ಏಕಳುವೆ, ತೇಜಸ್ವಿ ? ಕಲ್ಪನೆಯೆರಂಕೆಯಂ
ಏರಿ ಬಾ ನನ್ನೊಡನೆ : ಕಾಣ್ಬುದೇನದೊ ಅಲ್ಲಿ
ಕಿಷ್ಕಿಂಧ ಗಿರಿವನ ಗುಹಾದ್ವಾರದೆಡೆಯಲ್ಲಿ ?
ನಿಂದಿರ್ಪನೋರ್ವ ಹರ್ಯಕ್ಷ ವಕ್ಷಾನ್ವಿತಂ
ವೃಷಭ ಸನ್ನಿಭ ಗಮನನಿಭಸಮ ದೃಢ ಶರೀರಿ !
ಮತ್ತೆ ಶತಪಥಮಲೆವನೇಕವಂ, ಏಕಾಂಗಿ ?
ಬಾಹುದಂಡದಿ ಗದಾದಂಡಮಂ ಪೊತ್ತೇಕೆ, ಪೇಳ್,
ಪುಲ್ಮೀಸೆ ಕವಿದಿರ್ಪ ಗವಿಯ ಬಾಯನೆ ನೋಡುವನ್ ;
ಸುಯ್ವನಾಳೋಚಿಸುವನೊಯ್ಯನೆ ಗದೆಯನಿಳಿಸಿ
ತಳ್ಪಲಡವಿಯನೊರ್ಮೆ. ಬೆಟ್ಟನೆತ್ತಿಯನೊರ್ಮೆ,           ೧೦
ನೋಡದೆಯೆ ನೋಡಿ ? ವಾನರ ಕುಲಂ, ನರವರಂ,
ವಾಲಿಯ ಸಹೋದರಂ ಸುಗ್ರೀವನಲ್ತೆ ಆ
ಓಜೋನ್ವಿತಂ ? ಬಿಲಮುಖದೊಳೇಂ ತಪಂಗೆಯ್ವನೇಂ ?
ಕಳೆದತ್ತು ಶತದಿನಂ. ಕಳೆದತ್ತು ಶತರಾತ್ರಿ.
ದೀರ್ಘ ದಶದಶ ದಿನಂ. ದೀರ್ಘ ದಶದಶ ರಾತ್ರಿ.
ದಿನರಾತ್ರಿ ರಾತ್ರಿದಿನಮನಿಶಂ ಗುಹಾಮುಖದಿ
ವಾಲಿಯನುಜಂಗದೇನಾ ಪರಿವ್ರಾಜನಂ ?
ಧವಳಿಸಿತವುಂಚಿ ಕೌಮುದಿ ಧೌತ ಧಾತ್ರಿಯಂ
ಸುಪ್ತಜನ ರಾತ್ರಿ. ನಿಶ್ಶಬ್ದಾಬ್ಧಿಯಾಳಕ್ಕೆ
ಕಂತಿರ್ದುದೈ ಕಿಷ್ಕಿಂಧೆ. ಇರ್ದಕಿರ್ದಂತೊಂದು            ೨೦
ವೈರಭೈರವ ಅಟ್ಟಹಾಸಂ ಕೊಡಂಕೆಯಂ
ಇರಿದುದು ; ಕಲಂಕಿದುದು ಪುರಮೌನಮಂ. ಕಿವಿಗೆ
ಕೆಪ್ಪುಮಂತೆಯೆ ಬಗೆಗೆ ಬೆಪ್ಪುಮೊದವಿರೆ ಜನಕೆ,
ಬಂದನು ಜನೇಂದ್ರನಾ ರಿಪುನಿಷೂದನ ವಾಲಿ
ತನ್ನರಮನೆಯನುಳಿದು. ತನ್ನ ತಂದೆಯ ಕೊಂದ
ಮುನ್ನಿನ ಹಗೆಗೆ ತನ್ನನೊಕ್ಕುವ ಬಗೆಗೆ ಸೊಕ್ಕಿ
ಗರ್ಜಿಪಸುರನನರಿತನಾ ದುಂದುಭಿಯ ಮಗಂ
ಮಾಯಾವಿಯೆಂದು. ದುಂದುಭಿಯ ದುಷ್ಕೃತಿಯಲಾ
ನೀನೆಂದು ಪ್ರತ್ಯಟ್ಟಹಾಸಮಂ ಗರ್ಜಿಸುತೆ
ಬೆನ್ನಟ್ಟಿದನ್ ಯಮೋಪಮಂ, ಶಿಖರೋಪಮದ           ೩೦
ಬಂಡೆ ಮಂಡೆಯ ಗದೆಯನೆತ್ತಿ. ಬೆನ್ಬಲಮಾಗಿ
ತನ್ನಣ್ಣನೊಡಲೆಯೆನೆ ಚರಿಸಿದನ್ ಸುಗ್ರೀವನುಂ.
