III ಗ್ರಂಥ : ಬೃಹದ್-ದೇಶೀ

(ಅ) ಹೆಸರು

ಬೃಹದ್ದೇಶೀ ಎಂಬುದು ಈ ಗ್ರಂಥದ ಹೆಸರೆಂದು ದೊರೆತಿರುವ ಗ್ರಂಥಾಂಶದಲ್ಲಿ ಎಲ್ಲಿಯೂ ಹೇಳಿಲ್ಲ. ಅದರ ಮೂರನೆಯ, ಐದನೆಯ ಮತ್ತು ಆರನೆಯ ಅಧ್ಯಾಯಗಳ ಸಮಾಪ್ತಿವಾಕ್ಯಗಳಲ್ಲಿ ‘ಮತಂಗಮುನಿವಿರಚಿತಬೃಹದ್ದೇಶ್ಯಾಂ’ ಎಂದಿದೆ. ಉಳಿದ ಅಧ್ಯಾಯಗಳಲ್ಲಿ ಮೊದಲನೆಯ ಎರಡು ಅಧ್ಯಾಯಗಳಲ್ಲಿ ಸಮಾಪ್ತಿವಾಕ್ಯಗಳಿಲ್ಲ; ನಾಲ್ಕನೆಯದಕ್ಕೆ ಸಮಾಪ್ತಿವಾಕ್ಯವಿದ್ದರೂ ಮತಂಗ ಮತ್ತು ಅಥವಾ ಬೃಹದ್ದೇಶಿಯ ಹೆಸರುಗಳಿರದೆ ಸರ್ವಾಗಮಸಂಹಿತೆಯೆಂದಿದೆ. ಇದಕ್ಕಿಂತ ಮುಖ್ಯವಾಗಿ ಮತಂಗೋತ್ತರ ಸಂಗೀತಲಾಕ್ಷಣಿಕರು (ಉದಾ.ಕೋಹಲ, ಅಭಿನವಗುಪ್ತ, ನಾನ್ಯದೇವ, ಪಾರ್ಶ್ವದೇವ, ಶಾರ್ಙ್ಗದೇವ, ಸಿಂಹಭೂಪಾಲ, ಕಲ್ಲಿನಾಥ, ಕುಂಭಕರ್ಣ, ಸೋಮನಾಥ) ಮತಂಗನೆಂಬ ಹೆಸರಿನಲ್ಲಿಯೋ ಬೃಹದ್ದೇಶಿಯೆಂಬ ಹೆಸರಿನಲ್ಲಿಯೋ (ಒಮ್ಮೊಮ್ಮೆ ಮತಂಗವಿರಚಿತ ಬೃಹದ್ದೇಶಿಯಲ್ಲಿ ಎಂದು ಹೇಳುವುದೂ ಇದೆ. ಮಾಡಿಕೊಂಡ ಉದ್ದೃತಿಗಳು ಬೃಹದ್ದೇಶಿಯೆಂಬ ಹೆಸರಿನಲ್ಲಿ ದೊರೆತಿರುವ ಈ ಗ್ರಂಥದಲ್ಲಿವೆ. ನೇರವಾದ ಉದ್ಧೃತಿಯಲ್ಲಿ ಈ ಎರಡು ಹೆಸರುಗಳ ಉಲ್ಲೇಖನಗಳು ಇರುವಾಗಲೂ ಅಂತಹ ವಿಷಯಗಳು ಬೃಹದ್ದೇಶಿಯಲ್ಲಿ ದೊರೆಯದೆ ಇರುವುದೂ ಉಂಟು. ಇವುಗಳನ್ನು ಮುಂದೆ ಪ್ರಸ್ತಾಪಿಸಲಾಗುವುದು.

ಬೃಹದ್ದೇಶೀ ಎಂಬುದು ಸಂಸ್ಕೃತ ಶಬ್ದ. ಬೃಹತ್+ದೇಶೀ ಎಂಬುದು ಅದರ ವಿಗ್ರಹ. ಬೃಹತ್ತಾದ ದೇಶಿಯನ್ನು ಉಪದೇಶಿಸುವ ಗ್ರಂಥ ಎಂದು ಇದರ ಅರ್ಥ. ಬೃಹತ್ ಎನ್ನುವುದಕ್ಕೆ ಉದಾತ್ತ, ಎತ್ತರ, ವಿಸ್ತಾರ, ಮಹತ್ತು, ಶಕ್ತಿ, ಬಲ, ವ್ಯಾಪಕ, ಅಪಾರ, ಪೂರ್ಣವಾಗಿ ಬೆಳೆದಿದ್ದು, ಪ್ರಕಾಶ, ಸ್ಪಷ್ಟ, ಉಚ್ಚ, ವಾಕ್ (ಬೃಹತಾಂ ಪತಿಃ = ಬೃಹಸ್ಪತೀ, ಉದಾ. ಮಾಘ, ಶಿಶುಪಾಲವಧಾ ೨.೨೬) ಮುಂತಾದ ಅರ್ಥಗಳಿವೆ (ಮೋನಿಯರ್ ಮೋನಿಯರ್ ವಿಲಿಯಂಸ್, ಎ ಸಂಸ್ಕೃತ- ಇಂಗ್ಲೀಷ್ ಡಿಕ್ಷನರಿ ಪು. ೭೩೫). ದೇಶೀಶಬ್ದವು (ಸಂಸ್ಕೃತವಲ್ಲದ) ಒಂದು ದೇಶಭಾಷೆಯ ಆಡುಮಾತಿನ (ಹಾಡಿನ, ಕುಣಿತದ) ರೂಪ, ಒಂದು ಪ್ರಾಂತೀಯ ವ್ಯತ್ಯಾಸ ಅಥವಾ ವೈಶಿಷ್ಟ್ಯ ಆಯಾ ಮೂಲನಿವಾಸಿಗಳಿಗೆ ವಿಶಿಷ್ಟವಾದ ಅಭಿವ್ಯಕ್ತಿಪ್ರಕಾರ ಎಂಬ ಅರ್ಥಗಳನ್ನು ಹೊಂದಿದೆ. ದೇಶೀಯ, ದೇಶ್ಯ ಎಂಬ ಮಾತುಗಳಿಗೂ ಇವೇ ಅರ್ಥಗಳಿವೆ (ಅದೇ ಗ್ರಂಥ ಪು. ೪೯೬). ಮತಂಗಮುನಿಯು ಗ್ರಂಥಾರಂಭದಲ್ಲಿ ದೇಶೀ ಎಂದರೇನು, ಅದು ಹೇಗೆ ಬೃಹತ್ತು ಎಂಬುದನ್ನು ವಿವರಿಸಿ ಗ್ರಂಥದ ಹೆಸರನ್ನು ಸಮರ್ಥಿಸಿಕೊಂಡಿದ್ದಾನೆ. ನಾರದನು ಕೇಳಿದ ಪ್ರಶ್ನೆಗೆ ಉತ್ತರವಾಗಿ ಅವನು ಯಾವ ಧ್ವನಿಯು ಬೇರೆ ಬೇರೆ ದೇಶಗಳಲ್ಲಿ ಸಕಲ ಪಶುಗಳಿಗೂ ಶ್ರೀ ಸಾಮಾನ್ಯನಿಂದ ರಾಜರವರೆಗೆ ಅವರವರ ರುಚಿಗೆ ತಕ್ಕಂತೆ ಸುಖವನ್ನು ಎಂದರೆ ಆಹ್ಲಾದವನ್ನು ನೀಡುತ್ತದೋ, ಅದು ದೇಶೀ ಎಂದು ವಿವರಿಸುತ್ತಾನೆ. ಇಲ್ಲಿ ಧ್ವನಿ ಎಂದರೆ ನಾದ ಎಂದು ಅರ್ಥವಿರುವಂತೆ ಕಾಣುತ್ತದೆ. ಇದು ಅಮೂರ್ತವಾದುದು. ಎಂದರೆ ದೇಶಕಾಲಗಳ, ನಾಮರೂಪಗಳ ಉಪಾಧಿಗಳಿಲ್ಲದ್ದು. ಅದಕ್ಕೆ ದೇಶೀತ್ವವು ಒದಗುವುದು ಹೇಗೆ, ಎಂದು ನಾರದ ಮುನಿಯು ಕೇಳುತ್ತಾನೆ. ಮತಂಗಮುನಿಯು ನಾದಮೂಲಕವಾದ ಬ್ರಹ್ಮಾಂಡಸೃಷ್ಟಿಯನ್ನು ವಿವರಿಸಿ ನಾದ – ವ್ಯಕ್ತಾವ್ಯಕ್ತಧ್ವನಿ – ವ್ಯಕ್ತ – ಮಾತೃಕಾ – ಸ್ವರವ್ಯಂಜನ ರೂಪದ ಮಾತೃಕೆಗಳು – ಪದ – ವಾಕ್ಯ – ಅದರಿಂದ ಜಗತ್ತೆಂಬ ಅರ್ಥ – ಆದರಿಂದಲೇ ಜಗತ್ತನ್ನು ಮೀರಿ ಪಿಂಡಾಂಡದಲ್ಲಿ ಗೋಚರವಾಗುವ ಅಹಂತಾವನ್ನು ಬೋಧಿಸುವ ಮಹಾವಾಕ್ಯ – ವೇದಗಳು ಎಂಬ ವಿಕಾಸ ಕ್ರಮವನ್ನು ಉಪದೇಶಿಸುತ್ತಾನೆ (೧-೧೩). ಸ್ವರ ಎಂಬ ಮಾತಿಗೆ ಎರಡು ಅರ್ಥಗಳನ್ನಿಟ್ಟುಕೊಂಡು ಶಕ್ತಿರೂಪವಾದುದು, ಎಂದರೆ ವ್ಯಂಜನಕ್ಕೆ ಅಭಿವ್ಯಕ್ತಿಶಕ್ತಿಯಾಗಿದ್ದುಕೊಂಡು ಅದನ್ನು ವರ್ಣವನ್ನಾಗಿಸುವುದು, ಎಂದರೆ ವಾಕ್‌ಸಮಾಮ್ನಯ ಅಥವಾ ಭಾಷೆ ಎಂದೂ ಷಡ್ಜಾದಿ ರೂಪವಾದುದು, ಎಂದರೆ ಸ್ವರಸಮಾಮ್ನಾಯ ಎಂದರೆ ಸಂಗೀತಸಮಷ್ಟಿ ಎಂದೂ ಅರ್ಥೈಸಿ ಧ್ವನಿಯು ಎಷ್ಟೊಂದು ವ್ಯಾಪಕವಾಗಿದೆ. ಆದುದರಿಂದ ದೇಶೀಯು ಬೃಹತ್ತು ಎಂದು ಸಾಧಿಸಿದ್ದಾನೆ. ಹೀಗೆ, ಮಾತಿನಲ್ಲಿ ಹೇಳಬಹುದಾದ, ಪರನಿಷ್ಠವಾದ (referential), ಹಾಗೂ ಮಾತಿನಲ್ಲಿ ಹೇಳಲಾಗದ ಸ್ವನಿಷ್ಠವಾದ, ಎರಡು ರೀತಿಯ ಅನುಭವಗಳನ್ನೂ ಧ್ವನಿಯು, ಎಂದರೆ ದೇಶಿಯು ವ್ಯಾಪಿಸುತ್ತದೆ. ಧ್ವನಿಶಬ್ದಕ್ಕೆ ಎರಡು ಅರ್ಥಗಳನ್ನಿಟ್ಟುಕೊಂಡು ದೇಶೀ ಎಂಬುದರ ವ್ಯಾಪ್ತಿಯನ್ನು ಇನ್ನೂ ಹೆಚ್ಚು ಮಾಡಬಹುದು. ಎಂದರೆ ದೇಶಿಯು ಬೃಹತ್ತಾಗುತ್ತದೆ: ಧ್ವನಿ ಎಂದರೆ ಶ್ರವಣಗೋಚರವಾದ ಶಬ್ದ. ಧ್ವನಿಯೆಂದರೆ ಅರ್ಥದ ವಕ್ರತೆ ಎಂಬ ಅಲಂಕಾರಿಕಾರ್ಥವೂ ಇದೆಯಷ್ಟೇ. ಹೀಗೆ ಮೊದಲನೆಯದರಿಂದ ವಾಚ್ಯಾರ್ಥವನ್ನೂ, ಎಂದರೆ ಪ್ರಾಥಮಿಕ ಅಥವಾ ಶಾಸ್ತ್ರಬೋಧ್ಯವಾದ ಅರ್ಥವನ್ನೂ ಎರಡನೆಯದರಿಂದ ಕಾವ್ಯಾರ್ಥವನ್ನೂ ಹೊರಡಿಸಬಹುದು. ಅಂತೆಯೇ ಸ್ವರದಿಂದ ಪ್ರಾತಿಪದಿಕಾರ್ಥವನ್ನೂ (ಹೋಲಿಸಿ: ವಿಭಕ್ತಿಪ್ರತ್ಯಯಗಳಿಲ್ಲದ ಪದ) ಸ್ವರವಕ್ರತೆಯಾದ ಗಮಕವನ್ನೂ (ಹೋಲಿಸಿ: ವಿಭಕ್ತಿಪ್ರತ್ಯಯಗಳನ್ನುಳ್ಳ ಪದ ಎಂದರೆ ವಾಕ್ಯದ ಇತರ ಪದಗಳೊಡನೆ ವಿವಿಧ ಸಂಬಂಧಗಳನ್ನು ಹೊಂದಿ ಅದರಲ್ಲಿ ವಾಕ್ಯಾರ್ಥಬೋದಕ್ಕೆ ಪ್ರಯೋಜಕವಾಗುವುದು) ಎಂಬ ಅರ್ಥಗಳನ್ನು ಹೇಳಬಹುದು. ಮೊದಲನೆಯದರಿಂದ ಸಂಗೀತದ ಸಾಮಾನ್ಯತೆ ಮತ್ತು ಸಮಷ್ಠಿಯನ್ನೂ ಎರಡನೆಯದರಿಂದ ಸಂಗೀತದ ವಿಶೇಷವನ್ನೂ ಅರ್ಥೈಸಬಹುದು. ಹೀಗೆ ಧ್ವನಿಶಬ್ದದಿಂದ ಭಾಷೆ ಮತ್ತು ಸಂಗೀತಗಳೆರಡನ್ನೂ ಪರಿಭಾವಿಸಬಹುದು.

