(ಊ) ಅಸಮಂಜಸತೆಗಳು)

ನಾಟ್ಯಶಾಸ್ತ್ರದ ರಚನೆಯಲ್ಲಿ ಗ್ರಂಥದ ಉದ್ದಕ್ಕೂ ಅನೇಕ ಅಸಮಂಜಸತೆಗಳು ಸಂಶೋಧಕನ ಗಮನವನ್ನು ಸೆಳೆಯುತ್ತವೆ, ಆದರೆ ಬೃಹದ್ದೇಶಿಯಲ್ಲಿ ಅಂತಹ ಅಸಮಂಜಸತೆಗಳು ಕಾಣುವುದಿಲ್ಲವಾದುದರಿಂದಿದರ ಪ್ರಸಕ್ತಿಯು ಈ ಅಭ್ಯಾಸದಲ್ಲಿಲ್ಲ.

(ಋ) ನಿದರ್ಶನಗಳು

ನಾಟ್ಯವೂ ಸಂಗೀತವೂ ಪ್ರಯೋಗಾತ್ಮಕ ಕಲೆಗಳು. ಆದುದರಿಂದ ಅವುಗಳ ಶಾಸ್ತ್ರೀಯ ನಿರೂಪಣೆಯಲ್ಲಿ ಲಕ್ಷ್ಯಪ್ರಯುಕ್ತಿಯು ಮುಖ್ಯಪ್ರಮಾಣವಾಗಿರುತ್ತದೆ. ಇದರಿಂದಾಗಿ ಈ ಕಲೆಗಳ ಪ್ರಮುಖ ಲಕ್ಷಣಗ್ರಂಥಗಳು ಅವಶ್ಯವಾದೆಡೆಯಲ್ಲೆಲ್ಲ ಪೂರ್ವಪ್ರಯೋಗದಿಂದ ಅಥವಾ ಸಮಸಾಮಯಿಕ ಲಕ್ಷ್ಯದಿಂದ ಸಮರ್ಥನೆ, ಅಸಮ್ಮತಿ, ವಿಧಿ, ನಿಷೇದ ಮುಂತಾದವುಗಳಲ್ಲಿಯೂ ಉದಾಹರಣೆಗಳನ್ನು ನೀಡುತ್ತವೆ. ಇದರಿಂದ ಆಯಾ ಕಾಲದ ಕಲಾಪ್ರಯೋಗದ ವಿಷಯದಲ್ಲಿ ಕಿಟಕಿಯನ್ನು ಅಥವಾ ಬಾಗಿಲನ್ನು ತೆರದಿಟ್ಟಂತಾಗುತ್ತದೆ. ನಾಟ್ಯಶಾಸ್ತ್ರದ ಮತ್ತು ಬೃಹದ್ದೇಶಿಯ ನಿರೂಪಣವಿಧಾನ ಮತ್ತು ಶೈಲಿಗಳನ್ನು ಕುರಿತು ಮೇಲೆ (ಪು.೧೯೯-೨೦೪) ಸಂಕ್ಷೇಪವಾದ ವಿವೇಚನೆಯನ್ನು ಮಾಡಿದೆ. ಈ ಮಿತಿಯಲ್ಲಿ ಇವುಗಳಲ್ಲಿರುವ ನಿದರ್ಶನಗಳನ್ನು ಇಲ್ಲಿ ಸೂಚಿಸಬಹುದು :

ನಾಟ್ಯಶಾಸ್ತ್ರಂ : ಪೂರ್ವರಂಗವಿಧಿಯಲ್ಲಿ ಅವಕೃಷ್ಟಧ್ರುವಾ (೫.೧೧೨), ಛಂಧೋವಿಚಿತಿ ಅಧ್ಯಾಯದಲ್ಲಿ ನಿರೂಪಿಸಿರುವ ವೃತ್ತಗಳಲ್ಲಿ ಪ್ರತಿಯೊಂದಕ್ಕೂ ಉದಾಹರಣೆ (೧೫ನೆಯ ಅಧ್ಯಾಯ), (ಉಪಮಾ, ರೂಪಕ, ದೀಪಕ, ಯಮಕ ಇತ್ಯಾದಿ) ಅಲಂಕಾರಗಳಿಗೂ ಅವುಗಳ ಪ್ರಭೇದಗಳಿಗೂ ಉದಾಹರಣೆಗಳು (ಅಧ್ಯಾಯ ೧೬), ಜಾ‌ತ್ಯಧ್ಯಾಯದಲ್ಲಿ ಆಶ್ರಾವಣಾ (೨೯.೮೮), ಆರಂಭ (೨೯.೯೦), ಅವಪಾಣಿ (೨೯.೯೬), ಸಂಖೋಟನಾ, ಪರಿಘಟ್ಟಣಾ (ಪ್ರಕಲ್ಪ್ಯ) (೨೯.೧೦೬), ಮಾರ್ಗಾಸಾರಿತ (೨೯.೧೦೯), ಕನಿಷ್ಠಾಸಾರಿತ (೩೧.೧೦೭), ಮಧ್ಯಮಾಸಾರಿತ (೩೧.೧೧೦), ದೀರ್ಘಾಸಾರಿತ (೩೧.೧೧೩), ವಿಶಾಲಾ, ಸಂಗತಾ, ಸುನಂದಾ, ಸುಮುಖಿ ಎಂಬ ವರ್ಧಮಾನಾಂಗಗಳು (೩೧, ೧೩೫, ೧೩೬,೧೩೭), ಉಪೋಹನಗಳು(೩೧,೧೩೮), ಧ್ರುವಾಧ್ಯಾಯದಲ್ಲಿ (೨೯) ಧ್ರುವಾವೃತ್ತಗಳು(೪೮, ೫೦, ೫೨, ೫೪, ೫೭, ೫೮, ೫೯, ೬೦, ೬೨, ೬೪, ೬೬, ೬೮, ೭೧, ೭೨, ೭೪, ೭೬, ೭೯, ೮೧, ೮೩,,೮೫, ೮೭, ೮೯, ೯೨, ೯೩, ೯೫, ೯೭, ೯೮, ೯೯, ೧೦೨, ೧೦೪, ೧೦೭, ೧೦೯, ೧೧೧, ೧೧೩, ೧೧೫, ೧೧೭, ೧೦೯, ೧೧೧, ೧೧೩, ೧೧೫, ೧೧೭, ೧೧೯, ೧೨೧, ೧೨೩, ೧೨೫, ೧೨೭, ೧೩೦, ೧೩೨, ೧೩೪, ೧೩೬, ೧೩೮, ೧೪೦, ೧೪೩, ೧೪೫, ೧೪೭, ೧೫೧, ೧೬೨, ೧೬೪, ೧೬೫, ೧೬೮, ೧೭೦, ೧೭೬, ೧೭೭, ೧೭೮, ೧೮೩, ೧೮೫, ೧೮೭— ೩೦೦), ಪುಷ್ಕರಾಧ್ಯಾಯದಲ್ಲಿ (೩೪) ವಾದ್ಯಾಕ್ಷರಸಂಯೋಜನೆಗಳು (೪೩-೪೬, ೪೯, ೫೦), ವಾದ್ಯದ ವರ್ಣಗಳು (೯೨-೯೬ ಗದ್ಯ ೧೦೩-೧೦೮)

