(ಆ) ಪ್ರಯೋಜನಗಳು

ಬೃಹದ್ದೇಶಿಯಲ್ಲಿರುವ ಗದ್ಯಖಂಡಗಳ ಪ್ರಯೋಜನಗಳನ್ನು ಇಲ್ಲಿ ಸಂಕ್ಷೇಪವಾಗಿ ವಿವೇಚಿಸಬಹುದು. ಮೊದಲನೆಯ ಅಧ್ಯಾಯದ ಶ್ರುತಿಪ್ರಕರಣದಲ್ಲಿ ಇವು ಮುಖ್ಯವಾಗಿ ಶ್ರುತಿಗಳ ಸಂಖ್ಯೆ, ಶ್ರುತಿಸ್ವರಗಳ ಸಂಬಂಧ, ಶ್ರುತಿನಿದರ್ಶನ ಮತ್ತು ಶ್ರುತಿ ಪರಿಮಾಣ ಇವುಗಳ ಪರಿಶೀಲನೆಯನ್ನು ಬೋಧಿಸುತ್ತವೆ. ಇವುಗಳ ಪೈಕಿ ಮೊದಲನೆಯ ಆರು (೨೮-೩೪–೪೧) ಶ್ರುತಿಯು ಒಂದೇ ವಿಧ, ಎರಡು, ಮೂರು, ಒಂಭತ್ತು, ಇಪ್ಪತ್ತೆರಡು, ಅರವತ್ತಾರು ಅಥವಾ ಅನಂತ ವಿಧಗಳು ಎಂಬ ಪಕ್ಷಗಳನ್ನು ವಿಶ್ವಾವಸು (ಅಭಿನವಗುಪ್ತಪಾದನು ವಿಶಾಖಿಲನದೆನ್ನುತ್ತಾನೆ), ವೇಣು, ಕೋಹಲ ಇತ್ಯಾದಿ ಪೂರ್ವಾಚಾರ್ಯರ ಮತಗಳನ್ನು ಅವಲಂಬಿಸಿ ಹೇಳುತ್ತವೆ. ಇವುಗಳನ್ನು ಗ್ರಂಥಕರ್ತನೇ ಸಂಗ್ರಹಿಸಿದ್ದಾನೆ ಮತ್ತು ವಿವರಿಸಿದ್ದಾನೆ ಎಂಬುದು ನಿಃಸಂಶಯ. ನಂತರದ ನಾಲ್ಕು (೪೫-೪೮) ಶ್ರುತಿನಿದರ್ಶನವನ್ನು ಭರತ ಮತವನ್ನು (ಹಾಗೆಂದು ಪ್ರಕಟವಾಗಿ ಹೇಳಿದೆ) ಅವಲಂಬಿಸಿ ಸ್ಥಿರ(=ಧ್ರುವ) – ಚಲವೀಣೆಗಳ ಪ್ರಾತ್ಯಕ್ಷಿಕ ಪ್ರಯೋಗವರ್ಣದಿಂದ ಮಾಡುತ್ತವೆ. ಮತವು ಭರತನದಾದರೂ ಅದರ ನಿರೂಪಣೆಯು ಹೆಚ್ಚು ಲಲಿತವಾಗಿ, ಸ್ಪಷ್ಟತರವಾಗಿ ಇದೆ. ಈ ಸಂಬಂಧದಲ್ಲಿ ದೊರೆಯುವ ಚತುಃಸಾರಣಾಪ್ರಸ್ತಾರವೂ ಗ್ರಂಥಕರ್ತನದೇ. ಹಾಗೆ ನೋಡಿದರೆ, ಇಡೀ ಅಧ್ಯಾಯದಲ್ಲಿ ಇರುವ ಪ್ರಸ್ತಾರಗಳೆಲ್ಲ (ಉದಾ.ಸಾರಣಾಚತುಷ್ಟಯ, ವಾದಿ-ಸಂವಾದಿ-ಅನುವಾದಿ-ವಿವಾದಿ. ಮೂರ್ಛನಾ ಇವುಗಳ ಮಂಡಲಗಳು) ಮತಂಗಕೃತವೇ. ಶ್ರುತ್ಯಪಕರ್ಷದ ಫಲವನ್ನು ಕುರಿತ ಮಾತುಗಳು ಅಲ್ಪವ್ಯತ್ಯಾಸಗೊಳಡನೆ (ಆಕರೋಲ್ಲೇಖವಿಲ್ಲದೆ) ಅಭಿನವಭಾರತಿಯಲ್ಲೂ (ಪು.೨೨-೨೩) ಇವೆ. ಭರತನ ಗ್ರಂಥಕ್ಕೆ ವ್ಯಾಖ್ಯಾನವನ್ನು ಬರೆಯುವಾಗ ಅಭಿವನಗುಪ್ತನು ಈ ಮಾತುಗಳನ್ನು ಉದ್ಧರಿಸಿಕೊಂಡಿದ್ದಾನೆ ಎಂದು ಭಾವಿಸುವುದು, ಇವುಗಳನ್ನು ಬೃಹದ್ದೇಶಿಯ ಲಿಪಿಕಾರನೊಬ್ಬನು ಅಥವಾ ವೃತ್ತಿಕಾರನೊಬ್ಬನು ಅಭಿನವ ಭಾರತಿಯಿಂದ ಎತ್ತಿಕೊಂಡಿದ್ದಾನೆ ಎನ್ನುವುದಕ್ಕಿಂತ ಹೆಚ್ಚು ಸಂಭಾವ್ಯವಾಗಿದೆ. ಇದೇ ಮಾತನ್ನು (೮೦)ಕ್ಕೂ (‘ಏತದೇವ ಸ್ಪಷ್ಟೀಕರಣಾರ್ಥಂ ಪ್ರಸ್ತಾರೇಣ ದರ್ಶಯಾಮಿ’) ಅನ್ವಯಿಸಬಹುದು. ಸ್ವರಪ್ರಕರಣಗಳಲ್ಲಿ ಇರುವ ಗದ್ಯಗಳೂ ಮತಂಗರಚಿತವೇ: ಸ್ವರವೆಂದರೇನು (೯೬). ಅದರ ನಿತ್ಯಾನಿತ್ಯ, ವ್ಯಾಪಕ-ಅವ್ಯಾಪಕ ಇತ್ಯಾದಿ ಸ್ವರೂಪವೇನು (೯೮). ಸರಿಗ ಇತ್ಯಾದಿ ಅಕ್ಷರಗಳು ವ್ಯಂಜನಗಳಾದರೂ ಅವಕ್ಕೆ ಸ್ವರತ್ವವು ಹೇಗೆ ಸಿದ್ಧಿಸುತ್ತದೆ (೧೧೫-೧೨೩), ಸ್ವರದ ವಾದಿಯೇ ಮೊದಲಾದ ನಾಲ್ಕು ವಿಧಗಳು (೧೧೦-೧೧೩) ಇವುಗಳು ನಿಃಸಂಶಯವಾಗಿ ಮತಂಗೋಕ್ತಗಳು; ಈ ನಾಲ್ಕು ವಿಧಗಳ ವಿವೇಚನೆಯು (೧೧೫-೧೨೩) ನಾಟ್ಯಶಾಸ್ತ್ರದಲ್ಲಿಯೂ ಗದ್ಯರೂಪದಲ್ಲೇ ಇದೆಯಾದರೂ ಬೃಹದ್ದೇಶಿಯವು ಶಿಷ್ಯರಿಗೆ (ಅಥವಾ ಪೃಚ್ಛಕಮುನಿಗೆ) ಲಕ್ಷ್ಯನಿದರ್ಶನ ಪೂರ್ವಕವಾಗಿ (ಉದಾ. ಕಕುಭ, ರೇವಗುಪ್ತ) ಉಪದೇಶ ನೀಡುವ ವಿಧಾನವನ್ನೊಳಗೊಂಡಿವೆ. (೯೮-೧೦೮)ಗಳಿಗೆ ಪರಸ್ಪರವಾದ ಅಥವಾ ಸಮಾನಾಂತರವಾದ ವಿವರಣೆಯು ಅಭಿನವಭಾರತಿಯಲ್ಲಿದೆ (ಪು.೨೯). ಈ ಪ್ರಕರಣದಲ್ಲಿ ಸಂವಾದಿಭಾವಕ್ಕೆ (ವಾದಿ-ಸಂವಾದಿಗಳಲ್ಲಿ) ಸಮಶ್ರುತಿಕತ್ವವೆಂಬ ಲಕ್ಷಣವಿರಬೇಕೆಂಬ ಸೂಚನೆಯನ್ನು ಮೊದಲಬಾರಿಗೆ ಮಂಡಿಸುತ್ತಾನೆ (೧೧೦). ಭರತನಲ್ಲಿ ಇದರ ಸೂಚನೆಯಿಲ್ಲ. ಆದರೆ ಅಭಿನವಗುಪ್ತನು ಇದನ್ನು (ಆಕರಸ್ಮರಣೆಯಿಲ್ಲದೆ, ಆದರೆ ತನ್ನ ಉಪಾಧ್ಯಾಯನಾದ ಭಟ್ಟ ತೌತನ ಮಾತನ್ನು ಉಲ್ಲೇಖಿಸಿ) ವಿವೇಚಿಸಿ ಕೊನೆಯಲ್ಲಿ ನಿರಾಕರಿಸುತ್ತಾನೆ. ಅಭಿನವಗುಪ್ತನು ಮತಂಗನನ್ನು ಹಲವೆಡೆ ಪೂರ್ವಾಚಾರ್ಯನೆಂದು ಸ್ವೀಕರಿಸಿ ಉದ್ಧರಿಸಿಕೊಂಡಿದ್ದಾನೆ ; ಆಕರಸ್ಮರಣೆಯಿಲ್ಲವೆಂಬ ಮಾತ್ರಕ್ಕೆ ಉದ್ದೃತಿಯು ಮತಂಗನದಲ್ಲವೆಂದು ಹೇಳಲಾಗದು. ಅಲ್ಲದೆ ಉಪಲಬ್ಧ ಅಭಿನವಭಾರತೀ ಗ್ರಂಥವು ಹಲವು ಲೋಪದೋಷಗಳಿಂದ ತುಂಬಿದೆಯೆಂಬುದನ್ನು ನೆನಪಿನಲ್ಲಿಡಬೇಕು.

