(ಇ) ಗ್ರಂಥಸ್ವರೂಪ

ಈಗ ಪ್ರಚಾರದಲ್ಲಿರುವ ನಾಟ್ಯಶಾಸ್ತ್ರವು ನಿಶ್ಚಿತವಾದ ಏಕೈಕರೂಪದಲ್ಲಿ ದೊರೆಯುವುದಿಲ್ಲ. ಅದು ಹಸ್ತಪ್ರತಿಗಳಲ್ಲಿ ವಿವಿಧ ಪಾಠಾಂತರಗಳಲ್ಲೂ ವಿವಿಧ ವ್ಯಾಖ್ಯಾನ ಪರಂಪರೆಗಳು ಸ್ವೀಕರಿಸುವ ಪಾಠಗಳಲ್ಲೂ ಕೆಲವು ಅಧ್ಯಾಯಗಳಲ್ಲಿ ಭಿನ್ನ ಪಾಠಕ್ರಮಗಳಲ್ಲೂ, ಅನಿಯತವಾದ ಗದ್ಯಪ್ರಮಾಣಗಳ ಸಮ್ಮಿಶ್ರಣದಿಂದಲೂ ಉಳಿದುಬಂದಿದೆ. ಹೀಗಾಗಿ ಅದಕ್ಕೆ ಷಟ್‌ಸಾಹಸ್ರೀ ಎಂಬ ಹೆಸರು ಅನ್ವರ್ಥವೆ ಅಲ್ಲವೆ ಎಂದು ನಿಶ್ಚಿಯಿಸಲಾಗುವುದಿಲ್ಲ. ಪ್ರಾರಂಭದ ಮೂರು ಅಧ್ಯಾಯಗಳೂ ಕಡೆಯದೂ ನಂತರದಲ್ಲಿ ಅನ್ಯಕೃತವಾಗಿ ಸೇರ್ಪಡೆಯಾಗಿರಬಹುದು ಎಂಬ ಒಂದು ಅಭಿಪ್ರಾಯವು ವಿದ್ವಜ್ಜನರಲ್ಲಿದೆ. ಇದಲ್ಲದೆ ಗ್ರಂಥದ ೫.೧೨.೨೯ ಮತ್ತು ೩೪ನೆಯ ಅಧ್ಯಾಯಗಳಿಗೆ ಭಿನ್ನ ಪಾಠಕ್ರಮಗಳು ದೊರೆಯುತ್ತವೆ. ಉಪಲಬ್ಧವಾದ ನಾಟ್ಯಶಾಸ್ತ್ರಮುದ್ರಣಗಳಲ್ಲಿ ವಿವಿಧವಾದ ಅಧ್ಯಾಯವಿಂಗಡನೆಯಿದೆ. ಮೂವತ್ತೇಳನೆಯ ಅಧ್ಯಾಯದ ಅಸ್ತಿತ್ವದ ಬಗೆಗೆ ಜಿಜ್ಞಾಸೆಯಿದೆ. ಇದಕ್ಕೆ ಅಭಿನವಗುಪ್ತನ ವ್ಯಾಖ್ಯಾನವೂ ಇದೆ ಎಂಬುದು ಗಮನಾರ್ಹವಾಗಿದೆ. ಅಭಿನವಗುಪ್ತನೇ ತನಗೆ ದೊರೆತಿದ್ದ ನಾಟ್ಯಶಾಸ್ತ್ರದ ಮಾತೃಕೆಯನ್ನು ಕುರಿತು ಪಾಠವಿಮರ್ಶೆಯನ್ನು ಸಂಬಂಧಿಸಿದಂತೆ i. ‘ನಾಟ್ಯಶಾಸ್ತ್ರದಿಂದ ನಾನು ಉದ್ಧರಿಸಿಕೊಂಡ ಒಂದು ಗ್ರಂಥಾಂಶವು ನನ್ನ ಮಾತೃಕೆಯಲ್ಲಿಲ್ಲ; ಅದಕ್ಕಾಗಿ ಕೀರ್ತಿಧರನ ವಾಖ್ಯಾನದಲ್ಲಿರುವ ಉದ್ಧೃತಿಯನ್ನು ಅವಲಂಬಿಸಿದ್ದೇನೆ.’ ii. ‘ನಾಟ್ಯಶಾಸ್ತ್ರದ್ದೆಂದು ಪ್ರಚಾರದಲ್ಲಿರುವ, ನಾನು ಉದ್ಧರಿಸಿಕೊಂಡ ಒಂದು ಗ್ರಂಥಾಂಶವು ನನ್ನ ಮಾತೃಕೆಯಲ್ಲಿಲ್ಲ’ -ಎಂಬ ಗ್ರಂಥಲೇಖನಪರಂಪರೆಯ ಎರಡು ಟಿಪ್ಪಣಿಗಳನ್ನು ಬರೆಯುತ್ತಾನೆ. ಅಲ್ಲದೆ ಅವನು ತನ್ನ ವ್ಯಾಖ್ಯಾನದಲ್ಲಿ ಸ್ವೀಕರಿಸಿರುವ ಹಲವು ಪಾಠಗಳು ಇಂದು ಸಂಯೋಜಿತವಾಗಿ ಸಂಪಾದಿತವಾಗಿರುವ ನಾಟ್ಯಶಾಸ್ತ್ರಮುದ್ರಣಗಳಲ್ಲಿಯೂ. ಪಾಠೋಪರಕಣಗಳಲ್ಲಿಯೂ ಸಿಗುವುದಿಲ್ಲ. ಅಲ್ಲದೆ ಈ ಮುದ್ರಿತ ಆವೃತ್ತಿಗಳಲ್ಲಿ ಪೌರ್ವಾಪರ್ಯ ವೈಪರೀತ್ಯಗಳೂ ಅಸಮಂಜಸತೆಗಳೂ ಇವೆ. ಹೀಗಾಗಿ ನಾಟ್ಯಶಾಸ್ತ್ರಸಂಪಾದನಕಾರ್ಯವು ಹಲವು ತೊಡಕಿನ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಬೃಹದ್ದೇಶಿಯ ಸಂಪಾದನದಲ್ಲಿರುವ ಸಮಸ್ಯೆಗಳು ಬೇರೆ ಬೇರೆ ಸ್ತರದವುಗಳು. ಇವುಗಳ ಪೈಕಿ ಮೊದಲನೆಯದು ಲುಪ್ತಾಂಶಗಳನ್ನು ಸಂಬಂಧಿಸಿದ್ದು. ಈಗ ದೊರೆತಿರುವ ಅದರ ಪ್ರತಿಯೊಂದು ಅಧ್ಯಾಯದಲ್ಲಿಯೂ ಕೇವಲ ಅಲ್ಪಾಂಶಕ್ಕೆ ಮಾತ್ರ ಪಾಠೋಪಕರಣಸಾಮಗ್ರಿಯ ಸಮರ್ಥನವಿದೆಯೆಂಬುದು ಈ ಮೂರನೆಯ ಸಂಪಾದನದ ಪಾಠವಿಮರ್ಶೆ ಎಂಬ ಭಾಗದಿಂದ ತಿಳಿಯುತ್ತದೆ. ಉಳಿದ ಬಹುವಾದ ಅಂಶಕ್ಕೆ ಈ ಪೀಠಿಕೆಯಲ್ಲಿ ಉಲ್ಲೇಖಿಸಿರುವ ಎರಡು ಅಸಮಗ್ರ, ಲೋಪದೋಷಪರಿಪ್ಲುತವಾದ, ಜೀರ್ಣವಾದ ಹಸ್ತಪ್ರತಿಗಳನ್ನೇ ಆಶ್ರಯಿಸಬೇಕಾಗಿದೆ. ಪಾಠೋಪಕರಣಗಳಲ್ಲಿ ದೊರೆಯುವ ಬಹು ಭಾಗವು ಹಸ್ತಪ್ರತಿಗಳಲಿಲ್ಲ. ಇದು ಈ ಪೀಠಿಕೆಯ ‘ಬೃಹದ್ದೇಶಿಯ ಲುಪ್ತಾಂಶಗಳು, ಉಲ್ಲೇಖಗಳು ಮ್ತು ಉದ್ಧೃತಿಗಳು’ ಎಂಬ ಭಾಗದಿಂದ (ಪು. ೭೫-೧೧೯) ಸ್ಪಷ್ಟಪಡುತ್ತದೆ. ಮೊದಲನೆಯ ಅಧ್ಯಾಯದ ಹೆಸರನ್ನು ತಿಳಿಯುವುದಕ್ಕೆ ಗ್ರಂಥದಲ್ಲಾಗಲಿ ಬೇರೆಡೆಯಲ್ಲಾಗಲಿ ಯಾವ ಸಾಧನಗಳೂ ಇಲ್ಲ. ಶಾರ್ಙ್ಗದೇವನು ಸಂಗೀತರತ್ನಾಕರವನ್ನು ಗ್ರಥನ ಮಾಡುವಲ್ಲಿ ಮತಂಗನಿಂದ ಬಹುವಾಗಿ ಪ್ರಭಾವಿತವಾಗಿರುವಂತೆ ತೋರುತ್ತದೆ; ಸಂಗೀತರತ್ನಾಕರದ ಮೊದಲನೆಯ ಸ್ವರಗತಾಧ್ಯಾಯದಲ್ಲಿರುವ ಜಾತಿನಿರೂಪಣವನ್ನು ಹೊರತುಪಡಿಸಿದರೆ ನಾದ-ಶ್ರುತಿ-ಸ್ವರ-ಗ್ರಾಮ-ಮೂರ್ಛನಾ-ತಾನ-ಅಲಂಕಾರ-ಗೀತಿ ಎಂಬ ನಿರೂಪಣಕ್ರಮವೂ ಲಕ್ಷಣಸಾದೃಶ್ಯವೂ ಬೃಹದ್ದೇಶಿಯ ಮೊದಲನೆಯ ಅಧ್ಯಾಯದಲ್ಲಿ ಸಹ ದೊರೆಯುವುದರಿಂದ ಅದಕ್ಕೆ ಸ್ವರಗತಾಧ್ಯಾಯವೆಂಬ ಹೆಸರನ್ನು ನಾನೇ ಸೂಚಿಸಿದ್ದೇನೆ. ಮೊದಲನೆಯ ಅಧ್ಯಾಯದ ಅಲಂಕಾರಪ್ರಕರಣದಲ್ಲಿ ಉದ್ಧೃತವಾದ ಭರತಮತದ ಉದ್ಧೃತಿಯೂ ಸರಿಗಮಾದಿ ಸ್ವರಗಳಿಂದ ಮಾಡಿದ ಅಲಂಕಾರಗಳ ಪ್ರಸ್ತಾರವೂ ಹಲವು ಲೋಪದೋಷಗಳಿಂದ ಕೂಡಿದೆ. ಆರನೆಯ ಪ್ರಬಂಧಾಧ್ಯಾಯದ ಗ್ರಂಥಭಾಗವು ಸಹ ಲೋಪದೋಷಗಳಿಂದಲೂ ಸಂದೇಹಾಸ್ಪದ ಅಂಶಗಳಿಂದಲೂ ಕೂಡಿದೆ. ಎರಡನೆಯ ಜಾತ್ಯಧ್ಯಾಯದಲ್ಲಿ ಒಂಭತ್ತು ಜಾತಿಗಳ ಲಕ್ಷಣಗಳೂ ಲಕ್ಷ್ಯಪ್ರಸ್ತಾರಗಳೂ ಬಹುಶಃ ಸಂಗೀತರತ್ನಾಕರದಿಂದ ಪ್ರಕ್ಷೇಪಗೊಂಡಿವೆ. ಅಭಿನವಭಾರತೀ ಮತ್ತು ಬೃಹದ್ದೇಶೀಗಳಲ್ಲಿ ಸದೃಶಗ್ರಂಥಭಾಗಗಳಿವೆ. (ಇವುಗಳನ್ನು ಈ ಪೀಠಿಕೆಯ ‘ಲುಪ್ತಾಂಶಗಳು, ಉಲ್ಲೇಖಗಳು ಮತ್ತು ಉದ್ಧೃತಿಗಳು’ ಎಂಬ ಅಧ್ಯಾಯದ ಪು.೧೨೦-೧೩೦ಗಳಲ್ಲಿ ಕೊಡಲಾಗಿದೆ.) ಇವುಗಳನ್ನು ಆಕರಸ್ಮರಣೆಯಿಲ್ಲದೆ ಅಭಿನವಗುಪ್ತನು ಬೃಹದ್ದೇಶಿಯಿಂದ ಉದ್ಧರಿಸಿಕೊಂಡಿದ್ದಾನೋ ಬೃಹದ್ದೇಶಿಯ ಲಿಪಿಕಾರನು ಅಭಿವನಭಾರತಿಯಿಂದ ಪ್ರಕ್ಷೇಪಗೊಳಿಸಿದ್ದಾನೋ ಎಂಬ ಪ್ರಶ್ನೆಗೆ ಇಲ್ಲಿ ಸ್ವಲ್ಪ ಎಡೆಯಿದೆ. ಅಂತೆಯೇ, ನಾನ್ಯದೇವನ ಭರತಭಾಷ್ಯದಲ್ಲಿ ಬೃಹದ್ದೇಶಿಯಲ್ಲಿರುವುದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರುವುದು, ಮತಂಗನದೆಂದು ಉದ್ಧರಿಸಿಕೊಂಡಿರುವಕ ಮತ್ತು ಬೃಹದ್ದೇಶಿಯಿಂದ ಎಂದು ಉದ್ಧರಿಸಿಕೊಂಡಿರುವ ಸಮಾನವಿಷಯಕಲಕ್ಷಣವು ಭಿನ್ನವಾಗಿರುವುದು, (ನೋಡಿ, ಇದೇ ಪೀಠಿಕೆ, ಪು.೮೯-೯೯) ಇತ್ಯಾದಿ ಸಮಸ್ಯೆಗಳು ಬೃಹದ್ದೇಶಿಯ ಸಂಪಾದನವನ್ನು ಜಟಿಲಗೊಳಿಸುತ್ತವೆ. ಜಾತ್ಯಧ್ಯಾಯದಲ್ಲಿ ಪ್ರಕ್ಷಿಪ್ತವೆಂದು ಭಾವಿಸಿರುವ ಗ್ರಂಥಾಂಶವನ್ನು ಸಂಗೀತರತ್ನಾಕರದ ಪರಸ್ಪರ ಗ್ರಂಥಾಂಶಕ್ಕೆ ಕಲ್ಲಿನಾಥನು ಬರೆದಿರುವ ವ್ಯಾಖ್ಯಾನದೊಡನೆ ಹೋಲಿಸಿದಾಗ ಕಲ್ಲಿನಾಥನಿಗೆ ದೊರೆತಿದ್ದ ಬೃಹದ್ದೇಶೀ ಮಾತೃಕೆಯು ತನ್ನ ಲೇಖನಪರಂಪರೆಯಲ್ಲಿ ಆ ವೇಳೆಗೆ ವ್ಯತ್ಯಾಸವಾಗಲು ತೊಡಗಿತ್ತು ಎಂಬ ಭಾವನೆಯನ್ನು ಪ್ರೇರಿಸುತ್ತದೆ. (ನೋಡಿ, ಇದೇ ಪೀಠಿಕೆ, ಪು.೬೩)