ಬೃಹದ್ದೇಶೀ : ಚಲವೀಣೆ-ಧ್ರವವೀಣೆಗಳಲ್ಲಿ ಶ್ರುತಿನಿದರ್ಶನ (೪೪-೪೬), ಶ್ರುತಿಗಳ ಮಂಡಲಪ್ರಸ್ತಾರ (೮೦-೮೬, ೮೭-೯೧), ಷಡ್ಜಗ್ರಾಮದಲ್ಲಿ ಸಂವಾದಿಮಂಡಲ (೧೦೪), ಅನುವಾದಿಮಂಡಲ (೧೧೯), ವಿವಾದಿಮಂಡಲ (೧೨೧), ಮಧ್ಯಮಗ್ರಾಮದಲ್ಲಿ ಸಂವಾದಿಮಂಡಲ (೧೨೪), ಅನುವಾದಿಮಂಡಲ (೧೨೫), ವಿವಾದಿಮಂಡಲ (೧೨೬), ಋಷಭದ ಉತ್ಪತ್ತಿಸ್ಥಾನ (೧೩೩), ಷಡ್ಜಗ್ರಾಮ, ಮಧ್ಯಮಗ್ರಾಮಗಳಲ್ಲಿ ಮೂರ್ಛನಾಮಂಡಲಗಳು (೧೮೫-೧೮೭), ತಾನಪ್ರಸ್ತಾರಗಳು (೨೦೫-೨೧೬), ತಾನಗಳಲ್ಲಿ ಉತ್ಕ್ರಮಗುಣನೋಪಾಯ ಪ್ರಸ್ತಾರಗಳು (೨೫೨-೨೫೬), ಸ್ತಾಯೀವರ್ಣದಲ್ಲಿ ಷಾಡ್ಜೀ ಮತ್ತು ಮಧ್ಯಮಾ ಜಾತಿಗಳಿಂದ ಉದಾಹರಣೆಗಳು (೨೭೯), ಸಂಚಾರೀವರ್ಣಕ್ಕೆ ಧೈವತೀ ಜಾತಿಯಿಂದ ಉದಾಹರಣೆ (ಅದೇ), ಆರೋಹೀ, ಅವರೋಹೀ ವರ್ಣಗಳಿಗೆ ನಂದಯಂತೀ ಜಾತಿಯಿಂದ ಉದಾಹರಣೆ (ಅದೇ), ವರ್ಣಾಲಂಕಾರಗಳಿಗೆ ಸ್ವರಪಡಿಸಿದ ಉದಾಹರಣೆಗಳು, ಭರತಮತದ ವರ್ಣಾಲಂಕಾರಗಳಿಗೂ ಸ್ವರಪಡಿಸಿದ ಉದಾಹರಣೆಗಳು (ಭಾರತೀಯಸಂಗೀತಶಾಸ್ತ್ರದ ಇತಿಹಾಸದಲ್ಲಿ ವರ್ಣಾಲಂಕಾರಗಳಿಗೆ, ವಿಶೇಷವಾಗಿ ಭರತಮತಕ್ಕೆ ಇವೇ ಮೊಟ್ಟಮೊದಲನೆಯ ಉದಾಹರಣೆಗಳು (೩೭೮, ಗ್ರಂಥಪಾತವಿದೆ, ಪದಗೀತಿಯಲ್ಲಿ ವೃತ್ತಿ-ಲಯಗಳ ಪ್ರಯೋಗ, ದೇವಂ ಶರ್ವಂ ವಂದೇ (೩೮೮) , ಸಾಮಗಾಯನದಲ್ಲಿ ಪದಾವೃತ್ತಿಯಾಗುವ ಜಾತವೇದಸಂ ನಿದರ್ಶನ (೩೮೯), ಜಾತಿಗಳಲ್ಲಿ ಒಂದೊಂದಕ್ಕೂ ಅಂಶಗಳು, ಗಾಂಧಾರೀ, ಷಾಡ್ಜೀಗಳಿಂದ ನಿದರ್ಶನ (೪೩೧), ತಾರಲಕ್ಷಣಕ್ಕೆ ನಂದಜಯಂತೀ ಮತ್ತು ಗಾಂಧಾರೀ ಜಾತಿಗಳಿಂದ ಉದಾಹರಣೆಗಳು (೪೩೮), ಮಂದ್ರಲಕ್ಷಣಕ್ಕೆ ಧೈವತೀಜಾತಿಯಿಂದ ಉದಾಹರಣೆ (೪೪೦), ಜಾತಿಗಳ ಗಣನಿರ್ದೇಶನದಲ್ಲಿ ಅಂಶಗಳ ನಿದರ್ಶನ (೪೮೪), ಷಡ್ಜಮದ್ಯಮಾದಿಂದ ನಂದಯಂತಿಯವರೆಗಿನ ಒಂಭತ್ತು ಜಾತಿಗಳಿಗೆ ಸ್ವರಪಡಿಸಿದ ಹಾಡುಗಳು (ಸಂಗೀತರತ್ನಾಕರದಿಂದ ಪ್ರಕ್ಷೇಪ ೫೪೯, ೫೫೩, ೫೫೭, ೫೬೨, ೫೬೫, ೫೬೮, ೫೭೧, ೫೭೪, ೫೭೭), ಭಾಷಾರಾಗಗಳಲ್ಲಿ ಯಾಷ್ಟಿಕಮತಾನುಸಾರದ ೭೪ ರಾಗಗಳಿಗೆ (ಮೂರು ಗ್ರಂಥಲೋಪಗಳನ್ನು ಒಳಗೊಂಡು) ಪ್ರತಿಯೊಂದಕ್ಕೂ ಶಾರ್ದೂಲಮತಾನುಸಾರದ ೩೫ ರಾಗಗಳಿಗೆ (ನಾಲ್ಕು ಗ್ರಂಥಲೋಪಗಳನ್ನು ಒಳಗೊಂಡು) ಪ್ರತಿಯೊಂದು ಉದಾಹರಣೆಗಳು (೭೭೭-೧೦೩೫)

(ಋ) ವಸ್ತು

ನಾಟ್ಯಶಾಸ್ತ್ರವು ಚತುರ್ವಿಧಾಭಿನಯಕ್ಕೆ ಅನುಷಂಗವಾಗಿ ವಾಚಿಕಕ್ಕೆ ಅಧೀನವಾಗಿ ಗೇಯಾದಿಕಾರವನ್ನೂ ಆಂಗಿಕಕ್ಕೆ ಅಧೀನವಾಗಿ ನೃತ್ತಾಧಿಕಾರವನ್ನೂ ನಿರೂಪಿಸುತ್ತದೆ. ಇವುಗಳಲ್ಲಿ ಗೇಯಾಧಿಕಾರವು ಅಂದರೆ ೨೮ ದಿಂದ ೩೪ನೆಯ ಅಧ್ಯಾಯಗಳವರೆಗಿನ ಏಳು ಅಧ್ಯಾಯಗಳಲ್ಲಿ ಅಡಕವಾಗಿದೆ. ಇದು ಉಪಲಬ್ಧ ಬೃಹದ್ದೇಶಿಯ ಆರು ಅಧ್ಯಾಯಗಳ, ಮತ್ತು ಪೂರ್ತಿ ದೊರೆಯದಿರುವ ವಾದ್ಯಾಧ್ಯಾಯದ ವಸ್ತುವಾಗಿದೆ. ಅಂತೆಯೇ ನೃತ್ತಾಧಿಕಾರವನ್ನು ನಾಟ್ಯಶಾಸ್ತ್ರದ ೪, ೮ ೯, ೧೦, ೧೧, ೧೨, ೧೩, ಮತ್ತು ೨೫ನೆಯ ಅಧ್ಯಾಯಗಳಲ್ಲಿ ನಿರೂಪಿಸಲಾಗಿದ್ದು ಇದನ್ನು ಬೃಹದ್ದೇಶಿಯಲ್ಲಿ ಅಲ್ಪೋದ್ಧೃತಿಗಳಲ್ಲಿ ಮಾತ್ರ ಉಳಿದುಬಂದಿರುವ ನೃತ್ತಾಧ್ಯಾಯದಲ್ಲಿ ವರ್ಣಿಸಿದೆ. ಇವೆರಡು ಗ್ರಂಥಗಳಲ್ಲಿ ಹೇಳಿರುವ ವಿಷಯಗಳ ಶಾಸ್ತ್ರೀಯ ತುಲನೆಯು ಮುಖ್ಯವಾದರೂ ಅದು ಪ್ರಕೃತ ಪೀಠಿಕೆಯ ವ್ಯಾಪ್ತಿಯನ್ನು ಮೀರಿದೆ. ಈ ವಿವೇಚನೆಯನ್ನು ಮತಂಗಹೃದಯದಲ್ಲಿ ಕೈಗೊಳ್ಳಲಾಗುವುದು.

XI ಬೃಹದ್ದೇಶಿಯ ಪ್ರಕೃತ ಸಂಸ್ಕರಣ: ವೈಶಿಷ್ಟ್ಯಗಳು

ಬೃಹದ್ದೇಶಿಯ ಪ್ರಕೃತ ಸಂಸ್ಕರಣವು ಹೇಗೆ ಮೈತಾಳಿದೆಯೆಂಬುದನ್ನೂ ಅದು ಹಿಂದಿನ ಎರಡು ಆವೃತ್ತಿಗಳಿಂದ ಹೇಗೆ ವೈಶಿಷ್ಟ್ಯಪೂರ್ಣವಾಗಿ ಭಿನ್ನವಾಗಿದೆಯೆಂಬುದನ್ನೂ ಕುರಿತು ಕೆಲವು ಮಾತುಗಳನ್ನು ಬರೆಯುವುದು ಉಚಿತವಾಗಿದೆ. ಅದನ್ನು ಸಂಪಾದನ, ಅನುವಾದ, ಪಾಠವಿಮರ್ಶೆ, ವಿಮರ್ಶಾಸ್ತರಗಳು, ಅನುಬಂಧಗಳು, ಪುಟವಿನ್ಯಾಸ ಎಂಬ ಶೀರ್ಷಿಕೆಗಳಲ್ಲಿ ವಿಂಗಡಿಸಿಕೊಳ್ಳಬಹುದು.