ಗ್ರಾಮಮೂರ್ಛನಾತಾನಪ್ರಕರಣದಲ್ಲಿ ೩೪ ಗದ್ಯಭಾಗಗಳಿವೆ. ಇವುಗಳ ಪೈಕಿ ಗ್ರಾಮನಿರೂಪಣವನ್ನು ಮಾಡುವಂತಹವು ಮೊದಲನೆಯ ಐದು ಗದ್ಯಖಂಡಗಳು (೧೬೭, ೧೭೦, ೧೭೧, ೧೭೬, ೧೭೮) : ಗ್ರಾಮವೆಂದರೇನು, ಗ್ರಾಮಗಳು ಎಷ್ಟು, ಗ್ರಾಮಗಳು ಎಲ್ಲಿಂದ ಹುಟ್ಟುತ್ತವೆ. ಅವುಗಳ ಪ್ರಯೋಜನವೇನು ಎಂಬ ಪ್ರಶ್ನೆಗಳನ್ನು ಕೇಳುವ ಒಂದು, ಅವುಗಳ ಪ್ರಯೋಜನ, ಗ್ರಾಮಣೀ ಸ್ಥಾನಮಾನಗಳು ಉಂಟಾಗುವುದಕ್ಕೆ ಷಡ್ಜಮಧ್ಯಮಗಳಿಗಿರುವ ಅಸಾಧಾರಣತ್ವ, ಗ್ರಾಮಗಳು ಎರಡೇ ಏಕೆ, ‌ಗ್ರಾಮೋತ್ಪತ್ತಿಗೆ ಆಕರಗಳು – ಇವುಗಳ ನಿರೂಪಕ್ಕೆ ಒಂದೊಂದು ಗದ್ಯ ಖಂಡ ; ನಡುವೆ ‘ತಥಾ ಚಾಹ ನಾರದಃ,’ ‘ಏತದುಕ್ತಂ ಭವತಿ’ ಎಂಬ ಎರಡು ಹ್ರಸ್ವಗದ್ಯಾಂಶಗಳು ಮೂರ್ಛನೆಯನ್ನು ನಿರೂಪಿಸುವ ಗದ್ಯಖಂಡಗಳು ಹತ್ತು. ಇವು ಮೂರ್ಛನಾ ವಿಷಯದ ಪ್ರವೇಶ(೧೭೯), ವ್ಯುತ್ಪತ್ತಿ(೧೮೦), ಮೂರ್ಛನಾ ವಿಧಗಳು, ಮೂರ್ಛನಾ ಮಂಡಲಗಳು (೧೮೪, ೧೮೫), ಎರಡೂ ಗ್ರಾಮಗಳಲ್ಲಿ ಹುಟ್ಟುವ ಹದಿನಾಲ್ಕು ಮೂರ್ಛನೆಗಳು, ಷಾಡವ ಔಡುವ ಶಬ್ದಗಳ ನಿರ್ವಚನ (೧೯೬, ೧೯೭), ಷಾಡವೌಡುವಿತಾನಗಳ ಪ್ರಸ್ತಾರಕ್ಕೆ ಪ್ರವೇಶ, (೨೦೧), ಮೂರ್ಛನಾ ತಾನಗಳಲ್ಲಿರುವ ಭೇದ, ಇದರಲ್ಲಿ ಸ್ವಮತ ಮಂಡನ, ಷಾಡವೌಡುವತಾನಗಳ ಒಟ್ಟು ಸಂಖ್ಯೆ (೨೧೭), (೨೩೧), ಸಾಧಾರಣಕೃತ ಮೂರ್ಛನೆಗಳು (೨೩೨) ಎಂಬ ವಿಷಯಗಳನ್ನು ಪ್ರಶ್ನೋತ್ತರ ರೂಪದಲ್ಲಿ ಇವು ಒಳಗೊಂಡಿವೆ. ಇದು ಬೃಹದ್ದೇಶಿಗೆ ವಿಶಿಷ್ಟವಾದ ಶೈಲಿಯೇ. ಪ್ರಕರಣಾಂತ್ಯದಲ್ಲಿ ದ್ವಾದಶಸ್ವರಮೂರ್ಛನೆ ಮತ್ತು ತಾನಪ್ರಯೋಗ ವಿಧಿಯ ಪರಿಶೀಲನೆಯಿದೆ. ಪದ್ಯಗದ್ಯಮಿಶ್ರಿತವಾದ ಈ ಪ್ರಕರಣದಲ್ಲಿ ಗದ್ಯಭಾಗಗಳು ವಿಷಯಪ್ರವೇಶ, ವಿಷಯಪೂರಣ ಮುಂತಾದ ಸಂಬಂಧಗಳನ್ನು ಮಾತ್ರ ಶ್ಲೋಕಭಾಗಗಳೊಡನೆ ಹೊಂದಿವೆ, ವಾಖ್ಯಾನರೂಪದಲ್ಲಿಲ್ಲ : ಎಂದರೆ ಅವರು ಗ್ರಂಥದ ಅವಿಭಾಜ್ಯ ಅಂಗಗಳಾಗಿವೆ. ತಾನಪ್ರಯೋಗದಲ್ಲಿ ಪ್ರವೇಶನಿಗ್ರಹಗಳನ್ನೂ ಮೂರ್ಛನಾತಾನಗಳ ಪ್ರಯೋಗದಲ್ಲಿ ಸ್ವರಗಳನ್ನೂ ಯಾವ ಸ್ಥಾಯಿಯಿಂದ ಪ್ರಯೋಗಿಸಬೇಕು ಎಂಬ ವಿಧಿಯನ್ನು ಒಳಗೊಂಡ ಗದ್ಯಖಂಡಗಳೂ ಹೀಗೆಯೇ ಗ್ರಂಥದಿಂದ ಬೇರ್ಪಡಿಸಲಾಗದವುಗಳೇ ಆಗಿವೆ. ಅಭಿನವಭಾರತಿಯಲ್ಲೂ ಈ ವಿಧಿಯನ್ನು ಕುರಿತ ಸದೃಶ ವಿವೇಚನೆಯಿದೆ (ಪು.೨೭-೩೦). ಈ ಅಂಶದ ಕರ್ತೃವು ಮತಂಗನೇ ಎಂಬಲ್ಲಿ ಡಾ || ರಾಮನಾಥನ್‌ರವರು ಸಂಶಯಪಟ್ಟಿದ್ದಾರೆ (ಪು.೧೦). ಏಕೆಂದರೆ ಇಲ್ಲಿ (೫೦) ಬೃಹದ್ದೇಶಿಯ ವಾಕ್ಯವು ‘ನನು ತ್ರಿಷುಸ್ಥಾನೇಷು ಸ್ವರಪ್ರಯೋಗ ಇತ್ಯುಕ್ತಂ ಕಾಕವಿಧಾನೇ | ತತ್ರ ಕತಮಂ ಸ್ವರಸಪ್ತಕಮವಲಂಬ್ಯ ಮೂರ್ಛನಾಕಾರ್ಯೇತಿ ಯೇ ಸಂಶೇರತೇ ತಾನ್ ಪ್ರತ್ಯಾಹ’ – ಕಾಕುವಿಧಾನವನ್ನು ಬೃಹದ್ದೇಶಿಯಲ್ಲಿ ಹೇಳಿಲ್ಲ. ಅದು ಇರುವುದು ನಾಟ್ಯಶಾಸ್ತ್ರದಲ್ಲಿ (೧೭, ೧೦೨, ೧೦೬, ೧೧೦) ಆದರೆ ‘ತಾನ್ ಪ್ರತ್ಯಾಹ’ ಎಂಬ ಖಂಡವು ನಾಟ್ಯಶಾಸ್ತ್ರದಲ್ಲಿಲ್ಲ. ಆದುದರಿಂದ ಮೇಲೆ ಉದ್ಧರಿಸಿಕೊಂಡಿರುವ ಗ್ರಂಥಾಂಶವು ಬೃಹದ್ದೇಶಿಯದಲ್ಲ. ಅಭಿನವಭಾರತಿಯದೋ ಬೇರೆ ಯಾವುದೋ ನಾಟ್ಯಶಾಸ್ತ್ರವ್ಯಾಖ್ಯಾನದ್ದೋ ಆಗಿದ್ದು ಇಲ್ಲಿ ಪ್ರಕ್ಷಿಪ್ತವಾಗಿರಬೇಕು ಎಂದು ಶ್ರೀಯುತರು ಅನುಮಾನಿಸುತ್ತಾರೆ. ಕಾಕುವಿಧಾನ (೨೪೦), ಕಾಕುವಿಧಿ (೨೫೯), ಕಾಕುರಕ್ತಪ್ರಯೋಗ (೬೦೫), ಮಾಲವೀಕಾಕು ಪ್ರಯೋಗ (೬೦೫) ಎಂಬ ಮಾತುಗಳನ್ನು ಮತಂಗಮುನಿಯು ಪ್ರಯೋಗಿಸಿದ್ದರೂ ಉಪಲಬ್ಧ ಬೃಹದ್ದೇಶಿಯಲ್ಲಿ ಕಾಕುವಿಧಾನವನ್ನು ಕುರಿತ ವಿವೇಚೆನಯು ಇಲ್ಲ. ಈ ‘ ತ್ರಿಷು ಸ್ಥಾನೇಷು ಸ್ವರಪ್ರಯೋಗಃ’ಎಂಬ ಮಾತು ಭರತನದು, ಮತಂಗನದಲ್ಲ ಎಂಬುದು ಈ ಕಾರಣಗಳಿಂದ ಸಿದ್ಧವಾಗುತ್ತದೆ : i. ಕಾಕುವಿಧಾನ, ಕಾಕುವಿಧಿ ಎಂಬುದು ಗ್ರಂಥದ ಅಧಿಕರಣವನ್ನೋ ಅಧ್ಯಾಯವನ್ನೋ ಸೂಚಿಸುತ್ತದೆ. ಇಂತಹದೊಂದು ಅಧಿಕರಣವು ನಾಟ್ಯಶಾಸ್ತ್ರದ ೧೭ನೆಯ ಅಧ್ಯಾಯದಲ್ಲಿದೆ ii. ‘ಉಕ್ತಂ’ ಎನ್ನುವುದು ಭೂತಕಾಲದ ಸೂಚನೆ. ಈ ಗ್ರಂಥಸಂದರ್ಭಕ್ಕಿಂತ ಹಿಂದೆ ಕಾಕುವಿನ ಪ್ರಸಕ್ತಿಯೂ ಉಕ್ತಿಯೂ ಬೃಹದ್ದೇಶಿಯಲ್ಲಿಇಲ್ಲ, ಆದರೆ ಪೂರ್ವಾಚಾರ್ಯನಾದ ಭರತನು ಪಾಠ್ಯವಿಧಿಯ ಅಂಗವಾಗಿ ಅದನ್ನು ಹಿಂದೆಯೇ ಹೇಳಿದ್ದಾನೆ. iii. ‘ತತ್ರ’ ಎನ್ನುವುದು ದೂರವನ್ನು ಸೂಚಿಸುತ್ತದೆ೩. ಆದುದರಿಂದ ಇದು ಭರತನಿಗೆ ಅನ್ವಯಿಸುವುದು ಹೆಚ್ಚು ಸಂಭಾವ್ಯ. iv. ಇವೆಲ್ಲದರ ಸಮರ್ಥನೆಯೋ ಎಂಬಂತೆ ಈ ಗದ್ಯಖಂಡದ ಕೊನೆಯಲ್ಲಿ ಭರತಮುನಿಯನ್ನು ಉದ್ಧರಿಸಿದೆ. ಅಲ್ಲದೆ ‘ತಾನ್ ಪ್ರತ್ಯಾಹ’ ಎಂಬಲ್ಲಿನ ಪ್ರಥಮಪುರುಷಸೂಚನೆಯು ಮತಂಗನಿಗೆ ಅನ್ವಯಿಸುವುದು ಬೃಹದ್ದೇಶಿಯಲ್ಲಿ ಹಲವೆಡೆ ಕಂಡುಬರುತ್ತದೆ. ಭರತನ ‘ನನು ತ್ರಿಷು……..’ ಎಂಬ ಉಕ್ತಿಯಲ್ಲಿ ಯಾವ ಸ್ವರಸ್ಥಾನದ ಇಂಗಿತವಿದೆ ಎಂಬ ಸಂಶಯವನ್ನು ಪರಿಹರಿಸಲು ಮತಂಗನು ಅವರಿಗೆ ಈ ಉತ್ತರವನ್ನು ನೀಡುತ್ತಾನೆ ಎಂಬ ಅರ್ಥವೂ ಇಲ್ಲಿ ಪ್ರಶಸ್ತವಾಗಿದೆ. ಏಕೆಂದರೆ ಇದರ ಮುಂದಿನ ವಾಕ್ಯವೂ ಪ್ರಶ್ನೋತ್ತರಗಳೂ ಮತಂಗನವೇ ಆಗಿವೆ. ಈ ಆಲೋಚನಾಸರಣಿಯು ‘ತದೇಷಾಂ ತಾನಾನಾಂ ಪ್ರಯೋಜನಂ (ಸ್ಥಾನ) ಪ್ರಾಪ್ತ್ಯರ್ಥಮುಕ್ತಂ, ಸ್ಥಾನಾನಿ ತ್ರೀಣ್ಯುಕ್ತಾನಿ ಕಾಕುವಿಧೌ….’ (೨೫೯) ಎಂಬ ಗದ್ಯಖಂಡದಲ್ಲಿರುವ ಉಕ್ತಂ, ಉಕ್ತಾನಿ, ಕಾಕುವಿಧೌ ಎನ್ನುವ ಮಾತುಗಳಿಗೂ ಅನ್ವಯಿಸುತ್ತದೆ.

