(ಊ) ಬೌದ್ಧ ಮಾತಂಗಿ

ನನಗೆ ತಿಳಿದಂತೆ ಬೌದ್ಧರಲ್ಲಿ ಮತಂಗನೆಂಬ ಹೆಸರಿನ ಪ್ರಸ್ತಾಪವು ಉಪಾಸನಾಕಾಂಡದಲ್ಲಿ ಕಂಡು ಬರುವುದಿಲ್ಲ. ಆದರೆ ಮಾತಂಗಿಯ ಉಪಾಸನೆಯು ವಜ್ರಯಾನದ ಪರ್ಣಶಬರೀ ತಾರಾಧಾರಿಣೀ ದೇವತೆಯ ಹೆಸರಿನಲ್ಲಿ ದೊರಯುತ್ತದೆ. ಇದು ಶ್ರೀವಿದ್ಯೆಯ ಪ್ರಭಾವದಿಂದ ಪ್ರಾದುರ್ಭಾವಗೊಂಡಿರಬಹುದೆಂದು ಕಾಣುತ್ತದೆ. ಶ್ರೀವಿದ್ಯೆಯಲ್ಲಿ ದೊರೆಯುವ ಪರ್ಯಾಯನಾಮ ಅಥವಾ ಸಮಾನನಾಮಗಳನ್ನುಳ್ಳ ಪರಿವಾರದೇವತೆಗಳನ್ನು ಕೆಳಗೆ ಉದ್ಧರಿಸಿರುವ ಸಾಧನಾಮಂತ್ರದಲ್ಲಿ ಕಂಸಗಳಲ್ಲಿ ತೋರಿಸಿದೆ.

ನಮೋ ರತ್ನತ್ರಯಾಯ, ನಮೋ sಮಿತಾಭಾಯ, ತಥಾಗತಾರ್ಹತೇ ಸಮ್ಯಕಾಂ ಬುದ್ಧಾಯ, ನಮ ಆರ್ಯಾವಲೋಕಿತೇಶ್ವರಾಯ ಬೋಧಿಸತ್ತ್ವಾಯ ಮಹಾಸತ್ತ್ವಾಯ ಮಹಾಕಾರುಣಿಕಾಯ, ನಮೋ ಮಹಾಸ್ಥಾಮಪ್ರಾಪ್ತಾಯ ಬೋಧಿಸತ್ತ್ವಾಯ ಮಹಾಸತ್ತ್ವಾಯ ಮಹಾಕಾರುಣಿಕಾಯ |

            ವಾಮನೇ (ಕುಬ್ಜಿಕಾ) ತ್ವಾಂ ನಮಸ್ಯಾಮಿ ವಾಮನೇ ತ್ವಾಂ ಭಗವತಿ |
ಪಿಶಾಚಿ(ಮಹಾಪಿಶಾಚಿನಿ) ಪರ್ಣಶಬರಿ (ಶಬರಿದುರ್ಗಾ) ಪಾಶಪರಶುಧಾರಿಣಿ ||

ಯಾನಿಕಾನಿಚಿತ್ ಭಯಾನ್ಯುತ್ಪದ್ಯಂತೇ ಯಾಃ ಕಾಶ್ಚಿತ್ ಮಾರ್ಯೇ (ಮಾರೀ) ಯಾಃ ಕಾಶ್ಚಿತ್ ಮಹಾಮಾರ್ಯೋ ಯಾಃ ಕಾಶ್ಚಿದೀಚಯೋ ಕೇಚಿದುಪದ್ರವಾ ಯೇ ಕೇಚಿದಪಾಯಾ ಯೇ ಕೇಚಿದಧ್ಯಾತ್ಮಿಕಾಭಯಾ ಯೇ ಕೇಚಿದುಪಸರ್ಗಾ ಉಪಸರ್ಗಸಂಬದ್ಧಾ ವಾ ಉತ್ಪದ್ಯಂತೇ ಸರ್ವಾಣಿ ತಾನಿ ಸರ್ವಾಸ್ತಾಃ ಸರ್ವೇ ತೇ ಬಾಲತ ಏವೋತ್ಪದ್ಯಂತೇ ನ ಪಂಡಿತತಃ | ತದನೇನ ಸತ್ಯೇನ ಸತ್ಯವಚನೇನ ಸತ್ಯವಾಕ್ಯೇನ ಜ್ಜಃ ಜ್ಜಃ ಜ್ಜಃ ಜ್ಜಃ ಏಭೀಃ ಪಂಡಿತಾಧಿಷ್ಠಿತೈರ್ಮಂತ್ರ ಪದೈರ್ಮಮ ಸರ್ವಸತ್ತ್ವಾನಾಂ ಚ ರಕ್ಷಾಂ ಕುರು, ಪರಿತ್ರಾಣಂ ಕುರು, ಪರಿಗ್ರಹಂ ಕುರು, ಪರಿಪಾಲನಂ ಕುರು, ಶಾಂತಿಂ ಕುರು, ಸ್ವಸ್ತ್ಯಯನಂ ಕುರು, ದಂಡಪರಿಹಾರಂ ಕುರು, ಶಸ್ತ್ರಪರಿಹಾರಂ ಕುರು, ಯಾವದ್ ವಿಷದೂಷಣಂ ಕುರು ಅಗ್ನಿಪರಿಹಾರಂ ಕುರು, ಉದಕಪರಿಹಾರಂ ಕುರು, ಕಾಖೊರ್ದ್ದಚ್ಛೇದನಂ ಕುರು ಸೀಮಾಬಂಧಂ ಕುರು, ಧರಣೀ ಬಂಧಂ ಕುರು, ತದ್ಯಥಾ, ಅಮೃತೇ ಅಮೃತೋದ್ಭವೇ ಅಮೃತಸಂಭವೇ (ಅಮೃತೇಶ್ವರೀಕಾಮದುಘಾ), ಆಶ್ವಸ್ತಾಂಗೇ (ಅಶ್ವಾರೂಢಾ) ಮಾ ಮರ ಮಾ ಮರ ಮಾ ಮರ ಮಾ ಮರ ಶಮ ಪ್ರಶಮ ಉಪಶಮ ಸರ್ವವ್ಯಾಧೀನುಪಶಮ ಸರ್ವಕಾಲಮೃತ್ಯೂನುಪಶಮ ಸರ್ವನಕ್ಷತ್ರಗ್ರಹದೋಷಾನುಪಶಮ ಸರ್ವದಂಷ್ಟ್ರಿನಾಂ ಚೋಪಶಮ ಭಗವತಿ ಪರ್ಣಶಬರಿ (ಶಬರಿದುರ್ಗಾ) ತುನ್ನ ತುನ್ನ ವಿತುನ್ನ ವಿತುನ್ನ ತುಣ ತುಣ ತುಮುಲೇ ಸ್ವಾಹಾ | ಓಂ ಗೌರಿ (ಗೌರಿ) ಗಾಂಧಾರಿ ಚಂಡಾಲಿನಿ (ಲವಣದುರ್ಗಾಚಾಂಡಾಲಿ) ಮಾತಂಗಿ(ಮಾತಂಗಿ) ಪೂಕ್ವಸಿ ಸ್ವಾಹಾ | ಓಂ ಅಂಕುರೇ ಮಂಕುರೇ ಕುರು ಕುರೇ ಪರ್ಣಶಬರಿ ಸ್ವಾಹಾ | ಓಂ ನಮಃ ಸರ್ವಶಬರಾಣಾಂ ಮಹಾಶಬರಾಣಾಂ ಭಗವತಿ ಪಿಶಾಚಿ ಪರ್ಣಶಬರಿ ಪಿಶಾಚಿ ಪರ್ಣಶಬರಿ ಪಿಶಾಚಿ (ಉಚ್ಛಿಷ್ಟ ಚಾಂಡಾಲಿ) ಪಾಶಪರಶುಧಾರಿಣಿ ಯಾನಿಕಾನಿಚಿದ್ಭಯಾನಿ(ಭಯೌ) ಸ್ವಾಹಾ | ಓಂ ಪಿಶಾಚಿ ಪರ್ಣಶಬರಿ ಹ್ರೀಂ ಹಃ ಹುಂ ಫಟ್ ಪಿಶಾಚಿ ಸ್ವಾಹಾ |

ಹೀಗೆ ವಜ್ರಯಾನದ ಮಾತಂಗಿಯು ಶ್ರೀವಿದ್ಯೆಯ ಮಾತಂಗಿಗೆ ಸಮೀಪವರ್ತಿಯೇ ಆಗಿದ್ದಾಳೆ.

