I ಬೃಹದ್ದೇಶೀ ಪ್ರಕಟಣೆಗಳು

ಶ್ರೀ ಮತಂಗಮುನಿಯು ರಚಿಸಿರುವ ಬೃಹದ್ದೇಶಿಯು ಭರತಮುನಿಯ ನಾಟ್ಯಶಾಸ್ತ್ರದ ನಂತರ ರಚಿತವಾಗಿರುವ ಸಂಗೀತಶಾಸ್ತ್ರ ಗ್ರಂಥಗಳಲ್ಲೆಲ್ಲ ಅತ್ಯಂತ ಮುಖ್ಯವೂ, ಸ್ಪಷ್ಟವೂ, ಸ್ವಾರಸ್ಯಮಯವೂ ಆಗಿದೆ. ಈಗ ದೊರೆತಿರುವ ಸ್ವತಂತ್ರ ಸಂಗೀತಶಾಸ್ತ್ರಗ್ರಂಥಗಳ ಪೈಕಿ ಕಾಲಗಣನೆಯಲ್ಲಿ ಇದೇ ಮೊದಲನೆಯದು, ಬಹು ಪ್ರಭಾವಶಾಲಿಯಾದುದು. ಹೀಗಿದ್ದರೂ ಅದರ ಹಸ್ತಪ್ರತಿಗಳು ತುಂಬಾ ವಿರಳವಾಗಿರುವುದು ವಿಸ್ಮಯಕರವಾಗಿದೆ. ಇದುವರೆಗೆ ದೊರೆತಿರುವ ಎರಡೇ ಹಸ್ತಪ್ರತಿಗಳು ಕೇರಳದವು – ತಿರುವಾಂಕೂರಿನ ಉತ್ತರಕ್ಕಿರುವ ಪುಂಜಾರ್ ಎಂಬಲ್ಲಿನ ರಾಜರ ಅರಮನೆಯ ಹಸ್ತಪ್ರತಿಸಂಗ್ರಹದಲ್ಲಿದ್ದುದನ್ನು ಸು. ೧೯೧೮ರಲ್ಲಿ ತಿರುವಾಂಕೂರು ಸರ್ಕಾರದ ಆಡಳಿತದಲ್ಲಿದ್ದ ಸಂಸ್ಕೃತಗ್ರಂಥ ಹಸ್ತಪ್ರತಿಭಾಂಡಾಗಾರದ ಅಧ್ಯಕ್ಷರಾಗಿದ್ದ ಶ್ರೀ ಟಿ. ಗಣಪತಿಶಾಸ್ತ್ರಿಗಳು ಕಂಡುಹಿಡಿದು ಅದರ ಮುಖ್ಯತೆಯನ್ನು ಪ್ರಚುರಪಡಿಸಿದರು. ಅಖಿಲಭಾರತೀಯ ವಿದ್ವಾಂಸರ ಹಾಗೂ ಕಲಾವಿದರ (-ಮುಖ್ಯವಾಗಿ ಸಂಗೀತವಿದ್ವಾಂಸರ-) ಸಮ್ಮೇಳನವು ಇಂದೂರಿನಲ್ಲಿ ೧೯೨೧ರಲ್ಲಿ ಜರುಗಿದಾಗ ಅಲ್ಲಿ ಏರ್ಪಡಿಸಿದ್ದ ವಸ್ತುಪ್ರದರ್ಶನದಲ್ಲಿ ಈ ಎರಡು ಹಸ್ತಪ್ರತಿಗಳನ್ನೂ ಪ್ರದರ್ಶಿಸಲಾಗಿದ್ದು ಗ್ರಂಥವು ವಿದ್ವಜ್ಜನರ ಗಮನ, ಕುತೂಹಲ ಮತ್ತು ಆಸಕ್ತಿಗಳನ್ನು ಸೆಳೆಯಿತು.

ಬೃಹದ್ದೇಶಿಯ ಎರಡೂ ಹಸ್ತಪ್ರತಿಗಳು ತಿರುವನಂತಪುರದ (=ಅನಂತಶಯನ) ಸರ್ಕಾರೀ ಸಂಸ್ಕೃತಗ್ರಂಥ ಹಸ್ತಪ್ರತಿ ಪುಸ್ತಕಾಲಯದಲ್ಲಿದ್ದು ಈಗ ಈ ಸಂಸ್ಥೆಯು ಕೇರಳ ವಿಶ್ವವಿದ್ಯಾನಿಲಯದ ಅಂಗವಾಗಿದೆ. ಇವು ೨೨೦ ಮತ್ತು ೨೨೧ ಎಂಬ ಕ್ರಮಸಂಖ್ಯೆಯವು. ಎರಡೂ ತಾಳೆಯೋಲೆಗಳು, ಸುಮಾರು ೫೦೦ ವರ್ಷಗಳಷ್ಟು ಹಳೆಯವು. ಬಹು ಶಿಥಿಲವಾಗಿದ್ದು, ಮುಟ್ಟಿದರೆ ಪುಡಿಯಾಗುವಂತಿವೆ; ಹುಳು ತಿಂದಿವೆ. ಎರಡೂ ಅಸಮಗ್ರವಾಗಿವೆ. ೨೨೦ನೆಯ ಸಂಖ್ಯೆಯದು ಮಲೆಯಾಳ ಲಿಪಿಯಲ್ಲಿದ್ದು, ಸುಮಾರು ೨೩೦೦ ಗ್ರಂಥಗಳಷ್ಟು ಮೊದಲನೆಯ ಅಧ್ಯಾಯದಿಂದ ಪ್ರಬಂಧಾಧ್ಯಾಯ ಪೂರ್ತಿಯವರೆಗೆ, ಎರಡೂ ಕಡೆ ಬರೆದಿರುವ ಎಪ್ಪತ್ತು ಓಲೆಗಳಲ್ಲಿದೆ. ಇದರಲ್ಲಿ ಓಲೆಗಳ ಸಂಖ್ಯೆಯಿದೆ : ಮೊದಲನೆಯ, ೪೧, ೪೨, ೪೩, ೪೪ ಸಂಖ್ಯೆಗಳ ಓಲೆಗಳು ಲುಪ್ತವಾಗಿವೆ.ಸ ಲಿಪಿಕಾರನು ಬರೆದ ಗಣೇಶಸ್ತುತಿಯೊಡನೆ ಪ್ರಾರಂಭವಾಗಿ ‘ನಿಷಾದ ತತ್ರ ನಿರ್ದಿಶೇತ್’ ಎನ್ನುವವರೆಗೆ ಇದೆ. ೨೨೧ ಎಂಬ ಸಂಖ್ಯೆಯ ಎರಡನೆಯದೂ ಮಲೆಯಾಳ ಲಿಪಿಯಲ್ಲಿದ್ದು ಸುಮಾರು ೬೫೦ ಗ್ರಂಥಗಳನ್ನೊಳಗೊಂಡಿದೆ; ಇದು ಎರಡನೆಯ ಜಾತ್ಯಧ್ಯಾಯದ ಬಹುಭಾಗವನ್ನು ಒಳಗೊಂಡಿದೆ. ಈ ಎರಡು ಹಸ್ತಪ್ರತಿಗಳಿಗೆಸ ಕ (=೨೨೦), ಖ (=೨೨೧) ಎಂಬ ಸಂಜ್ಞೆಗಳನ್ನಿತ್ತು ಅವುಗಳನ್ನು ದಕ್ಷವಾಗಿ ಸಂಪಾದಿಸಿ ಶ್ರೀ ಕೆ. ಸಾಂಬಶಿವಶಾಸ್ತ್ರಿಯವರು ಅನಂತಶಯನ ಸಂಸ್ಕೃತ ಗ್ರಂಥಾವಳಿಯ ೯೪ನೆಯದನ್ನಾಗಿಯೂ ಶ್ರೀ ಸೇತುಲಕ್ಷ್ಮೀಪ್ರಸಾದಮಾಲಾದ ಆರನೆಯದನ್ನಾಗಿಯೂ ೧೯೨೮ರಲ್ಲಿ ಪ್ರಕಟಿಸಿದರು. ಶಾಸ್ತ್ರಿಯವರು ತಿರುವನಂತಪುರಂ ಸಂಸ್ಕೃತಹಸ್ತಪ್ರತಿಗಳ ಪ್ರಕಟನಾ ಇಲಾಖೆಯ ಅಧ್ಯಕ್ಷರಾಗಿದ್ದರು. ಅವರಿಗೆ ಪ್ರಾಚೀನ ಭಾರತೀಯಸಂಗೀತಶಾಸ್ತ್ರದ ಪರಿಚಯವಿರಲಿಲ್ಲವೆಂದು ಕಾಣುತ್ತದೆ. ಇಂತಹ ಪರಿಮಿತಿಯಲ್ಲೂ ಅವರು ಗ್ರಂಥವನ್ನು ಅಚ್ಚುಕಟ್ಟಾಗಿ, ವೈಜ್ಞಾನಿಕವಾಗಿ ಸಂಪಾದಿಸಿದ್ದಾರೆ. ಅವರ ಸಂಪಾದನವನ್ನು ನಾನು ಮೂಲಮಾತೃಕೆಗಳೊಡನೆ ತಾಳೆನೋಡಿದ್ದೇನೆ. ಬೃಹದ್ದೇಶಿಯು ಪ್ರಕಟವಾಗಿ ಎಪ್ಪತ್ತು ವರ್ಷಗಳೇ ಸಂದಿದ್ದರೂ ಅದರ ಬೇರೆ ಹಸ್ತಪ್ರತಿಗಳು ಬೆಳಕಿಗೆ ಬಂದಿಲ್ಲವೆಂಬುದನ್ನು ಗಮನಿಸಿದರೆ ಈ ಪ್ರಕಟನೆಯ ಮಹತ್ತ್ವವು ಮನವರಿಕೆಯಾಗುತ್ತದೆ.

ಬೃಹದ್ದೇಶಿಯು ಅತ್ಯಂತ ಪ್ರಭಾವಶಾಲಿಯಾದ ಪ್ರಾಮಾಣಿಕ, ಪ್ರಾಚೀನ ಸಂಗೀತ ಶಾಸ್ತ್ರಗ್ರಂಥವೆಂದು ಈಗಾಗಲೇ ಹೇಳಿದೆ. ಆದುದರಿಂದ ಅದನ್ನು ನಂತರದ ಎಲ್ಲ ಮುಖ್ಯಸಂಗೀತ ಲಾಕ್ಷಣಿಕರೂ ಅವಲಂಬಿಸಿ ಉದ್ಧರಿಸಿಕೊಂಡಿದ್ದಾರೆ. ಆದರೆ ಉಪಲಬ್ಧಮಾತೃಕೆಗಳು ಲೋಪದೋಷಗಳಿಂದ ತುಂಬಿವೆ. ಬೃಹದ್ದೇಶಿಯ ಬೇರೆ ಹಸ್ತಪ್ರತಿಗಳೂ ದೊರೆತಿಲ್ಲ. ಆದುದರಿಂದ ಬೃಹದ್ದೇಶಿಯ ಉದ್ದೃತಿ ಮತ್ತು ಉಪೋದ್ದೃತಿಗಳನ್ನು ಬಳಸಿಕೊಂಡು ಅದರ ಒಂದು ಸಂಸ್ಕರಣವನ್ನು ತಯಾರಿಸಬಹುದೆ ಎಂಬ ಆಲೋಚನೆಯಿಂದ ಪ್ರೇರಿತನಾಗಿ ಸುಮಾರು ಮೂವತ್ತುವರ್ಷಗಳ ಹಿಂದೆ ಆಗ ದೊರೆತ ಆಕರಗಳನ್ನು ಬಳಸಿಕೊಂಡು ಒಂದು ಸಂಸ್ಕರಣವನ್ನು ತಯಾರಿಸಿದೆ. ಆದರೆ ನನ್ನ ದುರ್ದೈವದಿಂದ ಅದರ ಹಸ್ತಪ್ರತಿಯು ಪೂರ್ತಿಯಾಗಿ ನಾಶವಾಗಿ ಹೋಗಿ ಅನೇಕ ವರ್ಷಗಳ ಪರಿಶ್ರಮವೂ ವ್ಯರ್ಥವಾಯಿತು.