ಮೊದಲನೆಯ ಅಧ್ಯಾಯದ ವರ್ಣಾಲಂಕಾರಪ್ರಕರಣದಲ್ಲಿ ಗದ್ಯಖಂಡಗಳೇ ದಟ್ಟವಾಗಿವೆ. ಈ ನಲವತ್ತರಲ್ಲಿ (೨೭೧-೩೬೮) ಮೊದಲನೆಯದರಲ್ಲಿ (೨೭೧) ವರ್ಣಶಬ್ದದ ಅರ್ಥ, ಸ್ಥಾಯಿವರ್ಣದ ಲಕ್ಷಣ, ಎರಡನೆಯದರಲ್ಲಿ (೨೭೪) ಸಂಚಾರೀ ವರ್ಣಕ್ಕೆ ಮಾಲವಕೈಶಿಕರಾಗದಿಂದ ಪ್ರಾತ್ಯಕ್ಷಿಕ ನಿದರ್ಶನ, ಮೂರನೆಯದರಲ್ಲಿ (೨೭೫) ಆರೋಹೀವರ್ಣ ಲಕ್ಷಣ ಮತ್ತು ಮಾಲವ ಪಂಚಮರಾಗದಿಂದ ಪ್ರಾತ್ಯಕ್ಷಿಕ ಉದಾಹರಣೆ, ನಾಲ್ಕನೆಯದರಲ್ಲಿ (೨೭೯) ವರ್ಣಶಬ್ದನಿಷ್ಪತ್ತಿ, ಸ್ಥಾಯಿವರ್ಣಕ್ಕೆ ಷಾಡ್ಜೀಜಾತಿಯಿಂದಲೂ ಆರೋಹೀವರ್ಣಕ್ಕೆ ನಂದಯಂತೀ ಜಾತಿಯಿಂದಲೂ ನಿದರ್ಶನಗಳು, ಕೊನೆಯದರಲ್ಲಿ (೩೬೮) ಭರತನಿಂದ ಉದ್ಧರಿಸಿಕೊಂಡ ಮೂವತ್ತುಮೂರು ವರ್ಣಾಲಂಕಾರಗಳಿಗೆ ಪ್ರಸ್ತಾರಗಳನ್ನು ಬರೆಯುವುದಕ್ಕೆ ಪೀಠಿಕೆ – ಇವು ಕಂಡುಬರುತ್ತವೆ. ಭರತನ (ಮತ್ತು ದತ್ತಿಲನ) ವರ್ಣಾಲಂಕಾರಗಳಿಗೆ ಸರಿಗಮಾದಿ ಸ್ವರಗಳ ಪ್ರಸ್ತಾರವೂ ಯಾವ ಉಪಲಬ್ಧ ಆಕರಗಳಲ್ಲೂ ಇಲ್ಲ. ಆದುದರಿಂದ ಕೊನೆಯ ಗದ್ಯಖಂಡವೂ ಅದರ ನಂತರವಿರುವ ಉದಾಹರಣೆಗಳೂ ಮತಂಗನವೇ ಎಂಬುದರಲ್ಲಿ ಸಂಶಯವಿಲ್ಲ. ಈ ಪ್ರಕರಣದ ಪ್ರಾರಂಭಿಕ ಗದ್ಯಖಂಡಗಳೂ ಶ್ಲೋಕಾಂಶಗಳೂ ವಿಷಯನಿರೂಪಣೆಯಲ್ಲಿ ಪರಸ್ಪರ ಪೂರಕವಾಗಿರುವುದರಿಂದ ಅವು ಮತಂಗನವೇ ಎನ್ನುವಲ್ಲಿಯೂ ಸಂಶಯವಿಲ್ಲ. ಈ ಪ್ರಕರಣದ ಉಳಿದ ಗದ್ಯಖಂಡಗಳಲ್ಲಿ ಐದನೆಯದು (೨೮೧) ಅಲಂಕಾರ ಶಬ್ದದ ಅರ್ಥ ಮತ್ತು ವ್ಯುತ್ಪತ್ತಿಗಳನ್ನು ಹೇಳುತ್ತದೆ. ಇತರ ಗದ್ಯಖಂಡಗಳು (೨೮೨-೩೬೮) ವರ್ಣಾಲಂಕಾರಗಳ ಲಕ್ಷಣ ಮತ್ತು ಉದಾಹರಣೆಗಳನ್ನು ಸಂಪೂರ್ಣವಾಗಿ ನಿರ್ವಹಿಸುತ್ತವೆ. ಇಲ್ಲಿ ಪದ್ಯದ ಪ್ರವೇಶವು ಇಲ್ಲವೇ ಇಲ್ಲ. ಹೀಗಾಗಿ ಈ ಪ್ರಕರಣವು ಸಂಪೂರ್ಣವಾಗಿ ಮತಂಗಕೃತವೆನ್ನುವಲ್ಲಿ ವಿವಾದವಿರದು. ಭರತನವೆಂದು ಉದ್ಧರಿಸಿಕೊಂಡಿರುವ ಲಕ್ಷಣಶ್ಲೋಕಗಳು (೩೯೧-೩೬೭) ಭ್ರಷ್ಟವೂ ಛಂಧೋದುಷ್ಟವೂ ಆಗಿದೆ. ಕೆಲವು ಸಣ್ಣ ವ್ಯತ್ಯಾಸಗಳನ್ನು ಬಿಟ್ಟರೆ ಭರತಪ್ರೋಕ್ತವಾದ ಅಲಂಕಾರಲಕ್ಷಣಗಳು ಅಭಿನ್ನವೇ ಆಗಿವೆ. ಆದುದರಿಂದ ಈ ಉದ್ದೃತಿಯನ್ನು ಸ್ವಮತಸಮರ್ಥನೆಗಾಗಿ ಮತಂಗನು ಮಾಡಿಕೊಂಡಿದ್ದಾನೆ ಎನ್ನಬೇಕಾಗಿದೆ. ಇವುಗಳ ಪ್ರಯೋಗವು ಗೀತಿಗಳಲ್ಲಿ ಮತ್ತು ಧ್ರುವಾಗಳಲ್ಲಿ ಹೇಗಿರಬೇಕು ಎಂಬ ಅಂಶಗಳೂ (೩೩೧-೩೩೪) ಅವುಗಳನ್ನು ಔಚಿತ್ಯಪೂರ್ಣವಾಗಿ ಪ್ರಯೋಗಿಸುವ ಮುಖ್ಯತೆಯೂ (೩೬೪-, ೩೬೫) ಗೀತಿಗಳಿವೆ ಅವು ಹೇಗೆ ಶೋಭೆಯನ್ನುಂಟುಮಾಡುತ್ತವೆ ಎಂಬುದೂ (೩೬೬) ಮಾತ್ರ ಇಲ್ಲಿ ಪ್ರಸಕ್ತವಾಗಿವೆ. ಉಳಿದವಕ್ಕೆ ಪುನರಕ್ತಿದೋಷವು ಸಲ್ಲುತ್ತದೆ.

ಮೊದಲನೆಯ ಅಧ್ಯಾಯದ ಪದಗೀತಿಪ್ರಕರಣದಲ್ಲಿ ಸುಮಾರು ಹನ್ನೆರಡು ಶ್ಲೋಕಗಳೂ ಹತ್ತು ಗದ್ಯಖಂಡಗಳೂ (೩೭೩-೩೯೧) ಇವೆ. ಮೊದಲನೆಯ ನಾಲ್ಕು ಶ್ಲೋಕಗಳು (೩೬೯-೩೭೨) ಆಕರ ಸೂಚನೆಯಿಲ್ಲದೆ ನಾಟ್ಯಶಾಸ್ತ್ರದಿಂದ ಉದ್ಧರಿಸಿಕೊಂಡವುಗಳು. ಆದರೆ ಗದ್ಯಖಂಡಗಳಲ್ಲಿರುವ ನಿರೂಪಣೆಯು ಮತಂಗನದೇ. ಆದರೆ ಇದು ತುಂಬಾ ಲೋಪದೋಷಗಳಿಂದ ಕೂಡಿದೆ. ಪೂರ್ವಪರಿಚಯವನ್ನೇ ಮಾಡಿಸದೆ ಲಯ, ಕಲೆ, ಲಘು, ಗುರು, ಮಾತ್ರಾ ಮುಂತಾದವುಗಳನ್ನು ಇಲ್ಲಿ ಪ್ರವೇಶಗೊಳಿಸಲಾಗಿದೆ. ಇದರಲ್ಲಿಯೂ ಮೂರನೆಯ (ಗ್ರಾಮ) ರಾಗಾಧ್ಯಾಯದಲ್ಲಿಯೂ ಆರನೆಯ ಪ್ರಬಂಧಾಧ್ಯಾಯದಲ್ಲಿಯೂ ಹೇಳಿರುವ ತಾಳಗಳ ಮತ್ತು ಅವುಗಳ ಪ್ರತ್ಯಯಗಳ ವರ್ಣನೆಗಾಗಿ ಬೃಹದ್ದೇಶಿಯಲ್ಲಿ ಒಂದು ಪ್ರತ್ಯೇಕವಾದ ಅಧ್ಯಾಯವು ಇದ್ದಿರಬಹುದೆಂದು ತೋರುತ್ತದೆ. ಡಾ || ರಾಮನಾಥನ್‌ರವರು (ಉಕ್ತಸ್ಥಾನ, ಪು.೧೨) ಈ ಪ್ರಕರಣದ ಎರಡು ಗ್ರಂಥಾಂಶಗಳ ಕಡೆಗೆ ಗಮನವನ್ನು ಸೆಳೆದಿದ್ದಾರೆ : (i) ‘ಅನ್ಯೇ ತು ದ್ವಿರ್ನಿವೃತ್ತಂ ಮಾಗಧೀಂ ಪಠಂತಿ’ (ನಾಟ್ಯಶಾಸ್ತ್ರಂ, ೩೧.೪೭) ಎಂಬ ಉಕ್ತಿಯನ್ನು ಬೃಹದ್ದೇಶಿಯು ಉದ್ಧರಿಸಿಕೊಂಡಿದೆಯಷ್ಟೇ (೩೭೧). ಒಂದೇ ಕಾಲಪ್ರಮಾಣದಲ್ಲಿ ಮೂರು ಬಾರಿ ಆವೃತ್ತಿಗೊಳ್ಳುವ ಮಾಗಧೀ ಗೀತಿಯಲ್ಲದೆ ಎರಡೇ ಬಾರಿ ಆವೃತ್ತಿಗೊಳ್ಳುವ (ಆಧುನಿಕ ಕರ್ನಾಟಕಸಂಗೀತದಲ್ಲಿ ಒಂದು ವರ್ಣವನ್ನು ಕ್ರಮವಾಗಿ ತ್ರಿಶ್ರಗತಿಯಲ್ಲಿ ಮತ್ತು ಎರಡನೆಯ ಕಾಲದಲ್ಲಿ ಹಾಡುವ ಹಾಗೆ) ಎರಡನೆಯ ಪ್ರಕಾರವನ್ನೂ ಬೇರೆಯವರು ಹಾಡುತ್ತಾರೆ ಎಂಬುದು ಇದರ ಗ್ರಂಥಸಂದರ್ಭ. ಇದನ್ನು ಅವರು ಭರತನ ಮಾತಿಗೆ ವಿಸ್ತರಣ ರೂಪದ ವ್ಯಾಖ್ಯಾನವೆಂದು ಭಾವಿಸುತ್ತಾರೆ. ಇದು ತಾನು ಸ್ವೀಕರಿಸಿದ ಪೂರ್ವಾಚಾರ್ಯಮತವು ಮಾತ್ರವಲ್ಲದೆ ಬೇರೆ ಮತಗಳೂ ಇವೆಯೆಂಬುದನ್ನು ವಿಷಯಸಂಪೂರ್ತಿಗಾಗಿ ಮತಂಗನು ಹೇಳುವ ಸ್ವಾತಂತ್ಯ್ರಪ್ರವೃತ್ತಿಯೆಂದು ನನಗೆ ತೋರುತ್ತದೆ. (ii) ಪ್ರಕರಣಾಂತ್ಯದಲ್ಲಿ (೩೯೧) ‘ಮಾರ್ಗತ್ರಯೇ ಗೀತಿವಿಧೌ ಲಯಪ್ರಯೋಗೋ ನವಧಾ ದೃಷ್ಟವ್ಯಃ ಮತ್ತು ‘ಇತಿ ಗೀತ್ಯಧ್ಯಾಯೇ ಪ್ರತಿಪಾದಿತಂ’ ಎಂಬ ಮಾತುಗಳಿವೆ. ಎರಡನೆಯ ಮಾತಿನಿಂದ ಅವರು ಗೀತಿಗೆ ಸಂಬಂಧಿಸಿದ ಬೇರೆ ಒಂದು ಅಧ್ಯಾಯವು ಬೃಹದ್ದೇಶಿಯಲ್ಲಿ ಇದ್ದಿರಬೇಕೆಂದು ಊಹಿಸುತ್ತಾರೆ. ಇದಕ್ಕೆ ಮುಂಚೆ (೩೮೩-೩೮೫) ಯತಿ, ಗ್ರಹ, ಪ್ರಾಣಿ, ವೃತ್ತಿ, ಲಯ, ತಾಲ ಇವುಗಳನ್ನೂ ಪದಗೀತಿಗಳನ್ನೂ ಗೀತಪ್ರಾಧಾನ್ಯ ಮತ್ತು ವಾದ್ಯಪ್ರಾಧಾನ್ಯಗಳಿಗೆ ಅನುಸಾರವಾಗಿ ವಿವಿಧ ರೀತಿಗಳಲ್ಲಿ ಸಂಬಂಧಿಸುವ ವಿಧಿಗಳಿವೆ. ಇವು ನಾಟ್ಯಶಾಸ್ತ್ರದಲ್ಲೂ (ಅಧ್ಯಾಯ ೨೯), ಸಂಗೀತರತ್ನಾಕರದಲ್ಲೂ (ಅಧ್ಯಾಯ ೬) ವಾದ್ಯನಿರೂಪಣೆಯ ಪ್ರಸಕ್ತಿಯಲ್ಲಿ ಬಂದಿವೆ. ಆದುದರಿಂದ ಬೃಹದ್ದೇಶಿಯಲ್ಲೂ ಇವು ಬೇರೆ ಪ್ರಕರಣಕ್ಕೆ ಸೇರಬೇಕು ಎಂಬ ಅನುಮಾನವನ್ನು ಅವರು ಹೊರಡಿಸುತ್ತಾರೆ (ಉಕ್ತಸ್ಥಾನ, ಪು. ೧೨,೧೩). (೧) ‘ಗೀತ್ಯಧ್ಯಾಯೇ ಪ್ರತಿಪಾದಿತಂ’ (೩೯೨) ಎನ್ನುವ ಮಾತನ್ನು ‘ನಾಟ್ಯಶಾಸ್ತ್ರದ (ಮೂವತ್ತೊಂದನೆಯ) ಗೀತೀ ಅಧ್ಯಾಯದಲ್ಲಿ (ಇದನ್ನು) ಪ್ರತಿಪಾದಿಸಲಾಗಿದೆ’ ಎಂದೂ (೨) ಈ ವಿಧದ ಸಂಬಂಧಕಲ್ಪನೆಯ ತಾಳವಿಧಿಗಳನ್ನು ವಾದ್ಯಪ್ರಧಾನವಾದ ಗೀತಿಗೆ ಹೆಚ್ಚು ಸಮಂಜಸವೆಂದು ಭಾವಿಸಿ ಭರತಮುನಿ ಮತ್ತು ಶಾರ್ಙ್ಗದೇವರು ವಾದ್ಯಾಧ್ಯಾಯಗಳಲ್ಲಿ ನಿರೂಪಿಸಿದ್ದಾರೆಂದೂ (೩) ಮತಂಗನು ಮಾತುಗಳು ಮುಖ್ಯವಾಗಿರುವ ಸಾಮವೇದಪ್ರಸಕ್ತಿಯನ್ನೂ, ‘ದೇವಂ ಶರ್ವಂ’ ಮುಂತಾದ ಮಾತುಗಳು ಪ್ರಧಾನವಾಗಿರುವ ಹಾಡುಗಳನ್ನೂ ಸೂಚಿಸಿ, ಆವೃತ್ತಿವಿಧಿಯಲ್ಲಿ ಮಾತುಗಳು ವಹಿಸುವ ಪಾತ್ರವನ್ನು ಇಂಗಿತಗೊಳಿಸಿ ಇದನ್ನು ಗೀತಿಪ್ರಕರಣದಲ್ಲಿ ಸೇರಿಸಿದ್ದಾನೆ ಎಂದೂ ಭಾವಿಸಿಕೊಂಡರೆ ಇನ್ನೊಂದು ಪ್ರಕರಣದ ಪ್ರಸಕ್ತಿಯು ಉಳಿಯುವುದಿಲ್ಲ. ಶಾರ್ಙ್ಗದೇವನು ಗೀತಿಗಳನ್ನು ಸ್ವರಗತಾಧ್ಯಾಯದಲ್ಲೇ ವರ್ಣಿಸಿದ್ದಾನೆಂಬುದನ್ನು ಗಮನಿಸಬಹುದು.