ನಾಟ್ಯಶಾಸ್ತ್ರವು ಪುರಾಣಶೈಲಿಯಲ್ಲಿ ರಚಿತವಾಗಿದೆ; ಎಂದರೆ ಮುನಿಗಳು ಕೇಳಿದ ಪ್ರಶ್ನೆಗಳಿಗೆ ಮುನಿಗಳು ಉಪದೇಶರೂಪದಲ್ಲಿ ನೀಡಿದ ಉತ್ತರಗಳನ್ನು ಒಳಗೊಂಡು ಸಂವಾದ ರೂಪದಲ್ಲಿ ಏರ್ಪಟ್ಟಿದೆ. ಒಬ್ಬ ಮುನಿಯನ್ನು ಇನ್ನೊಬ್ಬ ಮುನಿ ಅಥವಾ ಹಲವು ಮುನಿಗಳು, ರಾಜರು ಅಥವಾ ಮತ್ತಿರರು ಕೇಳಿದ ಪ್ರಶ್ನೆಗಳಿಗೆ ಉತ್ತರರೂಪದಲ್ಲಿ ಗ್ರಂಥರಚನೆ ಮಾಡುವುದು ಪ್ರಾಚೀನಭಾರತದಲ್ಲಿ ಒಂದು ಸಾಹಿತ್ಯಸಂಪ್ರದಾಯವೇ ಆಗಿತ್ತು. ರಾಮಾಯಣ, ಮಹಾಭಾರತ, ಮುಖ್ಯವಾದ ಉಪನಿಷತ್ತುಗಳು, ಪ್ರಸ್ಥಾನತ್ರಯಭಾಷ್ಯ, ಭಗವದ್ಗೀತೆ, ಇವೆಲ್ಲವೂ ಸಂವಾದ ರೂಪದಲ್ಲಿಯೇ ಗ್ರಥನಗೊಂಡಿದೆ. ಒಂದೊಂದು ಶಾಸ್ತ್ರಮರ್ಯಾದೆಯಲ್ಲೂ ಇದು ಅಲ್ಪಸ್ವಲ್ಪ ಭಿನ್ನಶೈಲಿಯನ್ನು ಅನುಸರಿಸುತ್ತದೆ. ಉದಾಹರಣೆಗೆ ಅಯುರ್ವೇದದಲ್ಲಿ ಪುರಾತನತಮ ಪ್ರಾಮಾಣಿಕ ಗ್ರಂಥಗಳಲ್ಲಿ ತದ್ವಿದ್ಯಾಸಂಭಾಷವೆಂಬ ರಚನಾತಂತ್ರವನ್ನು ಬಳಸಿದೆ. ಇದರಲ್ಲಿ ಯಾವುದಾದರೊಂದು ಮುಖ್ಯ ವಿಷಯದ ಮೇಲೆ ಆಯಾ ತಜ್ಞರ ಒಂದು ಸಮ್ಮೇಳನ, ವಿಚಾರಗೋಷ್ಠಿ ಅಥವಾ ವಿಚಾರಸಂಕಿರಣವನ್ನು ಏರ್ಪಡಿಸಿದಂತೆ ಕಲ್ಪಿಸಿಕೊಂಡು ಬೇರೆ ಬೇರೆ ಕಾಲದೇಶಗಳಿಗೆ ಸೇರಿದ್ದರೂ ಅವರೆಲ್ಲ ಇದರಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಿದ್ದಂತೆಯೂ ಆಯಾ ಮುಖ್ಯ ಅಧಿಕರಣದ ಮೇಲೆ ಅವರು ತಮ್ಮ ತಮ್ಮ ತಜ್ಞ ಅಭಿಪ್ರಾಯಗಳನ್ನು ನೀಡುತ್ತಿದ್ದರೆಂದೂ ಕಲ್ಪಿಸಿಕೊಂಡು ಅಂತಹ ದುಂಡುಮೇಜಿನ ವಿದ್ವದ್‌ಪರಿಷತ್ತನ್ನು ತದ್ವಿದ್ಯಾಸಂಭಾಷವೆಂದು ಕರೆಯಲಾಗುತ್ತಿತ್ತು. ಇಂತಹ ನಿದರ್ಶನಗಳು ಸುಶ್ರುತಸಂಹಿತೆಯಲ್ಲೂ (೩.೩೧-೩೨, ಪು.೩೪-೩೫) ಚರಕಸಂಹಿತೆಯಲ್ಲೂ (೪.೬.೨೧, ಪು.೩೨೪) ದೊರೆಯುತ್ತವೆ. ಬ್ರಹ್ಮಜಿಜ್ಞಾಸೆಯು ಒಂದು ತದ್ವಿದ್ಯಾಸಂಭಾಷವು ಬೃಹದಾರಣ್ಯಕೋಪನಿಷತ್ತಿನಲ್ಲಿ ಬರುತ್ತದೆ. ಮುನಿಸಂವಾದತಂತ್ರವನ್ನು ಬಳಸಿ ವಿಷಯ ನಿರೂಪಣೆ ಮಾಡುವುದು ಪುರಾಣಗಳಲ್ಲಿ ಪ್ರಸಿದ್ಧವೇ ಆಗಿದೆ.

ಪುರಾಣಗಳನ್ನು ಮಹಾಪುರಾಣ, ಉಪಪುರಾಣ, ಎಂದು ಎರಡು ವಿಧವಾಗಿ ವರ್ಗೀಕರಿಸಬಹುದು. ಮಹಾಪುರಾಣವು ಸರ್ಗ, ವಿಸರ್ಗ, ವೃತ್ತಿ, ರಕ್ಷಾ, ಅಂತರ, ವಂಶ, ವಂಶಾನುಚರಿತ, ಸಂಸ್ಥಾ, ಹೇತು, ಅಪಾಶ್ರಯ, ಎಂಬ ಹತ್ತು ಲಕ್ಷಣಗಳನ್ನು ಮುನಿಗಳ ಪ್ರಶ್ನೋತ್ತರದಲ್ಲಿ ನಿರೂಪಿಸಿದರೆ ಉಪಪುರಾಣವು ಸರ್ಗ, ಪ್ರತಿಸರ್ಗ, ವಂಶ, ಮನ್ವಂತರ, ಮತ್ತು ವಂಶಾನುಚರಿತವೆಂಬ ಪಂಚಲಕ್ಷಣಗಳನ್ನು ಮುನಿಸಂವಾದರೂಪದಲ್ಲಿ ಪ್ರತಿಪಾದಿಸುತ್ತದೆ, ಇವುಗಳಲ್ಲಿ ಒಬ್ಬನೇ ಋಷಿಯು ಬೇರೆ ಬೇರೆ ಋಷಿಗಳ ಪ್ರಶ್ನೆಗಳಿಗೆ ಉತ್ತರರೂಪದ ಉಪದೇಶವನ್ನು ನೀಡುವುದೂ, ಬೇರೆ ಬೇರೆ ಋಷಿಗಳು ಬೇರೆ ಬೇರೆ ವಿಷಯಗಳನ್ನು ಕುರಿತು ಕೇಳುವ ಪ್ರಶ್ನೆಗಳಿಗೆ ಬೇರೆ ಬೇರೆ ಋಷಿಗಳುಉತ್ತರ ನೀಡುವುದೂ ಉಂಟು. ನಾಟ್ಯಶಾಸ್ತ್ರದಲ್ಲಿ ಪ್ರಶ್ನೆಗಳನ್ನು ಕೇಳುವ ಆತ್ರೇಯಾದಿ ಋಷಿಗಳು ನಿಯತ ಪೃಚ್ಛಕರು, ಉತ್ತರ ನೀಡುವ ಮುನಿಯು ಒಬ್ಬನೇ-ಭರತ, ನಾಟ್ಯಕಲೆಯ ಉತ್ಪತ್ತಿ, ಕರ್ತೃತ್ವ ಅಂಗಗಳು, ಪ್ರಮಾಣಗಳು ಮತ್ತು ಪ್ರಯೋಗವಿಧಾನ ಇವುಗಳನ್ನು ಕುರಿತು ಪ್ರಂಚಪ್ರಶ್ನೆಗಳೆಂದು ಪ್ರಸಿದ್ಧವಾಗಿರುವ ಐದು ಪ್ರಶ್ನೆಗಳ ಮಂಡನದಿಂದ ಗ್ರಂಥವು ಆರಂಭವಾಗಿ ಅವುಗಳಿಗೆ ಉತ್ತರದ / ಉತ್ತರಗಳ ನಡುವೆಯೋ ಕೊನೆಯಲ್ಲಿಯೋ ಆಯಾ ಅಧಿಕರಣವನ್ನು ಸಂಬಂಧಿಸಿದ ಉಪಪ್ರಶ್ನೆಗಳು ಎದ್ದು ನಿಂತು ಶಾಸ್ತ್ರದ ವಿವರಗಳು ಅರಳುತ್ತವೆ. ನಿರೂಪಣೆಯು ಸಮಗ್ರವಾಗುತ್ತದೆ. ಇಂತಹ ಉಪಪ್ರಶ್ನೆಗಳನ್ನು ಋಷಿಗಳು ನಾಟ್ಯಶಾಸ್ತದ ೧,೨,೪,೬,೮,೧೩ ಮತ್ತು ೩೬ನೆಯ ಅಧ್ಯಾಯಗಳ ಮೊದಲನಲ್ಲಿಯೋ ಮಧ್ಯದಲ್ಲಿಯೋ ಕೇಳಿ ಶಾಸ್ತ್ರನಿರೂಪಣೆಯಲ್ಲಿ ಶಿಸ್ತು, ಬಿಗಿ, ಮಿತವ್ಯಯ, ಪ್ರವಾಹ, ಅತಿವ್ಯಾಪ್ತಿ-ಅವ್ಯಾಪ್ತಿಗಳ ಅಭಾವ, ಸಂಗತಿ, ಅಂಗ-ಅಂಗಿಭಾವ ಇತ್ಯಾದಿಗಳನ್ನು ಏರ್ಪಡಿಸುತ್ತಾರೆ.

ನಾಟ್ಯಶಾಸ್ತ್ರವು ಪುರಾಣಶೈಲಿಯಲ್ಲಿ ರಚಿತವಾಗಿದೆಯೆನ್ನಲು ಇನ್ನೂ ಒಂದು ನಿದರ್ಶನವೆಂದರೆ ಆಖ್ಯಾನಗಳು ಮತ್ತು ಉಪಾಖ್ಯಾನಗಳು. ಅದು ಪ್ರಾರಂಭವಾಗುವುದು ನಾಟ್ಯೋತ್ಪತ್ತಿಯನ್ನು ವಿವರಿಸುವ ಕಥೆಯಿಂದ; ಅದು ಮುಗಿಯುವುದು ನಾಟ್ಯವೇದವು ಭೂಮಿಯಲ್ಲಿ ಅವತರಿಸಿದ ಕಥೆಯಿಂದ ನಡುವೆ ಇಂದ್ರಧ್ವಜೋತ್ಸವ, ಅಮೃತಮಂಥನ, ತ್ರಿಪುರದಹನ, ಜರ್ಜರಪೂಜೆ, ನಿರ್ಗೀತ-ಬಹಿರ್ಗೀತಗಳು, ಭಾರತಿಯೇ ಮೊದಲಾದ ನಾಲ್ಕು ವ್ಯಕ್ತಿಗಳ ಉತ್ಪತ್ತಿ ಮುಂತಾದ ಕಥೆಗಳು ಸಂದಭೋಚಿತವಾಗಿ ಬರುತ್ತವೆ. ಇವುಗಳಲ್ಲಿ ಬರುವ ಪಾತ್ರಗಳೆಲ್ಲ ಪೌರಾಣಿಕರೇ – ಬ್ರಹ್ಮ, ವಿಷ್ಣು,ಶಂಭು, ಇಂದ್ರ, ದೇವತೆಗಳು ಮತ್ತು ರಾಕ್ಷಸರು ಅವುಗಳನ್ನು ಅಭಿನಯಿಸುವವರು ಭರತಮುನಿ ಮತ್ತು ಅವನ ‘ಪುತ್ರ’ರು, ಹಿಮ್ಮೇಳದ ಗಾಯಕವಾದಕರು ಇದಕ್ಕೆಂದೇ ಸೃಷ್ಟಿಗೊಂಡ ಗಂಧರ್ವರು; ನರ್ತಕಿಯರು, ಅಪ್ಸರೆಯರು, ಪ್ರೇಕ್ಷಕರು, ದೇವಾಸುರರು, ನಾಟ್ಯಶಾಸ್ತ್ರವು ರಚಿತವಾದುದು ಚಾರಿತ್ರಕ ಕಾಲದಲ್ಲಾದರೂ ನಾಟ್ಯೋತ್ಪತ್ತಿಯ ಕಾಲವು ವೈವಸ್ವತಮನ್ವಂತರದಷ್ಟು ಪ್ರಾಚೀನ; ಭೂಮಿಯಲ್ಲಿ ನಾಟ್ಯವು ಅವತರಿಸುವುದಾದರೂಇಂದ್ರ, ನಹುಷ ಮುಂತಾದ ಪೌರಾಣಿಕ ವ್ಯಕ್ತಿಗಳ ಕಾಲದಲ್ಲೇ. ಗ್ರಂಥಗೌರವವನ್ನೂ ಗ್ರಂಥಸ್ವೀಕೃತಿಯನ್ನು ಸಾಧಿಸಲು ಗ್ರಂಥಕಾರನು ಈ ಉಪಾಯಗಳನ್ನು ಸಾಂಕೇತಿಕವಾಗಿ ಬಳಸಿ ತನ್ನನ್ನೂ ತನ್ನ ಗ್ರಂಥವನ್ನೂ ಪೌರಾಣಿಕ ಗೂಢತೆಯ ಹಿಂದೆ ಮರೆಮಾಚಿದ್ದಾನೆ.

