ಪೆಣ್ಣೊಲಿದ ನಲ್ಲನಿರೆ, ಗಂಡೊಲಿದ ನಲ್ಲೆಯಿರೆ,
ಸಿರಿಬಾಳ್ತೆ ಸಿಂಗಾರಸೊಗಕೆ ಹೊಯಿಕೈಯಿಹುದೆ ಪೇಳ್,
ಬದುಕಿನಲಿ? ಲಲಿತೆ, ಓ ಮದನಮೋಹಿನಿ ರತಿಯೆ,
ನಿನ್ನಾದಿ ತಾರುಣ್ಯ ಕಾಲದಾರಂಭಮಂ
ಪೊಸಕೆಂದು ಪೊಸವೊಲ್ಮೆವೇಟಂ ತಗುಳ್ದಂದು
ನೀಂ ಮದನನಧರಕ್ಕೆ ಮುತ್ತೊತ್ತಿದಾ ಇಂಪೆ
ತಾನವಗಂ ಮರಳಿಮರಳಿ ಮಲರುತೆ ಚಿರಂ
ಸೊಗವೀವುದಲ್ತೆ ನವ ನಿಖಿಲ ದಂಪತಿಗಳ್ಗೆ ?
ತಿಂಗಳ್ಗೆ ತೇನೆಯೊಲಿವಂತೆ ಸೀತಾಕಾಂತೆ
ತೇಲಾಡಿದಳು ತನ್ನ ರಮಣನಾನಂದಕ್ಕೆ        ೧೦
ತನ್ನೆಲ್ಲಮಂ ನಲಿದು ನೈವೇದ್ಯಮಂ ನೀಡಿ,
ತನ್ನತನವನೆ ಸೊನ್ನೆಮಾಡಿ. ತಾನೊಲಿದಂಗೆ
ಪ್ರಾಣೇಶ್ವರಂಗಿಷ್ಟಮೂರ್ತಿಗಾದರ್ಶಕ್ಕೆ ಪೇಳ್
ಪ್ರಾಣಾರ್ಪಣಂ ಗೈವ ಸೊಗದಿಂ ಮಿಗಿಲ್ ಸೊಗಂ
ತಾನೊಳದೆ? ಪೋ ! ಸಗ್ಗಕೇಂ ಕೋಡುಂಟೆ ಬೇರೆ ?
ಶ್ರೀರಾಮಪ್ರೇಮದೊಳೆ ಕಂಡಳ್ ಜನಕಜಾತೆ
ಜೀವನದ ಪರಮ ಪುರುಷಾರ್ಥಮಂ. ಮೇಣಖಿಳ
ಸೃಷ್ಟಿಲೀಲಾ ಮಹೋದ್ದೇಶಮಂ, ಬರಿದಲಾ
ಪ್ರಕೃತಿ ಸೌಂದರ್ಯಮಿನಿಯನ ಚೆಲ್ವುವೆರಸದಿರ್ಪಾ
ಪೆಣ್ಗೆ ! ತನ್ನಿನಿಯನಾನನ ಸರೋವರಜಲದಿ    ೨೦
ಮಲರುತಿಹವಲ್ತೆ ತಾವರೆ ನೇಸರುದಯದಲಿ?
ಚಲಿಸುತಿಹವಲ್ತೆ ಮೀಂಗಳದೊ ತಾವರೆಯೆಸಳ
ನಡುವೆ? ಝೇಂಕರಿಸದೆಯೆ ತೇರೈಸುತಿಹವಲ್ತೆ
ಕರಿದುಂಬಿವಿಂಡು? ತ್ರೈಭುವನ ಸೌಂದರ್ಯಕಾ
ಮುಖಮದೆ ಮುಕುರಮಲ್ತೆ?- ವೈದೇಹಿಯಿರಲಿಂತು
ರಘುರಾಮಚಂದ್ರನಿನಿಯಳ ಜೀವದೀವಿಗೆಗೆ
ತೈಲಮುಂ ಕಾಂತಿಯುಂ ತಾನಾಗಿ ರಸವಾಹದೊಳ್
ತೇಲುತಿರ್ದನು ತನ್ನ ತಾಯ್‌ತಂದೆಯರ್ಗೊಂದು
ಬಾಳ್‌ದೋಣಿಯಂತೆವೋಲ್. ತಿರೆಮಗಳ ಚೆಲುವಲರ
ಬಂಡಿಡಿದ ಬಟ್ಟಲಂ ಪೀರ್ದನೆರ್ದೆತುಟಿಯಿಂದೆ            ೩೦
ತಣಿವಿನಂ ತನ್ನಾತ್ಮತೃಷ್ಣೆ. ಕಣ್ಣೆವೆಯಿಡದೆ
ನೋಡಿದನು ಶೃಂಗಾರ ಸಾರ ಸಂಪೂರ್ಣೆಯಂ :
ದಂತ ಸುಸ್ನಿಗ್ಧ ಕಾಂತಿಯ ತನುರುಚಿರ ಕಾಂತೆ
ಕಮ್ಮನೆಯ ಬಿಸಿಯ ನೀರಂ ಮಿಂದು ಕೆಂಪೇರ್ದು,
ಬಾನ ಬಣ್ಣದ ತಿಳಿಯ ನೀಲಿಯ ದಳಿಂಬಮಂ
ನಿರಿಯುಟ್ಟು, ಪೊರವಾರ್ಗಳೆಲ್ಲೆಯಂ ದಾಂಟಿ ಮುಡಿ
ಸೋರ್ವಂತೆ ಕರ್ಪುಗುವ ಧಮ್ಮಿಲ್ಲಮಂ ಬಿರ್ಚಿ
ನೇಲ್ಗೆದರಿ ಮೆರೆಯೆ, ನೋಡಿದನು ಕಣ್ಣೆವೆಯಿಡದೆ
ಸೌಂದರ್ಯಸುಖದಿಂ ಸಮಾಧಿ ದೊರೆಕೊಂಡನೋಲ್ !
ನಲಿಯುವನ್ ನೋಡಿ ಕಣ್ತುಂಬಿ. ದನಿಯಂ ಕೇಳ್ದು        ೪೦
ಸವಿಯುವನ್. ಪುಳಕಿಸುವನೆರ್ದೆಮೆಯ್ಯ ಸೋಂಕಿಂಗೆ
ಹರವಸತೆವೆತ್ತು. ಕಾಲ್ಗೆಜ್ಜೆ ನೇವುರ ಬಳೆಯ
ಹೊನ್ದೊಡವುಗಳ ಕಿಂಕಿಣಿಗೆ, ಚಾತಕಂ ಮಳೆಗೆ
ಹಾರ್ವಂತೆ, ಹಾರಿದಪನಾಲಿಸಿ ಮರಳಿಮರಳಿ
ದನಿಯನಾಕರ್ಣಿಸಲ್ಕಾಟಿಸುತ್ತೆ. ಧರಣಿಜೆಯ
ಪುಣ್ಯಾತ್ಮಮಂ ಪ್ರೀತಿಸಿದವೋಲೆ ಸೀತೆಯಾ
ಸುಂದರ ಶರೀರಮಂ ಪ್ರೀತಿಸಿದನಾ ರಾಮನೆನೆ
ದೇಹಾತ್ಮ ಭೇದಮಂ ಪೇಳ್ ಮಿಥ್ಯೆಗೊಳಿಸದೆ ರಸದ
ದೃಷ್ಟಿ. ಕಾಯಕೆ ಕಣ್ಗಳೆರಡಿರ್ಪ ಮಾಳ್ಕೆಯಿಂ
ದ್ವೈತಮಿರ್ದುದು ಸೀತೆರಾಮರೊಳಗದ್ವೈತಿ   ೫೦
ತಾನಾಗಿ! ಕಣ್ಗಳೆರಡಾದರೇನೊಂದಲ್ತೆ ಪೇಳ್
ದೃಷ್ಟಿ ತಾಂ? ಮೆಯ್ಗಳೆರಡಾದಡೇನೊಲಿದರ್ಗೆ
ಬಾಳ್ವೆಯೊಂದಲ್ತೆ ?
ಸೀತಾರಾಮರಿರಲಿಂತು
ಸೊಗದ ಪಾಲ್‌ಜೇನಿನೊಳ್ ತೇಲ್ದು ಬಾಳ್‌ದೋಣಿಯಂ,
ಭೋಂಕನೆಯೆ ಮಂಥರೆಯ ಮಮತೆಯ ಸುಳಿಗೆ ಸಿಲ್ಕಿ
ರಸದೋಡಮಳ್ದುದಯ್. ಸುಖನೌಕೆ ಮುಳುಗಲಾ
ನೌಕೆಯಂ ಮುಳುಗಿಸಿದ ಸುಳಿಯೆ ಸುಟ್ಟುರೆಯಾಗಿ
ತಿರ್ರನೆ ತಿರುಪಿ ಬಾನ್ಗೆ ಬೀಸಿದುದು ಸುಖಿಗಳಂ
ಜನಕಜಾ ರಘುಜಾತರಂ. ಕಡೆಯದೆಯೆ ಕೇಳ್ ಬೆಣ್ಣೆ
ಹೊಮ್ಮುವುದೆ? ಮೂಡುತಿರ್ದುವೆ ಮಹಾರತ್ನಗಳ್ ಪೇಳ್,         ೬೦
ಮಥಿಸದಿರೆ ಮಂಥರೆಯ ವಾಸುಕಿಮಹಾಮಮತೆ ತಾಂ
ಕೈಕೆಮನ್ದರದಿಂದಮಾ ತ್ರೇತಾ ಸಮುದ್ರಮಂ?
ಪೆಳರ್ದುದು ಅಯೋಧ್ಯೆ ವಿಸ್ಮಯ ಭಯಾಶ್ಚರ್ಯದಿಂ
ತಾನೊಂದಿರುಳ್ ಅರಿಲ್ ತುಂಬಿದಾಗಸದೊಳೊರ್ಮೊದಲೆ
ದೀಪ್ತಮಂ ದೀರ್ಘ ಲಾಂಗೂಲ ಕೇಶಾನ್ವಿತಮುಮಂ
ಕಂಡು ಮಹದುಲ್ಕೆಯಂ. ಕರ್ದ್ದಿಂಗಳಾಗಸದ
ಕರ್ಮಣಿಯ ಕುಟ್ಟಿಮದಿ ಕೆದರಿರ್ದ ಪೂಗಳಂ
ಗುಡಿಸಲೆಂದಿರುಳವೆಣ್ ಕೈಲಾಂತು ನಿಡುನೀಳ್ದ
ಕೆಂಗೆಂಡದುರಿಯ ಸಮ್ಮಾರ್ಜನಿಯೊ, ಪೊಳ್ತಿಳಿಯೆ
ಕಳ್ತಲೆಯ ದಾರಿನಡೆಯಲನಂತ ಯಾತ್ರಿಕಂ,  ೭೦
ಕಾಲಪುರುಷಂ, ಪಿಡಿದ ಪೊಂಜೊ ತಾಂ ಪೇಳೆಂಬಿನಂ
ನೆತ್ತರುರಿಗೂದಲಂ ಬೀಸಿ ರಂಜಿಸುತಿರ್ದ ಆ
ಭೀಷ್ಮ ಭೀಷಣ ಧೂಮಕೇತುಗೆ ಜನಂ ಬೆರ್ಚಿ
ನರಳ್ದುದಕಟಾ ಕೋಸಲಕೆ ಕೇಡಪ್ಪುದೆಂದಳ್ಕಿ.