ಕಾಣಲಿರ್ವರನೆಳೆತಟ ಮಾಡಿ ನೆಲೆಗೊಯ್ದು
ಕೊಲ್ಲಿಸುವೆನೆನ್ನವರ ಕೈಯಿಂದಮೀ ಮಹಾ
ಕಪಿಕೇತನರನೆಂದು, ಓಡಿದನ್ ಮಾಯಾವಿ,
ಬೆಳ್ದಿಂಗಳಿರುಳಿನೊಳ್ ನೆಳಲ ಕರ್ದಿಂಗಳಂ
ಮೆಯ್ಯ ಕರ್ದಿಂಗಳಿನಿಳಿಕೆಗೈದು. ಅರೆಯಟ್ಟಿದನ್
ರೋಷವಶನಿಂದ್ರಸಂಭವಂ, ವಾಲಿ ; ಬೆಂಬಲಂ
ಸಂಚಲಿಸಿದನ್ ಸೂರ್ಯಸಂಭವಂ, ಸುಗ್ರೀವ.
ಓಡುತಾ ಮಾಯಾವಿ ತಾಂ ಮೆಯ್ಗರೆದನೊಯ್ಕನೆಯೆ   ೪೦
ನುರ್ಗ್ಗಿ ತೃಣಸಂಛನ್ನ ಧರಣಿಯ ಮಹಾ ಗುಹಾ
ವಿವರಮಂ. “ನಿಲಿಲ್ಲಿ, ಸುಗ್ರೀವ, ಅಸುರನಂ
ಒಕ್ಕಿ ಬಹೆನನ್ನೆಗಂ ಬಿಲದ ಬಾಯೆಡೆಯಿರ್ದು
ಕಾಯುತಿರ್ !” ಇಂತಾಣತಿಯನೊದರಿ ಆ ವಾಲಿ
ವಾನರ ಮಹಾವೀರನಿರದೆ ನೆಗೆದನ್ ಬಿಲ
ರಸಾತಲಕೆ ! ಕಾಯುತಿಹನಣ್ಣನಾಣತಿಯಂತೆ
ಸುಗ್ರೀವನಾ ಬಿಲದ್ವಾರಮಂ. ನೂರ್ಪಗಲ್
ನೂರಿರುಳ್ ಉರುಳ್ದುವಾದೊಡಮಯ್ಯೊ ಅಣ್ಣನಂ
ಕಾಣದೆಯೆ ಕಾತರಿಸುತಿರ್ಪನದೊ ನೋಡಲ್ಲಿ
ಕಿಷ್ಕಿಂಧ ಗಿರಿವನ ಗುಹಾದ್ವಾರದೆಡೆಯಲ್ಲಿ !     ೫೦
ಕಳೆದತ್ತು ಶತದಿನಂ. ಗತಿಸಿತೈ ಶತರಾತ್ರಿ.
ದೀರ್ಘ ದಶದಶ ದಿನಂ. ದೀರ್ಘ ದಶದಶ ರಾತ್ರಿ.