ಎರಡನೆಯ ಜಾತ್ಯಧ್ಯಾಯದಲ್ಲಿ ೧೧೩ ಶ್ಲೋಕಗಳೂ ೭೦ ಗದ್ಯಗಳೂ ಇವೆ. ಹೀಗೆ ಗದ್ಯಗಳು ಶ್ಲೋಕಗಳಿಗಿಂತ ಕಡಿಮೆಯಾಗಿದ್ದರೂ ಅವೇ ಇಲ್ಲಿ ಪ್ರಧಾನಪಾತ್ರವನ್ನು ವಹಿಸಿ ದೀರ್ಘವಾಗಿಯೂ ನಿಬಿಡವಾಗಿಯೂ ಇವೆ. ಶ್ಲೋಕಗಳನ್ನು ಲಕ್ಷಣಮಂಡನೆ ಮತ್ತು ಪೂರ್ವಾಚಾರ್ಯರ (ಮುಖ್ಯವಾಗಿ ಭರತಮುನಿಯ) ಮತಗಳ ಸಂಗ್ರಹಗಳಿಗಾಗಿ ಬಳಸಲಾಗಿದೆ : ಗದ್ಯಭಾಗಗಳನ್ನು ಶ್ಲೋಕಗಳಲ್ಲಿ ಇಂಗಿತವಾಗಿರುವುದರ ವಿವರಣೆ, ಜಿಜ್ಞಾಸೆ, ಸ್ವಮತಮಂಡನ, ಹೆಚ್ಚುವರಿ ಅಥವಾ ಬೇರೆ ವಿಷಯಗಳ ಪ್ರವೇಶ ಇತ್ಯಾದಿಗಳಿಗಾಗಿ ರಚಿಸಲಾಗಿದೆ. ಆದರೆ ಈ ಅಧ್ಯಾಯದ ಪ್ರಾರಂಭದಲ್ಲಿ ಮೊದಲನೆಯ (೩೯೫) ಮತ್ತು ಎರಡನೆಯ (೪೦೨) ಗದ್ಯಖಂಡಗಳು ವಿಷಯನಿರೂಪಣೆಯಲ್ಲಿ ನಿರಂತರವಾಗಿವೆ. ಅವುಗಳ ನಡುವೆ ಮೂರು ಶ್ಲೋಕಗಳನ್ನು (೩೯೬-೩೯೮ಅಅ) ಎರಡನೆಯ ಸಂಪಾದಕರು ನಾಟ್ಯಶಾಸ್ತ್ರದಿಂದ (೨೮.೩೯-೪೧) ಎತ್ತಿಕೊಂಡು ಗ್ರಂಥಪೂರಣವನ್ನು ಮಾಡಿದ್ದಾರೆ. ಇವು ಬೃಹದ್ದೇಶಿಯಲ್ಲಿ ದೊರೆಯುವ ಮುಂದಿನ ಮೂರು (೪೯೮ಇಈ-೪೦೦) ಶ್ಲೋಕಗಳೊಡನೆ ನಿರಂತರವಾಗಿವೆ ಎಂಬುದು ನಿಜ. ಆದರೆ ಇಲ್ಲಿ ಹೇಳಿರುವ ವಿಷಯಗಳು ಅಧ್ಯಾಯದ ಇತರ ಅಂಶಗಳೊಡನೆ ಪುನರುಕ್ತಿಯನ್ನು ಪಡೆದಿವೆ. ಎರಡನೆಯ ಅಧ್ಯಾಯದ ಜಾತಿಲಕ್ಷಣಗಳಿಗಾಗಿ ಬೃಹದ್ದೇಶಿಯು ಬಹುಮಟ್ಟಿಗೆ ಭರತದತ್ತಿಲರಿಗೂ ಮೂರನೆಯ ಅಧ್ಯಾಯದಲ್ಲಿ ಗ್ರಾಮರಾಗಲಕ್ಷಣಗಳಿಗಾಗಿ ಕಾಶ್ಯಪನಿಗೂ ಋಣಿಯಾಗಿದೆಯೆಂಬುದು ಗಮನಾರ್ಹವಾಗಿದೆ. ಎರಡನೆಯ ಅಧ್ಯಾಯದ ಪ್ರಾರಂಭದಲ್ಲಿ ಶ್ಲೋಕಗಳು (೪೦೫-೪೨೨) ಗದ್ಯಖಂಡದಲ್ಲಿ (೪೦೨, ೪೦೩) ಹೇಳಿರುವ ವಿಷಯಗಳನ್ನು ಉಪಬೃಂಹಿಸುತ್ತವೆ. ಆದರೆ ಅಧ್ಯಾಯದ ಉಳಿದ ಭಾಗಗಳಲ್ಲಿ ಇದು ವಿಪರೀತವಾಗಿದೆ. ಜಾತಿಗಳ ಸಾಮಾನ್ಯಲಕ್ಷಣಗಳಲ್ಲಿ ಎರಡೇ ಗದ್ಯಖಂಡಗಳಿವೆ (೪೨೩, ೪೨೪). ದಶವಿಧಲಕ್ಷಣದಲ್ಲಿ ಮೊದಲು ಎರಡು ಸಂಗ್ರಹಶ್ಲೋಕಗಳೂ (೪೨೬, ೪೨೭) ನಂತರ ಅಂಶಾದಿ ದಶಲಕ್ಷಣಗಳಿಗೆ ಗದ್ಯಗಳೇ ಪ್ರಧಾನಗಳಾಗಿದ್ದು ಗ್ರಹ, ಅಂಶಲಕ್ಷಣಾಂತರ್ಗತ ವಿನ್ಯಾಸ, ತಾರ ಷಾಡವ, ಔಡುವ, ಅಲ್ಪತ್ವ, ಬಹುತ್ವ ನ್ಯಾಸ, ಅಪನ್ಯಾಸ ಎಂಬ ಲಕ್ಷಣನಿರೂಪಕ ಗದ್ಯಖಂಡಗಳಲ್ಲಿ ಭರತನ ಶ್ಲೋಕಗಳನ್ನು ಪ್ರಮಾಣಕ್ಕೆಂದು ಉದ್ಧರಿಸಿಕೊಳ್ಳಲಾಗಿದೆ. ವಿವಿಧ ಜಾತಿಗಳಲ್ಲಿ ಬರುವ ಬೇರೆ ಅಂಶಗಳೊಡನೆ ಜಾತಿಗಳಲ್ಲಿ ಗಣವಿಂಗಡಣೆಯನ್ನು ಕುರಿತ (೪೫೩-೪೮೩) ಮೂವತ್ತೊಂದು ಶ್ಲೋಕಗಳು ಮತಂಗರಚಿತವೇ. ಇದರ ನಂತರದಲ್ಲಿ ಸ್ವರಚಿತ ಶ್ಲೋಕಗಳ ವಿವರಣೆಗಾಗಿಯೇ ‘ಅಸ್ಯಾರ್ಥಃ’ ಎಂದು ಬರೆದೋ (೫೦೮,೫೧೦) ಬರೆಯದೆಯೋ ಗದ್ಯಖಂಡಗಳನ್ನು ಮತಂಗನು ರಚಿಸಿದ್ದಾನೆ. ಈ ಅಧ್ಯಾಯವು ಭರತದತ್ತಿಲಮತಸಂಗ್ರಹದಂತೆ ಪ್ರಥಮದರ್ಶನಕ್ಕೆ ಕಂಡರೂ ಅದು ವ್ಯಾಖ್ಯಾನರೂಪದ್ದಲ್ಲವೆಂದೂ ಸ್ವತಂತ್ರ ಗ್ರಂಥವೆಂದೂ ಸ್ಪಷ್ಟವಾಗುತ್ತದೆ. ಏಕೆಂದರೆ ಬೃಹದ್ದೇಶಿಯು ಈ ಆಕರಗಳಲ್ಲಿ ಹೇಳದಿರುವ ವಿಷಯಗಳನ್ನೂ ನಿರೂಪಣವಿಧಾನವನ್ನೂ ಪ್ರಯೋಗಪುರಃಸರ ನಿದರ್ಶನಗಳನ್ನೂ ಈ ಅಧ್ಯಾಯದಲ್ಲಿ ಒಳಗೊಂಡಿದೆ. ಉದಾಹರಣೆಗೆ ಜಾತಿಶಬ್ದನಿರ್ವಚನ (೪೨೪), ಅಂಶಲಕ್ಷಣದಲ್ಲಿ ಗಾಂಧಾರೀಜಾತಿಯಿಂದ ಉದಾಹರಣೆ (೪೩೧), ವಿದಾರೀ ಶಬ್ಧಕ್ಕೆ ಶಂಕಾಪರಿಹಾರಪುರಃಸರವಾದ ವಿವರಣೆ (೪೩೨), ತಾರಲಕ್ಷಣದಲ್ಲಿ ನಂದಯಂತೀ, ಗಾಂಧಾರೀ ಜಾತಿಗಳಿಂದ ಉದಾಹರಣೆ (೪೩೮), ಮಂದ್ರಲಕ್ಷಣದಲ್ಲಿ ಧೈವತೀಜಾತಿಯಿಂದ ಉದಾಹರಣೆ (೪೪೦), ಶಬರಪುಲಿಂದಕಿರಾತಾದಿ ವನವಾಸಿಗಳಿಂದ ಚತುಃಸ್ವರಪ್ರಯೋಗ (೪೪೩), ಅಲ್ಪತ್ವ-ಲಕ್ಷಣದಲ್ಲಿ ಕಾರ್ಮಾರವಿಯಿಂದ ಉದಾಹರಣೆ (೪೪೬), ಜಾತಿವಿಶೇಷಣಲಕ್ಷಣಗಳಲ್ಲಿ ಸ್ವಕೃತ ಅಥವಾ ಅನೃಕೃತ ಶ್ಲೋಕಗಳನ್ನು ಹೇಳದೆಯೇ ಶುದ್ಧಾ, ವಿಕೃತಿಭೇದಗಳು, ಗ್ರಹಾಂಶನ್ಯಾಸಾ ಪನ್ಯಾಸಾದಿಲಕ್ಷಣಗಳು, ಸಂಗತಿ, ಬಹುಲತ್ವ ತಾರಾಗತಿ, ಮಂದ್ರಗತಿ, ಮೂರ್ಛನೆ, ತಾಲ, ಅದರ ಮಾರ್ಗ, ಕಲಾ, ಗೀತಿ, ವಿನಿಯೋಗವಾಗಬೇಕಾದ ರಸಗಳು, ರೂಪಕದ ವಿವಿಧ ದೃಶ್ಯಗಳಲ್ಲಿ ವಿನಿಯೋಗ ಮುಂತಾದ ವಿವರಗಳು (೫೦೨-೫೪೫) ಇತ್ಯಾದಿಗಳನ್ನು ಉಲ್ಲೇಖಿಸಬಹುದು. ಈ ಅಧ್ಯಾಯದಲ್ಲಿ ಹದಿನೆಂಟು ಜಾತಿಗಳ ಪೈಕಿ ಒಂಭತ್ತರ ಲಕ್ಷಣಗಳು ಮಾತ್ರ ದೊರೆಯುತ್ತವೆ. ಉಳಿದ ಒಂಭತ್ತರ ಲಕ್ಷಣಗಳು ಬೃಹದ್ದೇಶಿಯ ಹಸ್ತಪ್ರತಿಯಲ್ಲಿ ಸಂಗೀತರತ್ನಾಕರದ ಸ್ವರಗತಾಧ್ಯಾಯದಲ್ಲಿರುವ ಜಾತಿಪ್ರಕರಣದಿಂದ ಪ್ರಕ್ಷೇಪಗೊಂಡಿವೆ. ಉಪಲಬ್ಧವಾಗಿರುವ ಯಾವುದೇ ಸಂಗೀತಶಾಸ್ತ್ರೀಯ ಆಕರದಲ್ಲಿ ಉಳಿದ ಈ ಒಂಭತ್ತು ಜಾತಿಗಳಿಗೆ ಮತಂಗಕೃತವಾದ ಲಕ್ಷಣಗಳು ಉದ್ದೃತಿಯಲ್ಲಾಗಲಿ ಸಂಗ್ರಹ, ತಾತ್ಪರ್ಯಗಳಲ್ಲಾಗಲಿ ದೊರೆಯುವುದಿಲ್ಲವೆಂಬುದು ವಿಸ್ಮಯಕರವಾದ ಆದರೆ ದುರ್ದೈವದ ಸಂಗತಿ. ಈ ಪ್ರಕ್ಷೇಪವು ಬೃಹದ್ದೇಶೀ ಹಸ್ತಪ್ರತಿಯಲ್ಲಿ ಕಲ್ಲಿನಾಥನ ಕಾಲಾನಂತರದಲ್ಲಿ (ಕ್ರಿ.ಶ. ಹದಿನೈದನೆಯ ಶತಮಾನದ ಉತ್ತರಾರ್ಧದ ನಂತರ) ನಡೆಯಿತು ಎಂದು ಗ್ರಂಥಲೇಖನ ಪರಂಪರೆಯ ಒಂದು ಸ್ವಾರಸ್ಯಕರವಾದ ಅನುಮಿತಿಯನ್ನು ಡಾ || ರಾಮನಾಥನ್‌ರವರು ಹೊರಡಿಸಿದ್ದಾರೆ. ಈ ಅನುಮಿತಿಯು ಕೈಶಿಕೀಜಾತಿಲಕ್ಷಣದ ಪ್ರಕ್ಷಿಪ್ತಾಂಶದಿಂದ ಸಿದ್ಧವಾಗುತ್ತದೆ. ಏಕೆಂದರೆ ಅದರಲ್ಲಿ ಕೈಶಿಕಿಗೆ ಸಗಮಪಧನಿಗಳು ಅಂಶಗಳು; ನಿಧಗಳು ಅಂಶಗಳಾಗಿರುವಾಗ ಪಂಚಮವು ಮಾತ್ರ ನ್ಯಾಸ ; ಉಳಿದ ಸ್ವರಗಳು ಅಂಶಗಳಾಗಿರುವಾಗ ಗನಿಗಳು ನ್ಯಾಸಗಳು ಎಂದೂ, ಬೇರೆಯವರ ಮತದಂತೆ ನಿಧಗಳು ಅಂಶಗಳಾಗಿದ್ದರೆ ನಿಗಪಗಳು ನ್ಯಾಸಗಳು ಎಂದೂ, ಇದೆ. ಇಲ್ಲಿ ‘ಅನ್ಯೇ’ ಎಂದರೆ ಮತಂಗನೆಂದು ಕಲ್ಲಿನಾಥನು ಬರೆಯುತ್ತಾನೆ. ‘ಧೈವತನಿಷಾದಯೋರಂಶತ್ವೇ ಪಂಚಮೋsಪಿ ನ್ಯಾಸಃ ಇತಿ ಮತಂಗೋಕ್ತತ್ವಾತ್’ (ಸಂಗೀತರತ್ನಾಕರ, ೧.೭.೯೫-೯೮ಕ್ಕೆ ಸಂಗೀತಾಕಲಾನಿಧಿ ವ್ಯಾಖ್ಯಾನ, ಪು.೨೪೫). ಈ ಉದೃತಿಯು ಕಲ್ಲಿನಾಥನಲ್ಲಿದ್ದ ಬೃಹದ್ದೇಶೀ ಪ್ರತಿಯಲ್ಲಿತ್ತೆಂಬುದು ಸ್ಪಷ್ಟವಾಗಿದೆ. ಮತಂಗನನ್ನು ‘ಅನ್ಯೇ’ ಎಂದು ನಿರ್ದೇಶಿಸಿರುವುದರಿಂದ ಈ ಲಕ್ಷಣವು (ಆದುದರಿಂದ ಉಳಿದ ಎಂಟು ಜಾತಿಗಳ ಲಕ್ಷಣಗಳು) ಮತಂಗಕೃತವಲ್ಲವೆಂದು ಸ್ಪಷ್ಟವಾಗುತ್ತದೆ. ಈ ಒಂಭತ್ತು ಜಾತಿಗಳ ಲಕ್ಷಣಗಳಿಗೆ ಸಂಗೀತರತ್ನಾಕರದಲ್ಲಿ ( ೧.೭.೮೫-೧೦೯) ಅಕ್ಷರಶಃ ಪರಸ್ಪರತೆಯು ದೊರೆಯುತ್ತದೆ.

