ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಗುರಿ ‘ಕನ್ನಡ ಸಂಸ್ಕೃತಿ’ಯ ಶೋಧ, ವಿಮರ್ಶೆ, ಮತ್ತು ಪ್ರಸಾರ. ಅಂತಿಮ ಗುರಿ ಸುತ್ತಲಿನ ಸಂಸ್ಕೃತಿಗಳ ವಿವೇಕಪೂರ್ಣ ವಿನಿಯೋಗ, ಆದಿಕವಿ, ಪಂಪ, ಸಾಹಿತ್ಯಕ್ಕೆ ಅನ್ವಯಿಸಿ ಹೇಳಿರುವ ‘ದೇಸಿಯೊಳ್ ಪುಗುವುದು, ಪೊಕ್ಕು ಮಾರ್ಗದೊಳೆ ತಳ್ವುದು’ ಎಂಬ ಮಾತು ಪರ್ಯಾಯವಾಗಿ ಇದನ್ನೇ ಧ್ವನಿಸುತ್ತದೆ.

ಮೂಲತಃ ಸಮಾಜವೊಂದು ಸ್ವ-ರೂಪ, ಸ್ವ-ಭಾವ ವಿಶಿಷ್ಟವಾಗಿರುತ್ತದೆ. ಹೀಗಿದ್ದೂ ಅದು ತನ್ನಷ್ಟಕ್ಕೆ ತಾನು ಪ್ರತ್ಯೇಕವಾಗಿ ನಿಲ್ಲದೆ, ಅನ್ಯ ಸಂಸ್ಕೃತಿಗಳನ್ನು ಸ್ವೀಕರಿಸುತ್ತ, ನಿರಾಕರಿಸುತ್ತ ಒಮ್ಮೊಮ್ಮೆ ತಿರಸ್ಕರಿಸುತ್ತ ಮುಂದುವರಿಯುತ್ತದೆ. ಪ್ರಧಾನವಾಗಿ ಆರ್ಯ-ಆಂಗ್ಲ ಸಂಸ್ಕೃತಿಗಳನ್ನು ಜೀರ್ಣಿಸಿಕೊಳ್ಳುತ್ತ ಬಂದ ಕನ್ನಡ ಸಮಾಜ. ಉದ್ದಕ್ಕೂ ದ್ವಿಭಾಷಾ ಸಂದರ್ಭದಲ್ಲಿ ಬದುಕು ಮಾಡಿದೆ. ಹಿಂದಿನದು ಕನ್ನಡ-ಸಂಸ್ಕೃತ ದ್ವಿಭಾಷಾ ಸಂದರ್ಭ. ಇಂದಿನದು ಕನ್ನಡ-ಇಂಗ್ಲೀಷ್ ದ್ವಿಭಾಷಾ ಸಂದರ್ಭ. ಗ್ರಂಥಸ್ಥ ಭಾಷೆಯಾದ ಸಂಸ್ಕೃತಕ್ಕಿಂತ ಜೀವಂತ ಭಾಷೆಯಾದ ಇಂಗ್ಲಿಷ್ ಬೆಳಕಾಗುತ್ತಲೇ ಬೆಂಕಿಯಾಗಬಹುದೇ? ಎಂಬ ಭಯ ನಮ್ಮಲ್ಲಿ ಹುಟ್ಟಿದೆ. ಹೆಚ್ಚಿನದಾಗಿ ಆಂಗ್ಲ ಜೀವನಶೈಲಿ ನಮ್ಮ ಜೀವನಾಡಿಗಳನ್ನು ದಿನೇ ದಿನೇ ನಿಯಂತ್ರಿಸತೊಡಗಿ, ಒಂದು ಬಗೆಯ ಅತಿರೇಕ ಸೃಷ್ಟಿಯಾಗುತ್ತಲಿದೆ.

