Categories
ಉದ್ಯಮ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮೂಡಂಬೈಲ್ ರವಿ ಶೆಟ್ಟಿ

ವಿದೇಶದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಿ ಆಶ್ರಯದಾತರಾಗಿರುವ ಮೂಡಂಬೈಲ್ ರವಿ ಶೆಟ್ಟಿ ಹೃದಯವಂತ ಉದ್ಯಮಿ. ನಾನಾ ಬಗೆಯಲ್ಲಿ ಸೇವೆಗೈದ ಸಮಾಜಮುಖಿ, ದಕ್ಷಿಣಕನ್ನಡ ಜಿಲ್ಲೆ ಮೂಡಂಬೈಲ್‌ನವರಾದ ರವಿಶೆಟ್ಟಿ ಅವರು ಮೆಕಾನಿಕಲ್ ಇಂಜಿನಿಯರ್, ಎಂ.ಬಿ.ಎ ಪದವೀಧರರು. ದೂರದ ದೋಹಾ-ಕತಾರ್‌ನಲ್ಲಿ ಖಾಸಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಬದುಕು ರೂಪಿಸಿಕೊಂಡವರು. ಹೋಟೆಲ್ ಉದ್ದಿಮೆದಾರರಾಗಿಯೂ ನೆಲೆನಿಂತವರು. ತಮ್ಮ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಿ ಸಾವಿರಾರು ಕುಟುಂಬಗಳಿಗೆ ಆಶ್ರಯದಾತರಾದವರು, ಜನೋಪಕಾರದಲ್ಲಿ ಸಾರ್ಥಕತೆ ಕಾಣುವ ಗುಣವಿಶೇಷ ಅವರದ್ದು. ಕತಾರ್‌ನ ಕರ್ನಾಟಕ ಸಂಘದ ಉಪಾಧ್ಯಕ್ಷ, ತುಳುಕೂಟದ ಅಧ್ಯಕ್ಷ ಹಾಗೂ ಬಂಟ್ಸ್ ಕತಾರ್‌ನ ಸ್ಥಾಪಕ ಅಧ್ಯಕ್ಷರಾಗಿ ಜನಮುಖಿ ಕಾರ್ಯಗಳನ್ನು ಕೈಗೊಂಡವರು. ಕನ್ನಡದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸಿದವರು. ಕೊರೋನಾ ಸಂದರ್ಭದಲ್ಲಿ ಅಶಕ್ತ ಕಾರ್ಮಿಕರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಆಹಾರದ ಕಿಟ್‌ಗಳ ವಿತರಣೆ, ಆರ್ಥಿಕ ನೆರವಿನ ಹಸ್ತ ಚಾಚಿದ ಉಪಕಾರಿ, ಕರ್ನಾಟಕದ ಮುಖ್ಯಮಂತ್ರಿಗಳ ನಿಧಿಗೆ ಐದು ಲಕ್ಷ ರೂಪಾಯಿ ದೇಣಿಗೆ ನೀಡಿದ ಉದಾರಿ. ನೆರೆಹಾವಳಿ ಸಂದರ್ಭದಲ್ಲಿ ಹದಿನೈದು ಲಕ್ಷ ರೂ. ದೇಣಿಗೆ ಸಂಗ್ರಹಿಸಿ ಅರ್ಪಿಸಿದ ರವಿಶೆಟ್ಟಿ ಸಮಾಜದ ಋಣ ತೀರಿಸಲು ಸದಾ ಮುಂದು. ಅಮೆರಿಕಾದ ಕಿಂಗ್ಸ್ ಯೂನಿವರ್ಸಿಟಿಯ ಗೌರವ ಡಾಕ್ಟರೇಟ್, ಬದುಕಿನ ಹೆಗ್ಗುರಿ. ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಿತರು. ಈಗಲೂ ಕಲಾಕೈಂಕರ್ಯದಲ್ಲಿ ತನ್ಮಯವಾಗಿರುವ ಕಲಾನಿಷ್ಠ ದೇಸೀ ಪ್ರತಿಭೆ.