ಓ, ಏಳ್, ವಿಪಂಚಿಯೆ, ಕಲಾಲತಾಂಗಿಯ ಬೆರಳ್
ತಳಿರ ಸೋಂಕಿನ ಸೊಮ್ಪು ಸಾಲ್ವುದೇನಿನ್ ನಿನಗೆ ?
ಪ್ರಳಯ ಭೈರವ ಡಮರು ರೌರವಾವೇಶಮಂ
ಆಹ್ವಾನಗೆಯ್ : ವಿನತನೈತಂದನೀರೈದು
ಮೇಲೈದು ದಿವಸಗಳೊಳುತ್ತರದೊಳೆತ್ತಲುಂ
ಆರ್ಯನರಸಿಯನರಸಿ ಅರಸಿ. ಪಿಂಮರಳ್ದುದಾ
ಶತಬಲಿಯತುಲ ಸೇನೆ ತಿಂಗಳ್ಗೆರಳ್ ಪಗಲ್
ಮುನ್ನಮವನಿಜೆಗಾಗಿ ಮೂಡು ದೆಸೆಯಂ ಸೋಸಿ
ರೋಸಿ. ತಿಂಗಳವಧಿಯ ಬಯ್ಗು ಕೊನೆಗಾಣ್ವಿನಂ
ಬಂದನು ಸುಷೇಣನುಂ, ಮ್ಲಾನ ವದನಗ್ಲಾನಿ   ೧೦
ತನಗೆ ತಾನೊರೆಯಲಿತ್ಯರ್ಥಮಂ ವ್ಯರ್ಥಮಂ
ವರುಣಾಶೆಯಾ. ಬಂದುದೇಕಿಲ್ಲಮಿನ್ನುಮಾ
ದಕ್ಷಿಣ ದಿಶಾ ವಾರ್ತೆ ? ತಿಂಗಳಾದತ್ತವಧಿ
ಮುಗಿಯಿತ್ತು. ಕಾತರದಿ ಕಳೆದುದಯ್ ಮರುದಿನಂ.
ಮತ್ತೊಂದು ದಿನಮುಂ ನಿರೀಕ್ಷಣೆಯ ತೀಕ್ಷ್ಣತೆಗೆ
ಬಲಿಯಾದುದಯ್ : ಅಕ್ಕರೆಗೆ ಅತಿಶಂಕೆಯಲ್ತೆ ?
ಭೀತಿ ಬಡಿದುದು ಸೂರ್ಯಸಂತತಿಯ ಮೂವರಿಗೆ !
ಹೋದನೆಲ್ಲಿಗೆ ನೀಲನ್ ? ಏನಾದನಂಜನಾ
ಪ್ರಿಯಸುತಂ ? ಮತಿಗೆಟ್ಟನೇಂ ಮುದಿಯ ಜಾಂಬವಂ ?
ವಾಲಿಯ ಕುಮಾರಂಗೆ ಗತಿರೋಧಮಡಸಿದುದೆ,         ೨೦
ಯುವರಾಜಗಂಗದಗೆ ಕಲಿಗೆ ? ಪೇಳಾ ನಳಂ
ಬೇಳ್ವೆಯಾದನೆ ರಕ್ಕಸರ ಬಲಿಗೆ ? ಗಾನಗೆಯ್,
ಓ ಏಳ್, ವಿಪಂಚಿಯೆ ! ಕಲಾಲತಾಂಗಿಯ ಕೈಯ
ತಳಿರ ಸೊಮ್ಪಿನ ಸೋಂಕು ಸಾಲ್ವುದೇ ನಿನಗಿನ್ನು ?
ತಾಂಡವ ಶಿವನ ಕಯ್ಯ ಡಮರು ಆವೇಶಮಂ
ಆಹ್ವಾನಗೆಯ್ ! ಸಾಗರೋಪಮಂ ಗಾನಗೆಯ್
ಆಂಜನೇಯನ ಸಾಗರೋಲ್ಲಂಘನದ ಮಹಾ
ಸಾಹಸ ಕತಾಸರಿತ್ಸಾಗರದ ಸಂಮಥನಮಂ !