ದಿ.ಡಾ || ಪ್ರೇಮಲತಾ ಶರ್ಮಾರವರು ತನ್ನ ಶಿಷ್ಯ ಡಾ || ಅನಿಲ್ ಬಿಹಾರಿ ಬ್ಯೋಹಾರ್‌ರವರ ನೆರವಿನಿಂದ ಬೃಹದ್ದೇಶಿಯ ಎರಡನೆಯ ಸಂಸ್ಕರಣವನ್ನು ಸುಮಾರು ಹದಿನೈದು ಸಂಗೀತಶಾಸ್ತ್ರೀಯ ಸ್ವತಂತ್ರ ಆಕರಗಳಲ್ಲಿರುವ ಉದ್ದೃತಿ ಮತ್ತು ಉಪೋದ್ದೃತಿಗಳನ್ನು ಅವಲಂಬಿಸಿ ಶಾಸ್ತ್ರೀಯವಾಗಿ ಸಂಪಾದಿಸಿದ್ದಾರೆ. ಇದು ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಕಲಾಮೂಲಶಾಸ್ತ್ರ ಗ್ರಂಥಮಾಲೆಯಲ್ಲಿ ೮ನೆಯದಾಗಿ ಪ್ರಥಮ ಸಂಪುಟವಾಗಿಯೂ ೧೦ನೆಯದಾಗಿ ದ್ವಿತೀಯ ಸಂಪುಟವಾಗಿಯೂ ಕ್ರಮವಾಗಿ ೧೯೯೨ರಲ್ಲಿ ಮತ್ತು ೧೯೯೪ರಲ್ಲಿ ಆಂಗ್ಲಾನುವಾದದೊಡನೆಯೂ ಮೂಲಗ್ರಂಥಕ್ಕೆ ಗ್ರಂಥಸಂಪಾದನೆ ಟಿಪ್ಪಣಿಗಳೊಡನೆಯೂ ಅನುವಾದಕ್ಕೆ ವಿಮರ್ಶಾತ್ಮಕ ಟಿಪ್ಪಣಿಗಳೊಡನೆಯೂ ಪ್ರಕಟವಾಗಿದೆ. ವ್ಯಾಖ್ಯಾನರೂಪವಾದ ಮೂರನೆಯ ಸಂಪುಟವು ಪ್ರಕಟವಾಗಬೇಕಾಗಿದೆ. ಈ ದ್ವಿತೀಯ ಸಂಸ್ಕರಣವು ಮೊದಲನೆಯ ತಿರುವಂದರಂ ಸಂಸ್ಕರಣವನ್ನು ಪ್ರಾಥಮಿಕವಾಗಿಯೂ ಮೇಲೆ ಹೇಳಿರುವ ಉದ್ದೃತಿ-ಉಪೋದ್ದೃತಿಗಳನ್ನು ಗ್ರಂಥಸಂಪಾದನದ ಉಪಕರಣ ಸಾಮಗ್ರಿಯನ್ನಾಗಿಯೂ ಬಳಸಿಕೊಂಡಿದೆ.

ಈಗ ಪ್ರಕಟವಾಗುತ್ತಿರುವ ಮೂರನೆಯ ಸಂಸ್ಕರಣವು ಹಿಂದಿನ ಎರಡು ಸಂಸ್ಕರಣಗಳನ್ನೂ ಅವುಗಳಲ್ಲಿ ಇಲ್ಲದ ಕೆಲವು ಬೇರೆ ಉದ್ದೃತಿ-ಉಪೋದ್ದೃತಿಗಳ ಸಂಪಾದನೋಪಕರಣಗಳನ್ನೂ ಅವಲಂಬಿಸಿ ಸಿದ್ಧಗೊಂಡಿದೆ. ಪ್ರಥಮ ಸಂಪಾದನ / ಸಂಪಾದಕರನ್ನು ಪ್ರ.ಸಂ. ಎಂದೂ ದ್ವಿತೀಯ ಸಂಪಾದನ / ಸಂಪದಕರನ್ನು ದ್ವಿಸಂ ಎಂದೂ ಪ್ರಕೃತ ಗ್ರಂಥದಲ್ಲಿ ಸೂಚಿಸಲಾಗಿದೆ. ಈ ಸಂಪುಟದಲ್ಲಿ ವಿಮರ್ಶಾತ್ಮಕ ಪೀಠಿಕೆಯೊಡನೆ ಮೂಲಗ್ರಂಥವನ್ನೂ ಅದರ ಕನ್ನಡಾನುವಾದವನ್ನೂ ಪಾಠಶೋಧನೆ ಮತ್ತು ಪಾಠವಿಮರ್ಶೆಗಳನ್ನೂ ಅನುಕ್ರಮಣಿಗಳ ಅನುಂಧಗಳನ್ನೂ ಕೊಡಲಾಗಿದೆ. ಮೂಲಗ್ರಂಥದ ವ್ಯಾಖ್ಯಾನವು ಪ್ರತ್ಯೇಕವಾಗಿ ಪ್ರಕಟವಾಗಬೇಕಾಗಿದೆ.

 

II ಗ್ರಂಥಕರ್ತೃ : ಮತಂಗ

(ಅ) ಉಲ್ಲೇಖಗಳು

ಬೃಹದ್ದೇಶಿಯನ್ನು ರಚಿಸಿದ್ದು ಮತಂಗನೆಂದು ಅದರಲ್ಲಿಯೇ ಆರು ಎಡೆಗಳಲ್ಲಿ ಹೇಳಿದೆ :

ಮತಂಗಸ್ಯ ವಚಃ ಶ್ರುತ್ವಾ ನಾರದೋ ಮುನಿರಬ್ರವೀತ್ (೨*)
ಶ್ರೀಮತಂಗಮುನಿಃ ಪ್ರಾಹ ಮುನೀನುದ್ದಿಶ್ಯ ತದ್ಯಥಾ (೧೦೫೪)

ಮತಂಗ ಉವಾಚ

ರಾಗಮಾರ್ಗಸ್ಯ ಯದ್ರೂಪಂ ಯನ್ನೋಕ್ತಂ ಭರತಾದಿಭಿಃ |
ನಿರೂಪ್ಯತೇ ತದಸ್ಮಾಭಿರ್ಲಕ್ಷ್ಯ ಲಕ್ಷಣಸಂಯುತಮ್ || (೫೮೦)
ಏಲಾ ಸಂಕರತಾಮೇತಿ (+ೕತಿ) ಮತಂಗಮುನಿಭಾಷಿತಾ || (೧೧೪೦)
ಯಸ್ಯಾಂ ವರ್ಣೈಲಾ ಸಾ ಕಥಿತಾ ಕ್ರಮತೋ ಮತಂಗೇನ (೧೧೫೫)

ಇತಿ ಮತಂಗಮುನಿವಿರಚಿತ ಬೃಹದ್ದೇಶ್ಯಾಂ ಪ್ರಬಂಧಾಧ್ಯಾಯಃ ಷಷ್ಠಃ (ಉಪಲಬ್ಧಗ್ರಂಥದ ಸಮಾಪ್ತಿವಾಕ್ಯ.)

ಇದು ಲಿಪಿಕಾರನ ಅಥವಾ ಸಂಪಾದಕರ ಪ್ರಕ್ಷೇಪವಲ್ಲದಿದ್ದರೆ ಇಲ್ಲಿ ಗ್ರಂಥದ ಮತ್ತು ಕೊನೆಯ ಗ್ರಂಥಕರ್ತನ ಹೆಸರುಗಳನ್ನು ಒಟ್ಟಿಗೇ ಹೇಳಿದೆ. ಮೂರನೆಯ ಅಧ್ಯಾಯದ ಪ್ರಾರಂಭದಲ್ಲಿ ನಾರದನ ಪ್ರಶ್ನೆಗೆ ಉತ್ತರವಾಗಿ (೫೭೯) ರಾಗಲಕ್ಷಣವನ್ನು ಮತಂಗನು ನಿರೂಪಿಸುತ್ತಾನೆ ಎಂದಿದೆ (೫೮೦). ಇಲ್ಲಿಯೂ ಇದೇ ಮಿತಿಯನ್ನು ಅನ್ವಯಿಸಿಕೊಳ್ಳಬೇಕು.