ಬೃಹದ್ದೇಶಿಯಲ್ಲಿ ಪೃಚ್ಛಕ ಮುನಿಯು ನಾರದ, ನಿರೂಪಣಕಾರನು, ಮತಂಗಮುನಿ; ಗ್ರಂಥಾರಂಭದಲ್ಲಿ ಮಾತ್ರ ಹೀಗಿದೆ (೨,೩); ಎರಡನೆಯ ಅಧ್ಯಾಯದ ಪ್ರಾರಂಭವು ಮೊದಲನೆಯದರ ಕೊನೆಯನ್ನು ಮುಂದುವರಿಸುವಂತೆಯೇ ರಚಿತವಾಗಿದೆ : ‘ಇದಾನೀಂ ಅವಸರಪ್ರಾಪ್ತನಾಂ ಜಾತೀನಾಮುದ್ದೇಶಮಾಹ-‘ (೩೯೫) ‘ಧ್ರುವಾಗಳನ್ನೂ ಪದಗೀತಿಗಳನ್ನೂ ಜಾತಿಗಳಲ್ಲಿ ರಚಿಸಲಾಗುತ್ತದೆ; ಆದುದರಿಂದ ಪದಗೀತಿಗಳನ್ನು ಹೇಳಿಯಾದ ಮೇಲೆ ಈಗ ಜಾತಿಗಳನ್ನು ನಿರೂಪಿಸುವುದು ಉಚಿತವಾಗಿದೆ’ ಎಂಬುದು ಇಲ್ಲಿನ ಗ್ರಂಥಸಂದರ್ಭವಿರಬಹುದು. ಹೀಗೆ ಇಲ್ಲಿ ಮತಂಗಮುನಿಯು ನಾರದನನ್ನು ಉದ್ದೇಶಿಸಿ ಜಾತ್ಯಧ್ಯಾಯವನ್ನು ಉಪದೇಶಿಸುತ್ತಿದ್ದಾನೆ, ಎಂದಿಟ್ಟುಕೊಳ್ಳಬೇಕು. ಮೂರನೆಯ ರಾಗಾಧ್ಯಾಯದಲ್ಲಿಯೂ ‘ಕಿಮುಚ್ಯತೇ ರಾಗಶಬ್ದೇನ ಕಿಂ ವಾ ರಾಗಸ್ಯ ಲಕ್ಷಣಂ’ ಇತ್ಯಾದಿ ಪ್ರಶ್ನೆಗಳೂ (೫೭೯) ನಾರದನವೇ : ಇದಕ್ಕೆ ಉತ್ತರರೂಪವಾದ ಮೂರನೆಯ ಅಧ್ಯಾಯವೂ ಮತಂಗರಚಿತವೇ. ನಾಲ್ಕನೆಯ ಅಧ್ಯಾಯದ ಮೊದಲನೆಯ ಖಂಡವು ಸರ್ವಾಗಮಸಂಹಿತೆಯ ನಾಲ್ಕನೆಯ ಅಧ್ಯಾಯವಾಗಿದ್ದು ಭಾಷಾರಾಗಗಳ ವಿಷಯದಲ್ಲಿ ಕಾಶ್ಯಪಮುನಿಯು ಪ್ರಶ್ನೆಗಳನ್ನು ಕೇಳಿ (೭೪೦-೭೪೩) ಯಾಷ್ಟಿಕನು ಅವುಗಳಿಗೆ ಉತ್ತರಗಳನ್ನು ನೀಡಿದ್ದಾನೆ. ಅದರ ಮೊದಲಿಲ್ಲಿ (೭೩೮) ‘ಇದುವರೆಗೆ ನಾನು ಗ್ರಾಮರಾಗಗಳನ್ನು ಹೇಳಿದ್ದಾಯಿತು;ಈಗ ಭಾಷಾರಾಗಗಳ ಲಕ್ಷಣಗಳನ್ನು ಹೇಳುತ್ತೇನೆ, ಕೇಳು’ ಎಂಬ ಮಾತಿದೆ. ಇದನ್ನು ಯಾಷ್ಟಿಕನು ಕಾಶ್ಯಪನನ್ನು ಕುರಿತು ಹೇಳಿದ್ದಿರಬಹುದು; ಮತಂಗನು ನಾರದನಿಗೆ ಹೇಳಿದ್ದು ಎಂಬುದೂ ಸಂಭಾವ್ಯವಾಗಿದೆ. ಈ ಅಧ್ಯಾಯದ ಉದ್ದಕ್ಕೂ ‘ಇವು ಯಾಷ್ಟಿಕನು ಹೇಳಿದ ಭಾಷಾರಾಗಗಳು’ (೯೭೭, ೯೯೧, ೧೦೦೩, ೧೦೩೫) ಎಂದಿರುವ ಮಾತುಗಳು ಮತಂಗನವೇ ಎನ್ನಲು ಅಡ್ಡಿಯಿಲ್ಲ. ಅಂತೆಯೇ ಐದನೆಯ ಅಧ್ಯಾಯದ ಪ್ರಾರಂಭದಲ್ಲಿರುವ ‘ಅತಃಪರಂ ಪ್ರವಕ್ಷ್ಯಾಮಿ ದೇಶೀರಾಗಕದಂಬಕಮ್’ (೧೦೩೮) ಎಂಬುದೂ ಮತಂಗೋಕ್ತಿಯೇ. ಆರನೆಯ ಅಧ್ಯಾಯದ ಆದಿಯಲ್ಲಿ (೧೦೫೪) ಮತಂಗನನ್ನು ಕುರಿತ ಉಲ್ಲೇಖವು ಪ್ರಥಮೈಕವಚನದಲ್ಲಿದೆ. ಅಲ್ಲಿಯೇ ಇರುವ ‘ಮುನೀನುದ್ದಿಶ್ಯ’ ಎನ್ನುವಲ್ಲಿ ಮುನಿಗಳು ಎಂಬ ಬಹುವಚನವಿರುವುದು ಗಮನಾರ್ಹವಾಗಿದೆ. ಇವರು ಯಾರೆಂಬುದು ತಿಳಿಯದು. ಈಗ ದೊರೆಯದೆ ಇರುವ ವಾದ್ಯಾಧ್ಯಾಯ, ನೃತ್ತಾಧ್ಯಾಯ ಮತ್ತು ತಾಲಾಧ್ಯಾಯಗಳಲ್ಲಿ ಪೃಚ್ಛಕರು (ಇದ್ದರೆ) ಯಾರೆಂದು ಹೇಳಲು ಬರುವಂತಿಲ್ಲ. ಪ್ರತಿ ಅಧ್ಯಾಯದಲ್ಲಿಯೂ ಪ್ರಶ್ನೆಗಳು ಪ್ರಾರಂಭದಲ್ಲಿ ಮಾತ್ರ ಇವೆ. ಇವಕ್ಕೆ ಉತ್ತರಗಳು ಸ್ವಯಂಪೂರ್ಣವಾಗಿದ್ದು ಆಯಾ ಅಧ್ಯಾಯದಲ್ಲಿಯೇ ಅಡಕವಾಗಿವೆ.

(ಈ) ನಿರೂಪಣವಿಧಾನ ಮತ್ತು ಶೈಲಿ

ಭರತಮುನಿಯು ನಾಟ್ಯಶಾಸ್ತ್ರವನ್ನು ಬರೆದಿದ್ದು ತಾನು ಎಂದು ಹೇಳುವುದರ ಬದಲು ಅದರ ಕರ್ತೃವು ಬ್ರಹ್ಮನೆಂದೂ (ನಾಟ್ಯಶಾಸ್ತ್ರಂ,೧.೧) ಅವನು ತನಗೆ ಉಪದೇಶಿಸಿದ್ದನ್ನು ತಾನು ತನ್ನ ಮಕ್ಕಳಿಗೆ (=ಶಿಷ್ಯರಿಗೆ) ಹೇಳಿಕೊಟ್ಟೆನೆಂದೂ ತಿಳಿಸುತ್ತಾನೆ. ಬ್ರಹ್ಮನನ್ನು ಅವನು ಆಗಾಗ -ಉದಾ. ವೃತ್ತಿಗಳ ಉತ್ಪತ್ತಿ, ಜಾತಿಗಳ ಸಂಖ್ಯೆ – ಸ್ಮರಿಸುತ್ತಾನೆ. ಇವುಗಳ ಪೈಕಿ ಎರಡನೆಯದನ್ನು ಮತಂಗನು ಭರತನಿಂದಲೇ ಎತ್ತಿಕೊಂಡಿದ್ದಾನೆ. ‘ಬ್ರಹ್ಮಣಾ ಯದುದಾಹೃತಮ್’ ಎಂದು ಪ್ರತಿಜ್ಞಾವಾಕ್ಯದಲ್ಲಿ ಹೇಳಿದ್ದರೂ ಭರತನು ನಾಮನಿರ್ದೇಶನವಿಲ್ಲದೆ ಪೂರ್ವಾಚಾರ್ಯರ ಅನುವಂಶೀಯವಾದ ಆರ್ಯೇಗಳನ್ನು ಅನೇಕ ವೇಳೆ ಸಮರ್ಥನೆಗಾಗಿ ಅಥವಾ ಮತಾಂತರಕ್ಕಾಗಿ ಉದ್ಧರಿಸಿಕೊಳ್ಳುತ್ತಾನೆ. (ಇದನ್ನು ಮುಂದೆ ಪು.೧೬೭-೧೬೮)ರಲ್ಲಿ ಪ್ರಸ್ತಾಪಿಸಲಾಗುವುದು). ಇದಲ್ಲದೆ ಸ್ವಾತಿಯನ್ನು ಅವನದ್ಧವಾದ್ಯೋತ್ಪತ್ತಿಗೆ ಮೂಲಪುರುಷನೆಂದೂ ನಾರದನು ಗಾಂಧರ್ವವಿದ್ಯಾಪ್ರವರ್ತಕನೆಂದೂ ಅವನು ಮುಕ್ತೋಕ್ತಿಯಲ್ಲೇ ಹೇಳಿದ್ದಾನೆ. (ಅದೇ ಗ್ರಂಥ, ೩೪: ಭಿನ್ನಪಾಠಕ್ರಮ) ಬ್ರಹ್ಮನೇ ನಾರದಾದಿ ಗಂಧರ್ವರನ್ನು ಗಾನಯೋಗಕ್ಕೆಂದೂ ಸ್ವಾತಿಯನ್ನು ಅವನದ್ಧವಾದ್ಯಯೋಗಕ್ಕೆಂದೂ ನಿಯೋಜಿಸಿದನು. (ಅದೇ, ೧.೫೧). ಈ ನಾರದನು ನಾರದೀಯ ಶಿಕ್ಷೆಯ ಕರ್ತೃವಾಗಿರುವುದು ಸಂಭಾವ್ಯವಾಗಿದೆ. ನಾರದನು ಗಾಂಧರ್ವಪ್ರವರ್ತಕನೆಂಬ ಉಲ್ಲೇಖವು ಬೇರೆಡೆಗಳಲ್ಲೂ ಉಂಟು. ಉದಾ. ಮಹಾಭಾರತ (ಬೊಂಬಾಯಿ ಆವೃತ್ತಿ ೧೨.೨೧೦.೨೧ / ಪುಣೆಯ ಆವೃತ್ತಿ ೧೨.೨೦೩.೧೯), ಬಾಣಭಟ್ಟನ ಕಾದಂಬರೀ (ಪು.೬೮), ದತ್ತಿಲಂ (೩) ಇತ್ಯಾದಿ. ಅಭಿನವಗುಪ್ತನು ಗಾಂಧರ್ವಶಬ್ಧವನ್ನು ನಿರ್ವಚನಮಾಡಿದ್ದು ನಾರದನೇ ಎನ್ನುತ್ತಾನೆ (ನಾಟ್ಯಶಾಸ್ತ್ರಂ, ೨೮.೯ರ ವ್ಯಾಖ್ಯಾನ). ಗಾಂಧರ್ವ ವಿದ್ಯಾಪ್ರವರ್ತಕನು ನಾರದನೆನ್ನುವುದರ ಬದಲು ವಿಶಾಖಿಲನೆಂಬ ಉಲ್ಲೇಖವು ಪಲ್ಲವ ಮಹೇಂದ್ರವರ್ಮನ ಮಾಮಂಡೂರು ಶಾಸನದಲ್ಲಿದೆ (ಸೌತ್ ಇಂಡಿಯನ್ ಇನ್ ಸ್ಕ್ರಿಪ್‌ಷನ್ಸ್, ೪.ಪು.೧೨೬). ನಾಟ್ಯಶಾಸ್ತ್ರ ಪ್ರಾಮಾಣಿಕನಾಗಿ ಶಂಭುವು ವಹಿಸುವ ಪಾತ್ರವನ್ನು ಭರತನು ಉಲ್ಲೇಖಿಸುವುದನ್ನು ಹಿಂದೆಯೇ ಪ್ರಸ್ತಾಪಿಸಿದೆ. ಒಟ್ಟಿನಲ್ಲಿ, ನಾಟ್ಯಶಾಸ್ತ್ರದ ನಿರೂಪಣ ವಿಧಾನವು ಪರೋಕ್ಷವಾದುದು. ಭರತಮುನಿಯು ಅದರ ಕರ್ತೃತ್ವವನ್ನು ಪೌರಾಣಿಕ ದೇವತೆಗಳಿಗೆ ಆರೋಪಿಸುತ್ತಾನೆ.