ಇರ್ದುದು ಮಹೇಂದ್ರಾಚಲಂ, ದಕ್ಷಿಣಾಂಬುಧಿಗೆ
ಬೇಹುಗಡಿಯಂ ಕಟ್ಟಿ, ಮುಡಿಯಿಂ ಮುಗಿಲ್ಮುಟ್ಟಿ,          ೩೦
ನಗ ಕುಲ ಜಗದ ಜಟ್ಟಿ. ಮೊಲೆಯುಣ್ಣ ಮಲೆಯೆಂಬ
ಕರು, ತನ್ನ ಗೋಣಂ ನೀಡಿ, ಮೋರೆಯಂ ಚಾಚಿ,
ಗಗನ ಗೋವಿನ ಮುಗಿಲ್ಗೆಚ್ಚಲಂ ಪೀರ್ವುದೆನೆ
ಚೆಲ್ವಾದುದದರ ಚೂಡಂ. ಆ ಶಿಖರ ಶಿಖೆಯ
ಕೋಡುಗಲ್, ಲಂಕೆಯಂ ಕೇಡುಗಣ್ಣಿಂ ನೋಳ್ಪ
ಮೃತ್ಯು ದುಶ್ಶಕುನ ಶಕುನಿಯ ಕೊಕ್ಕಿನೋಲಂತೆ,
ಭೀಷ್ಮಮಿರ್ದತ್ತು, ರಾವಣನಾಯು ಲಿಖಿತಕ್ಕೆ
ಬಿದಿಯ ತೋರ್ಬೆರಳೆಂಬಿನಂ. ಬಾನ್‌ಬಟ್ಟೆಯಲೆವ
ಬರ್ದಿಲರಾ ಚಾಚರೆಯೊಳೇಗಳುಂ ಕುಳಿತಿರ್ದ
ಶಿಖರಗಾತ್ರದ ಪರ್ದ್ದು ಮುದಿಯನಂ ಕಂಡದಕೆ            ೪೦
‘ಶಕುನಶಿಲೆ’ವೆಸರಿಟ್ಟರನ್ವರ್ಥಮಂ. ಶ್ಯೇನಿ
ಪುತ್ರಂ ಜಟಾಯುವಗ್ರಜನಲ್ಲಿ ಸಂಪಾತಿ ತಾಂ
ಕುಳ್ತು, ಶಾಪದ ವಿಮೋಚನದ ನಿಡುವಟ್ಟೆಯಂ
ನೋಡುತಿರ್ದನ್ ; ಬೇಡುತಿರ್ದನ್ ವಿಧಾತ್ರನಂ
ಆ ಶುಭಮುಹೂರ್ತಾಗಮನಕಾಗಿ. ನಡುನಡುವೆ,
ಚೇತನದ ಜಡತನದ ಬೇಸರದ ನೋವಿಂಗೆ
ಚೀರುತಿರ್ದನ್, ಗಿರಿಯರಣ್ಯಂ ಪ್ರತಿಧ್ವನಿಸಿ
ಕಂಟಕಿತಮಪ್ಪಂತೆವೋಲ್. ಉದಯಗಳೆನಿತೊ ಬಂದು,
ಅಸ್ತಗಳೆನಿತೊ ಸಂದು, ರಾತ್ರಿಗಳೆನಿತೊ ನಿಂದು,
ಕಳೆದುದು ಶತಾಬ್ದಮಾದೊಡಮಯ್ಯೊ, ಕಾಣದಯ್      ೫೦
ಕಿರಣಂ, ನಿರಾಶಾ ತಮಿಸ್ರವನಿನಿತ್ತಂ ತೂರಿ !
ಮುನ್ನೀರ ನೀಲಂ, ತರಂಗಕೈಂಕರ್ಯಮೆನೆ,
ನಿಚ್ಚಮೋಲೈಸಿದುದು ಗಿರಿರಾಜನಂಘ್ರಿಯಂ
ತೀರ್ಥದಿಂ ಕರ್ಚಿ. ಪ್ರಾತಃಪ್ರಥಮ ತೇಜಮಂ
ತಮ್ಮ ನೆತ್ತಿಯ ಪಚ್ಚೆದಳಿರ ತೊಟ್ಟಿಲೊಳಿಟ್ಟು
ದಿನಶಿಶುವನುಯ್ಯಾಲೆದೂಗುವಾ ಚೂಡಾಗ್ರ
ವಿರಳ ಕಾನನ ಚಾರುತರುಪಂಕ್ತಿಯಂ ಮುಟ್ಟಿ,
ಮುತ್ತಿಟ್ಟು, ಮುಂಡಾಡಿ, ಶಿರವನಾಘ್ರಾಣಿಸುತೆ
ನೀಲಮಾಶೀರ್ವದಿಸಿದುದು ನಿಚ್ಚಮಂಬರಂ,
ಅದ್ರಿದೇವನ ಕಿವಿಗೆ ನಾಕಲೋಕ ಅಶೋಕ      ೬೦
ಮಂತ್ರಮಂ ಪರ್ಚಿ. ಆ ಗಿರಿಶಿರಾಶ್ರಮದಲ್ಲಿ
ಗರಡಿಮಲ್ಲರ ಮುಷ್ಟಿಯಾದುದೊ ಶಿಲಾಗೋಷ್ಠಿ !
