ಮೆಯ್‌ಸಿರಿಗೆ ಷೋಡಶ ವಸಂತ ವೀಚಿಯನೊತ್ತಿ
ಪ್ರವಹಿಸಿತು ಕಾಲನದಿ ರಾಮ ಲಕ್ಷ್ಮಣ ಭರತ
ಶತ್ರುಘ್ನ ಜೀವನದಿ. ಜೌವನ ರಸದ ಬಿಣ್ಪುಮಂ
ಬಿಜ್ಜೆಯಾಳದ ಗುಣ್ಪುಮಂ ಮೆರೆವ ವಿಗ್ರಹಂ
ಶೋಭಿಸಿದುದೋಜಸ್ವಿಗಳ್ಗೆ. ದಶರಥನೃಪಂ
ಮಕ್ಕಳ್ಗೆ ಮದುವೆಯಂ ನೆನೆದನಾಸಾರಮಂ
ನೆನೆವಂತುಟೊಕ್ಕಲಿಗನುತ್ತು ಬಿತ್ತಂ ಬಿತ್ತಿ
ಹರಗಿ. ವನಘನರಾಶಿಯಾಶಾ ದಿಗಂತದೊಳ್
ವರ್ಷದಾಶೀರ್ವಾದ ಮುದ್ರೆಯಿಂದೇರ್ದುದೆನೆ
ಬಂದನೋಲಗಕೆ ವಿಶ್ವಾಮಿತ್ರ ಮುನಿವರಂ,    ೧೦
ಚಂಡತೇಜಸ್ವಿ. ದೊರೆ ಕುಲಪುರೋಹಿತರಿಂದೆ
ಋಷಿಗರ್ಘ್ಯಮಂ ಕೊಡಿಸಿ, ಪಾಳಿಯಿಂದಡಿತಡಿಗೆ
ಮಣಿಯೆ, ಕುಶಿಕೋದ್ಭವಂ : “ನೃಪಾಲಶಾರ್ದೂಲ, ಕೇಳ್,
ಸಿದ್ಧ್ಯರ್ಥಮಾನೊಂದು ಜನ್ನಮಂ ಕೈಕೊಂಡು
ತೊಡಗಿಹೆನ್. ಅದಂ ಮಾಂಸರುಧಿರೌಫದಿಂ ಕಿಡಿಸಿ
ಕಾಡುವರ್ ತಾಟಕಿಯ ಮಕ್ಕಳ್ ಸುಬಾಹುವುಂ
ಮಾರೀಚನುಂ. ಕಳುಹು ರಕ್ಷೆಗೆನ್ನೊಡನೆ ನಿನ್ನಾ
ಜ್ಯೇಷ್ಠನಂ, ಕಾಕಪಕ್ಷಧರ ಕಲಿ ರಾಮನಂ,
ಶ್ರೇಷ್ಠನಂ. ಕರಿಯ ಕೊಲ್ಲುವ ಹರಿಗೆ ಮರಿಯೆಂಬ
ಶಂಕೆ ತಾನೇಕೆ? ಕಾಕುತ್ಸ್ಥ, ಯಮಪಾಶದಿಂ    ೨೦
ಪಾಪಕರ್ಮಂ ಮೊದಲೆ ಬಿಗಿದ ಪಿಶಿತಾಶರಂ
ತೇಜಸ್ವಿ ರಾಮನಾತನ ಮಹಾ ಶಕ್ತಿಯಿಂ
ಮೇಣೆನ್ನ ಗುಪ್ತ ದೈವಿಕಬಲದ ಮಹಿಮೆಯಿಂ
ಸಂಹರಿಸಿ, ಧರ್ಮಲಾಭಕೆ ಯಶೋದೀಪ್ತಿಯಂ
ಮೆರೆವನಯ್. ವರಮೆಂದು ನಂಬು ಮದ್ವಚನಮಂ.
ಪಡೆವೆ ಚಿರಕೀರ್ತಿಯಂ. ಗುರು ವಸಿಷ್ಠಾದ್ಯರಂ
ಬೆಸಗೊಂಡು ತಿಳಿ. ಪೊತ್ತು ತಾಂ ಪತ್ತು ಸೂಳಂ ಕಳಿದ
ಮರುವಗಲೆ ಆ ನಿನ್ನ ರಾಜೀವಲೋಚನಂ
ಪಿಂತಿರುಗಿ ಬರ್ಪನಯ್, ಬಹುಳ ಕಲ್ಯಾಣದಿಂ,
ಸಾಕೇತ ಜನಮನ ವನಧಿ ಪೆರ್ಚುವೋಲಂತೆ.”           ೩೦
ಹಣ್ಣೆಗೆಳಸಿದ ಕಣ್ಗೆ ಹುಳಿ ಸಿಡಿದವೋಲಾಯ್ತು;
ಜೇನಿಗೆಳಸಿದ ಜಿಹ್ವೆ ಕಹಿ ನೆಕ್ಕಿದಂತಾಯ್ತು;
ಸವಿಗೊರಲನಾಕರ್ಣಿಸಲ್ ಕಿವಿಯನಿತ್ತವಗೆ
ಕಾಯಿಸಿದ ಕಬ್ಬಿಣವ ಕರಗಿ ಹೊಯ್ದಂತಾದುದಯ್
ದಶರಥಗೆ, ಕುಶಿಕತನಯನ ಪೇಳ್ದ ಕೂರ್ನುಡಿಗೆ.
“ಕೃಪೆದೋರ್, ಮಹಾಮುನಿಯೆ ! ಮೊಗ್ಗಿನಿಂದಿರಿಯುವರೆ
ಕಗ್ಗಲ್ಲ ಬಂಡೆಯಂ? ಕದಳಿಯೆಳಕಂದಿನಿಂ
ಸಿಡಿಲು ತಡೆಯಲಹುದೆ? ಮುದ್ದಿನ ಕುಮಾರನಿಂ,
ಯುದ್ಧಾನುಭವವಿಲ್ಲದಿಹ ಮುಗ್ಧ ರಾಮನಿಂ,
ಕ್ರೂರಿಗಳ್ ಕೋಪಿಗಳ್ ವಜ್ರ ದೃಢದೇಹಿಗಳ್  ೪೦
ರಣವಿದಗ್ಧರನೆಂತು ಗೆಲಲಹುದೊ? ಮನ್ನಿಸೆನ್ನಂ.
ತಿಳಿಯದೆಳಪಸುಳೆ ತಾಂ ಕೊಲೆಯಹುದು ನಿರ್ನೆರಂ.
ಶಿಶುವೇಕೆ? ನಾನೆ ಬಹೆನತಿ ಬಲ ಸಮನ್ವಿತಂ,
ನಿರ್ವಿಘ್ನಮೆಸಗೆ. ಪೇಳ್, ಮುನಿಮಹೇಶ್ವರನೆ, ಆ
ದಾನವರದಾರ್? ಪೆಸರೇನ್? ಬಲಮೆನಿತ್ತವರ್ಗೆ?”
“ಲಂಕಾ ಕನಕಲಕ್ಷ್ಮಿಯನ್ನಾಳ್ವ ವಿಷ್ಣುವೆನೆ
ಕಲಿ, ಬಲಿಷ್ಠಂ, ಮಹಾ ದೈತ್ಯನಿರ್ದಪನಲ್ಲಿ
ದೂರ ತೆಂಕಲಲಿ, ನರ ಸುರ ಕಿನ್ನರರ್ಗೆಲ್ಲರ್ಗೆ
ಕಿವಿ ಭಯಂಕರದ ರಾವಣನೆಂಬ ಪೆಸರಿಂದೆ.
ಪೌಲಸ್ತ್ಯವಂಶಜಂ; ದ್ರಾವಿಡ ತಪಸ್ಸಿನಿಂ         ೫೦
ಮೃಡನಿಂ ಬರಂಗಳಂ ಪಡೆದನೆಂಬರ್ ಕಣಾ!
ದಿಗ್ಗಜ ದಶಂಗಳದಟಿರ್ಪುದಾತಂಗೆ, ಮೇಣ್
ದಶಶಿರಂ ತಾನೆಂಬರಯ್. ನಂಟರಾ ದೈತ್ಯಂಗೆ
ಮಾರೀಚ ಮೊದಲಪ್ಪ ಖಲ ನಿಶಾಚರರನಿಬರಂ;
ಸರ್ಪವೈರಿಗಳಾರ್ಯರಪ್ಪೆಮಗೆ.” ಋಷಿ ನುಡಿದು
ಮುಗಿವ ಮುನ್ನಮೆಯೆ ವಸುಧಾಧಿಪಂ : “ಶಿವ ಶಿವಾ,
ಸಾಲ್ಗುಮಾ ಕಥೆ, ಗುರುವೆ; ಬಲ್ಲೆನಾನೆಲ್ಲಮಂ
ಕೇಳ್ದು. ಕೀನಾಶನಣಲೊಳಗೆ ಕೈ ದುಮ್ಮಿಕ್ಕಿ
ಕೋರೆಯಂ ಕೀಳ್ವಾ ಪರಾಕ್ರಮಿಯಿದಿರ್ ನಾನೆ
ನಿಲಲಾರೆನೈ. ಮುದ್ದು ಮಗುವಂತಿರಲಿ. ಸುದ್ದಿ ೬೦
ಪರ್ವಿದೊಡೆ ರಾವಣನ, ಯಕ್ಷಕಿನ್ನರ ದೇವ
ಗಂಧರ್ವರೆರ್ದೆಗಳುಂ ತಳ್ಳಂಕಗೊಳ್ಳುವುವೊ
ಬೆರ್ಚ್ಚಿ. ಶಿಶು ರಾಮನೇಗೈವನೈ, ಧರ್ಮಜ್ಞ, ಪೇಳ್.
ಸುಂದೋಪಸುಂದರೆಂಬರ್ಗೆ ಮಾರೀಚಾದಿ
ಸೋದರರ್ ಮಕ್ಕಳ್; ಸಮರ ಯಮರ್ ! ರಾಮನಂ
ಕಳುಹಲಾರೆನೊ ದಿಟಂ; ಕ್ಷಮಿಸೈ, ತಪೋಧನಾ !”
ಮಕ್ಕಳಕ್ಕರೆಯಿಂದೆ ತೊದಲುತೊದಲಕ್ಕರಂ
ನುಡಿದು ಕೈಮುಗಿದು ಕಂಬನಿಗರೆವನಂ ನೋಡಿ,
ಗುರು ವಸಿಷ್ಠಂ : “ಇಕ್ಷ್ವಾಕು ಕುಲಧರ್ಮಮೂರ್ತಿ,
ಋಷಿಕೃಪಾಶೀರ್ವಾದಮಿದು ಕಣಾ ! ರಾಮನಂ           ೭೦
ಕಳುಹು ನಿಶ್ಶಂಕೆಯಿಂ. ಭಾಳನೇತ್ರಂಗೆ ತಾಂ
ಸದೃಶನೀ ಕೌಶಿಕಂ. ಕಂದನೀತನ ರಕ್ಷೆಯೊಳ್,
ಪ್ರಳಯಾಗ್ನಿ ಚಕ್ರಕೇಂದ್ರದೊಳಿರ್ಪ ಸುಧೆಯವೊಲ್,
ನಿತ್ಯಂ ಸುರಕ್ಷಿತಂ. ಸಕಲ ಮಂತ್ರಾಸ್ತ್ರವಿದನೀ
ರಣಕಲಾ ಪಂಡತಂ ತಾನೆ ಗುರುವಹನೆನಲ್
ಧನ್ಯನೈಸಲೆ ರಾಮಚಂದ್ರಂ ! ತಪೋಬಲಂ
ಕುಶಿಕಾತ್ಮಜಂಗೆ ನಿಗ್ರಹಕಿರ್ಪೊಡಂ, ನಿನ್ನ
ತನುಜಾತರಭ್ಯುದಯಕಾಗಿ ಬಂದಿಹನಿಂದು ಕೇಳ್
ಸಾಕೇತಪುರಿಗೆ, ನೆರಮಂ ಬೇಳ್ಪ ಬೇಳಂಬದಿಂ”.
ಆಪ್ತವಾಕ್ಯಂಗೇಳ್ದು ಸಂತೃಪ್ತನಾಗಿ, ದೊರೆ       ೮೦
ಬರಿಸಿದನು, ದೂತರಂ ಕಳುಹಿ, ಲಕ್ಷ್ಮಣಸಹಿತನಾ
ರಾಮನಂ ಪರಸುತಿರೆ ಗುರುಹಿರಿಯರೆಲ್ಲರುಂ
ಶಿರವನಾಘ್ರಾಣಿಸುತೆ, ಪೂವೆರಚಿ, ಹಿತವೇಳ್ದು,
ಶಂಖದುಂದುಭಿ ರವದ ಮಂಗಳಂ ಮೊಳಗುತಿರೆ,
ವಪು ಚಾರು ಧನ್ವಿಗಳನಾ ಪುತ್ರಯುಗ್ಮಮಂ
ಬೀಳ್ಕೊಟ್ಟನೈ ನ್ಮಪತಿ ಯತಿಯೊಡನೆ. ಮುದದಿಂದೆ
ನಡೆ ನಡೆದು ಮುಂಬರಿದು ಆ ಮೂವರೊಂದುವರೆ
ಯೋಜನವನುತ್ತರಿಸಿ, ಸೇರೆ ಸರಯೂ ನದಿಯ
ದಕ್ಷಿಣ ತಟವನಲ್ಲಿ, ಸವಿಗೊರಳ ನೇಹದಿಂ
ನೀಡಿದನು ಕುಶಿಕತನಯಂ ರಾಮಚಂದ್ರಂಗೆ,  ೯೦
ಮಂಗಳಸ್ನಾತಂಗೆ, ಮಂತ್ರ ಸದ್ವಿದ್ಯೆಯಂ.