(ಅ) ಸಂಪಾದನ

ಪ್ರ.ಸಂ.ಗೆ ಆಧಾರವಾದ ಎರಡು ಮಾತೃಕೆಗಳನ್ನು ತಾಳೆನೋಡಿ ಅದು ಯಥಾವತ್ತಾಗಿದೆಯೆಂಬುದನ್ನು ಮನವರಿಕೆ ಮಾಡಿಕೊಳ್ಳಲಾಗಿದೆ. ಪ್ರ.ಸಂ.ದ ಸಂಪಾದಕೀಯ ಟಿಪ್ಪಣಿಗಳು, ಎರಡು ಮಾತೃಕೆಗಳಿಂದ ದೊರೆತ ಪಾಠಾಂತರಗಳು ಇವುಗಳನ್ನು ಪೃಥಕ್ಕರಿಸಿ ಪ್ರತ್ಯೇಕ ಸಂಜ್ಞೆಗಳೊಡನೆ ದಾಖಲಿಸಿದೆ. ಅದರೂ ದ್ವಿಸಂ.ವು ಹೆಚ್ಚು ಪಾಠೋಪಕರಣಗಳಿಂದ ತಯಾರಾಗಿದ್ದು ಗ್ರಂಥದಲ್ಲಿ ಕಡಿಮೆ ಲೋಪದೋಷಗಳಿರುವುದರಿಂದ ಅದನ್ನೇ ಇಲ್ಲಿ ಮಾತೃಕೆಯನ್ನಾಗಿ ಸ್ವೀಕರಿಸಿ ಅದರೊಡನೆ ಉಂಟದ ಭಿನ್ನತೆಗಳನ್ನು ಸ್ವೀಕೃತಪಾಠಾನಂತರದಲ್ಲಿ ಕಂಸಗಳಲ್ಲಿಯೋ ಪಾಠವಿಮರ್ಶೆಯಲ್ಲಿಯೋ ತೋರಿಸಿದೆ. ದ್ವಿಸಂ.ಕ್ಕೆ ದೊರೆಯದಿದ್ದ ಪಾಠೋಪಕರಣಗಳಿಂದ ಅಲ್ಲಲ್ಲಿ ಗ್ರಂಥಾಂಶಗಳನ್ನು ಹೊಸದಾಗಿ ಸೇರಿಸಲಾಗಿದೆ. ಮೂಲಗ್ರಂಥದ ಸ್ವೀಕೃತಪಾಠದಲ್ಲಿ ಸಂಪೂರ್ಣವಾಗಿ ಅಪಾರದರ್ಶಕವಾಗಿಯೋ ಅರ್ಥಶೂನ್ಯವಾಗಿಯೋ ಇರುವ ಪಾಠಗಳ ನಂತರ ಚೌಕಕಂಸಗಳೊಳಗೆ [ ] ಆಶ್ಚರ್ಯಾತ್ಮಕ [!] ಚಿಹ್ನೆಯನ್ನಿಟ್ಟು ನಂತರ ಸಂಪಾದಕೀಯ ತಿದ್ದುಪಡಿಗಳನ್ನೋ ಸಲಹೆಗಳನ್ನೋ ಕೊಟ್ಟಿದೆ. ಅಲ್ಪ ಸಮಂಜಸತೆಯೋ ಸಂಶಯವೋ ಇರುವೆಡೆಯಲ್ಲಿ ಚೌಕಕಂಸಗಳ ಒಳಗೆ ಪ್ರಶ್ನಾರ್ಥಕ ಚಿಹ್ನೆಯನ್ನಿಟ್ಟು [?] ಅದರ ನಂತರ ಸಂಪಾದಕೀಯ ಸಲಹೆಗಳನ್ನು ನೀಡಿದೆ. ಆದರೂ ಪಾಠವು ಪೂರ್ತಿ ಸಮರ್ಪಕವಾಗದಿದ್ದಲ್ಲಿ, ಸಲಹೆಯ ನಂತರ ಮತ್ತೊಂದು ಪ್ರಶ್ನಾರ್ಥಕ ಚಿಹ್ನೆಯನ್ನಿಟ್ಟಿದೆ. ಮೂಲಗ್ರಂಥದಲ್ಲಿ ಶೀರ್ಷಿಕೆ, ಉಪಶೀರ್ಷಿಕೆ, ಗ್ರಂಥ, ಅಧ್ಯಾಯ, ಅಧಿಕರಣ, ವಿಷಯ ಮುಂತಾದವುಗಳ ಸಮಾಪನವಾಕ್ಯ ಅಥವಾ ಸಮಾಪನ ಪದಗಳು ಇತ್ಯಾದಿಗಳು ಇಲ್ಲದಿರುವಾಗ ಅವುಗಳನ್ನು ಚೌಕಕಂಸಗಳಲ್ಲಿಟ್ಟು ಒದಗಿಸಲಾಗಿದೆ. ಇದರ ಬಹು ಭಾಗವನ್ನು ದ್ವಿಸಂ.ರೇ ಮಾಡಿದ್ದಾರೆ. ಒಟ್ಟಿನಲ್ಲಿ ಮೂಲಗ್ರಂಥದಿಂದ ಸಂಪಾದಕೀಯ ಮಧ್ಯಪ್ರವೇಶವನ್ನು ಬೇರ್ಪಡಿಸಲೆಳಸುವ ಎಲ್ಲ ಪ್ರಯತ್ನಗಳನ್ನೂ ಕೈಗೊಳ್ಳಲಾಗಿದೆ.

ಪ್ರಸಂ.ವು ಮೂಲಹಸ್ತಪ್ರತಿಗಳಿಂದ ಸಿದ್ಧವಾದುದು. ದ್ವಿಸಂ. ಮತ್ತು ಪ್ರಕೃತ ಸಂಸ್ಕರಣಗಳಿಗೆ ಪಾಠಸಂಶೋಧನ ಪ್ರಾಯೋಜಕವಾದ ಯಾವುದೇ ಹೊಸ ಹಸ್ತಪ್ರತಿಗಳು ದೊರೆಯಲಿಲ್ಲ. ಅವುಗಳು ಪಾಠ ಸಂಯೋಜನಕ್ಕಾಗಿ ಮುದ್ರಿತ ಅಕ್ಷರಗಳಲ್ಲಿರುವ ಪಾಠೋಪಕರಣಗಳನ್ನೇ ಬಳಸಬೇಕಾಯಿತು. ಇವುಗಳಿಗೆ ಮೂಲಹಸ್ತಪ್ರತಿಗಳಲ್ಲಿ ದೊರೆಯುವ ಉಪಕರಣಗಳಿಗಿಂತ ಕಡಿಮೆ ಬೆಲೆ. ಏಕೆಂದರೆ ಇಲ್ಲಿ ಅಯಾ ಸಂಪಾದಕರ ಬುದ್ಧಿಪೂರ್ವಕವಾದ ಅಥವಾ ಬುದ್ಧಿಪೂರ್ವಕವಲ್ಲದ ಹಸ್ತಕ್ಷೇಪಗಳು ಅನಿವಾರ್ಯವಾಗಿ ಬಂದು ಸೇರಿಕೊಳ್ಳುತ್ತವೆ. ಬೇರೆ ಗ್ರಂಥಗಳ ಮುದ್ರಿತ ಆಕರಗಳಲ್ಲಿರುವ ಪಾಠೋಪಕರಣಗಳು ಆಯಾ ಗ್ರಂಥಕಾರನು ತನಗೆ ದೊರೆತ ಬೃಹದ್ದೇಶೀ ಮಾತೃಕೆಯಿಂದ ಮಾಡಿಕೊಂಡ ಉದ್ಧೃತಿಗಳಿಂದ ಏರ್ಪಡುತ್ತವೆ; ಈ ಮಾತೃಕೆಗಳ ಸ್ಥಿತಿ, ಪಾಠೋಪಕರಣದಲ್ಲಿರುವ ಲಿಪಿಕಾರನ ಬುದ್ಧಿಪೂರ್ವಕ ಅಥವಾ ಅಪ್ರಯತ್ನಜ ಲೋಪದೋಷಗಳು, ಉದ್ಧರಿಸಿಕೊಳ್ಳುವ ಗ್ರಂಥಕಾರನ ಪೂರ್ವಗ್ರಹಪೀಡಿತ ಒಲವು ನಿಲುವುಗಳು- ಇವೂ ಗ್ರಂಥಲೇಖನ ಪರಂಪರೆಯಲ್ಲಿ ತಲೆಹಾಕುತ್ತವೆ. ಪ್ರಕೃತ ಪಾಠೋಪಕರಣಗಳಿಗೆ ಆಶ್ರಯವಾದ ಆಕರಗಳು ವಿವಿಧ ಕಾಲಸ್ತರಗಳಲ್ಲಿ ರಚಿತವಾಗಿರುವುದರಿಂದಲೂ ಆಯಾ ಗ್ರಂಥಕಾರರು ತಮ್ಮ ತಮ್ಮ ಕಾಲಕ್ಕೆ ಸಮೀಪವಾದ ಹಸ್ತಪ್ರತಿ ಮಾತೃಕೆಗಳನ್ನು ಬಳಸಿರುವುದು ಹೆಚ್ಚು ಸಂಭಾವ್ಯವಾದುದರಿಂದಲೂ ಪಾಠೋಪಕರಣಗಳ ಗುಣವು ಏಕರೂಪವಾಗಿರುವುದಿಲ್ಲ. ಅಲ್ಲದೆ ಮೂಲಗ್ರಂಥದಿಂದ ಅದರ ಪ್ರತಿಯು ಕೇಲ ದೇಶಗಳಲ್ಲಿ ಎಷ್ಟೆಷ್ಟು ದೂರವಾಗುತ್ತದೆಯೋ ಅದರ ಪಾಠೋಪಕರಣವೂ ಮೂಲಪಾಠದಿಂದ ಅಷ್ಟಷ್ಟು ದೂರವಾಗುವ ಸಂಭವವು ಬೆಳೆಯುತ್ತ ಹೋಗುತ್ತದೆ. ಇದು ಬೃಹದ್ದೇಶಿಯನ್ನೂ ಒಳಗೊಂಡಂತೆ ಪ್ರಸಿದ್ಧಪ್ರಾಚ್ಯುರಗಳನ್ನು ಬಹುವಾಗಿ ಗಳಿಸಿರುವ ಎಲ್ಲ ಗ್ರಂಥಗಳಿಗೂ ಸಾಧಾರಣವಾಗಿರುವ ಸಮಸ್ಯೆ. ಈ ಗ್ರಂಥದ ಸಂಪಾದನೆಯಲ್ಲಿ ತಲೆದೋರಿದ ಇನ್ನೊಂದು ಸಮಸ್ಯೆಯೆಂದರೆ ಮತಂಗನು ಉದ್ಧರಿಸಿಕೊಂಡಿರುವ ಪ್ರಾಮಾಣಿಕರಲ್ಲಿ ಭರತದತ್ತಿಲರಿಬ್ಬರ ಗ್ರಂಥಗಳು ಮಾತ್ರ ಉಳಿದುಬಂದಿವೆ. ಪಾಠಸಂಯೋಜನೆಗೆ ಅನುವಾಗಿವೆ. ಉಳಿದ ಯಾವ ಪ್ರಾಮಾಣಿಕನ ಗ್ರಂಥವೂ ಅಥವಾ ಅದರ ಸಮಾನಾಂತರ, ಸ್ವತಂತ್ರ ಉದ್ಧೃತಿಗಳೂ ಇಡೀ ಸಂಗೀತಶಾಸ್ತ್ರಗ್ರಂಥರಾಶಿಯಲ್ಲಿ ದೊರೆತಿಲ್ಲ. ಅಲ್ಲದೆ ಈ ಪ್ರಾಮಾಣಿಕರಲ್ಲಿ ಒಂದೇ ಹೆಸರಿನ ಹಲವರು ಬೇರೆ ಬೇರೆ ಕಾಲಸ್ತರಗಳಲ್ಲಿ ಗ್ರಂಥರಚನೆಮಾಡಿದ್ದಾರೆ. ಪಾಠೋಪಕರಣ ಸಾಮಗ್ರಿಯು ಕೃಶವಾಗಿರುವುದಕ್ಕೆಇದೂ ಒಂದು ಕಾರಣ. ಉಪಲಬ್ಧ ಗ್ರಂಥವು ಅಸಮಗ್ರವಾಗಿದ್ದರೂ ಅದರ ಉಳಿದ ಅಧ್ಯಾಯಗಳನನ್‌ಉ ಊಹಿಸಿಕೊಳ್ಳಬಹುದಷ್ಟೇ ಅಲ್ಲದೆ ಅವುಗಳ ಕೇವಲ ಕೃಶವಾಗಿರುವ ಅಲ್ಪಾಂಶಗಳು ಉದ್ಧೃತಿಯಲ್ಲು ಉಳಿದುಕೊಂಡಿದೆ. ಆದುದರಿಂದ ಈ ಕೃಶತೆಯಿಂದಾಗಿ ಬೃಹದ್ದೇಶಿಯಲ್ಲಿ ಲೋಪಪೂರಣವು ಒಂದು ಸಮಸ್ಯೆಯಾಗಿದೆ. ಹೀಗಾಗಿ ಜಾತ್ಯಧ್ಯಾಯ, ಭಾಷಾಧ್ಯಾಯ, ದೇಶೀರಾಗಾಧ್ಯಾಯ ಮತ್ತು ಪ್ರಬಂಧಧ್ಯಾಯಗಳಲ್ಲಿರುವ ಲೋಪಗಳನ್ನು ತುಂಬಿಸಲು ಪಾಠೋಪಕರಣಗಳೇ ಇಲ್ಲವಾಗಿವೆ; ಅಲ್ಲದೆ ಪಾಠಸಂಯೋಜನಕ್ಕೆ ಬೇಕಾದ ಉಪಕರಣಗಳು ಮೊದಲನೆಯ ಅಧ್ಯಾಯಕ್ಕೆ ಅತ್ಯಂತ ಸಾಂದ್ರವಾಗಿದ್ದು ಉತ್ತರೋತ್ತರವಾಗಿ ಕ್ಷೀಣಿಸುತ್ತ ಕೊನೆಯ ಅಧ್ಯಾಯಕ್ಕೆ ಇಲ್ಲದೆಯೇ ಹೋಗಿವೆ. ಆಕರಗಳು ವಿಪುಲವಾಗಿಲ್ಲದಿರುವಾಗಲೂ ಊಹಾತ್ಮಕ ತಿದ್ದುಪಡಿಯು ಅನಿವಾರ್ಯವಾದಾಗಲೂ ಅಂತಃಪ್ರಮಾಣ ಹಾಗೂ ಬಹಿರಂಗ ಪ್ರಮಾಣಗಳ ನೆರವಿನಿಂದ ಪಾಠದ ಮೂಲರೂಪವನ್ನು ಆದಷ್ಟು ಉಳಿಸಿಕೊಳ್ಳುವ ಅಥವಾ ಕನಿಷ್ಠವಾಗಿ ಮಾರ್ಪಡಿಸುವ ಪ್ರಯತ್ನವನ್ನು ಮಾಡಿದೆ. ಇಂತಹ ಸಂದರ್ಭಗಳಲ್ಲಿ ಬೃಹದ್ದೇಶಿಯು ಶಾಸ್ತ್ರಗ್ರಂಥವಾದುದರಿಂದ ಬಾಹ್ಯಸಂಭಾವ್ಯತೆಗಿಂತ ಸಂಗೀತಶಾಸ್ತ್ರ ಮರ್ಯಾದೆಯ ಮಿತಿಯಲ್ಲಿ ಅಂತಃಸಂಭಾವ್ಯತೆಯನ್ನು ಹೆಚ್ಚು ಪುರಸ್ಕರಿಸಿದೆ; ಗ್ರಂಥಕಾರನ ಒಲವು, ನಿಲವು ಮತ್ತು ಶೈಲಿಗಳಿಗೆ ವಿರೋಧವಿಲ್ಲದಿರುವ ಆಶಯದಿಂದ ಊಹಾತ್ಮಕ ತಿದ್ದುಪಡಿಗಳನ್ನು ಕೈಗೊಳ್ಳಲಾಗಿದೆ.