ಇಷ್ಟೇ ಅಲ್ಲದೆ ಮತಂಗನ ಉತ್ತರಕಾಲೀನ ಸಂಗೀತಲಾಕ್ಷಣಕರು (ಉದಾ. ಅಭಿನವಗುಪ್ತ, ನಾನ್ಯದೇವ, ಪಾರ್ಶ್ವದೇವ, ಸಿಂಹಭೂಪಾಲ, ಕಲ್ಲಿನಾಥ, ಸೋಮನಾಥ) ಮತಂಗೋಕ್ತವೆಂದು ಹೇಳಿ ಅಕ್ಷರಶಃ ಉದ್ಧರಿಸಿಕೊಂಡ ಗ್ರಂಥಾಂಶಗಳೂ, ಬೃಹದ್ದೇಶಿಯದೆಂದು ಹೇಳಿ ಉದ್ಧರಿಸಿಕೊಂಡ ಗ್ರಂಥಾಂಶಗಳೂ, ಅಪರೂಪವಾಗಿ ಮತಂಗಮುನಿ ವಿರಚಿತ ಬೃಹದ್ದೇಶಿಯದೆಂದು (ಎರಡೂ ಹೆಸರುಗಳನ್ನು ಉಲ್ಲೇಖಿಸಿ) ಹೇಳಿ ಉದ್ಧರಿಸಿಕೊಂಡ ಗ್ರಂಥಾಂಶಗಳೂ ಈಗ ದೊರೆತಿರುವ ಬೃಹದ್ದೇಶಿಯಲ್ಲಿವೆ. ಪ್ರಬಂಧಾಧ್ಯಯವನ್ನುಳಿದ ಇತರ ಎಲ್ಲಾ ಅಧ್ಯಾಯಗಳಲ್ಲಿಯೂ ಇಂತಹ ಉದ್ದೃತಿಗಳು ಗ್ರಂಥದ ಉದ್ದಕ್ಕೂ ದೊರೆತು ಗ್ರಂಥ ಮತ್ತು ಕರ್ತೃವಿನ ಹೆಸರುಗಳನ್ನು ಸ್ಥಿರಪಡಿಸುತ್ತವೆ. ಅಲ್ಲದೆ ಮತಂಗನದೆಂದೋ ಬೃಹದ್ದೇಶಿಯದೆಂದೋ ಹೆಸರು ಹೇಳಿ ಅಕ್ಷರಶಃ ಉದ್ಧರಿಸಿಕೊಳ್ಳದೆ ಇದ್ದರೂ ವಿಷಯವನ್ನು ಸಾರಾಂಶಗೊಳಿಸುವ (ಉದಾ. ಚಾಳುಕ್ಯಸೋಮೇಶ್ವರ, ಸಾರ್ಙ್ಗದೇವ, ಕುಂಭಕರ್ಣ) ಸಂದರ್ಭಗಳಲ್ಲಿಯೂ ಉಪಲಬ್ಧ ಬೃಹದ್ದೇಶಿಯೊಡನೆ ಸಂಪೂರ್ಣವಾದ ವಿಷಯ ಪಾರಸ್ಪರ್ಯವಿದೆ. ಬೃಹದ್ದೇಶಿಯ ಈಗ ದೊರೆಯದಿರುವ ವಾದ್ಯಾಧ್ಯಾಯ, ತಾಲಾಧ್ಯಾಯ ಮತ್ತು ನರ್ತನಾಧ್ಯಾಯಗಳಿಂದ ಉದ್ಧರಿಸಿಕೊಂಡಿದ್ದೆಂದು ನಂತರದ ಲಾಕ್ಷಣಿಕಕರು. (ಉದಾ. ಅಭಿನವಗುಪ್ತ, ಜಾಯಸೇನಾಪತಿ, ಕಲ್ಲಿನಾಥ, ಮುಮ್ಮಡಿ ಚಿಕ್ಕಭೂಪಾಲ) ಉಲ್ಲೇಖಿಸುವ ಗ್ರಂಥಾಂಶಗಳನ್ನು ತಾಳೆನೋಡಲು ಈಗ ದೊರೆತಿರುವ ಹಸ್ತಪ್ರತಿ ಆಕರಗಳು ಸಾಲದಾಗಿವೆ.

ಪ್ರಾಚೀನ ಸಂಸ್ಕೃತ ವಾಙ್ಮಯದಲ್ಲಿ ಮತಂಗನೆಂಬ ಮುನಿಯ ಹೆಸರು ಸಂಗೀತನೃತ್ಯಗಳಿಗೆ ಸಂಬಂಧಿಸಿ ಮತ್ತು ಸಂಬಂಧಿಸದೆ ಹಲವೆಡೆ ಉಲ್ಲೇಖಗೊಂಡಿದೆ. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಇಲ್ಲಿ ಎತ್ತಿಹೇಳಬಹುದು. ವಾಲ್ಮೀಕಿರಾಮಾಯಣದಲ್ಲಿ ಮತಂಗಋಷಿಯ ಉಲ್ಲೇಖವು ಎರಡು ಸಂದರ್ಭಗಳಲ್ಲಿ ಬಂದಿದೆ. ಅರಣ್ಯಕಾಂಡದ ಕೊನೆಯಲ್ಲಿ (೭೩.೨೩-೩೧) ಕಬಂಧನು ಶ್ರೀರಾಮನಿಗೆ ಋಷ್ಯಮೂಕಪರ್ವತಕ್ಕೆ ದಾರಿಯನ್ನು ವಿವರಿಸುವಾಗ ಪಂಪಾನದೀತೀರದಲ್ಲಿದ್ದ ಮತಂಗಮುನಿಯು ಆಶ್ರಮ ಹಾಗೂ ಮತಂಗವನಗಳನ್ನು ಬಹು ಸುಂದರವೆಂದೂ ಶಾಂತಿಧಾಮವೆಂದೂ ವರ್ಣಿಸುತ್ತಾನೆ. ಮತಂಗಮುನಿಯ ಶಿಷ್ಯರು ಆತನಿಗಾಗಿ ಹಣ್ಣುಗಳನ್ನು ಸಂಗ್ರಹಿಸಿ ರಾಶಿಮಾಡಿದಾಗ ಅದರ ಆಯಾಸದಿಂದ ಮರಗಳ ಮೇಲೆ ಉದುರಿದ ಅವರ ಬೆವರು ಹನಿಗಳೆಲ್ಲ ಹೂಗಳಾಗಿ ಅರಳುತ್ತವೆ; ಆತನ ಮಹಿಮೆಯು ಅಂತಹದು; ಮತಂಗಮುನಿಯ ಆಜ್ಞೆಯಿಂದಾಗಿ ಆ ವನದಲ್ಲಿ ಆನೆಗಳು ಪ್ರವೇಶಿಸುವುದಿಲ್ಲವೆಂದೂ, ಆಶ್ರಮ ಪರಿಚಾರಿಕೆಯೂ ಮತಂಗಶಿಷ್ಯಳೂ ತಪಸ್ವಿಯೂ ಆದ ಶಬರಿಯು ಅಲ್ಲಿ ಇರುತ್ತಾಳೆ ಎಂದು ಕಬಂಧನು ತಿಳಿಸುತ್ತಾನೆ. ಸೀತೆಯನ್ನು ಹುಡುಕಿಕೊಂಡು ಈ ಮಾರ್ಗವಾಗಿಸ ರಾಮಲಕ್ಷ್ಮಣರು ಮತಂಗಾಶ್ರಮಕ್ಕೆ ಬರುವವೇಳೆಗೆ ಮತಂಗಋಷಿಯು ದೇಹತ್ಯಾಗ ಮಾಡಿರುತ್ತಾನೆ. ರಾಮಲಕ್ಷ್ಮಣರ ಸೇವೆ ಮಾಡಿದ ಮೇಲೆ ಶಬರಿಯೂ ರಾಮನ ಅಪ್ಪಣೆಪಡೆದು ಸ್ವರ್ಗವನ್ನು ಪಡೆಯುತ್ತಾಳೆ (೭೪.೧೦-೩೩)

ಮತಂಗಮುನಿಯ ಉಲ್ಲೇಖವು ವಾಲ್ಮೀಕಿ ರಾಮಾಯಣದ ಕಿಷ್ಕಿಂದಾಕಾಂಡದಲ್ಲಿಯೂ ಇದೆ. ವಾಲಿಯು ಮಹಿಷರೂಪನಾದ ದುಂದುಭಿಯೆಂಬ ರಾಕ್ಷಸನೊಡೆನ ಋಷ್ಯಮೂಕಪರ್ವತದ ಮೇಲೆ ಯುದ್ಧಮಾಡಿ ಕೊಂದಾಗ ದುಂದುಭಿಯ ರಕ್ತಮಯವಾದ ರುಂಡವು ಋಷ್ಯಮೂಕಪರ್ವತದಲ್ಲಿದ್ದ ಮತಂಗಾಶ್ರಮದಲ್ಲಿ ಬಿದ್ದು ಅದನ್ನು ಹೊಲಸು ಮಾಡಿತು. ಇದರಿಂದ ಕೋಪಗೊಂಡ ಮತಂಗನು ತನ್ನ ಮತಂಗವನವನ್ನು ವಾಲಿಯು ಪ್ರವೇಶಿಸಿದರೆ ತಲೆಯೊಡೆದು ಸಾಯುವುದಾಗಿ ಶಾಪವಿತ್ತನು. (೧೧.೪೭-೫೪). ಋಷ್ಯಮೂಕಪರ್ವತದ ಸಮೀಪದಲ್ಲಿದ್ದ ಪ್ರದೇಶವು ಸಂಗೀಮಯವಾಗಿತ್ತೆಂಬುದು ತುಂಬುರುವೆಂಬ ಗಂಧರ್ವನ ಆಖ್ಯಾನ. (ಅರಣ್ಯಕಾಂಡ, ೩.೪-೧೪). ಮಾಂಡಕರ್ಣಿ ಮತ್ತು ಪಂಚಾಪ್ಸರ ಸರೋವರದ ಆಖ್ಯಾನ (ಅದೇ, ೧೧.೧೧-೨೦), ಸಪ್ತಜನರ ಆಖ್ಯಾನ (ಕಿಷ್ಕಿಂಧಾಕಾಂಡ, ೪.೧೩-೨೨) ಮುಂತಾದವುಗಳಿಂದ ತಿಳಿಯುತ್ತದೆ. ಋಷ್ಯಮೂಕಪರ್ವತ, ಮಾತಂಗಪರ್ವತ, ಮಾಲ್ಯವಂತಗಳೂ ಪಂಪಾನದಿಯೂ ಕರ್ನಾಟಕದ ಹಂಪಿಯಲ್ಲಿವೆ.

