ನೆಯದರಲ್ಲಿ ರೂಪಕಗಳ ಪ್ರಯೋಗವಾಗುತ್ತಿದ್ದ ಧ್ರುವಾ ಎಂಬ ಹಾಡುಗಳ ವಿವರಣೆಯನ್ನೂ ೩೪ನೆಯದರಲ್ಲಿ ಮೃದಂಗಾದಿ ಪುಷ್ಕರವಾದ್ಯಗಳ ನಿರೂಪಣೆಯನ್ನೂ ಕೊಟ್ಟಿದೆ. ರಾಗಗಳು ನಾಟಕದ ಹಾಡುಗಳಿಗೆ ಬೇಕಾಗಿರಲಿಲ್ಲವೆಂದೋ ಏನೋ ಅವುಗಳನ್ನು ವಿವರಿಸದೆ ಅವುಗಳಿಗೆ ಮಾತೃಕೆಗಳಾಗಿದ್ದ ಜಾತಿಗಳನ್ನೇ ವಿವರಪೂರ್ಣವಾಗಿ ನಿರೂಪಿಸಲಾಗಿದೆ. ಭರತೋತ್ತರಕಾಲೀನರಾದ ಕಾಶ್ಯಪ ಮತಂಗಾದಿಗಳು ರಾಗಗಳ ವಿನಿಯೋಗವನ್ನು ನಾಟ್ಯ ಸಂದರ್ಭಗಳಿಗೇ ಹೇಳಿದ್ದಾರೆ. ನಾನ್ಯದೇವಶಾರ್ಙ್ಗದೇವರೂ ಪ್ರಾಚೀನಪ್ರಸಿದ್ಧರಾಗಗಳಿಗೆ ಇಂತಹ ವಿನಿಯೋಗಗಳನ್ನೇ ವಿಧಿಸಿದ್ದಾರೆ.

ನಾಟ್ಯಶಾಸ್ತ್ರಕರ್ತೃವಿನ ಹೆಸರಾದ ಭರತ ಎಂಬುದರಿಂದ ನಾಟ್ಯಕರ್ಮಕುಶಲರಿಗೆ ಭರತರೆಂಬ ಹೆಸರು ಬಂತೋ ಅಥವಾ ಇದಕ್ಕೆ ವಿಪರೀತವಾಗಿ ಅವನು ನಾಟ್ಯಕರ್ಮಕುಶಲಿಯಾಗಿದ್ದು ಅಂತಹವರಿಗಾಗಿ ಗ್ರಂಥವನ್ನು ರಚನೆಮಾಡಿದ್ದರಿಂದ ಹೀಗೆ ಪ್ರಾತಿನಿಧಿಕವಾದ ಹೆಸರನ್ನಿಟ್ಟುಕೊಂಡನೋ ಎಂಬ ಒಂದ ಜಿಜ್ಞಾಸೆಯಿದೆ. ಎರಡೂ ಪಕ್ಷಗಳಲ್ಲಿ ವಾದಿಸುವ ವಿದ್ವಾಂಸರಿದ್ದಾರೆ. ನಂದಿಕೇಶ್ವರನ ಅಭಿನಯದರ್ಪಣ ಮತ್ತು ಭರತಾರ್ಣವಗಳಲ್ಲಿ ಭರತನೆಂಬ ಮಾತು ಪದೇ ಪದೇ ಬರುತ್ತದೆ. ಅಲ್ಲೆಲ್ಲ ಅದಕ್ಕೆ ನಾಟ್ಯಕರ್ಮಕುಶಲಿ ಎಂದಷ್ಟೇ ಅರ್ಥ. ಶಾರದಾತನಯನು ಭಾವಪ್ರಕಾಶನದಲ್ಲಿ ಹೀಗೆಯೇ ಅರ್ಥೈಸಿದ್ದರೂ ಗ್ರಂಥಾಂತ್ಯದ ಸಮೀಪದಲ್ಲಿ ಮೊದಲನೆಯ ಪಕ್ಷಕ್ಕೆ ವಾಲಿದ್ದಾನೆ. ಅಷ್ಟೇಕೆ, ಭರತಮುನಿಯೇ ಭರತಶಬ್ದದ ಸಾಮಾನ್ಯಾರ್ಥವನ್ನು ನಾಟ್ಯಶಾಸ್ತ್ರದಲ್ಲಿ ಹಲವೆಡೆ ಗ್ರಹಿಸಿದ್ದಾನೆ. ಸಂಸ್ಕೃತ ಮತ್ತು ದೇಶಭಾಷೆಗಳ ಕಾವ್ಯಗಳಲ್ಲಿ ಭರತನೆಂದರೆ ಈ ಅರ್ಥವೇ ಇದೆ. ಆದರೆ ನಾಟ್ಯಶಾಸ್ತ್ರದ ರಚನೆಯ ನಂತರದ ಕೇವಲ ಮೂರು ನಾಲ್ಕು ಶತಮಾನಗಳಿಂದಲೇ ಭರತನೆಂಬುದನ್ನು ವ್ಯಕ್ತಿನಾಮಸೂಚಕವಾಗಿ ಮುನಿ, ಭಗವಾನ್ ಎಂದು ಗೌರವಪುರಃಸರವಾಗಿ ಪ್ರಯೋಗಿಸುವುದು ಸಂಗೀತ ನೃತ್ತಗಳನ್ನೂ ಒಳಗೊಂಡಂತೆ ಹಲವು ಕಲಾಶಾಸ್ತ್ರಗಳಲ್ಲಿ ಸರ್ವೇಸಾಮಾನ್ಯವಾಗಿದೆ. ‘ಭೃ’ ಅಥವಾ ‘ಭರ’ ದಾತುವಿನಿಂದ ಭರತಶಬ್ದದ ನಿಷ್ಪತ್ತಿಯನ್ನು ಭರತಮುನಿಯೂ ಶಾರದಾತನಯನೂ ಮಾಡುತ್ತಾರೆ. ಭಾವರಾಗತಾಳಗಳ ಪ್ರಥಮಾಕ್ಷರಸಂಯೋಜನೆಯಿಂದ ಭರತಶಬ್ದವಾಗಿದೆ ಎಂಬ ಅರ್ವಾಚೀನ ನಿರ್ವಚನವೂ ಇದೆ.

ನಾಟ್ಯಶಾಸ್ತ್ರ ಗ್ರಂಥವು ಏಕಕರ್ತೃಕವೆ, ಬಹುಕರ್ತೃಕವೆ ಎಂಬ ಒಂದು ಜಿಜ್ಞಾಸೆಯೂ ನಡೆದಿದೆ. ಶಾಸ್ತ್ರಗ್ರಥನದಲ್ಲಿ ಇರುವ ಅಸಮಂಜತೆಗಳೂ ವಿರೋಧಾಭಾಸಗಳೂ ಗ್ರಂಥವು ಬೇರೆ ಬೇರೆ ಕಾಲಗಳಲ್ಲಿ ಹಿಗ್ಗುತ್ತ ನಡೆದು ಅಭಿನವಗುಪ್ತನಕಾಲಕ್ಕೆ ತನ್ನ ಅಂತಿಮರೂಪವನ್ನು ಪಡೆಯಿತು ಎಂಬುದರ ಸೂಚನೆ ಎಂಬ ಒಂದು ಪಕ್ಷವಿದೆ. ನಾಟ್ಯೋತ್ಪತ್ತಿ, ನಾಟ್ಯಗೃಹ, ಪೂರ್ವರಂಗ ನಾಟ್ಯಾವತರಣ ಮುಂತಾದ ಅಧ್ಯಾಯಗಳು ಉತ್ತರಾಲೋಚನೆಯಿಂದ ವಿವಿಧ ಕಾಲಸ್ತರಗಳಲ್ಲಿ ಸೇರ್ಪಡೆಯಾದವು ಎಂಬುದೂ ಒಂದು ವಾದವಿದೆ. ಗ್ರಂಥದ ಪರಿವಿಡಿ(=ಸಂಗ್ರಹಶ್ಲೋಕ)ಯಿರುವ ಇಂದಿನ ಆರನೆಯ ಅಧ್ಯಾಯವೇ ಗ್ರಂಥದ ಪ್ರಾರಂಭವಿರಬಹುದು ಎಂದು ಚಿಂತಿಸುವವರೂ ಇದ್ದಾರೆ. ಆದರೂ ಗ್ರಂಥದ ಏಕರೂಪಶೈಲಿ, ನಿರೂಪಣವಿಧಾನ, ಉಪಕ್ರಮ-ಉಪಸಂಹಾರ ಇತ್ಯಾದಿಗಳನ್ನು ಗಮನಿಸಿ ಬಹುಮತದ ವಿದ್ವದಭಿಪ್ರಾಯವು ನಾಟ್ಯಶಾಸ್ತ್ರವನ್ನು ಏಕಕರ್ತೃಕವೆಂದೇ ಗ್ರಹಿಸುತ್ತದೆ.

ನಾಟ್ಯಶಾಸ್ತ್ರಕರ್ತೃವಿಗೆ ಭರತ, ಮುನಿ ಎಂಬ ಹೆಸರುಗಳಿವೆಯಷ್ಟೇ. ರಾಗವರ್ಣನಪ್ರಸಕ್ತಿಯಲ್ಲಿ ಮುನಿಯೆಂದರೆ ಕಾಶ್ಯಪ. ಆದಿಭರತ, ಭರತವೃದ್ಧ ಎಂಬ ಹೆಸರುಗಳನ್ನು ಸಂಗೀತಶಾಸ್ತ್ರ ಸಾಹಿತ್ಯದಲ್ಲಿ ಕಾಣಬಹುದು. ಭರತವೃದ್ಧನಿಂದ ಶಾರದಾನತಯನು ರಸವಿಷಯಕವಾದ ಗದ್ಯಖಂಡವೊಂದನ್ನು ಉದ್ಧರಿಸಿಕೊಳ್ಳುತ್ತಾನೆ. ಆದಿಭರತನೆಂಬ ಹೆಸರುಳ್ಳ ನಾಟ್ಯಶಾಸ್ತ್ರಗ್ರಂಥದ ಹಸ್ತಪ್ರತಿಗಳು ಅಲ್ಲಲ್ಲಿ ದೊರೆಯುತ್ತವೆ. ಇವು ಈಗ ಉಪಲಬ್ಧವಾಗಿರುವ ನಾಟ್ಯಶಾಸ್ತ್ರಕ್ಕೆ ಸದೃಶವಾಗಿಯೇ ಇವೆ. ‘ಆದಿ’ ಎಂಬ ವಿಶೇಷಣವು ಸೇರಿಕೊಂಡುದರ ಕಾರಣವು ಹೀಗಿರಬಹುದು: ಬ್ರಹ್ಮಭರತ, ಸದಾಶಿವಭರತ, ಹನುಮದ್‌ಭರತ, ಮತಂಗಭರತ, ಅರ್ಜುನಭರತ, ನಂದಿಭರತ ಮುಂತಾದ ನೃತ್ತಶಾಸ್ತ್ರಗ್ರಂಥಗಳು ಈಗ ದೊರೆಯುತ್ತವೆ. ಇವುಗಳಲ್ಲಿ ಭರತ ಎಂಬ ವಿಶೇಷ್ಯವು ನೃತ್ತವನ್ನು ಸೂಚಿಸುತ್ತದೆ. ಈ ಗ್ರಂಥಗಳ ಹಸ್ತಪ್ರತಿಗಳು ನನ್ನಲ್ಲಿವೆ. ನಂದಿಭರತ ಎಂಬ ಗ್ರಂಥನಾಮವು ನಾಟ್ಯಶಾಸ್ತ್ರದ ಉತ್ತರಭಾಗದ ಸಮಾಪ್ತಿವಾಕ್ಯದಲ್ಲಿ ಕಂಡುಬರುತ್ತದೆ. ಮತಂಗಭರತದ ಕರ್ತೃವು ತುಂಬಾ ಅರ್ವಾಚೀನನಾದ ಮುಡುಂಬಿ ಲಕ್ಷ್ಮಣಾಚಾರ್ಯ! ಈ ಎಲ್ಲ ‘ಭರತ’ಗಳಿಂದ ಪೃಥಕ್ಕರಿಸಿ ಷಟ್‌ಸಾಹಸ್ರೀ ನಾಟ್ಯಶಾಸ್ತ್ರವನ್ನು ‘ಆದಿ’ಭರತ ಎಂದು ಕರೆದಿರುವುದು ಸಂಭಾವ್ಯವಾಗಿದೆ.

