xiii. ಕುಂಭಕರ್ಣ

ಕುಂಭಕರ್ಣನು ‘ಸೂರ್ಯವಂಶ’ಕ್ಕೆ ಸೇರಿದವನು; ಮೇವಾಡವನ್ನಾಳಿದ ಸುದೀರ್ಘ ರಾಜಸಂತತಿಯಲ್ಲಿ ಮೋಕಲರಾಜ ಮತ್ತು ಸೌಭಾಗ್ಯದೇವಿಯರ ಮಗ. ಮೋಕಲನ ಸೋದರರಾದ ಚಾಚಾ ಮತ್ತು ಮೇರರು ಅವನನ್ನು ಮೋಸದಿಂದ ಕ್ರಿ.ಶ. ೧೪೩೩ರಲ್ಲಿ ಕೊಂದಾಗ ಮೋಕಲನ ಏಳು ಮಕ್ಕಳ ಪೈಕಿ ಜ್ಯೇಷ್ಠನಾದ ಕುಂಭಕರ್ಣನು ಮೇವಾಡದ ರಾಜನಾಗಿ ಅಭಿಷಿಕ್ತನಾಗಿ ೧೪೩೩ ರಿಂದ ೧೪೬೮ರವರೆಗೆ ಚಿತ್ತೂರು ರಾಜಧಾನಿಯಿಂದ ಆಳ್ವಿಕೆ ನಡೆಸಿದನು. ಅವನು ಕುಂಭಲಗಢದ ಕುಂಭಸ್ವಾಮಿಯ ಗುಡಿಯ ಸಮೀಪದಲ್ಲಿದ್ದ ಒಂದು ಕೆರೆಯ ದಂಡೆಯ ಮೇಲೆ ಮತಿವಿಭ್ರದಿಂದ ಕುಳಿತಿರುವಾಗ ಅವನ ಹಿರಿಯ ಮಗ ಉದಯಕಿರಣನು ಅಧಿಕಾರಲಾಲಸೆಯಿಂದ ಅವನನ್ನು ೧೮೬೮ರಲ್ಲಿ ಹತ್ಯೆಮಾಡಿದಾಗ ಅವನ ಸುದೀರ್ಘವೂ ಸ್ಮರಣೀಯವೂ ಆದ ಆಳ್ವಿಕೆಯು ಮುಗಿಯಿತು.

ಕುಂಭಕರ್ಣನ ವೈಯಕ್ತಿಕ ಜೀವನದ ಬಗೆಗೆ ವಿವರಗಳು ಹೆಚ್ಚಾಗಿ ದೊರೆಯುವುದಿಲ್ಲ; ಅವನ ರಾಜಕೀಯ ಯಶಸ್ಸುಗಳನ್ನು ಹೀಗೆ ಪಟ್ಟಿಮಾಡಬಹುದು: i. ಮಾಳವದ ಸುಲ್ತಾನ್ ಮಹಮ್ಮದ್ ಖಿಲ್ಜಿ(I)ಯನ್ನು ಪರಾಭವಗೊಳಿಸಿ (೧೪೩೭-೩೮) ಕೈಸೆರೆಹಿಡಿದಿದ್ದು; ಆರು ತಿಂಗಳ ನಂತರ ಅವನನ್ನು ಬಿಡುಗಡೆಮಾಡಿದರೂ ಸುಲ್ತಾನನು ಪ್ರತೀಕಾರಕ್ಕಾಗಿ ಕುಂಭಕರ್ಣನ ಮೇಲೆ ಮತ್ತೆ ಮತ್ತೆ ದಂಡೆತ್ತಿ ಬರುತ್ತಿದ್ದನು. ii. ಅಬೂ ಮತ್ತು ಹಾಡಾವತಿಯನ್ನು ಗೆದ್ದುಕೊಂಡಿದ್ದು. iii. ಬೂಂದೀ ಅಂಬರ್ ಮತ್ತು ರಣತಂಭೋರ್ಗಳನ್ನು ಗೆದ್ದು ವಶಪಡಿಸಿಕೊಂಡಿದ್ದು. iv. ನಾಗಪುರದ ಮಹಮ್ಮದೀಯ ದೊರೆಗಳನ್ನು ಸೋಲಿಸಿದ್ದು. v. ಮಾಳವದ ಮಹಮ್ಮದ್ ಖಿಲ್ಜಿಯನ್ನು ಮತ್ತೆ ಮತ್ತೆ (೧೪೩೩, ೧೪೪೬, ೧೪೫೪) ಸೋಲಿಸಿ ಹಿಮ್ಮೆಟ್ಟಿಸಿದ್ದು. vi. ಮಾಳವರ ಮತ್ತು ಗುಜರಾತಿನ ಸುಲ್ತಾನರ ಸಂಯುಕ್ತದಾಳಿಯನ್ನು ವಿಫಲಗೊಳಿಸಿದ್ದು (೧೪೫೬). vii. ನಾಗಪುರದ ಖಾನನು ಮುಸ್ಲಿಮರನ್ನು ಗೋಹತ್ಯೆಗೆ ಪ್ರೇರಿಸಿದಾಗ ಅವನನ್ನು ತೀವ್ರವಾಗಿ ಶಿಕ್ಷಿಸಿದ್ದು (೧೪೫೮). viii. ಕೆಲವು ತಿಂಗಳ ನಂತರ ಗುಜರಾತಿನ ಸುಲ್ತಾನನನ್ನು ಸಿರೋಹಿಯಿಂದ ಓಡಿಸಿದ್ದು. ಮುಸ್ಲಿಮರ ಮೇಲಿನ ಅವನ ಪರಾಕ್ರಮ ಮತ್ತು ಶೌರ್ಯಗಳಿಗಾಗಿ ಅವನಿಗೆ, ದೆಹಲಿಯ ಮತ್ತು ಗುಜರಾತಿನ ಸುಲ್ತಾನರಿಂದ ‘ಹಿಂದೂ ಸುರತ್ರಾಣ ‘ (=ಹಿಂದೂ ಸುಲ್ತಾನ) ಎಂಬ ಪ್ರಶಸ್ತಿಯು ಲಭಿಸಿತು.

ಕುಂಭಕರ್ಣನು ವಿಪುಲವಾಗಿ ಗ್ರಂಥರಚನೆ ಮಾಡಿದ್ದಾನೆ. ಅವನ ಗ್ರಂಥಗಳ ಪೈಕಿ ಅತ್ಯಂತ ವಿಸ್ತಾರವೂ ಪ್ರಮುಖವೂ ಆದುದು ಸಂಗೀತರಾಜ. ಅವನು ಈ ಇತರ ಗ್ರಂಥಗಳನ್ನೂ ಅವನು ರಚಿಸಿದ್ದಾನೆ. ೧. ಜಯದೇವನ ಗೀತಗೋವಿಂದಕ್ಕೆ ರಸಿಕಪ್ರಿಯಾ ಎಂಬ ವ್ಯಾಖ್ಯೆ. ೨. ಬಾಣಭಟ್ಟನ ಚಂಡೀಶತಕಕ್ಕೆ ವ್ಯಾಖ್ಯೆ. ೩. ಸಂಗೀತರತ್ನಾಕರವಾಖ್ಯೆ(=ಸಂಗೀತಕ್ರಮದೀಪಿಕಾ?) ೪. ಏಕಲಿಂಗಾಶ್ರಯ(?) ೫. ಗೀತಗೋವಿಂದವೆಂಬ ಸ್ವತಂತ್ರವೂ ಜಯದೇವನ ಕಾವ್ಯದಿಂದ ಭಿನ್ನವೂ ಆದ ಕಾವ್ಯ. ಇದರ ಪ್ರಬಂಧಗಳಿಗೆ ಸೂಡಪ್ರಬಂಧಗಳೆಂಬ ಹೆಸರಿದೆ. ೬. ಸಂಕ್ಷೇಪ ಕಾಮಶಾಸ್ತ್ರ. ೭. ಕುಂಭಕರ್ಣನು ಸ್ಥಾಪಿಸಿದ ಕೀರ್ತಿಸ್ತಂಭದ ವಾಸ್ತುಶಿಲ್ಪವನ್ನು ಕುರಿತು ಜಯ ಮತ್ತು ಅಪರಾಜಿತ ಪೃಚ್ಛವನ್ನು ಹೋಲುವ ವಾಸ್ತಶಾಸ್ತ್ರವನ್ನು ಶಾಸನಗಳಲ್ಲಿ ಕೆತ್ತಿಸಿದ್ದಾನೆ. ೮. ಚತುರ್ಭಾಷಾರೂಪಕ : ಸಂಸ್ಕೃತ, ಮಹಾರಾಷ್ಟ್ರ ತೆಲುಗು ಮತ್ತು ಕನ್ನಡಗಳಲ್ಲಿ ರಚಿಸಿರುವ ನಾಟಕರಾಜಚತುಷ್ಟಯ. ೯. ಮೇವಾರೀ ಭಾಷೆಯಲ್ಲಿ ಕೆಲವು ಕ್ಷುದ್ರಕಾವ್ಯಗಳು ೧೦. ಜಯದೇವನ ಗೀತಗೋವಿಂದದ ಮೇಲೆ ಮೇವಾರೀ ಭಾಷೆಯಲ್ಲಿ ವ್ಯಾಖ್ಯೆ ೧೧. ಏಕಲಿಂಗಮಾಹಾತ್ಮ್ಯದಲ್ಲಿ ಸಂಕಲಿಸಿರುವ ಕಾವ್ಯಗೇಯ ಪ್ರಬಂಧಗಳು.

ಸಂಗೀತರಾಜವು ಒಂದು ಬೃಹದ್ ಗ್ರಂಥ ಪಾಠ್ಯ -, ಗೀತ -, ವಾದ್ಯ, ನೃತ್ಯ – ಮತ್ತು ರಸ-ರತ್ನಕೋಶಗಳೆಂಬ ಐದು ಅಧ್ಯಾಯಗಳಲ್ಲಿ ನಿರ್ಮಿತವಾಗಿದೆ. ಇವೆಲ್ಲವೂ ಒಟ್ಟು ೨೦ ಉಲ್ಲಾಸಗಳಲ್ಲಿ ವಿಭಾಗಗೊಂಡು ಇವು ಪುನಃ ಒಟ್ಟು ೮೦ ಪರೀಕ್ಷಣ ಖಂಡಗಳಲ್ಲಿ ಅಡಕವಾಗಿವೆ. ಗ್ರಂಥವು ೧೬೦೦೦ ಶ್ಲೋಕಗಳಷ್ಟು ವಿಸ್ತಾರವಾಗಿದೆ. ಇಷ್ಟು ಬೃಹತ್ತಾದ ಬೇರೆ ಸಂಗೀತಶಾಸ್ತ್ರಗ್ರಂಥವು ದೊರೆಯುವುದಿಲ್ಲ. ಆದರೆ ತಾಲವನ್ನು ವಾದ್ಯರತ್ನಕೋಶದಲ್ಲಿಯೇ ಸೇರಿಸಿ ಅದನ್ನು ಪ್ರತ್ಯೇಕ ರತ್ನಕೋಶದಲ್ಲಿ ವಿವರಿಸದಿರುವುದು ಗಮನಾರ್ಹವಾಗಿದೆ.