(ಋ) ಜಾನಪದಮಾತಂಗೀ

ಇನ್ನು, ಜಾನಪದತಂತ್ರದಲ್ಲಿ ಮಾತಂಗಿಯ ಪಾತ್ರವನ್ನು ಕುರಿತು ಸಂಕ್ಷೇಪವಾಗಿ ವಿವೇಚಿಸಬಹುದು. ಶಿಷ್ಟತಂತ್ರಶಾಸ್ತ್ರದಲ್ಲಿ ಮಾತಂಗಿಯು ಲಲಿತಾಪರಮೇಶ್ವರಿಯ(=ಶ್ರೀವಿದ್ಯೆಯ) ಮಂತ್ರಿಣಿ ಲಘುಶ್ಯಾಮಲೆಯ ಅವತಾರ, ಶ್ರೀವಿದ್ಯಾ ಉಪಾಸನೆಗೆ ಸೋಪಾನರೂಪದ ಬಾಲಾ ಎಂಬ ದೇವತೆ, ಲಲಿತೆಯ ಬಾಲ್ಯವಸ್ಥೆಯ ಆವಿರ್ಭಾವ, ತನ್ನದೇ ಮೂರು ಬೀಜಗಳ ಅಥವಾ ಆರು ಬೀಜಗಳ ಮಂತ್ರ, ಧ್ಯೇಯರೂಪ, ಯಂತ್ರ, ಆವರಣ ಮುಂತಾದವುಗಳಿಂದ ಉಪಾಸ್ಯಳಾದರೂ ಶ್ರೀವಿದ್ಯೆಯಲ್ಲಿ ಅಂತರ್ಭಾವ ಮತ್ತು ಅಭೇದಗಳಿರುವ ದೇವತೆ. ಜಾನಪದ ಶಕ್ತಿಪೂಜೆಯಲ್ಲಿ, ಮಾತಂಗಿಯು ಮಾದಿಗರ ಹೆಣ್ಣು, (ಚಂಡಾಲಕನ್ಯೆ), ಸುರಾಪಾನಮತ್ತೆ, ರೇಣುಕೆಯ ಅಥವಾ ಎಲ್ಲಮ್ಮನ ಸೇವಕಿ, ಒಮ್ಮೊಮ್ಮೆ ತಂಗಿ, ತನ್ನದೇ ಆದ ಮಹಿಮೆಯನ್ನೂ ಪ್ರಭಾವವನ್ನೂ ಮರೆಯುತ್ತಾಳೆ. ಆದರೆ ಅವು ಎಲ್ಲಮ್ಮನ ಮಹಿಮೆಗಳಿಗೆ ಅಂಟಿಕೊಂಡೇ ಇರುತ್ತವೆ. ಲಲಿತಾಪರಮೇಶ್ವರಿಯು ಚಂಡಿಯಾಗಿ ಅಥವಾ ಕಾಲಿಯಾಗಿ ಮಹಿಷಾಸುರನನ್ನು ಕೊಲ್ಲುತ್ತಾಳೆ; ಇದರ ಅಂಗವಾಗಿ ರಕ್ತಬೀಜಾಸುರನನ್ನು ಸಂಹರಿಸುತ್ತಾಳೆ. ಎಲ್ಲಮ್ಮನೂ ಕೋಣಾಸುರಮರ್ಧಿನಿಯೇ, ರಕ್ತಬೀಜಾಸುರನನ್ನು ಇದಕ್ಕೆ ಸಂಬಂಧಿಸಿದಂತೆ ಕೊಲ್ಲುತ್ತಾಳೆ. ಲಲಿತೆಯು ಆದಿಶಕ್ತಿ ಅಯೋನಿಜೆ; ಚಿದಗ್ನಿಕುಂಡಸಂಭೂತೆ; ರೇಣುಕೆಯು ಪುರಾಣಗಳಲ್ಲಿ ಆದಿಶಕ್ತಿಯಲ್ಲ. ಆದರೆ ಅಯೋನಿಜೆ; ಜಾನಪದದಲ್ಲಿಯೂ ಅವಳು ಅಯೋನಿಜೆ, ಆದಿಶಕ್ತಿ, ಪುರಾಣಗಳಲ್ಲಿ ಅವಳು ಜಮದಗ್ನಿಯ ಹೆಂಡತಿ; ಪತಿವ್ರತೆ, ಪರಶುರಾಮಾದಿಗಳ ತಾಯಿ. ಜಮದಗ್ನಿಯು ಅವಳ ಶೀಲವನ್ನು ಶಂಕಿಸಿ ಮಗನಿಂದ ಶಿರಚ್ಛೇದನ ಮಾಡಿಸುತ್ತಾನೆ. ಮಗನ ಪ್ರಾರ್ಥನೆಯನ್ನು ಮನ್ನಿಸಿ ಪುನಃ ಪ್ರಾಣದಾನ ಮಾಡುತ್ತಾನೆ. ಕಾರ್ತವೀರ್ಯಾರ್ಜುನನು ಜಮದಗ್ನಿಯಲ್ಲಿದ್ದ ಕಾಮಧೇನುವಿಗೆ ಆಸೆಪಟ್ಟು ಜಮದಗ್ನಿಯನ್ನು ಕೊಂದು ಅವನ ಆಶ್ರಮವನ್ನು ಧ್ವಂಸಮಾಡಿ ಆ ಕಪಿಲೆಯನ್ನು ಕೊಂಡೊಯ್ಯುತ್ತಾನೆ. ಇದರ ಸೇಡಿನಲ್ಲಿ ಪರಶುರಾಮನು ಭೂಲೋಕದಲ್ಲಿ ಕ್ಷತ್ರಿಯಕುಲವನ್ನು ೨೧ ಸಲ ನಿರ್ನಾಮ ಮಾಡಲು ಶಪಥಗೈಯುತ್ತಾನೆ. ಈ ಕಥೆಯು ಅಲ್ಪಸ್ವಲ್ಪ ವ್ಯತ್ಯಾಸಗಳೊಡನೆ ರಾಮಾಯಣದ ಬಾಲಾಕಾಂಡ, ಮಹಾಭಾರತದ ಆದಿ, ಸಭಾ, ವನ ಮತ್ತು ಅನುಶಾಸನ ಪರ್ವಗಳು, ಮತ್ಸ್ಯ, ವಾಯು, ಮಾರ್ಕಂಡೇಯ, ಸ್ಕಾಂದ ಮತ್ತು ಬ್ರಹ್ಮಾಂಡಪುರಾಣಗಳು-ಇವುಗಳಲ್ಲಿ ಬಂದಿದೆ.

ರೇಣುಕೆಯು ಏಕವೀರಾ ಎಂಬ ದೇವತೆ; ಮಹಾರಾಷ್ಟ್ರದ ತುಳಜಾಪುರದ ಅಧಿದೇವತೆ. ಮಹಾರಾಷ್ಟ್ರ ಮಾಹುರ್, ಕರ್ನಾಟಕದ ಸೌದತ್ತಿ, ಉಚ್ಚಂಗಿ, ಚಂದ್ರಗುಪ್ತಿ, ಕೊಕಟನೂರು, ನಾಗಾಲಿ, ಚಿಂಚನಸೂರು, ಬಗದೂರು, ಬೂದ್ಯಾಳಗಣಿ ಕಲಮಾಲಿ, ನೀರಮಾನ್ವಿ, ಮುಂತಾದೆಡೆಗಳಲ್ಲಿ ಅವಳು ಸುಪ್ರಸಿದ್ಧ ಜಾನಪದ ದೇವತೆ. ಇಲ್ಲೆಲ್ಲ ಅವಳ ತಲೆಗೆ ಮಾತ್ರ ಪೂಜೆ; ಪ್ರಪಂಚಸಾರಸಂಗ್ರಹ ತಂತ್ರದ ೩೨ನೆಯ ಪಟಲದಲ್ಲಿ ರೇಣುಕಾಕಲ್ಪವನ್ನು ಉದ್ಧರಿಸಿಕೊಂಡು ರಕ್ತಪಂಚಮೀ ಎಂಬ ನಾಮಾಂತರವಿರುವ ರೇಣುಕೆಯನ್ನು ತ್ರಿಣೇತ್ರೆ. ಶೂಲ, ಖಡ್ಗ, ಡಿಂಡಿಮ, ನರಕಪಾಲಗಳನ್ನು ಹಿಡಿದ ಚತುರ್ಭುಜೆ, ಅಯುತಸೂರ್ಯಪ್ರಕಾಶೆ, ಅಷ್ಟಸರ್ಪಭೂಷಿತೆ, ಲೀಲಾಸನಮಂಡಿತೆ ಎಂದು ವರ್ಣಿಸಿದೆ.