ಬಂಡೆ ಬಂಡೆಯನೆತ್ತಿ, ಬಂಡೆ ಬಂಡೆಯನೊತ್ತಿ,
ಬಂಡೆಬಂಡೆಯ ಮಂಡೆಯೊಂದನೊಂದಂ ಮಲೆಯೆ,
ಪಣೆಪಣೆಗೆ ಕೊಂಬುಕೊಂಬಿಗೆ ಪೆಣೆದು ತಲೆವಾಯ್ವ
ಗೂಳಿ ಗೂಳಿಗೆ ಹಣಾಹಣಿಯಾಗುವೋಲಂತೆ,
ಹಿಂಡುಗೊಂಡರೆಬಂಡೆಯೆದ್ದಿದ್ದುವಲ್ಲಲ್ಲಿ :
ಕಾಂತಾರದೈಕಾಂತಮವತಾರಮೆತ್ತಿದುದೊ,
ಘನಿತ ಮೌನಂ ವಜ್ರನಿದ್ರೆಯಿಂದೆಳ್ಚರದೊ
ಪೇಳೆಂಬೊಲಾ ಬಂಡೆ ಬಿದ್ದಿದ್ದುವಲ್ಲಲ್ಲಲ್ಲಿ !       ೭೦
ಬಂಡೆಗಳೊಡನೆ ತಾನುಮೊಂದೆನೆ ತಪಂಬಟ್ಟು
ಕುಳ್ತ ಸಂಪಾತಿ ತಾನಾ ಪುಷ್ಯಪ್ರಭಾತದಾ
ಹೇಮಂತದಂತಿಮದ ಹಿಮಶೀತ ಮಂಜುಮಶ್ರೀ
ಕಂಪಿಪೋಲನುಕಂಪಿಪೋಲಾರ್ತ ಕಂಠದಿಂ
ಚೀತ್ಕರಿಸಿದನ್, ಮಹೇಂದ್ರಾದ್ರಿ ಸಾನುಸ್ಥಾನ
ಘಾಸ ಕುಟ್ಟಿಮದಲ್ಲಿ ಕಲೆತಿರ್ದ ಕಪಿವೀರ
ಸಮಿತಿ, ಮಂತಣವನುಂತಿಟ್ಟು, ಬೆಕ್ಕಸವಟ್ಟು,
ಗೋಳ್ದನಿಯ ಕಾರಣವನಿರಿಯೆ ಶರಗುಲ್ಮನಂ,
ಕಾನನಕೆ ವಾನರವ್ಯಾಘ್ರನೋಲುಗ್ರನಂ,
ಪಡೆಗೊಟ್ಟಟ್ಟುವಂತೆ !
ಮುಗಿಯಿತ್ತು ಮೃಗಶಿರಂ ;  ೮೦
ಪೂರೈಸುತಿದೆ ಪುಷ್ಯಮ್ ; ಅದೊ ಮೊಗಂದೋರಲಿದೆ,
ಮಂಜು ಬಿಳಿಯೈಕಿಲಿಂದಂಜಿಪ, ಕುಳಿರ್‌ಕೋಳ್ಪ
ಚಳಿಯ, ಮಾಘ ಪಾಲ್ಗುಣ ಸೇವ್ಯ ಶಿಶಿರೇಶ್ವರಂ.
ಇತ್ತವಧಿ ಮುಗಿದತ್ತು ; ಉಲ್ಲಂಘಮಾಯಿತ್ತು ಮೇಣ್
ಸುಗ್ರೀವನಾಜ್ಞೆಯುಂ ; ಪೊತ್ತ ಪೂಣ್ಕೆಗೆ ಭಂಗಮುಂ
ಬಂದತ್ತು ; ವಿಘ್ನಮಾದುದು ರಾಮನುದ್ದಾಮ
ಕಾರ್ಯಲಗ್ನದ ಯುದ್ಧಸಿದ್ಧತೆಗೆ ; ಚಣಚಣಕೆ
ಕಾಯುತ್ತೆ, ಕುದಿಯುತಿಹುದತ್ತಲಾ ಕಿಷ್ಕಿಂಧೆ !