ನಾಟ್ಯಶಾಸ್ತ್ರದ ವಿಸ್ತಾರವೆಷ್ಟು? ನಾಟ್ಯಶಾಸ್ತ್ರವು ಆರುಸಾವಿರ ಗ್ರಂಥ (ಗ್ರಂಥ=೩೨ ಅಕ್ಷರಗಳ ಪರಿಮಾಣ)ಗಳ್ಳನ್ನು ಷಟ್‌ಸಾಹಸ್ರೀ ಎಂದೂ ಹನ್ನೆರಡುಸಾವಿರ ಗ್ರಂಥಗಳನ್ನುಳ್ಳ ದ್ವಾದಶಸಾಹಸ್ರೀ ಎಂದೂ ಎರಡು ಪ್ರಮಾಣಗಳದ್ದಾಗಿತ್ತೆಂಬ ಒಂದು ನಂಬಿಕೆಯಿದೆ. ಶಾರದಾತನಯನು ದ್ವಾದಶ ಸಾಹಸ್ರೀಯನ್ನು ಭರತವೃದ್ಧನು ರಚಿಸಿದನೆಂದೂ ಅದನ್ನು ಸಂಗ್ರಹಿಸಿ ಭರತನು ಈಗಿನ ಷಟ್‌ಸಾಹಸ್ರೀಗೆ ನಾಟ್ಯಶಾಸ್ತ್ರವನ್ನಾಗಿ ರಚಿಸಿದನೆಂದೂ ಒಂದು ಆಲೋಚನಾ ಪರಂಪರೆಯಿದೆ. ಷಟ್‌ಸಾಹಸ್ರೀಗೆ ಭರತಸೂತ್ರವೆಂಬ ಹೆಸರೂ ಇದೆ. ಈಗ ಉಪಲಬ್ಧವಿರುವ ನಾಟ್ಯಶಾಸ್ತ್ರವು ಆರುಸಾವಿರ ಗ್ರಂಥಗಳಿಗಿಂತ ಕಡಿಮೆಯಿದೆ. (ಗದ್ಯಖಂಡಗಳನ್ನೂ ಸೇರಿಸಿಕೊಂಡರೆ ಅಷ್ಟಾಗಬಹುದೋ ಏನೋ!) ಅಲ್ಲದೆ ಅದರಲ್ಲಿ ಪಾಠಸಂಯೋಜನೆಯು ಸಾಕಷ್ಟು ವೈಜ್ಞಾನಿಕವಾಗಿ ಆಗಿಲ್ಲವೆಂದೇ ಹೇಳಬೇಕು. ಏಕೆಂದರೆ ಅದು ಕೇವಲ ಉಪಲಬ್ಧ ನಾಟ್ಯಶಾಸ್ತ್ರದ ಹಸ್ತಪ್ರತಿಗಳನ್ನು ಅವಲಂಬಿಸಿ ಸಂಪಾದಿತವಾದುದು; ವಿವಿಧ ಹಸ್ತಪ್ರತಿ ಪರಂಪರೆಗಳ ಪಾಠಗಳನ್ನು ಗುರುತಿಸಿ ವರ್ಗೀಕರಿಸುವುದು, ವ್ಯಾಖ್ಯಾನಕಾರನು ಸ್ವೀಕರಿಸಿರುವ ಪಾಠಕ್ಕೆ ಸಂಯೋಜನದಲ್ಲಿ ಆದ್ಯತೆ ನೀಡುವುದು, ಉದ್ಧೃತಿ ಮತ್ತು ಉಪೋದ್ಧೃತಿಗಳನ್ನು ಪಾಠೋಪಕರಣಗಳನ್ನಾಗಿ ಸ್ವೀಕರಿಸುವುದು ಇತ್ಯಾದಿ ಗ್ರಂಥಸಂಪಾದನ ಶಾಸ್ತ್ರೀಯ ತತ್ತ್ವ ಮತ್ತು ಆಚರಣೆಗಳಿಗೆ ಗಮನವನ್ನು ನೀಡಿದರೆ ಉಪಲಬ್ಧ ನಾಟ್ಯಶಾಸ್ತ್ರದ ಪಾಠವನ್ನು ಉತ್ತಮಪಡಿಸಬಹುದು. ಸಾಗರನಂದಿ, ಜಗದ್ಧರ, ಶ್ರೀನಿಧಿ ಮುಂತಾದವರು ಉದ್ಧರಿಸಿಕೊಂಡಿರುವ ಭಾರತೀಯ ಗ್ರಂಥಾಂಶಗಳು ಈಗ ಸಿಕ್ಕಿರುವ ನಾಟ್ಯಶಾಸ್ತ್ರದಲ್ಲಿಲ್ಲವೆಂದು ರಾಮಕೃಷ್ಣಕವಿಯು ಭರತಕೋಶದಲ್ಲಿ ಹೇಳುವುದನ್ನು ಗಮನಿಸಬೇಕು. ಮತಂಗನು ಉದ್ಧರಿಸಿಕೊಂಡಿರುವ ಕೆಲವು ಭಾರತೀಯ ಗ್ರಂಥಾಂಶಗಳಿಗೂ ಈ ಮಾತು ಸಲ್ಲುತ್ತದೆ. ಇವೆಲ್ಲ ಈಗ ಅನುಪಲಬ್ಧವಾಗಿರುವ ದ್ವಾದಶಸಾಹಸ್ರೀಯಲ್ಲಿದ್ದಿರಬಹುದೆ ಎಂಬುದು ಚಿಂತ್ಯವಾಗಿದೆ. ರಾಮಕೃಷ್ಣಕವಿಯು ಇವೆರಡು ಮಾತ್ರವಲ್ಲದೆ ೩೬,೦೦೦ ಗ್ರಂಥಗಳಿದ್ದ ಒಂದು ನಾಟ್ಯಶಾಸ್ತ್ರಗ್ರಂಥವು ಇತ್ತೆಂದೂ, ನಾಟ್ಯಶಾಸ್ತ್ರೀಯ ಗ್ರಂಥಗಳ ಮೊತ್ತವು ೧,೨೫,೦೦೦ರಷ್ಟಾಗಬಹುದೆಂದೂ ಊಹಿಸುತ್ತಾ.ರೆ.

ಶಾರದಾತನಯನು ಭರತವೃದ್ಧನಿಂದ ಮಾಡಿಕೊಂಡ ಉದ್ಧರಣವನ್ನೂ ಐವರು ಭರತಶಿಷ್ಯರನ್ನು ಕುರಿತು ಆಡಿಮ ಮಾತನ್ನೂ ಶಿಲಪ್ಪದಿಕಾರದ ವ್ಯಾಖ್ಯಾನಕಾರನಾದ ಅಡಿಯಾರ್ಕುನಲ್ಲರ್ ಉಲ್ಲೇಖಿಸುವ ಪಂಚಭರತವೆಂಬ ಮಾತನ್ನೂ ಅವಲಂಬಿಸಿ ರಾಮಕೃಷ್ಣಕವಿಯು ಭರತಶಿಷ್ಯರಾದ ಐವರು. (=ಪಂಚಭರತರು) ನಾಟ್ಯಶಾಸ್ತ್ರಗ್ರಂಥಗಳನ್ನು ರಚಿಸಿದ್ದಾರೆಂದು ಊಹಿಸುತ್ತಾರೆ. ಶಾರದಾತನಯನ ಮಾತು ಹೀಗಿದೆ.

