(ಇ) ಸಂಕ್ರಮಣಾವಸ್ಥೆ

ಪ್ರಾಚೀನ ಭಾರತೀಯಸಂಗೀತದಲ್ಲಿ ಶಾಸ್ತ್ರಪ್ರವರ್ತಕರ ಹೆಸರುಗಳಲ್ಲಿ ಒಂದು ಸ್ವಾರಸ್ಯವಿದೆ: ಅವುಗಳಲ್ಲಿ ಹಲವು ಪ್ರಾಣಿಗಳ ಅಥವಾ ವಸ್ತುಗಳ ಹೆಸರುಗಳು : ದಂತಿಲ (ದತ್ತಿಲ=ಆನೆ), ಮತಂಗ=ಆನೆ, ಕಶ್ಯಪ=ಆಮೆ, ನಾರದ=ಬೆಟ್ಟ (ನಾರದಾ=ಕಬ್ಬಿನ ಬುಡ), ಶಾರ್ದೂಲ=ಹುಲಿ, ಸಿಂಹ, ಚಿರತೆ, ಶರಭ). ಭರತನೆಂದರೆ ನಟ, ನರ್ತಕನೆಂದಷ್ಟೇ ಅಲ್ಲ, ಶಬರನೆಂದೂ ಕೋಶಾರ್ಥವಿರುವುದನ್ನು ಮೋನಿಯರ್ ವಿಲಿಯಂಸ್ ತಿಳಿಸುತ್ತಾನೆ (ಪು.೭೪೭).

ಮತಂಗ, ಮಾತಂಗ / ಮಾತಂಗಿ ಎಂಬ ಶಬ್ದಗಳಿಗೆ ಚಂಡಾಲ / ಚಂಡಾಲಿ ಅಥವಾ ಶಬರ ಎಂಬ ಅರ್ಥಗಳಿವೆಯಷ್ಟೆ. ಮತಂಗನೆಂಬುದು ಹುಟ್ಟು ಹೆಸರಾದರೆ ರೂಢನಾಮವಾಗುತ್ತದೆ. ಇಟ್ಟುಕೊಂಡ ಹೆಸರಾದರೆ ಸಾಂಕೇತಿಕವಾಗುತ್ತದೆ. ಭರತ ಎಂಬುದು ನಟ / ನರ್ತಕನ ವೃತ್ತಿನಾಮವಾದರೆ ನಾಟ್ಯಶಾಸ್ತ್ರರಚಯಿತನಿಗೆ ಹೇಗೆ ಸಾಂಕೇತಿಕವಾಗುತ್ತದೋ ಅಂತಹ ಸನ್ನಿವೇಶವೇ ಮತಂಗನು ಚಂಡಾಲ ಅಥವಾ ಶಬರ ಎಂದಾದರೂ ಒದಗುತ್ತದೆ. ಬೃಹದ್ದೇಶಿಯ ಕರ್ತೃವು ಅನ್ವರ್ಥನಾಮಕನಾಗಿರಲಿ, ಸಂಕೇತನಾಮಕನಾಗಿರಲಿ ಇದರಿಂದ ಸಾಂಸ್ಕೃತಿಕ ಆಲೋಚನಾಪರಂಪರೆಯನ್ನು ಹೀಗೆ ಹೊರಡಿಸಬಹುದು.

ಮತಂಗನು (ರಾಮಾಯಣದಲ್ಲಿ) ಶಬರಮುನಿ. ಅವನ ಶಿಷ್ಯಳೂ ಶಬರಿಯೇ; ಅವನು ಮುನಿ, ಅವನ ಆಶ್ರಮವು ಈಗನ ಹಂಪೆಯ ಬಳಿ ಇತ್ತು. ರಾಮಲಕ್ಷ್ಮಣರು ಅವನಲ್ಲಿ ಗೌರವ, ಪೂಜ್ಯಭಾವಗಳನ್ನು ಹೊಂದಿದ್ದು ಅವನ ಆಶ್ರಮಕ್ಕೆ ಬಂದು ಶಬರಿಯು ಎಂಜಲುಮಾಡಿ ರುಚಿಯಾಗಿವೆಯೆಂದು ಸ್ಥಿರಪಡಿಸಿಕೊಂಡ ಹಣ್ಣುಗಳನ್ನು ಸ್ವೀಕರಿಸಿದರು. ಮಹಾಭಾರತದಲ್ಲಿಯೂ ಮತಂಗನು ಕ್ಷೌರಿಕತಂದೆ ಬ್ರಾಹ್ಮಣಿತಾಯಿಯಿಂದ ಹುಟ್ಟಿ ತಪಸ್ಸಿನಿಂದ ಬ್ರಾಹ್ಮಣನಾದನು. ಮತಂಗಮುನಿಯು ಹಂಪಿಯ ಬಳಿ (ಸಂಭಾವ್ಯವಾಗಿ) ನೆಲೆಸಿದ್ದು ಶಬರಕಿರಾತಪುಲಿಂದಬಾಹ್ಲೀಕ ಬರ್ಬರಾದಿ ವನ್ಯಜಾತಿಯವರ ಸಂಗೀತದ ಪರಿಚಯವು ತನಗಿದ್ದುದನ್ನು ಸೂಚಿಸುತ್ತಾನೆ. ಇತಿಹಾಸಗಳ ಮತಂಗನು ಹುಟ್ಟಿನಿಂದ ಕೀಳುಜಾತಿಯವನಾದರೂ ಸಾಧನೆಯಿಂದ ಮೇಲುಜಾತಿಯವರಿಗೂ ಪೂಜ್ಯನೆನಿಸಿಕೊಂಡನು. ಈ ಮಾತು ಬೃಹದ್ದೇಶಿಯ ಕರ್ತೃವಿಗೂ (ಅವನು ಅನ್ವರ್ಥನಾಮಕನಾಗಿದ್ದರೆ) ಸಲ್ಲುತ್ತದೆ. ಅವನದು ಸಾಂಕೇತಿಕನಾಮವಾಗಿದ್ದರೆ ಇದು ಒಂದು ಮುಖ್ಯ ಸಾಮಾಜಿಕ / ಸಾಂಸ್ಕೃತಿಕ ಸಂಕ್ರಾಂತಿಯ ಸೂಚನೆಯಾಗುತ್ತದೆ.

ಮತಂಗನ ಮಗ ಮಾತಂಗ, ಅವನ ಮಗಳು ಮಾತಂಗಿ. ಅವು ಉಚ್ಛಿಷ್ಟ ಚಾಂಡಾಲಿಯಾದರೂ ಲಲಿತಾಪರಮೇಶ್ವರಿಯ ಮಂತ್ರಿಣಿಯೇ ಆದಳು. ಅವಳ ಮಂತ್ರಕ್ಕೆ ಮತಂಗನೇ ಋಷಿ; ಮಾತಂಗಿಯು ಜಾನಪದ ಸಂಸ್ಕೃತಿಯಲ್ಲಿ ಚಂಡಾಲಹೆಣ್ಣಾದರೂ ಎಲ್ಲಮ್ಮನ ತಂಗಿಯೇ / ಸೇವಕಿಯೇ ಆದಳು. ಎಲ್ಲಮ್ಮನು ಮೇಲ್ಜಾತಿಯ ಜಮದಗ್ನಿಯಿಂದ ಆಕರ್ಷಿತಳಾಗಿ ಅವನಿಗೆ ಪತಿವ್ರತೆಯಾಗಿ ನಡೆದುಕೊಂಡಳು. ಆದರೂ (ಶಿಷ್ಯರು ಕೀಳುಜಾತಿಯವರನ್ನೆಂಬಂತೆ) ಅವನು (ಜಾನಪದದಲ್ಲಿ) ಅವಳು ಮುಗ್ಧೆಯಾಗಿದ್ದರೂ ಅವಳ ತಲೆ ಕಡಿಸಿದ. ಅವಳ ತಲೆಹೋದಾಗಲೇ ಮಾದಿಗರ ಮಾತಂಗಿಯದೂ ಹೋಯಿತು. ಸಮಾಜದ ಒಂದು ಅಂಶಕ್ಕೆ ಕೇಡಾದರೆ ಉಳಿದಿದ್ದಕ್ಕೂ ಕೇಡಾಗದೆ ಇರದು. ಆದರೆ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವ, ಮಾಡಿಸುವ ಅನುಗ್ರಹ ಬುದ್ಧಿ, ಜಾಣ್ಮೆ ಶಿಷ್ಯರಿಗೆ (ಉದಾ. ಜಮದಗ್ನಿಗೆ) ಇದ್ದರೆ ಅವು ಜೀವಂತವಾಗಿಯೇ ಇರುತ್ತವೆ. ಆದರೆ ಎಲ್ಲಮ್ಮ ಮಾತಂಗಿಯರ ತಲೆಗಳು ಅದಲುಬದಲಾದಂತೆ. ಸಮಾಜದ ಸಂಸ್ಕೃತಿಯಲ್ಲಿ ಉಚ್ಚನೀಚಸ್ತರಗಳ ಪರಸ್ಪರ ಅಂತರಪ್ರಸರಣ (cultural interdiffusion)ದ ಪ್ರಕ್ರಿಯೆಯಾಗದೆ ಇದು ಸಾಧ್ಯವಾಗದು. ಆದುದರಿಂದಲೇ ತಲೆಯು ಉತ್ತಮಾಂಗವೆನಿಸಿಕೊಳ್ಳುತ್ತದೆ, ಅದೇ ವ್ಯಕ್ತಿತ್ವದ ಪ್ರತಿನಿಧಿಯಾಗುತ್ತದೆ. ಎಂದೇ ಎಲ್ಲಮ್ಮನಿಗೆ ತಲೆಯದೇ ಪೂಜೆ. ಇಂತಹ ಅಂತರಪ್ರಸರಣವಾದ ಮೇಲೂ ಆಯಾ ಸ್ತರಗಳು ತಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳದೆ ಇರುವುದಿಲ್ಲ. (ಎಲ್ಲಮ್ಮನ ತಲೆ ಶಾಕಾಹಾರವನ್ನೂ ಮಾತಂಗಿಯ ತಲೆ ಮಾಂಸಾಹಾರವನ್ನೂ ಅಪೇಕ್ಷಿಸುವ ಹಾಗೆ); ಏಕೆಂದರೆ ಯಾವುದೇ ಸಮಾಜವು ವಿವಿಧ ಸ್ತರಗಳಿಂದ, ವರ್ಗಗಳಿಂದ ಮಾತ್ರವೇ ಏರ್ಪಡುತ್ತದೆ. ಸ್ತರಗಳಿಲ್ಲದೆ ಅದು ಇರಲಾರದು. ಅವುಗಳಲ್ಲಿ ಆಗಾಗ ಹೊಂದಾಣಿಕೆಗಳೂ ವ್ಯತ್ಯಾಸಗಳೂ ಆಗುತ್ತಿರುತ್ತವೆ. ಕೆಲವೊಮ್ಮೆ ಅವುಗಳ ನಡುವಣ ಕಂದರಗಳು ಕಿರಿದಾಗುತ್ತವೆ, ಕೆಲವೊಮ್ಮೆ ಹಿರಿದಾಗುತ್ತವೆ, ಅಷ್ಟೆ.

