ಕೈಕೆ ಭರತಗಿರ್ಮಡಿಯ ಕಾತರತೆ, ಕೇಳ್, ಕವಿಗೆ
ಗಿರಿವನಪ್ರಿಯ ರಾಮ ಸಂದರ್ಶನಂ ಗೈಯೆ
ಕಾನನಾಂತರದಿ : ಕರೆತರಲಲ್ತು ಸಾಕೇತ
ಪುರಿಗೆ. ಮರಳಿಸಲಲ್ತು ಮಣಿಮಕುಟ ಧಾರಣೆಗೆ.
ಸೌಮಿತ್ರಿಯೋಲಂತೆ ರಾಮಸೀತಾ ಪುಣ್ಯ
ಸಂಗ ಮಂಗಲ ತುಂಗ ಶೃಂಗ ವನರಂಗಮಂ
ಚರಿಸಲಾನುತ್ಕಂಠಿತಂ ! ಮಲೆಯ ನಾಡೆನಗೆ
ತಾಯಿಮನೆ. ಕಾಡು ದೇವರ ಬೀಡು. ಗಿರಿಯ ಮುಡಿ
ಶಿವನ ಗುಡಿ. ಬನವೆಣ್ಣೆ ಮೊದಲಿನಾ ಮನದನ್ನೆ.
ಕವಿ ರಾಮಚಂದ್ರನೀ ಸೀತಾ ಕಲಾಕಾಂತೆ      ೧೦
ನಿತ್ಯವನವಾಸಿಯದರಿಂದಮೀ ಕಬ್ಬಿಗಂ
ಗಿರಿವನ ಪ್ರೇಮ ಸಾದೃಶ್ಯದಿಂ ಸಮರಸಂ
ಸಮಹೃದಯಿ ರಾಮರಸಋಷಿಗೆ. ವನದೇಶಮಂ
ಸವಿದಪೆನ್ ಸೀತಾರಮಣನೊಡನೆ. ತೊಳತೊಳಲಿ
ಮೆಯ್ಯ ಮರೆದಪೆನೀಂಟಿ ಕಾನನಾವೇಶಮಂ.
ದೊರೆವಂತೆವೋಲ್ ಹೃದಯಜಿಹ್ವೆಗೆ ರಸದ ಮಧುತೃಪ್ತಿ
ಕೈಕೊಂಡಪೆನ್ ಪ್ರಕೃತಿಯಾತ್ರೆಯಂ. ರಮಣನಿರೆ
ಕಲೆಯ ವಧು ತಾನಯ್ದೆ. ಪುಣ್ಯಾತ್ಮ ರಾಮನಿರೆ
ಸೀತೆಯೊಲ್ ಪೂಜ್ಯ ಮಂಗಳೆಯೆನ್ನ ಕೃತಿಕನ್ಯೆ !
ರೆಂಕೆಗೆ ರಥಧ ಹಂಗೆ ? ಪಥಋಣವೆ ಕಲ್ಪನೆಗೆ ?           ೨೦
ಕಾವ್ಯಯಾತ್ರೆಗೆ ತೇರುಕುದುರೆಯ ನೆರಂ ಬೇಕೆ ?
ಧರೆಯ ನಿಮ್ನೋನ್ನತಂಗಳ ತಡಬೆಯೇನೊಳದೆ
ಪ್ರತಿಭೆಯ ವಿಮಾನ ಯಾನಕ್ಕೆ ? ಪರಿವಾರದಾ
ಸಂಸಾರ ಭಾರ ಬಂಧನವಿಹುದೆ ದುರ್ದಮ್ಯ,
ನಿಸ್ಸೀಮ, ವಿಶ್ವಸಂಚರ ಶಕ್ತಿಯುಕ್ತ, ಕವಿ
ವೈನತೇಯನ ಮಹಾ ಪಕ್ಷ ವಿಸ್ಫಾಲನೆಗೆ ?
ಕವಿ ವಿಹಂಗಮಗಲ್ತು ; ಭರತಾದಿಗಳಿಗಿರ್ಕೆ
ರಥ ಪಥ ತುರಂಗ ವಾರಣ ಋಣಂ. ಬರಲವರ್
ಪಿಂಬಡಿಂ. ಮುನ್ನಮಾನೈದುವೆನ್ : ರಮಣೀಯ
ವೃಕ್ಷ ಸಂಕುಲ ವಸನ ಶೋಭೆಯಿಂ, ಕಮನೀಯ          ೩೦
ಕುಸುಮ ಕಿಸಲಯರಾಜಿ ರಾರಾಜಿಸುವ ದಿವ್ಯ
ಸೌಂದರ್ಯದಿಂ, ಕೋಟಿ ಪಕ್ಷಿ ಕಲಕಲ ತುಮುಲ
ಮಾಧುರ್ಯದಿಂ, ಪುಣ್ಯಗಣ್ಯ ಮಂದಾಕಿನಿಯ
ವಾಹಿನಿಯ ಕಂದರ ಕ್ರೀಡಾ ವಿಲೋಲತೆಯ
ನೀಲ ಲೀಲಾಶೀಲ ಸಲಿಲ ಕಲ್ಲೋಲದಿಂ,
ಶ್ರೀರಾಮ ಪರ್ಣಶಾಲಾ ಪೂಜ್ಯ ಸನ್ನಿಧಿಯ
ಸಂಗದಿಂ ಮಹಿಮೆಗಾಸ್ಪದಮಾಗಿ ಮೆರೆಯುವಾ
ಚಿತ್ರಕೂಟಾದ್ರಿಯದೊ ಕಣ್ಗೊಳಿಸುತಿಹುದಲ್ಲಿ,
ಮೇಘಮುದ್ರಿತ ಮಹಾ ಶೃಂಗ ಶಿವಲಿಂಗದೋಲ್,
ಸರ್ವೇಂದ್ರಿಯಂಗಳಿಗೆ ಮತ್ತೆ ಕವಿಯಾತ್ಮಕ್ಕೆ   ೪೦
ಮಧುರ ಮಧುಖನಿಯವೋಲ್ ಮತ್ತೆ ರಸಧುನಿಯವೋಲ್ !
“ಕ್ಷೇಮದಿಂ ಮರಳ್ವಂತೆ ಪ್ರೇಮದಿಂ ಪರಕೆಗೈ.
ಕಾಯಿ ಜೀವೇಶನಂ ಕರುಣೆಯಿಂದೋವಿ, ಓ
ತಾಯೆ. ಪಿಂತಿರುಗಿ ಬಂದಾಮೇಲೆ ನಿನಗೀವೆನೌ
ಮಾಂಸಭೂತೌದನ ಸುರಾಘಟ ಸಹಸ್ರದಾ
ನಿರ್ದುಷ್ಟ ಪುಷ್ಟ ಸಂತುಷ್ಟ ನೈವೇದ್ಯಮಂ
ನಿನಗಿಷ್ಟಮಂ, ದೇವಿ. ಕೈಮುಗಿದೆನಿದೊ, ಗಂಗೆ !”