ಭರತನು ನಾಟ್ಯಶಾಸ್ತ್ರ ನಿರೂಪಣದಲ್ಲಿ ಈ ವಿಧಾನವನ್ನು ಅನುಸರಿಸಿದ್ದಾನೆ. i. ನಾಟ್ಯವನ್ನು ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ತ್ವಿಕ ಎಂಬ ನಾಲ್ಕು ಮುಖ್ಯ ಅಭಿನಯವಿಧಗಳಲ್ಲಿ ವಿಂಗಡಿಸುವುದು; ಹೀಗೆ, ಸಂಗೀತಕ್ಕೆ ಸಂಬಂಧಿಸಿದ ವಿಷಯಗಳನ್ನೆಲ್ಲ (ಅಧ್ಯಾಯಗಳು ೨೮-೩೪) ಗೇಯಾಧಿಕಾರವೆಂದು ಒಂದೆಡೆ ಸಂಕಲಿಸಿ ವಾಚಿಕಾಭಿನಯದ ಅಂಗವಾಗಿ ವಿವರಿಸುವುದು; ನೃತ್ತಸಂಬಂಧಿಯಾದ ವಿಷಯಗಳನ್ನೆಲ್ಲ ನೃತ್ತಾಧಿಕಾರವೆಂದು ಏಕತ್ರಗೊಳಿಸಿ ಆಂಗಿಕಾಭಿನಯದ ಅಂಗವಾಗಿ ನಿರೂಪಿಸುವುದು. ii. ನಿರೂಪಣೆಗೆ ಅಗತ್ಯವಾದ ಬೇರೆ ಬೇರೆ ಶಾಸ್ತ್ರಗಳನ್ನು ಆಯಾ ಅಭಿನಯಪ್ರಕಾರದಲ್ಲಿ ಗುಂಫನಗೊಳಿಸಿ ಅವುಗಳನ್ನು ಅಧಿಕರಣಗಳನ್ನಾಗಿ ಪುನಃ ವಿಭಾಗಿಸಿಕೊಳ್ಳುವುದು. iii. ಒಂದೊಂದು ಅಧಿಕರಣದಲ್ಲಿಯೂ ನಿರೂಪಿಸಬೇಕಾಗಿರುವ ಅಂಶಗಳ ಪರಿವಿಡಿಯನ್ನು ತಯಾರಿಸಿಕೊಂಡು, ಅನುಕ್ರಮವನ್ನು ಏರ್ಪಡಿಸಿ ಒಂದು ಅಥವಾ ಹೆಚ್ಚು ಸಂಗ್ರಹಶ್ಲೋಕಗಳಲ್ಲಿ ಪ್ರಾರಂಭದಲ್ಲಿಯೇ ಅಡಕಗೊಳಿಸುವುದು. ನಿರೂಪಣದಲ್ಲಿ ಇದೇ ಅನುಕ್ರಮವನ್ನು ಅನುಸರಿಸುವುದು (ಅಪವಾದ :ಆರನೆಯ ಮತ್ತು ಏಳನೆಯ ಅದ್ಯಾಯಗಳು). iv. ಅಧಿಕರಣಗಳನ್ನು ‘ಆತ ಊರ್ಧ್ವಂ ಪ್ರವಕ್ಷ್ಯಾಮಿ’ ಅಥವಾ ‘ಅತಃಪರಂ ಪ್ರವಕ್ಷ್ಯಾಮಿ’ ಎಂಬ ಪ್ರತಿಜ್ಞಾಪೂರ್ವಕವಾದ ಪೀಠಿಕೆಯೊಡನೆ ಪ್ರಾರಂಭಿಸುವುದು. v. ನಿರೂಪಣೆಯು ಜಿಜ್ಞಾಸೆಯಿಲ್ಲದೆ, ವ್ಯುತ್ಪತ್ತಿ ಮುಂತಾದ ಬೋಧನೋಪಕರಣಗಳಿಲ್ಲದೆ, ಲಕ್ಷಣಾಧಿಗಳ ಪ್ರತಿಪಾದನೆಯಿಲ್ಲದೆ, ನೇರವಾದ ಸರಳ ಶೈಲಿಯಲ್ಲಿದ್ದು ಆಯಾ ಗ್ರಾಹಕರಿಗೆ ಕೈಪಿಡಿಯ ರೂಪದಲ್ಲಿರುವುದು (ಅಪವಾದ : ಅಭಿನಯ ಶಬ್ದದ ನಿಷ್ಪತ್ತಿ, ೮,೬,೭) vi. ಅಧ್ಯಾಯಗಳಲ್ಲಿ ಕೆಲವಕ್ಕೆ ಪೌರ್ವಾಪರ್ಯಸಂಬಂಧವನ್ನೋ ಪ್ರತಿಜ್ಞಾವಾಕ್ಯವನ್ನೋ ನೀಡುವುದು. vii. ವಿಷಯಪ್ರತಿಪಾದನದಲ್ಲಿ ಉಪಕ್ರಮ – ಉಪಸಂಹಾರಗಳ ಸೂತ್ರವನ್ನು ಏರ್ಪಡಿಸುವುದು. viii. ನಿರೂಪಣಾವಸರದಲ್ಲಿ ತಾನು ಪ್ರತಿಪಾದಿಸುವ ಅಂಶಗಳ ಸಮರ್ಥನೆಯಲ್ಲಿ ಪರಂಪರಾನುಗತವಾಗಿ ಉಪಲಬ್ಧವಾಗಿರುವ, ಆಕರವು ಈಗ ತಿಳಿಯದಿರುವ ಶ್ಲೋಕಗಳನ್ನು – ಮುಖ್ಯವಾಗಿ ಆರ್ಯಾವೃತ್ತಗಳನ್ನು -ಉದಾಹರಿಸುವುದು, ಆಥವಾ ತಾನು೮ ಹೇಳುವುದರ ಬದಲು ಪೂರ್ವಾಚಾರ್ಯರ ಮಾತುಗಳಲ್ಲಿಯೇ ಹೇಳುವುದು. ತಾನು ಹೇಳಬೇಕಾಗಿರುವ ವಿಷಯದಲ್ಲಿ ಬೇರೆಯವರ ಅಭಿಪ್ರಾಯಗಳನ್ನೂ ಸಂಗ್ರಹಿಸುವುದು. ix. ಅವಶ್ಯವೆಂದು ತೋರಿದೆಡೆಗಳಲ್ಲಿ ಉದಾಹರಣೆಗಳನ್ನು ಕೊಡುವುದು. x. ಚಂಪೂಶೈಲಿಯ, ಸಂವಾದರೂಪದ ನಿರೂಪಣೆಯನ್ನು ಮಾಡುವುದು; ಗದ್ಯಖಂಡಗಳು ೬,೭,೮,೧೩,೧೪,೧೬,೧೭,೨೮ ಮತ್ತು ೨೯ನೆಯ ಅಧ್ಯಾಯಗಳಿಗೆ ಮಾತ್ರ ಸೀಮಿತವಾಗಿರುವುದು. ಇವು ಹಿಂದಿನ ಶ್ಲೋಕಗಳಲ್ಲಿ ಹೇಳಿರುವುದರ ವಿವರಣೆಯಲ್ಲಿ ಹೊಸದಾಗಿ ವಿಷಯವನ್ನು ಪ್ರವೇಶಗೊಳಿಸುವುದರಲ್ಲಿ ಮುಂದಿನ ಶ್ಲೋಕಗಳಲ್ಲಿ ಹೇಳಬೇಕಾಗಿರುವುದರ ಪೀಠಿಕಾರೂಪವಾಗಿ ಇರುವುದು ; ಇವುಗಳ ಪ್ರಮಾಣವು ಒಂದು ಅಥವಾ ಎರಡು ಮಾತುಗಳನ್ನು ಹ್ರಸ್ವವಾಗಿರುವುದರಿಂದ ಮೊದಲುಗೊಂಡು ಇಡೀ ಪುಟಗಳಷ್ಟು ವಿಸ್ತಾರವಾಗಿರುವುದರವರೆಗೆ ಇರುವುದು. xi. ಪದ್ಯಭಾಗವು ಸರ್ವೇಸಾಮಾನ್ಯವಾಗಿ ಅನುಷ್ಟುಪ್ ಛಂದಸ್ಸಿನಲ್ಲಿಯೂ ಅಪರೂಪವಾಗಿ ಬೇರೆ ವೃತ್ತಗಳಲ್ಲಿಯೂ ರಚಿತವಾಗಿದ್ದು ಉದ್ಧೃತಿಗಳೆಲ್ಲವೂ ಪ್ರಮುಖವಾಗಿ ಅರ್ಯಾವೃತ್ತಗಳಲ್ಲಿಯೇ ಇರುವುದು. ಶ್ಲೋಕಗಳಲ್ಲಿ ಅತ್ಮೋಲ್ಲೇಖವು ಸಾಮಾನ್ಯವಾಗಿ ಏಕವಚನದಲ್ಲಿಯೂ ಸ್ವನಾಮನಿರ್ದೇಶನಪೂರ್ವಕವಾಗಿ ಪ್ರಥಮೈಕವಚನದಲ್ಲಿಯೂ ಇದ್ದು ಗದ್ಯಖಂಡಗಳಲ್ಲಿ ಸಾಮಾನ್ಯವಾಗಿ ಬಹುವಚನದಲ್ಲಿ ಇರುವುದು.

ಆಧಿಕರಣಪ್ರಾರಂಭವು ಯಾವುದಾದರೊಂದು ಅಧ್ಯಾಯದ ಆರಂಭದಲ್ಲಿರಬಹುದು; ಹೀಗಿದ್ದಲ್ಲಿ ಅದರ ಸೂಚನೆಯು ಹಿಂದಿನ ಅಧ್ಯಾಯದ ಅಂತ್ಯದಲ್ಲಿ ಇರುತ್ತದೆ. ಉದಾ. ‘ಅತ ಊರ್ದ್ವಂ ಪ್ರವಕ್ಷ್ಯಾಮಿ’ : ೨೧.೨೭೩; ೨೩; ೮೦; ೨೬.೩೮; ೭೨.೧೦೪; ೩೧.೩೭೮; ೩೨.೪೩೭; ‘ಅತಃ ಪರಂ ಪ್ರವಕ್ಷ್ಯಾಮಿ’ : ೧೨.೧.೨೩೬;೧೨.೨೪೮ ಭಿನ್ನಪಾಠಕ್ರಮ). ೩೦.೧೨; ೩೨; ೪೩೭ : ಅಧಿಕರಣವು ಅಧ್ಯಾಯದ ಮಧ್ಯದಲ್ಲಿಯೂ ಪ್ರಾರಂಭವಾಗುವುದುಂಟು : ‘ಆತ ಊರ್ಧ್ವಂ ಪ್ರವಕ್ಷ್ಯಾಮಿ’ ೧೫,೧೯೫ ; ೧೭.೨೬; ೧೮.೧೦; ೨೭.೪೯; ೨೮.೪೧, ೫೮, ೨೯.೧೪; ೩೨.೭೭, ೧೦೦, ೧೫೮, ೧೯೨, ೨೩೬, ೨೫೪, ೩೦೬; ೩೪.೧೩೧; (ಭಿನ್ನಪಾಠಕ್ರಮ) ; ‘ಆತಃ ಪರಂ ಪ್ರವಕ್ಷ್ಯಾಮಿ……’ : ೨.೧೦೧; ೪.೧೨೪; ೫.೨೨; ೩೦,೨೫೨ (ಬಿನ್ನಪಾಠಕ್ರಮ), ೨೫೫ (,,), ೨೫೮ (,,); ೯,೨೭; ೧೨,೧೬೫, (ಭಿನ್ನಪಾಠಕ್ರಮ) ೨೮.೧೧೩; ೨೯.೫; ೩೧.೧೯೧, ೨೨೯, ೨೬೭; ೩೨.೧೨೮, ೨೦೫, ೪೧೪; ೩೪.೨೫೩; ೨೬೨; ೩೫.೩೧. ಹೀಗೆ ಒಂದೇ ಅಧ್ಯಾಯದಲ್ಲಿ ಎರಡು ಅಥವಾ ಹೆಚ್ಚು ಅಧಿಕರಣಗಳಿರುವುದೂ ಉಂಟು.

ಇದೇ ರೀತಿಯಲ್ಲಿ ಭರತಮುನಿಯು (ಹಿಂದಿನ ಅಧ್ಯಾಯದಲ್ಲಿ) ಇಂತಹ ವಿಷಯವನ್ನು ಹೇಳಿದ್ದಾಗಿದೆ ಎಂದು ಕೆಲವು ಅಧ್ಯಾಯಗಳನ್ನು ಪ್ರಾರಂಭಿಸುವುದುಂಟು. ಉದಾ.೧೧.೧; ೧೩.೧; ೧೪.೧; ೧೫.೧; ೧೭.೧; ೨೧.೧; ಮತ್ತೆ ಕೆಲವು ಅಧ್ಯಾಯಗಳ ಅಂತ್ಯದಲ್ಲಿ ‘(ಮುಂದಿನ ಅಧ್ಯಾಯದಲ್ಲಿ) ಇಂತಹ ವಿಷಯವನ್ನು ನಿರೂಪಿಸಲಿದ್ದೇನೆ’ ಎಂದು ಹೇಳುವುದೂ ಉಂಟು. ಉದಾ. ೧೩.೮೭; ೧೭.೧೦೩; ೧೮.೭೭; ೨೨.೩೩೩ ಇದರಿಂದ ಗ್ರಂಥದಲ್ಲಿ ಅಧ್ಯಾಯ ಸಂಗತಿಯ ಮೂಲಕ ಪೂರ್ವಾಪರಸಂಬಂಧವು ಏರ್ಪಡುತ್ತದೆ.

ಇನ್ನು ನಾಟ್ಯಶಾಸ್ತ್ರದ ಪೂರ್ವಾಚಾರ್ಯ ಋಣವನ್ನು ಹೀಗೆ ವಿಶ್ಲೇಷಿಸಬಹುದು. (ನಂ=ನಂತರ; ಆ=ಆದಿಯಲ್ಲಿ)

ಅರ್ಯಾವೃತ್ತಗಳು : ತತ್ರ ೬.೩೨ (ನಂ), ಅತ್ರಾರ್ಯಾ ಆಭವತಿ ೭.೨೫, ಭವತಶ್ಚಾತ್ರ ೮.೩೫, ೩೬; ಅತ್ರಾರ್ಯೇ ಭವತಃ ೭,೨೯,೩೧,೩೬,೪೯,೫೦. ಅತ್ರಾರ್ಯೇ ರಸವಿಚಾರ ಮುಖೇ ೬.೬೬ ಗದ್ಯ (ನಂ); ಅನುವಂಶ್ಯೇ ಆರ್ಯೇ ಭವತಃ ೬.೪೮ (ನಂ); ೬.೬೩ (ಆ); ಅತ್ರಾನುವಂಶ್ಯೇ ಆರ್ಯೇ ಭವತಃ ೭.೭೪ (ನಂ); ಅತ್ಯಾರ್ಯಾಃ ೬.೬೮ ಗದ್ಯ ೭.೪೭,೪೮; ಅತ್ರಾರ್ಯಾ ಭವಂತಿ ೭.೧೬; ಭವಂತಿ ಚಾರ್ಯ; ೭.೧೧೮; ಅತ್ರ ಆರ್ಯ ಭವಂತಿ ೭.೩೮ ಆರ್ಯಾವೃತ್ತಗಳು ಮತ್ತು ಶ್ಲೋಕಗಳು : ಅಥಾರ್ಯ ಶ್ಲೋಕಾಶ್ಚ ಭವಂತಿ ೬೭೨ ; ಇಡೀ ಏಳನೆಯ ಅಧ್ಯಾಯ

ಶ್ಲೋಕಗಳು : ಆತ್ರ ಶ್ಲೋಕಃ ೭,೪,೫,೭,೯. ೨೧;೨೨; ೧೭.೧೩೨; ಭವತಿ ಚಾತ್ರ ಶ್ಲೋಕಃ ೭.೬,೮,೧೦,೨೧,೨೭; ಅತ್ರ ಶ್ಲೋಕಾಃ ೬.೫೧,೭.೨೮,೨೮ ೨೩; ಶ್ಲೋಕಾಶ್ಚಾತ್ರ ೭.೧. (ಆ) ಅನುವಂಶ್ಯಾ ಶ್ಲೋಕಾ ಭವಂತಿ ೧೭.೧೧೫ ಇತ್ಯಾದಿ.

ಭರತಮುನಿಯು ಮತಾಂತರಗಳನ್ನು ಹೀಗೆ ಸಂಗ್ರಹಿಸುತ್ತಾನೆ :

ಆತ್ರ ಕೇಚಿತ್ ೯.೨೨೪; ೯.೨೨೮; ಅನ್ಯೇ ತು ೯.೧೩೮,೧೮೨,೧೯೨,೨೪೩; ಅನ್ಯೈರಪ್ಯುಕ್ತಂ ೯.೧೬೪.

ಬೃಹದ್ದೇಶಿಯ ನಿರೂಪಣವಿಧಾನವು ಪರೋಕ್ಷವಲ್ಲ. ಕೃರ್ತೃವೇ ಪೃಚ್ಛಕರಿಗೆ ನೇರವಾಗಿ ಉಪದೇಶಿಸಿದ್ದು. ಇದರ ರಚನೆಯಲ್ಲಿ ದೇವತೆಗಳ ಪಾತ್ರವಿಲ್ಲ. ಬ್ರಹ್ಮನ ಉಲ್ಲೇಖವು ಉಪೋದ್ಧೃತಿಯಲ್ಲಿ (ಭರತನಿಂದ) ಮಾತ್ರ ಬಂದಿದೆ. ಗ್ರಂಥವು ನಾಟ್ಯಶಾಸ್ತ್ರದಲ್ಲಿ ವಾಚಿಕಾಭಿನಯದ ಭಾಗವಾದ ಗೇಯಾಧಿಕಾರವನ್ನು ಮಾತ್ರ ವಿಷಯೀಕರಿಸಿಕೊಂಡು ಅದರಲ್ಲಿ ಗೀತ, ವಾದ್ಯ, ನೃತ್ತಗಳೆಂಬ ಒಳವಿಭಾಗಗಳನ್ನು ಏರ್ಪಡಿಸುತ್ತದೆ. ಗಾಂಧರ್ವವು ಸ್ವರತಾಲಪದಾತ್ಮಕವಾಗಿ ತ್ರಿವಿಧವೆಂದು ಸಾಂಪ್ರದಾಯಿಕ ವಿಭಜನೆಯು ಭರತದತ್ತಿಲಾದಿಗಳಲ್ಲಿದ್ದರೆ, ದೇಶಿಯು ಧ್ವನ್ಯಾತ್ಮಕವಾದುದು. ಅದುಗೀತವಾದ್ಯ ನೃತ್ತಗಳೆಂಬ ಮೂರು ಅಂಗಗಳಿಂದ ಅಥವಾ ವಿಧಗಳಿಂದ ಆಗುತ್ತದೆ ಎಂಬ ಕಲ್ಪನೆಯು ಮೊದಲು ಕಂಡುಬರುವುದು ಬೃಹದ್ದೇಶಿಯಲ್ಲೇ ಇವುಗಳನ್ನು ಸಂಗೀತವೆಂಬ ಸಮುಚ್ಚಯ ನಾಮದಿಂದ ಜಗದೇಕಮಲ್ಲ, ಪಾರ್ಶ್ವದೇವ, ಶಾರ್ಙ್ಗದೇವಾದಿಗಳು ನಂತರದ ಕಾಲದಲ್ಲಿ ವ್ಯವಹರಿಸಿ ಅದನ್ನು ದೇಶೀ ಮಾರ್ಗ ಎಂದು ಇಬ್ಬಗೆಯಾಗಿ ವ್ಯವಹರಿಸಿದ್ದಾರೆ. ಹೀಗೆ ದೇಶೀ ಕಲ್ಪನೆಯ ವಿಕಾಸದಲ್ಲಿ ಒಂದು ತಿರುವು ಕಂಡುಬರುತ್ತದೆ. ಬೃಹದ್ದೇಸಿಯು ಗೀತವಾದ್ಯನೃತ್ತಗಳಲ್ಲಿ ಒಂದೊಂದನ್ನು ಪ್ರತ್ಯೇಕವಾದ ಆದರೆ ಪರಸ್ಪರ ಸಂಬಂಧಿತವಾದ ಶಾಸ್ತ್ರಭಾಗವಾಗಿ ಏರ್ಪಡಿಸಿಕೊಂಡು ಅದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ವಿಷಯಗಳನ್ನು ಹಿಂದಿನದು ಮುಂದಿನದಕ್ಕೆ ಕರೆದೊಯ್ಯುವಂತೆ ಸೋಪಾನಕ್ರಮದಲ್ಲಿ ಏರ್ಪಡಿಸಿಕೊಳ್ಳುತ್ತದೆ. ಇದು ಗೀತ, ವಾದ್ಯ, ನೃತ್ತ ಎಂಬ ಅನುಕ್ರಮದಲ್ಲಿ ಮುನ್ನಡೆಯುತ್ತದೆ. ಇದರಿಂದ ಪ್ರಭಾವಿತರಾಗಿ ನಂತರದ ಲಾಕ್ಷಣಿಕರಾದ ಸೋಮೇಶ್ವರ, ಜಗದೇಕಮಲ್ಲ, ಪಾರ್ಶ್ವದೇವ, ಶಾರ್ಙ್ಗದೇವ, ಸುಧಾಕಲಶ, ಕುಂಭಕರ್ಣ, ದಾಮೋದರ ಮುಂತಾದವರೆಲ್ಲರೂ ತಮ್ಮ ತಮ್ಮ ಗ್ರಂಥಗಳನ್ನು ಇದೇ ಕ್ರಮದಲ್ಲಿ ರಚನೆಮಾಡಿದ್ದಾರೆ.

ಭರತನಂತೆಯೇ ಮತಂಗನು ಬಹುಶ್ರುತನಾಗಿ ಅನೇಕ ವಿದ್ಯೆಗಳನ್ನು ತಿಳಿದಿದ್ದವನಾದರೂ ಈ ತಿಳಿವಳಿಕೆಯನ್ನು ಆಯಾ ಪ್ರಸಂಗೋಚಿತನಾಗಿ ಬಳಸಿಕೊಳ್ಳುತ್ತಾನೆ. ತಾನು ನಿರೂಪಿಸಿಬೇಕಾಗಿರುವ ಶಾಸ್ತ್ರವನ್ನು ಅಧ್ಯಾಯಗಳಲ್ಲಿ ವಿಂಗಡಿಸಿಕೊಂಡು ಅವುಗಳಲ್ಲಿ ಮೊದಲನೆಯದನ್ನು ಪ್ರಕರಣಗಳನ್ನಾಗಿಯೂ ಉಳಿದವುಗಳನ್ನು ಅಧಿಕರಣಗಳನ್ನಾಗಿಯೂ ವಿಭಾಗಿಸಿದ್ದಾನೆ. ಆದರೆ, ಭರತನಂತೆ ಹೇಳಲಿರುವ ವಿಷಯಗಳನ್ನು ಅಧ್ಯಾಯಪ್ರಾರಂಭದಲ್ಲಿ ಸಂಗ್ರಹಿಸಿ ಪರಿವಿಡಿಯನ್ನು ನೀಡುವುದಿಲ್ಲ. ಗ್ರಂಥಾರಂಭದಲ್ಲಿ ಪದಾರ್ಥಸಂಗ್ರಹವು ಇತ್ತೋ ಇಲ್ಲವೋ ತಿಳಿಯದು. ಅಧಿಕರಣಗಳನ್ನು ‘ಇದಾನೀಂ ಅವಸರಪ್ರಾಪ್ತಾನಾಂ’ ಎಂದೋ ‘ಇದಾನೀಂ …… ವಕ್ಷ್ಯಾಮಿ’ ಇತ್ಯಾದಿಯಾಗಿಯೋ ಅವನು ಪ್ರಾರಂಭಿಸುತ್ತಾನೆ. ‘ಆತ ಊರ್ಧ್ಜಂ ಪ್ರವಕ್ಷ್ಯಾಮಿ…..’ ಎಂಬ ಅಧಿಕರಣಾರಂಭಕ ವಾಕ್ಯವು ಒಮ್ಮೆ ಮಾತ್ರವೂ (೩೯೮), ‘ಅತಃ ಪರಂ ಪ್ರವಕ್ಷ್ಯಾಮಿ…..’ ಎಂಬುದು ಮೂರುಸಲ ಮಾತ್ರವು (೮೯೦,೯೬೨,.೧೦೩೮) ಉಪಲಬ್ಧ ಬೃಹದ್ದೇಶೀಯಲ್ಲಿ ದೊರೆಯುತ್ತವೆ. (ಪ್ರತಿಯೊಂದು ಅಧ್ಯಾಯವೂ ಪ್ರತಿಜ್ಞಾವಾಕ್ಯದಿಂದ ಪ್ರಾರಂಭವಾಗಿ, ಅದನ್ನು ನೆರವೇರಿಸಿ, ಸ್ವಯಂಪೂರ್ಣವಾಗಿರುತ್ತದೆ.) ಇದು ಸಾಂಪ್ರದಾಯಿಕ ಅರ್ಥದಲ್ಲಿ ಶಾಸ್ತ್ರಗ್ರಂಥ; ಏಕೆಂದರೆ ಶಾಸ್ತ್ರನಿರೂಪಣೆಗೆ ಅಗತ್ಯವಾದ ಅನ್ಯಮತಸಂಗ್ರಹ, ಅವುಗಳ ಮಂಡನ – ಖಂಡನ, ಜಿಜ್ಞಾಸಾಪೂರ್ವಕವಾಗಿ ಸ್ವಮತಸಮರ್ಥನೆ, ಶಬ್ದಾರ್ಥನಿರ್ಣಯ, ಪೂರ್ವಾಪರಸಂಬಂಧ, ವಿವಿಧ ವಿಧಗಳ ಸಂಗತಿ, ಪ್ರಮಾಣ-ಪ್ರಮೇಯ ವಿವೇಚನೆ, ಉಪಕ್ರಮ-ಉಪಸಂಹಾರ ಮುಂತಾದ ವಿಧಾನಗಳು ಅಲ್ಲಿ (ಮೊದಲನೆಯ ನಾಲ್ಕು ಅಧ್ಯಾಯಗಳಲ್ಲಿ) ಕಾಣಸಿಗುತ್ತವೆ. ನಾಟ್ಯಶಾಸ್ತ್ರದಲ್ಲಿ ಉದ್ಧೃತವಾಗಿರುವ ಸಾಮಗ್ರಿಗಳಿಗೆ ಆಕರಗಳು ಅನಿರ್ದಿಷ್ಟವಾಗಿಯೇ ಉಳಿದಿವೆ. ಅವು ಆರ್ಯಾ ಮತ್ತು ಶ್ಲೋಕರೂಪಗಳಲ್ಲಿ ಮಾತ್ರ ಇವೆ. ಆದರೆ ಬೃಹದ್ದೇಶಿಯು ನಾಮನಿರ್ದೇಶವಿಲ್ಲದೆ ಯಾವ ಆಕರದಿಂದಲೂ ಪ್ರಮಾಣವನ್ನು ಉದ್ಧರಿಸಿಕೊಳ್ಳುವುದಿಲ್ಲ. ಆಕರಗಳನ್ನು ಗ್ರಂಥನಾಮದ ಬದಲು ಕರ್ತೃನಾಮದಿಂದ ಮಾತ್ರ ಯಾವಾಗಲೂ ಸೂಚಿಸಿರುವುದು ಗಮನಾರ್ಹವಾಗಿದೆ. ಬೃಹದ್ದೇಶಿಯು ಹೀಗೆ ಅನೇಕ ಪ್ರಾಚೀನ ಸಂಗೀತಶಾಸ್ತ್ರೀಯ ಆಕರಗಳ ಅಮೂಲ್ಯ ಗಣಿಯಾಗಿದೆ. ಉದ್ಧೃತಿಗಳು ಗದ್ಯಪದ್ಯ ರೂಪವಾಗಿವೆ. ಗ್ರಂಥವು ಚಂಪೂಶೈಲಿಯಲ್ಲಿ ರಚಿತವಾಗಿದೆ. ಶ್ಲೋಕಗಳಲ್ಲಿ ಆತ್ಮೋಲ್ಲೇಖವು ಸಾಮಾನ್ಯವಾಗಿ ಉತ್ತಮಪುರುಷೈಕವಚನದಲ್ಲಿಯೋ ಪ್ರಥಮೈಕವಚನದಲ್ಲಿಯೋಇದ್ದು ಗದ್ಯಖಂಡಗಳಲ್ಲಿ ಸಾಮಾನ್ಯವಾಗಿ ಉತ್ತಮಪುರುಷ ಬಹುವಚನದಲ್ಲಿ ಇರುತ್ತದೆ. ಅದರ ಗದ್ಯಖಂಡಗಳ ಸ್ವರೂಪವನ್ನು ಮೇಲೆ ತಕ್ಕಷ್ಟು ವಿವರಪೂರ್ಣವಾಗಿ ವಿವೇಚಿಸಲಾಗಿದೆ (ಪು.೫೭-೭೦). ಗದ್ಯಖಂಡಗಳು ಬೃಹದ್ದೇಶಿಯ ಮೊದಲನೆಯ ಮೂರು ಅಧ್ಯಾಯಗಳಲ್ಲಿ ಮಾತ್ರ ಇವೆ. ನಾಟ್ಯಶಾಸ್ತ್ರಕ್ಕೆ ವಿವಿಧ ಕಾಲದೇಶಗಳಲ್ಲಿ ಬೇರೆ ಬೇರೆ ವ್ಯಾಖ್ಯಾನಗಳನ್ನು ರಚಿಸಲಾಗಿದೆ. ಬೃಹದ್ದೇಶಿಗೆ ವ್ಯಾಖ್ಯಾನವು ರಚಿತವಾಗಿದ್ದರೆ ಅದು ದೊರೆತಿಲ್ಲ. ನಾಟ್ಯಶಾಸ್ತ್ರವು ಹೇಳಿರುವ ಗೀತ, ವಾದ್ಯ, ನೃತ್ತಾಂಶಗಳನ್ನು ಮತ್ತು ಪ್ರಕರಣಗೀತಿಗಳನ್ನು ಮಾರ್ಗಪದ್ಧತಿಯೆಂದು ಸಾಂಪ್ರದಾಯಿಕವಾಗಿ ಗುರುತಿಸಲಾಗುತ್ತದೆ; ಅದು ನಿರೂಪಿಸದಿರುವ ಗ್ರಾಮರಾಗ-ಭಾಷಾ-ವಿಭಾಷಾ-ಅಂತರಭಾಷಾ, ಕಪಾಲ, ಕಂಬಲ ಇತ್ಯಾದಿಗಳನ್ನೂ ಮಾರ್ಗವೆಂದು ನಂತರದ ಕಾಲದಲ್ಲಿ ಎಣಿಸಿಕೊಂಡಿದ್ದಾರೆ. ಇವುಗಳನ್ನು ಮತಂಗನು (ಕಪಾಲಕಂಬಲಗಳು ಉಪಲಬ್ಧ ಬೃಹದ್ದೇಶಿಯಲ್ಲಿಲ್ಲ) ವರ್ಣಿಸಿರುವುದರಿಂದ ದೇಶೀಸಾಮಗ್ರಿಗಳೇ. ಪ್ರಾಚೀನಗೌರವಿತವೆಂಬುದರಿಂದ ಅವಕ್ಕೆ ಮಾರ್ಗದ ಸ್ಥಾನಮಾನಗಳು ದೊರೆತವು.

