(ಆ) ವಿವರಗಳು

ಮೇಲೆ ಹೇಳಿರುವ ಉಲ್ಲೇಖಗಳಿಂದ ಮತಂಗ ಎನ್ನುವ ಹೆಸರು ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಪ್ರಾಚೀನ ಪ್ರಸಿದ್ಧವಾದುದು ಹಾಗೂ ಗೌರವಿತವಾದುದು ಎಂದು ಸಿದ್ಧವಾಗುತ್ತದೆ; ಆದರೆ ಈ ಮತಂಗರು ಐತಿಹಾಸಿಕ ವ್ಯಕ್ತಿಗಳು ಎಂದಾಗುವುದಿಲ್ಲ. ಬೃಹದ್ದೇಶಿಯ ಕರ್ತೃವು ಕಾಲದೇಶಗಳಲ್ಲಿ ನಿರ್ದಿಷ್ಟನಾದ ವ್ಯಕ್ತಿ. ನಾಟ್ಯಶಾಸ್ತ್ರವು ಏಕಕೃತವೆ, ಬಹುಕೃತವೆ, ಭರತನೆಂಬುದು ನಿಜನಾಮವೆ, ವೃತ್ತಿನಾಮವೆ, ಸಂಕೇತನಾಮವೆ ಮುಂತಾದ ಪ್ರಶ್ನೆಗಳು ಏಳುವಂತೆ ಬೃಹದ್ದೇಶಿಯ ವಿಷಯದಲ್ಲಾಗಲಿ ಅದನ್ನು ರಚಿಸಿದ ಮತಂಗನ ವಿಷಯದಲ್ಲಾಗಲಿ ಏಳುವುದಿಲ್ಲ. ಆದರೆ ಅವನ ಜೀವಿತದ ಕಾಲ, ದೇಶ ಮತ್ತಿತರ ವಿವರಗಳು ಬೃಹದ್ದೇಶಿಯಲ್ಲಾಗಲಿ ಬೇರೆಡೆಯಾಗಲಿ ದೊರೆಯುವುದಿಲ್ಲ; ಇವುಗಳಲ್ಲಿ ಕೆಲವನ್ನು ಅನುಮಾನದಿಂದ ಸಿದ್ಧಪಡಿಸಬಹುದು, ಅಷ್ಟೆ.

ಮೊದಲನೆಯದಾಗಿ, ಮತಂಗನು ಕರ್ನಾಟಕದಲ್ಲಿದ್ದ ಕನ್ನಡಿಗ ಎಂದು ಅನುಮಾನಿಸಬಹುದು. ಏಕೆಂದರೆ ಚತುಃಸ್ವರಮಾತ್ರ ಪ್ರಯೋಗವಿರುವ (=ಸ್ವರಾಂತರ) ರಾಗಗಳು ಕೇವಲ ಜಾನಪದ (ಅಶಿಷ್ಟ) ಬಳಕೆಯವು ಎನ್ನುವಲ್ಲಿ ಆಂಧ್ರ ಕಿರಾತ, ದ್ರಾವಿಡ, ಬಂಗ, ಬಾಹ್ಲೀಕ, ಶಬರರನ್ನು ಮಾತ್ರ ಅವನು ಉಲ್ಲೇಖಿಸುತ್ತಾನೆ. ಕರ್ನಾಟಕವನ್ನು ಹೊರೆತುಪಡಿಸುತ್ತಾನೆ. (೪೪೩). ಗೇಯಪ್ರಬಂಧಗಳನ್ನು ನಿರೂಪಿಸುವಲ್ಲಿ ಒಟ್ಟು ೪೮ ಪ್ರಬಂಧಗಳ ಪೈಕಿ ಕನ್ನಡ ಭಾಷೆಯ ಹತ್ತಕ್ಕೂ ಹೆಚ್ಚಿನವುಗಳನ್ನು ವರ್ಣಿಸಿ ಉಳಿದ ದ್ರಾವಿಡ ಭಾಷೆಯವುಗಳನ್ನು (ತೆಲುಗು, ತಮಿಳುಗಳನ್ನು) ದೇಶೈಲಾವರ್ಣನ ಪ್ರಸಕ್ತಿಮಾತ್ರದಲ್ಲೂ (೧೧೭೧, ೧೧೭೨), ಲಾಟ ಗೌಡ, ಭಾಷೆಗಳನ್ನು ಅದೇ ಸಂದರ್ಭದಲ್ಲಿ (೧೧೬೮, ೧೧೭೦) ಅಲ್ಪವಾಗಿಯೂ ಹೇಳುತ್ತಾನೆ. ಅಲ್ಲದೆ ಅವನು ಹೇಳುವ ಮೊಟ್ಟಮೊದಲನೆಯ ಗೇಯ ಪ್ರಬಂಧವೇ ಕಂದವೆಂಬ ಕನ್ನಡದ ಛಂಧೋಬಂಧ. ಇದು ಅವನ ಕನ್ನಡಪ್ರೀತಿಯನ್ನು ಸಿದ್ಧಪಡಿಸುತ್ತದೆ. ಈ ಸಂದರ್ಭದಲ್ಲಿ ಅವನು ಹೇಳುವ ‘ಕಂದಾದಿ ಪ್ರಬಂಧಾ ಲಕ್ಷ್ಯತಃ ಪ್ರಸಿದ್ಧಾಏವ’ (೧೦೭೫) ಎಂಬ ಮಾತೂ ಅದರಲ್ಲಿರುವ ‘ಏವ’ ಕಾರವೂ ಕನ್ನಡವು ಪ್ರಚಾರದಲ್ಲಿದ್ದ ದೇಶದಲ್ಲಿ ಆತನು ಜೀವಿಸಿ ಗ್ರಂಥರಚನೆ ಮಾಡಿದನು ಎಂಬುದನ್ನು ಸಿದ್ಧಪಡಿಸುತ್ತವೆ. ಅಲ್ಲದೆ ಅವನು ತನ್ನನ್ನು ‘ಮತಂಗಮುನಿ’ ಎಂದು ಕರೆದುಕೊಂಡಿದ್ದಾನೆ (೧೦೫೪, ೧೧೪೫) ; ಈ ಹೆಸರೂ, ಪಂಪಾನದಿಯೂ, ಋಷ್ಯಮೂಕ, ಮತಂಗ ಪರ್ವತ, ಮಾಲ್ಯವಂತಗಳೆಂಬ ಬೆಟ್ಟಗಳೂ ಇಡೀ ಭಾರತದಲ್ಲಿ ಹಂಪಿಯಲ್ಲಿ ಮಾತ್ರ ಇರುವುದೂ ಹಂಪಿಯ ಜನರ ಭಾಷೆಯು ಪ್ರಾಚೀನಕಾಲದಿಂದಲೂ ಕನ್ನಡವೇ ಆಗಿರುವುದೂ, ಮಾತಂಗಿ ಎನ್ನುವುದು ಶ್ರೀವಿದ್ಯೆಯಲ್ಲಿ ಪ್ರಸಿದ್ಧವಾದ ಉಪಾಸ್ಯ ದೇವತೆಯಾಗಿರುವುದೂ, ಮತಂಗನು ಶ್ರೀವಿದ್ಯಾ ಉಪಾಸಕನಾಗಿದ್ದುದೂ (ಈ ವಿಷಯಗಳಿಗೆ ಮುಂದೆ (‘ಗ್ರಂಥಕರ್ತೃ:(ಈ) ಶ್ರೀವಿದ್ಯಾಉಪಾಸಕ’ ಎಂಬ ಭಾಗವನ್ನು ನೋಡಿ ಪು.೧೯-೨೨), ಹಂಪಿಯು ಪ್ರಸಿದ್ಧ ಶ್ರೀವಿದ್ಯಾಕ್ಷೇತ್ರವಾಗಿತ್ತೆಂಬ ಮತ್ತು ಮತಂಗನು ಹಂಪಿಯಲ್ಲಿದ್ದವನೆಂಬ ಅನುಮಾನವನ್ನು ಬಲಪಡಿಸುತ್ತವೆ. ಈ ವಿಷಯಗಳನ್ನೂ ಕರ್ನಾಟಕದಲ್ಲಿ ಸಂಗೀತನೃತ್ಯಶಾಸ್ತ್ರಗಳ ಇತಿಹಾಸವನ್ನೂ ಮತ್ತಿತರ ಮಾಹಿತಿಗಳನ್ನೂ ಡಾ || ಎಚ್. ತಿಪ್ಪೇರುದ್ರಸ್ವಾಮಿಯವರು ನನ್ನಿಂದ ಪಡದುಕೊಂಡು ತಮ್ಮ ‘ಕರ್ನಾಟಕಸಂಸ್ಕೃತಿ ಸಮೀಕ್ಷೆ’ಯಲ್ಲಿ (ಪು.೬೬೨) ಬರೆದಿದ್ದಾರೆ. ಈ ನನ್ನ ಅನುಮಾನವು ವಿದ್ವಜ್ಜನರಿಗೆ ಮಾನ್ಯವಾದಂತಿದೆ.

‘ಪ್ರಜ್ಞ’ವು ‘ಪ್ರಾಜ್ಞ’ವಾಗುವಂತೆ, ಗಂಧರ್ವವು ಗಾಂಧರ್ವವಾಗುವಂತೆ, ಮತಂಗಶಬ್ದವು ಮಾತಂಗ ಎಂದೂ ಆಗುತ್ತದೆ. ಹೀಗೆ ಮತಂಗನನ್ನು ಕಾಲಿದಾಸನ ವ್ಯಾಖ್ಯಾನಕಾರನಾದ ಮಲ್ಲಿನಾಥಸೂರಿಯು (ಉದಾ. ರಘುವಂಶದ ೧.೩೯ರ ವ್ಯಾಖ್ಯಾನ, ಭಾರವಿಯ ಕಿರಾತಾರ್ಜುನೀಯದ ೪.೩೩ರ ವ್ಯಾಖ್ಯಾನ) ಸಂಗೀತಸಂದರ್ಭದಲ್ಲಿ ಉಲ್ಲೇಖಿಸಿದ್ದಾನೆ. ಮಾತಂಗ ಶಬ್ದವು ನಾನಾರ್ಥಕವಾದುದು : ಆನೆ, ಅಶ್ವತ್ಥ ವೃಕ್ಷ, ಜ್ಯೋತಿಷಶಾಸ್ತ್ರದಲ್ಲಿ ೨೪ನೆಯ ಯೋಗ, ಚಂಡಾಲ ಜಾತಿಯವನು, ಕಿರಾತ, ಬರ್ಬರ, ಒಬ್ಬ ಸರ್ಪರಾಕ್ಷಸ, ಒಬ್ಬ ಪ್ರತ್ಯೇಕಬುದ್ಧ, ಜೈನಮತದಲ್ಲಿ ಈಗಿನ ಅವಸರ್ಪಿಣಿಯಲ್ಲಿ ೭ನೆಯ ಮತ್ತು ೨೪ನೆಯ ಅರ್ಹಂತನ ಸೇವಕ ಎಂದೆಲ್ಲ ಅರ್ಥಗಳು ಅದನ್ನು ಆಶ್ರಯಿಸುತ್ತವೆ. ಆನೆಯೆಂಬ ಅರ್ಥವು ಅಮರವೇ (೩.೫.೨೩೭೭) ಮೊದಲಾದ ಕೋಶಗಳಲ್ಲಿಯೂ ಮಾಘಾದಿ ಕಾವ್ಯಗಳಲ್ಲಿಯೂ (೧.೬೪) ಸೂಚಿತವಾಗಿದೆ. ಮಾತಂಗವು ಮತಂಗಜ; ವಾಲ್ಮೀಕಿ ರಾಮಾಯಣದಲ್ಲಿ ಆನೆಗಳ ಹುಟ್ಟನ್ನು ಅರಣ್ಯಕಾಂಡದ ೧೪ನೆಯ ಸರ್ಗದಲ್ಲಿ ರಾಮನಿಗೆ ಜಟಾಯುವು ಹೀಗೆ ವಿವರಿಸಿದ್ದಾನೆ: ದಕ್ಷ ಪ್ರಜಾಪತಿಯ ೬೦ ಹೆಣ್ಣುಮಕ್ಕಳಲ್ಲಿ ಕಶ್ಯಪನು ಎಂಟು ಕನ್ಯೆಯರನ್ನು ಮದುವೆಯಾದನು. (ಮಹಾಭಾರತದ ಆದಿ ಪರ್ವದ ೬೬ನೆಯ ಸರ್ಗದಲ್ಲಿ ಹದಿಮೂರು ಕನ್ಯೆಯರನ್ನು ವಿವಾಹವಾದುದಾಗಿ ಹೇಳಿದೆ). ಇವರಲ್ಲಿ ಕ್ರೋಧವಶಾ ಎಂಬುವಳೂ ಒಬ್ಬಳು. ಇವಳಿಗೆ ಮೃಗಿ, ಮೃಗಮಂದಾ, ಹರೀ, ಭದ್ರಮನಾ, ಮಾತಂಗೀ, ಶಾರ್ದೂಲೀ, ಶ್ವೇತಾ, ಸುರಭಿ, ಸುರಸಾ ಎಂಬ ಒಂಭತ್ತು ಪುತ್ರಿಯರು ಜನಿಸಿ ಭೂಲೋಕದ ವಿವಿಧ ಮೃಗ, ಪಕ್ಷಿ ಇತ್ಯಾದಿ ಜಂತುಗಳನ್ನು ಸೃಷ್ಟಿಸಿದರು. ಇವರ ಪೈಕಿ ಮಾತಂಗಿಯು ಆನೆಯ ಜಾತಿಯನ್ನು ಸೃಷ್ಟಿಸಿದಳು (೧೪.೯-೨೧). ವ್ಯಾಸಭಾರತದ ಆದಿ ಪರ್ವದಲ್ಲಿಯೂ (೬೬-೬೮) ಈ ಕಥೆಯಿದೆ. ಮಾತಂಗಲೀಲಾ ಎಂಬ ಗಜಲಕ್ಷಣವೈದ್ಯಗ್ರಂಥದಲ್ಲಿ ಗುಣವತಿಯಿಂದ ಮಾತಂಗಜಾತಿಯ ಜನನವಾಯಿತೆಂದು ಹೇಳಿರುವುದನ್ನು ಮೇಲೆ ಪ್ರಸ್ತಾಪಿಸಿದೆ.