ಆ ಭಯಂಕರ ಗಗನಶಕುನಮಂ ನೋಡಿ, ದೊರೆ
ದಶರಥಂ ತನ್ನ ಕೊನೆಗದೆ ಬಾನ್‌ಬರೆಪಮೆಂದು
ಬಗೆದು, ಪಿರಿಯಂಗೆ ರಾಮಂಗೆ ಪಟ್ಟಂಗಟ್ಟಿ
ಬೇಗದಿಂದಿರದೆ ತಾಂ ಪಾರಲೌಕಿಕದೆಡೆಗೆ
ತನ್ನಾತ್ಮಮಂ ತಿರುಗಿಸಲ್ಕೆಳಸಿ, ಸಚಿವರಂ
ಗುರುಗಳಂ ಪ್ರಜೆಗಳಂ ಕರೆದೊರೆದನಿಂತುಟಾ            ೮೦
ತನ್ನಿಷ್ಟಮಂ :
“ಕೋಸಲ ಹಿತ ಕ್ಷೇಮ ಚಿಂತಕರೆ,
ಪೋದಿರುಳ್ ಬಾನಿನೊಳ್ ಬಿದಿ ಬರೆದುದೋದಿದೆನ್,
ನಕ್ಷತ್ರಲೇಖನಿಯ ದಿವ್ಯಾಗ್ನಿ ಲಿಖಿತಮಂ,
ಪ್ರಾಕೃತ ಘಟನೆಗಳ್ಗೆ ಪ್ರಕೃತಿಕಾರಣದಂತೆ
ದೇವಕಾರಣಮಿರ್ಪುದೆಂದು ಗುರು ಕಲಿಸಿದನ್
ನನಗೆ. ರವಿಕುಲನೃಪರ ಸಾಮ್ರಾಜ್ಯಭಾರಮಂ
ಪೆರತು ಮುಡುಹಿಂಗಿಟ್ಟು ವಿಶ್ರಾಂತಿಗಾಟಿಸುತೆ
ಪೇಳ್ವೆನಾಲಿಪುದು ತಾಳ್ಮೆಯ ಮನಃಪ್ರೀತಿಯಿಂ:
ತನ್ನ ಮಗನಂ ತಾನೆ ಹೊಗಳಿದೊಡೆ ಒಲವರಂ
ಪಿತೃಗೆಂಬರ್. ಆದೊಡಂ ಗುಣಕೆ ಮಚ್ಚರಮೇಕೆ?         ೯೦
ಶ್ರೀರಾಮನಾಹ್ಲಾದ ರೂಪಿ. ಔದಾರ್ಯ ನಿಧಿ.
ನಿರಸೂಯೆಯಿಂ ಸರ್ವರನುರಾಗ ಭಾಜನಂ.
ಕಲಿ. ಮತ್ಸರವಿದೂರನತ್ಯಂತ ಶಾಂತಿಖನಿ.
ಪ್ರಿಯಭಾಷಿ. ಹಿತಸಖಂ. ಮಿತಮಾರ್ಗಿ. ಧೀರವಶಿ.
ನಗುಮೊಗದ ಸಂಯಮಿ. ಕೃತಜ್ಞತಾ ಮೂರ್ತಿ. ಮೇಣ್
ಜ್ಞಾನಿ. ಸಜ್ಜನಪ್ರೇಮಿ. ಸೂಕ್ಷ್ಮ ಮತಿ. ಪಂಡಿತಂ.
ಶ್ರುತಿವಿದಂ; ಸುವಿಚಾರಿ; ನಿತ್ಯಂ ಪ್ರಜಾಪ್ರೇಮಿ !
ಸುಸ್ಥಿರಂ; ಸಂಬುದ್ಧ ಪ್ರಜ್ಞಾ ಮಹೇಶ್ವರಂ !
ಶಸ್ತ್ರಾಸ್ತ್ರ ವಿದ್ಯಾಪ್ರವೀಣ ರಣಪಂಡಿತಂ.
ನವನವೋನ್ಮೇಷಿತಂ ನಿತ್ಯ ಚಿರನೂತನಂ      ೧೦೦
ರಸದರ್ಶನಾಸ್ವಾದನಂ ಗೈವ ಸಹಜ ಕವಿ.
ಶ್ರುತಿ ಶಾಸ್ತ್ರ ಕಾವ್ಯ ರಸಋಷಿ; ಯೋಗಿ. ಕೇಳಿಮಾ
ರಾಮನಲ್ಲದೆ ಬೇರೆ ನನ್ನೀ ಕಿರೀಟಮಂ
ಧರಿಸುವ ಸಮರ್ಥರಂ ಕಾಣೆನಾಂ. ಪಿರಿಯವನ
ಪೆಗಲೊಳೀ ಪೊಡವಿಯಂ ಪೊರೆಯಿಳುಹಿ, ತಪಮಿರ್ದು
ಪೊರೆವೆನೆಮ್ಮೀ ಕುಲದ ಮರ್ಯಾದೆಯಂ.”
ಕೇಗಿತಾ
ನೆರವಿ, ಮಳೆಮೋಡಮಂ ಕಾಣುವ ನವಿಲ್‌ಗಳೋಲ್,
ವೇಪಿಸೆ ಸಭಾಸ್ಥಾನ ಮಂಟಪಂ. ಪೌರರಂ
ಭಿನ್ನಮತಮಿಲ್ಲದೆಯೆ ಕರಪುಟಾಂಜಲಿಯೆತ್ತಿ
ಸರ್ವರೊಮ್ಮನದಿಂದೆ ಜಯಘೋಷಗೈದರಂ  ೧೧೦
ರಾಜನಭಿವಂದಿಸಿ, ವಸಿಷ್ಠಾದಿ ಗುರುಗಳಂ
ಕುರಿತೊರೆದನಣಿಗೆಯ್ಯಲಭಿಷೇಕದುತ್ಸವಕೆ
ರವಿವಂಶ ರಾಜಾರ್ಹಮಾದಖಿಲ ಪರಿಕರಗಳಂ.
ಪುಣ್ಯಪ್ರಸೂನಮಯ ಶುಕ್ಲದಾಮಂ ಬಿಡಿದು
ಪಟ್ಟಾಭಿಷೇಕಕೈತಂದುದಾ ಚೈತ್ರಮಾಸಂ!
ಪೊನ್, ಬೆಳ್ಳಿ, ಧನಧಾನ್ಯ, ಮುತ್ತುರತ್ನದ ರಾಸಿ,
ಬೆಳ್ಳನೆಯರಳದಂಡೆ, ಬೆಳ್ಗೊಡೆ, ಅರಳ್, ಜೇನ್,
ನೂತನ ದುಕೂಲಗಳ್, ಸ್ಯಂದನಂಗಳ್, ನಿಖಿಲ
ಶಸ್ತ್ರಾಸ್ತ್ರಗಳ್, ಕುದುರೆ ತೇರಾನೆ ಕಾಲಾಳ್,
ಹೊಂಗೊಂಬೆಸೆವ ಗೋವು ಗೂಳಿಗಳ್, ಬಿಳಿಚವರಿ,      ೧೨೦
ಪುಲಿದೊಗಲ್, ಪಾಲ್, ಮೊಸರ್, ಗಂಗೆನೀರ್, ಕಡಲನೀರ್,
ಗಂಧ ಪುಷ್ಪಾದಿ ಮಂಗಳದ ಸಾಮಗ್ರಿಗಳ
ನಾನಾ ಸುಖದ ಶುಭದ ಸಂಪದದ ಸಂಬರಂ
ಸಮನಿಸಿತು ತುಂಬುವೋಲ್ ಕೋಸಲ ರಾಜಧಾನಿ.
ಮರುದಿನಂ, ಪೊಂಗದಿರ್‌ಚವರಿಯಂ ಬೀಸಿ ರವಿ
ಮೂಡಣದ್ರಿಯನೇರಿ ಬರ್ಪನಿತರೊಳೆ, ನಗರಿ
ರಾಜಿಸಿತು ಹಸುರು ತೋರಣಗಳಿಂ, ಹೂಮಳೆಯ
ಚೆಲ್ವಿನಿಂ, ಕಂಪಿಡದ ತಣ್ಣೀರ್ಗಳಿಂ ನಾಂದ
ಕಮ್ಮನೆಯ ನೆಲಗಳಿಂ, ಪಟ್ಟೋತ್ಸವಕೆ ಸಮೆದ
ಬಿತ್ತರದ ಕಲ್ಯಾಣಮಂಟಪಂ ತಾನೆಂಬವೋಲ್.           ೧೩೦
ನೆಯ್ದಾಳುತಿದೆ ಜಗವನೊಂದತಿವಿರಾಣ್ ಮನಂ,
ಸೂಕ್ಷ್ಮಾತಿ ಸೂಕ್ಷ್ಮ ತಂತ್ರದಿ ಬಿಗಿದು ಕಟ್ಟಿಯುಂ
ಜೀವಿಗಳ್ಗಿಚ್ಛೆಯಾ ಸ್ವಾತಂತ್ರ್ಯಭಾವಮಂ
ನೀಡಿ, ಮಂಥರೆ ಸೀತೆ ರಾಮ ರಾವಣರೆಲ್ಲರುಂ
ಸೂತ್ರಗೊಂಬೆಗಳಲ್ತೆ ಆ ವಿಧಿಯ ಹಸ್ತದಲಿ?
ಮಥಿಸಿದುದು ದಶಶಿರನ ವಿಧಿ ಮಂಥರೆಯ ಮನದಿ
ತನ್ನ ತಂತ್ರದ ಕೃತಿಯನಾ ಇರುಳ್ ಕನಸಿನಲಿ :
ಮುದುಕಿಯಾದಾ ಕೈಕೆ ಭರತನಂ ಕೈವಿಡಿದು
ಮರುಧರೆಯನಲೆಯುತಿರ್ದಳ್ ವಿಧವೆಯೋಲ್. ಕುಬ್ಜೆ
ಕರೆದೊಡಂ ಕಿವಿಗೊಡದೆ, ಮಗನೊಡನೆ ಕಿರಿರಾಣಿ        ೧೪೦
ಮುಂದು ಮುಂದೆಯ್ದುತಿರೆ, ಬೈಗುಗಳ್ತಲೆಯಿಳಿದು
ನುಂಗಿದತ್ತಿರ್ವರಂ. ತೊಳ ತೊಳಲಿ ನೀರಡಿಸಿ
ದೆಸೆದೆಸೆಗೆ ಬಾಯ್ಬಿಟ್ಟು ನಿಡುವೊರಲಿ ಗೂನಿ ತಾಂ
ಕೆಡೆದಳಾ ಮರಳುಗಾವಲಿಯಿಳೆಗೆ, ರಾಮನಂ
ಕರೆಕರೆದು ನಿಡುಸರದೊಳಾಕ್ರಂದಿಸುತೆ ಕೂಗಿ.
ಕ್ರೂರ ದುಃಸ್ವಪ್ನ ಜೇಡನ ಪೀಡನೆಗೆ ಸಿಲ್ಕಿ
ನಡುನಡುಗುತೊದ್ದಾಡಿದತ್ತು ಮಂಥರೆಯೊಡಲ್,
ಬಲೆಗೆ ಬಿಳ್ದೊಂದು ಪುಳುವಂತೆ. ಹಾಸಗೆ ಕೆದರೆ
ಕುಳ್ತಳ್ ಧಿಗಿಲ್ಲೆಂದು. ಬಡಿದುದು ಭಯಗ್ರಹಂ
ಮಂಥರೆಗೆ. ಕೇಡದೇನಂ ಸ್ವಪ್ನಮಾಡಿದುದೊ  ೧೫೦
ತನಗೆನುತೆ ಚಿಂತಿಸುತ್ತಿರೆ, ಕಿವಿಗೆವಂದುದಯ್
ನಲಿವ ಮಂಗಳವಾದ್ಯ ಸಂಭ್ರಮಂ.
ಸೋಜಿಗಕೆ
ಹೊರ ಹೊಂಟಳಾಲಯವನಾ ದಾಸಿ. ಬೆರಗೇರ್ದು
ನಡೆದು ಬಂದಳು ರಾಜಬೀದಿಯಲಿ. ಬರಬರುತೆ
ನೋಡಿದಳು ನಗರಶೃಂಗಾರಮಂ, ನಲಿದುಲಿವ
ಪುರಜನೋತ್ಸಾಹಮಂ : ಇಲ್ಲಿ ಜಲಸೇಚನಂ,
ಇಲ್ಲಿ ಹೊಸ ರಂಗೋಲಿ, ಮೇಣಿಲ್ಲಿ ಕಪ್ಪುರದ
ಸಾರಣೆಯ ಕಂಪು. ನೋಡಲ್ಲಿ ಗುಡಿತೋರಣಂ.