ಇಂತಾ ತರಂಗಿಣಿಗೆ ಬಿನ್ನೈಸುತಿರೆ ಸೀತೆ,
ಸಾರೆಬರೆ ದಕ್ಷಿಣ ಸಿಕತ ತಟ ವಿಪಿನಪಂಕ್ತಿ,
ಜಹ್ನುಜಾತೆಯನುತ್ತರಿಸಿ, ನಾವೆಯಿಂದಿಳಿದು,  ೫೦
ಬೀಳ್ಕೊಂಡು ಗುಹನಂ ನಿಷಾಧಪತಿಯಂ ; ಪಿಂತೆ
ಸೋದರನಿರಲ್ಕೆ, ನಡುವೆ ಬರೆ ಸತಿ, ತಾಂ ಮುಂತೆ
ನಡೆಗೊಂಡನಡವಿ ಕೀಳ್ವಟ್ಟೆಯೊಳಿಳಾತ್ಮಜಾ
ವಲ್ಲಭಂ, ನೀಲ ನೀರದ ವಿಪುಲ ವಪುವಾಗಿ,
ಭೀಷಣ ದನುಷ್ಪಾಣಿಯಾಗಿ. ಮಲೆತುದು ಮುಂದೆ
ಗಿರಿಗಹ್ವರ ಭ್ರೂಭ್ರುಕುಟಿಯಂತೆ, ಕರ್ಕಶಂ,
ಭೈರವಂ, ಜನಸಂಗಹೀನಂ ಮಹದ್ವನಂ,
ಪಂತಿದೇರನ ಸೊಸೆಯ ಕಣ್ಗೆದೆಗಳರ್‌ಕೆಯಂ
ಬೀರ್ದು. ಜನಕಜೆ ಸುತ್ತಲುಂ ಬೆಚ್ಚಿ ನೋಡುತಂ,
ಮತ್ತೆಯೆರೆಯನ ಬೆನ್ನ ತುಂಬು ಬತ್ತಳಿಕೆಯಂ  ೬೦
ಕಂಡಳುಕನೀಡಾಡುತಂ ; ರಘೂದ್ವಹನೆರ್ದೆಯ
ಪಣ್ಣಾಗಲಿರ್ಪೊಂದು ಸಿರಿಯ ಪೂಗನಸಿಂದು
ತನ್ನಿಷ್ಟದಾದರ್ಶಮಂ ಪೂಜಿಸೋಲೈಸಿ
ಬೆಂಬಾಲಿಪುದೊ, ಲಕ್ಷ್ಮಣನ ಧರ್ಮವಾತ್ಸಲ್ಯ ತಾಂ,
ಪೇಳ್, ದಾರಿದೋರುತ್ತವನ ಮುಂದೆ ನಡೆದಪುದೊ
ಎಂಬವೋಲ್ ಸಾಗಿದಳು ಹಜ್ಜೆ ಹಜ್ಜೆಯನಿಟ್ಟು
ದಟ್ಟಪಳುವದ ಪಸುರ್ ನೆಳಲೊಳ್, ರಸಾವೇಶಂ
ಇಳಿದ ಸಮಯದ ಕವಿಯ ರಚನೆಯ ಉದಾಸೀನತಾ
ವೇಗದಲಿ. ಬಗೆವುಗದವೋಲ್ ಬಟ್ಟೆಯ ಬಳಲ್ಕೆ,
ರಘುನಂದನಂ ಸತಿಗೆ ನಾನಾ ವಿಚಿತ್ರಂಗಳಂ, ೭೦
ತರು ಸುಮ ವಿಹಂಗಮ ಮೃಗಂಗಳಂ, ತೋರುತ್ತೆ
ವರ್ಣಿಸುತೆ ವಿವರಿಸುತೆ ನಡೆಯುತಿರಲೇರ್ದತ್ತು
ಪೊತ್ತು ಬಾನ್ನೆತ್ತಿಗೆ. ವಿದೇಹರಾಜನ ಕುವರಿ
ದಣಿದು ಸುಯ್ದಳು ಢಗೆಗೆ ಮೈಸುರ್ಕಿ. ಕೆಂಪೇರ್ದ
ಮೊಗಸಿರಿಗೆ ಪಣೆಯ ಮೇಲ್ ಮೂಡಿತು ಪನಿಯ ಪಂತಿ.
ನಾಂದಂಟಿದತ್ತು ಮುಂಗುರುಳೋಳಿ, ಬೆಳ್‌ಮೆಯ್ಗೆ
ಕಾಡುಗಣ್ದಿಟ್ಟಿ ಸೋಂಕದ ತೆರದಿ, ಕರ್ಮಸಿಯ
ಗೆರೆಯ ಚಿತ್ತಾರಮಂ ಮೆತ್ತಿಬರೆದೋಲ್. ಮನಂ
ಕರಗಿ ಹರಿದುದು ಕಣ್ಗಳಲಿ ರಾಮಚಂದ್ರಂಗೆ.
ನಿರುಪಮ ಬಲಾನ್ವಿತಂ ಲಕ್ಷ್ಮಣಗೆ ನಿರ್ಬಲತೆ   ೮೦
ಮೈದೋರಿದುದು ಕಾಣುತಾ ಕರುಣಕರ ದೃಶ್ಯಮಂ.
ದಾರಿಯೆಡೆ ರಾಮನೊಟ್ಟಿದ ತರಗೆಲೆಯ ಮೇಲೆ
ಸೀತೆ ದೊಪ್ಪನೆ ಕುಳಿತ್ತುಸ್ಸೆನುತ್ತೊರಗಿದಳ್
ಮರಕೆ. ಮುಚ್ಚಿದುವಕ್ಷಿ ತಾಳಲಾರದ ಸೇವೆಯಿಂ,
ಪೇಳೆಳ್ಚರಳ್ದುದೊ ಮುರ್ಚ್ಚೆಗೆಂಬಂತೆ. ಕೆಚ್ಚೆದೆಯ
ಬೀರರಿರ್ವರುಮಿಚ್ಚೆಗೆಟ್ಟು ಮರವಟ್ಟರೆನೆ
ಕುಲ್ತರೆದೆ ತಣ್ತು ! ನೀರಳ್ಕೆಯಂ ಸನ್ನೆಯಿಂ
ಸೂಚಿಸಿ ತರಳೆ ನರಳೆ, ಬೇಗದಿಂದೋಡಿದನ್
ಊರ್ಮಿಳಾ ಸ್ವಾಮಿ, ಪಳುವಂ ನುಗ್ಗಿ, ದರಿಯಿಳಿದು,
ಸರುವಿಂಗೆ. ತಳಿರ ತೊಂಗಲ ಬಿಜ್ಜಣಿಕೆಯಿಕ್ಕಿ   ೯೦
ಮೆಲ್ಗಾಳಿವೀಸಿ ದಾಶರಥಿ ಸವಿಮಾತಿನಿಂ
ತನ್ನಾ ತಳೋದರಿಯನೋವಿದನ್. ಅನಿತರೊಳ್
ದೊನ್ನೆಗೈದೆಲೆಯೊಳಗೆ ಮೈದುನಂ ತಂದೀಯೆ
ತಣ್ಣಿರನೀಂಟಿ ಸೊಗಸಿದಳು ಶುಶ್ರೂಷೆಗಾ
ರಾಮನೆರ್ದೆಯನ್ನೆ. ಮೇಲಲ್ಲಿಂದೆ ನಡೆದರಾ
ಮೆಲ್ಲನೊಯ್ಯನೆ ಮೂವರುಂ. ಮೆರೆದುದನ್ನೆಗಂ
ವನರಮ್ಯಗಿರಿಪಂಕ್ತಿಯಿಂದೆ ಪರಿವೃತಮಾಗಿ,
ರವಿಕರೋಜ್ವಲ ಸಲಿಲ ಚಂಚಲತೆಯಿಂ ಮಿಂಚಿ,
ರಾಜೀವ ರಾಜಿಯಿಂ ರಾಜಿಪ ಸರೋವರಂ
ಮುಂದೆ. ಕಯ್ ಕಾಲ್ ಮೊಗಂ ತೊಳೆದರುಂಡರ್ ಗುಹನ         ೧೦೦
ಕೊಟ್ಟ ಬುತ್ತಿಯನಾಸರಂಗಳೆಯೆ ಮಲಗಿದರ್
ತೀರದೆಳಗರುಕೆ ಹಾಸಿನೊಳಲ್ಲಿ, ಕರಿನೆಳಲ
ಹಿರಿಕೊಡೆವಿಡಿದ ಹೆಮ್ಮರದ ಬುಡದಲ್ಲಿ, ತಿರೆತಾಯ
ತಣ್ಪು ಮಡಿಲಲ್ಲಿ. ತಾವರೆಹೂವಿನೆಸಳ್‌ಗಳಂ
ಕೆದರಿ, ಪೊನ್ನಿರಿಯೊಳಗಣಾಮೋದಮಂ ಸೂರೆ
ಮಾಳ್ಪಾ ಸರಸವಾಡಿ, ನರುಗಂಪುವೊರೆವೊತ್ತು
ಮಂದಮಂದಂ ತೀಡುವೆಳವೆಲರುಸಿರನೊಲ್ದು
ಬೀಸಿದಳ್ ; ಹಿಂಡುಹಿಂಡಾಗಿ ಬಂಡುಣಲೆಂದು
ತೇರುಗೊಂಡಲರ ಸಂತೆಗೆ ನೆರೆದು, ಮೊರೆದುಲಿವ
ನಸರಿ ಮೇಣ್ ತುಡುವೆ ಮೇಣ್ ಹೆಜ್ಜೇನ್ನೊಣಂ ಮೇಣ್   ೧೧೦
ಅಲರ್ವಕ್ಕಿಗಳ್ ಮತ್ತೆ ಕೊಂಚೆಯಂಚೆಗಳಿಮ್ಟು
ಜೋಗುಳವನುಲಿದಾಡಿದಳ್ ; ತೀರಮಂ ತಟ್ಟಿ
ತೆರೆಗೈಗಳಿಂದೆ, ಚಪ್ಪಳೆಯಿಕ್ಕಿದಳ್ ; ಮುದ್ದಾಡಿ
ತೂಗಿದಳ್ ನಿದ್ದೆದೊಟ್ಟಿಲೊಳಿಟ್ಟು ಆ ಮೂವರಂ
ಶ್ರೀಮಂತರಂ ಆ ಸರೋವರ ಶ್ರೀ.
