IX ಬೃಹದ್ದೇಶೀ : ರಚನಾಕಾಲ

ಬೃಹದ್ದೇಶಿಯು ಯಾವಾಗ ರಚಿತವಾಯಿತೆಂದು ಅದರ ಉಪಲಬ್ಧ ಮಾತೃಕೆಗಳಲ್ಲಿ ಹೇಳಿಲ್ಲ. ಅವು ಅಸಮಗ್ರವೆಂಬುದನ್ನೂ ಲೋಪದೋಷಭರಿತವಾಗಿವೆಯೆಂಬುದನ್ನೂ ಇಲ್ಲಿ ಮತ್ತೆ ಸ್ಮರಿಸಬೇಕು. ಆದುದರಿಂದ ಅದರ ಕಾಲನಿರ್ಣಯವನ್ನು ಇತರ ಅಂತಃಸಾಕ್ಷ್ಯಗಳಿಂದಲೂ ಅನುಮಾನದಿಂದಲೂ ಮಾಡಬೇಕಾಗಿದೆ.

(ಅ) ಸೃಜನಶೀಲಕಾಲ

ನಾಟ್ಯಶಾಸ್ತ್ರದಲ್ಲಿ ಕಂಡುಬರದಿರುವ ಅನೇಕ ವಿಷಯಗಳು ಬೃಹದ್ದೇಶಿ ಗ್ರಂಥದ ಉದ್ಧಕ್ಕೂ ದೊರೆಯುತ್ತವೆ : ದೇಶೀ, ನಾದ, ಶ್ರುತಿಮೀಮಾಂಸೆ, ಸ್ವರದ ಉತ್ಪತ್ತಿ ಮತ್ತು ಉಪಾಧಿ, ದ್ವಾದಶಸ್ವರಮೂರ್ಛನೆ, ಗ್ರಾಮರಾಗ, ಭಾಷಾರಾಗ, ವಿಭಾಷಾ, ಅಂತರಭಾಷಾ, ದೇಶೀರಾಗ, ದೇಶೀಪ್ರಬಂಧಗಳು. ತನಗೆ ತಿಳಿದಿದ್ದರೂ ತನ್ನ ಗ್ರಂಥದ ಉದ್ದೇಶ, ವ್ಯಾಪ್ತಿ ಮತ್ತು ಪ್ರಯೋಜನಗಳಿಗೆ ಹೊರತೆಂಬ ಕಾರಣದಿಂದ ಭರತಮುನಿಯು ಇವುಗಳನ್ನು ಹೇಳಲಿಲ್ಲ ಎಂಬ ದುರ್ಬಲಪಕ್ಷವನ್ನು ಬಿಟ್ಟು ಭರತಮುನಿಯ ನಂತರದ ಕಾಲದಲ್ಲಿ ಇವು ವಿಕಾಸಗೊಂಡವು ಎಂದು ಊಹಿಸಿದರೆ ಇವುಗಳು ವಿಕಾಸವಾಗಿ ಪ್ರಯೋಗಸ್ಥಿರತೆಯನ್ನು ಪಡೆಯಬೇಕಾದರೆ ಮೂರು ಶತಮಾನಗಳಾದರೂ ಆಗಿರಬೇಕು. ಈ ಅಂತರದಲ್ಲಿ ಕೋಹಲ, ವಿಶ್ವಾವಸು, ವಿಶಾಖಿಲ, ತುಂಬುರು, ವೇಣ(?ಣು?) ಮುಂತಾದವರು ಶ್ರುತಿಯ ಆಯಾಮಗಳ ಅನ್ವೇಷಣೆಯಲ್ಲಿ ತೊಡಗಿ ತಮ್ಮ ಸಿದ್ಧಾಂತಗಳನ್ನು ಮಂಡಿಸಿದರು; ನಂದಿಕೇಶ್ವರನು ಸಪ್ತಸ್ವರಮೂರ್ಛನೆಯನ್ನು ವಿಸ್ತರಿಸಿ ದ್ವಾದಶಸ್ವರಮೂರ್ಛನೆಯ ಕಲ್ಪನೆಯನ್ನು ಸೂಚಿಸಿದನು; (ಜಾತಿಗಳ ವಿಷಯದಲ್ಲಿ ಮತಂಗನು ಭರತನೊಬ್ಬನನ್ನೇ ಅವಲಂಬಿಸಿ ಕೋಹಲ ಕಾಶ್ಯಪಾದಿಗಳನ್ನು ಉದ್ಧರಿಸಿಕೊಂಡಿಲ್ಲವೆಂಬುದು ಗಮನಾರ್ಹವಾಗಿದೆ.) ಮತಂಗ, ಕಾಶ್ಯಪ, ಯಾಷ್ಟಿಕ, ಶಾರ್ದೂಲ, ದುರ್ಗಾಶಕ್ತಿಗಳು ಗ್ರಾಮರಾಗಗಳ ಪ್ರಸ್ತುತಿಶೈಲಿಗೆ ಮಾತೃಕೆಗಳಾಗಿದ್ದ ಸಪ್ತಗೀತಿಗಳ ವಿಷಯದಲ್ಲಿ ತಮ್ಮ ತಮ್ಮ ಮತಗಳನ್ನು ಪ್ರತಿಪಾದಿಸಿದರು. ಕಾಶ್ಯಪನು ಗ್ರಾಮರಾಗಗಳ ವಿಷಯದಲ್ಲಿ ವಿವರಪೂರ್ಣ ಅಧ್ಯಯನವನ್ನು ಕೈಗೊಂಡನು. ಯಾಷ್ಟಿಕ ಶಾರ್ದೂಲರು ಗ್ರಾಮ ರಾಗಗಳ ವಿಕಾಸಗಳಾದ ಅಥವಾ ವಿಕಾರಗಳಾದ ಭಾಷಾರಾಗಗಳನ್ನೂ ಅವುಗಳಿಂದ ಹುಟ್ಟಿದ ವಿಭಾಷಾ, ಅಂತರಭಾಷಾಗಳನ್ನೂ ಕ್ರೋಡೀಕರಿಸಿದರು. ಹೀಗೆ ಈ ಅವಧಿಯು ಸಂಗೀತದ ಬೆಳವಣಿಗೆಯ ದೃಷ್ಟಿಯಿಂದ ಬಹು ಸೃಜನಶೀಲವಾಗಿತ್ತು. ಬಹುಶಃ ರಾಗಗಳಲ್ಲಿ ಆದ ಈ ಎಲ್ಲ ಮುನ್ನಡೆ, ಪರಿವರ್ತನೆಗಳನ್ನು ಮನದಂದು ಮತಂಗನು ‘ರಾಗಮಾರ್ಗಸ್ಯ ಯದ್ರೂಪಂ ಯನ್ನೋಕ್ತಂ ಭರತಾದಿಭೀಃ | ನಿರೂಪ್ಯತೇ ತದಸ್ಮಾಭೀಃ ಲಕ್ಷ್ಯಲಕ್ಷಣಸಂಯುತಮ್’ ಎಂದು ಪ್ರತಿಜ್ಞೆ ಮಾಡಿದ್ದಾನೆಂದು (೫೮೦) ಕಾಣುತ್ತದೆ. ಹೀಗೆ ಭರತನ ಕಾಲವು ಕ್ರಿ.ಶ.೨೦೦ ಎಂದಾದರೆ ಮತಂಗನು ಕ್ರಿ.ಶ.೫೦೦ರ ನಂತರದವನಾಗುತ್ತಾನೆ.

(ಆ) ಕಾಲನಿರ್ಣಯದಲ್ಲಿ ತೊಡಕುಗಳು

ಈ ಅನುಮಾನಕ್ಕೆ ಕೋಹಲ, ಶಾರ್ದೂಲ, ಯಾಷ್ಟಿಕ, ಮುಂತಾದ ಮಧ್ಯಂತರದ ಲಾಕ್ಷಣಿಕರಿಂದ ಹೇಳಿಕೊಳ್ಳಬಹುದಾದ ಪ್ರಯೋಜನವೇನೂ ಇಲ್ಲ. ಏಕೆಂದರೆ ಈ ಹೆಸರಿನವರು ಮತಂಗಪೂರ್ವದಲ್ಲಿಯೂ ನಂತರದಲ್ಲಿಯೂ ದೊರೆಯುತ್ತಾರೆ. ಉದಾಹರಣೆಗೆ ಕೋಹಲನನ್ನು ಪರಿಶೀಲಿಸಬಹುದು. ‘ಶೇಷಮುತ್ತರತಂತ್ರೇಣ ಕೋಹಲಃ ಕರಿಷ್ಯತಿ’ ಎಂದು ಭರತನೇ ಹೇಳಿ ಕೋಹಲನನ್ನು ಭರತಪುತ್ರರಲ್ಲಿ ಎಣಿಸಿಕೊಂಡಿದ್ದಾನಷ್ಟೇ. ಈ ಮಾತನ್ನು ಭರತನೇ ಬರೆದಿದ್ದರೆ ಕೋಹಲನು ಅವನಿಗಿಂತ ಕಿರಿಯನಾದ ಸಮಕಾಲೀನನೆಂದಾಗುತ್ತದೆ. ಕೋಹಲನೋ ಬೇರೆಯವರೂ ಸೇರಿಸಿದ್ದರೆ ಅವನಿಗಿಂತ ಅರ್ವಾಚೀನನೆಂದಾಗುತ್ತದೆ. ಅವನೂ ಮತಂಗನಿಂದ ಉದ್ಧೃತನಾದ ಕೋಹಲೂ ಒಬ್ಬನೇ ಹೌದೋ ಅಲ್ಲವೋ ತಿಳಿಯದು; ಮತಂಗೋದ್ಧೃತ ಕೋಹಲನು ಮತಂಗಪೂರ್ವನೆಂಬುದು ಮಾತ್ರ ಸಿದ್ಧವಾಗುತ್ತದೆ. ಆದರೆ ಸಂಗೀತಮೇರುವಿನಲ್ಲಿ ಕೋಹಲನು ಮತಂಗನನ್ನು ಉಲ್ಲೇಖಿಸುತ್ತಾನೆ. ಆದುದರಿಂದ ಈ ಕೋಹಲನು ಮತಂಗೋತ್ತರನೆಂಬುದು ಸಿದ್ಧವಾಗುತ್ತದೆ. ಇನ್ನು ಕೋಹಲಮತಂ, ಕೋಹಲರಹಸ್ಯಂ ದತ್ತಿಲ ಕೋಹಲೀಯಂಗಳು ಮತಂಗೋತ್ತರಕಾಲೀನ ರಾಗಗಳನ್ನು ವರ್ಣಿಸುವುದರಿಂದ ಅರ್ವಾಚೀನಗಳೇ. ಕೋಹಲೀಯವೆನ್ನುವ ತಾಲಲಕ್ಷಣವೂ ಅಪ್ರಾಚೀನವೇ. ಕೋಹಲೀಯಶಿಕ್ಷೆಯೆಂಬುದು ವೇದಾಂಗವಾದ ಶಿಕ್ಷೆ. ಪ್ರಾಚೀನ ಗ್ರಂಥ, ಬಹುಶಃ ಮತಂಗಪೂರ್ವದ್ದು; ಬೃಹದ್ದೇಶಿಯಲ್ಲಿ ಹೇಳಿರುವ ವಿಷಯಗಳಿಗೂ ಇದಕ್ಕೂ ಏನೂ ಸಂಬಂಧವಿಲ್ಲ. ಹೀಗಾಗಿ ಕೋಹಲನೆಂಬ ಗ್ರಂಥಕರ್ತರು ವಿವಿಧ ಕಾಲಸ್ತರಗಳಲ್ಲಿ ದೊರೆಯುತ್ತಾರೆ. ಮತಂಗಪೂರ್ವಕೋಹಲನು ಭರತೋತ್ತರನೆಂದು ಮಾತ್ರ ಹೇಳಬಹುದು, ಅವನ ಕಾಲವನ್ನು ಸ್ವತಂತ್ರವಾಗಿ ನಿರ್ಣಯಿಸಲು ಆಧಾರಗಳೇನೂ ಇಲ್ಲ. ದತ್ತಿಲನ ವಿಷಯದಲ್ಲೂ ಇದೇ ಮಾತು ಸಲ್ಲುತ್ತದೆ೩. ಸರ್ವಾಗಮಸಂಹಿತೆಯನ್ನು ರಚಿಸಿದ ಯಾಷ್ಟಿಕನು ಕಾಶ್ಯಪನಿಗೆ ಭಾಷಾರಾಗಗಳನ್ನು ಉಪದೇಶಿಸಿದವನು; ಆದುದರಿಂದ ಇಬ್ಬರೂ ಸಮಕಾಲೀನರೆಂದಾಗಬೇಕು; ಯಾಷ್ಟಿಕನಿಂದಲೂ ಕಾಶ್ಯಪನಿಂದಲೂ ಭಿನ್ನಮತಗಳಲ್ಲಿ ನಾನ್ಯದೇವನು ಭಾಷಾರಾಗಗಳನ್ನು ಎತ್ತಿಕೊಂಡು ವಿವರಿಸುತ್ತಾನೆ. ಸಂಗೀತಮೇರುವು ಕೋಹಲನು ಶಾರ್ದೂಲನ ಪ್ರಶ್ನೆಗಳಿಗೆ ನೀಡಿದ ಉತ್ತರದ ಅಥವಾ ಉತ್ತರಗಳ ರೂಪದಲ್ಲಿದೆ. ಪೃಚ್ಛಕನನ್ನೂ ಉಪದೇಶಕನನ್ನೂ ಸಮಕಾಲೀನರಾಗಿ ಮಾಡಿರುವುದರಿಂದ, ಇವು ಕಾಲನಿರ್ಣಯಪ್ರಯೋಜಕಗಳಲ್ಲ. ಹದಿನೆಂಟು-ಹತ್ತೊಂಭತ್ತನೆಯ ಶತಮಾನಗಳಲ್ಲಿ ಸಹ ಇಂತಹ ನಾರದಭರತವೆಂಬ ಹ್ರಸ್ವ ಹಸ್ತಪ್ರತಿಯೊಂದು ರಚಿತವಾಯಿತು ಎಂದು ಹೇಳಿದರೆ ಸಾಕು.

