ಈ ಪುಸ್ತಕವು ಜನ್ಮತಾಳಿದ ಸಂದರ್ಭವು ಹೀಗಿದೆ : ಜಲೈ ೧೧-೧೭, ೧೯೯೫ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಮತಂಗಮತ್ತು ಬೃಹದ್ದೇಶೀಗಳನ್ನು ಕುರಿತ ಒಂದು ವಿಚಾರಗೋಷ್ಠಿಯನ್ನು ಕನ್ನಡ ವಿಶ್ವವಿದ್ಯಾಲಯದ ಸಹಪ್ರಾಯೋಜನದೊಡನೆ ಏರ್ಪಡಿಸಿತ್ತು. ಆಗ ಕುಲಪತಿಗಳಾಗಿದ್ದ ಡಾ. ಚಂದ್ರಶೇಖರ ಕಂಬಾರರು ಇದಕ್ಕೆ ಎಲ್ಲ ರೀತಿಯ ನೆರವನ್ನು ನೀಡಿ ವಿಚಾರಗೋಷ್ಠಿಯ ಯಶಸ್ಸಿಗೆ ಸಂಪೂರ್ಣವಾಗಿ ಶ್ರಮಿಸಿದರು. ಮತಂಗಮುನಿಯು ಕನ್ನಡಿಗ, ಕ್ರಿ.ಶ. ೫-೭ನೆಯ ಶತಮಾನದಲ್ಲಿ ಬೃಹದ್ದೇಶೀಯನ್ನು ಬಹುಶಃ ಹಂಪಿಯಲ್ಲಿ ರಚಿಸಿದವನು, ಕನ್ನಡದಲ್ಲಿ ಗೇಯ ಪ್ರಬಂಧ ಸಾಹಿತ್ಯವು ಇದಕ್ಕಿಂತ ಕಡೆಯ ಪಕ್ಷ ೨೦೦ ವರ್ಷಗಳಷ್ಟಾದರೂ ಹಿಂದಿನದು ಎಂದು ಸುಮಾರು ಮೂವತ್ತೈದು ವರ್ಷಗಳಿಂದಲೂ ನಾನು ಪ್ರತಿಪಾದಿಸುತ್ತ ಬಂದಿದ್ದೇನೆ. ಇದಕ್ಕೆ ವಿದ್ವದಭಿಪ್ರಾಯದ ಮಾನ್ಯತೆಯು ದೊರೆತಿದೆ. ವಿಚಾರಗೋಷ್ಠಿಯು ಹಂಪಿಯಲ್ಲಿ ನಡೆದುದಕ್ಕೆ ಇದರ ಪ್ರಭಾವವೂ ಇದ್ದಿರಬಹುದು. ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದ ನನ್ನನ್ನು ಡಾ. ಚಂದ್ರಶೇಖರ ಕಂಬಾರರು ಬೃಹದ್ಧೇಶೀಯನ್ನು ಕನ್ನಡಕ್ಕೆ ತಂದುಕೊಡಬೇಕೆಂದು ಕೋರಿದರು. ದೆಹಲಿಯ ಇಂದಿರಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಮತ್ತಿತರ ಸದೃಶ ಸಂಸ್ಥೆಗಳಿಗೆ ಒಟ್ಟು ಹತ್ತುಸಾವಿರ ಪುಟಗಳಷ್ಟು ಬರಹವನ್ನು ಸುಮಾರು ಮೂರು ನಾಲ್ಕು ವರ್ಷಗಳಲ್ಲಿಯೇ ಪೂರೈಸಿಕೊಡುವುದಾಗಿ ಕೊಟ್ಟಿದ್ದ ಮಾತನ್ನು ವಿವರಿಸಿ ನನ್ನ ಅಪಾರ ಅಸಹಾಯಕತೆಯನ್ನು ತೋಡಿಕೊಂಡಾಗ ನನಗ ಅಗತ್ಯವಾಗುವ ಎಲ್ಲ ನೆರವನ್ನೂ ವಿಶ್ವವಿದ್ಯಾಲಯವು ನೀಡುವುದಾಗಿ ಭರವಸೆ ನೀಡಿ ಬಹು ಪ್ರೀತಿಯಿಂದ ಒತ್ತಾಯಿಸಿದರು. ವಿಶ್ವವಿದ್ಯಾಲಯ, ಕನ್ನಡ, ಕರ್ನಾಟಕ ಸಂಸ್ಕೃತಿಗಳನ್ನು ಕುರಿತ ಅವರ ಗಾಢ ಪ್ರೇಮ, ಸಮ್ಯಗ್‌ದೃಷ್ಟಿ ಮತ್ತು ನಿರಾಡಂಬರ ವ್ಯಕ್ತಿತ್ವಗಳನ್ನು ಮೆಚ್ಚಿ ನನ್ನೆಲ್ಲ ಕೆಲಸಗಳನ್ನು ಬದಿಗೊತ್ತಿ ಈ ಕೆಲಸವನ್ನು ಕೈಗೊಳ್ಳಬೇಕಾಯಿತು.