ಭರತಮುನಿಯು ನಾಟ್ಯಕ್ಕೆ ಐದನೆಯ ವೇದವೆಂಬ ಪ್ರತಿಷ್ಟಿತ ಸ್ಥಾನವನ್ನು ಕಲ್ಪಿಸಿದ್ದಾನೆ. (ಅದರ ಅಂಗಗಳಾದ ಗೀತವಾದ್ಯನೃತ್ತಗಳು ಈ ವೇದದ ಅಂಗಗಳು ಎಂಬ ವಿವಕ್ಷೆಯು ಅವನಲ್ಲಿರಬಹುದು.) ಗಾಂಧರ್ವವು ಸಾಮವೇದಕ್ಕೆ ಉಪವೇದವೆಂಬ ನಂಬುಗೆಯು ನಂತರದ ಕಾಲದಲ್ಲಿ ಮೂಡಿ ಬಂದಿತಷ್ಟೆ. ಮತಂಗನು ಗಾಂಧರ್ವಕ್ಕೂ / ತಾನು ವರ್ಣಿಸಿರುವ ದೇಶಿ ಸಂಗೀತಕ್ಕೂ ವೇದೋಪವಸತಿಯನ್ನೂ ಮಹಾವಾಕ್ಯಮೂಲಕವಾದ ಉಪನಿಷತ್ ಪ್ರತಿಪಾದನವನ್ನು ಕಲ್ಪಿಸಿದ್ದಾನೆ. ನಾಟ್ಯಶಾಸ್ತ್ರವಉ ‘ತ್ರೈಲೋಕ್ಯಸ್ಯಾಸ್ಯ ಭಾವಾನುಕೀರ್ತನಂ’. ಗ್ರಾಮರಾಗಗಳಲಲಿ ರಚಿತವಾದ ಸ್ವರಪದ ಗೀತಿಗಳಿಗೆ ನೀಡಿರುವ ವಿನಿಯೋಗಗಳ (ಮೂರನೆಯ ಅಧ್ಯಾಯ) ಮತ್ತು ಭಾಷಾದಿರಾಗಗಳಿಗೆ ವಿಧಿಸಿರುವ ವಿನಿಯೋಗಗಳ ದೃಷ್ಟಿಯಿಂದ (ನಾಲ್ಕನೆಯ ಅಧ್ಯಾಯ) ಈ ಮಾತು ಬೃಹದ್ದೇಶಿಗೂ ತಕ್ಕಮಟ್ಟಿಗೆ ಸಲ್ಲುತ್ತದೆ.

ಈ ವಿನಿಯೋಗಗಳು ಬೃಹದ್ದೇಶಿಯಲ್ಲಿ ವಿಶೇಷವಾಗಿ, ಎಂದರೆ ಎಂತಿಂತಹ ಸಂದರ್ಭಗಳಿಗೇ ಎಂದು ಮೀಸಲಾಗಿರುವಂತೆ ಕಂಡುಬರುತ್ತದೆ. ಕಾಮಗ್ರಸ್ತಕಂಚುಕೀಪ್ರವೇಶ (೬೯೫), ಕೇಶರಚನಾಕಾಮಿನೀ ಸಂಗಮ (೯೯೩), ತ್ರಪವೀರ (೯೮೯), ಪ್ರತೀಹಾರ (೧೦೧೪), ಪ್ರವೇಶಾದಿ ಚರಿತ (೬೮೪), ವಿದ್ರುಮಜನ (೯೭೯), ಸೂತ್ರಧಾರಪ್ರವೇಶ (೬೪೪,೬೪೫), ಮುಂತಾದ ವಿಶಿಷ್ಟ ಸಂದರ್ಭಗಳನ್ನು ಹೇಳಿರುವುದರಿಂದಲೂ, (ಪಾತ್ರದ) ಪ್ರಥಮಪ್ರವೇಶದಲ್ಲಿ (೫೩೬), ಪ್ರಥಮ ಪ್ರೇಕ್ಷಣ (೫೪೩, ೫೪೫), ಚತುರ್ಥಪ್ರೇಕಣ (೫೫೨, ೫೬೪), ಮತ್ತು ಪಂಚಮಪ್ರೇಕ್ಷಣ ೯೫೬೧, ೫೬೭)ಗಳಲ್ಲಿ ವಿನಿಯೋಗಿಸಬೇಕಾದ ರಾಗಗಳನ್ನು ವಿಧಿಸಿರುವುದರಿಂದಲೂ ತನ್ನ ಕಾಲದಲ್ಲಿ ಪ್ರಯೋಗವಾಗುತ್ತಿದ್ದ ಯಾವುದೋ ರೂಪಕಗಳಲ್ಲಿನ ಸಮಸಾಮಯಿಕ ರಾಗವಿನಿಯೋಗಗಳನ್ನು ಮತಂಗನು ಹೇಳಿರುವುದು ಸಂಭಾವ್ಯವಾಗಿದೆ. ಹೆಚ್ಚು ಕಡಿಮೆ ಇದೇ ಕಾಲದಲ್ಲಿ ಪಲ್ಲವ ಮಹೇಂದ್ರವರ್ಮನು ತಾನು ರಚಿಸಿರುವ ಮತ್ತವಿಲಾಸಪ್ರಹಸನವೆಂಬ ರೂಪಕದ ವಿವಿಧ ಹಂತಗಳಲ್ಲಿ ವಿನಿಯೋಗಗೊಳ್ಳಲೆಂದು (ಭರತೋಕ್ತಿಗೆ ಅನುಸಾರವಾಗಿ) ಏಳು ಶುದ್ಧಗ್ರಾಮರಾಗಗಳ ಅಕ್ಷಿಪ್ತಿಕೆಗಳನ್ನು ಕುಡುಮಿಯಾಮಲೈಶಾಸನದಲ್ಲಿ ಕೆತ್ತಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಹೀಗೆ ಬೃಹದ್ದೇಶಿಯಲ್ಲಿ ರಾಗಪ್ರಯುಕ್ತಿಯು ವಿಧಿಯಿಂದ ಮಿತವಾಗಿದ್ದರೂ ಅಂದಿನ ಸಮಾಜದ ಮತ್ತು ಸಂಸ್ಕೃತಿಯ ಚಿತ್ರಣವನ್ನು ತಕ್ಕಮಟ್ಟಿಗೆ ಒಳಗೊಂಡಿದೆ.

ಭರತಮುನಿಯ ಮತವಾಗಲಿ ಜನ್ಮಪ್ರದೇಶವಾಗಲಿ ತಿಳಿಯದು. ಸನಾತನ ಧರ್ಮದಲ್ಲಿಯೂ ವೈದಿಕಮತದಲ್ಲಿಯೂ ನಿಷ್ಠೆಯುಳ್ಳ ಹಿಂದೂ ಎಂದು ಮಾತ್ರ ಹೇಳಬಹುದು; ಅವನು ಬಳಸಿರುವ ಕೆಲವು ಶಬ್ಧಗಳಿಂದಲೂ, ಸಂದರ್ಭಗಳಿಂದಲೂ ನಾಟ್ಯಶಾಸ್ತ್ರದ ಹಸ್ತಪ್ರತಿಗಳು ಅತ್ಯಂತ ಸಂಖ್ಯೆಯಲ್ಲಿ ದೊರೆತಿರುವುದು ದಕ್ಷಿಣಭಾರತದಲ್ಲಾಗಿರುವುದರಿಂದಲೂ ಅವನು ದಕ್ಷಿಣಭಾರತದಲ್ಲಿದ್ದವನು ಎಂದೂ ಊಹಿಸಬಹುದು. ಮತಂಗನು ವೈದಿಕ ತಾಂತ್ರಿಕನೆಂದೂ ಶ್ರೀವಿದ್ಯಾಉಪಾಸಕನಾದ ಶಾಕ್ತನೆಂದೂ ಕರ್ನಾಟಕದ ಹಂಪಿಯಲ್ಲಿದ್ದವನೆಂದೂ ಅನುಮಿತಿಯು ಬೃಹದ್ದೇಶಿಯಲ್ಲಿರುವ ಅಂಹಃಸಾಕ್ಷ್ಯಗಳಿಂದ ಹೊರಡುತ್ತದೆ.

 

(ಉ) ಧಾರ್ಮಿಕ ಪರಿಸರ

ನಾಟ್ಯಶಾಸ್ತ್ರದ ಪ್ರಾರಂಭಿಕ ಐದು ಅಧ್ಯಾಯಗಳಲ್ಲಿ ಸಾಂದ್ರವಾಗಿಯೂ ಇಪ್ಪತ್ತೆರಡನೆಯ, ಮೂವತ್ತನಾಲ್ಕನೆಯ ಮತ್ತು ಕೊನೆಯ ಅಧ್ಯಾಯಗಳಲ್ಲಿ ತಕ್ಕಮಟ್ಟಿಗೂ ಅದರ ರಚನಾಕಾಲದ ಸಮಾಜದಲ್ಲಿ ಧಾರ್ಮಿಕ ಸಂಪ್ರದಾಯಗಳೂ ಪರಿಸರವೂ ಹೇಗಿದ್ದವೆಂಬುದನ್ನು ಸೂಚಿಸುವ ಸಂಗತಿಗಳಿವೆ. ಇವುಗಳಲ್ಲಿಯೂ ಉಳಿದ ಅಧ್ಯಾಯಗಳಲ್ಲಿಯೂ ಅಂದಿನ ಸಾಮಾಜಿಕ, ಸಾಂಸ್ಕೃತಿಕ, ಭೌಗೋಳಿಕ, ಪೌರಾಣಿಕ, ಇತ್ಯಾದಿ ಸ್ಥಿತಿಗತಿಗಳ ವಿಷಯದಲ್ಲಿ ನಾಟ್ಯಶಾಸ್ತ್ರವು ಅತ್ಯಮೂಲ್ಯ ಆಕರವಾಗಿದೆ. ಇವುಗಳ ಪೈಕಿ ಧಾರ್ಮಿಕ ಪರಿಸರವೊಂದನ್ನು ಮಾತ್ರ ಇಲ್ಲಿ ಸ್ಥಾಲೀಪುಲಾಕ ನ್ಯಾಯದಿಂದ ಪರಿಶೀಲಿಸಲಾಗುವುದು.

ಭರತನು ತನ್ನ ಸಮಾಜವನ್ನು ಸನಾತನ ವೈದಿಕಧರ್ಮನಿಷ್ಠವನ್ನಾಗಿ ಚಿತ್ರಿಸಿದ್ದಾನೆ. ವರ್ಣಾಶ್ರಮವ್ಯವಸ್ಥೆಯಿದ್ದು ವೇದಾಂಗವಾದ ಕಲ್ಪದಲ್ಲಿಯೂ ಪುರಾಣಗಳಲ್ಲಿಯೂ ಹೇಳಿರುವ ಉಪಸನಾಕ್ರಮಗಳಿದ್ದುದಲ್ಲದೆ ಇಂದಿಗೂ ಹಿಂದೂಗಳಲ್ಲಿ ಉಳಿದು ಬಂದಿರುವ ಅನೇಕ ಧರ್ಮಾಚರಣೆಗಳೂ ನಂಬಿಕೆ, ಶ್ರದ್ಧೆಗಳೂ ಕಂಡುಬರುತ್ತವೆ. ಈ ಚಿತ್ರದಲ್ಲಿ ಬೌದ್ಧಜೈನಾದಿ ಇತರ ಧರ್ಮಗಳ ಸಾಂಕರ್ಯದ ಸೂಚನೆಯು ಕಂಡುಬರುವುದಿಲ್ಲ.