ಸ್ಮೃತಮಾತ್ರೇ ಮುನಿಃ ಕಶ್ಚಿತ್ ಶಿಷ್ಯೈಃ ಪಂಚಭಿರನ್ವಿತಃ |
ತಾನಬ್ರವೀತ್ ನಾಟ್ಯವೇದಂ ‘ಭರತ’ ಇತಿ ಪಿತಾಮಹಃ
ತುಷ್ಟಸ್ತೇಭ್ಯಂ ವರಂ ಪ್ರಾದಾತ್ ಅಭೀಷ್ಟಂ ಪದ್ಮವಿಷ್ಟರಃ |
ನಾಟ್ಯವೇದಮಿದಂ ಯಸ್ಮಾತ್ ಭವಿಷ್ಯಥ ಜಗತ್ತ್ರಯೇ |
ನಾಟ್ಯವೇದೋಪಿ ಭವತಾ ನಾಮ್ನಾ ಖ್ಯಾತಿಂ ಗಮಿಷ್ಯತಿ ||
(ಭಾವಪ್ರಕಾಶನಮ್ ೧೦.೧೬.೨೦.೨೧)

ಶಿಲಪ್ಪದಿಕಾರಂಗೆ ಪೀಠಿಕೆಯನ್ನು ಬರೆಯುತ್ತ ಅಡಿಯಾರ್ಕುನಲ್ಲರ್‌ನು ದಕ್ಷಿಣ ಮಧುರೆಯು ಸಮುದ್ರದಲ್ಲಿ ಮುಳುಗಿಹೋದಾಗ ಅಗತ್ತಿಯಂ ಮೂಲಗ್ರಂಥದೊಡನೆ ಇತರ ಪ್ರಾಚೀನ ಸಂಗೀತ, ನಾಟ್ಯಶಾಸ್ತ್ರಗ್ರಂಥಗಳಾದ ಪೆರುಂಗುರುಗುಂ, ಮುರುವಲ್, ಜಯಂತಂ, ಗುಣನೊಲ್, ಪಂಚಭಾರತೀಯಂ, ಪೆರುನಾರೈ ಮೊದಲಾದವೂ ನಷ್ಟವಾಗಿ ಹೋದವೆಂದೂ ಪಂಚಭಾರತೀಯವು ನಾರದವಿರಚಿತವೆಂದೂ ಹೇಳುತ್ತಾನೆ. ‘ಇನಿ ಇಶೈತ್ತಮಿಳ್ನೂಲಾಗಿಯ ಪೆರುನಾರೈ ಪೆರುಂಗುರುಗುಂ, ಪಿರುವುಂ ದೇವವಿರುಡಿ ನಾರದನ್ ಚೇಯ್ದ ಪಂಚಭಾರತೀಯಂ ಮುದಲಾ ಉಳ್ಳ ತೊನ್ನೊಲ್ಗಳ್ ಇರನ್ದನ. ಶಾರದಾತನಯನ ಮಾತಿನಂತೆ ಮುನಿಯನ್ನೂ ಸೇರಿಸಿಕೊಂಡರೆ ಷಡ್‌ಭರತರಾಗುತ್ತಾರೆ. ಅಡಿಯಾರ್ಕುನಲ್ಲರ್‌ನ ಮಾತಿನಲ್ಲಿ ಉಲ್ಲೇಖವಿರುವುದು ಪಂಚಭರತರನ್ನು ಕುರಿತಲ್ಲ, ಐದು ನಾಟ್ಯವೇದಗ್ರಂಥಗಳನ್ನು ಎಂಬ ಕಾರಣಗಳಿಂದ ಡಾ || ವಿ.ರಾಘವನ್‌ರವರು ಪಂಚಭರತವಾದವನ್ನು ನಿರಾಕರಿಸುತ್ತಾರೆ. ಅಲ್ಲದೆಈ ಪಂಚಭಾರತೀಯಂ (ಪಂಚಭರತಂ ಅಲ್ಲ) ಐದು ಗ್ರಂಥಗಳಲ್ಲ, ನಾರದನು ರಚಿಸಿದ ಒಂದು ಗ್ರಂಥ ಮಾತ್ರ ಎಂಬುದನ್ನೂ ಗಮನಿಸಬೇಕು. ಅಭಿನವಗುಪ್ತನೇ ಸದಾಶಿವ, ಬ್ರಹ್ಮ ಮತ್ತು ಭರತ-ಈ ಮೂರು ಮತಗಳನ್ನು ಪೃಥಕ್ಕರಿಸಿ ಗುರುತಿಸುತ್ತಾನೆಂಬುದನ್ನು ಇಲ್ಲಿ ಸ್ಮರಿಸಬಹುದು. ಸದಾಶಿವ ಮತ್ತು ಬ್ರಹ್ಮರ ಗ್ರಂಥಗಳ ಉಲ್ಲೇಖ, ಉದ್ಧೃತಿಗಳು ನಂತರದ ಲಾಕ್ಷಣಿಕರಲ್ಲಿ ದೊರೆಯುವುದರಿಂದ ಅವರು ದೇವತೆಗಳ ಹೆಸರಿದ್ದ (ಅರ್ಧಪುರಾಣಪುರುಷರಾದ) ಐತಿಹಾಸಿಕವ್ಯಕ್ತಿಗಳೂ ಆಗಿದ್ದಿರಬೇಕು.

ಬೃಹದ್ದೇಶಿಯಲ್ಲಿ ಭರತೋದ್ಧೃತಿಗಳದೇ ಗರಿಷ್ಠ ಸಂಖ್ಯೆ. ವಂಶಜನ್ಯ ಶ್ರುತಿಗಳು, ಋಷಭಾದಿ ಶ್ರುತಿಮಂಡಲಗಳು, ತಾನಕ್ರಿಯೆ, ಮೂರ್ಛನಾನಿರ್ದೇಶ, ವರ್ಣಾಲಂಕಾರಗಳು, ಅಂಶ-ಗ್ರಹಸ್ವರಗಳ ಸಂಬಂಧ, ಜಾತಿಗಳಲ್ಲಿ ತಾರಗತಿ, ಷಾಡವಲಕ್ಷಣ, ಸ್ವರಾಂತರ-ಔಡುವ-ಷಾಡವ ಪ್ರಯೋಗಗಳು, ಅಪನ್ಯಾಸಪ್ರಕಾರಗಳು ಹೀಗೆ ಹತ್ತು ಬಾರಿ ಮತಂಗನು ಭರತನನ್ನು ಉದ್ಧರಿಸಿಕೊಳ್ಳುತ್ತಾನೆ.

೧೦. ಮಹೇಶ್ವರ

ಸ್ವರವಕ್ಷ್ಯಜಂತು ಇತ್ಯಾದಿಗಳನ್ನು ವಿವರಿಸುವಾಗ ‘ಕೋಹಲಃ, ಮಹೇಶ್ವರಃ’ ಎಂಬ ಪ್ರಾಮಾಣಿಕ ಸೂಚಕವಾದ ಮಾತು ಬೃಹದ್ದೇಶಿಯ ಹಸ್ತಪ್ರತಿಯಲ್ಲಿದೆ. ಇದನ್ನು ಒಪ್ಪಿಕೊಂಡರೆ ಇಬ್ಬರೂ ಐತಿಹಾಸಿಕ ವ್ಯಕ್ತಿಗಳಾಗುತ್ತಾರೆ. ಇದನ್ನು ‘ಕೋಹಲೇ ಮಹೇಶ್ವರಃ’ ಎಂದು ತಿದ್ದಿಕೊಂಡರೆ ‘ಕೋಹಲ (ರಚಿತವಾದ) ಗ್ರಂಥದಲ್ಲಿ (ಮತಂಗನಲ್ಲಿ ಇಂತಹ ಪ್ರಯೋಗಗಳು ಇಲ್ಲ) ಉದ್ಧೃತವಾಗಿರುವ ಮಹೇಶ್ವರನ ಮತದಲ್ಲಿ’ ಎಂಬ ಅರ್ಥವು ಹೊರಡುತ್ತದೆ. ಮಹೇಶ್ವರ ಎಂಬ ಹೆಸರು ಸಂಗೀತ-ನೃತ್ತಶಾಸ್ತ್ರಗಳಲ್ಲಿ ಬೇರೆಡೆ ದೊರೆಯುವುದಿಲ್ಲ. ಸದಾಶಿವ ಎಂದು ಸಮೀಕರಿಸಿಕೊಳ್ಳಬಹುದು; ಸದಾಶಿವಮತವೊಂದನ್ನು ಅಭಿನವಗುಪ್ತನೇ ಹೇಳಿದ್ದಾನಷ್ಟೆ. ಸದಾಶಿವನ ಸಂಗೀತೋಕ್ತಿಗಳು ಇಂದಿಗೂ ಉದ್ಧತಿ, ಉಲ್ಲೇಖಗಳಲ್ಲಿ ಉಳಿದು ಬಂದಿವೆ. ಶಾರ್ಙ್ಗದೇವನೇ ಮೊದಲಾದವರು ಸದಾಶಿವನನ್ನು ಸಂಗೀತಶಾಸ್ತ್ರಪ್ರವರ್ತಕರಲ್ಲಿ ಮೊದಲನೆಯ ಹೆಸರಾಗಿ ಎಣಿಸಿಕೊಂಡಿದ್ದಾರೆ. ಶಿವನು ಹಾಡಿಕೊಂಡು ಭಿಕ್ಷಾಟನಮಾಡುತ್ತಾನೆಂಬುದು ಪ್ರಾಚೀನಪ್ರಸಿದ್ಧವೂ ಪುರಾಣೋಕ್ತಿಯೂ ಆಗಿದೆ. ಅವನು ಸಾಮಗಾನಪ್ರಿಯನೂ ಹೌದು. ‘ಗೀತೇನ ಪ್ರಿಯತೇ ದೇವಃ ಸರ್ವಜ್ಞಃ ಪಾರ್ವತೀಪತಿಃ’ ಎಂಬ ಶಾರ್ಙ್ಗದೇವೋಕ್ತಿಯನ್ನಿಲ್ಲಿ ಸ್ಮರಿಸಬಹುದು. ಬ್ರಹ್ಮನೇ ಮೊದಲಾದವರು ಮಾರ್ಗಪದ್ಧತಿಯ ಗೀತವಾದ್ಯನೃತ್ತಗಳನ್ನು ಕಂಡುಹಿಡಿದು ಅದಕ್ಕೆ ಸಮ್ಮತಿಯನ್ನು ಕೋರಿ ಮೊದಲು ಅದನ್ನು ಪ್ರದರ್ಶಿಸಿದ್ದು ಶಂಭುವಿನ ಮುಂದೆ; ಸಂಧ್ಯಾತಾಂಡವದಲ್ಲಿ ತಾನು ನರ್ತಿಸಿದ ಅಂಗಹಾರಾದಿಗಳನ್ನು ಸ್ಮರಿಸಿಕೊಂಡು ಭರತನಿಗೆ ಹೇಳಿಕೊಡೆಂದು ತಂಡುವಿಗೆ ಆಜ್ಞೆಮಾಡಿದ್ದೂ ಶಂಭುವೇ; ಅವನು ನುಡಿಸುವುದು ಪಿನಾಕವೀಣೆಯನ್ನು – ಮುಂತಾದ ಸಂಗೀತಶಾಸ್ತ್ರದ ಸಾಂಪ್ರದಾಯಿಕ ಮಾತುಗಳು ಶಿವನ ಸಂಗೀತೋನ್ನತಿಯನ್ನು ಸೂಚಿಸುತ್ತವೆ.

