Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ರಾಚಪ್ಪ ಹಡಪದ

ಕಿತ್ತೂರು ಚೆನ್ನಮ್ಮನ ನಾಡಿನ ಬೈಲಹೊಂಗಲ ತಾಲ್ಲೂಕಿನ ಹೊಳೆಹೊಸೂರಿನ ರಾಚಪ್ಪ ಹಡಪದ ಹಿರಿಯ ಸಮಾಜವಾದಿ, ಹೋರಾಟ, ಸಮಾಜಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡ ಹಿರಿಯರು.
ಎರಡನೇ ತರಗತಿಯಷ್ಟೇ ಓದಿದ ರಾಚಪ್ಪ ಹಡಪದ ಬದುಕಿನ ಅನುಭವ ಶಾಲೆಯಲ್ಲಿ ರೂಪಗೊಂಡವರು. ಎಳವೆಯಲ್ಲೇ ಮನಸ್ಸಿನ ಮೇಲೆ ಸ್ವಾತಂತ್ರ್ಯ ಆಂದೋಲನದ ಪ್ರಭಾವಕ್ಕೊಳಗಾಗಿ ಸಮಾಜವಾದಿ ಹೋರಾಟಕ್ಕೆ ಧುಮುಕಿದವರು, ಲೋಹಿಯಾ ಸಿದ್ಧಾಂತ, ಗಾಂಧೀಜಿ ಪ್ರಣೀತ ತತ್ವಗಳ ಪಾಲಕರು, ಸಮಾಜವಾದಿ ಧುರೀಣ ಶಾಂತವೀರಗೋಪಾಲಗೌಡರು, ಚಿಂತಕರಾದ ಪ್ರೊ. ನಂಜುಂಡಸ್ವಾಮಿ, ಪಿ.ಲಂಕೇಶ್, ಪ್ರೊ. ರಾಮದಾಸ್, ಪೂರ್ಣಚಂದ್ರತೇಜಸ್ವಿ ಅವರೊಡನೆ ಆತ್ಮೀಯ ಒಡನಾಟ ಹೊಂದಿದ್ದ ರಾಚಪ್ಪ ಹಡಪದ ಅವರು ಭೂಸತ್ಯಾಗ್ರಹ ಚಳವಳಿಗಳಲ್ಲಿ ಸಕ್ರಿಯರಾಗಿದ್ದವರು. ಧಾರವಾಡ ಸಮೀಪದ ಹೆಬ್ಬಳ್ಳಿಯಲ್ಲಿ ಜಮೀನ್ದಾರರು ೧೨ ಸಾವಿರ ಎಕರೆ ಜಮೀನನ್ನು ಗೇಣಿದಾರರ ಹೆಸರಿಗೆ ಹಂಚದಿದ್ದರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ತುರ್ತು ಪರಿಸ್ಥಿತಿಯ ವಿರುದ್ದದ ಜಯಪ್ರಕಾಶ್ ನಾರಾಯಣರ ಚಳವಳಿಯ ಭಾಗವಾಗಿದ್ದವರು. ನಿರಂತರವಾಗಿ ಸಮಾಜಮುಖಿಯಾಗಿ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ರಾಚಪ್ಪ ಹಡಪದ ಅವರು ತತ್ವ- ಸಿದ್ಧಾಂತಗಳ ಪಾಲನೆಗೆ ಬದುಕಿ ಮೀಸಲಿಟ್ಟ ಅಪರೂಪದ ವ್ಯಕ್ತಿತ್ವ.