ಎಲೆಯುದುರಿ ಬರಲಾದ ಬೂರುಗದ ಮರದಲ್ಲಿ
ಬಲಿತ ಕಾಯ್ ಓಡೊಡೆದು, ಬಿಸಿಲ ಕಾಯ್ಪಿಗೆ ಸಿಡಿದು,
ಹೊಮ್ಮಿತ್ತು ಸೂಸಿತ್ತು ಚಿಮ್ಮಿತ್ತು ಚೆದುರಿತ್ತು
ಚೆಲ್ಲಿತ್ತರಳೆಬೆಳ್ಪು, ಮಸಿಯ ಚೆಲ್ಲಿರ್ದವೊಲ್
ಕಾಳ್ಗಿಚ್ಚು ಕರಿಕುವರಿಸಿದ ನೆಲದ ಕರ್ಪಿನೊಳ್
ಚಿತ್ರಿಸಿ ಶರನ್ನೀರದೋಲ್ಮೆಯಂ. ದಾಂಪತ್ಯ
ಸುಖದಿ ತೃಪ್ತಿಯನಾಂತು ಬಸಿರ ನೋಂಪಿಯ ಸಿರಿಗೆ
ಗೂಡುಕಟ್ಟುವ ಚಿಟ್ಟೆಹಕ್ಕಿ ತಾನಾ ಹತ್ತಿಯಂ
ಮೊಟ್ಟೆಮರಿಗಳಿಗೆ ಮೆತ್ತೆಯನೆಸಗೆ ಕೊಕ್ಕಿನೊಳ್
ಕೊಂಡೊಯ್ದುದಾಯ್ತು. ಮುಳ್‌ಪೊದೆಯ ಬೆಳ್ಮಾರಲಂ  ೧೦
ಕಾಯ್‌ ತುಂಬಿ ಹಣ್ತನಕೆ ಹಾರೈಸುತಿರ್ದುದಾ
ಹೊಸಮಳೆ ಹರಕೆಗಾಗಿ. ಬೆನ್ನು ಹೊಟ್ಟೆಗೆ ಹತ್ತಿ,
ಬಿಸಿಲ ಬೇಗೆಗೆ ಬತ್ತಿ, ಬರದ ಗರ ಬಡಿದಿರ್ದ ಕಲ್
ಕೊರಕು ಕಂಕಾಲತೆಯ ಮಲೆಯ ತೊರೆ ತಾನಲ್ಲಲ್ಲಿ
ತುಂಡು ತುಂಡಾಗಿ ತಂಗಿದುದುಡುಗಿ ಚಲನೆಯಂ :
ಬೇಸಗೆಯ ಧಗೆಗೆ ಚಾದಗೆಯಾದುದಯ್ ವಿಪಿನಗಿರಿ
ಭೂಮಿ !
ಸೀತೆಗೆ ರಾಮನಂತೆ, ಮುಂಗಾರ್ಗೆ ತಿರೆ
ಬಾಯಾರುತಿರೆ, ಓ ಆ ದಿಗಂತದೆಡೆ, ವರದಂತೆವೋಲ್
ಕಾಣಿಸಿತು ವರ್ಷಶಾಪಂ, ರವಿಸಂಗಿ, ಶರಧಿಶಿಶು,
ನೀರದಸ್ತೂಪನೀಲಂ. ಶಿವನ ಜಟೆಯಂತೆವೋಲ್         ೨೦
ಶಿಖರಾಕೃತಿಯಿನುಣ್ಮಿ, ಮೇಲೆಮೇಲಕ್ಕೇರ್ದು
ಶೈಲಾಕೃತಿಯಿನುರ್ಬ್ಬಿ, ತೆಕ್ಕನೆ ಕೆದರ್ದ್ದತ್ತು.
ಕುಣಿವ ಕಾಳಿಯ ಕರಿಯ ಮುಡಿ ಬಿರ್ಚ್ಚಿ ಪರ್ವುವೋಲ್,
ಸಂಜೆಬಾನಂ ಮುಸುಕಿ ಮುಚ್ಚಿ. ಮೇಣ್ ಕಾರ್ಗಾಳಿ
ಬೀಸಿದುದು ಮಲೆಯ ಮಂಡೆಯ ಕಾಡುಗೂದಲಂ
ಪಿಡಿದಲುಬಿ ತೂಗಿ. ನೋವಿಂಗೊರಲಿದತ್ತಡವಿ :
ಹಳೆಮರಗಳುರುಳಿ ; ಮರಕೆ ಮರವುಜ್ಜಿ ; ಕೊಂಬೆಗೆ
ಕೊಂಬೆ ತೀಡಿ ; ಮೆಳೆಯೊಳ್ ಬಿದಿರು ಕರ್ಕಶವುಲಿಯ
ಕೀರಿ. ಸಿಡಿರೋಷದಿಂ ಕಿಡಿಯಿಡುವ ಮಸಿನವಿರ
ಪುರ್ಬ್ಬಿನಾ ಕಾರ ರಾಕ್ಷಸಿಯಕ್ಷಿಯಲೆವಂತೆ      ೩೦
ಮಿಂಚಿತು ಮುಗಿಲಿನಂಚು. ಸಂಘಟ್ಟಣೆಗೆ ಸಿಡಿಲ್
ಗುಡುಗಿದವು ಕಾರ್ಗಲ್ ಮುಗಿಲ್‌ಬಂಡೆ. ತೋರ ಹನಿ
ಮೇಣಾಲಿಕಲ್ ಕವಣೆವೀಸಿದುವು. ಬಿಸಿಲುಡುಗಿ,
ದೂಳುಂಡೆಗಟ್ಟಿ, ಮಣ್‌ತೊಯ್ದು, ಕಮ್ಮನೆ ಸೊಗಸಿ
ತೀಡಿದುದು ನೆಲಗಂಪು ನಲ್. ಝಣನ್ನೂಪುರದ
ಸುಸ್ವರದ ಮಾಧುರ್ಯದಿಂ ಕನತ್ಕಾಂತಿಯಿಂ
ಝರದ ಝಲ್ಲರಿಯ ಜವನಿಕೆಯಾಂತು ನರ್ತಿಸುವ
ಯೌವನಾ ಯವನಿಯ ಕರದ ಪೊಂಜುರಿಗೆಯಂತೆ
ಸುಮನೋಜ್ಞಮಾದುದಾ ಭೀಷ್ಮಸೌಂದರ್ಯದಾ
ಮುಂಗಾರ್ ಮೊದಲ್ :
ಹಿಂಗಿದುದು ಬಡತನಂ ತೊರೆಗೆ.      ೪೦
ಮೊಳೆತುದು ಪಸುರ್‌ನವಿರ್ ತಿರೆಗೆ. ಪೀತಾಂಬರಕೆ
ಜರತಾರಿಯೆರಚುವೋಲಂತೆ ಕಂಗೊಳಿಸಿದುದು
ಪಸುರು ಗರುಕೆಯ ಪಚ್ಚೆವಾಸಗೆಯೊಳುದುರಿರ್ದ
ಪೂವಳದಿ ಪೊನ್, ಬಂಡೆಗಲ್ ಬಿರುಕಿನಿಂದಾಸೆ
ಕಣ್ದೆರೆಯುವಂತೆ ತಲೆಯೆತ್ತಿದುದು ಸೊಂಪುವುಲ್.
ಮಿಂದು ನಲಿದುದು ನಗಂ ; ಮೇದು ತಣಿದುದು ಮಿಗಂ ;
ಗರಿಗೊಂಡೆರಂಕೆಗೆದರುತೆ ಹಾಡಿ ಹಾರಾಡಿ
ಹಣ್ಣುಂಡು ಹಿಗ್ಗಿದುದು ಹಕ್ಕಿಯ ಮರಿಯ ಸೊಗಂ.
ಮಳೆ ಹಿಡಿದುದತಿಥಿಯಾಗೈತಂದವಂ ಮನೆಗೆ
ತನ್ನೊಡೆತನವನೊಡ್ಡಿ ನಿಲ್ವಂತೆ. ದುರ್ದಿನಂ
ದ್ರವರೂಪಿಯಾಗಿ ಕರಕರೆಯ ಕರೆದುದನಿಶಂ. ೫೦
ದೂರಮಾದುದು ದಿನಪದರ್ಶನಂ. ಕವಿದುದಯ್
ಕರ್ಮುಗಿಲ ಮರ್ಬ್ಬಿನ ಮಂಕು ಪಗಲಮ್. ಇರುಳಂ
ಕರುಳನಿರಿದುದು ಕೀಟಕೋಟಿಯ ಕಂಠವಿಕೃತಿ.
ಗರಿ ತೊಯ್ದು ಮೆಯ್ಗಂಟಿ ಕಿರಿಗೊಂಡ ಗಾತ್ರದಿಂ
ಮುದುರಿದೊದ್ದೆಯ ಮುದ್ದೆಯಾಗಿ ಕುಗುರಿತು ಹಕ್ಕಿ
ಹೆಗ್ಗೊಂಬನೇರಿ, ಕಾಡಂಚಿನಾ ಪಸಲೆಯಂ
ನಿಲ್ವಿರ್ಕೆ ಗೈದು, ರೋಮಂದೊಯ್ದಜಿನದಿಂದೆ
ಕರ್ಪು ಬಣ್ಣಂಬಡೆದವೋಲಿರ್ದು, ಹರೆಹರೆಯ
ಕೊಂಬಿನಿಂದಿಂಬೆಸೆವ ಮಂಡೆಯ ಮೊಗವನಿಳುಹಿ,       ೬೦
ಜಡಿಯ ಜಿನುಗಿಗೆ ರೋಸಿ, ತನ್ನ ಹಿಂಡಿನ ನಡುವೆ
ನಿಂದುದು ಮಳೆಗೆ ಮಲೆತು, ಕೆಸರು ಮುಚ್ಚಿದ ಖುರದ
ಕಾಲ್ಗಳ ಮಿಗದ ಹೋರಿ, ಕಲ್ಲರೆಯನೇರಿದುದು
ಕಟ್ಟಿರುಂಪೆಯ ಪೀಡೆಗಾರದೆ ಮೊಲಂ. ಜಿಗಣೆ,
ನುಸಿ, ಹನಿಗಳಿಗೆ ಹೆದರಿ ಹಳುವನುಳಿಯುತ್ತೆ ಹುಲಿ
ಹಳು ಬೆಳೆಯದೆತ್ತರದ ಮಲೆಯ ನೆತ್ತಿಯನರಸಿ
ಚರಿಸಿದುದು. ಜೀರೆಂಬ ಕೀರ್‌ದನಿಯ ಚೀರ್‌ಚೀರಿ
ಪಗಲಿರುಳ್ ಗೋಳ್‌ಗರೆದುದಯ್ ಝಿಲ್ಲಿಕಾ ಸೇನೆ :
ಬೇಸರದೇಕನಾದಮಂ ಓ ಬೇಸರಿಲ್ಲದೆಯೆ
ಬಾರಿಸುತನವರತಂ ಬಡಿದುದು ಜಡಿಯ ಸೋನೆ !      ೭೦
ಕಳೆದುದಯ್ ಜ್ಯೇಷ್ಠಮಾಸಂ. ತೊಲಗಿತಾಷಾಢಮುಂ.