ಅಲ್ಲಿ ಪೊಂಬಾವುಟಂ. ನಿಂತಿಹರು ಕಾಣಲ್ಲಿ
ದೀರ್ಘಾಸಿ ಕಟಿಬದ್ಧ ಸನ್ನದ್ಧ ಯೋದ್ಧರುಂ.       ೧೬೦
ಬೆಣ್ಣೆಯಂದದ ಸುಣ್ಣಮಂ ಬಳಿದ ದೇಗುಲಂ
ಕಾಣದೊ ಮನೋಹರಂ ತಲೆ ನಿಮಿರ್ದಿದೆ ಬಾನ್ಗೆ !
ಮತ್ತೆ, ನಡೆದಿವೆ ಕುದುರೆ ತೇರಾನೆ ಸಾಲ್ಗೊಂಡು,
ಪೊಂಗೆಲಸದೆಸಕದಿಂ ಮಿಂಚಿ. ಪರಿಯುತೆ ಮುಪ್ಪಿ
ನೋಟದಿಂ ನೋಟಕ್ಕೆ ಬೆಸಗೊಂಡೊಡನಿಬರುಂ
ವೈರೂಪಮ್ಯಂ ಕಂಡು, ಕಿನಿಸಿ, ಮುನಿದಕ್ಷಿಯಿಂ
ಪಳಿದು ಮುನ್‌ನಡೆಯೆ, ಮಂಥರೆ ಸಾರ್ದಳೊಯ್ಯನೆಯೆ
ಸಂಭ್ರಮಂ ತುಳುತುಳುಕಿರ್ದ ಕಲ್ಯಾಣಮಂಟಪಕೆ.
ಕಲಕಲ ನಿನಾದದಿಂ ತಾವರೆಯ ಪೂಗೊಳದ
ಜಲಪಕ್ಷಿ ಕುಲದಂತುಲಿಯುತಿರ್ದ ಚೆಲ್ವೆಣ್ಗಳೆಡೆ ೧೭೦
ಕಣ್ಮಲರನರಳಿ ರಾಮನ ದಾದಿ ನಗುತಿರಲ್
ಕೇಳ್ದಳಾಕೆಯನೊಸಗೆಯೇನೆಂದು. ತಿಳಿಯಲಾ
ಕಹಿನನ್ನಿ, ರಾಮಪಟ್ಟಾಭಿಷೇಕದ ನನ್ನಿ,
ಹೃದಯವೊಡೆದಂತೆ ತತ್ತರಿಸಿ ಮಂಥರೆ ಕೂಡೆ
ನಡೆದೋಡಿದಳ್ ಕೈಕೆಯರಮನೆಗೆ. ಏದುತಿರೆ
ಸೇದೆಯಿಂದುದ್ವೇಗದಿಂ ಚೀರಿದಳ್ :
“ಓ ಕೈಕೆ,
ಮತಿಗೇಡಿ, ನಿರ್ಭಾಗ್ಯೆ, ಇನ್ನುಮೇನೀ ನಿದ್ದೆ
ನಿನಗೆ ? ಮೇಲೇಳ್ ಏಳ್; ಕೆಡೆದು ಬಿದ್ದಿದೆ ನಿನ್ನ
ಸಿರಿಗುಡಿಯ ಗೋಪುರಂ ! ಹೊಂಗನಸು ಹುಡಿಯಾಯ್ತು !          ೧೮೦
ಬಯಲ ಸೇರ್ದುದು ಬಹುದಿನದ ಬಯಕೆ ! ಕೆಟ್ಟೆ ನೀಂ !
ಕೆಟ್ಟೆನಾಂ ! ಹಾ ಭರತ ! ಭರತ ! ಹಾ ! ಎಲ್ಲಿಹಯ್ ?
ಎಲ್ಲಿಹೆಯೊ ಇಂದು ? ಬಾ ಬೇಗ ಬಾ !” ಎಂದಳುತೆ,
ಕಿರಿರಾಣಿ ಬಳಿಸಾರ್ವ ಮುನ್ನಮೆ, ಪೊಸನ್ತಿಲೆಡೆ,
ದೊಪ್ಪೆಂದು ಸೈಗೆಡೆದಳುರುಳಿದಳು, ಪೇಳ್ದುದೇಂ,
ಬಡಿಗೆ ಪೊಯ್ದಂತೆ ! ನೆಗಹಿದಳು ಮಾಂಡವಿಯತ್ತೆ
ಭರತಧಾತ್ರಿಯನೊಡನೆ ಶಿಶಿರೋಪಚಾರಮಂ
ಮಾಡಿದಳ್, ಕಣ್ದೆರೆಯುತೆಳ್ಚರುತೆ, ಕನಿಕರದ
ನೋಟಮಂ ಬೀರಿ ಮಂಥರೆ ತನ್ನ ರಾಣಿಯಂ
ಬಿಗಿದಪ್ಪಿದಳ್ ಬಿಕ್ಕಿ ಬಿಕ್ಕಳ್ತು !
ಹೇಳವ್ವ, ಹೇಳ್
ಏನಾದುದೆನೆ ಕೈಕೆ, ಭರತ ಭರತೆಂದೆಂದು     ೧೯೦
ಗದ್ಗದಿಸಿ, ನುಡಿಯಲಾರದೆ ಮುದುಕಿ ಕೆಮ್ಮನಿರೆ,
ಮಗನಿಗೇನಾದುದೋ ಅಳಿದಿಹನೊ ಉಳಿದಿಹನೊ
ಎಂಬುವಾಶಂಕೆಯಿಂ ಕುದಿಯುತಳತೊಡಗಿದಳ್
ದಶರಥನ ರಾಣಿ. ನುಡಿಯಂ ತೊಡಗಿದಳ್ ಗೂನಿ :
“ಬೇಸಗೆಯ ಹೊಳೆಯಾದುದೌ, ಕೈಕೆ, ನಿನ್ನ ಸಿರಿಯುಂ
ನಿನ್ನ ಸೌಂದರ್ಯದಂತೆ. ಬಂಡನೀಂಟಿದ ಬಳಿಕಮಾ
ಬಂಡುಣಿಗೆ ಹೂವಿನ ಗೊಡವೆಯೇಕೆ ? ಅಂತೆವೊಲ್
ದಶರಥಗೆ ನೀನಾದೆಯೌ. ಮಗಳೆ, ಪೇಳ್ವೆನಿದೊ
ದುರ್ವಾರ್ತೆಯಂ. ಕೇಳ್ವದಟು ನಿನಗಿಹುದೆ ? ಅಯ್ಯೊ,
ವಂಚಕರ ಸಂಚಿನಿಂದೆಮ್ಮ ಭರತಂಗೀ ನೆಲಂ ೨೦೦
ಪಳುವಾಯ್ತೆ ? ನಾವಿರ್ವರಿರ್ದುಮೇಂ ? ಪೇಳ್, ಮುಗ್ಧೆ !
ಸನ್ನಿಹಿತಮಾದೀ ವಿಪತ್ತನರಿತುಂ ಬರಿದೆ
ಕುಳಿತಿಹರೆ, ಮತಿಯಿರ್ಪ ಮಂದಿ ? ನಿನಗರಿಯದೆಯೆ
ಮಸೆದಿಹರು ನಿನ್ನ ಕೊರಳಂ ಕೊಯ್ವ ಕತ್ತಿಯಂ !
ನಿನ್ನ ದುಃಖವೆ ದುಃಖಮೆನಗೆ; ಸುಖಮೆಯೆ ಸುಖಂ;
ಪೆರತಿಹುದೆ ಪೇಳಕ್ಕ ? ದಶರಥಪ್ರೇಮಮಂ
ಭಾಗ್ಯಕೆಣೆಯಿಲ್ಲೆಂದು ತಿಳಿದ ನೀನಲ್ಪಮತಿ !
ಕ್ರೌರ್ಯದಲಿ ರಾಕ್ಷಸರ ಮೀರ್ದುದೌ ಕ್ಷತ್ರಿಯ ಕುಲಂ.
ಕ್ಷತ್ರಿಯಂ ಕುಲವರೇಣ್ಯನಾ ದಶರಥಂ? ಸವಿನುಡಿಯ
ಕಳ್ಳೀಂಟಿ ಮರುಳ್ವೋದೆಯಮ್ಮ ನೀನಾತಂಗೆ :           ೨೧೦
ದಿಟದೊಲ್ಮೆ ಕೌಸಲ್ಯೆಗಾಯ್ತು; ಹುಸಿ ನಿನಗಾಯ್ತು.
ಭರತನನುಪಾಯದಿಂ ನಿನ್ನ ತೌರಿಂಗಟ್ಟಿ, ಕೇಳ್,
ಪಟ್ಟ ಕಟ್ಟುವನಂತೆ ನಾಳೆ ರಾಮಂಗೆ ! ಹಾ,
ತೊಡೆಯ ಮೇಲಿಟ್ಟವನನಿನ್ನೆಗಂ ಪಾಲಿಸಿದೆ:
ಪಾವ್ಗೆ ಪಾಲೆರೆದೆ! ಮೊಟ್ಟೆಯನೊಡೆದು ಮುಡಿಪದಿರೆ,
ಹಗೆಹಾವು ಹೆಡೆಯೆತ್ತಿ ಕೊಲ್ವುದೆ ದಿಟಂ, ದಿಟಂ !
ಕಿರಿಯೆ, ಕೇಳ್, ನೀನಿನ್ನುಮರಿಯೆ.”
ಮೊಗಮಲರ್ದುದಯ್
ಕೈಕೆಗದನಾಲಿಸುತೆ, ಶಶಿಗೆ ನೈದಿಲೆಯವೋಲ್.
ಕೊರಳ ಸರಮಂ ತೆಗೆದು ಮಂಥರೆಗೆ ನೀಡಿ ನುಡಿದಳ್ :
“ನಿನಗಿದೊ ಕೊಡುಗೆ, ಶುಭದ ವಾರ್ತೆಯಂ ತಂದುದಕೆ.            ೨೨೦
ರಾಮನೇಂ ? ಭರತನೇಂ ? ಮಕ್ಕಳಿರ್ವರುಮೆನ್ನವರ್ !”
ನೀಡಿದಾ ಹಾರಮಂ ಪಿಡಿದಪ್ಪಳಿಸಿ ನೆಲಕೆ,
ರಾಣಿಯಂ ನುಡಿಯಲೀಯದೆ ಮುಂದೆ, ಸಂತಪ್ತೆ
ಕುಬ್ಜೆ ಮಂಥರೆಯಿಂತು :
“ಸಾಕು, ನಿಲ್ಲಿಸು, ಮೂರ್ಖೆ ;
ಲೇಸಾಯ್ತು ನಿನ್ನ ಮತಿ ! ಬಹುಕಾಲಮರಮನೆಯ
ಸುಖಸೋಮಪಾನಮಂ ಗೈದು ಪಲ್ಲಟವಾಯ್ತೆ
ಸದ್ಬುದ್ಧಿ ? ಪೆತ್ತ ಮಗುವನೆ ತಿಂಬ ರಕ್ಕಸಿಯ
ಪಾಂಗಿನಿಂದಾಡುತಿಹೆ : ನಿನ್ನ ಕಂದಗೆ ನೀನೆ
ಮೀಳ್ತು. ರಾಮಾಭಿಷೇಕಂ ನಿನಗೆ ಪ್ರಿಯವಾರ್ತೆಯೇಂ ?
ವೈರಿ ಬೇರುಂಟೆ ಲೋಕದಿ ಸವತಿಮಗನಿಗಿಂ ?            ೨೩೦
ಕೌಸಲ್ಯೆಗೇಂ ಕಿರಿಯೆ ನೀಂ ? ಧೀರ ಭರತನೇಂ
ಕೊರತೆ ರಾಮಂಗೆ ? ಜನ್ಮಕ್ರಮದಿ ನೋಳ್ಪೊಡಂ ?
ಪೇಳ್ವೆನಾಂ, ಕೇಳ್ ಮುಗ್ಧೆ. ಪಡೆವ ಬೇನೆಯೊಳಿರ್ದೆ
ನೀನರಿಯೆ ! ನಾಲ್ವರೊಳ್ ಭರತನೆಯೆ ದಿಟದಿಂದೆಯುಂ
ಜ್ಯೇಷ್ಠನ್ ! ಅಚ್ಚರಿಯೇಕೆ ? ಬಲ್ಲೆ ನಾನೆಲ್ಲಮಂ.