ದೇಶದೇಶಗಳಲ್ಲಿರುವ ಜಂತುಗಳಿಗಗೂ ಲೋಕರಿಗೂ ನರೇಂದರಿಗೂ (=ಶ್ರೇಷ್ಠಮಾನವರಿಗೆ = ಶಿಷ್ಟರಿಗೆ?) ಅವರವರ ಅಭಿರುಚಿಗೆ ತಕ್ಕಂತೆ ಸುಖವನ್ನು ಕೊಡುವ ಧ್ವನಿಯು ದೇಶಿ ಎಂಬ ನಿರೂಪಣೆಯು ಭಾರತೀಯ ಸಂಗೀತದಲ್ಲಿ ಮತಂಗನಿಂದ ಉದ್ಘಾಟಿತವಾಯಿತು. ಅವನು ಇದನ್ನು ಗೀತಕ್ಕೆ ಮಾತ್ರ ಅನ್ವಯಿಸಿದಂತಿದೆ (ಏಕೆಂದರೆ ಮೇಲೆ ಹೇಳಿದ ವಿಕಾಸ ಕ್ರಮದಲ್ಲಿ (೪-೧೩) ವಾಕ್ಯ. (೧೪), ಮಾಹಾವಾಕ್ಯ ಇವುಗಳು ಧ್ವನಿತವಾಗಿ (ಎಂದರೆ ಮಾನವ ಧ್ವನಿಯಿಂದ ಪ್ರಕಟವಾಗಿ, ಶ್ರವಣಗೋಚರವಾಗಿ) ಅವುಗಳಿಂದ ಗಾಂಧರ್ವವಿದ್ಯೆಯು ಹುಟ್ಟಿತೆಂದು ಅವನು ಹೇಳುತ್ತಾನೆ (೧೧). ಅವನು ವಾದ್ಯವನ್ನೂ ನೃತ್ಯವನ್ನೂ ಬೃಹದ್ದೇಶಿಯಲ್ಲಿ ಹೇಳಿದ್ದಾನೆ ಇದನ್ನು ಮುಂದೆ (ಪು.೧೦೪-೧೧೨) ‘ಲುಪ್ತಾಂಶಗಳು, ಉದ್ಧೈತಿಗಳು, ಉಲ್ಲೇಖಗಳು-ವಾದ್ಯಾಧ್ಯಾಯ, ನೃತ್ತಾಧ್ಯಾಯ ಎಂಬಲ್ಲಿ ತೋರಿಸಲಾಗುವುದು. ಆದರೆ ಇವುಗಳನ್ನು ದೇಶೀ ಎಂದು ಕರೆದ ಹಾಗೆ ತೋರುವುದಿಲ್ಲ. ಅದನ್ನು ವಾದ್ಯನೃತ್ತಗಳಿಗೂ ಮತಂಗೋತ್ತರ ಲಾಕ್ಷಣಿಕರಾದ ಜಗದೇಕಮಲ್ಲ, ಶಾಙ್ಗದೇವ ಮುಂತಾದವರು ಅನ್ವಯಿಸಿ ದೇಶೀಶಬ್ದದ ಅರ್ಥವನ್ನು ವಿಸ್ತರಿಸಿದ್ದಾರೆ. ಅಲ್ಲದೆ ‘ಗೀತಂ ವಾದ್ಯಂ ತಥಾ ನೃತ್ತಂ ತ್ರಯಂ ಸಂಗೀತಮುಚ್ಯತೇ’ ಎಂಬ ಕಲ್ಪನೆಯು ಮತಂಗನಲ್ಲಿ ಕಂಡುಬರುವುದಿಲ್ಲ. ಈ ಮೂರರಲ್ಲಿ ಒಂದೊಂದಕ್ಕೂ ಅವುಗಳ ಸಮಷ್ಟಿಗೂ ಸಂಗೀತವೆಂಬ ವ್ಯವಹಾರವು ನಂತರದಲ್ಲಿ- ಸು.ಕ್ರಿ.ಶ. ಹನ್ನೆರಡನೆಯ ಶತಮಾನದ ವೇಳೆಗೆ – ಭಾರತೀಯ ಸಂಗೀತಶಾಸ್ತ್ರದಲ್ಲಿ ಕಂಡುಬರುತ್ತದೆ.