ತೀರ್ದುದಾ ಶ್ರಾವಣಂ. ಭಾದ್ರಪದ ದೀರ್ಘಮುಂ,
ಶಿವಶಿವಾ. ಕೊನೆಮುಟ್ಟಿದತ್ತೆಂತೊ ! ದಾಶರಥಿ ತಾಂ
ಮಾಲ್ಯವತ್ ಪರ್ವತ ಗುಹಾಶ್ರಮದಿ ಕೇಳ್, ಶ್ರಮದಿಂದೆ
ನೂಂಕುತಿರ್ದನ್ ಮಳೆಯ ಕಾಲಮಂ, ಕಾಲಮಂ
ಸತಿಯ ಚಿಂತೆಗೆ ಸಮನ್ವಯಿಸಿ. ಬೈಗು ಬೆಳಗಂ
ಮೇಣ್‌ ಪಗಲಿರುಳ್ಗಳಂ ದಹಿಸಿತಗಲಿಕೆವೆಂಕೆ :
ಪಡಿದೋರ್ದುದಾ ವಿರಹಮಿಂದ್ರಗೋಪಂಗಳಿಂ ಮೇಣ್
ಮಿಂಚುಂಬುಳುಗಳಿಂ.
ಇರುಳ್, ಅಣ್ಣತಮ್ಮದಿರ್
ಗವಿಯೊಳ್ ಮಲಗಿ, ನಿದ್ದೆ ಬಾರದಿರೆ, ನುಡಿಯುವರ್,    ೮೦
ಕಡೆಯುವರ್ ತಮ್ಮ ಮುಂದಣ ಕಜ್ಜವಟ್ಟೆಯಂ.
ಕಾರಿರುಳ್. ಹೆಪ್ಪುಗಟ್ಟಿದೆ ಕಪ್ಪು, ಕಲ್ಲಂತೆವೋಲ್.
ಹೊರಗೆ, ಮಳೆ ಕರಕರೆಯ ಕರೆಯುತಿದೆ. ಕಪ್ಪೆ ಹುಳು
ಹಪ್ಪಟೆಯ ಕೊರಳ ಸಾವಿರ ಹಲ್ಲ ಗರಗಸಂ
ಗರ್ಗರನೆ ಕೊರೆಯುತಿದೆ ನಿಶೆಯ ನಿಶ್ಯಬ್ಧತೆಯ
ಖರ್ಪರವನಾಲಿಸಿದ ಕಿವಿ ಮೂರ್ಛೆವೋಪಂತೆ :
“ಏನ್ ವೃಷ್ಟಿಘೋಷಮಿದು, ಆಲಿಸಾ, ಸೌಮಿತ್ರಿ !
ಮಲೆ ಕಾಡು ನಾಡು ಬಾನ್ ಒಕ್ಕೊರಲೊಳೊಂದಾಗಿ
ಬಾಯಳಿದು ಬೊಬ್ಬಿರಿಯುತಿಪ್ಪಂತೆ ತೋರುತಿದೆ.
ಈ ಪ್ರಕೃತಿಯಾಟೋಪದೀ ಉಗ್ರತೆಯ ಮಧ್ಯೆ ೯೦
ನಾಂ ಮನುಜರತ್ಯಲ್ಪ ಕೃತಿ ! ನಮ್ಮಹಂಕಾರ
ರೋಗಕಿಂತಪ್ಪ ಬೃಹದುಗ್ರತಾ ಸಾನ್ನಿಧ್ಯಮೇ
ದಿವ್ಯ ಭೇಷಜಮೆಂಬುದೆನ್ನನುಭವಂ. ಇಲ್ಲಿ,
ಈ ಗರಡಿಯೊಳ್ ಸಾಧನೆಯನೆಸಗಿದಾತಂಗೆ
ದೊರೆಕೊಳ್ವುದೇನ್ ದುರ್ಲಭಂ ಪಾರ್ವತಸ್ಥಿರತೆ ?
ಸಾಕ್ಷಿಯದಕಿರ್ಪನಾಂಜನೇಯಂ !….”
“ಒರ್ವನೇಂ ?
ಈ ಕಪಿಧ್ವಜ ವಾನರರ ವೃಂದಮೆಲ್ಲಮುಂ
ಸಾಕ್ಷಿ. ದಿನದಿನಮುಮಿಲ್ಲಿಗೆ ಬಂದು ನಿನ್ನೊಡನೆ
ನುಡಿವರಂ ನೋಡುತಿಹೆನೊಬ್ಬಬ್ಬರುಂ ಮಹಾ
ಮಹಿಮರಲ್ಲದೆ ಕೀಳ್ಗಳಂ ಕಾಣೆ : ಅಣ್ಣಯ್ಯ,      ೧೦೦
ವಾಲಿಯ ಕುಮಾರನಂಗದನನೇನೆಂಬೆನಾ
ತಂದೆಯ ಮಗನೆ ದಿಟಂ…. ಆ ನೀಲನತಿ ಮೌನಿ.
ನಾನರಿಯೆನವನಾಳಮಂ….”
“ಜಿಹ್ವೆಯಿಂದಲ್ತು.
ಮಿಂಚುವುದು ಕಣ್ಣ ಕಾಂತಿಯಿನಾತನಾತ್ಮಂ.”
“ದಿಟಂ, ವಹ್ನಿಪುತ್ರನೆ ವಲಂ.”
ತಮ್ಮನೆಂದುದಕೆ
ಪಡಿನುಡಿದನಿಲ್ಲವನಿಜಾಪ್ರಿಯಂ. ಮಳೆಯ ಮೊರೆ
ಇಲ್ಲದಿರ್ದೊಡೆ ಕೇಳುತಿರ್ದತ್ತು ಲಕ್ಷ್ಮಣಗೆ
ಅಗ್ರಜನ ಸುಯ್ಲು : ಮೌನಮೆ ಪೇಳ್ದುದೆಲ್ಲಮಂ :
ನುಡಿ ನಿಂತೊಡನೆ, ಮಳೆಯ ಕೂಗುಕ್ಕಿದವೊಲಾಯ್ತು.
ತಿಮಿರ ಸಾಂದ್ರತೆ ಪೆರ್ಚಿದವೊಲಾಯ್ತು ; ಮೇಣುಸಿರ್   ೧೧೦
ಕಟ್ಟಿದವೊಲಾಯ್ತೂರ್ಮಿಳಾ ಪತಿಗೆ. ಭಾವಿಸುತ್ತಾ
ತನ್ನಗ್ರಜಾತನ ಹೃದಯದಳಲಿಕೆಯ ತಿಣ್ಣಮಂ :
“ಬೆಸಸೆನಗೆ. ನಿನ್ನಾಣತಿಯನೊರೆವೆನಿನಸುತಗೆ,
ಅಣ್ಣಯ್ಯ, ನಾಳೆ ಪೊಳ್ತರೆ ಪೋಪೆನವನೆಡೆಗೆ.
ತಡಮೇತಕಿನ್ನತ್ತಿಗೆಯನರಸೆ ?” ಗದ್ಗದಂ
ಸಂಯಮಕೆ ಸಿಲ್ಕಿರ್ದೊಡಂ, ನಡುಗಿತಿಂತು ದನಿ
ರಾಮನಾ : “ತಡೆದಿರ್ಪನಾ ಮಿತ್ರನೆನ್ನಿಂದೆ,
ಸೌಮಿತ್ರಿ. ತವಕದಿಂದಿಹರನಿಬರೆನಗಾಗಿ,
ಲಂಕೆಯನ್ವೇಷಣೆಗೆ. ವಿಪಿನ ಸಾಂದ್ರಂ ಪೃಥ್ವಿ ;
ಮೇಘ ಸಾಂದ್ರಂ ಗಗನಮಂತೆ ಕರ್ದಮಮಯಂ         ೧೨೦
ಜಲಮಯ ಸೃಷ್ಟಿ. ನೀರ್ಗಾಲಮಂ ಪೂರೈಸಿ,
ಮಾಸ ಕಾರ್ತಿಕಕೆ ಪೊರಮಡಿಯೆಂದು ಬೀರರ್ಗೆ
ನಾನೆ ತಡೆಗಟ್ಟಿಹೆನ್. ಸುರಿವುದಾಶ್ಪೀಜಮದೊ, ಕೇಳ್,
ತುದಿಗಾಲದಾಟೋಪದಿಂ ?”
ಆಲಿಸಿದರಿರ್ವರುಂ :
ನುಗ್ಗುತಿರ್ದ್ದತ್ತಾಶ್ವಯುಜ ವರ್ಷಾಶ್ವದಳದ
ಹೇಷಾರವದ ಘೋಷಂ !…. ಆಲಿಸುತ್ತಿರ್ದ್ದಂತೆ,
ಅರಳಿದುವು ಕಣ್ಣಾಲಿ : ಘೋರಾಂಧಕಾರದಾ
ಸಾಗರದಿ ತೇಲಿ ಬಹ ಹನಿಮಿಂಚಿನಂತೆವೋಲ್,
ಮಿಂಚುಂಬುಳೊಂದೊಯ್ಯನೊಯ್ಯನೆಯೆ ಪೊಕ್ಕುದಾ   ೧೩೦
ಕಗ್ಗತ್ತಲೆಯ ಗವಿಗೆ. ತೇಲುತೀಜುತೆ ಮೆಲ್ಲ
ಮೆಲ್ಲನೆಯೆ ಹಾರಾಡಿ ನಲಿದಾಡಿತಲ್ಲಲ್ಲಿ,
ಮಿಂಚಿನ ಹನಿಯ ಚೆಲ್ಲಿ, ಮಿಂಚಿನ ಹನಿಯ ಸೋರ್ವ
ಮಿಂಚುಂಬನಿಯ ಪೋಲ್ವ ಮಿಂಚುಂಬುಳುವನಕ್ಷಿ
ಸೋಲ್ವಿನಂ ನೋಡಿ, ರಾಮನ ಕಣ್ಗೆ ಹನಿ ಮೂಡಿ,
ತೊಯ್ದತ್ತು ಕೆನ್ನೆ : ತೆಕ್ಕನೆ ತುಂಬಿದುದು ಶಾಂತಿ
ತನ್ನಾತ್ಮಮಂ ! ಮತ್ತೆಮತ್ತೆ ನೋಡಿದನದಂ.
ಸಾಮಾನ್ಯಮಂ, ಆ ಅನಿರ್ವಚನೀಯ ದೃಶ್ಯಮಂ !
ಕುಳ್ಳಿರ್ದ ಮಳೆಗಾಲಮೆದ್ದು ನಿಂತುದು ತುದಿಯ
ಕಾಲಿನಲಿ. ನೂಲ್‌ಸೋನೆಯಾ ತೆರೆಮರೆಯನೆತ್ತಲ್ಕೆ
ಶೈಲವರನಕೊ, ಕಾಣಿಸಿತ್ತಾತನೆರ್ದೆಗೊರಗಿ   ೧೪೦
ರಮಿಸಿರ್ದ ಕಾನನ ವಧೂ ಶ್ಯಾಮಲಾಂಬರಂ !