ಜಾನಪದದಲ್ಲಿ ರೇಣುಕೆಯೇ ಎಲ್ಲಮ್ಮ ಎಂಬ ದೃಢಸಮೀಕರಣವು ಎಲ್ಲ ಮೂಲಗಳಲ್ಲಿಯೂ ದೊರೆಯುವುದಿಲ್ಲ. ಅವಳು ಅಯೋನಿಜೆ; ರೇಣುಕರಾಜನ ಸಾಕುಮಗಳು. ತನಗಿಂತ ‘ಉತ್ತಮಜಾತಿಯ’ ಜಮದಗ್ನಿಯಿಂದ ಆಕರ್ಷಿತಳಾಗಿ, ಅವನನ್ನು ಮದುವೆಯಾಗಿ ಪತಿವ್ರತೆಯಾಗಿರುತ್ತಾಳೆ. ಇದರ ಬಲದಿಂದ ಹಾವಿನ ಸಿಂಬಿಯ ಮೇಲೆ ಮರಳ ಗಡಿಗೆಯಲ್ಲಿ ಜಮದಗ್ನಿಗೆ ನಿತ್ಯಾಹ್ನಿಕಕ್ಕೆ ಗಂಗೆಯಿಂದ ನಿತ್ಯ ನೀರು ತರುತ್ತಿರುತ್ತಾಳೆ. ಒಮ್ಮೆ ಗಂಗೆಯಲ್ಲಿ ಚಿತ್ರರಥ ಗಂಧರ್ವನು ತನ್ನ ಮಡದಿಯರೊಡನೆ ಜಲಕ್ರೀಡಾಮಗ್ನವಾಗಿರುವಾಗ ಅವನಿಂದ ವಿಚಲಿತಳಾಗಿ ನೀರು ತರುವುದು ತಡವಾಗಲು ಜಮದಗ್ನಿಯು ಅವಳಿಗೆ ತೊನ್ನು, ಕುಷ್ಟ ಬರಲೆಂದು ಶಪಿಸುತ್ತಾನೆ. ಅವಳು ದುಃಖದಿಂದ ಕಾಡುಮೇಡುಗಳಲ್ಲಿ ಅಲೆಯುತ್ತಿರುವಾಗ ಮಾದಿಗರ ಹೆಣ್ಣು ಮಾತಂಗಿ ಅವಳಿಗೆ ಆಶ್ರಯಕೊಟ್ಟು ಸಾಂತ್ವನ ನೀಡುತ್ತಾಳೆ. ನಂತರ ಜೋಗಯ್ಯ, ಎಕ್ಕಯ್ಯ ಎಂಬ ಸಿದ್ಧರು ಅವಳಿಗೆ ಜೋಗುಳಭಾವಿಯ(=ಮಾತಂಗಿಕಟ್ಟೆ) ಸ್ನಾನ ಮಾಡಿಸಿ ಅರಿಸಿನ ಹಚ್ಚಿಸಿ ಗುಣಪಡಿಸುತ್ತಾರೆ.ಇನ್ನೊಮ್ಮೆ ಅವಳು ಕಾರ್ತವೀರ್ಯನು ಜಲಕ್ರೀಡೆಯಲ್ಲಿದ್ದುದನ್ನು ಕಂಡು ವಿಚಲಿತಳಾಗಿ ಜಮದಗ್ನಿಯಿಂದ ಶಪ್ತಳಾಗಿ ಪರಶುರಾಮನಿಂದ ತಲೆಕೆಡಿಸಿಕೊಳ್ಳುತ್ತಾಳೆ. ಈ ಸಂದರ್ಭದಲ್ಲಿ ಮಾತಂಗಿ ಮತ್ತು ಸತ್ಯಕ್ಕರು ಎಲ್ಲಮ್ಮನು (=ರೇಣುಕೆಯು) ಶುದ್ಧಶೀಲೆಯೆಂದು ಪರಶುರಾಮನಿಗೆ ಸಾಕ್ಷಿನುಡಿಯುತ್ತಾರೆ. ಕಾರ್ತವೀರ್ಯನು ಕಪಿಲೆಯ ಆಸೆಯಿಂದ ಜಮದಗ್ನಿಯನ್ನು ಹುಣ್ಣಿಮೆಯಂದು ಕೊಂದಾಗ ಎಲ್ಲಮ್ಮನು ರಂಡೆಯಾಗಿ ಅದು ರಂಡೆ ಹುಣ್ಣಿಮೆಯಾಯಿತು. ಪರಶುರಾಮನು ಸ್ವರ್ಗದಿಂದ ಅಮೃತವನ್ನು ತಂದು ಜಮದಗ್ನಿಯನ್ನು ಬದುಕಿಸಿದ್ದೂ ಮುಂದಿನ ಹುಣ್ಣಿಮೆಯಂದೇ. ಅದು ಮುತ್ತೈದೆ ಹುಣ್ಣಿಮೆ. ರೇಣುಕೆಯ ಜನ್ಮವೃತ್ತಾಂತ, ಪರಶುರಾಮನಿಗೂ, ಕಾರ್ತವೀರ್ಯನಿಗೂ ರೇಣುಕೆಗೂ ಸಂಬಂಧ ಮುಂತಾದ ವಿಷಯಗಳಲ್ಲಿ ಹಲವು ಭಿನ್ನ ಅಖ್ಯಾನಗಳು ದೊರೆಯುತ್ತವೆ. ಅವುಗಳ ಪ್ರಸಕ್ತಿಯು ಪ್ರಕೃತ ಅಭ್ಯಾಸದ ವ್ಯಾಪ್ತಿಯನ್ನು ಮೀರಿದೆ. (ವಿವರಗಳಿಗೆ ನೋಡಿ : ಜೀ.ಶಂ.ಪರಮಶಿವಯ್ಯ, ದಕ್ಷಿಣಕರ್ನಾಟಕದ ಕಾವ್ಯಪ್ರಕಾರಗಳು, ಪು. ೧೭೫-೧೯೭). ಪರಶುರಾಮನು ತಾಯಿಯ ತಲೆಕಡಿದಾಗ ಅವಳ ಪಾತಿವ್ರತ್ಯದ ಮಹಿಮೆಯಿಂದ ತಲೆಯು ಚಿಗುರುತ್ತಲೇ ಹೋಯಿತೆಂಬ, ಒಂದು ತಲೆಯು ಮಾದಿಗನ ಮನೆಯಲ್ಲಿ ಬಿದ್ದು ಮಾತಂಗಿಯಾಯಿತೆಂಬ, ಎರಡು ಕಥೆಗಳನ್ನು ಇಲ್ಲಿ ಉಲ್ಲೇಖಿಸಿದರೆ ಸಾಕು. ಇನ್ನೊಂದು ಕಥೆಯಲ್ಲಿ ಎಲ್ಲಮ್ಮನಿಗೆ ಸತ್ಯಕ್ಕ, ಮಾತಂಗಿಯರೂ ಸೇರಿದಂತೆ ಆರು ತಂಗಿಯರು (ಇದು ಸಪ್ತಮಾತೃಕೆಯರನ್ನು ನೆನಪಿಸುತ್ತದೆ; ಕನ್ನಡ ಜಾನಪದ ವಿಶ್ವಕೋಶ, ಪು. ೧೮೭೧-೧೮೭೩).

ಮತ್ತೊಂದು ಕಥೆಯಂತೆ ಮಾತಂಗಿಯೆಂಬ ಹರಿಜನ ಹೆಂಗಸು ಎಲ್ಲಮ್ಮನ ಸೇವಕಿ. ಎಲ್ಲಮ್ಮ(=ರೇಣುಕೆ)ನು ತನ್ನ ಪಾತಿವ್ರತ್ಯದ ಮಹಿಮೆಯಿಂದ ಮಳಲಿನ ಕೊಡದಲ್ಲಿ ನೀರು ತುಂಬಿ ಹಾವಿನ ಸಿಂಬಿಯ ಮೇಲಿಟ್ಟು ಪತಿ ಜಮದಗ್ನಿಯ ಪೂಜೆಗೆ ನದಿಯಿಂದ ನಿತ್ಯ ನೀರು ತರುತ್ತಿದ್ದಳು. ಒಂದು ದಿನ ಕಾರ್ತವೀರ್ಯಾರ್ಜುನನೆಂಬ ರಾಜನು ತನ್ನ ಮಡದಿಯರೊಡನೆ ಜಲಕ್ರೀಡೆಯಲ್ಲಿ ತೊಡಗಿದ್ದಾಗ ಅದನ್ನು ಕಂಡು ಎಲ್ಲಮ್ಮನ ಮನಸ್ಸು ವಿಕಾರವಾಯಿತು. ಹೀಗೆ ಪಾತಿವ್ರತ್ಯ ಭಂಗವಾಯಿತು. ಆದುದರಿಂದ ಮಳಲಿನ ಕೊಡ ಒಡೆದು ಹಾವು ಹರಿದುಹೋಯಿತು; ಆದರೂ ಮಾತಂಗಿಯ ನಿಷ್ಠೆಯು ತಪ್ಪದೆ ಎಲ್ಲಮ್ಮನ ಸೇವಕಿಯಾಗಿಯೇ ಉಳಿದಿದ್ದಳು. ಜಮದಗ್ನಿಗೆ ಎಲ್ಲಮ್ಮನ ಚಿತ್ರವಿಕಾರವಾದುದು ತಿಳಿಯಿತು. ಕೋಪಬಂದು ಅವಳ ತಲೆ ಕಡಿಯುವಂತೆ ಪರಶುರಾಮನಿಗೆ ಆಜ್ಞೆಮಾಡಿದನು. ಪರಶುರಾಮನ ಒಂದೇ ಏಟಿಗೆ ಅವಳ ತಲೆ ಕಡಿದಾಗ ಜೊತೆಗೆ ಮಾತಂಗಿಯ ತಲೆಯೂ ಹಾರಿಹೋಯಿತು. ವಿಧೇಯನಾದ ಪರಶುರಾಮನನ್ನು ಕಂಡು ಜಮದಗ್ನಿ ಸಂತೋಷಪಟ್ಟು ವರಕೇಳಿಕೋ ಎನ್ನುತ್ತಾನೆ. ಪರಶುರಾಮನು ಎಲ್ಲಮ್ಮ ಮಾತಂಗಿಯರಿಬ್ಬರೂ ಮರಳಿ ಬದುಕಿಕೊಳ್ಳಲಿ ಎಂದು ಕೇಳಿಕೊಳ್ಳುತ್ತಾನೆ. ಜಮದಗ್ನಿ ಅವರವರ ತಲೆಗಳನ್ನು ಅವರವರ ದೇಹಗಳ ಮೇಲಿಡು, ಜೀವ ಬರುತ್ತದೆ ಎನ್ನುತ್ತಾನೆ. ಪರಶುರಾಮನು ಅತಿಶಯವಾದ ಸಂತೋಷದಿಂದ ತಬ್ಬಿಬ್ಬಾಗಿ ಎಲ್ಲಮ್ಮನ ದೇಹಕ್ಕೆ ಮಾತಂಗಿಯ ತಲೆಯನ್ನೂ ಮಾತಂಗಿಯ ದೇಹಕ್ಕೆ ಎಲ್ಲಮ್ಮನ ತಲೆಯನ್ನೂ ಜೋಡಿಸುತ್ತಾನೆ. ಇಬ್ಬರಿಗೂ ಜೀವ ಬಂತು. ಈ ಬದಲಾವಣೆಯಿಂದಾಗಿ ಎಲ್ಲಮ್ಮನ ದೇಹದ ಮೇಲಿದ್ದ ಮಾತಂಗಿಯ ತಲೆಯು ಮಾಂಸಾಹಾರವನ್ನೂ (ರಕ್ತವನ್ನೂ?) ಮಾತಂಗಿಯ ದೇಹದ ಮೇಲಿದ್ದ ಎಲ್ಲಮ್ಮನ ತಲೆಯು ಶಾಕಾಹಾರವನ್ನೂ ಬಯಸಿದವು. (ಕನ್ನಡ ಜಾನಪದ ವಿಶ್ವಕೋಶ, ಪು. ೧೮೭೩) ಸಾಂಸ್ಕೃತಿಕ ಮಾನವಶಾಸ್ತ್ರದಲ್ಲಿ (ಕಲ್ಚರಲ್ ಆಂಥ್ರೋಪಾಲಜಿ) ಕೀಳು-ಮೇಲುಗಳನ್ನು ಸಮಾನೀಕರಿಸುವ ಯತ್ನದ ಮಹತ್ವಪೂರ್ಣ ಸಂಕೇತವಿದು. ಅದರ ಇತರ ನಿದರ್ಶನಗಳು ಬೃಹದ್ದೇಶಿಯಲ್ಲಿ ದೊರೆಯುತ್ತವೆ. ಮತಂಗ – ಮಾತಂಗ – ಮಾತಂಗೀ ಎಂಬ ಹೆಸರುಗಳ ಆಯಾಮಗಳನ್ನು ಇಲ್ಲಿ ನೋಡಲೆಳಸುವ ಪ್ರಯತ್ನದ ಉದ್ದೇಶವು ಇದೇ ಆಗಿದೆ.

