ವೃತ್ತಿ ರಂಗಭೂಮಿಯಲ್ಲಿ ಹಾಸ್ಯನಟನಾಗಿ ವಿಶೇಷ ಛಾಪೊತ್ತಿದ ರಂಗಪ್ರತಿಭೆ ರಾಚಯ್ಯ ರುದ್ರಯ್ಯ ಸಾಲಿಮಠ, ನಟ, ನಿರ್ದೇಶಕ, ಗಾಯಕ, ನಾಟ್ಯಗಾರನಾಗಿ ಸೇವೆಗೈದ ಸಾಧಕರು.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ರನ್ನ ಬೆಳಗಲಿಯಲ್ಲಿ ೧೯೩೮ರಲ್ಲಿ ಜನಿಸಿದ ರಾಚಯ್ಯ ಸಾಲಿಮಠ ಬಾಲ್ಯದಲ್ಲೇ ರಂಗಭೂಮಿಗೆ ಆಕರ್ಷಿತರಾದವರು. ಶಾಲಾದಿನಗಳಲ್ಲೆ ಮನಸ್ಸಿಲ್ಲದ ಮದುವೆ, ಬ್ಲಾಕ್ ಮಾರ್ಕೆಟ್, ವಶಿಷ್ಟ ವಿಶ್ವಾಮಿತ್ರರ ಸಂವಾದ ನಾಟಕದಲ್ಲಿ ಪಾತ್ರ ವಹಿಸಿ, ದೇಶಭಕ್ತಿಗೀತೆ, ಜನಪದ ಗೀತೆ ಮತ್ತು ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ ಗಮನಸೆಳೆದ ಪ್ರತಿಭೆ. ಬಣ್ಣದ ಈ ನಂಟು ಅಪ್ಪನಿಂದ ಬಂದ ಬಳುವಳಿ. ೭ನೇ ತರಗತಿವರೆಗಷ್ಟೇ ಓದಿ ಆನಂತರ ಕಲೆಗೆ ಸಂಪೂರ್ಣ ಸಮರ್ಪಿತಗೊಂಡ ಬದುಕು. ಮಾತಂಗತಕನ್ಯೆ, ಪ್ರೇಮಬಂಧನ, ಸೌಭಾಗ್ಯಲಕ್ಷ್ಮಿ ಅತ್ತಿಅಳಿಯ, ರತ್ನಮಾಂಗಲ್ಯ, ವಿಷಮ ಸಂಸಾರ, ಹಳ್ಳಿಯಿಂದ ದಿಲ್ಲಿಯವರೆಗೆ ಮು೦ತಾದ ನಾಟಕಗಳಲ್ಲಿ ಬಹುಬಗೆಯ ಪಾತ್ರ, ಹಾಸ್ಯಗಾರನಾಗಿ ಜನಮಾನಸದಲ್ಲಿ ಜನಜನಿತ. ನಾಟ್ಯ ಕಲೆಯನ್ನೂ ರೂಢಿಸಿಕೊಂಡು ಶ್ರೀಮಹಾಲಿಂಗೇಶ್ವರ ನಾಟ್ಯ ಸಂಘ ಸ್ಥಾಪಿಸಿ ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರದಲ್ಲೂ ಕಲಾಪ್ರದರ್ಶನ ನೀಡಿದ ಕಲಾವಿದರು. ಹಲವು ನಾಟಕಗಳ ನಿರ್ದೇಶಕರು, ನಾಟಕಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ ರಾಚಯ್ಯ ಸಾಲಿಮಠ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ರಂಗಸೇವಾನಿರತರು.
Categories
ಶ್ರೀ ರಾಚಯ್ಯ ರುದ್ರಯ್ಯ ಸಾಲಿಮಠ