ಗಾಂಧೀಜಿಯವರು ಈ ಅತಿರೇಕವನ್ನು ಬಹಳ ಹಿಂದೆಯೇ ಊಹಿಸಿ,’ಸ್ವದೇಶೀ ಚಳುವಳಿ’ಯನ್ನು ಕೈಗೆತ್ತಿಕೊಂಡಿದ್ದರು. ಈ ಮತ್ತು ಇಂಥ ದೇಶೀ ಚಿಂತನೆಗಳ ಆದರ್ಶದಲ್ಲಿ ಕನ್ನಡ ವಿಶ್ವವಿದ್ಯಾಲಯ ಮೊದಲು ಮಾಡಬೇಕಾದ ಕೆಲಸವೆಂದರೆ ವಿಸ್ಮೃತಿಯ ಸಾಗರದಲ್ಲಿ ಮುಳುಗಿಹೋಗಿರುವ ನಮ್ಮ ಪಾರಂಪರಿಕ ಕ್ರಿಯೆ, ಪ್ರಕ್ರಿಯೆ ರೂಪದ ‘ಸ್ವದೇಶೀ ಸತ್ಯ’ಗಳನ್ನು ಶೋಧಿಸುವುದು; ಬಳಿಕ ಅಲ್ಲಿ ಸೇರಿಕೊಂಡಿರುವ ದೋಷಗಳನ್ನ ದೂರ ಸರಿಸಿ ಗುಣಾಂಶಗಳನ್ನು ಗುರುತಿಸುವುದು; ಜೊತೆಗೆ ಪೂರ್ಣ ಬದುಕಿನ ಅವಶ್ಯವಿರುವ ಕೊರತೆಗಳನ್ನು ಅನ್ಯಸಂಸ್ಕೃತಿಯಿಂದ ಎಚ್ಚರವಹಿಸಿ ತುಂಬಿಕೊಳ್ಳುವುದು. ಒಟ್ಟಾರೆ ಅನ್ಯಸಂಸ್ಕೃತಿಗಳ ಸಹಯೋಗದಲ್ಲಿಯೂ ‘ಕನ್ನಡವು ಕನ್ನಡವ ಕನ್ನಡಿಸುತಿರಬೇಕು’; ಎಂಬಂತೆ ನಾವು ಕನ್ನಡವನ್ನು ಬದುಕಿಸಬೇಕಾಗಿದೆ. ಬೆಳೆಸಬೇಕಾಗಿದೆ. ಹಾಗೆ ಮಾಡಿದಾಗ ಮಾತ್ರ ಕನ್ನಡತ್ವವನ್ನು ನಾಶ ಮಾಡಿಕೊಂಡು ಜಾಗತಿಕವಾಗುವುದು ತಪ್ಪಿ ಕನ್ನಡವೂ ಜಾಗತಿಕವಾಗುತ್ತದೆ. ಜಾಗತಿಕವಾಗುವುದೆಂದರೆ ಸ್ಥಾನಿಕದ ನಿರಾಕರಣೆಯಲ್ಲವೆಮಬ ಸತ್ಯ ಸ್ಥಾಪನೆಗೊಳ್ಳುತ್ತದೆ.

ಹೆಗಲ ಮೇಲೆ ಈ ಹೊಣೆಯನ್ನು ಹೊತ್ತು, ಅಸ್ತಿತ್ವಕ್ಕೆ ಬಂದಿರುವ ಕನ್ನಡ ವಿಶ್ವವಿದ್ಯಾಲಯ, ‘ಎಲ್ಲ ರಸ್ತೆಗಳು ರೋಮದ ಕಡೆಗೆ’ ಎಂಬಂತೆ ಕನ್ನಡದ ಎಲ್ಲ ಹಾದಿಗಳು ಹಂಪಿಯ ಕಡೆಗೆ ಕೇಂದ್ರೀಕರಣಗೊಳ್ಳುವ ಮತ್ತು ಇಲ್ಲಿಂದಲೇ ಜಗತ್ತಿನ ಅಂಚಿನತ್ತ ವಿಕೇಂದ್ರೀಕರಣಗೊಳ್ಳುವ ವಾತಾವರಣವನ್ನು ನಿರ್ಮಾಣ ಮಾಡಬೇಕಾಗಿದೆ. ಈ ರೀತಿ ಐತಿಹಾಸಿಕ ಪರಂಪರೆ ಮತ್ತು ಭೌಗೋಳಿಕ ಪರಿಸರಗಳಲ್ಲಿ ಶ್ರಮಿಸಬೇಕಾಗಿರುವ ಕನ್ನಡ ವಿಶ್ವವಿದ್ಯಾಲಯ ‘ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಪ್ರಜ್ಞೆ ಕನ್ನಡಿಗರಲ್ಲಿ ಜಾಗೃತವಾಗಿರುವಂತೆಯೂ ನೋಡಿಕೊಳ್ಳಬೇಕಾಗಿದೆ.

ಈ ಎಲ್ಲ ನೆಲೆಗಳಲ್ಲಿ ಸೃಷ್ಟಿಯಾಗುವ ತನ್ನ ಶೋಧನೆ-ಚಿಂತನೆಗಳನ್ನು ದಾಖಲಿಸಬೇಕೆಂಬ ಮತ್ತು ಸಂವಹನಗೊಳಿಸಬೇಕೆಂಬ ತೀವ್ರ ಹಂಬಲದಿಂದ ಈ ವಿಶ್ವವಿದ್ಯಾಲಯ ‘ಪ್ರಸಾರಾಂಗ’ ಹೆಸರಿನ ಪ್ರಸಾರಮಾಧ್ಯಮ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದಿದೆ. ಶ್ರವ್ಯ, ದೃಶ್ಯ, ವಾಚನ ಸಾಮಗ್ರಿಗಳ ಉತ್ಪಾದನೆ-ವಿತರಣೆ ಇತ್ಯಾದಿ ಕಾರ್ಯಗಳನ್ನು ಕೈಗೆತ್ತಿಕೊಂಡಿರುವ ಇದು, ವಾಚನ ಸಾಮಗ್ರಿಯಾಗಿರುವ ಪುಸ್ತಕಗಳ ಉತ್ಪಾದನೆಗೆ ವಿಶೇಷ ಕಾಳಜಿ ವಹಿಸಿದೆ.. ಆಂತರಿಕ ಸತ್ವ, ಬಾಹ್ಯ ಸೌಂದರ್ಯಗಳಿಂದ ಕೂಡಿರುವ ವಿಶಿಷ್ಟ ‘ಪುಸ್ತಕ ಸಂಸ್ಕೃತಿ’ಯನ್ನು ಅಸ್ತಿತ್ವಕ್ಕೆ ತರುತ್ತಲಿರುವ ಈ ಪ್ರಸಾರಾಂಗದ ಇತ್ತೀಚಿನ ಪ್ರಕಟಣೆಯಾಗಿದೆ, ಶ್ರೀ ಮತಂಗಮುನಿ ವಿರಚಿತ ‘ಬೃಹದ್ದೇಶೀ’.