ಓರುಗಲ್ಲು ರಾಜನ ಕಥೆಯಲ್ಲಿ ಎಲ್ಲಮ್ಮನಿಗೂ ಮಾತಂಗಿಗೂ ಇರುವ ಸಂಬಂಧದ ಕೆಲವು ವಿವರಗಳು ದೊರೆಯುತ್ತವೆ: ನೆಲದುರ್ಗದ ಶಿವಶರಣೆ ಮಲ್ಲಾಜಮ್ಮನಿಗೆ ಜಂಗಮ ರೂಪದ ಶಿವ ಬೂದುಗುಂಬಳದ ಮೂರು ಬೀಜಗಳನ್ನು ಅನುಗ್ರಹಿಸಿದಾಗ ಅವಳು ಅದನ್ನು ಅರಣ್ಯದಲ್ಲಿ ನೆಡುತ್ತಾಳೆ. ಅವುಗಳಲ್ಲಿ ಒಂದು ಮೊಳೆತು ದೊಡ್ಡದಾಗಿ ಬೆಳೆದು ಒಂದೇ ಕಾಯಿ ಆಗಿ ಅದು ಪರ್ವತದಷ್ಟು ದೊಡದಾಗುತ್ತದೆ. ಅದನ್ನು ಒಡೆದಾಗ ಲಿಂಗಮಯನಾದ ಶಿವ ಹುಟ್ಟಿ ಅವನನ್ನು ಎಲ್ಲಮ್ಮನ ಮಠಕ್ಕೆ ಬಿಡುತ್ತಾರೆ. ಅವನೇ ಓರುಗಲ್ಲು ರಾಜ. ಅವನು ಸಕಲ ವಿದ್ಯಾಪ್ರವೀಣನಾಗಿ, ವೇದಪಾರಂಗತನಾಗಿ ತ್ರಿಮೂರ್ತಿಗಳಿಂದ ಸೇವೆಮಾಡಿಸಿಕೊಂಡು ಎಲ್ಲ ದೇವತೆಗಳನ್ನು ಸೇವಕರನ್ನಾಗಿ ಮಾಡಿಕೊಳ್ಳುತ್ತಾನೆ. ಇದನ್ನು ತಪ್ಪಿಸಲು ನಾರಾಯಣನು ಓರುಗಲ್ಲು ರಾಜನ ಅರಮನೆಯಿಂದ ತಪ್ಪಿಸಿಕೊಂಡು ಹೋಗಿ ರಾಜನ ಆರೋಗಣೆಯ ನೇಮಕ್ಕೆ ಭಂಗ ತರುತ್ತಾನೆ; ನಂತರ ಕಾಣಿಸಿಕೊಂಡು ರಾಜನಿಗೆ ಅನುರೂಪಳಾದ ಹೆಣ್ಣನ್ನು ‘ಉತ್ತರದೇಶದಲ್ಲಿ ಸಪ್ತೇಳು ಸಮುದ್ರ, ಕೀಳುಸಮುದ್ರ, ಜಪದಪುರಿ ಗಡ್ಡೆ, ಅದರಾಚೆ ಒಳಗೆ ಮಾವಿನಪುರ, ಅದರಾಚೆ ಸಪ್ತೇಳು ಸಮುದ್ರ. ಅದರ ನಟ್ಟನಡುವೆ ಓರ್ವಳು ಸ್ತ್ರೀಯಳು ತನಗೆ ತಕ್ಕ ವರ ಸಿಕ್ಕುವವರೆಗೆ ತಪಸ್ಸು ಮಾಡುತ್ತಿದ್ದಾಳೆ; ಅವಳೇ ರೇಣುಕೆ ಎಂದು ಹುಡುಕಿಕೊಂಡು ಬಂದೆನೆಂದು’ ಹೇಳುತ್ತಾಳೆ. ರಾಜನು ಏಳೇಳು ದಳಪತಿಗಳನ್ನು ಕರೆಸಿ ಅವರಿಗೆ ಬಂಗಾರದಲ್ಲಿ ರಾಯಸವನ್ನು ಬರೆಸಿ, ಆ ‘ಮಾಯೆ, ಶಕ್ತಿ, ಮಾತಾಯಿ’ ರೇಣುಕೆಯನ್ನು ಕರೆತರಲೆಂದು ಕಳುಹಿಸುತ್ತಾನೆ. ಬೇವಿನ ಮರದ ಮಧ್ಯದ ಒಂದು ಹುತ್ತದಲ್ಲಿ ಹಾವಿನ ಹಾಸಿಗೆ, ಚೇಳಿನ ದಿಂಬು ಮಾಡಿಕೊಂಡಿದ್ದ ರೇಣುಕೆ ರಾಯಸವನ್ನು ಓದಿಕೊಮಡು ದುಷ್ಟಶಿಕ್ಷಣ, ಶಿಷ್ಟರಕ್ಷಣಕ್ಕೆಂದು ‘ಮಹಾಕೀಕಾರಣ್ಯ’ ಭೂಲೋಕಕ್ಕೆ ಬರುತ್ತಾಳೆ. ಅಲ್ಲಿ ಜಂಬೂದ್ವೀಪದಲ್ಲಿ ಜಾಂಬವಋಷಿ ತಪೋಬಲದಿಂದ ಮಾತಂಗಿ ಎಂಬ ಸುಂದರ ಕನ್ಯೆಯನ್ನು ಮಗಳಾಗಿ ಪಡೆದಿದ್ದಾನೆ. (ಹೋಲಿಸಿ : ಮಾತಂಗ ಮುನಿಯ ತಪಸ್ಸಿನಿಂದ ಲಘುಶ್ಯಾಮಲೆಯು ಮಾತಂಗಿಯಾಗಿ ಹುಟ್ಟಿದಳು). ಮಾತಂಗಿಯು ರೇಣುಕೆಯ ಒಡನೆ ಹೋಗಲು ಕೋರುತ್ತಾಳೆ. ‘ಸುರಿ'(=ಸುರೆ) ಕುಡಿಯುವ ಅವಳನ್ನು (ಮಾತಂಗಿಯು ಸುರಾಮತ್ತಪಾನಳೆಂದು ಶಿಷ್ಟತಂತ್ರದಲ್ಲಿ ಹೇಳಿದೆ.) ಕರದುಕೊಂಡು ಹೋಗಲು ದೇವಿಯು ಹಿಂಜರಿಯುತ್ತಾಳೆ; ಆದರೆ ಭಕ್ತರು ಕೊಟ್ಟಾಗ ಮಾತ್ರ ಅದನ್ನು ಸೇವಿಸುವುದಾಗಿ ಮಾತು ಕೊಟ್ಟು ದೇವಿಯನ್ನು ಒಪ್ಪಿಸಿ ಜೊತೆಗೆ ಹೋಗುತ್ತಾಳೆ. ಬೇಸಿಗೆಯ ಪಯಣದಲ್ಲಿ ಮಾತಂಗಿ ಹೆಜ್ಜೆಯಲ್ಲಿ ಹೊಪ್ಪಳೆಯಾಗಿ ದೇವಿಯು ಬೇವಿನ ಮರದ ತೋಪಿನಲ್ಲಿ ತಂಗಿರುವಂತೆಯೂ, ತಾನು ವನದಲ್ಲಿ ಸುರೆಕುಡಿದು ಬರಲು ಅನುಮತಿಸಬೇಕೆಂದೂ ಒಪ್ಪಿಸುತ್ತಾಳೆ. ಹೀಗೆ ಅವಳು ಚಂದ್ರಗುತ್ತಿ ವನವನ್ನು ಹೊಕ್ಕಾಗ ಈಡಿಗರ ಪ್ರಭು ಮಾರ್ತಾಂಡಗೌಡನೂ ಅವನ ಪತ್ನಿಯರೂ ಮಾತಂಗಿಯ ಮಹಿಮೆ ತಿಳಿಯದೆ ಸುರೆಕೊಡದೆ ಓಡಿಸುತ್ತಾರೆ. ಆದರೆ ಅವನ ತಮ್ಮ ಬಡವ ಎಲ್ಲಯ್ಯನೂ ಅವನ ಹೆಂಡತಿಯೂ ಅವಳನ್ನು ಆದರಿಸಿ ತಮಗೆ ಇಲ್ಲದಿದ್ದರೂ ಮಾತಂಗಿಗೆ ತೃಪ್ತಿಯಾಗುವಷ್ಟು ಸುರೆ ಕುಡಿಸುತ್ತಾರೆ. ಅವಳು ಅವರಿಗೆ ಸಕಲೈಶ್ವರ್ಯ ವೈಭೋಗಗಳನ್ನೂ ಅನುಗ್ರಹಿಸುತ್ತಾಳೆ; ಅಹಂಕಾರ ಮದದಿಂದ ಕೊಬ್ಬಿ ಕೆಟ್ಟ ಮಾತಾಂಡ ಗೌಡನೊಡನೆ ತನ್ನ ಐಶ್ವರ್ಯವನ್ನು ಹಂಚಿಕೊಳ್ಳಬೇಕೆಂದು ದಯೆಯಿಂದ ಆಣತಿಯಿಟ್ಟು ದೇವಿಯನ್ನು ಕೂಡಿಕೊಳ್ಳು‌ತ್ತಾಳೆ.