ಮೂರನೆಯ (ಗ್ರಾಮ) ರಾಗಾಧ್ಯಾಯದಲ್ಲಿ ೯೯ ಶ್ಲೋಕಗಳೂ ೬೧ ಗದ್ಯಖಂಡಗಳೂ ಇವೆ. ಬೃಹದ್ದೇಶಿಯ ಮುನಿಸಂವಾದರೂಪದ ಪುರಾಣಶೈಲಿನಿರೂಪಣವು ಇಲ್ಲಿ ಮುಂದುವರಿಯುತ್ತದೆ. ಇಲ್ಲಿ ‘ರಾಗವೆಂದರೇನು ? ರಾಗದ ಲಕ್ಷಣವೇನು, ಅದರ ವ್ಯುತ್ಪತ್ತಿ ಲಕ್ಷಣಗಳೆರಡನ್ನೂ ನೀನು ಹೇಳಬೇಕು’ ಎಂದು ಕೇಳಿದ್ದು ಯಾರೆಂಬುದು ತಿಳಿಯದು ; ಮೊದಲನೆಯ ಅಧ್ಯಾಯದಲ್ಲಿರುವಂತೆ ನಾರದನೇ ಇರಬಹುದೆಂದು ಊಹಿಸಿದೆ. ಉತ್ತರ ನೀಡಿದ್ದು ಮಾತ್ರ ಮತಂಗನೆಂಬುದು ಸ್ಪಷ್ಟವಾಗಿದೆ : ‘ಮತಂಗ ಉವಾಚ’ (೫೮೦ ಪೀಠಿಕೆ). ಮಂಗಲಾಚರಣ, ರಾಗಲಕ್ಷಣ ವ್ಯುತ್ಪತ್ತಿ, ಮತಂಗ – ದುರ್ಗಾಶಕ್ತಿ – ಭರತ – ಯಾಷ್ಟಿಕ – ಕಶ್ಯಪ – ಶಾರ್ದೂಲರಿಂದ ಗೀತಿಭೇದಸಂಗ್ರಹ, ಗೀತಿಲಕ್ಷಣ, ಗೀತಿಭೇದಗಳು, ರಾಗಗೀತಿ, ಸಾಧಾರಣಗೀತಿ, ಭಾಷಾಗೀತಿ, ವಿಭಾಷಾಗೀತಿ, ರಾಗಸಂಖ್ಯಾ, ರಾಗೋದ್ದೇಶ ಇವುಗಳಿಗಾಗಿ ಸುಮಾರು ೪೦ ಶ್ಲೋಕಗಳು (೫೮೦-೬೧೯) ‘ಮತಂಗ ಉವಾಚ,’ ‘ತತ್ರಾದೌ’, ‘ಅಥವಾ’ ಎಂಬ ಮೂರು ತುಂಡು ಗದ್ಯಗಳ ಹೊರತು ನಿರಂತರವಾಗಿ ಹರಿದಿವೆ. ಲಕ್ಷಣಬೋಧಕವಾಗಿರುವ ಗದ್ಯವು ಶುದ್ಧಷಾಡವರಾಗದಿಂದ (೬೨೦) ಮೊದಲಾಗುತ್ತದೆ. ಈ ಅಧ್ಯಾಯದಲ್ಲಿ ಬರುವ ಗದ್ಯಗಳನ್ನು ಹೀಗೆ ವಿಂಗಡಿಸಬಹುದು i. ಗದ್ಯಪೀಠಿಕೆಯೇ ಇಲ್ಲದೆ ಮೊದಲಾಗುವ ಲಕ್ಷಣ ಶ್ಲೋಕಗಳು (೬೨೪, ೬೨೬, ೬೨೮, ೬೪೧, ೬೪೯, ೬೫೫, ೬೬೦, ೬೭೦, ೬೭೨, ೬೮೩, ೬೮೭, ೬೮೯, ೬೯೧, ೬೯೪, ೬೯೬, ೭೦೭, ೭೨೬, ೭೩೭) ii. ‘ಸಾಂಪ್ರತಂ….. ಆಹ’ ಎನ್ನುವ ಪೀಠಿಕಾಗದ್ಯ (೬೫೭), ‘ಇದಾನೀಂ…..ಆಹ’ ಎಂಬ ಪೀಠಿಕಾ ಗದ್ಯಗಳೂ (೬೧೮, ೬೩೫, ೬೪೬, ೬೫೧, ೬೭೪, ೭೨೮) iii. ‘ಲಕ್ಷಣಮಾಹ’ ಎಂದು ಮಾತ್ರ ಇರುವುದು (೬೪೩, ೬೬೭) iv. ಪ್ರಶ್ನೆಯಿಂದ ಮೊದಲಾಗಿ ಉತ್ತರವಿರುವುದು (೬೨೦) v. ‘ನನು’ ಎಂಬ ಶಂಕೆಯಿಂದ ಪ್ರಾರಂಭವಾಗಿ ಸಮಾಧಾನ ನೀಡುವಂತಹವು (೬೩೦, ೬೩೨, ೬೩೭, ೬೬೫, ೬೭೬, ೭೦೪, ೭೦೬, ೭೩೧, ೭೩೩…..) vi. ಲಕ್ಷಣಶ್ಲೋಕದ (-ಗಳ) ನಂತರ ‘ಅಸ್ಯಾರ್ಥಃ’ ಎಂದು ಮೊದಲಾಗುವಂತಹವು (೬೨೨, ೬೨೫, ೬೨೯, ೬೪೨, ೬೪೫, ೬೪೮, ೬೫೦, ೬೫೩, ೬೫೬, ೬೫೯, ೬೬೧, ೬೬೯, ೬೭೧, ೬೭೩, ೬೮೨, ೬೮೪, ೬೮೬, ೬೮೮, ೬೯೦, ೬೯೨, ೬೯೫, ೬೯೮, ೭೦೮, ೭೧೧, ೭೧೩,೭೧೭, ೭೧೯, ೭೨೨, ೭೨೫, ೭೨೭) vii. ‘ಅಸ್ಯಾರ್ಥಃ’ ಎಂದು ಮೊದಲಾಗುವ ಗದ್ಯಗ್ರಂಥಭಾಗಗಳು ಮೇಲುನೋಟಕ್ಕೆ ವ್ಯಾಖ್ಯಾನದಂತೆಯೇ ಕಂಡರೂ ಶ್ಲೋಕಗಳಲ್ಲಿ ಹೇಳದಿರುವ ಮತ್ತು ಇಂಗಿತಗೊಳಿಸದಿರುವ ಪ್ರಯೋಗಸಂದರ್ಭ, ರಸವಿನಿಯೋಗ, ಮೂರ್ಛನಾ, ವರ್ಣ, ಅಲಂಕಾರ, ತಾಳದ ವಿವರಗಳು, ಗೀತಿ, ರೂಪಕ ಪ್ರಯೋಗದಲ್ಲಿ ಸನ್ನಿವೇಶ, ದೃಶ್ಯ ಮುಂತಾದವನ್ನೂ ಅವು ವಿವರಿಸುವುದರಿಂದ ಅವು ವ್ಯಾಖ್ಯಾನರೂಪದಲ್ಲಿಲ್ಲವೆಂದೇ ಹೇಳಬೇಕು. ಶ್ಲೋಕದ ಅರ್ಥವನ್ನು ವಿಸ್ತರಿಸುವಲ್ಲಿ ಅವು ಮುಖ್ಯವಾಗಿ ಆಯಾ ರಾಗಕ್ಕೆ ಇರುವ ಗ್ರಾಮಸಂಬಂಧವನ್ನು ತಿಳಿಸುತ್ತವೆ. ಮೊದಲನೆಯ ಅಧ್ಯಾಯದಲ್ಲಿ ಅನೇಕ ಪೂರ್ವಾಚಾರ್ಯರು ಪ್ರಮಾಣಭೂತ ಆಕರಗಳಾಗಿದ್ದಾರೆ; ಐದನೆಯ (ಅಸಮಗ್ರ) ಅಧ್ಯಾಯಕ್ಕೆ ಯಾರೂ ಇಲ್ಲ. ಎರಡನೆಯ ಅಧ್ಯಾಯದಲ್ಲಿ ಗ್ರಂಥಕಾರನು ಭರತದತ್ತಿಲರ ಜಾತಿಲಕ್ಷಣ ಶ್ಲೋಕಗಳನ್ನು ಪ್ರಮಾಣವಾಗಿ ಇಟ್ಟುಕೊಂಡಿದ್ದಾನೆಂದೂ ಮೂರನೆಯ ಅಧ್ಯಾಯದಲ್ಲಿ ಕಾಶ್ಯಪನ ರಾಗಲಕ್ಷಣ ಶ್ಲೋಕಗಳನ್ನು ಪ್ರಮಾಣವಾಗಿ ಸ್ವೀಕರಿಸಿದ್ದಾನೆಂದೂ ಈಗಾಗಲೇ ಹೇಳಿದೆ. ಅಂತೆಯೇ ನಾಲ್ಕನೆಯ ಅಧ್ಯಾಯದಲ್ಲಿ ಯಾಷ್ಟಿಕಶಾರ್ದೂಲರು ಪ್ರಮಾಣಪುರುಷರಾಗಿದ್ದಾರೆ.