ಲಂಬಮಾನಂ ಸೋರ್ವ ಮುತ್ತಿನ ಸರಗಳಂತೆ
ಕಾವಿಯನುಳಿದ ಮಲೆಯ ತೊರೆಯ ನೀರ್‌ಬೀಳಗಳ್
ಕಣ್‌ಸೆಳೆದುವಲ್ಲಲ್ಲಿ. ಕೇದಗೆಗೆ ಮುಪ್ಪಡಸಿ,
ಬೀತುದೈ ಸೀತಾಳಿ ಹೂ. ಬಾನ್‌ಬಯಲೊಳಿರ್ದ
ಮೋಡಮೋರೆಗೆ ಕರ್ಪುವೋಗಿ, ಬೆಳ್ಪಿನ ನೆಳಲ್
ಸುಳಿದುದಲ್ಲಲ್ಲಿ. ನಿಸ್ತೇಜನಾಗಿರ್ದ ರವಿ
ಘನವನಾಂತರ ವಾಸಮಂ ಮುಗಿಸಿ ಮರುಳುತಿರೆ,
ಮೇಘಸಂಧಿಗಳಿಂದೆ, ಮುಸುಕೆತ್ತಿ, ನಸುನಾಣ್ಚಿ,
ಮೊಗಕೆ ನಾಣ್‌ಬೆಳ್ಪೇರಿದಪರಿಚಿತಳಂತೆವೋಲ್          ೧೫೦
ಇಣಿಕಿತು ಗತೋಷ್ಣಾತಪಂ. ಪಾಲ್ತುಂಬಿ ತುಳ್ಕಿ
ಗರುಕೆಪಚ್ಚೆಗೆ ಸೋರ್ವ ಕೊಡಗೆಚ್ಚಲಿನ ಗೋವು
ಹೊಸಬಿಸಿಲ ಸೋಂಕಿಂಗೆ ಸೊಗಸಿ ಮೆಯ್ ಕಾಯಿಸುತೆ
ಗಿರಿಸಾನು ಶಾದ್ವಲದಿ ನಿಂತು, ಬಾಲವನೆತ್ತಿ
ಕುಣಿದೋಡಿ ಬಂದು ತನ್ನೆಳಮುದ್ದುಮೋರೆಯಂ
ತಾಯ್ತನಕೆ ಪಡಿಯೆಣೆಯ ಮೆತ್ತೆಗೆಚ್ಚಲ್ಗಿಡಿದು,
ಜೊಲ್ಲುರ್ಕೆ, ಚಪ್ಪರಿಸಿ ಮೊಲೆಯನುಣ್ಬ ಕರುವಂ
ನೆಕ್ಕಿತಳ್ಕರೆಗೆ. ಲೋಕದ ಕಿವಿಗೆ ದುರ್ದಿನಂ
ಕೊನೆಮುಟ್ಟಿದತ್ತೆಂಬ ಮಂಗಳದ ವಾರ್ತೆಯಂ
ಡಂಗುರಂಬೊಯ್ಸಿದುದು ಪಕ್ಷಿಗೀತಂ…. ಮತ್ತದೇನ್ ?  ೧೬೦
ಮತ್ತೆ ಅದೊ ಕೇಳ್ದತ್ತು ಮತ್ತೊಂದು ಡಂಗುರಂ !
ಬಡಿದ ಚಂಡೆಯ ರವದ ಸಿಡಿಲಿಗೆ ಪ್ರಕಂಪಿಸುತೆ
ಗುಡುಗಿದುವು ಗಿರಿಬಂಡೆ. ಮದ್ದಳೆಯ ಸದ್ದಿಂಗೆ
ದಿಗ್ಗೆಂದು ಬೆರ್ಚಿ ಮಲೆದಲೆದೂಗಿದುದು ಧೀರ
ಕಿಷ್ಕಿಂಧೆ. ತಲ್ಲಣಿಸಿತಾನೆಯಂ ಸಿಂಹಸಮ
ಭೇರೀರವಂ. ಕೇಳ್, ನೆಗೆದುದಡವಿಯಿಂದದ್ರಿಗಾ
ಅದ್ರಿಯಿಂದಾಗಸಕೆ ; ಚಿಮ್ಮಿತು ರವಿಸ್ಪರ್ಧಿ
ತಾನಾಗಿ ; ಧುಮುಕಿತು ಧರಿತ್ರಿಗಲ್ಲಿಂ ; ಮತ್ತೆ
ಧೀಂಕಿಟ್ಟುದಭ್ರಮಂಡಲ ಯಾತ್ರಿ ; ತಿರುತಿರುಗಿ
ಗಿರಿ ವಿಪಿನ ಕಂದರ ವಸುಂಧರಾ ವ್ಯೋಮಂಗಳಂ
ತಿರ್ರನೆ ತಿರುಗಿತಿರುಗಿ, ಸಾರ್ದುದು ಸರಿತ್ಪತಿಯ
ಸೀಮಾ ದಿಗಂತಮಂ ವಾರ್ಧಿಘೋಷಸ್ಪರ್ಧಿಯಾ
ಸುಗ್ರೀವ ಡಿಂಡಿಮಾಜ್ಞೆ !
ಕೇಳ್ದರಾ ಧ್ವಾನಮಂ
ರಾಮಲಕ್ಷ್ಮಣರುರ್ಕ್ಕುವಾನಂದದಿಂದುರ್ಬ್ಬಿಯುಂ
ಸುಯ್ವ ದೀರ್ಘೋಚ್ಛ್ವಾಸದಿಂ. ವಿಷಣ್ಣತೆ ಮಾಣ್ದುದೈ,
ಮೈದೋರಿತೈ ಸುಪ್ರಸನ್ನತೆ ಜಗನ್ಮುಖಕೆ.
ಮೆರೆದುದು ಶರತ್ಸಮಯಮಬಲವರ್ಷರ್ತುವಂ
ಗೆಲಿದದರ ಸಿರಿಯನಿತುಮಂ ಕವರ್ದವೋಲ್. ಗಿರಿಶಿರದಿ
ನಿಂತು ಲಕ್ಷ್ಮಣಗಿಂತು ದಾಶರಥಿ : “ಸೌಮಿತ್ರಿ, ಕಾಣ್,    ೧೮೦
ಕಜ್ಜಕನುವಾಗುತಿದೆ ವಾನರ ಮಹಾ ದಳಂ.
ಕೇಳದೊ ಧಳಂ ಧಳಂ ಭೇರೀರವಂ : ಭೂಮಿ
ಕಂಪಿಸಿತ್ತೆನೆ ತಲ್ಲಣಿಸುತಿವೆ ಗಿರಿಯ ಬಂಡೆ.
ನಾದಕೆ ಸಸಂಭ್ರಮಂ ಗದಗದಿಸಿತೆನೆ ಜಗತ್-
ಪ್ರಾಣಮದೊ ಸುಸ್ಪಂದಿಸಿದೆ ವಾಯುಮಂಡಲಂ.
ಮದವಳಿದ ಗಜದಂತೆ ಶಾಂತವೇಗಗಳಾಗಿ
ತೇಲುತಿವೆ ದಂತಿಯೊಡ್ಡಂ ಪೋಲ್ವ ಜೀಮೂತಗಳ್
ಪಂಕ್ತಿ. ಸೌಮ್ಯತೆಯನಾಂತಿಹುದು ವೃಷ್ಟಿವಾತಂ
ಪಿಂತಣ ಮಹಾರಭಸಮಂ ತ್ಯಜಿಸಿ. ಮಳೆಯ ಕೆಳೆ
ಕೆಟ್ಟುದಕೆ ಕಳೆಗೆಟ್ಟು ಜಾನಿಸುತ್ತಿದೆ ಬರ್ಹಿ ತಾನ್,          ೧೯೦
ಅದೊ, ಮರದ ಬಲ್ಗೊಂಬೆಯೇರಿ. ನೀರಿಳಿದು
ಕೃಶವಾಗಿ ಕೊರಕಲೊಡಲಿನ ದಡದ ವಕ್ರತೆಗೆ
ನಾಚಿದಂದದಿ ಹರಿಯುತಿದೆ ಹಳ್ಳದ ಹೊನಲ್.
ಕೆಸರಾರಿದಾ ಮಳಲ ದಿಣ್ಣೆಯೊಳ್ ನೋಡೆಂತು
ಲಿಪಿ ಕೆತ್ತಿದೋಲ್ ಮುದ್ರೆಯೊತ್ತಿದೆ ಹಕ್ಕಿಹಜ್ಜೆ.
ಚಾರುತನ್ವಂಗಿ ಮೃಗಶಾಬಾಕ್ಷಿ ಜನಕಜಾ
ಸ್ಮೃತಿಗೆ ಪ್ರತಿಕೃತಿಯಾಗಿ, ಅಗೊ, ಅಂತರಿಕ್ಷದಲಿ,
ಕೊರಳಿಂ ಜಗುಳ್ದ ಮಾಲೆಯೆನಲ್ಕೆ, ಹಾರುತಿದೆ
ಚಾರು ಸಾರಸ ತೋರಣಂ…. ದಿಟಂ, ಸೌಮಿತ್ರಿ,
ವಾನರೇಂದ್ರಾಜ್ಞಾ ಮಹಾಧ್ವನಿಗೆ ಚೇತರಿಸಿ     ೨೦೦
ಚಿಮ್ಮುತಿದೆ ಲೋಕಹೃದಯಂ : ಬಾಳ್ಗೆ ! ಬಾಳ್ಗೆ, ಮೇಣ್
ಗೆಲ್ಗೆ ಸುಗ್ರೀವಮಿತ್ರಂ !” ಧಳಂ, ಧಳಂ, ಧಳಂ,
ಬಂದುದಾ ಭೇರೀ ರವಂ ; ಸ್ಪಂದಿಸಿತು ಪೃಥ್ವಿ
ತನ್ನ ಕನ್ಯಾ ಕ್ಷೇಮವಾರ್ತೆಯಂ ಕೇಳ್ವಂತೆವೋಲ್,
ಪರಮ ಗೌರವ ಮೂರ್ತಿ, ಸರ್ವೋಚ್ಚ ಸೇನಾನಿ,
ವಾನರ ಪರಾಕ್ರಮ ಸಮುದ್ರಂಗೆ, ನೀಲಂಗೆ
ಬೆಸಸಿದನ್ ಭಾಸ್ಕರ ಭವಂ. ತಲೆಹೊಣೆಯ ಬೆಲೆಯ
ತಮ್ಮರಸನಾಣೆಯಂ ಪೊತ್ತು, ತಲೆಯಾಳುಗಳ್
ಪರಿದರಂಬುಧಿವರೆಗೆ, ಸಾರುತೆ ಕಪಿಧ್ವಜಂ ತಾಂ
ಮೆರೆವ ನಾಡೊಡೆಯರೆಲ್ಲರ್ಗೆ ಕಟ್ಟಾಜ್ಞೆಯಂ.   ೨೧೦
ಮೂಡಲಿಂ ಪಡುವಲಿಂ ಬಡಗಲಿಂ ತೆಂಕಲಿಂ
ರಾಮಕಾರ್ಯಕೆ ದಂಡುನೆರೆದರ್ ಕಪಿಧ್ವಜರ್,
ಲಕ್ಷೋಪಲಕ್ಷ ಕೋಟ್ಯನುಕೋಟಿ. ಕಿಕ್ಕಿರಿದು
ತುಂಬಿ ತುಳ್ಕಿದ ಸೇನೆ, ಕಿಷ್ಕಿಂಧೆಯಂ ಬಳಸಿ
ಪರ್ವಿದದ್ರಿಯ ಸಾನು ಕಂದರಪ್ರಾಂತಮಂ
ಸಂಕ್ರಮಿಸಿ, ಬಿಟ್ಟುದು ತನ್ನ ಬೀಡಾರಮಂ :
ವರ್ಷದಿಂ
ವರ್ಷಮೆಲ್ಲಂ ತೊಯ್ದು, ಹ್ಯಾಡಂ ಶಿಖರದಿಂದೆ
ಶೋಭಿಸಿದೆ ದಾಕ್ಷಿಣಾಟ್ಲಾಂಟಿಕಾ ದ್ವೀಪೋತ್ತಮಂ,
ಫಾಕ್‌ಲೆಂಡ್, ನವೀನ ಭೂ ಅನ್ವೇಷಿ ನಾವಿಕಂ
ತೀರಮಂ ಬಳಿಸಾರ್ದು, ನೋಳ್ಪನಚ್ಚರಿಯಿಂದೆ           ೨೨೦
ಏರ್ದು ದೃಶ್ಯಮಾ ಚಿತ್ರಂ ! ಮಾನವರೊ ? ಪಕ್ಷಿಗಳೊ ?
