ವಾಣಿ, ಓ ಪ್ರಾಣವೀಣಾಪಾಣಿ, ಕವಿಯೆರ್ದೆಯ
ರಸರಾಣಿ, ಮಿಡಿಯೆನ್ನಾತ್ಮತಂತ್ರಿಯಂ; ನುಡಿಸೆನ್ನ
ಹೃದಯಮಂ; ನಡಸೆನ್ನ ಈ ಮಹಾಕಾವ್ಯಮಂ,
ತಾಯಿ ಕಂದನ ಕೈಯನಾನುತೆ ನಡೆಯಿಪಂತೆ.
ಬೇಡುತಿಹೆನಡಿಗಡಿಗೆ ನಿನ್ನಡಿಗೆ ಮುಡಿಚಾಚಿ :
ತಿಳಿಯದವರಾಡಿಕೊಳಲತಿಯೆಂದು ! ಬಲ್ಲೆನಾಂ
ಮುಂದಿರುವ ಯಾತ್ರೆಯ ಮಹದ್ದೂರಮಂ, ಬೃಹದ್
ಭಾರಮಂ, ರುಂದ್ರ ಪಾರಾವಾರಮಂ : ಹಸುಳೆ
ಹೆಗ್ಗಾಡಿಗಳುಕುವೋಲಳುಕಿದಸುಶಿಸು ಹೆದರಿ
ಬೇಡುತಿದೆ ನಿನ್ನನಡಿಗಡಿಗಿಂತು, ಓ ತಾಯೆ !- ೧೦
ರಣದ ಸಾಹಸಕಥೆಯ ಬಣ್ಣನೆಗೆ ಬಡತನವೆ ಹೇಳ್ ?
ಹೇರಳಂ ! ದಿನದಿನದ ಸಾಧಾರಣದ ಶಾಂತ
ಸರಳ ಜೀವಿತದ ವರ್ಣನೆಯೆ ವಿರಳಂ. ನಾನದನೆ
ಕೈಕೊಂಡೆಸಗಲೆಳಸುವೆಂ; ಪರಕೆಯಿರಲೆನಗೆ
ನಿನ್ನಮೃತ ವರದ ಕರದಾ, ದೇವಿ ಓ ಶಾರದಾ !
ಕೊಲೆಯ ಕಥೆ ತಾಂ ಬಗೆಗೊಳಿಪುದೇನಳಿವಗೆಯ ರುಚಿಯ
ದೀನರಿಗೆ ? ನನ್ನೀ ಕೃತಿಯನೋದುವಾತ್ಮರಾ
ದಾರಿದ್ರ್ಯಮಂ ಪರಿಹರಿಸಿ, ಓ ಸರಸ್ವತಿಯೆ,
ನೆಲಸಲ್ಲರಸಿಯಾಗಿ, ಸಹೃದಯ ಸರಸಲಕ್ಷ್ಮಿ ! ೨೦
ತುಂಬಿದತ್ತೊಯ್ಯನೊಯ್ಯನೆ, ಕಣಿವೆಯಾಳಮಂ
ಮೇಣಗಲಮಂ, ಪಶ್ಚಿಮ ಶಿಖರಿ ಛಾಯೆ. ಯಾಮಿನಿಯ
ಸೀರೆಯಂಚಿನ ಸೆರಗು ಮುಸುಗಿದತ್ತಡವಿಯಂ
ಚಿತ್ರಕೂಟಾದ್ರಿಯಾ. ಗೂಡಿಗೋಡಿತು ಹಕ್ಕಿ;
ಹಕ್ಕೆಗೋಡಿತು ಮಿಗಂ. ಮೌನವಾಂತುದು ನಗಂ
ವಜ್ರರೋಮ ಮಹರ್ಷಿಯಾ ಧ್ಯಾನಗೌರವಕೆನಲ್.