(ಇ) ಬೃಹದ್ದೇಶಿಯ ರಾಗಲಕ್ಷಣಗಳು ಮತ್ತು ಭರತಭಾಷ್ಯ

ಬೃಹದ್ದೇಶಿಯ ಮೂರನೆಯ ಮತ್ತು ನಾಲ್ಕನೆಯ ಅಧ್ಯಾಯಗಳಿಗೆ ಸಂಬಂಧಿಸಿದಂತೆ ಭರತಭಾಷ್ಯದ ಪಾತ್ರವನ್ನು ಕುರಿತ ಕೆಲವು ಮಾತುಗಳನ್ನು ಬರೆಯುವುದು ಇಲ್ಲಿ ಉಚಿತವಾಗಿದೆ. ನಾನ್ಯದೇವನು ಭರತಭಾಷ್ಯದಲ್ಲಿ ಕಾಶ್ಯಪ, ನಾರದ, ಯಾಷ್ಟಿಕ, ಮತಂಗ, ವೃದ್ಧಶಾತಾತಪ, ವೃದ್ಧಕಾಶ್ಯಪ-ಇವರನ್ನು ರಾಗಲಕ್ಷಣಕ್ಕೆ ಪ್ರಾಮಾಣಿಕರನ್ನಾಗಿ ಸ್ವೀಕರಿಸಿ ಇವರಿಂದ ಉದ್ದೃತಿಗಳನ್ನು ಮಾಡಿಕೊಂಡು ಪ್ರತಿಯೊಂದು ರಾಗಕ್ಕೂ ತನ್ನದೇ ಆಲಾಪ ಮತ್ತು ರೂಪಕಗಳನ್ನು ರಚಿಸಿದ್ದಾನೆ. ಇವರುಗಳ ಪೈಕಿ ಕಾಶ್ಯಪ(=ಕಶ್ಯಪ)ನನ್ನು ೬೭ಬಾರಿಯೂ ನಾರದನನ್ನು ಎರಡು ಸಲವೂ ಯಾಷ್ಟಿಕನನ್ನು ೮ ಸಲವೂ ವೃದ್ಧಕಾಶ್ಯಪನನ್ನು ಶಾರ್ದೂಲೀರಾಗಲಕ್ಷಣಕ್ಕಾಗಿ ಒಮ್ಮೆಯೂ (ಭರತಭಾಷ್ಯ ಹಸ್ತಪ್ರತಿ ಪು.೨೮೭) ವೃದ್ಧಶಾತಾಪನನ್ನು ದ್ರಾವಿಡೀರಾಗಕ್ಕಾಗಿ ಒಮ್ಮೆಯೂ (ಅದೇ, ಪು.೨೮೬) ಉದ್ಧರಿಸಿಕೊಂಡಿದ್ದಾನೆ. ಅಲ್ಲದೆ ಬೃಹದ್ದೇಶಿಯನ್ನು ೪೨ ಸಲವೂ ಮತಂಗನನ್ನು ೧೨ ಸಲವೂ ಉದ್ಧರಿಸಿದ್ದಾನೆ. ಈ ಎರಡರ ಪ್ರತ್ಯೇಕ ಉಲ್ಲೇಖಗಳನ್ನು ಗಮನಿಸಬೇಕು; ಒಂದೇ ರಾಗಕ್ಕೆ(ರಂಜಿಕಾ) ಇವೆರಡರಿಂದಲೂ ಭಿನ್ನವಾದ ಲಕ್ಷಣಗಳನ್ನು ಉದ್ಧರಿಸಿಕೊಂಡಿರುವ ಒಂದು ಅಪೂರ್ವ ಸಂದರ್ಭವೂ ಇದೆ. (ಅದೇಸ ಹಸ್ತಪ್ರತಿ; ಮತಂಗ, ಪು.೨೪೫, ಬೃಹದ್ದೇಶೀ : ಪು.೨೭೨).ಸ ಇದು ಗ್ರಂಥಲೇಖನದೋಷದಿಂದಾಗಿದೆಯೋ ಅಲ್ಲವೋ ತಿಳಿಯದು. ಭರತಭಾಷ್ಯದಲ್ಲಿ ಮತಂಗನಿಂದ ಹಾಗೂ ಬೃಹದ್ದೇಶಿಯಿಂದ ಮಾಡಿಕೊಂಡಿದ್ದೆಂದು ಕೊಟ್ಟಿರುವ ಕೆಲವು ರಾಗಲಕ್ಷಣಗಳ ಗ್ರಂಥಾಂಶಗಳು ಉಪಲಬ್ಧ ಬೃಹದ್ದೇಶಿಯಲ್ಲಿರುವ ಆಯಾ ಗ್ರಂಥಾಂಶಗಳಿಗಿಂತ ಭಿನ್ನವಾಗಿವೆಯೆಂಬುದನ್ನು ವಿಶೇಷವಾಗಿ ಗಮನಿಸಬೇಕು. ಇಂತಹ ಕೆಲವು ನಿದರ್ಶನಗಳನ್ನು ಮುಂದೆ ಕೊಟ್ಟಿದೆ. ಅಲ್ಲದೆ ಉಪಲಬ್ಧ ಬೃಹದ್ದೇಶಿಯಲ್ಲಿ ವರ್ಣಿಸುವ ಕೆಲವು ರಾಗಗಳನ್ನು ನಾನ್ಯದೇವನು ನಿರೂಪಿಸಿದ್ದರೂ ಅವುಗಳನ್ನು ಮತಂಗ ಅಥವಾ ಬೃಹದ್ದೇಶಿಯಿಂದ ಉದ್ಧರಿಸಿಕೊಂಡಿಲ್ಲ. ಉದಾ. ಮಾಲವವೇಸರೀ. ಮತಂಗನ ಮತ್ತು ಬೃಹದ್ದೇಶಿಯ ಮಾತಗಳೆಂದು ಭರತಭಾಷ್ಯವು ಉದ್ಧರಿಕೊಂಡಿರುವ ಕೆಲವು ನಿದರ್ಶನಗಳಲ್ಲಿ ಅಲ್ಪ ಸ್ವಲ್ಪ ಶೈಲಿವ್ಯತ್ಯಾಸವು ಇರುವಂತೆ ತೋರುತ್ತದೆ.

ನಾನ್ಯದೇವನು ರಾಗಗಳನ್ನು ಷಡ್ಜಗ್ರಾಮ, ಮಧ್ಯಮಗ್ರಾಮ ಮತ್ತು ಗಾಂಧಾರಗ್ರಾಮಗಳಲ್ಲಿ ವಿಂಗಡಿಸಿ ವರ್ಣಿಸಿದ್ದಾನೆ. ಭರತನ ಕಾಲದಿಂದಲೂ ಗಾಂಧಾರಗ್ರಾಮವು ನಷ್ಟವಾಗಿಹೋಗಿತ್ತೆಂಬ ಶಾಸ್ತ್ರಪರಂಪರೆಯ ಸರ್ವಾನುಮತವನ್ನು ಉಪೇಕ್ಷಿಸಿ ನಾನ್ಯದೇವನು ಭರತಭಾಷ್ಯವೆಂದು ಹೆಸರಿಟ್ಟ ತನ್ನ ಗ್ರಂಥದಲ್ಲಿ ಈ ಗ್ರಾಮವನ್ನು ನಿರೂಪಿಸಿ ಅವುಗಳಲ್ಲಿ ಹುಟ್ಟಿದ ರಾಗಗಳನ್ನು ಕಶ್ಯಪ, ನಾರದ, ಬೃಹದ್ದೇಶೀ, ಮತಂಗ, ಯಾಷ್ಟಿಕ, ವೃದ್ಧಕಶ್ಯಪ ಮತ್ತು ವೃದ್ಧಸಾ(?ಶಾ)ತಾತಪ – ಇವರುಗಳ ಪ್ರಾಮಾಣ್ಯದಿಂದ ಉದ್ಧರಿಸಿಕೊಂಡು ನಿರೂಪಿಸಿರುವುದು ಚಿಂತ್ಯವಾಗಿದೆ. ಮೂರು ಗ್ರಾಮಗಳಲ್ಲಿ ವಿಂಗಡವಾಗುವ ರಾಗಗಳನ್ನು ಬೃಹದ್ದೇಶೀ ಮತ್ತು ಮತಂಗರದೆಂದು ಅವನು ಉಲ್ಲೇಖಿಸುತ್ತಾನೆಂಬುದನ್ನು ಇಲ್ಲಿ ಗಮನಿಯಬೇಕು.