ಪ್ರಾಣಿಗಳೊ ? ದಂಡೊ ತಂಡವೊ ಹಿಂಡೊ ? ನಾವಿಕಂ
ಬೆರಗುವೆರಸಿದ ಭೀತಿಯಿಂ ನೋಡುವನು ಮತ್ತೆ
ಮತ್ತೆ. ಸೋಲ್ವನ್ನೆಗಂ ಕಣ್ಣು, ಪರಿವನ್ನೆಗಂ
ದಿಟ್ಟಿ, ತಗ್ಗುಬ್ಬುಗಳನೆಲ್ಲಮಂ ತುಂಬುತಾ
ದ್ವೀಪವಿಸ್ತೀರ್ಣಮಂ, ದಶದಶ ಸಹಸ್ರದಿಂ,
ಪೆಂಗುಯಿನ್ ಪಕ್ಷಿವೃಂದಂ ರಾಶಿರಾಶಿಯಿಂ
ಶತಕೋಟಿ ಸಾಂದ್ರಮೆಸೆದಪುದಜಸ್ರಂ. – ಅಂತೆವೋಲ್
ಕಿಕ್ಕಿರಿದುದತ್ಯತಿ ಅಸಂಖ್ಯ ವಾನರ ಸೇನೆಗಳ್            ೨೩೦
ಕಿಷ್ಕಿಂಧೆಯಂ ತುಂಬಿ, ಸುತ್ತಿ.
ಐತಂದನಯ್
ನೀಲಾಂಜನೇಯ ಜಾಂಬವ ನಳಾಂಗದರೊಡನೆ
ಮಾಲ್ಯವತ್ ಪರ್ವತದ ಪ್ರಸ್ರವಣ ಶಿಖರಕ್ಕೆ
ಸುಗ್ರೀವನುತ್ಸಾಹದಿಂ, ವಾನರ ವಾದ್ಯ ವಿತತಿ
ವೆರಸಿ. ಶರದಾಗಮನಕೆಂತು ಮೋಡಂಗಪ್ಪು
ತೊಲಗಿದಪುದಂತೆ ಮೂಡಿದುದು ರಾಮನ ಮನಕೆ
ನಿಶ್ಶಂಕೆ. ವಾನರೇಂದ್ರಂ ಬಿನ್ನವಿಸೆ, ಮಹಾ
ಸೈನ್ಯದಾಯತವನೀಕ್ಷಿಸಲೆಂದು ಗಮಿಸಿದರ್
ದಶರಥ ಮಹಾರಾಜ ಸುತರಿರ್ವರುಂ. ಓ ಏಳು;
ಹೇಳು, ವಾಣಿಯ ಕಯ್ಯ ವೀಣೆಯೆ, ಕಿಷ್ಕಿಂಧೆಯೊಳ್     ೨೪೦
ನೆರೆದ ವಾನರ ಕುಲದ ವೀರರಾರಾರೆಂದು,
ರಾಮಂಗೆ ರವಿಸುತಂ ವರ್ಣಿಸಿದವೋಲ್. ದೇವಿ,
ವಿವರಮಂ ವೇದಿಸಲ್ ನಿನಗೆ ಪೊಳ್ತಿಲ್ಲದಿರೆ,
(ಪೊಳ್ತಿಲ್ಲಮದು ವಲಂ. ದೇವಿಯನ್ವೇಷಣೆಗೆ
ತವಕಿಸಿದೆ ಬಗೆ. ಬಲ್ಲೆನಾದೊಡಂ) ಪೇಳೆಮಗೆ
ನಾಯಕ ಮಹಾ ಮುಖ್ಯರಂ.
ವಾನರೇಶ್ವರಂ
ಕೋಸಲೇಶ್ವರನೊಡನೆ, ಸೇನಾನಿಯಿಂ ಸಚಿವ
ಸನ್ಮಿತ್ರರಿಂ ಕೂಡಿ, ಸೈನ್ಯಾನುವೀಕ್ಷಣೆಗೆ
ಬಂದಪ್ಪನೆಂದು ಪರ್ವಿತು ವಾರ್ತೆ ದಳದಿಂದೆ
ದಳಕೆ, ಡಂಗುರಂಬೋಲ್, ಹರ್ಷವಾತಾಹತಿಗೆ           ೨೫೦
ವೀಚಿ ಸಂಕ್ಷೋಭಿಸಿತ್ತುರ್ಕುತೆ ಕಪಿಧ್ವಜಿನಿ.
ವಿವಿಧ ವೇಷದ ವಿವಿಧ ವರ್ಣದ ಅಲಂಕೃತಿಯ
ಆಕೃತಿಯ ವನಚರ ಸಮಷ್ಟಿ, ತಮ್ಮುನ್ನತಿಕೆ
ತೋರ್ಪವೋಲಾಯೋಜನಂಗೊಂಡು, ನಿಂದುದಾ
ದಿಗ್‌ದೃಷ್ಟಿಯಾಗಿ.
ದಶಕೋಟಿ ವಾನರ ಚಮೂ
ನಾಯಕಂ ಸುಗ್ರೀವ ಸುಪ್ರಿಯಂ ದಧಿಮುಖನ
ದಳದೊಳೊರ್ವಂ ವಹ್ನಿನಾಮಕಂ, ಸಾಮಾನ್ಯ
ಸೈನಿಕಂ. ಪುಲಿದೊವಲಿನಂಗಿಯಿಂ ಗುಲುಗುಂಜಿ
ಹಾರದಿಂ ಕಣ್ಣುಕಣ್ಣಿನ ಹೀಲಿಮುಡಿಯಿಂದೆ,
ದಿಗ್ಗಜ ಸ್ಮರಣೆಯಂ ತರ್ಪ ಬೃಹದಾಕೃತಿಯ    ೨೬೦
ಧೀರತನುವಿಂದೆ ಮೆರೆವೊಂ ; ತನ್ನ ಬಳಿಯಿರ್ದ
ಕುಳ್ಳೊಡಲ ಕೆಳೆಯಂಗೆ, ರಂಹನೆಂಬಾತಂಗೆ,
“ಅಕೊ ಅಲ್ಲಿ, ಆ ಬೆಟ್ಟದೋರೆಯೊಳ್ !” ಎಂದರ್ಧಮಂ
ನುಡಿದತ್ತ ಕಣ್ಣಾದನಿತ್ತ ರಂಹಂ ತನ್ನ
ಕೊರಳಂ ನಿಮಿರಿ ನೋಡಿ ಕಾಣದಿರೆ, ಹಾತೊರೆದು
ಮಿತ್ರನ ಭುಜವನಾಂತು ತುದಿವೆರಳ್ಗಳೊಳ್ ನಿಂತು
ನಿಳ್ಕಿಯುಂ ಕಾಣದಿರೆ, ತನ್ನ ಗಾತ್ರಕೆ ತಾನೆ
ಕಿನಿಸಿಯುಂ ಪೇಸಿಯುಂ ಕುಪ್ಪಳಿಸಿ ನೆಗೆದಡರಿ
ಬಳಿಯ ಬಂಡೆಯ ನೆತ್ತಿಗೇರಿ ಕಂಡನ್ ತನ್ನ
ತೃಪ್ತಿಯಂ : ನೇಸರೆಳಗದಿರ್ ಪೊನ್‌ಕುಂಚದಿಂ           ೨೭೦
ಬಿಸಿಲನೆರಚಿರೆ, ಬೆಟ್ಟದೋರೆಯ ಗರುಕೆಪಸುರ್
ಪಚ್ಚೆವಾಸಿದ ಪಸಲೆಯೊಳ್ ನೀಳ್ದ ನೆಳಲ್ವೆರಸಿ
ಬರುತಿರ್ದರಂ ! ಮುಳುಗಿಸಿತು ಪಕ್ಷಿಗೀತಮಂ
ರಣಗೊಳಲಿನಿಂಚರಂ ; ಮುಳುಗಿಸಿತದಂ ಕೂಡೆ
ಘೇ ಎಂಬ ಕೋಟಿ ಸೇನಾ ಕಂಠ ನಿರ್ಘೋಷ ;
ಮುಳುಗಿಸಿತ್ತನಿತುಮಂ ಸಾಮೂಹಿಕಾನಂದ
ಮೂರ್ಛೆ. ಬಂಡೆಯನೇರ್ದ ಕುಬ್ಜಂಗೆ ರಂಹಂಗೆ
ದೀರ್ಘೋನ್ನತಂ ವಹ್ನಿ : “ವಾನರೇಂದ್ರನ ಬಲಕೆ
ಬರ್ಪಾತನಾ ಮಹಾಪುರುಷನಯ್ !”
“ಕಾಡಿಡಿದು
ಪಳುಮುಚ್ಚಿದರಮನೆಯ ಸಿರಿಯಂತೆ ತೋರ್ಪನಾ       ೨೮೦
ತೇಜಸ್ವಿ. ಕೂದಲ್ ಬೆಳೆದ ಮೊಗಂ ; ನಾರುಡೆಯ
ಮೆಯ್ ; ಜಟಾಧಾರಿ !”
“ಸೀತಾನಾಥನ್ ; ಇಂದವನ್
ವ್ರತಿಯಲ್ತೆ ?”
“ಸಾರ್ಥಕಂ ನಾಂ ಬಂದುದೀತಂಗೆ
ನಮ್ಮ ಬಾಳಂ ಬೇಳ್ವುದೊಂದೈಸೆ ಸಯ್ಪುಗಜ್ಜಮ್ !”
“ಅಲ್ತೆ ? – ಕಾಣ್, ಪಕ್ಕದೊಳಿರ್ಪನಾತನ ಸಹೋದರಂ
ಲಕ್ಷ್ಮಣಂ. ಕಾಣ್ ಆತನೊಂದು ನಿಲವಿನ ಭಂಗಿ !
ಪೂರ್ವ ಜನ್ಮದ ಪುಣ್ಯಮೈಸೆ ನಾಮಿನ್ನರಂ
ಬೆರಸಿ ರಕ್ಕಸರೊಡನೆ ಕಾದುವೆಮ್ ! ಧನ್ಯರಾಮ್ !”