ಬೃಹದ್ದೇಶೀಯ ಕೆಲಸವು ಪ್ರಾರಂಭವಾದ ಮೇಲೆಯೇ ಅದು ಎಷ್ಟು ತೊಡಕಿನದೆಂಬುದರ ಪೂರ್ಣ ಅರಿವು ನನಗಾದುದು. ಅದು ಭಾರತೀಯ ಸಂಗೀತಶಾಸ್ತ್ರದಲ್ಲಿ ಉಪಲಬ್ಧವಾಗಿರುವ ಪ್ರಪ್ರಥಮ ಗ್ರಂಥ; ಅತ್ಯಂತ ಸುಲಲಿತವಾದ, ಪಾಂಡಿತ್ಯಪೂರ್ಣವಾದ, ನಮ್ಮ ಸಂಸ್ಕೃತಿ-ಸಂಗೀತಗಳಿಗೆ ಹೊಸ ಆಯಾಮಗಳನ್ನು ನಿರ್ಮಿಸಿದ, ಬಹುಶ್ರುತವಾದ ಗ್ರಂಥವೂ ಹೌದು. ಅನೇಕ ಶಾಸ್ತ್ರಗಳಲ್ಲಿ ಪ್ರಗಲ್ಭವಿದ್ವಾಂಸನಾದ ಕನ್ನಡಿಗನೊಬ್ಬನು ಸಾವಿರದೈನೂರು ವರ್ಷಗಳಷ್ಟು ಹಿಂದೆಯೇ ಇದನ್ನು ಬರೆದು ನಮ್ಮ ಸಂಗೀತದ ಲಕ್ಷ್ಯ-ಲಕ್ಷಣಗಳ ಬುನಾದಿಯನ್ನು ಸಿದ್ಧಪಡಿಸಿದನೆಂಬುದಕ್ಕಾಗಿ ಕನ್ನಡಿಗರು ಹೆಮ್ಮೆಪಡಬಹುದು. ಆದರೆ ಗ್ರಂಥದ ಮಾತೃಕೆಗಳು ತುಂಬ ಅಸಮರ್ಪಕವಾಗಿದ್ದು ಗ್ರಂಥವನ್ನು ಅದರ ಉಲ್ಲೇಖ, ಉದ್ಧೃತಿಗಳನ್ನು ಅವಲಂಬಿಸಿ ಸಂಪಾದಿಸುವ ಅವಶ್ಯಕತೆಯನ್ನು ಸುಮಾರು ನಲವತ್ತು ವರ್ಷಗಳ ಹಿಂದೆಯೇ ಮನಗಂಡಿದ್ದು, ಅಂತಹದೊಂದು ಸಂಸ್ಕರಣದ ಹಸ್ತಪ್ರತಿಯೊಂದನ್ನು ೧೯೬೮ರ ವೇಳೆಗೆ ಸಿದ್ಧಪಡಿಸಿದ್ದೆ. ಆದರೆ ನನ್ನ ದುರ್ದೈವದಿಂದ ಅದು ನಾಶವಾಗಿಹೋಯಿತು. ಸುದೈವದಿಂದ ಮೇಲೆ ಹೇಳಿದ ದೆಹಲಿಯ ಸಂಸ್ಕರಣವು ಉಪಲಬ್ಧವಾಗಿರುವ ಹೆಚ್ಚುಕಡಿಮೆ ಎಲ್ಲ ಆಕರಗಳನ್ನು ಪರಿಶೀಲಿಸಿ ಸಮರ್ಪಕವಾಗಿ ಆಂಗ್ಲಭಾಷೆಯಲ್ಲಿ ಪ್ರಕಟವಾಗಿದೆ. ಇದನ್ನೂ ಇದರ ಹಿಂದಿನ ಒಂದು ಸಂಸ್ಕರಣವನ್ನೂ ಆಧರಿಸಿಕೊಂಡು, ಪಾಠಸಂಯೋಜನೆ, ಪಾಠವಿಮರ್ಶೆ, ಅನುವಾದ, ಅನುಬಂಧಗಳಲ್ಲಿ ಗ್ರಂಥಸಂಪಾದನ ವಿಜ್ಞಾನದ ತತ್ತ್ವ ಮತ್ತು ಪ್ರಯೋಗಗಳಿಗೆ ಅನುಸಾರವಾಗಿ, ಪೂರ್ವಸಂಸ್ಕರಣಗಳನ್ನು ಅಲ್ಲಲ್ಲಿ ಉತ್ತಮಪಡಿಸುತ್ತ ಒಂದು ಹೊಸ ಸಂಸ್ಕರಣವನ್ನು ಸಿದ್ಧಪಡಿಸುವ ಸಾಧ್ಯತೆಯೂ ಅವಶ್ಯಕತೆಯೂ ನನಗೆ ತೋರಿತು. ಇದರ ಫಲವಾಗಿ ಪುಸ್ತಕದ ಗಾತ್ರ, ಸ್ವರೂಪ, ವ್ಯಾಪ್ತಿಗಳು ಮೊದಲು ಉದ್ದೇಶಿಸಿದ್ದಕ್ಕಿಂತ ಹೆಚ್ಚಾಗಿ ಬೆಳೆದವು. ವಿಶ್ವವಿದ್ಯಾಲಯವು ಆರ್ಥಿಕ ನೆರವು ನೀಡಿದ್ದ ಇಬ್ಬರೂ ಸಹಾಯಕ ವಿದ್ವಾಂಸರ ಅವಧಿಯು ಮುಗಿದುಹೋಗಿ, ನನ್ನ ಸ್ವಂತ ಜವಾಬ್ದಾರಿಯ ಮೇಲೆ ಅವರಿಂದ ನಾಲ್ಕು ತಿಂಗಳು ಹೆಚ್ಚಾಗಿ ಕೆಲಸ ಮಾಡಿಸಿಕೊಳ್ಳಬೇಕಾಯಿತು. ನನ್ನ ಕೆಲಸವು ಮೂಲ ಹಸ್ತಪ್ರತಿಗಳನ್ನು ತಾಳೆ ನೋಡುವುದರಿಂದ ಮೊದಲಾಗಿ, ಪೂರ್ವಸಂಪಾದಕರುಗಳಿಗೆ ದೊರೆಯದಿದ್ದ ಪಾಠಸಂಯೋಜನ ಸಾಮಗ್ರಿಗಳನ್ನು ಹುಡುಕಿ, ಹೊಸ ಅನುವಾದ ವಿಧಾನ, ಪಾಠಶೋಧನ ವಿಧಾನ, ಪಾಠಶೋಧನ ಸೂಚನೆ, ಗ್ರಂಥಾಂಶ ನಿರ್ದೇಶನಕ್ಕಾಗಿ ಹೊಸಬಗೆಯ ಗ್ರಂಥಭಾಗ ಯೋಜನೆ, ಇತ್ಯಾದಿಗಳವರೆಗೆ ವಿಸ್ತರಿಸಿತು. ಮೂಲ ಬೃಹದ್ದೇಶೀಯಲ್ಲಿ ಮೊದಲು ಇತ್ತೆಂದು ನಿರ್ಧರಿಸಬಹುದಾದ ಆದರೆ ಇಂದು ಗ್ರಂಥರೂಪದಲ್ಲಿ ದೊರೆಯದಿರುವ ಅಧ್ಯಾಯಗಳನ್ನೂ ಅವುಗಳು ಒಳಗೊಳ್ಳುವ ವಿಷಯಗಳನ್ನೂ ಅನೇಕ ಮುದ್ರಿತ ಹಾಗೂ ಹಸ್ತಪ್ರತಿ ಆಕರಗಳಿಂದ ಹೆಕ್ಕಿ ತೆಗೆದು ಒಂದೆಡೆ ವ್ಯವಸ್ಥಿತರೂಪದಲ್ಲಿ ಶೇಖರಿಸುವ ಒಂದು ಮುಖ್ಯ ಕೆಲಸವನ್ನು ಈ ಪುಸ್ತಕವು ಮೊದಲಬಾರಿಗೆ ಮಾಡಿದೆ. ಸಂಗೀತಶಾಸ್ತ್ರದ ಪಾಂಡಿತ್ಯ, ವಿಮರ್ಶೆ, ಸಂಶೋಧನೆಗಳಲ್ಲಿ ಅಂತರರಾಷ್ಟ್ರೀಯ ಸ್ತರವನ್ನು ಕನ್ನಡದಲ್ಲಿ ತಲುಪಿಸಲು ಸಾಧ್ಯವಾಗಿದೆಯೆಂಬ ತೃಪ್ತಿಯನ್ನು ತಂದಿದೆ. ಕನ್ನಡ ವಿಶ್ವವಿದ್ಯಾಲಯವು ಇಂತಹದೊಂದು ಸಂಗೀತ ಶಾಸ್ತ್ರೀಯ ಸಂಶೋಧನ ಗ್ರಂಥವನ್ನು ಪ್ರಕಟಿಸುತ್ತಿರುವುದು ನನಗೆ ಸಂತೋಷವನ್ನುಂಟುಮಾಡಿದೆ.

ವಿಶ್ವದೃಷ್ಟಿಯನ್ನು ವಿದ್ಯೆಯ ಮೂಲಕ ಸೃಷ್ಟಿಸುವುದು ವಿಶ್ವವಿದ್ಯಾಲಯಗಳ ಮುಖ್ಯ ಕರ್ತವ್ಯವೆಂದು ನಾನು ಭಾವಿಸಿದ್ದೇನೆ. ತನ್ನ ನೆಲದ, ಜನರ ಸಂಸ್ಕೃತಿಯ ಸಂಪನ್ಮೂಲಗಳೂ, ಮೂಲಗಳು, ಸಂಪ್ರದಾಯ, ಪರಂಪರೆಗಳು ಇತ್ಯಾದಿಗಳ ಮನನ, ಮಂಥನಗಳು ಈ ದೃಷ್ಟಿಗೆ ಪ್ರಥಮಪ್ರೇರಣೆ, ಸ್ಫೂರ್ತಿ, ಪೂರ್ತಿಗಳನ್ನು ನೀಡಬೇಕೆಂದೂ ಅಂತೆಯೇ ಭಾವಿಸಿದ್ದೇನೆ. ಈ ದಿಸೆಯಲ್ಲಿ ನಮ್ಮ ಸಂಸ್ಕೃತಿಯ ಮೂಲಭೂತ ಆಕರಗಳನ್ನು ಕರಾರುವಕ್ಕಾಗಿ ನಿರ್ಣಯಿಸಿ, ಅವುಗಳನ್ನು ನಮ್ಮ ಕಾಲದೇಶಗಳಿಗೆ ಅನುಗುಣವಾಗಿ, ಸುಲಭವಾಗಿ, ಪರಿಣಾಮಕಾರಿಯಾಗಿ ಮನೆ ಮನೆಯನ್ನೂ ಮಂದಿಯನ್ನು ತಲುಪುವಂತೆ ಅರ್ಥಯಿಸುವ ಕೆಲಸವೂ ವಿಶ್ವವಿದ್ಯಾಲಯಗಳಂತಹ ಉನ್ನತ ವಿದ್ಯಾಪೀಠಗಳದ್ದೇ ಆಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಪುಸ್ತಕವು ಒಂದು ನಮ್ಮ ಪ್ರಯತ್ನ. ಸಂಗೀತ ನೃತ್ಯಶಾಸ್ತ್ರಗಳಲ್ಲಿಯೇ ಕರ್ನಾಟಕದ ವಿಶ್ವವಿದ್ಯಾಲಯಗಳು ಕೈಗೊಳ್ಳಬಹುದಾದ ಪ್ರಕಟನೆಗಳು ಹಲವಿವೆ. ಉದಾಹರಣೆಗೆ, ಬೃಹದ್ದೇಶೀಯ ಕನ್ನಡ ವ್ಯಾಖ್ಯಾನವೊಂದನ್ನು ಮತಂಗ ಹೃದಯವೆಂಬ ಹೆಸರಿನಲ್ಲಿ ಬರೆದುಕೊಡಲು ಡಾ. ಚಂದ್ರಶೇಖರ ಕಂಬಾರರಿಗೆ ಮಾತುಕೊಟ್ಟಿದ್ದೆ. ಹಣದ ಅಭಾವದಿಂದ ಈ ಯೋಜನೆಯು ಕೈಗೂಡಲಿಲ್ಲವೆಂದು ವಿಷಾದಿಸುತ್ತೇನೆ. ಭಾರತೀಯ ಸಂಸ್ಕೃತಿಯ ಕಲಾ ಬುನಾದಿಯನ್ನು ನಿರ್ಮಿಸಿದ ಋಷಿಗಳಲ್ಲಿ ಕೋಹಲನೂ ಒಬ್ಬ. ನಾಟ್ಯಶಾಸ್ತ್ರದ ಉತ್ತರ ತಂತ್ರವನ್ನು ಕೋಹಲನು ರಚಿಸಿರುವುದಾಗಿ ಭರತಮುನಿಯೇ ಹೇಳುತ್ತಾನೆ. ಕೋಹಲನ ಕೋಹಲಮತಂ, ಕೋಹಲೀಯ ಶಿಕ್ಷಾ, ದತ್ತಿಲ ಕೋಹಲೀಯಂ, ಸಂಗೀತಮೇರು, ತಾಲಲಕ್ಷಣಂ ಮುಂತಾದ ಗ್ರಂಥಗಳನ್ನೂ, ಕೋಹಲನನ್ನು ಕುರಿತ ಉಲ್ಲೇಖ ಉದ್ಧೃತಿಗಳನ್ನೂ ಶೇಖರಿಸಿ, ವ್ಯವಸ್ಥೆಗೊಳಿಸಿ, ಕನ್ನಡಕ್ಕೆ ಅನುವಾದಿಸಿ, ವಿವೇಚಿಸುವ ಕೆಲಸವನ್ನು ಕೈಗೊಳ್ಳಬೇಕಾಗಿದೆ. ಕನ್ನಡಿಗರೇ ಆಗಿದ್ದ ಚಾಳುಕ್ಯ ಸರ್ವಜ್ಞ ಸೋಮೇಶ್ವರನ ಅಭಿಲಾಷಿತಾರ್ಥ ಚಿಂತಾಮಣಿ, ಚಾಳುಕ್ಯ ಚಕ್ರವರ್ತಿ ಜಗದೇಕಮಲ್ಲನ ಸಂಗೀತ ಚೂಡಾಮಣಿ, ಪಾರ್ಶ್ವದೇವನ ಸಂಗೀತ ಸಮಯಸಾರ, ಶಾರ್ಙ್ಗದೇವನ ಸಂಗೀತರತ್ನಾಕರ, ಬಯಕಾರ, ರಾಮಾಮಾತ್ಯನ ಸ್ವರಮೇಲಕಲಾನಿಧಿ, ಗೋವಿಂದ ದೀಕ್ಷಿತನ ಸಂಗೀತಸುಧಾ, ವೆಂಕಟಮುಖಿಯ ಚತುರ್ದಂಡೀ ಪ್ರಕಾಶಿಕಾ ಮುಂತಾದವುಗಳು ಕನ್ನಡದಲ್ಲಿ ವೈಜ್ಞಾನಿಕವಾಗಿ ಸಂಪಾದಿತವಾಗಿ, ಅನುವಾದವಾಗಿ, ವ್ಯಾಖ್ಯಾನಗೊಳ್ಳುವ ಅವಶ್ಯಕತೆಯು ಉಳಿದೇ ಇದೆ. ಮುದ್ರಿತ ಗ್ರಂಥಗಳಲ್ಲದೆ ಇವುಗಳಲ್ಲಿ ಹಲವುದರ ಅಪರೂಪದ ಹಸ್ತಪ್ರತಿಗಳು ನನ್ನ ಸಂಗ್ರಹದಲ್ಲಿವೆ. ಸೃಜನಶೀಲರೂ ಶ್ರೇಷ್ಠ ಸಂಶೋಧಕರೂ ಪ್ರಖ್ಯಾತ ಸಾಹಿತಿಗಳೂ, ಸಮ್ಯಗ್ ದೃಷ್ಟಿಯುಳ್ಳವರೂ ಆಗಿರುವ ಪ್ರೊ. ಎಂ.ಎಂ. ಕಲಬುರ್ಗಿಯವರ ಕುಲಪತಿತ್ವದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಾಧ್ಯತೆಗಳನ್ನು ಪರಿಶೀಲಿಸಲೆಂದು ಆಶಿಸುತ್ತೇನೆ. ಕರ್ನಾಟಕ ಸರ್ಕಾರವು ಇದಕ್ಕೆ ಅಗತ್ಯವಾದ ನೆರವು ನೀಡುತ್ತದೆಂದೂ ಭಾವಿಸುತ್ತೇನೆ.

ಬೃಹದ್ದೇಶೀಯ ತಿರುವಂದರಂ ಸಂಸ್ಕರಣ, ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಸಂಸ್ಕರಣಗಳೆರಡನ್ನೂ ಪ್ರಕೃತ ಸಂಪಾದನದಲ್ಲಿ ಧಾರಳವಾಗಿ ಬಳಸಿದ್ದೇನೆ, ಅದಕ್ಕಾಗಿ ಕೃತಜ್ಞನಾಗಿದ್ದೇನೆ. ಪ್ರಕೃತ ಸಂಸ್ಕರಣವು ಇವೆರಡರಿಂದಲೂ ಗಣನೀಯವಾಗಿ ಭಿನ್ನವಾಗಿದೆ.