೧೧. ಯಾಷ್ಟಿಕ

ಯಾಷ್ಟಿಕನು (ಯಾಷ್ಟಿ=ಯಜ್ಞಯಾಗಾದಿಗಳಲ್ಲಿ ಪರಿಚರ್ಯೇ; ಯಾಷ್ಟೀಕ = ದಂಡ ಅಥವಾ ಗದೆಯನ್ನು ಧರಿಸಿದವನು) ಸಂಗೀತಲಾಕ್ಷಣಿಕನಾಗಿ ಮೊದಲಬಾರಿಗೆ ಕಾಣಸಿಗುವುದು ಬೃಹದ್ದೇಶಿಯಲ್ಲೇ. ನಾನ್ಯದೇವನು ಅವನನ್ನು ಯಾಷ್ಟೀಕನೆಂದು ಕರೆದು ದೇವಕೃತಿ, ಹನುಕೃತಿ, ಶಿವಕೃತಿ, ನಾಗಕೃತಿ, ಕುಮುದಕೃತಿ, ತೋಡಿ, ರತಿಚಂದ್ರಿಕಾ, ಕಚ್ಛೆಲ್ಲೀ, ಗಾಂಧಾರಲಲಿತಾ, ಜೀಮೂತ ಎಂಬ ಹತ್ತು ರಾಗಗಳ ಲಕ್ಷಣಗಳನ್ನು ಅವನಿಂದ ಉದ್ಧರಿಸಿಕೊಳ್ಳುತ್ತಾನೆ. ಶಾರ್ಙ್ಗದೇವನು ಅವನನ್ನು ಸಂಗೀತಶಾಸ್ತ್ರ ಪ್ರಾಮಾಣಿಕರಲ್ಲಿ ಪಠಿಸಿದ್ದಾನೆ. ಕಲ್ಲಿನಾಥನು ಮಧುರೀ ಭಾಷಾಲಕ್ಷಣವನ್ನು ಅವನಿಂದ ಎತ್ತಿಕೊಂಡಿದ್ದಾನೆ. ಕುಂಭಕರ್ಣನು ಗೀತಿಗಳು ಮೂರು ವಿಧವೆನ್ನುವಲ್ಲಿ ಅವನನ್ನು ಉಲ್ಲೇಖಿಸುತ್ತಾನೆ. ಯಾಷ್ಟಿಕಮತಃ ಎಂಬ ಒಂದು ಗ್ರಂಥವು ಮದ್ರಾಸ್ ಗವರ್ನ್‌ಮೆಂಟ್ ಓರಿಯಂಟಲ್ ಮಾನ್ಯುಸ್ಕಿಪಟ್ಸ್ ಲೈಬ್ರೆರಿಯಲ್ಲಿ ಒಮ್ಮೆ ಇದ್ದುದನ್ನು ಮೇಲೆ ಪ್ರಸ್ತಾಪಿಸಿದೆ.

ಮತಂಗನು ಸರ್ವಾಗಮಸಂಹಿತೆಯಿಂದ ಯಾಷ್ಟಿಕನ ಭಾಷಾರಾಗಲಕ್ಷಣಗಳನ್ನು ಸಂಗ್ರಹಿಸಿ ಅವನ ಹೆಸರನ್ನು ಎಂಟು ಸಲ ಸ್ಪಷ್ಟೋಕ್ತಿಯಲ್ಲೂ ಐದು ಸಲ ಸಂಭಾವ್ಯವಾಗಿಯೂ ಉಲ್ಲೇಖಿಸುತ್ತಾನೆ.

೧೨. ವಲ್ಲಭ

ಮತಂಗನು ಮಾತ್ರೈಲಾವರ್ಣನಸಂದರ್ಭದಲ್ಲಿ ಒಮ್ಮೆ ವಲ್ಲಭನನ್ನು ಪ್ರಾಮಾಣಿಕನೆಂದು ಉಲ್ಲೇಖಿಸುತ್ತಾನೆ. ಬೇರೆಡೆ ಎಲ್ಲೂ ಇವನ ಹೆಸರು ಸಂಗೀತಲಾಕ್ಷಣಿಕನಾಗಿ ದೊರೆಯುವುದಿಲ್ಲ.

೧೩. ವಿಶಾಖಿಲ

ದತ್ತಿಲನು ಶುದ್ಧಗೀತದ ಒಂದು ಪ್ರಕಾರವಾದ ಅಪರಾಂತಕದ ವರ್ಣನೆಯಲ್ಲಿ ವಿಶಾಖಿಲನನ್ನು ಸ್ಮರಿಸಿದ್ದಾನೆ. ಕಲಾಶಾಸ್ತ್ರಗಳು ವಿಶಾಖಿಲನಿಂದ ಪ್ರಣೀತವಾಗಿವೆಯೆಂದು ವಾಮನನು ಕಾವ್ಯಾಲಂಕಾರಸೂತ್ರವೃತ್ತಿಯಲ್ಲಿ ಉಲ್ಲೇಖಿಸುತ್ತಾನೆ. ದಾಮೋದರಗುಪ್ತನು ಕುಟ್ಟಿನೀಮತದಲ್ಲಿ ಒಂದುಸಲ ಭರತದತ್ತಿಲರೊಡನೆ ವಿಶಾಖಿಲನ ಹೆಸರನ್ನು ಹೇಳಿದ್ದಾನೆ. ಅಭಿನವಗುಪ್ತನು ಅವನನ್ನು ಭರತಪೂರ್ವನೆಂದು ಗ್ರಹಿಸಿ ಅವನಿಂದ ಜಾತಿವಿಕಲ್ಪಾಧ್ಯಾಯ(೨೮)ದಲ್ಲಿ ಒಂಬತ್ತು ಸಲ, ತತಾತೋದ್ಯವಿಧಾನ (೨೯)ದಲ್ಲಿ ೫ಸಲ, ಸುಷಿರಾತೋಧ್ಯಾಯದಲ್ಲಿ (೩೦) ಎರಡು ಸಲ, ತಾಲಾಧ್ಯಾಯ (೩೧)ದಲ್ಲಿ ಐದು ಸಲ, ಗುಣದೋಷವಿಚಾರ (೩೩)ದಲ್ಲಿ ಒಮ್ಮೆ ಹೀಗೆ ಗೇಯಾಧಿಕಾರದಲ್ಲಿ ಇಪ್ಪತ್ತೆರಡು ಬಾರಿ ತನ್ನ ವ್ಯಾಖ್ಯಾನದಲ್ಲಿ ಉದ್ಧರಿಸಿಕೊಂಡಿದ್ದಾನೆ. ನಾನ್ಯದೇವನು ಜಾತಿವಿಷಯದಲ್ಲಿ ಒಮ್ಮೆ ಮತ್ತು ಕೊಳಲಿನ ವಿಷಯದಲ್ಲಿ ಒಮ್ಮೆ ಹೀಗೆ ಎರಡು ಸಲ ಗ್ರಂಥಾಂಶಗಳನ್ನು ಎತ್ತಿಕೊಂಡಿದ್ದಾನೆ. ಕುಂಭಕರ್ಣನು ಷಡ್ಜಗ್ರಾಮದಲ್ಲಿಯೂ ಮಧ್ಯಮಗಾತ್ರದಲ್ಲಿಯೂ ಯಾವ ಯಾವ ಸ್ವರಗಳನ್ನು ಲೋಪ ಮಾಡಬೇಕೆಂಬ ವಿಷಯದಲ್ಲಿ ಒಂದು ಸಲವೂ ಗೀತಕಪರೀಕ್ಷಣದಲ್ಲಿ ನಾಲ್ಕು ಸಲವೂ (ಪು.೪೭೫,೪೯೮, ೫೧೧,೫೩೩) ವಿಶಾಖಿಲನ ಉಲ್ಲೇಕವನ್ನು ಮಾಡಿದ್ದಾನೆ.

ಮತಂಗನು ಮೂರ್ಛನಾತಾನಗಳಲ್ಲಿ ಭೇದವಿಲ್ಲ ಎಂದು ವಿಶಾಖಿಲನ ಮತವನ್ನು ಸಂಗ್ರಹಿಸಿದ್ದಾನೆ.

೧೪.ವಿಶ್ವಾವಸು

ವಿಶ್ವಾವಸುವು ಪೌರಾಣಿಕ ವ್ಯಕ್ತಿಯೂ ಸಂಗೀತಲಕ್ಷಣಕಾರನಾದ ಐತಿಹಾಸಿಕ ವ್ಯಕ್ತಿಯೂ ಆಗಿದ್ದಾನೆ. ಅವನು ಗಂಧರ್ವರಾಜನೆಂದು ಮಾರ್ಕಂಡೇಯಪುರಾಣದಲ್ಲಿ ಹೇಳಿದೆ. ಮತಂಗನು ಶ್ರುತಿಯಲ್ಲಿ ಸ್ವರಶ್ರುತಿ, ಅಂತರಶ್ರುತಿಯೆಂಬ ಎರಡು ವಿಧಗಳಿವೆಯೆನ್ನಲು ಅವನನ್ನು ಉಲ್ಲೇಖಿಸಿದ್ದಾನೆ. ವಿಶ್ವಾವಸುವಿನ ಸಂಗೀತಶಾಸ್ತ್ರೋಕ್ರಿಯು ದೊರೆತಿರುವುದು ಇದೊಂದೇ, ಇದನ್ನೇ ಸಿಂಹಭೂಪಾಲನೂ ಉದ್ಧರಿಸಿಕೊಂಡಿದ್ದಾನೆ. ಶಾರ್ಙ್ಗದೇವ ಕುಂಭಕರ್ಣರು ಅವನನ್ನು ಸಂಗೀತಶಾಸ್ತ್ರದ ಪೂರ್ವಾಚಾರ್ಯರಲ್ಲಿ ಪಠಿಸಿದ್ದಾರೆ.