ಸಂಗೀತಕ್ಕೆ ಮತಂಗನನ್ನು ಪರೋಕ್ಷವಾಗಿ ಸಂಬಂಧಿಸುವ ಒಂದು ಕಥೆಯು ಕಾಳಿದಾಸನ ರಘುವಂಶ ಕಾವ್ಯದಲ್ಲಿದೆ (೫.೫೩-೫೫). ಇಲ್ಲಿ ಮತಂಗನು ಶ್ರೀರಾಮಚಂದ್ರನ ಪಿತಾಮಹನೂ ಇಕ್ಷ್ವಾಕುರಾಜವಂಶದಲ್ಲಿ ಅರವತ್ತನೆಯವನೂ ಆಗಿದ್ದ ಅಜನ ಸಮಕಾಲೀನನು. ವಿದರ್ಭರಾಜನೂ ಕ್ರಥ ಮತ್ತು ಕೈಶಿಕರೆಂಬ ಜನಾಂಗಗಳ ಪ್ರಭುವೂ ಆಗಿದ್ದ ಬೋಜನು ತನ್ನ ತಂಗಿಯಾದ ಇಂದುಮತಿಗೆ ಸ್ವಯಂವರವನ್ನೇರ್ಪಡಿಸಿ ಅವಳಿಗೆ ಅಜನು ಅನುರೂಪನೆಂದು ನಿಶ್ಚಯಿಸಿ ಅವನನ್ನು ಆಹ್ವಾನಿಸುತ್ತಾನೆ. ಅಜನು ಇದಕ್ಕೆಂದು ಪಯಣಿಸುತ್ತ ನರ್ಮದಾ ತೀರದಲ್ಲಿದ್ದ ಮಹಾರಣ್ಯದಲ್ಲಿ ಒಂದು ದೊಡ್ಡ ಸಲಗನನ್ನು ಬೇಟೆಯಾಡಿ ಕೊಲ್ಲುತ್ತಾನೆ. ಈ ಸಲಗವು ಪೂರ್ವಜನ್ಮದಲ್ಲಿ ಪ್ರಿಯದರ್ಶನನೆಂಬ ಗಂಧರ್ವರಾಜನ ಮಗನಾದ ಪ್ರಿಯಂವದನೆನ್ನುವ ಗಂಧರ್ವನಾಗಿದ್ದು ತನ್ನ (ಗಾಂಧರ್ವವಿದ್ಯೆಯ?) ಗರ್ವದಿಂದ ಮತಂಗ (=ಆನೆ)ವಾಗಿಹೋಗೆಂದು ಮತಂಗಮುನಿಯಿಂದ ಶಾಪಗ್ರಸ್ತನಾಗಿರುತ್ತಾನೆ; (ಮತಂಗಮುನಿಯು ಗಾಂಧರ್ವವಿದ್ಯಾಕೋವಿದನಾಗಿದ್ದನೆಂದು ಇದರಿಂದ ಅನುಮಾನಿಸಬಹುದು.) ಶರಣಾಗತನಾದ ಪ್ರಿಯಂವದನು ಅಜನಿಂದ ಹತನಾಗಿ ತನ್ನ ಸ್ವಸ್ವರೂಪವನ್ನು ಪಡೆಯುವಂತೆ ವಿಶಾಪವನ್ನೂ ಪಡೆಯುತ್ತಾನೆ. ಪ್ರಿಯಂವದನು ಅಜನಿಗೆ ತನ್ನ ಪೂರ್ವವೃತ್ತಾಂತವನ್ನು ತಿಳಿಸಿ (ಬಹುಶಃ ಸಂಗೀತಮೂಲಕವಾದ) ಸಂಮೋಹನವೆಂಬ ಗಂಧರ್ವಮಂತ್ರವಿದ್ಯೆಯನ್ನು ಉಪದೇಶಿಸಿ ಗಾಂಧರ್ವಲೋಕಕ್ಕೆ ತೆರಳುತ್ತಾನೆ. ಈ ಆಕರದಲ್ಲಿ ಮತಂಗವನ, ಮತಂಗಪರ್ವತಗಳ ಹೆಸರುಗಳಿರುವುದನ್ನು ಗಮನಿಸಬೇಕು. ಮತಂಗಲೀಲಾ ಎಂಬ ಗಜಲಕ್ಷಣ ಶಾಸ್ತ್ರಗ್ರಂಥದಲ್ಲಿ ವಸುವಿನ ಮಗಳಾದ ಗುಣವತಿಯು ತನ್ನ ಅಹಂಕಾರದ ದೆಸೆಯಿಂದ ಬ್ರಹ್ಮನ ಶಾಪವನ್ನು ಪಡೆದು ಆನೆಯಾಗಿ ಮತಂಗಾಶ್ರಮವನ್ನು ಕೂತೂಹಲಾವಿಷ್ಟಳಾಗಿ ಪ್ರವೇಶಿಸಿದಳೆಂದು ಹೇಳಿದೆ (ಶ್ಲೋ.೧೫.ಪು.೩).ಸ ಕಂಬರಾಮಾಯಣದ ಪೂರ್ವಕಾಂಡದಲ್ಲಿ ಮತಂಗಾಶ್ರಮದ ಪ್ರಸ್ತಾಪವಿದೆ.

ವ್ಯಾಸಭಾರತದಲ್ಲಿಯೂ ಮತಂಗನೆಂಬ ಹೆಸರಿನ ಕೆಲವು ಉಲ್ಲೇಖಗಳಿವೆ. ತ್ರಿಶಂಕುವಿಗೆ ಮತಂಗನೆಂಬ ಬೇರೊಂದು ಹೆಸರಿತ್ತು (ಆದಿಪರ್ವ ೭೧.೩೧). ಮತಂಗನು ಬ್ರಾಹ್ಮಣಸ್ತ್ರೀಯಲ್ಲಿ ಕ್ಷೌರಿಕನೊಬ್ಬನಿಂದ ಜನಿಸಿದನು. ಇದು ಮತಂಗನಿಗೆ ಬಹುಕಾಲ ಗೊತ್ತಿರಲಿಲ್ಲ. ಒಮ್ಮೆ ಅವನು ಹೊಲಕ್ಕೆ ಹೋಗಿ ಒಂದು ಕತ್ತೆಯನ್ನು ನೇಗಿಲಿಗೆ ಹೂಡಿ ಉಳುತ್ತಿದ್ದಾಗ ಕತ್ತೆಯು ಶ್ರಮದಿಂದ ಬಳಲಿ ನಿಧಾನವಾಗಿ ಚಲಿಸಿತು. ಆಗ ಮತಂಗನು ಅದನ್ನು ಬಹುವಾಗಿ ಹೊಡೆದನು. ಇದನ್ನು ಕಂಡ ಕತ್ತೆಯ ತಾಯಿಯು ಮತಂಗನೊಡನೆ ಸಂಭಾಷಿಸಿ ಅವನ ಕ್ರೂರ ವರ್ತನೆಗೆ ಅವನ ಜನ್ಮವೇ ಕಾರಣವೆಂದು ಹೇಳಿ ಅವನ ಹುಟ್ಟನ್ನು ತಿಳಿಸಿತು. ಮತಂಗನು ಇದರಿಂದ ಅವಮಾನಿತನಾಗಿ ಮನೆಗೆ ಹೋಗಿ ತಂದೆತಾಯಿಯರಿಂದ ಇದು ಸತ್ಯವೆಂದು ತಿಳಿದನು. ಆಮೇಲೆ ಬ್ರಾಹ್ಮಣನಾಗಬೇಕೆಂಬ ಉದ್ದೇಶದಿಂದ ಅವನು ಕಠಿಣವಾದ ತಪಸ್ಸನ್ನು ಆಚರಿಸಿದ ನಂತರ ಇಂದ್ರನು ಪ್ರತ್ಯಕ್ಷನಾಗಿ ‘ನೀನು ಬ್ರಾಹ್ಮಣನಾದೆ’ ಎಂಬ ವರವನ್ನಿತ್ತನು. ಇವನು ತೇಜಸ್ವಿಯಾದ ಬ್ರಹ್ಮರ್ಷಿಯಾದನು (ಅನುಶಾಸನಪರ್ವ, ೩.೮,೧೮,೪.೧). ಲಲಿತೋಪಾಖ್ಯಾನದಲ್ಲಿ ಮತಂಗನೆನ್ನುವುದು ಮಹಾತಪಸ್ವಿಯೂ ಪ್ರಭಾವಸಂಪನ್ನನೂ ಅಪ್ರತಿಹತಶಕ್ತಿಸಂಪನ್ನನೂ ಮಂತ್ರರಹಸ್ಯವಿದನೂ ಬ್ರಹ್ಮಣ್ಯನೂ ಆಗಿದ್ದ ಒಬ್ಬ ಋಷಿಯ ಹೆಸರು (ಅಧ್ಯಾಯ ೨೮).

ಯಾಷ್ಟಿಕಮತವೆಂಬ ಒಂದು ಗ್ರಂಥದಲ್ಲಿ ಮತಂಗಮುನಿಯು ಹರವಿಲಾಸವೆಂಬ ಪ್ರಬಂಧವನ್ನು ವರ್ಣಿಸಿದ್ದಾನೆ ಎಂದು ಹೇಳಿದೆಯೆಂದು ಎಂ. ಕೃಷ್ಣಮಾಚಾರ್ಯರು ಹಿಸ್ಟರಿ ಆಫ್ ಸಂಸ್ಕೃತ ಲಿಟರೇಚರ್‌ನಲ್ಲಿ (ಪು.೮೨೩-೪) ಹೇಳುತ್ತಾರೆ: ‘ಮತಂಗಮುನಿನಾ ಪ್ರೋಕ್ತೋ ನಾಮ್ನಾಹರವಿಲಾಸಕಃ’. ಈ ಪ್ರಬಂಧವು ಉಪಲಬ್ಧ ಬೃಹದ್ದೇಶಿಯಲ್ಲಿ ದೊರೆಯುವುದಿಲ್ಲವಾದರೂ ಮತಂಗನು ಅದನ್ನು ವರ್ಣಿಸಿರುವುದಕ್ಕೆ ಆಧಾರವಿದೆ. ಆದರೆ ಅವರು ಉಲ್ಲೇಖೀಸಿದ (ಗೌರ್ನಮೆಂಟ್ ಓರಿಯಂಟಲ್ ಮ್ಯಾನ್ಯುಸ್ಕ್ರಿಪ್ಟ್‌ಟ್ಸ ಲೈಬ್ರರಿ, ೭೪೫ರ ಹನ್ನೆರಡನೆಯ ಸಂಖ್ಯೆಯದು) ಯಾಷ್ಟಿಕಮತ ಗ್ರಂಥವಿಂದು ದೊರೆಯುವುದಿಲ್ಲ. ಕೃಷ್ಣಮಾಚಾರ್ಯರು ಮತಂಗನು ಜಕ್ಕಿಣೀ (ಝಕ್ಕಿಣೀ) ಎಂಬ ನೃತ್ಯಪ್ರಬಂಧವೊಂದನ್ನು ರಚಿಸಿದ್ದನೆನ್ನಲು ಒಂದು ಹಸ್ತಪ್ರತಿಯಿಂದ (ಬಿಟಿಸಿ. ೧೧೫೩೬) ಈ ಗ್ರಂಥಾಂಶವೊಂದನ್ನು ಉದ್ಧರಿಸಿಕೊಂಡಿದ್ದಾರೆ :

            ಪುರಾ ದೇವೀ ಮಹಾಕಾಲೀ ಲಾಸಿತುಂ ಶಂಭುನಾ ಸಹ |
ಜನಕಂ ಪ್ರೇಕ್ಷ್ಯ ಪ್ರಪಚ್ಛ ಮತಂಗಂ ದೀಪ್ತತೇಜಸಮ್ ||
………………………………………………………………..
ಕಾಳಿಕಾಯಾಃ ಕೃತಾ ಪೂರ್ವಂ ಮತಂಗೇನ (ಚ) ಝಕ್ಕಿಣೀ ||

ಇಲ್ಲಿನ ಗ್ರಂಥಸಂದರ್ಭವು ಹೀಗಿದೆ : ಕಾಲಿಯು ಮಾತಂಗೀ, ಮತಂಗಮುನಿಯ ಮಗಳು. ಅವಳಿಗೆ ತನ್ನ ಪತಿಯಾದ ಶಂಭುವಿನೊಡನೆ ನರ್ತಿಸಬೇಕೆಂದು ಆಸೆಯುಂಟಾಗಿ ಅದಕ್ಕೆ ಅನುಕೂಲಿಸುವಂತೆ ಒಂದು ನೃತ್ಯಪ್ರಬಂಧವನ್ನು ರಚಿಸಿಕೊಡೆಂದು ತನ್ನ ತಂದೆಯೂ, ದೀಪ್ತತೇಜಸನೂ ಆದ ಮತಂಗನನ್ನು ಕೇಳಿಕೊಳ್ಳಲು ಅವನು ಝಕ್ಕಿಣೀ ಎಂಬುದನ್ನು ನಿರ್ಮಿಸಿಕೊಟ್ಟನು.