ಇಡೀ ಬೃಹದ್ದೇಶಿಯನ್ನು ಗ್ರಂಥಭಾಗಗಳನ್ನಾಗಿ ವಿಂಗಡಿಸಿ ಅವುಗಳನ್ನು ಕ್ರಮಾಂಕಗಳಿಂದ ಸೂಚಿಸಿದೆ. ಈ ಗ್ರಂಥಭಾಗಗಳು ಶ್ಲೋಕ ಮತ್ತು ಗದ್ಯವೆಂದು ಎರಡು ತೆರನಾಗಿವೆ. ಶ್ಲೋಕದ ಘಟಕವನ್ನು ಶ್ಲೋಕಾರ್ಥವೆಂದಿಟ್ಟುಕೊಂಡು ಅರ್ಥಪೂರ್ತಿಯ ಅಥವಾ ವಿಷಯಸಂಪೂರ್ತಿಯ ಆಧಾರದ ಮೇಲೆ ಒಂದು, ಅಥವಾ ಮೂರು ಶ್ಲೋಕಾರ್ಥಗಳನ್ನೂ ಪ್ರತ್ಯೇಕಘಟಕವೆಂದು ಭಾವಿಸಿ ಅದಕ್ಕೆ ಒಂದು ಕ್ರಮಸಂಖ್ಯೆಯನ್ನು ಕೊಡಲಾಗಿದೆ. ಇಂತಹ ಪ್ರತಿಯೊಂದು ಶ್ಲೋಕಗ್ರಂಥಭಾಗವನ್ನೂ ಪಾದಗಳನ್ನಾಗಿ ವಿಶ್ಲೇಷಿಸಿ ಅವುಗಳನ್ನು ಅಆ (ಒಂದು ಶ್ಲೋಕಾರ್ಥ), ಅಆ ಇಈ (ಎರಡು ಶ್ಲೋಕಾರ್ಥಗಳು) ಅಆ ಇಈ ಉಊ (ಮೂರು ಶ್ಲೋಕಾರ್ಥಗಳು) ಎಂದು ವಿಂಗಡಿಸಿಕೊಂಡು ಇದನ್ನು ಪಾಠವಿಮರ್ಶೆಯಲ್ಲಿ ಉಪಯೋಗಿಸಿದೆ. ಈ ವಿಧಾನವನ್ನು ಗದ್ಯಖಂಡಗಳಿಗೂ ವಿಸ್ತರಿಸಿರುವುದು ಬೃಹದ್ದೇಶಿಯ ಪ್ರಕೃತ ಸಂಪಾದನದ ವೈಶಿಷ್ಟ್ಯ. ಪ್ರತಿಯೊಂದು ವಾಕ್ಯವನ್ನೂ (ಅದರಲ್ಲಿ ಒಂದೇ ಪದವಿರಲಿ, ಅನೇಕ ಪದಗಳಿರಲಿ), ಅ, ಆ,….. ಯ, ರ,……. ಇತ್ಯಾದಿ ಅಕ್ಷರಕ್ರಮದಿಂದ ಸೂಚಿಸಿದೆ. ಇದರಿಂದ ಇಡೀ ಗ್ರಂಥದ ಯಾವುದೇ ಅಂಶವನ್ನು ಏಕೈಕವಾಗಿಯೂ ನಿಸ್ಸಂದಿಗ್ಧವಾಗಿಯೂ ಸಂಖ್ಯಾಮೂಲಕವಾಗಿ ಗುರುತಿಸಬಹುದು. ಇದನ್ನು ವಿಮರ್ಶಾತ್ಮಕಪೀಠಿಕೆ, ಅನುವಾದ, ಪಾಠಸಂಯೋಜನೆ, ಪಾಠವಿಮರ್ಶೆ ಮತ್ತು ಅನುಬಂಧಗಳಲ್ಲಿ ಬಳಸಿದೆ. ಇದರಿಂದ ಅನುವಾದವನ್ನು ಹೆಚ್ಚು ನಿಖರವನ್ನಾಗಿಸಲು ಸಾಧ್ಯವಾಗಿದೆ. ಹೀಗೆ ಈ ಸಂಪಾದನದಲ್ಲಿ ಪಾಠನಿರ್ದೇಶಕ್ಕೆ ಸ್ವತಂತ್ರವೂ ನವ್ಯವೂ ಆಗಿರುವ ವಿಧಾನವನ್ನು ಕಂಡುಹಿಡಿದುಕೊಳ್ಳಲಾಗಿದೆ. ಇಷ್ಟೇ ಅಲ್ಲದೆ ಪ್ರತಿಯೊಂದು ಅಧ್ಯಾಯದಲ್ಲಿಯೂ ಶ್ಲೋಕಗಳಿಗೂ ಗದ್ಯಖಂಡಗಳಿಗೂ ಪ್ರತ್ಯೇಕವಾದ ಕ್ರಮಾಂಕಗಳನ್ನು ಸಹ ಕೊಡಲಾಗಿದೆ; ಇವುಗಳನ್ನು ಬೇರ್ಪಡಿಸಲೆಂದು ಶ್ಲೋಕಕ್ರಮಾಂಕವನ್ನು ಕನ್ನಡಲಿಪಿಯ (೧,೨,೩ ಇತ್ಯಾದಿ) ಅಂಕಿಗಳಿಂದಲೂ ಸೂಚಿಸಿದೆ. ದ್ವಿಸಂ.ರು ಗದ್ಯಖಂಡಗಳನ್ನು ಅನುಚ್ಛೇದ (=ಅನು)ಗಳೆಂದು ಕರೆದಿದ್ದಾರೆ. ಪ್ರಸಂ.ರು ಗದ್ಯಖಂಡಗಳನ್ನು ಎಣಿಸಿಲ್ಲ. ಪ್ರಕೃತ ಸಂಸ್ಕೃರಣದಲ್ಲಿ ಶ್ಲೋಕದ ವಿಂಗಡನೆಯೂ ಗದ್ಯಖಂಡಗಳ ವಿಂಗಡನೆಯೂ ದ್ವಿಸಂ.ದಲ್ಲಿರುವುದಕ್ಕಿಂತ ಅಲ್ಲಲ್ಲಿ ಬೇರೆಯಾಗಿವೆ. ಆದುದರಿಂದ ಆದ್ಯಾಯಗಳಲ್ಲಿನ ಅವುಗಳ ಎಣಿಕೆಯಲ್ಲೂ ವ್ಯತ್ಯಾಸವಿದೆ. ಶೀರ್ಷಿಕೆ, ಉಪಶೀರ್ಷಿಕೆ ಮುಂತಾದವುಗಳಿಗೆ ರೋಮನ್ ಲಿಪಿಯ ಅಂಕಿಗಳನ್ನು (I, II, III ಇತ್ಯಾದಿ, i. ii. iii ಇತ್ಯಾದಿ ಬಳಸಿದೆ.