ಶಿಷ್ಟತಂತ್ರದ ಮಾತಂಗಿಯ ನೆರಳಾಗಿ ಜಾನಪದತಂತ್ರದ ಮಾತಂಗಿಯೂ ರೂಪುಗೊಂಡಿದ್ದಾಳೆಂಬುದನ್ನು ಮೇಲೆ ತೋರಿಸಲಾಗಿದೆ. ಲಲಿತಾಪರಮೇಶ್ವರಿಯು ಪಂಚಮೀ, ಪಂಚಸಂಖ್ಯೋಪಚಾರಿಣೀ; ರೇಣುಕೆಯು (=ಎಲ್ಲಮ್ಮನು) ರಕ್ತಪಂಚಮಿ; ಮಾತಂಗಿಯೂ ಪಂಚಮಳು, ಮಾದಿಗರವಳು. ಲಲಿತೆಗೆ ತ್ರಿಮಧುರಾದಿಗಳು ನೈವೇದ್ಯವಾದರೆ ಎಲ್ಲಮ್ಮನಿಗೆ ಶಾಕಾಹಾರ, ಮಾತಂಗಿಗೆ ರಕ್ತಬಲಿ, ಚರ್ಮದ ಚಪ್ಪಲಿಯ ಸೇವೆ, ಸಿಡಿಯ ಹರಕೆ, ಶಿಷ್ಟ ಮಾತಂಗಿಯು ಉಚ್ಛಿಷ್ಟ ಚಾಂಡಾಲಿ: ಜಾನಪದ ಮಾತಂಗಿಯೂ ಅಷ್ಟೇ; ಅವಳ ಬೈಗುಳು, ಅವಳ ಉಗಿತ, ಎಂಜಲು ಪವಿತ್ರೀಕರಣದ, ಶುದ್ಧೀಕರಣದ ಲಾಂಛನಗಳು. ಬ್ರಾಹ್ಮಣರೂ ಹಾಗೆಂದುಕೊಂಡು ಅವುಗಳನ್ನು ಭಕ್ತಿಯಿಂದ ಧರಿಸುತ್ತಾರೆ. ಈ ವಿಪರೀತ (ತಲೆಕೆಳಗು) ವ್ಯಾಪಾರವು ನಿಮ್ನ – ಅಥವಾ ದಲಿತ -ವರ್ಗಗಳು ಉಚ್ಚವರ್ಗಗಳ ಮೇಲೆ ತಮ್ಮ ಸಾಮಾಜಿಕ, ಧಾರ್ಮಿಕ ಅಥವಾ ಸಾಂಸ್ಕೃತಿಕ ಪ್ರತೀಕಾರವನ್ನೂ, ಅವರ ಸಮಾನರೆಂದೋ, ಅವುಗಳಿಗಿಂತ ಉತ್ತಮರೆಂದೋ -ಎಷ್ಟೇ ಕ್ಷಣಿಕವಾಗಿರಲಿ – ಸಾಧಿಸಲೆಳಸುವುದರ ಹಾಗೂ ಮೇಲುವರ್ಗದವರು ಅದನ್ನು -ಎಷ್ಟೇ ಕ್ಷಣಿಕವಾಗಿರಲಿ – ಒಪ್ಪಿಕೊಳ್ಳುವುದರ ಸಂಕೇತ. ‌ದಕ್ಷಿಣಭಾರತದ ಹಲವೆಡೆಗಳಲ್ಲಿ ಊರದೇವರ ರಥೋತ್ಸವವಾಗುವಾಗ ತೇರನ್ನು ಪ್ರಾರಂಭದಲ್ಲಿ ಎಳೆಯುವ ಹಕ್ಕು, ಪದ್ಧತಿ ಪಂಚಮರದಾಗಿರುತ್ತದೆ. ಎಲ್ಲಮ್ಮನ ಭಕ್ತೆಯರಾದ ಜೋಗಿತಿಯರು ಅಥವಾ ದೇವದಾಸಿಯರು ನಿತ್ಯಸುಮಂಗಲಿಯರು, ಮೇಲು ಜಾತಿಯವರ ವಿವಾಹಾದಿ ಪವಿತ್ರ ಸಂದರ್ಭಗಳಲ್ಲಿ ಅವರಿಗೆ ಗೌರವದ ಸ್ಥಾನವಿರುತ್ತದೆ.

ಮಾತಂಗಿಯು ಶಿಷ್ಟತಂತ್ರದಲ್ಲಿ ಸುರಾಪಾನಮತ್ತೆಯಷ್ಟೆ. ಶಾಕ್ತತಂತ್ರದ ವಾಮಮಾರ್ಗದಲ್ಲಿ ಪಂಚಮಕಾರಗಳ (ಮದ್ಯ, ಮಾಂಸ, ಈನ, ಮಿಥುನ, ಮುದ್ರಾ) ಸೇವನೆಯಲ್ಲಿ ಮದ್ಯವೇ ಮುಖ್ಯವಾದುದು. ಶ್ರೀವಿದ್ಯೆಯ ಹಾದಿಮಾರ್ಗದಲ್ಲಿ ಇದನ್ನು ಮತ್ತೆ ಮತ್ತೆ ವಿಧಿಸಿದೆ. ಲಲಿತಾಸಹಸ್ರನಾಮದಲ್ಲೂ ಈ ಕೌಲಮಾರ್ಗೋಪಸನೆಯ ಸೂಚನೆಗಳಿವೆ (ಮಾಧ್ವೀಪಾನಾಲಸಾ, ವಾರುಣೀಮದವಿಹ್ವಲಾ ಇತ್ಯಾದಿ). ಜಾನಪದ ಮಾತಂಗಿಯೂ ಸುರಾಪಾನದಿಂದ ಮತ್ತಳೇ. ಇದನ್ನು ಎಲ್ಲಮ್ಮ- ಓರಗಲ್ಲು ರಾಜನ ಕಥೆಯಲ್ಲಿ ಮಾತಂಗಿಯ ಪಾತ್ರವು ಸ್ಪಷ್ಟಪಡಿಸುತ್ತದೆ. ಮಾತಂಗಿಯ ದೀಕ್ಷಾಸಂಸ್ಕಾರದಲ್ಲೂ ಎಲ್ಲಮ್ಮ, ಮಾತಂಗಿಯರಿಗೆಂದು ಹೊರುವ ಹರಕೆ, ಸೇವೆಗಳಲ್ಲೂ ಇದು ಕಂಡುಬರುತ್ತದೆ.

ಮೇಲ್ಕಂಡ ಸಾದೃಶ್ಯ ಪಾರಸ್ಪರ್ಯಗಳು ಆಕಸ್ಮಿಕವೂ, ಅಪವಾದಾತ್ಮಕವೂ, ಕಾಕತಾಳೀಯವೂ ಅಲ್ಲ; ಮಾನವಸಮಾಜಗಳ ವಿವಿಧ ವರ್ಗಗಳಲ್ಲಿ ಒಂದೇ ಮೂಲಭೂತ ಮನಃಸಂಸ್ಕಾರವು ಅಥವಾ ತತ್ತ್ವವು ಹಲವು ಸ್ತರಗಳಲ್ಲಿ ಹಲವು ಆಯಾಮಗಳಲ್ಲಿ ಹಲವು ರೂಪಗಳಲ್ಲಿ ಕ್ರಿಯಾಶೀಲವಾಗುವುದಕ್ಕೆ ಮತ್ತು ಪ್ರಕಟಗೊಳ್ಳುವುದಕ್ಕೆ ಇವು ನಿದರ್ಶನಗಳು. ಅಲ್ಲದೆ ಮೇಲ್ಕಂಡ ವಿವೇಚನೆಯಿಂದ ಹಿಂದೂ ಸಂಸ್ಕೃತಿಗೆ ಸಂಬಂಧಿಸಿದ ಒಂದ ಸಂಕ್ರಮಣಸ್ಥಿತಿಯನ್ನು ಗುರುತಿಸಬಹುದು; ಇದೆಂದರೆ ಶಿಷ್ಟರಲ್ಲಿ – ಸಾಮಾನ್ಯರಲ್ಲಿ, ಆರ್ಯರಲ್ಲಿ-ದ್ರಾವಿಡರಲ್ಲಿ, ಉತ್ತರದಲ್ಲಿ-ದಕ್ಷಿಣದಲ್ಲಿ ಸಮಾನೀಕರಣ, ಭಾವೈಕ್ಯ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ಮೌಲ್ಯಗಳ ಪರಸ್ಪರ ಅಂತಃಪ್ರಸರಣ.

ಇದಕ್ಕೆ ಬೃಹದ್ದೇಶಿಯು ಸಾಂಸ್ಕೃತಿಕ ಕ್ಷೇತ್ರದಲ್ಲಿ -ವಿಶೇಷವಾಗಿ ಸಂಗೀತಶಾಸ್ತ್ರದಲ್ಲಿ – ಒಂದು ಬಲವಾದ ನಿದರ್ಶನವನ್ನು ಒದಗಿಸುತ್ತದೆ.

(ಈ) ಉದ್ದೇಶ

ಬೃಹದ್ದೇಶಿಯು ಎರಡು ಉದ್ದೇಶಗಳ ಸಾಧನೆಗಾಗಿ ಹೊರಟಿದೆ:

i ದೇಶಿಯು ಎಷ್ಟು ಬೃಹತ್ತೆಂದು ತೋರಿಸುವುದು.

ii. ಅಂತಹ ದೇಶಿಯನ್ನು ನಿರೂಪಿಸುವುದು.

ಇದಕ್ಕಾಗಿ ಅದು ದೇಶೀಯನ್ನು ಮಾರ್ಗದಿಂದ ಪೃಥಕ್ಕರಿಸಿ ನಿರೂಪಿಸಿದ್ದರೂ ನಾನ್ಯದೇವ ಶಾರ್ಙ್ಗದೇವಾದಿಗಳು ನಂತರದ ಕಾಲದಲ್ಲಿ ಮಾರ್ಗವೆಂದು ವರ್ಗೀಕರಿಸಿದ ಗ್ರಾಮ-ಮೂರ್ಛನೆ-ತಾನ-ಗ್ರಾಮರಾಗ-ಭಾಷಾತ್ರಯರಾಗ ಮುಂತಾದವನ್ನೂ ಬೃಹತ್-ದೇಶೀಯಲ್ಲೇ ಅಡಕಗೊಳಿಸಿದೆ. ದೇಶೀಯನ್ನು ಬೃಹತ್ತೆಂದು ವರ್ಣಿಸಲು ಇದೂ ಕಾರಣವಾಗಿದ್ದಿರಬಹುದು. ಇಲ್ಲಿ ಒಂದು ಪ್ರಶ್ನೆಯು ಏಳುತ್ತದೆ: ಭರತನು ಹೇಳಿದ್ದೆಲ್ಲ ಅಥವಾ ಹೇಳಿದ್ದು ಮಾತ್ರ ಮಾರ್ಗವೆಂದಾದರೆ ‘ಭರತಾದಿಗಳು ಹೇಳದೆ ಬಿಟ್ಟ ರಾಗಮಾರ್ಗದ ರೂಪವು ಯಾವುದಿದೆಯೋ ಅದನ್ನು ನಾವು ಲಕ್ಷ್ಯ-ಲಕ್ಷಣಯುಕ್ತವಾಗಿ ನಿರೂಪಿಸುತ್ತೇವೆ’ ಎನ್ನುವ ಮತಂಗೋಕ್ತಿಯನ್ನು (೫೮೦)ಹೇಗೆ ಅರ್ಥಮಾಡಿಕೊಳ್ಳಬೇಕು? ‘ಭರತಾದಿ’ ಎನ್ನುವಲ್ಲಿ ‘ಆದಿ’ ಶಬ್ದವನ್ನು ಮೂರು ರೀತಿಯಲ್ಲಿ ಅರ್ಥೈಸಬಹುದು:

i. ರಾಗಲಕ್ಷಣವರ್ಣನೆಯನ್ನೇ ಸಂಪೂರ್ಣವಾಗಿ ಕೈಬಿಟ್ಟು ಜಾತಿಮಾರ್ಗವನ್ನು ಮಾತ್ರ ವಿವರಿಸಿದ ಭರತ, ದತ್ತಿಲ, ಹಾಗೂ ಇವರು ಆಧರಿಸಿ ನಾಮೋಲ್ಲೇಖಮಾಡದೆ ಇದ್ದ ಇತರ ಪೂರ್ವಾಚಾರರು.ಸ