ದಿನರಾತ್ರಿ ರಾತ್ರಿದಿನಮನಿಶಂ ಗುಹಾಮುಖದಿ
ವಾಲಿಯನುಜಂ ಕಾಯ್ದನಣ್ಣನಳಿವಂ ಮನದಿ
ಶಂಕಿಸುತೆ. ನಿಶ್ಚಯಿಸುತಿರೆ, ನೊರೆಯ ನೆತ್ತರಂ
ಕಾರ್ದುದೈ ಗುಹೆಯ ಬಾಯ್ ! ಭೂಗರ್ಭದಾಳದಿಂ
ಕೇಳ್ದುದಾರ್ಭಟೆ, ನಿರಾಕಾರದೂಹೆಗೆ ಕಣ್ಣು
ಕೈ ಕಾಲುದಿಸುವಂತೆ ! ವಾಲಿ ಮರಣಂ ಗೆತ್ತು,
ಪೆಣದಿನಿಗಳಳಿಗೆಂದು, ಬಿಲದ ಬಾಯಿಗೆ ಗಿರಿಯ
ಗುಂಡು ಹೆಬ್ಬಂಡೆಯನಿಡಿದು, ಜಡಿದು, ಬಲಿದಡಕಿ,        ೬೦
ಮರಳಿದನ್ ಕಿಷ್ಕಿಂಧೆಗೆ …. ಮೇಲೆ ಕಟ್ಟಳೆಯಂತೆ
ಸುಗ್ರೀವನೆರೆಯನಾದನ್ ಕಪಿಧ್ವಜಕುಲಕೆ
ಮತ್ತೆ ಮೇದಿನಿಗೆ.
ಅತ್ತಲಾ ರಿಪುಭೈರವಂ,
ವಾಲಿ, ಕದನದೊಳೊತ್ತಿ ಮುರಿದು ಮಾಯಾವಿಯಂ
ಮತ್ತಿತ್ತಲಿಳೆಯತ್ತಲೈದಿದನ್, ಗೆಲ್ಸಿರಿಗೆ
ತನ್ನ ತೋಳೊಡ್ಯಾಣಮಂ ಮಾಡಿ ಪೊತ್ತುಯ್ವ
ಮತ್ತ ಚಿತ್ತೋತ್ಸಾಹದಿಂ. ಬಂದನಾದೊಡೇಂ ?
ಸುತ್ತಲೆತ್ತೆತ್ತಲುಂ ಕೆತ್ತ ಕಲ್ಗತ್ತಲೆಗೆ
ಕಣ್ ಬತ್ತಲಾದತ್ತು. ಬಟ್ಟೆಗಾಣದೆ ಕಿನಿಸಿ
ಹುಡುಕಿದನು ವಾನರಂ. ಹುಡುಕಿ ತಡವಿದೊಡಹಾ       ೭೦
ಬಂಡೆಗಳನೆಡವಿದನ್. ತೋರದಾದುದು ಹಾದಿ
ಬಿಲದಾದಿ. ಕೂಗಿದನ್ ಮುನಿದು ಕೆಚ್ಚನೆ ಕೆಚ್ಚು
ಕಿಚ್ಚುರಿದು ಸುಗ್ರೀವನಂ, ಗವಿಯದುರುವಂತೆ.