ಮುಚ್ಚಲ್ಕೆ ಯೋಗೀಂದ್ರನಾ ಬಹಿರ್ ನಯನೇಂದ್ರಿಯಂ
ಬಿಚ್ಚುವಂದದೊಳಾತ್ಮದಕ್ಷಿಗಳ್ ಕೋಟ್ಯನುಕೋಟಿ,
ಹಗಲ ಕಣ್ಣದು ಮುಚ್ಚಲಿರುಳ ಕಣ್ಣುಗಳರಳುವೊಲ್,
ರಾಜಿಸಿದುವರಿಲ ಕಿಡಿಗಳ್ ಬಾನ್ ಪಟದೊಳಿಣುಕಿ        ೩೦
ಮಿಣುಕಿ. ಶಿಷ್ಯರನವರವರ ಪರ್ಣಕುಟಿಗಳ್ಗೆ
ಕಳುಹಿ, ತನ್ನಾಶ್ರಮದ ಮುಂದೆ ಬಂಡೆಯನೇರ್ದು
ಪದ್ಮಾಸನವನಿಕ್ಕಿ ಕುಳಿತಾ ವಜ್ರರೋಮಂ
ನೋಡುತಿರೆ ಕಣ್ಬೊಲದ ಕಂದರದ ಕಾಂತಾರ
ವಿನ್ಯಾಸಮಂ, ಕಂಡನೊಂದಿದಿರೆಳ್ದ ಗಿರಿ ಶಿರದಿ,
ಸಂಜೆ ಬಾನ್ಗೆದುರಾಗಿ, ಕೆತ್ತಿದೋಲಂತಿರ್ದ
ಮೂರು ನರರೂಪಿ ಮಸಿಯಾಕೃತಿಗಳಂ. ನೋಡಿ,
ಸಿಂಹಾಕೃತಿಯ ಮಹಾ ರೂಕ್ಷ ಶೈಲೋಪಮಂ
ಭೀಮಕಾಯಂ ಕಠಿನ ಗಂಭೀರನಾ ಯೋಗಿ,
ಕೌತುಕಂಬಟ್ಟರುಂ ವಿಸ್ಮಯಕ್ಕೆಡೆಗೊಡದೆ,     ೪೦
ಮಗ್ನನಾದಂ ಧ್ಯಾನದದ್ವೈತ ನಗ್ನತೆಗೆ !
ವಜ್ರರೋಮನ ಚಿತ್ತವಜ್ರದ ಮಹಿಮೆಗಳ್ಕುತಾ
ವ್ರತಿಯ ಕೈಂಕರ್ಯಮಂ ನೋಂತಿರ್ದ ವ್ಯಾಘ್ರಮುಂ
ಧ್ಯಾನಸ್ಥಮುನಿಯ ಪಕ್ಕದೊಳರೆಯ ಮೇಲಿರ್ದು
ನೋಡುತಿರೆಯಿರೆ ಬೈಗುಮರ್ಬು ತೀವುತ್ತಿರ್ದ
ದೃಶ್ಯವಿಸ್ತೀರ್ಣಮಂ, ಕಂಡುದೇನನೊ ! ನಗಂ
ಶತಗುಹಾಧ್ವನಿಗಳಂ ಪ್ರತಿಘರ್ಜಿಪೋಲಂತೆ,
ನೀರವ ಮಹಾರಣ್ಯಮನುರಣಿತಮಪ್ಪಂತೆ,
ಕುಳ್ತ ಬಂಡೆಯುಮದುರಿ ಕಂಪಿಸುವಂತೆ, ಕೇಳ್ದರೆದೆ
ಹೆಪ್ಪುಗಡುವಂತೆ ಘರ್ಜಿಸಿದುದಾ ಅದ್ವೈತಿ ತಾಂ          ೫೦
ದ್ವೈತಿಯಪ್ಪಂತೆ ! ಕಣ್ದೆರೆದ ಮುನಿ ಕೈಯೆತ್ತಿ
ತಟ್ಟಿ ತಲೆಯಂ ಸವರಿ ಬೋಳೈಸೆ, ಆ ಪ್ರಾಣಿ
ಕಂಠಘೋಷವನಕ್ಷಿರೋಷದಿಂ ತೋರ್ಪುದೆನೆ
ನೋಡುತಿರೆ, ಅತ್ತ ಕಣ್ಣಾದವಗೆ ಕಾಣಿಸಿತು
ಸೀತಾ ತೃತೀಯ ರಾಮಾಕೃತಿಯ ಧೀರಗಮನಂ.
ಪುಲಿ ಪುಲಿಯನರಿವಂತೆ, ಪುಲಿಯವೊಲೆ ಸಿದ್ಧನುಂ
ಪ್ರೀತಿಯಿಂದತಿಥಿಗಳನರಿತುಮುಪಚರಿಸಿಯುಂ
ಕಳೆದನಿರುಳಂ. ಮರುದಿನಂ ತಪೋವನ ಜನದ
ತನುಮನ ಸಹಾಯದಿಂ ಕಟ್ಟಿದನು ಸೌಮಿತ್ರಿ,
ಮಲೆಯ ಬಿರುಮಳೆಗಾಳಿಗಳಿಗೆ ಮಲೆತುಳಿವಂತೆ,        ೬೦
ಪರ್ಣಶಾಲೆಯನೊಂದನೆತ್ತರದೊಳಾ ಗಿರಿಯ
ದರ್ಶನಸ್ಥಾನಮುಂ ದೂರವಿಸ್ತಾರದಾ
ದೃಶ್ಯದಾಸ್ಥಾನದಧ್ಯಕ್ಷತಾ ಸ್ಥಾನಮುಂ
ತಾನೆನಿಪ ಗಿರಿಭುಜಸ್ಥಾನದಲಿ. ಅನಂತರಂ
ದೇವರಿಗೆ, ಗೃಹದೇವತೆಗೆ, ಚಿತ್ರಕೂಟ ಗಿರಿ
ದೇವನಿಗೆ, ಕಾಂತಾರದಧಿದೇವಿಯರಿಗೆ, ರವಿ
ಗಗನದಭಿಮಾನಿಗಳಿಗಖಿಲ ಪಿತೃಋಷಿಗಳಿಗೆ
ವಾಸ್ತುಕರ್ಮಾದಿ ಬಲಿ ಶಾಂತಿ ಕರ್ಮಂಗಳಂ
ನೆಗಳ್ದಾ ಜಿತೇಂದ್ರಿಯರ್ ಮರಬಳ್ಳಿಯೋರಣದ
ಹೂ ತಳಿರ್ ತೋರಣದ ದೇವಸುಖಕಾರಣದ  ೭೦
ಸುಪವಿತ್ರ ಪತ್ರವೇಶ್ಮಂ ಬೊಕ್ಕರಾತ್ಮಮಂ
ಪುಗುವ ಪುಣ್ಯಂಗಳೋಲ್.