ಸಂಗೀತರಾಜವು ಪೂರ್ವಪ್ರಾಮಾಣಿಕರ ಪೈಕಿ ಕೆಳಕಂಡ ಗ್ರಂಥಗಳನ್ನೂ ಗ್ರಂಥಕರ್ತರನ್ನೂ ಉಲ್ಲೇಖಿಸಿದೆ- (ಉಲ್ಲೇಖಗಳ ಸಂಖ್ಯೆಯನ್ನು ಕಂಸಗಳಲ್ಲಿ, ತೋರಿಸಿದೆ): ಅಥರ್ವವೇ(೧) ಅಭಿನವಗುಪ್ತ (೨) ಅರ್ಜನ (೩) ಅಶ್ವತರ (೨), ಆಗಮ (೧), ಆಚಾರ್ಯ (ಭರತ-?) (೧೨), ಉಪವೇದ (೧), ಋಗ್ವೇದ (೧), ಕಂಬಲ (೩), ಕಶ್ಯಪ (೮), ಕೋಹಲ (೩), ಕ್ಷೇತ್ರರಾಜ (೨), ಗೀತಗೋವಿಂದ (೧), ಗೌರಿ (೧), ಚಂದ್ರಶೇಖರ (೧), ತುಂಬುರು (೧), ದತ್ತಿಲ (೧೪), ದುರ್ಗಾಶಕ್ತಿ (೬), ಧನಂಜಯ (೧), ಧರ್ಮಶಾಸ್ತ್ರ (೨), ನಂದಿಕೇಶ್ವರ (೨, ನಂದಿ, ೨), ನಾಟಕಶಾಸ್ತ್ರ (೧), ನಾಟ್ಯನಿಗಮ (=ನಾಟ್ಯವೇದ=ನಾಟ್ಯಶಾಸ್ತ್ರ?೧), ನಾಟ್ಯಶಾಸ್ತ್ರ (೧), ನಾಟ್ಯಾಗಮ (೧), ನಾರದ (೩), ನಾರದೀಯಶಿಕ್ಷಾ (೧), ಶಾರ್ಙ್ಗದೇವ (೭), ನಿಃಶಂಕ (೧), ಪಂಚಮವೇದ(=ನಾಟ್ಯಶಾಸ್ತ್ರ ೧), ಪಾರ್ವತೀ (೧), ಬೃಹದ್ದೇಶೀ (೬), ಭರತ (೩೮, ಮುನಿ ೧೭), ಭೋಜರಾಜ (೨), ಮತಂಗ (೪೨), ಮನು (೧), ಮರುತ್ಸೂನು (=ಆಂಜನೇಯ, (೧) ಮಹೇಂದ್ರ (೧), ಮಾತೃಗುಪ್ತ (೧), ಮುನಿತ್ರಯ (೩), ಯಾಷ್ಟಿಕ (೩೪), ಮುನಿಪುಂಗವ (೧), ಯಜುರ್ವೇದ (೧), ಯಾಜ್ಞವಲ್ಕ್ಯ (೨), ಯೋಗಿಪ್ರವರ (=ನಾರದ?೧), ರಕ್ಷೋರಾಜ (=ರಾವಣ?೧) ಶಾರ್ಙ್ಗದೇವ (೭), ರತ್ನಾಕರಕೃತ್ (೧), ರತ್ನಾಕರ (೧), ವಾಯು (೧), -ವಾಯುಪುರಾಣ (೨), ವಿಶಾಖಿಲ (೫), ವಿಶ್ವಾವಸು (೧), ವೃದ್ಧಕಶ್ಯಪ (೧), ವೇದ (೬), ಶಾರ್ದೂಲ (೭), ಶಿವ (೧). ಇವುಗಳ ಪೈಕಿ ಭರತ, ಮತಂಗ ಮತ್ತು ಯಾಷ್ಟಿಕರಿಂದ ಮಾಡಿಕೊಂಡ ಉದ್ಧೃತಿಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಗಮನಿಸಬಹುದು.

ಸಂಗೀತರಾಜದ ಕರ್ತೃವನ್ನು ಕಾಲಸೇನ, ಕಾಲುಜಿ ಇತ್ಯಾದಿಯಾಗಿ ಗ್ರಂಥದ ಹಲವೆಡೆಗಳಲ್ಲಿ ಹೇಳಿರುವುದು ಸ್ವಲ್ಪ ಗೊಂದಲವನ್ನುಂಟುಮಾಡಿದೆ.

xiv. ಶ್ರೀಕಂಠ

ಶ್ರೀಕಂಠನು ತನ್ನನ್ನು ಉತ್ತಮಕುಲದಲ್ಲಿ ಜನಿಸಿದ ಬ್ರಾಹ್ಮಣ, ಮಂಗಳನ ಮಗ, ಸಕಲಕಲೆಗಳಲ್ಲಿಯೂ ವಿಶೇಷವಾಗಿ ಸಂಗೀತ ನೃತ್ಯಗಳಲ್ಲಿ ಪಂಡಿತ ಎಂದು ವರ್ಣಿಸಿಕೊಳ್ಳುತ್ತಾನೆ. ಅವನು ಕನ್ನಡಿಗನಿರಬಹುದೆಂಬುದನ್ನು ಬೇರೆಡೆ (ವಿಮರ್ಶಾತ್ಮಕಕ ಮುನ್ನುಡಿ, ನರ್ತನನಿರ್ಣಯ) ಸೂಚಿಸಿದ್ದೇನೆ. ಅವನು ಸೌರಾಷ್ಟ್ರದಲ್ಲಿ ದ್ವಾರಕೆಯ ಸಮೀಪದಲ್ಲಿದ್ದ ನವನಗರವನ್ನು ಆಳಿದ ಜಾಂವಶದ ಶತ್ರುಶಲ್ಯ (=ಸತ್ತರ್‌ಸೆಲ್)ನ (ಕ್ರಿ.ಶ. ೧೫೬೯-೧೬೦೮) ಆಸ್ಥಾನ ವಿದ್ವಾಂಸನಾಗಿದ್ದನು. ಆಗಿನ ಅನೇಕ ಮಹಾಪಂಡಿತರಲ್ಲಿ ಅನೇಕ ಶಾಸ್ತ್ರಗಳನ್ನು ಕಲಿತು ಬಹುಶ್ರುತನಾಗಿದ್ದನು. ಹೀಗೆ ರೂಪದೇವ, ಪೂರ್ಣಾನಂದ ಕವಿಗಳನ್ನು ಗುರುಗಳೆಂದು ಸ್ಮರಿಸುತ್ತಾನೆ. ಸಂಗೀತ ನೃತ್ಯ ಶಾಸ್ತ್ರಗಳಲ್ಲಿ ಕನ್ನಡಿಗ ಪಂಡರೀಕವಿಟ್ಠಲನನ್ನು ಹಲವೆಡೆ ಗುರುವೆಂದು ಸಂಮಾನಿಸಿ ಉಲ್ಲೇಖಿಸುತ್ತಾನೆ.

ಶ್ರೀಕಂಠನು ರಸಕೌಮುದಿಯನ್ನು ರಚಿಸಿದ್ದಾನೆ. ಇದರಲ್ಲಿ ಹತ್ತು ಅಧ್ಯಾಯಗಳಿದ್ದು ಮೊದಲನೆಯ ಐದು ಗೀತವಾದ್ಯನೃತ್ತಗಳನ್ನೂ ಉಳಿದ ಐದು ರಸ ಇತ್ಯಾದಿಗಳನ್ನೂ ನಿರೂಪಿಸುತ್ತವೆ. ಹೀಗೆ ಮೊದಲನೆಯ ಅಧ್ಯಾಯದಲ್ಲಿ ನಾದ, ಶ್ರುತಿ, ಸ್ವರ, ಗ್ರಾಮ, ಮೂರ್ಛನಾ, ತಾನ, ಅಲಂಕಾರಗಳ ವರ್ಣನೆಯಿದೆ. ಎರಡನೆಯದರಲ್ಲಿ ವೀಣೆ ಮತ್ತು ರಾಗಗಳನ್ನೂ ಆಲಾಪವನ್ನೂ ನಿರೂಪಿಸಿದೆ. ಮೂರನೆಯದರಲ್ಲಿ ಪ್ರಬಂಧಗಳನ್ನು ವಿವರಿಸಲಾಗಿದೆ. ನಾಲ್ಕನೆಯದು ಚತುರ್ವಿಧ ವಾದ್ಯಗಳ ನಿರ್ಮಾಣ., ವಾದನ ಇತ್ಯಾದಿಗಳನ್ನು ವಿವೇಚಿಸುತ್ತದೆ. ಐದನೆಯ ಅಧ್ಯಾಯದಲ್ಲಿ ನರ್ತನದ ವಿವರಗಳಿವೆ. ಆರನೆಯದರಲ್ಲಿ ನಾಟ್ಯಪ್ರಶಂಸೆ, ಏಳನೆಯದರಲ್ಲಿ ರಸಸ್ವರೂಪ, ಶೃಂಗಾರ ಹಾಸ್ಯಾದಿರಸಗಳು, ಎಂಟನೆಯದರಲ್ಲಿ ಸ್ನಾನವೇ ಮೊದಲಾದ ಹದಿನಾರು ಉಪಚಾರಗಳು ಮತ್ತು ಅಲಂಕರಣವಿಧಾನಗಳು, ಒಂಭತ್ತನೆಯದರಲ್ಲಿ ನರ್ತಕೀಕೃತ್ಯ, ಋತುಗಳ ವರ್ಣನೆ, ಹತ್ತನೆಯದರಲ್ಲಿ ರಾಜನ ದಿನಕೃತ್ಯಗಳು, ಅವುಗಳಲ್ಲಿ ಗೀತನೃತ್ತಗಳ ಪಾತ್ರ ಮತ್ತಿತರ ಪ್ರಕೀರ್ಣವಿಷಯಗಳು – ಇವುಗಳನ್ನು ಹೇಳಿದೆ.

ಶ್ರೀಕಂಠನು ಅರ್ಜುನ, ಕಲ್ಲಿನಾಥ, ಕಶ್ಯಪ, ಕೋಹಲ, ತಂಡು, ದಂತಿಲ, ನಂದಿಕೇಶ್ವರ, ನಾರದ, ಪಂಡರೀಕವಿಟ್ಟಲ, ಭರತ, ಮತಂಗ, ವಿಶ್ವಾವಸು, ವಾಯು, ವಾಯುಸುತ, (=ಆಂಜನೇಯ), (ದುರ್ಗಾ)ಶಕ್ತಿ, ಲೋಕೇಶ ಎಂಬ ಪೂರ್ವಾಚಾರ್ಯರುಗಳನ್ನು ಸ್ಮರಿಸುತ್ತಾನೆ. ಇವರುಗಳ ಪೈಕಿ ಮತಂಗನನ್ನು ಮೂರ್ಛನಾಲಕ್ಷಣ, ಮೂರ್ಛನಾಚತುರ್ವಿಧಗಳು, ಪ್ರಬಂಧ ಲಕ್ಷಣಕ್ಕೆ ಸಾಮಾನ್ಯವಾಗಿಯೂ ಏಲಾಪಪ್ರಬಂಧಲಕ್ಷಣಕ್ಕೆ ವಿಶೇಷವಾಗಿಯೂ ಪ್ರಾಮಾಣಿಕ, ವಾದ್ಯಲಕ್ಷಣ, ಪಾಣ್ಯಂತರ ನಿಕುಟ್ಟಕವೆಂಬ ಹಸ್ತಪಾಟ, ಕ್ರಿಯಾ ಎಂಬ ತಾಲಪ್ರಾಣ, ವಂಶವಾದ್ಯ ಲಕ್ಷಣ, ಅಂಚಿತವೆಂಬ ಪಾದಲಕ್ಷಣ-ಇವುಗಳಿಗಾಗಿ ಉಲ್ಲೇಖಿಸುತ್ತಾನೆ.