ಜೀರ್ದುಂಬಿಗಳ್
ಚೀರಿಡಲ್ ತೊಡಗಿದುವು. ದಟ್ಟಯ್ಸಿದುದು ಮರ್ಬ್ಬು
ಕಾಡನೊಯ್ಯನೆ ನುಂಗಿ. ಬೈಗಾದುದಾ ಪಗಲ್.
ಇಳಿದುದೈ ಕಾಳಸರ್ಪಿಣಿಯಂತೆ ಕರ್ಪಿರುಳ್.
ಮರದಲೆಗಳೆಲೆಗೊಡೆಯ ನಡುನಡುವೆ ತಾರೆಗಳ್
ಮಿಣುಮಿಣುಕಿಣಕಿ ತೋರಿ ಮರೆಯಾದುವಿನ್ನೊಮ್ಮೆ      ೧೨೦
ಬೇರೊಂದು ತಾಣದೊಳ್ ಮಿನುಗಿದುವು, ಮಿಣುಕಿಣಕಿ
ಮರಳಿ ಮರೆಯಾಗಿ. ಚುಕ್ಕಿಗಳನಣಕಿಸಿ ಮಿನುಗಿ
ಮೆರೆದುವಯ್ ಮಿಂಚುಂಬಳದ ಸೇನೆ, ಕಳ್ತಲೆಗೆ
ಕೋಟಿಕೋಟಿಯ ಕಿಡಿಯ ರೋಮಾಂಚನವನಿತ್ತು,
ಮತ್ತೆ ನೋಳ್ಪರಿಗೆ. ಪಗಲಿನ ಜಗದ ಸದ್ದಳಿದು
ಶವವಾಯ್ತು ನಿಃಶಬ್ದಂ. ಓರೊರ್ಮೆ ನೀರವದ
ಕಗ್ಗಲ್ಲಿಗುಳಿಯೇಟನೊದೆವವೊಲ್ ದೆವ್ವದನಿ ‘ಗೂ’
ಕೂಗಿದುದು ಗೂಬೆ. ಮೇಣೋರೊರ್ಮೆ ಜಾನಕಿಗೆ
ಜೀವ ಜೊಂಪಿಸುವಂತೆ, ಸದ್ದು ಹದ್ದುಗಳೆರಗಿ
ಶರ್ವರಿಯ ಸತ್ತ ಸದ್ದಿಲಿಮೆಯ್ಯ ಮಾಂಸಮಂ  ೧೩೦
ಮುದ್ದೆಮುದ್ದೆಯೆ ಕಿತ್ತೆಳೆಯುವಂತೆ, ಕೇಳ್ದುವಯ್
ಕೋಳ್ಮಿಗಗಳೂಳ್.
ನಟ್ಟನಡುರಾತ್ರಿ ಸೌಮಿತ್ರಿಯಂ
ಕರೆದನಣ್ಣಂ :
“ತಮ್ಮ, ಪಿಂತಿರುಗಯೋಧ್ಯೆಗೀ
ರಾತ್ರಿಯಂ ಕಳೆದು. ಊರ್ಮಿಳೆ ನಿನ್ನನೆಯೆ ಕರೆದು
ಗೋಳಾಡುತಿರ್ಪಂತೆ ಕಂಡೆ ಕನಸಂ.”
“ಅಣ್ಣ,
ಕಾಂತೆ ಊರ್ಮಿಳೆ ತಪಸ್ವಿನಿ. ನಿನ್ನೊಡನೆ ಬರುವ
ಮುನ್ನಮಾಕೆಯ ಕೃಪೆಯನಾಂತೆ ಬಂದೆನ್. ನಿನಗೆ
ಚಿಂತೆಯಿನಿತಾ ದೆಸೆಗೆ ಬೇಡಯ್.”
ಸುಮಿತ್ರಾತ್ಮಜಂ
ರಾಮನಿಂಗಿತವರಿತು ಶೋಕಗದ್ಗದನಾಗಿ
ಪಿಡಿದನಣ್ಣನ ಪಾದಮಂ. ದಿಂಡುರುಳ್ದನು ನೆಲಕೆ          ೧೪೦
ಮರುಮಾತಿಗೆಡೆಯಿಲ್ಲದೊಂದು ಮಾರುತ್ತರದ
ಬಡಿಗೆ ಬೀಳ್ವಂತೆ : “ನೀನಿಲ್ಲದೆಂತತ್ತಿಗೆಗೆ
ಬಾಳಿಲ್ಲವೋ ಅಂತೆ ನನ್ನ ಬಾಳಾದೊಡಂ
ನಿನ್ನನುಳಿದಂದು ನೀರಂ ಪಳಿದ ಮೀನಂತೆವೊಲ್
ಗಳಿಗೆಗಳಿದಪುದಣ್ಣ ! ತಂದೆ ತಾಯಂದಿರಂ
ನೋಳ್ಪ ಮಾತಿರಲಿ, ಪುಗಲೊಲ್ಲೆನಾಂ ಸಗ್ಗಮಂ,
ನೀನಿರದೆ ಮುಂದೆ !”
ಆ ಪುಣ್ಯರಾತ್ರಿಯೆ ಕಣಾ,
ಋಷಿ ಭರದ್ವಾಜಂ ಸಮಾಧಿಯೊಳಿರಲ್, ಸ್ವರ್‌ಜ್ಯೋತಿ
ಪೃಥಿವಿಗವತರಿಸಿ ತನ್ನಾಶ್ರಮಂ ಪುಗುತಿರ್ಪುದಂ
ಕಾಣುತಾನಂದದಿಂ ಹಾರೀತನಂ ಶಿಷ್ಯನಂ     ೧೫೦
ಕರೆದು :
“ನಾಳೆಯೆ ಬರ್ಪನತಿಥಿ ನಾರಾಯಣಂ,
ಹಾರೀತ ! ಧನ್ಯಮಾಯ್ತೆಮ್ಮಾಶ್ರಮಂ; ಮತ್ತೆ
ಪುರುಷೋತ್ತಮಾಗಮನದಿಂ ಪರಮ ಪುರುಷಾರ್ಥಮುಂ
ಸಿದ್ಧಿಸಿತು ತಪಕೆ ! ನೀನವನ ಸುಸ್ವಾಗತಕೆ
ನಮ್ಮೀ ತಪೋವನವನಣಿಗೆಯ್ದು, ಪಿರಿಯತಿಥಿಯಂ
ನಾಳೆ ಬೆಳಗಿಂ ಬಿಡಿದು ಬೈಗು ಬರ್ಪನ್ನೆಗಂ
ಕಾಯ್ದಿದಿರ್‌ಗೊಂಡು ಪೂಜಿಸಿ ಕರೆದು ತಾ ಪೂಜ್ಯನಂ !”
ಬೆಳಗಾದುದೇಂ ಪೇಳ್ವುದಾಶ್ರಮದ ಶಾಂತಿಯಂ :
ಭ್ರಾಂತಿರಹಿತಾನಂದಶೀಲ ಕಾನನ ಶಾಂತಿಯಂ ;
ಆದರ್ಶಸಾಧನೆಯ ಹರ್ಷದುಜ್ಜ್ವಲ ಶಾಂತಿಯಂ ;        ೧೬೦
ಚಿಂತೆಗೆ ಅತೀತಮಪ್ಪಾ ಸೃಷ್ಟಿಯ ರಹಸ್ಯಮಂ
ಚಿಂತಿಸುವ, ಚರ್ಚಿಸುವ, ಸಿದ್ಧಾಂತಗೊಳಿಸಿಯುಂ
ಸಂದೇಹಗೊಂಡದಂ ಮತ್ತೊಂದರಿಂ ತಿದ್ದಿ,
ಮತ್ತೆ ಮುರಿದದನೆ ಮಗುದೊಂದರಿಂ ತಿದ್ದಿ, ಮೇಣ್
ತತ್ತರಿಸುವನ್ನೆಗಂ ಬುದ್ಧಿ ಜಿಜ್ಞಾಸಿಸುತೆ
ಮುನ್ನಡೆವ ಸಾಹಸದ ಮಂಥನ ಮನಶ್ಶಾಂತಿಯಂ !