ಮತಂಗಶಬ್ದದ ಅರ್ಥಗಳಲ್ಲಿ ಚಂಡಾಲಜಾತಿಯವನು ಎಂಬುದು ಮುಖ್ಯವಾದುದು. ಚಂಡಾಲ, ಪ್ಲವ, ಮಾತಂಗ, ದಿವಾಕೀರ್ತಿ, ಜನಂಗಮ, ನಿಷಾದ, ಶ್ವಪಚ, ಅಂತೇವಾಸೀ, ಚಾಂಡಾಲ ಪುಕ್ಕಸ ಎಂಬೀ ಹತ್ತು ಹೆಸರುಗಳು ಪರಸ್ಪರ ಸಮಾನಗಳು. ಕಿರಾತ, ಶಬರ, ಪುಲಿಂದ ಎಂಬ ಮೂರೂ ಚಂಡಾಲಭೇದಗಳು (ಅಮರಕೋಶ, ೨.೧೧.೧೯೬೭-೧೯೬೯). ಕಿರಾತ ಶಬರ ಪುಲಿಂದರನ್ನು ಮತಂಗನು ಪೂರ್ವೋಕ್ತ (೪೪೩) ಸಂದರ್ಭದಲ್ಲಿ ಹೆಸರಿಸುವುದನ್ನಿಲ್ಲಿ ನೆನೆಯಬಹುದು. ಮಾತಂಗ ಪರ್ವತವೆಂದರೆ ಮಾತಂಗರು (ಶಬರರು) ಮತ್ತು / ಅಥವಾ ಆನೆಗಳು ಬೀಡು ಮಾಡಿಕೊಂಡಿದ್ದ ಪರ್ವತ. ಮತಂಗಾಶ್ರಮದಲ್ಲಿ ಶಬರರ ಸ್ತ್ರೀ ಇದ್ದಳು. ಮತಂಗಮುನಿಯು ಅವಳ ಗುರುವಾಗಿದ್ದನು. ಮಾತಂಗೀ ಎಂದರೆ ಚಂಡಾಲಕನ್ಯೆ, ಶಬರಿ, ಮುಂತಾದ ಆಲೋಚನಾ ಸಾಹಚರ್ಯಗಳನ್ನು ಕಲ್ಪಿಸಿಕೊಂಡು ಈ ಹೆಸರುಗಳು ಅನ್ವರ್ಥವಾಗಿದ್ದವು ಎಂದು ಇಟ್ಟುಕೊಂಡರೆ, ಬೃಹದ್ದೇಶಿಯ ಕರ್ತೃವು ಆಗಿನ ಕಾಲದಲ್ಲಿ ಬಹುಶಃ ಕೀಳೆಂದು ಎಣಿಸಿಕೊಳ್ಳಲಾಗುತ್ತಿದ್ದ ಸಾಮಾಜಿಕ / ಧಾರ್ಮಿಕ / ಸಾಂಸ್ಕೃತಿಕ ಸ್ತರದಲ್ಲಿ ಜನ್ಮ ತಾಳಿ ತನ್ನ ಶ್ರೇಷ್ಠಸಾಧನೆಯಿಂದ ಮುನಿಯೆಂದು ಹೆಸರಾದವನು ಎಂಬ ಅನುಮಾನವು ಹೊರಡುತ್ತದೆ. ಅಥವಾ ಶಿಷ್ಟಪಂಗಡದ ಮುನಿಯೊಬ್ಬನು ತನ್ನ ಉದಾರವಾದ ಸರ್ವಸಮದೃಷ್ಟಿಯ ದ್ಯೋತಕವಾಗಿ ಸಾಂಸ್ಕೃತಿಕಸಾಮಾನಾಧಿಕರಣ್ಯಸಾಧನೆಗಾಗಿ ತನ್ನನ್ನು ಈ ಹೆಸರಿನಿಂದ ಕರೆದುಕೊಂಡನು ಎಂದು ಭಾವಿಸಬಹುದು. ಮುನಿ ಎಂಬುದು ಜಾತಿವಾಚಕವಾದ ಶಬ್ದವೂ ಅಲ್ಲ. ಕೇವಲ ಅಧ್ಯಾತ್ಮಾನ್ವೇಷಣೆಯ, ಸಿದ್ಧಿಯ ಸೂಚಕವೂ ಅಲ್ಲ; ಕಾಮಶಾಸ್ತ್ರ, ಶಿಲ್ಪಶಾಸ್ತ್ರ, ನಾಟ್ಯಶಾಸ್ತ್ರ, ನೃತ್ತ-ನೃತ್ಯ-ಸಂಗೀತ, ನಾಸ್ತಿಕವಾದ ಮುಂತಾದ ಶಾಸ್ತ್ರಗಳನ್ನು ಪ್ರವರ್ತಿಸಿದ ಪ್ರತಿಭಾವಂತರು ಮುನಿಗಳೆನ್ನಿಸಿಕೊಳ್ಳುವಷ್ಟು ಭಾರತೀಯ ದೃಷ್ಟಿಯು ವ್ಯಾಪಕವಾಗಿದೆ. ವಿಶಾಲವಾಗಿದೆ. ಭರತ, ದತ್ತಿಲ, ಕಾಶ್ಯಪ, ದುರ್ಗಾಶಕ್ತಿ, ಯಾಷ್ಟಿಕ, ವಿಶ್ವಾವಸು, ವಿಶಾಖಿಲ ಮುಂತಾದವರೆಲ್ಲರೂ ಸಂಗೀತದ ಮುನಿಗಳೇ; ಭರತರು (=ನಟರು) ಸಾಮಾಜಿಕ ಪ್ರತಿಷ್ಠೆಯನ್ನೂ ಸಾಂಸ್ಕೃತಿಕವಾಗಿ ಗೌರವಪುರಸ್ಕಾರಗಳನ್ನೂ ಕಳೆದುಕೊಂಡಿದ್ದುದನ್ನು ಸಾಂಕೇತಿಕವಾಗಿ ಭರತನೇ ಹೇಳಿದ್ದಾನಷ್ಟೇ (ನಾಟ್ಯಶಾಸ್ತ್ರಂ, ೩೭ನೆಯ ಅಧ್ಯಾಯ). ಆದರೆ ಅವನ ಸಾಧನೆಸಿದ್ಧಿಗಳ ಉತ್ಕೃಷ್ಟತೆಯಿಂದಾಗಿ ಅತ್ರಿಯೇ ಮುಂತಾದ ಮುನಿಗಳು ಅವನನ್ನು ಬಳಿಸಾರಿ ನಾಟ್ಯಶಾಸ್ತ್ರದ ಉಪದೇಶವನ್ನು ಪಡೆದರು. ಅಂತೆಯೇ ಮತಂಗನನ್ನು ನಾರದ ಮುನಿಯು ಬಳಿಸಾರಿ ಬೃಹದ್ದೇಶಿಯ ಉಪದೇಶವನ್ನು ಪಡೆದನು. ಈ ಕೋನದಿಂದ ನೋಡಿದರೆ ಭರತ ಮತಂಗರ ಕಾಲದಲ್ಲಿ ಸಾಮಾಜಿಕ-ಸಾಂಸ್ಕೃತಿಕ ಸಮಾನತೆಯನ್ನು ಸಾಧಿಸಲೆಳಸುವ ಒಂದು ಕ್ರಾಂತಿಯು ನಡೆಯುತ್ತಿತ್ತೆಂದು ಹೇಳಬಹುದು. ಜಾನಪದ ಪ್ರಸಿದ್ಧವಾದ ಎಲ್ಲಮ್ಮ-ಮಾತಂಗಿಯರ ಕಥೆಯು ಇಂತಹ ಶಿಷ್ಟ-ಅಶಿಷ್ಟ ಸಾಮಾನಾಧಿಕರಣ್ಯದ ನಿದರ್ಶನವಾಗಿದೆ (ಮುಂದೆ ನೋಡಿ : (ಋ) ಜಾನಪದಮಾತಂಗೀ, ಪು. ೨೭-೩೫). ಇದು ಹಂಪಿಯ ಪ್ರದೇಶದಲ್ಲಿ ಇಂದಿಗೂ ಪ್ರಚಾರದಲ್ಲಿದೆಯೆಂಬುದನ್ನಿಲ್ಲಿ ನೆನೆಯಬಹುದು. ಬೃಹದ್ದೇಶಿಯಲ್ಲೇ ಇದಕ್ಕೆ ಸ್ಪಷ್ಟವಾದ ನಿದರ್ಶನವಿದೆ: ಮತಂಗನು ದೇಶಿಯನ್ನೇ ಬೃಹತ್ತೆಂದೂ (ಬೃಹದ್-ದೇಶೀ) ಮಹತ್ತೆಂದೂ ಬಗೆದು, ಮಾರ್ಗವೆಂಬ ಶಿಷ್ಟವಾದುದನ್ನು ಬಿಟ್ಟು ಅಬಲಾಬಾಲಗೋಪಾಲರೂ ಕ್ಷಿತಿಪಾಲರೂ ಸ್ವೇಚ್ಛೆಯಿಂದ ಹಾಡಿಕೊಳ್ಳುವ ದೇಶಿಯನ್ನು (೧೪-೧೬) ಎತ್ತಿಹಿಡಿದವರಲ್ಲಿ ಮೊದಲನೆಯವನು; ಸಂಸ್ಕೃತಿಗೂ ಅದರ ಅಂಗವಾದ ಸಂಗೀತಕ್ಕೂ ಅದರ ಶಾಸ್ತ್ರಕ್ಕೂ ಒಂದು ಹೊಸ ತಿರುವು.. ಆಯಾಮಗಳನ್ನು ಕೊಟ್ಟವನು. ಅವನು ತನ್ನ ಶಾಸ್ತ್ರಕ್ಕೆ ಒಂದು ಮುಖ್ಯ ಪ್ರಮಾಣವನ್ನಾಗಿ ಇಟ್ಟುಕೊಂಡುದು ಜನರು, ಲಕ್ಷ್ಯವಿದರು, ಪ್ರಯೋಕ್ತ್ಯಗಳು – ಇವರನ್ನು. ಇದು ಬೃಹದ್ದೇಶಿಯ ಉದ್ದಕ್ಕೂ ಕಾಣಸಿಗುತ್ತದೆ. ಭರತಾದಿಗಳು ಹೇಳದೆ ಬಿಟ್ಟಿದ್ದ ರಾಗಮಾರ್ಗವನ್ನು ನಿರೂಪಿಸಲೆಂದು ಬರೆದ ಬೃಹದ್ದೇಶಿಯಲ್ಲಿ ದೇಶೀ ರಾಗಗಳಿಗೂ ದೇಶನಾಮಕರಾಗಗಳಿಗೂ ಅಭೂತಪೂರ್ವವೂ ಅನುಸರಣೀಯವೂ ಆದ ಸ್ಥಾನಮಾನಗಳನ್ನು ಮತಂಗನು ಕಲ್ಪಿಸಿದನು; ದೇಶೀ ಎಂಬ ಮಾರ್ಗದ ಆದ್ಯ ಪ್ರವರ್ತಕನಾದನು.