ಮತಂಗನನ್ನು ಸಂಗೀತದೊಡನೆ ಸಂಬಂಧಿಸುವ ಒಂದು ಕಥೆಯು ಶ್ರೀಮುಷ್ಣಂ ಸ್ಥಳ ಪುರಾಣದಲ್ಲಿ ದೊರೆಯುತ್ತದೆ. ಮತಂಗಮುನಿಗೆ ದತ್ತಿಲ, ಕೋಹಲರೆಂಬ ಇಬ್ಬರು ಪುತ್ರರು. (ನಾಟ್ಯಶಾಸ್ತ್ರದ ೧.೧೭ರಲ್ಲಿ ಇವರಿಬ್ಬರೂ ಭರತಪುತ್ರರೆಂಬುದನ್ನು ಗಮನಿಸಬೇಕು. ಆದರೆ ಮತಂಗನು ಭರತಪುತ್ರನಲ್ಲ.) ಅವರು ಝಿಲ್ಲಿಕಾ ಎಂಬ ಮುನಿಯ ಶುಕ್ಲಾ, ಕೃಷ್ಣಾ ಎಂಬ ಇಬ್ಬರು ಪುತ್ರಿಯರನ್ನು ಮದುವೆಯಾದರು. ಆದರೆ ಇವರಿಬ್ಬರೂ ಶ್ರೀಮುಷ್ಣಂನಲ್ಲಿ ನೆಲೆಸಿದ್ದ ಯಜ್ಞವರಾಹ ದೇವರನ್ನು ಸೇವಿಸಲು ಹಂಬಲಿಸಿ ನದಿಗಳಾಗಿ ರೂಪುಗೊಂಡರು. (೯೮.೧೭-೩೦)

            ಶುಕ್ಲಾಕೃಷ್ಣೇತಿ ನದ್ಯೌ ದ್ವೇ ವಿಮಾನಾದುತ್ತರೇ ಶುಬೇ |
ಝಿಲ್ಲಿಕಾತನಯೇ ಪುಣ್ಯೇ ಮತಂಗಸ್ಯ ಸ್ನುಷೇ ಉಭೇ ||
ತಯೋಃ ಪತೀ ಚ ವಿಖ್ಯಾತೌ ದತ್ತಿಲಃ ಕೋಹಲೋsಪಿ ಚ |
ಮತಂಗಸ್ಯ ಮುನೇಃ ಪುತ್ರೌ ಗೀತಶಾಸ್ತ್ರವಿಶಾರದೌ |
ತಯೋಃ ಪತ್ಯೌ ಚ ತೌ ನದ್ಯೌ ಝಿಲ್ಲಿಕಾತನಯೇ ಉಭೇ |
ಕೋಲದೇವಸ್ಯ ಪೂಜಾರ್ಥಂ ನದೀರೂಪಮವಾಪತುಃ ||

ಮತಂಗನೆಂಬ ಹೆಸರು ಸಂಗೀತ ಕ್ಷೇತ್ರದಲ್ಲಿ ಹೇಗೋ ಧಾರ್ಮಿಕ ಕ್ಷೇತ್ರದಲ್ಲಿಯೂ – ಬಹುಶಃ ಇನ್ನೂ ಹೆಚ್ಚಾಗಿ- ಪ್ರಸಿದ್ಧವಾಗಿದೆ. ವಸಿಷ್ಠ, ವಿಶ್ವಾಮಿತ್ರ, ಭಾರದ್ವಾಜ, ಅಗಸ್ತ್ಯ ಮುಂತಾದ ಋಷಿಗಳ ಹೆಸರಿನಲ್ಲಿರುವಂತೆಯೇ ಮತಂಗನ ಹೆಸರಿನಲ್ಲಿಯೂ ಪುಣ್ಯಕ್ಷೇತ್ರಗಳೂ ತೀರ್ಥಗಳೂ ಇವೆ. ಇವುಗಳ ಪ್ರಸ್ತಾಪವು ಮಹಾಪುರಾಣಗಳಾದ ಅಗ್ನಿ, ವರಾಹ, ವಾಯು, ನಾರದ ಮತ್ತು ವಿಷ್ಣುಧರ್ಮೋತ್ತರ ಪುರಾಣಗಳಲ್ಲಿದೆ. ಇಲ್ಲೆಲ್ಲ ಅದು ಪಿತೃಶ್ರಾದ್ಧ ಮತ್ತು ದಾನಗಳನ್ನು ಮಾಡಲು ಬಹು ಪವಿತ್ರವೂ ಪ್ರಶಸ್ತವೂ ಆದ ತೀರ್ಥವೆಂದು ಪ್ರಶಂಸಿತವಾಗಿದೆ. ಮತಂಗಕ್ಷೇತ್ರವನ್ನು ಕೌಶಿಕಿಯ ಉಪನದಿಯೊಂದರ ದಡದಲ್ಲಿ ವರಾಹ ಪುರಾಣವು (೧೪೦.೫೮-೫೯) ಉಲ್ಲೇಖಿಸುತ್ತದೆ. ಗಯಾ ಕ್ಷೇತ್ರದ ಮತಂಗಾಶ್ರಮವನ್ನು ನಾರದಪುರಾಣ (೨,೪೪,೫೭), ವಾಯುಪುರಾಣ (೧೦೮.೨೫)ಗಳು ವರ್ಣಿಸುತ್ತವೆ. ಅಂತೆಯೇ ಗಯಾಕ್ಷೇತ್ರದ ಮತಂಗಾಶ್ರಮವನ್ನು ವಾಯು (೮೪.೧೦೧) ಮತ್ತು ಅಗ್ನಿ (೧೧೫.೩೪) ಪುರಾಣಗಳೂ ಮತಂಗಕೇದಾರವನ್ನು ವಾಯುಪುರಾಣವೂ (೮೮.೧೭) ಹೇಳುತ್ತವೆ. ವ್ಯಾಸಭಾರತವು ವನಪರ್ವದಲ್ಲಿ ಮತಂಗಾಶ್ರಮವನ್ನೂ (೮೨.೧೦೦) ಮತಂಗ ಕೇದಾರವನ್ನೂ (೮೩.೧೭) ಹೇಳುತ್ತದೆಂಬುದು ಗಮನಾರ್ಹವಾಗಿದೆ. ಅಷ್ಟೇ ಅಲ್ಲದೆ ಮತಂಗ ವಾಪಿ (=ಕೊಳ, ಸರೋವರ)ಯೆಂಬ ಪವಿತ್ರ ತೀರ್ಥವನ್ನು ಗಯೆಯಲ್ಲಿ ಅಗ್ನಿ (೧೧೫.೩೪)ಸ, ನಾರದ (೨.೪೫.೧೦೦), ವಿಷ್ಣುಧರ್ಮೋತ್ತರ (೮೫.೩೮) ಪುರಾಣಗಳೂ ಕೋಸಲದಲ್ಲಿ ವಾಯು ಪುರಾಣವೂ (೭೭.೩೬) ಕೈಲಾಸಪರ್ವತದಲ್ಲಿ ಬ್ರಹ್ಮವೈವರ್ತಪುರಾಣವೂ (೩.೧೩.೩೬) ವರ್ಣಿಸುತ್ತವೆ. ಇದಲ್ಲದೆ ಗಯೆಯಲ್ಲಿರುವ ಮತಂಗೇಶವೆಂಬ ಪವಿತ್ರಕ್ಷೇತ್ರವನ್ನು ಅಗ್ನಿಪುರಾಣವು (೧೧೫.೩೫) ಪ್ರಶಂಸಿಸುತ್ತದೆ.

ಹಿಂದೂಗಳಲ್ಲಿ ಮಾತ್ರವಲ್ಲದೆ ಜೈನ, ಬೌದ್ಧಮತಗಳಲ್ಲಿಯೂ ಮತಂಗ, ಮಾತಂಗ ಮತ್ತು ಮಾತಂಗೀ ಎಂಬ ಹೆಸರುಗಳು ಪವಿತ್ರ-ಧಾರ್ಮಿಕ ಪರಿಸರಗಳಲ್ಲಿ ಕಂಡುಬರುತ್ತವೆ. ನನಗೆ ತಿಳಿದ ಮಟ್ಟಿಗೆ ಜೈನಮತದಲ್ಲಿ ಮತಂಗ ಎಂಬ ಇಬ್ಬರು ಯಕ್ಷರ ಹೆಸರು ದೊರೆಯುತ್ತದೆ. ಏಳನೆಯ ತೀರ್ಥಂಕರನಾದ (ಸು) ಪಾರ್ಶ್ವನಾಥನ ಯಕ್ಷನ ಹೆಸರು ಮಾತಂಗ, ಯಕ್ಷಿಯು ಶಾಂತಾ ಅಥವಾ ಶಾಂತಿ. ದಿಗಂಬರ ಪಥದಲ್ಲಿ ಈ ಯಕ್ಷನನ್ನು ವರನಂದಿ ಎಂದು ಹೆಸರಿಸಿದೆ. ಶ್ವೇತಾಂಬರ ಪಂಥದಲ್ಲಿ ಮಾತಂಗನು (ಅನ್ವರ್ಥವಾಗಿ) ಗಜವಾಹನ, ಬಿಲ್ವಫಲ, (ಅನ್ವರ್ಥವಾಗಿ) ಅಂಕುಶ, ಮುಂಗುಸಿ (ನಕುಲ) ಮತ್ತು ಪಾಶಗಳನ್ನು ಧರಿಸಿರುವ ಕಪ್ಪುಬಣ್ಣದ ಚತುರ್ಭುಜಮೂರ್ತಿ.