xv. ಸೋಮನಾಥ

ಸೋಮನಾಥನು ಮುದ್ಗಲಪಂಡಿತನ ಮಗ, ಮೇಂಗನಾಥನ ಮೊಮ್ಮಗ, ಸಕಲಕಲಾ ಎಂಬ ವಂಶದವನು; ತಾನು ಎಲ್ಲಿಯವನೆಂದು ಹೇಳುವುದಿಲ್ಲ. ಅವನು ಬಹುಶ್ರುತನಾದ ವಿದ್ಯಾವಂತ; ರಾಗವಿಬೋಧವನ್ನು ತನ್ನದೇ ಆದ ವಿವೇಕ ಎಂಬ ವ್ಯಾಖ್ಯಾನದೊಡನೆ ಕ್ರಿ.ಶ. ೧೬೦೯ರಲ್ಲಿ ರಚಿಸಿದ್ದಾನೆ. ತನ್ನ ಗ್ರಂಥದಲ್ಲಿ ಪರ್ಶಿಯನ್ ಸಂಗೀತದ ರಾಗಗಳನ್ನೂ ಜೈತಶ್ರೀ, ಚೈತೀ, ಧನಾಶ್ರೀ, ದೇಶಿಕಾರ, ಭೂಪಾಲೀ,ಕಾಮೋದೀ, ಅಡ್ಡಾಣ, ಹಮ್ಮೀರ, ಕೇದಾರ, ವಿಹಂಗಡಾ, ವಿಭಾಸ, ಮಾರವೀ, ಚೈತೀಗೌಡೀ, ಮಾಲಾಶ್ರೀ, ಸೋರಠೀ, ಹುಸೇನೀ ಮುಂತಾದ ಹಿಂದೂಸ್ಥಾನೀ ಸಂಗೀತಪದ್ಧತಿಯ ರಾಗಗಳನ್ನೂ ಹೇಳುತ್ತಾನೆ; ಕರ್ನಾಟಕಸಂಗೀತಪದ್ಧತಿಯ ಸ್ವರನಾಮ, ಸ್ವರವಿಕೃತಿ, ಶುದ್ಧಮೇಲ, ಮಧ್ಯಮೇಲ ಇತ್ಯಾದಿ ಭೇದಗಳನ್ನು ವಿವರಿಸುತ್ತಾನೆ. ಆದರೆ ವೀಣಾಮೇಲ, ರಾಗಮೇಲಗಳನ್ನು ‘ಥಾಟ ಇತಿ ಭಾಷಾಯಾಂ’ ಎಂದು ಸಮೀಕರಿಸುತ್ತಾನೆ ; ವೀಣೆಯ ಕಕುಭಕ್ಕೆ ‘ಕಹೋ’ ತುಂಬಕ್ಕೆ ‘ಚುಂಬಕೀ’, ಜೀವಾಕ್ಕೆ ‘ಝಾರಾ’, (=ದೇಶಭಾಷೆಯಲ್ಲಿ-) ‘ಜಿಹ್ವಾಲೀ’ ಸರ್ವರಾಗಮೇಲವೀಣೆಗೆ ‘ವಜ್ರಥಾಟ್’ ಎಂಬ ದೇಶಭಾಷೆಯ ಪರ್ಯಾಯನಾಮಗಳನ್ನು ಬಳಸುತ್ತಾನೆ. ಔತ್ತರೇಯ ಲಾಕ್ಷಣಿಕರಲ್ಲಿ ಕುಂಭಕರ್ಣನನ್ನೂ ದಾಕ್ಷಿಣಾತ್ಯದಲ್ಲಿ ಹೆಸರುಹೇಳದೆ ರಾಮಾಮಾತ್ಯನನ್ನೂ ಉದ್ಧರಿಸಿಕೊಳ್ಳುತ್ತಾನೆ. ಆದುದರಿಂದ ಕುನ್ಹನ್‌ರಾಜಾರವರು ಗ್ರಂಥಪೀಠಿಕೆಯಲ್ಲಿಯೂ ರಾಮಕೃಷ್ಣ ಕವಿಯು ಭರತಕೋಶದಲ್ಲಿಯೂ ಬರೆದಿರುವಂತೆ ಸೋಮನಾಥನು ಆಂಧ್ರಪ್ರದೇಶದ ವನಾಗಿರದೆ ಔತ್ತರೇಯನೆಂಬುದು ಸಂಭಾವ್ಯವಾಗಿದೆ.

ರಾಗವಿಬೋಧವು ಭಾರತೀಯ ಸಂಗೀತದ ರಾಗವನ್ನೂ ಅದಕ್ಕೆ ಉಪಕಾರಕವಾದ ಶ್ರುತಿಸ್ವರಾದಿಗಳನ್ನೂ ಮಾತ್ರ ವಿಷಯೀಕರಿಸಿಕೊಳ್ಳುತ್ತದೆ, ತಾಲ, ವಾದ್ಯ, ಪ್ರಬಂಧಗಳನ್ನೂ ನೃತ್ಯವನ್ನೂ ವರ್ಣಿಸುವುದಿಲ್ಲ. ಅದರಲ್ಲಿ ನಾದ, ಶ್ರುತಿ, ಸ್ವರ, ಗ್ರಾಮ, ಮೂರ್ಛನೆ, ತಾನಗಳು, ವೀಣಾಮೇಳ, ರಾಗಮೇಳ, ರಾಗಲಕ್ಷಣ ಮತ್ತು ಗಮಕಸೂಚನಾಸಹಿತವಾಗಿ ಸ್ವರಪಡಿಸಿದ ರಾಗಾಲಾಪ ಹಾಗೂ ರಾಗಧ್ಯಾನಮೂರ್ತಿ ಇವುಗಳನ್ನು ಒಳಗೊಂಡ ಐದು ‘ವಿವೇಕ’ಗಳಿವೆ. (ವ್ಯಾಖ್ಯಾನಕ್ಕೂ ವಿವೇಕವೆಂದೇ ಹೆಸರಿರುವುದನ್ನು ಇಲ್ಲಿ ನೆನೆಯಬಹುದು). ಈ ಗ್ರಂಥದಲ್ಲಿ ವಿಶೇಷಗಳೆಂದರೆ ಸ್ವರವಿಕೃತಿಪದ್ಧತಿ, ಅದನ್ನು ಅವಲಂಬಿಸುವ ೯೬೦ ಮೇಳಗಳ ಪ್ರಸ್ತಾರ, ಸಮಸಾಮಯಿಕವಾದ, ಅನ್ಯತ್ರ ದೊರೆಯದಿರುವ ವೀಣಾಮೇಳಗಳು, ಪರ್ಶಿಯನ್ ಸಂಗೀತದ ‘ಪರದ’ ಎಂಬ ರಾಗವಿಶೇಷಗಳಿಗೆ ಭಾರತೀಯ ಸಂಗೀತದಲ್ಲಿ ಸಮಾನವಾದ ರಾಗಗಳೂ, ರಾಗಗಳಿಗೂ ವೀಣೆಯ ಅಂಗಪ್ರತ್ಯಂಗಗಳಿಗೂ ದೇಶೀ ಪರ್ಯಾಯನಾಮಗಳು, ಸಂಜ್ಞಾನಿದೇಶಪೂರ್ವಕವಾದ ಗಮಕಗಳ ವಿವರಣೆ, ಮತ್ತು ಇವುಗಳನ್ನು ಉಪಯೋಗಿಸಿ ಸ್ವರಪಡಿಸಿ ಬರೆದ ರಾಗಾಲಾಪಗಳಿಗೆ ಧ್ಯಾನಶ್ಲೋಕಗಳಂತಿರುವ ರಾಗ ಮೂರ್ತೀಕರಣ ವಿವರಣಗಳು.

ಸೋಮನಾಥನು ಅನೇಕ ಶಾಸ್ತ್ರಗಳಲ್ಲಿ ಪಂಡಿತನೆಂದು ಈಗಾಗಲೇ ಹೇಳಿದೆ. ಇದು ಅವನು ಉಲ್ಲೇಖಿಸಿ ಉದ್ಧರಿಸುವ ಪೂರ್ವಾಚಾರ್ಯರುಗಳಿಂದಲೂ ಮತ್ತು ಪ್ರಾಮಾಣಿಕ ಆಕರಗಳಿಂದಲೂ ಸ್ಪಷ್ಟಪಡುತ್ತದೆ. ಇವನ್ನು ಹೀಗೆ ಪಟ್ಟಿಮಾಡಬಹುದು. ಅಮರಕೋಶ, ಪಾಣಿನೀಯ, ಅಷ್ಟಾಧ್ಯಾಯೀ, ಭವಭೂತಿಯ ಉತ್ತರರಾಮಚರಿತ, ಋಗ್ವೇದಸಂಹಿತಾ, ಉಮಾಪತಿಯ ಔಮಾಪತಂ, ಕಲ್ಲಿನಾಥನ ಸಂಗೀತರತ್ನಾಕರಕಲಾನಿಧಿ ವ್ಯಾಖ್ಯೆ, ಮಮ್ಮಟಕ ಕಾವ್ಯಪ್ರಕಾಶ, ರುದ್ರಟನ ಕಾವ್ಯಾಲಂಕಾರ, ವಾಮನನ ಕಾವ್ಯಾಲಂಕಾರಸೂತ್ರ, ಕೋಹಲ, ತೈತ್ತೀರಿಯಬ್ರಾಹ್ಮಣ, ಧಾತುಪಾಠ, ಭರತಮುನಿಯ ನಾಟ್ಯಶಾಸ್ತ್ರಂ, ಶ್ರೀಹರ್ಷನ ನೈಷಧ, ಪರಿಭಾಷಾಸೂತ್ರ, ಪೈಂಗಲ ಸೂತ್ರ, ಮತಂಗನ ಬೃಹದ್ದೇಶೀ, ಭಟ್ಟಿಕವಿಯ ಭಟ್ಟಿಕಾವ್ಯ, ಪತಂಜಲಿಯ ಮಾಹಾಭಾಷ್ಯ, ಕೈಯಟನ ಮಹಾಭಾಷ್ಯವ್ಯಾಖ್ಯಾಪ್ರದೀಪ, ಮಾಧವನ ಮಾಧವೀಯ ನಿಘಂಟು, ಯಾಜ್ಞವಲ್ಕ್ಯಸ್ಮೃತಿ, ರಾಗಾರ್ಣವ, ಕಾತ್ಯಾಯನನ ವಾರ್ತಿಕ, ಮಹೇಶ್ವರನ ವಿಶ್ವಪ್ರಕಾಶ, ಯಾದವನ ವೈಜಯಂತೀ, ಲಕ್ಷ್ಮಣಭಟ್ಟನ ಶಾರದಾತಿಲಕ, ಶಾರ್ಙ್ಗದೇವನ ಸಂಗೀತರತ್ನಾಕರ, ಕುಂಭಕರ್ಣನ ಸಂಗೀತರಾಜ, ಪಾರ್ಶ್ವದೇವನ ಸಂಗೀಸಮಯಸಾರ, ಭರ್ತೃಹರಿಯ ಸುಭಾಷಿತ ಶತಕತ್ರಯ, ಸ್ಕಾಂದಪುರಾಣ, ಸ್ಮೃತಿಗಳು ಮತ್ತು ಹನುಮಾನ್.

ಸೋಮನಾಥನು ಮತಂಗನನ್ನು ದೇಶೀ-ಮಾರ್ಗಭೇದ, ಪಂಚವಿಧನಾದ, ಶ್ರುತಿ ವೈವಿಧ್ಯ,ಲಕ್ಷ್ಯಲಕ್ಷಣ ಪರಿಹಾರ, ಸಂವಾದಿಲಕ್ಷಣ, ಮೂರ್ಛನಾತಾನಗಳಲ್ಲಿರುವ ವ್ಯತ್ಯಾಸ, ರಾಗಲಕ್ಷಣ, ದೇಶಜರಾಗಗಳು ಅನಂತವೂ ಅನಿಬದ್ಧವೂ ಆಗಿದೆ – ಎಂಬ ವಿಷಯಗಳಲ್ಲಿ ಉದ್ಧರಿಸುತ್ತಾನೆ.