ಅಂತಾದೊಡಂ, ಏಕೆ ತಳ್ವಿಹುದಿಲ್ಲಿ, ಪೇಳಾ
ಕಪೀಶ್ವರಬಲಂ ? ಏಂ ಗೆಯ್ಯುತಿಹರಲ್ಲಿ ಹನುಮಾದಿ      ೯೦
ನೀಲ ನಳ ಜಾಂಬವಾಂಗದ ಮಹಾ ಕಲಿಗಳಾ
ನಗ ಮಹೇಂದ್ರನ ಹೆಗಲ ಮಂಚದಲಿ ? ಆಲಸಿಯ್,
ಪೇಳ್ವೆನಾ ಮಾನನಿಧಿ ವಾನರರಿಗೊದಗಿದಾ
ಸಾಹಸದ ಸಂಕಟದ ಕಥೆಯ ಗೋಳಾಟಮಂ.
ಅರಸಿದರು ಸೀತೆಯಂ ; ಅರಸಿದರವನಿಜಾತೆಯಂ ;
ಅರಸಿದರಸುರನೊಯ್ದ ರಾಮ ಸಂಪ್ರೀತೆಯಂ.
ಜಾನಕಿಯನರಸಿದರ್ ; ಮೈಥಿಲಿಯನರಸಿದರ್ ;
ಅರಸಿದರ್ ಸುಗ್ರೀವನಸುಗೆಳೆಯನರ್ಧಾಂಗಿಯಂ.
ಹುಡುಕಿದರರಣ್ಯಮಂ ; ಹುಡುಕಿದರಚಲಸೀಮೆಯಂ ;
ಹುಡುಕಿದರ್ ನದನದೀ ಜಲಗಳಂ, ಕಾಸಾರ   ೧೦೦
ಕುಲಗಳಂ, ಮೇಣ್ ತಲಾತಲಗಳಂ. ಹುಡುಕಿದರ್
ಗಹ್ವರದ ಗುಹೆಗಳಂ, ಮೇಣ್ ಭೀಕರಾಭೀಳ
ತಿಮಿರ ಭೀತಿಯ ಬಿಲಸ್ಥಲಗಳಂ. ಸೋವಿದರ್
ಗೂಢಮಂ ; ಸೋವಿದರ್ ಪ್ರಕಟಮಂ ; ಸೋವಿದರ್
ಸರ್ವಮಂ ಮರಗಳೊಳ್ ಪೊದೆಗಳೊಳ್, ಕಲ್ಗಳೊಳ್
ಪುಲ್ಗಳೊಳ್, ಪಳುಬೆಳೆದ ಪಳ್ಳದೊಳ್ ಪಿಣಿಲಿಡಿದ
ಕೊಳ್ಳದೊಳ್, ಕೆಸರುಸುಬು ಕೊರಕಲಿನ ಕಿಬ್ಬಿಯೊಳ್
ದುಮುದುಮನೆ ನೀರ್‌ಬೀಳುವಬ್ಬಿಯೊಳ್ ಆ ಕೀಶ
ಸಂಶೋಧನಾ ಕೋವಿದರ್ ! ತಡವಿದರಹಸ್ಪತಿಯ      ೧೧೦
ಕದಿರಾಳ್ಗಳಂ ಕೂಡಿ ಪಗಲನೆತ್ತೆತ್ತಲುಂ,
ಕೌಟವಿಯಾಗೆ ಕಣ್ಗಟವಿ. ಸೋದಿಸಿದರಂತೆ
ತಣ್ಗದಿರ್ವೆರಸಿ ರಾತ್ರಿಯ ಗರ್ಭಮಂ, ಕೈಗೆ
ಕತ್ತಲೆ ಬತ್ತಲಪ್ಪಂತೆ !