(ಆಕರಸೂಚನೆಯನ್ನು ನನ್ನಲ್ಲಿರುವ ಭರತಭಾಷ್ಯದ ಹಸ್ತಪ್ರತಿಯ ಪುಟಗಳಿಂದ ಕಂಸಗಳಲ್ಲಿ ನಿರ್ದೇಶಿಸಿದೆ.)

i. ಷಡ್ಜಗ್ರಾಮದ ರಾಗಗಳು :

ಬೃಹದ್ದೇಶೀ : ೧) ಸೋಮ* (೨೨೮) ೨) ಬಂಗಾಲೀ (೨೨೯) ೩) ಹಂಸರೂಪಕ* (೨೨೯) ೪) ಕಾಮೋದ* (೨೩೦) ೫) ಲಘು / ದ್ವಿತೀಯ ಕಾಮೋದ* (೨೩೧) ೬) ಮೇಘ* (೨೩೨) ೭) ದೇಶೀ* (೨೩೨) ೮) ಮಲ್ಲಾರ* (೨೩೩) ೯) ಭಮ್ಮಾಣೀ (೨೩೪) ೧೦) ಭೈರವೀ* (೨೩೪) ೧೧) ಗೊಲ್ಲೀ* (೨೩೫) ೧೨) ಸಾರವೀ (?ಸಾವರೀ) (೨೩೫) ೧೩) ಕರ್ಣಾಟವರಾಟೀ* (೨೩೬) ೧೪) ಮಧುಕರೀ (೨೩೭) ೧೫) ಪೌರಾಲೀ (೨೩೭) ೧೬) ಪಲ್ಲವಿ* (೨೩೮) ೧೭) ಗೌಡಕೃತಿ* (೨೪೧) ೧೮) ನಟ್ಟ* ೧೯) ಭೈರವ*

ಮತಂಗ : ೧) ಭಾಸಸವಲಿತಾ* (೨೩೯) ೨) ಸಾಲವಾಹನೀ* (೨೪೦) ೩) ಕೈಶಿಕ(ಗೌಡ-?) (೨೫೨) ೪) ಮಾಲವಕೈಶಿಕ (೨೫೮).

ii. ಮಧ್ಯಮಗ್ರಾಮದ ರಾಗಗಳು :

ಬೃಹದ್ದೇಶೀ : ೧) ಮಧ್ಯಮಗ್ರಾಮ* (೨೪೫) ೨) ನಟ್ಟನಾರಾಯಣ* (೨೭೦) ೩) ರಾಗ(?ನಾಗ)ಧ್ವನಿ* (೨೭೦) ೪) ಬಂಗಾಲ (೨೭೧) ೫) ಆಮ್ರಪಂಚಮ* (೨೭೧) ೬) ದೇಶಾಖ್ಯಾ* (೨೭೧) ೭) ಗೂರ್ಜರೀ (೨೭೨) ೮) ರೀತಿ* (೨೭೩) ೯) ಪ್ರಥಮಮಂಜರೀ (೨೭೪) ೧೦) ಮಲ್ಲಾರೀ* (?) (೨೭೪) ೧೧) ಭೋಗವರ್ಧಿನಿ (೨೭೪) ೧೨) ಸ್ತಂಭಪತ್ರಿಕಾ* (೨೭೫) ೧೩) ಕಾಲಿಂದೀ* (೨೭೫) ೧೪) ಆಂಧಾಲೀ (೨೭೬) ೧೫) ಕಿರಣಾವಲೀ* (೨೭೭) ೧೬) ದೇವಕೃತಿ* (೨೮೭) ೧೭) ತ್ರಿಣೇತ್ರಕೃತಿ

ಮತಂಗ : ೧) ರಂಜಿಕಾ* (೨೭೨) ೨) ಭಿನ್ನವಲಿತಾ (೨೭೬)

iii. ಗಾಂಧಾರಗ್ರಾಮದ ರಾಗಗಳು

ಬೃಹದ್ದೇಶೀ : ೧) ಗಂಧರ್ವಾಮೋದ* (೨೮೦) ೨) ಷಾಡವ* (೨೮೨) ೩) ಬಾಂಗಾಲೀ (೨೮೮) ೪) ಪುಲಿಂದೀ (೨೮೯) ೫) ಶಕವಲಿತಾ (೨೮೯) ೬) ಸಿಂಧುವಲಿತಾ* (೨೯೦) ೭)ಚೂತಮಂಜರೀ* (೨೯೧) ೮) ಹಿಮಕೃತಿ* (೨೯೧) ೯) ಸ್ವಭಾವಕೃತಿ* (೨೯೨)

ಮತಂಗ : ೧) ಕೋಮಲಾ* ೨೭೯) ೨) ರುದ್ರಹಾಸ* (೨೮೦) ೩) ವೀರಹಾಸ* (೨೮೧) ೪) ಪಿಂಜರೀ* (೨೮೨) ೫) ವೇಗಮಧ್ಯಮಾ ೬) ಪಾರ್ವತೀ (೨೮೭)

ಮೇಲ್ಕಂಡ ಪಟ್ಟಿಯಲ್ಲಿ ‘*’ ಎಂಬ ಚಿಹ್ನೆಯಿರುವ ರಾಗಗಳು ಉಪಲಬ್ಧ ಬೃಹದ್ದೇಶಿಯಲ್ಲಿಲ್ಲ. ಉಳಿದ ರಾಗಗಳಲ್ಲಿ ಮಾತ್ರ ಭರತಭಾಷ್ಯದೊಡನೆ ಹೆಚ್ಚುಕಡಿಮೆ ಪರಸ್ಪರತೆಯಿದೆ. ಹೀಗೆ ಭರತಭಾಷ್ಯದಲ್ಲಿ ಮತಂಗ, ಬೃಹದ್ದೇಶಿಗಳಲ್ಲಿವೆಯೆಂದು ಉದ್ಧರಿಸಿಕೊಂಡಿರುವ ೫೪ ರಾಗಗಳಲ್ಲಿ ಸುಮಾರು ಪ್ರತಿದಶ ಒಂಭತ್ತರಷ್ಟು(೪೬)ರಾಗಗಳು ಇಂದು ದೊರೆತಿರುವ ಬೃಹದ್ದೇಶಿಯಲ್ಲಿಲ್ಲವೆಂಬುದು ಗಮನಾರ್ಹವಾಗಿದೆ. ಅವುಗಳ ಪೈಕಿ ಬಹುಪಾಲು ಸಂಗೀತರತ್ನಾಕರದಲ್ಲಿ ಬೇರೆ ಬೇರೆ ಜನಕ-ಜನ್ಯಭಾವಗಳಲ್ಲಿ ದೊರೆಯತ್ತವೆ. ಭರತಭಾಷ್ಯದಲ್ಲಿ ಗಾಂಧಾರಗ್ರಾಮಜನ್ಯವೆಂದು ಹೇಳಿರುವ ಮತಂಗೋಕ್ತ ಹಾಗೂ ಬೃಹದ್ದೇಶೀಪ್ರಣೀತರಾಗಗಳು ಮಾತ್ರವೇ ಅಲ್ಲದೆ ಇತರ ರಾಗಗಳಲ್ಲಿ ಹಲವು ಬೃಹದ್ದೇಶೀ ಮತ್ತು ಸಂಗೀತರತ್ನಾಕರಗಳಲ್ಲಿ ಷಡ್ಜಗ್ರಾಮಜನ್ಯವೆಂದು, ಮಧ್ಯಮಗ್ರಾಮಜನ್ಯ ಅಥವಾ ಉಭಯಗ್ರಾಮಜನ್ಯ ಎಂದು ವರ್ಣಿತವಾಗಿವೆ. ಈ ಎರಡೂ ಆಕರಗಳಲ್ಲಿಯೂ ಗಾಂಧಾರಗ್ರಾಮವು ನಷ್ಟಪ್ರಾಯವೆಂದೇ ಪರಿಗಣಿತವಾಗಿದೆ. ಹೀಗೆ ಬೃಹದ್ದೇಶಿಯಲ್ಲಿ ಲೋಪವಾಗಿ ಹೋಗಿರುವ ಗ್ರಂಥಭಾಗಗಳಲ್ಲಿ ಈ ರಾಗಲಕ್ಷಣಗಳೂ ಸೇರಿವೆ. ಇವನ್ನು ಮುಂದೆ ಉದ್ಧರಿಸಲಾಗುವುದು.

(ಈ) ಗದ್ಯರಹಿತ ಅಧ್ಯಾಯಗಳು

ಬೃಹದ್ದೇಶಿಯಲ್ಲಿ ಉಪಲಬ್ಧವಾಗಿರುವ ಇತರ ಅಧ್ಯಾಯಗಳಲ್ಲಿ ಗದ್ಯವಿಲ್ಲ. ನಾಲ್ಕನೆಯ ಭಾಷಾಧ್ಯಾಯದಲ್ಲಿ ನಿರೂಪಿತವಾಗಿರುವ ರಾಗಗಳಿಗೆ ಪ್ರತಿಯೊಂದಕ್ಕೂ ಸ್ವರಪಡಿಸಿರುವ ಧಾತು ನಿದರ್ಶನಗಳಿವೆ. ಐದನೆಯ ದೇಶೀರಾಗಾಧ್ಯಾಯವು ಅಮಗ್ರವಾಗಿದ್ದು ಅದರಲ್ಲಿ ದೊರೆಯುವ ಕಚ್ಛೆಲ್ಲೀ, ಮಾಂಗಾಲೀ, ಭಮ್ಮಾಣಿಕಾ, ಪುಲಿಂದಿಕಾ, ಗಾಂಧಾರಸಿಂಧು ಮತ್ತು ಕರ್ಣಾಟೀ ಎಂಬ ವರ್ಣನೆಗಳು ರಾಗಾಂಗರಾಗಗಳದ್ದಾಗಿರಬಹುದು. ಇವೂ ಪೂರ್ಣವೋ ಅಪೂರ್ಣವೋ ತಿಳಿಯದು. ಇವುಗಳ ಪೈಕಿ ಕರ್ಣಾಟಿಕಾ ಎಂಬುದೊಂದು ಪ್ರಾಕ್‌ಪ್ರಸಿದ್ಧರಾಗಾಂಗ ರಾಗವಾಗಿ ಉಲ್ಲೇಖಮಾತ್ರದಿಂದ ಸಂಗೀತರತ್ನಾಕರ ದಲ್ಲಿ (೨.೨.೪) ದೊರೆಯುತ್ತದೆ. ಕಚ್ಛೆಲೀ, ಮಾಂಗಾಲೀಗಳು ಬಿನ್ನಷಡ್ಜವೆಂಬ ಗ್ರಾಮರಾಗದ ಭಾಷಾಗಳಾಗಿಯೂ (ಅದೇ ೨.೧.೩೬,೩೭) ಭಮ್ಮಾಣಿಯು ಪಂಚಮದ ವಿಭಾಷೆಯಾಗಿಯೂ (ಅದೇ ೨.೧.೨೯ ; ೨.೨.೧೮೯), ಪುಲಿಂದಿಯು ಭಿನ್ನಷಡ್ಜದ ಭಾಷಾರಾಗವಾಗಿಯೂ (೨.೧.೩೬) ಅಲ್ಲಿಯೇ ಕಂಡುಬರುತ್ತವೆ; ಗಾಂಧಾರಸಿಂಧುವಿನ ಉಲ್ಲೇಖವು ಅಲ್ಲಿ ದೊರೆಯುವುದಿಲ್ಲ.

ಬೃಹದ್ದೇಶಿಯಲ್ಲಿ ದೇಶೀರಾಗಗಳೆಂದು (ಬಹುಶಃ ರಾಗಾಂಗಗಳೆಂದು) ಪರಿಗಣಿತವಾದವುಗಳು ಸಂಗೀತರತ್ನಾಕರದ ಕಾಲಕ್ಕಾಗಲೇ (ಕಡೆಯಪಕ್ಷ, ಶಾರ್ಙ್ಗದೇವನ-ಸ್ವಮತದಲ್ಲಿ ಅಥವಾ ಅನ್ಯಮತಸಂಗ್ರಹದಲ್ಲಿ) ಭಾಷಾ ಅಥವಾ ವಿಭಾಷಾಗಳಾಗಿ ಹೋಗಿದ್ದುದು ತಿಳಿದುಬರುತ್ತದೆ. ಶಾರ್ಙ್ಗದೇವನು ಪೂರ್ವಪ್ರಸಿದ್ಧ ಗ್ರಾಮರಾಗ, ಭಾಷಾ, ವಿಭಾಷಾ ಮತ್ತು ಅಂತರಭಾಷಾಗಳನ್ನು ವರ್ಗೀಕರಿಸಿ ವಿವರಿಸುವಲ್ಲಿ ಬಹುಶಃ ಮತಂಗಕಶ್ಯಪರನ್ನು ಪ್ರಾಮಾಣಿಕರೆಂದು ಸ್ವೀಕರಿಸಿದ್ದಾನೆ; ಆದರೆ ಅವುಗಳನ್ನು ವರ್ಣಿಸುವುದಿಲ್ಲ. ಕಲ್ಲಿನಾಥನು ಗ್ರಂಥಸಂಪೂರ್ತಿಗೆಂದು ಶಾರ್ಙ್ಗದೇವನು ಹೇಳದೆ ಬಿಟ್ಟ ಸುಮಾರ೪ಉ ೧೩೪ ಪ್ರಾಚೀನರಾಗಗಳಲಕ್ಷಣಗಳನ್ನು ಮತಂಗಾಂಜನೇಯಾದಿ ಮತಾನುಸಾರವಾಗಿ ಆದರೆ ಸಂಕ್ಷೇಪಿಸಿ (ಎಂದರೆ ನೇರವಾಗಿ ಉದ್ಧರಿಸದೆ, ತಾತ್ಪರ್ಯಗೊಳಿಸಿ) ಹೇಳುತ್ತಾನೆ. ಇವುಗಳ ಪೈಕಿ ಭರತಭಾಷ್ಯದಲ್ಲಿ ಬೃಹದ್ದೇಶಿ ಮತ್ತು ಮತಂಗರಲ್ಲಿವೆಯೆಂದು ಉದ್ದೃತವಾಗಿ ಬೃಹದ್ದೇಶಿಯಲ್ಲಿ ಇಂದು ದೊರೆಯದೆ ಮೇಲೆ ಪಟ್ಟಿಮಾಡಿರುವವುಗಳಲ್ಲಿ ಹಲವು ಕಲ್ಲಿನಾಥನ ಈ ಅಮೂಲ್ಯಸಂಗ್ರಹದಲ್ಲಿ ದೊರೆಯುತ್ತವೆ. ನಾನ್ಯದೇವನ ಉದ್ದೃತಿಗಳನ್ನೂ ಇವುಗಳಿಗೆ ಪರಸ್ಪರವಾದ ಕಲ್ಲಿನಾಥನ ಸಂಕ್ಷೇಪಗಳನ್ನೂ ಮುಂದೆ ಕೊಟ್ಟಿದೆ.