ಮಾತಾಡುತಿರಲಿತ್ತಲಿಂತಿಂತು ಸೈನಿಕರ್,
ಸುಗ್ರೀವನತ್ತಲಾ ಧರಣಿಜಾ ನಾಥಂಗೆ            ೨೯೦
ಬೆಟ್ಟದೆತ್ತರದಿಂದೆ ಬಿತ್ತರಿಸಿದನ್ ಬೆರಳ್
ತೋರಿ : “ನಿನ್ನ ಸೇವೆಗೆ ನೆರೆದ, ಹೇ ದಾಶರಥಿ,
ನೋಡಯ್, ಕಪಿಧ್ವಜ ಚಮೂ ಸಮೂಹಂಗಳಂ :
ಪರ್ವತಂಬೋಲ್ ಸುಸ್ಥಿರಂ ; ರಣೋತ್ಸಾಹದಿಂ
ಸಂಭ್ರಮೋಚ್ಛ್ವಾಸ ಸಂಕ್ಷೋಭಿತಂ. ಒರ್‌ದಳಂ
ಈ ವೀರರೋರೊರ್ವರುಂ.” ನೋಡಿದನ್, ಕಣ್‌ತುಂಬಿ
ನೋಡಿದನ್, ಸುಯ್ದನೆರ್ದೆ ಹಿಗ್ಗಿ ದಶರಥಸೂನು ; ಮೇಣ್
ನನೆದಾಲಿ ಸೋರ್ವಿನಂ ಬಿಗಿದಪ್ಪಿದನ್ ಮಿತ್ರನಾ
ಕಪಿಕೇತನನ ಗಾತ್ರಮಂ. ರವಿತನೂಜಂಗೆ, ಕೇಳ್,
ಪುಲಕಿಸಿತು ಮೆಯ್, ಸೋಂಕೆ ಸೀತಾಪತಿಯ ಕಯ್ಯ    ೩೦೦
ಸುಖಮೈತ್ರಿ. ಮುಂಬರಿಸಿದನ್ ಸೈನ್ಯ ವಿವರಮಂ
ವಿಗಳಿತ ಸುಖರಸಾಶ್ರು: “ವಿಂಧ್ಯ ಹೈಮಾಚಲರ್,
ಕೈಲಾಸಪರ್ವತರ್, ಧವಳಗಿರಿಯರ್, ಧೂಮ್ರ
ಗಿರಿಯರ್, ಮಹೇಂದ್ರಗಿರಿಯರ್, ಪ್ರಾಚ್ಯಪರ್ವತರ್,
ಮೇಣ್ ಅಸ್ತಗಿರಿ ಮಲಯ ಮೇರು ಸಹ್ಯಾದ್ರಿಯರ್,
ನಾನಾ ವನದ ನಾನಾಚಲದ ಕಪಿಧ್ವಜರ್
ಕೋಟಿಯಕ್ಷೌಹಿಣಿಯ ಸಂಖ್ಯೆಯಿಂ, ಹೇ ದೇವ,
ನಿನ್ನವಸರಕೆ ನೆರೆದು ಪಾರುತಿಹರಾಜ್ಞೆಯಂ,
ಓ ಅಲ್ಲಿ, ಆ ಪರ್ವತದ ನೆಳಲ್ ಕೊಡೆವಿಡಿದ
ವಿರಳಕುಂಜದ ಕಣಿವೆಯಂಗಣದೊಳಿರ್ಪವಂ  ೩೧೦
ದಶಕೋಟಿ ವಾನರ ಚಮೂನಾಯಕಂ : ಪೆಸರ್
ಶತಬಲಿ ; ಮಹಾಕಲಿ ; ನನಗೆ ಮಿತ್ರನತಿಹಿತಂ.
ಕಾಮರೂಪಿಗಳಿಂದೆ ಗಗನಗಾಮಿಗಳಿಂದೆ
ಶ್ರೀಮಂತಮಾಗಿರ್ಪುದಾತನ ಬಲಂ…. ನೋಡಲ್ಲಿ,
ಆ ಭೂಧರನ ಶಿಖರ ಪಂಕ್ತಿಗಳನೆಲ್ಲಮಂ
ಬಂಡೆಗಲ್ಲುಗಳೆನಲ್ಕಾಕ್ರಮಿಸಿ ನಿಂದಿರ್ಪ
ಸೈನ್ಯಕಧಿಪತಿ ಸುಷೇಣಂ ; ಮಾವನಣ್ಣನಿಗೆ ;
ಮೇಣತ್ತಿಗೆಗೆ ತಂದೆ…. ಕಾಣ್ ಅತ್ತಲಾ ಸರಸ್
ತೀರಮಂ ಮುಚ್ಚಿ ನಿಂದಿರ್ಪುದೊರ್ ದಳಮ್ ; ಅದುವೆ
ರುಮೆಯಯ್ಯನೆನ್ನ ಮಾವನ ಬಲಂ. ಯೂಧಪತಿ          ೩೨೦
ತಾರನೆಂಬುದೆ ಕೀರ್ತಿಯಾತಂಗೆ…. ಅದೊ ಅಲ್ಲಿ
ಕಾಣ್ಬುದಾ ಕಾನನಂ. ಪಸುರ್ವಣ್ಣಮಂ ಮೆಯ್ಗೆ
ಲೇಪಿಸುತ್ತಡಗಿರ್ಪುದಡವಿ ಸೋಗಿಂದಲ್ಲಿ
ಕೇಸರಿವೆಸರ ಮಹಾವಾನರನ ಸೇನೆ…. ಅದೊ,
ಇತ್ತಲಂಬುದಕಿರಿದು ಮೆರೆಯುತಿದೆ ಬಾವುಟಂ ;
ಅದೆ ಗವಾಕ್ಷನ ಸೇನೆ…. ಭಲ್ಲೂಕಕೇತನಂ.
ನೋಡವನೆ ಧೂಮ್ರನೆಂಬೊನ್, ಬಲಾಢ್ಯಂ ಮಹಾ !….
ಶತಕೋಟಿ ಕಪಿನಾಯಕಂ ಗವಯನಾತನದೊ
ನಿಂದಿರ್ಪನದ್ರಿ ಮರೆಯಾಗೆ…. ವಲೀಮುಖನಿವಂ,
ಸಾಗರಸ್ಪರ್ಧಿ !…. ಭಲ್ಲೂಕ ಚಕ್ರೇಶನಿದೊ
ಪ್ರಾಚೀನನದ್ಭುತಂ, ಮಹಿಮಾನ್ವಿತಂ, ಮಹಾ
ಜಾಂಬವಂತಂ. ಗಜಾಜಿನದಿಂದಲಂಕೃತರ್
ಕೆಲರಾತನಾಳ್ ; ಸಿಂಹಚರ್ಮದಿಂ ಶೋಭಿತರ್
ಮತ್ತೆ ಕೆಲಬರ್ ; ಪುಲಿದೊವಲಿನಿಂ ಭಯಂಕರರ್
ಇನ್ ಕೆಲಂಬರ್ !….”
“ದೇವ, ಇನ್ನುಳಿದ ಸೈನ್ಯಗಳ್
ಕಾಣವಿಲ್ಲಿಂ. ಬನ್ನಿಮಾ ನೆತ್ತಿಯೆತ್ತರಕೆ.
ತೋರ್ಪೆನೀ ಕಾಣ್ಕೆಗಿಂತಧಿಕತರ ದೃಶ್ಯಮಂ.
ನೀಂ ಕಂಡಿರಂಬುಧಿಯ ತೀರದಿನಿತಂ. ಮುಂದೆ
ಕಾಣ್ಬುದಾ ಸಾಕ್ಷಾತ್‌ ಮಹಾಂಭೋಧಿ !” ಇಂತೆಂದ
ಸೇನಾನಿಯಂ ನೀಲನಂ ಬಟ್ಟೆದೋರ್ಪಂತೆ
ಬೆಸಸಿ ನಡೆದನ್ ಭಾಸ್ಕರಾತ್ಮಜಂ, ರಾಮನಂ ಮೇಣ್
ಬೆರಸಿ ಸೌಮಿತ್ರಿಯಂ. ನಡೆದೇರ್ದರಾ ಗಿರಿಗೆ.
ರಾಮನಡಿದಾವರೆಗೆ ತನ್ನ ಹಣೆಮಣೆಯೊಡ್ಡಿ
ತಲೆ ನಿಮಿರ್ದುದಾ ಮೇಘಚುಂಬಿ ಶೃಂಗೋತ್ತಮಂ,
ಪೆರ್ಮೆಯಭಿಮಾನದಿಂ : ಕೊಡಗಿಗೆ ನಡೆದು, ಕಾವೇರಿ
ನದಿಯ ಮೂಲದ ತೀರ್ಥಮಂ ಮಿಂದು, ಮಡಿಯಾಗಿ,
ಬ್ರಹ್ಮಗಿರಿ ಶೃಂಗಕೇರುವ ಕಬ್ಬಿಗನ ಮನಂ
ತತ್ತರಿಪುದೆತ್ತರದ ಮೇಣ್ ಬಿತ್ತರದ ನೋಟಕ್ಕೆ
ಧುಮುಕಿ. ನಿದ್ದೆಯನುಳಿದು ಹಸಿದೆದ್ದ ಪರ್ವತದ
ತೆರೆವಾಯ ಪಾತಾಳದಾಕಳಿಕೆಗಳೊ ಹಲ್ಲೊ,  ೩೫೦
ಮೇಣ್ ಕಣಿವೆಯಾಳಗಳೊ ಕಲ್ಲೊ ? ಪೆರ್ಗಡಲಾರೆ,
ತಾಯ್‌ ತಿಮಿತಿಮಿಂಗಿಲಗಳದರ ತಳದೊಳ್ ತಮ್ಮ
ಮರಿ ಮೊಮ್ಮರಿಗಳೊಡನೆ ಮಡಿದು ಬಿದ್ದುವೊ, ಅಲ್ಲ ಮೇಣ್
ಹೆಬ್ಬೆಟ್ಟ ಕಿಬ್ಬೆಟ್ಟ ಹೆಗ್ಗುಡ್ಡ ಕಿಗ್ಗುಡ್ಡ
ಹೆಬ್ಬಂಡೆ ಕಿಬ್ಬಂಡೆಗಳ ತಂಡದಾಯಮೋ ?
ಪಾತಾಳಮಂ ಪೊಕ್ಕು ದಾರಿ ತಪ್ಪುತ್ತಲೆವ
ಆಕಾಶ ಚೂರ್ಣಗಳೊ ಮೇಣಾವಿಮುಗಿಲುಗಳೊ ?
ಪ್ರಳಯ ಪೂರ್ವದ ಪೆಡಂಭೂತದತಿ ವಿಸ್ತರದ
ಕಡಲ ಶೈವಾಲಮಾವರಿಸಿದಜಿನದ ಕೃತಿಯೊ
ಮೇಣ್ ಮಲೆಯ ಮೆಯ್ತುಂಬಿದಾರಣ್ಯ ವೈಭವವೊ ?     ೩೬೦
ಗಗನ ಗಜದುದರಮಂ ತಿವಿವಿಳಾ ಖಡ್ಗಮೃಗ
ದಂಷ್ಟ್ರಸಮ ಶೃಂಗಗಳೊ ಮೇಣದ್ರಿ ಚೂಡಗಳೊ ?