ದೊರೆ ಮಂತ್ರಿ ಕುಲಪುರೋಹಿತರೆಲ್ಲರೊಲವರದಿ
ಪಿರಿಯನಾದನ್ ಕೌಸಲೆಯ ಮಗಂ. ನಿನಗಾಯ್ತು
ಸೊನ್ನೆಬಳುವಳಿ. ತೊಳ್ತು ನೀನಪ್ಪೆಯಿನ್ ಮುಂದೆ
ರಾಮನಾಳ್ವಿಕೆಯಲ್ಲಿ, ಕೌಸಲೆಯ ಕಾಲ್ದೆಸೆಯ
ಧೂಳಿಯೋಲ್. ಮರೆತೆಯೇಂ ನೀನಿಲ್ಲಿಗೈತಂದ           ೨೪೦
ಮೊದಲಂದು ಕರುಬಿ ಕೌಸಲೆಯಿತ್ತ ಕಾಟಮಂ ?
ತನ್ನವೋಲನಿಬರುಂ ಸತ್ವಮೂರ್ತಿಗಳೆಂದು
ನಂಬಿ ನೀಂ ಕೆಡುವೆ. ಬೇಗಮೆಳ್ಚರದಿರಲ್, ದಿಟಂ,
ಹುಡಿಸೇರಿ ಹಾಳಾಗಿ ಗತಿಗೆಡುವೆಯೌ. ಗಾಂಪೆ,
ಕೊರಗದಿರ್ ಸಂಚು ಮಿಂಚಿದ ಮೇಲೆ?” ಎನುತಾಕೆ
ತನ್ನ ಕನಸಂ ಪೇಳ್ದಳುರಿಗೆ ನೆಯ್ ಪೊಯ್ವಂತೆವೋಲ್.
ಕೇಳುತ್ತೆ, ಕೆಲವೊಳ್ತು ಮೌನಮಿರ್ದಳ್ ಕೈಕೆ,
ಕೆನ್ನೆಗೈಯಾಗಿ, ಕಂಬನಿದುಂಬಿ, ಕಣ್ಮುಚ್ಚದೆಯೆ,
ಹಾಲ್ಗಲ್ಲ ಗೋಡೆಯನೆ ನೋಡಿ : ಮೂಡಿತು ಮನಕೆ
ಮಾವನ ಮನೆಯ ದೂರದೊಳಿರ್ದ ತನುಜನ ಮೂರ್ತಿ.            ೨೫೦
ನೆನೆದು ಮೆಲುಕಾಡಿದಳ್, ನೆರಕೆ ಗರಗಸವಾಗೆ,
ಮಂಥರೆಯ ಮಾತೆಲ್ಲಮಂ. ಹೃದಯಮುರಿದಂತಾಯ್ತು.
ದುಃಖಮಿರ್ಮಡಿಸಿದುದು. ಕೊರಳು ಗದ್ಗದವಾಗಿ
ನುಡಿದೋರಲಾರದಿರೆ, ಮತ್ತೆ ಪೇಳ್ದಳ್ ಕುಬ್ಜೆ :
“ಶತ್ರುಘ್ನನಿಲ್ಲಿರ್ದೊಡಾತನುಂ ಪಟ್ಟಕ್ಕೆ
ವಿಘ್ನವೊಡ್ಡುವನೆಂದು ಭರತನೊಡವೆರಸಟ್ಟಿ
ಕಳೆದರಮ್ಮಾ, ಕೈಕೆ. ಮುಳ್‌ಬಳ್ಳಿ ಪೆರ್ಮರಕೆ
ಪೆಣೆದದಂ ಕಡಿಯಲೆಡೆಗೊಡದಂತೆ. ಲಕ್ಷ್ಮಣಂ
ರಕ್ಷೆ ತಾನಲೆ ಕೌಸಲೆಯವಂಗೆ. ಭರತನಂ
ರಾಮಂಗೆ ತೊಳ್ತುಗೆಯ್ಸದೆ ಪಳುವಕಾದೊಡಂ ೨೬೦
ಕಳುಹು; ದಯೆದೋರು ನಾನವನೊಡನೆ ಪೋದಪೆನ್
ಶುಶ್ರೂಷೆಗೆಯ್ಯೆ. ಭಿಕ್ಷೆಯಿದೆನಗೆ ನಿನ್ನಿಂದೆ !”
ಎನ್ನುತ್ತೆದ್ದು ಹೋಹಳಂ ತೆಗೆದಪ್ಪಿದಳ್ ಕೈಕೆ,
ಮುಳುಗುವಾತಂ ಪ್ರಾಣರಕ್ಷಣೆಗೆ ಮೊಸಳೆಯಂ
ತಬ್ಬುವೋಲಂತೆ. “ಬರಿ ಅಳುವಿನಿಂದೇನಹುದು ?
ಮೇಲೇಳೇಳು. ಕಾರ್ಯಸಾಹಸಿಯಾಗು ! ವೀರಸತಿ,
ನೀಂ ಮರೆತೆಯಾದರಿದೊ ನೆನವೀವೆನಾಂ. ನೆನೆ, ಮಗಳೆ,
ನೀನಂದು ನನಗೊರೆದ ಗೋಪ್ಯಮಂ, ದಶರಥಂ
ನಿನ್ನ ಚೆಲ್ವಿಂಗೋತು ಸೊಬಗಿಗಡಿಯಾಳಾಗಿ
ಮದುವೆಯಾಗುವ ಮೊದಲ್ ನಿನಗಿತ್ತ ಭಾಷೆಯಂ”.     ೨೭೦
ಐಸಿರಿಯನೆಲ್ಲಮಂ ದುರ್ವ್ಯಸನದೊಳ್ ಕಳೆದು
ಕಡು ದರಿದ್ರತೆವೆತ್ತು, ತೊಳಲಿ, ಬಿಕ್ಕೆಯ ಬೇಡಿ,
ಹೊಟ್ಟೆಗಿಲ್ಲದೆ ಬಳಲಿ ಹಸಿವಿಂದೆ ನಿದ್ರಿಪಗೆ
ಬೀಳ್ವುದು ಕನಸು. ಕನಸಿನಲಿ ಯಕ್ಷನೈತಂದು
ಬಾ ಎಂದು ಕರೆದುಕೊಂಡೊಯ್ಯುತೊಂದೆಡೆಗಲ್ಲಿ
ತೋರ್ದಪನ್, ಕೊಪ್ಪರಿಗೆ ತುಂಬಿ ತುಳುಕಿತೆನಲ್ಕೆ,
ತಳತಳನೆ ಹೊಳೆವ ಹೊನ್ನಿನ ಹಳದಿರಾಶಿಯಂ.
ಸಂತೋಷಕೆಚ್ಚತ್ತು ನಡೆವನಾ ಎಡೆಗಾಗಿ
ಹುಡುಕಿ ನಿಧಿಯಂ. ಹುಡುಕುತಿರೆ ಕಣ್ಗೆ ಬಿಳ್ದುದದೊ
ವಾಸ್ತವಂ ಸ್ವರ್ಣ ನಿಧಿರಾಶಿ ! ಆ ಬಡವನೊಲ್ ೨೮೦
ಹಿಗ್ಗಿದಳ್ ಕೈಕೆ. ಗೂನಿಯ ವಕ್ರಗಾತ್ರಮಂ
ತಬ್ಬಿ ನುಡಿದಳ್ : “ಕಂಗೆಟ್ಟೆನಗೆ ದಾರಿ ತೋರ್ದೆಯೌ,
ಓ ನನ್ನ ಭಾಗ್ಯದೇವತೆ ! ಮರಳಿ ಹಡೆದೆಯೌ,
ನೀನೆನ್ನ ತಾಯಿ ! ನೀಂ ತೊರೆಯಲಿನ್ನಾರೆ ಗತಿ
ಪರದೇಸಿಯೆನಗೆ? ಕಣ್ಣಿರ್ದುಮಾನಿನ್ನೆಗಂ
ಕುರುಡಿಯಾಗಿರ್ದೆನೌ. ನೋಡಿತ್ತನೋಡೆನ್ನನಃ !
ಇಂದೆನಿತು ಚಾರುರೂಪಿಣಿಯಾಗಿ ತೋರುತಿಹೆ
ನೀನೆನಗೆ ! ಲೋಕದೊಳ್ ಹೊರಮೆಯ್ಯನೀಕ್ಷಿಸುತೆ
ಸೊಬಗನಾರೈವವರ್ ಬರಿಯ ಬೆಪ್ಪುಗಳಲ್ತೆ?
ನಿಜಮಪ್ಪ ಸೌಂದರ್ಯಮಾತ್ಮಕ್ಕೆ ಸೇರ್ದುದೆನೆ           ೨೯೦
ನಿನಗಿನೇಂ ಸುಂದರಿಯರೊಳರೆ ? ಗೂನಿರ್ದರೇಂ ?
ಚಂದನದ ಕೊರಡು ಮುರುಟಿರ್ದರೇನೂನಾಯ್ತೆ
ಗಂಧಕ್ಕೆ?” ಎನುತ್ತಾ ಕುರೂಪತಾ ಮುದ್ರೆಯಂ
ಮುದ್ದಾಡಿದಳೊ ಕೈಕೆ, ಸರ್ವ ಸೌಂದರ್ಯನಿಧಿ,
ಫಣಿವೇಣಿ, ಸುಶ್ರೋಣಿ, ಧಶರಥೇಂದ್ರನ ರಾಣಿ !
ಕಚ್ಚಿತೆನೆ ಮೀನು ಗಾಳದ ನೇಣನೊಂದಿನಿತು
ಸಡಿಲ ಬಿಡುವವನಂತೆ, ಮತ್ತೆ ನುಡಿದಳ್ ಕುಬ್ಜೆ,
ಮುದ್ದಿನ ಬಿಸಿಲ್ ಬೀರಿ, ಕೇಕಯ ಕುಲಾಬ್ಜನಿಗೆ :
“ನಿಚ್ಚಯಿಸುವಾ ಮುನ್ನಮಿನ್ನೊರ್ಮೆ, ಮೇಣೊರ್ಮೆ,
ಮತ್ತಮಾಲೋಚಿಸೌ, ಚಂದ್ರಸುಂದರ ವದನೆ; ೩೦೦
ದುಡುಕದಿರ್, ತಲೆಗೆಟ್ಟ ಗೂನಿಯೆನ್ನಯ ನುಡಿಗೆ
ಬಿಳ್ದು ತರುವಾಯದೊಳ್ ದೂರದಿರ್. ಮಮತೆಯಿಂ,
ನಿನ್ನ ಭರತನ ಮೇಲಣಳ್ಕರೆಯ ಮಮತೆಯಿಂ,
ರಾಮ ವಿದ್ವೇಷದಿಂದಲ್ತು, ರಾಮಂ ಬಾಳ್ಗೆ !
ಪೇಳ್ದೆನಿನಿತೆಲ್ಲಮಂ ನಿನಗೆ. – ರಾಮಂ ಬಾಳ್ಗೆ !
ಕೇಳನಿತೆ ಬಯಕೆಯಾದೊಡಮೆನಗೆ, ರಾಮನಂ
ಕೋಸಲದೊಳಿರಲೀಯುವೊಡೆ ಲಭಿಸದೀ ನೆಲಂ
ಭರತಂಗೆ. ಚಕ್ರಾಧಿಪತ್ಯಮಂ ಸುಲಿದು ನೀಂ
ದಶರಥನ ಕೈಯಿಂದೆ ಭರತಂಗೆ ಕೊಟ್ಟೊಡಂ
ರಾಮಪಕ್ಷಂ ತಪ್ಪದೊಳಸಂಚುಗಳನಗೆದು      ೩೧೦
ಕೆಡಹುವುದು ಸತ್ತ್ವನಿಧಿ ಬಾಲರ್ಷಿ ಭರತನಂ
ಕೂಪಕ್ಕೆ. ನಿನ್ನಾ ಕುಮಾರಂಗೆ ನೆಲದ ಸಿರಿಯುಂ
ಪಟ್ಟಮಹಿಷಿಯ ಕೌಸಲೆಯ ಕುವರ ರಾಮಂಗೆ
ಪದಿನಾಲ್ಕು ವರ್ಷಂಬರಂ ವಿಪಿನಯಾತ್ರೆಯುಂ
ಜೋಡಿಗೊಳ್ಳುವ ತೆರದಿನೆಸಗವೇಳ್ಕುಂ. ಆಲಿಸದೊ
ವಾದ್ಯ ಮಂಗಳ ರವಂ !”