(ಆ) ಅನುವಾದ

ಬೃಹದ್ದೇಶಿಯು ಬಹುಮಟ್ಟಿಗೆ ಮುಕ್ತಕಗಳ ಸಂಚಯನದಿಂದಾಗುವ ಅಂಶಗಳಲ್ಲಿಯೇ ರಚಿತವಾಗಿದೆ. ಸಂದಾನಿತಕ ಹಾಗೂ ವಿಶೇಷಕಗಳು ಅಪರೂಪ; ಕಲಾಪಕ ಮತ್ತು ಕುಲಕಗಳು (ಉಪಲಬ್ಧಗ್ರಂಥದಲ್ಲಿ) ಇಲ್ಲ. ಇದರಿಂದ ಅದರ ಅನುವಾದವು ಕರಾರುವಕ್ಕಾಗಿಯೂ ಆಯಾ ಗ್ರಂಥಭಾಗದಲ್ಲಿ ಸ್ವಯಂಪೂರ್ಣವಾಗಿಯೂ ಇರಲು ಸಾಧ್ಯವಾಗಿದೆ. ಇದನ್ನು ಗದ್ಯಖಂಡಗಳ ಪ್ರತಿಯೊಂದು ಭಾಗದಲ್ಲಿಯೂ ಸಾಧಿಸಿರುವುದು ಪ್ರಕೃತ ಸಂಸ್ಕರಣದ ವೈಶಿಷ್ಟ್ಯಗಳಲ್ಲಿ ಒಂದು. ಸಂಸ್ಕೃತ ಮತ್ತು ಕನ್ನಡಗಳ ವಾಕ್ಯರಚನಾಮರ್ಯಾದೆಗಳು ಬೇರೆ ಬೇರೆಯೇ ಅಗಿದ್ದರೂ ಮೂಲಗ್ರಂಥದ ವಾಕ್ಯಗಳಲ್ಲಿರುವ ಪದಾನುಕ್ರಮವನ್ನು ಅನುವಾದದಲ್ಲಿಯೂ-ವಾಚನೀಯತೆಗೆ ಭಂಗಬಾರದಂತೆ- ಉಳಿಸಿಕೊಳ್ಳುವ ಪ್ರಯತ್ನವನ್ನು ಸಾಧ್ಯವಾದಷ್ಟು ಮಾಡಿದೆ.

ಅನುವಾದವು ಹೇಳಿಕೇಳಿ ಕಷ್ಟದ ಕೆಲಸ. ಅದು ಮೂಲಕ್ಕೆ ಯಥಾರ್ಥತೆ, ಶಬ್ದಸಂವಾದಿತ್ವ, ಅರ್ಥಸಂವಾದಿತ್ವ ಮತ್ತು ಭಾವಸಂವಾದಿತ್ವಗಳನ್ನು ಪಡೆದಿದ್ದು ಗ್ರಂಥಕ್ಕೂ ಗ್ರಂಥಕರ್ತೃವಿನ ಶೈಲಿಗೂ ಹೃದಯಕ್ಕೂ ಕನ್ನಡಿಸೇವೆಯನ್ನು ಮಾಡಬೇಕು ಮತ್ತು ಕನ್ನಡಗಳ ವಾಕ್ಯರಚನಾಮರ್ಯಾದೆಗಳು ಬೇರೆ ಬೇರೆಯೇ ಆಗಿದ್ದರೂ ಮೂಲಗ್ರಂಥದ ವಾಕ್ಯಗಳಲ್ಲಿರುವ ಪದಾನುಕ್ರಮವನ್ನು ಅನುವಾದದಲ್ಲಿಯೂ-ವಾಚನೀಯತೆಗೆ ಭಂಗಬಾರದಂತೆ- ಉಳಿಸಿಕೊಳ್ಳುವ ಪ್ರಯತ್ನವನ್ನು ಸಾಧ್ಯವಾದಷ್ಟು ಮಾಡಿದೆ.

ಅನುವಾದವು ಹೇಳಿಕೇಳಿ ಕಷ್ಟದ ಕೆಲಸ. ಅದು ಮೂಲಕ್ಕೆ ಯಥಾರ್ಥತೆ, ಶಬ್ದಸಂವಾದಿತ್ವ, ಅರ್ಥಸಂವಾದಿತ್ವ ಮತ್ತು ಭಾವಸಂವಾದಿತ್ವಗಳನ್ನು ಪಡೆದಿದ್ದು ಗ್ರಂಥಕ್ಕೂ ಗ್ರಂಥಕರ್ತೃವಿನ ಶೈಲಿಗೂ ಹೃದಯಕ್ಕೂ ಕನ್ನಡಿಸೇವೆಯನ್ನು ಮಾಡಬೇಕು. ಜೊತೆಗೆ ಪ್ರಸನ್ನಬೋಧತೆಯನ್ನೂ ಆಕರ್ಷಕ ವಾಚನೀಯತೆಯನ್ನೂ ಸಾಧಿಸಿರಬೇಕು. ಗ್ರಂಥಕರ್ತೃವು ಅನುವಾದದ ಭಾಷೆಯಲ್ಲಿಯೇ ಗ್ರಂಥವನ್ನು ರಚಿಸಿದ್ದಾನೆಂಬ ಭಾವನೆಯನ್ನು ಓದುಗನಲ್ಲಿ ಮೂಡಿಸಬೇಕು. ಗ್ರಂಥದ ಯಾವುದೇ ಅಂಶದಲ್ಲಿ ಮೂಲದ ಯಾವುದೇ ಪದಕ್ಕೆ ಯಾವುದು ಅನುವಾದವೆಂಬುದು ತಿಳಿಯುವಂತೆ ನಿಷ್ಕೃಷ್ಟವಾಗಿರಬೇಕು. ಪ್ರಕೃತ ಅನುವಾದಕನು ಈ ಆದರ್ಶಗಳನ್ನು ಮನವರಿಕೆ ಮಾಡಿಕೊಂಡಿದ್ದಾನೆ. ಅನುವಾದವು ಎಷ್ಟು ಯಶಸ್ವಿಯಾಗಿದೆಯೆಂಬುದನ್ನು ಓದುಗರು ನಿರ್ಣಯಿಸಬೇಕು.

ಮೂಲಗ್ರಂಥದೊಡನೆ ಆದಷ್ಟು ಸಂವಾದಿತ್ವವನ್ನು ಸಾಧಿಸಲು ಅನುವಾದದಲ್ಲಿಈ ಕೆಲವು ತಂತ್ರಗಳನ್ನು ಅಳವಡಿಸಿಕೊಂಡಿದೆ. :

(i) ಅರ್ಥಸ್ಫುಟಸಿದ್ಧಿಗಾಗಿ ಮೂರು ಬಗೆಯ ಕಂಸಗಳನ್ನು ಬಳಸಲಾಗಿದೆ; ಚೌಕಕಂಸಗಳಲ್ಲಿ [ ] ಗ್ರಂಥಕಾರನು ಉದ್ದೇಶಿಸಿದ್ದು ಆದರೆ ಹೇಳುವುದು ಅನಾವಶ್ಯಕವೆಂದು ಭಾವಿಸಿದುದನ್ನು, ಎಂದರೆ ಅಧ್ಯಾಹರಣವನ್ನು ತುಂಬಿದೆ. ವೃತ್ತಕಂಸಗಳಲ್ಲಿ ( ) ಪ್ರಸನ್ನಬೋಧಕ್ಕೆಂದು ಸಂಪಾದಕನು ಸೇರಿಸಿದ ಮಾತುಗಳಿವೆ. ಅನುವಾದದಲ್ಲಿ ಕ್ಲಿಷ್ಟವಾದ, ಸಂದಿಗ್ಧವಾದ ಇತ್ಯಾದಿ ಶಬ್ದಗಳಿದ್ದಾಗ ಅವುಗಳನ್ನು ಈ ಕಂಸಗಳೊಳಗೆ ಸಮೀಕರಣಚಿಹ್ನೆಯನ್ನು ಮೊದಲಿಟ್ಟು (=) ಅರ್ಥೈಸಿದ ಅಥವಾ ಸ್ಪಷ್ಟಗೊಳಿಸಿದೆ. ಕೆಲವು ವೇಳೆ ಹೆಚ್ಚುಕಡಿಮೆ ಸಮಾನಶಕ್ತಿಯುಳ್ಳ ಪರ್ಯಾಯ ಶಬ್ದಗಳು ಇರುವಾಗ ಅವುಗಳನ್ನೂ ಈ ಕಂಸಗಳೊಳಗೆ ಸೇರಿಸಿದೆ. ಹೀಗೆ ಮಾಡುವಾಗ ಕಂಸಗಳ ಹಿಂದೆ ಮುಂದೆ ಇರುವ ಪದಗಳ ವಿಭಕ್ತಿ ಪ್ರತ್ಯಯಗಳೊಡನೆ ಸಮಂಜಸವಾಗಿಸಲು ಸಾಧ್ಯವಾದಷ್ಟು ಪ್ರಯತ್ನಿಸಿದೆ; ಹಿಂದಿನ ಅಥವಾ ಮುಂದಿನ ಪದದೊಡನೆ ಅರ್ಥದಲ್ಲಿ ಅವಿಚ್ಛಿನ್ನತೆಯನ್ನು ಉಂಟುಮಾಡಲು ತುಂಡುಗೆರೆ(-)ಯನ್ನು ಬಳಸಿದೆ. ಮೂಲಗ್ರಂಥದ ಒಂದು ಪದದ ಅನುವಾದದಲ್ಲಿ ಸಾಕಷ್ಟು ಬಲವು ಬಂದಿಲ್ಲವೆಂದು ಎನ್ನಿಸಿದಾಗ ಮೂಲಪದವನ್ನು ಕೋನಕಂಸಗಳಲ್ಲಿ < > ಕೊಡಲಾಗಿದೆ. ಚೌಕಕಂಸಗಳಲ್ಲಿಯೂ ವೃತ್ತಕಂಸಗಳಲ್ಲಿಯೂ ಇರುವುದನ್ನು ಬಿಟ್ಟು ಓದಿದರೆ ಮೂಲದ ನಗ್ನಾರ್ಥವೂ ಸೇರಿಸಿಕೊಂಡು ಓದಿದರೆ ಉದ್ದಿಷ್ಟವಾದ, ಇಂಗಿತಗೊಂಡ ಅಥವಾ ಪೂರ್ಣವಾದ ಅರ್ಥವೂ ಸ್ಫುರಿಸಬೇಕೆಂಬುದು ಅನುವಾದಕನ ಉದ್ದೇಶವಾಗಿದೆ.