ಅರಮನೆಯೊಳಿಹುದೇನೊ ?
ಅರಸುತನಮೆದೆಯೊಳಿರೆ ಕಾಡರಮನೆಗೆ ಕೀಳೆ ?
ರಸವಿಲ್ಲದಿಹ ಬಾಳಿಗರಮನೆಯೆ ಮರುಭೂಮಿ.
ರಸಿಕಂಗಡವಿ ಸಗ್ಗಕಿಂ ಮಿಗಿಲ್ ಸೊಗಸಲ್ತೆ,
ಜೊತೆಯಿರಲ್ಕೊಲಿದ ಪೆಣ್, ಮೇಣ್ ಕಾಣ್ಬ ಕಬ್ಬಗಣ್ ?
ಕಣ್ಣುಪೆಣ್ಣುಗಳೆರಡುಮಂ ಪಡೆದ ರಾಮಂಗೆ
ಎಲೆವನೆಯೆ ಕಲೆಯ ಮನೆಯಾಯ್ತು ; ವಿಪಿನಾಂಗಣಂ
ರಸತಪೋರಂಗಕೆಣೆಯಾಯ್ತು. ದಿನಂಗಳೆದಂತೆ          ೮೦
ಮೊದಮೊದಲ್ ಪರಕೀಯಮಪರಿಚಿತಮಾಗಿರ್ದ
ಗಿರಿವನಂ ಪರಿಚಯದಿನಾತ್ಮೀಯ ಭಾವಮಂ
ತಳೆದುದು ಸಲಿಗೆವೆತ್ತು ; ಅಂದು ಕಲ್ಲಾಗಿರ್ದ್ದ
ಕಲ್ಲೀಗಳಾದುದಯ್ ನೆನಹಿಗೆ ನಿಕೇತನಂ.
ಹಿಂದೆ ಬರಿ ಮರವಾದುದಿಂದವರ ಬಾಳ್ಗೊಂದು
ಸಂಕೇತವಾಯ್ತು. ಬಂದುದು ಆ ಕಾಡಿನೊಳ್
ಬರಿ ಬಳ್ಳಿಯಾಗಿರ್ದುದಿಂದು ತಮ್ಮೆಲೆವನೆಯ
ಮುಂದಣಂಗಣದಂಚಿನಲ್ಲಿ ತಮ್ಮೆರ್ದೆಬಾಳ್ಗೆ
ನಿತ್ಯಸಾಕ್ಷಿಗೆ ನಿಂದದೊಂದು ಕೇತನವಾಯ್ತು.
ಅಪ್ರಮುಖ ವಸ್ತುಗಳ್ಗಲ್ಪತ್ವಮಳಿದುದಯ್
ಅನುಭವದ ಘನಮಹಿಮೆಯಿಂ. ಭಾವ ಪರಿವೇಷಮಂ    ೯೦
ಪಡೆದು, ಜಡವೇಷಮಂ ಪಿಂಗಿದಾವೇಶದಿಂ
ಪ್ರಾಣಮಯಮಾಗಿ ಮೇಣರ್ಥಮಯಮಾಗಿ ಕೇಳ್
ಸ್ಮೃತಿಕೋಶವಾದುವಯ್ ಆ ಒಂದೊಂದು ವಸ್ತುವುಂ
ತೊರೆದಚಿದ್ಭಾವಮಂ.
ಆ ಕಲ್ ಬರಿಯ ಕಲ್ಲಾಗಿ
ಕೆಡೆದಿರ್ದುದಲ್ಲಿ ಯುಗಯುಗಗಳಿಂ. ಸೀತೆ ತಾಂ
ಕಂಡಾ ಮೊದಲ್ ಕಲ್ಲಲ್ಲದೇನುಮಾಗಿರಲಿಲ್ಲ.