ಸಡಿಲಿಸಲ್ ಗಾಳನೇಣಂ,
ಕೊಂಡಿಯೊಳಗಣ ದೀವದಾಹಾರಮಂ ಬಿಡದೆ
ನುಂಗಿ, ಸೆಳೆಸೆಳೆದೆಳೆವ ಮೀನಂತೆವೋಲ್ ರಾಣಿ
ಮಂಥರೆಯನಪ್ಪಿದಳ್ :
“ನಿನ್ನ ಮೈಮೆಯನಿನ್ನೆಗಂ
ತಿಳಿಯದಾಂ ಮೂರ್ಖೆಯೆ ದಿಟಂ. ಕೆಳದಿ ಪೇಳೆನಗೆ      ೩೨೦
ಕೈಕೊಳ್ವ ಮುಂಬಟ್ಟೆಯಂ.”
“ಮರುಳೆ, ಸೌಂದರ್ಯದಿಂ
ಗೆಲ್ವನಂಗಜನಖಿಲ ಲೋಕಮಂ. ಕೋಸಲಂ
ತನಗೊಂದು ತೃಣಮಲ್ತೆ ? ಏಳು, ನಡೆ ತಳ್ವದಿರ್ !
ತೊರೆಯಿಳಿದ ಮೇಲೆ ಸಂಕವನಿಕ್ಕಲೇನಹುದು ?
ಕೋಪಗೃಹಮಂ ಸೇರ್ದು, ನೆರವೇರುವನ್ನೆಗಂ
ನಿನ್ನರಕೆ, ಹೊರ ಬಾರದಿರ್ !”
ಪೋದಳತ್ತಲ್ ಕುಬ್ಜೆ.
ದೀಕ್ಷೆಯಂ ಕೈಕೊಂಡು ಹಠಮೂರ್ತಿಯಾಗೀಕೆ
ಪೊಕ್ಕಳಾ ಕೋಪಗೃಹಮಂ. ಮೆಯ್ಯೊಡವೆಗಳನಿಳ್ದು
ದಿಕ್ಕುದಿಕ್ಕಿಗೆ ಚೆದರಿ ಸೂಸಿ, ಮುಡಿಯಂ ಕೆದರಿ
ಬೀಸಿ, ದಿಂಡುರುಳಿದಳ್ ದಶರಥಪ್ರಿಯ ರಾಜ್ಞಿ, ೩೩೦
ಸಿದ್ಧಿಗಾಗತಿ ಕಠೋರದ ಸಾಧನೆಗೆ ನಿಲ್ವ
ಕರ್ಮಠ ರಜೋಗುಣದ ಹಠಯೋಗಿಯೋಲಂತೆ.
ತನಯಂಗೆ ಹಿತವೊರೆದು ಕಳುಹಿದ ಅನಂತರಂ
ಕೈಕೆಯಂ ಮದುವೆಯಪ್ಪಂದು ಗೋಪ್ಯದೊಳೆರೆದ
ನುಡಿಯ ಕೊಡುಗೆಯ ನೆನಹಿನಾಶಂಕೆಯೊಳಗಾಳ್ದು
ರವಿಕುಲ ನರೇಂದ್ರಚಂದ್ರಂ, ತನ್ನ ಕಿರುವೆಂಡಿತಿಯ
ಮನಮನೆಂತಾದೊಡಂ ತನ್ನಾಸೆಗೀಳಲ್ಕೆ
ತರಿಸಂದು ಹೊರಟನವಳೆಡೆಗೆ, ಮೀನಾಕ್ಷಿಯಂ
ಶೃಂಗಾರ ಜಾಲದೊಳ್ ಪಿಡಿವ ಬುದ್ಧಿಯ ರಸದ
ಹರಿಗೋಲಿನೊಳ್ ತೇಲಿ. ಕೈಕೆಯಂತಃಪುರಂ ೩೪೦
ಸಾರೆ ಬರೆವರೆ, ದೊರೆಯ ಬಗೆ ನಲಿದುದಿಂಪಿಂಗೆ,
ನೆನೆದು ರತಿಸದೃಶ ರೂಪಸಿಯ ಸೌಂದರ್ಯಮಂ.
ಮತ್ತೆ, ಸುರದೇಹದಾ ಸುರೆಯ ಸಮ್ಮೋಹಶಿಖಿ
ಕೆರಳುವೋಲ್, ಮನ್ಮಥಂ ಬಿಜ್ಜಣಿಗೆ ವೀಸಿದನೆನಲ್,
ರಾಣಿಯಂತಃಪುರವ ಸುತ್ತಿ ನಳನಳಿಸಿರ್ದ
ನಂದನದಿ, ಗಿಳಿ ನವಿಲ್ ಕೊಂಚೆ ಕೋಗಿಲೆಯಂಚೆಗಳ್
ನಾನಾ ಶಕುಂತಂಗಳೇಕ ಕಾಲದೊಳುಲಿಯ
ತೊಡಗಿದುವು. ಭೋಗರಾಗದ ಕುಡಿಯೆ ಪರಿವಂತೆ,
ತಳಿರಲರ್‌ಗೆದರಿ ಕುಣಿದುವು ವೃಕ್ಷಗಳ್ ಮೇಣ್ ವಲ್ಲಿ.
ವೇಣು ವೀಣೆಗಳಿಂಪುದನಿ ಕರ್ಣಕಮೃತಮಂ   ೩೫೦
ಸೂಸುತಿರೆ, ಚೆಲ್ವು ಚೆಂಗಳ್ಯಾಯ್ತು ನರಪತಿಯ
ಮತಿಗೆ. ರತಿಯಿಚ್ಛೆಯಿಂ ರತಿಯೆಡೆಗೆ ನಡೆಗೊಳ್ವ
ಮೀನಕೇತನನಂತೆ ಕಾಮಚೇತನನಾಗಿ
ನಡೆದನು ನರಾಧಿಪಂ ದಯಿತೆಯ ಸಜ್ಜೆವನೆಗೆ.
ರತ್ನಮಂಚದ ಮೇಲೆ ಪತ್ನಿಯಂ, ಲಲಿತೆಯಂ,
ಕಾಣದಾ ಲುಲಿತೇಂದ್ರಿಯಂ ಶೂನ್ಯತೆಗೆ ಸುಗಿದು
ಸೆಡೆತನುಮ್ಮಳದಿಂದೆ, ಬಾಳನೆಲ್ಲಂ ತೇಯ್ದು
ಹೊಟ್ಟೆ ಬಟ್ಟೆಯ ಕಟ್ಟಿ ಸುಯ್ದಾನಮಂ ಗೆಯ್ದ
ತನ್ನ ಹೇಳಿಗೆಯ ಹೊನ್ ಕಳುವಾದುದಂ ಕಂಡ
ಕಡು ಕೃಪಣನಂತೆ. ಕಾದಲ್ಮೆಯಾತುರದಿಂದೆ  ೩೬೦
ಕೇಳಿದನ್ ಪಡಿಹಾರಿಯಂ : ‘ಪೇಳ್ ದೇವಿಯೆಲ್ಲಿದಳ್?’
ನಡುನಡುಗಿ ಹಿಂಜರಿದು ನೆಲವ ನೋಡುತ್ತವನ್
ಕೈಮುಗಿಯುತೆಂದನ್ ಕಠೋರಮಂ. ಸೀಸಮಂ
ಕಿವಿಗೆ ಕರಗಿಸಿ ಹೊಯ್ದ ತೆರನಾಯ್ತು. ಬೆಬ್ಬಳಿಸಿ,
ಸುಯ್ದು, ಪರವಶತೆವೆತ್ತಂದದಿಂ ತತ್ತರಿಸಿ,
ಕೋಪಗೃಹಮಂ ಪೊಕ್ಕನಾ ನವಿರ್ ನರೆತರಸು,
ಕನಸಿನೊಳ್ ಕಂಡ ಪುಲಿಯಾರ್ಭಟೆಯನೆಳ್ಚರ್ತುಮ್
ಆಲಿಪನವೋಲ್.
ಕೆದರಿದಾಭರಣಗಳೆ ತಾರೆಗಳೊ,
ಕರ್ಪು ಸೀರೆಯೆ ಗಗನ ನೀಲಿಮೆಯೊ, ಚೆಲ್ಲಿದಾ
ಚಿಕುರ ರಾಶಿಯೆ ಕತ್ತಲೆಯ ಮೊತ್ತಮೆಂಬಂತೆವೋಲ್    ೩೭೦
ಗ್ರಹಣರಾತ್ರಿಯ ಮಾಳ್ಕೆಯಿಂ ಭಾರ್ಯೆ ಬಿಳ್ದಿರೆ ನೆಲದಿ,
ಮ್ಲಾನಮುಖಚಂದ್ರಂ ನರೇಂದ್ರನವಳೆಡೆಗೋಡಿದನ್ :
ವ್ಯಾಧ ವಿಷದಿಗ್ಧ ಬಾಣಕ್ಕುರುಳಿ ಬೀಳಲ್ಕೆ
ಪೆಣ್ಣಾನೆ ತಾಂ ಗಂಡಾನೆ ಸೊಂಡಿಲಿಂದದನಪ್ಪಿ
ಕೂರ್ಮೆಗುಪಚಾರಮಂ ಗೈವವೋಲ್, ಆಕೆಯಂ
ತೋಳ್ಗಳಿಂದಮರ್ದಪ್ಪಿ, ಮುಂಡಾಡಿ, ಮುದ್ದಿಸುತೆ,
ಜೇನ್ನುಡಿಗರೆದನಿಂತು :
“ಕಲ್ಯಾಣಚೇತಸಿಯೆ, ಪೇಳ್,
ಪ್ರೇಮಪಕ್ಷಿಯ ಹೇಮಪಂಜರಮೆ, ಅಳಲಿದೇನ್ ?
ಮುನಿಸೆ ನನ್ನೊಳ್, ಜೀವಿತೇಶ್ವರಿಯೆ ? ಹೇಮಾಂಗಿನಿಯೆ,
ಹುಡಿ ಹತ್ತಿ ಹೊರಳುತಿರ್ಪೀ ನಿನ್ನನವಲೋಕಿಸೀ           ೩೮೦
ಲೋಚನಂಗಳ್ ಸೀಯುತಿವೆ. ಬೇಯುತಿದೆ ಹೃದಯಂ
ಸಿಡಿಲ್‌ಪೊಯ್ದ ಬಾಳೆವೋಲ್. ಸಹಿಸಲಾರೆನ್, ಕಾನ್ತೆ,
ಕಮನೀಯ ಸೌಖ್ಯವಿಶ್ರಾನ್ತೆ. ನಿಂದಿಸಿದರಾರ್ ?
ಪರಿಭವಕೆ ಗುರಿಯಾಯ್ತೆ ನಿನ್ನ ಮಾನಂ? ರುಜೆಗೆ
ತೆರವನಿತ್ತುದೆ ನಿನ್ನ ತನುನಂದನಂ? ಕೊಲೆಯೆ?
ಕೊಲ್ಲಿಪೆನ್ ! ತಳ್ವವೇಳ್ಕುಮೆ ಕೊಲೆಯನಂತೆಗೆಯ್ವೆನ್ !
ನ್ಯಾಯಮನ್ಯಾಯ ಧರ್ಮಾಧರ್ಮಮೊಂದುಮಂ, ಕೇಳ್,
ಪರಿಗಣಿಸದೆಯೆ ನಡೆವೆ ನಿನ್ನಿಷ್ಟಮಂ, ದೇವಿ,
ಬಗೆಯನುಸಿರೆನಗೆ. ಮಂಗಳೆ, ಕೇಳ್ವುದೀ ಪೈಜೆಯಂ :
ಪ್ರಾಣಮಂ ಪಣವೊಡ್ಡಿದೆನ್. ನಿನ್ನಭೀಷ್ಟಕೆ ಸಿದ್ಧಿ ೩೯೦
ನಿರ್ವಿಘ್ನಮಿನ್. ಏಳ್ ! ಕೇಳ್ !”