xvi. ಗೋವಿಂದ ದೀಕ್ಷಿತ

ಗೋವಿಂದ ದೀಕ್ಷಿತನು ಹೊಯಸಣಿಗಕರ್ಣಾಟಕ ಬ್ರಾಹ್ಮಣ, ಋಗ್ವೇದದ ಆಶ್ವಲಾಯನ ಸೂತ್ರದ ಉಪಮನ್ಯು ವಸಿಷ್ಠಗೋತ್ರಕ್ಕೆ ಸೇರಿದವನು; ಅದ್ವೈತವಿದ್ಯಾಚಾರ್ಯನೆಂದೂ ಪದವಾಕ್ಯಪ್ರಮಾಣ ಪಾರಾವಾರಪಾರೀಣನೆಂದೂ ಪ್ರಸಿದ್ಧಪಡೆದು ಹಲವು ಯಜ್ಞಯಾಗಾದಿಗಳನ್ನು ಮಾಡಿ ದೀಕ್ಷಿತನಾದವನು. ಶಂಕರಾವತಾರನೆಂಬ ಅನ್ವರ್ಥ ಖ್ಯಾತಿಯನ್ನು ಪಡೆದಿದ್ದವನು. ಕರ್ನಾಟಕದ ಆರಗವೇಂಠೆಯ ಹೊನ್ನಾಳಿ ತಾಲ್ಲೂಕಿನ ಕುರುವ ಮತ್ತು / ಅಥವಾ ಶೃಂಗೇರಿಯಲ್ಲಿದ್ದು ವೇದ, ವೇದಾಂತಗಳು, ಷಡ್ದರ್ಶನಗಳು, ಶ್ರೌತವಿದ್ಯೆ, ಧರ್ಮಶಾಸ್ತ್ರ ಜ್ಯೋತಿಷ, ಸಾಹಿತ್ಯ, ಸಂಗೀತ ಮುಂತಾದ ಹತ್ತು ಹಲವು ಶಾಸ್ತ್ರಗಳಲ್ಲಿ ನಿಸ್ಸೀಮ ಪಂಡಿತನಾಗಿದ್ದು ಗಾಯತ್ರಿಯ ಉಪಾಸನೆಯಿಂದ ಪವಾಡಪುರುಷನಾಗಿದ್ದನು. ತನ್ನ ಆಶ್ರಿತನಾದ ಚೆವ್ವಪ್ಪನಾಯಕನನ್ನು ಕರೆದುಕೊಂಡು ವಿಜಯನಗರಕ್ಕೆ ಹೋಗಿ, ಅಲ್ಲಿ ಅಚ್ಯುತರಾಯನ ರಾಣಿಯ ತಂಗಿ ಮೂರ್ತ್ಯಂಬಾಳನ್ನು ಅವನಿಗೆ ವಿವಾಹ ಮಾಡಿಸಿ ಅವನಿಗೆ ತಂಜಾವೂರು ರಾಜತ್ವವನ್ನು ಏರ್ಪಡಿಸಿ, ತಂಜಾವೂರು ನಾಯಕರಾಜಸಂತತಿಯ ಸ್ಥಾಪನೆಗೆ ನೆರವಾದನು. ಅವನು ಪ್ರಧಾನಮಂತ್ರಿತ್ವವನ್ನು ವಹಿಸಿಕೊಂಡು ಮೂರು ನಾಯಕದೊರೆಗಳ ಕುಲಪುರೋಹಿತನೂ ಪ್ರಧಾನಿಯೂ ಆಗಿ ತಂಜಾವೂರನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಿ ಅದರ ಸ್ವರ್ಣಯುಗಕ್ಕೆ ಕಾರಣನಾದನು. ಅವನು ಜ್ಯೋತಿಷಶಾಸ್ತ್ರ, ತಿರುವೈಯಾರುಸ್ಥಲಪುರಾಣ, ಇತ್ಯಾದಿ ಗ್ರಂಥಗಳನ್ನು ನಿರ್ಮಿಸಿದ್ದಾನೆ. ಅವನು ನೀಡಿದ ದಾನಗಳೂ ದತ್ತಿಗಳೂ ಇಡೀ ತಮಿಳುನಾಡಿನಲ್ಲಿ ಅವನ ಕೀರ್ತಿಗೆ ಸ್ಮಾರಕವಾಗಿ ಈಗಲೂ ಉಳಿದಿವೆ. ಪಟ್ಟೀಶ್ವರದ ಮಂಗಳಾಂಬಾ ಸದಿಯಲ್ಲಿ ತಪಸ್ಸುಮಾಡಿ ಗೋವಿಂದ ದೀಕ್ಷಿತನು ಮಹಾಸಿದ್ಧಿಯನ್ನು ಪಡೆದನು. ಈ ಸನ್ನಿಧಿಯಲ್ಲಿ ದೀಕ್ಷಿತನ ಹಾಗೂ ಅವನ ಪತ್ನಿಯ ವಿಗ್ರಹಗಳಿವೆ. ಗೋವಿಂದದೀಕ್ಷಿತನಿಗೆ ನಾರಾಯಣದೀಕ್ಷಿತನ ಮಗಳಾದ ನಾಗಾಂಬಾ (=ನಾಗಮ್ಮ) ಜೊತೆಯಲ್ಲಿ ವಿವಾಹವಾಯಿತು. ಅವನಿಗೆ ಯಜ್ಞನಾರಾಯಣ ದೀಕ್ಷಿತ, ವೆಂಕಟೇಶ್ವರ ದೀಕ್ಷಿತ(=ವೆಂಕಟಮುಖಿ), ಲಿಂಗಾಧ್ವರಿ ಮತ್ತಿತರ ಐದು ಗಂಡು ಮಕ್ಕಳೂ ಒಬ್ಬ ಹೆಣ್ಣು ಮಗಳೂ ಇದ್ದರು. ಇವರಲ್ಲಿ ಮೊದಲನೆಯ ಇಬ್ಬರೂ ಅತ್ಯಂತ ಖ್ಯಾತಿವೆತ್ತ ವಿದ್ವಾಂಸರೂ ಯಾಜ್ಞಿಕರೂ, ಬಹುಶ್ರುತರೂ, ಸಂಗೀತಸಂಪನ್ನರೂ ಆಗಿದ್ದು, ರಾಜಮನ್ನಣೆಗಳನ್ನು ಪಡೆದಿದ್ದರು. ಲಿಂಗಾಧ್ವರಿಯ ವಿಖ್ಯಾತ ಜ್ಯೋತಿಷ ವಿದ್ವಾಂಸನಾಗಿದ್ದು ಜ್ಯೋತಿಷಚಂದ್ರಿಕಾ ಎಂಬ ಗ್ರಂಥವನ್ನು ಬರೆದಿದ್ದಾನೆ.

ಗೋವಿಂದದೀಕ್ಷಿತನು ಸಂಗೀತಸುಧಾ ಎಂಬ ಸಂಗೀತ ಶಾಸ್ತ್ರಗ್ರಂಥವನ್ನು ತನ್ನ ಪ್ರಭುವಾದ ರಘುನಾಥನಾಯಕನಿಗೆ ಅಂಕಿತ ಮಾಡಿದ್ದಾನೆ. ಈ ಗ್ರಂಥವನ್ನು ಅವನ ಮಗನಾದ ವೆಂಕಟಮುಖಿಯು ಸಂಗೀತಸುಧಾನಿಧಿಯೆಂದು ಕರೆದು ‘ಅಸ್ಮತ್ ತಾತಕೃತ’ವೆಂದೂ ಘೋಷಿಸಿದ್ದಾನೆ. ಇದರಿಂದ ಅದು ಗೋವಿಂದದೀಕ್ಷಿತನದೆಂದು ತಿಳಿಯುತ್ತದೆ. ಉಪಲಬ್ಧ ಗ್ರಂಥವು ಸ್ವರ, ರಾಗ, ಪ್ರಕೀರ್ಣಕ ಮತ್ತು ಪ್ರಬಂಧವೆಂಬ ನಾಲ್ಕು ಅಧ್ಯಾಯಗಳಲ್ಲಿ ಕ್ರಮವಾಗಿ ೭೪೭, ೧೩೨೯, ೩೩೧ ಮತ್ತು ೮೯೬ ಉಪಜಾತಿ ಛಂದಸ್ಸಿನ (ಒಟ್ಟು ೩೩೦೩) ಶ್ಲೋಕಗಳನ್ನು ಹೊಂದಿದೆ. ಇದರ ಬಹು ಭಾಗವು ಸಂಗೀತರತ್ನಾಕರದ ಶ್ಲೋಕಗಳಲ್ಲಿ ಹೇಳಿರುವುದನ್ನೇ ಮಂದಗತಿಯಲ್ಲಿ, ಉಪಜಾತಿ ಛಂದಸ್ಸಿನಲ್ಲಿ ರಚಿತವಾಗಿದೆ. ಅಲ್ಲದೆ ವಿಷಯ ವಿಭಾಗದಲ್ಲಿ ಸಂಗೀತರತ್ನಾಕರ ಅಧ್ಯಾಯ ವಿಭಜನೆಯ ಕ್ರಮವನ್ನೇ ಅನುಸರಿಸುತ್ತದೆ. ದೊರೆತಿರುವ ಗ್ರಂಥವು ಅಸಮಗ್ರವಾಗಿದ್ದು, ಗ್ರಂಥಕಾರನು ಅದನ್ನು ಪೂರ್ಣಗೊಳಿಸಿದ್ದರೆ ಉಳಿದ ಅಧ್ಯಾಯಗಳು ಕ್ರಮವಾಗಿ ತಾಲ, ವಾದ್ಯ ಮತ್ತು ನರ್ತನಗಳನ್ನು ನಿರೂಪಿಸುತ್ತವೆ. ಈ ಪರಿವಿಡಿಯನ್ನು ಗ್ರಂಥಕಾರನೇ ಗ್ರಂಥಾದಿಯಲ್ಲಿ ಹೇಳಿದ್ದಾನೆ. ಅದರ ಸ್ವರಾಧ್ಯಾಯದಲ್ಲಿ ಸಂಗೀತರತ್ನಾಕರದಲ್ಲಿ ಇಲ್ಲದಿರುವ ಅಂಶವು ಅತ್ಯಲ್ಪ ; ಇಲ್ಲವೆಂದರೂ ಸಲ್ಲುತ್ತದೆ. ರಾಗಾಧ್ಯಾಯದ ಉತ್ತರಾರ್ಧದಲ್ಲಿ ಶಾರ್ಙ್ಗದೇವನ ನಂತರದ ಲಾಕ್ಷಣಿಕರನ್ನು ಪ್ರಾಮಾಣಿಕರ ಪಟ್ಟಿಯಲ್ಲಿ ಸೇರಿಸಿ ವಿದ್ಯಾರಣ್ಯಮುನಿಗಳು ಹೇಳಿದ ೧೫ ಮೇಳಗಳನ್ನೂ ಅವುಗಳಲ್ಲಿ ಜನಿಸಿದ ೫೦ ರಾಗಗಳನ್ನೂ ಸಮಸಾಮಯಿಕ ಲಕ್ಷ್ಯದೊಡನೆ ಅನ್ವಯಿಸುತ್ತ ನಿರೂಪಿಸಲಾಗಿದೆ. ಗೋವಿಂದದೀಕ್ಷಿತನು ಇಲ್ಲಿ ಹೆಸರು ಹೇಳದೆ ರಾಮಾಮಾತ್ಯನನ್ನು ಟೀಕಿಸಿದ್ದಾಣೆ. ಆದರೆ ಪ್ರಾಮಾಣಿಕರ ಪಟ್ಟಿಯಲ್ಲಿ ಅವನನ್ನು ಸೇರಿಸದೆ, ಸೇರಿಸಿರುವವರ ಹೆಸರುಗಳನ್ನು ಗ್ರಂಥಗೌರವಕ್ಕಾಗಿ ಮಾತ್ರ ಹೇಳಿಕೊಂಡಿದ್ದಾನೆ. ಉಳಿದ ಗ್ರಂಥವೆಲ್ಲ ಶಾರ್ಙ್ಗದೇವ ಮತ್ತು ಕಲ್ಲಿನಾಥರನ್ನು ಮಾತ್ರ ಅವಲಂಬಿಸಿದೆ. ಶ್ರುತಿಜಾತಿವಕ್ತಾರರನ್ನು ಅವನು ಹೆಸರಿಸಿರುವುದು ಕೇವಲ ಸ್ವಕಪೋಲಕಲ್ಪನೆಯಿಂದ.

ಸಂಗೀತಸುಧೆಯು ಪ್ರಮಾಣಕ್ಕೆಂದು ಅನೇಕ ಗ್ರಂಥಗಳನ್ನೂ ಗ್ರಂಥಕರ್ತರನ್ನೂ ಉಲ್ಲೇಖಿಸಿದರೂ ಅವುಗಳ ನಿಜವಾದ ಪ್ರಯೋಜನವನ್ನು ಪಡೆದುಕೊಂಡಿರುವುದು ಅತ್ಯಲ್ಪ. ಹೀಗೆ ಉಲ್ಲೇಖವಾಗಿರುವ ಪ್ರಾಮಾಣಿಕರಲ್ಲಿ ಅರ್ಜುನ, ಆಂಜನೇಯಸಂಹಿತಾ, ಉಮಾಪತಿ, ಕಲ್ಲಿನಾಥ, ಕಾಶ್ಯಪ, ಕೇಶವನ ಸಂಗೀತರತ್ನಾಕರವ್ಯಾಖ್ಯಾ, ತುಂಬುರು, ದತ್ತಿಲ ದುರ್ಗಾ(ಶಕ್ತಿ), ನಂದಿ, ನಾರದ, ಪಾರ್ವತಿ, ಪಾರ್ಶ್ವದೇವ, ಬೃಹದ್ದೇಶೀ-ಮತಂಗ, ಮಾಧವಭಟ್ಟ, ಯಾಷ್ಟಿಕ, ಯಾಷ್ಟಿಕಸಂಹಿತಾ, ವಿದ್ಯಾರಣ್ಯ, ಶಾರ್ಙ್ಗದೇವ, ಶಾರ್ದೂಲ, ಶಿವ, ಸಂಗೀತಚಂದ್ರಿಕಾ, ಸಂಗೀತಸಾರ, ಹನೂಮಾನ್, ವಾಮನ, ಮತ್ತು ಭಾಮಹ – ಇವರನ್ನು ಹೆಸರಿಸಬಹುದು. ಇವರುಗಳ ಪೈಕಿ ಮತಂಗನನ್ನು ಸ್ವರಭೇದನಿರ್ಣಯ, ಪ್ರಾಮಾಣಿಕನಿರ್ದೇಶ, ಭಾಷಾ, ಅಂತರಭಾಷಾ, ವಿಭಾಷಾ ರಾಗಗಳ ವಿವೇಚನೆ, ಏಲಾಭೇದಗಳು, ದೇಶೈಲಾಗಳಲ್ಲಿ ಶಿಖಾಪದಪ್ರಯೋಗ ಎಂಬ ವಿಷಯಗಳಿಗಾಗಿ ಗೋವಿಂದ ದೀಕ್ಷಿತನು ಉಲ್ಲೇಖಿಸಿದ್ದಾನೆ.