ಈ ಪುಸ್ತಕವನ್ನು ಸಿದ್ಧಪಡಿಸುವಲ್ಲಿ ಮೂಲಪ್ರೇರಕರಾದ ಕನ್ನಡ ವಿಶ್ವವಿದ್ಯಾಲಯದ ಮಾಜಿ ಕುಲಪತಿಯೂ ನನ್ನ ಮಿತ್ರರೂ ಆಗಿರುವ ಡಾ. ಚಂದ್ರಶೇಖರ ಕಂಬಾರರಿಗೂ ಇದನ್ನು ತ್ವರೆಯಿಂದ ‘ಹಂಪಿ ಉತ್ಸವ-೧೯೯೮’ರ ವೇಳೆಗೇ ಪ್ರಕಟಿಸಬೇಕೆಂದು ಪ್ರೀತಿಯಿಂದ ಅನುನಯಮಾಡಿಕೆಲಸ ಮಾಡಿಸಿದ. ಇಂದಿನ ಕುಲಪತಿ ಪ್ರೊ. ಎಂ. ಎಂ. ಕಲಬುರ್ಗಿಯವರಿಗೂ, ಪುಸ್ತಕದ ಪ್ರಗತಿಯನ್ನು ಎಚ್ಚರದಿಂದಲೂ ಆಸಕ್ತಿಯಿಂದಲೂ ಕಾಯುತ್ತಿದ್ದ ಪ್ರಸಾರಾಂಗದ ನಿರ್ದೇಶಕ ಪ್ರೊ. ಎ.ವಿ.ನಾವಡ ಅವರಿಗೂ, ಕರಡುಗಳನ್ನು ತಿದ್ದುವುದರಲ್ಲೂ ಅನುಬಂಧಗಳನ್ನು ಸಿದ್ಧಪಡಿಸುವುದರಲ್ಲೂ ನೆರವಾಗಿರುವ ಸಂಗೀತ ವಿದ್ವಾನ್ ಆರ್. ಎಸ್. ನಂದಕುಮಾರರಿಗೂ ಶ್ರೀಮತಿ ಗೌರಿ ಸತ್ಯನಾರಾಯಣರವರಿಗೂ

ಇದನ್ನು ಸಿದ್ಧಪಡಿಸುವಲ್ಲಿ ಕೇವಲ ಅಲ್ಪ ಸಂಭಾವನೆಯಿಂದ ತೃಪ್ತರಾಗಿ, ಪೂರ್ಣಾವಧಿ ವಿದ್ವತ್ ಕಾರ್ಯದಿಂದ ನೆರವು ನೀಡಿದ ಅನೇಕ ಸಹಾಯಕ ವಿದ್ವಾಂಸರಿಗೂ

ಇದರ ದುಷ್ಕರವಾದ ಅಕ್ಷರ ಜೋಡಣೆ ಕಾರ್ಯದಲ್ಲಿ ಅತಿಶಯವಾದ ಶ್ರದ್ಧೆ, ಉತ್ಸಾಹ, ತಾಳ್ಮೆ, ಕಾರ್ಯತತ್ಪರತೆಗಳನ್ನು ತೋರಿಸಿ ಸಹಕರಿಸಿದ ಮೈಸೂರಿನ ಚಂಚು ಅಲೈಡ್ ಇಂಡಸ್ಟ್ರೀಸ್‌ನ ಮಾಲಿಕ ಶ್ರೀ ಆರ್. ನರಸಿಂಹರವರಿಗೂ ಅಂದವಾಗಿ ಮುದ್ರಿಸಿದ ಬೆಂಗಳೂರಿನ ಲಕ್ಷ್ಮಿ ಮುದ್ರಣಾಲಯದ ಸಿಬ್ಬಂದಿ ವರ್ಗಕ್ಕೂ ನಾನು ಬಹುವಾಗಿ ಕೃತಜ್ಞನಾಗಿದ್ದೇನೆ.

ಬಲ್ಲವರು ಪುಸ್ತಕದ ಲೋಪದೋಷಗಳನ್ನು ತೋರಿಸಿಕೊಟ್ಟರೆ ಕೃತಜ್ಞನಾಗಿರುತ್ತೇನೆ.

ರಾ. ಸತ್ಯನಾರಾಯಣ
ಬಹುಧಾನ್ಯ ಸಂವತ್ಸರದ ದೀಪಾವಳಿ
ತ್ರಯಿಲಕ್ಷ್ಮೀ, ಮೈಸೂರು.