‘ಸುಪಾರ್ಶ್ವಸ್ಯ ಮತಂಗೋ ಯಕ್ಷೋ ನೀಲವರ್ಣೋ ಗಜವಾಹನಶ್ಚತುರ್ಭುಜೋ ಬಿಲ್ವಪಾಶಯುಕ್ತದಕ್ಷಿಣಪಾಣಿದ್ವಯನಕುಲಾಂಕುಶಯುಕ್ತವಾಮಪಾಣೀ’ (ಪ್ರವಚನಸಾರೋದ್ಧಾರ, ಉದ್ದೃತಿ, ಬಿ.ಸಿ.ಭಟ್ಟಾಚಾರ್ಯ, ಜೈನ ಐಕನೋಗ್ರಫಿ ಪು.೭೨)

ದಿಗಂಬರಪಂಥದಲ್ಲಿ ಅವನು ದಂಡ, ಶೂಲ, ಸ್ವಸ್ತಿಕ ಮತ್ತು ಧ್ವಜಗಳನ್ನು ಧರಿಸಿರುವ, ಕುಟಿಲಾನನನಾದ (=ವಕ್ರತುಂಡ =ಆನೆ) ಕೃಷ್ಣವರ್ಣದ ಚತುರ್ಭುಜಮೂರ್ತಿ :

            ಸಿಂಹಾಧಿರೋಹಸ್ಯ ಸದಂಡಶೂಲಸವ್ಯಾನ್ಯಪಾಣೇಃ ಕುಟಿಲಾನನಸ್ಯ |
ಕೃಷ್ಣತ್ವಿಷಃ ಸ್ವಸ್ತಿಕಕೇತುಭಕ್ತೇರ್ಮಾತಂಗಸ್ಯ ಕರೋಮಿ ಪೂಜಾಮ್ ||
(ಪ್ರತಿಷ್ಠಾಸಾರೋದ್ಧಾರ, ಉದ್ದೃತಿ, ಅದೇ ಗ್ರಂಥ, ಅದೇ ಸ್ಥಾನ)

ಅವನು ವಕ್ರತುಂಡ (=ಕುಟಿಲಾನನ)ನೆಂದೂ, ಕೃಷ್ಣವರ್ಣನೆಂದೂ ದಿಗಂಬರ ಪಂಥದ ಇನ್ನೂ ಒಂದು ಆಕರವು ಸ್ಥಿರಪಡಿಸುತ್ತದೆ. ಆದರೆ ಅವನು ಇಲ್ಲಿ ದಿಭುಜಮಾತ್ರ:

            ಸುಪಾರ್ಶ್ವದೇವನಾಥಸ್ಯ ಯಕ್ಷೋ ಮಾತಂಗಸಂಜ್ಞಕಃ |
ದ್ವಿಭುಜೋ ವಕ್ರತುಂಡೋsಸೌ ಕೃಷ್ಣವರ್ಣಃ ಪ್ರಕೀರ್ತಿತಃ ||
(ಪ್ರತಿಷ್ಠಾಸಾರಸಂಗ್ರಹ, ಉದ್ದೃತಿ, ಅದೇ ಗ್ರಂಥ, ಅದೇ ಸ್ಥಾನ)

ಇಪ್ಪತ್ತನಾಲ್ಕನೆಯ ತೀರ್ಥಂಕರನ ಯಕ್ಷನಿಗೂ ಮಾತಂಗನೆಂದೇ ಹೆಸರಿರುವುದು ಒಂದು ಕಾಕತಾಳೀಯ. ಶ್ವೇತಾಂಬರ-ದಿಗಂಬರ ಪಂಥಗಳೆರಡರಲ್ಲಿಯೂ ಅವನು ಕಪ್ಪುಬಣ್ಣದವನು, ದ್ವಿಭುಜ, ಗಜವಾಹನ; ಶ್ವೇತಾಂಬರ ಪಂಥದಂತೆ ಅವನು ಮುಂಗುಸಿ ಮತ್ತು ಬೀಜಪೂರ (ಮಾತುಲುಂಗ? ದಾಳಿಂಬೆ?)ಗಳನ್ನೂ ದಿಗಂಬರ ಪಂಥದಂತೆ ವರದಮುದ್ರೆ, ಮಾತುಲುಂಗ ಫಲಗಳನ್ನೂ ಧರಿಸಿದ್ದಾನೆ:

            ತತ್ತೀರ್ಥಜನ್ಮಾ ಮಾತಂಗೋ ಯಕ್ಷಃ ಕರಿರಥೋsಸಿತಃ |
ಬೀಜಪೂರಂ ಭುಜೇ ವಾಮೇ ದಕ್ಷಿಣೇ ನಕುಲಂ ದಧತ್ ||
(ಹೇಮಚಂದ್ರ, ಮಹಾವೀರಚರಿತಂ, ಪರ್ವ ೧೦, ಉದ್ದೃತಿ, ಅದೇ ಗ್ರಂಥ, ಪು.೮೪)

            ಮಹಾವೀರಸ್ಯ ಮಾತಂಗೋ ಗಜಾರೂಢೋsಸಿತೋ ಭವೇತ್ |
ದಕ್ಷಿಣೇ ನಕುಲಂ ಹಸ್ತೇ ವಾಮೇ ದಕ್ಷಿಣೇ ನಕುಲಂ ದಧತ್ ||
(ಬರೋಡ ಜ್ಙಾನಮಂದಿರದ ಹಸ್ತಪ್ರತಿ ಸಂಖ್ಯೆ ೧೩೫೧, ಉದ್ದೃತಿ, ಅದೇ ಗ್ರಂಥ, ಅದೇ ಸ್ಥಾನ)

            ವರ್ಧಮಾನಜಿನೇಂದ್ರಸ್ಯ ಯಕ್ಷೋ ಮಾತಂಗಸಂಜ್ಞಕಃ… ವರದೋ ಗಜವಾಹನಃ |
ಮಾತುಲಿಂಗಂ ಕರೇ ಧತ್ತೇ ಧರ್ಮಚಕ್ರಂ ಚ ಮಸ್ತಕೇ ||
(ಪ್ರತಿಷ್ಠಾಸಾರಸಂಗ್ರಹ, ಉದ್ದೃತಿ, ಅದೇ ಗ್ರಂಥ, ಅದೇ ಸ್ಥಾನ)

ಮಾತಂಗಯಕ್ಷನ ರೂಪಗಳು ಆಯಾ ತೀರ್ಥಂಕರನ ವಿಗ್ರಹಗಳ ಎಡೆಯಲ್ಲಿ ಸಾಂಪ್ರದಾಯಿಕ ಸ್ಥಾನಗಳಲ್ಲಿ ಮಾತ್ರ ಶಿಲ್ಪಗಳಲ್ಲಿ ಕಂಡುಬರುತ್ತವೆ; ಸ್ವತಂತ್ರವಾದ ವಿಗ್ರಹಗಳು ದೊರೆಯುವುದಿಲ್ಲ.

ಜೈನಮತದಲ್ಲಿ ಹರಿವಂಶವು ಅತ್ಯಂತ ಪ್ರಮುಖವೂ ಪ್ರಾಚೀನವೂ ಆಗಿರುವ ಪುರಾಣ; ಕ್ರಿ.ಶ.೭೮೩ರಲ್ಲಿ (ಎಂದರೆ ಮತಂಗನ ಕಾಲಕ್ಕಿಂತ ಸುಮಾರು ೧೦೦ ವರ್ಷಗಳ ನಂತರ) ಕರ್ನಾಟಕದ (ಇನ್ನೊಂದು) ಭಾಗವಾದ ಪುನ್ನಾಟಕ್ಕೆ ಸೇರಿದ ಜಿನಸೇನನಿಂದ ರಚಿತವಾಯಿತು. ಅದರಲ್ಲಿ ಮತಂಗನೆಂಬ ಮತ್ತು ಮಾತಂಗನೆಂಬ ವಿದ್ಯಾಧರಜಾತಿಯ ಹೆಸರುಗಳು ಕೆಳಕಂಡ ಸಂದರ್ಭಗಳಲ್ಲಿ ಕಂಡುಬರುತ್ತವೆ :

i. ಮತಂಗಜನು ವಸುದೇವ ಮತ್ತು ನೀಲಯಶಾರವರ ಎರಡು ಪುತ್ರರಲ್ಲಿ ಒಬ್ಬ ; ಸಿಂಹನ ಸಹೋದರ, (ಹರಿವಂಶಪುರಾಣ, ೪೮.೫೭,ಪು.೫೭೩)

ii. ಮಾತಂಗವೆಂಬುದು ಒಂದು ವಿದ್ಯಾ (=ಪ್ರಭಾವ)ನಿಕಾಯದ ಅಂಗ, ಅದನ್ನು ಧರಣೇಂದ್ರನ ದ್ವಿತೀಯ ಪತ್ನಿಯಾದ ದಿತಿದೇವಿಯು ನಮಿ ಮತ್ತು ವಿನಮಿಗಳಿಗೆ ಕೊಟ್ಟಳು. ಈ ನಿಕಾಯದಲ್ಲಿ ಮಾತಂಗ, ಪಾಂಡುಕ, ಕಾಲ, ಸ್ವಪಾಕ, ಪರ್ವತ, ವಂಶಾಲಯ, ಪಾಂಶುಮೂಲ ಮತ್ತು ವೃಕ್ಷಮೂಲ ಎಂಬ ಎಂಟು ವಿದ್ಯೆಗಳಿವೆ (ಅದೇ, ೨೨.೫೯, ಪು. ೩೨೩)

iii. ಮಾತಂಗನೆಂಬುವನು ಮೇಲೆ ಹೇಳಿದ ನಮಿಯ ಹತ್ತು ಪುತ್ರರಲ್ಲಿ ಒಬ್ಬ (ಅದೇ, ೨೨.೧೦೭, ೧೦೮, ಪು.೩೨೬)

iv. ಮಾತಂಗ ಎಂಬುದು ವಿದ್ಯಾಧರರಲ್ಲಿ ಒಂದು ಜಾತಿ. ಅವರು ನೀಲಮೇಘ ಸಮೂಹದಂತೆ ಶ್ಯಾಮವರ್ಣದವರು, ನೀಲವಸ್ತ್ರಗಳನ್ನೂ, ನೀಲಿಯ ಮಾಲೆಗಳನ್ನೂ ಧರಿಸಿದವರು, (ಮಾತಂಗಪುರದಲ್ಲಿ?) ಮಾತಂಗವೆಂಬ ಸ್ತಂಭದ ಬಳಿ ಇರುತ್ತಾರೆ.

v. ಮಾತಂಗಪುರ : ವಿದ್ಯಾಧರರು ೧೧೦ ನಗರಗಳಲ್ಲಿ ವಾಸಿಸುತ್ತಾರೆ. ಇವುಗಳ ಪೈಕಿ ಜಂಬೂದ್ವೀಪದ ವಿಜಯಾರ್ಧಪರ್ವತದ ಉತ್ತರ ಶ್ರೇಣಿಯಲ್ಲಿ ಅರವತ್ತು ನಗರಗಳೂ ದಕ್ಷಿಣಶ್ರೇಣಿಯಲ್ಲಿ ಐವತ್ತೂ ಇರುತ್ತವೆ. ಮಾತಂಗಪುರವು ದಕ್ಷಿಣಶ್ರೇಣಿಯಲ್ಲಿರುವ ವಿದ್ಯಾಧರನಗರ. ಈ ಎಲ್ಲ ನಗರಗಳಲ್ಲಿಯೂ ಅನೇಕ ಸ್ತಂಭಗಳನ್ನು ನೆಡಲಾಗಿದೆ. ಇವುಗಳ ಮೇಲೆ ಆಯಾ ವಿದ್ಯಾಧರ ನಿಕಾಯದ ಹೆಸರನ್ನೂ ವೃಷಭದೇವ, ಧರಣೇಂದ್ರ ಮತ್ತು ಅವನ ಪತ್ನಿಯರಾದ ದಿತಿ, ಅದಿತಿಯರ ಪ್ರತಿಮೆಗಳನ್ನೂ ಕೆತ್ತಿರುತ್ತದೆ.