ಸೋತು ಗೆಲ್ಲುವ ಮತ್ತೆ ಗೆಲಿದು ಸೋಲುವ ಶಾಂತಿಯಂ !
ಧ್ಯಾನ ಜಪತಪ ಶಾಂತಿಯಂ ! ಹೋಮ ಧೂಮದ ಮತ್ತೆ
ಸಾಮಗಾನದ ವೇದ ಘೋಷದ ಚಿರ ಪವಿತ್ರತಾ
ಶಾಂತಿಯೆ ನಮೋ ನಿನಗೆ, ಓ ಋಷ್ಯಾಶ್ರಮದ ಶಾಂತಿ !            ೧೭೦
ಚಿಮ್ಮಿ ನೆಗೆಯುವ ಪೊನ್ನಚುಕ್ಕಿಯ ಕುರಂಗ ಶಿಶುಗಳ್
ನಲಿಯುತಿವೆ ಹರಿಣಚರಣಕ್ಷುಣ್ಣ ಶಾದ್ವಲದ
ಪಚ್ಚೆಸೊಂಪಿನ ವೇದಿಕೆಯನೇರ್ದು. ಹಸುರು ಹೂ
ಹಣ್ಣು ಕಾಯ್‌ವೊತ್ತ ತರುಗಳಲಿ ಶತಶತ ವಿವಿಧ
ಪಕ್ಷಿಚಿತ್ರಸ್ವನಂ ವರ್ಣವರ್ಣಸ್ವರ್ಣಮಯ
ರಂಗವಲ್ಲಿಯನಿಕ್ಕುತಿದೆ ಕರ್ಣಚೈತ್ರನಾ
ಪರ್ಣಶಾಲೆಯಲಿ. ಕೊಡಗೆಚ್ಚಲಾಕಳ್ ನೆಳಲ
ತಂಪಿನೊಳ್ ಮೇಯುತಿದೆ. ಮಲಗಿರ್ಪುದಿನ್ನೊಂದು.
ಮುದ್ದುಕರುವಂ ನೆಕ್ಕಿ ಜೊಲ್ಲಕ್ಕರೆಯ ಸೂಸಿ
ಸೊಗಸುತಿಹುದೊಂದು. ಗೂಳಿಯದೊಂದು ಕೋಡಾಡಿ ೧೮೦
ಕೆಮ್ಮಣ್ಣುವುತ್ತಮಂ, ಮೆತ್ತಿಕೊಂಡಿದೆ ಮೊಗಕೆ ಮೇಣ್
ಕೊಂಬುಗಳ್ಗೆಲ್ಲಮೋಕುಳಿ ರಂಗು, ಕೋತಿಗಳ್
ತರಿತರಿದು ನೆಲಕೆಸೆವ ಪಣ್ಗಳಂ ಮೆಲ್ಲುತಿವೆ
ಮೊಲವಿಂಡು. ಪಾತಿಪಾತಿಯ ಕಾಲುವೆಯ ಪರಿವ
ನೀರ್ಗೆ ಕೊಕ್ಕಿಟ್ಟೊಡನೆ ಬಾನ್ಗೆ ಮೊಗಮೆತ್ತುತಂ,
ಮತ್ತೆ ಮತ್ತಂತೆಸಗಿ ವಾರಿಪಾನಾಸಕ್ತಿ ತಾಂ
ಮೂರ್ತಿಗೊಂಡಂತೆ ಕಣ್ಗೆಡ್ಡಮಾದಾ ನವಿಲ್
ನೀಳ್ದ ಪೀಲಿಯ ಚವರಿಯಿಂದಮದೊ ಗುಡಿಸುತಿದೆ
ಹತ್ತಿ ಹಸರಿದ ಹಸುರ ಮೆತ್ತೆಯಂ. ಅದೊ ಅಲ್ಲಿ :
ಹರಿಣಿಯ ಕೊರಳನಪ್ಪಿ ಪಿಡಿದು, ಸರಸಕೆ ಜೋಲ್ದು,       ೧೯೦
ಮಿಗತಾಯಿಗಳ್ಕರಿಂ ಪಾಲುಕ್ಕುವೋಲ್ ಕಾಡಿ
ಪೀಡಿಸುವ ಮುನಿಬಾಲಕಂ ! ಏಣ ಶಾಬಮಂ
ಪುಟ್ಟ ತೋಳಿಂದಪ್ಪಿ ಸುತ್ತಿ ಪೊತ್ತದರ ತಾಯ್
ಹೋರಿಗೋಡುಗಳಿಂದೆ ಮೆಯ್ಯ ಕಂಡೂತಿಯಂ
ತೀರ್ಚಿಕೊಳುತಿರ್ಪ ತಾಣಕೆ ನಡೆದು, ಕೆಚ್ಚಲಂ
ಬಾಯ್ಗಿತ್ತು, ಪೀಯೂಷಪಾನದಾನದ ಸುಖದ
ಪುಣ್ಯಕ್ಕೆ ನೋಂತಿರುವನದೊ ಮತ್ತದೊರ್ವನಾ
ತರುಣ ತಾಪಸತನೂಜಂ. ಗೋಮಯಂ ಬಳಿದು,
ಶೇಷಾಂಶಮಂ ಕರತಲದೊಳಾಂತು, ಇಂಗುದಿಯ
ಮರದ ಬುಡಕದನೆಸೆಯೆ ಬಂದಾ ಮುನಿಯ ಪತ್ನಿ        ೨೦೦
ತುಳ್ಕಿದಳ್ಕರೆಗಳ್ದು ನಿಂದು ನೋಡುತಿಹಳದೊ
ಮಿಗವರಿಗಳೊಡನಾಡುವೆಳಮಕ್ಕಳಂ !
ದುಮುಕುತಿದೆ
ಆ ತಪೋವನದ ನೇಮಿಯೊಳೊಂದು ನಿರ್ಝರಿಣಿ
ತೆರೆಯ ತಾಂಡವವಾಡಿ, ನೊರೆಜಡೆಯನೆಣ್ದೆಸೆಗೆ
ಬೀಸಾಡಿ, ಮೊರೆಯ ಡಮರುಗ ಘೋಷದೋಂಕೃತಿಗೆ
ಪರ್ವತಾರಣ್ಯಮಂ ಪ್ರತಿನಾದಿತಂ ಮಾಡಿ.
ನಿಂದಿಹವು ಮುಗಿಲೊಡನೆ ಪರ್ಚಿ ಘನ ತರುಕುಲಂ
ಕಿಕ್ಕಿರಿಯುತಿಕ್ಕೆಲದೊಳುಂ. ನೆಳಲ ಕಳ್ತಲಿಂ
ಕರ್ಪುಗೊಂಡಿಹುದಿರ್ಪುಗೊಂಡ ಸೂರ್ಯಾತಪಂ.
ಜಲಶಿಲಾವೇಶದಾ ಧ್ವಾನದಿಂ ಫೇನದಿಂ        ೨೧೦
ನಟರಾಜ ನಾಟ್ಯಮಂ ನಟಿಪ ನಿರ್ಝರ ರೂಪಿ
ಧೂರ್ಜಟಿಯೆ ನರರೂಪಮಂ ತಾಳ್ದಿದನೆನಲ್ಕೆ
ಬ್ರಹ್ಮಸಂಲಗ್ನಮನನೊರ್ವ ತೇಜಸ್ವಿ ಋಷಿ
ಧ್ಯಾನಸ್ಥನಾಗಿರ್ದನಾ ಗಿರಿ ತರಂಗಿಣಿಯ
ನಾಭಿಯಿಂದುದ್ಭವಿಸಿದಂತಿರ್ದರೆಯ ಶಿರದಿ :
ಹೇ ವಿಶ್ವೇಶ ಮಾಯೆ, ನೀನೀಶ್ವರ ಮಹಚ್ಛಾಯೆ.
ಸೃಷ್ಟಿಯಿದು ನಿನ್ನೆರ್ದೆಯ ಪಾಲ್‌ಪಸುಳೆ, ಓ ತಾಯೆ.