(ಇ) ಬಹುಮುಖಪ್ರತಿಭೆ

ಮತಂಗಮುನಿಯದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಇಂತಹ ವ್ಯಕ್ತಿತ್ವದ ಬೆಳವಣಿಗೆಯು ಪ್ರಾಚೀನಭಾರತೀಯ ಸಂಸ್ಕೃತಿಯ ವೈಶಿಷ್ಟ್ಯಗಳಲ್ಲಿ ಒಂದು. ಜೀವನವನ್ನು ಸಮಗ್ರವಾಗಿ ದರ್ಶಿಸಿ, ಅಂತಹ ದರ್ಶನವನ್ನು ಸಾಮರಸ್ಯದ ಆಧಾರದ ಮೇಲೆ ರೂಪಿಸಿಕೊಂಡ ಮಹದ್‌ವ್ಯಕ್ತಿಗಳಲ್ಲಿ ಮತಂಗನೂ ಒಬ್ಬ. ಅವನು ಭರತ, ಕಾಶ್ಯಪ, ಕೋಹಲ, ಯಾಷ್ಟಿಕ, ದುರ್ಗಾಶಕ್ತಿ, ಶಾರ್ದೂಲ, ನಾರದ, ನಂದಿಕೇಶ್ವರ, ದತ್ತಿಲ, ತುಂಬುರು, ಅಭಿನವಗುಪ್ತ – ಇವರ ಸಾಲಿನಲ್ಲಿ ನಿಲ್ಲುವ ತೇಜೋಮಯಮೂರ್ತಿ. ಹೀಗೆ ಅವನು ಸಂಗೀತದ ತ್ರಿಮುಖಗಳಾದ ಗೀತ, ವಾದ್ಯ ಮತ್ತು ನರ್ತನಗಳಲ್ಲಿ ಸಮಾನಪಾಂಡಿತ್ಯವನ್ನು ಪಡೆದಿದ್ದವನು; ಅವನು ವೇದಪ್ರಾಮಾಣ್ಯವನ್ನೂ ವೇದಪಾರಮ್ಯವನ್ನೂ ವೇದಾಂಗಗಳನ್ನೂ ಒಪ್ಪಿಕೊಂಡ ಸನಾತನಿ, ಆಸ್ತಿಕ, ಉಪನಿಷತ್ತಿನ ಮಹಾವಾಕ್ಯಗಳನ್ನು ಅರಿತವನು, ಗಾಂಧರ್ವಶಾಸ್ತ್ರಕ್ಕೆ ವೇದೋಪವಸತಿಯನ್ನು (ಬಹುಶಃ ಪ್ರಪ್ರಥಮವಾಗಿ) ಕಲ್ಪಿಸಿದವನು (೧೧), ಸಾಮವೇದವು ಸಂಗೀತಕ್ಕೆ ಅಧಿಷ್ಠಾನವೆಂದು ಪ್ರತಿಪಾದಿಸಿದವನು (೧೬೯), ಅದು ಗೀತಪ್ರಧಾನವೆಂಬುದನ್ನು ಉದಾಹರಿಸಿದವನು (೩೮೯, ೩೯೦), ವೇದಮಂತ್ರಗಳನ್ನು ಗೀತಕ್ಕೆ ಅಳವಡಿಸಿದಾಗ ಪದವಿಚ್ಛೇದದಿಂದ ಅರ್ಥಭಂಗವಾದರೆ ದೋಷವಿಲ್ಲ ಎಂದು ಸಂಗೀತಪ್ರಯೋಗದಲ್ಲಿ ಪ್ರಸಿದ್ಧವಾಗಿರುವ ರೂಢಿಯನ್ನು ವೇದಪಾಠದ ಮೂಲಕ್ಕೆ ಒಯ್ದವನು (೩೮೯).

ಮತಂಗಮುನಿಯು ಯೋಗಶಾಸ್ತ್ರಪಟುವೂ ಹೌದು; ಅವನು ಬ್ರಹ್ಮಸ್ಥಾನ -ಅದರಲ್ಲಿ ಬ್ರಹ್ಮಗ್ರಂಥಿ – ಅದರಲ್ಲಿ ಪ್ರಾಣ – ಅದರಿಂದ ನಾದೋತ್ಪತ್ತಿ ಎಂಬ ಪ್ರಮೇಯವನ್ನೂ (೨೦-೨೨), ಆತ್ಮನು ತನ್ನನ್ನು ಅಭಿವ್ಯಕ್ತಿಗೊಳಿಸಿಕೊಳ್ಳಬೇಕಾದಾಗ ಮೇಲೆ ಹೇಳಿದಂತೆ ಪ್ರಾಣವಾಯುವು ಊರ್ಧ್ವಮುಖವಾಗಿ ಸಂಚರಿಸುತ್ತದೆ ಎಂಬ ತತ್ವವನ್ನೂ (೨೮,೯೭,೧೦೧,೧೩೮), ಯೋಗ ದೇಹದಲ್ಲಿರುವ ಸಪ್ತ(ನಾಡೀ)ಚಕ್ರಗಳನ್ನೂ (೧೪೨) ಹೇಳುತ್ತಾನೆ. ಅವನು ಮಂತ್ರಶಾಸ್ತ್ರಜ್ಞನೂ ಹೌದು; ಏಕೆಂದರೆ ನಕಾರವೆಂಬ ಬೀಜಮಂತ್ರವು ಪ್ರಾಣಕ್ಕೆ ಸಂಜ್ಞೆಯೆಂದೂ ದಕಾರವೆಂಬ ಬೀಜಮಂತ್ರವು ದೇಹಾಗ್ನಿಗೆ ಸಂಜ್ಞೆಯೆಂದೂ ಇವೆರಡರ ಸಂಯೋಗದಿಂದ ನಾದವೆಂಬ ಮಂತ್ರವೂ ಅದರ ಅರ್ಥವೂ ಹೊರಡುತ್ತವೆ ಎಂಬ ಮಂತ್ರನಿಷ್ಪತ್ತಿಯನ್ನು ಸಂಗೀತಶಾಸ್ತ್ರದಲ್ಲಿ ಮೊದಲಬಾರಿಗೆ ಪ್ರವರ್ತಿಸುತ್ತಾನೆ (೨೩). ಅವನು ವೈಯಾಕರಣನೂ ಆಗಿದ್ದಾನೆ; ನಾದ (೨೪), ಶ್ರುತಿ (೨೭), ಸ್ವರ (೯೪, ೯೫) ಮೂರ್ಛನಾ (೧೮೦), ಅಲಂಕಾರ (೨೮೪; ಇಲ್ಲಿ ‘ಕಾರ’ ಎಂಬ ಅಂಶವನ್ನು ‘ಕೃಞ್’ ಧಾತುವಿನಿಂದ ಕರಣಾರ್ಥದಲ್ಲಿ ‘ಡುಕೃಞ್ಕರಣೇ’ ಎಂಬ ಪಾಣಿನೀಯ ಸೂತ್ರದಿಂದ ಹೊರಡಿಸಿರುವುದನ್ನು ಗಮನಿಸಬೇಕು. ೨೮೧), ಜಾತಿ (೪೨೪) ಎಂಬ ಪಾರಿಭಾಷಿಕಶಬ್ದಗಳನ್ನು, ನಿಷ್ಪತ್ತಿಪೂರ್ವಕವಾಗಿ ಪಡೆದಿದ್ದಾನೆ, ಅಲ್ಲದೆ ಪಾಣಿನಿಯ ಸೂತ್ರವಾದ (ಅಷ್ಟಾಧ್ಯಾಯೀ, ೫,೨,೩೬) ‘ತಾರಕಾದೀತಚ್’ ಎಂಬುದನ್ನು ಉದ್ಧರಿಸಿಕೊಂಡಿದ್ದಾನೆ.

ಮತಂಗಮುನಿಯು ಪಾಣಿನೀಯ ವ್ಯಾಕರಣಪಟುವಾಗಿದ್ದುದು ಮಾತ್ರವಲ್ಲದೆ ಭರ್ತೃಹರಿಯು ವಾಕ್ಯಪದೀಯದ ಬ್ರಹ್ಮಕಾಂಡದಲ್ಲಿ ಪ್ರತಿಪಾದಿಸಿರುವ ಶಬ್ದಬ್ರಹ್ಮವಾದಕ್ಕೆ ಒಲಿದಿರುವುದು ಸಂಭವನೀಯವಾಗಿದೆ.ಅವನ ಶ್ರುತಿಪರವಾದ ಕೆಲವು ಕಲ್ಪನೆಗಳಿಗೆ (ಉದಾ. ೨೮) ಸ್ಫೋಟಸಿದ್ಧಾಂತದ ಆಸರೆಯಿರುವಂತೆ ಕಾಣುತ್ತದೆ. ಶ್ರೀ ಶಂಕರಭಗವತ್ಪಾದರು ಸ್ಫೋಟವಾದದ ಖಂಡನಕೋಸ್ಕರ ಅದನ್ನು ಮಂಡಿಸುವಲ್ಲಿ ಹೇಳುವ ಮಾತುಗಳ ಸ್ಪಷ್ಟನೆರಳು ಮತಂಗನಲ್ಲಿ ಕಂಡುಬರುತ್ತದೆ. ಇದನ್ನು ಬೇರೆಡೆ (‘ಶ್ರುತಿ, ಧ್ವನಿ ಆಂಡ್ ಸ್ಫೋಟ’) ವಿವರವಾಗಿ ಚರ್ಚಿಸಿದ್ದೇನೆ (ಪು. ೩೦-೪೭). ಅಷ್ಟೇ ಅಲ್ಲದೆ ವಾಕ್ಯಪದೀಯವು ಪ್ರತಿಪಾದಿಸುವ ಕೆಲವು ವಿಷಯಗಳಿಗೆ (ಉದಾ. ನಾದವು ಜ್ಯೋತಿ, ಸ್ವರದ ನಿತ್ಯತ್ವ, ಶ್ರುತಿಯ ಅಂತರವೆಂಬ ಶ್ರತಿ ಶ್ರುತಿಪ್ರಭೇದ, ಶ್ರುತಿಸ್ವರಗಳಲ್ಲಿ ಬಿಂಬ-ಪ್ರತಿಬಿಂಬ ಸಂಬಂಧ, ಸ್ವರದಲ್ಲಿ ಶ್ರುತಿಗಳ ನಿರ್ದಿಷ್ಟಕ್ರಮ, ಸ್ವರವು ಶ್ರುತಿಯಿಂದ ಅಭಿವ್ಯಕ್ತವಾಗುವಂತೆ ಶಬ್ದವು ಧ್ವನಿಯಿಂದ ಅಭಿವ್ಯಕ್ತವಾಗುತ್ತದೆ, ಇತ್ಯಾದಿ ಬೃಹದ್ದೇಶಿಯಲ್ಲಿ ಪರಸ್ಪರತೆಯು ಕಂಡುಬರುತ್ತದೆ.

ಆಯುರ್ವೇದ ವಿದ್ಯೆಯ ಮುಖ್ಯ ಪ್ರಮೇಯಗಳನ್ನೂ ಸಂಗೀತಶಾಸ್ತ್ರಕ್ಕೆ ಅವುಗಳ ಅನ್ವಯವನ್ನೂ ಗ್ರಂಥಕಾರನು ಚೆನ್ನಾಗಿ ತಿಳಿದಿದ್ದಾನೆ. ಉದಾಹರಣೆಗೆ, ಶಾರೀರದಲ್ಲಿ ಇಂದ್ರಿಯವೈಗುಣ್ಯದಿಂದಾಗುವ ಸಹಜ, ದೋಷಜ ಮತ್ತು ಅಭಿಘಾತಜಗಳೆಂಬ ಮೂರು ಬಗೆಯ ಶ್ರುತ್ಯುತ್ಪಾದನವನ್ನು ಹೇಳುತ್ತಾನೆ.(೩೩), ಆಯುರ್ವೇದದ ಪ್ರಾಥಮಿಕ ತತ್ತ್ವವಾದ ತ್ರಿದೋಷವನ್ನು, ಎಂದರೆ ವಾತ, ಪಿತ್ತ, ಕಫ, ಸನ್ನಿಪಾತಗಳನ್ನೂ ಇವುಗಳ ವೈಷಮ್ಯದಿಂದ ಹುಟ್ಟುವ ಚರ್ತುವಿಧ ಶಾರೀರ ಶ್ರುತಿಯನ್ನೂ (ತುಂಬುರುವನ್ನು ಅನುಸರಿಸಿ) ಹೇಳುವುದಲ್ಲದೆ (೩೪-೩೬), ಶರೀರಕ್ಕೆ ಆಧಾರವಾದ ಸಪ್ತಧಾತುಗಳನ್ನೂ ರಸಗಳನ್ನೂ ಪ್ರಸಿದ್ಧ ಆಯುರ್ವೇದಾಚಾರ್ಯನಾದ ಸುಶ್ರುತನ ಸುಶ್ರುತ ಸಂಹಿತೆಯಿಂದ (೫.೮.೭೯) ಉದ್ಧರಿಸಿಕೊಳ್ಳುತ್ತಾನೆ (೧೪೦-೧೪೨). ಮತಂಗನು ತತ್ತ್ವಜಿಜ್ಞಾಸೆಯಲ್ಲಿ ಪ್ರಗಲ್ಭನೆನ್ನುವುದಕ್ಕೆ ವಿಪುಲವಾಗಿ ಆಧಾರವಿದೆ: ಇದು ಸ್ವರಗಳಿಗೂ ಶ್ರುತಿಗಳಿಗೂ ಇರುವ ಸಂಬಂಧವನ್ನು ತಾದಾತ್ಮ್ಯ, ವಿವರ್ತ, ಕಾರ್ಯತ್ವ, ಪರಿಣಾಮ, ಅಭಿವ್ಯಂಜನ, ಅವಯವಿ ಮುಂತಾದವುಗಳಲ್ಲಿ ವಿಭಾಗಿಸಿಕೊಂಡು ಅವುಗಳ ಮಂಡನೆ-ಖಂಡನೆಗಳನ್ನು ಸಂಕ್ಷೇಪವಾಗಿಯೂ ಸಮರ್ಥವಾಗಿಯೂಸ ಮಾಡುತ್ತಾನೆ (೬೧-೭೯). ಇದರಲ್ಲಿ ಬೌದ್ಧಮತದ ನಿರಾಕರಣವೂ ಇದೆಯೆಂಬುದನ್ನು ಗಮನಿಸಬಹುದು (೬೧). ಅಲ್ಲದೆ ಶಬ್ದವು (ಆದುದರಿಂದ ಸ್ವರವು) ನಿತ್ಯವೆ ಅಲ್ಲವೆ, ವ್ಯಾಪಕವೆ ಅಲ್ಲವೆ ಎಂಬ ಪೂರ್ವಮೀಮಾಂಸಾಪ್ರಸಿದ್ಧವಾದ ಜಿಜ್ಞಾಸೆಯನ್ನು ಕೈಗೆತ್ತಿಕೊಂಡು, ಅದು ನಿತ್ಯ ವ್ಯಾಪಕ ಎಂಬ ನಿಲುವನ್ನು ಅನ್ಯ(ಜೈನ? ಚಾರ್ವಾಕ?) ಮತ ನಿರಾಕರಣಪೂರ್ವಕವಾಗಿ ಸಮರ್ಥಿಸಿಕೊಳ್ಳುತ್ತಾನೆ (೯೯-೧೦೨). ಆತನ ಆಗಮಶಾಸ್ತ್ರ ಪರಿಚಯವು ಸ್ವರೋದ್ಭವ ಸ್ಥಾನ ವರ್ಣನದಿಂದ (೧೪೪-೧೫೧) ಗೊತ್ತಾಗುತ್ತದೆ. ಸ್ವರಗಳನ್ನು ಸಂಬಂಧಿಸಿದ ನಾದವಿಜ್ಞಾನದಲ್ಲಿ ಒಂದು ಮುಖ್ಯಪ್ರಮೇಯವಾದ ಊರ್ಧ್ವಗಮನಪ್ರವೃತ್ತಿಯು (formant) ಸಾವಿರದ ಮುನ್ನೂರು ವರ್ಷಗಳಷ್ಟು ಹಿಂದೆಯೇ ಮತಂಗಮುನಿಗೆ ತಿಳಿದಿತ್ತೆಂಬುದು(೧೦೭, ೧೦೮) ವಿಸ್ಮಯಕರವೂ ಅಭಿಮಾನಾಸ್ಪದವೂ ಆಗಿದೆ. ಅಂತೆಯೇ ಗಣಿತಶಾಸ್ತ್ರ ಪ್ರಮೇಯಗಳಾದ ಪ್ರಸ್ತಾರದ ವ್ಯುತ್ಕ್ರಮವೂ (permutation), ನಷ್ಟ ಉದ್ದಿಷ್ಟಾದಿ ಪ್ರತ್ಯಯಗಳೂ ಅವನಿಗೆ ತಿಳಿದಿದ್ದವು (೨೪೭, ೨೫೨-೨೫೬). (ಅವನ ಪೂರ್ವಾಚಾರ್ಯನಾದ ದತ್ತಿಲಮುನಿಗೂ ಇವು ಗೊತ್ತಿದ್ದವು.) ವೇದವಿದನೂ ಶ್ರೋತ್ರಿಯನೂ ಆಗಿದ್ದ ಮತಂಗನಿಗೆ ಯಜ್ಞ, ಯಾಗಾದಿಗಳಲ್ಲಿ ಪರಿಚಯವೂ ಅವುಗಳ ಸಂಗೀತಶಾಸ್ತ್ರಿಯ ಅನ್ವಯಜ್ಞಾನವೂ ಇದ್ದವು (೨೧೮-೨೩೦).

