Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಯಶವಂತ ಹಳಬಂಡಿ

ವರಕವಿ ಬೇಂದ್ರೆಯವರ ಸಾಹಿತ್ಯದ ಬದುಕು, ಬರಹಗಳಿಂದ ಪ್ರಭಾವಿತರಾಗಿ ಅವರ ಬಹುತೇಕ ಕವನಗಳಿಗೆ ರಾಗ ಸಂಯೋಜನೆ ಅಳವಡಿಸಿ ದನಿ ನೀಡಿದವರು ಗಾಯಕ ಯಶವಂತ ಹಳಬಂಡಿ.
ಗಂಡು ಮೆಟ್ಟಿದ ನಾಡು ಧಾರವಾಡದಲ್ಲಿ ೧೯೫೦ರಲ್ಲಿ ಕಲಾವಿದರ ಮನೆತನದಲ್ಲಿ ಜನಿಸಿದ ಹಳಬಂಡಿಯವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದು ಶ್ರೀ ಲಕ್ಷ್ಮಣರಾವ್‌ ದೇವಾಂಗ ಮಠ ಹಾಗೂ ನಾರಾಯಣ ರಾವ್ ಮಜುಂದಾ‌
ಅವರ ಬಳಿ.
ಕಳೆದ ೨೮ ವರ್ಷಗಳಿಂದ ನಾಡಿನಾದ್ಯಂತ ಹಾಗೂ ಹೊರರಾಜ್ಯಗಳಲ್ಲೂ ಸಾವಿರಕ್ಕೂ ಮಿಕ್ಕಿ ಕಾಯಕ್ರಮ ನೀಡಿರುವರು. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ‘ಬಿ’ ಹೈಗ್ರೇಡ್ ಗಾಯಕರೂ ಆಗಿರುವ ಅವರು ಹಲವು ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿ ಮುಖ್ಯವಾಗಿ ಅನುಭಾವಿ ಕವಿ ಶಿಶುನಾಳ ಷರೀಫರ ಗೀತೆಗಳಿಗೆ ನೀಡಿರುವ ಕಂಠ ಶೈಲಿ ಜನಪ್ರಿಯ.
ಸ್ವತಃ ಸಂಗೀತ ನಿರ್ದೇಶಕರಾಗಿ, ತಮ್ಮದೇ ವಾದ್ಯ ವೃಂದ ರಚಿಸಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವರು. ಬೇಂದ್ರೆಯವರ ಗೀತೆಗಳಿಗೆ ರಾಗ ಸಂಯೋಜನೆ ಮಾಡಿ ಹಾಡಿರುವ ‘ಬೇಂದ್ರೆ ಕಾವ್ಯವಾಣಿ’ ರೂಪಕ ಅತ್ಯಂತ ಜನಪ್ರಿಯ. ಅವರ ‘ಪಾತರಗಿತ್ತಿ ಪಕ್ಕ’, ‘ಹೋಗು ಮನಸೇ’, ‘ಮಲ್ಲಿಗೆ ತರುವೆನು’ ಧ್ವನಿಸುರುಳಿಗಳು ಸಂಗೀತ ರಸಿಕರಿಗೆ ಅಚ್ಚುಮೆಚ್ಚು. ಶರಣರ ವಚನ, ದೇಶಭಕ್ತಿಗೀತೆ, ನಾಡಗೀತೆ, ಭಾವಗೀತೆಗಳನ್ನು ಜಾನಪದ ಶೈಲಿಯ ಸೊಗಡಿನೊಂದಿಗೆ ಹಾಡುವ ವಿಶಿಷ್ಟ ಶಾರೀರ ಶ್ರೀ ಯಶವಂತ ಹಳಬಂಡಿ ಅವರದು.