ನಿನ್ನ ಸೌಂದರ್ಯ ಸಾನ್ನಿಧ್ಯಮಿರೆ, ಓ ಪ್ರಕೃತಿ,
ಮಿಂಚಿದಪುದಿಂದ್ರಿಯಮತೀಂದ್ರಿಯಕೆ. ಜಡಜಗಂ
ತೋರಿದಪುದಂತರಾತ್ಮದ ಸಿರಿಗೆ ಹೊರಮೊಗಂ          ೨೨೦
ತಾನಾಗಿ. ಲಯವಹುದು ಚಿತ್ತಚಂಚಲ ವಿಕೃತಿ
ರಸದ ಮಿಂಚಿನ ಮೀಹದಿಂಪಿನಲಿ. ದೊರೆಕೊಳ್ವ
ತನ್ಮಯತೆಯಿಂ ಹೃದಯದಿಂಗಡಲ್ಗಲೆ ನಲಿಸಿ
ಮೈದೋರ್ಪುದಾ ಸಚ್ಚಿದಾನಂದ ಶಾಂತಿ ಶಶಿ.
ಮೃಣ್ಮಯಂ ಮಾಸಿ, ನನೆಕೊನೆಯೇರಿ ಚಿನ್ಮಯಂ,
ಧ್ಯಾನಿಸುವ ಕವಿಮನಂ ಗಾಯತ್ರಿಯನ್ನೇರ್ದು
ಭೂರ್ಭುವಸ್ಸುವಗಳಂ ತುಂಬಿ ತುಳುಕುತೆ ಮೀರ್ದು
ಭೋಗಿಸುವುದಾ ಬ್ರಹ್ಮ ಹೃದಯ ಮಧುವಂ ಪೀರ್ದು
ಯೋಗಲಯ ನಿದ್ರಾ ಸಮಾಧಿಯೊಳ್ ತಾನಾರ್ದು !
ಹೇ ಪ್ರಕೃತಿ, ಎಲ್ಲಮಿರ್ದೇನಿಲ್ಲದಾ ಅಲ್ಲಿ, ಮೇಣ್            ೨೩೦
ಸರ್ವಮಿರ್ಪಾ ಸರ್ವಶೂನ್ಯತಾ ಸಂಪೂರ್ಣದಲಿ
ನಿನ್ನ ಕೃಪೆಯಿಲ್ಲದಿರೆ ಪೇಳ್ ಪುರುಷದರ್ಶನವೆಲ್ಲಿ ?
ಬ್ರಹ್ಮಚರ್ಯದ ಸಂಯಮದ ತಪಕೆ ವೇದ್ಯಮಾ
ದಿವ್ಯದರ್ಶನದಿಂದಮವತರಿಸಿದನ್ ಯೋಗಿ,
ವ್ಯೋಮಾಂಡಮಂ ಚರಿಸಿ ಮೆಲ್ಲನೊಯ್ಯನೆ ನೆಲಕೆ
ವಿದ್ಯುದ್ವಿಮಾನವಿಳಿವಂತೆ. ಕಣ್ಣೆವೆದೆರೆಯೆ ಹಾ
ಚೆಲ್ವಿನಿಳೆಗೇನೊ ಚೆಲುವಿರ್ಮಡಿಸಿದೋಲಾಯ್ತು !
ಕಾನ್ತಾರ ಕಾನ್ತೆಗಾವುದೊ ದಿವ್ಯಯೌವನಂ
ಮೈದೋರಿದತ್ತು. ಹೊಮ್ಮಿತ್ತು ತೊರೆಯ ಮೊರೆಯಿಂದೆ
ದೇವತಾಹ್ವಾನದ ಸುಖಾಗಮ ಕವನ ಗೀತೆ.
ಹಕ್ಕಿ ತೆಕ್ಕನೆ ಹಾಡಿದುವು ವೃಂದ ಛಂದದಿಂ,
ಗಗನದಿಂ ಧುಮ್ಮಿಕ್ಕಿತೆನೆ ಗಾನ ಶಿವಗಂಗೆ.
ನರ್ತಿಸಿದುವೈ ಮಿಗಂ ! ತನ್ನಾತ್ಮ ರಸ ಸುಖಕೆ
ಲೋಕಮೆ ರಸಂಬಡೆವುದೆಂದಾ ಋಷಿತಪಸ್ವಿ
ಮಂದಹಸಿತಂ ನೋಡುತಿರೆ, ನಾನ್ದ ಕಂಗಳಿಗೆ
ಗೋಚರಿಸಿತೊಂದದ್ಭುತಂ : ಅನತಿ ದೂರದೊಳ್,
ಕಣ್ಬೊಲದ ಕಾನನದ ಪಳುವದೊಳ್, ತನ್ನೆರ್ದೆಯ
ರಸ ಸುಖಮೆ ಹೆಪ್ಪುಗೊಂಡಾಳಾಯ್ತೊ, ಜಾನದೊಳ್
ತಾಂ ಕಂಡ ಕಾಣ್ಮೆಗೆ ಮನುಷ್ಯತೆ ಲಭಿಸಿದತ್ತೊ,
ತನ್ನ ಚಿಂತಾ ಬ್ರಹ್ಮವಸ್ತು ಸುಕೃತದ ಸೆರೆಗೆ      ೨೫೦
ಸಿಲ್ಕಿ ತನ್ನೆಡೆಗೆ ನಡೆತಂದಪ್ಪುದೆಂಬಂತೆವೋಲ್
ದೃಷ್ಟಿತೃಷೆಗಮೃತಮಂ ಕರೆಯುತ್ತೆ ಕಂಗೊಳಿಸಿ
ಬಂದುದಾ ಸೀತಾ ತೃತೀಯಂ ರಘೂದ್ವಹನ
ನೀಲ ಮಂಗಳ ಮನೋಹರ ದೇವವಿಗ್ರಹಂ !
ಬೈಗಾಗುತಿರ್ದೊಡಂ, ಬೆಳಗೆ ಮೈದೋರ್ದವೊಲ್,
ನಲಿದುದು ತಪೋವನಂ, ಮುಚ್ಚಿ ಕೈಮುಗಿದಿರ್ದ
ಪದ್ಮಿನಿಯ ಹೃದಯಮಲರಿದುದೊಡನೆ. ಮರನೆಳಲ್
ಮಾಯವಾದುದು : ಆತ್ಮಕಾಂತಿಗಪ್ರಾಕೃತಕೆ
ಪೇಳೆಲ್ಲಿಯದು ಛಾಯೆ ? ಮಹಿಮೆ ಮಹಿಮೆಗೆ ಪೆರತೆ ?
ಹಾರೀತನಾರೀತನೆನದೆ ಆ ತೇಜಸ್ವಿಯಂ      ೨೬೦
ಕಂಡೊಡನೆ ಗುರುತಿಸುತೆ ಮೇಲೆಳ್ದಿದಿರ್‌ವೋಗಿ
ಮುಗಿದನು ನಮಸ್ಕಾರಮಂ, ಸುಖಾಗಮನಮಂ
ನುಡಿದನ್ : “ಮಹಾಮಹಿಮ, ಗುರು ಭರದ್ವಾಜಂಗೆ
ಶಿಷ್ಯನಾಂ, ಪಿರಿಯತಿಥಿಯೊರ್ವನಿಂದೀಯೆಡೆಗೆ
ಬರ್ಪನಾತಂಗೆ ಸತ್ಕರಿಪುದೆಂದೆನಗಾಜ್ಞೆ”.
“ನೀನೆಮಗೆ ಪಿರಿಯನಯ್, ಗುರುವೆ. ಆಶೀರ್ವದಿಸಿ,
ತುಳಿಲಾಳ್ಗಳೆಮ್ಮ ತುಳಿಲಂ ಕೊಳ್ವುದದೆ ಕೃಪೆ !”
ಎನುತ್ತವಂ ಕಾಲ್ಗೆರಗುವನಿತರೊಳ್ ಪಿಡಿದಪ್ಪಿದನ್
ಜಡೆವೊತ್ತ ಕಿತ್ತಡಿ : “ವಯಸ್ಸಿಗೇಂ ಪಿರಿತನಮೆ ?
ನಿನ್ನ ಪೆರ್ಮೆಗೆ ವಂದಿ ನಿನ್ನಾತ್ಮದೋಜೆ; ಮೇಣ್           ೨೭೦
ನಿನ್ನ ತೇಜಕೆ ಸಾಕ್ಷಿ ನಿನ್ನಕ್ಷಿ, ಕಮಲಾಕ್ಷ !