೧೫. ವೇಣು

ಶ್ರುತಿಗಳು ದ್ವಿಶ್ರುತಿ, ತ್ರಿಶ್ರುತಿ ಮತ್ತು ಚತುಃಶ್ರುತಿ ಎಂಬುದಾಗಿ ಒಟ್ಟು ಒಂಭತ್ತು ವಿಧವೆನ್ನಲು ಮತಂಗನು ಈ ಲಾಕ್ಷಣಿಕನನ್ನು ಉದ್ಧರಿಸಿದ್ದಾನೆ. ಇವನ ಹೆಸರನ್ನು ಶಾರ್ಙ್ಗದೇವನು ಪೂರ್ವಾಚಾರ್ಯರಲ್ಲಿ ಎಣಿಸಿಲ್ಲ. ಮತಂಗ, ಕಲ್ಲಿನಾಥರು ಅವನನ್ನು ವೇಣು ಎಂದು ಕರೆದಿದ್ದರೆ ತುಲಜೇಂದ್ರನು ವೇಣ ಎಂದಿದ್ದಾನೆ. ವೇಣು ಎಂದರೆ ಒಂದು ಜಾತಿಯ ಬಿದಿರು ಅಥವಾ ಅದರಿಂದ ಮಾಡಿದ ಕೊಳಲು. ಇದರ ಸಂಕೇತವಾಗಿ ಅವನ ಹೆಸರು ಬಂದಿರಬಹುದೆ? ವೇಣ ಎಂದರೆ ವೇಣುವಿನ ಎಂದರೆ ಬೆತ್ತದ ಕೆಲಸಮಾಡುವವನು, ಮೇದರ ಕಸುಬಿನವನು; ವೇಣ ಎಂಬುದು ಪ್ರಾಚೀನ ಭಾರತದಲ್ಲಿ ಒಂದು ವರ್ಗದ ಜನರ ಹೆಸರಾಗಿತ್ತು. ಇದು ಅಥರ್ವವೇದ, ಮಹಾಭಾರತ ಮುಂತಾದ ಆಕರಗಳಲ್ಲಿ ಕಂಡುಬರುತ್ತದೆ. ವೈದೇಹಕನೆಂಬ ವರ್ಗದ ಪುರುಷನು ಅಂಬಷ್ಠಾಸ್ತ್ರೀಯಲ್ಲಿ ಪಡೆದ ಸಂಕರಜಾತಿಯ ಮಗನಿಗೆ ವೇಣನೆಂದು ಹೆಸರು ಎಂದು ಮನುಸ್ಮೃತಿಯಲ್ಲಿದೆ. ಅಂಬಷ್ಠಾ ಎಂದರೆ ವೈಶ್ಯಸ್ತ್ರೀಯು ಬ್ರಾಹ್ಮಣನಿಂದ ಪಡೆದ ಮಗ ಅಥವಾ ಮಗಳು. ವೈದೇಹಕನು ಇದಕ್ಕೆ ವಿಪರೀತ: ಬ್ರಾಹ್ಮಣಹೆಂಗಸು ವೈಶ್ಯನಿಂದ ಪಡೆದ ಸಂತಾನ. ಪಾಣಿನಿಯ ಪ್ರಕಾರ ಈಗಿನ ಪಂಜಾಬ್‌ಪ್ರಾಂತ್ಯದಲ್ಲಿ ಇದ್ದ ಒಂದು ಪ್ರಜಾಪ್ರಭುತ್ವಕ್ಕೆ ವೇಣ ಎಂದು ಹೆಸರು. ವೇಣರಿಗೆ (ವೇಣು?)ವಾದನಪ್ರಧಾನವಾದ ಸಂಗೀತವೇ ವೃತ್ತಿಯೆಂದು ಮನುಸ್ಮೃತಿಯಲ್ಲಿದೆ. ಭರತ ಎಂಬ ವೃತ್ತಿಯಜನರ ಸಾಮಾನ್ಯನಾಮದಿಂದ ಭರತ ಎಂಬ ವೈಯಕ್ತಿಕ ಹೆಸರು ಹುಟ್ಟಿದಂತೆ (?) ವೇಣರ ವೃತ್ತಿಯುಳ್ಳ ಸಮುದಾಯಕ್ಕೆ ಸೇರಿದ ವ್ಯಕ್ತಿಯು ಸಾಮುದಾಯಕ ಹೆಸರನ್ನೇ ಇಟ್ಟುಕೊಂಡಿರಬಹುದೆ? ಮತಂಗನು ‘ವೇಣ್ವಾ(-ಣಾ)ದಯೋ ಮುನಯಃ’ ಎನ್ನುವುದರಿಂದ ಭರತ, ಕಾಶ್ಯಪರಂತೆ ಇವನೂ ಸಂಗೀತಲಕ್ಷಣಕ್ಷೇತ್ರದಲ್ಲಿ ಪೂಜ್ಯವಾದ ಸ್ಥಾನಮಾನಗಳನ್ನು ಪಡೆದಿದ್ದಿರಬೇಕು. ಆದರೂ ಅವನನ್ನು ನಂತರದ ಸಂಗೀತಶಾಸ್ತ್ರಕಾರು ಏಕೆ ಗಮನಿಸದೆ ಹೋದರೆಂಬುದು ಚಿಂತ್ಯವಾಗಿದೆ.

೧೬. ಶಾರ್ದೂಲ

ಶಾರ್ಙ್ಗದೇವ, ಸಂಗೀತಮಕರಂದಕಾರ ಹಾಗೂ ಕುಂಭಕರ್ಣರು ಶಾರ್ದೂಲನನ್ನು ಪೂರ್ವಾಚಾರ್ಯರಲ್ಲಿ ಸೇರಿಸುತ್ತಾರೆ. ಕಲ್ಲಿನಾಥನು ಸಂಗೀತರತ್ನಾಕರದ ನರ್ತನಾಧ್ಯಾಯದ ವ್ಯಾಖ್ಯಾನ ಸಂದರ್ಭದಲ್ಲಿ ಶಾರ್ದೂಲ-ಕೋಹಲ ಸಂವಾದರೂಪದ ಸಂಗೀತಮೇರುವಿನಿಂದ ಸುಧೀರ್ಘವಾದ ಎರಡನೆಯ ಆಹ್ನಿಕವನ್ನು ಉದ್ಧರಿಸಿಕೊಳ್ಳುತ್ತಾನೆ. ಮತಂಗ, ಲೌಹಿತ್ಯಭಟ್ಟ, ಸುಮಂತ, ಕೀರ್ತಿಧರ, ಕ್ಷೇಮರಾಜರನ್ನು ಉಲ್ಲೇಖಿಸುವುದರಿಂದ ಸಂಗೀತಮೇರುವು (ಅಥವಾ ಅದರ ಎರಡನೆಯ ಆಹ್ನಿಕವು) ಹನ್ನೊಂದನೆಯ ಶತಮಾನಕ್ಕಿಂತ ಈಚಿನದಾಗುತ್ತದೆ. ಕೋಹಲನ ಮೂಲಗ್ರಂಥದ ಉಪಬೃಂಹಣರೂಪದಲ್ಲಿ ಸಂಗೀತಮೇರುವು ಅನ್ಯಕೃತವಾಗಿರಬಹುದೆ ಎಂಬುದು ಚಿಂತ್ಯವಾಗಿದೆ.

ಬೃಹದ್ದೇಶಿಯು ಗೀತಿಯು ಭಾಷಾ ಎಂಬ ಒಂದೇ ವಿಧವೆನ್ನುವುದಕ್ಕೂ ಟಕ್ಕ, ಹಿಂದೋಲ, (ಮಾಲವ)ಪಂಚಮ ಮತ್ತು ಭಿನ್ನಷಡ್ಜವೆಂಬ ಗ್ರಾಮರಾಗಗಳಲ್ಲಿ ಹುಟ್ಟಿದ ಭಾಷಾರಾಗಗಳಿಗೆ, ಯಾಷ್ಷಿಕನು ಅವುಗಳಿಗೆ ನೀಡುವ ಲಕ್ಷಣಗಳ ಬದಲು, ಪ್ರಕಾರಾಂತರ ವರ್ಣನೆಗಳನ್ನು ಸಂಗ್ರಹಿಸುವುದಕ್ಕೂ ಒಟ್ಟು ಐದು ಸಲ ಶಾರ್ದೂಲನನ್ನು ಉಲ್ಲೇಖಿಸಿದೆ.

೧೭. ಸುಶ್ರುತ

ಸುಶ್ರುತನು ಪ್ರಾಚೀನಭಾರತದ ಅತ್ಯಂತ ಪ್ರಸಿದ್ಧ ಆಯುರ್ವೇದ ಪ್ರವರ್ತಕರಲ್ಲಿ ಒಬ್ಬನು. ಶಲ್ಯತಂತ್ರದಲ್ಲಿ ಅವನೇ ಆಯುರ್ವೇದ ವಿದ್ಯೆಗೆ ಪ್ರಾಮಾಣಿಕನಾದ ಮೂಲಪುರುಷನೆಂದರೂ ತಪ್ಪಿಲ್ಲ. ಅವನ ಸುಶ್ರುತಸಂಹಿತೆಯ ಚರಕಾಚಾರ್ಯನ ಚರತಸಂಹಿತೆಗೆ ಪೂರಕವೆಂದು ಹೇಳಬಹುದು. ಎರಡೂ ಕ್ರಿಸ್ತಪೂರ್ವಯುಗದಲ್ಲಿ ರಚಿತವಾದವುಗಳು. ಮಾನವ ಶರೀರದಲ್ಲಿ ಏಳು ಧಾತುಗಳಿವೆಯೆಂದು ತಾನು ಹೇಳುವುದರ ಸಮರ್ಥನೆಯಲ್ಲಿ ಮತಂಗನು ಸುಶ್ರುತಾಚಾರ್ಯನ ಸುಶ್ರುತಸಂಹಿತೆಯಿಂದ (ಸೂತ್ರ ಸ್ಥಾನ ೫.೮.೭೯) ಉದ್ಧರಿಸಿಕೊಂಡಿದ್ದಾನೆ. ಹೀಗೆ ಮಾಡುವಲ್ಲಿ ಮಾನವಶರೀರ ರಚನೆಯ ನಿರೂಪಣೆಯಲ್ಲಿ ಚರಕನಿಗಿಂತ ಸುಶ್ರುತನೇ ಹೆಚ್ಚು ವಿಶ್ವಸನೀಯನೆಂದು ಮತಂಗಮುನಿಯು ಭಾವಿಸಿರುವಂತೆ ತೋರುತ್ತದೆ. ಶರೀರದಲ್ಲಿ ಅಸ್ಥಿ, ಮಾಂಸ, ಮಜ್ಜಾ ಇತ್ಯಾದಿ ಧಾತುಗಳು ಏಳು, (ಯೋಗದೇಹದಲ್ಲಿ ನಾಡೀ) ಚಕ್ರಗಳಿರುವುದೂ ಏಳೇ, ಭೂಮಂಡಲದಲ್ಲಿರುವ ಜಂಬೂ, ಶಾಲ್ಮಲಿ ಇತ್ಯಾದಿ ದ್ವೀಪಗಳೂ ಏಳೇ. ಪಿಂಡಾಂಡದಲ್ಲಿ (ಶರೀರದಲ್ಲಿ) ಮತ್ತು ಅದರ ಉಪಬೃಂಹಣ ರೂಪವಾದ ಬ್ರಹ್ಮಾಂಡದಲ್ಲಿ ಹುಟ್ಟುವ ಸ್ವರಗಳೂ ಏಳೇ ಎಂಬ ಮಾತನ್ನು ಮತಂಗನು ಇಲ್ಲಿ ಆಡುತ್ತಿದ್ದಾನೆ. ಧ್ವನಿಯು ವ್ಯಾಪಕವಾದುದು, ನಾದವು ಸರ್ವಕ್ಕೂ ಕಾರಣವಾದುದು, ವರ್ಣಮಾತೃಕೆಗಳೂ ಷಡ್ಜಾದಿ ಸಪ್ತಸ್ವರಗಳೂ ಅವುಗಳ ಪ್ರಕಟರೂಪಗಳು ಎಂಬ ತಾತ್ವಿಕ ಪ್ರಮೇಯವನ್ನು ಗ್ರಂಥಾದಿಯಲ್ಲೇ ನಿರೂಪಿಸಿರುವುದನ್ನು (೪-೧೩,೧೭-೨೨) ಈ ಸಂದರ್ಭದಲ್ಲಿ ಸ್ಮರಿಸಬಹುದು.