ಭರತಮುನಿಯು ಸಂಗೀತವನ್ನು ನಾಟ್ಯಪ್ರಸಕ್ತಿಯಲ್ಲಿ ವರ್ಣಿಸುತ್ತಾನಷ್ಟೆ (ನಾಶಾ. ಅಧ್ಯಾಯಗಳು ೨೮-೩೪). ಕೋಹಲ ಕಶ್ಯಪಾದಿ ಮುನಿಗಳೂ ಹೀಗೆಯೇ ಮಾಡುವಂತೆ ಕಾಣುತ್ತದೆ. ಉಪಲಬ್ಧ ಸಂಗೀತಶಾಸ್ತ್ರ ಗ್ರಂಥಗಳ ಪೈಕಿ ಸಂಗೀತವನ್ನು ಪ್ರತ್ಯೇಕ ಶಾಸ್ತ್ರವೆಂದು ಮೊದಲನೆಯ ಬಾರಿಗೆ ನಿರೂಪಿಸಿರುವುದು ಮತಂಗಮುನಿಯ ಬೃಹದ್ದೇಶಿಯೇ. ಆದರೆ ಬೃಹದ್ದೇಶಿಯಲ್ಲೂ ನಾಟಕದ ಪ್ರಸಕ್ತಿಯಿಲ್ಲದಿಲ್ಲ. ಹೀಗೆ ನಾಟಕದಲ್ಲಿ ಧ್ರುವಾಪ್ರಯೋಗವನ್ನೂ ವಿವಿಧ ಸಂಧಿಗಳಲ್ಲಿ ವಿವಿಧ ರಾಗಗಳನ್ನೂ, ವಿವಿಧ ಪ್ರೇಕ್ಷಣಕ(=ದೃಶ್ಯ)ಗಳಲ್ಲಿ ವಿವಿಧ ರಾಗಗಳನ್ನೂ, ಬೇರೆ ಬೇರೆ ರಸೋಚಿತವಾದ ಸಂದರ್ಭಗಳಲ್ಲಿ ಬೇರೆ ಬೇರೆ ಮೂರ್ಛನಾಪೂರ್ವಕವಾದ ಜಾತಿಗಳನ್ನೂ ವಿನಿಯೋಗಿಸುವುದು ಬೃಹದ್ದೇಶಿಯಲ್ಲಿ ಕಂಡುಬರುತ್ತದೆ. (೪೪೩, ೪೪೫, ೫೨೮-೫೪೫, ೬೨೨, ೬೨೯, ೬೪೨, ೭೩೨).

(ಈ) ಶ್ರೀವಿದ್ಯಾಉಪಾಸಕ

ಮತಂಗಮುನಿಯು ವೈದಿಕಮಾರ್ಗದ ತಾಂತ್ರಿಕನಾಗಿದ್ದನೆಂಬುದು ಹಲವು ಸಂಗತಿಗಳಿಂದ ಸ್ಥಿರಪಡುತ್ತದೆ. ಗ್ರಂಥಾದಿಯಲ್ಲೇ ಅವನು ಭಾಷಾಮೂಲಗಳಾಗಿರುವ ಸ್ವರವ್ಯಂಜನಗಳು ಜಗಜ್ಯೋತಿಯ ರೂಪಗಳು ಎಂದು ವರ್ಣಿಸಿ ಅದರಿಂದಲೇ ಜಗಜ್ಯೋತಿಯನ್ನೂ ಸಂಗೀತಮೂಲವಾದ ಷಡ್ಜಾದಿ ಸ್ವರಗಳನ್ನೂ ಬಿಂದು-ನಾದ-ಮಾತ್ರಾ-ವರ್ಣ ಎಂಬ ವಿಕಾಸಕ್ರಮದಲ್ಲಿ ಪಡೆಯುತ್ತಾನೆ (೫-೭). ಇದರ ಹಿಂದೆ ಗ್ರಂಥಲೋಪವಿದೆ. ಇಲ್ಲಿ ನಾದ ಮತ್ತು ಕಾರಣಬಿಂದುವನ್ನು ಹೇಳಿದೆಯೆಂದು ಇಟ್ಟುಕೊಳ್ಳಬೇಕು (ನೋಡಿ: ಪಾಠವಿಮರ್ಶೆ ೪,೫). ಗ್ರಂಥಲೋಪದಲ್ಲಿ ಕಾರಣಬಿಂದುವನ್ನೂ ಉಪಲಬ್ಧ ಗ್ರಂಥದಲ್ಲಿ ಕಾರ್ಯಬಿಂದುವನ್ನೂ ಹೇಳಿದೆಯೆದೆಂಬುದು ಸ್ಪಷ್ಟವಾಗಿದೆ. ಇದು ಸಂಪೂರ್ಣವಾಗಿ ತಂತ್ರಶಾಸ್ತ್ರೀಯವಾದ ನಿಲುವು : ಲಲಿತಾಸಹಸ್ರನಾಮದಲ್ಲಿ ‘ಪರಾ’ ಎಂಬ (೩೬೬ನೆಯ) ನಾಮಕ್ಕೆ ಭಾಷ್ಯವನ್ನು ಬರೆಯುತ್ತ ಭಾಸುರಾನಂದನಾಥರು ಸೌಭಾಗ್ಯಭಾಸ್ಕರದಲ್ಲಿ ನಾದಶಾಸ್ತ್ರೀಯ ದೃಷ್ಟಿಯಿಂದಲೂ ಶಬ್ದಬ್ರಹ್ಮವಾದದಿಂದಲೂ ಬ್ರಹ್ಮಾಂಡ-ಪಿಂಡಾಂಡಗಳ ಸೃಷ್ಟಿಯನ್ನು ಕುರಿತು ಪ್ರಾಮಾಣಿಕವೂ ಪ್ರಾಚೀನವೂ ಆದ ತಂತ್ರಶಾಸ್ತ್ರೀಯ ಆಕರಗಳನ್ನು ಆಧರಿಸಿಕೊಂಡು ಹೀಗೆನ್ನುತ್ತಾರೆ (೫.ಜ್ವಾಲಿನೀಕಲಾ, ೩೬೬:೯೮-೧೦೦): ಪ್ರಲಯದಲ್ಲಿ ಜೀವರುಗಳ ಕರ್ಮಗಳು ಪಕ್ವವಾಗುತ್ತದ್ದು ಅಪಕ್ವಾವಸ್ಥೆಯು ಕಳೆಯುತ್ತ ಬಂದಾಗ ಬ್ರಹ್ಮವು ವಿಚಿಕೀರ್ಷ, ಎಂದರೆ ಕರ್ಮಾಭಿವ್ಯಕ್ತಿಯ ಆಕಾಂಕ್ಷೆಯನ್ನುಳ್ಳದ್ದು, ಎಂಬ ಸಂಜ್ಞೆಯನ್ನು ಪಡೆಯುತ್ತದೆ. ಕರ್ಮಗಳುಸ ಪಕ್ವವಾಗುತ್ತ ಬಂದಾಗ ಮಾಯೆಯಿಂದ ಉಪಹಿತವಾಗಿ ಅದು ಅವ್ಯಕ್ತವೆನ್ನಿಸಿಕೊಳ್ಳುತ್ತದೆ. (ಹೋಲಿಸಿ: ೧೩). ಇದು ತ್ರಿಗುಣಾತ್ಮಕವಾದುದು. ಬ್ರಹ್ಮಾಂಡದ ಸೃಷ್ಟಿಗೆ ಮೊಳಕೆಯೆದ್ದ ಗೆಡ್ಡೆ (ಕಂದ)ಯಂತಿರುವ ಇದಕ್ಕೆ ಕಾರಣಬಿಂದುವೆಂದು ಹೆಸರು. ಪ್ರಪಂಚಸಾರತಂತ್ರವು ಇದನ್ನು ‘ವಿಚಿಕೀರ್ಷರ್ಘನೀಭೂತಾ ಸಾ ಚಿದಭ್ಯೇತಿ ಬಿಂದುತಾಂ’‘ ಎಂದು ವರ್ಣಿಸುತ್ತದೆ. ಈ ಕಾರಣಬಿಂದುವಿನಿಂದ ಕ್ರಮವಾಗಿ ಕಾರ್ಯಬಿಂದುವೂ ಅದರಿಂದ ನಾದವೂ ಅದರಿಂದ ಬೀಜವೂ ಉತ್ಪತ್ತಿಯಾಗುತ್ತವೆ. ಇದಕ್ಕೆ ಕ್ರಮವಾಗಿ ಕಾರ್ಯಬಿಂದುವೂ ಆದರಿಂದ ನಾದವೂ ಅದರಿಂದ ಬೀಜವೂ ಉತ್ಪತ್ತಿಯಾಗುತ್ತವೆ.ಇದಕ್ಕೆ ಕ್ರಮವಾಗಿ ಪರಾ, ಸೂಕ್ಷ್ಮ, ಸ್ಥೂಲ ಎಂಬ ಹೆಸರುಗಳಿವೆ. (ಲಲಿತೆಯ ನಾಮವು ಪರಾ ಎಂದಿದ್ದು ಇದು ಸೃಷ್ಟಿಯ ಉನ್ಮುಖಾವಸ್ಥೆಯ ಅಥವಾ ಸೃಷ್ಟಿಪ್ರವೃತ್ತಿಯ ಸೂಚನೆಯಾಗಿದೆ). ಇವು ಕ್ರಮವಾಗಿ ಚಿತ್, ಚಿದಚಿತ್ ಮತ್ತು ಅಚಿತ್ ಸ್ವರೂಪದ್ದಾಗಿರುತ್ತವೆ. ಇದನ್ನೇ ರಹಸ್ಯಾಗಮವು

          ಕಾಲೇನ ಭಿದ್ಯಮಾನಸ್ತು ಸ ಬಿಂದುರ್ಭವತಿ ತ್ರಿಧಾ |
ಸ್ಥೂಲಸೂಕ್ಷ್ಮಪರತ್ವೇನ ತಸ್ಯ ತ್ರೈವಿಧ್ಯಮಿಷ್ಯತೇ |
ಸ ಬಿಂದುನಾದಬೀಜತ್ವಭೇದೇನ ಚ ನಿಗದ್ಯತೇ |

ಎಂದು ವಿವರಿಸುತ್ತದೆ. ಕಾರಣಬಿಂದು, ಪರಾ, ಸೂಕ್ಷ್ಮ ಮತ್ತು ಸ್ಥೂಲಗಳಿಗೆ ಕ್ರಮವಾಗಿ ಅವ್ಯಕ್ತ ಈಶ್ವರ, ಹಿರಣಯಗರ್ಭ ಮತ್ತು ವಿರಾಟ್‌ಗಳು ಅಧಿದೈವಗಳು ಶಾಂತಾ, ವಾಮಾ, ಜ್ಯೇಷ್ಠಾ ಮತ್ತು ರೌದ್ರೀಗಳು ಮತ್ತು ಅಂಬಿಕಾ, ಇಚ್ಛಾ, ಜ್ಞಾನ ಮತ್ತು ಕ್ರಿಯಾಗಳು ಶಕ್ತಿಗಳು, ಕಾಮರೂಪಾ, ಪೂರ್ಣಗಿರಿ, ಜಾಲಂಧರ ಮತ್ತು ಓಡ್ಯಾಣಪೀಠಗಳು ಅಧಿಭೂತಗಳು; ಹೀಗೆಂದು ನಿತ್ಯಾಹೃದಯ ತಂತ್ರದಲ್ಲಿ ವಿವರಿಸಿದೆ.

ಆಧ್ಯಾತ್ಮದಲ್ಲಿ, ಎಂದರೆ ಶಾರೀರಕವಾಗಿ, ಕಾರಣಬಿಂದುವು ಮೂಲಾಧಾರಚಕ್ರದಲ್ಲಿದೆ; ಶಕ್ತಿ, ಪಿಂಡ (ಒಂದೇ ಬೀಜಾಕ್ಷರವಿರುವ ಮಂತ್ರ), ಕುಂಡಲಿನೀ ಎಂಬ ಹೆಸರುಗಳನ್ನು ಹೊಂದಿದೆ. ಲಘುಸ್ತವದಲ್ಲಿ ಶ್ರೀ ಶಂಕರಭಗವತ್ಪಾದರು ಇದನ್ನೇ ‘ಶಕ್ತಿಃ ಕುಂಡಲಿನೀತಿ ವಿಶ್ವಜನನ ವ್ಯಾಪಾರಬದ್ಧೋದ್ಯಮಾಂ ಜ್ಞಾತ್ವೇತ್ಥಂನ ಪುನರ್ವಿಶಂತಿ ಜನನೀಗರ್ಬೇsರ್ಭಕತ್ವಂ ನರಾಃ’ ಎಂದು ವಿವರಿಸಿದ್ದಾರೆ. ಪರಾ ಇತ್ಯಾದಿ ವಿಕಾಸಾವಸ್ಥೆಗಳ ವಿಭಾಗವಿಲ್ಲದಿರುವಾಗಿದು ಕಾರಣಬಿಂದು; ಕಾರ್ಯಬಿಂದು ಇತ್ಯಾದಿಗಳನ್ನು ವಿಕಾಸಪಡಿಸಲು ಅದು ಮೊಳಕೆಯೊಡೆದಾಗ, ಅವ್ಯಕ್ತವಾದ ಈ ನಾದಕ್ಕೆ ಶಬ್ದಬ್ರಹ್ಮವೆಂದು ಹೆಸರು:: ‘ಬಿಂದೋಸ್ತಸ್ಮಾದ್ ಭಿದ್ಯಮಾನಾದ್ ಅವ್ಯಕ್ತಾತ್ಮಾ ರವೋ sಭವತ್ / ಸ ರವಃ ಶ್ರುತಿಸಂಪನ್ನೈಃ ಶಬ್ದಬ್ರಹ್ಮೇತಿ ಗೀಯತೇ’. ಕಾರಣಬಿಂದುವಿನೊಡನೆ ತಾದಾತ್ಮ್ಯವಿರುವುದರಿಂದ ಈ ರವವು ಸರ್ವವ್ಯಾಪಕವಾದರೂ ತನ್ನನ್ನು ಅಭಿವ್ಯಕ್ತಿಪಡಿಸಿಕೊಳ್ಳುವ ಇಚ್ಛೆಯೆಂಬ ಪ್ರಯತ್ನದಿಂದಾಗಿ ಸುಸಂಸ್ಕೃತವಾಗಿ ದೇಹಿಯ ಮೂಲಾಧಾರ ಚಕ್ರದಲ್ಲಿ (ಪ್ರಾಣ) ವಾಯುವಿನಿಂದ ಪ್ರಪ್ರಥಮವಾಗಿ ಗೋಚರವಾಗುತ್ತದೆ. ಅದು ಮೂಲಧಾರದಲ್ಲಿ ಸ್ಪಂದವಿಲ್ಲದೆ ಇರುವಾಗ ಪರಾ ಎನ್ನಿಸಿಕೊಳ್ಳುತ್ತದೆ. ಅದೇ ಶಬ್ದಬ್ರಹ್ಮವು ಅದೇ (ಪ್ರಾಣ) ವಾಯುವಿನಿಂದ ಉತ್ಪನ್ನವಾಗಿ ನಾಭಿಯವರೆಗೆ ಚಲಿಸಿ ವಿಮರ್ಶರೂಪವಾದ ಮನಸ್ಸನ್ನು ಕೂಡಿಕೊಂಡರೆ ಸಾಮಾನ್ಯಸ್ಪಂದಯುತವಾಗಿ ಪ್ರಕಾಶರೂಪವಾದ ಕಾರ್ಯಬಿಂದುವಿನ ಅವಸ್ಥೆಯನ್ನು ಪಡೆದು ಪಶ್ಯಂತೀ ಎನ್ನಿಸಿಕೊಳ್ಳುತ್ತದೆ. ಅದೇ ಶಬ್ದಬ್ರಹ್ಮವು ವಾಯುವಿನೊಡನೆ ಹೃದಯದವರೆಗೆ ಚಲಿಸಿ ಅಲ್ಲಿ ಅಭಿವ್ಯಕ್ತವಾದಾಗ ಮಧ್ಯಮವಾಕ್ ಎಂಬ ಸಂಜ್ಞೆಯನ್ನು ಪಡೆಯುತ್ತದೆ. ನಂತರ ಅದೇ ಶಬ್ದಬ್ರಹ್ಮವು ಅದೇ ವಾಯುವಿನೊಡನೆ ವದನಪ್ರಾಂತ್ಯವನ್ನು ಸೇರಿ ಕಂಠಾದಿಸ್ಥಾನಗಳಲ್ಲಿ ಅಭಿವ್ಯಕ್ತವಾಗಿ ಆಕಾರಾದಿವರ್ಣರೂಪದಲ್ಲಿ ಕಿವಿಗೆ ಗೋಚರವಾಗಿ ಪ್ರಕಾಶರೂಪವಾಗಿರುವುದೇ ವೈಖರೀ ವಾಕ್ ಎನ್ನಿಸುತ್ತದೆ. ಇದನ್ನೇ ಶ್ರೀ ಶಂಕರಭಗವತ್ಪಾದರು

‘ಮೂಲಾಧಾರಾತ್ ಪ್ರಥಮಮುದಿತೋ ಯಶ್ಚ ಭಾವಃ ಪರಾಖ್ಯಃ ಪಶ್ಚಾತ್ ಪಶ್ಯಂತ್ಯಥ ಹೃದಯಗೋ ಬುದ್ದಿಯುಜ್ ಮಧ್ಯಮಾಖ್ಯಃ | ಸ ವ್ಯಕ್ತೇ ವೈಖರ್ಯಥ ರುರುದಿಶೋರಸ್ಯ ಜಂತೋಃ ಸುಷುಮ್ಣಾಬದ್ಧಸ್ತಸ್ಮಾದ್ ಭವತಿ ಪವನೇ ಪ್ರೇರಿತಾ ವರ್ಣಸಂಜ್ಞಾ’

ಎಂದರೆ ನಿತ್ಯಾತಂತ್ರವು

            ಮೂಲಾಧಾರೇ ಸಮುತ್ಪನ್ನಃ ಪರಾಖ್ಯೇ ನಾದಸಂಭವಃ |
ಸ ಏವೋರ್ಧ್ವತಯಾ ನೀತಃ ಸ್ವಾಧಿಷ್ಠಾನೇ ವಿಜೃಂಭಿತಃ |
ಪಶ್ಯಂತ್ಯಾಖ್ಯಾಮವಾಪ್ನೋತಿ ತಥೈವೋರ್ಧ್ವಂ ಶನೈಃ ಶನೈಃ |
ಅನಾಹತೇ ಬುದ್ಧಿತತ್ತ್ವ ಸಮೇತೋ ಮಧ್ಯಮಾಭಿಧಃ |
ತಥಾ ತಯೋರ್ಧ್ವನುನ್ನಃ ಸನ್
ವಿಶುದ್ಧೌ ಕಂಠದೇಶತಃ |
ವೈಸ್ವರ್ಯಖ್ಯ….

ಎಂದು ನಿರೂಪಿಸುತ್ತದೆ. ನಾದಬಿಂದುಮೂಲಕವಾದ ಬ್ರಹ್ಮಾಂಡಸೃಷ್ಟಿಯನ್ನು ಶಾರದಾತಿಲಕವು (೧.೭.೧೩) ಹೀಗೆ ಸಂಕ್ಷೇಪಿಸುತ್ತದೆ:

            ಆಸೀಚ್ಛಕ್ತಿಸ್ತತೋ ನಾದೋ ನಾದಾದ್ ಬಿಂದುಸಮುದ್ಬವಃ |
ಪರಾಶಕ್ತಿಮಯಃ ಸಾಕ್ಷಾತ್ ತ್ರಿಧಾsಸೌ ಭಿದ್ಯತೇ ಪುನಃ |
ಬಿಂದುರ್ನಾದೋಸ ಬೀಜಮಿತಿ ತಸ್ಯ ಭೇದಾಃ ಸಮೀರಿತಾಃ |
ಬಿಂದುಃ ಶಿವಾತ್ಮಕೋ ಬೀಜಂ ಶಕ್ತಿರ್ನಾದಸ್ತಯೋರ್ಮಿಥಃ |
ಸಮವಾಯಃ ಸಮಾಖ್ಯಾತಃ ಸರ್ವಾಗಮವಿಶಾರದೈಃ |
ರೌದ್ರೀ ಬಿಂದೋಸ್ತತೋ ನಧಾಜ್ಜ್ಯೇಷ್ಠಾ ಬೀಜಾದಜಾಯತ |
ವಾಮಾ, ತಾಭ್ಯಃ ಸಮುತ್ಪನ್ನಾ ರುದ್ರಬ್ರಹ್ಮರಮಾಧಿಪಾಃ |
ಸಜ್ಞಾನೇಚ್ಛಾಕ್ರಿಯಾತ್ಮನೋ ವಹ್ನೇಂದ್ವರ್ಕಸ್ವರೂಪಿಣಃ |
ಶಬ್ದಬ್ರಹ್ಮೇತಿ ತಾಂ ಪ್ರಾಹುಃ ಸರ್ವಾಗಮವಿಶಾರದಾಃ |
ಶಬ್ದಬ್ರಹ್ಮೇತಿ ಶಬ್ದಾರ್ಥಂ ಶಬ್ದಮಿತ್ಯಪರೇ ವಿದುಃ (ಜಗುಃ) |
ನ ಹಿ ತೇಷಾಂ ತಯೋಃ ಸಿದ್ಧಿರ್ಜ್ಜಡತ್ವಾದುಭಯೋರಪಿ |
ಚೈತನ್ಯಂ ಸರ್ವಭೂತಾನಾಂ ಶಬ್ದಬ್ರಹ್ಮೇತಿ ಮೇ ಮತಿಃ |

ಈ ಸೃಷ್ಟಿವಾದವನ್ನು ಗಮನಿಸಿದಾಗ ಹಾಗೂ ಮತಂಗನು ಪರಾಶಕ್ತಿಯನ್ನು ಉಲ್ಲೇಖಿಸಿದ್ದಾನೆಂಬುದನ್ನು ನೆನೆದಾಗ (೧೯) ಮತಂಗನು ವೈದಿಕ ತಾಂತ್ರಿಕನೆಂದೂ ಅದರಲ್ಲಿಯೂ ವಿಶೇಷವಾಗಿ ಶ್ರೀವಿದ್ಯಾತಂತ್ರವಾದಿಯೆಂದೂ ಹೇಳಬಹುದು. ಸ್ವರ-ಶ್ರುತಿಗಳ ನಡುವೆ ಇರುವ ತಾದಾತ್ಮ್ಯಾದಿ ಸಂಬಂಧಗಳನ್ನು ವಿವೇಚಿಸುವಾಗ ಅವನು ಪರಿಣಾಮವಾದ ಮತ್ತು ಅಭಿವ್ಯಕ್ತಿವಾದಗಳನ್ನು ಒಪ್ಪಿಕೊಳ್ಳುತ್ತಾನೆ (೬೮). ಇದು ಅದೈತಿಗಳಾದ ತಾಂತ್ರಿಕರ, ಉದಾ. ಶ್ರೀ ಶಂಕರಭಗವತ್ಪಾದರ (ಸೌಂದರ್ಯಲಹರಿಯಲ್ಲಿನ) ನಿಲುವು. ಮತಂಗನು ಸ್ವರಗಳ ತಾಂತ್ರಿಕ ಉಪಾಸನೆಗೆ ಅನುಕೂಲಿಸುವಂತೆ ಸ್ವರಮೂರ್ತೀಕರಣ ತಂತ್ರಗಳನ್ನು ಭಾರತೀಯ ಸಂಗೀತಶಾಸ್ತ್ರದಲ್ಲಿ ಮೊದಲನೆಯ ಬಾರಿಗೆ ಉದ್ಘಾಟಿಸಿದಾನೆ (೧೫೨-೧೬೪). ಕೋಹಲನು ಕೋಹಲಮತದಲ್ಲಿ ಸ್ವರೋಪಾಸನೆಗೆ ಬೇಕಾಗುವ ಧ್ಯಾನಶ್ಲೋಕ, ಮಂತ್ರ, ಮಂತ್ರದ ಬೀಜ, ಶಕ್ತಿ, ಕೀಲಕ, ಇತ್ಯಾದಿಗಳನ್ನು ಹೇಳಿದ್ದಾನೆಂಬುದನ್ನು ಇಲ್ಲಿ ಸ್ಮರಿಸಬಹುದು.