ಗುರು ಭರದ್ವಾಜನಿಂದಿನ ತೆರನನೀಕ್ಷಿಸಿದ
ನನಗೆ ಮೆಯ್ ಗುಡಿಗಟ್ಟಿದತ್ತು. ತಾನಿನ್ನೆಗಂ
ಸಾಧಿಸಿದ ಸಾಧನ ತಪಃಫಲಮೆ ಬಂದಪುದೊ
ಎಂಬುವೋಲಾನಂದದಾವೇಶದಿಂ ತನ್ನನೆಯೆ
ತಾಂ ಮರೆತು, ನೋಂಪಿಯುಪವಾಸಮಂ ಕೈಕೊಂಡು,
ನಿನ್ನನೆ ನಿರೀಕ್ಷಿಸುತಲಿಹನಯ್ಯ. ಬಾರಯ್ಯ,
ಪಿರಿಯತಿಥಿ !” ಎನುತೆ ಋಷಿ, ತನ್ನೆರ್ದೆಯ ದೇಗುಲಕೆ
ತನ್ನ ದೇವರನೊಯ್ವ ಭಕ್ತನಂದದಿ, ಬಾಗಿ
ಮುಂಬರಿಯಲಾ ಮೂವರುಂ ನಡೆದರೊಡನೊಡನೆ     ೨೮೦
ಕಣ್ಣಾಯಿತಾಶ್ರಮಕ್ಕಾಶ್ರಮವೆ : ಜಿಂಕೆ ತಾಯ್
ಗರಿಕೆಬಾಯಾಗಿ, ಕಿವಿಯೆತ್ತಿ, ಕಣ್ಗಳನರಳಿ
ನಿಂದತ್ತು. ಜಿಂಕೆಮರಿ ತಾಯ್ಗೆಚ್ಚಲಿನ ಮೆತ್ತೆ
ಬೆಚ್ಚಗಪ್ಪಂತೆ ಮೊಗಮೊತ್ತಿ, ಪಾಲಂ ಸೂಸಿ,
ನಿಷ್ಪಂದಮಿರ್ದುದಯ್ ಮರೆತಮೃತದೂಟಮಂ.
ಮೂಲಮಂ ಮುಂಗಾಲ್ಗಳಿಂ ಕೆದರಿ, ಶಿಖರಮಂ
ಮುರಿದು ಶೃಂಗಾಗ್ರದಿಂ, ಕೋಡಾಟದೊಳ್ ತೊಡಗಿ
ಪುತ್ತಿಗೆ ಗುಟುರ್ ಮಲೆತು, ಕೆಮ್ಮಣ್ಣು ಮೆಯ್ಯಾಗಿ
ಮೆರೆದಿರ್ದ ಗೂಳಿ ಕೆಮ್ಮನೆ ನಿಂದುದಚ್ಚರಿಗೆನಲ್,
ಬೆಚ್ಚು ಮೆಚ್ಚುಗಳಿರ್ಕುಳದ ನಡುವೆ. ಬಾಲಕಂ  ೨೯೦
ಮರಿಮಿಗವನೇರಲೊಂದಡಿ ನೆಗಹಿ ಬೆನ್ಗಿಟ್ಟು,
ಬರೆದಂತೆ ನಿಂದನಯ್, ನೋಟದೊಳೆ ಚಿತ್ತಂ
ಸಮರ್ಪಣಂ ಬಡೆದವೋಲ್
ಕೈಮುಗಿದು ಪುಗಲೊಡಂ
ಮುನಿತಿಲಕನೆಲೆವನೆಗೆ, ದಾಶರಥಿಗಂದೊಮ್ಮೆ
ಗೌತಮ ಸತಿಯ ಶಾಪವಿಮೋಚನದ ಸಮಯದೊಳ್
ತೂಣಗೊಂಡಂತಾಯ್ತು. ಸೀತೆ ಲಕ್ಷ್ಮಣರೊಡನೆ
ಮೈಚಾಚಿ ನಮಿಸಿದನ್, ನಾಗರಿಕ ಮಾನವರ
ಮರ್ಯಾದೆಯಂತೆ : ಏನಿದು ಭರದ್ವಾಜಂಗೆ ?
ವಿಸ್ಮೃತಿಯೊ, ಸ್ವಸ್ಮೃತಿಯೊ ? ಬಿಟ್ಟ ಕಣ್, ತೆರೆದ ಬಾಯ್ ;
ಮೂಕನೊಲ್ ಮಂಡಿಸಿಹನಜಿನಾಸನದ ಮೇಲೆ           ೩೦೦
ಕಡೆದಿಟ್ಟ ಕಲ್‌ಪಡಿಮೆಯೋಲ್ ! ಭಾವ ವಶನಾಗಿ
ನಟ್ಟಾಲಿಯಾಗಿ ರಾಮನ ನೀಲಗಾತ್ರಮಂ
ನಿಟ್ಟಿಸುತೆ, ಭಕ್ತಿ ಬಾಷ್ಪಾರ್ಘ್ಯಾಭಿಷೇಕದಿಂ
ಮೌನ ಮಂತ್ರದ ಮಹಾ ಮಾನಸಿಕ ಪೂಜೆಯಂ
ಗೈದಿರ್ದನಂ ಕಂಡಾ ತಪೋಜ್ಜ್ವಲಿತ ತೇಜನಂ,
ಕಣ್ಣರಳಿ ನೋಡಿದನು ಸೌಮಿತ್ರಿ ತನ್ನಣ್ಣನಂ !
ಧ್ಯಾನಮಯ ಗಂಭೀರ ಭಂಗಿಯಿಂ ಭಾವದಿಂ
ಮೇಲೆಳ್ದ ಮುನಿವರೇಣ್ಯಂ ತರುಣ ರಾಮನಂ
ಇಂಗಿತದಿ ಸೆಳೆದೊಯ್ದನೊಳಗಣ ತಪದ ಕುಟಿಗೆ,
ಮತ್ತೆ ಬೆಂಗಡೆಗೆಲೆದೆರೆಯನೆಳೆದು ಬಾಗಿಲಂ   ೩೧೦
ಮುಚ್ಚಿದನ್, ಬೆರಗಾಗಿ ನೋಡುತಿರಲನಿಬರುಂ,
ತುಸುವೊಳ್ತನಂತರಂ, ಪೂಜೆಮನೆಯಿಂ ಮರಳಿದರ್
ಸಾಮಾನ್ಯರೋಲಿರ್ವರುಂ : ತನ್ನ ವೃತ್ತಾಂತಮಂ
ಪೇಳುತಿರ್ದನ್ ದಾಶರಥಿ. ಪಂಚವತ್ಸರದ
ಪಸುಳೆ ಪರದೇಶದಿಂ ಮರಳಿದಣ್ಣನ ದನಿಗೆ
ಕಿವಿಗೊಡುವವೋಲ್ ಕೇಳುತಿರ್ದನ್ ಯತೀಶ್ವರಂ
ರಾಮಕಥೆಯಂ !
ಮಗಳೆ ಮನೆಸೇರ್ದಳೆನೆ ಮುನಿಯ ಸತಿ
ನೆಲಮಗಳನುಪಚರಿಸಿದಳ್. ಬಿಸಿಮಜ್ಜನಂಗೆಯ್ಸಿ
ನಾರುಮಡಿಯುಡಿಸಿದಳ್. ನೊರೆವಾಲು ತನಿವಣ್ಗಳಿಂ
ತಣಿಸಿದಳ್. ಮಿಕ್ಕಕ್ಕರೆಗೆ ಪಣತೆ ಸೊಡರಂ ಪಿಡಿದು      ೩೨೦
ನೋಡಿದಳಯೋನಿಜೆಯ ದೇವವಂದಿತ ರೂಪಮಂ !
ಎಲೆಮನೆಯ ಮಕ್ಕಳಿಗೊ ? ಪೊಸತೊರ್ವಳಕ್ಕನೆಯೆ
ಸಿಕ್ಕಿದಂತಾಯ್ತು. ನಿದ್ದೆಯನೊಲ್ಲದೆದ್ದೆದ್ದು
ಗಳಿಪಿದರ್ ಗುರುಲಘುವನೊಂದನುಂ ಲೆಕ್ಕಿಸದೆ
ನಟ್ಟಿರುಳುರುಳ್ವನ್ನೆಗಂ. ಜನಕಜಾತೆಯುಂ
ಬಟ್ಟಿವರ್ಪಾಗಳ್ ತಿರಿದು ಮಡಿಲೊಳಿಟ್ಟಿರ್ದ
ಪಣ್‌ಪೂಗಳಂ ಕೊಟ್ಟು, ಮೃಗಚರ್ಮದಿಂ ಸಮೆದ
ತನ್ನ ಕೈಪೆಟ್ಟಿಯಂ ತೆರೆದಯೋಧ್ಯೆಯ ಸಿರಿಗೆ
ರಚಿಸಿದಳ್ ಕಿರಿದೊಂದು ಬೆಳಕಂಡಿಯಂ !