(ii) ಮೂಲದಲ್ಲಿರುವ ಕೀಲಕಶಬ್ದಗಳನ್ನು ಅಥವಾ ಪಾರಿಭಾಷಿಕ ಶಬ್ದಗಳನ್ನು ಪ್ರಥಮ ಗೋಚರದಲ್ಲಿ ಮಾತ್ರ, ಅವಶ್ಯವೆಂದು ತೋರಿದೆಡೆಯಲ್ಲಿ ಮಾತ್ರ, ವಿವರಿಸಿ ಉಳಿದೆಲ್ಲ ಎಡೆಗಳಲ್ಲಿಯೂ ಅದೇ ಶಬ್ದವನ್ನು ಅನುವಾದದಲ್ಲಿ ಉಳಿಸಿಕೊಂಡಿದೆ.

(iii) ಮೂಲದಲ್ಲಿರುವ ಕರ್ಮಣಿಪ್ರಯೋಗಗಳನ್ನು ಕನ್ನಡಭಾಷಾಮರ್ಯಾದೆಗೆ ಹೊಂದುವಂತೆ ಕರ್ತರಿಗೆ ಪರಿವರ್ತಿಸಲಾಗಿದೆ.

(iv) ಕೀರ್ತಿತಃ, ಪ್ರಕೀರ್ತಿತಃ, ಕತಿಥಃ, ನಿರೂಪಿತಃ, ಲಕ್ಷಿತಃ ಮುಂತಾದ ಶಬ್ದಗಳನ್ನು ಪರ್ಯಾಯಶಬ್ದಗಳೆಂದಿಟ್ಟುಕೊಂಡು ಕನ್ನಡದ ಸಮಾನ ಅಥವಾ ಪರ್ಯಾಯಶಬ್ದಗಳಲ್ಲಿ ಯಾವುದಾದರೊಂದನ್ನು ಅನುವಾದದಲ್ಲಿ ಉಪಯೋಗಿಸಿದೆ; ಇವು ವಿಶೇಷ ಇಂಗಿತಗಳನ್ನು ಹೊಂದಿವೆಯೆಂದು ಭಾವಿಸಿದಾಗ ಮಾತ್ರ ಅನುವಾದಕ್ಕೆ ವಿಶೇಷ ಗಮನವನ್ನು ನೀಡಿದೆ.

(v) ಲಿಙ್, ಲೋಟ್ ಮುಂತಾದ ಧಾತುರೂಪಗಳನ್ನು ಸಾಮಾನ್ಯವಾಗಿ ವಿಧ್ಯರ್ಥದಲ್ಲೇ ಅನುವಾದಿಸಲಾಗಿದೆ.

(vi) ಮುಖ್ಯವಾದ ಪಠಾಂತರಗಳಿದ್ದರೆ ಅವನ್ನೂ ಪಾಠವಿಮರ್ಶೆಯಲ್ಲಿ ಅನುವಾದಿಸಲಾಗಿದೆ. ಇದರಿಂದ ಆಯಾ ಗ್ರಂಥಭಾಗದ ಅರ್ಥಾಯಾಮಗಳ ಅರಿವಾಗಲು ನೆರವು ದೊರೆಯುತ್ತದೆ.

(ಇ) ಪಾಠವಿಮರ್ಶೆ

ಬೃಹದ್ದೇಶಿಯ ಪಾಠಸಂಯೋಜನೆಗೆ ದೊರೆಯುವ ಪಾಠೋಪಕರಣ ಸಾಮಗ್ರಿಯನ್ನು ಆಯಾ ಅಧ್ಯಾಯದಲ್ಲಿ ಅಡಕಗೊಳಿಸಿ, ವ್ಯವಸ್ಥೆಮಾಡಿ ವಿಮರ್ಶೆಗೆ ಒಳಪಡಿಸಿದೆ. ಮೂಲಗ್ರಂಥದಲ್ಲಿ ಸ್ವೀಕೃತವಾಗಿರುವ ಮತ್ತು ವಿಮರ್ಶಿಸಬೇಕಾದ ಪಾಠವನ್ನು ದಪ್ಪಅಚ್ಚಿನಲ್ಲಿ (ಬೋಲ್ಡ್‌ಫೇಸ್) ಆಯಾ ಗ್ರಂಥಭಾಗದ ಸಂಖ್ಯೆ ಮತ್ತು ಆವಯವದೊಡನೆ ಕೊಟ್ಟಿದೆ. ಇದರ ಪಾಠಾಂತರವನ್ನು ಪ್ರಸಂ. ಮತ್ತು ದ್ವಿಸಂ.ಗಳಿಂದ ನಂತರ ಸಂಗ್ರಹಿಸಿಕೊಟ್ಟಿದೆ. ಆಮೇಲೆ ಆಯಾ ಸಂಪಾದಕರು ಅದರ ಬಗೆಗೆ ನೀಡಿರಬಹುದಾದ ಮಾಹಿತಿ, ಅಬಿಪ್ರಾಯ, ಸ್ವೀಕೃತಿಗಳ ವಿಷಯದ ಜಿಜ್ಞಾಸೆ ಮುಂತಾದವನ್ನು ದಾಖಲಿಸಿದೆ. ಪ್ರಸಂ.ದ.ಅಡಿಟಿಪ್ಪಣಿಗಳು, ಹಸ್ತಪ್ರತಿ ಆಕರಗಳಲ್ಲಿ ದೊರೆಯುವ ಪಾಠಾಂತರಗಳು, ಸಂಪಾದಕೀಯ ಟಿಪ್ಪಣಿಗಳು ಮುಂತಾದವನ್ನು ಪ್ರತ್ಯೇಕ ಸಂಜ್ಞೆಗಳೊಡನೆ ಕೊಟ್ಟಿದೆ. ಪಾಠಾಂತರಗಳನ್ನು ಪ್ರಸಂ.ದ ಪುಟಗಳ ಅಡಿಟಿಪ್ಪಣಿಯಲ್ಲಿ ಕೊಟ್ಟಿದ್ದಾರೆ; ದ್ವಿಸಂದಲ್ಲಿ ಆಯಾ ಮೂಲಪಾಠಗಳ ಕೆಳಗೆ ಭಿನ್ನ ಅಕ್ಷರವಿನ್ಯಾಸದಲ್ಲಿ ಕೊಟ್ಟು ಇವುಗಳ ಜಿಜ್ಞಾಸೆಯನ್ನು ಗ್ರಂಥಾಂತ್ಯದಲ್ಲಿ ಮಾಡಿದ್ದಾರೆ. ಈ ಮೂರನೆಯ ಸಂಸ್ಕರಣದಲ್ಲಿ ವಿಮರ್ಶೆಯಿರುವ ಪಾಠಗಳ ಗ್ರಂಥಭಾಗ ಸಂಖ್ಯೆಯನ್ನು ಮೂಲಗ್ರಂಥದ ಆಯಾ ಪುಟದ ಅಡಿಯಲ್ಲಿಯೇ ಸೂಚಿಸಿದೆ. ಮೂಲಪಾಠದ ಅಭ್ಯಾಸದಲ್ಲಿ ಸಾಮಾನ್ಯ ಓದುಗರ ಗಮನವು ಪಾಠಾಂತರಗಳಿಂದ ವಿಕರ್ಷವಾಗದೆ ಇರಲೆಂದೂ ಆಸಕ್ತ ವಿಮರ್ಶಾತ್ಮಕ ಓದುಗರಿಗೆ ಅವುಗಳ ಉಪಲಬ್ಧಿಯು ತಿಳಿಯಲೆಂದೂ ಹೀಗೆ ಮಾಡಿದೆ. ಇದು ಪ್ರಕೃತಸಂಸ್ಕರಣದ ವೈಶಿಷ್ಟ್ಯಗಳಲ್ಲಿ ಒಂದು.

