Categories
ಯಕ್ಷಗಾನ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮಲ್ಲಯ್ಯ ಸ್ವಾಮಿ ಅಥಣಿ

ಜಾನಪದ ರಂಗಭೂಮಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ‘ಶ್ರೀ ಕೃಷ್ಣ ಪಾರಿಜಾತ’ದ ಹಿರಿಯ ಕಲಾವಿದರು ಶ್ರೀ ಮಲ್ಲಯ್ಯಾಸ್ವಾಮಿ ಅಥಣಿ ಅವರು.
ಜಮಖಂಡಿ ತಾಲ್ಲೂಕಿನ ಮೈಗೂರ ಗ್ರಾಮದಲ್ಲಿ ೧೯೧೮ ರಲ್ಲಿ ಜನಿಸಿದ ಶ್ರೀ ಮಲ್ಲಯ್ಯಾಸ್ವಾಮಿ ಅವರಿಗೆ ಬಾಲ್ಯದಿಂದಲೂ ಪಾರಿಜಾತ ಕಲೆಯ ಬಗ್ಗೆ ಆಕರ್ಷಣೆ. ತಿಕೋಟಾ ಗ್ರಾಮದ ಪ್ರಸಿದ್ಧ ಪಾರಿಜಾತ ಕಲಾವಿದರೂ, ಗುರುಗಳೂ ಆಗಿದ್ದ ಶ್ರೀ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರಿಂದ ಪಾರಿಜಾತ ಕಲೆಯ ಶಿಕ್ಷಣ ಪಡೆದು, ತಿಕೋಟಾದಲ್ಲೇ ಪ್ರಪ್ರಥಮವಾಗಿ ಸತ್ಯಭಾಮ ಹಾಗೂ ಕೊರವಂಜಿ, ದಶಾವತಾರ ಪಾತ್ರಗಳ ಅಭಿನಯವನ್ನಾರಂಭಿಸಿದ್ದೆ ಅಲ್ಲದೆ ಭಾಗವತಿಕೆಯಲ್ಲೂ ಪ್ರಸಿದ್ದಿ ಪಡೆದಿದ್ದಾರೆ.
ಅಥಣಿಯಲ್ಲಿ ಸ್ವಂತ ಕಂಪನಿ ಕಟ್ಟಿ, ಅಲ್ಲಿಂದ ಕಂಪನಿಯೊಂದಿಗೆ ಜಮಖಂಡಿಗೆ ಬಂದ ಶ್ರೀ ಮಲ್ಲಯ್ಯಾಸ್ವಾಮಿ ಅಥಣಿ ಶ್ರೀ ವೆಂಕಟೇಶ್ವರ ಕೃಷ್ಣ ಪಾರಿಜಾತ ನಾಟಕ ಕಂಪನಿ, ಜಮಖಂಡಿ ಎಂಬ ಹೆಸರಿನಲ್ಲಿ ಕಂಪನಿ ಸ್ಥಾಪಿಸಿ ೪೬ ವರ್ಷಗಳಿಂದಲೂ ನಡೆಸುತ್ತ ಬಂದಿದ್ದಾರೆ.
ಧಾರವಾಡ, ಗುಲ್ಬರ್ಗ, ಹೈದರಾಬಾದ್, ಮುಂಬಯಿ ಹೀಗೆ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿರುವುದಲ್ಲದೆ, ಆಕಾಶವಾಣಿ ದೂರದರ್ಶನದಲ್ಲಿಯೂ ಶ್ರೀಯುತರ ಅಭಿನಯದ ‘ಕೃಷ್ಣಪಾರಿಜಾತ’ ಪ್ರಸಾರಗೊಂಡು ಮೆಚ್ಚುಗೆ ಗಳಿಸಿದೆ. ಅನೇಕ ಕಲಾವಿದರಿಗೆ ‘ಕೃಷ್ಣ ಪಾರಿಜಾತ’ ಕಲೆಯನ್ನು ಕಲಿಸಿ ಸಿದ್ಧಗೊಳಿಸಿರುವ ಶ್ರೀ ಮಲ್ಲಯ್ಯಾಸ್ವಾಮಿ ಅಥಣಿ ಅವರು ಹತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.
ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಪಟ್ಟದ ಕಲ್ಲು ಉತ್ಸವ, ದಸರಾ ಉತ್ಸವಗಳು ಮೊದಲಾದವುಗಳಲ್ಲಿ ಕಾರ್ಯಕ್ರಮ ನೀಡಿರುವ ಶ್ರೀಯುತರು ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದರು ಹಾಗೂ ದೂರದರ್ಶನ ಕಲಾವಿದರು. ಮುಂಬೈಯಲ್ಲಿ ನಡೆದ ಕಾನಡಾವಿರಲು ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮ, ಬೆಂಗಳೂರು ನಾಟಕೋತ್ಸವದಲ್ಲಿ ಕಾರ್ಯಕ್ರಮ ನೀಡಿ ಸನ್ಮಾನಿತರಾಗಿದ್ದಾರೆ.
ನಶಿಸಿಹೋಗುತ್ತಿರುವ ಜಾನಪದ ಕಲೆಯಾದ ಕೃಷ್ಣಪಾರಿಜಾತ ಕಲೆಯಲ್ಲಿ ತರಬೇತಿ ನೀಡಿ ಮುಂದಿನ ತಲೆಮಾರನ್ನು ಸಿದ್ಧಪಡಿಸುತ್ತಿರುವ ಪ್ರತಿಭಾವಂತ ಕೃಷ್ಣ ಪಾರಿಜಾತ ಕಲಾವಿದರು ಶ್ರೀ ಮಲ್ಲಯ್ಯಾಸ್ವಾಮಿ ಅಥಣಿ ಅವರು.