ಮೈಸೂರಿನಲ್ಲಿ ಕದಂಬ ರಂಗವೇದಿಕೆ ಕಟ್ಟಿಕೊಂಡು ಕಳೆದ ಮೂರು ದಶಕಗಳಿಂದ ದುಡಿಯುತ್ತಿರುವ ರಾಜಶೇಖರ ಕದಂಬ ‘ರಂಗಮಿತ್ರ ಕದಂಬ’ ಎಂದೇ ಪ್ರಸಿದ್ಧರು. ನಟ, ಸಂಘಟಕ, ನಿರ್ದೇಶಕ ಹಾಗೂ ಲೇಖಕರಾಗಿಯೂ ಹೆಸರು ಮಾಡಿರುವವರು. ನೂರಾರು ನಾಟಕಗಳಲ್ಲಿ ಅಭಿನಯಿಸಿ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ, ಒಂದು ಗುಂಪು ಮಾಡಬಲ್ಲ ಕೆಲಸವನ್ನು ಒಬ್ಬರೇ ಮಾಡುವ ಸಾಮರ್ಥ್ಯವನ್ನು ಪ್ರಕಟಿಸಿರುವ ಕದಂಬರ ರಂಗಭೂಮಿಯ ಬದ್ಧತೆ ಅಚ್ಚರಿ ಹುಟ್ಟಿಸುವಂಥದ್ದು. ದುರ್ಗಾಸ್ತಮಾನ, ಹೆಜ್ಜಾಲ, ಧರ್ಮಕೊಂಡದ ಕಥೆ ಇವು ಕದಂಬರ ನಾಟಕ ತಂಡದ ಅತ್ಯಂತ ಯಶಸ್ವೀ ನಾಟಕಗಳು. ಸುಮಾರು ೪೫ ಕನ್ನಡ ಚಿತ್ರಗಳಲ್ಲೂ ದೂರದರ್ಶನದ ಧಾರಾವಾಹಿಗಳಲ್ಲೂ ನಟಿಸಿರುವ ಕದಂಬ ಮೈಸೂರು ಆಕಾಶವಾಣಿಯ ನಾಟಕ ಕಲಾವಿದರಾಗಿರುವುದಲ್ಲದೆ ಆಕಾಶವಾಣಿಗಾಗಿ ಅನೇಕ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಕುವೆಂಪು ಹಾಗೂ ಡಾ. ರಾಜ್ಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಬಂದಾಗ ಅವರಿಬ್ಬರನ್ನೂ ಒಂದೇ ವೇದಿಕೆಯಲ್ಲಿ ಸನ್ಮಾನಿಸಿದ್ದು ಕದಂಬರ ಹೆಗ್ಗಳಿಕೆ.
ನಾಟಕ ಅಕಾಡೆಮಿಯ ಸದಸ್ಯರಾಗಿ ಗ್ರಾಮೀಣ ಹವ್ಯಾಸಿ ತಂಡಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಲ್ಲದೆ ಕಾಲೇಜು ರಂಗಭೂಮಿಯ ಚಟುವಟಿಕೆಗಳನ್ನು ಜೀವಂತಗೊಳಿಸಲು ಪ್ರಯತ್ನಿಸಿದರು.
ಕದಂಬರನ್ನು ಅರಸಿಕೊಂಡು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಚಿತ್ರದುರ್ಗ ಮುರುಘರಾಜೇಂದ್ರ ಮಠದ ‘ಕಲಾರತ್ನ’ ಪ್ರಶಸ್ತಿಗಳು ಬಂದಿವೆ. ಏನಾದರೂ ಸಾಧಿಸಬೇಕೆಂಬ ಆವೇಶದಲ್ಲಿ ರಂಗಭೂಮಿಯಲ್ಲಿ ಗಣನೀಯ ಸಾಧನೆ ಮಾಡಿರುವ ದಣಿವರಿಯದ ರಂಗಕರ್ಮಿ ಶ್ರೀ ರಾಜಶೇಖರ ಕದಂಬ ಅವರು.
Categories
ಶ್ರೀ ರಾಜಶೇಖರ ಕದಂಬ