ಒರ್‌ದಿನಂ ಪರ್ಣ ಶಾಲೆಯ ಮುಂದೆ ಪತಿಯೊಡನೆ
ಮಾತಾಡುತತ್ತ ನೋಡಿದಳಯ್ಯೊ ಸೋಜಿಗಂ !
ಆ ಕಲ್ಗದೇನೊ ಆಕೃತಿ ಬಂದವೋಲ್ ತೋರಿ,
ಬೆರಗಾಗಿ ತೋರ್ದಳಿನಿಯಂಗಾತನುಂ ಕಂಡು            ೧೦೦
ಕೌತುಕಂಬಟ್ಟನಿರ್ವರುಮದಕೆ ಪೆಸರಿಟ್ಟು
ಕರೆಯತೊಡಗಿದರಂದಿನಿಂ ‘ಕಲ್ದವಸಿ’ ಎಂದು.
ಮತ್ತೊರ್‌ದಿನಂ, ಬೈಗುಗಪ್ಪಿಳಿಯುತಿರೆ, ಸೀತೆ
ಮರ್ಬಿನೊಳ್ ಕಂಡಳಾರನೊ ಕಲ್ಲ ನೆತ್ತಿಯೊಳ್;
ಪಣತೆಸೊಡರೊಳ್ ತಾನಗಂ ಓದುತಿರ್ದಿನಿಯನಂ
ಕರೆದು ತೋರಿದಳು ಹೆದರೆದೆಯ ಹೆಣ್. ರಾಮನುಂ
ಸೋಜಿಗಂಬಡುತೆ ಗುರುತಿಸೆ ನೋಡಿದನ್. ಕೂಡೆ
ಶೋಕ ಮುಖಭಂಗಿಯಿಂದಶ್ರುಲೋಚನನಾಗಿ
ನಿಡುಸುಯ್ದನೆರ್ದೆನೊಂದನೋಲ್. ಸೀತೆಗರಿವಾಯ್ತು
ತೆಕ್ಕನಾ ಕಲ್ಲ ನೆತ್ತಿಯ ಮೂರ್ತಿ ತಾನಾರೆಂದು ;          ೧೧೦
ಸೌದೆಯಂ ಪೊತ್ತು ತಂದಲ್ಲಿ ವಿಶ್ರಮಿಸಿರ್ದನಾ
ಊರ್ಮಿಳಾ ವಲ್ಲಭನದೈಸೆ ! ನೆನೆದಾಕೆಯಂ
ಬೇಯುತಿರುವನೆ ? ಬೇಡುವನೆ ದೇವರಂ ತನ್ನ
ಸತಿಗಾಗಿ ? ಸುಯ್ದರ್ ಕೃತಜ್ಞತಾಭಾರದಿಂ
ದಂಪತಿಗಳಿರ್ವರುಂ. ಮಾತನುಳಿದಳ್ ಸೀತೆ.
ಭಗವನ್‌ಮೌನಿ ರಾಮನಲ್ಲಿಂದೆ ತಮ್ಮನಂ
ನುಡಿಸಲೆಂದೈದಿದನ್ ‘ಕಲ್ದವಸಿ’ಯೆಡೆಗೆ. ಆ
ಸಂಜೆಯಿಂದಾ ಬಂಡೆ, ಕಲ್ದವಸಿ, ಊರ್ಮಿಳೆಗೆ
ಮೇಣವಳ ಸಂಯಮಕೆ ಪಡಿಮೆಯಾದುದು; ಮತ್ತೆ
ಗುರುವಾದುದೆಚ್ಚರಿಕೆಯಾದುದೈ ಸತಿಗೆ ಮೇಣ್           ೧೨೦
ಪತಿಗೆ,
ಪರ್ಣಶಾಲೆಯ ಪೂರ್ವದ ಗವಾಕ್ಷದಿಂ
ಕಾಣುತಿಹುದದೊ ನೀಲದೂರಕ್ಕೆ ಮೃದುಲಮೆನೆ
ತೋರ್ಪ ಶಿಖರೇಶ್ವರಂ. ಸೀತೆಯ ಮನಕೆ, ಮತ್ತೆ
ರಾಮನ ಮನಕೆ, ಮತ್ತೆ ಲಕ್ಷ್ಮಣ ಮನಕೆ ಬೇರೆ
ಬೇರೆನಿತೆನಿತೊ ಗುಹ್ಯ ಭಾವಲೋಕಂಗಳಂ
ಸೃಷ್ಟಿಸಿಹುದದರಿಂದಮವರವರ ದೃಷ್ಟಿಗದು
ಮೆರೆಯುತಿದೆ ಬೇರೆ ಬೇರೆಯ ರಸಕೆ ನಿಧಿಯಾಗಿ,