ii. ಭರತ, ಕಾಶ್ಯಪ, ಯಾಷ್ಟಿಕ, ಶಾರ್ದೂಲ ಮುಂತಾದ ಪೂರ್ವಲಾಕ್ಷಣಿಕರು ಯಾವ ರಾಗಮಾರ್ಗವನ್ನು ನಿರೂಪಿಸಿದ್ದಾರೆಯೋ ಅದನ್ನು ಬಿಟ್ಟು ಬೇರೆ ರಾಗಮಾರ್ಗವನ್ನು (ಹೋಲಿಸಿ: ದೇಶೀಮಾರ್ಗ, ಮಾರ್ಗ=ಪದ್ಧತಿ, ೧೬೪) ವಿವರಿಸುತ್ತೇವೆ. ಭರತಮುನಿಯು ದಶರೂಪಕಗಳ ವಿವಿಧ ಸಂದಿಗಳಲ್ಲಿ ಯಾವ ಯಾವ ಶುದ್ಧಗ್ರಾಮರಾಗಗಳನ್ನು ವಿನಿಯೋಗಿಸಬೇಕೆಂದು ಒಮ್ಮೆ (ನಾಟ್ಯಶಾಸ್ತ್ರಂ ೩೨.೪೨೮.೪೨೯) ಮಾತ್ರ ಸೂಚಿಸುತ್ತಾನೆ.ಉಳಿದೆಡೆಗಳಲ್ಲಿ (೧೩.೮೪;೩೨.೪೨೫,೪೨೬) ರಾಗಶಬ್ದವನ್ನು ಪ್ರೇಕ್ಷಕಪ್ರೀತಿ ಎಂಬ ಅರ್ಥದಲ್ಲಿ ಮಾತ್ರ ಬಳಸುತ್ತಾನೆ. ಅಲ್ಲದೆ ಕಾಶ್ಯಪಾದಿಗಳನ್ನು ರಾಗಲಕ್ಷಣಗಳಿಗಾಗಿ ಮತಂಗನು ಆಶ್ರಯಿಸಿರುವುದರಿಂದ ಈ ಎರಡನೆಯ ಅರ್ಥವು ಪ್ರಶಸ್ತವಲ್ಲ.

iii. ‘ಆಲಾಪಾದಿಗಳಿಲ್ಲದ ರಾಗಮಾರ್ಗ, ಎಂದರೆ ಮಾರ್ಗರಾಗ (೧೦೪೪)ಗಳ ಮಾರ್ಗವಲ್ಲದ’ ಎಂದು ಹೇಳುವುದಾದರೆ ನಾನ್ಯದೇವ, ಪಾರ್ಶ್ವದೇವ, ಶಾರ್ಙ್ಗದೇವ ಮುಂತಾದ ನಂತರದ ಲಾಕ್ಷಣಿಕರು (ಪೂರ್ವಾಚಾರ್ಯರನ್ನು ಅಲಂಬಿಸಿ?) ಹೇಳಿದ ಆಲಾಪವಿಧ, ಆಲಾಪವಿಧಾನಗಳನ್ನು ಬಿಟ್ಟು ಕೇವಲ ಹಾಡಿಗೆ ಧಾತುವನ್ನು ಅಳವಡಿಸುವುದಕ್ಕೆ ಬೇಕಾದಷ್ಟು ರಾಗಲಕ್ಷಣ ಪದ್ಧತಿಯನ್ನು ಮಾತ್ರ ವಿವರಿಸುತ್ತೇವೆ, ಎಂದಿಟ್ಟುಕೊಂಡರೆ ಅದನ್ನು ಭಾಷಾರಾಗ ಮತ್ತು ದೇಶೀರಾಗಗಳಿಗೆ ಬೃಹದ್ದೇಶಿಯಲ್ಲಿ ಸ್ವರಪ್ರಸ್ತಾರವನ್ನು ಬರೆದಿರುವುದು ಅಲ್ಲಗಳೆಯುತ್ತದೆ. ಆದುದರಿಂದ ಇರುವುದರಲ್ಲಿ ಮೊದಲನೆಯ ಅರ್ಥವನ್ನೇ ಇಲ್ಲಿ ತೆಗೆದುಕೊಳ್ಳಬೇಕಾಗುತ್ತದೆ.

ಈ ಸಂದರ್ಭದಲ್ಲಿ ಇನ್ನೂ ಒಂದು ಸಂಗತಿಯು ಪ್ರಸಕ್ತವಾಗಿದೆ : ಭರತಮುನಿಯು ರೂಪಕಗಳಲ್ಲಿ ಬರುವ ಧ್ರುವಾದಿಗಳಿಗೆ ಜಾತಿಗಳ ವಿನಿಯೋಗವನ್ನು ಮಾತ್ರ ಹೇಳಿದ್ದಾನೆ: ಮತಂಗನು ಇದನ್ನೂ ಹೇಳಿರುವುದಲ್ಲದೆ ಕಾಶ್ಯಪಾದಿ ಪೂರ್ವಾಚಾರ್ಯರನ್ನು ಅವಲಂಬಿಸಿ ಎಲ್ಲ ಗ್ರಾಮರಾಗಗಳಿಗೂ ರೂಪಕಗಳಲ್ಲಿ ವಿನಿಯೋಗವನ್ನು ಬೃಹದ್ದೇಶಿಯ ಮೂರನೆಯ ಅಧ್ಯಾಯದಲ್ಲಿ ವಿಧಿಸಿದ್ದಾನೆ (ವಿಶೇಷವಾಗಿ ಗಮನಿಸಿ: ೭೩೫-೭೩೭). ಆದರೆ ಭಾಷಾಧ್ಯಾಯದಲ್ಲಿ ರಾಗಗಳನ್ನು ರೂಪಕ ಪ್ರಸಕ್ತಿಯಿಂದ ಬೇರ್ಪಡಿಸಿ, ಅಂತಹ ವಿನಿಯೋಗಗಳಿಲ್ಲದೆಯೇ ಯಾಷ್ಟಿಕಶಾರ್ದೂಲ ಮತಾನುಸಾರವಾಗಿ. ಅಲ್ಲದೆ ಯಾವ ಪೂರ್ವಾಚಾರ್ಯರನ್ನೂ ಆಶ್ರಯಿಸಿದೆ, ಜನರ – ‘ಬುಧ’ ರ ಲಕ್ಷ್ಯಪ್ರಯೋಗವನ್ನು ಮಾತ್ರ ಆಧರಿಸಿ ಮೊಟ್ಟಮೊದಲನೆಯ ಬಾರಿಗೆ ದೇಶೀರಾಗ ಕದಂಬದ ವರ್ಗೀಕರಣಕ್ಕೂ ಲಕ್ಷಣಕ್ಕೂ ಶಾಸ್ತ್ರದಲ್ಲಿ ಪ್ರವೇಶವನ್ನು ದೊರಕಿಸಿಕೊಡುತ್ತಾನೆ. ‘ಯನ್ನೋಕ್ತಂ ಭರತಾದಿಭಿಃ'(೫೮೦) ಎಂಬ ಮಾತನ್ನು ಹೀಗೆ ಅರ್ಥಮಾಡಿಕೊಳ್ಳುವುದು ಸಮಂಜಸವೆನ್ನಿಸುತ್ತದೆ.