ರಘುಜರ್ ನದೀತಟದ ತೃಣಶಯ್ಯೆಯೊಳ್ ಮಲಗಿ
ಜಲದ ಜೋಗುಳವೆರಸಿ ರಿಸಿನುಡಿಯನಾಲಿಸುತೆ
ನಕ್ಷತ್ರಮಯ ವಿಪುಲಗಗನದ ವಿಭಾವರಿಯ
ಕಳೆದರಯ್, ಸುಸ್ವಪ್ನಮಯ ಸುಖದ ನಿದ್ರೆಯಲಿ.
ಪ್ರಾಚೀ ದಿಗಂಗನೆಯ ಕಣ್ದೆರಹಿನೊಳ್ಬೆಳಗೊ,
ಕನಕ ಮೇರುವನೇರಿಬಹ ತೇರನೆಳೆಯುತಿಹ
ತಪನ ಹಯ ಖುರಪಟುದಿನೆದ್ದ ಹೊಂದೂಳಿಯೋ,
ಕತ್ತಲೆಯನಟ್ಟಿ ಬರ್ಪಿನನ ನಾರಾಚದಿಂ
ಗಾಯಗೊಂಡಿರ್ಪಿರುಳ್ ಕಾರ್ದ ನೆತ್ತರ್ ಸೋರ್ವ        ೧೦೦
ಸೋನೆ ತುಂತುರ್ ಮಳೆಯೊ ಪೇಳೆನಲ್, ಮರುದಿನಂ
ಬೆಳಗಾದುದಿಂದ್ರ ದಿಕ್ತಟದಿ. ತುಂಬಿತ್ತೊಡನೆ
ವನದೇಶಮಂ ಲಕ್ಷಪಕ್ಷಿಯುಲಿ. ರಾಜಿಸಿತು
ಸರಯೂ ನದಿಯ ವಕ್ಷಮೋಕುಳಿಯ ಕಾಂತಿಯಿಂ
ತಳಿಸಿ. ಋಷಿಯೊಡನೆ ಮಿಂದರು ರಾಮಲಕ್ಷ್ಮಣರ್,
ಶೀತ ಸುಂದರ ಸುಖದ ಸಲಿಲದಲಿ ! ಕುವರರಿಗೆ
ತಮ್ಮರಮನೆಯ ಸಿರಿಯೆ ಬಡತನಂ ತಾನಾಯ್ತಲಾ
ಕಾಡಿನ ಸೊಗದ ಸರಿಸದಲಿ ! ಬಂಡೆಯಿಂ ದುಮುಕಿ
ನೀರ್ಗೆ, ಮೇಣೊಬ್ಬರೊಬ್ಬರ ಮೊಗಕೆ ನೀರೆರಚಿ,
ನಲಿದಾಡಿದರ್ ಸ್ಪರ್ಧೆಯಿಂದೀಸಿ. “ಗುರುದೇವ,          ೧೧೦
ನಿಮ್ಮ ಕರುಣೆಯಿನೆಮಗೆ ಲಭಿಸಿತೀ ವನಸುಖಂ.
ದಾರಿದ್ರ್ಯಮಲ್ತೆ ಆ ನಾಗರಿಕ ಜೀವನಂ
ಈ ವನ್ಯ ಸಂಸ್ಕೃತಿಯ ಮುಂದೆ?” ಎಂದ ರಾಮನಂ
ಕುರಿತಾ ಮಹರ್ಷಿ ಮಂತ್ರಿಸಿದನಿಂತು :
“ದಿಟವೊರೆದೆ,
ಹೇ ವತ್ಸ, ಗಿರಿವನಪ್ರೀತಿ ತಾಂ ದೈವಕೃಪೆ ದಲ್.
ಜಗದೀಶ್ವರನ ಮಹಿಮೆ ಸಂವೇದ್ಯವಹುದಿಲ್ಲಿ
ಭವ್ಯ ಸೌಂದರ್ಯ ಶೀಲದ ವನ್ಯ ಶಾಂತಿಯಲಿ.
ಉಪನಿಷತ್ತಿನ ಮಹಾ ಮಂತ್ರಾನುಭವಗಳುಂ
ಹೃದ್ಗಮ್ಯವಿಲ್ಲಿ. ಚಿತ್ತಕೆ ಸಮಾಧಿಯನಿತ್ತು
ಹರಿದಂತ ವಿಶ್ರಾಂತ ಹರಿತ ಕಾನನಮಯಂ ತಾಂ       ೧೨೦
ಪರ್ವತಶ್ರೇಣಿ ಪರ್ವಿದೆ ನೋಡು ಶಿವನಂತೆವೋಲ್,
ಧ್ಯಾನ ಮಾಳ್ಪಗೆ ಹೃಷ್ಟರೋಮತೆಯನಿತ್ತು. ಅದೊ,
ಬಣ್ಣದ ಮುಗಿಲ್ ಗಗನ ಪಟದಲ್ಲಿ ತೇಲುತಿದೆ
ದೇವರೆ ಪೆಸರ್ ಬರೆದ ಮುದ್ರೆಯೋಲ್. ಕರೆಯುತಿದೆ ಕಾಣ್
ನಮ್ಮಾತ್ಮಮಂ ಕಲೋಪಾಸನೆಗೆ. ರಘುಜ ಕೇಳ್,
ಸೃಷ್ಟಿ ಸೌಂದರ್ಯದೊಲ್ಮೆಯೆ ಸೃಷ್ಟಿಕರ್ತಂಗೆ
ಪೂಜೆಯಯ್. ರಸಜೀವನಕೆ ಮಿಗಿಲ್ ತಪಮಿಹುದೆ?
ರಸಸಿದ್ಧಿಗಿಂ ಮಿಗಿಲೆ ಸಿದ್ಧಿ ? ಪೊಣ್ಮೆದೆ ಸೃಷ್ಟಿ
ರಸದಿಂದೆ; ಬಾಳುತಿದೆ ರಸದಲ್ಲಿ; ರಸದೆಡೆಗೆ ತಾಂ
ಪರಿಯುತಿದೆ; ಪೊಂದುವುದು ರಸದೊಳೈಕ್ಯತೆವೆತ್ತು     ೧೩೦
ತುದಿಗೆ. ರಸಸಾಧನಂಗೆಯ್ಯದಿರುವುದೆ ಮೃತ್ಯು.
ಆನಂದರೂಪಮಮೃತಂ ರಸಂ!”
ಋಷಿಮಂತ್ರಮಂ
ಕೇಳ್ದು ಬಾಲಕರಾತ್ಮ ಭಾವನೋಜ್ವಲರಾಗಿ
ರವಿಗರ್ಘ್ಯಮೆತ್ತಿದರ್, ಗಾಯತ್ರಿ ಘೋಷದಿಂ
ಜೇಂಕರಿಸಲಡವಿ.
ಅಲ್ಲಿಂದೆ ಮೇಣ್ ಮುಂಬರಿದು
ಕಾಮಾಶ್ರಮಂಬೊಕ್ಕು ಋಷಿಗಳಾತಿಥ್ಯಮಂ
ಕೈಕೊಂಡು, ಮುನಿಯಿಂದೆ ಕಮನೀಯ ಕಥೆಗಳಂ
ಕೇಳುತಿರುಳಂ ಕಳೆದು, ಮುಂಬೆಳಗಿನೊಳಗೆಳ್ದು
ನಡೆದು ಗಂಗಾತೀರಮಂ ಸೇರ್ದು, ದೋಣಿಯಿಂ
ದಾಂಟಿ, ಪೊಕ್ಕರ್ ಮಹಾ ಭೀಷಣ ಭಯಂಕರದ          ೧೪೦
ನಿಬಿಡ ಘೋರಾರಣ್ಯಮಂ. ಹಳುವ ಹೊಕ್ಕೊಡನೆ
ತರುಣನೆದೆ ನಡುಗಿ ವಿಶ್ವಾಮಿತ್ರನಂ ಕುರಿತು
ಲಕ್ಷ್ಮಣಂ : “ಮೌನಶಿಲೆಯಂ ಧ್ವನಿಕ್ರಕಚದಿಂ
ಗರ್ಗರಿಸಿ ಕೊಯ್ವಂತೆವೋಲ್, ಗುರುವೆ, ಚೀರುತಿವೆ
ಜೀರುಂಡೆಗಳ್, ಕರ್ಣಕರ್ಕಶಂ. ಶಕುನಿಗಳ್
ಕೂಡೆ ಕೂಗುತಿವೆ ದುಶ್ಶಕುನಮಂ, ಕಾಡಿನೀ
ಕಳ್ತಲೆಯೊ ಕಾನನ ನಿಶಾಚರಿಯ ಕರ್ಮೊಗದ
ಪುರ್ಬುಗಂಟೆಂಬಂತೆವೋಲ್ ನೀರವಕ್ರೌರ್ಯದಿಂ
ನಿಟ್ಟಿಸಿದೆ, ನೋಳ್ಪರನಣಕಿಪಂತೆ. ಗುರುವೆ, ಪೇಳ್,
ಕಾಡಾವುದಿದಕೆ ಪೆಸರೇನ್ ?”
“ತಾಟಕಾ ವನಂ  ೧೫೦
ತಾನಿದು ಕಣಾ! ಋಷಿಯ ಶಾಪದಿಂ ಸುಂದಸತಿ,  ಆ
ಮಾರೀಚನಬ್ಬೆ, ಜಕ್ಕಿಣಿಯಾಗಿ ಪುಟ್ಟಿ ಈ
ಪೆರ್ಬನವನಂಡಲೆಯುತಿಹಳು ತಾಟಕೆಯೆಂಬ
ಘೋರ ರಾಕ್ಷಸ ರೂಪದಿಂ.”
ತೆಕ್ಕನೆಯೆ ಕೇಳ್ದುದಯ್
ಚೀತ್ಕಾರವೊಂದು, ಗಿರಿಯಟವಿ ಚೀತ್ಕರಿಸಿದಂತೆ.
“ಅವಳೆ ತಾಟಕೆ ! ಬರ್ಪಳದೊ ! ಹೆದೆಗೆ ಬಾಣಮಂ
ಪೂಡಿ ನಿಲ್ಲಿಂ !” ಗುರುವಿನಾಣತಿಗೆ ಬಾಲಕರ್
ಬತ್ತಳಿಕೆಯಿಂ ತುಡುಕಿ ನಾರಾಚಮಂ, ಪೂಡಿ
ಸಿಂಜಿನಿಗೆ, ಸೆಳೆದು ನಿಂದರ್ ಜವಳಿಗಣ್ಗಳೋಲ್.
ಭೂಕಂಪ ಕಾಲದೊಳ್ ಶಿಖರದೌನ್ನತ್ಯದಿಂ     ೧೬೦
ಕಣಿವೆ ಕಿಬ್ಬಿಗುರುಳ್ದು ಬೀಳ್ವ ಪೆರ್ಬಂಡೆ ತಾಂ
ತಳ್ಪಲ್ಗಿಡುಮರಂಗಳಂ ನುರ್ಚ್ಚುನುರಿಗೆಯ್ದು
ನುರ್ಗಿ ಬರ್ಪಂತೆವೋಲ್ ಬಂದಳ್ ಮಹಾಘೋಷದಿಂ
ಕಿಡಿಯಿಡುವ ರೋಷದಿಂ ಕೋರೆದಾಡೆಗಳಸುರಿ,
ತಾಟಕೆ, ಕರಾಳೆ! ಮುಡಿಗೆದರಿದಳ್ ಮುಂಗಾರೆನಲ್.
ಕೊರಳೆತ್ತಿ ಮೊಳಗಿದಳ್. ಕಣ್‌ಸುಳಿಸಿ ಮಿಂಚಿದಳ್.
ಬೀಸಿದಳ್ ದೆಸೆದೆಸೆಗೆ ಬಿರುಗಾಳಿಯಂತೆವೋಲ್.
ದಿಕ್ತಟಂಗಿಡುವಂತೆ ಧೂಳಿಯಂ ಮುಸುಗಿದಳ್.
ಆಲಿಕಲ್ ಮಳೆಗರೆದಳಾ ಮಾಯಾಮಯೀ ಕೂಟ
ಯುದ್ಧಪ್ರವೀಣೆ. ಲಕ್ಷ್ಮಣ ರಾಮರಸ್ತ್ರಾಳಿಗಳ್    ೧೭೦
ತೂರುತಿರೆ ದೆಸೆದೆಸೆಗೆ, ರಾಕ್ಷಸಿಯ ಪೀನತನು ತಾಂ
ಮಳೆಗರೆದುದಯ್, ಹೊಳೆಹೊಳೆಗಳಾಗಿ ಕೆನ್ನೀರುಗಳ್
ಪರಿಯೆ. ಬಿದ್ದಳ್ ನೆಲಕೆ ಕರ್‌ಮುಗಿಲ್ ಬೀಳ್ವಂತೆ.