ಇಂತಿಂತಿಂತುಟಾ
ವಾನರರ್ ಕೊಟ್ಟವಧಿ ಕೊನೆಮುಟ್ಟಿಬರ್ಪಿನಂ
ಅರಸುತಿರೆ, ಪುಡುಕುತಿರೆ, ಸೋವುತಿರೆ, ಸೋಸುತಿರೆ
ದಳದಳಗಳಾಗಿ ದೆಸೆದೆಸೆವೊಕ್ಕು, ಭೋಂಕನೆಯೆ
ಗೋಚರಿಸಿತಾ ಮಹೇಂದ್ರಾದ್ರಿ, ದಕ್ಷಿಣ ದಿಶಾ
ನೈಶ ನೈರಾಶ್ಯ ಯಮದೇಹ ಗೋಪುರಮೆನಲ್
ಗ್ರಂಥಿತ ಕಳೇಬರದ ನೈಲವೈಶಾಲ್ಯದಿಂ       ೧೨೦
ದೃಷ್ಟಿಗೆ ದಿಗಂತಮನೊಡರ್ಚ್ಚಿ. ಸೇರ್ದತ್ತದರ
ಸಾನುವಂ, ಸಂಕೇತದಂತೆ, ಕಪಿಕೇತನರ
ಸೇನಾಮುಖಂ. ಪೊಳ್ತುವೊಳ್ತಿಂಗುಣಿಸು ನಿದ್ದೆ
ವೀಹಂಗಳಂ ಕಾಣದಲೆದಲೆದಲೆದು ಸೋಲ್ತು,
ಮಾಸಿದ ಮನದ, ಮಾಸಿದಾನನದ, ಮಾಸುಡೆಯ,
ಮಾಸಿದಾಸೆಯ ಸೈನಿಕಂ ವಿಶ್ರಮಿಸಿದತ್ತು
ಮೈಚಾಚುತಲ್ಲಲ್ಲಿ, ತೃಣದ ತಲ್ಪದ ಗಿರಿಯ
ತಳ್ಪಲಿನಂಕ ಪರ್ಯಂಕದಲ್ಲಿ. ಮೇಣ್ ದಣಿವಾರೆ,
ಬಗೆ ತಣಿಯಲೀಂಟಿದರ್ ದೊಣೆನೀರ್ಗಳಂ ; ಝರದ
ಜಲಮಂ ಮಿಂದರೊಗೆದರುಡೆನೂಲ್ಗಳಂ ಕಿಬ್ಬಿ  ೧೩೦
ಬೆಳ್ಳಂಗೆಡೆಯುವರ್ಬ್ಬಿಯೊಳ್. ಪುತ್ತಿನೊಳಗಿರ್ದ
ತುಡುವೆಜೇನಂ, ಮರದ ಬಿರುಕಿನೊಳಗಣ ನಸರಿ
ತುಪ್ಪಮಂ, ಬಂಡೆಯಿಂ ಜೋಲ್ವ ಹೆಜ್ಜೇನ್ಗಳಂ
ಕಿಳ್ತರೊಪ್ಪಂ ಮಾಡಿ ಪಣ್ಪಲಂಗಳನೂಡಿ
ಬನದೌತಣವನುಂಡರನಿಬರುಂ, ಜಲಪಾತ
ಶಿಲೆಯ ರಕ್ಷೆಯ ದುರ್ಗಬಿಲದ ನೀಡದೊಳಿಕ್ಕಿ
ಪಾರಿವಾಳದ ಪಕ್ಕಿ ಕಟ್ಟಿರ್ದ ಕಣಜದಿಂ
ಕವರ್ದ ತರತರದಕ್ಕಿಯಿಂದನ್ನಮಂ ಸಮೆದು,
ಹೊಡೆತಣಿವಿನಂ.
ಮೇಲೆ, ಸಭೆ ನೆರೆದುದಂಗದನ
ಯುವರಾಜ ವಾಲಿಯ ಕುಮಾರನಧ್ಯಕ್ಷತೆಗೆ    ೧೪೦
ಕೈಮುಗಿಯೆ ಸೇನಾಸಮಷ್ಟಿ. ಮುಖ್ಯಂಗೆ, ಅದೊ
ಗ್ರಾವದಗ್ರಾಸನವನಿತ್ತುದೊಂದೆತ್ತರದಿ
ಬಂಡೆ ! ಸಚಿವ ಸಮಿತಿಗೆ ಗೌರವಕೆ ತಕ್ಕಂತೆ
ಇರ್ಕ್ಕೆಲದುಪಲವೇದಿ ! ಮಿಕ್ಕರಿಗವರ ಹಕ್ಕು,
ಕಲ್ಲೊ ಕೊಂಬೆಯೊ ಹುಲ್ಲೊ, ನೆಲೆಸಿಕ್ಕಿದಲ್ಲಾಯ್ತು !
ನೆರೆಯುತಿರೆ ಪರಿಷತ್ತು ಪಗಲಿನಂಚಿನ ಸಂಜೆ
ಶರನಿಧಿಗುರುಳಿದತ್ತು. ಶೀತಲ ನಿಶೀಥಿನಿಯ
ತಿಂಗಳರಿಲಾಳ್ವಿಕೆಗೆ ಜೊನ್ನ ಮುನ್ನುಡಿಯಾಯ್ತು.
ಹೇಮಂತ ಶೈಶಿರದ ಸಂಧಿಯ ಚತುರ್ದಶಿಯ
ಚಳಿ ಚಳಿ ನಿಶೆಯ ಕುಳಿರ್ಗದಿರ ಬೆಳ್ದಿಂಗಳೊಳ್           ೧೫೦
ತೊಯ್ದೊದ್ದೆಯಾದುದಾ ರಾತ್ರಿಯಪ್ಪಿದ ಧಾತ್ರಿ,
ನಡನಡ ನಡುಗಿ ಹಿಮಕೆ ! ಮಂಜಿಗಂಜುವುದುಂಟೆ
ನಂಜುಗೊರಲನ ಪಣೆಯ ಕಣ್ಗೆಣೆಯ ಕಲಿಗಣಂ ?