ಬೃಹದ್ದೇಶಿಯು ಮುಖ್ಯವಾಗಿ ದೇಶೀಯ ನಿರೂಪಣೆಗೆಂದೇ ಹೊರಟಿದೆ. ಪ್ರಾರಂಭದಲ್ಲಿ ದೇಶಿಯ ಉತ್ಪತ್ತಿ, ದೇಶಿಯ ಲಕ್ಷಣ, ಮಾರ್ಗದಿಂದ ಅದರ ಭಿನ್ನತೆ, ಅಲಂಕಾರಗಳಲ್ಲಿಯೂ ಗೀತಿಗಳಲ್ಲಿಯೂ ಓಹಾಟೀ (-ಡೀ) (೩೦೭, ೫೯೬-೬೦೦,೬೬೬) ಎಂಬುದರ ವರ್ಣನೆ, ಜಾತಿಗಳಲ್ಲಿ ದೇಶವಾಚಕಗಳಾದ (ಉದೀಚ್ಯ = ಉತ್ತರದಿಕ್ಕು) ಷಡ್ಜೋದೀಚ್ಯವಾ (೪೯೯) ಗಾಂಧಾರೋದೀಚ್ಯವಾ (೩೯೯-೩೬೩, ಅಲ್ಲಲ್ಲಿ), ಮಧ್ಯಮೋದೀಚ್ಯವಾ (೩೯೯-೩೬೩ ಅಲ್ಲಲ್ಲಿ) ಮತ್ತು ಆಂಧ್ರೀ (೪೧೦-೫೭೪ ಅಲ್ಲಲ್ಲಿ) (ಇವನ್ನು ಭರತದತ್ತಿಲಾದಿಗಳೂ ನಾನ್ಯದೇವ, ಶಾರ್ಙ್ಗದೇವ ಇತ್ಯಾದಿ ಇತರರೂ ವರ್ಣಿಸಿದ್ದಾರೆ) ಭಾಷಾ ರಾಗಗಳಲ್ಲಿ ಮೂಲಾ (೭೩೯-೧೦೩೦ ಅಲ್ಲಲ್ಲಿ), ದೇಶಜಾ (೭೩೯, ೭೪೦, ೭೮೭, ೭೮೯, ೭೯೨), ದೇಶಭಾಷಾ (೭, ೯೩೭, ೧೦೮೯, ೧೦೯೬, ೧೦೯೭) ದೇಶನಾಮಸಂಭವಗಳಾದ ರಾಗಗಳು (೭೯೨, ೮೦೨, ೮೨೨, ೮೨೬, ೮೩೬, ೮೭೭, ೮೯೨, ೯೦೫, ೯೪೨, ೯೭೨, ೧೦೦೬) ದೇಶಿಕಾರಪದ (೧೧೮೭), ದೇಶೀಗೀತೆ (೧೦೮೭) ದೇಶೀಮಾರ್ಗ (೧೬೪), ದೇಶೀಮುಖತ್ವ (೧೩), ದೇಶೀತಾಲ (೧೧೩೯), ದೇಶೀಗೀತ (೧೦೮೭) ಇವುಗಳು ಮೊಟ್ಟಮೊದಲಬಾರಿಗೆ ಬೃಹದ್ದೇಶಿಯಲ್ಲಿ ಪ್ರವೇಶಗೊಂಡಿವೆ. ಭಾಷಾರಾಗಗಳಲ್ಲಿ ದೇಶವಾಚಕ ಗಳಾದ ದೇಶಾಖ್ಯಾಗಳನ್ನು ವರ್ಣಿಸಿರುವುದಲ್ಲದೆ, ದೇಶೀ ರಾಗಗಳಿಗೇ ಪ್ರತ್ಯೇಕವಾದ (ಐದನೆಯ) ಅಧ್ಯಾಯವನ್ನು ಬೃಹದ್ದೇಶಿಯು ಒಳಗೊಂಡಿದೆ. ಭಾರತೀಯ ಸಂಗೀತದಲ್ಲಿ ಗೇಯಪ್ರಬಂಧಗಳನ್ನು ನಾಟಕಪ್ರಸಕ್ತಿಯಿಲ್ಲದೆ ಸಂಗೀತನಿಷ್ಠಮಾತ್ರವಾಗಿ ನಿರೂಪಿಸಿರುವುದರಲ್ಲಿಯೂ ಬೃಹದ್ದೇಶಿಯೇ ಮೊದಲು. ಅವುಗಳ ವರ್ಣನೆಯನ್ನು ಕನ್ನಡದೇಶದ ಪ್ರಬಂಧದಿಂದಲೇ ಮೊದಲು ಮಾಡಿ, ದೇಶಭಾಷೆ (ಪ್ರಾಕೃತ, ಲಾಟ, ತೆಲುಗು, ತಮಿಳು, ಕನ್ನಡ)ಗಳಲ್ಲಿ ರಚಿತವಾದವುಗಳನ್ನು ಲಕ್ಷಿಸುವುದರಲ್ಲಿಯೂ ಅದೇ ಮೊದಲು. ಏಲಾ ಪ್ರಬಂಧದಲ್ಲಿ ದೇಶೈಲಾಗಳನ್ನು (೧೧೭೪ ಇತ್ಯಾದಿ) ಹೇಳಿರುವುದರಲ್ಲಿಯೂ ಅಷ್ಟೇ. ಈ ಎಲ್ಲ ಪ್ರಬಂಧಗಳನ್ನೂ ಮತಂಗನು ದೇಶಿಕಾರ (=ದೇಶೀ)ವೆಂದು ಕರೆದಿರುವುದು (೧೦೫೩) ವಿಶೇಷವಾಗಿ ಗಮನಾರ್ಹವಾಗಿದೆ; ಇನ್ನೂ ಸ್ವಾರಸ್ಯವೆಂದರೆ ದೇಶಿಕಾರಪ್ರಬಂಧಗಳು ಅಸಂಖ್ಯಾತವೆಂದೂ, ಅವುಗಳೆಲ್ಲ (ಸದ್ಯೋಜಾತಾದಿ?) ಹರವಕ್ತ್ರಗಳಿಂದ ಹೊರಹೊಮ್ಮಿದವುಗಳೆಂದೂ ಹೇಳುವುದು (೧೦೫೩). ಜನಪದ ಮೂಲವಾದುದು ದೇಶೀ ಎಂದೂ ಬ್ರಹ್ಮಾದಿ ದೇವತೆಗಳು ಹುಡುಕಿ ಕಂಡುಹಿಡಿದು ಶಂಭುವಿನ ಮುಂದೆ ಪ್ರಯೋಗಿಸಿದುದು ಮಾರ್ಗವೆಂದೂ ನಂತರದ ಲಾಕ್ಷಣಿಕರು (ಉದಾ. ಶಾರ್ಙ್ಗದೇವ) ಹೇಳಿರುವುದನ್ನು ಹೋಲಿಸಿದರೆ ಮತಂಗನು ದೇಶೀಗೆ ಹರವಕ್ತ್ರೋದ್ಭವತ್ವದ ಪಾವಿತ್ವ್ರವನ್ನೂ ಹೆಗ್ಗಳಿಕೆಯನ್ನು ತಂದುಕೊಟ್ಟಿರುವುದು ಒಂದು ಕ್ರಾಂತಿಕಾರಕ ಕಲ್ಪನೆಯಾಗಿದೆ.

(ಆ) ದೇಶೀ-ಮಾರ್ಗ

ಮತಂಗನು ದೇಶೀಶಬ್ದವನ್ನು ಪ್ರಕಟವಾಗಿ ಮೂರು ಸಲವೂ (೨,೧೪,೧೬) ಇಂಗಿತದಲ್ಲಿ ಒಮ್ಮೆಯೂ (೪೪೩) ದೇಶೀತ್ವ ಎಂಬುದನ್ನು ಒಮ್ಮೆಯೂ (೩) ದೇಶೀಮಾರ್ಗ ಎಂಬುದನ್ನು ಒಮ್ಮೆಯೂ (೧೬೪) ದೇಶೀಮುಖವನ್ನು ಒಮ್ಮೆಯೂ (೧೩) ಬಳಸುತ್ತಾನೆ. ದೇಶೀಯು ಗೀತಕ್ಕೂ (೧೦೮೭) ರಾಗಕ್ಕೂ (೧೦೩೪, ೧೦೪೪) ತಾಲಕ್ಕೂ (೧೧೭೯) ವಿಶೇಷಣವಾಗಿ ಮತ್ತು ದೇಶೀಕಾರವು ಪದಕ್ಕೂ (೧೧೮೭) ಪ್ರಬಂಧಕ್ಕೂ (೧೦೫೩) ವಿಶೇಷಣವಾಗಿ ಬೃಹದ್ದೇಶಿಯಲ್ಲಿ ಪ್ರಯುಕ್ತವಾಗಿವೆ. ಅಂತೆಯೇ ಮಾರ್ಗಶಬ್ದವನ್ನೂ (೧೫, ೩೭೮, ೩೮೫, ೪೨೨, ೪೪೩, ೪೯೨) ಮಾರ್ಗಯುಕ್ತ ಎಂಬುದನ್ನೂ (೧೧೬೭), ಮಾರ್ಗರಾಗ ಎಂಬುದನ್ನೂ (೧೦೪೪), ಮಾರ್ಗೀಯನ್ನೂ (೧೯೩೨೬೯) ಅವನು ಬಳಸಿದ್ದಾನೆ. ಈ ಸಂದರ್ಭಗಳು ಹೀಗಿವೆ;

ದೇಶೀ : ೩. ದೇಶದೇಶಗಳಲ್ಲಿ ಜಂತುಗಳೂ (ಸಾಧಾರಣ) ಜನರಿಗೂ ದೊರೆಗಳಿಗೂ ಯಾದೃಚ್ಛಿಕವಾಗಿ ಸುಖವನ್ನು ಕೊಡುವ ಧ್ವನಿಗೆ ದೇಶಿಯೆಂದು ಹೆಸರು.

೧೪. ದೇಶೀ ಎಂದರೆ ಅಬಲೆಯರು, ಬಾಲರು, ಗೋಪಾಲರು ಮನಸ್ಸಿಗೆ ಬಂದಂತೆ ಪ್ರೀತಿಯಿಂದ ತಮ್ಮ ತಮ್ಮ ದೇಶಗಳಲ್ಲಿ ಹಾಡಿಕೊಳ್ಳವಂತಹದು.

೧೬. ಆಲಾಪವೇ ಮೊದಲಾದುದು ಇಲ್ಲದಿರುವುದು ದೇಶೀ

೧೧೩. ನಾಲ್ಕು ಸ್ವರಗಳಿಂದ ಮೊದಲಾಗುವ ಪ್ರಯೋಗವು (=ಸ್ವರಾಂತರ) (ದೇಶೀ), ಮಾರ್ಗವಲ್ಲ.

ದೇಶೀತ್ವ : ೩. (ಧ್ವನಿಯು) ಅಮೂರ್ತವಾದುದು; ಆದರೂ ಅದಕ್ಕೆ ದೇಶೀತ್ವವು ಹೇಗೆ ಉಂಟಾಗುತ್ತದೆ?

ದೇಶೀಮಾರ್ಗ : ೧೬೪ ಷಡ್ಜಾದಿ ಸಪ್ತಸ್ವರಗಳು ಮಹಾದೇವನ ಮುಖದಿಂದ ಉದಯಿಸಿ, ಗೀತಸಾಗರದಲ್ಲಿ ಉತ್ಪನ್ನವಾಗಿ, ದೇಶೀ ಎಂಬ ಮಾರ್ಗದಲ್ಲಿ (=ಪದ್ಧತಿಯಲ್ಲಿ) ನೆಲೆಸಿವೆ.

ದೇಶೀಮುಖ : ೧೩, ವ್ಯಕ್ತದ್ವನಿಯಲ್ಲಿ ವರ್ಣಗಳು ಗೋಚರವಾಗುತ್ತವೆ; ಎಂದೇ ಅದಕ್ಕೆ ದೇಶೀಯು ಉದ್ಗಮಸ್ಥಾನವಾಗಿದೆ.

ದೇಶೀಗೀತ : ೧೦೮೭ ವಸ್ತು ಎಂಬ ಗೇಯಪ್ರಬಂಧವನ್ನು ದೇಶೀಗೀತೆಗಳಲ್ಲಿಯೂ ನಾಟಕದಲ್ಲಿಯೂ ಬಳಸುತ್ತಾರೆ.

ದೇಶೀರಾಗ : ೧೦೩೮ ಇನ್ನು ಮುಂದೆ ದೇಶೀರಾಗಗಳ ಕದಂಬವನ್ನು ವಿವರಿಸುತ್ತೇನೆ.

೧೦೪೪ ಮಾರ್ಗರಾಗಗಳಲ್ಲಿ ಹೇಳಿರುವ ನಿಯಮಗಳು ದೇಶೀರಾಗಗಳಲ್ಲಿ ತಪ್ಪಿಹೋಗಲೂಬಹುದು.

ದೇಶೀಸಂಬಂಧದ ತಾಲ : ೧೧೭೯. ಝೊಂಬಡವೆಂಬ ಗೇಯಪ್ರಬಂಧದಲ್ಲಿ ಕಂಕಾಲವೆಂಬುದನ್ನು ಬಿಟ್ಟು ಉಳಿದೆಲ್ಲ ದೇಶೀ ಸಂಬಂಧದ ತಾಲಗಳು ಇರುತ್ತವೆ.

ದೇಶೀಕಾರಪದ : ೧೧೮೭. ಮುಕ್ತಾವಲೀ ಎಂಬ ಗೇಯಪ್ರಬಂಧವನ್ನು ರಮ್ಯವಾದ ದೇಶೀ(ಭಾಷೆ)ಯ ಪದಗಳಿರುವಂತೆ ಹಾಡಲಾಗುತ್ತದೆ.

ದೇಶೀಕಾರಪ್ರಬಂಧ : ೧೦೫೩. ಹರನ ಮುಖಗಳಿಂದ ಹೊರಹೊಮ್ಮಿರುವ ಅಸಂಖ್ಯಾತ ದೇಶೀಕಾರ ಪ್ರಬಂಧಗಳು ಅಲ್ಪಬುದ್ಧಿಯವರಿಗೆ ತಿಳಿಯುವುದಿಲ್ಲ.