ಓರುಗಲ್ಲಿಗೆ ಬಂದಾಗ ಕೋಟೆಯ ಮೇಲಿದ್ದ ಕೋಣಾಸುರ (ಹೋಲಿಸಿ: ಶಿಷ್ಟತಂತ್ರದ ಮಹಿಷಾಸುರ) ನನ್ನು ಕೊಲ್ಲಲೆಳಸಿ ಬೇರೆ ಬೇರೆ ದೇವತೆಗಳ ನೆರವನ್ನು ಪಡೆದು ವಜ್ರಾಯುಧದಿಂದ ಹೊಡೆದರೂ ಪ್ರಯೋಜನವಾಗುವುದಿಲ್ಲ. ಏಕೆಂದರೆ ಕೋಣಾಸುರನ ರಕ್ತಬಿದ್ದೆಡೆಯಲ್ಲೆಲ್ಲ ‘ದಾಕೋಟಿ ದಾಲಕ್ಷ’ ರಾಕ್ಷಸರು ಹುಟ್ಟುತ್ತಾರೆ (ಹೋಲಿಸಿ: ಶಿಷ್ಟತಂತ್ರದಲ್ಲಿ ಭಂಡಾಸುರನ ಮೇಲಿನ ಕೋಪಾಗ್ನಿಯನ್ನು ಬ್ರಹ್ಮಾದಿದೇವತೆಗಳು ರಾಶಿಮಾಡಿ ಚಿದಗ್ನಿಕುಂಡದಲ್ಲಿ ಕೇಂದ್ರೀಕರಿಸಿದಾಗ ಶ್ರೀಮಾತೆಯಾದ ಲಲಿತಾಪರಮೇಶ್ವರಿಯು ಭಂಡಾಸುರ ವಧೆಗಾಗಿ ಆವಿರ್ಭವಿಸಿದಳು.) ಅವನು ಕೋಣಾಸುರನನ್ನು ಅಗಿದು ಉಗಿದಾಗ ಆ ಎಂಜಲು ರಸದಲ್ಲೇ ರಾಕ್ಷಸರು ಉದ್ಭವವಾದರು. ಆಗ ಮಾಯಾವಿಯಾದ ಮಾತಂಗಿ ಸೂರ್ಯಮಂಡಲ ಚಂದ್ರಮಂಡಲ ಹಳದಿಮಂಡಲ (ಹೋಲಿಸಿ : ಶಿಷ್ಟ ತಂತ್ರದಲ್ಲಿ ಅಗ್ನಿಮಂಡಲ; ಸೋಮಸೂರ್ಯಾದಿ ಮಂಡಲಗಳು)ದಷ್ಟು ಬೆಳೆದು ಉಡುವಾಗಿ ನಿಂತು ಮಡಿಲಿನಲ್ಲಿ ಆತುಕೊಂಡಳು; ಕೋಣಾಸುರರ ದಂಡೆಲ್ಲಾ ಮಡಿದು ಹೋಯಿತು (ಹೋಲಿಸಿ : ಶಿಷ್ಟತಂತ್ರದಲ್ಲಿ ಉದಾ. ದುರ್ಗಾಸಪ್ತಶತಿಯಲ್ಲಿ ಚಾಮುಂಡಾ : ೮.೫೩-೬೨; ಮೈಸೂರು ಚಾಮುಂಡಿ ಬೆಟ್ಟದ ಚಾಮುಂಡಾ ದೇವಸ್ಥಾನಕ್ಕೆ ಅನತಿದೂರದಲ್ಲಿರುವ ಉತ್ತರಹಳ್ಳಿ ‘ಅಮ್ಮ’ನ ಗುಡಿ). ನಂತರ ದೇವಿಯು ಮಾತಂಗಿಯೊಡನೆ ಓರುಗಲ್ಲು ರಾಜನ ಉದ್ಯಾನವನದಲ್ಲಿ ಕಾಣಿಸಿಕೊಂಡಳು. ಅವರನ್ನು ಎಳೆತರಲು ರಾಜನು ಅಪ್ಪಣೆ ನೀಡಲು ಮಾತಂಗಿಯನ್ನು ಹೊನ್ನರಳಿ ಮರದ ಮೇಲೆ ಕುಳ್ಳಿರಿಸಿ ತಾನು ಪಟ್ಟಣವನ್ನು ಹೊಕ್ಕು ಉರಿಭಂಡಾರವನ್ನು ರಾಜನ ಮೇಲೆ ಉರುಬಿದಳು. ಇದರಿಂದಾಗಿ ಅವನಿಗೆ ಮಾಯದ ರೋಗ ಬಂದಿತು. ದೇವಿಯೇ ಕಣಿಯವಳ ರೂಪದಲ್ಲಿ ಬಂದು ಎಲ್ಲಮ್ಮನಿಗೆ ಓಲೆ ಬರೆದುದರ ಫಲವೆಂದು ಇವನಿಗೆ ತಿಳಿಸಿ ಎಲ್ಲಮ್ಮನಿಗೆ ಒಕ್ಕಲಾಗಬೇಕೆಂದು ಸೂಚಿಸಿದಳು. ಆಗ ಅವನ ರೋಗ ಕಳೆದು ಅವಳ ಒಕ್ಕಲಾಗಿ ಶೋಭಿಸಿದನು. ದೇವಿಯ ನಿಜ ರೂಪವನ್ನು ನೋಡಬೇಕೆಂದು ಕೋರಿ ಅದನ್ನು ಕಂಡು ತತ್ತರಿಸಿ ಮೂರ್ಛೆಹೋದನು. (ಹೋಲಿಸಿ : ದುರ್ಗಾ, ಕಾಲೀ). ಅವನಿಗೆ ಜ್ಞಾನಬಂದಾಗ ಏಳು ವರ್ಷದ ಬಾಲೆಯಾಗಿ ದರ್ಶನಕೊಟ್ಟು (ಹೋಲಿಸಿ: ಶಿಷ್ಟತಂತ್ರದಲ್ಲಿ ಲಘುಶ್ಯಾಮಲಾ= ಮಾತಂಗಿ=ಬಾಲಾ) ಪ್ರತಿ ಶುಕ್ರವಾರದಲ್ಲೂ ತನ್ನ ಪೂಜೆ ಮಾಡುವಂತೆ ವಿಧಿಸಿ ಏಳುಕೊಳ್ಳದ (=ಸೌದತ್ತಿಯ)ಲ್ಲಿ ನೆಲೆಸುವುದಾಗಿ ಮಾತುಕೊಟ್ಟು ಮಾಯವಾದಳು. (ಜೀ.ಶಂ.ಪರಮಶಿವಯ್ಯ, ಉಕ್ತಗ್ರಂಥ, ಉಕ್ತಸ್ಥಾನ). ಶುಂಭ-ನಿಶುಂಭರನ್ನು ದೇವಿಯು ವಧಿಸಿದ್ದನ್ನೂ, ರಕ್ತಬೀಜಾಸುರನ ಕಥೆಯನ್ನೂ ಅನೇಕ ತಮಿಳು ಸ್ಥಳಪುರಾಣಗಳೂ (ಉದಾ. ತಿರುವಾಲಂಕಾಡು ಪುರಾಣ) ವರ್ಣಿಸುತ್ತವೆ.

ಜಾನಪದ ಹೆಣ್ಣು ದೇವತೆಗಳ – ವಿಶೇಷವಾಗಿ ಎಲ್ಲಮ್ಮನ -ಗುಡಿಯಿರುವಲ್ಲೆಲ್ಲ ಮುಂದೆ ಮಾತಂಗಿಯದೊಂದು ಚಿಕ್ಕ ಗುಡಿಯು ಇದ್ದೇ ಇರುತ್ತದೆ; ಕೀಳು ಜಾತಿಯ ಮಾತಂಗಿ ಉಚ್ಚವರ್ಗದ ದೇವತೆಯ ಸೇವಕಿಯಾಗಿರುತ್ತಾಳೆ. ಎಲ್ಲಮ್ಮನ ದರ್ಶನಕ್ಕೆ ಬರುವ ಭಕ್ತರು ಹುರುಕು-ಕಜ್ಜಿಗಳು ಗುಣವಾಗಬೇಕೆಂದು, ಅಥವಾ ಗುಣವಾಯಿತೆಂದು ಉಪ್ಪನ್ನು ಅರ್ಪಿಸುವುದು ಎಲ್ಲಮ್ಮನಿಗೆ ಹುರುಕು-ಕಜ್ಜಿ (ಕುಷ್ಟ, ತೊನ್ನು?) ಆಗಿದ್ದಾಗ ಮಾತಂಗಿಯು ಉಪಚರಿಸಿದಳೆಂಬಜಾನಪದ ಐತಿಹ್ಯದ ಕುರುಹಾಗಿರಬಹುದು. ಇನ್ನೊಂದು ಜಾನಪದ ಮೂಲದ ಪ್ರಕಾರ ಪರಶುರಾಮನು ತಾಯಿ ಎಲ್ಲಮ್ಮನ ತಲೆಕಡಿಯಲೆಂದು ಬೆನ್ನಟ್ಟಿದಾಗ ಎಲ್ಲಮ್ಮನು ಮಾತಂಗಿಯ ಆಶ್ರಯ ಬೇಡಿದಳು. (ಇನ್ನೊಂದು ಕಥೆಯಲ್ಲಿ ಎಲ್ಲಮ್ಮನು ಮುದುಕಿಯ ವೇಷಧರಿಸಿ ತೋಟಿಗನ ಆಶ್ರಯ ಕೋರಿದಳು. ಅವನು ಅವಳನ್ನು ಕಳ್ಳಿಯೆಂದು ದೂರಿ ಬೆನ್ನಟ್ಟಿದನು.) ಆಗ ಮಾತಂಗಿಯು ಎಲ್ಲಮ್ಮನಿಗೆ ಚರ್ಮ ಹೊದಿಸಿ ದೋಣಿಯಲ್ಲಿ ಅವಿತಿಟ್ಟಳು. ಈ ನಂಬಿಕೆಯಿಂದಾಗಿ ಈಗಲೂ ಚರ್ಮವು ನೆನೆದಿರುವ ದೋಣಿಯ ನೀರನ್ನು ಎಲ್ಲಮ್ಮನ ತೀರ್ಥವೆಂದು ನಂಬಿ ಹುರುಕು, ಕಜ್ಜಿ, ಕುಷ್ಟ, ತೊನ್ನು ಮೊದಲಾದ ಚರ್ಮರೋಗಗಳು ಬಂದಾಗ ಈ ನೀರನ್ನು ಹಚ್ಚುವ ರೂಢಿಯಿದೆ. ಎಲ್ಲಮ್ಮನಿಗೆ ರಕ್ತ ಬಲಿ ನಿಷಿದ್ಧವೆಂದು ನಂಬಿಕೆಯೇನೋ ಇದೆ. ಆದರೆ ಸಿಡಿದಲೆಯಂತಹ ಹರಕೆಗಳ ಸೇವೆಯೂ ಇದೆ. ಹೀಗೆ ಆಗುವಾಗ ಎಲ್ಲಮ್ಮನಿಗೆ ಹಾಲುಹಣ್ಣುಗಳ ನೈವೇದ್ಯವನ್ನೂ ಮಾತಂಗಿಗೆ ರಕ್ತನೈವೇದ್ಯವನ್ನೂ ನೀಡಲಾಗುವುದೆಂದು ಭಾವಿಸಬಹುದು.