ರಾಕ್ಷಸಿಯ ರೂಪವಾನುತೆ ಬಂದ ಬಿರುವಳೆಯೆ
ಹೊಯ್ದು ಹೊಳವಾದಂತೆ, ಹೊರಗೊಳಗೆ ತಿಳಿಯಾಯ್ತು
ರಾಮ ಲಕ್ಷ್ಮಣ ಋಷಿಯರಾತ್ಮಲೋಕತ್ರಯಂ.
ಕಳೆಯುತಾ ರಜನಿಯಂ ತಾಟಕಾವನದೊಳಲ್ಲಿಂ
ಮರುದಿನಂ ಚಲಿಸಿದರ್ ಕೌಶಿಕ ತಪೋವನಕೆ.
ನಿಚ್ಚ ಪಚ್ಚೆಯ ಪಸುರ್‌ಬನದಿಂದೆಸೆವ ಮಲೆಯ
ತೋಳ್ತಳ್ಕೆಯೊಳ್, ನೀಳಿಯಾಗಸವನೆರ್ದೆಯಲ್ಲಿ          ೧೮೦
ರನ್ನಗನ್ನಡಿಯಂತೆ ತೊಟ್ಟ ವನದೇವತಾ
ಹೃದಯ ಲೋಚನಮೆನಲ್ ಮೆರೆವ ವಿಸ್ತಾರದಾ
ಸ್ಫಟಿಕ ನಿರ್ಮಲ ಸರೋವರ ಸುಭಗ ತೀರದಲಿ
ಶೋಭಿಸಿದುದಾ ಮುನಿ ನಿಕೇತನಂ.
ಐತಂದರಂ
ಸಂಕಟ ನಿವಾರಕರನೀಕ್ಷಿಸಿ ತಪೋಧನರ್
ಮನೆಗೆ ಬಿಜಯಂಗೈದ ಮಂಗಳದ್ವಯಗಳಂ
ಮುದ್ದಿಸಿದರುಪಚರಿಸಿದರ್ ದಶರಥ ಕುಮಾರರಂ.
ಮರುವಗಲ್ ತೊಡಗಿದನ್ ಕುಶಿಕತನಯಂ ಯಜ್ಞಮಂ.
ದುಪ್ಷಶಿಕ್ಷಣ ದೀಕ್ಷಿತರ ರಾಮಲಕ್ಷ್ಮಣರ
ಕೋದಂಡ ಠಂಕಾರ ಮಂತ್ರ ಚಿಚ್ಛಕ್ತಿಯ          ೧೯೦
ಶರಾಘಾತಕಳಿದನ್ ಸುಬಾಹು. ಮಾರೀಚನುಂ
ಏರ್ವಡೆದು, ದೇಹಮುರುಳಲ್ ಪ್ರಾಣಮೋಡುವೊಲ್
ಕೆಟ್ಟೋಡಿದನ್. ಋಷಿಯಭೀಷ್ಟಂ ಸಿದ್ಧಿಯಪ್ಪಂತೆ
ದಿನಂ ಮೂರರೊಳ್ ಮುಗಿದುದಯ್ ಮಖಂ.
ಕೆಲದಿನಕೆ
ಮಿಥಿಳೆಯಿಂ ಯಾತ್ರೆಬಂದುದು ಮುನಿಗಳಾಶ್ರಮಕೆ
ಧರಣಿಪತಿ ಜನಕನ ಮಹಾಕ್ರತು ಸುಕೃತವಾರ್ತೆ.
ರಾಮಲಕ್ಷ್ಮಣರೊಡನೆ ಪೊರಮಟ್ಟನಾಯೆಡೆಗೆ
ಮುನಿಪುಂಗವಂ, ವಿಧಿನಿಯಂತ್ರದಲಿ. ಹಾದಿಯಲಿ
ಹೇಳಿದನು, ಜನಕರಾಜಗೆ ದಿವಿಜ ಕೃಪೆಯಿಂದೆ
ಲಭಿಸಿರ್ಪ ಹರಧನುಸ್ಸಿನ ಕಥಾಚರಿತಮಂ.     ೨೦೦
ಕೇಳ್ದ ರಾಮಂಗೆ ಶಿವಶಕ್ತಿ ಸಂಚರಿಸಿದೊಲ್
ಪುಲಕಿಸಿತು ಮೆಯ್ : ತನ್ನ ಹೃದಯೇಶ್ವರಿಯನನ್ಯ
ಕಾಪುರುಷರಿಂ ಪೊರೆವ ಹರಕೃಪಾ ರೂಪಿಯೇಂ
ಚಾಪಮಾತ್ರಮೆ ಪೇಳ್ ? ಶಿವೇಚ್ಛಾಪ್ರಣಾಲಿಯೆ ದಿಟಂ !
ಕಣಿವೆಗಳನಿಳಿದದ್ರಿಗಳನಡರಿ ಬರುತಿರಲ್,
ಗೌತಮನ ವಾಙ್ಮಹಿಮೆಯೋ ಮೇಣಹಲ್ಯೆಯ
ತಪೋಬಲಮೊ ಕಾಣೆನಟವಿಯ ಕುಟಿಲ ಪಥದಲಿ
ಹಠಾತ್ತೆನಲ್ ಭ್ರಷ್ಟಮಾದುದು ಪರಿಚಿತಾಧ್ವಮಾ
ಕುಶಿಕ ಸೂನುವಿಗೆ. ತಾರಾಗಣಮೆ ತೋರ್ಬೆರಳ್         ೨೧೦
ತಾನಾಗೆ, ದೆಸೆಯರಿತು, ಕಳ್ತಲೊಳೆ ನಡೆದರಯ್
ಸಾಹಸದ ಕಣ್ಣೂಹೆಯಿಂ. ಪೂರೈಸಿದುದು ರಾತ್ರಿ.
ಕಣ್ದೆರೆದಳುಷೆ ಮೂಡಣಂಬರದಿ ಪಾಂಥರ್ಗೆ
ಗೋಚರಿಸಿತೊಂದು ಋಷಿವನ ಸದೃಶ ಕಾನನಂ.
ಪೊಕ್ಕರದನೇನೆಂಬೆನಾ ಮಹಾ ಶಕುನಮಯ
ದುಃಖಗರ್ಭಿತ ಮೌನಮಂ ! ಹಾಡದಿವೆ ಹಕ್ಕಿ.
ನಲಿದಾಡದಿವೆ ಮಿಗಂ. ಸಂಚರಿಸದಿದೆ ಗಾಳಿ.
ತನಿಗಂಪನೀಯದಿವೆ ಮರಗೋಡಿನೊಳ್ ಮಲರ್.
ಚಲಿಸವೆಲೆ ಪುಲ್ಲೆಸಳ್. ಆವ ದುಃಖವೊ ಅಲ್ಲಿ
ಕೊನೆಗಾಣದಂತಮಂ ದಿನಮುಂ ನಿರೀಕ್ಷಿಪೊಲ್
ಮೂಗುವಟ್ಟಿರ್ದ ಬನಮೆಸೆದುದಾ ಪಥಿಕರ್ಗೆ    ೨೨೦
ಬರೆದಂತೆ ನೀರವಂ, ಕೊರೆದಂತೆ ನಿಶ್ಚಲಂ,
ನಿಶ್ಶಬ್ದತಾ ಕುಂಭಕಸ್ಥಿತಿಯ ಯತಿನಾದದೋಲ್.
ರಾಮಾಯಣದೊಳತಿಮನೋ ಋತದ ಸಂಘಟನೆ
ಸಂಭವಿಸಲಿರ್ಪ ತಾಣಂ ತಾನದೆಂದರಿವರೇಂ?
ಗೌತಮ ಮಹಾಮುನಿಯ ಶಾಪದಿನಹಲ್ಯೆ ತಾಂ
ವರ್ಷ ಶತಮಾನಂಗಳಿಂದೆ ಜಡರೂಪದಿಂ,
ನಿಷ್ಠುರ ಶಿಲಾತಪಸ್ವಿನಿಯಾಗಿ, ಕನಿಕರದ
ಕಣ್ಗೆ ಬಾಹಿರೆಯಾಗಿ, ಜಗದ ನಿರ್ದಾಕ್ಷಿಣ್ಯ
ವಿಸ್ಮೃತಿಗೆ ತುತ್ತಾಗಿ, ವಜ್ರಮೌನದ ಅಚಿನ್
ನಿದ್ರೆಯಿಂದೆಳ್ಚರುವ ಬಯಕೆಯಿಂದೊರಗಿರ್ದ  ೨೩೦
ಸುಕ್ಷೇತ್ರಮಂ ಪ್ರವೇಶಿಸಿದುದೆ ತಡಂ, ಮರುಗಿ
ಕರಗಿದುದು ರಾಮಾತ್ಮವನಿಮಿತ್ತ ಶೋಕದಿಂ.
ಕಣ್ಗಳಿಂ ಪರಿದುದಯ್ ನೀರ್. ತಾಯಿ ಕೌಸಲ್ಯೆ
ಗೋಳಿಡುತೆ ತನ್ನ ಪೆಸರಂ ಪಿಡಿದು ಕರೆವವೊಲ್
ಕಲ್ಗಳಿಂ ಪುಲ್ಗಳಿಂ ಮರಮರದ ಹೃದಯದಿಂ
ಮೂಡಿ ಕೇಳ್ದುದು ಸಂಕಟಂ ರಾಮನೊರ್ವಂಗೆ.
ಕುಳಿರ್ಗಾಳಿ ಬೀಸಲ್ಕೆ ತಳಿರ ತುದಿಯೊಳಗಿರ್ದು
ತಳಿಸುವಿರ್ಪನಿ ತರತರನೆ ಕಂಪಿಸುವ ತೆರದಿ, ಕೇಳ್,
ಸ್ಪಂದಿಸಿದುದವನ ಮೆಯ್ ಚಿನ್ಮಯಾವೇಶದಿಂ.
ಕೈವೆರಸಿ ನಡುಗಿದುದು ಪಿಡಿದ ಬಿಲ್. ಕುಣಿದತ್ತು          ೨೪೦
ಬತ್ತಳಿಕೆ ಬೆನ್ನಮೇಲ್. ತಲೆಯ ಮೇಲಾಡಿದುದು
ಕಾಕಪಕ್ಷದ ಕುರುಳ್, ಗಾಳಿಗೊಲಿಯುವ ಬಳ್ಳಿ
ಜೋಲ್ವಂತೆವೋಲ್. ವಕ್ಷಮೇದಿದುದು ಸುಯ್ಗಳಿಂ.
ಚೆಲ್ಲಿತಯ್ ತೇಜಂ ವದನದಿಂದೆ ! ನೋಡುತಿರೆ,
ಬಾಹ್ಯಸಂಜ್ಞಾ ಶೂನ್ಯನೆಂಬಂತೆ ರಘುನಂದನಂ
ನರ್ತಿಸಲ್ ತೊಡಗಿದನು ಭಾವದ ಸಮಾಧಿಯಿಂ
ಮಧುಮತ್ತನಂತೆ. ಪೇಳೇನೆಂಬೆನದ್ಭುತಂ:
ಸ್ತಬ್ಧ ಗಿರಿವನ ಧರಣಿ ಸಪ್ರಾಣಿಸಿತು ಕೂಡೆ
ಚೈತ್ರಲಕ್ಷ್ಮೀ ಸ್ಪರ್ಶಮಾದಂತೆ. ಬೀಸಿದನ್
ಪುಣ್ಯಪವನಂ ತರುವರಂಗಳ ನಾಳನಾಳದೊಳ್         ೨೫೦
ಶಕ್ತಿ ಸಂಚರಿಸೆ. ತುಂಬಿತು ಕೊಂಬೆಕೊಂಬೆಯಂ
ಫುಲ್ಲಪಲ್ಲವ ರಾಶಿ ರಾಶಿ, ಪರಿಮಳಮಯಂ
ನವರುಚಿರ ಕುಸುಮಸಂಕುಲಮೆಸೆದುವೆತ್ತಲುಂ
ಸುಗ್ಗಿಯಾಣ್ಮನ ಸಗ್ಗದೋಲಗಸಾಲೆ ಸಮೆದಂತೆ.
ಕಾಜಾಣಮುಲಿದುದಯ್. ನಲಿದುದು ನವಿಲ್. ಪಿಕಂ
ಪಾಡಿದುದು. ಪಕ್ಕಿಯಿಂಚರದೊಡನೆ ಸಂಗಮಿಸಿ
ತುಂಬಿಮೊರೆ ತುಂಬಿ ಝೇಂಕರಿಸಿತೋಂಕಾರಮಂ.