ಮಾರೊರಲ್ದತ್ತು ತಾರಗ್ರೀವದಿಂ ಗುಹೆಯ
ಗೋನಾಳಿ. ಸುಗ್ರೀವನುತ್ತರವನಾಲಿಸದೆ
ಮತ್ತೆಮತ್ತೊರಲಿದನ್, ರವದ ರೌದ್ರಕೆ ಗುಹಾ
ತಾಲವ್ಯದಿಂ ಭೀತಿಶಿಥಿಲಂ ಜಗಳ್ದುವೆನೆ
ಮೃಚ್ಛಿಲಾರೂಪುವೆತ್ತಕ್ಷರಗಳೆಂಬಿನಂ
ಕಲ್ಲು ಮಣ್ಣಕ್ಷತೆಯನೆರಚಿದತ್ತಣಕದಿಂ
ವಾಲಿಯ ತಲೆಯ ಮೇಲೆ ! ಮದಹಸ್ತಿ ಬಲಯುತಂ       ೮೦
ಹಸ್ತದಿಂ ಮಸ್ತಕದಿನಂತೆ ಪದಗದೆಯಿಂದೆ
ತಳ್ಳಿದನ್, ನೂಂಕಿದನ್, ಕುಟ್ಟಿದನ್, ಗುದ್ದಿದನ್,
ಬೈದನೊದೆದನ್, ಕರೆದನುರಿದನ್, ತಪಿಸಿ, ಶಪಿಸಿ,
ಬಲಶಾಲಿ ವಾಲಿ. ಕಂಬನಿಗರೆದನೈ ಕಡೆಗೆ,
ತಾರೆಯಂ, ತನ್ನೊಲಿದ ಹದಿಬದೆಯ ನೀರೆಯಂ,
ನೆನೆದು. ನೆನೆದುದೆ ತಡಂ, ಸಂಚರಿಸಿದುದು ಮಿಂಚು
ಧಮನಿಧಮನಿಯೊಳುಜ್ವಲಂ ಪರಿದು ! ಕಪಿಕುಲಂ
ಚಿಮ್ಮೆಳ್ದನತಿಬಲಂ ! ರುದ್ರಾಟ್ಟಹಾಸದಿಂ
ಕೂಗಿ ಗರ್ಜಿಸಿ ನುಗ್ಗಿದನ್ ತಳ್ಳಿ ! ಶೀಶೆಯಂ
ಕಾಯಿಸೆ ತಟಿಲ್ಲೆಂದು ಮುಚ್ಚಳಂ ಸಿಡಿವವೋಲ್           ೯೦
ಚಂಡವಾನರ ಗಂಡುಗಂಡಕೆ ಸಿಡಿಲ್ದುದಾ
ಬಂಡೆ; ತೋರ್ದುದಾ ಕಂಡಿ ; ಅದೊ ಕಂಡುದಾಕಾಶ !
ಹೊರಹೊಮ್ಮಿದನೊ ವಾಲಿ ! ಸುಗ್ರೀವನಂ ಹುಡುಕಿ,
ಕಾಣದೆಯೆ, ತುಟಿಗಚ್ಚಿದನ್ ರಕ್ತ ಸೋರ್ವಂತೆ.
ಗಿರಿ ನಡುಗೆ ಗರ್ಜನೆಗೆ, ಧರೆ ನಡುಗೆ ಪದಹತಿಗೆ,
ಸಿಡಿಲುಳ್ಕೆಯಾಗಿ ಹೊಕ್ಕನ್ ವಾಲಿ ಬಿದಿಗೆಟ್ಟ
ಕಿಷ್ಕಿಂಧೆಗೆ. ತನ್ನರಸಿ ತಾರೆಯನರಸಿದನ್. ತಪಂ
ಬಡುತಿರ್ದಳಂ ಕಂಡನರಿತನ್ ಕುಮಾರನಿಂ
ಸುಗ್ರೀವನರಸುಗೆಯ್ವಂದಮಂ. ಕರೆಸಿದನ್
ತನ್ನವರನೆಲ್ಲರಂ. ಹೇಳಿದನು ತಾಂ ಪಟ್ಟುದಂ ೧೦೦
ಪಾಡೆಲ್ಲಮಂ, ಕರುಣೆ ಕಿಡಿದೋರೆ ಕೇಳ್ದರಿಗೆ.