ಸಾಗಿತಾ ಸಭೆ, ರಜನಿ ತುದಿಗೆಯ್ದಿ, ಮೂಡಣದಿ
ಮರುವಗಲರಳ್ವಿನಂ, ನೇಸರ್ ಮರಳ್ವಿನಂ,
ಸಂಪಾತಿ ಚೀತ್ಕಾರಮಿರಿದು ಕಿವಿಗೊಳ್ವಿನಂ !
ಪ್ಲವಗೋತ್ತಮನ ವಾಲಿಸಂಭವನ ಜ್ಯೋತ್ಸ್ನಾ
ಶಶಾಂಕ ಹೇಮಂತಾಂಶು ಕಾಂತ ಗಾತ್ರಾಸ್ಫುಟನ
ಪೊಣ್ಮಿದತ್ತಂಗದ ಕುಮಾರನ ತರುಣವಾಣಿ,
ಕೋಳ್ಮಿಗಗಳೂಳ್ಗಳಂ ನಿಲಿಸಿ, ಭಯವಿಸ್ಮಿತಾ  ೧೬೦
ನಿಶಿ ಗೌರವಚಕಿತಮೌನದಿಂದಾಲಿಪಂತೆ :
“ಕಪಿಕುಲ ಬಲಿಷ್ಠರಿಗೆ, ವಾನರಶ್ರೇಷ್ಠರಿಗೆ,
ರಾಜೇಂದ್ರ ಸುಗ್ರೀವನಾಜ್ಞಾ ಶಿರತ್ರರಿಗೆ,
ಮೇಣೆನ್ನ ಕೆಳೆಯರಿಗೆ ನನ್ನದಿದೊ ಬಿನ್ನಪಂ.
ಕಟುವಾರ್ತೆಯಾದೊಡಂ ತಿಕ್ತಮಪ್ರಕಟಮೆನೆ
ಪೇಳ್ವೆನಕಟುಕ್ರಮಂ. ಕೇಳ್ವುದಲಘುಮತಿಯಿಂ.
ದೊರೆಯಾಣೆಯಂ ಪೊತ್ತು, ತೆಂಕಲಿಳೆಯೆಲ್ಲಮಂ
ತೊಳಲಿ, ರಾಮಪತ್ನಿಯನರಸಿ ನೀಮನಿಬರುಂ
ಬಳಲಿದಿರಿ. ಪಸಿವು ನೀರಡಿಕೆಯಂ ನೋವುಸಾವಂ
ಕಂಡುಂಡು ದಣಿದು ರೋಸಿದಿರಿ. ಮೇಣೆಲ್ಲಕ್ಕೆ ತಾಂ       ೧೭೦
ಮಿಗಿಲ್ ನಮ್ಮೊಳ್ ಕೆಲರ್, ಬಾಳ್ಗೆಳೆಯರಳಿದುದಂ
ಕಂಡರೆಂಬುವ ಕಠಿನಮಂ ನುಡಿಯಲಳಲುತಿದೆ
ನಾಲಗೆಯ ಬಲ್ಮೆ !” ರಾತ್ರಿಯ ರವವಿಹೀನತೆಗೆ
ಸುಯ್ಲೊದಗಿದಂತೆ ಸುಯ್ದುದು ಸಮಿತಿ ಸಂಕಟಕೆ.
ಕೇಳ್ದದಂ ಮುನ್ನೊರೆದನಿಂತು ವಾಲಿಯ ಸುತಂ :
“ವಾನರ ಬಲಿಷ್ಠರೆಂ ! ಕಪಿಕುಲ ದೃಢಿಷ್ಠರೆಂ !
ನಿತ್ಯಮಾಶಿಷ್ಠರೆಂ ! ನಾಂ ಯೋದ್ಧರೆಂಬುದಂ
ಮರೆಯದಿರಿಮ್, ಓ ಶಿಷ್ಟನಿಷ್ಠಯ ಮಹಾಮತಿಯ
ಸಂತತಿಗಳಿರ ! ಕೆಳೆ ಮಡಿಯೆ ಬಳ್ದ ಕೆಳೆಗಳಲ್
ಸಾಜಂ, ದಿಟಂ. ರಣದಿ ಕೆಡೆದವರೊಳ್ಪುಗೆಯ್ಮೆಗಳ್       ೧೮೦
ಸಫಲಮಪ್ಪಂತೆಸಗೆ ನಾಮ್, ಅದೆ ಸುಧಾತರ್ಪಣಂ
ತಾನವರಾತ್ಮತೃಷೆಗೆ ತೃಪ್ತಿಯನೀವುದಲ್ತೆ
ಪಿತೃಲೋಕದೊಳ್ ? ಮಿಶ್ರಮಂ ಮಾಳ್ಪುದೆ ಘನಾಮೃತಕೆ
ಅಪೌರುಷದ ಅಶ್ರುಜಲಮಂ ? ಪಿಂತಣಳಲಿರ್ಕೆ,
ಬಿಡಿಮದಂ. ನಮಗೆ ಮುಂತಣಮಿಂದು ಮಂತಣಂ. –
ಮುಗಿಯಿತ್ತು, ಮೇಣ್ ಮೀರ್ದತ್ತು, ರಾಜಾಜ್ಞೆಯಿತ್ತವಧಿ.
ತೋರ್ದುದಿಲ್ಲವನಿಜೆಯ ನೆಲೆ. ದಶಶಿರನ ಲಂಕೆ
ತಾನಾದುದಿರ್ಪುದಿಲ್ಲವೊ ಎಂಬ ಬರು ಶಂಕೆ !
ತಿಳಿದು ದಳದಳದನುಭವಂಗಳಂ, ಮೇಣರಿತು
ಸೈನ್ಯಮನಮಂ ಮತ್ತಮುತ್ತರೋದ್ದೇಶಮಂ,  ೧೯೦
ಮುಂಬಟ್ಟೆಯಂ ನಿಶ್ಚಯಿಸಲೆಂದು ತರಿಸಂದು
ಇಂದು ನೆರೆದಿಹುದಿಲ್ಲಿ ಸಭೆ, ಈ ವೀರಗೋಷ್ಠಿ !
ಪೇಳ್ವೆನಾನೆನ್ನ ದಳದನುಭವದ ಕಥನಮಂ ;
ತಾಳ್ಮೆಯಿಂದಾಲಿಸಿಂ. ಮಿತಮೊರೆವೆನನಿತುಮಂ
ತಾಮುಮಂತೆಯೆ ತಮ್ಮ ಕಥೆಯನತಿಕಲ್ಪನೆಯಂ
ತೊರೆದೊರೆವುದೆಂದು ಬಿನ್ನೈಸುವೆಂ. ಕಥೆಗೆ ಗುರಿ
ಕಥೆಯಲ್ಲಮಿಂದಿಲ್ಲಿ. ತಮ್ಮ ಬಲವಿಕ್ರಮಕೆ
ಪೆರರ ಮೆಚ್ಚುಗೆವೇಳ್ಕುಮೆಂದೆಂಬ ಕಲಿಸಹಜ
ದೌರ್ಬಲ್ಯಮಂ ತ್ಯಜಿಸಿ, ದೇವಿಯನ್ವೇಷಣೆಗೆ
ಬೇಳ್ಕನಿತುಮನೆ ಪೇಳ್ವುದೆಲ್ಲರುಂ.”
ನುಡಿದಿಂತು        ೨೦೦
ನಿಂತುದಾತನ ವಾಣಿ. ಚಿಂತಿಸಿದನೆನ್ಬುದಂ
ಒಂದಿನಿತುವೊಳ್ತು. ಜೊನ್ನಿರುಳ ಸದ್ದಿಲಿತನಕೆ
ಚವರಿವೀಸಿತು ಕುಳಿರ ಸುಯ್ಗಾಳಿ, ಬಿಳ್ದುವಯ್,
ಚಳಿಯ ದನಿಮರ್ಮರದವೋಲ್, ಪಟ್ಟಪಟ್ಟನೆಯೆ
ಹಿಮದ ಹನಿ ಮರಮರದೆಲೆಗಳಿಂದೆ :
“ಅನ್ನೆಗಂ.”