ಸುಳಿ ಸುಳಿದುವೈ ಚಿನ್ನಚುಕ್ಕಿಯ ಚಿಗರೆ ಚೆಲ್ವಾಗಿ,
ಪ್ರಾಣಮಯಮಾಯ್ತನ್ನಮಯ ಜಗಂ. ಭೋಂಕನೆ
ಮನೋಮಯತೆವೆತ್ತು, ವಿಜ್ಞಾನಮಯಮಂ ಪೊಕ್ಕು,    ೨೬೦
ದುಮುಕಿತಾನಂದಮಯದೊಳ್, ಕೋಶಕೋಶಂಗಳಂ
ಮೀಂಟಿ ನೆಗೆನೆಗೆದುತ್ತರಿಸಿ ದಾಂಟಿ, ತಗುಳ್ದುದಾ
ಅಲೌಕಿಕಂ ನೋಳ್ಪರ್ಗಮನುಭೂತಿ. ನೋಡುತಿರೆ,
ಚಲಿಸಿದನು ರಾಮನೊಯ್ಯೊಯ್ಯನೆಯೆ ನೃತ್ಯಶೀಲಂ,
ಮುಂದೆ. ಹಿಂಬಾಲಿಸಿದರಿತರರುಂ ಮಂತ್ರಬಲದಿಂ
ಬದ್ಧರಾದಂತೆ. ನೆರೆದುದು ಚೈತ್ರ ಸೌಂದರ್ಯಮಂ
ಬಾನತ್ತಣಿಂದಿಳಿದ ಗಂಧರ್ವ ಮಧುರಗೇಯಂ,
ಅಶರೀರ ಲಕ್ಷ ವೀಣಾ ತಂತ್ರಿಯಂ ಮಿಡಿದು
ಮೇಳಗೈದಂತೆ,
ಮೆರೆದುದು ಮುಂದೆ ಪಳುವದೊಳ್,
ವನಭಿತ್ತಿಗೆದುರಾಗಿ, ಸುತ್ತಣೊರಲೆಯ ಪುತ್ತು   ೨೭೦
ತಬ್ಬಿರ್ದ ಕಲ್ಬಂಡೆಯೊಂದು, ಹಾವಸೆ ಹಬ್ಬಿ,
ಮುತ್ತಿದ ಬಿದಿರ್ಮೆಳೆಯ ವನಮಾತೃವಕ್ಷದಲಿ.
ಸತಿಯ ರಕ್ಷೆಗೆ ತಾನೆ ರೂಪಮಂ ತಾಳ್ದುದೆನೆ
ಪತಿಯ ಶಾಪಂ, ಶಿಲೆಯ ಮೇಲೊರಗಿ ಕಿಚ್ಚುಗಣ್ಣಿಂ
ನಿಚ್ಚಮುಂ ಕಾಪಿರ್ದ ಕರ್‌ಪಳದಿ ಪಟ್ಟೆಯಾ
ಪೆರ್ಬುಲಿಯದೊಂದು ಬರ್ಪವರ ಕಾಣಲೊಡಮಾ
ತಾಣದಿಂದೆದ್ದು ಮಿಂಚಂತೆ ಕಣ್ಗೆ ಮರೆಯಾಯ್ತು.
ಋಷಿಕೃಪಾವಚನದೊಲ್ ರಾಮನೇರ್ದನು ಬಂಡೆಯಂ,
ಲಾಸ್ಯಮಂ ತೊಡಗಿ. ಒಯ್ಯನೆ ಚರಣಚುಂಬನಕೆ
ಕಲ್ಲೆ ತಾಂ ಬೆಣ್ಣೆಯಾಯ್ತೆನೆ ಕಂಪಿಸಿತು ಬಂಡೆ, ೨೮೦
ಪ್ರೇಮ ಸಾಮೀಪ್ಯದಿಂ ಸಾನ್ನಿಧ್ಯದಿಂ ಮತ್ತೆ
ಸಂಸರ್ಗದಿಂ ತಲ್ಲಣಂಗೊಳ್ಳುವಬಲೆಯೋಲ್.
ಬಿಲ್ಲು ಬೆರಗಾಗಿ ನೆರೆದವರೆಲ್ಲರೀಕ್ಷಿಸಿರೆ,
ಬೆಂಗದಿರನುರಿಗೆ ಕರ್ಪೂರಶಿಲೆಯಂತೆವೋಲ್
ದ್ರವಿಸಿತಾ ಕರ್ಬಂಡೆ : ದಿವ್ಯ ಮಾಯಾ ಶಿಲ್ಪಿ
ಕಲ್ಪನಾ ದೇವಿಯಂ ಕಲ್ಲಸೆರೆಯಿಂ ಬಿಡಿಸಿ
ಕೃತಿಸಿದನೆನಲ್, ರಘುತನೂಜನಡಿದಾವರೆಗೆ
ಹಣೆಮಣಿದು ನಿಂದುದೊರ್ವ ತಪಸ್ವಿನೀ ವಿಗ್ರಹಂ,
ಪಾಲ್‌ಬಿಳಿಯ ನಾರುಡೆಯ, ಕರ್ಪಿರುಳ ಸೋರ್ಮುಡಿಯ,
ಪೊಳೆವ ನೋಂಪಿಯ ಮೊಗದ ಮಂಜು ಮಾಂಗಲ್ಯದಿಂ.           ೨೯೦
ಪೆತ್ತ ತಾಯಂ ಮತ್ತೆ ತಾನೆ ಪಡೆದಂತಾಗೆ
ನಮಿಸಿದನೊ ರಘುಜನುಂ ಗೌತಮಸತಿಯ ಪದಕೆ,
ತನ್ನ ಕಾವ್ಯಕೆ ತಾಂ ಮಹಾಕವಿ ಮಣಿಯುವಂತೆ !
ಇಂದ್ರನಳುಪಿಂಗಳ್ಕಿ ಪತಿಯ ಶಾಪಕೆ ಸಿಲ್ಕಿ
ಕಲ್ಲಾದಹಲ್ಯೆಯಂ ಸಿರಿಯಡಿಯ ಸೋಂಕಿಂದೆ
ಮರಳಿ ಪೆಣ್ ಮಾಡಿದಾ ರಾಮೋತ್ತಮಾಂಗಕ್ಕೆ
ಘೇಯೆಂದು ದೇವತೆಗಳರಳುಮಳೆಗರೆದರಯ್,
ದುಂದುಭಿ ರವಂಗಳಂ ಮೊಳಗಿ. ಕಲ್ಲಾದರೇನ್?
ತೀವ್ರತಪದಿಂದೆ ಚೇತನ ಸಿದ್ಧಿಯಾಗದೇಂ
ಜಡಕೆ? ಕಲ್ಲಾದ ಪೆಣ್ಣರಕೆ ತಾಂ ಕೌಶಿಕಗೆ        ೩೦೦
ಬಟ್ಟೆದಪ್ಪಿಸಿ ಸೆಳೆಯದೇನಿಹುದೆ, ಪೇಳ್, ಚರಣಮಂ
ಶ್ರೀರಾಮನಾ? ಮುನಿಜನಂ ಪರಸಿ ಕೊಂಡಾಡುತಿರೆ
ರಾಮಪದ ಮಹಿಮೆಯಂ ತೋರ್ದಹಲ್ಯೆಯ ತಪೋ
ಗೌರವವನಾ ಗೌತಮಂ ಬಂದನಲ್ಲಿಗೆ ಶಿವಂ
ಬರ್ಪಂತೆವೋಲ್. ಕೂಡೆ ಪಾಳ್‌ಪೋಗಿರ್ದುದಾ ಬನಂ
ಪ್ರಾಣಮಯ ಪಾವನಾಶ್ರಮವಾಯ್ತು. ನೊರೆಯ ಮುತ್ತಂ
ಚೆಲ್ಲಿ ಪರಿದುದು ಮೊರೆವ ನಿರ್ಝರಿಣಿ. ಹೂ ತುಂಬಿ
ತೆಳುಗಾಳಿಗೊಲೆದು ತಲೆದೂಗಿತಾ ವನಧರಣಿ.
ಹರಿಣನಂ ಬಳಿಸಾರ್ದು ಮೊಗಂ ನೆಕ್ಕಿ ಮೆಯ್‌ತಿಕ್ಕಿ
ಸೊಗಸಿದುವು ಹರಿಣಿ! ಪದತಲಕೆ ಮುಡಿಯಿಟ್ಟಳಂ        ೩೧೦
ದಿವ್ಯ ಸಹಧರ್ಮಿಣಿಯನೆತ್ತಿ, ಕಣ್ಣೀರ್ವೊರಸಿ,
ಕರೆದನು ತಪೋಧನಂ ಹರ್ಷಾಶ್ರುವಂ. ಪೇಳ್ವುದೇಂ
ರಾಮನಾನಂದಮಂ? ಗೌತಮಾಲಿಂಗನದಿ
ಮೈಮರೆದನಯ್, ಭಕ್ತಿಯಪ್ಪುಗೆಗೆ ಭಗವಂತನೋಲ್.
ಕಳೆಯುತಾ ರಾತ್ರಿಯಂ ಗೌತಮಾಶ್ರಮದಲ್ಲಿ
ಮುಂದೆ ನಡೆದರು ಮಿಥಿಲೆಗಾಗಿ. ನಾನಾ ಕಥಾ
ಶ್ರವಣದಿಂದಧ್ವಶ್ರಮಂಗಳಂ ನೀಗುತಂ,
ಬ್ರಹ್ಮರ್ಷಿ ವಚನ ತತ್ತ್ವಾಮೃತವನೀಂಟುತಂ,
ಪ್ರಕೃತಿ ಸೌಂದರ್ಯ ರತಿಯಿಂಪನನುಭವಿಸುತಂ
ಬರಬರಲ್ ಶೋಭಿಸಿತು ಮುಂದೆ, ಸಂಪತ್ತಿನಿಂ            ೩೨೦
ಶ್ರೀಯುತ ಕುಬೇರನಲಕಾವತಿಗೆ ಮಲೆತುದೆನೆ
ರಂಜಿಸುತ್ತಿರ್ದಾ ವಿದೇಹದ ರಾಜಧಾನಿ.
ರಾಮಂಗೆ ಪುಳಕಿಸಿರೆ ಮೆಯ್ ಚಿತ್ತದೆಚ್ಚರಕೆ
ತಿಳಿಯದಿಂಪಿಂದೆ, ಪೊಕ್ಕರ್ ಮಹಾ ಮಿಥಿಳೆಯಂ,
ಮುತ್ತುರತ್ನಕೆ ಶರಧಿಯಂ ಪುಗುವರೋಲ್. ಜನಂ
ಕಿಕ್ಕಿರಿದು ಸುರಿದುದು ವಿದೇಶ ದೇಶಂಗಳಿಂ
ಜನಕರಾಜನ ಮಖದ ಸಂಭ್ರಮಕೆ. ಪಟ್ಟಣದ
ಬೀದಿಯಲಿ ಕೌಶಿಕನೊಡನೆ ರಾಮಲಕ್ಷ್ಮಣರ್
ಸಾಗುತಿರೆ, ಮಂದಿ ನಿಂದುದು ದಿಟ್ಟಿನಟ್ಟು, ಕೇಳ್,
ಬಾಲಕರ ಭದ್ರಾಕೃತಿಗೆ ಕಣ್‌ಮನಂ ಸೋಲ್ತು.  ೩೩೦
ದೊರೆಯಾಳುಗಳ್ ಬಂದು ಪೊಳೆವತಿಥಿಗಳ್ಗೆರಗಿ
ಜನ್ನಸಾಲೆಯ ಬಳಿಯ ಪಂದಳಿರ ಪಂದರದಿ
ಸಮೆದ ಬೀಡಾರಕವರಂ ಪುಗಿಸಿ, ಪರಿದರ್
ಮಹರ್ಷಿ ವಿಶ್ವಾಮಿತ್ರನಾಗಮನ ವಾರ್ತೆಯಂ
ರಾಜರ್ಷಿಗರುಹಲ್ಕೆ. ಕೇಳ್ದೊಡನೆ ಬಂದನಾತಂ;
ಪೊಕ್ಕನಾ ಪರ್ಣಕುಟಿಯಂ. ಚಂದ್ರಸೂರ್ಯರ್ವೆರಸಿ
ಗಗನಮಿರ್ಪಂತೆ ಲಕ್ಷ್ಮಣರಾಮರೊಡನಿರ್ದ
ಕೌಶಿಕಂಗೆರಗಿದನ್ : ‘ಧನ್ಯನಾಂ, ಪುಣ್ಯಮಾಯ್ತೀ
ಮಿಥಿಲೆ’. ಸಂಭಾಷಿಸುತ್ತಿರೆ, ನೃಪನ ಕಣ್‌ಪರಮೆ
ರಾಮ ರೂಪದ ಚಾರು ಕುಟ್ಮಲಾಕರ್ಷಣೆಗೆ     ೩೪೦
ಸಿಲ್ಕಿರ್ದುದಂ ಕಂಡು, ನಸುನಗುತೆ ಕುಶಿಕತನಯಂ
ನುಡಿದನಿಂತಾ ಜನಕರಾಜನ ಕಿವಿಗೆ ಜೇನು
ಹೊಯ್ವಂತೆ :
“ಮಹಿಮೆ ಮಹಿಮೆಯ ಕಣ್ಗೆ ಮರೆಯಹುದೆ,
ರಾಜರ್ಷಿ? ಸದೃಶರೊಳ್ ನೆಟ್ಟುದಯ್ ನಿನ್ನ ಚಿತ್ತಂ.