ವಿಧಿಯಚಲ ಸಾನ್ನಿಧ್ಯಮಾಗಿ : ಜನಕಜೆಯಡುಗೆ
ಮಾಡುತಿರಲತ್ತಣಿಂದೇಳ್ವನಾ ಉದಯರವಿ !  ೧೩೦
ಅಡುಗೆಯ ಮನೆಯ ಹೊಗೆಯ ನೀಲಿಗೆಳನೇಸರಾ
ಬಿಸಿಲ್‌ಪಸುಳೆ ತನ್ನ ನಳಿದೋಳ ಕಯ್‌ವೆರಳ್ಗಳಂ
ಕೋಲು ಕೋಲನೆ ಬೀಸುತೋಲಾಟವಾಡಿ ಬರೆ,
ಪಾಕ ಕಾರ್ಯವನುಳಿವಳೈ ದೇವಿ, ಸವಿಯಲಾ
ಸೊಗಮುಕ್ಕುವಾ ಕಣ್ಗಳೊಸಗೆಯಂ. ಮತ್ತೊರ್ಮೆ
ಬೆಣ್ಣೆ ಬಣ್ಣದ ನುಣ್ಣನುಣ್ಣೆಮುಗಿಲೈತಂದು
ಬೆಟ್ಟನೆತ್ತಿಯನಪ್ಪುತಾಲಿಂಗನದ ಸುಖಕೆ
ಪರವಶತೆವೆತ್ತು ನಿಂದಿರೆ ನಿಶ್ಚಲಂ, ತರಳೆ
ಗಗನದೌನ್ನತ್ಯಕೇರ್ದಾ ಶಿಖರಮೌಳಿಯಂ
ರಾಜರ್ಷಿ ಜನಕರಾಜಂ ಗೆತ್ತು, ತೆಕ್ಕನೆಯೆ
ತಂದೆಯನಿದಿರ್‌ಗೊಂಡವೋಲಾಗಿ, ಮಣಿದಳಾ           ೧೪೦
ಭವ್ಯಮುದ್ರೆಯ ರಜತಕೇಶಾದ್ರಿದೇವಂಗೆ.
ಮಗುದೊಂದಿರುಳ್ ಧರಣಿಪುತ್ರಿ ಪತಿ ಮೈದುನರ
ಕೂಡೆ, ಶಶಿಮೌಳಿಯೆಂಬೀರೈದು ವತ್ಸರದ,
ಚಂಚಲ ವಿನೋದಶೀಲದ, ಲಲಿತರೂಪದ
ಋಷಿಕುಮಾರನಾಶ್ರಮದ ಗೋವನಟ್ಟುತ ಬಂದು,
ತನ್ನೊಡನೆ ಗಳಪಿ, ತಾನಿತ್ತುಣಿಸನೊಲಿದುಂಡು,
ಬೇಡವೆನೆಯುಂ ಬಿಡದೆ ತನ್ನೊಡನೆ ಮುಸುರೆಯಂ
ತಿಕ್ಕಿ, ಕಯ್ ಮೆಯ್ ಮೋರೆ ಮಸಿಯಾಗಿ ಹೋದುದಂ
ಹೇಳುತಿರ್ದಳ್ ಭಾವವಶಳಾಗಿ, ಮತಿಭೂಮನಾ
ಶ್ರೀರಾಮನುದ್ದಾಮನಾ ವೀರಲಕ್ಷ್ಮಣನುಮಾ   ೧೫೦
ಅಲ್ಪಮಂ ಕೇಳುತಿರ್ದರ್ ಮಹೋಲ್ಲಾಸದಿಂ,
ನಡುನಡುವೆ ನಗುತಳ್ಳೆಬಿರಿವಂತೆ. ಮುದ್ದುಗತೆ
ಮಗಿವ ಮುನ್ನಮೆ, ಕಿಟಕಿಯಾಚೆಯಾ ಕವಿದಿರ್ದ
ಕಗ್ಗತ್ತಲೊಳ್, ಜ್ವಾಲೆ ಮೆರೆದುದು ಮನೋಹರಂ
ಶಿಖರೇಶ್ವರನ ಶಿರದಿ. ರಾತ್ರಿಯಾಕಾಶದಾ
ತಾರಾ ಸಹಸ್ರಾಕ್ಷನೋಲಗದಿ ನರ್ತಿಸುವ
ಉರಿಯ ಉರ್ವಶಿಯೆನಲ್ಕಾ ಕಾಡುಗಿರ್ಚ್ಚೆಸೆಯೆ,
ನಿಟ್ಟಿಸಿದರಾ ಚೆಲ್ವನೆಳಮಕ್ಕಳೋಲಂತೆ
ಬಾಯ್ದೆರೆದ ಬೆಳ್ಳಚ್ಚರಿಗೆ ಮನಂ ಮಾರ್ವೋದವೋಲ್ !