ಮಾರ್ಗ : ೧೫. ಈ (ದೇಶೀ?)ಮಾಘವು ನಿಬದ್ಧ, ಅನಿಬದ್ಧವೆಂದು ಎರಡು ವಿಧ; ಆಲಾಪವೇ ಮೊದಲಾದವುಗಳಿಂದ ನಿಬದ್ಧವಾಗಿರುವುದು ಮಾರ್ಗ.

೩೭೮, ಇವು ಮಾಗಧೀ ಮುಂತಾದ ಗೀತಿಗಳನ್ನು ಪ್ರಯೋಗಿಸುವಾಗ ಚಚ್ಚತ್ಪುಟಾದಿ ತಾಳಗಳಲ್ಲಿ ಮಾರ್ಗಗಳು.

೩೮೫, ೪೯೨. ನಾಲ್ಕು ಸ್ವರಗಳಿಂದ ಮೊದಲಾಗುವ (ಆರ್ಚಿಕ, ಗಾಥಿಕ, ಸಾಮಿಕ, ಸ್ವರಾಂತರ) ಪ್ರಯೋಗವು ಮಾರ್ಗವಲ್ಲ (ದೇಶೀಯೇ) ; ಅವುಗಳನ್ನು ದ್ರಾವಿಡಾದಿ ವನಗಳಲ್ಲಿ ಪ್ರಯೋಗಿಸುತ್ತಾರೆ. ಅವುಗಳಿಗೆ ನಿಯಮವಿಲ್ಲ. (ಐದು ಸ್ವರಗಳಿಂದ ಮೊದಲಾಗುವ ಔಡುವ ಇತ್ಯಾದಿಗಳ ಪ್ರಯೋಗವೇ ಮಾರ್ಗ.)

ಮಾರ್ಗಯುಕ್ತ : ೧೧೬೭. ಲಾಟ, ಕರ್ನಾಟ, ಗೌಡ, ಆಂಧ್ರ, ದ್ರವಿಡರ ಏಲಾಗಳು ಆಯಾ ಸ್ವಭಾಷೆಗಳಲ್ಲಿ ನಿರ್ಮಿತವಾಗಿದ್ದು ಸುಂದರವಾಗಿದ್ದು ತಮ್ಮದೇ ಮಾರ್ಗ (=ಪದ್ಧತಿ)ಗಳನನು ಹೊಂದಿವೆ.

ಮಾರ್ಗರಾಗ :೧೦೪೪. ಮಾರ್ಗರಾಗಗಳಲ್ಲಿ ವಿಧಿಸಿರುವ ನಿಯಮಗಳು ದೇಶೀರಾಗಗಳಲ್ಲಿ ಬೇರೆ ಪ್ರಕಾರವಾಗಿಯೋ ವಿರುದ್ಧವಾಗಿಯೋ ಕೆಲವು ಸಲ ಆಗಬಹುದು.

ಮಾರ್ಗೀ : ೧೯೩, ೨೬೯. ಇದು ಮಧ್ಯಮಗಾಮದ ನಿಷಾದಮೂರ್ಛನೆ, ದೇಶೀಗೆ ಸಂಬಂಧಿಸಿದ್ದಲ್ಲ.

ಈ ಎಲ್ಲದರಿಂದ ಕೆಳಗೆ ಹೇಳುವ ಅನುಮಾನಗಳನ್ನು ಸಿದ್ಧಪಡಿಸಬಹುದು : ದೇಶೀ ಎಂಬುದು ವ್ಯಕ್ತಧ್ವನಿಯ, ಅಭಿರುಚಿಗಳಿಗೆ ಅನುಗುಣವಾದುದು. ಆಲಾಪಾದಿಗಳಲ್ಲಿ (‘ಆದಿ’ಯು ಇನ್ನೇನನ್ನು ಒಳಗೊಳ್ಳುತ್ತದೆಂಬುದು ತಿಳಿಯದು) ರಚಿತವಲ್ಲದ್ದು; ವನ್ಯಜನರ ಸ್ವರಾಂತರಾದಿ ಪ್ರಯೋಗವನ್ನುಳ್ಳದ್ದು: ದೇಶೀ ಎಂಬುದು ಒಂದು ಸಂಗೀತ ಪದ್ಧತಿ (ಮಾರ್ಗ). ದೇಶೀಗೀತೆಗಳು ನಾಟಕದ ಗೀತೆಗಳಿಗಿಂತ (ಧ್ರುವಾಗಾನಕ್ಕಿಂತ) ಭಿನ್ನವಾದವುಗಲು; ಅವುಗಳಲ್ಲಿ ಸಂಸ್ಕೃತವಲ್ಲದ ದೇಶಭಾಷೆಗಳ ಮಾತುಗಳಿರುತ್ತವೆ. ದೇಶೀ ಆಧಾರವಾದ ಸಪ್ತಸ್ವರಗಳಿಗೂ ಗೇಯಪ್ರಬಂಧಗಳಿಗೂ ಹರನೇ ಮೂಲ; (ಅದುದರಿಂದ ಅವು ಪವಿತ್ರ). ದೇಶೀ ಗೇಯಪ್ರಬಂಧಗಳು ದೇಶೀ ತಾಳಗಳಲ್ಲಿ (-ಲ್ಲಿ ಮಾತ್ರ?-ಲ್ಲಿ ಸಹ?) ರಚಿತವಾಗುತ್ತವೆ.

ಮಾರ್ಗದಲ್ಲಿ ನಿಬದ್ಧ, ಅನಿಬದ್ಧವೆಂಬ (ತಾಳದಲ್ಲಿ ನಿರ್ಬಂಧಿಸಿದ, ನಿರ್ಬಂಧಿಸದ? ಇಂತಹದೇ ರಾಗ-ತಾಳ-ಭಾಷೆ-ರಸವಿನಿಯೋಗಾದಿಗಳಲ್ಲಿ ರಚಿತವಾಗಬೇಕೆಂಬ ನಿರ್ಯುಕ್ತಿಯಿರುವ, ಇಲ್ಲದಿರುವ?) ಎರಡು ರೀತಿಗಳಿವೆ. ಬೃಹದ್ದೇಶಿಯಲ್ಲಿರುವ ದೇಶಿಕಾರಪ್ರಬಂಧಗಳಲ್ಲಿಯೂ ತಾಲಶೂನ್ಯವಾದಕಂದ (೧೦೭೫), (ಇಂತಹದೇ?) ತಾಲವಿರಬೇಕೆಂಬ ನಿಯಮವಿಲ್ಲದ ಆರ್ಯಾ (೧೦೭೬) ಮುಂತಾದವು ಇವೆಯೆಂಬುದನ್ನು ಗಮನಿಸಬಹುದು. ಅಲ್ಲದೆ, ಭಾಷೆ, ಛಂದಸ್ಸು, ತಾಲ ವಾಗ್ಗೇಯಕಾರನ, ವರ್ಣನೀಯನ ಅಂಕಿತ (ಉದಾ. ಗದ್ಯ, ೧೦೭೮) ಇತ್ಯಾದಿ ನಿರ್ಯುಕ್ತಿಯು (ನಿರ್ಯುಕ್ತಿಯೆಂಬ ಪದವನ್ನು ಬಳಸಿರದಿದ್ದರೂ) ಇದ್ದೇ ಇದೆ. ಹಾಗಾದರೆ ಮಾರ್ಗಕ್ಕೂ ದೇಶೀಗೂ ವ್ಯತ್ಯಾಸವೇನು? ‘ಮಾರ್ಗೋsಯಂ'(೧೫) ಎಂಬುದನ್ನು ನೈಕಟ್ಯದ ಸಾಮರ್ಥ್ಯದಿಂದ (೧೪) ‘ಈ ದೇಶೀಪದ್ಧತಿಯು’ ಎಂದು ಅನುವಾದಿಸಬೇಕೆ? ಹಾಗಾದರೆ ದೇಶೀ ಮತ್ತು ಮಾರ್ಗಗಳನ್ನು ಪೃಥಕ್ಕರಿಸುವುದು ‘ಆಲಾಪಾದಿಗಳು’ ಎಂಬ ಅವ್ಯವಹಿತಾನಂತರದ ಮಾತನ್ನು ಹೇಗೆ ಅರ್ಥೈಸಬೇಕು? ಅಲ್ಲದೆ ಹರಮುಖೋದ್ಭವಗಳಾದ ಷಡ್ಜಾದಿ ಸಪ್ತಸ್ವರಗಳು ದೇಶೀ ಆದರೆ (ಮಾರ್ಗಗೀತಿಗಳಲ್ಲಿಯೂ, ಇವುಗಳಿಗೆ ಆಶ್ರಯಗಳಾಗಿದ್ದ) ಮಾರ್ಗರಾಗಗಳಲ್ಲಿಯೂ (೧೦೪೪) ಬರುವ ಸ್ವರಗಳು ಹೇಗೆ ಬೇರೆಯಾಗಿದ್ದವು? ದೇಶಿಕಾರ ಪ್ರಬಂಧಗಳಲ್ಲಿಯೇ ಅಡಕಗೊಂಡಿರುವ, ಲಾಟಕರ್ಣಾಟಾದಿ ಪ್ರಾಂತೀಯ, ಭಾಷಾದಿ ದೇಶೀತ್ವವಿರುವ ದೇಶೈಲಾಗಳು ಮಾರ್ಗಯುಕ್ತವಾಗಿರುವುದು ಹೇಗೆ (೧೧೬೭)?