ಜಾರುವುದು ಕಣ್ಣೆಲ್ಲೆ ; ಜಾರುವುದು ಬಗೆಯೆಲ್ಲೆ ;
ಬ್ರಹ್ಮಗಿರಿ ಶೃಂಗಕೇರಿದ ಕಬ್ಬಿಗನ ಮನಂ,
ಫೂತ್ಕರಿಸಿ ಸೆಳೆವ ಬೊಮ್ಮದ ಸುಳಿಗೆ ಸಿಲ್ಕಿದೋಲ್,
ತತ್ತರಿಪುದೆತ್ತರದ ಮೇಣ್ ಬಿತ್ತರದ ನೋಟಕ್ಕೆ
ಧುಮುಕಿ – ತತ್ತರಿಸಿತ್ತು ದಶರಥ ಸುತನ ಮನಂ
ತಾನಂತೆವೋಲ್, ಸಾನು ಕಂದರದದ್ರಿಸೀಮೆಯಂ
ತುಂಬಿದಾ ಗಿರಿಅರಣ್ಯಸ್ಪರ್ಧಿಯಂ ಕಾಣುತಾ
ಕಪಿಸೈನ್ಯ ವಾರ್ಧಿಯಂ !
ಸಿಂಧು ಮಹಿಮೆಯನಳೆಯೆ ೩೭೦
ಪೇಳ್ ಪನಿಯೆಣಿಕೆ ಏಕೆ ? ಮಹತೋ ಮಹೀಯಕ್ಕೆ
ಪಟ್ಟಿಯಲ್ಪತೆಯ ವಿವರಣೆಯ ಬಣ್ಣದ ನೆರಂ
ಬೇಕೆ ? ಬಿಡು ಸಾಲ್ಗುಂ, ಓ ಕಲೆಯ ಲಲನೆಯ ಕಯ್ಯ
ವಲ್ಲಕಿಯೆ, ಪರುಟವಣೆ ! ರಾಮ ಮೌನಕೆ ಮಿಗಿಲೆ, ಪೇಳ್,
ನಿನ್ನ ತಂತಿಯ ನಿಕ್ವಣಂ ? –
ಬೆಟ್ಟದೊಳ್ ಕಾಡಿನೊಳ್
ಗಿರಿತಟದಿ ನದಿತಟದಿ ಕಣಿವೆಯಲಿ ಕೋಡಿನಲಿ
ತಿರುತಿರುಗಿ, ಬೀಡುಬಿಟ್ಟಿರ್ದೆಲ್ಲ ಪಡೆಗಳಂ
ಪಗಲೈದುಮಿರುಳೈದುಮವಲೋಕಿಸಿದರವರ್,
ಮೆಟ್ಟಿಕ್ಕುತಳೆವಂತೆವೋಲ್ ದಶಗ್ರೀವಾಯು
ರೇಖೆಯಂ. ಮುಖ್ಯರಂ ಕರೆದನಾರನೆಯ ಪಗಲ್         ೩೮೦
ಓಲಗಕೆ. ಪೆಸರ್ವೆತ್ತ ಬೀರರಂ ಪೆಸರ್ವಿಡಿದು
ಕರೆದು ಬೆಸಸಿದುದಿಂತು ಸುಗ್ರೀವನಾಜ್ಞೆ : “ಓ
ವಾನರ ಕುಲದ ಕೆಚ್ಚೆದೆಯ ಕಲಿಗಳಿರ, ಕೇಳಿ,
ಕಿವಿಗೊಟ್ಟು ಕೇಳಿ. ಲೋಕದೊಳೆಮ್ಮ ಕೀರ್ತಿಯಂ
ಶಾಶ್ವತಂ ಸ್ಥಾಪಿಸುವ ಕಾಲಮೊದಗಿಹುದಿಂದು
ನಮಗೆ. ಪುಣ್ಯಾತ್ಮ ದಶರಥ ಸುತನ ಪುಣ್ಯಸಮ
ಭಾರ್ಯೆಯಂ ಪಾಪಿ ರಾವಣನೊಯ್ದನಾತನಂ
ಪರಿಹರಿಸಿ, ಮಾತೆ ಸೀತೆಯನೆಮ್ಮ ಮಿತ್ರಂಗೆ
ದೊರಕಿಸುವುದೆಮ್ಮ ಸಯ್ಪಿನ ಪೂಣ್ಕೆ. ಮೊದಲೆಮಗೆ
ತಿಳಿಯವೇಳ್ಕುಂ ಲಂಕೆ. ಜೀವದಿಂದಿಹಳೊ ಮೇಣ್       ೨೯೦
ಪ್ರಾಣಮಂ ಪೆತ್ತುವಿಟ್ಟಳೊ ದೇವಿಯೆಂಬುದುಂ
ತಿಳಿಯವೇಳ್ಕೆಮಗೆ. ಮೇಣಾರ್ಯವನಿತೆಯನೆಲ್ಲಿ
ಆ ದೈತ್ಯ ತಸ್ಕರಂ ಬೈತಿಟ್ಟನೆಂಬುದುಂ
ನಮಗೊಳ್ಳಿತರಿವಕ್ಕುಮದರಿಂದೆ ನಮ್ಮಖಿಲಮೀ
ಸೈನ್ಯಂ ಪೊರಮಡಲ್ಕೆ ಮುನ್ನಮಾ ಸುದ್ದಿಯಂ
ತರಲೆಮ್ಮ ಬೇಹುಪಡೆಗಳನಟ್ಟೆ ತರಿಸಂದೆನಾಂ.
ಪ್ರಾಣಮಂ ಪುಲ್ಗೆಣಿಸಿ, ಪುಡುಕಿ, ಕಡುಗೆಯ್ಮೆಯಂ
ಸಾಧಿಸುವ ಕಡುಗಲಿಗಳೈತನ್ನಿಮೇಳಿಮ್.” ಎನೆ,
ಕುಳಿತವರನಾಂ ಕಾಣೆನಾ ನೆರೆದ ನೆರವಿಯೊಳ್ ;
ನೆಗೆದೆದ್ದರನಿಬರುಂ ನಾ ಮುಂದೆ ತಾ ಮುಂದೆ            ೪೦೦
ತಕಪಕ ಕುದಿವ ತವಕದಿಂದೆ ! ಘೋಷಿಸಿತುರ್ಕ್ಕಿ
ಸುಗ್ರೀವವಾಣಿ : “ವಾನರ ಕುಲದ ಕೀರ್ತಿಗಳ್,
ಕುಳ್ಳಿರಿಮ್. ಧನ್ಯನೆಂ ನಿಮ್ಮನ್ನರಾಳ್ಗಳಂ,
ಬೀರಸಿರಿ ತೋಳ್ಗಳಂ, ಗೆಲ್‌ಸಿರಿಯ ಬಲಗೈಯ
ಕರವಾಳ್ಗಳಂ ಪಡೆದ ನಾಂ.” ಮೌನ ವಾರಿಧಿಯಂತೆ
ನಿಮಿರಿಹ ಕುತೂಹಲಗಳೋಲಿರ್ದರೆಲ್ಲರಂ
ಕಣ್ಣೆರಗಿ ನೋಡಿ, ಕರೆದನ್ ಬಳಿಗೆ ವಿನತನಂ,
ಪರ್ವತ ಮಹಾ ಕಾಯನಂ, ಮೇಘಗಂಭೀರ
ಕಂಠನಂ, ಪಟುಭಟಶ್ರೇಷ್ಠನಂ. ಮೆಲ್ಲನೆಯೆ
ಮೇಲೆದ್ದು ಸಾರ್ದನಾ ಕಾರ್ಮೆಯ್ಯ ವಾನರಂ   ೪೧೦
ಚಲಿಸುವೋಲಂತೆ ಚಂದ್ರದ್ರೋಣ ಗಿರಿಚೂಡ
ಛಾಯೆ. ಕಪಿಕುಲಧೈರ್ಯ ಹೈಮಾಚಲಮೆ ಬಳಿಗೆ
ನಡೆತಂದು ನಿಂದವೋಲಿರ್ದ ಆ ವಿನತಂಗೆ,
ಕೇಳ್ದ ಗೋಷ್ಠಿಯ ಮೆಯ್ಗೆ ನವಿರೇಳೆ, ರವಿಸುತಂ
ಪೇಳ್ದನಾದೇಶಮಂ : “ಪಡೆವೆರಸಿ ನಡೆ, ಕಲಿಯೆ ;
ಕೆತ್ತು ಕೀರ್ತಿಯ ಧವಳ ಲಿಖಿತಮಂ ನೀನುತ್ತರದ
ದಿಗ್ಭಿತ್ತಿಯೊಳ್ ; ಪುಡುಕು, ಬೆಳಕು ಕತ್ತಲೆ ಸುಳಿವ
ಸರ್ವತ್ರಮಂ. ತೆರಳು, ನಡೆ. ತಿಂಗಳೊಂದರೊಳ್
ಫಲಿತಮಂ ತಾ ; ಕ್ಷೇಮದಿಂ ಮರಳಿ ಬಾ”. ಕೂಡೆ
ಭಾರಾವನತಮಾದುದುನ್ನತ ವಿನತ ಶಿರಂ     ೪೨೦
ಕಯ್ಮುಗಿದನಾಣತಿಗೆ. ವದನದುದಯಾಚಲದಿ
ಮೂಡುತಿರೆ ಗೌರವಶ್ರೀ, ಕೃಪೆಗೆ ಹಿಗ್ಗುತ್ತೆ,
ನಗುತೆ ನಡೆದನು ತನ್ನ ತಾಣಕ್ಕೆ.
ಕಪಿನೃಪನ
ಕಣ್ಣರಿತು ಗುಂಜಾಭರಣ ಶೋಭಿ, ಲಘುದೀರ್ಘ
ದೇಹಿ, ಶತಬಲಿ ಮುಂಬರಿಯೆ, ಗರಿಯ ಹಗುರದಾ
ಗಗನಗಾಮಿಯನಿಂತು ಬೆಸಸಿದನು : “ಶೌರ್ಯನಿಧಿ,
ಧೈರ್ಯಾಬ್ಧಿ, ಲೇಪಿಸಯ್ ನಿನ್ನ ಜಸದಮೃತಮಂ
ಐರಾವತದ ಮೆಯ್ಗೆ. ನಡೆ ನೀನುದಯ ದಿಶೆಗೆ.
ದೇವಿ ಕಾಣಲಿ, ಕಾಣದಿರಲಿ ತಿಳಿ : ನೇತಿಯುಂ
ಸತ್ಯ ಸಾಕ್ಷಾತ್ಕಾರಕಿತಿಯಂತತುಲ ನೀತಿ.     ೪೩೦
ತಿಂಗಳೊಂದವಧಿ. ನಡೆ, ತೆರಳ್ ; ಸೊಗದಿಂ ಮರಳ್.”
ತಲೆಬಾಗಿ ಪೋಗಿ ಶತಬಲಿ ವಿನತನೆಡೆಯಲ್ಲಿ
ನಿಲೆ, ನೀಳ್ದುದಡಕೆಯ ತೆಳ್ಪು ಬಗನಿಬಿಣ್ಪೆನೆಡೆ.