xvii. ವೆಂಕಟಮುಖಿ

ವೆಂಕಟೇಶ್ವರದೀಕ್ಷಿತ, ವೆಂಕಟಾಧ್ವರಿ, ವೆಂಕಟೇಶ್ವರಾಧ್ವರಿ, ವೆಂಕಟೇಶ್ವರಮುಖಿ ಇತ್ಯಾದಿ ಪರ್ಯಾಯ ನಾಮಗಳಿರುವ ವೆಂಕಟಮುಖಿಯು ಗೋವಿಂದದೀಕ್ಷಿತ ಮತ್ತು ನಾಗಮಾಂಬಿಕೆಯರ ಎರಡನೆಯ ಮಗ, ಯಜ್ಞನಾರಾಯಣ ದೀಕ್ಷಿತನ ತಮ್ಮ ತಂದೆಯಂತೆಯೇ ಅವನದೂ ಬಹುಮುಖ ಪಾಂಡಿತ್ಯ, ಪ್ರತಿಭೆ, ವೇದ, ವೇದಾಂಗ, ಪೂರ್ವಮೀಮಾಂಸೆ, ಅದ್ವೈತ, ತರ್ಕ, ವ್ಯಾಕರಣ, ಕಾವ್ಯ, ಅಲಂಕಾರ, ಛಂದಸ್, ತ್ರಿಕೋಣಮಿತಿ ಇತ್ಯಾದಿ ಹಲವು ಶಾಸ್ತ್ರಗಳಲ್ಲಿ ಅವನದು ತಲಸ್ಪರ್ಶಿಯಾದ ಪಾಂಡಿತ್ಯ. ತಂದೆಯಂತೆ ಅವನೂ ಪವಾಡಪುರುಷ. ಅವನು ಗಾಯಕ ಮತ್ತು ವೈಣಿಕ,ಒಮ್ಮೊಮ್ಮೆ ಅನೃತ ಪ್ರಾಮಾಣಗಳಿಂದ ಗ್ರಂಥಗೌರವವನ್ನು ಹೆಚ್ಚಿಸಿಕೊಳ್ಳಲೆಳಸಿದರೂ ಸಂಗೀತದ ಲಕ್ಷ್ಯ, ಲಕ್ಷಣ, ಇತಿಹಾಸಗಳಲ್ಲಿ ಘನ ವಿದ್ವಾಂಸ, ತಂದೆ ಮತ್ತು ಅಣ್ಣನಂತೆಯೇ ಅನೇಕ ಯಜ್ಞಯಾಗಾದಿಗಳನ್ನು ಮಾಡಿದವನು, ಸಾಗ್ನಿಚಿತ್ಯ ವಾಜಪೇಯಯಾಜಿ. ತಂದೆಯಂತೆಯೇ ಸರ್ವತಂತ್ರಸ್ವತಂತ್ರ. ಅವನ ಸಂಗೀತದ ಗುರುಗಳು ತಂದೆ ಮತ್ತು ಅಣ್ಣ ಹಾಗೂ ಇವರ ಗುರುವಾದ ಕನ್ನಡಿಗ ತಾನಪ್ಪಾಚಾರ್ಯ. ಅವನಿಗೆ ಪೂರ್ವಮೀಮಾಂಸೆ, ಅದ್ವೈತ, ಸಾಹಿತ್ಯಗಳಲ್ಲಿ ರಾಜಚೂಡಾಮಣಿದೀಕ್ಷಿತ, ನೀಲಕಂಠದೀಕ್ಷಿತ ಮತ್ತು ಚೊಕ್ಕನಾಥಮಖಿಗಳಂತಹ ಮಹಾವಿದ್ವಾಂಸರೂ ವೀಣಾವಾದನದಲ್ಲಿ ರಘುನಾಥಭೂಪಾಲನ ಆಸ್ಥಾನಕವಯತ್ರಿಯಾಗಿದ್ದ ಕನ್ನಡಿತಿ ಮಧುರವಾಣಿಯೂ ತನ್ನ ಅಣ್ಣನ ಮಗ ವೆಂಕಟಾಧ್ವರಿಯೂ ಶಿಷ್ಯರಾಗಿದ್ದರು.

ವೆಂಕಟಮುಖಿಯು ತಂಜಾವೂರಿನ ವಿಜಯರಾಘವಭೂಪಾಲನ ಆಸ್ಥಾನವನ್ನು ಅಲಂಕರಿಸಿದ್ದನು. ಅವನನ್ನು ರಾಜಪಟ್ಟಕ್ಕೆ ಏರಿಸುವಲ್ಲಿ ಕ್ರಿಯಾಶಾಲಿಯಾಗಿದ್ದುದರಿಂದ ಅವನಿಗೆ ‘ಪ್ರತಿಷ್ಠಾಪಿತ ಚೋಳಕ್ಷ್ಮಾಜ’ ಎಂಬ ಬಿರುದೂ ಇತ್ತು. ಅವನು ವಿಜಯರಾಘವನಾಯಕನ ಮಂತ್ರಿಯಾಗಿದ್ದನೆಂಬ ಊಹೆಯೂ ಇದೆ.

ವೆಂಕಟಮುಖಿಯು ಬಹುಶ್ರುತನೆಂದು ಈಗಾಗಲೇ ಸೂಚಿಸಿದೆ. ಅವನು ಶ್ರೌತಕರ್ಮಾನುಷ್ಠಾನಕ್ಕೆ ಪ್ರಯೋಜಕವಾದ ಆಗ್ನೀಧ್ರಪ್ರಯೋಗ, ಕರ್ಮಾಂತಸೂತ್ರಮೀಮಾಂಸಾ, ಬೌಧಾಯನ ಶುಲ್ಬಮೀಮಾಂಸಾ ಎಂಬ ಗ್ರಂಥಗಳನ್ನೂ ಪೂರ್ವಮೀಮಾಂಸಾಶಾಸ್ತ್ರದಲ್ಲಿ ಕುಮಾರಿಲಭಟ್ಟನ ಟುಪ್‌ಟೀಕೆಗೆ ವಾರ್ತಿಕಾಭರಣವೆಂಬ ವ್ಯಾಖ್ಯಾನವನ್ನೂ ರಚಿಸಿದ್ದಾನೆ. ಸಂಗೀತಸಾಮ್ರಾಜ್ಯ ಮತ್ತು ಸಾಹಿತ್ಯಸಾಮ್ರಾಜ್ಯಗಳೆಂಬ ಗ್ರಂಥಗಳನ್ನೂ ರಚಿಸಿದ್ದಾನೆಂಬ ಪ್ರತೀತಿಯಿದೆ. ತಿರುವಾರೂರಿನ ತ್ಯಾಗರಾಜಸ್ವಾಮಿಯನ್ನು ಕುರಿತು ಜಯದೇವಸರಸ್ವತಿಯ ಗೀತಗೋವಿಂದವನ್ನು ಹೋಲುವ ತ್ಯಾಗರಾಜಾಷ್ಟಪದಿಯನ್ನು ವೆಂಕಟಮುಖಿಯು ರಚಿಸಿದ್ದಾನೆಂದು ಸುಬ್ಬರಾಮ ದೀಕ್ಷಿತನು ಹೇಳಿದ್ದಾನೆ.

ವೆಂಕಟಮುಖಿಯ ಪರಮಗುರುವಾದ ತಾನಪ್ಪಾಚಾರ್ಯನು ಕನ್ನಡಿಗನು. ಅವನು ತನ್ನ ಕಾಲದಲ್ಲಿ ರೂಢಿಸಿದ್ದ ಸಂಗೀತಪ್ರಯೋಗವನ್ನೆಲ್ಲ ಆಲಾಪ, ಠಾಯ, ಗೀತ ಮತ್ತು ಪ್ರಬಂಧ ಎಂಬ ನಾಲ್ಕು ದಂಡಿಗಳಲ್ಲಿ ವಿಂಗಡಿಸಿ, ಅವುಗಳನ್ನು ಪರಿಷ್ಕರಿಸಿ, ಪ್ರತಿಯೊಂದಕ್ಕೂ ಸಮಗ್ರವೂ, ಮೌಲಿಕವೂ, ಪ್ರಾಮಾಣಿಕವೂ ಅದ ಮಾದರಿಗಳನ್ನು ನಿರ್ಮಿಸಿ ನಮ್ಮ ಸಂಗೀತವನ್ನು ವೈಜ್ಞಾನಿಕವಾಗಿ ಪುನರ್ವ್ಯವಸ್ಥೆಗೊಳಿಸಿದನು. ಇದನ್ನು ಪ್ರತಿಪಾದಿಸಿ, ಪ್ರಚುರಪಡಿಸಲೆಂದು ವೆಂಕಟಮುನಿಯು ಚತುರ್ದಂಡೀ ಪ್ರಕಾಶಿಕಾ ಗ್ರಂಥವನ್ನು ತನ್ನ ಪ್ರಭು ವಿಜಯ ರಾಘವಭೂಪಾಲನಿಂದ ಪ್ರೇರಿತನಾಗಿ ರಚಿಸಿದನು. ಇದು ವೀಣಾ (೧೮೨ ಶ್ಲೋಕಗಳು). ಶ್ರುತಿ (೫೭), ಸ್ವರ (೧೫೪), ಮೇಳ (೨೦೯), ರಾಗ (೧೦೯), ಆಲಾಪ (೩೨), ಠಾಯ (೭), ಗೀತ (೬೧), ಪ್ರಬಂಧ (೪೮೯) ಎಂಬ ೯ ಪ್ರಕರಣಗಳಲ್ಲಿ ಒಟ್ಟು ೧೩೦೦ ಶೋಕಗಳನ್ನು ಒಳಗೊಂಡಿದೆ. ಒಂಬತ್ತನೆಯ ಪ್ರಕರಣದಲ್ಲಿ ಢೇಂಕೀಪ್ರಬಂಧದ ಲಕ್ಷಣವಾದ ಮೇಲೆ ಗ್ರಂಥವು ನಷ್ಟವಾಗಿದೆ. ಇದರಂತೆಯೇ ಹತ್ತನೆಯ ತಾಲಪ್ರಕರಣವೂ ನಷ್ಟವಾಗಿದೆ. ಇವುಗಳ ಪೈಕಿ ಮೊದಲನೆಯ ನಾಲ್ಕು ಪ್ರಕರಣಗಳು ನಾಲ್ಕು ದಂಡಿಗಳಿಗೆ ಉಪಕಾರಕಗಳಾಗಿದ್ದು ಸೋಪಾನಕ್ರಮದಲ್ಲಿವೆ. ಉಳಿದವುಗಳಲ್ಲಿ ನಾಲ್ಕು ದಂಡಿಗಳು ಉತ್ತರೋತ್ತರವಾಗಿ ಸಂಬಂಧಿತವಾಗಿದ್ದು, ಗೀತಪ್ರಬಂಧಗಳಿಗೆ ಅಧಿಷ್ಠಾನವಾದ ತಾಲವನ್ನು ಕೊನೆಯಲ್ಲಿ ನಿರೂಪಿಸಲಾಗಿದೆ. ಗ್ರಂಥವು ನೇರವಾದ, ಸರಳ, (ಕೆಲವು ವೇಳೆ ಅತಿಯೆನ್ನಿಸಬಹುದಾದ) ಆತ್ಮಪ್ರತ್ಯಯಪೂರ್ವಕವಾಗಿ, ಶಂಕಾ -ಪರಿಹಾರರೂಪದ ಜಿಜ್ಞಾಸವಿಧಾನದಲ್ಲಿ, ಅಲ್ಲಲ್ಲಿ ಸ್ವಮತ ಮಂಡನ – ಪರಮತ ಖಂಡನಗಳಲ್ಲಿ ರಚಿತವಾಗಿದೆ. ಮೊದಲನೆಯ ಏಳು ಪ್ರಕರಣಗಳಲ್ಲಿ ಒಂದೊಂದು ಪೂರ್ವಾಚಾರ್ಯರು ಹೇಳದೆ ಇರುವ ಹೊಸ ವಿಷಯಗಳನ್ನು ಒಳಗೊಂಡಿದ್ದು ಗೀತ ಮತ್ತು ಪ್ರಬಂಧ ಪ್ರಕರಣಗಳು ಸಂಪೂರ್ಣವಾಗಿ ಶಾರ್ಙ್ಗದೇವನನ್ನೂ ಕಲ್ಲಿನಾಥನನ್ನೂ ಅವಲಂಬಿಸಿವೆ. ಗಣಿತಪ್ರಸ್ತಾರದಿಂದ ೭೨ ಮೇಳಕರ್ತಗಳನ್ನು ಪಡೆದು ಅವುಗಳನ್ನು ನಾಲ್ಕನೆಯ ಪ್ರಕರಣದಲ್ಲಿ ವಿವರಿಸಲಾಗಿದೆ.ಇದೇ ಗ್ರಂಥದ ತಿರುಳೂ ಅತ್ಯಂತ ಪ್ರಸಿದ್ಧವಾದ ಕೊಡುಗೆಯೂ ಆಗಿದ್ದು ಇವು ಇಂದಿನ ಕರ್ನಾಟಕಸಂಗೀತದ ಅಡಿಗಲ್ಲಾಗಿವೆ. ಮೂರನೆಯ ಪ್ರಕರಣದಲ್ಲಿರುವ ಸೂಳಾದಿ ತಾಳಗಳಿಗೂ ಆಲಾಪಪ್ರಕರಣದಲ್ಲಿರುವ ರಾಗಾಲಾಪನ ವಿಧಾನಕ್ಕೂ ಇದೇ ಮಾತು ಅನ್ವಯಿಸುತ್ತದೆ.