ಬೃಹದ್ದೇಶಿಯಲ್ಲಿ ಮೂರು ಸಲ ಗುರುಗಳನ್ನು ಸ್ಮರಿಸಿದೆ : ‘ದೈವತ್ಯಾಂ ಗುರುಭಿಃ ಪ್ರೋಕ್ತೌ’ (೪೫೬), ‘ಪಂಚಮ್ಯಾಂ ಗುರುಭಿಃ ಪ್ರೋಕ್ತೌ’ಅಸ್ಮದ್ ಗುರುಮತೇ’ (೪೮೦). ಮೊದಲನೆಯ ಎರಡು ಶ್ಲೋಕಗಳಲ್ಲಿದ್ದು ಗುರುಶಬ್ದವನ್ನು ಬಹುವಚನದಲ್ಲಿ ಒಳಗೊಂಡಿವೆ. ಬಹುವಚನವು ಬಹುಮಾನಸೂಚಕವೋ ಅನೇಕಸೂಚಕವೋ ತಿಳಿಯದು. ಮೂರನೆಯದು ಗುರುವನ್ನು ಏಕವಚನದಲ್ಲಿ ಸೂಚಿಸಿದೆ. ಈ ಮೂರೂ ಜಾತ್ಯಧ್ಯಾಯದಲ್ಲಿ ಧೈವತೀ, ಪಂಚಮೀ ಮತ್ತು ಕೈಶಿಕೀ ಜಾತಿಗಳ ಲಕ್ಷಣಕಥನಾವಸರದಲ್ಲಿ ಕ್ರಮವಾಗಿ ಬಂದಿವೆ. ಇವು ಮತಂಗನ ಗುರುವು ಯಾರೆಂಬುದನ್ನು ನಿರ್ಧರಿಸುವುದಕ್ಕಾಗಲಿ ಅವನ ಕಾಲನಿರ್ಣಯಕ್ಕಾಗಲಿ ಪ್ರಯೋಜನಕಾರಿಗಳಲ್ಲ. ಎಕೆಂದರೆ ಇವುಗಳನ್ನು ಮತಂಗನು ಕ್ರಮವಾಗಿ ದತ್ತಿಲನಿಂದ (ದತ್ತಿಲಂ, ಶ್ಲೋ.೬೬, ಪು.೧೪, ಶ್ಲೋ.೮೦, ಪು.೧೬, ಶ್ಲೋಕ ೮೮. ಪು.೧೮) ಉದ್ಧರಿಸಿಕೊಂಡಿದ್ದಾನೆ. ಕೊನೆಯದು (೪೮೦) ಶ್ಲೋಕದ (ಎಂದರೆ ದತ್ತಿಲಂ ಶ್ಲೋಕ ೮೮೧) ಗದ್ಯಸಂಗ್ರಹ. ದತ್ತಿಲನು ಇವುಗಳನ್ನು ಭರತನಿಂದ ಕ್ರಮವಾಗಿ (ನಾಟ್ಯಶಾಸ್ತ್ರಂ, ೨೮.೯೯, ಪು.೫೫; ೨೮.೧೨೪,ಪು.೬೦; ೨೮.೧೩೭, ಪು.೬೩) ಸಂಗ್ರಹಿಸಿ ಸಾರಾಂಶಗೊಳಿಸಿದ್ದಾನೆ ಮತ್ತು ಭರತನನ್ನು ಗುರುವೆಂದು ಸೂಚಿಸಿದ್ದಾನೆ. ಭರತಮುನಿಯು ದತ್ತಿಲನನ್ನು ಭರತಪುತ್ರರಲ್ಲಿ ಎಣಿಸಿಕೊಂಡಿರುವುದರಿಂದ ಇದು ಸಹಜವೇ ಇರಬಹುದು. ಅಥವಾ ದತ್ತಿಲಮುನಿಯು ಭರತಮುನಿಗೆ ಸಲ್ಲಿಸಿದ ಗೌರವವಿರಬಹುದು. ಆದರೆ ಬೃಹದ್ದೇಶಿಯಲ್ಲಿ ಇವು ಉಪೋದ್ಧೃತಿಗಳಾಗಿರುವುದರಿಂದ ಮತಂಗನ ಗುರುವು ಯಾರೆಂಬುದನ್ನು ತಿಳಿಯುವುದಕ್ಕಾಗಲಿ ಇದರ ಮೂಲಕ ಮತಂಗನ ಕಾಲವು ಯಾವುದೆಂದು ನಿರ್ಧರಿಸುವುದಕ್ಕಾಗಲಿ ನೆರವು ದೊರೆಯುವುದಿಲ್ಲ.