ಬೃಹದ್ದೇಶೀಕರ್ತೃವಾದ ಮತಂಗಮುನಿಯು ಶ್ರೀವಿದ್ಯಾ ಉಪಾಸಕನಾಗಿದ್ದನೆಂಬುದಕ್ಕೆ ನೇರವಾದ ಸಾಕ್ಷ್ಯಗಳು ಗ್ರಂಥದಲ್ಲಿಯೇ ದೊರೆಯುತ್ತವೆ: ಅವನು ಶ್ರೀಕಂಠೀ ಎಂಬ ರಾಗವನ್ನು ಲಲಿತಾದೇವತೆಯ ಸ್ತುತಿಯಲ್ಲಿ ವಿನಿಯೋಗಿಸಬೇಕೆಂದು ಹೇಳಿದ್ದಾನೆ (೮೯೭). ರಾಗಗಳಿಗೆ (ನಾಟಕಾದಿಗಳಲ್ಲಿ) ಅನೇಕ ವಿನಿಯೋಗಗಳನ್ನು ಅವನು ಹೇಳಿದ್ದರೂ ದೇವತಾಸ್ತುತಿಯೊಂದರಲ್ಲಿ ಹೇಳಿರುವುದು ಇದೊಂದನ್ನೇ. ಶ್ರೀಕಂಠೀ ಎಂಬ ಹೆಸರು ಲಲಿತೆಯ ಒಂದು ನಾಮವೇ ಆಗಿದೆಯಷ್ಟೆ (ಶ್ರೀಕಂಠಾರ್ಧಶರೀರಿಣೀ, ೩೯೨) ಅಲ್ಲದೆ ದೇಶೀರಾಗಾಧ್ಯಾಯದ ಮಂಗಲಾಚರಣವನ್ನು ಅವನು ಈ ಶ್ಲೋಕದಿಂದ ಮಾಡಿದ್ದಾನೆ (೧೦೩೭):

            ಬಂಧೂಕಾಭಾಂ ತ್ರಿನೇತ್ರಾಂ ಅಮೃತಕಲಕಲಾಶೇಖರಾಂ ರಕ್ತವಸ್ತ್ರಾಂ
ಪೀನೋತ್ತುಂಗ ಪ್ರವೃತ್ತಸ್ತನಭರನಮಿತಾಂ ಯೌವನಾರಂಭರೂಢಾಮ್
|
ಸರ್ವಾಲಂಕಾರಭೂಷಾಂ ಸರಸಿಜನಿಲಯಾಂ ಬೀಜಸಂಕ್ರಾಂತಮೂರ್ತಿಮ್
ದೇವೀಂ ಪಾಶಾಂಕುಶಾಡ್ಯಾಂ ಅಭಯವರಕರಾಂ ವಿಶ್ವಯೋನಿಂ ನಮಾಮಿ ||

ಇದು ಶ್ರೀವಿದ್ಯೆಯ ಅತ್ಯುನ್ನತಸ್ತರವಾದ ಷೋಡಶೀವಿದ್ಯೆಯ ಧ್ಯಾನಶೋಕವೆಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಈ ಶ್ಲೋಕದಿಂದ ಬೃಹದ್ದೇಶಿಯ ಕರ್ತೃವು ಶ್ರೀವಿದ್ಯೆಯ ಕಾದಿಮಾರ್ಗದ (ಬಹುಶಃ ದಕ್ಷಿಣಾಮೂರ್ತಿ ಸಂಪ್ರದಾಯದ) ದಶಮಹಾವಿದ್ಯೆಗಳಲ್ಲಿ ಮೂರನೆಯದಾದ ಷೋಡಶೀ ಉಪಾಸಕನೆಂಬುದು ಸಿದ್ಧವಾಗುತ್ತದೆ.

(ಉ) ಶಿಷ್ಟತಂತ್ರದಲ್ಲಿ ಮಾತಂಗೀ

ತಂತ್ರಶಾಸ್ತ್ರದಲ್ಲಿ ವಿಶೇಷವಾಗಿ ಶ್ರೀವಿದ್ಯೆಯಲ್ಲಿ ಮತಂಗನ ಮತ್ತು ಮತಂಗಸಂಬಂಧಿತವಾದ ಹೆಸರುಗಳು ಗಮನಾರ್ಹರೀತಿಯಲ್ಲಿ ಬರುತ್ತವೆಂಬುದು ಸ್ವಾರಸ್ಯವಾಗಿದೆ. ಈ ಮಾತು ಶಿಷ್ಟಪದ ಶಾಕ್ತತಂತ್ರಕ್ಕೂ ಜಾನಪದ ಶಾಕ್ತತಂತ್ರಕ್ಕೂ ಸಮಾನವಾಗಿ ಸಲ್ಲುತ್ತದೆ. ಶೈವತಂತ್ರಕ್ಕೂ ಶಾಕ್ತತಂತ್ರಕ್ಕೂ ಬಹು ನಿಕಟವಾದ ಸಂಬಂಧವಿದೆ, ಎರಡೂ ಅನೇಕ ಸಂಬಂಧಗಳಲ್ಲಿ ಪರಸ್ಪರ ಪೂರಕವಾಗಿವೆ. ಈಗ ದೊರೆತಿರುವ ಇಪ್ಪತ್ತೆಂಟು ಮೂಲಾಗಮಗಳ ಪೈಕಿ ಕರಣ ಮತ್ತು ಸುಪ್ರಭೇದಗಳೂ ಸುಮಾರು ಇನ್ನೂರು ಉಪಾಗಮಗಳ ಪೈಕಿ ಮೃಗೇಂದ್ರ ಮತ್ತು ಮತಂಗಪಾರಮೇಶ್ವರಗಳೂ ಪ್ರಕಟವಾಗಿವೆ. ಇವು ಶುದ್ಧ ಶೈವದ ಸಾಂಪ್ರದಾಯಿಕ ಗ್ರಂಥಗಳಾಗಿದ್ದು ತಮ್ಮ ಉಪದೇಶವನ್ನು ವಿದ್ಯಾ(ಜ್ಞಾನ), ಯೋಗ, ಕ್ರಿಯಾ ಮತ್ತು ಚರ್ಯಾ ಎಂಬ ನಾಲ್ಕು ಪದಗಳಲ್ಲಿ ವಿಂಗಡಿಸಿ ಹೇಳುತ್ತವೆ. ಮತಂಗಪಾರಮೇಶ್ವರವು ವಿದ್ಯಾ, ಕ್ರಿಯಾ, ಯೋಗ ಮತ್ತು ಚರ್ಯಾ ಎಂಬ ಅನುಕ್ರಮದಲ್ಲಿ ಈ ಪಾದಗಳನ್ನು ಹೊಂದಿದ್ದು ಆತ್ಮಾರ್ಥ (ಖಾಸಗಿ, ವೈಯಕ್ತಿಕ) ಉಪಾಸನೆಗೆಂದು ಹೊರಟಿದೆ. ಶೈವಸಿದ್ಧಾಂತಕ್ಕೆ ಸೇರಿದ ಮಾತಂಗಾಗಮವನ್ನು ತಾನು ಅನಿರುದ್ಧನೆಂಬ ಶೈವವಿದ್ವಾಂಸನೊಡನೆ ಸಹಾಧ್ಯಯನವನ್ನು ಮಾಡಿದುದಾಗಿ ಮಹಾಮಾಹೇಶ್ವರ ಅಭಿನವಗುಪ್ತಪಾದನು ತಂತ್ರಾಲೋಕದಲ್ಲಿ (೯.೬೧;೧೩.೨೯೩, ೨೯೪) ಹೇಳಿಕೊಂಡಿದ್ದಾನೆ. ಅನಿರುದ್ಧನು ಈ ಮತಂಗಶಾಸ್ತ್ರಕ್ಕೆ ಒಂದು ವ್ಯಾಖ್ಯಾನವನ್ನು ಬರೆದಿದ್ದು ಅದನ್ನು ಜಯರಥನು ತಂತ್ರಾಲೋಕಕ್ಕೆ ತಾನು ಬರೆದ ವಿವೇಕವೆಂಬ ವ್ಯಾಖ್ಯಾನದಲ್ಲಿ (೬.ಪು.೨೧೧) ಸೂಚಿಸಿದ್ದಾನೆ.

ಉಪಾಸ್ಯಭೇದದಿಂದಾಗಿ ಶ್ರೀವಿದ್ಯೆಯಲ್ಲಿ ದಶಮಹಾವಿದ್ಯೆಗಳೆಂಬ ಹತ್ತು ಪ್ರಭೇದಗಳಿವೆ. ಇವು ಕಾಲೀ, ತಾರಾ, ಷೋಡಶೀ, ಭುವನೇಶ್ವರಿ, ಭೈರವೀ, ಛಿನ್ನಮಸ್ತಾ, ಧೂಮವತೀ, ಬಗಲಾ, ಮಾತಂಗೀ, ಕಮಲಾ ಎಂಬ ದೇವತೆಗಳ ಉಪಾಸನೆಯನ್ನು ಒಳಗೊಂಡಿವೆ. ಇವುಗಳ ಪೈಕಿ ಒಂಭತ್ತನೆಯದು ಮಾತಂಗೀ ಅವಿರ್ಭಾವವನ್ನು ಕುರಿತು ಒಂದು ಆಖ್ಯಾನವಿದೆ : ಮತಂಗಮುನಿಯು ಮಹಾತಪಸ್ವಿಯೂ, ಪ್ರಭಾವಸಂಪನ್ನನೂ ಎಣೆಯಿಲ್ಲದ ಶಕ್ತಿಸಂಪನ್ನನೂ ಆಗಿದ್ದ ಮಹರ್ಷಿ. ಇವನ ಮಗನಾದ ಮಾತಂಗನು ತಂದೆಗೆ ಸಮನಾಗಿ ಮಹಿಮಾನ್ವಿತನಾಗಿದ್ದವನು. ಅವನೂ ಹಿಮವತ್‌ಪರ್ವತರಾಜನಾದ ಹಿಮವಂತನೂ ಅತ್ಯಂತ ಆತ್ಮೀಯರಾದ ಸ್ನೇಹಿತರಾಗಿದ್ದರು. ಒಮ್ಮೆ ಹಿಮವಂತನು ತಾನು ಪಾರ್ವತಿಯ ತಂದೆಯೆಂದು ಗರ್ವಿಸಿದಾಗ ಮಾತಂಗನು ತಾನೂ ಅಂತಹ ಮಗಳನ್ನು ಪಡೆಯಬೇಕೆಂದು ಸ್ಪರ್ಧೆಯಿಂದ ಲಲಿತಾಪರಮೇಶ್ವರಿಯ ಮಂತ್ರಿಣಿಯಾದ ಬಾಲಾ(=ಶ್ಯಾಮಾ) ದೇವತೆಯನ್ನು ಕುರಿತು ಘೋರತಪಸ್ಸು ಮಾಡಿ ಅವಳನ್ನು ಮೆಚ್ಚಿಸಿ ಅವಳು ತನ್ನ ಮಗಳಾಗಿ ಹುಟ್ಟುವಂತೆ ವರವನ್ನು ಪಡೆದುಕೊಳ್ಳುತ್ತಾನೆ. ಶ್ಯಾಮಾದೇವಿಯು ಮತಂಗಪತ್ನಿಯಾದ ಸಿದ್ಧಿಮತಿಯ ಕನಸಿನಲ್ಲಿ ದರ್ಶನ ನೀಡಿ, ತನ್ನ ಕರ್ಣಾಭರಣದಿಂದ ಹೊಂಗೆಯ ಗೊಂಚಲೊಂದನ್ನು ನೀಡುತ್ತಾಳೆ. ಇದರ ಪ್ರಭಾವದಿಂದ ಸಿದ್ಧಿಮತಿಯು ಹೆಣ್ಣುಕೂಸನ್ನು ಕಾಲಾನಂತರದಲ್ಲಿ ಹಡೆದು ಲಘುಶ್ಯಾಮಲಾ ಎಂದು ಹೆಸರಿಡುತ್ತಾಳೆ.ಸ ಅವಳು ಬೆಳೆದು ತಂದೆಯಿಂದ ಶ್ರೀವಿದ್ಯೆಯನ್ನೂ ಅದರ ಮಂತ್ರರಹಸ್ಯಗಳನ್ನೂ ಕಲಿತು ಮಹಾಪ್ರಬಾವಸಂಪನ್ನೆಯಾಗಿ ಶ್ರೀ ಲಲಿತೆಯ ಅನುಗ್ರಹಕ್ಕೆ ಪಾತ್ರಳಾಗಿ ಅವಳ ಮಂತ್ರಿಣಿಯ ಪಟ್ಟಕ್ಕೇರುತ್ತಾಳೆ; ತ್ರಿಪುರಸುಂದರಿಯ ಬಾಲಾಸ್ವರೂಪವಾಗುತ್ತಾಳೆ. ಮಾತಂಗಮುನಿಯ ಮಗಳಾದುದರಿಂದ ಅವಳಿಗೆ ಮತಂಗಕನ್ಯೆ, ಮಾತಂಗೀ ಎಂಬ ಹೆಸರುಗಳಿವೆ.

