ಕಳೆದ ೬೩ ವರ್ಷಗಳಿಂದ ಶಾಸ್ತ್ರೀಯ ಸಂಗೀತೋತ್ಸವವನ್ನು ನಿರಂತರವಾಗಿ ನಡೆಸುತ್ತ ನಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುತ್ತಿರುವ ಜನಪ್ರಿಯ ಸಂಸ್ಥೆ ಶ್ರೀ ರಾಮಸೇವಾ ಮಂಡಲಿ.
೧೯೩೯ನೆಯ ಇಸವಿಯಲ್ಲಿ ಶ್ರೀ ಎಸ್ ವಿ ನಾರಾಯಣಸ್ವಾಮಿರಾವ್ ಅವರಿಂದ ಸ್ಥಾಪಿತವಾಯಿತು. ಸ್ವಾತಂತ್ರ್ಯ ಪೂರ್ವ ದಶಕಗಳಲ್ಲಿ ಹಳೇ ಮೈಸೂರಿನ ಸಾಂಸ್ಕೃತಿಕ ಉತ್ಸವಗಳಲ್ಲಿ ಪ್ರಮುಖವಾದುದು ರಾಮನವಮಿ, ಬೆಂಗಳೂರಿನ
ಚಾಮರಾಜಪೇಟೆ ಬಡಾವಣೆಯ ಹಾದಿ ಬದಿಯ ಒಂದು ಸಣ್ಣ ಚಪ್ಪರದಲ್ಲಿ ಜನ್ಮತಾಳಿದ ಶ್ರೀರಾಮಸೇವಾ ಮಂಡಲಿ ಇಂದು
ದೇಶಾದ್ಯಂತ ಸಂಗೀತ ವಿದ್ವಾಂಸರ, ಕೇಳುಗರ ಮೆಚ್ಚುಗೆಯನ್ನು, ಮನ್ನಣೆಯನ್ನು ಗಳಿಸಿಕೊಂಡಿದೆ. ಈ ವೇದಿಕೆಯಲ್ಲಿ ಕಾರ್ಯಕ್ರಮ ನೀಡುವುದೇ ಒಂದು ಪ್ರತಿಷ್ಠೆಯ ಸಂಗತಿಯಾಗಿರುವುದು ಮಂಡಲಿಗೆ ಸಂದ ಗೌರವ.
ಶ್ರೀರಾಮ ಸೇವಾ ಮಂಡಲಿಯಲ್ಲಿ ಸಂಗೀತ ಕಚೇರಿ ನೀಡಿದ ವೀಣೆ ದೊರೆಸ್ವಾಮಿ ಅಯ್ಯಂಗಾರ್, ಹೊನ್ನಪ್ಪ ಭಾಗವತರ್, ಎಂ ಎಸ್ ಸುಬ್ಬುಲಕ್ಷ್ಮಿ, ಪಂಡಿತ ಭೀಮಸೇನ ಜೋಷಿ, ಉಸ್ತಾದ್ ಬಡೇಗುಲಾಂ ಅಲಿಖಾನ್, ಉಸ್ತಾದ್ ಬಿಸ್ಮಿಲ್ಲಾಖಾನ್, ಪಂಡಿತ್ ರವಿಶಂಕರ್, ಕೆ ಜೆ ಏಸುದಾಸ್, ಶೀರ್‌ಕಾಳಿ ಗೋವಿಂದರಾಜನ್, ಮಹಾರಾಜಪುರಂ ಸಂತಾನಂ, ಚಿಟ್ಟಿಬಾಬು, ಅಮೆರಿಕಾದವರಾದ ಜಾನ್ ಬಿ ಹಿಗ್ಗಿನ್ಸ್ ಮೊದಲಾದ ಹಿರಿಯರ ಪರಂಪರೆಯೇ ಇದೆ.
ವರ್ಷದಿಂದ ವರ್ಷಕ್ಕೆ ಮಂಡಲಿಯ ಜನಪ್ರಿಯತೆ ಹೆಚ್ಚುತ್ತಾ ಹೋಗಿದೆ. ೧೫ ದಿನ ನಡೆಯುತ್ತಿದ್ದ ಸಂಗೀತ ಕಾಠ್ಯಕ್ರಮಗಳು ೬೩ ದಿನಗಳವರೆಗೂ ವಿಸ್ತಾರಗೊಂಡಿದೆ.
ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ – ಹೀಗೆ ಉಭಯಪ್ರಕಾರಗಳ ಕಲಾ ರಸದೌತಣ ಉಣಿಸುವುದು ಮಂಡಲಿಯ ವೈಶಿಷ್ಟ್ಯ.
ಆಧ್ಯಾತ್ಮಿಕತೆ ಮತ್ತು ಸಂಗೀತ ಎರಡೂ ಮೇಲೈಸಿದ ಒಂದು ವಿಶಿಷ್ಟವಾದ ವೇದಿಕೆ ಶ್ರೀ ರಾಮಸೇವಾ ಮಂಡಲಿ.