(ಇ) ಪೂರ್ವಮಿತಿ : ರುದ್ರಾಚಾರ್ಯ

ಸಂಗೀತರತ್ನಾಕರದ ಸ್ವರಗತಾಧ್ಯಾಯದ ಜಾತಿಪ್ರಕರಣದಲ್ಲಿರುವ ತಾರವೆಂಬ ಜಾತಿಪ್ರಾಣವನ್ನು ವ್ಯಾಖ್ಯಾನಿಸುತ್ತ ಕಲ್ಲಿನಾಥನು ಮತಂಗನಿಂದ ಒಂದು ಉದ್ಧೃತಿಯನ್ನು ಮಾಡಿಕೊಂಡಿದ್ದಾನೆ : ‘ಆತಾರಷಡ್ಜಮಾರೋಹೋ ನಂದಯಂತ್ಯಾಂ ಪ್ರಕೀರ್ತಿತಃ ‘ (ಸಂಗೀತರತ್ನಾಕರ ೧.೭.೩೬) ಎಂಬ ಶಾರ್ಙ್ಗದೇವನ ಮಾತನ್ನು ‘ತಾರಗತಿಯಲ್ಲಿ ಸಾಮಾನ್ಯವಾಗಿ ತಾರಷಡ್ಜದಿಮದ ನಾಲ್ಕನೆಯ ಸ್ವರದವರೆಗೆ ಏರಬೇಕೆಂದು ಹೇಳಲಾಗಿದೆ.’ ಎಂದು ಅರ್ಥೈಸಿ ‘ಸಾಮಾನ್ಯವಾಗಿ ಹೀಗೆ ಹೇಳಿದ್ದು ರುದ್ರಟನೇ ಮೊದಲಾದವರು’ ಎಂಬ ವಿವಕ್ಷೆಯನ್ನು ಹೊರಡಿಸುತ್ತಾನೆ. ಇದಕ್ಕೆ ಸಮರ್ಥನೆಯನ್ನು ಮತಂಗೋಕ್ತಿಯಿಂದ ಪಡೆದಿದ್ದಾನೆ (ಅದೇ. ಪು.೧೮೫). ‘ಯಥಾ ಯಾವತ್ ಷಡ್ಜಮೇವ ತಾರಗತಿರ್ಮಧ್ಯಮಸ್ಯಾವ್ಯತ್ರ ಸಂವಾದಿತ್ವಾದನಾಶಿತ್ವಾಚ್ಚ ತಾರಗತೀ ರುದ್ರಟೇನ ಕೃತಾ ಮಧ್ಯಮಸ್ಯೇತಿ ನ ದೋಷ ಇತಿ ಮತಂಗೋಕ್ತಮ್’ ಇಲ್ಲಿ ‘ಯಾವತ್…………ದೋಷ’ ಎಂಬ ಅಂಶವು ಮತಂಗನ ಮಾತು ಎಂದು ತೋರುತ್ತದೆ. ಈ ಅಂಶವು ಉಪಲಬ್ಧ ಬೃಹದ್ದೇಶಿಯ ಜಾತ್ಯಧ್ಯಾಯದಲ್ಲಿಲ್ಲ. (ಆದರೆ ಈ ಪೀಠಿಕೆಯ ‘ಬೃಹದ್ದೇಶಿಯ ಲುಪ್ತಾಂಶಗಳು, ಉದ್ಧೃತಿಗಳು ಮತ್ತು ಉಲ್ಲೇಖಗಳು’ ಎಂಬ ಭಾಗದಲ್ಲಿ ಉದ್ಧರಿಸಿಕೊಂಡಿದೆ, ಸಂಖ್ಯೆ ೨೯) ರುದ್ರಟನನ್ನು ಶಾರ್ಙ್ಗದೇವನೂ ಪೂರ್ವಾಚಾರ್ಯನೆಂದು ಎಣಿಸಿಕೊಂಡಿರುವುದರಿಂದ- ‘ರುದ್ರಟೋ ನಾನ್ಯಭೂಪಾಲೋ ಭೋಜಭೂವಲ್ಲಭಸ್ತಥಾ | ‘ (ಅದೇ ೧.೧.೧೮). ಈ ಉದ್ಧೃತಿಯು ಇಲ್ಲಿ ವಿಶೇಷವಾಗಿ ಅರ್ಥಪೂರ್ಣವಾಗಿದೆ. ಮತಂಗಪೂರ್ವನಾದ ಈ ರುದ್ರಟನು ಯಾರು ಎಂಬುದನ್ನು ನಿರ್ಣಯಿಸಿದರೆ ಮತಂಗನ ಕಾಲದ ಪೂರ್ವಮಿತಿಯನ್ನು ನಿರ್ಧರಿಸಲು ಅನುಕೂಲವಾಗುತ್ತದೆ ಅವನು ಕುಡುಮಿಯಾಮಲೈ ಶಾಸನದಲ್ಲಿ ಮಹೇಂದ್ರವರ್ಮನು ತನ್ನ ಗುರುವೆಂದು ಹೇಳಿಕೊಂಡಿರುವ ಸಂಗೀತ ಲಾಕ್ಷಣಿಕ – ‘ರುದ್ರಾಚಾರ್ಯಶಿಷ್ಯೇಣ ಪರಮ ಮಾಹೇಶ್ವರೇಣ ರಾ(ಜ್ಞಾ) ಶಿಷ್ಟಹಿತಾರ್ಥ (೦) ಕೃತಾಃ ಸ್ವರಾಗಮಾಃ’ ಎಂಬುದು ಒಂದು ಪಕ್ಷ; ಕಾವ್ಯಾಲಂಕಾರದ ಕರ್ತೃ ರುದ್ರಟ ಎಂಬುದು ಎರಡನೆಯ ಪಕ್ಷ. ಮೊದಲನೆಯವನು ಸಂಗೀತಾಚಾರ್ಯನೆಂಬುದು ಸ್ಪಷ್ಟವಾಗಿದೆ. ಅವನು ಸಂಗೀತಶಾಸ್ತ್ರಗ್ರಂಥವೊಂದನ್ನು ರಚಿಸಿದ್ದಿರಬೇಕು ಮತ್ತು ಅದರಿಂದ ಮತಂಗನು ಮೇಲ್ಕಂಡ ಉದ್ಧೃತಿಯನ್ನು ಮಾಡಿಕೊಂಡಿರಬೇಕು. ಮೊದಲನೆಯ ಮಹೇಂದ್ರವರ್ಮನು ಕಾಂಚೀಪುರವನ್ನು ಕ್ರಿ.ಶ. ೬೦೦ ರಿಂದ ೬೩೦ ರವರೆಗೆ ಆಳಿದನು. ಆದುದರಿಂದ ಅವನ ಸಂಗೀತಗುರುವಾದ ರುದ್ರನು ಒಂದು ಅಥವಾ ಎರಡು ತಲೆಮಾರಿನ ಹಿಂದೆ, ಎಂದರೆ, ಕ್ರಿ.ಶ. ೫೭೫-೬೦೦ರ ಸುಮಾರಿಗೆ ಇದ್ದವನು. ಆದುದರಿಂದ ಮತಂಗನು ಸು.ಕ್ರಿ.ಶ. ೬೫೦ರಲ್ಲಿ ಇದ್ದಿರಬೇಕು. ಈ ಕಾಲಕ್ಕೆ ಕರ್ನಾಟಕದಲ್ಲಿ ಕದಂಬರ ಆಳ್ವಿಕೆಯಿದ್ದು ಅವರಿಗೂ ಪಲ್ಲವರಿಗೂ ಸ್ನೇಹಪರವಾದ ರಾಜತಾಂತ್ರಿಕ ಸಂಬಂಧವಿದ್ದಿತು; ಮತಂಗನು ಹಂಪಿಯ ಕ್ಷೇತ್ರದಲ್ಲಿದ್ದವನಾದರೆ ಅದು ಕದಂಬರು ಆಳಿದ ಉಚ್ಚಂಗಿಗೆ ಸಮೀಪ, ಆದುದರಿಂದ ಅವನಿಗೆ ‘ರುದ್ರಚಾರ್ಯ’ನ ಹೆಸರೂ ಶಾಸ್ತ್ರಪಾಂಡಿತ್ಯವೂ ತಿಳಿದಿದ್ದುದು ಅಸಂಭವವಲ್ಲ; ಶಾರ್ಙ್ಗದೇವನು ಉಲ್ಲೇಖಿಸಿರುವ ರುದ್ರಟನು ಅಲಂಕಾರಿಕನಾಗಿರುವುದಕ್ಕಿಂತ ಸಂಗೀತಾಚಾರ್ಯನಾಗಿರುವುದು ಹೆಚ್ಚು ಸಮಂಜಸವಾಗಿದೆ. ರುದ್ರಟ ಎಂಬುದು ‘ರುದ್ರಾಚಾರ್ಯದ ಸಂಕ್ಷೇಪ, ಕಾಶ್ಮೀರನಿವಾಸಿಯ ಹೆಸರೇ ಆಗಬೇಕೆಂದಿಲ್ಲ. (ಉದಾಹರಣೆಗೆ ಗೂರ್ಜರ ಪ್ರತೀಹಾರನಾಗಿದ್ದ ಕನೋಜದ ದೊರೆ ಭೋಜದೇವನಲ್ಲಿ ರುದ್ರಟನೆಂಬ ಅಧಿಕಾರಿಯಿದ್ದನೆಂಬುದಕ್ಕೆ ಕ್ರಿ.ಶ. ೮೩೬-೮೩೭ರ ಒಂದು ಶಾಸನದ (ಎಪ್ರಿಗ್ರಾಫಿಯ ಇಂಡಿಕ, ಸಂಪುಟ ೧೯, ಪು.೧೫,೧೮) ಆಧಾರವಿದೆಯೆಂದು ಮಮ.ಪಿ.ವಿ.ಕಾಣೆಯವರು ತೋರಿಸಿದ್ದಾರೆ. (ಹಿಸ್ಟರಿ ಆಪ್ ಸಂಸ್ಕೃತ ಪೊಎಟಿಕ್ಸ್ ಪು.೧೫೩, ಅಡಿಟಿಪ್ಪಣಿ.) ರುದ್ರಟ ಎಂಬ ಹೆಸರಿನ ಒಬ್ಬ ಕಾಶ್ಮೀರಿ ಸಂಗೀತಲಾಕ್ಷಣಿಕನಿದ್ದನೆಂಬುದಕ್ಕೆ ಯಾವ ಆಧಾರವೂ ಇಲ್ಲ. ಇದು ಮೊದಲನೆಯ ಪಕ್ಷ; ಪ್ರಕೃತಲೇಖಕನಿಗೆ ಇದು ಸಮ್ಮತವಾಗಿದೆ.