ಭರತನ ಕಾಲದಲ್ಲಿ ನಾಟ್ಯಕರ್ಮವು ಧಾರ್ಮಿಕ ಪರಿಸರದಲ್ಲಿಯೇ ಹುಟ್ಟಿ ಬೆಳೆಯಿತು. ಅದರ ಪ್ರಯೋಗವು ಧಾರ್ಮಿಕಾಚರಣೆಗಳಿಂದ – ಕೆಲವು ವೇಳೆ ಅತಿರೇಕವೆನ್ನಿಸುವಷ್ಟು ಅಥವಾ ಅಸಂಬದ್ಧವೆನ್ನುವಷ್ಟು – ತುಂಬಿಹೋಗಿತ್ತು. ಈ ಪರಿಸರವನ್ನು ಸ್ಥೂಲವಾಗಿ ಹೀಗೆ ಚಿತ್ರಿಸಬಹುದು : ಹೀಗೆ, ಶಾಸ್ತ್ರಾಂತರವನ್ನು ತಿಳಿದುಕೊಳ್ಳಬೇಕಾದರೆ ಆತ್ರೇಯಾದಿಗಳು ಅನಧ್ಯಯನದ ವೇಳೆಯಲ್ಲೇ ಮಾಡಬೇಕಾಗಿತ್ತು (೧.೨), ವೇದಗಳು ಶೂದ್ರಾದಿಗಳಿಗೂ ನಿಷಿದ್ಧವಾಗಿತ್ತು. (೧.೧೨) ಭರತನು ವ್ರತ, ಜಪಾದಿಗಳ ಅನುಷ್ಠಾನನಿರತನಾಗಿ ತತ್ತ್ವವಿದನಾಗಿದ್ದನು (೧.೨). ವೇದರಹಸ್ಯಗಳನ್ನು ಬಲ್ಲವರೂ ಸಂಶಿತವ್ರತರೂ ಆಗಿದ್ದ ಋಷಿಗಳೇ ನಾಟ್ಯಪ್ರಯೋಗಕ್ಕೆ ಅರ್ಹರು (೧.೨.೩). ಅಸುರರು ವಿಘ್ನಗಳ ನೆರವಿನಿಂದ ಸೂತ್ರಧಾರ ಮತ್ತು ಪಾತ್ರಗಳ ಮೇಲೆ ಅಭಿಚಾರಪ್ರಯೋಗವನ್ನು ಮಾಡಿದ್ದಲ್ಲದೆ ಆಮೇಲೂ ಅವರನ್ನು ಬೆದರಿಸಿದರುಸ (ಇದರಿಂದಾಗಿ ನಾಟ್ಯಮಂಡಪವೂ ಪ್ರೇಕ್ಷಾಗೃಹವೂ ನಿರ್ಮಿತವಾಗಬೇಕಾಯಿತು). (೧.೬೬.೭೮ ಇತ್ಯಾದಿ). ನಾಟ್ಯಗೃಹದ ವಿವಿಧ ಭಾಗಗಳ ರಕ್ಷಣೆಯ ಜವಾಬ್ಧಾರಿಯನ್ನು ವಹಿಸಿಕೊಂಡ ದೇವತೆಗಳು ಇವರು : ಚಂದ್ರ, ಲೋಕಪಾಲರು, ಮಾರುತರು, ಮಿತ್ರ, ವರುಣ, ಅಗ್ನಿ, ದಿವೌಕಸರು (ಮೇಘ ಇತ್ಯಾದಿ) ಚತುರ್ವರ್ಣಗಳ ಅಧಿಪತಿಗಳು, ಭೂತಗಣಗಳು, ಆದಿತ್ಯರು, ರುದ್ರರು, ಯಕ್ಷಿಣಿಯರು, ಮಹೋದಧಿ, ಯಮ ಮತ್ತು ಕಾಲ, ನಾಗ ಮುಂತಾದವರು; ಯಮದಂಡ, ಶೂಲ, ನಿಯತಿ, ಮೃತ್ಯು, ಮಹೇಂದ್ರ, ವಿದ್ಯುತ್, ಭೂತ, ಯಕ್ಷ, ಪಿಶಾಚ, ಗುಹ್ಯಕ, ವಜ್ರ, ಸುರೇಂದ್ರರು, ಬ್ರಹ್ಮ, ಶಂಕರ, ವಿಷ್ಣು, ಸ್ಕಂದ,ಶೇಷ, ವಾಸುಕಿ, ತಕ್ಷಕ ಇತ್ಯಾದಿ ಮಹಾನಾಗರು, ಇಂದ್ರ, ಸರಸ್ವತಿ, ಓಂಕಾರ, ಮತ್ತು ಹರ (೧.೮೪-೯೪). ನಾಟ್ಯಮಂಡಪವನ್ನು ರಚಿಸಿದ ಮೇಲೆ ದೇವತೆಗಳು ಜಪ, ಭಕ್ಷ್ಯ,ಪಾನ, ಬಲಿದಾನ, ಬಲಿಪ್ರಧಾನ, ಹೋಮ ಮಂತ್ರೌಪಧಿಗಳನ್ನು ಆಚರಿಸಬೇಕೆಂದು ಬ್ರಹ್ನನು ವಿಧಿಸಿದನು (೧.೧೨೦-೧೨೨). ಇವುಗಳನ್ನು ಆಚರಿಸದೆಯೇ ನಾಟ್ಯಪ್ರಯೋಗವನ್ನು ಮಾಡಿದರೆ ನಷ್ಟಾದಿಗಳು ಉಂಟಾಗುವುವೆಂಬ ಎಚ್ಚರಿಕೆಯನ್ನೂ ನೀಡಿದನು; ಮಾಡಿದರೆ ಇಹಪರಸಿದ್ಧಿಯು ಆಗುತ್ತದೆಂದೂ ಹೇಳಿದನು.

ನಾಟ್ಯಗೃಹದ ವಾಸ್ತಪ್ರಾರಂಭವನ್ನು ಎಲುಬು ಇತ್ಯಾದಿಗಳಿಲ್ಲದಿರುವುದಕ್ಕಾಗಿ ಭೂಶೋಧನದಿಂದ ಪ್ರಾರಂಭಿಸಬೇಕು (೨.೨೬). ಪುಷ್ಯನಕ್ಷತ್ರದ (ಅಥವಾ ಉತ್ತರಾ, ಉತ್ತರಾಭಾದ್ರ, ಉತ್ತರಫಲ್ಗುಣಿ, ವಿಶಾಖಾ, ಹಸ್ತ, ರೇವತಿ ನಕ್ಷತ್ರಗಳ) ಮುಹೂರ್ತದಲ್ಲಿ ಬಿಳಿಯ ಸೂತ್ರದಿಂದ ಭೂಮಿಯನ್ನು ಅಳೆಯಬೇಕು. ಶಾಂತಿಗಾಗಿ ಭೂಮಿಯನ್ನು ನೀರಿನಿಂದ ಮೊದಲು ತೋಯಿಸಬೇಕು. ಸೂತ್ರವು ತುಂಡಾದರೆ, ಜಾರಿಬಿದ್ದರೆ, ಅನಾಹುತಗಳು ಉಂಟಾಗುತ್ತವೆ (೨.೨೪.-೩೩). ಭೂಮಿಯನ್ನು ವಿವಿಧ ಭಾಗಗಳನ್ನಾಗಿ ವಿಂಗಡಿಸಿ ವಾದ್ಯಘೋಷದೊಡನೆ ಶಂಕುಸ್ಥಾಪನೆಯನ್ನು ಮಾಡಬೇಕು. ಪಾಷಂಡಿ ಮುಂತಾದವರು, ಅಂಗವಿಕಲರು ಇತ್ಯಾದಿಗಳು ಆಗ ಇರಬಾರದು; ರಾತ್ರಿಯವೇಳೆ ಗಂಧಪುಷ್ಪಾದಿಗಳಿಂದಲೂ ಬೇರೆ ಬೇರೆ ಬಣ್ಣಗಳ ಅನ್ನದಿಂದಲೂ ಮಂತ್ರದೊಡನೆಯೂ ಬಲಿಗಳನ್ನು ದಿಕ್ಕುಗಳಿಗೆ ಕೊಡಬೇಕು, ಬ್ರಾಹ್ಮಣರಿಗೂ, ಕ್ಷತ್ರಿಯರಿಗೂ ಕೆಲಸಗಾರರಿಗೂ ಭಕ್ಷ್ಯ ಭೋಜ್ಯಾದಿಗಳನ್ನು ನೀಡಬೇಕು (೨.೩೩-೪೨). ಶುಭಕರವಾದ ತಿಥಿ, ನಕ್ಷತ್ರ ಮತ್ತು ಕರಣಗಳಿರುವ ಮುಹೂರ್ತಗಳಲ್ಲಿ ನಾಟ್ಯಗೃಹದ ಗೋಡೆಗಳನ್ನೂ ಕಂಬಗಳನ್ನೂ ಉಪವಾಸವಿದ್ದು ಸ್ಥಾಪಿಸಬೇಕು. ರೋಹಿಣಿ ಅಥವಾ ಶ್ರವಣ ನಕ್ಷತ್ರವಿರುವಾಗ ಕಂಬಗಳನ್ನು ಸೂರ್ಯೋದಯದಲ್ಲಿ ಸ್ಥಿರವಾಗಿ ನೆಡಬೇಕು. ಇವುಗಳನ್ನು ವಿವಿಧವಾಗಿ ಪರಿಷ್ಕರಿಸಿ ಪೂಜಿಸಿ, ವಿವಿಧ ವರ್ಣಗಳ ಬಟ್ಟೆಗಳಿಂದ ಸುತ್ತಿ, ನೈವೇದ್ಯಾದಿಗಳಿಂದ ಆರಾಧಿಸಬೇಕು; ರತ್ನದಾನ, ಗೋದಾನ, ವಸ್ತ್ರದಾನಗಳನ್ನು ನೀಡಬೇಕು. ಕಂಬಗಳು ಸಡಿಲವಾದರೆ ಅನೇಕ ರೀತಿಯ ಅನಾಹುತಗಳಾಗುತ್ತವೆ (೨೪೨-೬೨); ಮತ್ತವಾರಣಿಯನ್ನು ಸ್ಥಾಪಿಸುವಾಗಲೂ ಗಂಧ, ಮಾಲ್ಯ, ಭೂತಬಲಿ, ಬ್ರಾಹ್ಮಣ ಭೋಜನಗಳನ್ನು ಅರ್ಪಿಸಬೇಕು (೨.೬೩.-೬೭).

ನಾಟ್ಯಗೃಹವನ್ನು ಕಟ್ಟಿದ ಮೇಲೆ ರಕ್ಷೋಘ್ನ ಮಂತ್ರಗಳನ್ನು ವಾಚನ ಮಾಡುತ್ತ ಬ್ರಾಹ್ಮಣರು ಗೋಸಮೇತರಾಗಿ ಅಲ್ಲಿರಬೇಕು; ನಂತರ ನಾಟ್ಯಾಚಾರ್ಯರು ಮಂತ್ರಪೂತವಾದ ನೀರಿನಿಂದ ಪ್ರೋಕ್ಷಿಸಿಕೊಂಡು ಬಟ್ಟೆಯನ್ನು ಬದಲಾಯಿಸದೆ ಮೂರು ರಾತ್ರಿಗಳ ಕಾಲ ರಂಗಪೀಠ ಮತ್ತು ನಾಟ್ಯಗೃಹಗಳಲ್ಲಿ ವಾಸಿಸಬೇಕು (೩.೧-೩). ಆಗ ದೀಕ್ಷೆಯನ್ನು ತೆಗೆದುಕೊಂಡು ವಾದ್ಯಘೋಷದೊಡನೆ ಶಿವ, ಬ್ರಹ್ಮ, ಇಂದ್ರ, ಗುಹ, ಸರಸ್ವತಿ, ಲಕ್ಷ್ಮೀ, ಸಿದ್ಧಿ, ಮೇಧಾ, ಧೃತಿ, ಸ್ಮೃತಿ, ಮತಿ, ಚಂದ್ರ, ಸೂರ್ಯ, ಮರುತರು, ಲೋಕಪಾಲಕರು, ಅಶ್ವಿನಿಗಳು, ಮಿತ್ರ, ಅಗ್ನಿ, ಸುರರು, ರುದ್ರರು, ವರ್ಣಗಳು (?), ಕಾಲ, ಕಲಿ, ಮೃತ್ಯು, ನಿಯತಿ, ಕಾಲದಂಡ, ವಿಷ್ಣುವಿನ ಆಯುಧ (ಸಂದರ್ಶನ? ಕೌಮೋದಕೀ? ಶಾರ್ಙ್ಗ?) ನಾಗರಾಜ, ವಾಸುಕಿ, ವಜ್ರ, ವಿದ್ಯುತ, ಸಮುದ್ರ, ಗಂಧರ್ವರು, ಅಪ್ಸರೆಯರು, ಮುನಿಗಳು, ಪಿಶಾಚಿಗಳು, ಯಕ್ಷರು, ಗುಹ್ಯಕರು, ಮಹೇಶ್ವರರು, ಅಸುರರು, ನಾಟ್ಯವಿಘ್ನಗಳು, ಇತರ ದೈತ್ಯರು, ರಾಕ್ಷಸರು, ನಾಟ್ಯಕುಮಾರಿಯರು, ಗ್ರಾಮದೇವತೆಗಳು(?ಗಣಪತಿ) ಭೂತಸಂಘಾತಗಳು, ದೇವರ್ಷಿಗಳು – ಅವರಿಗೆಲ್ಲ ಕೈಮುಗಿದು ಸಹಾಯನೀಡುವಂತೆ ಕೇಳಿಕೊಳ್ಳಬೇಕು (೩.೪-೧೧). ನಂತರ ನಾಟ್ಯಕ್ಕೆ ಯಶಸ್ಸು ದೊರೆಯಲೆಂದು ಜರ್ಜರಪೂಜೆಯನ್ನು ಮಾಡಬೇಕು (೩.೧೧-೧೪).