ಸಾರಿದನು ಸೋದರದ್ರೋಹಿಯೆಂದನುಜನಂ ;
ಹೊರಿಸಿದನು ರಾಜ ವಿದ್ರೋಹದಪರಾಧಮಂ ;
ರೋಷಪ್ರತೀಕಾರ ಛಲ ಬಲಾನ್ವಿತನಾಗಿ
ನಡೆದನೋಲಗಕೆ ಸುಗ್ರೀವನಾ ! ಸಾತ್ವಿಕಂ
ಸುಗ್ರೀವನತಿಹರ್ಷ ವಿಸ್ಮಿತಂ ವಾಲಿಯಂ
ಕಂಡೊಡನೆ ಸಿಂಹಾಸನವನೊದ್ದು ಬಿಸುಟೆದ್ದು
ಬಂದಪ್ಪಿದನ್ ‘ಬಂದೆಯಾ’ ಎನುತೆ, ಪ್ರೀತಿಯಂ
ತೊದಲು ತೊದಲಾಡಿ. ಕೆಲಂ ತಳ್ಳಿದನ್ ತಮ್ಮನಂ
ವಾಲಿ: “ನೀಚನೆ, ಕಪಟಿ, ಸೋದರದ್ರೋಹದಿಂ
ರಾಜ ವಿದ್ರೋಹದಿಂ ಪತಿತನಾಗಿಹ ಪಾಪಿ,
ಮರಣಮೆ ನಿನಗೆ ಶಿಕ್ಷೆ. ಮೇಣ್, ಕ್ಷಮೆಗೇಳ್ದೊಡಂ,
ದೇಶಚ್ಯುತಿಯೆ ಭಿಕ್ಷೆ !” ನಡೆದ ದಿಟವೊರೆಯಲ್ಕೆ
ಸುಗ್ರೀವನೆಳಸುತಿರೆ “ಎಲವೆಲವೊ ಸಾಲ್ಗುಮೀ
ಕಥೆಯ ಕಪಟಂ. ಕೇಳ್ದೆನೆಲ್ಲಮಂ ….” ರವಿಸುತಂ
ನೋಡಿದನು ಸನ್ಮಿತ್ರನಂ ಅಂಜನಾಪುತ್ರನಂ.
ಕಾರ್ಯಪಟು, ಮಿತಭಾಷಿ, ವಾಕ್ಯಕೋವಿದನವಂ
ವಾಲಿಯಂ ಕುರಿತು : “ಹೇ ಕಪಿವೀರ, ವೈರದಿಂ
ಧರ್ಮಸಾಧನೆಯಾಗದೈ. ನಂಬು ಸೋದರನ
ನುಡಿಗಳಂ. ನೀನಳಿದೆಯೆಂದಂತು ಕಲ್ಮುಚ್ಚಿ    ೧೨೦
ಬಂದನಲ್ಲದೆ ಬೇರೆ ಬಗೆಯೇನುಮಂ ಕಾಣೆ.
ನನ್ನಿಗೆ ಬಲಮೆ ಸಾಕ್ಷಿಯೆಂಬುದಾಗಿರೆ ನಿನ್ನ
ಮತಮೆನಗದುಂ ಸಮ್ಮತಂ. ನೋಳ್ಪಮ್.” ಎನೆ ಕೇಳ್ದು
ಸುಗ್ರೀವನ್ “ಆಗದಾಗದು, ಸಮೀರ ಕುಮಾರ,
ತಗದೆನಗೆ ಭ್ರಾತೃಕಲಹಂ ತಾಂ ದೇಶನಾಶಕಂ !”
ಕೇಳ್ದನಾ ಕ್ರೋಧಾಂಧ ವಾಲಿ. ಸುಗ್ರೀವನಂ
ಮೇಣವನ ಕೆಳೆಯರಂ ನಾಡಿನಾಚೆಗೆ ನೂಂಕಿ
ಬಲ್ಮೆಯಿಂದಟ್ಟಿದನ್. ಒಡವೋಗಲೀಯದೆಯೆ
ಸೆರೆಯಿಟ್ಟನನುಜಸತಿ ರುಮೆಯಂ. ಪ್ರತೀಕಾರ
ಬುದ್ಧಿಗೆಲ್ಲಿಹುದೆಲ್ಲೆ ? ಪುಣ್ಯರೇಖೆಯ ಕೊಂಕಿ     ೧೩೦
ಪುಟ್ಟಿತೆನೆ ಪಾಪಚಕ್ರದ ವಕ್ರತಾ ದ್ರುತಂ,
ಇಂದೊ ನಾಳೆಯೊ ಎಂದೊ ಗೆಲ್ಲದಿರ್ಪುದೆ ಋತಂ
ತನ್ನ ಮುನ್ನಿನ ಋಜುತೆವೆತ್ತು ?
ರಾಜ್ಯಚ್ಯುತಂ,
ನೆಲವನುಳಿದೊಡಮೊಲವನುಳಿಯಲಾರದೆ, ವಿರಹಿ
ಸುಗ್ರೀವನೆಂತಾದೊಡಂ ರುಮೆಯನುಯ್ಯಲ್ಕೆ
ಗೆಯ್ದ ಸಾಸಂ ವಿಫಳಮಾದುದಲ್ಲದೆ ವಾಲಿ
ಬೇಂಟೆಯಾಡಿದನವನನೆಲ್ಲಿಯುಂ ನಿಲಗೊಡದೆ.