(ಈ) ರುದ್ರಟ

ಕಾವ್ಯಾಲಂಕಾರದ ಕೃರ್ತವು ಎಲ್ಲಿಯವನೆಂಬುದು ತಿಳಿಯದು. ಹೆಸರಿನ ಕೊನೆಯಲ್ಲಿ ಟಕಾರವಿರುವುದರಿಂದ ಆಧುನಿಕ ಅಲಂಕಾರಶಾಸ್ತ್ರ ವಿಮರ್ಶಕರು ಅವನು ಕಾಶ್ಮೀರ ನಿವಾಸಿಯಿರಬಹುದೆಂದು ಊಹಿಸಿದ್ದಾರೆ, ಅಷ್ಟೆ. ಅವನು ಸಾಮವೇದಿಯಾದ ವಾಮಕನ ಮಗ, ಜನ್ಮನಾಮವು ಶತಾನಂದನೆಂದು. ಅವನು ಪೂರ್ವಾಚಾರ್ಯರನ್ನು ಹೆಸರುಹಿಡಿದು ಸ್ಮರಿಸುವುದಿಲ್ಲ. ‘ಆಚಾರ್ಯೇಃ’ ಎನ್ನುವಲ್ಲಿ ಭರತನನ್ನು ಉದ್ದೇಶಿಸಿರುವುದು ಸಂಭವನೀಯವಾಗಿದೆ. (೧೨.೪); ಮಯೂರನನ್ನು ಒಮ್ಮೆ ಸ್ಮರಿಸಿದ್ದಾನೆ. (೨.೨.).ಶಿಪ್ರಾನದಿಯನ್ನೂ ಮಾಳವದ ಸ್ತ್ರೀಯರನ್ನೂ ಉಲ್ಲೇಖಿಸುವುದು (೭.೧೦೫) ಗಮನಾರ್ಹವಾಗಿದೆ. ಅವನ ಕಾಲವನ್ನು ಕ್ರಿ.ಶ. ೮೨೫-೮೫೦ ಎಂದು ಮಮ.ಪಿ.ವಿ.ಕಾಣೆಯವರು (ಅದೇ, ಪು.೧೫೩) ನಿರ್ಣಯಿಸಿದ್ದಾರೆ. ಕಾವ್ಯಾಲಂಕಾರವು ಅಲಂಕಾರಪ್ರಸ್ಥಾನವನ್ನು ಕುರಿತ ಗ್ರಂಥ. ಇದರ ೭೩೪ ಶ್ಲೋಕಗಳು (ಬಹುಮಟ್ಟಿಗೆ ಆರ್ಯಾ ವೃತ್ತಗಳು) ೧೬ ಅಧ್ಯಾಯಗಳಲ್ಲಿ ಹಂಚಿಹೋಗಿವೆ. ಇವುಗಳ ಪರಿವಿಡಿಯನ್ನು ಹೀಗೆ ಸಂಕ್ಷೇಪಿಸಬಹುದು.೧. ಇಷ್ಟದೇವತಾಸ್ತುತಿ, ಕಾವ್ಯರಚನೆಯ ಉದ್ದೇಶ, ಕವಿಯ ಸಂಪನ್ಮೂಲಗಳು ೨. ಕಾವ್ಯಲಕ್ಷಣ, ಶಬ್ದಾಲಂಕಾರಗಳು, ರೀತಿಗಳು, ಭಾಷಾಗಳು, ವೃತ್ತಿಗಳು, ಮತ್ತು ಅನುಪ್ರಾಸ ೩. ಯಮಕ ೪. ಶ್ಲೇಷ ೫. ಚಿತ್ರಕಾವ್ಯ ೬. ಶಬ್ದದೋಷ ಮತ್ತು ವಾಕ್ಯದೋಷ ೭.ಅರ್ಥಾಲಂಕಾರಗಳ ಅಧಿಷ್ಠಾನಗಳು: ವಾಸ್ತವ ೮.ಅದೇ, ಔಪಮ್ಯ ೯.ಅದೇ, ಅತಿಶಯ ೧೦.ಶ್ಲೇಷ ೧೧.ಅರ್ಥದೋಷಗಳು, ಉಪಮಾ ದೋಷಗಳು ೧೨. ಹತ್ತು ರಸಗಳು, ಶೃಂಗಾರ ಪ್ರಭೇದಗಳು, ನಾಯಕನ ಮತ್ತು ಅವನ ಅನುಚರರ, ನಾಯಿಕೆಯ ಲಕ್ಷಣಗಳು ೧೩. ಸಂಭೋಗಶೃಂಗಾರ, ನಾಯಿಕಾ ಚೇಷ್ಟೆಗಳು ೧೪. ವಿಪ್ರಲಂಭ ಶೃಂಗಾರ, ಅದರ ಹತ್ತು ದಶೆಗಳು, ನಾಯಿಕಾ ಸಾಂತ್ವಾನದ ಉಪಾಯಗಳು ೧೫. ವೀರ ಮತ್ತಿತರ ರಸಗಳ ಲಕ್ಷಣಗಳು ೧೬. ಕಾವ್ಯ ಪ್ರಭೇದಗಳು, ಅವುಗಳ ಇತಿವೃತ್ತಗಳು ಮತ್ತು ಲಕ್ಷಣಗಳು. ಇಲ್ಲಿ ಈ ಪರಿವಿಡಿಯನ್ನು ಕೊಡುವುದರ ಉದ್ದೇಶವೆಂದರೆ ಇಡೀ ಗ್ರಂಥದಲ್ಲಿ ಸಂಗೀತದ ಪ್ರಸಕ್ತಿಯೂ ಉಲ್ಲೇಖವೂ ಇಲ್ಲವೆಂಬುದನ್ನು ತೋರಿಸುವುದು. ಕಲ್ಲಿನಾಥನು ಮತಂಗೋಕ್ತಿಯೆಂದು ಉದ್ಧರಿಸಿಕೊಂಡ ರುದ್ರಟವಿಷಯಕವಾದ ಉದ್ಧೃತಿ ತಾತ್ಪರ್ಯ ಅಥವಾ ಉಲ್ಲೇಖವು ಇಡೀ ಕಾವ್ಯಾಲಂಕಾರಗ್ರಂಥದಲ್ಲಿ ಇಲ್ಲವೆಂದು ಹೇಳಿದರೆ ಸಾಕು. ಆದುರದರಿಂದ ಈ ರುದ್ರಟನನ್ನು ಮತಂಗನು ಉದ್ಧರಿಸಿಕೊಂಡಿರುವುದು ಅಸಂಭವ. ಆದರೂ ಕುಡುಮಿಯಾಮಲೈಶಾಸನದಲ್ಲಿ ಹೇಳಿರುವ ರುದ್ರಟನನ್ನು ನಿರಾಕರಿಸಿ ಕಾವ್ಯಾಲಂಕಾರದ ರುದ್ರನು ಮತಂಗೋದ್ಧೃತನೆಂದು (ನಿರಾಕರಣ ಮತ್ತು ಸ್ವೀಕೃತಿಗಳಿಗೆ ಎರಡಕ್ಕೂ ಕಾರಣವನ್ನು ಸೂಚಿಸದೆ) ಡಾ || ವಿ. ರಾಘವನ್‌ರವರು (Some Early Names in Music, Sangeet Natak, Vol. 6 pp. 25, 26) ಬರೆಯುತ್ತಾರೆ. ಅಲ್ಲದೆ ಅಭಿನವಗುಪ್ತನು ರುದ್ರಟನನ್ನು ಸ್ಮರಿಸುವುದರ ಒಂದು ಪ್ರಸಂಗವನ್ನೂ ಅವರು ಉಲ್ಲೇಖಿಸುತ್ತಾರೆ : ಭರತನು ಉಲ್ಲೋಪ್ಯಕವೆಂಬ ಪ್ರಕರಣಗೀತದಲ್ಲಿ ತಾಳವಿಧಿಯನ್ನು ಹೇಳುವುದನ್ನು (ನಾಟ್ಯಶಾಸ್ತ್ರಂ, ೩೧.೨೬೬) ಅಭಿನವಗುಪ್ತನು ವ್ಯಾಖ್ಯಾನಿಸುತ್ತ ರುದ್ರಟಾದಿಗಳು ಈ ಶ್ಲೋಕದ ಅರ್ಥವನ್ನು ತಪ್ಪಾಗಿ ಗ್ರಹಿಸಿದ್ದಾರೆ ಎನ್ನುತ್ತಾನೆ : ‘ಏವಮಯಂ ಶ್ಲೋಕಃ ಪ್ರವೃತ್ತಸ್ಯೋಪವರ್ತನಮಿತಿ ವಿಧಿಪರ್ಯವಸಾಯೀ ರುದ್ರ (-ಉದ್ಭ)ಟಾದಿಭಿಸ್ವೇಕಮರ್ಥಂ ಅಬುದ್ಧ್ಯಮಾನೈರುಕ್ತಃ,’ (ಅದೇ, ಪು. ೨೫೨). ಸಂಪಾದಕರು ಇಲ್ಲಿ ರುದ್ರಟ ಶಬ್ದಕ್ಕೆ ಉದ್ಭಟವೆಂಬ ಪಾಠಾಂತರವನ್ನು ಸೂಚಿಸಿರುವುದನ್ನು ಗಮನಿಸಬಹುದು. ರುದ್ರಟವೆಂಬ ಪಾಠವೇ ಸರಿಯಾಗಿದ್ದರೂ ಇದು ಬಂದಿರುವುದು ಸಂಗೀತದ, ಎಂದರೆ ಒಂದು ಹಾಡಿಗೆ ತಾಳವನ್ನು ಬಳಸುವುದರ ವಿಧಿಯ ಪ್ರಸಕ್ತಿಯಲ್ಲಿ, ಅಲಂಕಾರಶಾಸ್ತ್ರವನ್ನು ಸಂಬಂಧಿಸಿ ಅಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಿದ್ದರೂ ರುದ್ರಟನನ್ನು ಕಾವ್ಯಾಲಂಕಾರಕರ್ತೃವಿನೊಡನೆ ಸಮೀಕರಿಸಿಕೊಳ್ಳುವುದು ಸೋಜಿಗವಾಗಿದೆ. (ಉಕ್ತಗ್ರಂಥ, ಅದೇಸ್ಥಾನ).

ಮೇಲೆ ಹೇಳಿರುವ ಇಬ್ಬರಲ್ಲದೆ ರುದ್ರನೆಂಬ ಹೆಸರಿದ ಇನ್ನಿಬ್ಬರು ಅಲಂಕಾರ ಶಾಸ್ತ್ರ ಪ್ರಸಕ್ತಿಯಲ್ಲಿ ದೊರೆಯುತ್ತಾರೆ. ಮೊದಲನೆಯವನು ಶೃಂಗಾರತಿಲಕವೆಂಬ ಅಲಂಕಾರಶಾಸ್ತ್ರಗ್ರಂಥವನ್ನು ರಚಿಸಿರುವ ರುದ್ರಭಟ್ಟ. ಇವನ ಶ್ಲೋಕಗಳನ್ನು ಜಲ್ಹಣನು ತನ್ನ ಸೂಕ್ತಿಮುಕ್ತಾವಲಿಯಲ್ಲಿ ರುದ್ರನೆಂಬ ಹೆಸರಿನಲ್ಲಿಯೇ ಉದ್ಧರಿಸಿಕೊಂಡಿದ್ದಾನೆ; ಶ್ರೀಧರದಾಸನು ಸದುಕ್ತಿಕರ್ಣಾಮೃತದಲ್ಲಿ ಶೃಂಗಾರತಿಲಕದ ಶ್ಲೋಕಗಳನ್ನು ರುದ್ರಟನವೆಂದೇ ಉದ್ಧರಿಸಿಕೊಳ್ಳುತ್ತಾನೆ; ಕಾವ್ಯಾಲಂಕಾರದ ಹೆಸರನ್ನೆತ್ತುವುದಿಲ್ಲ. ಆದರಿಂದ ಉದ್ಧೃತಿಗಳನ್ನೂ ಮಾಡಿಕೊಳ್ಳುವುದಿಲ್ಲ. ಶೃಂಗಾರತಿಲಕವು ಬಹಳಷ್ಟು ಶ್ಲೋಕಗಳನ್ನು ಕಾವ್ಯಾಲಂಕಾರದಿಂದಲೇ ಎತ್ತಿಕೊಂಡಿದೆ; ಈ ಕಾರಣಗಳಿಂದಾಗಿ ಆಧುನಿಕ ವಿಮರ್ಶಕರು ಕಾವ್ಯಾಲಂಕಾರದ ಹಾಗೂ ಶೃಂಗಾರತಿಲಕದ ಕರ್ತೃಗಳಲ್ಲಿ ಅಭೇದವನ್ನೇ ಪರಿಭಾವಿಸುತ್ತಾರೆ. ಆದರೆ ಇವರೆಡರಲ್ಲಿಯೂ ರಸಗಳು, ವೃತ್ತಿಗಳು, ನಾಯಿಕೆಯರು, ಮುಂತಾದ ಮುಖ್ಯವಿಷಯಗಳ ಸಂಖ್ಯೆಯಲ್ಲೂ ವಿವೇಚನೆಯಲ್ಲೂ ಮೂಲಭೂತ ವ್ಯತ್ಯಾಸಗಳಿರುವುದರಿಂದ ಇಬ್ಬರೂ ಬೇರೆ ಬೇರೆಯವರೆಂಬ ಅನುಮಾನವು ಸಿದ್ಧಪಡುತ್ತದೆ. ಈ ವಿಷಯವನ್ನು ಮಮ.ಪಿ.ವಿ.ಕಾಣೆಯವರು ಗಮನಿಸಿ ಚರ್ಚಿಸಿದ್ದಾರೆ (ಅದೇ, ಪು.೧೫೮). ಎರಡನೆಯ ರುದ್ರನನ್ನು ನಮಿಸಾಧುವು ತನ್ನ ಷಡಾವಶ್ಯ ಟೀಕಾದಲ್ಲಿ ಕಾವ್ಯಾಲಂಕಾರವನ್ನು ವ್ಯಾಖ್ಯಾನಿಸುವಾಗ (೧.೨:೨.೨) ಉಲ್ಲೇಖಿಸುತ್ತಾನೆ (ಪು.೬೩, ೬೪). ಭಾಮಹನು ಮೇಧಾವಿಯೆಂಬ ಪೂರ್ವಾಚಾರ್ಯನು ನಿರೂಪಿಸಿದ ಏಳು ಉಪಮಾದೋಷಗಳನ್ನು (೨.೪೦) ಲಕ್ಷ್ಯಲಕ್ಷಣಪೂರ್ವಕವಾಗಿ ನಿರಾಕರಿಸುತ್ತಾನೆ. (೨.೪೦-೬೫) (ಆದರೆ ಈ ದೋಷಗಳು ದಂಡಿ, ಮಮ್ಮಟ ಮುಂತಾದ ಅಲಂಕಾರಿಕರಿಗೆ ಸಮ್ಮತವಾಗಿವೆ). ಮೇಧಾವಿಯ ಗ್ರಂಥವು ಉಪಲಬ್ಧವಿಲ್ಲ. ಈ ಮೇಧಾವಿಯನ್ನೇ ನಮಿಸಾಧುವು ಮೇಧಾವಿರುದ್ರಟನೆಂದು ಕರೆದಿರುವ ಹಾಗೆ ಕಾಣುತ್ತದೆ. ಇದು ಹೇಗೇ ಇರಲಿ, ಇವನೂ ಅಲಂಕಾರಶಾಸ್ತ್ರವನ್ನೇ ಉಪದೇಶಿಸಿರುವುದರಿಂದ ಮತಂಗನು ಉಲ್ಲೇಖಿಸಿರುವ ರುದ್ರಟನಿಗಿಂತ ಭಿನ್ನನೆಂಬುದೂ ಮತಂಗನ ಕಾಲನಿರ್ಣಯಕ್ಕೆಇವನಿಂದ ಪ್ರಯೋಜನವಿಲ್ಲವೆಂಬುದೂ ಸ್ಪಷ್ಟವಾಗಿದೆ.