ಜೈನಪುರಾಣಗಳಲ್ಲಿ ಮತ್ತು ಮಂತ್ರಶಾಸ್ತ್ರದಲ್ಲಿ ಮಾತಂಗಿಯನ್ನು ಒಂದು ವಿದ್ಯೆಯನ್ನಾಗಿ ವ್ಯವಹರಿಸಿದೆ. ವಿದ್ಯೆಗೆ ಪ್ರಭಾವವೆಂದೂ ಹೆಸರು; ಅಇಮಾನುಷವಾದ ಯಕ್ಷಿಣಿಯಂತಹ ಸಿದ್ದಿಗೆ ಇಲ್ಲಿ ವಿದ್ಯೆಯೆಂದು ಹೆಸರು. ಹೀಗೆ ಚಾವುಂಡರಾಯನು ತನ್ನ ಚಾವುಂಡರಾಯಪುರಾಣದ ಶಾಂತಿಪುರಾಣಂ ಭಾಗದಲ್ಲಿ ಅಮಿತತೇಜನು ಗಳಿಸಿದ ೪೯ ವಿದ್ಯೆಗಳನ್ನು ಪಟ್ಟಿಮಾಡುತ್ತಾನೆ. ಇವುಗಳಲ್ಲಿ ಮಾತಂಗಿಯು ಇಪ್ಪತ್ತೇಳನೆಯದು (ಪು.೧೮೦):

“ಅಮಿತತೇಜಂ ಮತ್ತೊಂದು ದಿವಸಂ ಪ್ರಜ್ಞಪ್ತಿ ಕಾಮರೂಪಿಣಿ ಅಗ್ನಿಸ್ತಂಭಿನಿ ಉದಕಸ್ತಂಭಿನಿ ವಿಶ್ವಪ್ರವೇಶಿನಿ ಅಪ್ರತಿಘಾತಗಾಮಿನಿ ಉತ್ಪಾಟಿನಿ ವಶೀಕಾರಿಣಿ ಅವೇಶಿನಿ ಪ್ರಸ್ಥಾಪನಿ ಪ್ರಮೋಹಿನಿ ಪ್ರಹರಣಿ ಸಂಕ್ರಮಣಿ ಆವರ್ತಿನಿ ಸಂಗ್ರಹಣಿ ವಿಘಟಿನಿ ಪ್ರವರ್ತಿನಿ ಪ್ರರೋಧಿನಿ ಪ್ರಹಾಪಣಿ ಪ್ರಭಾವತಿ ಪ್ರಳಾಪನಿ ನಿಕ್ಷೇಪಣಿ ಶಬರಿ ಚಾಂಡಾಳಿ ಮಾತಂಗಿ ಗೌರಿ ಬಟ್ಟಾಂಗಿ ಮುದ್ಗಿ ಶತಸಂಕುಳಿ ಕುಂಭಾಡಿ ವೀರದಳವೇಗಿ ಮನೋವೇಗಿ ಚಪಳವೇಗಿ ಮಹಾವೇಗಿ ಪರ್ಣಲಘಿ ಲಘುಕರಿ ವೇಗಾವತಿ ಶೀತಾವೇತಾಳಿ ಸರ್ವವಿದ್ಯಾಚ್ಛೇದಿನಿ ಉಷ್ಣವೇತಾಳಿ ಮಹಾಚಾಳಿ ಯುದ್ಧವೀರ್ಯ ಬಂಧಮೋಚಿನಿ ಪ್ರಹರಣಾಪರಣಿ ಭ್ರಾಮರಿ ಆಭೋಗಿಯೆಂಬಿವು ಮೊದಲಾಗೆ ಕುಲವಿದ್ಯೆ ಜಾತಿವಿದ್ಯೆ ಸಾಧಿತವಿದ್ಯೆಗಳೊಳ್ ಸಂಪನ್ನನಾಗಿರ್ದು…”. ಈ ವಿದ್ಯೆಗಳಲ್ಲಿ ಶಬರಿ ಚಾಂಡಾಳಿ ಮಾತಂಗಿ ಎಂಬವುಗಳು ಅವ್ಯವಹಿತ ಸರಣಿಯಲ್ಲಿ ಬಂದಿವೆಯೆಂಬುದನ್ನು ಗಮನಿಸಬಹುದು.

ನನಗೆ ತಿಳಿದಂತೆ ಮತಂಗನೆಂಬ ಹೆಸರಿನ ಪ್ರಸ್ತಾಪವು ಬೌದ್ಧಮತದ ಉಪಾಸನಾಕಾಂಡದಲ್ಲಿ ಕಂಡು ಬರುವುದಿಲ್ಲ. ಆದರೆ ಮಾತಂಗ, ಮಾತಂಗಿ ಎಂಬ ಹೆಸರುಗಳು ಪೂಜ್ಯವಾಗಿ ಕೆಲವು ಸಂದರ್ಭಗಳಲ್ಲಿ ಉಲ್ಲೇಖಗೊಂಡಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಸಂಕ್ಷೇಪವಾಗಿ ಸೂಚಿಸಬಹುದು.

ಬೌದ್ಧಧರ್ಮದಲ್ಲಿ ಲಲಿತವಿಸ್ತರವು ಪ್ರಾಚೀನವೂ ಮುಖ್ಯವೂ ಆಗಿರುವ ಗ್ರಂಥ. ಅದರ ಮೂರನೆಯ ಅಧ್ಯಾಯದಲ್ಲಿ ಗೌತಮಬುದ್ಧನ ಜನ್ಮಸಂದರ್ಭವನ್ನು ವಿವರಿಸುತ್ತ ಮಾತಂಗನನ್ನೂ ಮಾತಂಗರನ್ನೂ ಕುರಿತ ಒಂದು ಉಪಾಖ್ಯಾನವನ್ನು ಹೇಳುತ್ತದೆ : ಗೌತಮನ ಶಾಕ್ಯರಾಜನಾದ ಶುದ್ಧೋದನ ಮತ್ತು ಮಾಯಾದೇವಿಯರ ಮಗನಾಗಿ ಹುಟ್ಟುವುದಕ್ಕೆ ಹನ್ನೆರಡು ವರ್ಷ ಮುಂಚೆಯೇ ಶ್ವೇತುಕೇತು (ಬರ್ಮೀಯ ಲಲಿತವಿಸ್ತರದ ಆವೃತ್ತಿಯಲ್ಲಿ ಇವನ ಹೆಸರು ಸತ್ಯಕೇತುವೆಂದಿದೆ ; ಚೀಣೀಯ ಲಲಿತವಿಸ್ತರದ ಆವೃತ್ತಿಯಲ್ಲಿ ಹೌ ಮಿಂಗ್-ಎಂದರೆ ಪ್ರಭಾಪಾಲ ಎಂದಿದೆ) ಎಂಬ ಬೋಧಿಸತ್ತ್ವನು (ಎಂದರೆ ಮುಂದೆ ಬುದ್ಧನಾಗಲು, ಎಂದರೆ ಬೋಧಿಯನ್ನು ಪಡೆಯಲು ಬೇಕಾದ ಸತ್ತ್ವವನ್ನು ಹೊಂದಿರುವವನು) ತನ್ನ ತುಷಿತವೆಂಬ ಸ್ವರ್ಗದಲ್ಲಿ (ಚೀಣೀ ಆವೃತ್ತಿಯಂತೆ ೪೦೦೦ ವರ್ಷಗಳ ಕಾಲ) ಆಳ್ವಿಕೆಯನ್ನು ನಡೆಸಿದ ಮೇಲೆ, ತನ್ನ ತಲೆಯಲ್ಲಿ ಧರಿಸಿದ ದಂಡೆಯಲ್ಲಿ ಹೂಗಳು ಬಾಡುವುದು, ಕಂಕುಳಲ್ಲಿ ಬೆವರೂರುವುದು, ಉಡುಪುಗಳು ಮಾಸುವುದು, ಮೈ ಮ್ಲಾನವಾಗುವುದು, ಸಿಂಹಾಸನವು ಅಸ್ಥಿರವಾಗುವುದು ಎಂಬ ಪಂಚಸೂಚನೆಗಳು ತಲೆದೋರಲಾಗಿ ತಾನು ಮಾನುಷೀಬುದ್ಧನಾಗಿ ಅವತರಿಸುವ ಕಾಲವು ಸನ್ನಿಹಿತವಾಯಿತೆಂದು ತಿಳಿದ ತುಷಿತದ ಪವಿತ್ರವಾದ ದೇವಸ್ಥಾನವಾದ ಧರ್ಮೋಚ್ಚಯಕ್ಕೆ ತೆರಳಿ ಸುಧರ್ಮವೆಂಬ ಸಿಂಹಾಸನವನ್ನೇರುತ್ತಾನೆ. ಆಗ ಅವನದೇ ಯಾನಕ್ಕೆ ಸೇರಿದ ದೇವಪುತ್ರರೂ ಇತರ ಬೋಧಿಸತ್ತ್ವರೂ ಹಸದಾಗಿ ಸೃಷ್ಟರಾದ ದೇವಪುತ್ರರೂ ಸೇರಿ ೬೮ ಸಹಸ್ರಕೋಟಿ ಸಂಖ್ಯೆಯಲ್ಲಿ ಅಲ್ಲಿ ನೆರೆಯುತ್ತಾರೆ. ಆಗ ಮಾನುಷೀಬುದ್ಧನ ಅವತಾರದ ಸುದ್ದಿಯು ತಿಳಿಯುತ್ತದೆ. ಆಗ ಅನೇಕ ದೇವಪುತ್ರರು ಜಂಬೂದ್ವೀಪದಲ್ಲಿ ಬ್ರಾಹ್ಮಣರಾಗಿಯೂ ಹುಟ್ಟಿ ಪ್ರತ್ಯೇಕಬುದ್ಧರನ್ನು ಆರಾಧಿಸುತ್ತಾರೆ. (ಗೌತಮಬುದ್ಧನು ಅವಲೋಕಿತೇಶ್ವರನೆಂಬ ಧ್ಯಾನಿಬುದ್ಧನ ಮಾನುಷೀ ಅವತಾರ; ಅರ್ಹಂತರು ಎಂಬ ಹಂತಗಳಿರುತ್ತವೆ. ಪ್ರತ್ಯೇಕಬುದ್ಧನೆಂದರೆ ವೈಯಕ್ತಿಕವಾಗಿ ಸ್ವಪ್ರಯತ್ನದಿಂದ ಬೋಧಿಯನ್ನು ಸಂಪಾದಿಸಿ, ನಿರ್ವಾಣವನ್ನು ಪಡೆಯುವುದಕ್ಕಾಗಿ ಪ್ರಯತ್ನದ ಫಲಗಳನ್ನು ಸ್ವೀಕರಿಸುವ ಬುದ್ಧನು. ಇತರ ಬೋಧಿಸತ್ತ್ವರು ಮಾನವಕಲ್ಯಾಣಕ್ಕಾಗಿ ಅನುಕಂಪದಿಂದ ಇದನ್ನೂ ತ್ಯಾಗಮಾಡುತ್ತಾರೆ)