ಬೃಹದ್ದೇಶಿಯ ನಾಲ್ಕನೆಯ ಅಧ್ಯಾಯವಾದ ಭಾಷಾಲಕ್ಷಣವು ಸರ್ವಾಗಮಸಂಹಿತೆಯೆಂಬ ಹೆಸರಿನ ಗ್ರಂಥವೋ ಪ್ರಕರಣವೋ ಆಗಿತ್ತೆಂಬುದೂ ಮತಂಗಕೃತವಲ್ಲವೆಂಬುದೂ ಸ್ಪಷ್ಟವಾಗಿದೆ. ಇದನ್ನು ಹಿಂದೆಯೇ ಪ್ರಸ್ತಾಪಿಸಿದೆ. ಮತಂಗನದು ಇದರಲ್ಲಿ ಏನು ಪಾತ್ರವೆಂಬುದು ನೇರವಾಗಿ ತಿಳಿಯುವುದಿಲ್ಲ; ಇದರ ಪ್ರಾರಂಭದ ಎರಡು ಶ್ಲೋಕಗಳು ಮತಂಗವಿರಚಿತವಾಗಿದ್ದುದು ಹೆಚ್ಚು ಸಂಭಾವ್ಯವಾಗಿದೆ; ಏಕೆಂದರೆ ‘ಗ್ರಾಮರಾಗ ಮಯಾ ಸರ್ವೇ ಕಥಿತಾ ಲಕ್ಷಣಾನ್ವಿತಾಃ | ಭಾಷಾಣಾಂತು ಪ್ರವಕ್ಷ್ಯಾಮಿ ಲಕ್ಷಣಂ ಚ ತತಃ ಶೃಣುಃ || ‘ (೭೩೮) ಎನ್ನುವ ಪ್ರತಿಜ್ಞಾವಾಕ್ಯವು ಮೂರನೆಯ ಅಧ್ಯಾಯದಲ್ಲಿ ಗ್ರಾಮರಾಗಗಳನ್ನು ವರ್ಣಿಸಿ ಆಗತಾನೇ ಮುಗಿಸಿರುವ ಮತಂಗನಿಗೆ ಒಪ್ಪುತ್ತದೆಯೇ ಹೊರತು ಗ್ರಾಮರಾಗವರ್ಣನೆಯಲ್ಲಿ ಒಮ್ಮೆಯೂ ಕಾಣಿಸಿಕೊಳ್ಳದ ಯಾಷ್ಟಿಕನಿಗೆ ಸಲ್ಲುವುದಿಲ್ಲ. ಮುಂದಿನ ಶ್ಲೋಕವಾದ (೭೩೯) ‘ಭಾಷಾ ಚತುರ್ವಿಧಾ ಪ್ರೋಕ್ತಾ ಮೂಲಸಂಕೀರ್ಣದೇಶಜಾಃ | ಛಾಯಾಮಾತ್ರಾಶ್ರಯಾಃ ಪ್ರೋಕ್ತಾ ಗ್ರಾಮರಾಗೇ ವ್ಯವಸ್ಥಿತಾಃ || ‘ ಎನ್ನುವ ವರ್ಗೀಕರಣವನ್ನು ಈ ಅಧ್ಯಾಯದ ಮುಖ್ಯ ವಿಷಯವನ್ನಾಗಿ ಸಾರಂಶಗೊಳಿಸಿ ಮತಂಗನೇ ಹೇಳಿದ್ದಾನೆಂದು ಗ್ರಹಿಸಬಹುದು. ಹೀಗಾದರೆ ಮೂಲಹಸ್ತಪ್ರತಿಗಳಲ್ಲೇ ಇರುವ ಮುಂದಿನ ಕಾಶ್ಯಪ ಉವಾಚ (೭೪೦) ‘ಯಾಷ್ಟಿಕ ಉವಾಚ’ (೭೪೪)ಗಳು ಸಮಂಜಸವಾಗುತ್ತವೆ. ಮತಂಗನು ‘ಏತಾಶ್ಚ ಯಾಷ್ಟಿಕಪ್ರೋಕ್ತಾಃ…..’ (೮೧೩,೮೩೪,೮೫೨,೮೮೯,೯೧೩,೯೨೩; ಇದೇ ರೀತಿಯ ಗ್ರಂಥಪೂರಣವನ್ನು ೮೬೩,೯೨೧ರಲ್ಲಿಯೂ ಮಾಡಿದೆ.) ಮತ್ತು ‘ಶಾರ್ದೂಲಮತೆ….ಭಾಷಾಃ ಸಮಾಪ್ತಾಃ’ (೯೭೭,೯೯೧,೧೦೦೩,೧೦೩೫) ಎಂಬ ವಾಕ್ಯಗಳನ್ನು ಉಚಿತ ಸಂದರ್ಭಗಳಲ್ಲಿ ಪ್ರವೇಶಗೊಳಿಸಿ ಮತಂಗನು ಸಂಗ್ರಹಕಾರನ ಅಥವಾ ಸಂಪಾದಕನ ಕೆಲಸವನ್ನು ನಿರ್ವಹಿಸಿರುವಂತೆ ಊಹಿಸಬಹುದು. ನಾಲ್ಕನೆಯ ಅಧ್ಯಾಯವು “[ಇತಿ] ಸರ್ವಾಗಮಸಂಹಿತಾಯಾಂ ಯಾಷ್ಟಿಕಪ್ರಮುಖ ಭಾಷಾಲಕ್ಷಣಾಧ್ಯಾಯಃ ಚತುರ್ಥಃ’ (961) ಎಂಬಲ್ಲಿಗೆ ಸಹಜವಾಗಿ ಮುಗಿಯುವಂತೆ ಕಾಣುತ್ತದೆ; ಯಾಷ್ಟಿಕನೇ ಮುಖ್ಯನಾದ ಲಾಕ್ಷಣಿಕರಿಂದ ಸಂಗ್ರಹಿಸಿದ ಭಾಷಾಧ್ಯಾಯಕ್ಕೆ ಸರ್ವಾಗಮಸಂಹಿತಾ ಎಂಬ ಹೆಸರಿತ್ತು ಎಂಬ ಅನುಮಾನವು ಇದರಿಂದ ಹೊರಡುತ್ತದೆ. ಈ ಹೆಸರಿನ ಸಂಗೀತ ಶಾಸ್ತ್ರಗ್ರಂಥವು ಈಗ ಎಲ್ಲಿಯೂ ದೊರೆಯುವುದಿಲ್ಲ. ಆದರೆ ಹರವಿಲಾಸಕವೆಂಬ ಪ್ರಬಂಧವನ್ನು ಮತಂಗಮುನಿಯು ನಿರೂಪಿಸಿರುವುದಾಗಿ ಯಾಷ್ಟಿಕಮತವೆಂಬ ಗ್ರಂಥವು ಉಲ್ಲೇಖಿಸುತ್ತದೆಂದು ಎಂ.ಕೃಷ್ಣಮಾಚಾರ್ಯರು (ಹಿಸ್ಟರಿ ಆಫ್ ಸಂಸ್ಕೃತ ಲಿಟರೇಚರ್, ಪು.೮೨೩-೪) ಹೇಳಿ ಅದು ಮದ್ರಾಸಿನ ಗವರ್ನ್‌ಮೆಂಟ್ ಓರಿಯಂಟಲ್ ಮ್ಯಾನುಸ್ಕ್ರಿಪ್ಟ್ ಲೈಬ್ರರಿಯಲ್ಲಿ ೭೪೫ರ ೧೨ ಎಂಬ ಸಂಖ್ಯೆಯದಾಗಿ ದೊರೆಯುತ್ತದೆಂದು ಹೇಳಿದ್ದಾರೆ. ಆದರೆ ಈವರೆಗೆ ಇದನ್ನು ಹುಡುಕಿ ತೆಗೆಯಲು ಮಾಡಿದ ಪ್ರಯತ್ನಗಳೆಲ್ಲವೂ ವಿಪಲವಾಗಿವೆ. ಇದನ್ನು ಹಿಂದೆ ಹೇಳಿದೆ. ಇದು ಬೃಹದ್ದೇಶಿಯ ನಾಲ್ಕನೆಯ ಭಾಷಾಧ್ಯಯವನ್ನು ಒಳಗೊಂಡಿತ್ತೇ ಸರ್ವಾಗಮಸಂಹಿತೆಗೆ ಬೇರೆ ಹೆಸರೆ ಎಂಬುದು ತಿಳಿಯದು. ಸರ್ವಾಗಮಸಂಹಿತೆಯೆಂದರೆ ಎಲ್ಲಾ ಶಾಸ್ತ್ರಗಳ ಸಂಹಿತೆ (ಆದುನಿಕಾರ್ಥದಲ್ಲಿ ವಿಶ್ವಕೋಶ)ಎಂದು ಅರ್ಥವೇ? ಅದರಲ್ಲಿ ಭಾಷಾರಾಗಗಳ ಅಧ್ಯಾಯವು ನಾಲ್ಕನೆಯದೇ? ಬೃಹದ್ದೇಶಿಯಲ್ಲಿಯೂ ಅದು ಕಾಕತಾಳೀಯವಾಗಿ ನಾಲ್ಕನೆಯ ಅಧ್ಯಾಯವೆ? ಬೃಹದ್ದೇಶಿಯದಾದರೆ ಶಾರ್ದೂಲಮತವೂ ದೇಶೀರಾಗಗಳನ್ನು ಕುರಿತ ಗ್ರಂಥಾಂಶಗಳೂ ಎಷ್ಟನೆಯವು? ಅಧ್ಯಾಯದ ಕೊನೆಯ ಶ್ಲೋಕವೂ (೧೦೩೬) ‘ಇತಿ ಭಾಷಾಲಕ್ಷಣಂ ಸಮಾಪ್ತಮ್’ ಎಂಬ ಸಮಾಪನ ವಾಕ್ಯವೂ ಮತಂಗನವು ಎಂದಿಟ್ಟುಕೊಂಡರೆ ಅಧ್ಯಾಯದ ಆದ್ಯಂತಗಳು ಗ್ರಂಥಕಾರನವೆಂದೂ ಅವನಿಲ್ಲಿ ತಾನು ವರ್ಣಿಸಬೇಕಾಗಿರುವ ಭಾಷಾರಾಗಗಳನ್ನು ಯಾಷ್ಟಿಕಶಾರ್ದೂಲರಿಂದ ಸಂಗ್ರಹಿಸಿ ಸಂಪಾದಿಸಿದ್ದಾನೆಂದೂ ಸಮಂಜಸವಾದ ಅನುಮಿತಿಯು ಸಿದ್ಧವಾಗುತ್ತದೆ. ಹೀಗಾದರೆ ಯಾಷ್ಟಿಕಮತದ ಕೊನೆಯಲ್ಲಿರುವ ‘ಚತುರ್ಥಃ’ (೯೬೧) ಎಂದರೆ ಸರ್ವಾಗಮಸಂಹಿತೆಯಲ್ಲಿನ ನಾಲ್ಕನೆಯ ಅಧ್ಯಾಯವೆಂದೂ ಶಾರ್ದೂಲಮತದ ಕೊನೆಯಲ್ಲಿರುವ ಸಮಾಪನವಾಕ್ಯವು (೧೦೩೬) ಬೃಹದ್ದೇಶಿಯ ನಾಲ್ಕನೆಯ ಅಧ್ಯಾಯದ ಸಮಾಪ್ತಿಯನ್ನು ಸೂಚಿಸುತ್ತದೆಂದೂ ಅರ್ಥವಾಗುತ್ತದೆ.