ರುದ್ರಟನನ್ನು ಕುರಿತ ಈ ವಿವೇಚನೆಯ ಉದ್ದೇಶವನ್ನು ಹೀಗೆ ಸಾರಾಂಶಗೊಳಿಸಬಹುದು : ಮತಂಗೋದ್ಧೃತನಾದ ರುದ್ರಟನು ಪಲ್ಲವಮಹೇಂದ್ರವರ್ಮನ ಸಂಗೀತಗುರುವಾಗಿದ್ದ ರುದ್ರಾಚಾರ್ಯ; ಕುಡುಮಿಯಾಮಲೈಶಾಸನದಲ್ಲಿ ಮಹೇಂದ್ರವರ್ಮನು ಶುದ್ಧಗ್ರಾಮರಾಗಗಳ ಲಕ್ಷ್ಯಗಳನ್ನು ಕೊಟ್ಟಿರುವುದರಿಂದ, ಅವುಗಳ ಉತ್ಪತ್ತಿಸ್ಥಾನಗಳಾದ ಜಾತಿಗಳ ವಿವೇಚನೆಯನ್ನೂ ಅವುಗಳ ದಶಪ್ರಾಣಗಳಲ್ಲಿ ಒಂದಾದ ತಾರಗತಿಯ ಲಕ್ಷಣನಿರೂಪಣೆಯನ್ನೂ ರುದ್ರಾಚಾರ್ಯನು ಮಾಡಿರುವುದು ಹೆಚ್ಚು ಸಂಭವ. ದೇಶ, ಶಾಸ್ತ್ರ ಮತ್ತು ವಿಷಯಗಳ ನೈಕಟ್ಯದಿಂದಾಗಿ ಮತಂಗನು ಅವನನ್ನೇ ಉದ್ದೇಶಿಸಿ, ಉಲ್ಲೇಖಿಸಿದ್ದಾನೆಂದು ಇಟ್ಟುಕೊಳ್ಳುವುದೇ ಹೆಚ್ಚು ಸಮಂಜಸ. (ಮಾನವಲ್ಲಿ ರಾಮಕೃಷ್ಣಕವಿಯವರು ಕಾವ್ಯಾಲಂಕಾರದ ರುದ್ರಟ, ಮೇಧಾವಿರುದ್ರ, ಕುಡುಮಿಯಾಮಲೈಶಾಸನದ ರುದ್ರಾಚಾರ್ಯರುಗಳು ಪರಸ್ಪರ ಅಭಿನ್ನರೆಂದು ಭಾವಿಸಿದ್ದಾರೆ. ಮೇಲಿನ ವಿವೇಚನೆಯಿಂದ ಇದು ಅನುಪನ್ನವೆಂದು ತೀರ್ಮಾನಿಸಬಹುದು.) ಆದುದರಿಂದ ಮತಂಗನ ಕಾಲದ ಪೂರ್ವಮಿತಿಯು ಕ್ರಿ.ಶ. ೫೭೫-೬೦೦ ಎಂದಾಗುತ್ತದೆ.

(ಉ) ಉತ್ತರವಿತಿ : ದಾಮೋದರಗುಪ್ತ

ಮತಂಗನ ಕಾಲದ ಉತ್ತರಮಿತಿಯನ್ನು ನಿರ್ಣಯಸುವಲ್ಲಿ ಹೆಚ್ಚು ತೊಡಕಿಲ್ಲ. ಏಕೆಂದರೆ ದಾಮೋದರಗುಪ್ತನು ತನ್ನ ಕುಟ್ಟಿನೀಮತದಲ್ಲಿ ಮತಂಗನನ್ನು ‘ಸುಷಿರಸ್ವರಪ್ರಯೋಗೇ ಪ್ರತಿಪಾದನಪಂಡಿತೋ ಮತಂಗಮುನಿಃ’ (ಶ್ಲೋಕ ೭೭) ಎಂದು ಉಲ್ಲೇಖಿಸಿದ್ದಾನೆ. (ಇದನ್ನು ಈ ಪೀಠಿಕೆಯ ‘ಬೃಹದ್ದೇಶೀಯ ಲುಪ್ತಾಂಶಗಳು, ಉದ್ಧೃತಿಗಳು ಮತ್ತು ಉಲ್ಲೇಖಗಳು’ ಎಂಬ ಅಧ್ಯಾಯದಲ್ಲಿ ಉದ್ಧರಿಸಿದೆ : ಸಂಖ್ಯೆ ೧೬೭). ಅಭಿನವಗುಪ್ತನೂ ಮತಂಗನನ್ನು ವಂಶವಾದ್ಯ ಪಂಡಿತನೆಂದೇ ಹೇಳಿರುವುದರಿಂದ (ಅದೇ ಸಂಖ್ಯೆ ೧೬೮-೧೭೦) ಈ ಮತಂಗರು ಅಭಿನ್ನರು ಎಂದಿಟ್ಟುಕೊಳ್ಳಬಹುದು. ದಾಮೋದರಗುಪ್ತನು ಕಾಶ್ಮೀರರಾಜನಾದ ಜಯಸಿಂಹನ ಆಸ್ಥಾನಕವಿಯಾಗಿದ್ದನು ; ಜಯಸಿಂಹನ ಆಳ್ವಿಕೆಯ ಕಾಲವು ಕ್ರಿ.ಶ. ೭೫೫ ರಿಮದ ೭೮೭ರವರೆಗೆ ಎಂದು ನಿರ್ಧಾರವಾಗಿದೆ (ಎಂ.ಎನ್.ಶ್ರೀನಿವಾಸಯ್ಯಂಗಾರ್, ಸಂಸ್ಕೃತಕವಿಚರಿತ್ರೆ, ಪು.೪೬೭). ಮತಂಗನು ಇದಕ್ಕಿಂತ ಸುಮಾರು ೫೦ ವರ್ಷಗಳಷ್ಟಾದರೂ ಹಿಂದಿನವನಾಗುತ್ತಾನೆ.ಆದುದರಿಂದ ಅವನ ಕಾಲದ ಉತ್ತರಮಿತಿಯು ಕ್ರಿ.ಶ.ಸು.೭೦೦ ಎಂದಾಗುತ್ತದೆ.

ಹೀಗೆ ಮತಂಗನ (ಆದುದರಿಂದ ಬೃಹದ್ದೇಶೀರಚನೆಯ) ಕಾಲವನ್ನು ಕ್ರಿ.ಶ. ೫೭೫ ಅಥವಾ ೬೦೦ ರಿಂದ ಕ್ರಿ.ಶ. ೭೦೦ರವರೆಗೆ ಎಂದು ತೀರ್ಮಾನಿಸಬಹುದು. ಈ ಕಾಲವನ್ನು ಪ್ರಕೃತಲೇಖಕನು ಮುಮ್ಮಡಿಚಿಕ್ಕಭೂಪಾಲನ ಅಭಿನವಭರತಸಾರಸಂಗ್ರಹಕ್ಕೆ ಬರೆದಿ ಪೀಠಿಕೆಯಲ್ಲಿ (ಪು.Iix) ಕ್ರಿ.ಶ. ಐದನೆಯದರಿಂದ ಏಳನೆಯ ಶತಮಾನದವರೆಗೆ ಎಂದು ತೀರ್ಮಾನಿಸಿದ್ದುದನ್ನು ಇಲ್ಲಿ ಸ್ಮರಿಸಬಹುದು.