ಹೀಗೆ, ಬೃಹದ್ದೇಶಿಯ ಮೊದಲನೆಯ ಸಾಧನೆಯೆಂದರೆ ಮಾರ್ಗ-ದೇಶೀಗಳು ಸಮಾನವೆಂಬಂತಹ ವರ್ಣನೆ, ಅಲ್ಲದೆ ದೇಶೀಯ ಪ್ರಾಮುಖ್ಯ, ಪ್ರಾಧಾನ್ಯಗಳನ್ನು ಅದು ಬೇರೆ ರೀತಿಯಲ್ಲೂ ಎತ್ತಿ ಹಿಡಿದಿದೆ: ದೇಶೀ ರಾಗಗಳಿಗೆ ಪ್ರತ್ಯೇಕವಾದ ಅಧ್ಯಾಯವನ್ನೇ-ಅದು ಎಷ್ಟೇ ಕಿರಿದಾದರೂ – ನಿರ್ಮಿಸಿದೆ. ಇಡೀ (ಉಪಲಬ್ಧ) ಬೃಹದ್ದೇಶಿಯಲ್ಲಿ ದೇಶೀರಾಗಗಳಿಗೆ ಮಾತ್ರ ತನ್ನ ಉಪಾಸ್ಯವಾದ ಶ್ರೀಷೋಡಶೀವಿದ್ಯೆಯ ಮಂಗಲಾಚರಣಶ್ಲೋಕದ ಮುನ್ನುಡಿಯನ್ನು ಮತಂಗನು ಸೇರಿಸಿದ್ದಾನೆ (೧೦೩೭), ದೇಶೀ, ಮಾರ್ಗಗಳಿಗೆರಡಕ್ಕೂ ಆಧಾರಭೂತವಾದ ಸಪ್ತಸ್ವರಗಳ ಉತ್ಪತ್ತಿ ಸ್ಥಾನಗಳು ಮಹೇಶ್ವರಪ್ರೋಕ್ತವೆಂದೂ (೧೦೪), ಅಸಂಖ್ಯೇಯವಾದ ದೇಶೀಕಾರಪ್ರಬಂಧಗಳೆಲ್ಲವೂ ಹರನ ಮುಖಗಳಿಂದ ಉದ್ಭವಿಸಿವೆಯೆಂದೂ (೧೦೫೩) ಹೇಳಿ ಅವುಗಳ ಪಾವಿತ್ಯ್ರವನ್ನು ಎತ್ತಿಹಿಡಿದಿದ್ದಾನೆ (ಹೋಲಿಸಿ: ಮಾತಂಗಿಯ ಎಂಜಲು, ಉಗುಳು ಮೇಲುವರ್ಗದವರಿಗೆ ಪವಿತ್ರವಾದಂತೆ). ಎರಡನೆಯದಾಗಿ, ಶಬ್ದಬ್ರಹ್ಮದ ಅಥವಾ ನಾದಬ್ರಹ್ಮದ ವ್ಯಕ್ತಸ್ವರೂಪವನ್ನು ದೇಶೀಯೆಂದು ಕರೆದು ಅದನ್ನು ಅಬಲಾಬಾಲಗೋಪಾಲರಿಗೂ ಕ್ಷಿತಿಪಾಲರಿಗೂ ಸಗುಣೋಪಾಸನಾಸಾಧ್ಯವನ್ನಾಗಿ ಬೃಹದ್ದೇಶಿಯು ಮಾಡಿದೆ; ಇದರಲ್ಲಿ ದೇಶೀಭಾಷೆಗಳ ಪ್ರಾಮುಖ್ಯವನ್ನು ಎತ್ತಿ ಹೇಳಿದೆ (೩-೧೪). ಭಾಷಾರಾಗಗಳಲ್ಲಿ ಮೂಲಾ, ದೇಶಜಾ, ಛಾಯಾಮಾತ್ರಾಶ್ರಯಾ, ಸಂಕೀರ್ಣಾ ಎಂಬ ವರ್ಗಗಳನ್ನು ಹೇಳಿ ದೇಶೀಪ್ರಯೋಗದ ಮುಖ್ಯತೆಯನ್ನು ಸಾರಿದೆ (೭೩೯ ಮತ್ತು ಮುಂದೆ). ದೇಶಿಕಾರಪ್ರಬಂಧಗಳಲ್ಲಿ ಸಂಸ್ಕೃತದ ಜೊತೆಜೊತೆಗೇ ಕನ್ನಡ, ತಮಿಳು, ತೆಲುಗು,ಲಾಟ ಮುಂತಾದ ದೇಶಭಾಷಾನಿಬದ್ಧವಾದ ಗೇಯರಚನೆಗಳನ್ನು ಪ್ರಪ್ರಥಮವಾಗಿ ಲಕ್ಷಿಸುತ್ತದೆ (೧೦೭೫, ೧೦೮೦, ೧೦೮೨, ೧೦೮೭, ೧೦೮೯, ೧೦೯೧, ೧೦೯೬, ೧೦೯೭, ೧೦೯೯, ೧೦೬೭-೧೧೭೪, ೧೧೮೭). ಬೃಹದ್ದೇಶಿಯಲ್ಲಿ ಉದ್ದೃತರಾದ ಪ್ರಾಮಾಣಿಕರನ್ನು ಗಮನಿಸಿದರೆ (ಅನುಬಂಧ-೧) ಅದರಲ್ಲಿ ಆಗಮ, ಅಚಾರ್ಯ, ಆಪ್ತ, ಗುರು, ಗಾಂಧಾರ್ವವೇದ ಇತ್ಯಾದಿ, ಗೀತಪಾರಗ ಇತ್ಯಾದಿ, ಬುಧ, ಮುನಿ, ಮನೀಷೀ, ಸೂರಿ ಮುಂತಾದವರಿಗೆ ಎಷ್ಟು ಗೌರವ, ಮುಖ್ಯತೆಗಳನ್ನು ಕೊಟ್ಟಿದೆಯೋ, ಜನ, ಗೇಯವೇದಿ, ಪ್ರಯೋಕ್ತೃ ಪ್ರಯೋಗಜ್ಞ, ಸ್ವರಜ್ಞ ಮುಂತಾದವರಿಗೂ ಕಾಂಬೋಜ, ಕಾಲಿಂಗ, ಕಿನ್ನರ, ಕಿರಾತ, ದ್ರಾವಿಡ, ಆಂಧ್ರ, ನಾಗ, ಪುಲಿಂದ, ಬಂಗ, ಬರ್ಬರ, ಬಾಹ್ಲೀಕಾದಿಗಳಿಗೂ ಅಷ್ಟೇ ನೀಡಿರುವುದು ಕಂಡುಬರುತ್ತದೆ. ಈ ನಿಲುವು ಸಂಗೀತಶಾಸ್ತ್ರದಲ್ಲಿ ಮೊದಲಬಾರಿಗೆ ಬೃಹದ್ದೇಶಿಯಲ್ಲೇ ಕಂಡುಬರುತ್ತದೆ. ಮಾರ್ಗವು ಹೇಗೆ ದೇಶಿಯಾಗಿ ಪರಿಣಮಿಸುತ್ತದೆಯೆಂಬುದರ ವಿಕಾಸಕ್ರಮವನ್ನು, ಗಾಮರಾಗ > ಭಾಷಾರಾಗ > ವಿಭಾಷಾ > ಅಂತರಭಾಷಾ, ರಾಗ(=ವೇಸರ)>ರಾಗಾಂಗ, ಭಾಷಾ>ಭಾಷಾಂಗ ಎಂಬ ಉತ್ಪತ್ತಿಯ ಮೂಲಕವೂ ಮೂಲರಾಗ (ಅದರ ಪ್ರಾಂತೀಯ ರೂಪವಾದ) ದೇಶಜಾ, ಇವುಗಳ ಛಾಯೆಯನ್ನು ಮಾತ್ರ ಹೊಂದಿರುವ ಛಾಯಾಮಾತ್ರಾಶ್ರಾಯಾ, ಇವೆಲ್ಲದರ ಬೆರಕೆಯಿಂದ ಸಂಕರವಾದ ಸಂಕೀಣಾ ಎಂಬ ರಾಗಗಳ ವರ್ಗೀಕರಣದ ಮೂಲಕವೂ ಬೃಹದ್ದೇಶೀಯು ಒಳಗೊಂಡಿದೆ. ವೇದ, ವೇದಾಂಗ, ಉಪನಿಷತ್ತು, ಮಹಾವಾಕ್ಯ, ತಂತ್ರ, ಆಗಮ ಇವುಗಳಿಗೂ ಪ್ರಯೋಕ್ತೃಗಳು, ಜನಸಾಮಾನ್ಯರಾದ ಅಬಲಬಾಲಗೋಪಾಲರು ಇವರುಗಳಿಗೂ, ಕಾಡುಜನರಾದ ಶಬರಕಿರಾತಪುಲಿಂದಾದಿಗಳಿಗೂ ಅತಿಮಾನವರಾದ ಕಿನ್ನರ, ಗಂಧರ್ವ, ನಾಗ ಮುಂತಾದವರಿಗೂ ನಡುವೆ ಸಂಗೀತದ ಮೂಲಕ ಸೇತುವೆಯನ್ನು ಬೃಹದ್ದೇಶಿಯು ಏಕಕಾಲದಲ್ಲಿ ನಿರ್ಮಾಣಮಾಡಿದೆ. ಹೀಗೆ ಆರ್ಯ-ದ್ರಾವಿಡ, ದಕ್ಷಿಣ-ಉತ್ತರ, ಶಿಷ್ಟ-ಜಾನಪದ, ಮಾರ್ಗ-ದೇಶಿಗಳಲ್ಲಿ ಬೃಹದ್ದೇಶಿಯು ಸಮನ್ವಯವನ್ನು ಸಾಧಿಸಲೆಳಸುತ್ತದೆ. ಅಲ್ಲದೆ ಇವುಗಳಲ್ಲಿ ಭಾವೈಕ್ಯವನ್ನೋ ಸಾಂಸ್ಕೃತಿಕ ಐಕ್ಯವನ್ನೋ ಏಕರೂಪತೆಯನ್ನೋ ಸಂಗೀತದ ಮೂಲಕ ದೇಶದಲ್ಲಿ ಉಂಟುಮಾಡುವ ಪ್ರಥಮಶಾಸ್ತ್ರಗ್ರಂಥವೆಂದರೆ ಬೃಹದ್ದೇಶಿಯೇ. ಈ ದೃಷ್ಟಿಯಿಂದ ಅದು ನಿಜಕ್ಕೂ ಬೃಹದ್-ದೇಶೀ.

(ಉ) ಸ್ವರೂಪ

i. ವಿಸ್ತಾರ ಮತ್ತು ಛಂದಸ್ಸು

ಬೃಹದ್ದೇಶಿಯು ಪ್ರಾಚೀನಭಾರತೀಯ ಸಂಗೀತವನ್ನು ಸಂಸ್ಕೃತದಲ್ಲಿ ನಿರೂಪಿಸುವ ಒಂದು ಶಾಸ್ತ್ರಗ್ರಂಥವೆಂಬುದು ಈಗಾಗಲೇ ಸ್ಪಷ್ಟವಾಗಿದೆ. ಉಪಲಬ್ಧಗ್ರಂಥದ ಆದಿ ಮತ್ತು ಅಂತ್ಯಗಳು ದೊರೆತಿಲ್ಲ. ಗ್ರಂಥವು ಚಂಪೂಶೈಲಿಯಲ್ಲಿ ರಚಿತವಾಗಿದ್ದು ಅದರ ಆರು ಅಧ್ಯಾಯಗಳು ಮಾತ್ರ ಈಗ ಉಳಿದು ಬಂದಿವೆ. ಇವುಗಳಲ್ಲಿ ದೇಶಿಯಿಂದ ಗೀತಿಯವರೆಗಿನ ಮೊದಲನೆಯ ಅಧ್ಯಾಯದಲ್ಲಿ ೨೧೩ ಶ್ಲೋಕಗಳೂ ೧೮೧ ಗದ್ಯಖಂಡಗಳೂ ಎರಡನೆಯ ಜಾತ್ಯಧ್ಯಾಯದಲ್ಲಿ ೧೧೩ ಶ್ಲೋಕ-೭೦ ಗದ್ಯಖಂಡಗಳೂ ಮೂರನೆಯ ರಾಗಾಧ್ಯಯದಲ್ಲಿ ೯೯ ಶ್ಲೋಕ-೬೧ ಗದ್ಯಖಂಡಗಳೂ ನಾಲ್ಕನೆಯ ಭಾಷಾಧ್ಯಾಯದಲ್ಲಿ ೧೮೮ ಶ್ಲೋಕ-೧೦೬ ಗದ್ಯಖಂಡಗಳೂ ಐದನೆಯ ದೇಶೀ ರಾಗಾಧ್ಯಾಯದಲ್ಲಿ ೧೫ ಶ್ಲೋಕಗಳು ಮಾತ್ರವೂ ಆರನೆಯ ಪ್ರಬಂಧಾಧ್ಯಾಯದಲ್ಲಿ ೧೩೫ ಶ್ಲೋಕಗಳು ಮಾತ್ರವೂ ಇವೆ. ಒಟ್ಟಿನಲ್ಲಿ ಸು. ೭೬೩ ಶ್ಲೋಕಗಳೂ ೪೧೮ ಗದ್ಯಖಂಡಗಳೂ ಇವೆ. ಇಡೀ ಗ್ರಂಥವನ್ನು ನಿರ್ದೇಶನ ಸೌಕರ್ಯಕ್ಕೆಂದು ಹೆಚ್ಚುಕಡಿಮೆ ವಿವಿಕ್ತಾರ್ಥವುಳ್ಳ, ಹಾಗೂ ಉಲ್ಲೇಖನಾದಿಗಳಿಗೆ ಅನುಕೂಲಿಸುವ ೧೧೯೨ ಗ್ರಂಥವಿಭಾಗಗಳನ್ನಾಗಿ ಪ್ರಕೃತ ಸಂಸ್ಕರಣದಲ್ಲಿ ವಿಂಗಡಿಸಿದೆ. ಇವುಗಳ ಪೈಕಿ ಮೂಲಗ್ರಂಥದಲ್ಲಿ ಲೋಪವಿದ್ದು ಅದರ ಉದೃತಿಯಲ್ಲದೆ ಸಂಗ್ರಹಮಾತ್ರವಾಗಿರುವ ಎರಡು ಶ್ಲೋಕಗಳು (೯೫೬,೯೫೭), ಆಂಶಿಕಲೋಪವಿರುವ ೧೧ (೪, ೪೪೨, ೬೨೩, ೬೪೩, ೬೫೯, ೯೧೯, ೯೨೮, ೯೫೫, ೧೦೪೪, ೧೦೫೧, ೧೦೮೫), ಪೂರ್ಣಲೋಪವಿರುವ ೧೬(೦,೭೨೦, ೭೨೩, ೯೩೬, ೯೫೧, ೯೫೨, ೯೯೫, ೧೦೧೦, ೧೦೧೧, ೧೦೨೮, ೧೦೩೧, ೧೦೩೨, ೧೦೫೦, ೧೦೮೧, ೧೦೮೬, ೧೧೦೧) ಗ್ರಂಥಭಾಗಗಳೂ ನಾಲ್ಕು ಸಮಾಪ್ತಿವಾಕ್ಯಗಳೂ (೯೬೧, ೯೯೧, ೧೦೫೨, ೧೧೯೨) ಸೇರಿವೆ.

