Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರತನ್ ರಾಚಯ್ಯ ಮಠಪತಿ

ಕುಸ್ತಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ರತನ್ ರಾಚಯ್ಯ ಮಠಪತಿ ಕರ್ನಾಟಕ ಸರ್ಕಾರದ ‘ಏಕಲವ್ಯ ಪ್ರಶಸ್ತಿ’ ಪುರಸ್ಕೃತರು.
ಕರ್ನಾಟಕದ ಪುರಾತನ ಕ್ರೀಡಾಕಲೆಯಾಗಿರುವ ಕುಸ್ತಿಯಲ್ಲಿ ಚಿಕ್ಕಂದಿನಿಂದಲೇ ಆಸಕ್ತಿ ಬೆಳೆಸಿಕೊಂಡ ರತನ್ ಸಿಕ್ಕ ಅವಕಾಶಗಳನ್ನೆಲ್ಲ ಸದುಪಯೋಗಪಡಿಸಿಕೊಂಡು ಛಲ ಬಿಡದ ತ್ರಿವಿಕ್ರಮನಂತೆ ಬೆಳೆಯುತ್ತ, ಪ್ರಶಸ್ತಿಗಳನ್ನು ಬಾಚುತ್ತ ಮುನ್ನಡೆದರು.
ಫಿಲಿಫೈನ್ಸ್ನಲ್ಲಿ ನಡೆದ ೭ನೇ ಏಷಿಯನ್ ಕುಸ್ತಿ ಕ್ರೀಡೆಯಲ್ಲಿ ಭಾಗವಹಿಸಿದ್ದ ರತನ್ ರಷ್ಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಅಮೋಘವಾಗಿ ಸೆಣಸಾಡಿ ಬೆಳ್ಳಿಪದಕ ವಿಜೇತರಾದರು. ಈಜಿಪ್ಟ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು.
ರಾಷ್ಟ್ರೀಯ ಕುಸ್ತಿ ಸ್ಪರ್ಧೆಗಳಲ್ಲಿ ಪದಕಗಳ ಕೊಳ್ಳೆ ಹೊಡೆದ ರತನ್ ಆರು ಬಂಗಾರದ ಪದಕಗಳನ್ನೂ, ಒಂದು ಬೆಳ್ಳಿ ಪದಕವನ್ನೂ ಗೆದ್ದು ರಾಜ್ಯದ ಗೌರವವನ್ನು ಎತ್ತಿ ಹಿಡಿದರು. ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗಳಲ್ಲಿ ಕರ್ನಾಟಕ ರತ್ನ, ಕರ್ನಾಟಕ ಕೇಸರಿ, ಕರ್ನಾಟಕ ಕಂಠೀರವ, ಕರ್ನಾಟಕ ಕುಮಾರ್, ದಸರಾ ಕೇಸರಿ, ಅಖಿಲ ಭಾರತೀಯ ಮಹಾಪೌರ ಕೇಸರಿ, ಕೆಂಪೇಗೌಡ ಪ್ರಶಸ್ತಿಗಳಿಂದ ಭೂಷಿತರಾದವರು.
ಜಮಖಂಡಿಯಲ್ಲಿ ಹುಟ್ಟಿ ರಾಜ್ಯಮಟ್ಟಕ್ಕೇರಿ ಅಂತರರಾಷ್ಟ್ರೀಯ ಮಟ್ಟಕ್ಕೂ ಹಾರಿದ ಅಪರೂಪದ ಕ್ರೀಡಾಪಟು ಶ್ರೀ ರತನ್ ರಾಚಯ್ಯ ಮಠಪತಿ ಅವರು.