X ಬೃಹದ್ದೇಶೀ ಮತ್ತು ನಾಟ್ಯಶಾಸ್ತ್ರ : ಒಂದು ತುಲನೆ

(ಅ) ತುಲನೆಯ ಔಚಿತ್ಯ

ನಾಟ್ಯವು ಸಮಗ್ರವಾದ ಕಲೆ; ಕಾವ್ಯ, ಅಲಂಕಾರ, ಛಂದಸ್ಸು, ವ್ಯಾಕರಣ, ಗೀತ, ವಾದ್ಯ, ನೃತ್ತ ಇತ್ಯಾದಿಗಳು ನಾಟ್ಯಕಲೆಗೆ ಎಂದರೆ ದಶರೂಪಕಗಳ ಅಥವಾ ಉಪರೂಪಕಗಳ ಚತುರ್ವಿಧಾಭಿನಯಕ್ಕೆ ಉಪಕಾರಕಗಳು ಎಂಬುದು ನಾಟ್ಯಶಾಸ್ತ್ರದ ನಿರೂಪಣವಿಧಾನ. ಅದು ಈ ಎಲ್ಲ ಶಾಸ್ತ್ರಗಳಿಗೂ ಪುರಾತನತಮವೂ ಪ್ರಾಮಾಣಿಕವೂ ಅದ ಆಕರವೆಂದು ಮಾನ್ಯವಾಗಿ ನಂತರದ ಆಯಾ ಲಾಕ್ಷಣಿಕರಿಂದ ಇತ್ತೀಚಿನವರೆಗೆ ಪುನಃ ಪುನಃ ಉದ್ಧೃತವಾಗಿ ಗೌರವಾಸ್ಪದವಾದ ಸ್ಥಾನಮಾನಗಳನ್ನು ಪಡೆಯಿತು. ಸಂಗೀತಶಾಸ್ತ್ರಮತ್ತು ನೃತ್ತಶಾಸ್ತ್ರಗಳ ವಿಷಯದಲ್ಲಿ ಈ ಮಾತು ವಿಶೇಷವಾಗಿ ಅನ್ವಯಿಸುತ್ತದೆ. ಆದರೆ ನಾಟ್ಯಶಾಸ್ತ್ರದಲ್ಲಿ ಇವೆರಡು ಕಲೆಗಳಿಗೆ ನಾಟ್ಯಾಧೀನವೂ ನಾಟ್ಯಪ್ರಯೋಜಕವೂ ಆದ ಸ್ಥಾನವು ಮಾತ್ರ ಇದೆ. ಬೃಹದ್ದೇಶಿಯಲ್ಲಿ ಇವು ನಾಟ್ಯೋಪಕಾರಗಳೆಂಬುದು ನಿಜವಾದರೂ ಅವಕ್ಕೆ ಬಹುಮಟ್ಟಿಗೆ ಸ್ವತಂತ್ರವೂ ಸ್ವನಿಷ್ಠವೂ ಆದ ಸ್ಥಾನಮಾನಗಳೂ ಇವೆ. ರಾಗದ ಮತ್ತು ಪ್ರಬಂಧದ ನಿರೂಪಣೆಗಳು ಇದಕ್ಕೆ ನಿದರ್ಶನಗಳು. ಮತಂಗಮುನಿಯು ರಾಗಾಧ್ಯಾಯದ ಪ್ರಾರಂಭದಲ್ಲಿ ‘ರಾಗಮಾರ್ಗಸ್ಯ ಯದ್ರೂಪಂ ಯನ್ನೋಕ್ತಂ ಭರತಾದಿಭಿಃ | ನಿರೂಪ್ಯತೇ ತದಸ್ಮಾಭಿರ್ಲಕ್ಷ್ಯಲಕ್ಷಣಸಂಯುತಮ್’ (೫೮೦) ಎನ್ನುತ್ತಾನಷ್ಟೆ. ಭರತನೇ ಮೊದಲಾದವರು ಹೇಳದೆ ಬಿಟ್ಟ ರಾಗಮಾರ್ಗವನ್ನು ನಿರೂಪಿಸಲು ಮತಂಗನು- (ಬಹುಶಃ ಮತಂಗನೊಬ್ಬನೇ)-ಅರ್ಹನು ಎಂಬ ಇಂಗಿತವು ಈ ವಿಷಯದಲ್ಲಿ ನಾರದನು ಕೇಳಿದ ಪ್ರಶ್ನೆಯಲ್ಲಿರುವ ‘ತಸ್ಯ ವ್ಯುತ್ಪತ್ತಿಲಕ್ಷಣಂ ಯಥಾವದ್ ವಕ್ತುಮರ್ಹಸಿ’ (೫೭೯) ಎಂಬ ಮಾತಿನಿಂದ ಹೊರಡುತ್ತದೆ. ‘ಭರತಾದಿಭೀಃ’ ಎನ್ನುವಲ್ಲಿ ‘ಆದಿ’ ಶಬ್ದದಿಂದ ಭರತಮುನಿಯುಹೆಸರು ಹೇಳದೆ ಉದ್ಧರಿಸಿಕೊಂಡ ಪೂರ್ವಾಚಾರ್ಯರನ್ನು (ಇದರ ಪ್ರಸ್ತಾಪವನ್ನು ಮುಂದೆ ಪು. ೨೦೧, ೨೦೨ರಲ್ಲಿ ಮಾಡಲಾಗಿದೆ), ಭರತಪುತ್ರರಾದ ದತ್ತಿಲನನ್ನೂ ನಾರದನನ್ನೂ(?) ಕೋಹಲನನ್ನೂ (?) ಗ್ರಹಿಸಬೇಕು; ಏಕೆಂದರೆ ಕಾಶ್ಯಪ, ಯಾಷ್ಟಿಕ, ಶಾರ್ದೂಲ, ದುರ್ಗಾಶಕ್ತಿ ಮುಂತಾದ ಮತಂಗಪೂರ್ವಚಾರ್ಯರು ಆಯಾ ರಾಗಮಾರ್ಗಗಳನ್ನು (ವಿವಿಧ ಗೀತಿಮಾತೃಕೆಗಳಿಗೆ ಸಂಬಂಧಿಸುವುದರ ಮೂಲಕ) ಹೇಳಿಯೇ ಇದ್ದಾರಷ್ಟೆ. ಅಷ್ಟೇ ಅಲ್ಲದೆ, ಭರತಮುನಿಗೆ ರಾಗಗಳು ಗೊತ್ತೇ ಇರಲಿಲ್ಲವೆಂದು ಹೇಳಲಾಗದು. ಏಕೆಂದರೆ ದಶರೂಪಕಗಳ ಮುಖ, ಪ್ರತಿಮುಖ, ಗರ್ಭ, ನಿರ್ವಹಣ ಮತ್ತು ಅವಮರ್ಶವೆಂಬ ಹಂತಗಳಲ್ಲಿ ಇಂತಿಂತಹದೇ ಶುದ್ಧಗ್ರಾಮರಾಗವನ್ನು ಪ್ರಯೋಗಿಸಬೇಕೆಂಬ ವಿಧಿಯು ನಾಟ್ಯಶಾಸ್ತ್ರದಲ್ಲಿ ಕಂಡುಬರುತ್ತದೆ (ನಾಟ್ಯಶಾಸ್ತ್ರಂ, ೩೨.೪೨೮,೪೨೯, ಪು.೩೯೦). ಪೂರ್ವರಂಗವಿಧಿಯಲ್ಲಿ ರಾಗಗಳಿಗೆ ಸಂಬಂಧಪಟ್ಟ ವಿಧಿಯನ್ನು ಆಚರಿಸಬೇಕೆಂದೂ ಇದೇ ಸಂದರ್ಭದಲ್ಲಿ (ಅದೇ, ೩೨.೪೨೬, ಪು.೨೯೦) ಹೇಳಿದೆ: ‘ಪೂರ್ವರಂಗ ವಿಧಾನೇ ತು ಕರ್ತವ್ಯೋ ರಾಗಜೋ ವಿಧಿಃ | (ಇದನ್ನು ‘ಪೂರ್ವರಂಗವಿಧಾನೇ ತು ಕುರ್ಯಾದ್ ವೈ ಚೋಕ್ಷಷಾಡವಂ’ ಎಂದು ಅಭಿನವಗುಪ್ತನು ಪಠಿಸಿದ್ದಾನೆಂಬುದು ಗಮನಾರ್ಹವಾಗಿದೆ; ಅದೇ ಗ್ರಂಥ, ಅದೇ ಪುಟ). ರಾಗವೆಂಬ ಶಬ್ದವನ್ನು ಭರತನು ಇನ್ನೂ ಒಮ್ಮೆ (ನಾಟ್ಯಶಾಸ್ತ್ರಂ, ೧೩.೮೪, ಪು.೨೮೧) ಬಳಸಿದ್ದಾನಾದರೂ ಅದನ್ನು ಮೇಲ್ಕಂಡ ಅರ್ಥದಲ್ಲಿ ಹೇಳಿದ್ದಾನೆಂಬುದು ಸಂದೇಹಾಸ್ಪದವಾಗಿದೆ. ಇದು ಹೇಗೇ ಇರಲಿ, ಭರತಮುನಿಯು ದಶರೂಪಕ ಪ್ರಯೋಗಕ್ಕೆ ಉಪಕಾರಕವಾಗಿರುವಂತೆ ಧ್ರುವಾಗಾನಕ್ಕಾಗಿ ಜಾತಿಮಾರ್ಗವನ್ನು ಹೇಳಿದ್ದಾನೆಯೇ ಹೊರತು ರಾಗಮಾರ್ಗವನ್ನಲ್ಲ. ಏಕೆಂದರೆ ನಾಟಕವೇ ಮೊದಲಾದ ರೂಪಕಗಳಲ್ಲಿ ಸಂಗೀತವು ವಿವಿಧ ರಸಗಳ ಅಭಿವ್ಯಕ್ತಿಗೆ ಅನುಕೂಲಿಸುವಂತೆ ವಿವಿಧ ಅಂಶಸ್ವರಗಳನ್ನುಳ್ಳದ್ದಾಗಿರಬೇಕು. ಬೇರೆ ಬೇರೆ ಅಂಶಗಳನ್ನುಳ್ಳ ಶುದ್ಧ, ವಿಕೃತ, ಸಂಸರ್ಗಜ ಜಾತಿಗಳಲ್ಲಿ ಈ ಅನುಕೂಲವಿದೆಯೇ ಹೊರತು ಏಕಾಂಶಕಗಳಾದ ರಾಗಗಳಲ್ಲಲ್ಲ. ಆದುದರಿಂದ ಇಲ್ಲಿ ಜಾತಿಮಾರ್ಗವು ಲೇಸು.

‘ಯನ್ನೋಕ್ತಂ ಭರತಾದಿಭಿಃ’ ಎಂಬ ಮಾತಿಗೆ ‘ಭರತನಾಗಲಿ, ದತ್ತಿಲನಾರದರಾಗಲಿ, ನಾಮನಿರ್ದೇಶನವಿಲ್ಲದ ಇತರ ಪೂರ್ವಾಚಾರ್ಯರಾಗಲಿ ರಾಗಮಾರ್ಗವನ್ನು ಹೇಳಿಯೇ ಇಲ್ಲ. ಅದನ್ನು ನಾನು ನಿರೂಪಿಸುತ್ತೇನೆ’ ಎಂದು ಅರ್ಥೈಸಬಹುದು; ಈ ಅರ್ಥವನ್ನು ಈಗಾಗಲೇ (ಪು.೪೯, ೫೦) ಸೂಚಿಸಿದೆ; ಅಥವಾ ‘(ಕೋಹಲ, ಕಾಶ್ಯಪ, ಯಾಷ್ಟಿಕ, ಶಾರ್ದೂಲ, ದುರ್ಗಾಶಕ್ತಿ ಮತ್ತು ಭರತರು ಗೀತಿಗಳನ್ನು ಸಂಬಂಧಿಸಿ ರಾಗಗಳನ್ನು ಹೇಳುವಲ್ಲಿಸ ಮತಂಗನು ಅವರಿಂದ ಬೇರೆಯಾದ ಸಪ್ತಗೀತಿಗಳನ್ನೂ ಅವುಗಳನ್ನು ಆಶ್ರಯಿಸುವ ರಾಗವಿಧಗಳನ್ನೂ ನಿರೂಪಿಸುತ್ತಾನಷ್ಟೇ. ‘ರಾಗಮಾರ್ಗಂ’ ಎನ್ನುವುದನ್ನು ರಾಗಪದ್ಧತಿ ಎಂದಿಟ್ಟುಕೊಂಡರೆ, ಕಾಶ್ಯಪನನ್ನು ಬಹುವಾಗಿ ಅವಲಂಬಿಸಿ ರಾಗಾಧ್ಯಾಯವನ್ನೂ, ಯಾಷ್ಟಿಕಶಾರ್ದೂಲರನ್ನು ಸಂಗ್ರಹಿಸಿ ನಾಲ್ಕನೆಯ ಅಧ್ಯಾಯವನ್ನೂ ಮತಂಗನು ರಚಿಸಿರುವುದರಿಂದ ಇವರಿಗಿಂತ ಭಿನ್ನಪದ್ಧತಿಯನ್ನು ಹೇಳಿದ್ದಾನೆಂದು ಊಹಿಸುವುದು ಅಸಂಗತವಾಗುತ್ತದೆ. ರಾಗಲಕ್ಷಣನಿರೂಪಣವಿಧಾನದಲ್ಲಿಯೂ ಮೂಲ, ದೇಶಜ, ಸಂಕೀರ್ಣ, ಛಾಯಾಮಾತ್ರಾಶ್ರಯ ಎಂಬ ವರ್ಗೀಕರಣದಲ್ಲಿಯೂ ರಾಗಗಳಿಗೆ ವಿವಿಧರೂಪಕ ಸಂದರ್ಭಗಳಲ್ಲಿ ವಿನಿಯೋಗವನ್ನು ಹೇಳುವಲ್ಲಿಯೂ ‘ಯನ್ನೋಕ್ತಂ ಭರತಾದಿಭಿಃ’ ಎಂಬುದನ್ನು ಅನ್ವಯಿಸಿಕೊಳ್ಳಬೇಕಾಗುತ್ತದೆ. ಇದು ಏನೇ ಆಗಿರಲಿ, ಮತಂಗನಂತರದ ಶಾಸ್ತ್ರಪರಂಪರೆಯು ಬೃಹದ್ದೇಶಿಯಲ್ಲಿರುವ ರಾಗಮಾರ್ಗವನ್ನು ಒಪ್ಪಿ ಅಪ್ಪಿಕೊಂಡಿದೆ; ಇದನ್ನೂ ನಾದ, ಶ್ರುತಿ, ಸ್ವರ, ಗ್ರಾಮ, ಮೂರ್ಛನಾ, ತಾನ, ಗೀತಿ, ಜಾತಿ, ಪ್ರಬಂಧ ಮೊದಲಾದವುಗಳಲ್ಲಿಯೂ ಬೃಹದ್ದೇಶಿಯನ್ನು ಪುರಸ್ಕರಿಸಿ ಉದ್ಧರಿಸಿಕೊಂಡಿದೆ. ಎರಡನೆಯದಾಗಿ, ನಾಟ್ಯಶಾಸ್ತ್ರವು ರೂಪಕಗಳಲ್ಲಿ ಮಾತ್ರ ಬರುವ ಧ್ರುವಾಗಳನ್ನು ವರ್ಣಿಸಿದರೆ ಬೃಹದ್ದೇಶಿಯು ಸಂಗೀತವು ಸ್ವನಿಷ್ಠಪರಂಪರೆಯಲ್ಲಿ ಬಳಸುವ ಪ್ರಬಂಧಗಳನ್ನು ದೇಶೀಗಳೆಂದೂ, ಹರಮುಖೋದ್ಭವಗಳೆಂದೂ ನಿರೂಪಿಸುತ್ತದೆ. ನಾಟ್ಯಕ್ಕೂ ಅದರ ಉಪಕಾರಕ ಕಲೆಗಳಿಗೂ ನಾಟ್ಯಶಾಸ್ತ್ರವು ತನ್ನ ನಂತರದ ಕಾಲದಲ್ಲಿ ಪ್ರಾಥಮಿಕ ಆಕರವೂ ಪ್ರಮಾಣವೂ ಆದಂತೆಯೇ ಬೃಹದ್ದೇಶಿಯು ಸಂಗೀತದ ಹಲವು ಭಂಗಿಗಳಲ್ಲಿ ಪ್ರಾಥಮಿಕ ಆಕರವೂ ಪ್ರಮಾಣಗ್ರಂಥವೂ ಆಯಿತು. ಮತಂಗನು ಉದ್ಧರಿಸಿಕೊಂಡಿರುವ ಪ್ರಾಮಾಣಿಕರಲ್ಲಿ ಬಾಹುಳ್ಯದಲ್ಲೂ ಪ್ರಾಮುಖ್ಯದಲ್ಲೂ ಭರತನಿಗೆ ಅಗ್ರಸ್ಥಾನವಿದೆ. ಎರಡೂ ಗ್ರಂಥಗಳು ಹೆಚ್ಚುಕಡಿಮೆ ಸಮಾನವಾದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಿಸರಗಳಲ್ಲಿ ಜನ್ಮತಾಳಿದವು. ಆದುದರಿಂದ ಎರಡನ್ನೂ ಸಂಕ್ಷೇಪವಾಗಿಯಾದರೂ ತುಲನಾತ್ಮಕವಾಗಿ ಪರಿಶೀಲಿಸುವುದು ಉಚಿತವಾಗಿದೆ.