ವೆಂಕಟಮುಖಿಯು ಆಧಿಭರತ, ಕಲ್ಲಿನಾಥ, ಗೋಪಾಲನಾಯಕ, ಛಂಧಃಶಾಸ್ತ್ರ (ವೃತ್ತರತ್ನಾಕರ), ತಾನಪ್ಪಾಚಾರ್ಯ, ನಾರದ, ಶಾರ್ಙ್ಗದೇವ, ಪಾರ್ವತೀ, ರಾಮಾಮಾತ್ಯ, ಭರತ, ಪಿಂಗಳನಾಗ, ಮತಂಗ, ಹಲಾಯುಧ, ಹನೂಮಾನ್‌ರವರುಗಳನ್ನು ಪ್ರಮಾಣಕ್ಕಾಗಿ ಉಲ್ಲೇಖಿಸುತ್ತಾನೆ. ಇವರುಗಳ ಪೈಕಿ ಗೋಪಾಲನಾಯಕ, ತಾನಪ್ಪರ ಗ್ರಂಥಗಳು (ರಚಿತವಾಗಿದ್ದರೆ) ಉಪಲಬ್ಧವಿಲ್ಲ. ಪಿಂಗಳನಾಗ, ಹಲಾಯುಧರನ್ನು ಕಲ್ಲಿನಾಥನಿಂದಲೂ ನಾರದ, ಪಾರ್ವತಿಯರನ್ನು ಶಾರ್ಙ್ಗದೇವನಿಂದಲೂ ಉಪೋದ್ಧೃತಿಯಲ್ಲಿ ಉಲ್ಲೇಖಿಸಿರಬಹುದು. ಶಾರ್ಙ್ಗದೇವ, ಕಲ್ಲಿನಾಥರುಗಳ ಉಲ್ಲೇಖಗಳು ನಿಜವಾಗಿವೆ ; ಇಲ್ಲಿಯೂ ಕಲ್ಲಿನಾಥನನ್ನು ಅವಲಂಬಿಸಿರುವುದೇ ಹೆಚ್ಚು. ಆದಿಭರತ, ಭರತ, ಮತಂಗ ಮತ್ತು ಹನೂಮಾನರ ಉಲ್ಲೇಖಗಳಲ್ಲಿ ಹುರುಳಿಲ್ಲ. ಮತಂಗನು ರಾಗದಶ ಲಕ್ಷಣಗಳನ್ನು ಹೇಳಿದ್ದಾನೆ; (ಅವನು ಜಾತಿದಶಲಕ್ಷಣಗಳನ್ನು ಹೇಳಿದ್ದಾನೆ, ರಾಗ ದಶಲಕ್ಷಣಗಳನ್ನಲ್ಲ); ಗುರ್ಜರೀ, ಭಿನ್ನಷಡ್ಜ ಮತ್ತು ರೇವಗುಪ್ತಿ ರಾಗಗಳಲ್ಲಿ ರಿಷಭವು ಗ್ರಹಾಂಶನ್ಯಾಸಗಳಾಗಿದೆ; ಪ್ರಬಂಧಗಳನ್ನು ದ್ವಿ-,ತ್ರಿ-, ಮತ್ತು ಚತುರ್ಧಾತುಕಗಳನ್ನಾಗಿ ವರ್ಗೀಕರಿಸಿದ್ದಾನೆ; ಹಸ್ತಪಾಟಕರಣವೆಂಬ ಪ್ರಬಂಧವನ್ನು ನಿರೂಪಿಸಿದ್ದಾನೆ; ಏಲಾಪ್ರಬಂಧದದ ಉದ್ಗ್ರಹದಲ್ಲಿ ಮೊದಲನೆಯ ಮತ್ತು ಎರಡನೆಯ ಪಾದಗಳಿಗೆ ಸಮಾನಧಾತುವನ್ನೂ ಭಿನ್ನಮಾತುವನ್ನೂ ವಿಧಿಸಿದ್ದಾನೆ; ಏಳೆಯ ಹದಿನಾರು ಪದಗಳನ್ನು ಹತ್ತು ಪ್ರಾಣಗಳಲ್ಲಿ ವಿಧಿಗೆ ಅನುಸಾರವಾಗಿ ರಚಿಸಬೇಕು, ಇಲ್ಲದಿದ್ದರೆ ಶುಭದ ಬದಲು ಅನಿಷ್ಟವೇ ಸಂಭವಿಸುತ್ತದೆ ಎಂದು ಹೇಳಿದ್ದಾನೆ; ಅನೇಕ ಸಂಕರೈಲಾ ಮತ್ತು ವಿಕೃತೈಲಾಗಳನ್ನು ವರ್ಣಿಸಿದ್ದಾನೆ ಎಂಬ ಏಳು ವಿಷಯಗಳಿಗಾಗಿ ವೆಂಕಟಮುಖಿಯು ಅವನನ್ನು ಉಲ್ಲೇಖಿಸಿದ್ದಾನೆ. ಇವುಗಳಲ್ಲಿ ಸತ್ಯಾಂಶವಿಲ್ಲವೆಂದು ಬೇರೆಡೆಯಲ್ಲಿ (ಚತುರ್ದಂಡೀಪ್ರಕಾಶಿಕಾ, ಆಂಗ್ಲವಿಮರ್ಶಾತ್ಮಕ ಪೀಠಿಕೆ, ಪು. ೬೮.೬೯) ವಿವರಿಸಿದ್ದೇನೆ.

xviii. ಮುಮ್ಮಡಿಚಿಕ್ಕಭೂಪಾಲ

ಮುಮ್ಮಡಿ ಭೂಪಾಲನು ಕನ್ನಡಿಗ, ತುಮಕೂರು ಜಿಲ್ಲೆಯ ಮಧುಗಿರಿಯನ್ನು ಹದಿನೇಳನೆಯ ಶತಮಾನದ ಮಧ್ಯದಲ್ಲಿ ಆಳಿದವನು. ಮುಮ್ಮಡಿಯೆಂಬುದು ಊರಿನ ಹೆಸರೂ ಹೌದು, ಈ ರಾಜಸಂತತಿಯಲ್ಲಿ ಚಿಕ್ಕಭೂಪಾಲನೆಂಬ ಹೆಸರಿನ ಮೂರನೆಯವನೆಂಬುದರ ಸೂಚನೆಯೂ ಹೌದು. ಅವನ ಜನ್ಮನಾಮವು ಸಪ್ಪೇಗೌಡ; ಅವನು ಇಮ್ಮಡಿ ಚಿಕ್ಕಪ್ಪಗೌಡನ ಮೂರನೆಯ ಮಗ. ಅವನ ಅಣ್ಣಂದಿರಿಬ್ಬರೂ ಕದನದಲ್ಲಿ ಮಡಿಯಲು ಸು.ಕ್ರಿ.ಶ.೧೬೩೩ರಲ್ಲಿ ಅವನು ಅಭಿಷಿಕ್ತನಾಗಿ ಬಿಜ್ಜವರದಿಂದ ಆಳಿದನು. ಅವನ ರಾಣಿಯ ಹೆಸರು ಹಿರಿಯಮ್ಮ. ಅವನ ಹಿರೀತೋಂಟಪ್ಪ, ಸಂಗಪ್ಪ ಮತ್ತು ಕಾಳಚಿಕ್ಕಪ್ಪನೆಂಬ ಮೂರು ಗಂಡುಮಕ್ಕಳಲ್ಲಿ ಕೊನೆಯವನು ಅವನ ಉತ್ತರಾಧಿಕಾರಿಯಾದನು. ಈ ವಂಶದ ಆಳ್ವಿಕೆಯು ಮೈಸೂರಿನ ಚಿಕ್ಕದೇವರಾಯನ ದಂಡನಾಯಕ ಕೊಮಾರಯ್ಯನು ಮಧುಗಿರಿಯನ್ನು ಆಕ್ರಮಿಸಿ ವಶಪಡಿಸಿಕೊಂಡಾಗ ಕ್ರಿ.ಶ. ೧೬೭೯ರಲ್ಲಿ ಕೊನೆಗಂಡಿತು.

ಮುಮ್ಮಡಿಚಿಕ್ಕಭೂಪಾಲನು ಅಭಿವನಭರತಸಾರಸಂಗ್ರಹವೆಂಬ ಸಂಗೀತ ಶಾಸ್ತ್ರಸಂಗ್ರಹಗ್ರಂಥವನ್ನು ರಚಿಸಿದ್ದಾನೆ. ಇದರಲ್ಲಿ ಉಪೋದ್ಫಾತ, ತಾಲ, ವಾದ್ಯ, ನೃತ್ತ, ಗೀತಗಳನ್ನು ಕುರಿತ ಐದು ಅಧ್ಯಾಯಗಳಿದ್ದು ಅವುಗಳಲ್ಲಿ ವಾದ್ಯಾಧ್ಯಾಯ ಮತ್ತು ಗೀತಾಧ್ಯಾಯಗಳು ಮಾತ್ರ ದೊರೆತಿವೆ. ಇವುಗಳನ್ನು ಭರತಪ್ರಬಂಧ, ಭರತಸಂಜೀವಿನಿ ಎಂಬ ಎರಡು ಆಖ್ಯಾನಗಳಲ್ಲಿ ಅಡಕಗೊಳಿಸಿರುವಂತಿದೆ. ಇವುಗಳಲ್ಲಿ ಕ್ರಮವಾಗಿ ೮೦೪ ಮತ್ತು ೧೩೫೩ ಶ್ಲೋಕಗಳಿವೆ. ನಿರೂಪಿಸಬೇಕಾಗಿರುವ ಶಾಸ್ತ್ರವನ್ನು ಅಧಿಕರಣಗಳನ್ನಾಗಿ ವಿಶ್ಲೇಷಿಸಿಕೊಂಡು ಒಂದೊಂದಕ್ಕೂ ತನ್ನದೇ ಪೀಠಿಕೆ ಮತ್ತು ಸಮಾಪನವಾಕ್ಯಗಳನ್ನು ಪ್ರವೇಶಗೊಳಿಸಿ, ವಿವಿಧ ಪ್ರಾಮಾಣಿಕರನ್ನು ಅಕ್ಷರಶಃ ಉದ್ಧರಿಸಿಕೊಳ್ಳುವುದು ಈ ಗ್ರಂಥದ ವೈಶಿಷ್ಟ್ಯವಾಗಿದೆ. ಅನ್ಯತ್ರ ಅನುಪಲಬ್ಧ ಆಕರಗಳ ಸಂಗ್ರಹವಾಗಿರುವುದು ಈ ಗ್ರಂಥದ ಮುಖ್ಯ ಪ್ರಯೋಜನ. ಹೀಗೆ ಉದ್ಧೃತವಾಗಿರುವ ಪ್ರಾಮಾಣಿಕರಲ್ಲಿ ಭರತಮುನಿ, ದತ್ತಿಲ, ಗ್ರಂಥಾಂತರ, ಹರಿಪಾಲದೇವ, ಕೋಹಲ, ಮತಂಗ, ಮತಾಂತರ(=ಭರತಾರ್ಣವ, ಸ್ವರರಾಗ ಸುಧಾರಸ), ನಾರದ, ರಾಮಾಮಾತ್ಯ, ಶಾರ್ಙ್ಗದೇವ, ಸಕಲಮತಸಂಗ್ರಹ ಸುಧಾಕಲಶ (ನ ಸಂಗೀತೋಪನಿಷತ್‌ಸಾರೋದ್ಧಾರ) ಗಳನ್ನು ಹೆಸರಿಸಬಹುದು.