ಆಲಾಪಾದಿಗಳು ಇರುವುದು ಮಾರ್ಗ, ಇಲ್ಲದಿರುವುದು ದೇಶೀ ಎನ್ನುವಲ್ಲಿ ಆಲಾಪಾದಿಗಳು ಪ್ರಯೋಕ್ತೃವಿನ ಸ್ವಂತ ಸೃಜನಶೀಲತೆಯಿಂದ ವಿಸ್ತರಿಸಬಹುದಾದ ಅಥವಾ ಸೇರಿಸಬಹುದಾದ ಅಂಶಗಳು ಎಂದಿಟ್ಟುಕೊಳ್ಳುವುದಾದರೆ ವಾಗ್ಗೇಯಕಾರನು ಕಲ್ಪಿಸಿದ್ದನ್ನು ಮಾತ್ರ ಹಾಡಿನುಡಿಸುವುದು ದೇಶೀ ಎಂದೂ ಗೇಯಪ್ರಬಂಧದದ ಮೊದಲಿನಲ್ಲಿಯೋ ಮಧ್ಯದಲ್ಲಿಯೋ ಅಂತ್ಯದಲ್ಲಿಯೋ ಆಯಾ ರಾಗದ ಆಲಾಪವನ್ನು ಮಾಡುವುದು, ಸ್ವರ, ಪಾಟ, ತೆನ್ನಕ ಇತ್ಯಾದಿಗಳನ್ನು ಸ್ವಂತವಾಗಿ ರಚಿಸಿ ಸೇರಿಸುವುದು ಮುಂತಾದವುಗಳಿರುವ ಗೀತ (ಮತ್ತು ವಾದ್ಯ?)ವನ್ನು ಮಾರ್ಗ ಎಂದೂ ಭಾವಿಸಬೇಕಾಗುತ್ತದೆ. ಬೃಹದ್ದೇಶಿಯಲ್ಲಿ ಜಾತಿಲಕ್ಷಣ, ರಾಗಲಕ್ಷಣಗಳಿದ್ದರೂ ಅವುಗಳನ್ನು ಆಲಾಪಿಸುವ ರೀತಿಯನ್ನು (ಕಡೆಯಪಕ್ಷ, ದೊರೆತಿರುವ ಗ್ರಂಥದಲ್ಲಿ) ನಿರೂಪಿಸಿಲ್ಲವೆಂಬುದನ್ನು ಗಮನಿಸಬಹುದು. ಆದರೆ ಅಂತಹ ಆಲಾಪವು ಅದರ ಕಾಲದಲ್ಲಿಯೂ ಮುಂಚೆಯೂ ರೂಢಿಸಿತ್ತೆಂಬುದು ಕುಡುಮಿಯಾಮಲೈಶಾಸನ, ತಿರುಮಯ್ಯಂ ಶಾಸನಗಳಿಂದ ಸಿದ್ಧವಾಗುತ್ತದೆ. ಅಲ್ಲದೆ ಹಾಡಿನ ಆದಿ, ಮಧ್ಯ ಮತ್ತು ಅಂತ್ಯಗಳಲ್ಲಿ ಆಲಾಪಗಳನ್ನು ರಚಿಸಬೇಕಾಗಿದ್ದ ರಾಸ, ಏಕ(ಎಂಬ ಸಾಲಗಸೂಡಪ್ರಭೇದ)ಗಳಾಗಲಿ ಹಾಡಿನ ನಡುವೆ ಪ್ರಯುಕ್ತವಾಗುತ್ತಿದ್ದ ಗಮಕ ಅಥವಾ ಪ್ರಯೋಗವೆಂಬ ಆಲಾಪ ಪ್ರಕಾರವಾಗಲಿ (ಉದಾ. ಏಲಾ ಪ್ರಬಂಧದ ಹನ್ನೆರಡನೆಯ ಪದ) ಬೃಹದ್ದೇಶಿಯಲ್ಲಿ ಕಂಡುಬರುವುದಿಲ್ಲ. ಇಷ್ಟರಮಟ್ಟಿಗೆ ಬೃಹದ್ದೇಶಿಯು ದೇಶೀಯೇ ಎಂದು ಹೇಳಬಹುದು.

ಮಾರ್ಗ, ದೇಶೀ ಮತ್ತು ಬೃಹದ್ದೇಶಿಗಳ ಕಲ್ಪನೆಗಳು ಪೂರ್ವಾಚಾರ್ಯರವುಗಳಲ್ಲ, ಮತಂಗನವೇ ಎಂದು ಮೇಲೆ ಸೂಚಿಸಿದೆ. ಅದನ್ನೀಗ ಪರಿಶೀಲಿಸಬಹುದು. ಮತಂಗನು ಸ್ವೀಕರಿಸುವ ಪ್ರಾಮಾಣಿಕರಲ್ಲಿ ಭರತಮುನಿಯೇ ಅತ್ಯಂತ ಮುಖ್ಯನಾದವನು. ಅವನು ಸ್ಮರಿಸಿರುವ ಪೌರಾಣಿಕ ದೇವತೆಗಳ ಪೈಕಿ ಹರನೂ (ಶಂಭು) ಬ್ರಹ್ಮನೂ ಭರತನಿಗೂ ಪ್ರಾಮಾಣಿಕ ಆಕರಗಳೇ. ಬ್ರಹ್ಮನು ಕಂಡುಹಿಡಿದ ನಾಟ್ಯವೇದವನ್ನು ಅಮೃತಮಂಥನ ಮತ್ತು ತ್ರಿಪುರದಾಹಗಳೆಂಬ ರೂಪಕಗಳಿಗೆ ಅಳವಡಿಸಿ ಭರತನೂ ಭರತಪುತ್ರರೂ ಶಂಭುವಿನ ಮುಂದೆ ಪ್ರದರ್ಶಿಸಿದರು. ಹೀಗೆ ಇಡೀ ನಾಟ್ಯಶಾಸ್ತ್ರವೇ ಬ್ರಹ್ಮಪ್ರಣೀತವಾದುದು ಎಂದೇ ಭರತನು ‘ನಾಟ್ಯಶಾಸ್ತ್ರಂ ಪ್ರವಕ್ಷ್ಯಾಮಿ ಬ್ರಹ್ಮಣಾ ಯದುದಾಹೃತಮ್’ ಎಂಬ ಪ್ರತಿಜ್ಞೆಯನ್ನು ಗ್ರಂಥಾರಂಭದಲ್ಲಿಯೇ ಮಾಡಿದ್ದಾನೆ. ಮತಂಗನು ಬ್ರಹ್ಮನನ್ನು ಸ್ಮರಿಸಿರುವುದೆಲ್ಲ ಭರತನಿಂದ ಮಾಡಿಕೊಂಡ ಉಪೋದ್ದೃತಿಗಳು. ಸಂಗೀತ ಶಾಸ್ತ್ರದಲ್ಲಿ ಬ್ರಹ್ಮಮತವೆಂಬುದು ಒಂದು ಇರುವುದು ನಿಜ. ಆದರೆ ಇಡೀ ಸಂಗೀತಶಾಸ್ತ್ರ ಗ್ರಂಥರಾಶಿಯಲ್ಲಿ ಬ್ರಹ್ಮನು ಮಾರ್ಗ-ದೇಶೀ ವಿಭಾಗಗಳನ್ನು ಹೇಳಿರುವುದು ಕಂಡುಬಂದಿಲ್ಲ. ಶಾರ್ಙ್ಗದೇವನು ಮಾರ್ಗಸಂಗೀತವನ್ನು ‘ಮಾರ್ಗಿತೋ ವಿರಿಂಚ್ಯಾದ್ಯೈಃ’ (ಸಂಗೀತರತ್ನಾಕರ ೧.೧.೨೨) ಎಂದು ನಿರೂಪಿಸಿರುವುದು ನಾಟ್ಯವೇದವನ್ನು ಬ್ರಹ್ಮನು ಹುಡುಕಿದನೆಂದೂ ಅದನ್ನು ಭರತಾದಿಗಳು ಶಂಭುವಿನ ಮುಂದೆ ಪ್ರಯೋಗಿಸಿದರೆಂದೂ ಭರತನು ನೀಡುವ ಆಖ್ಯಾನವನ್ನು ಅವಲಂಬಿಸಿಯೇ ಎಂದು ಕಾಣುತ್ತದೆ. (ನಾಟ್ಯಶಾಸ್ತ್ರಂ, ಅಧ್ಯಾಯ೧). ಶಾರ್ಙ್ಗದೇವನ ಈ ಇಂಗಿತವನ್ನು ಕಲ್ಲಿನಾಥನು ತನ್ನ ವ್ಯಾಖ್ಯಾನದಲ್ಲಿ ಸ್ಪಷ್ಟೋಕ್ತಿಯಲ್ಲೇ ಹೇಳಿದ್ದಾನೆ. (ಸಂಗೀತಕಲಾನಿಧಿ, ಅದೇ ಗ್ರಂಥ, ಅದೇ ಸ್ಥಾನ) ಈ ದೃಷ್ಟಿಯಿಂದ ನಾಟ್ಯಶಾಸ್ತ್ರದಲ್ಲಿರುವುದೆಲ್ಲ ಮಾರ್ಗವೆಂದೂ, ಇಲ್ಲದಿರುವುದೆಲ್ಲ ದೇಶೀಯೆಂದೂ ಹೇಳಬೇಕಾಗುತ್ತದೆ. ಆದರೆ ಶಾರ್ಙ್ಗದೇವನು ದೇಶೀಗೆ ಸ್ವತಂತ್ರವಾದ ಲಕ್ಷಣವನ್ನೇ-ಮತಂಗನನ್ನು ಅನುಸರಿಸಿ ಅದರ ವಾದನನರ್ತನಗಳಿಗೂ ವಿಸ್ತರಿಸಿ-ನೀಡುತ್ತಾನೆ (ಸಂಗೀತರತ್ನಾಕರ ೧.೧.೨೨-೨೪). ಆದುದರಿಂದ ಮಾರ್ಗ-ದೇಶೀ ಕಲ್ಪನೆಗಳು ಶಾರ್ಙ್ಗದೇವನಿಂದ ಬ್ರಹ್ಮನಿಗೂ ಭರತನಿಗೂ ಆರೋಪಿತವಾದವುಗಳು. ಭರತಮುನಿಯು ಮಾರ್ಗ ಮತ್ತು ದೇಶೀ ಎಂಬ ಮಾತುಗಳನ್ನು ಬಳಸಿದ್ದರೂ ಅವುಗಳಲ್ಲಿ ಈ ಕಲ್ಪನೆಗಳ ಮತ್ತು ಅವುಗಳ ಧ್ರುವೀಕರಣದ ವಿವಕ್ಷೆಯಿಲ್ಲ. ಉದಾಹರಣೆಗೆ, ಮಾರ್ಗಾಸಾರಿತವೆಂದರೆ ಒಂದು ರೂಪಕಪ್ರಯೋಗದ ಪೂರ್ವರಂಗದಲ್ಲಿ ತಂತಿವಾದ್ಯಗಳನ್ನೂ ಆನದ್ಧವಾದ್ಯಗಳನ್ನೂ ಶ್ರುತಿಮಾಡಿ ಮೇಳೈಸುವುದು (ನಾಟ್ಯಶಾಸ್ತ್ರಂ ೫.೧೦,೨೦). ಆಸಾರಿತವೆಂದರೆ ತಾಳದ ಕಲಾ ಮತ್ತು ಪಾತಗಳನ್ನು ಒಂದಾಗಿಸುವುದು (ಅದೇ, ೫ ೨೧). ಅದು ಯಕ್ಷರಿಗೆ ಪ್ರಿಯವಾದುದು (ಅದೇ, ೫,೪೭). ಗೇಯಪದವೆಂಬ ಲಾಸ್ಯಾಂಗವನ್ನು ಮಾರ್ಗಾಸಾರಿತದ ಕಾಲಪ್ರಮಾಣದಲ್ಲಿ ಪ್ರಯೋಗಿಸಬೇಕು (ಅದೇ, ೩೧,೩೩೪). ಮಾರ್ಗವೆಂದರೆ ವಾಚಿಕಾಭಿನಯದಲ್ಲಿ ಯಥಾವನ್ನಿರೂಪಣದ ಹೇಳಿಕೆ (ಅದೇ, ೧೯.೮೩). ಮಾರ್ಗವೆಂದರೆ ಅನದ್ಧವಾದ್ಯಗಳ ಮುಖಗಳ ಮೇಲೆ ಅಲಿಪ್ತ, ಅಡ್ಡಿತ, ವಿತಸ್ತ ಮತ್ತು ಗೋಮುಖವೆಂದು ನಾಲ್ಕು ರೀತಿಯಾಗಿ ಪ್ರಯೋಗವಾಗುವ ಘಾತಗಳು (ಅದೇ, ೩೨.೬೩.೬೪). ಭರತಮುನಿಯು ಮಾರ್ಗಶಬ್ದವನ್ನು ಬೇರೆ ಅರ್ಥಗಳಲ್ಲಿಯೂ ಬಳಸುತ್ತಾನೆ. ಉದಾ. ರೂಪಕದಲ್ಲು ಸಂವಿಧಾನ (=ಇತ್ತಿವೃತ್ತ)ವನ್ನು ಪ್ರವೇಶಗೊಳಿಸುವ ವಿವಿಧ ಮಾರ್ಗಗಳು (=ರೀತಿಗಳು) (ಅದೇ, ೫.೧೬೮), ರೂಪಕದಲ್ಲಿ ಪ್ರಾಥಮಿಕ ಪಾತ್ರಗಳ ಪ್ರವೇಶಕ್ಕೆ ಇರುವ ಸ್ಥಳ (ಅದೇ, ೧೨.೨); ಇದನ್ನು ಅಭಿನವಗುಪ್ತಪಾದನು (ಅಭಿನವಭಾರತೀ, ಅದೇ ಗ್ರಂಥ, ಅದೇ ಸ್ಥಾನ) ತಾಳಪ್ರಾಣವಾದ ಮಾರ್ಗವೆಂದು (=ತಾಳಪ್ರಯೋಗದಲ್ಲಿ ಸಾಪೇಕ್ಷಕಾಲಪ್ರಮಾಣ) ಅರ್ಥೈಸುವುದು ಅಷ್ಟು ಸಂಭಾವ್ಯವಲ್ಲ. ಮಾರ್ಗವೆಂದರೆ ರೂಪಕದಲ್ಲಿ ಒಂದು ಪಾತ್ರವು ವಾಚಿಕಾಭಿನಯದಲ್ಲಿ ಪ್ರಯೋಗಿಸುವ ಹನ್ನೆರಡು ವಿಧಗಳು ಎಂದೂ ಆಗುತ್ತದೆ (ಅದೇ, ೨೨.೫೧.೫೩). ದೇಶೀ ಎಂಬ ಪದವು ನಾಟ್ಯಶಾಸ್ತ್ರದಲ್ಲಿ ‘ದೇಶೀಗತ’ ಎಂಬ ರೂಪದಲ್ಲಿ ಒಮ್ಮೆ ಮಾತ್ರ ಬರುತ್ತದೆ (ಅದೇ, ೧೭.೩). ದೇಶೀಗತವೆಂದರೆ ಇಲ್ಲಿ ಗ್ರಾಮೀಣ ಅಥವಾ ಗ್ರಾಮ್ಯಜನರು ಆಡುವ ಮಾತಿನ ಭಾಷಾಪ್ರಭೇದ. ಹೀಗೆ ಮತಂಗಶಾರ್ಜ್ಗದೇವಾದಿಗಳು ಹೇಳುವ ಮಾರ್ಗ-ದೇಶೀ ಎಂಬ ಪದ್ಧತಿಗಳಿಗೆ ಮೂಲವು ಭರತನಲ್ಲಂತೂ ಇಲ್ಲ.