ರಾಮ ಲಕ್ಷ್ಮಣರಿವರ್ ದಶರಥನ ಮಕ್ಕಳ್ ಕಣಾ.”
ಎಂದು ಮೊದಲಾಗವರ ಸಿರಿಮೆಯ್ಮೆಗಳನೊರೆದು
ಮತ್ತೆ “ನೃಪವರ, ಹರನ ಕೋದಂಡಮಂ ತೋರ್ಪ
ನೆವದಿನಿವರಂ ತಂದೆನೀಯೆಡೆಗೆ ತೋರಿಸಾ
ಶಿವಚಾಪಮಂ. ಕಣ್ದಣಿಯೆ ಕಾಣ್ಗೆ. ಮರಳವೇಳ್ಕುಂ
ಬೇಗಮಾ ಕೋಸಲಕೆ. ಕಾತರದಿ ಕಾಯುತಿಹರೈ          ೩೫೦
ತಂದೆ ತಾಯ್ವಿರ್. ದಶರಾತ್ರಿಯವಧಿಯಂ ಪೂಣ್ದು
ಕರೆತಂದೆನಿವರನೆನ್ನಾ ಯಜ್ಞಮಂಗಳಕೆ.”
ಮುನಿವರನ ನುಡಿಗೇಳ್ದನವನಿಪತಿ. ಸುಖರಸಂ
ತೀವಿದಾ ತನ್ನ ಹೃದಯವನೊರೆಯಲಾಶಿಸಿದ
ಜನಕನಿಂಗಿತವರಿತು ಕೌಶಿಕಂ ಕುವರರಿಗೆ
ಸನ್ನೆಗೆಯ್ದನ್, ಬಳಿಯೆ ಕಂಗೊಳಿಸುತಿರ್ದೊಂದು
ನಗುವ ಪೂದೋಂಟಮಂ ತೋರ್ದು. ಕಿವಿಮರೆಯಾಗೆ
ರಾಮ ಲಕ್ಷ್ಮಣರೊರೆದನವನೀಶನಿಂತು ಮನಮಂ:
“ತಿಮಿರದಿ ತೊಳಲ್ವಂಗೆ ತಣ್ಗದಿರನೈತಂದು
ಸೊಡರ್ವಿಡಿದವೋಲಾಯ್ತು ನಿನ್ನ ಬರವಿಂದೆನಗೆ,         ೩೬೦
ಮುನಿವರೇಣ್ಯ. ರಾಮನಂ ಕಂಡೆನಗದೇನಾಯ್ತೊ
ಪೇಳಲರಿಯೆಂ. ಮಲರ್ದ್ದುದು ಬಾಡಿದೊಂದಾಶೆ.
ಯಜ್ಞಾರ್ಥಮೊರ್ಮೆ ನಾಂ ನೆಲನನುಳುತಿರಲಲ್ಲಿ
ಕುಳದ ನೇಗಿಲ್‌ಗೆರೆಯ ಬೈತಲೆಯ ಬಟ್ಟೆಯೊಳ್
ರನ್ನದೊಟ್ಟಿಲೊಳಿರ್ದ ಶಿಶುರತ್ನಮಂ ಕೊಂಡು,
ಪೆಣ್ಗೂಸದಂ ಮಗಳ್‌ಗೆತ್ತು ಸಲಹಿದೆನೊಲಿದು
ಸೀತೆಯೆಂಬಭಿಧಾನಮಂ ಪ್ರೀತಿಯಿಂ ತೊಡಿಸಿ.
ರತಿ ಮನ್ಮಥರ ಮಾತೆಯೆಂಬಂತೆ ಬಳೆದಳು ಕುವರಿ
ಪಾರ್ಥಿವ ಕುಮಾರ ಕಂದರ್ಪರಾ ಕಣ್ಮೀನ್ಗಳಂ
ಸೆಳೆಯುವ ಸರೋವರದ ಚಾರು ನೀರೇಜದೋಲ್.      ೩೭೦
ಪಂತದಿಂ ಪಾಡಿನಿಂದೊಬ್ಬರೊಬ್ಬರ ಕಾಡಿ
ಕರುಬಿಂದೆ ಬಂದರಿಲ್ಲಿಗೆ ಧರಾಪುತ್ರಿಯಂ
ಕೈವಿಡಿಯೆ ಬೇಡಿ, ಮೇಣ್ ಬಲ್‌ಪಡೆಗಳಂ ಕೂಡಿ.
ಏಗೆಯ್ಯಲರಿಯದಾಂ ಹರನನರ್ಚಿಸುತಿರಲ್ :
ಶಿವಕಾರ್ಮುಕವನೆತ್ತಿ ಕೊಪ್ಪಿಗೇರಿಸಿ ನಾರಿಯಂ,
ನಾರಾಚಮಂ ಪೂಡಿ, ಕಿವಿವರೆಗೆ ಸೆಳೆದೆಸುವ
ವೀರಂಗೆ ನೀರೆಯಂ ಧಾರೆಯೆರೆಯೆಂದೊರೆದುದೈ
ವಾಣಿ. ಬಂದರಸರ್ಗೆ ದೇವವಾಣಿಯನರುಹಿ
ವೀರಶುಲ್ಕೆಯನಾಗಿ ಸಾರಿದೆನಯೋನಿಜಾ
ಕನ್ಯೆಯಂ. ವಜ್ರದುರ್ಕ್ಕಿನ ಮೇರುಭಾರದಾ     ೩೮೦
ರುದ್ರ ಕೋದಂಡಮಂ, ಗುರುವೆ, ನಾನಿನ್ನೆಗಂ
ಕಾಣೆನಲುಗಾಡಿಸಿದ ಸಾಹಸಿಗರಂ, ಕೇಳಾ
ವೀರನೊರ್ವಂ ವಿನಾ ! ಲಂಕಾಪುರವನಾಳ್ವನಾ
ದಶಶಿರ ಬಿರುದುವೊತ್ತಂ, ರಾವಣನಿದಂ ಕೇಳ್ದು
ಬಂದನಿಲ್ಲಿಗೆ ಪುಷ್ಪಕಾರೂಢನಾಗಿ, ಕೇಳ್,
ಗೆಲ್ದು ಸೀತೆಯನುಯ್ವ ಕಳ್ಗೆ ಮಿದುಳಂ ಮಾರಿ.
ರುಂದ್ರ ರಾಕ್ಷಸ ಮೂರ್ತಿಯಂ ಕಂಡು ಗೋಳಿಟ್ಟಳಯ್
ಸೀತೆ, ರೋದಿಸಿತಖಿಲ ಮಿಥಿಲೆಯುಂ, ಕೋಮಳೆಗೆ
ಬೇಡುತೆ ಮಹಾದೇವನಂ. ಪರಶಿವನ ಕೃಪೆ ಕಣಾ !
ಪರ್ವತೋಪಮ ಕರ್ಬುರಂ ದಿಗ್ಗಜದ ಮಾಳ್ಕೆಯಿಂ       ೩೯೦
ನೆಲಂ ನಡುಗೆ ಜಗ್ಗಜಗ್ಗನೆ ನಡೆದು, ಕೈತುಡುಕಿ
ನೆಗಹಿದನ್ ಹರಧನುವನಸು ಗದ್ಗದಿಸೆ ಜಗಕೆ.
ಗೊಲೆಗೆ ಹೆದೆಯೇರುತಿರೆ, ಸೀತೆಯ ಸುಕೃತವಲಾ,
ಚಾಪ ಭಾರಕೆ ಕರಂ ತತ್ತರಿಸಿ, ತನು ಬೆವರಿ,
ಚಿತ್ತ ಪಲ್ಲಟವಾಗಿ, ಕೈಲಾಸಮಂ ಪಿಡಿದು
ತೊನೆದ ದೈತ್ಯಂ ಕುಸಿದು ಬಿದ್ದನು, ಪರ್ವತಾಗ್ರಂ
ಪ್ರಳಯದಶನಿಗೆ ಕೆಡೆದು ಬೀಳ್ವಂತೆ ! ಲಂಕೇಶ್ವರಂ
ತನ್ನ ಬಿಂಕದ ಭಂಗಕುರೆ ಮುಳಿದು ಪಿಂತಿರುಗಿದನ್,
ಮತ್ತೆ ತಪದಿಂ ಬಲ್ಮೆಯಂ ಪಡೆದು ಬಹೆನೆಂಬ
ಕಡು ಸೂರುಳಂ ಗುಡುಗುಡಿಸಿ ಪೂಣ್ದು. ಗುರುವೆ, ಕೇಳ್,            ೪೦೦
ದಶಕಂಠನತಿದೃಢ ಮನಸ್ಕನಯ್. ಇನ್ನೊಮ್ಮೆ ಆ
ರಕ್ಕಸಂ ಬರ್ಪ ಮುನ್ನಮೆ ಮನುಜವೀರಂಗೆ ನಾಂ
ಕುವರಿಯಂ ಕೊಡುವ ಕಾತರ ಮನದಿ ಕುದಿಯುತಿರ್ಪೆಂ.”
ಅತ್ತಲಾ ಪೂದೋಂಟದೊಳ್ ಮದನನೊಡಗೂಡಿ
ಮಧುನೃಪಂ ವಿಧಿವಿಲಾಸಕೆ ತನ್ನ ಕೈಂಕರ್ಯಮಂ
ಸಲ್ಲಿಸುವ ಸಿರಿಗಜ್ಜದೊಳ್ ತೊಡಗಿ, ನೋಟದಿಂ
ನೋಟಕ್ಕೆ ನಡೆದು, ಸಿಂಗರಿಸಿದನು ಬೇಟಮಂ
ಪೊತ್ತಿಸುವ ಸಿರಿಯ ರಾಗಂಗಳಿಂ ಗಂಧಂಗಳಿಂ,
ಮಿರುಮಿರುಗಿ ಮೆರೆವವೊಲ್, ಕರೆವವೊಲ್, ತರತರದ
ಪೂವೆಲೆಗಳಂ. ಬಂದಳಲ್ಲಿಗೆ ಸೀತೆ, ತಂಗೆಯರ್          ೪೧೦
ಊರ್ಮಿಳಾ ಮಾಂಡವಿ ಶ್ರುತಕೀರ್ತಿಯರ್‌ವೆರಸಿ,
ಗಿಳಿವಿಂಡನಣಕಿಸುವವೋಲ್, ಬಣ್ಣದೆಲೆಗಳುಂ
ಪೂಗಳುಂ ನಾಣ್ಚಿ ತಲೆಬಾಗುವೋಲ್. ಕಾಲಪುರುಷಂ
ರೋಮ ಹರ್ಷಿತನಾಗುವಂತೆ ಮೈಥಿಲಿ ನಿಂದು
ನೋಡಿದಳ್, ಮಲ್ಲಿಗೆಯ ಹೊದರ ಮರೆಯಿಂ, ಕೊಳನ
ತಿಳಿನೀರ್ಗೆ ಕಲ್ಲೆಸೆಯುವಾಟದಲಿ ಲಕ್ಷ್ಮಣನ
ಕೆಲನಿರ್ದ ರಾಮ ಮೋಹಕ ಮೂರ್ತಿಯಂ. ಮೊಗಂ
ಬೆಟ್ಟದಾವರೆಗೆ ಬೈಗಾದವೋಲೋಕುಳಿಯ
ರಾಗಮಂ ತಳೆದುದಾಕೆಯ ಮನೋರಾಗಮಂ
ಪ್ರತಿಬಿಂಬಿಪೋಲ್. ನಿತ್ಯಮುಂ ತನಗೆ ಕನಸಿನೊಳ್     ೪೨೦
ಕಾಣುತಿರ್ದಾ ನೀಲದೇಹನಂ ವಿಸ್ಮಯದಿ
ನೋಡಿದಳ್, ಕಣ್‌ಸಿಲ್ಕಿ, ಪೆಸರರಿಯದಜ್ಞಾತನಂ,
ರೂಪವಾರಾಶಿಯಿಂದೆದ್ದ ರವಿಮದನನೊಲ್
ರಮಣೀಯನಂ. ಜನಕನೌರಸ ಕುಮಾರ್ತೆಯರ್
ಕಾರಣವನರಿಯಲೆಳಸಲ್, ಸೀತೆ ನಿಡುಸುಯ್ದು,
ಕಡುಸೇದೆಯಿಂದಲ್ಲಿ ನಿಲ್ಲಲಾರದೆ ತಿರುಗಿ
ನಡೆದಳರಮನೆಗೆ. ಊರ್ಮಿಳೆ ಕಣ್ಣನೊರಸಿದಳ್.