ಕಡೆಗೋಡಿದನ್ ಋಶ್ಯಮೂಕಕೆ, ಮತಂಗಮುನಿ
ಶಾಪದಿಂ ವಾಲಿದುರ್ಗಮವಾದ ಮಾತಂಗ
ವನ ಮೇಖಲಾ ಶೈಲ ಶೃಂಗಕ್ಕೆ. ಆ ಮಲೆಯ  ೧೪೦
ಮುಗಿಲಪ್ಪಿದಡವಿ ಮುತ್ತಿದ ತಲೆಯ ಕೋಡಿನ
ತಪಸ್ವಿಯೋಲಿರ್ದ ಬಂಡೆಯ ಜಟಾಜೂಟದಿಂ
ನೋಡೆ ಕಾಣ್ಬುದು ಅನಂತತೆಯ ಬಿತ್ತರದೊಂದು
ಕಣ್ಬೊಲಂ : ಸುತ್ತುಂ ಮತಂಗವನಮತ್ತಲಾ
ಪರ್ವತ ತರಂಗಕೃತ ರಂಗ ವಿರಚಿತ ರಮ್ಯ
ಕಂದರದಿ ಪರಿದುದು ತರಂಗಿಣಿ ತುಂಗಭದ್ರೆ.
ಪರಿಯುತಿರಲದ್ರಿಬಾಹುವ ಪರಿಷ್ವಂಗದಿಂ
ತಡೆದು ತುಂಬುತ್ತುಬ್ಬಿಹಬ್ಬುತೆ, ಗಿರೀಶಂಗೆ
ಹಡೆದ ಹಂಪೆಯ ಸರೋವರ ಸುಂದರಿಯನಿತ್ತು,
ನೃಪ ಸಮುದ್ರನ ನೆರೆಯ ನಡೆದರ್ ನದಿಯ ವನಿತೆ.     ೧೫೦
ಸಹ್ಯಾದ್ರಿ ಕಾನನ ಕ್ಲೇಶ ಯಾತ್ರೆಗೆ ದಣಿದ
ತುಂಗಭದ್ರೆಯ ನೀರ ನಿದ್ರೆಗೆ ನಿಸರ್ಗರಮೆ ತಾಂ
ಮಾರ್ಗ ಸತ್ರದಿ ಸಮೆದ ವಿಶ್ರಾಂತಿ ಮಂಚಮೆನೆ
ಶೋಭಿಸಿತು. ಬೆಟ್ಟದಡವಿಯ ಕಣಿವೆತಳ್ಪಿಲಿನ
ತುಂಬುಗಣ್ಣೆಂಬಿನಂ, ಕಣ್ತುಂಬೆ ತುಂಬಿದಾ
ಪಂಪಾ ಸರೋವರದ ಸಲಿಲದರ್ಪಣ ದೀರ್ಘ
ವಿಸ್ತಾರ ಸರ್ಪಶೈಲಿ. ಕೊಲ್ಲಿಕೊಲ್ಲಿಗಳಾಗಿ
ಕಳ್ತರಿಸಿದಾ ಸರಸ್ತೀರದಿಂದಲ್ಲಲ್ಲಿ,
ಮೊದಮೊದಲ್ ತೆಳುವಾಗಿ, ಮೇಲೆ ದಟ್ಟಿತ್ತಾಗಿ,
ಬರಬರುತೆ ಕಡಿದಾಗಿ, ಮತ್ತೆ ತೆರೆತೆರೆಯಾಗಿ, ೧೬೦
ಕೆಳಗಿಳಿದು, ಮೇಲೆರಿ, ದುಮುಕಿ, ನೆಗೆಯುತೆ, ಹಾರಿ,
ಹಜ್ಜೆಹಜ್ಜೆಗೆ ಹೋರಿ ಲಗ್ಗೆಯೇರ್ದುದು ಕಾಡು,
ಹಗೆಯ ಕೋಂಟೆಗೆ ಮುಗ್ಗುವರಿಸೇನೆಯೋಲಂತೆ :
ಗಜಸೇನೆಯೆನೆ ಬಂಡೆವಿಂಡು ; ರಥಸೇನೆಯೆನೆ
ತುಮುಲ ತರುಪಂಕ್ತಿ ; ಕಾಲಾಳ್ಗಳೆನೆ ಹಿಣಿಲಾಗಿ
ಹೆಣೆಗೊಂಡ ಕುರುಚುಪಳು ; ಬೆಳ್ಗೊಡೆಗಳೋಲ್ ಮುಗಿಲ
ತುಂಡು ; ಸಿಡಿಮದ್ದಿನಿಂದೇಳ್ವ ಹೊಗೆಯೆನಲಿಲ್ಲಿ
ಅಲ್ಲಿ ಧರಿ ಫೂತ್ಕರಿಸುವುಸಿರಾವಿಯೋಲುಣ್ಣೆ
ಮಂಜು !