ಇದರ ನಂತರ ಪ್ರಭಾತಸಮಯದಲ್ಲಿ ರಂಗಪೂಜೆಯನ್ನು ನೆರವೇರಿಸಬೇಕು. ಇದಕ್ಕೆ ಆರ್ದ್ರಾ, ಮಘಾನಕ್ಷತ್ರಗಳು (ಮೂರನೆಯ ಪಾದ? ಮೂರನೆಯ ಯಾಮ?), ಆಶ್ಲೇಷಾ ಅಥವಾ ಮೂಲಾನಕ್ಷತ್ರಗಳು ಪ್ರಶಸ್ತ. ಆಮೇಲೆ ದಾರುಣ, ಭೂತ, ದೈವತಗಳ ಮುಹೂರ್ತದಲ್ಲಿ ಆಚಮನಗೈದು ರಕ್ತವರ್ಣದ ಗಂಧಾದಿ ಉಪಚಾರಗಳನ್ನು ಮಾಡಿ ನಾಗಪುಷ್ವ, ಪ್ರಿಯಂಗು, ಯವ, ಅರಳು, ಅಕ್ಷತೆಗಳನ್ನು ಅರ್ಪಿಸುತ್ತ ವರ್ತುಲ ಮಂಡಲವನ್ನೂ, ಅದರ ಸುತ್ತ ಕಕ್ಷೆಗಳನ್ನೂ ನಿರ್ಮಿಸಿ ಅವುಗಳಲ್ಲಿ ಬ್ರಹ್ಮ, ಶಿವ, ವಿಷ್ಣು, ಸ್ಕಂದ, ಅಶ್ವಿನೀ, ಚಂದ್ರ, ಸರಸ್ವತೀ, ಲಕ್ಷ್ಮೀ, ಶ್ರದ್ಧಾ, ಮೇಧಾ, ಸ್ವಾಹಾ, ವಿಶ್ವೇದೇವರು, ಗಂಧರ್ವರು, ಋಷಿಗಳು, ಯಮ, ಪಿತೃಗಳು, ಪಿಶಾಚಗಳು, ಉರಗಗಳು, ಗುಹ್ಯರು, ನಿಹೃತಿ, ರಾಕ್ಷಸರು, ಭೂತಗಣಗಳು, ಸಮುದ್ರಗಳು, ವರುಣ, ಸಪ್ತವಾಯುಗಳು, ಗರುಡ, ಕುಬೇರ, ನಾಟ್ಯಮಾತೃಕೆಗಳು, ಯಕ್ಷರು, ಗುಹ್ಯರು, ನಂದಿ, ಗಣೇಶ್ವರರು, ಬ್ರಹ್ಮರ್ಷಿಗಳು, ಭೂತಸಂಘಗಳು ಸನತ್ಕುಮಾರ, ದಕ್ಷ, ಗ್ರಾಮದೇವತೆಗಳು, ಸ್ಕಂದ-ಈ ದೇವತೆಗಳನ್ನು ಆಯಾಯಾ ರೂಪಗಳಲ್ಲಿ ಆಯಾ ತಕ್ಕ ಸ್ಥಾನಗಳಲ್ಲಿ ಸ್ಥಾಪಿಸಬೇಕು (೩.೧೫.೩೫); ಹಾಗೂ ಅವರವರಿಗೆ ಪ್ರಿಯವಾದ ವಿವಿಧ ನೈವೇದ್ಯಗಳನ್ನು ಸಮರ್ಪಿಸಬೇಕು (೩.೩೬-೪೫); ಆಮೇಲೆ ವಿಷ್ಣು, ಮಹೇಶ್ವರ, ಇಂದ್ರ, ಸ್ಕಂದ, ಸರಸ್ವತಿ, ಲಕ್ಷ್ಮಿ, ಸಿದ್ಧಿ, ಮತಿ, ಮೇಧಾ, ಮಾರುತ, ಪುಲಸ್ತನ ವಂಶಜ(ರಾದ ರಾಕ್ಷಸರು), ಧೂಮಕೇತು, ಸೂರ್ಯ, ಚಂದ್ರ, ಗಣೇಶ್ವರರು, ಪಿತೃಗಳು, ಭೂತಗಳು, ಕಾಮಪಾಲ, ತುಂಬುರು, ನಾರದ, ವಿಶ್ವಾವಸು, ಯಮ, ಮಿತ್ರ, ಪನ್ನಗ, ವರುಣ, ಗರುಡ, ಕುಬೇರ, ನಾಟ್ಯಮಾತೃ, ರುದ್ರರ ಆಯುಧ, ವಿಷ್ಣುವಿನ ಆಯುಧ, ಮೃತ್ಯು, ನಿಯತಿ, ಮತ್ತವಾರಣಿಯಲ್ಲಿ ಸ್ಥಾಪನೆಗೊಂಡ ವಾಸ್ತುದೇವತೆಗಳು, ದೇವಗಂಧರ್ವರು- ಇವರೆಲ್ಲರಿಗೂ ಆಯಾ ಮಂತ್ರಗಳನ್ನು ಉಚ್ಚರಿಸುತ್ತ ಬಲಿಯನ್ನ ಅರ್ಪಿಸಬೇಕು. (೩.೪೬-೭೧)

ಇದಾದ ಮೇಲೆ ಜರ್ಜರವನ್ನೂ (ಪುನಃ) ಅದರಲ್ಲಿ ವಾಸಿಸುವ ದೇವತೆಗಳನ್ನೂ,, ನಾಟ್ಯಚಾರ್ಯನು ಪೂಜಿಸಿ ರಕ್ಷಿಸಿರೆಂದು ಬಲಿಯನ್ನು ಕೊಡಬೇಕು (೩.೭೨-೮೧) ಬಲಿಯಾದ ನಂತರ ಅಗ್ನಿಯಲ್ಲಿ ಮಂತ್ರಪುರಃಸರವಾಗಿ ಹೋಮಗಳನ್ನು ಮಾಡಿ ಪಂಜುಗಳನ್ನು ಹೊತ್ತಿಸಿ ರಂಗಕ್ಕೂ ರಾಜನಿಗೂ ನರ್ತಕಿಗೂ ವಾದ್ಯಗಳಿಗೂ ಅವುಗಳಿಂದ ಆರತಿಯನ್ನೆತ್ತಬೇಕು. ನಾಟ್ಯಮಾತೃಕೆಯರಾದ ಸರಸ್ವತಿ, ಧೃತಿ, ಮೇಧಾ, ಹ್ರೀ, ಶ್ರೀ, ಲಕ್ಷ್ಮೀ, ಸ್ಮೃತಿ-ಇವರುಗಳನ್ನು ಸಿದ್ಧಿಯನ್ನು ದಯಪಾಲಿಸಿ ಎಂದು ಪ್ರಾರ್ಥಿಸಬೇಕು. ಪುನ ಮಂತ್ರಸಹಿತವಾಗಿ ಹೋಮ ಮಾಡಿ ಅವನು ಪೂರ್ಣಕುಂಭವನ್ನು ಒಡೆಯಬೇಕು. ಇದರಿಂದ ಶತ್ರುನಾಶವೂ ಭೀತಿನಾಶವೂ ಆಗುತ್ತದೆ. ಇಲ್ಲದಿದ್ದರೆ ವಿಪತ್ತಾಗುತ್ತದೆ. ದೀಪವನ್ನು ಎತ್ತುತ್ತ ಇಳಿಸುತ್ತ, ಕೂಗಿಕೊಳ್ಳುತ್ತ ರಂಗದ ಮೇಲೆಲ್ಲ ನಾಟ್ಯಚಾರ್ಯನು ಓಡಬೇಕು, ರಣೋತ್ಸಾಹದಲ್ಲಿರುವಂತೆ ರಣವಾದ್ಯಗಳ ಘೋಷವಾಗಬೇಕು. ರಕ್ತಸೋರುವಂತೆ ಚುಚ್ಚುವುದು, ಕತ್ತರಿಸುವುದು ಇತ್ಯಾದಿಗಳನ್ನು ಮಾಡಿದರೆ ಸಿದ್ಧಿಯು ಲಭಿಸುತ್ತದೆ, ಹೋಮಾದಿಗಳನ್ನು ಮಾಡದೆ ಇದ್ದರೆ ಪ್ರತ್ಯವಾಯವು ಉಂಟಾಗುತ್ತದೆ (೩.೮೨-೧೦೨).

ಪೂರ್ವರಂಗವಿಧಿಯಲ್ಲಿ ದೇವತಾಸ್ತುತಿ (ಬಹಿರ್ಗೀತ), ನಾಂದೀಪಾಠಕದಿಂದ ಪ್ರಯೋಗ ಪ್ರಾರಂಭ (ಉತ್ಥಾಪನ), ಎಲ್ಲಾದಿಕ್ಕುಗಳಲ್ಲಿಯೂ ಲೋಕಪಾಲಕರಿಗೆ ನಮಸ್ಕಾರ (ಪರಿವರ್ತನ), ದೇವ, ದ್ವಿಜ, ರಾಜರಿಂದ ಆಶೀರ್ವಾದಪ್ರಾರ್ಥನೆ (ಶುಷ್ಕಾವಕೃಷ್ಟ), ಶಂಕರ ಪಾರ್ವತಿಯರ ಶೃಂಗಾರ ಚರಿತ್ರೆ (ಚಾರೀ), ರುದ್ರನು ದೈತ್ಯರನ್ನು ಸಂಹರಿಸಿದ ಚರಿತ್ರೆ (ಮಹಾಚಾರೀ) -ಇವುಗಳನ್ನು ಆಚರಿಸಬೇಕು (೫.೧೪-೩೦).

ಆಂಕಿಕ, ಆಲಿಂಗ್ಯ ಮತ್ತು ಊರ್ಧ್ವಕಗಳೆಂಬ ‌ತ್ರಿಪುಷ್ಕರವಾದ್ಯಗಳನ್ನು ನಿರ್ಮಿಸಿದಮೇಲೆ ದೇವತೆಗಳನ್ನು ಪೂಜಿಸಬೇಕು. ಚಿತ್ರಾ ಅಥವಾ ಹಸ್ತ ನಕ್ಷತ್ರಗಳಿರುವ ಶುಕ್ಲಪಕ್ಷದ ತಿಥಿಯೊಂದರಲ್ಲಿ ಬ್ರಹ್ಮ, ಶಂಕರ ಮತ್ತು ವಿಷ್ಣುಗಳಿಗಾಗಿ ಹೊಸ ಸೆಗಣಿಯಲ್ಲಿ ನೆಲದ ಮೇಲೆ ಮಂಡಲಗಳನ್ನು ರಚಿಸಿ, ಅವುಗಳಲ್ಲಿ ಕ್ರಮವಾಗಿ ಆಲಿಂಗ್ಯ, ಆಂಕಿತ ಮತ್ತು ಊರ್ಧ್ವಕಗಳನ್ನಿಡಬೇಕು. ಆಲಿಂಗ್ಯಕ್ಕೆ ಮಧುಪಾಯಸ ಮತ್ತು ಪುಷ್ಪಗಳ ಬಲಿಯನ್ನೂ, ಆಂಕಿಕಕ್ಕೆ ಅಪೂಪ (ದೋಸೆ / ಇಡ್ಲಿ / ಒಬ್ಬಟ್ಟು), ಅರಳುಗಳ ಬಲಿಯನ್ನೂ, ಊರ್ಧ್ವಕಕ್ಕೆ ಅವುಗಳನ್ನೇ ಸ್ವಸ್ತಿಕ ಮಂಡಲದಲ್ಲೂ ಅರ್ಪಿಸಿ ಅದರ ಮೇಲೆ ಕರವೀರ, ಕೆಂಪು (ದಾಸವಾಳ?), ಔದುಂಬರ (=ಅತ್ರಿ)ಹೂಗಳನ್ನಿಡಬೇಕು. ಆಂಕಿಕಕ್ಕೆ ವೈಷ್ಣವ ಮಂಡಲ. ಅದಕ್ಕೆ ಪುಷ್ಪ, ಗಂಧ, ವಸ್ತ್ರಗಳನ್ನೂ ಪಾಯಸ, ಚರುಗಳನ್ನೂ ಅರ್ಪಿಸಿ, ಬ್ರಾಹ್ಮಣರಿಗೆ ದಕ್ಷಿಣೆಯಿತ್ತು ಸ್ವಸ್ತಿವಾಚನಮಾಡಿಸಿ, ಗಂಧರ್ವರನ್ನು ಪೂಜಿಸಿ ನಂತರ ಈ ವಾದ್ಯಗಳನ್ನು ನುಡಿಸಬೇಕು. ತ್ರಿಪುಷ್ಕರಗಳಿಗೆ ವಜ್ರೇಕ್ಷಣ, ಶಂಕುಕರ್ಣ ಮತ್ತು ಮಹಾಗ್ರಾಮಣೀಗಳು ಅಧಿದೇವತೆಗಳು. ವಾಮಕ ಮುಖಕ್ಕೆ ವಿದ್ಯುಜ್ಜಿಹ್ವ, ಊರ್ಧ್ವಕಕ್ಕೆ ಐರಾವಣ, ಆಲಿಂಗ್ಯಕ್ಕೆ ತಡಿತ್, ದಕ್ಷಿಣಮುಖಕ್ಕೆ ಪುಷ್ಕರ, ಆಲಿಂಗ್ಯಕ್ಕೆ ನಂದಿ, ಆಂಕಿಕಕ್ಕೆ ಸಿದ್ಧಿ ಆಲಿಂಗ್ಯಕ್ಕೆ ಪಿಂಗಲ ಎಂಬ ಮಹಾಮೇಘಗಳು ತಮ್ಮ ಧ್ವನಿಗಳನ್ನು ಕೊಟ್ಟಿವೆ. ಆದುದರಿಂದ ಇವುಗಳಿಗೆ ಪ್ರಿಯವಾದ ಬಲಿಗಳನ್ನು ನೀಡಿದ ಮೇಲೆಯೇ ಅವುಗಳನ್ನು ನುಡಿಸಬೇಕು (೩೪.೨೮೭-೨೯೧) (ವಿವರಗಳಿಗೆ ನೋಡಿ. Sathyanarayana R. Indian Music, Myth and Legend, pp 41-43).

ಬೃಹದ್ದೇಶಿಯಲ್ಲಿ ಧಾರ್ಮಿಕ ಅಥವಾ ಮತೀಯ ಸೂಚನೆಗಳು ಮಿತವಾಗಿವೆ. ವೇದ, ವೇದಾಂಗ ಉಪನಿಷತ್ತುಗಳು (೧೧) ಬ್ರಹ್ಮ, ಅಗ್ನಿ, ಭಾರತೀ, ಹರ, ಇಂದ್ರ, ಗಣನಾಯಕ ಎಂಬ ಸ್ವರದೇವತೆಗಳು (೧೫೬, ೧೫೭) ಅಗ್ನಿ, ಬ್ರಹ್ಮ, ಸೋಮ, ವಿಷ್ಣು, ನಾರದ, ತುಂಬುರು ಎಂಬ ಸ್ವರಗಾಯಕರು, (೧೫೮, ೧೫೯), ಮಹಾದೇವನಿಂದ ಹುಟ್ಟಿದ ದೇಶೀಮಾರ್ಗ (೧೬೪) ಮತ್ತು ದೇಶೀಪ್ರಬಂಧಗಳು (೧೦೫೩), ಕಿನ್ನರ (೮೬೦, ೮೮೦, ೯೨೩, ೯೩೧) ಗಂಧರ್ವ (೧೧೦೭, ೧೧೦೯, ೧೧೪೯, ೧೧೫೨), ನಾಗಕಿನ್ನರ (೮೧೧), ವಿದ್ಯಾಧರ (೯೨೬) ಎಂಬ ಅತಿಮಾನುಷರು, ನಾಗಲೋಕ (೯೦೦) ಎಂಬ ಪುರಾಣೋಕ್ತ ಲೋಕ, ಉಮಾದೇವಿ (೯೮೭), ಜನಾರ್ದನ (೧೯) ಪರಾಶಕ್ತಿ (೧೯), ಬ್ರಹ್ಮಾ (೧೯), ಮಹೇಶ್ವರ (೧೯) ಲಕ್ಷ್ಮೀ (೬೮೦) ಲಲಿತಾ (೮೯೭) ಎಂಬ ದೇವತೆಗಳು, ಸ್ವರೋದ್ಧಾರಕ್ಕಾಗಿ ಆಗಮಶಾಸ್ತ್ರ(೧೫೧), ತಂತ್ರಶಾಸ್ತ್ರೀಯಸೂಚನೆಗಳು (೧೯,೫೩,೬೮,೦೩೭), ೮೪ ತಾನಗಳ ಯಜ್ಞನಾಮಗಳು (೨೧೯-೨೩೦) ಇಷ್ಟನ್ನು ಮಾತ್ರ ಉಲ್ಲೇಖಿಸಿದೆ.