ಮಾತಂಗಿಯು ದಶಮಹಾವಿದ್ಯೆಯಾಗಿರುವುದು ಮಾತ್ರವಲ್ಲದೆ ಷೋಡಶೀ, ಕಮಲಾ, ಭುವನೇಶ್ವರೀ ಮುಂತಾದ ಇತರ ಉಪಾಸನಾಕ್ರಮಗಳಲ್ಲಿಯೂ ಮುಖ್ಯ ಪಾತ್ರವನ್ನು ವಹಿಸಿದ್ದಾಳೆ. ಪ್ರಪಂಚಸಾರ, ಶಾರದಾತಿಲಕ, ಶ್ರೀವಿದ್ಯಾರ್ಣವತಂತ್ರ, ಮಂತ್ರಮಹಾರ್ಣವ, ಮಂತ್ರಮಹೋದಧಿ ಮುಂತಾದವುಗಳಲ್ಲಿ ಮಾತಂಗಿವಿದ್ಯೆಯ ಮಂತ್ರೋದ್ಧಾರ, ಉಪಾಸನಾಕ್ರಮ ಇತ್ಯಾದಿ ವಿವರಗಳು ದೊರೆಯುತ್ತವೆ. ಶ್ರೀವಿದ್ಯೆಯ ಒಂದು ಮುಖ್ಯ ಪಂಥವಾದ ಶ್ಯಾಮಾಕ್ರಮದಲ್ಲಿ ಮಾತಂಗೀಜಪ, ಮಾತಂಗೀಸ್ತುತಿ ಇತ್ಯಾದಿಗಳನ್ನು ಉಪಾಸನಾಂಗವಾಗಿ ವಿಧಿಸಿದೆ. ಮಾತಂಗಿಯು ಕಾದಿಮಾರ್ಗದ ಪೂರ್ವಾಮ್ನಾಯದ ದೇವತೆಯಾಗಿದ್ದು ಲಲಿತಾಪರಿಚಾರಿಕೆಯಾಗಿ ಹಸಿತಮುಖಳಾಗಿ ಉಪಾಸಕನ ಭಯ, ವಿಘ್ನ ಮತ್ತು ಆಪದಗಳನ್ನು ನಾಶಗೊಳಿಸುವ ರಕ್ಷಕದೇವತೆಯಾಗಿದ್ದಾಳೆ.

ಶ್ಯಾಮಾಕ್ರಮದಲ್ಲಿ ಮಾತಂಗೀಸ್ತುತಿ ಮತ್ತು ಮಾತಂಗೀಮಂತ್ರಗಳನ್ನು ಕೊಟ್ಟಿರುವುದಲ್ಲದೆ ಮಾತಂಗಿಯನ್ನು ಸಾಲಂಕೃತೆ, ಮಧುಪಾನಮತ್ತೆ, ನೀಪ(=ಕದಂಬ / ಈಚಲು / ಕೆಂಪುದಾಸವಾಳ / ನೀಲಿಅಶೋಕ) ಪುಷ್ಪಗಳ ಮಾಲೆಯನ್ನು ಧರಿಸುವವಳು, ಕೆಂಪು ಸೀರೆಯನ್ನುಟ್ಟವಳು, ತಲೆಯಲ್ಲಿ ಚಂದ್ರಶಕಲವನ್ನೂ, ಕಿವಿಗಳಲ್ಲಿ ಶಂಕಪತ್ರವನ್ನೂ, ಕೈಗಳಲ್ಲಿ ವೀಣೆಯನ್ನೂ ಹಣೆಯಲ್ಲಿ ಕಸ್ತೂರಿ ತಿಲಕವನ್ನೂ ಧರಿಸಿರುವಳು, ಸ್ನಿಗ್ಧ ನೇತ್ರಳು, ಗಿಳಿಯ ಮೈಬಣ್ಣದವಳು ಸಕಲಕಲಾಸ್ವರೂಪಳು, ಸಾಧಕನಿಗೆ ಎಲ್ಲ ಸಿದ್ಧಿಗಳನ್ನೂ ಅನುಗ್ರಹಿಸುವವಳು ಎಂದು ವರ್ಣಿಸಲಾಗಿದೆ:

            ಮಾತಂಗೀಂ ಭೂಷಿತಾಂಗೀಂ ಮಧುಮದಮುದಿತಾಂ ನೀಪಮಾಲಾಡ್ಯವೇಣೀಮ್
ಸದ್ವೀಣಾಂ ಶೋಣಚೇಲಾಂ ಮೃಗಮದತಿಲಕಾಂ ಇಂದುರೇಖಾವತಂಸಾಮ್
|
ಕರ್ಣೋದ್ಯತ್ ಶಂಖಪತ್ರಾಂ ಸ್ಮಿತಮಧುರದೃಶಾಂ ಸಾಧಕಸ್ಯೇಷ್ಪದಾತ್ರೀಮ್
ಧ್ಯಾಯೇದ್ದೇವೀಂ ಶುಕಾಭಾಂ ಶುಕಮಖಿಲಕಲಾರೂಪಮಸ್ಯಾಶ್ಚ ಪಾರ್ಶ್ವೇ ||

ಮಾತಂಗೀತಂತ್ರದಲ್ಲಿ ಮಾತಂಗಿಯು ಸರ್ವಸಿದ್ಧಿಪ್ರದಳೆಂದಿದ್ದರೂ ‘ಅಸ್ಯಾಃ ಪೂಜನಮಾತ್ರೇಣ ವಾಕ್ಸಿದ್ಧಿಂ ಲಭತೇ ಧ್ರುವಂ‘ ಎಂಬ ವಿಶೇಷೋಕ್ತಿಯಿದೆ. ಇವಳದು ಮೂವತ್ತೆರಡು ಅಕ್ಷರಗಳ ಬೀಜ ಮಂತ್ರ; ಇದರ ಋಷಿಯು ಮತಂಗನೇ; ಮಾತಂಗಿಯನ್ನು ಈ ಮಂತ್ರದಲ್ಲಿ ಉಚ್ಛಿಷ್ಟಚಾಂಡಾಲಿಯೆಂದು ಕರೆದಿರುವುದು ವಿಶೇಷವಾಗಿ ಗಮನಾರ್ಹವಾಗಿದೆ. ಜಾನಪದ ತಂತ್ರದ ಮಾತಂಗಿಗೂ ಶಿಷ್ಟಪದತಂತ್ರದ ಮಾತಂಗಿಗೂ ಇದು ಸೇತುಬಂಧನವನ್ನು ಮಾಡುತ್ತದೆ. (ಇದನ್ನು ಮುಂದೆ ಪ್ರಸ್ತಾಪಿಸಲಾಗುವುದು.) ಅವಳು ಸರ್ವಜನವಶಂಕರಿಯೂ ಆಗಿದ್ದು, ಈ ಮಂತ್ರವು ಷಟ್ಕರ್ಮಗಳ ಪೈಕಿ ವಶ್ಯದ ಪ್ರಯೋಗಕ್ಕೆ ಅನುವಾಗಿದೆ. ಇವಳ ಧ್ಯಾನಶ್ಲೋಕವು ಹೀಗಿದೆ:

            ಘನಶ್ಯಾಮಲಾಂಗೀಂ ಸ್ಥಿತಾಂ ರತ್ನಪೀಠೇ ಶುಕಸ್ಯೋದಿತಂ ಶೃಣ್ವತೀಂ ರಕ್ತವಸ್ತ್ರಾಮ್ |
ಸುರಾಪಾನಮತ್ತಾಂ ಸರೋಜಸ್ಥಿತಾಂ ಶ್ರೀಂ ಭಜೇ ವಲ್ಲಕೀಂ ವಾದಯಂತೀಂ ಮಾತಂಗೀಮ್ ||

ಹೀಗೆ ಮಾತಂಗಿಯು ಕಡುಹಸಿರು ಅಥವಾ ಕಪ್ಪು ಬಣ್ಣದವಳು, ರತ್ನಪೀಠದಮೇಲೆ ಕುಳಿತು ಅರಗಿಣಿಯ ಮಾತುಗಳನ್ನು ಆಲಿಸುತ್ತಿದ್ದಾಳೆ. ಕೆಂಪುಬಟ್ಟೆಗಳನ್ನು ಧರಿಸಿದ್ದಾಳೆ. ಸುರಾಪಾನದಿಂದ ಮತ್ತಳಾಗಿದ್ದಾಳೆ, ಪದ್ಮಾಸನದಲ್ಲಿ ಕುಳಿತು ವಲ್ಲಕೀವೀಣೆಯನ್ನು ನುಡಿಸುತ್ತಿದ್ದಾಳೆ. ಈ ಧ್ಯಾನಶ್ಲೋಕದಲ್ಲಿ ಮಾತಂಗಿಯು ಸುರೆಯನ್ನು ಕುಡಿದು ಮೈಮರೆತಿದ್ದಾಳೆಂಬುದನ್ನು ಗಮನಿಸಬೇಕು. ಚಂಡಾಲಕನ್ಯೆಯಾದ ಮಾತಂಗಿಯು ಮತ್ತಳಾಗಿ ಎಂಜಲನ್ನು ಭಕ್ತರ ಮೇಲೆ (ಬ್ರಾಹ್ಮಣರ ಮೇಲೂ) ಉಗುಳಿ ಅವರನ್ನು ಪವಿತ್ರಗೊಳಿಸಿ ಅನುಗ್ರಹಿಸುವ ಜಾನಪದತಂತ್ರವಿಧಾನವನ್ನು ಮುಂದೆ (ಪು.೩೨-೩೪) ಪ್ರಸ್ತಾಪಿಸಲಾಗುವುದು.

ಮಾತಂಗಿಯ ಒಂದು ಭೇದವಾದ ಲಘುಶ್ಯಾಮಾ ದೇವತೆಯ ಉಪಾಸನೆಗೆ (ಇವಳು ಲಲಿತಾಪರಮೇಶ್ವರಿಯ ಮಂತ್ರಿಣಿಯಾದ ಶ್ಯಾಮಾದೇವತೆಯ ಅನುಗ್ರಹದಿಂದ ಮಾತಂಗ-ಸಿದ್ಧಿಮತಿಯರಲ್ಲಿ ಉದ್ಭವಿಸಿದವಳೆಂಬುದನ್ನಿಲ್ಲಿ ನೆನೆಯಬೇಕು.) ಇಪ್ಪತ್ತು ಅಕ್ಷರಗಳ ಮಂತ್ರವಿದ್ದು ಅದಕ್ಕೆ ಮದನನು (ಕಾಮೇಶ್ವರನು?) ಋಷಿ. ಇದನ್ನು ಮಂತ್ರಮಹೋದಧಿಯ ಉದ್ಧರಿಸುತ್ತದೆ: ಈ ಮಂತ್ರದಲ್ಲಿ ಮಾತಂಗಿಯನ್ನು ಉಚ್ಛಿಷ್ಟಚಾಂಡಾಲಿ, ಸರ್ವಜನವಶಂಕರಿಯೆಂದು ಕರೆದಿದೆ. ಅವಳ ಧ್ಯಾನವು ಹೀಗಿದೆ :

            ಮಾಣಿಕ್ಯಾಭರಣಾನ್ವಿತಾಂ ಸ್ಮಿತಮುಖೀಂ ನೀಲೋತ್ಪಲಾಭಾಂ ವರಾಂ
ರಮ್ಯಾಲಕ್ತಕಲಿತಪಾದಕಮಲಾಂ ನೇತ್ರತ್ರಯೋಲ್ಲಾಸಿನೀಮ್
|
ವೀಣಾವಾದನತತ್ಪರಾಂ ಸುರನತಾಂ ಕೀರಚ್ಛದಶ್ಯಾಮಲಾಂ
ಮಾತಂಗೀಂ ಶಶಿಶೇಖರಾಂ ಅನುಭಜೇತ್ತಾಂಬೂಲಪೂರ್ಣಾನನಾಮ್ ||

ಹೀಗೆ ಲಘುಶ್ಯಾಮಾ ಮಾತಂಗಿಯು ಕನ್ನೈದಿಲೆಬಣ್ಣದ, ಮಾಣಿಕ್ಯದ ಒಡವೆಗಳನ್ನಿಟ್ಟುತೊಟ್ಟ, ನಗೆಮೊಗದ, ಅಡಿದಾವರೆಗಳಿಗೆ ಅಲತಿಗೆಯನ್ನು ಹಚ್ಚಿದ, ವೀಣೆಯನ್ನು ನುಡಿಸುತ್ತಿರುವ, ಚಂದ್ರಮೌಳಿಯಾದ, ತಾಂಬೂಲತುಂಬಿದ ಬಾಯುಳ್ಳ ದೇವತೆ (ಮಂತ್ರಮಹಾರ್ಣವ, ಮಧ್ಯಮಖಂಡ, ಪು.೬೩೩-೬೪೦). ಇದಲ್ಲದೆ ಹತ್ತು ಅಕ್ಷರದ ಮಾತಂಗೀಮಂತ್ರವೊಂದಿದೆ.. ಇದಕ್ಕೆ ದಕ್ಷಿಣಾಮೂರ್ತಿಯು ಋಷಿ, ಮಾತಂಗಿಯೇ ದೇವತೆ. ಇವಳ ಧ್ಯಾನವು ಹೀಗಿದೆ.