ಚಂದ್ರಗುತ್ತಿಯ ಎಲ್ಲಮ್ಮನಿಗೆ ಬೀರೇದೇವರ ರಕ್ಷಣೆಯಿದೆ. ಬೀರೇದೇವರು (ಕುರುಬರ ದೈವ) ಮಾತಂಗಿಯ ಮಗ, ಮಾತಂಗಿ ಎಲ್ಲಮ್ಮನ ಪರಿವಾರ ದೇವತೆ. ಅವಳು ಪ್ರಾಯಿಕವಾಗಿ ಪಂಚಮರದೈವ (ಶಿಷ್ಟತಂತ್ರದಲ್ಲಿ ಲಲಿತೆಯು ಪಂಚಮೀ, ಪಂಚಭೂತೇಶೀ, ಪಂಚಸಂಖ್ಯೋಪಚಾರಿಣೀ ಆಗಿದ್ದಾಳೆಂಬುದನ್ನು ಸ್ಮರಿಸಬಹುದು: ಲಲಿತಾಸಹಸ್ರನಾಮ, ನಾಮಗಳು ೯೪೮-೯೫೦), ಆದರೆ ಇಲ್ಲಿ ಅರ್ಚಕರು ದೇವಾಂಗದವರು. ರೇಣುಕೆಯು ಚಂದ್ರಗುತ್ತಿಯ ಗುಹೆಯಲ್ಲಿ ತಪಸ್ಸಿಗೆ ಕುಳಿತಾಗ ಪರಶುರಾಮನು ‘ಶೂಲದ’ ಬೀರೇದೇವರನ್ನು ರಕ್ಷಣೆಗಾಗಿ ನಿಲ್ಲಿಸಿದನೆಂದೂ, ಅವಳ ಪರಿಚರ್ಯಕ್ಕೆ ಅವನ ತಾಯಿ ಮಾತಂಗಿ ನಿಂತಳೆಂದೂ ಸ್ಥಳೀಯ ಐತಿಹ್ಯವಿದೆ. ಇಲ್ಲಿ ಹುಟ್ಟುಡುಗೆ (=ಬೆತ್ತಲೆ) ಸೇವೆಯ ಹರಕೆಹೊತ್ತವರು ವರದಾ ನದಿಯಲ್ಲಿ ಮಿಂದು, ಹಣೆಗೆ ಕುಂಕುಮ ಭಂಡಾರವನ್ನು ಬಳಿದುಕೊಂಡು, ಬಾಯಲ್ಲಿ ಬೇವಿನ ಕಡ್ಡಿಯನ್ನು ಸಿಕ್ಕಿಸಿಕೊಂಡು, ನಿಲ್ಲುತ್ತಾರೆ. ಮರಳುಗಂಗೆಗೆ ಕಲಸಕನ್ನಡಿ ಪೂಜೆಯಾಗುತ್ತದೆ. ಜೋಗತಿಯರು ಕೂಡಲೆ ‘ಎಲ್ಲಮ್ಮ ಹೋಗಿಬಾ’ ಎಂದು ಎತ್ತರಿಸಿ ಕೂಗುತ್ತಾರೆ. ಕೂಡಲೆ ಹರಕೆಯವರಿಗೆ ಆವೇಶ ಮೈದುಂಬುತ್ತದೆ. (ಅಥವಾ ತುಂಬುವವರೆಗೆ ವರದಾನದಿಯಲ್ಲೇ ನಿಂತಿರುತ್ತಾರೆ). ಆಗ ತಲೆಯನ್ನು ತೂರಾಡಿಸುತ್ತಾ, ಬಾಹ್ಯಪ್ರಜ್ಞೆಯಿಲ್ಲದೆ ಓಡಿಹೋಗಿ ಮಾತಂಗಿಕಟ್ಟೆಯ ಹತ್ತಿರ ಪರವಶರಾಗುತ್ತಾರೆ. ಎಂದರೆ ಆವೇಶದ ಪರಾಕಾಷ್ಠೆ ಉಂಟಾಗುವುದು ಮಾತಂಗಿಯ ಸಾನ್ನಿಧ್ಯದಲ್ಲಿ. ಎಲ್ಲಮ್ಮನದರಲ್ಲಲ್ಲ.

ಮಾತಂಗಿಯ ಈ ಅಧಿಕರಣವನ್ನು ಇನ್ನೊಂದು ಜಾನಪದ ಆಚರಣೆಯ ಪರಿಶೀಲನೆಯೊಂದಿಗೆ ಮುಗಿಸಬಹುದು. ಇದು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಜನಪದರನ್ನು ಸಂಬಂಧಿಸಿದ್ದು; ಮಾತಂಗಿ ಎಂಬ ಮಾದಿಗ ಸ್ತ್ರೀಯನ್ನು ಕುರಿತದ್ದು. ಮಾತಂಗಿಯು ಮಾದಿಗರ ದೇವತೆ. ಎಲ್ಲಮ್ಮನ ಪರಿವಾರದವಳು. ಕರ್ನೂಲಿನ ಗ್ರಾಮೀಣ ಹಬ್ಬಗಳಲ್ಲಿ ಮಾತಂಗಿಯಾದವಳು ಹಬ್ಬಕ್ಕೆ ನೆರೆದ ಜನರನ್ನು ಅವಾಚ್ಯ ಶಬ್ದಗಳಿಂದ ಬೈದು ಉಗಿಯುತ್ತಾಳೆ. ಅವಳ ಉಗುಳು ಮೈಲಿಗೆಯನ್ನು ನಿವಾರಿಸುತ್ತದೆಂದು ನಂಬುತ್ತಾರೆ; ಏಕೆಂದರೆ ಅವಳು ಮಾತಂಗಿ ದೇವತೆಯ ಅವತಾರವಂತೆ.