ದೂರದಿಂ
ಬಂದುದು ತಪೋವನಕೆ ಗಂಗೆಯಮುನೆಯರುಲಿವ      ೩೩೦
ಪುಣ್ಯಘೋಷಂ, ಪ್ರಯಾಗ ಕ್ಷೇತ್ರ ತೀರ್ಥೋದ್ಭವಂ.
ದಿವ್ಯದ್ರವನ್ತಿಗಳ್ ಕೂಡುವ ಮಹದ್‌ಧ್ವನಿಯ
ಜೋಗುಳವನಾಲಿಸುತೆ ನಿದ್ರಿಸಿದರಿನವಂಶಜರ್
ತೊಟ್ಟಿಲೊಳ್ ನೀರವ ತಪೋವನದಾ. ಮುನಿವರಂ
ಮರುದಿನಂ ಪ್ರತ್ಯುಷೆಗೆ ಕರೆದೊಯ್ದನವರಿರ್ವರಂ
ಕೂಡಲಿಯ ದರ್ಶನಕೆ. ರಾಮಲಕ್ಷ್ಮಣರದಂ
ಭಾವವಶರಾಗಿ ಕಣ್ಣೆವೆಯಿಕ್ಕದೆಯೆ ನೋಡಿದರ್.
ನೋಡಿ ಮಣಿದರ್. ರುದ್ರರಮಣೀಯಮಾದುದಾ
ಸಂಗಮಂ ಕಡಲವೊಲ್, ಕಡೆಯಿಲ್ಲವೆಂಬವೊಲ್,
ಕಡೆದವೋಲ್. ಸಲಿಲ ವೈಶಾಲ್ಯದಿಂ, ಭೋರ್ಗರೆವ      ೩೪೦
ಘೋಷದಿಂ, ಫೇನವೀಚಿಯ ಭೀಷ್ಮತಾಂಡವದ
ಸಂಮ್ಮೋಹದಿಂ ಕಾಣದಂಬುಧಿಯೆ ತೋಳ್‌ನೀಡಿ
ಸನ್ನೆಗೈವೀಸಿ ಕರೆದಂತಾಯ್ತು ರಾಮಂಗೆ,
ತನ್ನಾತ್ಮದತಿದೂರದಾ ಪಾರದಿಂ.
“ಇದೆ ಕಣಾ
ದಿವ್ಯತೀರ್ಥಂ ಪ್ರಯಾಗಂ. ಇಲ್ಲಿ ಕಳೆ ನಮ್ಮೊಡನೆ
ವನವಾಸ ಕಾಲಮಂ.” ರಾಮನೆಂದನ್ ಋಷಿಗೆ :
“ಗುರುವರ, ವಿವಿಕ್ತಮಿದು ರಮಣೀಯಮಪ್ಪೊಡಂ
ಸಾಕೇತಕತಿ ಸಮೀಪಾಶ್ರಮಂ. ತಿಳಿದೊಡನೆ
ಗುಂಪಾಗಿ ಬರ್ಪರಂ ಪ್ರಜೆಗಳಂ ಮಿತ್ರರಂ
ದರ್ಶನ ಕುತೂಹಲಿಗಳಂ ತಡೆಯಲಾಗುವುದೆ?           ೩೫೦
ಜನಪದಕೆ ದೂರಾಗಿ, ಜನಕೆ ದುರ್ಗಮವಾಗಿ,
ಮೇಣೆಮ್ಮ ಜೀವನಕೆ ದುಷ್ಪಮಲ್ಲದುದಾಗಿ,
ಸುಖಯೋಗ್ಯೆ ಜನಕಜೆಯ ಸುಖಕರ್ಹಮಾದೊಂದು
ಮತ್ತೊಂದು ತಾವನಾಲೋಚಿಸೆಮಗರುಹು; ನೀಂ
ವನಲೋಕ ಸಂಚಾರಿ !” ತನ್ನ ನೆನಹಿನ ನಿಧಿಗೆ
ಕೈಯಿಕ್ಕಿ ಹುಡುಕಿದನೊ? ವಿಧಿಮನವನರಸಿದನೊ ?
ಮುಂದಿರ್ದ ಗಿಡದ ಹೂವೊಂದರೊಳ್ ಕಣ್ ನಟ್ಟ
ಮುನಿ ತಲೆಯನೆತ್ತಿದನ್ : “ಆಲಿಸಾದೊಡೆ, ವತ್ಸ,
ಇಲ್ಲಿಗೀರೈದು ಹರಿದಾರಿ ದೂರದೊಳೊಂದು
ತಾನಿರ್ಪುದು ನಗಂ. ಪೆಸರದಕೆ ಕೇಳ್ ಚಿತ್ರಕೂಟಂ.”    ೩೬೦
ಕೇಳ್ದರೆದೆ ಸೊಗಸುವೋಲ್ ಋಷಿ ರಸಾವೇಶದಿಂ
ಬಣ್ಣಿಸಲ್ಕೊಪ್ಪಿ ರಘುಜಂ, ಚಿತ್ರಕೂಟಕ್ಕೆ
ಪಯಣಮಂ ತರಿಸಂದು, ಸೀತೆ ಲಕ್ಷ್ಮಣರೊಡನೆ
ಬೀಳ್ಕೊಂಡನಾಶ್ರಮಸ್ನೇಹಮಯ ವಲಯಮಂ
ಬಾಷ್ಪಲೋಚನನಾಗಿ. ಸಂಗಮಂ ಬಳಿಸಾರೆ,
ಋಷಿ ಪೇಳ್ದ ತೆರದಿಂದೆ, ತುಸು ಪಡುವಲಕ್ಕೊಲೆದು,
ಯಮುನಾ ನದಿಯ ತಟದ ಸಮೆದ ಕೀಳ್ವಟ್ಟೆಯಂ
ಪಿಡಿದು ನಡೆತರೆ, ದಾಂಟುದಾಣದಾ ಬಿರುವೊನಲ್
ಕಾಲ್ಗಡ್ಡಮಾಗಿ ಕಣ್ಗೆಡ್ಡಮಾದುದೊ ಮುಂದೆ
ಕಾಳಿಂದಿಯಾ. ಮುರಿದ ಪೆರ್ಮರಗಳಿಂ ತಂದ ೩೭೦
ಕಾಷ್ಠೌಘಮಂ ಹರಡಿ, ಒಣಬಿದಿರನೋಳಿಯಿಂ
ಮೇಲೆ ಸಾಲಿಟ್ಟು, ಬೆತ್ತದ ಬಳ್ಳಿಮಿಣಿಗಳಿಂ
ಬಿಗಿ ಹೆಣೆದು ಕಟ್ಟಿ ರಚಿಸಿದರೊಂದು ತೆಪ್ಪಮಂ,
ಮೈಥಿಲಿಯ ನೆರಮಂ ನಿರಾಕರಿಸದೆ. ಲಕ್ಷ್ಮಣಂ
ಚಿಗುರೆಲೆಯನೊಟ್ಟಿ ಮಣೆಯಂ ಮಾಡೆ, ಲಲನೆಯಂ,
ಮೊಗಕೆ ನಾಣ್ಗೆಂಪೇರುತಿರ್ದ್ದಳಂ ಪಿಡಿದೆತ್ತಿ
ಕುಳ್ಳಿರಿಸಿದನು ರಾಮಚಂದ್ರಂ, ಉದಿಸೆ ಲಜ್ಜಾಸಂಧ್ಯೆ
ತನ್ನ ಮುಖದಿಶೆಯ ನೀಲಿಮೆಯೊಳುಂ. ಪಿಟಕಮಂ
ವಸನ ಭೂಷಣ ನಿಚಯಮನ್ನಾಯುಧಂಗಳಂ
ಪ್ಲವದೊಳಿಟ್ಟೇರಿದನ್ ದಾಶರಥಿ. ಲಕ್ಷ್ಮಣನದಂ            ೩೮೦
ದಡದೆಡೆಯ ತೆಳ್ಳೆ ನಿಲ್‌ನೀರಿಂದೆ ಹರಿನೀರ್ಗೆ
ನೂಂಕಿದನ್ ನೀಳ್ಗಳುಗಳಿಂ. ಬಿರುನಡೆಯ, ತೆರೆಯುಡೆಯ,
ಪೊಸತು ತೆಂಗಾಯ್‌ತುರಿಯ ಬಿಳಿಯ ಮುದ್ದೆಯ ನೊರೆಯ,
ಜಲಘೋಷದಾವೇಶದಿನಸುತಾ ಸ್ರೋತದೊಳ್
ತೇಲಿದುದು ಚಿಮ್ಮಿದತ್ತೋಡಿದತ್ತಾ ಪ್ಲವಂ
ಜಲತರಂಗ ತುರಂಗಗಳನೇರಿದೋಲಂತೆ,
ಸೀತೆಯ ಹೃದಯಕೊಂದು ರಮಣೀಯ ಭೀಷಣತೆ
ಬಿತ್ತೆ ಸುಖಭೀತಿಯಂ. ದಕ್ಷಿಣ ತಟಂ ಮುಟ್ಟಲಾ
ಉಡುಪದಿಂದಿಳಿದು ಯಮುನಾ ವನಂ ಬೊಕ್ಕರಾ
ಶೀತಲ ಶ್ಯಾಮ ಸೌಂದರ್ಯಮಂ. ಮೃಗಪಕ್ಷಿ  ೩೯೦
ಸುಮ ಸಮೂಹದ ವಿವಿಧ ಚೈತ್ರ ವೈಚಿತ್ರ್ಯಮಂ
ಸವಿಯುತೆಯ್ದಿದರೆರಡು ಹರಿದಾರಿ ದಾರಿಯಂ.