ಸುಶ್ರುತನು ಪ್ರಸಿದ್ಧ ಪುರಾತನ ಆಯುರ್ವೇಚಾರ್ಯ, ಬೃಹತ್ತ್ರಯೀಕರ್ತರ ಪೈಕಿ ಸುಶ್ರುತಸಂಹಿತೆಯನ್ನು ರಚಿಸಿದವನು. ಆಯುರ್ವೇದವು ಅಥರ್ವವೇದದ ಉಪವೇದವಾಗಿದ್ದು ಬ್ರಾಹ್ಮ, ವೈಷ್ಣವ ಮತ್ತು ಶೈವವೆಂಬ ಮೂರು ಪಂಥಗಳಲ್ಲಿ ಪ್ರಸಾರವಾಯಿತು. ಪುನರ್ವಸು ಆತ್ರೇಯ, ಧನ್ವಂತರಿ ಮತ್ತು ಮಹೇಶ್ವರ(=ಶಿವ)ರು ಕ್ರಮವಾಗಿ ಇವುಗಳ ಪ್ರವರ್ತಕರಾಗಿ ಕಾಯಚಿಕಿತ್ಸೆ ಮತ್ತು ರಸಚಿಕಿತ್ಸೆಗಳಿಗೆ ಕ್ರಮವಾಗಿ ಮೂಲಪುರುಷರೆನ್ನಿಸಿದ್ದರು. ಆಯುರ್ವೇದದ ಕಾಯ, ಬಾಲ, ಗ್ರಹ, ಶಾಲಾಕ್ಯ,ಶಲ್ಯ, ವಿಷ, ರಸಾಯನ, ಮತ್ತು ವಾಜೀಕರಣಗಳೆಂಬ ಅಷ್ಟತಂತ್ರಗಳ ಪೈಕಿ ಸುಶ್ರುತನು ಶಲ್ಯತಂತ್ರದ ಆದ್ವಾಚಾರ್ಯನಾದನು. ಸುಶ್ರುತಸಂಹಿತೆಯಲ್ಲಿ ಕಾಶೀರಾಜನಾದ ದಿವೋದಾಸನು ಆದಿದೇವನಾದ ಧನ್ವಂತರಿಯ ಅವತಾರವೆನಿಸಿ, ಸುಶ್ರತನನ್ನು ಮುಂದಿಟ್ಟುಕೊಂಡ ಔಪಧೇನವ, ವೈತರಣ, ಔರಭ್ರ ಮುಂತಾದ ಶಿಷ್ಯರಿಗೆ ಶಲ್ಯತಂತ್ರವನ್ನು ಉಪದೇಶಿಸಿದನೆಂದು ಹೇಳಿದೆ. ಸುಶ್ರುತನೆಂಬುದು ಜನ್ಮನಾಮವೋ (ಭರತಮತಂಗಾದಿಗಳಂತೆ ಮತ್ತು) ಚರಕನಂತೆ ಸಾಂಕೇತಿಕವಾಗಿ ಇಟ್ಟುಕೊಂಡ ಹೆಸರೋ ತಿಳಿಯದು. ಅವನು ಕ್ರಿ.ಪೂ.೮ನೆಯ ಶತಮಾನದ ಸುಮಾರಿನಲ್ಲಿದ್ದವನೆಂಬುದು ವಿದ್ವತ್ಸಮ್ಮತವಾದ ಅಭಿಪ್ರಾಯ. ಸುಶ್ರುತನು ವಿಶ್ವಾಮಿತ್ರನೆಂಬುವನ ಮಗ.

ಸುಶ್ರುತಸಂಹಿತೆಯು ಪೂರ್ವತಂತ್ರ ಮತ್ತು ಉತ್ತರತಂತ್ರವೆಂಬ ಎರಡು ಭಾಗಗಳಲ್ಲಿದೆ. (ಉತ್ತರತಂತ್ರವು ನಂತರದ ಕಾಲದಲ್ಲಿ ಬೇರೆಯವರಿಂದ ರಚಿತವಾಯಿತೆನ್ನುವ ವಾದದಲ್ಲಿ ಹುರುಳಿಲ್ಲ). ಪೂರ್ವತಂತ್ರದಲ್ಲಿ ಸೂತ್ರ, ನಿದಾನ, ಶರೀರ, (ಮುಖ್ಯವಾಗಿ ಶಸ್ತ್ರ) ಚಿಕಿತ್ಸಾ, ಆಗದ (=ವಿಷ) ಎಂಬ ಐದು ಸ್ಥಾನಗಳಿವೆ. ಉತ್ತರತಂತ್ರದಲ್ಲಿ ವಿವಿಧವಾದ ರೋಗಗಳ ವರ್ಣನೆ, ಅವುಗಳ ಚಿಕಿತ್ಸೆ ಮತ್ತಿತರ ಪ್ರಕೀರ್ಣಕವಿಷಯಗಳನ್ನು ಹೇಳಿದೆ. ಅಗ್ನಿವೇಶನ ಉಪದೇಶವನ್ನು ಚರಕನು ಸಂಹಿತೆಗೊಳಿಸಿ ದೃಢಬಲನು ಆಧುನಿಕ ರೂಪಕ್ಕೆ ಪರಿಷ್ಕರಿಸಿದಂತೆ ಸುಶ್ರುತಸಂಹಿತೆಯನ್ನು ನಾಗಾರ್ಜುನ ಭಿಕ್ಷುವು ಸಂಪಾದಿಸಿ ಈಗ ದೊರೆಯುವ ರೂಪಕ್ಕೆ ಪರಿಷ್ಕರಿಸಿದನು. ಈ ಸಂಹಿತೆಗೆ ಅನೇಕ ವ್ಯಾಖ್ಯಾನಗಳಿದ್ದರೂ ದಲ್ಹಣನು ರಚಿಸಿರುವ ವ್ಯಾಖ್ಯಾನವೇ ಅತ್ಯಂತ ಪ್ರಸಿದ್ದವೂ ಮುಖ್ಯವೂ ಆಗಿದೆ.

ಸುಶ್ರುತನು ಕಾಶೀನಿವಾಸಿಯೆಂದೂ ಸ್ವತಃ ಶವಚ್ಛೇದ (‘ಡಿಸೆಕ್ಷನ್’) ಮಾಡಿ ತನ್ನ ಗ್ರಂಥವನ್ನು ರಚಿಸಿದನೆಂದೂ, ನಂಬಲಾಗಿದೆ. ಕ್ರಿ.ಶ.೪ನೆಯ ಶತಾಬ್ದದಲ್ಲಿ ಬರೆಯಲಾದ, ಬೌವರ್ ಹಸ್ತಲೇಖನದಲ್ಲಿ ಚರಕಸಂಹಿತೆ ಮತ್ತು ಸುಶ್ರುತಸಂಹಿತೆಗಳಲ್ಲಿರುವ ಹಲವು ಅನುಪಾನಗಳನ್ನು ವಿವರಿಸಿದೆ. ಇವೆರಡು ಗ್ರಂಥಗಳನ್ನೂ ಅರಬ್ಬೀ ಭಾಷೆಗೆ ಕ್ರಿ.ಶ. ೮೦೦ರ ಹಿಂದೆಯೇ ಅನುವಾದಿಸಲಾಯಿತೆಂದು ‘ಫಿಹ್ರಿಸ್ತ್’ ಎಂಬ ಗ್ರಂಥದಿಂದ ತಿಳಿದುಬರುತ್ತದೆ. ಇಬ್ನ್‌ಸೀನ, ರಾಹಸೆಸ್ ಮುಂತಾದ ಅರೇಬಿಯದ ವೈದ್ಯರು ಚರಕ ಸುಶ್ರುತಾದಿಗಳ ಹಿಂದೂ ವೈದ್ಯಪದ್ಧತಿಯನ್ನೇ ಯೂರೋಪಿನಲ್ಲಿ ಪ್ರಚಾರಮಾಡಿದರು; ಇಬ್ನ್‌ಸೀನನ ಗ್ರಂಥವೇ ಯೂರೋಪಿನ ವೈದ್ಯರಿಗೆ ೧೯ನೆಯ ಶತಮಾನದವರೆಗೆ ಆಧಾರವಾಗಿತ್ತು.

ಮೂಲಸುಶ್ರುತಸಂಹಿತೆಯ ಪೂರ್ವತಂತ್ರದಲ್ಲಿ ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆಗಳ ವಿವರಗಳಿದ್ದವೆಂದೂ ಅವುಗಳು ನಷ್ಟಪ್ರಾಯವಾದಮೇಲೆ ಕಳೆದುಳಿದ ಅಂಶವನ್ನು ಬೇರೆಯವರು ಉತ್ತರತಂತ್ರದಲ್ಲಿ ಸೇರಿಸಿದರೆಂದೂ ಕೆಲವು ಸಂಶೋಧಕರು ತಿಳಿಸುತ್ತಾರೆ. ಸುಶ್ರುತಸಂಹಿತೆಯು ಶಸ್ತ್ರಚಿಕಿತ್ಸೆಯಲ್ಲಿ-ವಿಶ್ವದಲ್ಲೇ ಪ್ರಪ್ರಥಮ ವೈಜ್ಞಾನಿಕ ಗ್ರಂಥವಾಗಿದೆ. ಇದರಲ್ಲಿ ೧೨೦ ಶಸ್ತ್ರಗಳ ವರ್ಣನೆ, ಅವುಗಳನ್ನು ಬಳಸಿಕೊಂಡು ಮಾಡಬಹುದಾದ ಕ್ರಿಯೆಗಳು, ಶಸ್ತ್ರಚಿಕಿತ್ಸೆಗೆ ಮೊದಲು ಮಾಡಿಕೊಳ್ಳಬೇಕಾದ ಸಿದ್ಧತೆಗಳು, ಚಿಕಿತ್ಸೆಯ ನಂತರ ಮಾಡಬೇಕಾದ ಕರ್ಮಗಳು (ಇವುಗಳ ಕ್ರಮ ಮತ್ತು ವಿಧಾನಗಳು) ಮುಂತಾದವನ್ನು ಕರಾರುವಾಕ್ಕಾಗಿ ವಿವರಿಸಿದೆ. ಇವುಗಳ ಪೈಕಿ ಬಹುಭಾಗವು ಈಗಲೂ ಅನುಸರಿಸಲು ಯೋಗ್ಯವಾಗಿದೆ. ಶಸ್ತ್ರಚಿಕಿತ್ಸೆಗೆ ಮೊದಲು ಬಳಸಬೇಕಾದ ಸಂವೇದನಾಶೂನ್ಯಕಾರಕಗಳನ್ನು (ಅನೀಸ್ತೇಟಿಕ್ಸ್) ಸುಶ್ರುತನು ಹೇಳಿಲ್ಲವೆಂಬುದು ಗಮನಾರ್ಹವಾಗಿದೆ.