            ಶ್ಯಾಮಾಂಗೀಂ ಶಶಿಶೇಖರಾಂ ತ್ರಿನಯನಾಂ ವೇದೈಃ ಕರೈರ್ಬಿಭ್ರತೀಂ
ಪಾಶಂ ಖೇಟಮಥಾಂಕುಶಂ ದೃಢಮಸಿಂ ನಾಶಾಯ ಭಕ್ತದ್ವಿಷಾಮ್
|
ರತ್ನಾಲಂಕರಣಪ್ರಬೋಜ್ಜ್ವಲತನುಂ ಭಾಸ್ವತ್ ಕಿರೀಟಾಂ ಶುಭಾಂ
ಮಾತಂಗೀಂ ಮನಸಾ ಸ್ಮರಾಮಿ ಸದಯಾಂ ಸರ್ವಾರ್ಥಸಿದ್ಧಿಪ್ರಧಾಮ್ ||

ಹೀಗೆ ಈ ಮಾತಂಗಿಯು ಶ್ಯಾಮವರ್ಣದವಳು, ಚಂದ್ರಶೇಖರೆ, ಮುಕ್ಕಣ್ಣಳು, ಕೈಗಳಲ್ಲಿ ವೇದಗಳನ್ನೂ ಪಾಶ, ಖೇಟ, ಅಂಕುಶ, ಕತ್ತಿಗಳನ್ನೂ ಹಿಡಿದು ಭಕ್ತರ ಶತ್ರುಗಳನ್ನು ನಾಶಪಡಿಸುತ್ತಾಳೆ; ರತ್ನಾಭರಣಗಳ ಪ್ರಭೆಯಿಂದ ಹೊಳೆಯುತ್ತಿರುವಮೈ; ಪ್ರಕಾಶಮಾನವಾದ ಕಿರೀಟವನ್ನು ಧರಿಸಿದ್ದಾಳೆ. ಮಾತಂಗಿಯಲ್ಲೇ ಸುಮುಖಿ ಎಂಬುದೊಂದು ಭೇದವಿದೆ. ಇವಳದು ಇಪ್ಪತ್ತೆರಡ ಅಕ್ಷರಗಳ ಮಂತ್ರ; ಇದರ ಋಷಿ ಭೈರವ. ಇದರಲ್ಲಿ ಮಾತಂಗೀಸುಮುಖಿಯನ್ನು ಉಚ್ಛಿಷ್ಟಚಾಂಡಾಲಿ ಮತ್ತು ಮಹಾಪಿಶಾಚಿನಿ ಎಂದು ಕರೆದಿದೆ. ಈ ದೇವತೆಯ ಧ್ಯಾನವು ಹೀಗಿದೆ:

            ಗುಂಜಾನಿರ್ಮಿತಹಾರಭೂಷಿತಕುಚಾಂ ಸದ್ಯೌ ವನೋಲ್ಲಾಸಿನೀಂ
ಹಸ್ತಾಭ್ಯಾಂ ನೃಕಪಾಲ ಖಡ್ಗಲತಿಕೇ ರಮ್ಯೇ ಮುದಾ ಬಿಭ್ರತೀಮ್
|
ರಕ್ತಾಲಂಕೃತಿವಸ್ತ್ರಲೇಪನಲಸದ್ದೇಹಪ್ರಭಾಂ ಧ್ಯಾಯತಾಂ
ನೃಣಾಂ ಶ್ರೀಸುಮುಖೀಂ ಶವಾಸನಗತಾಂ ಸ್ಯುಃ ಸರ್ವದಾ ಸಂಪದಃ ||

ಗುಲಗಂಜಿಯ ಹಾರವನ್ನು ಧರಿಸಿ ಕಾಡುಮೇಡುಗಳಲ್ಲಿ ಸಂಚರಿಸುತ್ತಾ ಕೈಗಳಲ್ಲಿ ಮನುಷ್ಯ ಕಪಾಲ ಮತ್ತು ಕತ್ತಿಗಳನ್ನು ಹಿಡಿದು, ರಕ್ತವರ್ಣದ ಅಲಂಕಾರಗಳು, ಉಡುಗೆತೊಡುಗೆಗಳು, ಲೇಪನಗಳು – ಇವುಗಳಿಂದ ಹೊಳೆಯುವ ಶರೀರವುಳ್ಳವಳು, ಶವದ ಮೇಲೆ ಕುಳಿತಿರುವವಳು, ಈ ಸುಮುಖಿ. ಇಲ್ಲಿ ಮಾತಂಗೀಸ್ತೋತ್ರ, ಸಹಸ್ರನಾಮ, ಕವಚ ಮತ್ತು ಹೃದಯಗಳನ್ನು ರುದ್ರಯಾಮಳ, ಮಂತ್ರಸಾರ, ನಂದ್ಯಾವರ್ತತಂತ್ರ ಇತ್ಯಾದಿ ಗ್ರಂಥಗಳಿಂದ ಎತ್ತಿಕೊಂಡಿದೆ (ಅದೇ ಪು.೬೪೨-೬೫೪). ಇದು ರಹಸ್ಯತಮವಾದ ವಿದ್ಯೆ. ಹಾದಿಮಾರ್ಗಕ್ಕೆ ಸೇರಿದ್ದು.

ಇದಲ್ಲದೆ ರಾಜಮಾತಂಗಿ ಎಂಬುದೊಂದು ಮಾತಂಗೀ ಭೇದವಿದೆ. ಇದನ್ನು ಬಹ್ವಚೋಪನಿಷತ್ತಿನಲ್ಲಿ ಉಲ್ಲೇಖಿಸಿದೆ; ಇವಳಿಗೆ ಪಂಚಪಂಚಿಕಾ ಪೂಜೆಯಲ್ಲಿ ಪಂಚರತ್ನಾಂಬೆಯರಲ್ಲಿ ಒಬ್ಬಳಾಗಿ ಪೂಜೆ ಸಲ್ಲುತ್ತದೆ. ಇದರ ೮೮ ಅಕ್ಷರಗಳ ಮಂತ್ರಕ್ಕೆ ದಕ್ಷಿಣಾಮೂರ್ತಿಯು ಋಷಿ. ಈ ದೇವತೆಯನ್ನು ಹೀಗೆ ಧ್ಯಾನಿಸಬೇಕು: ರತ್ನಸಿಂಹಾಸನಸ್ಥೆ, ಅರಗಿಳಿಯ ಮಾತನ್ನು ಆಲಿಸುತ್ತಿದ್ದಾಳೆ. ಶ್ಯಾಮವರ್ಣದವಳು, ಒಂದು ವಾದವನ್ನು ಕಮಲದ ಮೇಲಿಟ್ಟಿದ್ದಾಳೆ, ಚಂದ್ರನನ್ನು ಧರಿಸಿದ್ದಾಳೆ, ವಲ್ಲಕೀವೀಣೆಯನ್ನು ನುಡಿಸುತ್ತಾಳೆ, ಕಲ್ಹಾರಪುಷ್ಪಗಳ ಹಾರವನ್ನು ಧರಿಸಿದ್ದಾಳೆ, ಕೆಂಪು ಬಣ್ಣದ ಸೀರೆಯನ್ನೂ ಕುಪ್ಪುಸವನ್ನೂ ತೊಟ್ಟಿದ್ದಾಳೆ, ಶಂಖಪತ್ರವನ್ನು ಕಿವಿಯಲ್ಲಿಟ್ಟಿದ್ದಾಳೆ, ಮಧುಪಾನದಿಂದ ಉನ್ಮತ್ತಳಾಗಿದ್ದಾಳೆ. ಹಣೆಯಲ್ಲಿ ವಿಚಿತ್ರವಾದ ತಿಲಕವನ್ನು ಧರಿಸಿದ್ದಾಳೆ: (ಇದು ಮಾತಂಗೀ ವರ್ಣನೆಯನ್ನೇ ಅನೇಕಾಂಶದಲ್ಲಿ ಹೋಲುತ್ತದೆ):

            ಧ್ಯಾಯೇಯಂ ರತ್ನಪೀಠೇ ಶುಕಕಲಪಠಿತಂ ಶೃಣ್ವತೀಂ ಶ್ಯಾಮಲಾಂಗೀಮ್ |
ನ್ಯಸ್ತೈಕಾಂಘ್ರಿಂ ಸರೋಜೇ ಶಶಿಶಕಲಧರಾಂ ವಲ್ಲಕೀಂ ವಾದಯಂತೀಮ್ ||
ಕಲ್ಹಾರಬದ್ಧಮಾಲಾಂ ನಿಯಮಿತವಿಲಸಚ್ಚೋಲಿಕಾಂ ರಕ್ತವಸ್ತ್ರಾಮ್ |
ಮಾತಂಗೀಂ ಶಂಖಪತ್ರಾಂ ಮಧುಮದವಿವಶಾಂ ಚಿತ್ರಕೋದ್ಭಾಸಿಭಾಲಮ್ ||

ಈ ಉಪಾಸನೆಯನ್ನು ಶಾರದಾತಿಲಕದಲ್ಲಿ ಉಪದೇಶಿಸಿದೆ.

ಮಾತಂಗಿಯು ಕಾದಿಮಾರ್ಗದ ಪೂರ್ವಾಮ್ನಾಯ ದೇವತೆಯೆಂದು ಹೇಳಿದೆಯಷ್ಟೆ. ಪೂರ್ವಾಮ್ನಾಯದಲ್ಲಿ ಶುದ್ಧವಿದ್ಯಾ, ಬಾಲಾ, ದ್ವಾದಶಾರ್ಧಾ, ಮಾತಂಗೀ, ಗಾಯತ್ರೀ, ಗಣಪತಿ, ಕಾರ್ತಿಕೇಯ, ಮೃತ್ಯುಂಜಯ, ನೀಲಕಂಠ, ತ್ಯ್ರಂಬಕ, ಜಾತವೇದ, ಪ್ರತ್ಯಂಗಿರಾ, ತತ್ಪುರುಷ ಎಂಬ ದೇವತಾವ್ಯೂಹಕ್ಕೆ, ಶುದ್ಧವಿದ್ಯೆಯಿಂದ ಮೊದಲಾಗಿ ಸಮಯವಿದ್ಯೇಶ್ವರಿಯವರೆಗಿನ ಇಪ್ಪತ್ತುನಾಲ್ಕು ಸಾವಿರ ದೇವತೆಗಳ ಆಮ್ನಾಯಕ್ಕೆ ಶ್ರೀಮಹಾತ್ರಿಪುರಸುಂದರಿಯು ಸಮಷ್ಟಿರೂಪದ ದೇವತೆ. ಶಿಷ್ಟತಂತ್ರದ ಮಾತಂಗಿಯಲ್ಲಿ ಈ ಏಳು ಪ್ರಭೇಧಗಳಿವೆ :

೧) ಹಸಿತಾಲಾಪಾ ಎಂಬ ಮಾತಂಗಿ ಪರಿಚಾರಿಕೆ (೨೮ ಅಕ್ಷರಗಳಿರುವ ಮಂತ್ರ) ೨) ೮೮ ಅಕ್ಷರಗಳ ಮಂತ್ರಾಧಿದೇವತೆಯಾದ ರಾಜಶ್ಯಾಮಲಾ ೩) ೪೦ ಅಕ್ಷರಗಳ ಮಂತ್ರವಿರುವ ಶುಕಶ್ಯಾಮಲಾ ೪) ೩೧ ಅಕ್ಷರಗಳ ಮಂತ್ರವಿರುವ ಶಾರಿಕಾಶ್ಯಾಮಲಾ ೫) ೨೩ ಅಕ್ಷರಗಳ ಮಂತ್ರಾಧಿದೇವತೆಯಾದ ವೀಣಾಶ್ಯಾಮಲಾ ೬) ೨೨ ಅಕ್ಷರಗಳ ಮಂತ್ರವನ್ನುಳ್ಳ ವೇಣುಶ್ಯಾಮಲಾ ಮತ್ತು ೭) ೨೨ ಅಕ್ಷರಗಳ ಮಂತ್ರಾಧಿದೇವತೆಯಾದ ಲಘುಶ್ಯಾಮಲಾ. ಈ ವಿದ್ಯೆಗಳನ್ನು ಸಮರ್ಥರಾದ ಸದ್ಗುರುಗಳಿಂದ ಪಡೆದುಕೊಳ್ಳಬೇಕು. ಅವು ಈ ಪ್ರಸ್ತುತ ಬರೆಹದ ಪ್ರಾಪ್ತಿಯನ್ನು ಮೀರಿವೆ.