ಮತಂಗಾನಂತರದಲ್ಲಿ ದೇಶೀ ಎಂಬ ಪದದ ನಿರ್ವಚನವನ್ನು ಜಗದೇಕಮಲ್ಲನೂ, ಮತಂಗಜಗದೇಕಮಲ್ಲರನ್ನು ಅನುಸರಿಸಿ ಪಾರ್ಶ್ವದೇವನೂ ಮಾಡಿದ್ದಾರೆ. ಜಗದೇಕಮಲ್ಲನು ಉಪಲಬ್ದ ಸಂಗೀತಚೂಡಾಮಣಿಯಲ್ಲಿ ಮಾರ್ಗಶಬ್ದವನ್ನು ಎಲ್ಲಿಯೂ ಹೇಳಿಯೇ ಇಲ್ಲ; ಬದಲು ದೇಶಿಯನ್ನು ಮತಂಗ, ಭೋಜ ಮುಂತಾದವರನ್ನು ಅವಲಂಬಿಸಿ ನಿರೂಪಿಸುವುದಾಗಿ ಪ್ರತಿಜ್ಞೆ ಮಾಡುತ್ತಾನೆ (ಸಂಗೀತಚೂಡಾಮಣಿ, ಹಸ್ತಪ್ರತಿ, ಪು.೧,೨); ದೇಶೀಯನ್ನು ವಾದನ ನರ್ತನಗಳಿಗೂ ವಿಸ್ತರಿಸುತ್ತಾನೆ:

            ದೇಶೇಷು ದೇಶೇಷು ನರೇಶ್ವರಾಣಾಂ ರುಚ್ಯಾ ಜನಾನಾಮಪಿ ವರ್ತತೇ ಯಾ |
ಗೀತಂ ಚ ವಾದ್ಯಂ ಚ ತಥಾ ನೃತ್ತಂ ದೇಶಿನಾಮ್ನಾ ಪರಿಕೀರ್ತಿತಾ ಸಾ ||
ಮತಂಗಬೋಜಪ್ರಮುಖೈಃ ಕೃತಂ ಯದ್ದೇಶೀಗತಂ ಲಕ್ಷ್ಮವಿಕರ್ಣರೂಪಮ್ |
ತದೇವ ಗಂಭೀರಮತಿಸ್ಫುಟಾರ್ಥಂ ಕರೋತಿ ರಾಜಾ ಜಗದೇಕಮಲ್ಲಃ ||

ಮಾರ್ಗದೇಶೀಗಳು ಏನನ್ನು ಒಳಗೊಂಡಿದ್ದವು? ಮತಂಗಮುನಿಯು ಇದಕ್ಕೆ ಸ್ಪಷ್ಟವಾದ ಉತ್ತರವನ್ನು ನೀಡುವುದಿಲ್ಲ. ನಾಟ್ಯಶಾಸ್ತ್ರದಲ್ಲಿ ಬ್ರಹ್ಮನು ಭರತನಿಗೆ ಬೋಧಿಸಿದ್ದೆಲ್ಲ ಮಾರ್ಗವೆಂದಾದರೆ ಮತಂಗನು ಉಪದೇಶಿಸುವ ಗ್ರಾಮರಾಗಗಳೂ ಭಾಷಾ, ವಿಭಾಷಾ, ಅಂತರಭಾಷಾಗಳೂ, ದೇಶೀತಾಲಗಳೂ, ಕಂದವೇ ಮೊದಲಾದ ೪೮ ಪ್ರಬಂಧಗಳೂ ಮಾರ್ಗವೆನ್ನಿಸಿಕೊಳ್ಳಲಾರವು. ಆದರೆ ಶಾರ್ಙ್ಗದೇವಾದಿಗಳು ಗ್ರಾಮರಾಗಗಳನ್ನೂ, ಭಾಷಾದಿಗಳನ್ನೂ ಮಾರ್ಗವೆಂದೇ ಎಣಿಸಿದ್ದಾರೆ. ಕಲ್ಲಿನಾಥನು ಸಂಗೀತರತ್ನಾಕರದ ಪ್ರಬಂಧಾಧ್ಯಾಯದ ಮೊದಲನೆಯ ಶ್ಲೋಕಕ್ಕೆ ವ್ಯಾಖ್ಯಾನವನ್ನು ಬರೆಯುವಲ್ಲಿ ಗಾಂಧರ್ವ-ಗಾನಗಳಲ್ಲಿನ ವ್ಯತ್ಯಾಸಗಳನ್ನು ತಿಳಿಸುತ್ತಾ ಗ್ರಾಮಮೂರ್ಛನಾತಾನಗಳು, ಜಾತಿಗಳು, ಗ್ರಾಮರಾಗಾದಿ ಅಂತರಭಾಷಾಂತವಾದ ರಾಗಗಳು- ಇಷ್ಟನ್ನು ಮಾರ್ಗಸಂಗೀತವೆಂದು ಕರೆಯುತ್ತಾನೆ. ಶಾರ್ಙ್ಗದೇವನು ಮಾರ್ಗ-ದೇಶೀವಿಭಾಗವನ್ನು ಗೀತವಾದನನರ್ತನಗಳಿಗೆ ಸಮಾನವಾಗಿ ಹೇಳಿ ಈ ವಿಭಾಗವನ್ನು ಸಂಗೀತರತ್ನಾಕರದ ಉದ್ದಕ್ಕೂ ತೋರಿಸುತ್ತಾ ಹೋಗುತ್ತಾನೆ: ಗ್ರಾಮ, ಮೂರ್ಛನಾ, ತಾನ, ಜಾತಿ (ಸ್ವರಗತಾಧ್ಯಾಯ), ಗ್ರಾಮರಾಗ, ಭಾಷಾದಿ ರಾಗಗಳು (ರಾಗವಿವೇಕಾಧ್ಯಾಯ)-ಮಾರ್ಗ; ದೇಶೀರಾಗಗಳು (ಅದೇ); ಗಾಂಧರ್ವ-ಗಾನ (ಪ್ರಬಂಧಾಧ್ಯಾಯ), ಮಾರ್ಗತಾಲ-ದೇಶೀತಾಲ, ಮಾರ್ಗಕ್ರಿಯಾ-ದೇಶೀಕ್ರಿಯಾ, ಮಾರ್ಗ(=ಪ್ರಕರಣ) ಗೀತೆಗಳು -ಗೀತಮಾರ್ಗಗಳು (ತಾಲಾಧ್ಯಾಯ), ಮಾರ್ಗಪಟಹ-ದೇಶೀಪಟಹ (ವಾದ್ಯಾಧ್ಯಾಯ), ಮಾರ್ಗನೃತ್ತ (=ನೃತ್ಯ), ಮಾರ್ಗಚಾರೀ-ದೇಶೀಚಾರೀ, ಮಾರ್ಗಸ್ಥಾನಕ-ದೇಶೀಸ್ಥಾನಕ, ದೇಶೀಪದ್ಧತಿ, ದೇಶೀ ಉತ್‌ಪ್ಲುತಿಕರಣ ಇತ್ಯಾದಿ (ನರ್ತನಾಧ್ಯಾಯ). ಈ ಸಂದರ್ಭದಲ್ಲಿ ಕಲ್ಲಿನಾಥನು ಗ್ರಂಥಕಾರನ ವಿವಕ್ಷೆಯನ್ನು ಬಹುಶಃ ಮೀರಿ ಎರಡು ವೇಳೆ ವ್ಯಾಖ್ಯಾನಮಾಡುವುದನ್ನಿಲ್ಲಿ ಉಲ್ಲೇಖಿಸಬಹುದು: ಮಾರ್ಗನೃತ್ತವೆಂದರೆ ಭರತನು ಉಪದೇಶಿಸಿದ ನೃತ್ತವೇ ಅಥವಾ ನೃತ್ತಾಂಶಗಳೇ ಎಂಬ ಇಂಗಿತವನ್ನು ಒಮ್ಮೆ (ಸಂಗೀತರತ್ನಾಕರ ೭.೭೪೯ರ ವ್ಯಾಖ್ಯಾನ) – ಹೊರಡಿಸುತ್ತಾನೆ. ಭರತನು ನಾಟ್ಯಶಾಸ್ತ್ರದಲ್ಲಿ ಯಾವುದೇ ನೃತ್ತಪ್ರಬಂಧವನ್ನೂ ವಿವರಿಸುವುದಿಲ್ಲ. ಅವನು ನಿರೂಪಿಸುವ ಅಂಗಪ್ರತ್ಯಂಗೋಪಾಂಗವಿಕ್ಷೇಪರೂಪದ ನೃತ್ತಾಂಶಗಳು ನೃತ್ತವಿದ್ಯೆಯ ವ್ಯಾಕರಣ ಮತ್ತು ಕೋಶಗಳು. ಅವು ಯಾವುದೇ ಜಾಗತಿಕ ನೃತ್ತಪದ್ಧತಿಗೆ -ಮಾರ್ಗವಾಗಲಿ, ದೇಶಿಯಾಗಲಿ-ಬುನಾದಿಯಂತಿವೆ, ತಟಸ್ಥವಾಗಿವೆ. ಅಲ್ಲದೆ ಅವನು ಇದೇ ಅಂಗಪ್ರತ್ಯಂಗೋಪಾಂಗ ಅಭಿನಯಗಳಲ್ಲಿ ಹೇಳದೆ ಬಿಟ್ಟುದನ್ನು ಇತರರು (ಉದಾ. ನಂದಿಕೇಶ್ವರ, ಹರಿಪಾಲದೇವ, ಶಾರ್ಙ್ಗದೇವ) ಹೇಳಿರುವುದನ್ನು ಮಾರ್ಗವೆಂದು ವರ್ಗೀಕರಿಸಬೇಕೆ, ದೇಶಿಯೆಂದೆ? ಇನ್ನೊಮ್ಮೆ (ಸಂಗೀತರತ್ನಾಕರ, ೪.೧ರ ವ್ಯಾಖ್ಯಾನ) ಜಾತಿಯಿಂದ ಪ್ರಾರಂಭಿಸಿ ಅಂತರಭಾಷಾಂತವಾದ ಗೇಯಸಾಮಗ್ರಿಯನ್ನು ಅನಾದಿ ಸಂಪ್ರದಾಯವೆಂದೂ ಅಪೌರುಷೇಯವೆಂದೂ ಹೇಳುತ್ತಾನೆ. ಇದು ಅಸಂಗತವೆಂಬುದು ಸ್ಪಷ್ಟವಾಗಿಯೇ ಇದೆ. ಮಾರ್ಗವೆಂದರೆ ಏನೆಂಬುದನ್ನು ಪಾರ್ಶ್ವದೇವನು (ಸಂಗೀತಮಯಸಾರ, ಹಸ್ತಪ್ರತಿ) ವಿವರಿಸುತ್ತಾನೆ:

            ಸ್ವರಾ ಗ್ರಾಮಾಸ್ತಥಾ ಜಾತಿರ್ವರ್ಧಮಾನಾದಿ ಗೀತಕಮ್ |
ಆಲಾಪಾದಿ ಕ್ರಿಯಾಬದ್ಧಂ ಸ ತು ಮಾಗ್ ತಿ ಸ್ಮೃತಃ ||

ಅವನು ಮತಂಗಮತವನ್ನು ಅಲ್ಲಲ್ಲಿ (ಉದಾ. ನಾದ, ಶ್ರುತಿ) ಅನುಸರಿಸುವುದರಿಂದ ಮಾರ್ಗಲಕ್ಷಣದಲ್ಲಿ ಮತಂಗನ ಈ ‘ಆಲಾಪಾದಿ ನಿಬದ್ಧೋsಯಂ’ ಎಂಬ ಮಾತಿನಲ್ಲಿರುವ ‘ಆದಿ’ ಶಬ್ದದ ವಿಸ್ತಾರವು ಇಲ್ಲಿದೆಯೆಂದು ಭಾವಿಸಬಹುದು. ಭರತನು ಸ್ವರ, ಗ್ರಾಮ, ಜಾತಿ, ವರ್ಧಮಾನಾದಿ ಗೀತೆಗಳನ್ನು (ರೂಪಕಪ್ರಯೋಗಸಂದರ್ಭಗಳಲ್ಲಿ) ನಿರೂಪಿಸುತ್ತಾನೆ. ಮತಂಗನು ಇವುಗಳನ್ನು ನಿರೂಪಿಸಿ ವರ್ಧಮಾನಾದಿ ಗೀತೆಗಳನ್ನು ಕೇವಲ ಇಂಗಿತಗೊಳಿಸುತ್ತಾನೆ (೪೮೨,೪೯೩,೪೯೪) ಶಾರ್ಙ್ಗದೇವನು ಗಾಂಧರ್ವ (=ಮಾರ್ಗ)ದಲ್ಲಿ ನಿರೂಪಿಸುವ, ಶುದ್ಧಾಜಾತಿಗಳಲ್ಲಿ ಹಾಡಲಾಗುತ್ತಿದ್ದ ಕಂಬಲ, ಕಪಾಲಗಳನ್ನು ಇಬ್ಬರೂ ಮಾರ್ಗದಲ್ಲಿ ಸೇರಿಸುವುದಿಲ್ಲ. ಮತಂಗನು ಗೀತಪ್ರಕರಣದಲ್ಲಿಯ ‘ಆವೃತ್ತ್ಯಾತ್ಮ ಜಾತವೇದಸಂ’ ಎಂಬ ಶ್ರುತಿಯನ್ನೂ (೩೮೯), ‘ದೇವಂ ಶರ್ವಂ ವಂದೇ’ ಎಂಬ ಪುರಾತನ ಸ್ತೋತ್ರವನ್ನೂ (೩೮೮) ಸಾಮವೇದವನ್ನೂ (೧೬೯, ೩೮೯, ೫೧೮) ಉಲ್ಲೇಖಿಸುತ್ತಾನೆ.

ಮತಂಗಮುನಿಯು ಗಾಂಧರ್ವವೆಂಬ ಮಾತನ್ನು ಎರಡು ಬಾರಿ ಬಳಸುತ್ತಾನೆ :

೧೧        (.. ಪದಗಳಿಂದ ವಾಕ್ಯವೂ) ವಾಕ್ಯದಿಂದ (ಉಪನಿಷತ್ತುಗಳು ಉಪದೇಶಿಸುವ) ಮಹಾವಾಕ್ಯಗಳೂ ಷಡಂಗಯುಕ್ತವಾದ ವೇದಗಳು – ಇವೆಲ್ಲ ವ್ಯಕ್ತನಾದವು ಧ್ವನಿತವಾಗುವುದರಿಂದ ಪ್ರಕಟವಾಗುತ್ತವೆ. ಆಮೇಲೆ (ವೇದದಿಂದ) ಗಾಂಧರ್ವವು ಸಂಭವಿಸುತ್ತದೆ.

೫೧೭.    (ಎಲ್ಲ ಜಾತಿಗಳಲ್ಲಿಯೂ ಔಡುವಷಾಡವಗಳನ್ನು ರಚಿಸಬೇಕಾದಾಗ ಸ್ವರಗಳನ್ನು ಲೋಪಮಾಡುವುದು ವಿಹಿತವಾಗಿದೆ; ಆದರೆ ಮಧ್ಯಮ ಸ್ವರವನ್ನು ಯಾವಾಗಲೂ ಲೋಪಮಾಡಕೂಡದು.)

೫೧೮.    ಎಲ್ಲ ಸ್ವರಗಳಲ್ಲಿಯೂ ಮಧ್ಯಮವು ಮುಖ್ಯವೂ ನಾಶರಹಿತವೂ ಆಗಿದೆ; ಗಾಂಧರ್ವಶಾಸ್ತ್ರ ಮತ್ತು ಪ್ರಯೋಗಗಳಲ್ಲಿಯೂ ಸಾಮಗಾಯನದಲ್ಲಿಯೂ ಮಧ್ಯಮವನ್ನು ಲೋಪ ಮಾಡದಿರುವುದು ವಿಹಿತವಾಗಿದೆ.