ಈಗ ದೊರೆತಿರುವಷ್ಟು ಗ್ರಂಥದ ಶ್ಲೋಕಗಳೆಲ್ಲ ಒಂದೇ ಒಂದನ್ನು ಬಿಟ್ಟರೆ ಅನುಷ್ಟುಪ್ ಛಂದಸ್ಸಿನಲ್ಲಿ ರಚಿತವಾಗಿವೆ. ಲೇಖನಪರಂಪರೆಯ ಪ್ರಮಾದದಿಂದಲೋ ಅಲ್ಲದೆಯೋ ಉಳಿದುಬಂದಿರುವ ಅತಿಛಂಧೋದೋಷಗಳನ್ನೂ ಊನಛಂದಸ್ಸಿನ ದೋಷಗಳನ್ನೂ ಪಾಠವಿಮರ್ಶೆಯಲ್ಲಿ ತೋರಿಸಿದೆ. ಇವುಗಳನ್ನು ಸರಿಪಡಿಸಲೆಳಸುವ ಸಂಪಾದಕೀಯ ಊಹೆಗಳನ್ನು ಅವ್ಯವಹಿತಾನಂತರದಲ್ಲಿಯೇ ಕೈಗೊಂಡು ಅವುಗಳನ್ನು ಚೌಕಕಂಸಗಳಲ್ಲಿ ತೋರಿಸಿದೆ. ಈ ಮತ್ತಿತರ ಛಂದೋಲೋಪ ದೋಷಗಳನ್ನು ಪಾಠವಿಮರ್ಶೆಯಲ್ಲಿ ಪ್ರಸ್ತಾಪಿಸಿದೆ. ಗ್ರಂಥಕಾರನು ವರ್ಣಾಲಂಕಾರ ನಿರೂಪಣಾವಸರದಲ್ಲಿ ಭರತಮುನಿಯಿಂದ ಉದ್ಧರಿಸಿಕೊಂಡಿರುವ ಶ್ಲೋಕಗಳು ವಿಶೇಷವಾಗಿ ಛಂದೋಭ್ರಷ್ಟವಾಗಿವೆ. ಅವುಗಳನ್ನಿಲ್ಲಿ ಸೂಚಿಸಬಹುದು.

ಗ್ರಂಥಭಾಗ ೧೧೪೫ ೧೧೪೬ ೧೧೪೭ ೧೧೪೮ ೧೧೪೯ ೧೧೫೦ ೧೧೫೧ ೧೧೫೨ ೧೧೫೩ ೧೧೫೪
ಪ್ರಥಮಾರ್ಧದವರ್ಣಗಳಸಂಖ್ಯೆ ೧೮ ೧೫ ೧೯ ೨೧ ೧೮ ೨೨ ೨೨ ೧೯ ೨೦ ೨೧
ದ್ವಿತೀಯಾರ್ಧದವರ್ಣಗಳಸಂಖ್ಯೆ ೧೫ ೧೫ ೧೮ ೨೦ ೧೭ ೨೧ ೧೮ ೨೪ ೨೧ ೧೯

ಇವುಗಳಲ್ಲಿ ವಿಷಮವೃತ್ತಗಳಿಗೆ ಅನುಕೂಲಿಸುವ ವರ್ಣಗಣರಚನೆಗಳಿಲ್ಲ. ೧೫-೧೫ ಎಂಬ ರಚನೆಯಲ್ಲೂ ಮಾಲಿನಿಯೇ ಮೊದಲಾದ ವೃತ್ತಗಳ ಲಕ್ಷಣಗಳಿಲ್ಲ. ಇವುಗಳೊಡನೆ ಮತಂಗೋದ್ದೃತಪಾಠಗಳನ್ನು ಅಭಿನವಭರತಸಾರಸಂಗ್ರಹದಲ್ಲಿ (೨.೩೧೩-೩೪೧, ಪು.೧೬೨-೧೬೫; ಪು.೧೬೫-೧೬೬ರಲ್ಲಿರುವ ಟಿಪ್ಪಣಿಯನ್ನೂ ನೋಡಿ) ಹೋಲಿಸಿದ್ದೇನೆ. ಅನುಷ್ಟುಪ್ ಅಲ್ಲದ ಒಂದೇ ಒಂದು ಶ್ಲೋಕವು ಬೃಹದ್ದೇಶಿಯಲ್ಲಿ (೧೦೩೬) ಸ್ರಗ್ಧರಾ ವೃತ್ತದಲ್ಲಿದೆ.

ii. ಆತ್ಮನಿರ್ದೇಶ

ಗ್ರಂಥಕಾರನು ತನ್ನನ್ನು ನಿರ್ದೇಶಿಸಿಕೊಳ್ಳುವಾಗ ಕೆಳಕಂಡ ತಂತ್ರಗಳನ್ನು ಬಳಸಿದ್ದಾನೆ.

  1. ತನ್ನದೇ ಹೆಸರಿನಿಂದ : ಮತಂಗ (೯೫೭,೧೧೫೫). ಮತಂಗಮುನಿ (೧೦೫೪, ೧೧೪೦) ತನ್ನದೇ ಹೆಸರಿನಿಂದ ಗ್ರಂಥಕಾರನು ತನ್ನನ್ನು ಉಲ್ಲೇಖಿಸಿಕೊಳ್ಳುವುದು ಸಂಸ್ಕೃತಸಾಹಿತ್ಯದಲ್ಲಿ – ಅದರಲ್ಲೂ ಸಂಗೀತನೃತ್ತಶಾಸ್ತ್ರಗಳಲ್ಲಿ – ಅಪರೂಪವೇನಲ್ಲ. ಭರತ, ನಾನ್ಯದೇವ, ಶಾರ್ಙ್ಗದೇವ ಮುಂತಾದ ಪ್ರಮುಖಲಾಕ್ಷಣಿಕರು ಹೀಗೆ ಮಾಡಿದ್ದಾರೆ.
  2. ಉತ್ತಮಪುರುಷದ ಏಕವಚನದಿಂದ : ಅಹಂ (೧೦೯,೭೪೬), ಮಯಾ (೩,೧೬,೨೬,೪೦,೬೦,೬೮,೯೩, ೧೯೪, ೨೩೩, ೩೯೬, ೭೩೮, ೧೧೯೧). ಮಾಮಕೀನಂ (೨೮), ಮೇ (೭೪೩), ಬ್ರವೀಮಿ(೪೪೬).

ಉತ್ತಮಪುರುಷಬಹುವಚನದಿಂದ : ವಯಂ ಬ್ರೂಮಃ (೮೧), ಸ್ಫುಟೀಕರಿಷ್ಯಾಮಃ (೪೪೩)

  1. ಪ್ರಥಮಪುರುಷ ಏಕವಚನದಿಂದ : ಆಹ (೩೯೫, ೪೦೩, ೪೨೪, ೪೨೫, ೪೪೮, ೪೫೦, ೪೫೧, ೬೫೧), ದರ್ಶಯತಿ (೩೯೧), ಸ್ಫುಟಯತಿ (೪೯೬)

ಪ್ರಥಮಪುರುಷ : ಬಹುವಚನದಿಂದ : ಅಹುಃ (೪೧೨)

ಇದಲ್ಲದೆ ಕರ್ಮಣಿಯಲ್ಲಿ ಉಚ್ಯತೇ ಇತ್ಯಾದಿ (೪೩೮, ೪೪೦, ೪೪೧ ಇತ್ಯಾದಿ), ಅಭಿಧೀಯತೇ (೪೩೩), ಕಥ್ಯತೇ (೪೩೧) ಮುಂತಾದ ಪ್ರಯೋಗಗಳು ಗ್ರಂಥದ ಉದ್ದಕ್ಕೂ ಅವಿರಳವಾಗಿ ದೊರೆಯುತ್ತವೆ.

iii. ಶೈಲಿ

ಗ್ರಂಥದ ನಿರೂಪಣ ಶೈಲಿಯು ಅತ್ಯಂತ ಸರಳವಾಗಿಯೂ ನೇರವಾಗಿಯೂ ರಮಣೀಯವಾಗಿಯೂ ಇದೆ. ಇಷ್ಟು ಸರಳ ನಿರೂಪಣೆಯು ಇಡೀ ಸಂಗೀತನೃತ್ತಶಾಸ್ತ್ರ ಸಮಷ್ಟಿಯಲ್ಲಿಯೇ ಕಾಣಸಿಗುವುದಿಲ್ಲ ಎನ್ನುವಲ್ಲಿ ಅತಿಶಯೋಕ್ತಿಯಿಲ್ಲ. ಗ್ರಂಥಕಾರನು ನಿರೂಪಣವಿಧಾನದಲ್ಲಿ ಉಪದೇಶಮಾರ್ಗವನ್ನು ಅನುಸರಿಸಿದ್ದಾನೆ; ಇಡೀ ಗ್ರಂಥವು ಸಂವಾದರೂಪದಲ್ಲಿದೆ.

ಮತಂಗನ ಸಂವಾದಮೂಲಕವಾದ ಬೋಧನಶೈಲಿಯು ಅನನ್ಯ ಸುಂದರವಾದುದು, ಅವನ ಶಿಷ್ಯರು ಹೇಳಿದ್ದನ್ನು ಸುಮ್ಮನೆ ಕೇಳಿಕೊಂಡು ಹೋಗುವವರಲ್ಲ. ಪ್ರತಿಯೊಂದು ವಿಷಯದ ನಿರೂಪಣೆಯೂ ಅವರು ಕೇಳುವ ಸಾರವತ್ತಾದ ಪ್ರಶ್ನೆಗಳಿಗೆ ಉತ್ತರರೂಪದಲ್ಲಿಯೇ ದೊರೆಯುತ್ತದೆ. ಈ ಉತ್ತರಗಳು ಅಸಮಗ್ರವಾದಾಗ, ಅಸ್ಪಷ್ಟವಾದ, ಸಂದಿಗ್ಧವಾದಾಗ ಅವರು ಉಪ್ರಶ್ನೆಗಳನ್ನು ಕೇಳಿ ಸಮಾಧಾನಗಳನ್ನು ಪಡೆದುಕೊಳ್ಳುತ್ತಾರೆ. ಇಂತಹ ಸಂಭಾಷಣೆಗಳು ಪ್ರತಿಯೊಂದು ಅಧ್ಯಾಯದಲ್ಲೂ ಪುನಃ ಪುನಃ ಕಾಣಸಿಗುತ್ತವೆ. ಮತಂಗನು ನೀಡುವ ಉತ್ತರಗಳೂ ಸಂವಾದರೂಪವಲ್ಲಿಯೇ ಇದ್ದು ಪರಿಣಾಮಕಾರಿಯಾಗಿವೆ : ‘ಸ್ವರಗಳು ಹದಿನಾಲ್ಕು ಇರುವಾಗ ಆಕಾರ ಇತ್ಯಾದಿಗಳನ್ನು ಮಾತ್ರ ಏಕೆ ಸರಿಗಾದಿಗಳಲ್ಲಿ ತೆಗೆದುಕೊಳ್ಳಬೇಕು?’ ‘ನಿಜವನ್ನೇ ಹೇಳಿದೆ. ಆಕಾರ ಇತ್ಯಾದಿಗಳು ಅಸಾಧಾರಣವಾದುದರಿಂದ ಹೀಗೆ ಮಾಡುತ್ತಾರೆ’ (೧೦೮). ‘ಈ ಅಸಾಧಾರಣತ್ವವು ಅವಕ್ಕೆ ಹೇಗೆ ಬರುತ್ತದೆ?’ ‘ಆಪ್ತರು ಉಪದೇಶಿಸಿದ್ದರಿಂದ’ (೧೦೯) ‘ನುಡಿಯುವುದರಿಂದ’ ವಾದಿ ಎಂಬ ಹೆಸರು ಸ್ವರಕ್ಕೆ ಬರುತ್ತದೆ’; ನೀನು ಹೇಳಿದ್ದು ನಿಜ ; ಈ ಶಾಸ್ತ್ರದಲ್ಲಿ ನುಡಿಯುವುದು ಎಂದರೆ ರಾಗವನ್ನು ಪ್ರತಿಪಾದಿಸುವುದು ಎಂದಿಟ್ಟುಕೊಳ್ಳಬೇಕು’ (೧೧೦,೧೧೧). ‘ಕೂಟತಾನಗಳ ಪ್ರಸ್ತಾರವನ್ನು ಇಲ್ಲಿ ಹೇಳದಿರುವುದು ಅತಿಪ್ರಸಂಗವನ್ನು ಮಾಡದೆ ಇರೋಣ, ಎಂದು’ ‘(ನಿನ್ನಂತಹ ಬುದ್ಧಿವಂತರು ತಾವೇ ಇದನ್ನು ಕಂಡುಹಿಡಿದುಕೊಳ್ಳಬೇಕು’ (೨೫೮) – ಇಂತಹ ಸುಂದರಸರಣಿಯಲ್ಲಿ ಗ್ರಂಥದ ಶೈಲಿಯಿದೆ.