ವಾನರ ಕಲಿಗಳಾ ದೃಶ್ಯಮಹಿಮೆಯಿಂ
ದಿನದಿನಕೆ ಮಹಿಮರಾದರ್ ತಪಶ್ಚರಣೆಯಿಂ.
ಅವರೊಳಾ ಪ್ರಾಣದೇವನ ಸುತಂ ತಾನಾಜನ್ಮ
ಬ್ರಹ್ಮಚರ್ಯದಿ ಸಹಜಯೋಗಿ, ಅಂಜನಾದ್ರಿಯೆ
ತವರುಮನೆಯಾದಾಂಜನೇಯಂಗೆ, ಕೇಳ್, ಲಭಿಸಿತೈ
ಸಿದ್ಧಿಗಳಲೌಕನಿಧಿ. ಬಹಿರಂಗ ಸಾಮಾನ್ಯನ್
ಅಂತರಂಗದಿ ದೇವಮಾನ್ಯನಾದಾತನ್ ಆ
ಮಲೆಯ ನೆತ್ತಿಯೊಳೊರ್ದಿನಂ ಬೈಗುವೊಳ್ತಿನೊಳ್
ಧ್ಯಾನನೇತ್ರಂಗಳಂ ತೆರೆದು ತನ್ನೆದುರಾಗಿ
ಕೆಳಗೆ ಪರ್ವಿರ್ದ ಚೇತೋಹಾರಿ ದೃಶ್ಯಮಂ
ದರ್ಶಿಸುತ್ತಿರೆ, ಅಮೃತ ರಚಿತ ವಿಹಗಾಕೃತಿಯ
ಉಲ್ಕಮೆನೆ, ಬೆಳ್ವಕ್ಕಿಯೊಂದು ಪಸುರೆದುರಾಗಿ            ೧೮೦
ಪಾರಿಬಂದಿಳಿದೇರ್ದು ತೇಲ್ದು ಸುತ್ತುತ್ತೊಯ್ಯ –
ನೆರಗಿತು ಸರೋವರಕೆ. ಮರೆಯಾದುದಾ ಖಗಂ
ಸಂಜೆ ಹೊನ್ನೆರಚಿರ್ದ ನೀರ್ಬಣ್ಣಗಳ ಮಧ್ಯೆ :
ಮತ್ತೇನೊ ಮರೆದುದು ಮರುತ್ಸುತಗೆ : ದೂರದೊಳ್,
ಪಂಪಾ ಸರೋವರದ ತೀರದೊಳ್, ಬೈಗಿರುಳ್
ಮರ್ಬಿನೊಳ್, ನಡೆಯುವ ನರಾಕೃತಿಗಳೆಂಬಿನಂ
ಮೊಳೆತುದಾಶಂಕೆ ! ತಿಳಿಯಲ್ಕೆಳಸುತಿರೆ, ಮಸಿಯಿರುಳ್
ಸೆರಗುವೀಸಿತು ಕರ್ಪನಿಳೆಬಾನ್ ಮಸುಳ್‌ವಂತೆ.