ಒಂದು ಹೆಣ್ಣನ್ನು ಮಾತಂಗಿಯಾಗಿ ಆಯ್ಕೆಮಾಡುವ ಕ್ರಮವು ಹೀಗಿದೆ. ಆಯ್ಕೆಯಾಗುವ ಹುಡುಗಿ ಮಾದಿಗರ ಯಾವುದೇ ಹೆಣ್ಣಾಗಬಹುದು; ಮಾತಂಗಿಯಾಗಿದ್ದವರ ವಂಶದಿಂದಲೇ ಬಂದರೆ ಹೆಚ್ಚು ಪ್ರಶಸ್ತ. ಅವಳು ಅವಿವಾಹಿತಳಾಗಿದ್ದರೆ ಸಾಕು, ಕನ್ಯೆಯೇ ಆಗಿರಬೇಕಾಗಿಲ್ಲ. ಮಾತಂಗಿತನದ ‘ದೀಕ್ಷೆ’ ಕೊಡುವ ದಿನದ ಪೌರೋಹಿತ್ಯವು ಒಕ್ಕಲಿಗ ಪೂಜಾರಿಯದು. ಅಂದು ಅವನು ಮನೆಯ ಅಂಗಳದ ಒಂದು ಭಾಗವನ್ನು ಸಗಣಿಯಿಂದ ಸಾರಿಸಿ, ಅದರ ಮೇಲೆ ಕೆಂಪು, ಬಿಳಿ, ಹಳದಿ ಬಣ್ಣದ ರಂಗೋಲೆಯಿಂದ ಒಂದು ಕಮಲವನ್ನು ಬಿಡಿಸಿ, ಅಕ್ಕಿ ಅಥವಾ ರಾಗಿಯಿಂದ ಪರಿಧಿಯನ್ನು ಎಳೆಯುತ್ತಾನೆ. ಮೂಲೆಗೊಂದರಂತೆ ನಾಲ್ಕು ಮಡಕೆಗಳನ್ನೂ ಮಧ್ಯದಲ್ಲಿ ಒಂದು ಮಡಕೆಯನ್ನೂ ಇಟ್ಟು ಅವುಗಳ ಹತ್ತಿರ ವಿಭೂತಿ ಉಂಡೆಗಳು, ಅರಿಸಿನದ ಕೊಂಬು, ಬಾಳೆಹಣ್ಣು, ಕರ್ಪೂರ ಹಾಗೂ ಹೊಸಬಟ್ಟೆ – ಇವುಗಳನ್ನು ಇಡುತ್ತಾನೆ. ಒಂದು ದಾರದಿಂದ ಮೂಲೆಮಡಕೆಗಳನ್ನು ಸುತ್ತುವರೆದು ಅದನ್ನು ಮಧ್ಯದ ಮಡಕೆಗೆ ಕಟ್ಟುತ್ತಾನೆ; ಮಾತಂಗಿಯಾಗುವ ಹೆಂಗಸು ಹಿಂದಿನ ಐದು ದಿನಗಳೂ ಕೇವಲ ಹಾಲು-ಹಣ್ಣುಗಳನ್ನು ಸೇವಿಸುವ ನೇಮದಿಂದಿದ್ದು ಮಧ್ಯದ ಮಡಕೆಯ ಬಳಿ ಕುಳಿತುಕೊಳ್ಳಬೇಕು. ಆಗ ಅವಳ ತಲೆಯ ಮೇಲೆ ಅಡ್ಡಲಿಗೆಯನ್ನು ಇಡುತ್ತಾರೆ. ಇದು ಮಾತಂಗಿಯ ಲಾಂಛನ, ಪವಿತ್ರವಾದುದು; ಅದನ್ನು ಯಾವಾಗಲೂ ನೆಲದ ಮೇಲೆ ಇಡುವಂತಿಲ್ಲ. ಅದು ಇಲ್ಲ, ಅವಳ ತಲೆಯಮೇಲೆ, ಇಲ್ಲ ಮನೆಯಲ್ಲಿ ನೆಲುವಿನ ಮೇಲೆ ಇರಬೇಕು. ಅಡ್ಡಲಿಗೆಯು ಒಂದು ದುಂಡನೆಯ ಬಿದಿರು ಬುಟ್ಟಿ. ಅದರಲ್ಲಿ ಎಲ್ಲಮ್ಮನ ಪಾದಗಳು, ಕಬ್ಬಿಣದ ದೀಪ, ಒಂದು ಬೆತ್ತ, ಬೇವಿನ ಎಲೆಗಳು ಇರುತ್ತವೆ. ಅದನ್ನು ಕೆಂಪು ಅಥವಾ ಕಂದು ಬಟ್ಟೆಯಿಂದ ಸುತ್ತಿರಬೇಕು. ಮಾತಂಗಿಯು ಅಡ್ಡಲಿಗೆಯನ್ನು ಹೊತ್ತಮೇಲೆ ಆಸಾದಿಯು ಎಲ್ಲಮ್ಮನ ಹಾಡುಗಳನ್ನು ಹಾಡುತ್ತಾನೆಸ. ಪೂಜಾರಿ ಅವಳ ಮೇಲೆ ಅಕ್ಕಿ ಚೆಲ್ಲುತ್ತಾನೆ. ಎಲ್ಲಮ್ಮನ ಹಾಗೂ ಪರಶುರಾಮನ ಬೊಟ್ಟುಗಳನ್ನು ಕೊರಳಿಗೆ ಕಟ್ಟುತ್ತಾನೆ. ಹೊಸದಾಗಿ ಮಾತಂಗಿಯಾದವಳೂ ಅಲ್ಲಿ ನೆರೆದ ಇತರ ಮಾತಂಗಿಯರೂ ‘ಎಕ್ಕಲ್ದೆ ಜೋಗವ್ವ’ ಎಂದು ಉದ್ಘೋಷಿಸುತ್ತಾರೆ. ಆವರೂ ಆಸಾದಿಗಳೂ ಹೆಂಡಕುಡಿಯುತ್ತಾರೆ. ಈ ಸುರಾಸಂತರ್ಪಣೆಯೊಂದಿಗೆ ಮಾತಂಗಿಯ ದೀಕ್ಷಾವಿಧಾನವು ಸಂಪನ್ನವಾಗುತ್ತದೆ.

ಮಾತಂಗಿಯ ಆಯ್ಕೆಯು ಕರ್ನೂಲು ಜಿಲ್ಲೆಯಲ್ಲಿಯೇ ಬೇರೆಡೆ (ಕುಂಭಂನಲ್ಲಿ)ಇನ್ನೊಂದು ರೀತಿಯಲ್ಲಿ ನಡೆಯುತ್ತದೆ. ಅಲ್ಲಿ ಮಾತಂಗಿಯದೊಂದು ಗುಡಿ ರೇಣುಕೆಯ, ಸುರಭಿಯ ದೇವಸ್ಥಾನಗಳ ಎದುರಿಗಿದೆ (ಜಮದಗ್ನಿ ಋಷಿಯ ಆಶ್ರಮದಲ್ಲಿದ್ದ ಕಾಮಧೇನು ಪುತ್ರಿಯನ್ನು ನೆನೆಯಬೇಕು). ಹತ್ತಿರದಲ್ಲಿಯೇ ಸಪ್ತಮಾತೃಕೆಯರ ದೇವಾಲಯವೂ ಇದೆ. (ಹೀಗೆ ಇದು ಸಂಪೂರ್ಣವಾಗಿ ಶಕ್ತಿಪೂಜೆಯ ಸ್ಥಾನವೇ). ಮಾತಂಗಿಯ ಪೂಜಾರಿಣಿಗೆ ಮಾತಂಗಿಯೆಂದೇ ಹೆಸರು. ಅವಳೂಅ ಅವಿವಾಹಿತೆಯೇ; ಅವಳು ಸತ್ತಾಗ ಉತ್ತರಾಧಿಕಾರಿ ಮಾತಂಗಿಯನ್ನು ಚಮ್ಮಾರ ಜಾತಿಯ ಮೈನೆರೆಯದ ಬಾಲೆಯರ ಪೈಕಿ ಆಯ್ಕೆ ಮಾಡುತ್ತಾರೆ. ಅಂತಹ ಹುಡುಗಿಯರು ದೇವಸ್ಥಾನದ ಮುಂದೆ ಒಟ್ಟು ಸೇರಿದಾಗ ತಮಟೆ, ನಗಾರಿಗಳ ಬಡಿತದ ಜೊತೆಗೆ ‘ಮಂತ್ರ’ ದ ಉಚ್ಚ ಉಚ್ಚಾರಣೆಯಾಗುತ್ತದೆ. ಆಗ ಆವೇಶವು ಮೈದುಂಬಿದ ಹುಡುಗಿ ಮಾತಂಗಿಯಾಗುತ್ತಾಳೆ. ಅವಳ ಅಡ್ಡಲಿಗೆಯಲ್ಲಿ ಬೇವಿನಸೊಪ್ಪು, ಕವಡೆ, ಸರ, ನಾಗಬೆತ್ತ, ಕುಂಕುಮದ ಭರಣಿ ಮುಂತಾದ ಸೌಮಂಗಲ್ಯದ ಕುರುಹುಗಳಿರುತ್ತವೆ. ಪೂಜೆಯ ದಿನ ಅವಳು ಕುಡಿದು ಕುಣಿಯುತ್ತಾಳೆ. ಅವಳು ತಮ್ಮ ಮೇಲೆ ಉಗುಳಿದರೆ ಬ್ರಾಹ್ಮಣರೂ ಶುಭ, ಮಡಿ ಎಂದು ಭಾವಿಸುತ್ತಾರೆ. ಸೌದತ್ತಿ ಎಲ್ಲಮ್ಮನ ಗುಡಿಯ ಮುಂದಿರುವ ಮಾತಂಗಿ ಹರಕೆ ಹೊತ್ತವರು ಚಿಕ್ಕ ಚಪ್ಪಲಿಜೋಡಿಯನ್ನು ಅರ್ಪಿಸುವುದು ಈ ಸಂದರ್ಭದಲ್ಲಿ ಸ್ಮರಣಾರ್ಹವಾಗಿದೆ.