ಹೊಂಚಿ ಹಾರಿತು ಮತ್ತೆ ಸುಗ್ರೀವನಕ್ಷಿ. ಅದೊ
ಎರಗಿತೆನೆ ಇಲ್ಲಿ, ಹಾರಿತು ಮತ್ತೆ ; ಎರಗಿತೆನೆ
ಅಲ್ಲಿ, ಏರಿತು ಮರಳಿ ; ಕಡೆಗಿಳಿದುದಂಗದನ
ತಾಯ ತಂದೆಯ ಪೂಜ್ಯಸನ್ನಿಧಿಗೆ. ತಪನಜಂ
ಮೇಲೆಳ್ದು ನಡೆದನ್ ಸುಷೇಣನಿದಿರಿಗೆ ; ನಿಂತು
ಕೈಮುಗಿದು ಬಿನ್ನಯ್ಸಿದನ್ ತನ್ನ ವಿನಯಮಂ.
ನೇಮಿಸಿದನಿನ್ನೂರು ಸಾಸಿರದ ಸೇನೆಯಂ     ೪೪೦
ಜತೆಗೆ. ಪಡುವಣ ದಿಸೆಗೆ ನಡೆಯಿಮೆಂದೋಲೈಸಿ
ನುಡಿದು ವೀಳೆಯವಿತ್ತನಾ ಯುದ್ಧಸಿದ್ಧಂಗೆ,
ಮಂತ್ರೌಷಧಿಯ ಮಹಾ ವಿದಗ್ಧಂಗೆ.
ಬಡಗಣ್ಗೆ
ಮೂಡಣ್ಗೆ ಪಡುವಣ್ಗೆ ದೃಢಛಲದ ಕಲಿಗಳಂ
ನೇಮಿಸಿ ಮಹಾ ಬಲಿಗಳಂ, ವಾಲಿಯವರಜಂ
ಲಂಕೆಯಿಹ ತೆಂಕಣ್ಗೆ ಕರೆದನಯ್ ಐವರಂ,
ನೆಲದರಿಕೆವೆಸರಾಂತ ಸಿಡಿಲಾಳ್ಗಳಂ : ಮಹಾ
ಸೇನಾನಿ ನೀಲನಗ್ನಿಯ ಮಗಂ. ನೀಲತನು, ಕಾಣ್
ಬಂದನುರಿ ಸುತ್ತಿದಿರುಳಂತೆ ರಕ್ತಾಂಬರಂ.
ಕೆಂಡವನುಗುಳ್ವ ಕಡುಗೆಂಪೆಸೆವ ಗರಿ ಗಡಣದಿಂ          ೪೫೦
ಜ್ವಲಿಸಿತಾತನ ವಿಹಂಗಾಕೃತಿಯ ಶಿರತ್ರಂ,
ಪೂರ್ವಾದ್ರಿ ಫಾಲದೊಳುದಿಪ ಬಾಲರವಿಯಂತೆ.
ಕುಂಕುಮೋಜ್ವಲ ವರ್ಣದಿಂದುರಿವ ಕೇಸರದ
ಕೇಸರಿಯಜಿನಮೆಸೆದುದು ಭುಜಪ್ರದೇಶಮಂ
ಶೃಂಗರಿಸಿ. ದಂಡನಾಯಕ ಚಿಹ್ನ ಮಾತ್ರಕನೆ
ಸಂಗಗೊಂಡುದು ಬಾಹು ಕಾರುಕರ್ಮದ ಬೃಹದ್
ದಾರು ಗದೆಯಂ, ಭಾರಮಾತ್ರದಿಂದಶ್ರಮಂ
ಮದ್ದಾನೆ ಮಂಡೆಯಂ ನುರ್ಚ್ಚುನೂರ್ಗೈವುದಂ.
ನೀಲಂಗನಂತರಂ ಬಂದನಾ ಬ್ರಹ್ಮೋದ್ಭವಂ
ಜಾಂಬವಂತಂ. ಮಿಂಚುಗಪ್ಪಿನ ಕರಡಿದೊವಲಿಂ          ೪೬೦
ಮೆರೆವ ಮುಪ್ಪಿನ ಮೂರ್ತಿ. ನರೆ ಮೀಸೆ ಗಡ್ಡದಿಂ
ಪ್ರಾಚೀನತಾ ಪ್ರತಿಮನಪ್ರತಿಮನತ್ಯಂತ
ವಜ್ರಮುಷ್ಟಿಯ ಯುದ್ಧಪಂಡಿತಂ. ಸಮುದ್ರಮಂ
ಬಳಿಸಾರ್ದ ನಿಮ್ನಗೆಯವೋಲ್ ಗಂಭೀರ ರೂಪಿ.
ಕೆಮ್ಮುಗಿಲ ಬೈಗಿನಂಬರವಾಂತ ನೀಲನೆಡೆ
ನಿಂದನಾತಂ, ಮಹಾ ಮಹೀಧರಾಕೃತಿಯ ಘನ
ವನ ರಾತ್ರಿಯಂತೆ. ಚಂದ್ರೋದಯದ ಛಂದದಿಂ
ಶಾಂತಿಯಿಂದೈತಂದನಾಂಜನೇಯಂ, ಪವನ
ಸೂನು, ಅದೊ, ಜಾಂಬವಾನಂತರಂ ! ಹೊಂಬಳದಿ
ಹೊಳಹಿನಂಗದ, ವಜ್ರಸಮ ತನು ಬಲಿಷ್ಠತೆಯ,           ೪೭೦
ವನಲತಾ ಶೋಭಿತ ಶಿರತ್ರನಂ ; ಪುಲಿದೊವಲ
ಹೇಮರೋಮಂಬೊರೆದ ಕಪಿಚರ್ಮ ಕವಚದಾ
ದೀರ್ಘ ವಂಕಿಮ ನಾಸಿಕಾಕೃತಿಯ ವೈಖರಿಯ
ಮಂಗಳ ಮನೋಜ್ಞನಂ ; ಯೋಗ ವಿಜ್ಞಾನಿಯಂ ;
ವಾನರ ಮಹಾ ಪ್ರಾಜ್ಞನಂ ನೋಡಿ ಪೆರ್ಚಿತಾ
ನೆರವಿ ಜಯಕಂಠದಿಂ. ಗಗನಗಾಮಿಗಳಗ್ರ
ಗಾಮಿಯಂ, ಕಾಮರೂಪಿಗಳಗ್ರಗಣ್ಯನಂ,
ನಿಖಿಲ ಲೋಕಪ್ರಾಣಪುತ್ರನಂ, ಪುಣ್ಯದಿಂ
ಬ್ರಹ್ಮಚರ್ಯದೊಳಾರ್ಜಿಸಿದ ದೇವತೇಜನಂ,
ಪೂಜ್ಯನಂ ಕಂಡಾ ನೆರವಿ ನಮಸ್ಕರಿಸಿತೆನೆ, ಪೇಳ್,     ೪೮೦
ಹನುಮಗಾರೆಣೆ ? ಹನುಮಗಾರೆಣೆ ? ನಮೋನಮಃ !
ಹೇಳ್, ಹನುಮಗೆಣೆಯುಂಟೆ ? – ಮಾರುತಿಯನಂತರಂ,
ಬೆಳ್ದಿಂಗಳಂ ಮೀರ್ದ ವಸನಧವಳಂ, ನಳಂ,
ಬಂದನದ್ಭುತ ವಾನರಂ. ಸೇರ್ದನನಿಲಜನ
ಪಕ್ಕಮಂ, ಯೌಗಿಕ ರಹಸ್ಯದೋಲನುಪಮಂ.
ಬಂದನಂಗದನಾತನಿಂಬಳಿಕಮುದಯರವಿ ತಾಂ
ಫಾಲ್ಗುಣವನೇರಿ ಬರ್ಪಂತೆವೋಲ್. ಯುವರಾಜನಂ,
ತರುಣ ವಪುವಂ, ಕಂಡು ಸಂತೋಷಿಸಿತು ಗೋಷ್ಠಿ,
ಹೊಗಳಿ ಸುಗ್ರೀವನಂ. ಪಂಚ ಶಿಖರಗಳಂತೆ
ಮೈದೋರಿದೈವರ್ಗೆ ವೀಳೆಯಂಗೊಟ್ಟನಿಂತಾ            ೪೯೦
ಕುಪಿಕುಲಸ್ವಾಮಿ :
“ವಾನರ ಯಶಃ ಕಾವ್ಯಕ್ಕೆ,
ಮಹಿಮರಿರ, ಶುಭದ ನಾಂದಿಗಳಾಗಿ ಪೊರಮಡಿಮ್.
ನಿಮ್ಮಿಂದೆ, ವೀರರಿರ, ಕೀರ್ತಿವಿಂಧ್ಯೆಯ ಮೇಲೆ
ನಿಲ್ಗೆ ಕಿಷ್ಕಿಂಧೆ. ಕಾಲನ ಲಲಾಟಕೆ ನಿಮ್ಮ
ನಾಮಾಕ್ಷರಂ ಶಿಲಾಲಿಪಿತಿಲಕಮಪ್ಪಂತೆ
ತೆಂಕಲನರಸಿ ಬನ್ನಿ ; ಲಂಕೆಯನರಸಿ ಬನ್ನಿ ;
ತನ್ನಿಮರಸಿಯ ವಾರ್ತೆಯಂ, ಶಂಕೆಯಳಿವಂತೆ.
ಹೇ ಕಪಿಧ್ವಜ ಗೌರವಪ್ರಾಣ ಸೂತ್ರರಿರ,
ರಾಮನ ಪೆಸರಿನೊಡನೆ ನಮ್ಮ ಪೆಸರಂ ಬೆಸೆವ
ಸಯ್ಪಿಂಗಿದೆ ಮುಹೂರ್ತಂ. ಕೊಳ್ಳಲಮೃತಂ ನಮಗೆ     ೫೦೦
ಪಾಥೇಯಮಲ್ಲದಿರೆ ಕೋಟಿ ಕೀಟಗಳೊಡನೆ
ನಾವೊಂದಲಾ ? ಕಡೆಗಣಿಸೆ, ಕೋಟಿ ಕೀಟಕ್ಷುಧೆಗೆ
ಕಡೆಗುಣಿಸಲಾ ? ಬೇರೆ ಫಲಮಂ ಕಾಣೆ ಜನುಮಕ್ಕೆ !”