 

(ಆ) ಕರ್ತೃತ್ವ

ಕೋಶಗಳಲ್ಲಿ ಮತಂಗಶಬ್ಧಕ್ಕೆ ಚಂಡಾಲ, ಶಬರ ಮುಂತಾದ ಅರ್ಥಗಳಿರುವಂತೆಯೇ ಭರತ ಶಬ್ದಕ್ಕೂ ಶಬರನೆಂಬ ಅರ್ಥವಿರುವುದು (ಉದಾ. ಮೋನಿಯರ್ ವಿಲಿಯಂಸ್, ಎ ಇಂಗ್ಲೀಷ್ – ಸಂಸ್ಕೃತ ಡಿಕ್ಷನರಿ, ಪು.೭೪೭) ಸ್ವಾರಸ್ಯಕರವಾಗಿದೆ. ಈ ವಿಷಯದಲ್ಲಿ ನಾಟ್ಯಶಾಸ್ತ್ರದ ಮತ್ತು ಬೃಹದ್ದೇಶಿಯ ಕರ್ತೃಗಳ ಹೆಸರುಗಳಲ್ಲಿ ಇಂತಹ ಪರ್ಯಾಯಶಬ್ಧ ವ್ಯವಹಾರಕ್ಕೆ ವಾಸ್ತವಿಕತೆಯ ತಳಹದಿಯಿದೆ, ಎಂದರೆ ಇಬ್ಬರೂ ಶಬರರು, ಜಾತಿಸೂಚಕವಾದ ಅನ್ವರ್ಥನಾಮಕರು ಎಂದು ಇಟ್ಟುಕೊಳ್ಳಬಹುದಾದರೆ, ಪರಿಶಿಷ್ಟವರ್ಗದ ಈ ಇಬ್ಬರು ಧೀಮಂತರು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯಗಳಿಂದಾಗಿ ಶಿಷ್ಟರಿಂದಲೂ ಪುರಸ್ಕೃತರಾಗಿ ‘ಮುನಿ’ಗಳೆನ್ನಿಸಿಕೊಂಡರು, ಇಂತಹ ಸಾಂಸ್ಕೃತಿಕ ಸಂಕ್ರಮಣಕ್ಕೆ ಆಯಾ ಸಮಾಜವು ಆಗ ಹದವಾಗಿತ್ತು ಎಂಬುದನ್ನು ಮೇಲೆ ಪ್ರಸ್ತಾಪಿಸಿದೆ (ಪು.೪೬-೪೯). ಭರತಮುನಿಯೇ, ಭರತರು ಕಾಲವೈಪರೀತ್ಯದಿಂದಾಗಿ ನಾಟ್ಯವೇದ ಮದೋನ್ಮತ್ತರೂ ಅವಿನಯಾಢ್ಯರೂ ಆಗಿ ತಮ್ಮ ಆಶ್ರಾವ್ಯತೆ, ದುರಾಚಾರ, ಗ್ರಾಮ್ಯಧರ್ಮ, ನಿಷ್ಠುರತೆಗಳಿಂದ ಸರ್ವಲೋಕಬಾಧೆಯನ್ನುಂಟುಮಾಡಲು ತೊಡಗಿದರೆಂದೂ ಆದುದರಿಂದ ಅವರು ಹೋಮಾಧಿಕಾರವನ್ನು ಕಳೆದುಕೊಂಡ ನಿರ್ವ್ರತರಾಗಿ, ಶೂದ್ರಾಚಾರಸಂಪನ್ನರಾಗಿ, ಕುತ್ಸಿತರಾಗಿ, ಅಧಮರಾಗಿ, ಎಲ್ಲಾ ಶೌಚಗಳನ್ನೂ ಕಳೆದುಕೊಂಡು, ವಂಶಪಾರಂಪರ್ಯವಾಗಿ, ಸ್ತ್ರೀಬಾಲ ಕುಮಾರಸಹಿತರಾಗಿ ನರ್ತಕರಾಗಿಯೇ ಉಳಿದುಕೊಂಡು, ಅಪಾಙ್ತೇಯರಾಗಿ, ಇತರರ ಸೇವೆಯನ್ನು ಮಾಡುತ್ತ ಶಾಸ್ತ್ರವನ್ನು ಮಾರಿಕೊಂಡು ಜೀವನ ಮಾಡುವಂತೆ ಮುನಿಶಾಪವು ಅವರಲ್ಲಿ ಫಲಿಸಿತು, ಎನ್ನುತ್ತಾನೆ (ನಾಟ್ಯಶಾಸ್ತ್ರಂ, ೩೬.೩೫-೪೦, ಪು.೫೦೬,೫೦೭). ಭರತರು ಒಂದು ಕಾಲದಲ್ಲಿ ಹೀನಾಯವೆಂದು ಪರಿಗಣಿತವಾಗಿದ್ದ ಸಾಮಾಜಿಕ ಸ್ತರದವರಾಗಿದ್ದರು, ಎಂಬುದು ಇಲ್ಲಿ ಗಮನಿಸತಕ್ಕ ವಿಷಯ. ನಾಟ್ಯಶಾಸ್ತ್ರದ ಕರ್ತೃವು ಭರತವೃತ್ತಿಯನವಾಗಿದ್ದು ವೃತ್ತಿನಾಮವನ್ನೇ ಇಟ್ಟುಕೊಂಡಿದ್ದನೆಂದಾದರೆ, ಭರತ ಶಾಪವಿಮೋಚನದ ಆಖ್ಯಾನ (ನಾಟ್ಯಶಾಸ್ತ್ರಂ, ೩೭, ಪು.೫೦೯-೫೧೩), ಬ್ರಹ್ಮನಿಂದಲೂ ಶಂಭುವಿನಿಂದಲೂ ನೇರವಾಗಿ ನಾಟ್ಯವೇದವನ್ನು ಪಡೆದುಕೊಂಡುದು (ಜಾನಪದ ಗಾಯಕ ವಾದಕನರ್ತಕರಲ್ಲಿ ಹಲವು ಪಂಗಡಗಳು ತಮ್ಮ ಮೂಲಪುರುಷನು ಆಯಾ ಕಲೆಯನ್ನು ನೇರವಾಗಿ ದೇವರಿಂದಲೇ ಪಡೆದುಕೊಂಡುದಾಗಿ ಹೇಳಿಕೊಳ್ಳುವುದನ್ನು ಹಿಂದೆ ಸೂಚಿಸಿದೆ), ಶಿಷ್ಟವರ್ಗದ ಆತ್ರೇಯಾದಿ ಮುನಿಗಳು ಅವನನ್ನು ಪೂಜಿಸಿ ನಾಟ್ಯಶಾಸ್ತ್ರದ ಉಪದೇಶವನ್ನು ಪಡೆದಿದ್ದು,ಇಂತಹ ನಿದರ್ಶನಗಳಿಂದ ಸಾಂಸ್ಕೃತಿಕ, ಸಾಮಾಜಿಕ ಸಾಮಾನಾಧಿಕರಣ್ಯವನ್ನು ಕೆಳವರ್ಗವು ಉದಾತ್ತೀಕರಣದ (sublimation) ಮೂಲಕವಾಗಿ ಸಾಧಿಸುವ ಪ್ರವೃತ್ತಿಯನ್ನು ಗುರುತಿಸಬಹುದೆಂದು ಕಾಣುತ್ತದೆ. ಮತಂಗನೆಂಬ ಹೆಸರೂ ಜಾತಿವಿಷಯಕವಾಗಿ ಅನ್ವರ್ಥವೆಂದಾದರೆ ಸಂಗೀತ ಮೂಲವಾದ ಧ್ವನಿಗೂ ಸ್ವರಮೂಲವಾದ ನಾದಕ್ಕೂ ವೇದೋಪವಸತಿ, ತ್ರಿಮೂರ್ತಿಗಳ ಅಧಿದೈವತ್ವ ಇವುಗಳನ್ನು ಆರೋಪಿಸುವಲ್ಲೂ ಮತ್ತು ಸಂಗೀತಕೋವಿದನೆಂದು ಪುರಾಣಪ್ರಸಿದ್ಧನಾದ ಹಾಗೂ ಶಿಷ್ಟವರ್ಗದ ಮುನಿಯಾದ ನಾರದನೇ ಸಾಕ್ಷಾತ್ತಾಗಿ ಮತಂಗನಿಂದ ಬೃಹದ್ದೇಶಿಯ ಉಪದೇಶವನ್ನು ಪಡೆದನೆಂಬಲ್ಲೂ ಇಂತಹದೇ ಉದಾತ್ತೀಕರಣದ ಪ್ರವೃತ್ತಿಯನ್ನು ಇಲ್ಲಿಯೂ ಗುರುತಿಸಬಹುದು.ಇದು ಸಾಂಸ್ಕೃತಿಕವಾಗಿ ಆರೋಹದ, ಅಥವಾ ಸ್ತರೋತ್ಕರ್ಷದ ಪ್ರವೃತ್ತಿ (levelling up). ಬದಲಿಗೆ, ಶಿಷ್ಟರಾಗಿದ್ದ ಮುನಿಗಳು ತಮ್ಮ ಉದಾರವಾದ ಸರ್ವಸಮತಾದೃಷ್ಟಿಯನ್ನು ಕಾರ್ಯಭೂತವನ್ನಾಗಿಸಲು ತಮ್ಮನ್ನು ನಿಮ್ಮವರ್ಗದವರೊಡನೆ ಗುರುತಿಸಿಕೊಂಡರು, ಇದರಿಂದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರಸರಣ (diffusion) ಹಾಗೂ ಸಮಾನೀಕರಣಗಳನ್ನು (equalisation) ಪ್ರಯತ್ನಿಸಿದರು ಎಂಬ ಸಾಂಕೇತಿಕತೆಯನ್ನು ಆರೋಪಿಸಿದರೆ ಮೇಲೆ ಹೇಳಿದ ಸಾಂಸ್ಕೃತಿಕ ಪ್ರಕ್ರಿಯೆಯು ಅವರೋಹದ ಅಥವಾ ಸ್ತರಾಪಕರ್ಷದ (levelling down) ಪ್ರವೃತ್ತಿಯದಾಗುತ್ತದೆ. (ಹೋಲಿಸಿ : ಸಂಕ್ರಮಣಾವಸೆ, ಪು. ೪೬-೪೯).