iv. ನಿರೂಪಣವಿಧಾನ : ಲಕ್ಷ್ಯಪ್ರಧಾನ್ಯ

ಬೃಹದ್ದೇಶೀಯ ಒಂದು ಮುಖ್ಯ ವೈಶಿಷ್ಟ್ಯವೆಂದರೆ ಅದರ ನಿರೂಪಣವಿಧಾನ. ಅದು ಸಂಗೀತದಂತಹ ಪ್ರಯೋಗಪ್ರಧಾನವಾದ ಕಲೆಯ ಶಾಸ್ತ್ರವನ್ನು ಉದೇಶಿಸಲೆಂದು ಹೊರಟಿರುವುದರಿಂದ ಲಕ್ಷ್ಯವನ್ನು ಪದೇ ಪದೇ ಉಲ್ಲೇಖಿಸುತ್ತದೆ. ಗುರುವು ಶಿಷ್ಯನಿಗೋ ಆಚಾರ್ಯನು ಪೃಚ್ಛಕರಾದ ಇತರ ಮುನಿಗಳಿಗೋ ಉಪದೇಶಿಸುವಾಗ ತತ್ಕಾಲೀನ ಲಕ್ಷ್ಯದಿಂದ ಉದಾಹರಣೆಗಳನ್ನು ಎತ್ತಿಕೊಂಡು ಹಾಡಿ ತೋರಿಸಿ ಶಾಸ್ತ್ರವರ್ಣನೆಯನ್ನೋ ವಿಧಿಯನ್ನೋ ವಿವರಿಸುವ ಅಥವಾ ಜಿಜ್ಞಾಸೆ ಮಾಡುವ ವಿಧಾನವು ಉಪಲಬ್ಧವಾಗಿರುವ ಸಂಗೀತನೃತ್ತಶಾಸ್ತ್ರಗ್ರಂಥರಾಶಿಯಲ್ಲೆಲ್ಲ ಬೃಹದ್ದೇಶಿಯಲ್ಲಿ ಮಾತ್ರ ಕಂಡುಬರುತ್ತದೆ. ‘ಲೋಕದಲ್ಲಿ ಹಾಗಿಲ್ಲ’ (೧೦೨), ‘ಇದೋ, ಈ ಮಧ್ಯಮವಿದೆಯಲ್ಲ, ಇದೇ ಇಲ್ಲಿ ಗ್ರಂಹಾಂಶಗಳು’ (೬೪೦), ‘ಪ್ರಯೋಗವು ಹೀಗಿದೆ’ (೬೭೧), ‘ಪ್ರಯೋಗವಿರುವುದು ಹೀಗೆ ಕಂಡುಬರುತ್ತದೆ’ (೬೭೯), ‘(ನಾನು ಹಾಡಿತೋರಿಸಲಿರುವ) ಈ ಪ್ರಯೋಗದಲ್ಲಿ ನಾಲ್ಕು ಶ್ರುತಿಗಳ ಪಂಚಮವೇ ದೊರೆಯುತ್ತದೆ’ (೬೯೫), ‘(ಮತಾಂತರವು ಹೀಗಿದ್ದರೂ) ಅದು ಲಕ್ಷ್ಯದಲ್ಲಿ ಗೋಚರಿಸುವುದಿಲ್ಲ’ (೬೯೭), ‘ಇದು ಕೆಲವೆಡೆ ಕಾಣಸಿಗುತ್ತದೆ, ಕೆಲವೆಡೆ ಇಲ್ಲ’ (೯೪೦). ವರ್ಣಾಲಂಕಾರಗಳಿಗೆ ಸ್ವರಪ್ರಸ್ತಾರವುಳ್ಳ ನಿದರ್ಶನಗಳು ಮೊದಲಬಾರಿಗೆ ದೊರೆಯುವುದೂ ಮತಂಗನಲ್ಲಿಯೇ (೨೮೪-೩೧೮). ಉಪಲಬ್ಧ ನಾಟ್ಯಶಾಸ್ತ್ರದಲ್ಲಿ ಇಲ್ಲದಿದ್ದು ಭರತಪ್ರಣೀತವೆನ್ನುವ ವರ್ಣಾಲಂಕಾರಗಳ ಸ್ವರಪ್ರಸ್ತಾರಗಳನ್ನು ಅವನು ನೀಡುವುದು ಇಲ್ಲಿ ಉಲ್ಲೇಖಾರ್ಹವಾಗಿದೆ (೩೬೮). ಅಲ್ಲದೆ ಶ್ಲೋಕಗಳಲ್ಲಿಯೂ ಗದ್ಯಾತ್ಮಕ ವರ್ಣನೆಗಳಲ್ಲಿಯೂ ಸರಿಗ ಇತ್ಯಾದಿ ಸಂಜ್ಞೆಗಳನ್ನು ಪ್ರವೇಶಗೊಳಿಸುವುದರಲ್ಲಿಯೂ ಅವನೇ ಮೊದಲು. ಇದೇ ರೀತಿಯಲ್ಲಿ ನಾಲ್ಕನೆಯ ಅಧ್ಯಾಯದಲ್ಲಿ ಪ್ರತಿಯೊಂದು ಭಾಷಾರಾಗಕ್ಕೂ ಉದಾಹರಣವು ಬೃಹದ್ದೇಶಿಯಲ್ಲಿದೆ. ಇದು ಆಯಾ ರಾಗಲಕ್ಷಣವನ್ನು ಸಂಕ್ಷೇಪವಾಗಿಯೂ ಸಮಗ್ರವಾಗಿಯೂ ಉದಾಹರಿಸುತ್ತದೆ. ಈ ಉದಾಹರಣೆಗಳನ್ನು ಯಾಷ್ಟಿಕ ಶಾರ್ದೂಲರಿಗಿಂತ ಮತಂಗನೇ ರಚಿಸಿರುವುದು ಹೆಚ್ಚು ಸಂಭವನೀಯವಾಗಿದೆ. ಏಕೆಂದರೆ ಅಧ್ಯಾಯಸಮಾಪನವನ್ನು ಮತಂಗು ‘ಲಕ್ಷ್ಯಲಕ್ಷಣಸಂಯುಕ್ತಾಃ ಪ್ರಸ್ತಾರೇಣ ಸಮನ್ವಿತಾಃ | ಉಕ್ತಾ ಭಾಷಾ ಸಮೀಚೀನಾ ವಿಭಾಷಾಭಿರ್ವಿಭೂಷಿತಾಃ |’ ಎಂಬ ಮಾತುಗಳಿಂದ ಮಾಡಿದ್ದಾನೆ. ಈ ಉದಾಹರಣೆಗಳು ದೇಶೀರಾಗಗಳಿಗೆ ದೊರೆಯುವುದಿಲ್ಲ.’ಮಾರ್ಗರಾಗಗಳಲ್ಲಿ ಯಾವ ಲಕ್ಷಣಗಳನ್ನು; ಹಿಂದೆ ಹೇಳಲಾಗಿದೆಯೋ ಅವು ಒಮ್ಮೊಮ್ಮೆ ದೇಶೀರಾಗ, ಮತ್ತು ಭಾಷಾರಾಗಗಳಲ್ಲಿ ಸಲ್ಲುವುದಿಲ್ಲ. ಅವು ಅನ್ಯಥಾ ಸಹ ಆಗಬಹುದು’ ಎಂಬುದು (೧೦೪೪) ಇದಕ್ಕೆ ಕಾರಣವಿರಬಹುದು, ಗ್ರಂಥಲೋಪವೂ ಕಾರಣವಿರಬಹುದು. ಒಟ್ಟಿನಲ್ಲಿ, ಇಂತಹ ಲಕ್ಷ್ಯೋದಾಹರಣೆಗಳನ್ನು ಸಂಗೀತಶಾಸ್ತ್ರದಲ್ಲಿ ಉದ್ಘಾಟಿಸಿದ್ದು ಮತಂಗಮುನಿಯೇ ಎಂಬುದರಲ್ಲಿ ಸಂದೇಹವಿಲ್ಲ. ‘ಸಂಗೀತದಂತಹ ಲಕ್ಷ್ಯಪ್ರಧಾನ ವಿದ್ಯೆಯಲ್ಲಿ ಅತಿಪ್ರಸಂಗವನ್ನು, ಎಂದರೆ ಶಾಸ್ತ್ರದಲ್ಲಿ ಅತಿಪ್ರೀತಿಯನ್ನು ಅಥವಾ ಅಸಂಬದ್ಧಪ್ರಲಾಪವನ್ನು ಮಾಡಬಾರದು, ಬುದ್ಧಿವಂತರು ತಾವೇ (ಲಕ್ಷ್ಯದಿಂದ) ಕಂಡುಕೊಳ್ಳಬೇಕು’ ಎಂಬ ಎಚ್ಚರಿಕೆಯ ಅರ್ಷವಾಕ್ಯವನ್ನು ಮತಂಗನು ನುಡಿದಿದ್ದಾನೆ (೨೫೮). ಇವನ ಈ ಲಕ್ಷ್ಯೋದಾಹರಣಮಾರ್ಗವನ್ನು ನಂತರದ ಲಾಕ್ಷಣಿಕಪ್ರಮುಖರಾದ ನಾನ್ಯದೇವ, ಪಾರ್ಶ್ವದೇವ, ಶಾರ್ಙ್ಗದೇವ, ಕುಂಭಕರ್ಣ ಪಂಡರೀಕವಿಟ್ಠಲ, ಸೋಮನಾಥ, ತುಲಜೇಂದ್ರ ಮುಂತಾದವರು ನಡೆದಿದ್ದಾರೆ.