ಮಾತಂಗಿಯು ಆಯಾ ಜಾನಪದ ಸಮಾಜದ ಹಬ್ಬಗಳಲ್ಲಿ ಶುದ್ಧೀಕರಣದ ಕೆಲಸವನ್ನು ಕೈಗೊಳ್ಳುತ್ತಾಳೆ. ಅವಲ ಕವಡೆಹಾರವನ್ನು ಮೂರು ದಿನ ಭಾವಿಯಲ್ಲಿಟ್ಟಿದ್ದು, ಅದನ್ನೂ ಅಲ್ಲೇ ಇಟ್ಟ ಚಾಕು, ಮರದ ಹಾವುಗೆ ಮತ್ತು ತ್ರಿಶೂಲಗಳನ್ನೂ ಧರಿಸಿ ಹಬ್ಬದ ನೇತಾರನ ಹಿಂದೆ ನಡೆಯುತ್ತಾಳೆ. ಹಬ್ಬದ ಯಜಮಾನನ ಬಂಧುಗಳೆಲ್ಲ ಸಾಲಾಗಿ ನಿಲ್ಲುತ್ತಾರೆ. ಮಾತಂಗಿಯು ಅವರ ಸುತ್ತಲೂ ನಡೆದು ಅಸಂಬದ್ಧಪ್ರಲಾಪ ಮಾಡುತ್ತ ಅವರ ಮೇಲೆ ಉಗಿಯುತ್ತ ದಂಡದಿಂದ ಮುಟ್ಟುತ್ತಾಳೆ. ಇದರಿಂದ ಮೈಮನಗಳು ಶುಚಿಯಾಗುತ್ತವೆ ಎಂದು ಜನ ನಂಬುತ್ತಾರೆ. ಹೀಗೆ ನಂಬುವವರಲ್ಲಿ ಮೇಲು ಜಾತಿಯ ಬ್ರಾಹ್ಮಣರು ರೆಡ್ಡಿಗಳು, ಕಮ್ಮರು, ಕೋಮಟಗಳು ಸೇರಿದ್ದಾರೆ. ಬ್ರಾಹ್ಮಣಕುಟುಂಬಗಳಲ್ಲೂ ಅವಳಿಗೆ ಸತ್ಕಾರವುಂಟು. ಅಂಗಳವನ್ನು ಸಾರಿಸಿ ಅದರ ಮೇಲೆ ಬುಟ್ಟಿಯಿಡುತ್ತಾರೆ. ಬುಟ್ಟಿಯ ಮೇಲೆ ಅಕ್ಕಿ ಹಿಟ್ಟು ಹರಡಿ ಅದರ ಮೇಲೆ ಸಣ್ಣ ದೀಪವನ್ನು ಹಚ್ಚುತ್ತಾರೆ. ಆಮೇಲೆ ಮಾತಂಗಿಯ ಮಡಕೆಯಲ್ಲಿ ಕಳ್ಳು ಸುರಿಯುವಂತೆ ಕೇಳುತಾಳೆ. ಬ್ರಾಹ್ಮಣನು ನೀರು ಮಾತ್ರ ಸುರಿದು ಸಾಕು ಎನ್ನುತ್ತಾನೆ. ಅವಳು ಮಡಕೆಯನ್ನು ಹಿಡಿದು ನೆರದ ಮಂದಿಯ ಸುತ್ತಲೂ ತಿರುಗುತ್ತ ಮಡಕೆಯ ನೀರನ್ನು ಅವರ ಮೇಲೆ ಪ್ರೋಕ್ಷಣೆ ಮಾಡುತ್ತ ತನಗೆ ಬ್ರಾಹ್ಮಣರು, ಕ್ಷತ್ರಿಯರು, ಸಂತರು ದೊರೆಗಳು ಇವರೆಲ್ಲರಿಂದ ಆದ ಅವಮಾನವನ್ನು ಕುರಿತು ಹಾಡುತ್ತಾಳೆ. ಹೆಂಗಸರು ತಮ್ಮ ಒಳಲಂಗವನ್ನೂ ಯಜಮಾನತಿಯ ಸೀರೆಯನ್ನು ಮಾತಂಗಿಗೆ ನೀಡುತ್ತಾರೆ. ಬ್ರಾಹ್ಮಣರು ಜನಿವಾರವನ್ನು ವಿಸರ್ಜಸಿ ಸ್ನಾನಮಾಡಿ ಬೇರೆ ಯಜ್ಞೋಪವೀತವನ್ನು ಧರಿಸುತ್ತಾರೆ.

ಮಾತಂಗಿ ಪದ್ಧತಿಯ ಉಗಮವನ್ನು ಇಲ್ಲಿ ಬೇರೆ ರೀತಿ ಹೇಳುತ್ತಾರೆ. ಜಮದಗ್ನಿಯ ಅಪ್ಪಣೆಯಂತೆ ಪರಶುರಾಮನು ರೇಣುಕೆಯ ತಲೆಕಡಿದಾಗ ತಲೆಯು ಮಾದಿಗನ ಮನೆಯಲ್ಲಿ ಬಿದ್ದು ಅದು ಮಾತಂಗಿಯಾಯಿತು ಎನ್ನುವ ಒಂದು ಕಥೆಯಿದೆ. ಇನ್ನೊಂದು ಕಥೆಯಲ್ಲಿ ಒಬ್ಬ ರಾಜನು ಮಗಳು ಬೇಕೆಂದು ತಪಸ್ಸು ಮಾಡಿದಾಗ ದೇವತೆಗಳು ಒಂದು ಚಿನ್ನದ ಗಿಣಿಯ ವರ ನೀಡಿದರು. ಆದರೆ ಗಿಣಿಯು ಒಂದು ಹುತ್ತವನ್ನು ಹೊಕ್ಕಿತು. ದೊರೆಯು ಅದನ್ನು ಅಗೆಸಿದಾಗ ಅಲ್ಲಿ ಒಂದು ಅಂದವುಳ್ಳ ಹೆಣ್ಣು ಮಗು ದೊರೆಯಿತು. ಅವಳೇ ಮಾತಂಗಿ. ದಕ್ಷಿಣಭಾರತದಲ್ಲಿ ಮಾತಂಗರೆಂಬ ರಾಜರಿದ್ದರಂತೆ. ಮಾದಿಗರು ತಮ್ಮನ್ನು ಮಾತಂಗಿಯ ಮಕ್ಕಳು ಎಂದು ಗುರುತಿಸಿಕೊಳ್ಳುತ್ತಾರೆ. ಕಲೆವು ಕಡೆ ಮಾತಂಗಿ, ಮಾತಮ್ಮ, ಮಾತ ಎಂದು ತಮ್ಮನ್ನು ಕರೆದುಕೊಳ್ಳುವ ವೇಶ್ಯೆಯರು ಇದ್ದಾರೆ. (ಕನ್ನಡ ಜಾನಪದ ವಿಶ್ವಕೋಶ, ಪು. ೧೫೮೯-೯೦)

ಮಾತಂಗಿಯ ಪರಿಶೀಲನೆಯನ್ನು ಇಷ್ಟು ದೀರ್ಘವಾಗಿ ಬೆಳಸಿದ್ದರೆ ಕಾರಣವೆಂದರೆ ೧) ಶಿಷ್ಟತಂತ್ರದಲ್ಲಿರುವ ಉಚ್ಛಿಷ್ಟ (=ಎಂಜಲು) ಚಂಡಾಲಿ, ಸುರಾಪಾನ ಮತ್ತೆ ಎಂಬುದರ ಸ್ಪಷ್ಟವಾದ ನೆರಳು ಮಾತಂಗಿಯಲ್ಲಿದೆ ೨) ಎಲ್ಲಮ್ಮನಿಗೆ ಜೋಗಿತಿಯರಿರುವಂತೆ ಮಾತಂಗಿಯರಲ್ಲೂ ಸಾಧಾರಣೆಯರಿರುವುದು ೩) ಮೇಲು ಜಾತಿಯ ಅಥವಾ ವರ್ಗದ ಜನರು ತಮ್ಮನ್ನು ಕೀಳಾಗಿ ಪರಿಗಣಿಸುವುದನ್ನು ನಿಮ್ನವರ್ಗದವರು ಪ್ರತಿಭಟಿಸಿ ಅವರಿಗೆ ಸಮಾನರೆಂದೋ ಅಧಿಕರೆಂದೋ ಸ್ಥಾಪಿಸಿಕೊಳ್ಳಲೆಳಸುವುದು ೪) ಅಂತಹ ಮೇಲು ವರ್ಗದವರು ಇಂತಹ ಸಮಾನತೆಯನ್ನೋ ಆಧಿಕ್ಯವನ್ನೋ ಕೆಲವೊಂದು ಸಂದರ್ಭಗಳಲ್ಲಿ (ಮಾತ್ರ) ಒಪ್ಪಿಕೊಳ್ಳುವುದು ೫) ಆದರೆ ಸ್ವಸಂಸ್ಕೃತಿ, ಸ್ವಸಂಸ್ಕಾರ, ಆಚರಣೆಗಳನ್ನು ಬಿಡದೆ ಅವುಗಳಿಗೆ ವಾಪಸಾಗುವುದು, ಇದರಿಂದ ಸಮಾಜದಲ್ಲಿ ವಿವಿಧ ವರ್ಗಗಳ ತಾರತಮ್ಯಭಾವವು ಅಳಿಯದೆ ಇರುವುದು ೬) ಇದರ ನೆರಳು ದೇವತೆಗಳ ತಾರತಮ್ಯದಲ್ಲಿಯೂ (ಉದಾ. ಎಲ್ಲಮ್ಮ-ಮಾತಂಗಿ) ಕಾಣುವುದು ೭) ತಮಭಾವದ ವರ್ಗದಲ್ಲಿ ಹೇಗೋ ತರಭಾವದ ವರ್ಗದಲ್ಲಿಯೂ ದೈವದ ಆವೇಶವಾಗಿ ಮೈದುಂಬುವುದು. ಹೀಗೆ ಇಂತಹ ವರ್ಗದವರು ತಮ್ಮ ಕೀಳರಿಮೆಯನ್ನು ಉದಾತ್ತಗೊಳಿಸಲೆಳಸುವುದು; ಇದಕ್ಕಾಗಿ ಸ್ಥಳೀಯ ಐತಿಹ್ಯ, ಪುರಾಣೀಕರಣ ಮುಂತಾದುವನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯುವುದು ಇತ್ಯಾದಿ ಮಾನವ ಸಾಂಸ್ಕೃತಿಕ ಶಾಸ್ತ್ರದ (ಕಲ್ಚರಲ್ ಆಂಥ್ರೋಪಾಲಜಿ) ಪ್ರಮೇಯಗಳು ಇಲ್ಲಿ ಸುಪ್ತವಾಗಿವೆ. ಅವುಗಳು ಮತಂಗ-ಬೃಹದ್ದೇಶಿಗಳೆರಡರಲ್ಲೂ ಕಂಡುಬರುತ್ತವೆ; ಸಂಗೀತಶಾಸ್ತ್ರದಲ್ಲಿ ಇಂತಹ ಅಂತರಶಾಸ್ತ್ರೀಯ ಮತ್ತು ಶಾಸ್ತ್ರಾಂತರೀಯ ಆಯಾಮಗಳನ್ನು ಗುರುತಿಸಿ ಸಂಶೋಧಿಸುವುದರಿಂದ, ಸಂಗೀತಶಾಸ್ತ್ರೀಯ ಅಭ್ಯಾಸದಿಂದಲೂ ನಾಡಿನ ಸಾಂಸ್ಕೃತಿಕ ಅಧ್ಯಯನಕ್ಕೆ ಪ್ರಯೋಜನವುಂಟು ಎಂದು ಸೂಚಿಸುವುದೇ ಆಗಿದೆ. ಇದನ್ನು ಮುಂದೆ (ಪು.೪೬-೪೯) ಸಂಕ್ಷೇಪವಾಗಿ ಪ್ರಸ್ತಾಪಿಸಲಾಗುವುದು.