ಹೊರತೇನೊ ಹಾಸ್ಯರಸಮಖಿಲ ರಸನಿಧಿ ಚಂದ್ರ         ೧೬೦
ಸದೃಶಂಗೆ ? ಒಂದು ದಿನಮಿನನುದಯದಲಿ ತರಳೆ,
ಸೀತೆ, ರವಿಕರ ಕಾಂತ ಕಾಂತಾರದಂತರದಿ
ನಲವಿಂದಿಳಿದು ಬಂದು, ವೇಗಗಾಮಿನಿ ಸಲಿಲ
ಯೌವನಾ ಮಾಲ್ಯವತಿಯಲ್ಲಿ ಋಷಿಸತಿಯರಂ
ಕಂಡು, ವಂದಿಸಿ, ನುಡಿಸಿ, ಸಂತೋಷದಿಂ ಮಿಂದು,
ಬೆಳ್ನಾರುಡೆಯ ತೆಳ್ಮಡಿಯನುಟ್ಟು, ಮುಗುಳಲರ್
ಪೆಣ್ಣಾಯ್ತೊ ಪೆಣ್ಣೆ ಮುಗುಳಲರಾಯ್ತೊ ಹೇಳೆಂದಡವಿ
ಸೋಜಿಗಂಬಡುತಿರಲ್ ತಮ್ಮೆಲೆವನೆಗೆ ಮರಳ್ದ್
ಏರಿ ನಡೆದಡುಗೆ ತೊಡಗಿದಳು. ಪಸಿ ಸೌದೆಯಿಂ
ಪೊಗೆಯಲ್ಲದುರಿದೋರಲೊಲ್ಲದಿರೆ, ಧರಣಿಸುತೆ           ೧೭೦
ಮುಳಿದೊಲೆಯ ಮೋರೆಯಂ ತಿವಿದು ಕಟ್ಟಿಗೆಯಿಂದೆ,
ಕಣ್ಣೊರಸಿ, ಮೂಗೊರಸಿ, ಮೊಗಮೆಲ್ಲ ಮಸಿಯಾಗೆ,
ಮಿಂದುಟ್ಟ ಮಡಿ ಮಾಸೆ, ಸಿಗ್ಗೇರ್ದು ಸಿಡುಕುತಿರೆ,
ವಜ್ರರೋಮಾಶ್ರಮದಿನಧ್ಯಯನಮಂ ಮುಗಿಸಿ
ರಾಮನೈತಂದನಲ್ಲಿಗೆ ಕರೆದನರ್ಧಾಂಗಿಯಂ,
ಕಾಣದಿರೆ. ಹೊಗೆಯ ಹೊಟ್ಟೆಯೊಳಿರ್ದು ಓಕೊಂಡಳಂ
ಕುರಿತು ಬಿನದಕೆ : ಪಸಿದೆನ್ ಆನುಣಲ್‌ವೇಳ್ಕುಮೆನೆ ;
ಮಡದಿ : ಪಸಿಸೌದೆಯಿಂದಡುಗೆಯೆಂತಪ್ಪುದಯ್ ?
ಪೊಗೆಯನುಣಿಮೆನೆ ; ರಾಮನಾಕೆಯಂ ಬಳಿಸಾರ್ದು,
ಮಸಿಯಿಡಿದು ನಲ್ಮೊಗಂ ಮುಸುಡಿಯವತಾರಮಂ     ೧೮೦
ತಾಳ್ದಿರ್ದುದಂ ಕಂಡು, ನಗೆ ತಡೆಯಲಾರದೆಯೆ
ಹೊರಗೆ ಬಂದಳ್ಳೆ ಬಿರಿವಿರಿಯೆ ನಗೆ ತೊಡಗಿದನ್.
ಬಂದ ಲಕ್ಷ್ಮಣನಣ್ಣನಾ ಪರಿಗೆ ಬೆರಗಾಗಲಾ
ರಾಮನೆಂದನ್ : “ನೋಡು, ನಡೆ ಒಳಗೆ, ಅತ್ತಿಗೆಗೆ
ಬದಲೊರ್ವ ವಾನರಿಯ …..” ಎಂದರ್ಧ ವಾಕ್ಯದೊಳೆ
ಗಹಗಹಿಸಿ ನಗುತಿರೆ, ಸುಮಿತ್ರಾತ್ಮಜಂ ನಡೆದು
ನೋಡಿದನ್ : ನಗಲಿಲ್ಲವನ್ ! ನಗೆಗೆ ಮೀರಿರ್ದುದಾ
ಧೂಮದೃಶ್ಯಂ ! “ಕ್ಷಮಿಸಿಮೆನ್ನಂ, ಪಸಿಯ ಸೌದೆಯಂ
ತಂದೆನಪರಾಧಿಯಂ.” ಎನುತ್ತೊಣಗು ಪುಳ್ಳಿಯಂ
ತಂದಡಕಿ, ಸತಿಯಂ ನೆನೆಯುತೂದಿದನ್. ಅಗ್ನಿ          ೧೯೦
ಧಗ್ಗನೆಯೆ ಚಿಮ್ಮಿದನ್ ಧೂಮತನುವಿಂ ಬುಗ್ಗೆಯೋಲ್,
ಚಿಮ್ಮಿದುದು ಸಂತೋಷಕಾಂತಿ ಚಿಂತಾಮ್ಲಾನ
ಮೈಥಿಲಿಯ ಮುಖಪದ್ಮದಿಂ !