ಅಕ್ಕರೆಗೆ ತಬ್ಬಿ ತನ್ನಕ್ಕನಂ, ಪೇಳಕ್ಕ ಪೇಳ್,
ದುಗುಡಮೇಕೆಂದಳುತೆ ಕೇಳಲ್ಕೆ, ಇಂತೊರೆದಳಾ
ವೈದೇಹಿ ತನ್ನಾತ್ಮಮಂ :
“ತಂಗೆ, ನಾನಿನ್ನೆಗಂ         ೪೩೦
ಪೇಳ್ದೆನಿಲ್ಲೊಂದಾತ್ಮವಿಷಯಮಂ. ಬಾಲ್ಯದಿಂ ಕೇಳ್,
ನನಗರ್ಥವಾಗದೊಂದನುಭವಂ ತಾಂ ನಿಚ್ಚಮುಂ
ಬಂದೆನ್ನನೊಳಕೊಳ್ವುದವ್ : ಗಗನ ಮಂಡಲಮೆ
ಬಂದೆನ್ನ ಮೆಯ್ಯಪ್ಪುತೆರ್ದೆಯೊಳಗೆ ಸೇರ್ವಂತೆ;
ಕಡಲುಕ್ಕಿ ಮೇರೆ ಮೀರುತೆ ಪಾಯ್ದು ಮುಳುಗಿಸಲ್
ನಾನೆ ಕಡಲೊಡತಿಯಪ್ಪಂತೆ; ಪೃಥಿವಿಯೆ ಕರಗಿ
ಪೆಣ್ ಪಸುಳೆಯಾಗುತೆನ್ನಯ ತೊಡೆಯ ತೊಟ್ಟಿಲೊಳ್
ನಲಿವಂತೆ; ತೊರೆ ಬನಂ ಭೂಮಿ ಬಾನ್ ಗಿರಿಪಂಕ್ತಿ
ಪಗಲಿಗುಳ್ ಚುಕ್ಕಿ ತಿಂಗಳ್ ನೇಸರೆಲ್ಲಮುಂ
ಮೆಯ್ಯಾಗುತಾಂ ತ್ರೈಭುವನ ಲಕ್ಷ್ಮಿಯಪ್ಪಂತೆ. ೪೪೦
ಬೆದರಿದೆನ್ ಮೊದಮೊದಲ್. ಪೇಳಲೆಂದೆಳಸಿದರೆ
ತೊದಲಾಯ್ತು. ಮೂಗಿ ಕಂಡದ್ಭುತದವೋಲಾಯ್ತು
ಕೇಳನುಭವಂ! ಲಂಕೆಯಧಿಪತಿ ದಶಾನನಂ
ನಮ್ಮಯ್ಯನೆಡೆಗೆ ಹರಚಾಪಮಂ ಮುರಿಯಲ್ಕೆ
ಬಂದ ದುರ್ದಿನದಂದು ರಾತ್ರಿ, ಶಶಿಮೌಳಿಯಂ
ಕಣ್ಣೀರ್ಗಳಭಿಷೇಕದಿಂದೆ ಜಾನಿಪವೊಳ್ತು,
ಮತ್ತೊಮ್ಮೆ ತನಗಾದುದನುಭವಂ, ಏನೆಂಬೆನಾ
ತಿರೆ ಕಡಲ್ ಚುಕ್ಕಿ ಬಾನುಗಳೆಲ್ಲವೊಂದಾಗಿ
ನನ್ನ ಮೆಯ್ಗವತರಿಸಿದೋಲ್. ಪ್ರಜ್ಞೆ ನಿದ್ರಿಸಿರೆ;
ನಿಃಸಂಜ್ಞಳಾದೆನಗೆ ಕಣಸಾದುದಾ ದರ್ಶನದಿ  ೪೫೦
ಮೈದೋರ್ದುದೀ ಸರ್ವ ಲೋಕ ರಮಣೀಯತಾ
ನೀಲ ಮೇಘ ಶ್ಯಾಮಮೂರ್ತಿ. ಆ ರಾತ್ರಿಯಿಂ
ದಿನದಿನಂ ಸ್ವಪ್ನದೊಳ್ ಗೋಚರಿಸಿತಾ ವಿಗ್ರಹಂ,
ಗುರುತಿಸಿದೆನಾ ರೂಪಮಂ ನಮ್ಮ ಪೂದೋಂಟದೊಳ್
ಕೊಳನ ತಡಿಯೊಳ್ ನಿಂದ ಗಗನೋಪಮಾಂಗದಾ
ನೀಲ ಕಾಂತಿಯ ತರುಣ ವಿಗ್ರಹದಿ.”
ಮಿಥಿಳೇಂದ್ರ
ಧರಣಿಸಂಭೂತೆ ಊರ್ಮಿಳೆಯೊಡನೆ ಮಾತಾಡಿ
ಮುಗಿವನಿತರೊಳ್ ಕೆಳದಿಯರ್ ಬಂದರೋಡೋಡಿ;
ತಂದರಿಂಪಿನ ವಾರ್ತೆಯಂ : “ಅಕ್ಕ, ನೀನಲ್ಲಿ
ಕಂಡವಗೆ ರಾಮನೆಂಬಭಿಧಾನಮಿಹುದಂತೆ !”            ೪೬೦
“ರವಿಕುಲದರಸು ದೇವ ದಶರಥ ಪುತ್ರನಂತೆ !”
“ತಾನಯೋಧ್ಯೆಗೆ ಸ್ವಾಮಿಯಹನಂತೆ !” “ಬಿಲ್ಮುರಿಯೆ,
ನಿನಗವನಿನಿಯನಂತೆ!” “ಬಲ ಪರೀಕ್ಷೆಗೆ ನಾಳೆ
ದಿನವಂತೆ !” “ಏಳಕ್ಕ ! ಬಾರಕ್ಕ ಬಿಲ್ ಮುರಿವವೋಲ್
ಪಾರ್ವತಿಯನಾರಾಧಿಪಂ!” “ದಿಟಂ ಶಿವನ ಸೋಲ್!”
ಹರ ಶರಾಸನವಂತೆ ! ತೆಗೆ, ಪರೀಕ್ಷೆಯದೇಕೆ
ತಾನೊಲಿದ ನಲ್ಲಂಗೆ? ಜಗದೇಕವೀರಂಗೆ
ಪದ್ಧತಿಯ ಪಾಳ್ ತೊಡರುಮೆಡರೇಕೆ? ತುಕ್ಕಡರಿ
ಮುರಿಯಲಾ ರುದ್ರಚಾಪಂ ! – ಎನುತೆ ಸೀತಾಕನ್ಯೆ
ಮನದಿ ನೆನೆದಳೊ, ಮರೆತು ತನ್ನನಂದಿನವರೆಗೆ          ೪೭೦
ಬೇರೆ ಬಣಗರಸರಿಂ ಮತ್ತೆ ಲಂಕೇಶನಿಂ
ದಶರಥ ತನುಜಗಾಗಿ ಕಾಯ್ದಿತ್ತದೆಂಬುದಂ.
ಹಿಂದೆ ರಾವಣನಂದು ಬಂದಾಗಳ್ ‘ಓ ಧನುವೆ,
ಕಾಪಾಡು ಬಾಲೆಯಂ; ಕೈಮುಗಿವೆ ಕಾಲ್ಗೆರಗಿ;
ಮುರಿಯದಿರ್; ಬಾಗದಿರ್; ಸುರಮೇರು ಭಾರದಿಂ
ದೈತ್ಯನೆತ್ತದ ತೆರದಿ ಭಾರಗೊಂಡಬಲೆಯಂ
ಪೊರೆ’ – ಎಂದೆರೆವ ತರುಣಿ ತಾನಿಂದು – ‘ಹಗುರಾಗು
ಗರಿಯಂತೆ; ಬಾಗು ಬಳ್ಳಿಯ ತೆರದಿ; ರಾಮಂಗೆ
ಮುರಿದು ಬೀಳ್, ಓ ಧನುವೆ !’ ಎಂದು ಪರಿಪರಿಯಿಂದೆ
ಬಿನ್ನಹಂಗೈದಳೆನೆ, ನಿಂದಾ ಸ್ತುತಿಗಳೆಲ್ಲಮಾ   ೪೮೦
ಸಮಯವರ್ತಿಗಳಲ್ತೆ? ರಾಮನ ಬಲಕೆ ತನ್ನ
ಪ್ರೇಮದ ಬಲವನೀಯಲೆಂದು ನೋಂಪಿಯ ನೋಂತು
ಹೃತ್‌ಪದ್ಮದಿಂದೆ ಭೂಜಾತೆ ಗಿರಿಜೇಶನಂ
ಪೂಜಿಸಿದಳಾ ರಾತ್ರಿ, ನಿದ್ದೆ ನೈವೇದ್ಯಮಂ
ನೀಡಿ.
ತಳಿರಿದುದು ಮಂಬೆಳಗಿಂದ್ರದಿಕ್ತಟದಿ.
ನೆರೆದುದು ಜನಂ ಜನ್ನಸಾಲೆಯಲಿ. ತಿಮಿರಾರಿ
ಮೈದೋರಿದನು, ತನ್ನ ಸಂತಾನದೇಳಿಗೆಗೆ
ಕಾರಣಂ ತಾನಪ್ಪ ಸಾಹಸವನೀಕ್ಷಿಸುವ
ವಾತ್ಸಲ್ಯದುದ್ವೇಗದಿಂದರುಣಮುಖಿಯಾಗಿ,
ಮೂಡುವೆಟ್ಟಿನ ಮುಡಿಯ ಕೋಡಿನಲಿ. ಬಹುಮಂದಿ      ೪೯೦
ಬಲಶಾಲಿಗಳ್ ತಿಣಿಕಿ ತಂದಿಟ್ಟ ಕಾರ್ಮುಕದ
ಭೀಮ ಭೀಷ್ಮತೆಯುಜ್ವಲಿಸಿದತ್ತು ರೌದ್ರಮಾ
ತರುಣ ನವ ತರಣಿಯ ಕಿರಣದರುಣದಾತಪದಿ.
ನೆರೆದ ಮಹಿಳಾ ಜನದ ಮಧ್ಯೆ ತರುಣಿಯರೊಡನೆ
ಚಿತ್ತದುದ್ವೇಗ ಶೂಲದ ಮೇಲೆಯೆಂಬಂತೆ
ಕುಳಿತಿರ್ದ ಧರಣಿಜೆಗೆ ಗದಗದಿಸಿತೆದೆ, ತನ್ನ
ಮನದನ್ನ ರಾಘವನ ವಿಜಯ ವಿಷಯದಿ ಶಂಕೆ
ಭರವಸೆಗಳುಯ್ಯಾಲೆಯಂ ತೂಗಿ. ನೋಡುತಿರೆ,
ಕೌಶಿಕನ ಪಾರ್ಶ್ವದಿಂದೆದ್ದನು ರಘೂದ್ವಹಂ,
ಮಖಧೂಮ ಮುಖದಿಂ ಶಿಖಿಜ್ವಾಲೆಯೇಳ್ವವೋಲ್.      ೫೦೦
ನಯನಾಭಿರಾಮನಂ ಕಂಡೊಡನೆ ಘೇ ಉಘೇ
ಉಲಿದು ಕೈಪರೆಯಿಕ್ಕಿತಯ್ ಜನಂ. ತುಂಬುಹೊಳೆ
ಮರವಿಡಿದು ಕಾಡಾದ ದಡಗಳೆರಡರ ನಡುವೆ
ಮುಂಬರಿಯುವಂತೆ, ನಡೆದನು ರಾಮನಿಂಬಾದ
ಗಾಂಭೀರ್ಯದಿಂ, ಹರಧುನುವಿನೆಡೆಗೆ. ಮರುಗಿದುದು
ಸೌಮ್ಯನಂ ಕಂಡು ಮುದುಕರ ಮನಂ; ತಾಯ್ವಿರ್ಗೆ
ಕರಿಗಿದತ್ತೆರ್ದೆ : ಚಂದ್ರಚೂಡ ಕೋದಂಡದೆಡೆಯೊಳ್
ಲಲಿತ ರಾಮನ ಬಾಲ ಮೂರ್ತಿಯಂ ನೋಡಿ ‘ಹಾ !
ಧನುವೆಲ್ಲಿ ? ಶಿಶುವೆಲ್ಲಿ ? ಸಿಡಿಲೆತ್ತ ? ಹೂವೆತ್ತ ?