ಈ ಸಮಯದಲ್ಲಿ (ಮಗಧದ ರಾಜಧಾನಿ) ರಾಜಗೃಹದ ಬಳಿಯ ಗಿಲಗುಲ ಪರ್ವತದಲ್ಲಿ ಮಾತಂಗನೆಂಬ ಪ್ರತ್ಯೇಕ ಬುದ್ಧನಿದ್ದನು. ಹನ್ನೆರಡು ವರ್ಷಗಳ ನಂತರ ಬುದ್ಧನು ಅವತರಿಸುವನೆಂದು ತಿಳಿದಾಗ ಬಂಡೆಯೊಂದರ ಮೇಲೆ ಬಿದ್ದು, ಏಳು ತಾಳೆಮರಗಳಷ್ಟು ಎತ್ತರಕ್ಕೆ ನೆಗೆದನು. ಆಗ ಅವನ ಅಂಗಗಳೆಲ್ಲವೂ ಉಲ್ಕೆಗಳಂತೆ ಉರಿದು ಮಾಯವಾದವು; ಈ ಉರಿಯಲ್ಲಿ ಅವನ ಮಾಂಸ, ರಕ್ತ, ಮೂಳೆ ಮತ್ತು ಪಿತ್ತಾದಿ ರಸಗಳು ಸುಟ್ಟುಹೋಗಿ ಅವುಗಳ ಅವಶೇಷಗಳು ಭೂಮಿಯ ಮೇಲೆ ಬಿದ್ದವು. ಇವುಗಳಿಗೆ ಋಷಿಪದಾನಿ ಎಂಬ ಹೆಸರು ಇಂದಿಗೂ ಉಳಿದುಬಂದಿದೆ. ಇದೇ ಕಾಲದಲ್ಲಿ ೫೦೦ ಪ್ರತ್ಯೇಕಬುದ್ಧರು ವಾರಾಣಸಿಯ ಸಮೀಪದ ಋಷಿಪಟ್ಟಣದಲ್ಲಿ ಮೃಗದಾವವೆಂಬ ವನದಲ್ಲಿದ್ದರು. ಅವರೂ ಈ ಸುದ್ದಿಯನ್ನು ಕೇಳಿ ಏಳು ತಾಳೆ ಮರಗಳಷ್ಟು ಎತ್ತರಕ್ಕೆ ಹಾರಿದಾಗ ಅವರ ಅಂಗಗಳೂ ಉಲ್ಕೆಗಳಂತೆ ಉರಿದುಹೋಗಿ ಮಾಯವಾದವು. ಅವರ ಮೂಳೆ, ಮಾಂಸ, ರಸಗಳೂ ಇದರಲ್ಲಿ ಸುಟ್ಟುಹೋಗಿ ಅವಶೇಷಗಳಾಗಿ ಭೂಮಿಯಲ್ಲಿ ಬಿದ್ದವು. ಆದುದರಿಂದ ಮೃಗದಾವಕ್ಕೆ ಋಷಿಪತ್ತನ(=ಇಸಿಪತ್ತನ) ಎಂದು ಹೆಸರಾಯಿತು.

ಮೇಲೆ ಹೇಳಿದ ಪರಿಷತ್ತಿನಲ್ಲಿ ದೇವಪುತ್ರರು ಬೋಧಿಸತ್ತ್ವನು ಜನಿಸಲು ತಕ್ಕುದಾದ ಸ್ಥಳವೂ ಗರ್ಭವೂ ಎಲ್ಲಿದೆಯೆಂದು ಚರ್ಚಿಸಿದರು. ಕೋಸಲರಾಜವಂಶವನ್ನು (ಶಾಕ್ಯರಾಜರು ಇವರುಗಳಿಗೆ ಅಧೀನರಾಗಿದ್ದರೆಂಬುದನ್ನು ಸ್ಮರಿಸಬೇಕು) ಈ ದೃಷ್ಟಿಯಿಂದ ಚರ್ಚಿಸಿದಾಗ ಮಾತಂಗರ ಅವನತಿಯಿಂದ ಅದು ಉದಯವಾಯಿತೆಂದೂ ತಂದೆತಾಯಿಯರಿಬ್ಬರ ಕಡೆಯೂ ವಂಶಶುದ್ಧಿಯಿರಲಿಲ್ಲವಾಗಿ ಮೋಕ್ಷಾಧಿಕಾರವನ್ನು ಕಳೆದುಕೊಂಡಿರುವುದರಿಂದ ಅದು ತಕ್ಕುದಲ್ಲವೆಂದು ನಿರ್ಣಯಿಸಿದರು. ಆ ಕಾಲದಲ್ಲಿ ದೊರೆಯಾಗಿದ್ದ ಬ್ರಹ್ಮದತ್ತನು ಮಾತಂಗರ ಎಂದರ ಚಂಡಾಲರ ವಂಶದಲ್ಲಿ ಹುಟ್ಟಿದ್ದರಿಂದ ಅವನು ತ್ಯಾಜ್ಯನೆಂಬುದು ಈ ನಿರ್ಣಯದ ತಾತ್ಪರ್ಯ. ಮಾತಂಗರು ಮಾತಂಗನ ವಂಶಜರೆಂದು ಇಟ್ಟುಕೊಂಡರೆ ಮಾತಂಗನು ಜನ್ಮತಃ(?) ಚಂಡಾಲನೆಂದೂ ಅವನು ಸತ್ಕರ್ಮದಿಂದ ಪ್ರತ್ಯೇಕಬುದ್ಧನಾದನೆಂದೂ ಅನುಮಾನಿಸಬಹುದು. ಇದರ ನಂತರದಲ್ಲಿ ಎಂದರೆ ಗೌತಮಬುದ್ಧನ ಕಾಲದಲ್ಲಿ ಪಸೇನದಿ (=ಪ್ರಸೇನಜಿತ್) ಎಂಬ ಮಾತಂಗ ರಾಜನು ಕೋಸಲವನ್ನಾಳುತ್ತಿದ್ದು ಅವನಿಗೆ ಗೌತಮನ ಸೋದರ ಸಂಬಂಧಿ ಮಹಾನಾಮನೆಂಬ ರಾಜನ ಮಗಳೊಡನೆ ಮದುವೆಯಾಗಿತ್ತು. ಮಾತಂಗ ಪಸೇನದಿಯೂ ಅವನ ಮಗನಾದ ಜೇತಕುಮಾರನೂ ಬುದ್ಧನ ಉಪಾಸಕರಾಗಿದ್ದರು. ಮಗಧ ದೇಶದ ರಾಜನಾಗಿದ್ದ ಬಿಂಬಸಾರನು ಬುದ್ಧನ ಸಮಕಾಲೀನನಾಗಿದ್ದ, ಬಲಿಷ್ಠ ಪ್ರಭುವಾಗಿದ್ದನು; ಮಾತಂಗ ಪ್ರಸೇನದಿಯ ಮಗಳನ್ನೂ, ಲಿಚ್ಛವಿ, ಮಾದ್ರ ಮುಂತಾದ ದೇಶಗಳ ರಾಜಕನ್ಯೆಯರನ್ನೂ ವಿವಾಹವಾಗಿದ್ದನು. ಅವನೂ ಅವನ ರಾಣಿಯರೂ ಬುದ್ಧನ ಉಪಾಸಕರಾಗಿದ್ದರು. ಹೀಗೆ ಮಾತಂಗರಿಗೂ ಬುದ್ಧನ ಶಿಷ್ಯಕೋಟಿಯಲ್ಲಿ ಎಡೆಯಿತ್ತು.

ಬೋಧಿಸತ್ತ್ವನ ಜಾತಕ ಕಥೆಗಳಲ್ಲಿ ಮಾತಂಗ ಜಾತಕವೆಂಬುದೊಂದು ಕಥೆಯಿದೆ. ಇದನ್ನು ಖುದ್ಧಕನಿಕಾಯದ ವಸಲಸುತ್ತದಲ್ಲಿ ಗಾಥೆಗಳಿಂದ ಹೀಗೆ ಹೇಳಿದೆ :

            ಸೋ ಯಶಂ ಪರಮಃ ಪತ್ತೋ ಮಾತಂಗೋ ಯಂ ಸುದಲ್ಲಭಂ
ಆಗಚ್ಚು ತಸ್ಸುಪಠ್ಯಾನಂ ಖತ್ತಿಯಾಬ್ರಾಹ್ಮಣೌ ಬಹು
ದೇವಯಾನಂ ಅಭಿರುಯ್ಸ್ಹ ವಿರಜಂ ಮಹಾಪಥಂ
ಕಾಮರಾಗಂ ವಿರಾಜೇತ್ವಾ ಬ್ರಹ್ಮಲೋಕೋಪ ಗೋ ಅಹು
ನ ನಂಜಾತಿ ನಿವಾರೇಸಿ ಬ್ರಹ್ಮಲೋಕೋಪಪತ್ತಿಯಾ

ಇಲ್ಲಿ ಮಾತಂಗನೆಂಬುವನು (ಜನ್ಮತಃ ಚಂಡಾಲನಾಗಿದ್ದರೂ) ತುಂಬಾ ಶ್ರೇಷ್ಠತಪಸ್ವಿಯೆಂಬ ಯಶಸ್ಸನ್ನು ಗಳಿಸಿದ್ದುದರಿಂದ ಅನೇಕ ಕ್ಷತ್ರಿಯರೂ ಬ್ರಾಹ್ಮಣರೂ ಅವನನ್ನು ಸೇವಿಸುತ್ತಿದ್ದರು. ಅವನು ಕಾಮ, ರಾಗ, ದ್ವೇಷಾದಿಗಳನ್ನು ಗೆದ್ದು ದೇವಯಾನದ ಮಹಾಪಥದಲ್ಲಿ ಬ್ರಹ್ಮಲೋಕವನ್ನು ಸೇರಿದನು. ಇದಕ್ಕೆ ಅವನ (ಚಂಡಾಲ) ಜನ್ಮವು ಅಡಚಣೆಯಾಗಲಿಲ್ಲ. ಹೀಗ ಬೌದ್ಧಸಮಾಜದಲ್ಲಿ ಆಗ ನಡೆಯುತ್ತಿದ್ದ ಒಂದು ಸಾಂಸ್ಕೃತಿಕ ಕ್ರಾಂತಿಯನ್ನೂ ಇದು ಸೂಚಿಸುತ್ತದೆ.

ಬುದ್ಧನ ಪ್ರಮುಖ ಶಿಷ್ಯನಾದ ಆನಂದನು ಪ್ರಕೃತಿಯೆಂಬ ಮತಂಗಸ್ತ್ರೀಯಿಂದ ನೀರನ್ನು ಬೇಡಿ ಪಡೆದು, ಕುಡಿದನೆಂದೂ ಅವಳು ಬುದ್ಧನನ್ನು ಅರಸಿಕೊಂಡು ಹೋದಾಗ ಬುದ್ಧನು ಮಾತಂಗಜಾತಿಯವರ ಗುಣಗಾನಮಾಡಿದನೆಂದೂ ಉಲ್ಲೇಖವು ಬುದ್ಧನ ಜೀವನ ಚರಿತ್ರೆಯಲ್ಲಿ ಬರುತ್ತದೆ.

 

* ವಿಮರ್ಶಾತ್ಮಕ ಪೀಠಿಕೆಯಲ್ಲಿ ಕಂಸಗಳಲ್ಲಿರುವ ಈ ಅಂಕಿಗಳು ಪ್ರಕೃತಸಂಸ್ಕರಣದ ಗ್ರಂಥಭಾಗ ಸಂಖ್ಯೆಗಳನ್ನು ಸೂಚಿಸುತ್ತದೆ.