ಭರತಮುನಿಯ ಹೆಸರು ಭರತವೃತ್ತಿಯ ಪ್ರಾತಿನಿಧಿಕರೂಪದ್ದು ಎಂಬ ಒಂದು ಪಕ್ಷವಿದೆಯಷ್ಟೇ. ಮತಂಗನ ವಿಷಯದಲ್ಲಿ ಇಂತಹ ಪ್ರಶ್ನೆಯು ಏಳುವುದಿಲ್ಲ.ನಾಟ್ಶಶಾಸ್ತ್ರವು ಏಕಕರ್ತೃಕವೆ. ಬಹುಕರ್ತೃಕವೆ, ಒಮ್ಮೆಗೇ ರಚಿತವಾದುದೆ, ಬೇರೆ ಬೇರೆ ಸ್ತರಗಳಲ್ಲಿ ಬೇರೆ ಬೇರೆ ಕಾಲಗಳಲ್ಲಿ ಈಗ ದೊರೆತಿರುವ ರೂಪಕ್ಕೆ ವಿಕಾಸಗೊಂಡಿತೆ ಎಂಬ ಪ್ರಶ್ನೆಯೂ ಇದೆ. (ನೋಡಿ. ಇದೇ ಪೀಠಿಕೆಯ ‘ಪ್ರಮಾಣಿಕರು’: ೯ ಭರತ, ಪು.೧೫೦) ಬೃಹದ್ದೇಶಿಯ ವಿಷಯದಲ್ಲಿ ಇದು ಸಲ್ಲುವುದಿಲ್ಲ. ನಾಟ್ಯಶಾಸ್ತ್ರವನ್ನು ವಿಸ್ತಾರವಾದ, ಸಂಕ್ಷೇಪವಾದ ಮತ್ತು ಸೂತ್ರರೂಪದ ಪ್ರಮಾಣಗಳಲ್ಲಿ ರಚಿಸಿದ್ದು ಭರತವೃದ್ಧ ( ಈ ಹೆಸರನ್ನು ಶಾರದಾತನಯನು ಭಾವಪ್ರಕಾಶನದಲ್ಲಿ ಉಲ್ಲೇಖಿಸುತ್ತಾನೆ), ಆದಿಭರತ ( ಈ ಹೆಸರನ್ನು ವೆಂಕಟಮುಖಿಯು ಬಳಸುತ್ತಾನೆ. ಉಪಲಬ್ಧನಾಟ್ಯಶಾಸ್ತ್ರದ ಹಸ್ತಪ್ರತಿಗಳು ಕೆಲವೆಡೆ ಈ ಹೆಸರಿನಲ್ಲಿಯೂ ದೊರೆಯುತ್ತವೆ) ಮತ್ತು ಭರತ ಎಂದೂ ಒಂದು ಸಾಂಪ್ರದಾಯಿಕ ನಂಬುಗೆಯಿದೆ. ಅಲ್ಲದೆ ಭರತ = ವ್ಯಕ್ತಿ, ಭರತ = ವೃತ್ತಿ (ಅಥವಾ ಇವುಗಳ ವಿಪರೀತ), ಭರತ=ಕಲೆ (ಪ್ರಯೋಗ ಮತ್ತು / ಅಥವಾ ಶಾಸ್ತ್ರ) ಎಂಬ ಅರ್ಥಸರಣಿಯನ್ನು ಮುಂದುವರಿಸಿ ನಾಟ್ಯಸಂಬಂಧಿತವಾದ ಶಾಸ್ತ್ರಗ್ರಂಥ ಎಂಬ ಬಳಕೆಯೂ ಕಂಡುಬರುತ್ತದೆ; ಇವುಗಳಲ್ಲಿ ಕರ್ತೃವಿನ ಹೆಸರು ವಿಶೇಷಣವಾಗಿಯೂ ಕ್ರಮವಾಗಿ ಭರತಶಬ್ದವು ವಿಶೇಷ್ಯವಾಗಿಯೂ ಇರುತ್ತದೆ. ಮತಂಗನ ವಿಷಯದಲ್ಲಿ ಈ ಮಾತುಗಳು ಅನ್ವಯಿಸುವುದಿಲ್ಲ. ಭರತನು ಆತ್ಮೋಲ್ಲೇಖವನ್ನು ಪ್ರಥಮೈಕಪುರುಷದಲ್ಲಿ ಮಾಡಿಕೊಳ್ಳುತ್ತಾನಾದರೂ ತನ್ನನ್ನು ಮುನಿಯೆಂದು ಕರೆದುಕೊಳ್ಳುವುದಿಲ್ಲ. ಮತಂಗನು ಭರತನನ್ನೂ (ಬಹುಶಃ) ಕಾಶ್ಯಪನನ್ನೂ ಮುನಿಯೆಂದು ಉಲ್ಲೇಖಿಸುವುದಲ್ಲದೆ ತನ್ನನ್ನೂ ಮುನಿಯೆಂದೇ ಕರೆದುಕೊಂಡಿದ್ದಾನೆ ಮತ್ತು ಪ್ರಥಮೈಕವಚನದಲ್ಲಿ ಆತ್ಮೋಲ್ಲೇಖವನ್ನು ಮಾಡಿಕೊಂಡಿದ್ದಾನೆ.

ಭರತನೂ ಮತಂಗನೂ ಬಹುಶ್ರುತರು. ಅವರ ಪ್ರತಿಭೆಯು ಅಂತರಶಾಸ್ತ್ರೀಯವಾಗಿಯೂ ಶಾಸ್ತ್ರಾಂತರೀಯವಾಗಿಯೂ ವ್ಯಾಪಿಸಿದೆ. ಅವರು ತಮ್ಮ ಬಹುಮುಖಪಾಂಡಿತ್ಯದ ಪ್ರಯೋಜನಗಳನ್ನು ಕ್ರಮವಾಗಿ ನಾಟ್ಯಶಾಸ್ತ್ರಕ್ಕೂ ಸಂಗೀತಶಾಸ್ತ್ರಕ್ಕೂ ತಂದುಕೊಟ್ಟವರು. ನಾಟ್ಯ ಮತ್ತು ಸಂಗೀತಕ್ಷೇತ್ರಗಳಲ್ಲಿ ಇದಕ್ಕಿಂತ ಮುಂಚೆ ಇಂತಹ ಗ್ರಂಥಗಳು ಇದ್ದವೋ ಇಲ್ಲವೋ ತಿಳಿಯದು. ಇಬ್ಬರೂ ತಮ್ಮ ತಮ್ಮ ಕಲೆಯನ್ನು ಅಖಂಡವನ್ನಾಗಿ, ಸಮಗ್ರವಾಗಿ ದರ್ಶಿಸಿದವರು. ಅದರ ಒಳಗಿನ ವಿವರಗಳಲ್ಲಿ ಸೂಕ್ಷ್ಮದೃಷ್ಟಿ ಮತ್ತು ಅಂತರ್ದೃಷ್ಟಿಗಳಿಂದಲೂ ಹೊರಗಿನ ವಿವರಗಳಲ್ಲಿ ವ್ಯಾಪಕದೃಷ್ಟಿಯಿಂದಲೂ ಕಲೆಯ ಒಳಗುಹೊರಗುಗಳನ್ನು ಬೆಳಕಿನಿಂದ ತುಂಬಿದವರು. ಇಬ್ಬರೂ ಆಯಾ ಜ್ಞಾನಕ್ಷೇತ್ರದಲ್ಲಿ ಹೊಸತನ್ನು ಹೇಳಿದರೂ ಅದನ್ನು ಪರಂಪರೆಯ ಚೌಕಟ್ಟಿನಲ್ಲಿ, ಸನಾತನಸಂಸ್ಕೃತಿಯ ಅಂಗವೆಂದು ಚಿತ್ರಿಸಿದವರು. ಇದಕ್ಕಾಗಿ ವೇದೋಪವಸತಿಯೆಂಬ ಏಕರೂಪದ ಕುಂಚವನ್ನು ಇಬ್ಬರೂ ಬಳಸಿದರು. ಅದುದರಿಂದ ಇಬ್ಬರೂ ಆಯಾ ಶಾಸ್ತ್ರಗಳ ಪ್ರವರ್ತಕರೂ ಸನಾತನಧರ್ಮದ ದ್ರಷ್ಟಾರರೂ ಒಮ್ಮೆಗೇ ಆದರು. ಭಾರತೀಯ ಸಂಸ್ಕೃತಿಯು ಜೀವನವನ್ನು ಅಖಂಡೈಕದೃಷ್ಟಿಯಿಂದ ಆಲಿಂಗಿಸಿ ಅದರ ಹಲವು ಕ್ಷೇತ್ರಗಳಲ್ಲಿ ಅಂಗ-ಅಂಗಿ ಸಂಬಂಧಗಳನ್ನು ಏರ್ಪಡಿಸಿ ಸಮರಸಗೊಳಿಸುತ್ತದೆ; ಬಹಿರ್ದೃಷ್ಟಿಯಿಂದ ದೊರೆಯುವ ವಿಶ್ಲೇಷಣವನ್ನು ಅಂತರ್ದೃಷ್ಟಿಯಿಂದ ಲಭಿಸುವ ಸಂಶ್ಲೇಷಣದಿಂದ ಏಕತ್ರಗೊಳಿಸಿ ಅಖಂಡಗೊಳಿಸುವ ಮೂರನೆಯ ಕಣ್ಣು ಈ ಸಂಸ್ಕೃತಿಯ ವೈಶಿಷ್ಟ್ಯ; ಇದು ಪ್ರಾಚೀನಭಾರತದಲ್ಲಿ ಪದೇ ಪದೇ ಕಂಡುಬರುತ್ತದೆ. ಭರತಮತಂಗರು ನಾಟ್ಯ ಮತ್ತು ಸಂಗೀತ ಶಾಸ್ತ್ರಗಳಲ್ಲಿ ಇದಕ್ಕೆ ನಿದರ್ಶನರು.