ಶ್ರೀ ಮತಂಗಮುನಿ ವಿರಚಿತ ‘ಬೃಹದ್ದೇಶೀ’ ಗ್ರಂಥದ ಶಾಸ್ತ್ರೀಯ ಪಠ್ಯವನ್ನು ರೂಪಿಸಿ, ಅದರ ಕನ್ನಡಾನುವಾದವನ್ನು ಸಿದ್ಧಪಡಿಸಿಕೊಟ್ಟವರು, ಸೃಜನಶೀಲ ವಿದ್ವಾಂಸರಾದ ಡಾ.ರಾ. ಸತ್ಯನಾರಾಯಣ ಅವರು. ಭಾರತೀಯ ಸಂಗೀತ ಹಾಗೂ ನೃತ್ಯಗಳನ್ನು ಕುರಿತಂತೆ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರೂ ಬಹುಭಾಷಾ ತಜ್ಞರೂ ಆಗಿರುವ ರಾ. ಸತ್ಯನಾರಾಯಣ ಅವರು ದೇಶ – ವಿದೇಶಗಳ ಅನೇಕ ಸಾಂಸ್ಕೃತಿಕ – ಶೈಕ್ಷಣಿಕ ಸಂಘಟನೆಗಳ ಜತೆಗೆ ಸಾಹಚರ್ಯ ಇರಿಸಿಕೊಂಡು, ಭಾರತೀಯ ವಿದ್ವತ್ತನ್ನು ಪ್ರಸರಣ ಮಾಡುತ್ತಲಿರುವ ಘನ ವಿದ್ವಾಂಸರು. ಸಂತ ಶ್ರೀ ತ್ಯಾಗರಾಜರ ಶಿಷ್ಯ ಪರಂಪರೆಯ ಇಂತಹ ಮಹಾವಿದ್ವಾಂಸರೇ ಬೃಹದ್ದೇಶೀಯಂತಹ ಸಂಗೀತ ಶಾಸ್ತ್ರಗ್ರಂಥವನ್ನು ಪರಿಷ್ಕರಿಸಬಲ್ಲರು, ಕನ್ನಡಕ್ಕೆ ಅನುವಾದಿಸಬಲ್ಲರೆಂಬ ಕಾರಣದಿಂದ ಕನ್ನಡ ವಿಶ್ವವಿದ್ಯಾಲಯ ಈ ಘನಕಾರ್ಯವನ್ನು ಅವರಿಗೆ ಒಪ್ಪಿಸಿತು. ಅವರ ಎರಡು ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ ಈ ಗ್ರಂಥದ ಪಠ್ಯ ಹಾಗೂ ಅನುವಾದಕಾರ್ಯ ಸಿದ್ಧವಾಗಿದೆ. ಈ ಮಹೋನ್ನತ ಕಾರ್ಯಕ್ಕಾಗಿ ವಿಶ್ವವಿದ್ಯಾಲಯ ರಾ. ಸತ್ಯನಾರಾಯಣ ಅವರಿಗೆ ಋಣಿಯಾಗಿದೆ.

‘ದೇಶೀ’ ಸಂಸ್ಕೃತಿಯ ಶೋಧ – ಪ್ರಸಾರಗಳಿಗಾಗಿ ಅಸ್ತಿತ್ವಕ್ಕೆ ಬಂದಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಈ ‘ಬೃಹದ್ದೇಶೀ’ ಯನ್ನು ‘ಹಂಪಿ ಉತ್ಸವ – ೧೯೯೮’ ರ ನೆನಪಿಗಾಗಿ ಬಿಡುಗಡೆ ಮಾಡುತ್ತಿರುವುದು ತುಂಬ ಪ್ರಸ್ತುತವೆಂದು ನಾನು ಭಾವಿಸುತ್ತೇನೆ. ಈ ಮಹಾಕೃತಿಯ ಪ್ರಕಟಣೆಗೆ ಆರ್ಥಿಕ ನೆರವು ನೀಡಿದ ‘ಹಂಪಿ ಉತ್ಸವ-೯೮’ರ ಸಮಿತಿಗೆ, ವಿಶೇಷವಾಗಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಂ.ಪಿ. ಪ್ರಕಾಶ್ ಅವರಿಗೆ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್ ಅವರಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.

ಎಂ.ಎಂ. ಕಲಬುರ್ಗಿ
ಕುಲಪತಿಗಳು
ವಿದ್ಯಾರಣ್ಯ