ಕೊಂದ ಕತದಿಂದೇಂ
ಪೆರ್ಮನಾದನೆ ರಾಮನಾ ಮಾತನುಳಿ : ಪಗೆಯೆ ?
ತೆಗೆತೆಗೆ ! ಪೆರ್ಮೆಗೊಲ್ಮೆಯೆ ಚಿಹ್ನೆ. ಮಹತ್ತಿಗೇಂ
ಬೆಲೆಯೆ ಪೇಳ್ ಕೊಲೆ ? ದೈತ್ಯನಂ ಗೆಲಿದ ಕಾರಣಕಲ್ತು,
ತನ್ನ ದಯಿತೆಯನೊಲಿದ ಕಾರಣಕೆ, ಗುರು ಕಣಾ
ರಾಮಚಂದ್ರಂ. ಕೋಲಾಹಲದ ರುಚಿಯ ಮೋಹಕ್ಕೆ
ಮರುಳಾದ ಮಾನವರ್ ರಾವಣನ ಕೊಲೆಗಾಗಿ            ೨೦೦
ರಾಮನಂ ಕೊಂಡಾಡಿದೊಡೆ ಕವಿಗುಮಾ ಭ್ರಾಂತಿ
ತಾನೇಕೆ ? ಮಣಿಯುವೆನು ರಾಮನಡಿದಾವರೆಗೆ :
ದಶಶಿರನ ವಧೆಗಾಗಿಯಲ್ತು ; ಮಂದಾಕಿನಿಯ
ತಿಳಿವೊನಲ ಮೀಯುತಿರಲೊರ್‌ದಿನಂ ತಾಂ ಕಂಡ
ದೃಶ್ಯಸೌಂದರ್ಯದಿಂದಾತ್ಮದರ್ಶನಕೇರ್ದ
ರಸಸಮಾಧಿಯ ಮಹಿಮೆಗಾಗಿ !
ಮೈದೋರಿದನ್,
ರಮಣೀಯ ಪೂರ್ವಗಿರಿವನರಮಾ ರಮಣನೆನೆ,
ಉದಯರವಿ. ಗಿರಿವನಪ್ರಿಯರಾಮನಾ ಪ್ರಕೃತಿ
ಪೂಜಾಸುಖದ ರಸಕ್ಕೋತು, ತಾನೊರ್ವನೆಯೆ,
ಹೊಂಬಿಸಲು ಚುಂಬನದ ಹಸುರು ಕಾಡಿನ ನಡುವೆ
ಪಿಕಳಾರ ಕಾಜಾಣ ಕಾಮಳ್ಳಿ ಕೋಗಿಲೆಯ      ೨೧೦
ಗಿಳಿಯ ಕೊರಲಿನ ದನಿಯ ಜೇನೀಂಟುತೈತಂದು
ನೋಡಿದನ್, ಮಂದಾಕಿನಿಯ ಸಿರಿಯ ಕಣ್‌ಸೆಳೆಯ
ಪೊನ್‌ನೋಟಮಂ : ತುಂಬಿ ಪರಿದುದು ಶುಭಜಲದ ರಮ್ಯ
ನದಿ, ತಾಯಿ ಕೌಸಲ್ಯೆಯಂತೆ, ರಾಮನ ಮನಕೆ
ಮಗುತನವನೊಡರಿಸುತೆ. ಮಾತೃದರ್ಶನ ದೀಪ್ತ
ಪ್ರೀತಿಗೌರವದಿಂದೆ ಕೈಮುಗಿದು ನಡೆದನಾ
ಪೂಜ್ಯೆ ಮಂದಾಕಿನಿಯ ಮಳಲೊಟ್ಟಿಲೊಳ್ದೊಡೆಯ
ತೊಟ್ಟಿಲಿಗೆ. ಕಣ್ಗೆ ಮುತ್ತಿಟ್ಟುದಿರ್ಕೆಲದಲ್ಲಿ
ತಾಯಕ್ಕರೆಯ ಸಕ್ಕರೆಯ ಪುಂಜಗೊಂಡಂತೆವೋಲ್
ಚಿತ್ರಮಯ ಧವಳಿಮ ಪುಳಿನರಾಶಿ. ತೀರರುಹ            ೨೨೦
ಫಲಪುಷ್ಪ ಭಾರಾವನತ ತರುಲತಾ ಶ್ರೇಣಿ ತಾಂ
ಮಣಿನಿಕಾಶೋದಕ ನದೀವಕ್ಷದರ್ಪಣದಿ