ಸಂಗೀತಶಾಸ್ತ್ರವು ಲಕ್ಷ್ಯಕ್ಕೆ ನೀಡುವ ಪ್ರಾಧಾನ್ಯವನ್ನು ಮತಂಗಮುನಿಯು ತಾನು ಪದೇ ಪದೇ ಅವಲಂಬಿಸುವ ಪ್ರಮಾಣಗಳ ಮೂಲಕ ಸ್ಪಷ್ಟಪಡಿಸಿದ್ದಾನೆ : ಆಚಾರ್ಯ (೧೦೯, ೧೯೯,೨೬೬, ೪೫೯), ಆಪ್ತವಚನ (೭೩೧,೭೩೨, ಆಪ್ತೋಪದೇಶ (೧೦೪, ೧೦೯, ೬೭೬), ಗಾಯಕ (೭೪೫, ೭೬೫, ೯೦೩, ೯೫೯), ಗೀತಕೋವಿದ (೯೫೦,೧೦೭೪, ೧೧೩೬), ಗೀತಜ್ಞ (೫೮೭, ೮೭೧, ೯೧೭, ೧೦೪೧, ೧೧೧೬, ೧೧೭೮), ಗೀತತತ್ತ್ವಜ್ಞ (೧೧೮೨), ಗೀತಪಾರಗ (೧೧೨೯), ಗೀತಯೋಕ್ಷ (೧೩೦,೪೯೩), ಗೀತವಿಚಕ್ಷಣ (೬೦೬), ಗೀತವೇದಿ (೧೧೩೩), ಗೀತವಿಶಾರದ (೧೦೭೮), ಗೀತಾಶಾಸ್ತ್ರಜ್ಞ (೧೧೪೩, ೧೧೭೫), ಗುರು (೪೫೬, ೪೭೦, ೪೮೦), ಗೇಯವೇದಿ (೭೮೩, ೮೨೪, ೮೩೨), ಜನ (೭೪೨, ೭೮೯, ೮೨೮, ೯೪೫, ೧೦೪೭), ಪ್ರಯೋಕ್ತೃ (೪೬೬, ೪೭೨, ೭೯೫, ೮೫೩, ೮೮೪, ೯೬೧), ಪ್ರಯೋಗಜ್ಞ (೪೪೨), ವಸ್ತುವಿಚಕ್ಷಣ (೧೧೧೦), ಶ್ರುತಿಜ್ಞಾನ-ವಿಚಾರದಕ್ಷ (೪೨), ಶ್ರುತಿವೇದಿ (೩೧), ಸ್ವರಜ್ಞ (೧೪೫, ೬೪೪, ೬೫೫).]

v. ನಿರೂಪಣ ವಿಧಾನ : ಪುರಾಣಶೈಲಿ

ಬೃಹದ್ದೇಶಿಯು ಪುರಾಣಶೈಲಿಯಲ್ಲಿದ್ದು ಮುನಿಗಳ ಪ್ರಶ್ನೆಗಳಿಗೆ ಉತ್ತರರೂಪದಲ್ಲಿ ಹೇಳಿದ ಅಧ್ಯಾಯಗಳನ್ನು ಒಳಗೊಂಡಿದೆ. ಹೀಗೆ ದೇಶೀ, ಧ್ವನಿ ಮುಂತಾದವುಗಳ ಬಗೆಗೆ ನಾರದ ಮುನಿಯು ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಮತಂಗನು ನೀಡುವುದರಿಂದ ಬೃಹದ್ದೇಶಿಯು ಪ್ರಾರಂಭವಾಗಿ ಪ್ರಶ್ನೆಗಳ ಬೇರೆ ಬೇರೆ ಪದರಗಳಿಗೆ ಉತ್ತರಕೊಡುವಲ್ಲಿ ಗ್ರಂಥವು ಬೆಳೆಯುತ್ತದೆ. ಭರತಮುನಿಯ ನಾಟ್ಯಶಾಸ್ತ್ರವೂ ಇದೇ ರೀತಿಯಲ್ಲಿ ರಚಿತವಾಗಿದೆಯೆಂಬುದನ್ನಿಲ್ಲಿ ಸ್ಮರಿಸಬಹುದು. ಬೃಹದ್ದೇಶಿಯ ನಾಲ್ಕನೆಯ ಅಧ್ಯಾಯವು ಮಾತ್ರ ಮತಂಗಮುನಿಪ್ರಣೀತವಲ್ಲ; ನೇರವಾದ ಉದ್ದೃತಿಗಿಂತ ಸಂಗ್ರಹ ಅಥವಾ ತಾತ್ಪರ್ಯ ರೂಪದ್ದಾಗಿರುವುದು ಹೆಚ್ಚು ಸಂಭಾವ್ಯವಾಗಿದೆ. ಅದು ಯಾಷ್ಟಿಕಶಾರ್ದೂಲರ ಮತಾನುಸಾರಿಯಾದ ಭಾಷಾ ಎಂಬ ರಾಗಗಳ ಲಕ್ಷಣವನ್ನೊಳಗೊಂಡಿದೆ. ಅದರಲ್ಲಿರುವ ವಿಷಯವು ಪೌರ್ವಾಪರ್ಯದಿಂದಲೂ ಉದ್ದೇಶಕ್ಕೆ ಪೂರಕವಾಗಿಯೂ ಸರಿಯಾಗಿದೆ; ಆದರೆ ಅದು ಬೃಹದ್ದೇಶಿಯ ಅವಿಭಾಜ್ಯ ಅಂಗವೆ ಎಂಬ ಪ್ರಶ್ನೆಯನ್ನು ಎಬ್ಬಿಸುತ್ತದೆ. ಇದನ್ನು ಮುಂದೆ ಪ್ರಸ್ತಾಪಿಸಲಾಗುವುದು. ಇಡೀ ಬೃಹದ್ದೇಶಿಯು ಶಾಸ್ತ್ರೋಪದೇಶಕ್ಕೆ ಅಗತ್ಯವಾದ ಈ ಅಂಶಗಳನ್ನು ಒಳಗೊಂಡಿದೆ- ಸಂಜ್ಞಾವಿವರಣೆ, ಪರಿಭಾಷೆ, ಪ್ರಮೇಯ ಮಂಡನೆ, ಅದರ ಜಿಜ್ಞಾಸಾರೂಪದ ಸಮರ್ಥನೆ, ದೃಷ್ಟಾಂತಾದಿ ಉಪಾಯಗಳು, ಪರಮತ ನಿರಾಕರಣೆ, ಲಕ್ಷ್ಯೋದಾಹರಣೆಗಳಿಂದ ಲಕ್ಷಣದ ಬೋಧನೆ, ಲಕ್ಷಣಬೋಧನೆಯಿಂದ ಲಕ್ಷ್ಯದ ವಿವರಣೆ, ಪೂರ್ವಾಚಾರ್ಯಪರಂಪರೆಯಿಂದ ನಿರ್ಮಿತವಾದ ಶಾಸ್ತ್ರಸಂಪ್ರದಾಯಕ್ಕೆ ಮನ್ನಣೆ ಮತ್ತು ಅದರ ಸಂವರ್ಧನೆ, ಉಪಕ್ರಮ-ಉಪಸಂಹಾರಾದಿ ಕ್ರಮ, ಸಾಂಪ್ರದಾಯಿಕ ರೀತಿಯಲ್ಲಿ ತನ್ನ ಶಾಸ್ತ್ರಕ್ಕೆ ವೇದೋಪವಸತಿಯನ್ನು ಸ್ಥಾಪಿಸುವುದು, ಅಂತರಶಾಸ್ತ್ರೀಯ ಮತ್ತು ಶಾಸ್ತ್ರಾಂತರೀಯ ಸಂಬಂಧಗಳು, ಆಕ್ಷೇಪದ ಮಂಡನೆ ಮತ್ತು ಸಮಾಧಾನ, ಶಾಸ್ತ್ರೋಕ್ತಿಯ ಸ್ಪಷ್ಟೀಕರಣಕ್ಕಾಗಿ ಮಂಡಲಪ್ರಸ್ತಾರಾದಿಗಳ ಲೇಖನ, ಇತ್ಯಾದಿ.

 

IV. ಬೃಹದ್ದೇಶಿಯ ಗದ್ಯಖಂಡಗಳು

ಈಗ ಉಳಿದುಬಂದಿರುವ ಬೃಹದ್ದೇಶಿಯ ಅಂತರಂಗಬಹಿರಂಗಸ್ವರೂಪಗಳ ಕೆಲವಂಶಗಳನ್ನು ಇಲ್ಲಿ ಸ್ಥೂಲವಾಗಿ ಪರಿಶೀಲಿಸಬಹುದು. ಇದರಲ್ಲಿ ಮುಖ್ಯವಾದುದೆಂದರೆ ಅದರ ಗದ್ಯಪದ್ಯ ಮಿಶ್ರಿತಶಯಲಿ. ಇದು ಅಪವಾದವೂ ವಿಶಿಷ್ಟವೂ ಅಲ್ಲವಾದರೂ ಅಪರೂಪವೆಂಬುದು ದಿಟ. ನಾಟ್ಯಶಾಸ್ತ್ರವು ಇಂತಹ ಶಾಸ್ತ್ರಗ್ರಂಥಗಳಲ್ಲಿ ಪ್ರಾಚೀನತಮವಾದುದು; ಸೋಮನಾಥನ ರಾಗವಿಬೋಧ, ತುಲಜೇಂದ್ರನ ಸಂಗೀತಸಾರಾಮೃತಗಳು ಕ್ರಮವಾಗಿ ಮಧ್ಯಯುಗದ ಮತ್ತು ಅರ್ವಾಚೀನಯುಗದ ಇತರ ನಿದರ್ಶನಗಳು. ಇವುಗಳ ಪೈಕಿ ರಾಗವಿಬೋಧದ ಗದ್ಯಭಾಗಗಳು ಪದ್ಯಭಾಗಗಳಿಗೆ ಗ್ರಂಥಕಾರನೇ ಬರೆದ ವ್ಯಾಖ್ಯಾನ. ಉಳಿದ ಎರಡರಲ್ಲಿನ ಗದ್ಯಾಂಶಗಳು ಮೂಲಗ್ರಂಥಕ್ಕೇ ಸೇರಿದ್ದು ಪದ್ಯಾಂಶಗಳಲ್ಲಿ ಹೇಳಿರುವುದನ್ನು ಮುಂದುವರಿಸುತ್ತವೆ, ಸಮರ್ಥಿಸುತ್ತವೆ ಅಥವಾ ವಿವರಿಸುತ್ತವೆ.

(ಅ) ವಿಶ್ಲೇಷಣೆ

ಬೃಹದ್ದೇಶಿಯಲ್ಲಿರುವ ಗದ್ಯಖಂಡಗಳು ಮತಂಗಕೃತವೆ ಅಲ್ಲವೆ ಎಂಬ ವಿಷಯದಲ್ಲಿ ವಿಪುಲವಾಗಿ ಜಿಜ್ಞಾಸೆಯಿದೆ. ಉಪಲಬ್ಧ ಗ್ರಂಥದ ಮೂರನೆಯ ಅಂಶಕ್ಕಿಂತ ಹೆಚ್ಚು ಗದ್ಯಗ್ರಂಥಭಾಗಗಳೇ ಇವೆ. ಅವುಗಳ ಸ್ವರೂಪ ಮತ್ತು ಪಾತ್ರಗಳನ್ನು ಕುರಿತು ಪರಿಶೀಲಿಸುವುದು ಅವಶ್ಯವೆನಿಸುತ್ತದೆ.

ಬೃಹದ್ದೇಶಿಯಲ್ಲಿರುವ ಗದ್ಯಖಂಡಗಳ ಸ್ವರೂಪವನ್ನು ಹೀಗೆ ವಿಶ್ಲೇಷಿಸಬಹುದು.