ಕಾಳಾಹಿಯಂ ಹರಿಣಶಿಶು ತಿವಿದು ಕೋಡಿಂದೆ ತಾಂ     ೫೧೦
ಕೊಲಲಹುದೆ ? ಗೆಲಲಹುದೆ ? ಬರ್ದುಕುವುದೆ ? ಹಾ’ ಎಂಬ
ಲಲನೆಯರ ಹೆಂಗರುಳ್ ಕುದಿಯೆ, ಹೋಹಾತನಂ
ಕಂಗಳಿಂದಪ್ಪಿದರೊ, ಸೊಬಗನಾಲಿಂಗಿಪೋಲ್, ಮೇಣ್
ಅಶುಭಮಂ ಪರಿಹರಿಪವೋಲ್ ! ಭೈರವ ಮುಹೂರ್ತಮಂ
ಸರ್ವೇಂದ್ರಿಯಂಗಳಿಂ ಚಿತ್ತದಿಂದಾತ್ಮದಿಂ
ಸಂವೀಕ್ಷಣಂಗೈದು ನೆರೆದಿರ್ದ ಪರಿಷತ್ತು
ನಿಶ್ಶಬ್ದತೆಯ ಕಡಲೊಳಳ್ದತ್ತು, ಬಣ್ಣದೊಳ್
ಕೆತ್ತಿ ಬರೆದಂತೆ. ಶಾಂತಿಸ್ಥೈರ್ಯಧೈರ್ಯನಿಧಿ ತಾಂ
ಶ್ರೀರಾಮನಾ ಧನುವಿನೆಡೆ ನಿಂತದರ ಮಹಾ
ಗಾತ್ರಮಂ ದೃಷ್ಟಿಸಿದನಾಪಾದಮಸ್ತಕಂ,        ೫೨೦
ತನ್ನಳವನದರ ಬಲ್ಮೆಗೆ ತೂಗಿ ನೋಳ್ಪಂತೆ.
ಕಿರುನಗೆಯ ಮಲರ ಸುಳಿವೊಂದರಳುತಿರೆ ಮೊಗದಿ,
ತಿರುಗಿ, ದಿಟ್ಟಿಯನಟ್ಟಿ, ನೆರೆದ ಸಭೆಯಂ ಕುರಿತು
ಕೈಮುಗಿದನೊರ್ಮೆ. ಮನದೊಳೆ ಮಣಿದು ಗುರುಜನಕೆ
ಕೈಮುಗಿದನಿರ್ಮೆ. ಶಂಕರ ಚರಣ ಪಂಕಜಕೆ
ಬಗೆಯ ಪೂಜೆಯ ಸಲಿಸುತಕ್ಷಿಪಕ್ಷಿಯನಟ್ಟಿ
ಪೀತಾಂಬರವನುಟ್ಟ ಲಲಿತಾಂಗಿಯರ ಮಧ್ಯೆ
ತರತರದ ರನ್ನದೊಡಮೆಯ ಪೊಗರನೇಳಿಸುತೆ,
ಹಸುರು ಕಾಡಿನೊಳಸುಗೆ ಹೂವಂತೆಸೆಯುತಿರ್ದಾ
ತನ್ನ ಮೀನಾಕ್ಷಿಯಂ ಮೈಥಿಲಿಯನೊಯ್ಯನೆಯೆ           ೫೩೦
ಕೋಮಳ ಕಟಾಕ್ಷದಿಂದೀಕ್ಷಿಸಿ, ಶರಾಸನಕೆ
ತಿರುಗಿದನ್ ಮತ್ತೆ. ಬಿಲ್ಲಿಗೆ ಬಾಗಿ, ಹಣೆಚಾಚಿ
ನಮಿಸಿ, ನಿಮಿರ್ದನ್ ಪ್ರಾಣಮಯನಾಗಿ.
ಪೇಳಲೇಂ ?
ರವಿಕುಲನ್ ಮಣಿದೇಳುತಿರೆಯಿರೆ ಹಠಾತ್ತನೆಯೆ
ರಾರಾಜಿಸಿತು ಜಾನಕಿಯ ಕಣ್ಗೆ ಶಿವಮೂರ್ತಿ ತಾಂ
ಕೋದಂಡದಿಂ ಮೂಡಿ ಮೈದೋರಿ ! ಶಶಿಧರಂ,
ಫಣಿಭೂಷಣಂ, ದೇವ ಗಂಗೋತ್ತಮಾಂಗಂ,
ಪಿಂಗಲ ಜಟಾಜೂಟ ಕೂಟಂ ತ್ರೆಣೇತ್ರಂ,
ವಿಭೂತಿ ಶೋಭಿತ ಕಳೇಬರನ್, ಇಭ ದುಕೂಲಾಂಗಿ,
ಶಂಕರ ಭಯಂಕರ ಪಿನಾಕಿ, ಕೇಳ್, ಕರವೆತ್ತಿ   ೫೪೦
ಪರಸುತಿಕ್ಷ್ಯಾಕು ಕುಲ ಸಂಜಾತನಂ, ಕಾರ್ಮಿಂಚು
ಮೋಡದೊಳಡಗುವಂತೆ ಮರೆಯಾದನೊರ್ಮೊದಲೆ
ಚಾಪ ಮಧ್ಯದೊಳೈಕ್ಯಮಾಗಿ :
ಐರಾವತಂ
ದೇವೇಂದ್ರನಂ ಪೊತ್ತು ದಿಕ್ಪಾಲ ಪುರಗಳಿಗೆ,
ಮತ್ತೆ ವೈಕುಂಠಕ್ಕೆ ಮತ್ತೆ ಕೈಲಾಸಕ್ಕೆ,
ಸತ್ಯಲೋಕಕೆ, ಮತ್ತೆ ತೆರಳುತಲ್ಲಿಂ ಮರಳಿ
ಬರ್ಪುದಮರಾವತಿಗೆ, ಸುರವಾದ್ಯ ನಿಸ್ವನಕೆ
ಬಿಂಕದಿಂ ಬೀಗಿ : ಬೀಳ್ಕೊಳುತ್ತಿರಲಿಂದ್ರನಂ
ವರುಣಂ ಸ್ವಹಸ್ತದಿಂದಮೆ ತನ್ನ ಮೈಮೇಲೆ
ಕೈಯನಾಡಿದನಲ್ತೆ? ಅಗ್ನಿ ನೀಡಿದನಲ್ತೆ
ತನ್ನಂಗಳದ ಮರದ ಮಾಂದಳಿರ ಚೆಂದೊಂಗಲಂ ?
ಮೇಣಾ ಕುಬೇರನುಂ ಸೊಂಡಿಲ್ಗಳಂ ನೀವಿ
ಸೋಂಕಿಗೆ ಸೊಗಂಬಡೆದನಲ್ತೆ ? ಮಾಹೇಶ್ವರಂ
ಬೆಳ್ಳಿಬೆಟ್ಟದ ತಳ್ಪಲೆಳೆವುಲ್ಲನೆಳೆದಿತ್ತು
ರತ್ನಖಚಿತಂ ದೀರ್ಘದಂತಂಗಳೆರಡುಮಂ
ಬಣ್ಣಿಸಿದನಲ್ತೆ ? ತನಗಾರು ಹೊಯಿಕಯ್ಯೆಂದು,
ಬೇರೆಬೇರೆಯ ಲೋಕದಾಹಾರಮಂ ಸವಿದ
ತೃಪ್ತಿಗೆ ಮನಂ ಮಿಕ್ಕು, ಶಚೀದೇವಿಯರಮನೆಯ
ಮರಕತದ್ವಾರದೆಡೆ ಸಗ್ಗದೊಡೆಯನನಿಳಿಸಿ,
ಕನಕ ಶೃಂಖಲೆಯಿಂ ಬಿಡುತೆಗೊಂಡು, ಸ್ವೇಚ್ಛೆಯಿಂ      ೫೬೦
ಪರಿತಂದು, ರತ್ನಧೂಳಿಯ ಮಳಲ ಪಾತ್ರದೊಳ್
ಪ್ರವಹಿಸುವಮರನದೀ ದುಗ್ಧ ತೀರ್ಥದೊಳೊಡನೆ
ದುಮ್ಮಿಕ್ಕುವುದು, ಸುಧೆಯ ತೆರೆ ದಡಕ್ಕವ್ವಳಿಸಿ
ಮೊರೆಯೆ. ಆ ಪಾಲ್ಗಲ್ಲ ಪೆರ್ಬಂಡೆ ಪಾಲ್ವೊಳೆಯ
ಮಿಂದು, ನಂದನ ವನದ ಕಲ್ಪದ್ರುಮಕೆ ನಡೆದು
ಬಂದು, ಮೆಯ್ ತಿಕ್ಕುವುದು ಕ್ರೀಡಾ ವಿನೋದದಿಂ.
ದೈತ್ಯಾಕೃತಿಯ ದೇವತರು ಬೃಹನ್ಮಸ್ತಕಂ
ಶಾಖೋಪಶಾಖಾ ಪ್ರಸಾರ ವಿನ್ಯಾಸದಿಂ
ತೂಗಿ ತೊನೆದಪುದೆಡಕೆ ಬಲಕೆ, ಚೀರ್ವುದು ದಿವಿಜ
ಖಗವೃಂದಮಿಂದ್ರನಾನೆಯ ಘೀಂಕೃತಿಯ ರವಕೆ         ೫೭೦
ಬೆರ್ಚಿ ಗಾರಾಗಿ. ಹೆಬ್ಬಳ್ಳಿ ಹಂಬುವ ತೆರದಿ
ಹೆಮ್ಮರನ ಮೆಯ್ಗೆ, ಕಲ್ಪದ್ರುಮದ ಗಾತ್ರಮಂ
ತನ್ನ ನೀಳ್ದೀರೈದು ಸೊಂಡಿಲ್ಗಳಿಂ ಸುತ್ತಿ,
ಕ್ಷೀರ ಫೇನ ಶ್ವೇತ ಗೀರ್ವಾಣ ವಾರಣಂ
ಮತ್ತ ವೈಖರಿಯಿಂದೆ ಜರ್ಗ್ಗಿಸೆಳೆವುದು, ಮರಂ
ಬಳ್ಳಿಯಾಗುತೆ ಬಳ್ಕುವಂತೆ !
ರಘುಕುಲ ಖಮಣಿ
ಬಿಳಿಯಾನೆ ಸೊಂಡಿಲಂದದ ನೀಳ ತೋಳಿಂದೆ
ತುಡುಕಿದನು ಕಲ್ಪಭೂರುಹ ಸದೃಶ ಚಾಪಮಂ
ಸೀತಾಫಲದ ಬಯಕೆಯಿಂದೆ. ಬಾಗಿದುದ್ ಬಿಲ್,
ಹಂಬಿನೋಲ್. ಹೆದೆ ಏರಿದುದು. ಪೂಡಿ ಬಾಣಮಂ       ೫೮೦
ಸೆಳೆಯುತಿರೆ ಕಿವಿಯನ್ನೆಗಂ, ಕರ್ಬು ಮುರಿವಂತೆ
ಮುರಿದುದಾ ಹರನ ಧನು ತಾಂ ಸಿಡಿಲ ಸದ್ದೊದರಿ.
ಜಾನಕಿಯ ಸುಖದಕ್ಷಿಯಿಂದಿಕ್ಷುರಸಧಾರೆ
ಸೋರ್ದುದಯ್. ಹರ್ಷವೀಚಿಗಳವ್ವಳಿಸಿದವೋಲ್
ಘೋಷಿಸಿತು ಘೇ ರವದೊಳಾ ನೆರೆದ ನರಶರಧಿ.
ಬಿಡದೆ ಪೂವಳೆ ಬಿಳ್ದುದಾಲಿಕಲ್ ಕರೆವಂತೆ,
ತರತರದ ಪರಿಮಳದ ಮೇಣ್ ವಿವಿಧ ವರ್ಣದಾ
ವರ್ಷ ಶೈಲಿಯಲಿ ! ಹರ್ಷಾಶ್ರು ಸುರಿಯುತಿರೆ, ಜನಕಂ
ತಡೆಯಲಾರದೆ ತುಂಬಿ ತುಳುಕುವ ಮಧುರ ಸುಖಕೆ
ಋಷಿಪದಕೆ ಮಣಿದನಯ್, ಕೃತಜ್ಞತಾಭಾರದಿಂ           ೫೯೦
ಬಾಗಿ. ಹುಟ್ಟಿಯನುಳಿದ ಹೆಜ್ಜೇನ ಹುಳುಹಿಂಡು
ದಟ್ಟಯಿಸಿ ಮೊರೆವಂತಿರಿರ್ದ ಜನ ಸಂದಣಿಯ
ನಡುವೆ ನಡೆದಪ್ಪಿದನು ರಘುಕುಲೋದ್ದೀಪನಂ,
ತನ್ನಿಷ್ಟದೇವತೆಯನಾಲಿಂಗಿಪಂತೆವೋಲ್.
ಅನಿತರೊಳ್, ಸಂಭ್ರಮಿತ ಸಖಿಯರ ನಡುವೆ, ಸೀತೆ ತಾಂ
ಕರದೊಳ್ ವಿಜಯಮಾಲೆಯಂ ಪಿಡಿದು, ಮೋಹಿನಿಯೊ
ತ್ರೈಭುವನ ರತಿಯೊ ವೈಯಾರ ಸುಂದರಿಯೊ ಮೇಣ್
ತುಹಿನ ಗಿರಿಶಿವ ಶಿರದ ಮಾನಸ ಸರೋವರದಿ
ಸಂಭವಿಸಿ ವನದೇವಿಯರ ಸೇವೆಯೊಳ್ ಸಂದು
ಮುಂಬರಿದು ಸಾಗರನನಪ್ಪುವಾ ತವಕದಿಂ    ೬೦೦
ಪ್ರವಹಿಪಾ ಜಾಹ್ನವಿಯ ಹೊನಲೊ ಹೇಳೆಂಬಿನಂ
ಹರಿದು ಬಂದಳು ರಾಮ ಮನ್ಮಥ ಶರಧಿತಟಿಗೆ.