ಪಕೃತಪಾಠವಿಮರ್ಶೆಯೂ ಪ್ರಸಂ. ಮತ್ತು ದ್ವಿಸಂ.ಗಳೆರಡರಲ್ಲಿಯೂ ಇರುವ ಪಾಠಾಂತರಗಳನ್ನು ಒಳಗೊಂಡಿದೆ. ಇಂತಹ ಪಾಠಾಂತರಗಳು ಹುಟ್ಟುವುದಕ್ಕೆ ಲೇಖನ ಪ್ರಮಾದ, ಅಂತಃಸಂಭಾವ್ಯತೆ, ಬಾಹ್ಯಸಂಭಾವ್ಯತೆ ಇತ್ಯಾದಿ ಕಾರಣಗಳನ್ನೂ ತನ್ಮೂಲಕ ಆಯಾ ಮಾತೃಕೆಗಳ ಗ್ರಂಥ ಲೇಖನಪರಂಪರೆಯ ವೈಶಿಷ್ಟ್ಯವನ್ನೂ ಗುರುತಿಸುವ ಪ್ರಯತ್ನವನ್ನು ಕೈಗೊಳ್ಳಲಾಗಿದೆ. ಹಿಂದಿನ ಸಂಪಾದಕರುಗಳು ಸ್ವೀಕರಿಸಿದ್ದ ಪಾಠಗಳನ್ನು ಒಪ್ಪದೆ ಬೇರೆ ಪಾಠಗಳನ್ನು ಅನೇಕ ಎಡೆಗಳಲ್ಲಿ ಸ್ವೀಕರಿಸಿರುವಾಗ ಹಾಗೆ ಮಾಡುವುದಕ್ಕೆ ಕಾರಣಗಳನ್ನು ಚರ್ಚಿಸಿದೆ. ಲೋಪಗಳಿರುವೆಡೆ ಅದನ್ನು ಊಹಾತ್ಮಕವಾಗಿ ಪೂರೈಸುವ ಪ್ರಯತ್ನವನ್ನು ಮಾಡಲಾಗಿದೆ. ಮೂಲಪಾಠದಲ್ಲಿರಬಹುದಾದ ಅಪಾರದರ್ಶಕತೆ, ಅಸ್ಪಷ್ಟತೆ, ಸಂದಿಗ್ಧತೆ, ಸಂಗ್ರಹಕಾರ್ಯ, ಸಂಕೋಚನ ಮುಂತಾದವುಗಳನ್ನು ಪ್ರಕಟಗೊಳಿಸಿ ಅವುಗಳಿಗೆ ಕಾರಣಗಳನ್ನು ಹುಡುಕಲೆಳಸಿ, ಸಾಧ್ಯವಾದೆಡೆ ಪರಿಹಾರಗಳನ್ನು ಸೂಚಿಸಿದೆ. ಗ್ರಂಥದಲ್ಲಿರುವ ಊನಛಂದಸ್ಸು ಮತ್ತು ಅಧಿಕಛಂದಸ್ಸುಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸುವ ಪಾಠಾಂತರಗಳನ್ನು (ಮೂಲಪಾಠವನ್ನು ದೊರೆತಿರುವ ಹಾಗೆಯೇ ಉಳಿಸಿಕೊಂಡು) ಪಾಠವಿಮರ್ಶೆಯಲ್ಲಿ ಸಲಹೆಮಾಡಿದೆ. ಬೃಹದ್ದೇಶಿಯ ಜಾತ್ಯಧ್ಯಾಯದಲ್ಲಿ ಪ್ರಕ್ಷಿಪ್ತ ಭಾಗವು ಒಳಗೊಂಡ ಜಾತಿಲಕ್ಷ್ಯೋದಾರಣೆಗಳನ್ನು ಪಾಠವಿಮರ್ಶೆಗೆ ಒಳಪಡಿಸಿರುವುದು ಪ್ರಕೃತಸಂಸ್ಕರಣದೊಂದು ವೈಶಿಷ್ಟ್ಯ. ಒಂದು ಗ್ರಂಥಾಂಶಕ್ಕೆ ಮೂಲವಾಗಿ, ಸದೃಶವಾಗಿ, ಪ್ರಭಾವಜನಕವಾಗಿ ಅಥವಾ ಪ್ರಭಾವಜನ್ಯವಾಗಿ ಇತರ ಆಕರಗಳಲ್ಲಿರುವ ಅಂಶಗಳನ್ನು ‘ಹೋಲಿಸಿ’ ಎಂಬ ಪೀಠಿಕೆಯೊಡನೆ ಕೊಟ್ಟಿದೆ; ಇವು ಆಯಾ ಗ್ರಂಥಭಾಗಕ್ಕೆ ಪ್ರೇರಕವಾಗಿ ಅಥವಾ ಪೂರಕವಾಗಿ ಇರುವುದರಿಂದ ಪಾಠವಿಮರ್ಶೆಗೆ ಪ್ರಸಕ್ತವಾಗಿವೆ. ಇವುಗಳಲ್ಲಿನ ಬಹುಭಾಗವನ್ನು ವಿಶೇಷವಾಗಿ ಪ್ರಬಂಧಾಧ್ಯಾಯದಲ್ಲಿ ದ್ವಿಸಂ.ರು ಒದಗಿಸಿದ್ದಾರೆ. ಪ್ರಕೃತಸಂಸ್ಕರಣದಲ್ಲಿ ಇವುಗಳನ್ನು ಅವಶ್ಯವೆಂದು ಕಂಡಲ್ಲಿ ಸಂಕ್ಷೇಪವಾಗಿ ವಿವೇಚಿಸಲಾಗಿದೆ. ಗ್ರಂಥ, ಅನುವಾದ ಮತ್ತು ಪಾಠವಿಮರ್ಶೆಗಳಲ್ಲಿ ಬಳಸಿರುವ ಆಕರಗಳ ಸಂಕ್ಷೇಪಸೂಚಿಯನ್ನು ಈ ಗ್ರಂಥದ ಮೊದಲಿನಲ್ಲಿ ಕೊಡಲಾಗಿದೆ.

(ಈ) ವಿಮರ್ಶೆಯ ಸ್ತರಗಳು

ಗ್ರಂಥಸಂಪಾದನ ವಿಜ್ಞಾನದಲ್ಲಿ ಗ್ರಂಥವಿಮರ್ಶೆಯು ಕೆಳವಿಮರ್ಶೆ (lower textual criticism) ಮತ್ತು ಮೇಲುವಿಮರ್ಶೆ (higher textual criticism) ಎಂದು ಎರಡು ಬಗೆಯಾಗಿದೆ. ಮೊದಲನೆಯದರಲ್ಲಿ ಪಾಠೋಪಕರಣಗಳು, ಪಾಠಶೋಧನೆ, ಪಾಠನಿರ್ಣಯ, ಪಾಠವಿಮರ್ಶೆ ಮತ್ತು ಪಾಠಸಂಯೋಜನೆ, ಸಂಪಾದನವಿಧಾನ, ಸಂಪಾದನ ಸಮಸ್ಯೆಗಳು ಮತ್ತು ಪರಿಹಾರಗಳು ಇತ್ಯಾದಿಗಳ ವಿವೇಚನೆಯಿರುತ್ತದೆ. ಇದು ಗ್ರಂಥಸಂಪಾದನದ ಬಹಿರಂಗ, ಎರಡನೆಯದರಲ್ಲಿ ಗ್ರಂಥದ ಅಂತರಂಗದರ್ಶನವಿರುತ್ತದೆ. ಗ್ರಂಥದ ನಿರೂಪಣವಿಧಾನ, ಅದರ ಉಕ್ತ ಮತ್ತು ಅನುಕ್ತ ಆಕರಗಳು ಮತ್ತು ಪ್ರಭಾವಗಳು, ಆಯಾ ಶಾಸ್ತ್ರಪದ್ಧತಿಯಿಂದ ಅದು ಏನನ್ನು ಪಡೆದುಕೊಂಡಿದೆ ಮತ್ತು ಏನನ್ನು ನೀಡಿದೆ, ಆಯಾ ಶಾಸ್ತ್ರದ ಮುಖ್ಯ ಪ್ರಮೇಯ, ಪರಿಕಲ್ಪನೆಗಳು ಮುಂತಾದವುಗಳ ವಿಕಾಸದಲ್ಲಿ ಅದು ವಹಿಸಿದ ಪಾತ್ರ ಮೊದಲಾದವುಗಳನ್ನು ಇದರಲ್ಲಿ ವಿವೇಚಿಸಲಾಗುತ್ತದೆ. ಆಧುನಿಕ ಭಾರತೀಯ ಗ್ರಂಥಸಂಪಾದನಪಾಂಡಿತ್ಯವು ಇನ್ನೂ ಶೈಶಾವಸ್ಥೆಯಲ್ಲೇ ಇದೆ. ಈ ಮಾತು ಸಂಗೀತನೃತ್ಯಗಳಂತಹ ಪ್ರದರ್ಶನಕಲೆಗಳ ವಿಷಯದಲ್ಲಿ ವಿಶೇಷವಾಗಿ ಸಲ್ಲುತ್ತದೆ; ಮೇಲುಗ್ರಂಥವಿಮರ್ಶೆಯ ಬಹು ವಿರಳವಾಗಿದೆ. ಈ ಕೊರತೆಯನ್ನು ಬೃಹದ್ದೇಶಿಯ ವಿಮರ್ಶಾತ್ಮಕ ಪೀಠಿಕೆಯಲ್ಲಿಯೂ ಪಾಠ ವಿಮರ್ಶೆಯಲ್ಲಿಯೂ ನೀಗಲು ತಕ್ಕಮಟ್ಟಿಗೆ ಪ್ರಯತ್ನಿಸಲಾಗಿದೆ.