ಮಾರ್ಪೊಳೆವವೊಲ್ ಬಾಗಿ, ಕುಸುಮವೃಷ್ಟಿಯ ಸೂಸಿ,
ಸಿಂಗರಿಸಿದುದು ವೀಚಿವೀಚಿಯಂ, ತೆರೆತೆರೆಯ
ಕಯ್ಗಯ್ದು ಬಾಚಿದೋಲೆಸೆದಾ ಮನೋಹರದ
ಶರವೇಣಿಯಂ. ಕೊಂಬೆಗೈಗಳಿಂ ಪೂವಲಿಯ
ಚೆಲ್ಲಿ, ನಾನಾವರ್ಣ ಸ್ವರ್ಣಶೃಂಗಾರದಿಂ
ಮೆರೆದು, ಗಾಳಿಗೆ ತೊನೆದು, ಹಕ್ಕಿಯಿಂಚರದುಲಿಯೆ
ಕಾಲ್ಗೆಜ್ಜೆ ಕಿಂಕಿಣಿಯವೋಲಾಗೆ ನರ್ತಿಸುವ
ತರುತಿಲೋತ್ತಮೆ ಸೃಷ್ಟಿಸಿದಳಿಂದ್ರಲೋಕಮಂ            ೨೩೦
ಚಿತ್ರಕೂಟದೊಳೆ ಆ ರಸಋಷಿ ರಘೂದ್ವಹಂಗೆ.
ಮೆಯ್ಯೊಳ್ ಪರಿವ ನೆತ್ತರೆಲ್ಲಂ ಮಿಂಚುವೊನಲಾಗೆ
ಸವಿಯುತಾ ಬೆಳಗಿನೈಸಿರಿಯನಿಳಿದನ್ ನೀರ್ಗೆ
ಮೀಹಕ್ಕೆ. ಬಂಡೆಬಂಡೆಯ ನಡುವಣನವರತ
ಜಲಗದ್ಗದ ಶ್ರುತಿಗೆ ಉಪನಿಷತ್ತಿನ ಶ್ರುತಿಯ
ಮಂತ್ರಘೋಷಂ ಬೆರಸಿ ನೀರಾಡಿದನ್, ಪೃಥ್ವಿ
ಕಂಡು ಪುಲಕಂಗೊಂಡು ನಲಿಯೆ. ಮಿಂದಿರಲಿಂತು,
ಕಣ್ಗೆ ಪೊಕ್ಕನೆ ಪೊದಳ್ದುದೆನೆ ಚೆಲ್ವಿನ ಬುಗ್ಗೆ,
ಕಾಣ್ಕೆವೊಲದಂಚಿಂದೆ, ಬಾನ್ಮುಡಿಯ ಪೊಳೆಯಡಿಯ
ಬೆಟ್ಟದಡವಿಯ ತಡಿಯ ಚಿತ್ರಭಿತ್ತಿಯಿನುಣ್ಮಿ     ೨೪೦
ಹಾರುತೊಯ್ಯನೆ ತೇಲಿಬಂದತ್ತು ಸಾಲ್ಗೊಂಡು,
ಪಾಲ್‌ಬೆಳ್ಳನೆಯ ಬೆಣ್ಣೆನುಣ್ಪಿನೊರ್ ಬರೆಪಮೆನೆ,
ಬೆಳ್ವಕ್ಕಿಪಂತಿ. ನೋಡಿದನು ರಸವಶನಾಗುತಾ
ದಾಶರಥಿ. ನೋಡುತಿರೆ, ತಾನೆ ಹೊಳೆಯಾದಂತೆ,
ತಾನಡವಿಯಾದಂತೆ, ತಾನೆ ಗಿರಿಯಾದಂತೆ,
ತಾನೆ ಬಾನಾದಂತೆ, ತಾನೆಲ್ಲಮಾದಂತೆ,
ಮೇಣೆಲ್ಲಮುಂ ತನ್ನೊಳಧ್ಯಾತ್ಮಮಾದಂತೆ
ಭೂಮಾನುಭೂತಿಯಿಂ ಮೈಮರೆದನಾ ರಸಸಿದ್ಧಿ,
ಪೇಳ್, ರಾಮನಧ್ಯಾತ್ಮಮಂ ಸಕಲಲೋಕಕ್ಕೆ ಸಾರ್ವ
ಭವ್ಯ ಭಗವತ್ ಸಾಕ್ಷಿಯೈಸಲೆ ಕಿರೀಟೋನ್ನತಂ !         ೨೫೦