ಧರಾಧೀಶನಿಂತು
ಮನಸಿಜನ ಮಲರಲಗಿನೇರಿಂದೆ ಮೆಯ್ಮರೆತು,
ಕಾಮಂಗೆ ಸಿಲ್ಕಿ ರಾಮನ ತೊರೆವನೆಂಬಂತೆ,
ತನ್ನ ಬಟ್ಟೆಗೆ ಬರ್ಪುದಂ ಕಾಣುತಾ ಕೈಕೆ
ತುದಿಯ ಬೆರಳಿಂದೆ ಕಣ್ಬನಿ ಮಿಡಿದು ನುಡಿದಳಯ್,
ತೆರೆದ ಬಿಂಬಾಂಧರಮೆ ನೃಪಮತಿಯ ಗಜಗತಿಗೆ
ಸತಿಯಗೆವ ಬಾವಿಗಪ್ಪಿನ ಕಾವಿಮಣ್ಣಾಗೆ :
“ರುಜೆಯಲ್ತು, ಜೀವೇಶ. ಏಕೆನಗೆ, ನೀನೆಯಿರೆ,
ಬೇರೆ ಐಸಿರಿ, ನೃಪತಿ ? ನಿಂದೆಯಪಮಾನದಿಂ
ಬೆಂದಿಲ್ಲ ಬಗೆ. ನಾಲಗೆಯ ಜಾಣ್ಮೆಗೆನ್ನಾಸೆ      ೪೦೦
ತೀರದಯ್. ಮನವನೊರೆಯೆನೆ ನಿನಗೆ, ಮನದನ್ನ,
ಕೋರ್ದುದಂ ಕೊಡುವೆನೆಂದಾಣೆಯಿಟ್ಟಾಡಿದೊಡೆ,
ಚುಂಬನದ ಜತುಮುದ್ರೆಯೊತ್ತಿ ?”
“ಪೀಡಿಪೆಯೇಕೆ?
ನಿನಗಿಂ ಮಿಗಿಲ್ ಪ್ರಿಯರೆ, ಪೇಳ್, ನನಗೆ ಮೂಜಗದಿ ?
ಪ್ರಾಣಮಂ ಪತ್ತುವಿಟ್ಟಾದೊಡಂ ನಿನ್ನಿಷ್ಟಮಂ
ಸಲಿಪೆನೆಂದಾಣೆಯಿಟ್ಟಾಡಿದೆನ್. ಮತ್ತಿದೇನ್ ?
ಪುರುಷರೊಳ್ ರಾಮನೆನಗೆಂತಂತೆ ಪೆಣ್ಗಳೊಳ್
ನೀನಲ್ತೆ, ಕುಸುಮಕೋಮಲೆ, ಪ್ರಿಯತಮಂ! ಮುದ್ದು
ಮಗುವೆನ್ನ ರಘುರಾಮನಾಣೆ, ಪೇಳ್ ಬಯಕೆಯಂ;
ನಿನ್ನಾಶೆ ಸೇರ್ದುದೆಂದರಿ ಕಲ್ಪತರುಮೂಲಮಂ !”       ೪೧೦
ದೀಹಕೆರಗಿದ ಹಕ್ಕಿ ಬಲೆಯೊಳಗೆ ಬಿಳ್ದುದಂ
ಕಾಣ್ಬ ಬಿಯದನವೊಲ್ ಲತಾಂಗಿ ಉಲ್ಲಸಗೊಳುತೆ
ಕಾಳಕೂಟವ ಕರೆದಳಾ ದಶರಥಾಸುವಿಗೆ :
“ಧನ್ಯೆ ದಲ್, ಪ್ರಾಣೇಶ, ನಾನಿಂದು ! ಕೇಳ್ದು ನಿನ್ನೀ
ಲೋಕ ಕಲ್ಯಾಣಕರ ವಚನಮಂ ನಲಿಯುತಿಹರಾ
ನಿರ್ಜರರ್, ಪೋದ ಸಗ್ಗಂ ಮರಳಿ ಕೈಸಾರ್ದವೋಲ್!
ಮುನ್ನಂದು ನೀಂ ಪೇಳ್ದುದಂ ಪ್ರಣಯಪ್ರಬಂಧಮಂ
ನೆನವೀವೆನಿಂದು. ನನಗಾ ವರದ್ವಯಂಗಳಂ
ನೀಡವೇಳ್ಕುಂ : ರಾಮಪಟ್ಟಾಭಿಷೇಕಕೆ ಗೆಯ್ದ
ಸನ್ನಾಹದಿಂದೆ ಭರತಂಗೆ ಪಟ್ಟಂಗಟ್ಟಿ,            ೪೨೦
ರಾಜ್ಯಮಿದು ನಿಷ್ಕಂಟಕಿತಮಾಗಲೋಸುಗಂ
ಕೌಸಲ್ಯೆಯಾತನಂ ಕಳುಹು ವಿಪಿನಾಂತರಕೆ,
ಪದಿನಾಲ್ಕೆ ಬರಿಸಂಬರಂ! ನಾರುಡೆಯನುಟ್ಟು,
ಕೃಷ್ಣಮೃಗ ಚರ್ಮಮಂ ಧರಿಸಿ, ಜಟೆಗಳನಾಂತು,
ಬಾಳ್ಗೆ ದೂರಾರಣ್ಯದೊಳ್ !”
ಮದನ ಸದನವೆನೆ
ಮುಂತೆ ಮೋಹವನೆರಚುತಿರ್ದವಳ ವದನಮಂ
ಬೆಬ್ಬಳಿಸಿ ನೋಡುತಿರೆ, ಮಂದೈಸಿದುದು ದಿಟ್ಟಿ
ನೃಪಗೆ. ಕದಡಿತು ಮನಂ. ಪಲ್ಲಟಿಸಿದುದು ಬುದ್ಧಿ.
ಬಿಳ್ದನವನಿಪನವನಿಗಶನಿವೊಯ್ಲಿಂಗುರುಳ್ವ
ಮರನಂತೆ. ಸತಿಯ ಶೈತ್ಯೋಪಚಾರಕೆ ಮತ್ತೆ            ೪೩೦
ಚೇತರಿಸಿ, ತನ್ನ ಕಣ್ಣಂ ತಾನೆ ನಂಬದೆಯೆ,
ಬೆಳ್ಪಮರ್ದ್ದಂತೆವೋಲ್ ಬಾಯ್ದೆರೆದ ಬೆರಗಿಂದೆ
ತನ್ನೆದುರೊಳಿರ್ದಾಕೆಯಂ ನಟ್ಟ ನೋಟದಿಂ
ನೋಡಿ :
“ತೆಗೆ ತೆಗೆ, ಪುಸಿಯದಿರ್ ! ಪುಣ್ಯರೂಪದಿಂ
ಪಾಪಮೇನುದಿಸುವುದೆ? ಹೊಮ್ಮುವುದೆ ಕೈಕೆಯಿಂ
ಮಂಥರೆಯ ವಿಕೃತರೂಪಂ? ಚಿತ್ತ ವಿಭ್ರಾಂತಿ
ದಿಟಮೆನಗೆ !”
ಎನುತ್ತೆ, ದುಃಸ್ವಪ್ನದಿಂದೊಯ್ಯನೆ
ಜಗುಳ್ವಂತೆ, ತಡೆಯಲಾರದೆ ತತ್ತರದಿನೆಳ್ದು,
ತೂಗುತಂ, ಬಾಗುತಂ, ತಪ್ಪುವಜ್ಜೆಯನಿಡುತೆ
ಗೋಡೆಯ ಪಿಡಿದು ಬಡಿಗೊಂಡಂತೆ ನಡೆವುತಂ,          ೪೪೦
ಕೋಪಗೃಹದಿಂದೆಂತೊ ಪೊರಗೆವಂದುದೆ ತಡಂ,
ನಿಲ್ಲಲಾರದೆ ಕುಸಿದು ಕುಳ್ತನಾ ಧರಣಿಪತಿ,
ಮಂತ್ರ ಶಕ್ತಿಗೆ ಸಿಲ್ಕಿ ಹಾವಾಡಿಗಂ ಬರೆದ
ಮಂಡಲದ ತಡೆಯೊಳಗೆ ಬುಸುಗುಡುವಹೀಂದ್ರನೋಲ್.
ಕಾರ್ದ ವಿಷಮಂ ತಾನೆ ಮರಳಿ ಪೀರಲ್ಕೆಳಸಿ
ಬಳಿಸಾರ್ವ ನೀಲನಾಗಿನಿಯಂತೆ ತನ್ನೆಡೆಗೆ
ತಪಿಸುತೈತರುತಿರ್ದ ಭರತಜನನಿಯನಿರದೆ
ನೂಂಕಿದನ್, ಮುನಿಶಾಪಮಹಿಮೆಯಿಂದೆಂಬವೋಲ್,
ಕೋಪಿ :
“ಕುಲಘಾತಿನಿಯೆ, ಪಾಪಿನಿಯೆ, ನಡೆ, ತೊಲಗು !
ಮಣಿಹಾರವೆಂದು ಕಂಠಕೆ ಮಾಲೆಯಂ ಸೂಡಿದೆನ್.     ೪೫೦
ಫಣಿಯಾಗಿ ಹೆಡೆಯೆತ್ತಿ ಕರ್ಚಿ ವಿಷವೂಡಿದುದು
ರಘುಕುಲದ ಮೆಯ್ಗೆ. ದುರ್ಬುದ್ಧಿಯಂ ನಿನಗದಾರ್
ಪೇಳ್ದರೀ ಕುಲಕೆ ಹಾಲಾಹಲವನೆರೆವ ಮತಿಯಂ ?
ನೀಮ ಬೇಡಿದುದು ವರಮೆ ? ನನ್ನ ಹೃತ್‌ಪಿಂಡಮಂ
ಪಿಂಡಿ ನೆತ್ತರ್ ಕುಡಿಯಲೆಳಸಿದೆ : ನಿಶಾಚರಿಯೆ
ನೀಂ ದಿಟಂ ! ರಾಮನಂ ನೋಡಿ ತಣಿಯದು ಮನಂ
ನನಗೇಗಳುಂ. ರಾಮನನ್ನಲ್ತು, ಕೇಳ್ ಕೈಕೆ,
ನೀನಡವಿಗಟ್ಟುತಿಹೆ ನಿನ್ನ ಮಾಂಗಲ್ಯಮಂ.
ಭರತ ರಾಮರ್ಗೆಣಿಸದಿರ್ ಭೇದಮಂ. ರಾಮ
ಚಂದ್ರೋದಯಕೆ ಭರತನಾನಂದ ಸಾಗರಂ    ೪೬೦
ಪ್ರೋಲ್ಲಾಸಗೊಳದೆ ? ದುರ್ಬೋಧೆಗೊಳಗಾಗಿ ನೀಂ
ಕುಲಗೇಡಿಯಾಗದಿರ್. ನಿನ್ನ ಮೆಯ್ಯೆಂತಂತೆ
ನಿನ್ನ ಮನಮುಂ ಚೆಲ್ವನಾಂತಿರ್ಕೆ. ಮುತ್ತುಗಳ್
ಮುತ್ತುಸಿಪ್ಪಿನೊಳಿರಲ್ ಪ್ರಕೃತಿ; ಮತ್ತಾ ಫಣಿಯ
ತತ್ತಿಗಳಿರಲ್ ವಿಕೃತಿ ! ಕಂಡರಿಯೆನಿನ್ನೆಗಂ
ನಿನ್ನೊಳ್ ವಿರೂಪಮಂ ಇಂತೇಕಿದೊಮ್ಮಿಂಗೆ
ಇಂದೀ ವಿಕಾರಚಿತ್ತಂ ನಿನಗೆ, ಪೇಳೆನಗೆ,
ಇಂದೀವರಾಕ್ಷಿ ?”
ಕೋಪದಿನೊಯ್ಯನೊಯ್ಯನೆಯೆ
ಇಳಿದಿಳಿದು, ಹೃದಯ ತಾಪದಿ ದೀನಮನನಾಗಿ,
ದುಃಸ್ಥಿತಿಯನಾಂತಾ ನೃಪೇಂದ್ರನಂ ಕಾಣುತಾ            ೪೭೦
ಕೇಕಯ ಕುಲೀನೆಯಾಕುಲೆಯಾದಳೆದೆಗರಗಿ.