ಪೊಣ್ಮುತಿರೆ ಸುಖರಸದ ಮಧುರ ಮಂಗಳ ಗೀತೆ
ವಾದ್ಯ ವೈವಿಧ್ಯ ವಿದ್ಯಾಶ್ರುತಿಯ ನಣ್ಪಿಂದೆ,
ರಾಮಂಗೆ ಮಾಲೆಸೂಡಿದಳೊ ಸೀತಾಕನ್ಯೆ,
ಭೂರಮೆ ಸಮುದ್ರಂಗೆ ಬೆಳ್ಪೆರೆಗಳಂ ಕೋದು
ಪೂದಂಡೆವೋಲ್ ಗೈದ ಬಾನ್ದೊರೆಯ ದಾಮಮಂ
ಹಾಯ್ಕಿದಳೆನಲ್ಕೆ !
ವಿಶ್ವಾಮಿತ್ರ ಮುನಿವರಂ
ಸಮ್ಮತಿಸೆ, ಮಿಥಿಳೇಂದ್ರನಾಜ್ಞೆಯಂತಾಳುಗಲ್
ಸಾಕೇತಪುರಿಗೆಯ್ದಿದರ್, ಮೂರಿರುಳ್ ಮೂರ್ಪಗಲ್     ೬೧೦
ನಿಲ್ಲದೆ ಪಯಣಗೈದು. ಸುತರಾಗಮನ ಚಿಂತೆ
ಮಸಗಿರ್ದ ದಶರಥಗೆ ಬಿನ್ನೈಸಿದರ್ ಶುಭದ
ವಾರ್ತೆಯಂ. ಕಡಲುಕ್ಕುವಂತುಕ್ಕಿತು ಅಯೋಧ್ಯೆ.
ಸಂತಸಕೆ ತಡಿಯಿಲ್ಲದಾದಳಾ ಕೌಸಲ್ಯೆ
ಮಗನಭ್ಯುದಯಕೆ : ನೆನೆದಳು ಬಗೆಯಲಂಪೇರೆ
ಚೆಲ್ವಿನೊಲ್ವಿನ ಸೊಸೆಯ ಗುಣಶೀಲರೂಪಮಂ,
ಮಗನ ಮಂಗಳ ಮೂರ್ತಿಯೆಡೆಯಲ್ಲಿ ! ಪಡೆವೆರಸಿ,
ಪರಿವಾರದೊಡನೆ, ಮಕ್ಕಳ್ ಕೂಡಿ ಮಹಿಷಿಯರ್
ಗುರು ಮಂತ್ರಿ ಬಂಧು ಬಾಂಧವ ಮುಖ್ಯಪೌರರುಂ
ಬರಲೊಡನೆ, ದಶರಥಂ ತಾನೆಯ್ದಿದನು ಮಿಥಿಳೆಯಂ   ೬೨೦
ನಾಲ್ಮೆ ದಿನಮಣಿ ಮುಳುಗುವನಿತರಲಿ. ಬೀಗರಂ
ವಿಭವದೊಳಿದಿರ್ಗೊಂಡು ಸಂಭ್ರಮಿಸಿತಯ್ ಮಿಥಿಳೆ.
ನಿಮಿವಂಶಜರ ಕೂಡೆ ಕೊಳುಕೊಡೆ ರವಿಕುಲರ್ಗೆ
ಪಣೆಗೆ ತಿಲಕಂ ಬಂದ ತೆರನಾದುದೆಂಬಂತೆ
ಸಮನಿಸಿತು ಮದುವೆ ಸೀತಾರಾಮರಿಗೆ. ಭೂಮಿ
ನಲಿದತ್ತು. ಸೊಗಸಿದುದು ದೇಶದೇಶದ ಜನಂ,
ಸಂಭ್ರಮಕೆ ಸಂಭ್ರಮವೆ ಸಂಘಟಿಸಿತೆಂಬಂತೆ,
ಕಲ್‌ಸಕ್ಕರೆಗೆ ಜೇನು ಸೋರ್ದಂತೆ. ನೆಲದೆರೆಯ
ಜನಕರಾಜನ ಹೃದಯದಿಂಗಿತಕೆ ಮನಮೊಪ್ಪಿ
ಸೌಮಿತ್ರಿಯೂರ್ಮಿಳೆಯನೊಪ್ಪಿದನ್, ಹೂಗೆಲಸಿ         ೬೩೦
ಸುಗ್ಗಿಮೊಗ್ಗನ್ನಪ್ಪುವಂತೆ. ಶತ್ರುಘ್ನಂಗೆ, ಕೇಳ್,
ಶ್ರುತಕೀರ್ತಿ ತಾನಾದಳೊಲ್ಮೆವೆಂಡಿತಿ. ಕೈಕೆ ತಾಂ
ಮಾಂಡವಿಯನೆರ್ದೆಯನ್ನಳಂ ಪಡೆದಳೈ ತನ್ನ
ಸುಂದರ ತನೂಜ ಭರತಂಗೆ.
ಇಂತೊಚ್ಚತಂ
ಪಗಲೇಳುಮಿರುಳೇಳುಮೆಸೆದತ್ತು ಬಿರ್ದಿನೊಸಗೆ,
ಬರ್ದಿಲರೂರಂ ಸೂರೆಗೊಳ್ವಂತೆ. ತರುವಾಯಮಾ
ಮಿಥಿಳೆಯಿಂ ಸಾಕೇತಪುರಕೆ ನಡೆದುದು ಮದುವೆಯಾ
ದಿಬ್ಬಣದ ಮೆರವಣಿಗೆ ಹೇಳಲದನೇನೆಂಬೆ ?
ನೆಲದರಸರಿರ್ವರ ಸಿರಿಗಳೊಂದುಗೂಡಿದೊಡೆ
ಶಿವಸಖ ಕುಬೇರಂ ಪುರಂದರಗೆ ಕೈಗೊಟ್ಟು    ೬೪೦
ಅಮರೆಯಿಂದಲಕೆವಯಣಂ ನಡೆವೊಲಾಯ್ತಲಾ
ಮರುದಿಬ್ಬಣದ ಮೆರವಣಿಗೆ ಜಾತ್ರೆ.
ಪಟ್ಟೆಮಡಿ
ತೇರಾನೆ ರನ್ನಗಂಬಳಿ ಗೋವು ಕಾಲಾಳು
ಮುತ್ತು ಪವಳಂ ತೊತ್ತು ಮೊದಲಪ್ಪ ತರತರಂ
ಸಿರಿಯ ಬಳುವಳಿವೊತ್ತು, ಜನಕನೃಪನಂ ಮರಳಿ
ಮಿಥಿಳಾ ಪುರಿಗೆ ಬೀಳುಕೊಟ್ಟು, ದೊರೆವಟ್ಟೆಯಂ
ಪಿಡಿದು ಮಂಗಳವರೆಯ ನಾದಕ್ಕೆ ನಡೆನಡೆಯೆ
ನಿಡುವೊಸಗೆ, ತೆಕ್ಕನೆಯ ತೋರ್ದುವುತ್ಪಾತ ತತಿ :
ಶಕುನಿ ಚೀರಿದವು ದುಶ್ಶಕುನಮಂ; ಜನಕೆ ಕಣ್
ಕಂಪಿಸಿತು; ಕುದುರೆ ಕೆನೆದುವು ರೋದಿಪಂದದಲಿ.        ೬೫೦
ಬೆದರುತಿರೆ ದಶರಥಂ ಬೀಸತೊಡಗಿತು ಗಾಳಿ
ಬಿರುಸಾಗಿ, ಭೂಮಿಯದಿರಿತು. ಪಣ್ಣಿಡಿದ ಮರಂ
ತಿರೆಗುರುಳಿದುವು ಲಕ್ಕಲೆಕ್ಕದಲಿ. ನುಂಗಿದುದು
ಕೃಷ್ಣ ಜಲಧರ ರಾಹು ರವಿಯಂ. ಚತುರ್ದಿಕ್ಕುಗಳ್
ಕಳ್ತಲೆಯ ಕಾಡಿಗೆಯ ಮೆತ್ತಿನಿಂದಿಲ್ಲಾದುವಯ್.
ರೋಷಭೀಷಣವಾಯ್ತು ಸಿಡಿಲುಮಿಂಚಿಟ್ಟಳಂ
ಕರ್‌ಧೂಳಿ ಬೊಮ್ಮಮಂ ಪರ್ವಿ. ಮೈ ಮರೆಯುತಿರೆ
ಸೇನೆ, ಸಂಮ್ಮೋಹ ಭಸ್ಮವನೆರಚಿದರೆನಲ್ಕೆ,
ಕಾಣಿಸಿತ್ತದ್ಭುತಂ ದಶರಥ ದೊರೆಯ ಕಣ್ಗೆ :
ಕಾರ್ಗೆ ಕಾಯಂ ಮೂಡಿದಂತೆ ಮೂಡಿತು ಮುಂದೆ        ೬೬೦
ಭೃಗುವಂಶಿ ಜಮದಗ್ನಿತನಯ ಭೈರವ ಮೂರ್ತಿ,
ಕಂಡರ್ಗೆ ಬರ್ದುಕು ಕಳವಳಿಸೆ. ಕಾಲಾಗ್ನಿಯೊಳ್
ಮುಳುಗುತೆ ಹದಂಗೊಂಡ ಕಾಳಾಹಿಸಂಕುಲಂ
ಜೋಲ್ವಂತೆ ಜೋಲ್ದುವು ಜಟಾಳಿ. ಭೀಷ್ಮತೆವೆತ್ತು
ರಂಜಿಸಿತು ಹೆಗಲಿನೊಳ್ ಕೆಂಗೊಡಲಿ. ಕೈಗಳಲಿ
ಮಿಂಚಿದುವು ವಿಷ್ಣುಕೋದಂಡ ಬಾಣಾಳಿಗಳ್,
ಕಣ್ಗಿರಿಯುವಂತೆ. ಬೆಚ್ಚಿರೆ ಸೈನ್ಯ ಸರ್ವಮುಂ,
ಶ್ರೀರಾಮನೊರ್ವನೆಯೆ ತನ್ನೊಸಗೆದೇರಿಳಿದು
ನಡೆದಂ ಶರತ್ಕಾಲ ಸುಪ್ರಸನ್ನತೆಯಂತೆವೋಲ್,
ಕೊಡಲಿಗೊರವನ ಕಡುಪಿನೆಡೆಗೆ. ತವಿದುದೊ ಗಾಳಿ.    ೬೭೦
ಪರಿದುದೊ ಮುಗಿಲ್ ಕೂಡೆ. ಪರಶುರಾಮನ ಮೊಗಕೆ
ಮಲರಿದುದೊ ಮುಗುಳುನಗೆ ! ಶೈಶವ ಸರಲ ಶಾಂತಿ
ಸೌಂದರ್ಯಗಳ್ಗೆ ಸೋಲದರೊಳರೆ ಲೋಕದೊಳೆನಲ್
ರಾಮಂಗೆ ತಾಂ ಮೆಚ್ಚುಗೊಟ್ಟನು ವಿಷ್ಣುಚಾಪಮಂ
ಜಮದಗ್ನಿಸೂನು, ಲೋಕಂ ನಿನ್ನಿಂದಮಾವಗಂ
ನಿರ್ವಿಘ್ನಮಕ್ಕೆಂದು ಪರಸಿ. ಸುಡಲೆಂದು ಕಿಡಿ ತಾಂ
ಬರಲೊಡಂ, ಪಿಡಿಯಲದೆ ಮಾಣಿಕಮಾಗಿ, ಬಡತನಂ
ಪೋಪಂತೆ ಪೋದನಾ ಪರಶುರಾಮಂ. ದಶರಥಂ
ಪಿರಿಯ ಮಗನಂ ತಬ್ಬಿ ಮೂಸಿದನು ಮಂಡೆಯಂ,
ಬಗೆಯಲಂಪಿಂಗೆ ಕಣ್ ತೊಯ್ವಿನಂ. ಒಸಗೆ ನಡೆದುದು  ೬೮೦
ಮುಂದೆ ಸಾಕೇತಪುರಕಾಗಿ. ಪನ್ನೀರಿರ್ಪಿನಿಂ
ತಣ್ಣಸಂಬಡೆದಿರ್ದು ನಲ್‌ಗಂಪುವೆತ್ತಲರ
ಹರಹಿಂದೆ ಮೇಣ್ ತೋರಣ ಪಸುರ್ಪಿಂದೆ ಸಿಂಗರಂ
ಬಡೆದಿರ್ದ ಬೀದಿಗಳಲೆಲ್ಲೆಲ್ಲಿಯುಂ ಕಿಕ್ಕಿರಿದ
ಮಂದಿ, ಬದ್ದವಣದಿಂ ಮೇಣ್ ಸುಸ್ವರಸ್ವಾಗತದ
ಸಂಗೀತದಿಂ, ವಧೂವರರನಿದಿರ್ಗೊಂಡುದಯ್,
ಶಶಿಯುದಯಸಮಯಾಬ್ಧಿ ವಾಹಿನಿಯನಾಲಿಂಗಿಪೋಲ್.