  1. ಅವುಗಳ ವಿಸ್ತಾರವು ನಿಯಮಿತವಲ್ಲ. ಪೀಠಿಕಾರೂಪವಾಗಿ ಹ್ರಸ್ವವಾಗಿರಬಹುದು: ಉದಾ. ಭರತೇನಾಪ್ಯುಕ್ತಂ (೩೯), ತದುಕ್ತಂ (೭೦), ಅತ್ರೋಚ್ಯತೇ (೭೮), ವಾದಿಮಂಡಲಂ ಯಥಾ (೧೧೨), ಇದಾನೀಂ ವಿಭಾಗಮಾಹುಃ) (೪೧೨), ಏತದೇವ ಸ್ಫುಟಂ ಭವತಿ (೪೧೫), ತಥಾ ಚಾಹ ಭರತಃ (೪೨೯) (ನಾರದ ಉವಾಚ) (೫೭೯) ಇತ್ಯಾದಿ, ಅಥವಾ ಸಾಕಷ್ಟು ದೀರ್ಘವಾಗಿರಬಹುದು : ಬೋಧಕಾಂಶವನ್ನೊಳಗೊಂಡ ಗದ್ಯಗಳಲ್ಲಿ ಹನ್ನೆರಡರಿಂದ ಹದಿನೈದು ಖಂಡಗಳು ಇರುತ್ತವೆ ; ರಾಗದ ಉದಾಹರಣೆಗಳಲ್ಲಿ ೪೩ ಖಂಡಗಳಷ್ಟು (೪೨೯) ಗರಿಷ್ಠ ದೀರ್ಘವಾಗಿರುತ್ತವೆ.
  2. ಶ್ಲೋಕದಲ್ಲಿ ಇಲ್ಲದ ಅಂಶಗಳನ್ನು ಪ್ರವೇಶಗೊಳಿಸುವುದು, ಶೋಕದಲ್ಲಿರುವುದನ್ನು ವಿಸ್ತರಿಸಿ ಮುಂದುವರಿಸುವುದು, ಇಂಗಿತವನ್ನು ಸ್ಪಷ್ಟಗೊಳಿಸುವುದು, ಜಿಜ್ಞಾಸೆನಡೆಸುವುದು, ವ್ಯಾಖ್ಯಾನ ಮಾಡುವುದು, ಆಕ್ಷೇಪಗಳನ್ನೆತ್ತಿ ಪರಿಹರಿಸುವುದು, ಪ್ರಶ್ನೋತ್ತರದಲ್ಲಿ, ಸಂವಾದದಲ್ಲಿ ಗ್ರಂಥವನ್ನು ನಿರ್ವಹಿಸುವುದು, ಪ್ರಾತ್ಯಕ್ಷಿರೂಪದ ನಿದರ್ಶನಗಳನ್ನು ನೀಡುವುದು ಮುಂತಾದವನ್ನು ಗದ್ಯಭಾಗಗಳು ನಿರ್ವಹಿಸುತ್ತವೆ :

ಅ) ವಿವರಣೆ / ವಿಸ್ತರಣೆ : ೨೮, ೩೩, ೪೧-೪೭, ೭೮, ೮೦-೮೧, ೯೮, ೧೦೦, ೧೦೨-೧೦೪, ೧೧೦,೧೧೧, ೧೧೪-೧೨೩, ೧೪೦, ೧೭೮, ೧೭೯, ೧೮೨, ೨೫೨-೨೬೮, ೨೭೯, ೨೮೧, ೩೭೮, ೩೮೩-೩೯೩, ೪೦೨, ೪೦೪, ೪೧೨, ೪೨೩.

ಆ) ಪ್ರಶ್ನೋತ್ತರ / ಸಂವಾದರೂಪದಲ್ಲಿ ಉಪದೇಶ : ೪೩,೯೬,೧೦೮, ೧೦೯, ೧೧೧, ೧೧೪, ೧೨೧, ೧೬೫, ೧೭೧, ೪೨೮, ೪೩೮, ೪೪೮, ೫೦೨, ೬೨೦ : ಶ್ಲೋಕಗಳಲ್ಲಿ ಸಂವಾದ / ಪ್ರಶ್ನೋತ್ತರರೂಪದ ಸಂವಾದ : ೫೭೯, ೫೮೦ ಮತ್ತು ನಂತರ, ೭೪೦-೭೪೩, ೭೪೪ ಮತ್ತು ನಂತರ

ಇ) ವ್ಯಾಖ್ಯಾನರೂಪ : ೧೯೭, ೩೭೩, ೩೭೬

ಈ) ವಾದ, ಜಿಜ್ಞಾಸೆ : ೧೦೨, ೧೦೪, ೧೦೭, ೪೨೦, ೪೨೪, ೪೨೮

ಉ) ಆಕ್ಷೇಪ / ಶಂಕಾ-ಸಮಾಧಾನ (‘ನನು’ ಇಂದ ಪ್ರಾರಂಭವಾಗುವಂತಹವು) : ೪೩, ೯೮, ೧೦೩, ೧೦೮, ೧೦೯, ೧೧೧, ೧೪೦, ೧೭೧, ೧೭೬, ೨೧೭, ೨೪೦, ೨೪೨, ೨೪೩, ೨೪೫, ೨೪೭, ೨೭೧, ೨೭೯, ೬೩೦, ೬೩೨, ೬೩೭, ೬೬೫, ೭೦೪, ೭೦೬,೭೩೧, ೭೭೩

(ಉಳಿದ ಉದಾಹರಣೆಗಳು ಅನುಬಂಧ ೬, ಪು.೬೧೫, ೬೧೬ರಲ್ಲಿ ದೊರೆಯುತ್ತವೆ.)

ಊ) ಲಕ್ಷಣ ನಿರೂಪಣೆಯನ್ನು ಸಂಗೀತಪ್ರಯೋಗದಿಂದ ನಿದರ್ಶಿಸಿ ಸಮರ್ಥಿಸುವುದು : ೧೧೭, ೨೬೬, ೨೭೨, ೨೭೪-೨೭೭, ೨೮೦, ೨೮೩-೩೧೮, ೪೩೧, ೪೩೨- ೪೩೮, ೪೪೦ ೪೫೦-೧, ೬೪೦, ೭೭೭ರಿಂದ ನಾಲ್ಕನೆಯ ಅಧ್ಯಾಯದ ಕೊನೆಯವರೆಗೆ (೬೪೦ನ್ನು ವಿಶೇಷವಾಗಿ ಗಮನಿಸಬಹುದು).

ಋ) ಅರ್ಥವಿಸ್ತಾರ (‘ಅಸ್ಯಾರ್ಥಃ’ ಎಂದು ಮೊದಲಾಗುವವುಗಳು) : ೪೮೪, ೪೯೮, ೫೦೦, ೫೦೪, ೫೦೬, ೫೦೮, ೫೧೦, ೬೨೨, ೬೨೫, ೬೨೭, ೬೨೯ (ಇಂತಹ ಇತರ ಗ್ರಂಥ ಭಾಗಗಳು ಅನುಬಂಧ ೬, ಪು.೫೯೭, ೫೯೮ರಲ್ಲಿವೆ.)

ಎ)’ಉವಾಚ’ ಗಳು : (೧), (೨), (೩), (೪), ೭೪೦,೭೪೪

ಏ) ಗದ್ಯದಲ್ಲಿ ಹೇಳಿರುವುದನ್ನು ಶ್ಲೋಕಗಳಲ್ಲಿ ಮುಗಿಸುವುದು (೨೩೩ನೆಯ ಗ್ರಂಥಭಾಗವು ೧೮೧ರಿಂದ ೨೩೨ರವರೆಗಿನ ಗ್ರಂಥಭಾಗಗಳನ್ನು ಸಮಾಪನಗೊಳಿಸುತ್ತದೆ.)

ಬೃಹದ್ದೇಶಿಯಲ್ಲಿರುವ ಗದ್ಯಾಂಶಗಳು ಅದರ ಶ್ಲೋಕಭಾಗಗಳಿಗೆ ಬೇರೆ ಯಾರೋ ರಚಿಸಿರುವ ವೃತ್ತಿಯಿರಬಹುದೆಂದು ಡಾ || ಮುಕುಂದಲಾಠರು (ಎ ಸ್ಟಡಿ ಇನ್ ದತ್ತಿಲಂ, ಪು.೫೦) ಊಹಿಸುತ್ತಾರೆ. ಗ್ರಂಥವು ಪೌರಾಣಿಕ ಶೈಲಿಯಲ್ಲಿರುವುದರಿಂದ ಅವರು ಹೀಗೆ ಅಭಿಪ್ರಾಯಪಡುತ್ತಾರೆ. ಇದು ಸಮಂಜಸವೆಂದು ತೋರುವುದಿಲ್ಲ. ಏಕೆಂದರೆ ನಾಟ್ಯಶಾಸ್ತ್ರವೂ ಪೌರಾಣಿಕ ಶೈಲಿಯಲ್ಲೇ ನಿರೂಪಿತವಾಗಿದೆ, ಆದರೆ ಅದರ ಗದ್ಯಪದ್ಯಗಳು ಏಕಕರ್ತೃವೆಂಬುದರಲ್ಲಿ ಸಂಶಯವಿಲ್ಲ. ಅಲ್ಲದೆ ಬೃಹದ್ದೇಶಿಯ ಗದ್ಯಭಾಗಗಳು ಆಯಾ ಶ್ಲೋಕಗಳ ವಿವರಣೆಗಳೆಂಬುದೂ ಸರಿಯಲ್ಲ. ಏಕೆಂದರೆ ಶ್ಲೋಕಗಳಲ್ಲಿ ಇಂಗಿತಗೊಳಿಸದಿರುವ ಅನ್ಯಸಾಮಗ್ರಿಯನ್ನೂ ಅವು ಅವಿರಳವಾಗಿ ಒಳಗೊಂಡಿವೆ. ವ್ಯಾಖ್ಯಾನರೂಪವಾಗಿರುವ ಕೆಲವು (೧೯೭, ೩೭೩ಮ ೩೭೬) ಇರುವುದು ನಿಜ. ಆದರೆ ಶ್ಲೋಕಗಳಲ್ಲಿರುವ ವಿಷಯಕ್ಕೆ ಪೀಠಿಕಾ ರೂಪದಲ್ಲಿ, ಅದರ ಬೆಳವಣಿಗೆಯಲ್ಲಿ. ಅದರ ಸಮರ್ಥನೆ, ಜಿಜ್ಞಾಸೆಗಳಲ್ಲಿ, ವಿಷಯಾಂತರ ನಿವೇಶನದಲ್ಲಿ ಇರುವ ಗದ್ಯ ಗ್ರಂಥಭಾಗಗಳೇ ಹೆಚ್ಚು (೨೮, ೩೩, ೪೧-೪೭, ೭೮, ೮೦, ೮೧, ೯೮, ೧೦೦, ೧೦೨-೧೦೪, ೧೧೦, ೧೧೧, ೧೧೪-೧೨೩, ೧೪೦, ೧೭೨-೧೮೨, ೧೯೨, ೨೫೨-೨೬೮, ೨೭೯, ೨೮೧, ೩೭೮, ೩೮೩-೩೯೩, ೪೦೨, ೪೦೪, ೪೧೨, ೪೧೪, ೫೨೧-೫೪೫). ಅಲ್ಲದೆ ಗದ್ಯಾಂಶಗಳು ಗ್ರಂಥದ ಪೂರ್ವಾರ್ಧದಲ್ಲಿ – ಮೊದಲನೆಯ ಮೂರು ಅಧ್ಯಾಯಗಳಲ್ಲಿ ಮಾತ್ರ-ಇವೆ. ಕನ್ನಡ ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ಕೇಂದ್ರ ಸಂಗೀತನಾಟಕ ಅಕಾಡೆಮಿಯು ಹಂಪಿಯಲ್ಲಿ ಮತಂಗ-ಬೃಹದ್ದೇಶಿಯನ್ನು ಕುರಿತು ೧೯೯೪ರಲ್ಲಿ ನಡೆಸಿದ ವಿಚಾರಗೋಷ್ಠಿಯಲ್ಲಿ ಡಾ || ಎನ್. ರಾಮನಾಥನ್ ಅವರು ‘ಪ್ರೋಸ್ ಆಂಡ್ ವರ್ಸ್ ಪೋರ್ಶನ್ಸ್ ಆಫ್ ಬೃಹದ್ದೇಶಿ: ದೇರ್ ಮ್ಯೂಚುಅಲ್ ರಿಲೇಷನ್‌ಶಿಪ್’ ಎಂಬ ವಿದ್ವತ್‌ಪೂರ್ಣ ಪ್ರಬಂಧವನ್ನು ಮಂಡಿಸಿದರು. ಅದರ ಪ್ರಯೋಜನವನ್ನು ಇಲ್ಲಿ ಪಡೆದುಕೊಂಡಿದ್ದೇನೆ. ಕೆಲವು ಅಪವಾದಗಳೊಡನೆ ಬೃಹದ್ದೇಶಿಯು ಏಕಕರ್ತೃಕವೆಂಬ ಅಭಿಪ್ರಾಯವನ್ನೇ ಅವರು ತಳೆದಿದ್ದಾರೆ.