ಅಭಿನವಭರತಸಾರಸಂಗ್ರಹವು ಮತಂಗನನ್ನು ಮೃದಂಗ, ಮಾರ್ದಂಗಿಕ, ಢಕ್ಕಾವಾದ್ಯ, ಢಕ್ಕಾವಾದಕ, ಮಧುಕರೀ ಎಂಬ ವಾದ್ಯ-ಇವುಗಲ ಲಕ್ಷಣಗಳಿಗಾಗಿ ಉದ್ಧರಿಸಿಕೊಳ್ಳುತ್ತದೆ.

xix. ಭಾವಭಟ್ಟ

ಭಾವಭಟ್ಟನು ತಾನಭಟ್ಟನ ಮಗ. ಬಿಕಾನೀರನ್ನು ಕ್ರಿ.ಶ. ೧೬೭೪ರಿಂದ ೧೭೦೧ ರವರೆಗೆ ಆಳಿದ ಅನುಪಮಸಿಂಹ ಮಹಾರಾಜನ ಪೋಷಣೆ, ಪ್ರೋತ್ಸಾಹಗಳನ್ನು ಪಡೆದು ಅವನ ಆಸ್ಥಾನ ವಿದ್ವಾಂಸನಾಗಿ, ಅವನ ಅಂಕಿತದಲ್ಲಿ ಅನೂಪಸಂಗೀತವಿಲಾಸ, ಅನೂಪಸಂಗೀತರತ್ನಾಕರ ಮತ್ತು ಅನೂಪಸಂಗೀತಾಂಕುಶವೆಂಬ ಮೂರು ಗ್ರಂಥಗಳನ್ನು ಬರೆದಿದ್ದಾನೆ. ಮೂರೂ ಹಿಂದೂಸ್ಥಾನೀ ಸಂಗೀತಪದ್ಧತಿಯ ರಾಗಗಳನ್ನು ವರ್ಣಿಸಲೆಂದು ಹೊರಟಿದ್ದು ಪೂರ್ವಾಚಾರ್ಯಮತಗಳನ್ನು ಅಕ್ಷರಶಃ ಉದ್ಧರಿಸಿಕೊಳ್ಳುವ ಸಂಗ್ರಹಗ್ರಂಥಗಳಾಗಿವೆ. ಹೀಗಾಗಿ ಆಯಾ ರಾಗಗಳ ಲಕ್ಷಣ ವಿಕಾಸಗಳನ್ನು ಗುರುತಿಸಲು ಇವುಗಳಿಂದ ನೆರವು ದೊರೆಯುತ್ತದೆ. ಅಲ್ಲದೆ ರಾಗಲಕ್ಷಣವರ್ಣನೆಗೆ ಆಧಾರಭೂತವಾದ ಶ್ರುತಿ, ಸ್ವರ, ಮೇಳಗಳನ್ನೂ ರಾಗವರ್ಗೀಕರಣಗಳ ಪದ್ಧತಿಗಳನ್ನೂ ಇವು ವರ್ಣಿಸುತ್ತವೆ. ಅನೂಪಸಂಗೀತವಿಲಾಸದಲ್ಲಿ ಅನನ್ಯೋಪಲಬ್ಧವಾದ ಆಕರಗಳಿಂದ ರಾಗಧ್ಯಾನಶ್ಲೋಕಗಳನ್ನು ಉದ್ಧರಿಸಿಕೊಳ್ಳಲಾಗಿದೆ.. ಅನೂಪಸಂಗೀತರತ್ನಾಕರದಲ್ಲಿ ೧೮ ಪ್ರಸಿದ್ಧರಾಗಗಳ ಪ್ರಕಾರಾಂತಗಳನ್ನು -ಉದಾ. ನಾಟದ ೧೬ ಪ್ರಕಾರಗಳು, ಕರ್ನಾಟದ ೧೪ ವಿಧಗಳು, ವೇಲಾವಲಿಯ ೧೬ ರೂಪಗಳು, ೯ ವಿಧದ ತೋಡಿಗಳು -ವರ್ಣಿಸುವುದಲ್ಲದೆ ಮೂವತ್ತೇಳು ಗ್ರಾಮರಾಗಗಳನ್ನೂ ಅವುಗಳಲ್ಲಿ ಜನಿಸುವ ಭಾಷಾ, ಅಂತರಭಾಷಾ, ವಿಭಾಷಾಗಳನ್ನೂ ನಿರೂಪಿಸಿದೆ. ಅಲ್ಲದೆ ಆರು ಪ್ರಧಾನರಾಗಗಳನ್ನೂ ಅವುಗಳಿಗೆ ಅಧೀನವಾಗುವ ಜನ್ಯರಾಗಗಳನ್ನೂ ಐದು ಬೇರೆ ಬೇರೆ ವರ್ಗೀಕರಣ ಪದ್ಧತಿಗಳಲ್ಲಿ ಕೊಟ್ಟಿದೆ; ಮತ್ತು ಮೂವತ್ತು ಮೇಳಗಳನ್ನೂ ಅವುಗಳ ಜನ್ಯರಾಗಗಳನ್ನೂ ವಿವರಿಸಿದೆ. ಹೀಗೆ ಇದು ಉತ್ತರ ಭಾರತದಹಾಗೂ ದಕ್ಷಿಣಭಾರತದ ಸಂಗೀತ ಪದ್ಧತಿಗಳನ್ನು ಪುರಸ್ಕರಿಸಿದೆ. ಅನೂಪಸಂಗೀತ ರತ್ನಾಕರದಲ್ಲಿ ಹನೂಮನ್ಮತವನ್ನು ಅಧಿಕರಿಸಿ ರಾಗಲಕ್ಷಣಗಳನ್ನು ಕೊಟ್ಟಿದೆ.

ಬೃಹದ್ದೇಶೀಯ ಮೊದಲನೆಯ ಅಧ್ಯಾಯದಲ್ಲಿ ಪಾಠಶೋಧನಕ್ಕಾಗಿ ಅನೂಪಸಂಗೀತ ರತ್ನಾಕರವನ್ನು ಅಲ್ಲಲ್ಲಿ ಬಳಸಿದೆ.

xx. ತುಲಜೇಂದ್ರ

ತುಲಜೇಂದ್ರನು ನಾಯರಾಜಸಂತತಿಯ ನಂತರ ತಂಜಾವೂರನ್ನು ಕ್ರಿ.ಶ. ೧೬೭೬ರಿಂದ ೧೮೫೫ರವರೆಗೆ ಆಳಿದ ಭೋಸಲೆ ರಾಜವಂಶದ ಮೊದಲನೆಯ ರಾಜನಾದ ಏಕ್ಕೋಜಿ (೧೬೭೩-೧೬೮೩)ಯ ಮೂರನೆಯ ಮಗ, ತನ್ನ ಅಣ್ಣಂದಿರಾದ ಶಾಹಜಿ (೧೬೮೪-೧೭೧೨) ಮತ್ತು ಮೊದಲನೆಯ ಶರಭೋಜಿ (೧೭೧೨-೧೭೨೮)ಗಳ ಆಳ್ವಿಕೆಯ ನಂತರ ಕ್ರಿ.ಶ. ೧೭೨೯ ರಿಂದ ೧೭೩೫ರವರೆಗೆ ತಂಜಾವೂರಿನ ದೊರೆಯಾದನು. ಅವನು ಸಂಗೀತ, ನೃತ್ಯ, ಯಕ್ಷಗಾನ, ಆಯುರ್ವೇದ, ಜ್ಯೋತಿಷ, ಧರ್ಮಶಾಸ್ತ್ರ ಮಂತ್ರಶಾಸ್ತ್ರ ಮುಂತಾದ ಅನೇಕ ವಿದ್ಯೆಗಳಲ್ಲಿ ನಿಷ್ಣಾತನಾಗಿದ್ದನು. ಅವನು ನಿರ್ಮಿಸಿರುವ ಗ್ರಂಥಗಳಲ್ಲಿ ಸಂಗೀತಸಾರಾಮೃತ, ಧನ್ವಂತರಿವಿಲಾಸ, ಧನ್ವಂತರಿಸಾರನಿಧಿ, ಹೆಸರು ಗೊತ್ತಿಲ್ಲದ ಇನ್ನೊಂದು ವೈದ್ಯಶಾಸ್ತ್ರಗ್ರಂಥ, ಇನಕುಲರಾಜ ತೇಜೋನಿಧಿ ಮತ್ತು ವಾಕ್ಯಾಮೃತ ವೆಂಬ ಜ್ಯೋತಿಷಗ್ರಂಥ, ಧರ್ಮಸಾರಸಂಗ್ರಹ, ರಾಜಧರ್ಮಸಾರಸಂಗ್ರಹ, ಮಂತ್ರಸಾರಸಂಗ್ರಹ, ರಾಮಧ್ಯಾನಪದ್ಧತಿ ಎಂಬ ಸ್ತೋತ್ರ, ಮರಾಠಿಯಲ್ಲಿ ಬಹುಲಾಕಥಾಚೂರ್ಣಿಕಾ, ತೆಲುಗಿನಲ್ಲಿ ಶಿವಕಾಮ ಸುಂದರೀಪರಿಣಯವೆಂಬ ಯಕ್ಷಗಾನನಾಟಕ ಇವುಗಳನ್ನು ಹೆಸರಿಸಬಹುದು. ಅವನು ತೆಲುಗಿನಲ್ಲಿಯೂ, ಮರಾಠಿಯಲ್ಲಿಯೂ ಹಲವು ಪದಗಳನ್ನು ರಚಿಸಿದ್ದಾನೆ. ಶಂಕರಾಭರಣರಾಗದಲ್ಲಿ ‘ಧನ್ಯೋಹಂ ಸದಾಶಿವ ಧ್ನನ್ಯೋಹಂ’ ಎಂದು ಮೊದಲಾಗುವ ಖ್ಯಾಲ್ ಪ್ರಬಂಧವನ್ನು ರಚಿಸಿರುವುದು ಸಂಸ್ಕೃತ-ಹಿಂದುಸ್ಥಾನೀ ಸಂಗೀತ-ಕರ್ನಾಟಕ ಸಂಗೀತಗಳಲ್ಲಿ ಭಾವೈಕ್ಯವನ್ನು ಅದನು ಸಾಧಿಸಲೆಳಸಿದ್ದರ ಸಂಕೇತವಾಗಿದೆ.