(ಉ) ಅನುಬಂಧಗಳು

ಬೃಹದ್ದೇಶಿಯ ಸಂಯೋಜಿತಗ್ರಂಥಕ್ಕೆ ಉದ್ಧೃತಪ್ರಮಾಣಿಕರು (ಅನಿರ್ದಿಷ್ಟ,ನಾಮನಿರ್ದಿಷ್ಟ ಮತ್ತು ಹೆಸರುಗಳು), ವಿಶೇಷಪದಾನುಕ್ರಮಣೀ, ರಾಗಾನುಕ್ರಮಣೀ, ತಾಲಾನುಕ್ರಮಣೀ, ಪ್ರಬಂಧಾನುಕ್ರಮಣೀ, ಶ್ಲೋಕಾರ್ಧಗಳ ಮತ್ತು ಗದ್ಯಖಂಡಗಳ ಅನುಕ್ರಮಣೀ ಎಂಬ ಆರು ಅನುಕ್ರಮಣಿಗಳನ್ನುಳ್ಳ ಅನುಬಂಧವನ್ನು ಆಕಾರಾದಿಯಾಗಿ ರಚಿಸಿದೆ. ಇವೆಲ್ಲಕ್ಕೂ ಪುಟಸಂಖ್ಯೆಯ ಬದಲು ಗ್ರಂಥಭಾಗಸೂಚನೆಯನ್ನಿತ್ತಿದೆ. ಇದರಿಂದ ಅನುಕ್ರಮಣಿಯಲ್ಲಿರುವ ಯಾವುದೇ ವಿಷಯವನ್ನು ಇನ್ನೂ ಶೀಘ್ರವಾಗಿ ತಿಳಿದು ಅದರ ಒಂದು, ಎರಡು ಅಥವಾ ಮೂರು ಶ್ಲೋಕಾರ್ಧಗಳಲ್ಲಿ ಉದ್ದಿಷ್ಟಾಂಶವನ್ನು ಗುರುತಿಸಬಹುದು. ಗದ್ಯಖಂಡದ ಗ್ರಂಥಭಾಗದೊಡನೆ ಅ, ಆ, ಇ, ಈ ಇತ್ಯಾದಿ ಅವಯವಗಳ ಸೂಚನೆಯು ಇರುವುದರಿಂದ ಬೇಕಾದ ಅಂಶವು ಇನ್ನೂ ಬೇಗ, ನಿಖರವಾಗಿ ತಿಳಿಯಲು ಸಾಧ್ಯವಾಗುತ್ತದೆ.

(ಊ) ಪುಟವಿನ್ಯಾಸ

ಬೃಹದ್ದೇಶಿಯ ಪುಟದ ಮೇಲಿನ ಮತ್ತು ಕೆಳಗಿನ ಅಂಚುಗಳನ್ನು ವಾಚಕಸ್ನೇಹವಿರುವಂತೆ ವಿನ್ಯಾಸಗೊಳಿಸಿದ್ದು ಅನೇಕ ರೀತಿಯ ಅಂಶಗಳನ್ನು ಅವು ತಿಳಿಸುತ್ತವೆ. ಎಡಪುಟದ ಮೇಲಿನ ಎಡತುದಿಯಲ್ಲೂ ಬಲಪುಟದ ಬಲತುದಿಯಲ್ಲೂ ಆಯಾ ಪುಟದ ಸಂಖ್ಯೆಯಿದೆ. ಎಡ ಪುಟದ ಮೇಲಿನ ಮಧ್ಯದಲ್ಲಿ ಗ್ರಂಥನಾಮವೂ ಅಧ್ಯಾಯಸಂಖ್ಯೆ ಮತ್ತು ಅಧ್ಯಾಯನಾಮಗಳೂ ಇವೆ; (ಎರಡನೆಯ ಅಧ್ಯಾಯದ ಹೆಸರು ‘ಜಾತ್ಯಾಧ್ಯಾಯ’ ಎಂದು ತಪ್ಪಾಗಿ ಬಿದ್ದಿದೆ. ಇದನ್ನು ‘ಜಾತ್ಯಧ್ಯಾಯ’ ಎಂದು ಓದಿಕೊಳ್ಳಬೇಕಾಗಿ ಕೋರಲಾಗಿದೆ.) ಬಲಪುಟದ ಮೇಲಿನ ಮಧ್ಯದಲ್ಲಿ ಆಯಾ ಅಧ್ಯಾಯದ ಪ್ರಕರಣ ಸಂಖ್ಯೆಯೂ ಹೆಸರು, ಆಯಾ ಪುಟದಲ್ಲಿರುವ ವಿಷಯಗಳ ಪರಿವಿಡಿಯೂ (ವಿಶೇಷವಾಗಿ ಕಡೆಯ ನಾಲ್ಕು ಅಧ್ಯಾಯಗಳಲ್ಲಿ) ಇವೆ. ಎಡಪುಟದ ಮೇಲಿನ ಬಲತುದಿ ಮತ್ತು ಬಲಪುಟದ ಮೇಲಿನ ಎಡತುದಿಗಳಲ್ಲಿ, ಎಂದರೆ ದ್ವಿಪುಟದ(=ಪೋಲಿಯೋದ) ಸಂಧಿಯಲ್ಲಿ ಆಯಾ ಪುಟದಲ್ಲಿರುವ ಗ್ರಂಥಭಾಗಗಳ ಮೊದಲಿನ ಮತ್ತು ಕೊನೆಯ ಸಂಖ್ಯೆಗಳನ್ನು ಕೊಟ್ಟಿದೆ. ಇದರಿಂದ ವಿಮರ್ಶಾತ್ಮಕ ಪೀಠಿಕೆ, ಪಾಠವಿಮರ್ಶೆ, ಅನುಬಂಧ ಮುಂತಾದವುಗಳಲ್ಲಿ ಕೊಟ್ಟಿರುವ ಗ್ರಂಥಭಾಗಗಳನ್ನು ಸುಲಭವಾಗಿ ಕಂಡು ಹಿಡಿದುಕೊ‌ಳ್ಳಲು ಸಾಧ್ಯವಾಗುತ್ತದೆ.

ಪ್ರಕೃತ ಸಂಸ್ಕರಣದ ಎಡಪುಟದೇಹದ ಎಡ ಅಂಚಿನಲ್ಲಿ ಆಯಾ ಗ್ರಂಥಭಾಗದ ಕ್ರಮಸಂಖ್ಯೆಯನ್ನೂ ಮಧ್ಯದಲ್ಲಿ ಸಂಸ್ಕೃತಮೂಲದ ಆಯಾ ಗ್ರಂಥಾಂಶವನ್ನೂ ಅದರ ನಂತರದಲ್ಲಿ ಎಂದರೆ ಬಲ ಅಂಚಿನಲ್ಲಿ ಆಯಾ ಶ್ಲೋಕಸಂಖ್ಯೆಯ ಕ್ರಮಾಂಕವನ್ನು ಕನ್ನಡಲಿಪಿಯ ಅಂಕಿಗಳಲ್ಲಿಯೂ ಗದ್ಯಖಂಡದ ಕ್ರಮಾಂಕವನ್ನು ಅರೇಬಿಕ್ ಲಿಪಿಯ ಅಂಕಿಗಳಲ್ಲಿಯೂ ಕೊಟ್ಟಿದೆ. ಬಲಪುಟದಲ್ಲಿ ಅನುವಾದವನ್ನು ಆಯಾ ಗ್ರಂಥಭಾಗದ ಮೂಲಕ್ಕೆ ಸರಿಯಾಗಿ ಪರಸ್ಪರವಾಗಿರುವ ಸ್ಥಾನದಲ್ಲಿ ಕೊಟ್ಟು ಎಣಿಕೆಗೆ ಅದೇ ರೀತಿಯ ಕ್ರಮಾಂಕಗಳನ್ನೂ ಅಕ್ಷರಸಂಜ್ಞೆಗಳನ್ನೂ ಬಳಸಿದೆ. ಇದರಿಂದ ಸಂಸ್ಕೃತ ಮೂಲವನ್ನೇ ಅಥವಾ ಅನುವಾದವನ್ನೇ ಪ್ರತ್ಯೇಕವಾಗಿ ತಡೆಯಿಲ್ಲದೆ ಓದಿಕೊಂಡು ಹೋಗಲು ಸಹಾಯವಾಗುತ್ತದೆ. ಮೂಲ ಮತ್ತು ಅನುವಾದಗಳನ್ನು ತಾಳೆ ನೋಡಲು ಮತ್ತು ಅವುಗಳ ಪರಸ್ಪರಾಂಶಗಳನ್ನು ಗುರುತಿಸಿಕೊಳ್ಳಲು ಇದು ಅನುಕೂಲವಾಗಿದೆ. ಇದೂ ಪ್ರಕೃತಸಂಸ್ಕರಣದ ವೈಶಿಷ್ಟ್ಯಗಳಲ್ಲಿ ಒಂದು. ಮೂಲಗ್ರಂಥವಿರುವ ಎಡಪುಟದ ಕೆಳಗಿನ ಅಂಚಿನಲ್ಲಿ ಆಯಾ ಪುಟದಲ್ಲಿ ಯಾವ ಯಾವ ಗ್ರಂಥಾಂಶಗಳಿಗೆ ಪಾಠವಿಮರ್ಶಯಿದೆಯೋ ಅಂತಹ ಗ್ರಂಥಭಾಗ ಸಂಖ್ಯೆಗಳನ್ನು (ಶ್ಲೋಕಪಾದದ ಅಥವಾ ವಾಕ್ಯಖಂಡದ ಸೂಚನೆಯೊಡನೆ) ಕೊಟ್ಟಿದೆ. ಆಸಕ್ತವಿಶೇಷಜ್ಞರಿಗೆ ಈ ವಿಧಾನದಿಂದ ಪ್ರಯೋಜನವಾಗಬಹುದೆಂದು ಆಶಿಸಲಾಗಿದೆ. ಪ್ರಕೃತ ಸಂಸ್ಕರಣದ ವೈಶಿಷ್ಟ್ಯಗಳಲ್ಲಿ ಇದೂ ಒಂದು.