ಬೇಂಟೆಯಾಡಿದರಲ್ಲಿ ಮೇಧ್ಯಂಗಳಂ ಮೃಗಗಳಂ.
ಭೋಜನಂಗೈದೊರಗಿದರ್ ನದೀ ವಪ್ರದಾ
ಸಮತಲದೊಳೊಂದು ಶಾದ್ವಲದಿ. ಆ ನವರಾತ್ರಿ,
ನಿಃಶಬ್ದತೆಯ ತೊಟ್ಟಿಲೊಳ್ ನದಿಯ ಮೊರೆಸಿಸುವನ್
ಇಟ್ಟು ತೂಗಿದವೋಲೆ, ತೂಗಿದುದು ಮೂವರಂ
ನಿದ್ರಾ ಸಮಾಧಿಗೆ. ವಿಹಂಗ ಮಂಗಲ ಸಂಘ
ಕಂಠ ವೀಣಾವಾಣಿ ರಾಮನನ್ನೆಳ್ಚರಿಸೆ,
ಲಕ್ಷ್ಮಣನನೆಳ್ಬಿಸಿದನಾತನುಂ ತಂದ್ರಿಯಂ      ೪೦೦
ಬಿಟ್ಟೇಳಲನಿಬರುಂ ತೊರೆಯ ಶಿವಸಲಿಲದೊಳ್
ಮೊಗಂದೊಳೆದು ಮುಂಬರಿದರಾ ಚಿತ್ರಕೂಟಕ್ಕೆ.
ಬಿದಿರುಮೆಳೆಯಲಿ ಕಳಲೆಗಳನಿಳ್ದು ಲರಿಲರಿಲ್
ಲರಿಲೆಂದು ಮುರಿದು ತಿನುತಿರ್ದಾನೆ : ನೆನೆಯದಂ ;
ಚಿತ್ರಿಸಿಕೊ ! ಮರವಲುಗಿ ಪಣ್‌ವೆರಸಿ ಕಾಯ್ಗಳುಂ
ಕೆಡೆಯುವೋಲ್, ಕೊಂಬೆಯಿಂ ನೆಗೆದು ಕೊಂಬೆಗೆ ಹಾರಿ
ಕೀರುತೋಡುವ ಬಣ್ಣಗಪಿವಿಂಡು : ನೆನೆಯದಂ ;
ಚಿತ್ರಿಸಿಕೊ ! ಹೂದಿಂಗಳೈತರಲ್ಕೊಸಗೆಯಿಂ
ಬನದೇವಿ ದೀಪೋತ್ಸವಂಗೈವಳೆಂಬಂತೆ
ಮೊಗ್ಗುಗೊಳ್ಳಿಗಳಿಂದೆ ಪೊಂಜಿನುರಿವೂವಿಂದೆ  ೪೧೦
ರಂಜಿಸುವ ಮುತ್ತುಗದ ಮರಗಳಂ : ನೆನೆ, ಮನವೆ ;
ಚಿತ್ರಿಸಿಕೊ ! ಬೆಟ್ಟಮಂಡೆಯ ಬಂಡೆಹಣೆಯಿಂದೆ
ಚಾಚಿದಾ ಕಲ್ಗೋಡಿನಿಂ, ಮತ್ತೆ ಹೆಮ್ಮರದ
ಹೆಗ್ಗೋಡಿನಿಂ, ನೇಲ್ದು, ತುಪ್ಪದ ಹೊರೆಗೆ ಜೋಲ್ದ
ಹೆಡಗೆಯೊಡಲಿನ ಹುಟ್ಟಿಹೆಜ್ಜೇನ್ಗಳಂ : ನೆನೆದು
ಸವಿ, ಮನವೆ; ಚಿತ್ರಿಸಿಕೊ ! ನೆತ್ತಿಯಿಂ ಪರಿತಂದು
ಕಿಬ್ಬಿಗುರುಳ್ವಬ್ಬಿ ಬೆಳ್ಳಂಗೆಡೆವ ಚುಂಚಿಯಾ
ನೀರ್‌ಬೀಳಮಂ : ನೆನೆ ನವಿರ್ ನಿಮಿರಿ ! – ಅದೊ ಅಲ್ಲಿ,
ಕಣ್‌ತುಂಬೆ ಕಾಣುತಿದೆ ಚಿತ್ರಕೂಟಂ ! ಶಿವಾ,
ಸೊಗಸು ನೋಟಂ ! ವಿಪಿನಶಿವ ಜಟಾಜೂಟಂ !         ೪೨೦
ಮೆಯ್ಮರೆತು ಕಂಡರಾ ದೃಶ್ಯದೇವೇಂದ್ರನಂ
ಮೆಯ್ಯೆಲ್ಲ ಕಣ್ಣಾಗಿ, ಕಣ್ಣಾರುಮೊಂದಾಗಿ,
ಕಣ್ಣೊಂದುಮಿಲ್ಲದಾತ್ಮಾನಂದ ರಸವಾಗಿ :
ಅಂತಹೀನ ಮಹಾಂತ ಸಂತತಮವಿಶ್ರಾಂತ
ಜಲಧಿಯ ಬೃಹನ್ನೀಲಿಮಾ ವಿರಾಡ್‌ರಂಗದೊಳ್
ತೆರೆಯನಟ್ಟುವ ತೆರೆಯನಟ್ಟುವ ತೆರೆಯ ತೆರದಿಂ
ಗಿರಿಯನಟ್ಟುವ ಗಿರಿಯನಟ್ಟುವ ಗಿರಿಯ ಪಂಕ್ತಿಗಳ್
ಪರ್ವಿದುವು ದಿಟ್ಟಿ ಹೋಹನ್ನೆಗಂ ಮೇಣ್ ಕಣ್ಣಲೆದು
ಸೋಲ್ವನ್ನೆಗಂ. ಸಾಂದ್ರ ರೋಮರಾಜಿಯ ರುಂದ್ರ
ಚರ್ಮದೊಂದತಿಪೂರ್ವ ಭೂ ಬೃಹಜ್ಜಂತುವೆನೆ            ೪೩೦
ಹಬ್ಬಿ ಹಸರಿಸಿತುಬ್ಬಿತಡವಿ ದಟ್ಟಯ್ಸಿದಾ
ದಿಟ್ಟ ಮಲೆಪೊಡವಿ. ಮಂದಾಕಿನಿಯ ಪೆರ್ವೊನಲ್
ಗಿರಿಗೆ ಮೇಖಲೆಯಾಗಿ ಕಂದರದ ಸೀಮೆಯಂ
ಸಿಂಗರಿಸಿದತ್ತು. ಕಿರುವೊನಲ ತೊರೆ ಮಾಲ್ಯವತಿ
ತಾನದ್ರಿಶಿರದಿಂ ರಜತರೇಖೆಯೋಲಿಳಿದು
ಕಂಗೊಳಿಸಿದತ್ತು, ಚಿನ್ನದ ಜನ್ನಿವಾರಮೆನೆ
ತಳತಳಿಸಿ, ಸಾಯಂ ಸಮೀಪ ದಿವಸೇಶ್ವರನ
ಕನಕಕಾಂತಿಯಲಿ. ಆ ಶೈಲ ಭೈರವ ಋಷಿಗೆ
ದರ್ಶನದಿನಾವೇಶವಶರಾದ ಮೂವರುಂ
ಕೈಮುಗಿದರರ್ಪಿಸಿದರಧ್ಯಾತ್ಮ ನೈವೇದ್ಯಮಂ !           ೪೪೦