ನಿಂದುದೊಂದರೆಚಣಂ ಸುಗ್ರೀವ ಗದ್ಗದಂ ;
ಮತ್ತೆ ಮುಂಬರಿದುದಾ ಹರೀಶ್ವರನ ವಾಣಿ,
ಭಾವದ ಕರುಣರಸಕೆ ಕೇಳ್ದರೆಲ್ಲರ ಕಣ್ಣು
ತೊಯ್ವಂತೆ : “ಬಲ್ಲೆನಾಂ ನಿಮ್ಮೆಲ್ಲರಂ ಮಲೆವ
ದುರ್ದಮ್ಯ ದುರ್ಗಮತೆಯಂ, ಘೋರ ವಿಪಿನಾದ್ರಿ
ಕಂಟಕಿತ ಸಂಕಟದಾ ; ಮೇಣಂತೆ ಬಲ್ಲೆನಾಂ
ನಿಮ್ಮ ಸಾಮರ್ಥ್ಯಮಂ. ದೇವಿಯಳಲಂ ನೆನೆಯೆ,        ೫೧೦
ಕೆಳೆಯನಳಲಂ ನೆನೆಯೆ, ನಮ್ಮಲ್ಪಮೀ ಕಷ್ಟಂ
ತಿಲಂ, ತೃಣಂ, ಕಷ್ಟಮಿಷ್ಟಂ, ಸುಖಮೆ ಸಂಕಟಂ,
ಬಂಧು ಮಿತ್ರರ್ ದುರ್ದಶೆಯೊಳಿರಲ್. ಪಾತಕನ್,
ಪ್ರೇಮಘಾತುಕನವನ್, ಸೀತೆಯಂ ಕದ್ದೊಯ್ದ
ರಾವಣನ್. ನಾಮವನಿಗಿನ್ ಮಿಗಿಲ್ ಕೇಡಿಗರ್,
ಪರಿಹರಿಸದಿರೆ ಪಾಪಿಯನ್ ; ಮೇಣರಸಿ, ಕಾದಿ,
ಸೆರೆಬಿಡಿಸದಿರೆ ರಾಮರಾಣಿಯನ್. ನೋಡಿಮೀ
ಗಿರಿಪಂಕ್ತಿಯಿದೆ ಸಾಕ್ಷಿ. ನೋಡಿಮಾ ಸ್ವರ್ಗಾಕ್ಷಿ
ಸಾಕ್ಷಿಯಿದೆ, ಶರದಂತರಿಕ್ಷಂ. ಓ, ಪೊರಮಡಿಮ್,
ಪ್ಲವಂಗ ಕೇತನರಿರಾ, ಲೋಕಗೌರವ ಕಥಾ    ೫೨೦
ಕೃತಿಗೆ ನೀಂ ಸ್ಮೃತಿನಿಕೇತನರಾಗುವೋಲ್ ! ನಿಮಗೆ
ಸರ್ವ ಋಷಿ ಗುರು ದೇವ ಕೃಪೆಯಕ್ಕೆ ! ಗೆಲಮಕ್ಕೆ !”
ವಿರಮಿಸಿದುದಾ ಪ್ಲವಗಪತಿ ಭಾಷಣಂ. ಕೂಡೆ
ನೆಗೆದುದು ವಿಯತ್ತಳಕೆ ವೀರಘೋಷಂ. ಮಹಾ
ಧ್ವನಿಯನನುರಣಿಸಿದತ್ತಾರಣ್ಯ ಭೂಧರಂ.
ಕಂಪಿಸಿತ್ತನುಕಂಪಿಸಿತ್ತನಿಲ ಮಂಡಲಂ.
ಮತ್ತೆ, ಪುಲಕಿಸಿತಖಿಲ ಕಿಷ್ಕಿಂಧೆ. ಪರೆದುದಯ್
ಬೆಟ್ಟದೋರೆಯ ಪಸುರಿನೋಲಗಂ. ಸರಿದುದಾ
ಸೈನಿಕಂ ತಂತಮ್ಮ ಪಾಳಯಕೆ. ಕರ್ತವ್ಯ
ಭಾರಮಂದೀಕೃತ ಗಮನದಿಂದೆ. ರುಮಾಪ್ರಿಯಂ        ೫೩೦
ಗಜನಂ ಗವಾಕ್ಷನಂ ಗವಯನಂ ದ್ವಿವಿದನಂ
ಶರಗುಲ್ಮನಂ ಸುಹೋತ್ರ ಶರಾರಿ ಋಷಭರಂ
ಗಂಧಮಾದನ ವಿಜಯ ಮೊದಲಪ್ಪ ಕೀನಾಶನಂ
ಮೀರ್ವದಟರಂ ಕೀಶನಾಥರನಾಂಜನೇಯಂಗೆ
ಜತೆವೇಳುತಿಂತೊರೆದನಾ ವಿರಾಟ್ ಪ್ರಾಜ್ಞಂಗೆ :
“ಕಪಿಕುಲ ಮಹಾವೀರ, ಓ ಸಮೀರ ಕುಮಾರ,
ನೀನೆಮ್ಮ ಬಾಳುಸಿರ್ ; ನೀನೆಮ್ಮ ಕುಲದ ಕಣ್ ;
ಬಲದ ಬಲ, ಛಲದ ಛಲ, ಮತ್ತೆ ಸಾಹಸದಚಲ
ಧೈರ್ಯಮುಂ ನೀನೆ. ತೆಂಕಣ ದಿಶೆಯೊಳಿದೆ ಲಂಕೆ.
ತಿಳಿದಿರ್ದೆನಣ್ಣನಿಂ. ಆ ಕತದಿನಾ ದಿಕ್ಕೆ           ೫೪೦
ರವಿಕುಲನ ಲಲನೆಯನ್ವೇಷಣೆಗೆ ತಾನಕ್ಕೆ
ಮುಖ್ಯಲಕ್ಷ್ಯಂ. ಜಗತ್‌ಪ್ರಿಯ ಪವನಸೂನುವಯ್
ನೀಂ. ನಿನಗೆ ಪೊಗಲಾರದೆಡೆಯಿಲ್ಲಮಾವಲ್ಲಿಯುಂ.
ಕಾಡಿನೊಳ್ ಕಣಿವೆಯೊಳ್, ಪಳುವಿನೊಳ್ ಪಸಲೆಯೊಳ್,
ಬಿಲಗಳೊಳ್ ಗುಹೆಗಳೊಳ್, ಭೂಮಿಯೊಳ್ ವ್ಯೋಮದೊಳ್,
ನಾಗ ನರ ದೇವತಾ ಗಂಧರ್ವ ಲೋಕದೊಳ್,
ನಿನಗೆ, ಪೊಗಲಾರದೆಡೆಯಿಲ್ಲಮೆಲ್ಲಿಯುಂ. ನೀಂ
ಪ್ರಾಣಜಂ ದೇಶಕಲಾನುವೃತ್ತಿಯ ನಯದಿ
ನಯಪಂಡಿತಂ. ನಿನಗೆ ಲೋಕತ್ರಯದೊಳರಿಯೆನಾಂ
ಬುದ್ಧಿಯೊಳ್ ಬಲದೊಳ್ ಪರಾಕ್ರಮದೊಳೆಣೆಗಳಂ !    ೫೫೦
ಬೇರಿಗೆರೆಯುವ ನೀರ್ ಕೊಂಬೆ ಕೊಂಬೆಯನೇರಿ
ಮರಮಂ ಪೊರೆವವೋಲ್ ನಿನಗೆರೆದುದೀ ವಾಗ್‌ಧಾರೆ
ಜೀವಾತುವಕ್ಕೆಲ್ಲರುಲ್ಲಸಕೆ…. ಮೇಣ್ ದಾಶರಥಿ
ನಮ್ಮಾತ್ಮ ಮಿತ್ರನಿದೊ ಕೊಡುವನಾದೇಶಮಂ
ಮೇಣಭಿಜ್ಞಾನಮಂ….”
ಕೈಮುಗಿದ ಪವನಸುತನಂ
ಕೈವಿಡಿದನುಕ್ಕುವಕ್ಕರೆಯಿಂದೆ ರಾಘವೇಂದ್ರಂ.
ದಿಟ್ಟಿ ದಿಟ್ಟಿಯನಪ್ಪೆ ನೋಡಿದನಿನಿತುವೊಳ್ತು
ಕಣ್ಗೆ ಕಣ್ಣಿಟ್ಟು. ಪನಿ ಮೀಸೆದುಪ್ಪುಳ್ಗಿಳಿಯೆ
ಪೇಳ್ದನ್ ಸಗದ್ಗದಂ : “ಕೊಳ್ಳಿದಂ, ಪ್ರಿಯಸುಹೃತ್,
ಈ ಅಂಗುಳೀಯಮಂ. ಬಲ್ಲಳೀ ಮುದ್ರೆಯಂ   ೫೬೦
ದೇವಿ. ಕರಣೀಯಮದರಿಂದಮೀ ಪೆಸರುಂಗುರಂ,
ಮೇಣನನುಕರಣೀಯಮುಂ ವಲಂ. ಜನಕಸುತೆ, ಕೇಳ್,
ಭಯಚಕಿತೆ. ನೀನಾಕೆಗಪರಿಚಿತನದು ಕತದಿ
ನಿನ್ನನಪನಂಬಿದೊಡೆ ತೋರ್ ಇದಂ, ಊರ್ಮಿಕಾ
ಅಭಿಜ್ಞಾನಮಂ…. ಹೇ ಮಹಾಸತ್ತ್ವ, ಸರ್ವರುಂ
ನಿನಗೀವ ಗೌರವದಿನರಿತೆನಾಂ ನೀಂ ಮಹಾ
ಸತ್ತ್ವನೆಂಬಂತಸ್ಥಮಂ. ನಿನ್ನಿಂದಮೆನ್ನ
ಕಜ್ಜಂ ಸಫಲಮಪ್ಪುದೆಂದುಲಿಯುತಿರ್ದುದಯ್
ಹೃದ್ವೀಣೆಯುಂ. ನಮಸ್ಕರಿಸಿ ಬೀಳ್ಕೊಳ್ವೆನಿದೊ,
ಹೇ ಮಹತ್ಕಾರ್ಯಪಟು ; ನಿನಗೆ ಮಂಗಳಮಕ್ಕೆ          ೫೭೦
ಮಾರ್ಗಮ್ ಸುಪಥಮಕ್ಕೆ ! ನಿನ್ನನಪನಂಬಿದೊಡೆ
ನನ್ನ ಸೌಭಾಗ್ಯವತಿ…. ಸೌಭಾಗ್ಯವತಿಯಲ್ತೆ
ನೀನಿದಂ ತೋರ್ಪಾಗಳಾಕೆ !….” ಬಿಗಿದುದೊ ಕೊರಳ್ ;
ನಸು ನಡುಗುತಿರ್ದ ಕೈ ಇಳುಹಿದುದೊ ಮುದ್ರೆಯಂ
ಆಂಜನೇಯನ ನೀಡಿದಂಜಲಿಗೆ. “ಧನ್ಯನಾಂ”
ಎಂದನಲ್ಲದೆ ಬೇರೆ ನುಡಿದನಿಲ್ಲೊಂದುಮಂ
ಆ ನಿಶಿತಮತಿ, ಮಿತಭಾಷಿ, ಯೋಗಿಗಳ ಯೋಗಿ,
ಪವನಾತ್ಮಜಂ, ಬ್ರಹ್ಮಸಂಚಾರಿ, ಶ್ರೀಮುದ್ರೆಯಂ
ತನ್ನ ವಕ್ಷದ ವಜ್ರರಕ್ಷೆಗೆ ಸಮರ್ಪಿಸುತೆ,
ತನ್ನನಪ್ಪಿದ ನೀಲದೇಹನಂ ಬಿಗಿದಪ್ಪಿದನ್ ;    ೫೮೦
ಬೀಳುಕೊಟ್ಟನ್ ಪರ್ವತಂ ಮಹಾಂಭೋಧಿಯಂ
ಬೀಳುಕೊಡುವಂತೆ : ದೆಸೆದೆಸೆಯ ದಿಗ್ದಂತಿ ಮೇಣ್
ಸುಗ್ರೀವನಾಜ್ಞಾಭಯಕೆ ಘೀಂಕರಿಸುವಂತೆ !