ಸುಶ್ರುತಸಂಹಿತೆಯ ಶಾರೀರಸ್ಥಾನವು ಹಲವಾರು ಶಸ್ತ್ರಗಳ ಅಳತೆ, ಆಕಾರ, ಪ್ರಯೋಗಿಸುವ ವಿಧಾನ, ಅದರ ತತ್ತ್ವಗಳು ಇತ್ಯಾದಿಗಳನ್ನು ವಿವರಪೂರ್ಣವಾಗಿ ವಿವರಿಸುತ್ತದೆ (ಅಧ್ಯಾಯಗಳು ೭,೮,೯) ಇವುಗಳಲ್ಲಿ ಕ್ರಿಸ್ತಪೂರ್ವಯುಗಕ್ಕೆ ಸೇರಿದ ಹಲವು ಶಸ್ತ್ರಗಳು ಪುರಾತತ್ತ್ವ ಉತ್ಖನನಗಳಲ್ಲಿ ದೊರೆತಿವೆಯೆಂಬುದು ಉಲ್ಲೇಖಾರ್ಹವಾಗಿದೆ; ಅಷ್ಟೇ ಅಲ್ಲದೆ ಈ ಸ್ಥಾನದಲ್ಲಿ ಶಸ್ತ್ರಚಿಕಿತ್ಸೆಗೆ ಬಳಸುವ ಕ್ಞಾರವನ್ನೂ (ಅಧ್ಯಾಯ ೧೧), ದಾಹಕರ್ಮವನ್ನೂ (ಕಾಟರಿ) (ಅಧ್ಯಾಯ೧೨) ವಿವರಿಸಿದೆ. ಇದಲ್ಲದೆ ಕಣ್ಣಿನ ಪೊರೆಯನ್ನು ತೆಗೆಯಲೂ, ಮತ್ತಿತರ ಕಾರಣಗಳಿಗಾಗಿಯೂ, ಮಾಡುವ ನೇತ್ರಚಿಕಿತ್ಸೆ ಕಿವಿಯ ಶಸ್ತ್ರಚಿಕಿತ್ಸೆ ಮುಂತಾದವನ್ನೂ ವೈಜ್ಞಾನಿಕವಾಗಿ ವರ್ಣಿಸಲಾಗಿದೆ. ಆಶ್ಚರ್ಯವೆಂದರೆ ಅದರ ಹದಿನಾರನೆಯ ಅಧ್ಯಾಯದಲ್ಲಿ ರೋಗಿಯ ದೇಹದ ಇತರ ಆವಯವಗಳಿಂದ ಚರ್ಮ, ಮೃದ್ವಸ್ಥಿ ಅಥವಾ ಮೂಳೆಗಳನ್ನು ತೆಗೆದುಕೊಂಡು ಮೂಗಿನ ಆಕಾರವನ್ನು ಬದಲಾಯಿಸುವ ಶಸ್ತ್ರಚಿಕಿತ್ಸೆಯನ್ನು ಎಲ್ಲ ವಿವರಗಳೊಡನೆ ವಿವರಿಸಲಾಗಿದೆ. ಇಂದಿನ ದಿನಗಳಲ್ಲಿ ಸಹ ಇದನ್ನು ರಿಹನೋಪ್ಲಾಸ್ಟಿ ಎಂಬ ಹೆಸರಿನ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಯಥಾವತ್ತಾಗಿ ವಿಶ್ವಾದ್ಯಂತ ಯಶಸ್ವಿಯಾಗಿ ಬಳಸಲಾಗುತ್ತಿದೆಯೆಂಬುದು ವಿಸ್ಮಯ ಮತ್ತು ಹೆಮ್ಮೆಗಳಿಗೆ ಆಸ್ಪದವಾಗಿದೆ.

VIII ಮತಂಗಪ್ರಭಾವ

ಸಂಗೀತನೃತ್ತಶಾಸ್ತ್ರಪರಂಪರೆಯಲ್ಲಿ ಅತ್ಯಂತ ಪ್ರಭಾವವನ್ನು ಬೀರಿದ ಗ್ರಂಥಗಳು ಮೂರು : ನಾಟ್ಯಶಾಸ್ತ್ರ ಬೃಹದ್ದೇಶಿ ಮತ್ತು ಸಂಗೀತರತ್ನಾಕರ ತಮ್ಮ ರಚನಾನಂತರದ ಕಾಲದಲ್ಲಿ ಬೇರೆಬೇರೆ ಕಾಲದೇಶಗಳ ಲಾಕ್ಷಣಿಕರಿಂದ ಇವು ಅತ್ಯಂತವಾಗಿ ಪೂರ್ವಾಚಾರ್ಯಸ್ಮರಣ, ಉದ್ಧೃತಿ, ಮತ್ತು ಉಲ್ಲೇಖಗಳನ್ನು ಗಳಿಸಿದವು. ಇವುಗಳ ಪೈಕಿ ಬೃಹದ್ದೇಶಿಯು ಮೊದಲನೆಯ ಅಧ್ಯಾಯದಲ್ಲಿರುವ ಸ್ವಲ್ಪಾಂಶವನ್ನೂ ಎರಡನೆಯ ಅಧ್ಯಾಯದಲ್ಲಿರುವ ಅಧಿಕಾಂಶವನ್ನು ಬಿಟ್ಟರೆ ಉಳಿದೆಲ್ಲ ವಿಷಯಗಳನ್ನೂ ಪ್ರಪ್ರಥಮವಾಗಿ ಪ್ರತಿಪಾದಿಸುತ್ತದೆ. ಅದರಲ್ಲಿಯೂ ಶ್ರುತಿಯ ಕಲ್ಪನೆ, ತತ್ತ್ವ, ವೈವಿಧ್ಯ, ಸ್ವರದೊಡನೆ ಸಂಬಂಧ, ಸ್ವರಗಳ ಕುಲವರ್ಣಾದಿ ನಿರ್ಣಯ, ನಾಮನಿರ್ವಚನ, ಉದ್ಧಾರಕ್ರಮ, ತಾನಗಳ ಯಜ್ಞನಾಮಗಳು, ವರ್ಣಾಲಂಕಾರಗಳು, ತಾನಪ್ರಸ್ತಾರ, ಪದಗೀತಿಗಳು, ಜಾತಿಸಾಮಾನ್ಯಲಕ್ಷಣಗಳು, ಗ್ರಾಮರಾಗವರ್ಗೀಕರಣ, ಲಕ್ಷಣಗಳು, ಗೀತಿಗಳು, ಭಾಷಾರಾಗಗಳು, ದೇಶೀರಾಗಗಳು – ಇವೆಲ್ಲ ನಂತರದ ಶಾಸ್ತ್ರಕಾರರ ಗಮನವನ್ನು ಸೆಳೆದು ಪ್ರಾಥಮಿಕ ಪ್ರಮಾಣಗಳೆನ್ನಿಸಿಕೊಂಡಿವೆ. ಅಂತೆಯೇ ವಾದ್ಯಾಧ್ಯಾಯ, ನೃತ್ತಾಧ್ಯಾಯಗಳೂ ನಂತರದ ಲಾಕ್ಷಣಿಕರ ಉದ್ಧೃತಿಗಳಿಗೆ ಆಶ್ರಯವಾಗಿವೆ. ಇಡೀ ಬೃಹದ್ದೇಶಿಯಲ್ಲಿ ಉತ್ತರಕಾಲೀನ ಗ್ರಂಥಗಳಿಂದ ಉದ್ಧೃತಿಯನ್ನು ಅಷ್ಟಾಗಿ ಆಕರ್ಷಿಸದಿರುವ ಭಾಗವೆಂದರೆ ಅದರ ಪ್ರಬಂಧಾಧ್ಯಾಯ: ಅದರಲ್ಲಿ ಏಲಾ ಪ್ರಬಂಧದ ವರ್ಣನೆಯೊಂದು ಮಾತ್ರ ಪದೇಪದೇ ಉದ್ಧೃತವಾಗಿದೆ. ಹೀಗೆ ಬೃಹದ್ದೇಶಿಯು ತನ್ನ ನಂತರದ ಕಾಲದ ಸಂಗೀತಶಾಸ್ತ್ರಕಾರರ ಮೇಲೆ ಬೀರಿದ ಪ್ರಭಾವವನ್ನು ಸಂಕ್ಷೇಪವಾಗಿ ಪರಿಶೀಲಿಸಬಹುದು.

i. ದಾಮೋದರಗುಪ್ತ

ಕಲ್ಹಣನು ರಾಜತರಂಗಿಣಿಯಲ್ಲಿ (೪.೪೮೮,೯೬) ಕಾಶ್ಮೀರದ ರಾಜನಾಗಿದ್ದ ಜಯಾಪೀಡ (=ಜಯಾದಿತ್ಯ)ನ ಆಸ್ಥಾನದಲ್ಲಿ ದಾಮೋದರಗುಪ್ತನು ಮಂತ್ರಿಯಾಗಿದ್ದನೆಂದೂ ವಾಮನಪಂಡಿತ, ಮನೋರಥ, ಶಂಖದತ್ರ, ಚಟಕ, ಸಂಧಿಮಂತ ಮುಂತಾದ ವಿದ್ವನ್ಮಂತ್ರಿಗಲೂ ಸಹ ಇದ್ದರೆಂದೂ ಬರೆಯುತ್ತಾನೆ.ಜಯಾಪೀಡನ ಆಳ್ವಿಕೆಯ ಕಾಲವು ಕ್ರಿ.ಶ.೭೫೫ ರಿಂದ ೭೮೭ ರ ವರೆಗೆ ಎಂದು ತೀರ್ಮಾನವಾಗಿದೆ. ಈ ಬ್ರಾಹ್ಮಣಕವಿಯು ಕುಟ್ಟಿನೀಮತವೆಂಬ ಗ್ರಂಥವನ್ನು ಆರ್ಯಾವೃತ್ತದಲ್ಲಿ ರಚಿಸಿದ್ದಾನೆ. ಇದರಲ್ಲಿ ಕುಟ್ಟಿನಿ (=ಕುಂಟಿಣಿ)ಯ ಅಥವಾ ಶಂಭುಳಿಯ ಚಾತುರ್ಯಗಳನ್ನೂ ವೇಶ್ಯೆಯ ಚೇಷ್ಟೆಗಳನ್ನೂ ಜಾರರ ದುರವಸ್ಥೆಯನ್ನೂ ಉಪದೇಶಿಸುವ ನೀತಿಯಿದೆ. ಮತಂಗನು ಕೊಳಲು ಮುಂತಾದ ಸುಷಿರವಾದ್ಯಗಳನ್ನು ನುಡಿಸುವುದರಲ್ಲಿ ಪಂಡಿತನಾಗಿದ್ದನೆಂದು ದಾಮೋದರಗುಪ್ತನು ಶ್ಲಾಘಿಸುತ್ತಾನೆ. ಮತಂಗನು ಸುಷಿರವಾದ್ಯ ಪಂಡಿತನೆಂಬುದಕ್ಕೆ ಬೇರೆ ಸಮರ್ಥನೆಯೂ ದೊರೆಯುತ್ತದೆ.