ಇವುಗಳ ಪೈಕಿ ಮೊದಲನೆಯ ಉಲ್ಲೇಖದಲ್ಲಿ ಗಾಂಧರ್ವವು ವೇದಸಂಭವವೆಂದು ಹೇಳಿ ಅದಕ್ಕೆ ವೇದೋಪವಸತಿಯನ್ನು ಕಲ್ಪಿಸಿದೆ. ಋಗ್ವೇದದಿಂದ ಪಾಠ್ಯ (=ವಾಚಿಕ)ವನ್ನೂ ಯಜುರ್ವೇದದಿಂ ಅಭಿನಯವನ್ನೂ ಸಾಮವೇದದಿಂದ ಗೀತವನ್ನೂ ಅಥರ್ವವೇದದಿಂದ ರಸವನ್ನೂ ಸಂಗ್ರಹಿಸಿ ಬ್ರಹ್ಮನು ನಾಟ್ಯವೆಂಬ ಐದನೆಯ ವೇದವನ್ನು ಸೃಷ್ಟಿಸಿದನೆಂಬ ಭರತೋಕ್ತಿಯ (ನಾಟ್ಯಶಾಸ್ತ್ರಂ ೧.೧೭) ನೆರಳು ಇಲ್ಲಿ ಬಿದ್ದಿರುವಂತಿದೆ. ಎರಡನೆಯ ಉಲ್ಲೇಖವೂ ಭರತೋಕ್ತಿಯ (ಅದೇ ೨೮.೬೫) ಉದ್ದೃತಿಯೇ ಗಾಂಧರ್ವ ಶಬ್ದದ ನಿರ್ವಚನ, ವೈದಿಕವಾಙ್ಮಯದಲ್ಲಿ ಅದರ ಮುನ್ನೆರಳು, ವಿಶಾಖಿಲ, ದತ್ತಿಲ, ಭರತ, ಅಭಿನವಗುಪ್ತರು ಅದರ ವಿವಿಧ ಕಲ್ಪನಾ ಆಯಾಮಗಳನ್ನು ಬಿಡಿಸಿ ತೋರಿಸಿರುವ ರೀತಿ, ಅದರಲ್ಲಿ ಮತಂಗಮುನಿಯ ಸ್ಥಾನ, ಗಾಂಧರ್ವದ ಸ್ವರ, ಪದ, ತಾಲಗಳೆಂಬ ಮೂರು ಆಶ್ರಯಸ್ಥಾನಗಳು, ಈ ಒಂದೊಂದರಲ್ಲಿಯೂ ಒಳಪಡುವ ಅಂಶಗಳ (ಗಾಂಧರ್ವ) ಸಂಗ್ರಹ, ಗಾಂದರ್ವದಲ್ಲಿ ಗಂಧರ್ವರ ಸ್ಥಾನ, ಗಾಂಧರ್ವಶಾಸ್ತ್ರ-ಪ್ರಯೋಗಗಳಲ್ಲಿ ನಾರದನೆಂಬ ಗಂಧರ್ವನ ಮತ್ತು ಮುನಿಯ ಸ್ಥಾನ, ಗಾಂಧರ್ವ ಮತ್ತು ಗಾನಗಳಲ್ಲಿರುವ ವ್ಯತ್ಯಾಸ, ಸಂಸ್ಕೃತಸಾಹಿತ್ಯದಲ್ಲಿ ಗಾಂಧರ್ವಶಬ್ದದ ಬಳಕೆ, ಗಾಂಧರ್ವವೆಂಬ ವಿಶೇಷಣವುಳ್ಳ ಸಂಗೀತ ಶಾಸ್ತ್ರಗ್ರಂಥಗಳು, ಇತ್ಯಾದಿಗಳ ವಿವೇಚನೆಯನ್ನು ಬೇರೆಡೆ ತಕ್ಕಮಟ್ಟಿಗೆ ವಿವೇಚಿಸಿದ್ದೇನೆ (ಭಾರತೀಯ ಸಂಗೀತದಲ್ಲಿ ಪರಿಭಾಷಾ ಪ್ರಯೋಗ, ಪು.೨೫-೫೫). ಅಲ್ಲಿಯೇ ಓದಿಕೊಳ್ಳಬೇಕು. ಮತಂಗನು ಗಾಂಧರ್ವವನ್ನು ಮಾರ್ಗ-ದೇಶೀಗಳಿಗಿಂತ ವಿಭಿನ್ನವಾದ, ಪಾವಿತ್ಯ್ರದ ಪರಿಸರದಲ್ಲಿ ಪರಿಶುದ್ಧರೂಪದಲ್ಲಿ ಪ್ರವರ್ತಿಸಬೇಕಾಗಿದ್ದು ಅನಮ್ಯವಾಗಿ ನಿಯಮಿತವಾಗಿದ್ದು ವೈದಿಕ-ಲೌಕಿಕ ಸಂಗೀತಗಳಿಗೆ ಮಧ್ಯವರ್ತಿಯಾಗಿದ್ದ ಒಂದು ಸಂಗೀತಪದ್ಧತಿಯನ್ನು ವಿವಕ್ಷಿಸಿರುವುದು ಸಂಭಾವ್ಯವೆಂದು ಹೇಳಿದರೆ ಸಾಕು. ಗಾಂಧರ್ವವೆಂದು ಭರತಾದಿ ಪೂರ್ವಾಚಾರ್ಯರು ವರ್ಣಿಸಿರುವ ಹಾಡುಗಳು ಗೀತಕ ಮತ್ತು ನಿರ್ಗೀತವೆಂದು ಎರಡು ಬಗೆ; ಗೀತಕಗಳಲ್ಲಿ ಮದ್ರಕ, ಅಪರಾಂತಕ, ಉಲ್ಲೋಪ್ಯಕ, ಪ್ರಕರೀ, ಓವೇಣಕ, ರೋವಿಂದಕ, ಉತ್ತರ ಎಂದೂ ಮೂರು ಪ್ರಭೇದಗಳಿವೆ. ನಿರ್ಗೀತಗಳು ಆಶ್ರಾವಣಾ, ಆರಂಭ, ವಕ್ತ್ರಪಾಣಿ, ಸಂಖೋಟನ, ಪರಿಘಟ್ಟನ, ಮಾರ್ಗಾಸಾರಿತ, ಲೀಲಾಕೃತ, ಆಸಾರಿತ ಎಂದು ಎಂಟು ಬಗೆ. ಇವುಗಳ ಪೈಕಿ ಮತಂಗನು ಆಸಾರಿತ ಮತ್ತು ವರ್ಧಮಾನಗಳೆಂಬುದನ್ನು ಉಲ್ಲೇಖಿಸಿರುವುದನ್ನು ಈಗಾಗಲೇ ಪ್ರಸ್ತಾಪಿಸಿದೆ. ಗಾಥಾ ಎಂಬ ಒಂದು ‘ದೇಶಿಕಾರ’ ಪ್ರಬಂಧವನ್ನು ಅವನು ಪ್ರಬಂಧಾಧ್ಯಾಯದಲ್ಲಿ ವರ್ಣಿಸಿದ್ದಾನೆ (೧೦೬೪,೧೧೦೪), ಆದರೆ ಇದಕ್ಕೂ ಗಾಥಾ ಎಂಬ ಪ್ರಕರಣಗೀತಕ್ಕೂ ಯಾವ ಸಂಬಂಧವೂ ಇಲ್ಲ. ಅಂತೆಯೇ ‘ಸಾಮಸು’ ಎಂದು ಹೇಳಿರುವುದು (೫೧೮) ಪ್ರಕರಣಗೀತವಾದ ಸಾಮಕ್ಕಿಂತ ಸಾಮವೇದದಲ್ಲಿರುವ ಸಾಮಗಳು ಎಂದು ಭಾವಿಸುವುದು ಹೆಚ್ಚು ಸಂಭಾವ್ಯವಾಗಿದೆ.

ಮತಂಗಮುನಿಯು ದೇಶೀಗಾನವನ್ನು ಅಬಲಾಬಾಲಗೋಪಾಲರೂ ಕ್ಷಿತಿಪಾಲರೂ ತಮ್ಮ ತಮ್ಮ ಪ್ರಾಂತ್ಯಗಳಲ್ಲಿ ತಮ್ಮ ತಮ್ಮ ರುಚಿಗೆ ತಕ್ಕಂತೆ ಹಾಡಿಕೊಳ್ಳುವಂತಹದು ಎಂದೇನೋ ಲಕ್ಷಿಸಿದ್ದಾನೆ (೧೪); ಅದು ಆಲಾಪನಾದಿಗಳು ಇಲ್ಲದ್ದೂ ಹೌದು; ಆದರೆ ಬೃಹದ್ದೇಶಿಯಲ್ಲಿ ವರ್ಣಿಸಿರುವ ಜಾತಿಗಳು, ಗ್ರಾಮಮೂರ್ಛನಾದಿಗಳು, ಗ್ರಾಮರಾಗಗಳು ಭಾಷಾ, ವಿಭಾಷಾ, ಅಂತರಭಾಷಾಗಳು, ನಲವತ್ತೆಂಟು ಪ್ರಬಂಧಗಳು. ಇವುಗಳನ್ನೆಲ್ಲ ಅವರು ಸ್ವೇಚ್ಛೆಯಿಂದ ಹಾಡಿಕೊಳ್ಳುವಂತಹವೆ ಎಂಬ ಸಂದೇಹವು ಬರುತ್ತದೆ. ಅಲ್ಲದೆ ಗ್ರಾಮ – ಮೂರ್ಛನಾ – ತಾನ – ಜಾತಿ – ಗ್ರಾಮರಾಗ – ಉಪರಾಗ – ರಾಗ – ಭಾಷಾತ್ರಯರಾಗಗಳಂತಹ ಅಂಶಗಳನ್ನು ಶಾರ್ಙ್ಗದೇವಾದಿಗಳು ಗಾಂಧರ್ವ / ಮಾರ್ಗದಲ್ಲಿ ವರ್ಗೀಕರಿಸಿದ್ದಾರೆ. ಸರ್ವಜ್ಞಸೋಮೇಶ್ವರ, ಜಗದೇಕಮಲ್ಲ, ಪಾರ್ಶ್ವದೇವರುಗಳು ಅವುಗಳನ್ನೆಲ್ಲ ಪೂರ್ತಿ ಕೈಬಿಡುತ್ತಾರೆ. ಮತಂಗನು ಅವನ್ನೆಲ್ಲ ದೇಶೀಯಲ್ಲಿ ವರ್ಗೀಕರಿಸಿರುವುದು ಚಿಂತ್ಯವಾಗಿದೆ. ದೇಶೀ ಎಂಬುದರ ಅರ್ಥದ ಹಲವು ಪದರಗಳನ್ನು ಅವನು ಬಿಡಿಸಿದ್ದಾನೆ. ಇವುಗಳಲ್ಲಿ ಕೆಲವನ್ನು ಮೇಲೆ ಸೂಚಿಸಿದೆ. ಇವೆಲ್ಲದರಿಂದ ಏಕವಾಕ್ಯತೆಯನ್ನು ಹೊರಡಿಸುವುದು ಕಷ್ಟ. ಇದಕ್ಕೆ ಕೆಳಕಂಡ ಕಾರಣಗಳನ್ನು ಹೇಳಬಹುದು.

i. ಬೃಹದ್ದೇಶಿಯ ಆದ್ಯಂತಗಳು ದೊರೆಯದೆ, ದೊರೆತಿರುವ ಗ್ರಂಥವು ಲೋಪದೋಷಗಳಿಂದ ತುಂಬಿರುವುದು.

ii. ದೇಶೀ ಮತ್ತು ಮಾರ್ಗ ಎಂಬ ಶಬ್ದಗಳೂ ಅವುಗಳಲ್ಲಿ ವರ್ಗೀಕೃತವಾದ ವಿಷಯಗಳೂ ವಿಕಾಸದ ಪ್ರಾಥಮಿಕ ಹಂತದಲ್ಲಿದ್ದು, ಬೆಳವಣಿಗೆಗೆ ಅವಶ್ಯಕವಾದ ಅರ್ಥಸಂದಿಗ್ಧತೆ ಮತ್ತು ಸಾಧ್ಯತಾವೈವಿಧ್ಯಗಳನ್ನು ಹೊಂದಿದ್ದುದು.

iii. ದೇಶೀ ಮತ್ತು ಮಾರ್ಗ ಎಂಬ ಸಂಗೀತಪದ್ಧತಿಗಳ ಸ್ಪಷ್ಟ ಪೃಥಕ್ಕರಣಕ್ಕೆ ಅಗತ್ಯವಾದಷ್ಟು ಸಾಂಸ್ಕೃತಿಕ, ಸಾಮಾಜಿಕ ಹಾಗೂ ಸಾಂಗೀತಿಕ ಪರಿಸರಗಳು ಮೂರ್ತಸ್ವರೂಪವನ್ನು ಪಡೆಯದೆ ಸಂಕ್ರಮಣಾವಸ್ಥೆಯಲ್ಲಿದ್ದುದು.ಸ