ಸಂಗೀತಸಾರಾಮೃತವು ಗೀತವಾದನನೃತ್ತಗಳನ್ನು ಚಂಪೂ ಶೈಲಿಯಲ್ಲಿ ನಿರೂಪಿಸುವ ಉದ್ಗ್ರಂಥ. ಅದರಲ್ಲಿ ಶ್ರುತಿ, ಶುದ್ಧಸ್ವರ, ವಿಕೃತಸ್ವರ, ಗ್ರಾಮ-ಮೂರ್ಛನಾ-ತಾನ, ಸಾಧಾರಣ, ವರ್ಣಾಲಂಕಾರ, ಜಾತಿ, ಗೀತಿ, ಮೇಲ, ರಾಗ, ವಾದ್ಯ, ಪ್ರಬಂಧ, ತಾಲ, ಪ್ರಕೀರ್ಣಕ ಎಂಬ ೧೪ ಪ್ರಕರಣಗಳಿವೆ. ಇದಲ್ಲದೆ ಸುದೀರ್ಘವಾದ ಒಂದು ನೃತ್ತಪ್ರಕರಣವೂ ದೊರೆಯುತ್ತದೆ. ಗ್ರಂಥದ ಬಹುಭಾಗವು ಶಾರ್ಙ್ಗದೇವನ ಸಂಗೀತರತ್ನಾಕರವನ್ನು ಆಧರಿಸಿದೆ. ಆದರೆ ಸ್ವರವಿಕೃತಿ, ವೀಣಾಮೇಳ ಮುಂತಾದ ವಿಷಯಗಳಲ್ಲಿ ಸಮಸಾಮಯಿಕವಾಗಿರುವುದಲ್ಲದೆ ರಾಗಲಕ್ಷಣದಲ್ಲಿ ತುಳಜನು ತನ್ನ ಅಣ್ಣನಾದ ಶಾಹಜಿಯ ರಾಗಲಕ್ಷಣಮು ಎಂಬ ತೆಲುಗು ಗ್ರಂಥದಿಂದ ಚತುರ್ದಂಡೀಗಳ ತತ್ಕಾಲೀನ ಲಕ್ಷ್ಯೋದಾಹರಣೆಗಳನ್ನು ಎತ್ತಿಕೊಂಡು ಗ್ರಂಥವನ್ನು ಪ್ರಯೋಗಪ್ರಧಾನವನ್ನಾಗಿ ಮಾಡಿರುವುದು ಒಂದು ವಿಶೇಷ. ಸ್ವಾರಸ್ಯವೆಂದರೆ ಚತುರ್ದಂಡೀಪ್ರಕಾಶಿಕೆಯಿಂದ ಬೇರೆ ವಿಷಯಗಳಿಗಾಗಿ ಉದ್ಧರಿಸಿಕೊಂಡಿದ್ದರೂ ಅದರ ಎಪ್ಪತ್ತೆರಡು ಮೇಳಗಳ ಪ್ರಸ್ತಾರಪದ್ಧತಿಯನ್ನು ಒಪ್ಪದೆ ತನ್ನ ಕಾಲದಲ್ಲಿ ಪ್ರಸಿದ್ಧವಾಗಿದ್ದ ೨೧ ಮೇಳಗಳನ್ನು ಮಾತ್ರ ತುಲಜೇಂದ್ರನು ಪ್ರತಿಪಾದಿಸುತ್ತಾನೆ. ತಂಜಾವೂರಿನಲ್ಲಿ ೭೨ ಮೇಳಕರ್ತಪದ್ಧತಿಯು ಈ ವೇಳೆಗಾಗಲೇ ಸ್ವಲ್ಪವಾದರೂ ಬಳಕೆಯಲ್ಲಿದ್ದಿರಬೇಕು.

ತುಲಜೇಂದ್ರನು ಕಲ್ಲಿನಾಥ, ಗರ್ಭೋಪನಿಷತ್ತು, ಚತುರ್ದಂಡೀಪ್ರಕಾಶಿಕಾ, ಧನಂಜಯ, ನಂದಿ, ನಾರದ, ಪುರಂದರದಾಸ, ಮತಂಗ, ಯಾಜ್ಞವಲ್ಕ್ಯ, ಪಂಡರೀಕವಿಟ್ಠಲ, ವಿದ್ಯಾರಣ್ಯ (ಮಾಧವಮಂತ್ರಿ?), ವ್ಯಾಸಪಾಚಾರ್ಯ(=ವ್ಯಾಸರಾಯ), ಶಾರ್ಙ್ಗದೇವ, ಸೂತಸಂಹಿತಾ ಮತ್ತು ಅದರ ವ್ಯಾಖ್ಯಾನ, ಸೋಮೇಶ್ವರ ಮತ, ಸೌಭಾಗ್ಯಲಕ್ಷ್ಮೀಕಲ್ಪ, ಸ್ವರಮೇಲಕಲಾನಿಧಿ ಮತ್ತು ಸ್ವಾತಿಗಳನ್ನು ಉಲ್ಲೇಖಿಸಿ, ಉದ್ಧರಿಸಿಕೊಳ್ಳುತ್ತಾನೆ. ಕೀರ್ತಿಧರ, ಕೋಹಲ, ಗೋಪಾಲನಾಯಕ, ತಾನಪ್ಪಾಚಾರ್ಯ, ತುಂಬುರು, ಭರತಮುನಿ, ವಿಶ್ವಾವಸು, ವೇಣುಗಳನ್ನು ಉಪೋದ್ಧೃತಿಗಳಿಂದ ಬಳಸಿಕೊಳ್ಳುತ್ತಾನೆ; ಮತಂಗನನ್ನು ಶ್ರುತಿಸಂಖ್ಯೆ, ಸ್ವರನಾಮ ನಿರ್ವಚನ, ರಾಗಲಕ್ಷಣಗಳಿಗಾಗಿ ಉದ್ಧರಿಸಿಕೊಂಡಿದ್ದಾನೆ.

xxi. ಯಾಷ್ಟಿಕಮತಃ

ಎಂ.ಕೃಷ್ಣಮಾಚಾರ್ಯರು ತಮ್ಮ ಸಂಸ್ಕೃತಸಾಹಿತ್ಯ ಚರಿತ್ರೆಯಲ್ಲಿಯಾಷ್ಟಿಕಮತವೆಂಬ ಒಂದು ಗ್ರಂಥವನ್ನು ಉಲ್ಲೇಖಿಸಿ ಅದರ ಆಧಾರದಿಂದ ಮತಂಗನು ಹರವಿಲಾಸವೆಂಬ ಪ್ರಬಂಧವನ್ನು ನಿರೂಪಿಸಿರುವುದಾಗಿ ಹೇಳುತ್ತಾರೆ. ಇದನು ಹಿಂದೆಯೇ ಪ್ರಸ್ತಾಪಿಸಿದೆ. ಈ ಹೆಸರಿನ ಪ್ರಬಂಧವು ಉಪಲಬ್ಧ ಬಹದೇಶಿಯಲ್ಲಿ ದೊರೆಯುವುದಿಲ್ಲ. (ಆದರೆ ಉದ್ಧೃತಿಯಲ್ಲಿ ದೊರೆಯುತ್ತದೆ.) ಈ ಗ್ರಂಥವೂ ಈಗ ಉಪಲಬ್ಧವಿಲ್ಲ. ಈ ಯಾಷ್ಟಿಕನು ಮತಂಗನ ನಂತರದ ಲಾಕ್ಷಣಿಕನಾಗಿರಬೇಕು ಅಥವಾ ಯಾಷ್ಟಿಕಮತವು ಯಾಷ್ಟಿಕನ ಮತವನ್ನು ಅರ್ವಾಚೀನಕಾಲದಲ್ಲಿ ಬೇರೆಯವರು ಸಂಗ್ರಹಿಸಿದ ಗ್ರಂಥವಾಗಿರಬೇಕು. ಅದು ಯಾಷ್ಟಿಕನ ಸರ್ವಾಗಮಸಂಹಿತೆಯಿಂದ ಭಿನ್ನ ಎಂಬುದು ಸ್ಪಷ್ಟವಾಗಿದೆ.

xxii. ಸಂಗೀಮೇರು

ಕಲ್ಲಿನಾಥನು ಸಂಗೀತರತ್ನಾಕರದ ನರ್ತನಾಧ್ಯಾಯದಲ್ಲಿ ವರ್ತನಗಳು (ಸಂಗೀತರತ್ನಾಕರ, ನರ್ತನಾಧ್ಯಾಯ, ಪು.೧೦೫–೧೧೦), ಚಾಲಕಗಳು (ಅದೇ, ಪು.೧೧೧-೧೨೪) ಮತ್ತು ಮಧುಪಗಳೆಂಬ ದೇಶೀಚಾರಿಗಳು (ಪು.೩೧೩–೩೧೭) ಇವುಗಳ ವರ್ಣನ ಪ್ರಸಕ್ತಿಯಲ್ಲಿ ವ್ಯಾಖ್ಯಾನಮಾಡುತ್ತ ಭರತಾದಿಗಳೂ ಶಾರ್ಙ್ಗದೇವನೂ ಹೇಳದೆ ಬಿಟ್ಟ ಆಯಾ ನರ್ತನಾಂಶಗಳನ್ನು ಶಾರ್ದೂಲಮುನಿಯ ಪ್ರಶ್ನೆಗಳಿಗೆ ಕೋಹಲು ತನ್ನ ಸಂಗೀತಮೇರುವಿನಲ್ಲಿ ಉತ್ತರರೂಪದಲ್ಲಿ ಉಪದೇಶಿಸಿದ್ದೆಂದು ಮೂರು ಉದ್ಧೃತಿಗಳನ್ನು ಮಾಡಿಕೊಂಡಿದ್ದಾನೆ. ಇವುಗಳ ಪೈಕಿ ಮೊದಲನೆಯದು ೮೧ ಶ್ಲೋಕಾರ್ಥಗಳಿಷ್ಟಿದ್ದು ಭಟ್ಟ ತುಂಡುವಿನಿಂದ ೨೪ ವರ್ತನಗಳ ಉದ್ದೇಶಕ್ರಮವನ್ನೂ, ಭಟ್ಟತಂಡು, ಕೀರ್ತಿಧರಾಚಾರ್ಯ ಮುಂತಾದ ಲಾಕ್ಷಣಿಕರ ಮತಾನುಸಾರವಾದ ಅದೇ ೨೪ ವರ್ತನಗಳ ವರ್ಣನೆಯನ್ನೂ ಒಳಗೊಂಡಿದೆ. ಎರಡನೆಯದು ೫೦ ಚಾಲಕಗಳ ಪಟ್ಟಿಯನ್ನು ಹೇಳಿ ನೃತ್ತಮಂಗಲಶಾಸ್ತ್ರದಲ್ಲಿ ೧೦೦ ಚಾಲಕಗಳನ್ನೂ ನಾರದಪ್ರಣೀತ ದೇಶೀನೃತ್ತಸಮುದ್ರದಲ್ಲಿ ೭೦೦ ಚಾಲಕಗಳನ್ನೂ ಹೇಳಿದೆಯೆಂಬ ಪೀಠಿಕೆಯ ನಂತರ ಉದ್ದಿಷ್ಟವಾದ ೫೦ ಚಾಲಕಗಳನ್ನು ಭಟ್ಟತಂಡು, ಮತಂಗ, ಸುಮಂತು, ಪುರಾರೀ (=ಶಂಭು), ಕ್ಷೇಮರಾಜ, ಲೌಹಿತ್ಯಭಟ್ಟ ಮುಂತಾದ ಪೂರ್ವಲಾಕ್ಷಣಿಕರ ಮತಾನುಸಾರವಾಗಿ ನಿರೂಪಿಸಿ ಉಪಸಂಹರಿಸಿದೆ. ಇದು ಸಂಗೀತಮೇರುವಿನ ಎರಡನೆಯ ಅಹ್ನಿಕದಿಂದ ಉದ್ಧೃತವಾಗಿ ೨೫೦ ಶೋಕಾರ್ಧಗಳನ್ನು ವಿಸ್ತಾರವಾಗಿದೆ. ಇದರಲ್ಲಿ ವಿಶೃಂಗಾಟಕಬಂಧವೆಂಬ ೨೪ನೆಯ ಚಾಲಕವನ್ನು ಮತಂಗಮತಾನುಸಾರವಾಗಿ ಉದ್ಧರಿಸಿಕೊಳ್ಳಲಾಗಿದೆ. ಆದುದರಿಂದ ಸಂಗೀತಮೇರುವಿನ ಕರ್ತೃವಾದ ಕೋಹಲು ಮತಂಗನಂತರದವನೆಂದೂ ಮತಂಗನಿಂದ ಉದ್ಧೃತನಾದ ಕೋಹಲನಿಗಿಂತ ಭಿನ್ನವೆಂದೂ ಸಿದ್ಧವಾಗುತ್ತದೆ. ಮೂರನೆಯದರಲ್ಲಿ ೭೩ ಶ್ಲೋಕಾರ್ಧಗಳಿದ್ದು ಮಧುಪವೆಂಬ ದೇಶೀಚಾರಿಗಳನ್ನು ಅದೇ ಆಕರದಿಂದ ಉದ್ಧರಿಸಿದೆ. ಇದರಲ್ಲಿ ೨೫ ಮಧುಪಗಳ ಪಟ್ಟಿಯನ್ನೂ ಅವುಗಳ ಲಕ್ಷಣಗಳನ್ನೂ ಹೇಳಿದೆ; ಆಕರಗಳನ್ನು ಸೂಚಿಸಿಲ್ಲ.

ಶಾರ್ದೂಲ ಕೋಹಲ ಸಂವಾದರೂಪದ ಈ ಸಂಗೀತಮೇರು ಗ್ರಂಥದ ಹಸ್ತಪ್ರತಿಯು ಇಂದು ಅನುಪಲಬ್ಧವಾಗಿದೆ.