ತನ್ನ ಕೇಳ್ಕೆಗೆ ತಾನೆ ಬೆದರಿದಳ್. ಕೊರಳ ಸೆರೆಗಳ್
ಬಿಗಿಯೆ, ಮೆಯ್ ನಡುಗಲಾ ಗದ್ಗದಿಸಿದಳ್ ಮಹಿಳೆ
ಕೈಮುಗಿದು :
“ರಾಜೇಂದ್ರ, ಕೊಳ್ಳೆನಗೆ ಬೇಡಮಾ
ನಿನ್ನ ವಾಗ್ದಾನಗಳ್. ನಿನಗಿನಿತು ನೋವೆಸಗಿ
ನಾನುಮಾ ನನ್ನ ತವರಿನೊಳಿರ್ಪ ಕುವರನುಂ
ಸೊಗದೊಳಿರ್ಪೆವೆ ? ಮರೆತೆನಿನ್ನೆಂದುಮಾಂ ನೆನೆಯೆನಾ
ನಿನ್ನ ವರದಾನಮಂ ಪೇಳ್ವುದೆ ತಡಂ ಬಯಕೆ
ಕಲ್ಪತರು ಮೂಲಮಂ ಸೇರ್ವುದೆಂದೆನಗೊಲಿದು
ರಾಮನಾಣೆಯನಿಟ್ಟುದಕೆ ಕೇಳ್ದೆನಲ್ಲದೆಯೆ       ೪೮೦
ಅಮಂಗಳಕೆ ನೋಂತೆನಿಲ್ಲಾಂ !”
ಕಬಂಧನ ಮೊರೆಯೊ ?
ಶಬರಿಯ ಕರೆಯೊ? ರಾಮನಾತ್ಮಾಭಿಲಾಷಿತಮೊ?
ಪಾತ್ರಂಗಳಂತರಾಳದಿ ತನ್ನ ಸೂತ್ರಂಗಳಂ
ನಡೆಯಿಪಂತರ್ಯಾಮಿ ಶಕ್ತಿಯ ವಿಲಾಸಿತಮೊ?
ಕೈಕೆಯಾಡಿದುದಾಯ್ತು ಮನಕೆ ಮೂದಲಿಕೆಯೋಲ್!
ಪ್ರೋಜ್ವಲಿಸಿದುದು ಕೋಪನ ಜ್ವಾಲೆ ಭೂಮಿಪಗೆ.
ಪ್ರಾಣಾಗ್ನಿಪರ್ವತ ಜ್ವಾಲಾಮುಖಿಯ ಮುಖಂ
ನೀರ್ಬೆಂಕೆಯಂ ಪೊನಲ್ಗರೆಯುತೋಕರಿಪಂತೆ
ರೋಷಭೀಷಣನಾಗಿ ಕಾರ್ದನ್ ಕಠೋರಮಂ :
“ಪತನದಿಂ ಪತನಕೆನ್ನಂ ನೂಂಕಲೆಳಸುವೆ, ಪಾಪಿ.      ೪೯೦
ಕೊಲ್ಲಲೈತರ್ಪುರುಳ್‌ಗಣ್ಣಿಯಂ ಪೊನ್ನೆಂದು
ಕೊರಳ್ಗೆ ಸಿಂಗರಗೊಳ್ವ ಗಾಂಪನವೊಲಾದೆನಾಂ
ಕೈವಿಡಿದು ನಿನ್ನಂ. ವರಂಗಳಂ ನೀಡಲಾ
ರಾಮನನಡವಿಗಟ್ಟಿ ರಾಜ್ಯಮಂ ಬೇಡಿದಯ್ !
ಮತ್ತೀಗಳವುಗಳಂ ಬೇಡವೆಂಬುವ ನೆವದಿ
ವಾಗ್‌ಭ್ರಷ್ಟನಂ ಮಾಡಿ ರವಿಕುಲ ಯಶೋದೀಪ್ತಿಯಂ
ನನ್ನಿಂದೆ ಮಸುಳಿಸುವುಪಾಯಮಂ ನೆನೆವೆ ! ಕೇಳ್,
ಕೈಕೆ, ನಿನ್ನಂ ನೆಯ್ದನಾ ಪುಲಿ ದರಿಗಳೆರಡುಮಂ
ಕೂಡಿಸಿ ವಿಧಾತಂ ! ನೀನೆನ್ನ ಸರ್ವನಾಶಂ !
ಪೆಣ್ಣಲ್ತು; ಕೀನಾಶನೊಡ್ಡಿದ ವಿನಾಶಪಾಶಂ !-  ೫೦೦
ಅಂಚೆದಿಪ್ಪುಳ್ ಸಜ್ಜೆಯೊಳ್ ಪವಡಿಪಾತನಂ
ಕಲ್‌ಮುಳ್ಳಿಗಟ್ಟಲ್ಕದೆಂತು ಬಗೆದಂದೆ ನೀಂ?
ಚೆಲ್ವೆ ಕಿರುವೆಂಡಿತಿಗೆ ಮರುಳಾಗಿ ಮುಪ್ಪುದೊರೆ
ಕಂದನಂ ಕಾಡಿಗಟ್ಟಿದನೆಂದು ಲೋಕವೆಲ್ಲಂ
ನಗದಿಹುದೆ ಪೇಳ್, ಪಳಿಗೆ ಗಾದೆಗೈದೆನ್ನ ಪೆಸರಂ ?”
ಕರೆದವಿದ್ಯಾಮಾಯೆಯಂ ಬೆಸಸಿದನು ವಿಧಿ :
“ವಿಭೂತಿಯಾವಿಷ್ಕಾರ ಸಾಧನಾರ್ಥಂ ಬೇಗಮಾ
ಕೈಕೆಯಾತ್ಮಂಬೊಕ್ಕು ರಚಿಸು ವಿನ್ಯಾಸಮಂ!”
ರೂಪಲಾವಣ್ಯದಿಂ ಚಿನ್ನದ ಕಠಾರಿಯೋಲ್
ಮಿರಮಿರುಗಿ ನಿಂದಿರ್ದ ಕೈಕೆ, ತೆಕ್ಕನೆ ಬಿದಿಯ ೫೧೦
ಕೈ ಝಳಪಿಸುವ ಕೈದುವಾದಳೆನೆ, ಮಿಂಚಿದಳ್
ಪುರ್ಬುಗಂಟಿಕ್ಕಿದ ಕಟಾಕ್ಷದಿಂ :
“ಲೇಸಾಯ್ತು !
ಲೇಸಾಯ್ತು, ಕೋಸಲೇಶ್ವರ !” ಸರ್ಪಿಣಿಯ ತೆರದಿ
ಸುಯ್ ಸುಯ್ದಳೆದೆಯ ತಿದಿಯೊತ್ತಿ ಮೂಗಿನ ಸೊಳ್ಳೆ
ವಿಸ್ಫಾರಿಸಲ್ : “ಲೇಸಾಯ್ತು, ಲೇಸಾಯ್ತು ! ತಪ್ಪು
ನಿನ್ನದಾಗಿರಲೇತಕೆನ್ನನೀಪರಿ ಬಯ್ದು
ವರ್ತಿಸುತ್ತಿರ್ಪೆ ಸಾಮಾನ್ಯನೊಲ್, ವನ್ಯನೊಲ್,
ಕೋಸಲಾಧೀಶ! ನೀನೆಯೆ ಮೆಚ್ಚಿ ಕೊಟ್ಟೆ ನನಗಾ
ವರಂಗಳಂ. ನೀನೊಪ್ಪಿ ಕೇಳೆಂದೊಡಾಂ ಕೇಳ್ದೆನಯ್.
ನಿನ್ನ ಗೋಳಿಡುವುದಂ ಕಂಡು ಕೊಳ್ಳೆಂದೆನಾ   ೫೨೦
ದುರ್ದಾನಮಂ ! ಬರಿದೆ ನನ್ನನೇತಕೆ ಬಯ್ವೆ?
ಮಾವನ ಮನೆಗೆ ಕಳುಹುವಾ ನೆವದಿ ಕಂದನಂ
ನಾಡಿಂದೆ ಪೊರಗಟ್ಟಿ, ಭರತನಿಲ್ಲದ ವೇಳೆ
ಕಿತವರುಪದೇಶದಿಂದಶ್ಲೀಲದಾತುರದಿಂದೆ
ಪಟ್ಟಮಹಿಷಿಯ ಮಗಗೆ ಗುಟ್ಟಾಗಿ ಪಟ್ಟಮಂ
ಕಟ್ಟುವೀ ಕುಹುಕವಿದ್ಯಾ ಪ್ರವೀಣಂ ನೀನೆ
ಮಸುಳಿಸಿದ ರವಿಕುಲ ಯಶೋದೀಪ್ತಿಯಂ, ಏನಬಲೆ
ನಾಂ ಸಮರ್ಥೆಯೆ ಮರಳಿ ಬೆಳಗಿಸಲ್ ? ಶಕ್ತನಾ
ರಾಮನೊರ್ವನೆ ಮಸುಳ್ದಾ ಯಶೋದೀಪ್ತಿಯಂ
ಮತ್ತೆ ಪೊತ್ತಿಸಲಂತೆ ಕಾಪಿಡಲ್ ಕಿಡದವೋಲ್?”         ೫೩೦
ಸತಿಯ ನಾಲಗೆಯ ಮಸೆದಲಗಿನಾಘಾತಕಾ
ಪೃಥಿವೀಶ್ವರಂ ಪ್ರತಿಯನುತ್ತರಿಸಲಾರದೆಯೆ
ಮತಿಶೂನ್ಯನಾಗಿ ಮೂರ್ಛೆಗೆ ಜೋಲ್ದನಗಮೋಡುವೋಲ್.
ಅತ್ತಲನಿತರೊಳೋಡಿದಳ್ ಕುಬ್ಜೆ. ಕಂಡಳಾ
ರಾಮನಂ, ಪಟ್ಟಾಭಿಷೇಕ ಶುಭವಾರ್ತೆಯಂ
ಕೇಳ್ದ ಸಂತೋಷದಿಂ ದೇವಾದಿದೇವನಂ
ಪೂಜಿಸುತ್ತಿರ್ದ ತಾಯೊಡಗೂಡಿ ಪೂಜೆಯೊಳ್
ಮುಳುಗಿರ್ದ ಗುರುಭಕ್ತಿಧಾಮನಂ. ರೋದಿಸುತೆ
ಕಾಲ್ವಿಡಿದಳಾತನಂ. ಕನಿಕರಿಸಿ ಕೈವಿಡಿದು
ತನ್ನನೆತ್ತಿದ ಕರುಣಿಗಳ ಬಲ್ಲಹಂ ಪ್ರಶ್ನಿಸಲ್,    ೫೪೦
ಗದ್ಗರಿಸಿ ತೊದಲಿದಳ್ ಸತ್ಯಮನಸತ್ಯದಿಂ
ಬೇರ್ಪಡಿಸಲಸದಳಂ ತಾನಪ್ಪವೋಲ್. ಬೆರ್ಚ್ಚಿದಾ
ಮಾತೆಗೆ ಸಮಾಧಾನಮಂ ಪೇಳ್ದು, ನನ್ನಿಯಂ
ನಿಚ್ಚಯ್ಸಲೆಂದು ಮೈಥಿಲಿಯಾಣ್ಮನೈತಂದನಾ
ಭರತನಂಬಿಕೆಯಿದಿರ ದಶರಥನ ದುಃಸ್ಥಿತ
ದುರಂತ ಸನ್ನಿಧಿಗೆ.