ii. ಅಭಿನವುಗುಪ್ತ

ಅಭಿನವಗುಪ್ತನು ಮಾನವಕೋಟಿಯಲ್ಲಿ ಮುಗಿಲಮೇಲೇರಿ ನಿಲ್ಲುವ ಅತಿಮಾನವ, ಕಾಶ್ಮೀರದಲ್ಲಿ ಹತ್ತನೆಯ ಶತಮಾನದ ತೃತೀಯಪಾದದಲ್ಲಿ ಜನ್ಮತಾಳಿ, ಶತಾಯುಷಿಯಾಗಿ ಬಾಳಿ ನಂತರ ಗುಹಾಪ್ರವೇಶ ಮಾಡಿದ ಮಹಾಮಾಹೇಶ್ವರ ತ್ರಿಕದರ್ಶನದ ಸೀಮಾಪುರುಷ. ಅವನು ಯೋಗಿ ಭೂಸ್ಥಿತಿಯಲ್ಲಿದ್ದ (ಎಂದರೆ ಭೈರಾವಾವಸ್ಥೆಯನ್ನು ತಲುಪಿದ್ದ) ನರಸಿಂಹಗುಪ್ತ ಮತ್ತು ವಿಮಲಕಲಾ ದಂಪತಿಗಳ ಮಗ. ಅವರಿಗೆ ಮಧ್ಯತೀವ್ರಶಕ್ತಿಪಾತವು ಅನುಗೃಹೀತವಾಗಿದ್ದು ಇದರಿಂದ ಶಿವನಲ್ಲಿ ಅಚಲಭಕ್ತಿ, ಮಂತ್ರಸಿದ್ಧಿ, ಸರ್ವತತ್ತ್ವವಶಿತ್ವ, ಕೃತ್ಯಸಂಪದ, ಕವಿತ್ವ, ಸರ್ವಶಾಸ್ತ್ರಾರ್ಥಬೋದ್ಧೃತ್ವಗಳೆಂಬ ಆರು ಸಿದ್ಧಿಗಳು ಉಂಟಾಗಿದ್ದವು. ಅವನು ಇಪ್ಪತ್ತಮೂರು ಮಹಾಗುರುಗಳಿಂದ ಅನೇಕ ಶಾಸ್ತ್ರಗಳಲ್ಲಿ ಪಾರಂಗತನಾಗಿ ನಲವತ್ತನಾಲ್ಕಕ್ಕೂ ಮೀರಿದ ಅದ್ಭುತ ಗ್ರಂಥಗಳನ್ನು ರಚಿಸಿದ್ದಾನೆ. ಅವನಲ್ಲಿ ನಿಶಿತ, ವಿಮರ್ಶಾಶಕ್ತಿ-ಅತ್ಯುನ್ನತ ಸೃಜನಶೀಲತೆ, ಗಾಢವಾದ ದಾರ್ಶನಿಕ ಅಂತರ್ದೃಷ್ಟಿ – ನಾಟ್ಯ, ಸಂಗೀತ, ನೃತ್ಯ, ಸಾಹಿತ್ಯಾದಿಗಳ ಸೌಂದರ್ಯಾನುಭವದ ಸೂಕ್ಷ್ಮಾತಿಸೂಕ್ಷ್ಮ ಗೋಚರಗಳು, ವ್ಯಾಖ್ಯಾನ ಕೌಶಲ-ಸ್ವತಂತ್ರ, ಚಿಕಿತ್ಸಕ ಆಲೋಚನಾಶಕ್ತಿ ಇವುಗಳು ಸಂಗಮಿಸಿದ್ದವು. ಅವನ ಸಾಧನೆಯ ಉತ್ತುಂಗ ಶೃಂಗಗಳು ಮೂರು : i. ಕಾಶ್ಮೀರಶೈವಸಿದ್ಧಾಂತ(=ತ್ರಿಕ)ವನ್ನು ಪುನರ್ವ್ಯವಸ್ಥೆಗೊಳಿಸಿ ಪುನರುಜ್ಜೀವನಗೊಳಿಸಿದ್ದು ii. ಸಂಶೋಧನ ವಿಧಾನಗಳಿಗೆ ಸುಭದ್ರವಾದ ಭಾವಾತ್ಮಕ, ಭಾವನಾತ್ಮಕ ಹಾಗೂ ಪ್ರಯೋಗಾತ್ಮಕ ನೆಲೆಗಟ್ಟನ್ನು ಸ್ಥಾಪಿಸಿದ್ದು ಮತ್ತು iii. ಭರತಮುನಿಯು ಪ್ರತಿಪಾದಿಸಿದ ಕಲಾನುಭವದಲ್ಲಿನ ರಸಸಿದ್ಧಾಂತವನ್ನು ಪೂರ್ವಾಚಾರ್ಯಮತವೈವಿಧ್ಯದ ಸಮನ್ವಯದಿಂದಲೂ ಗುಣ, ಗೀತಿ, ಅಲಂಕಾರ, ಔಚಿತ್ಯ, ರಸ ಇತ್ಯಾದಿ ವಾದಭೂಮಿಗಳನ್ನು ಧ್ವನಿಸಿದ್ಧಾಂತದಲ್ಲಿ ಏಕ್ರತಗೊಳಿಸಿ, ಸಮಂಜಸಗೊಳಿಸುವುದರಿಂದಲೂ ಗಟ್ಟಿಯಾದ ತಳಹದಿಯ ಮೇಲೆ ನೆಲೆಗೊಳಿಸಿ ಧ್ವನಿಪ್ರತಿಷ್ಠಾಪನಪರಮಾಚಾರ್ಯನೆಂಬ ಅಗ್ಗಳಿಯಕೆಯನ್ನು ಪಡೆದಿದ್ದು. (ವಿವರಗಳಿಗೆ ನೋಡಿ : Sathyanarayana, R. Abhinavagupta on Nada, Nadarcan, pp.41-48; 1995; pp. 49-56, 1996)

ಅಭಿನವಗುಪ್ತಪಾದನ ಎರಡು ಗ್ರಂಥಗಳು ಕಲಾನುಭವದಲ್ಲಿರುವ ಸೌಂದರ್ಯತತ್ತ್ವವನ್ನು ಕೂಲಂಕಷವಾಗಿ ಬೇರೆ ಬೇರೆ ದೃಷ್ಟಿಕೋನಗಳಿಂದ ವಿವೇಚಿಸುತ್ತವೆ: ಇವುಗಳಲ್ಲಿ ಮೊದಲನೆಯದು ಭರತಮುನಿಯ ನಾಟ್ಯಶಾಸ್ತ್ರಕ್ಕೆ ಬರೆದ ನಾಟ್ಯಶಾಸ್ತ್ರವಿವೃತಿ ಅಥವಾ ಅಭಿನವಭಾರತೀ; ಎರಡನೆಯದು ಆನಂದವರ್ಧನನ ಧ್ವನ್ಯಾಲೋಕಕ್ಕೆ ಬರೆದ ಧ್ವನ್ಯಾಲೋಕಲೋಚನ. ಎರಡೂ ಆಯಾ ಕ್ಷೇತ್ರಗಳಲ್ಲಿ ಮೇರುಕೃತಿಗಳು. ಮೊದಲನೆಯದರಲ್ಲಿ ಅವನ ಬಹುಮುಖ ಪ್ರತಿಭೆಯ, ಪಾಂಡಿತ್ಯದ, ಪೂರ್ಣದೃಷ್ಟಿಯ ಬೆಳಕು ಇಡೀ ಗ್ರಂಥವನ್ನೆಲ್ಲ ವ್ಯಾಪಿಸಿ ಅದರ ಮಹತ್ತ್ವವನ್ನು ಎತ್ತಿಹಿಡಿಯುತ್ತದೆ. ಈ ವ್ಯಾಖ್ಯಾನವಿರದಿದ್ದರೆ ನಾಟ್ಯಶಾಸ್ತ್ರವು ದುರ್ಗ್ರಹವಾಗಿಯೇ ಉಳಿಯುತ್ತಿತ್ತು. ಸುಮಾರು ಸಾವಿರ ವರ್ಷಗಳ ನಂತರದಲ್ಲಿ ರಚಿತವಾದರೂ ಈ ವ್ಯಾಖ್ಯಾನವು ತನ್ನ ಕಾಲಕ್ಕೂ ನಮ್ಮ ಕಾಲಕ್ಕೂ ಗ್ರಂಥಕ್ಕೂ ಸೇತುವೆಯನ್ನು ನಿರ್ಮಿಸುತ್ತದೆ. ಇದರಲ್ಲಿ ಮತಂಗನು ವಂಶವಾದನದಿಂದ ಮಹೇಶ್ವರಾರಾಧನವನ್ನು ಮಾಡಿದನು. ಅವನು ವಂಶವಾದನದಲ್ಲಿ ನಾಲ್ಕು ಧಾತುಗಳಿವೆ, ವಂಶವಾದನವನ್ನು ಇಂತಿಂತಹ ರಸಸ್ಥಾನಗಳಲ್ಲಿ ಇಂತಿಂತಹ ರೀತಿಯಲ್ಲಿ ವಿನಿಯೋಗಿಸಬೇಕು ಎಂದಿದ್ದಾನೆಂಬ ಉಲ್ಲೇಖಗಳು ದೊರೆಯುವುದಲ್ಲದೆ ಬೃಹದ್ದೇಶಿಯ ಗ್ರಂಥಭಾಗಗಳೊಡನೆ ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ಸಾಮ್ಯವಿರುವ ಕಡೆಯ ಪಕ್ಷ ೧೭ ಪಾಠಗಳು ಇರುವುದು ಸ್ವಾರಸ್ಯಕರವಾಗಿದೆ. ಇದನ್ನು ಹಿಂದೆಯೇ (ಪು. ೧೧೯-೧೨೬) ಪ್ರತಿಷ್ಠಾಪಿಸಲಾಗಿದೆ.