ಮೂರ್ಛಿತ ಮಹೀವಲ್ಲಭನ
ಮೆಯ್ಯನೊಯ್ಯನೆ ನೆಗಹಿ ಕನಕ ಮಂಚಕ್ಕುಯ್ದು
ಬಿಜ್ಜಣಿಗೆಯಿಕ್ಕಿದನ್ ದಾಶರಥಿ. ಕುಬ್ಜೆಯುಂ
ಸಂತಯ್ಸತೊಡಗಿದಳ್ ಕೈಕೆಯಂ, ಇರ್ಕಯ್ಗಳಿಂ
ಮೊಗಂಮುಚ್ಚಿ ಅಳ್ತು ಕುಳ್ತಿರ್ದಳಂ ಪ್ರೀತಿಯಿಂ ೫೫೦
ತನ್ನನೇನೆಂದು ಬೆಸಗೊಂಡ ಕಂದಂಗಾ ಕೈಕೆ
ಪೇಳಲಾರದೆ ಬರಿದೆ ಗದ್ಗದಿಸಿ, ಗೂನಿಯಂ
ನೋಡಲವಳಾ ನಡೆದುದಂ ನುಡಿದಳೇನೆಂಬೆ
ನಗೆಯ ತಿಂಗಳ್ ಮಿನುಗೆ ರಾಮಾನನಾಂಬರದಿ.
ಧೀರ ಮಂದಸ್ಮೇರ ವದನಾರವಿಂದನಾ
ಕಾಂತಿ, ದಿವಿಜರ ಮುಖದ ತಿಮಿರಮಂ ತಿವಿತಿವಿದು,
ದಿವ್ಯ ಭಾಗೀರಥಿಗೆ ಪುಲಕವೀಚಿಯನುಬ್ಬಿಪೋಲ್
ಸೂಸಿದನು ಮಧುರ ವಾಙ್ಮಕರಂದಮಂ ಕಿವಿಗೆ
ಭರತಾಂಬೆಯಾ :
“ತಾಯಿ, ಇನಿತಲ್ಪಕೀ ಮಹಾ
ದುಮ್ಮಾನವೇಕೆ ? ಕೈಗೂಡಿದುದು ನಿನ್ನಾಸೆ :  ೫೬೦
ರಘುಕುಲೇಶ್ವರನೆನ್ನ ಪಿತೃದೇವ ವಚನಮಂ
ಸಾಮಾನ್ಯಮೆಂದರಿಯದಿರ್. ಋಣಿಗಳೈಸಲೆ
ತನೂಭವರ್ ತಮ್ಮ ತಂದೆಯ ಋಣಕೆ. ನಾನುಮಾ
ಭರತನುಂ ಶತ್ರುಘ್ನ ಲಕ್ಷ್ಮಣರ್‌ವರಸಿ, ಕೇಳ್,
ಹೊಣೆ ನಿಲ್ವೆವಾ ನಿನ್ನ ಬಯಕೆ ಕೈಗೂಡುವೋಲ್,
ಮೇಣಯ್ಯನಿತ್ತ ವಾಗ್ದಾನಂ ಸಫಲಮಪ್ಪವೋಲ್ !
ನೀನ್ ಕೇಳ್ದುದಾ ವರಂ ನಾನೆ ಬೇಡಿದುದಲ್ತೆ ?
ಕಾಡನಲೆದಲ್ಲಲ್ಲಿ ಮುನಿವಸತಿಗಳೊಳಿರ್ದು
ಭೂಮಿಯಂ ನೋಡಿ ಬಹೆನೆಂಬೆನ್ನ ಬೇಡಿತಕೆ
ಬೆದರಿದಯ್ಯಂ, ಬೇಗದಿಂ ಮಕುಟಭಾರದಿನೆನ್ನ            ೫೭೦
ಹಾರಲೆಳಸಿದ ಗರಿಯ ಹಾರೈಕೆಯಂ ತಡೆವ
ಮೋಹದಿಂದಿಂತೆಸಗಿದನ್. ಭರತನಂ ವಂಚಿಸುವ
ಬುದ್ಧಿಯಿನಿತಿಲ್ಲಮಾತನೊಳದಕೆ ನಾಂ ಸಾಕ್ಷಿ.
ನಿನ್ನಾಸೆ ಸಾರುತಿದೆ ನನ್ನ ಕಲ್ಯಾಣಮಂ :
ನೀಂ ತಾಯ್ ದಿಟಂ! ಭರತನಾಳುವನ್; ಬಾಳುವನ್;
ಕೋಸಲ ಧರಾಭಾರಮಂ ಜಗಂ ಮೆಚ್ಚುವೊಲ್
ತಾಳುವನ್ ಶಿರದಿ ! ವನವಾಸಮೇಂ ಸಾಹಸಂ?
ಗಿರಿವನಪ್ರಿಯನೆನಗೆ ಗಿರಿವನಾವಾಸಮೆ
ಕಲಾನಂದಕರಮಲ್ತೆ? ಮೇಣ್ ವಲ್ಕಲ ಜಟೆಗಳೇಂ
ಕಿರೀಟಕಿಂ ಕೀಳೆ ? ಪಿತೃವಚನ ಪರಿಪಾಲನೆಯೆ           ೫೮೦
ನನಗೆ ಧರ್ಮಂ ಪ್ರಥಮಮುತ್ತಮಂ !”
ಒಯ್ಯನೆಯೆ
ಕಣ್ದೆರೆದು ಮೆಯ್‌ತಿಳಿಯುತಿರ್ದ ತನ್ನಯ್ಯಂಗೆ
ಕೈಂಕರ್ಯವೆಸಗುತಿರೆ, ಕುಬ್ಜೆಯೆಂದಳ್ ಮತ್ತೆ :
“ಪೆತ್ತಾತನೆಂತಾದೊಡಂ ಕೊಡುವನೆ ಕುಮಾರಂಗೆ
ಪಟ್ಟಮಂ ಬಿಟ್ಟಡವಿಗೆಯ್ದುವ ನಿರೂಪಮಂ ?
ದೇವನಿಂಗಿತವರಿತು ನಡೆವುದೆ ಪಥಂ ನಿನಗೆ.”
ಕುಬ್ಜಿಕೆಯ ಕಟಕಿಯ ಕಶಾಘಾತಕಟುತೆಗಾ
ದಶರಥಪ್ರಾಣಪಶು ತೇಂಕಿರ್ದುದಂ ಕಂಡು
ಬಾಷ್ಪಾರ್ದ್ರ ರಾಜೀವಲೋಚನಂ !
“ತಾಳ್, ತಾಯಿ !
ಕಂದನಳ್ಕರೆಯಿಂದೆ ತಂದೆ ಬಾಯ್ವಿಟ್ಟದಂ      ೫೯೦
ಪೇಳದಿರ್ದೊಡಮಾನೆ ಪೋದಪೆನರಣ್ಯಕ್ಕೆ.
ಪದಿನಾಲ್ಕರವಧಿಯಂ ತೀರ್ಚಿ ಬಂದಪೆನಮ್ಮ,
ಮರಳಿ ನಿಮ್ಮಾಣತಿಯನೆಸಗಲ್ಕೆ ; ಮತ್ತೆಯುಂ
ನನ್ನಯ್ಯನಡಿಯ ತಾವರೆಯ ಸೇವೆಯನೆಸಗಿ
ಪರಕೆವಡೆಯಲ್ಕೆ !”
ತಾನಾಡಿದೊಳ್‌ನುಡಿಗಳಂ
ಕೇಳ್ದು ಕಣ್ಬನಿವೊನಲ್‌ಗರೆದು ಗೋಳಿಡುತಿರ್ದ
ಪಿತೃ ಪೂಜ್ಯಪಾದಂಗಳಿಗೆ ತನ್ನ ಬಾನೆಣೆಯ
ಬಿತ್ತರದ ಪರ್ವತೋನ್ನತ ಪಣೆಯನಿರದೊತ್ತಿ :
“ದುಃಖಿಸದಿರಯ್ಯ. ನಿನ್ನೊಲ್ಮೆಕೊಡೆ ನೆಳಲಿರಲ್
ಕಾಡಾದೊಡಂ ತಾಯಿ ಕೌಸಲೆಯ ಮಡಿಲಂತೆ            ೬೦೦
ತಣ್ಪೀವುದೆನಗೇಗಳುಂ. ನಡೆವುದೆಲ್ಲಮುಂ
ನಡೆವುದೊಳ್ಪಿಗೆ : ಸರ್ವಶಕ್ತಿಯುಂ ಜ್ಞಾನಮುಂ
ಮತ್ತೆ ಕಲ್ಯಾಣಮುಂ ತಾನಪ್ಪ ಕೃಪೆ ತಾನೆ
ಪಿಡಿದಿದೆ ಜಗದ್‌ರಥವನೆಳೆವ ಶಕ್ತ್ಯಶ್ವಕುಲ
ವಾಘೆಯಂ !”
ತಂದೆಯಂ ಬಲವಂದೆರಗಿ, ಮತ್ತೆ
ಕೈಕೆಗಭಿವಂದಿಸುತೆ ಪೊರಮಟ್ಟನಲ್ಲಿಂದೆ,
ಮಂಗಳಂ ಮನೆಯನುಳಿವಂತೆವೋಲ್. ಧುಮುಕಿತಯ್
ದಶರಥಮನಂ ಮತ್ತೆ ಮೂರ್ಛಾ ಶರಧಿತಲಕೆ :
ಪರಿಗೋಲನೇರ್ದು ಪೊಳೆಯಂ ಪಾಯ್ದು ಪೋಪವಂ
ಪೊನಲ ಪೊಕ್ಕುಳ್ಗೆ ಬರೆ ಕಾಣ್ಬನದೊ : ರಂಧ್ರದಿಂ         ೬೧೦
ನೀರೊಳ್ಕಿ ನುಗ್ಗುತಿರ್ಪುದು ಬುಗ್ಗೆಯೋಲ್ ! ಕೂಡೆ
ದಿಗಿಲ್ಗೊಂಡದಂ ಕೈವೆರಳ್ಗಳಿಂ ತಡೆಯಲ್ಕೆ
ತೊಡಗುವನ್. ಸಾಹಸಂ ಬರಿದಾಗಿ, ತೂಂತಿನಿತು
ಪಿರಿದಾಗಿ, ನುಗ್ಗುತಿಹುದದೊ ಮೊದಲ್ಗಿರ್ಮಡಿಯ ನೀರ್ !
ಬಿಲಜಲಂ ಬಗ್ಗಬಗ್ಗನೆ ಚರ್ಮನಾವೆಯಂ
ತುಂಬುತಿರೆ, ಕುಹರಕರುವೆಯನಿಡುಕಿ ಛಿದ್ರಮಂ
ಮುಚ್ಚಲಿಕ್ಕೆಳಸಲಾ ರೋಕಮಿನ್ನುಂ ಪೆರ್ಚಿ
ಮೊಳಕಾಲಿಗೇರಿದಪುದುದಕಂ. ಹತಾಶೆಯಿಂ
ನೀರಂ ತಡೆಯುವುಜ್ಜುಗಮನುಳಿದು, ಕೈಗಳಂ
ಬೊಗಸೆಗೈದೊಳನುಗ್ಗಿದನಿತಂ ತುಳುಂಕಲ್ಕೆ  ೬೨೦
ಯತ್ನಿಪನ್, ಬರಿದೆ. ನೀರೇರುವುದು ನಾವೆಯಂ
ತುಂಬುತೆ, ಬೆಮರ್ದ್ದೇದುವಾತನೆರ್ದೆಯುಂ ಬರಂ.
ಪುರುಷಪ್ರಯತ್ನಮಂ ಬರ್ದುಕುವಾಸೆಯ ಕೂಡೆ
ನೀಗಿ, ಕೈಮುಗಿವನಾ ವ್ಯೋಮಕ್ಕೆ ದೇವರಂ
ಬೇಡಿ, ಬೇಡುತ್ತಿರಲ್, ದಡದ ಮರಗಳ್ ನಿಂತು
ನೋಡುತ್ತಿರಲ್ ಮುಳುಗುವನ್, ಕಣ್ಗೆ ಮರೆಯಪ್ಪ
ಹರಿಗೋಲ್‌ವೆರಸಿ. ಜಲೋಚ್ಛ್ವಾಸದಿಂ ಪರಿವುದಾ
ವಿಸ್ತೃತ ಸಲಿಲ ರಾಶಿ. ಕಂತಿದನೊ ತಾನಂತೆವೋಲ್
ದಶರಥನೃಪಂ ಮತ್ತೆ ಮೂರ್ಛೆಯ ತಳಾತಳಕ್ಕೆ !