ಮತ್ತಮೆಳ್ಚರಿಸಿತಾ ಕೊರಳ್ ಇರುಳ ನಿದ್ದೆಯಂ,
“ಮುಂದೆ ಭೀಷಣಮೆಸೆದುದಿನ್ನೊಂದು ಕಾನನಂ,
ಭೀಮಘೋರಂ. ಪೊಕ್ಕು ಪಳುದಟ್ಟಮಂ, ಪುಡುಕಿ
ಕುತ್ತುರ್ಗಳಂ ಸೋದಿಸಿರೆ, ಕಂಡುದೊಂದೆಲ್ವು
ರಾಸಿ. ಕಂಡಾ ಮಹಾ ಕಂಕಾಲಧವಳಮಂ,    ೨೧೦
ಪರ್ವತೋಪಮ ತಿಮಿಂಗಿಲದಸ್ಥಿಪಂಜರದ
ದೀರ್ಘೋನ್ನತಾಯತದ ಕುಣಪಾವಶೇಷಮಂ,
ಶಂಕಿಸಿತು ಸೇನೆ ರಾವಣ ಪುರದ್ವಾರಕ್ಕೆ
ತೂಗಿರ್ದ ತೋರಣಮದೆಂದು ! ನುಗ್ಗಿತು ಮುಂದೆ
ಜಗಜಟ್ಟಿಗಳ ದಳಂ, ನನ್ನ ಹಜ್ಜೆಯ ಹಿಂದೆ
ಹಿಂದೆ, – ಕಡಲಿನ ಜಂತು ಬಂತಿಳೆಗದೆಂತು ? ಇದೆ
ಸಾಗರಮದೂರದೊಳ್. ಕೈಸಾರ್ದುದಾ ಲಂಕೆ.
ಸಿಕ್ಕಿದಳ್ ಸೀತೆ. ರಕ್ಕಸರೊಡೆಯನಂ ಕೊಂದೆ
ಪೊಕ್ಕಪೆವು ಕಿಷ್ಕಿಂಧೆಯಂ. ಗೆಲ್ಗೆ ಸುಗ್ರೀವ
ರಾಜಾಜ್ಞೆ ! – ಎಂದುಕ್ಕುವುರ್ಕಿನಿಂ ನುಗ್ಗುತಿರೆ, ೨೨೦
ತೋರ್ದನೊರ್ವನ್ ವಿಕೃತ ರೂಪದ ಜಟಾಶ್ಮಶ್ರು
ಜಟಿಲಾನನಂ. ವೈರಮುಕ್ಕಿತು ವಿಕಾರಕ್ಕೆ
ಪೇಸಿ. ದೈತ್ಯಂಗೆತ್ತು ಗುರ್ದ್ದಿದೆನವನ ನೆತ್ತಿಯಂ,
ಪಿಸುಳ್ವಂತೆ. ಅಯ್ಯೊ ಏನನ್ನೆಯಂ ! ಸಾವ ಮುನ್
ತನ್ನ ಪೆಸರಂ ಪೇಳ್ದನಾ ಋಷಿ ನಿಶಾಕರಂ.
ಗುರುವಂತವನ್ ಸಂಪಾತಿ ಖಗವರೇಣ್ಯಂಗೆ.
ಶಪಿಸಲಿರ್ದಾತನೆನ್ನುದ್ದೇಶಮಂ ಮತ್ತೆ
ನಾಂ ಶಿರದೊಳಾಂತ ಗುರುಕೃತಿ ಮಹತ್ತ್ವವನರಿತು
ಕೃಪೆಯೊಳುಪಸಂಹರಿಸಿದನು ಶಾಪಮಂ : ಪದಕೆ
ಮುಡಿಚಾಚಿದೆನ್ನನುಂ ಮನ್ನಿಸಿದನಾದೊಡಂ,  ೨೩೦
ಮುನ್ನಿನೋಲಿರದಿನ್ನೆನಗೆ ಪಿತೃವತುಲ ಶಕ್ತಿ.
ಮತ್ತೊಂದನರುಹಿದನ್, ತನ್ನ ಶಿಷ್ಯನ ಶಾಪ
ಮೋಚನೆಗೆ ನೆರವಾಗಿ ನಾಂ ಪಡೆವುದಾತನಿಂ
ರಾಮಕಾರ್ಯಕೆ ನೆರವನೆಂದು…. ನಮಗದ ಕಣ್ಗೆ
ಕದಿರಪ್ಪುದೀ ಕವಿದ ಕಳ್ತಲೊಳಗೆಂದೆನ್ನ
ಹಾರೈಕೆ, ಸಂತೈಕೆ. ಮೇಣರಕೆ !”
ನಿಂತುದಾ
ವಾಲಿಯ ಸುತನ ಕೊರಳ ತರುಣತೂರ್ಯಂ. ನೆರವಿ
ನೀರವಂ ನೋಡುತಿರಲುತ್ಕಂಠೆಯಿಂ, ಮರಳಿ
ಮೇಲೆಳ್ದನೊರ್ವನಾ ಮರ್ಬ್ಬಿನೊಳದಾರೆಂದು
ತವಕಿಸುತ್ತಿರೆ ಸೇನೆ, ಕಂಠ ಘಂಟಾ ರವಂ      ೨೪೦
ಪೊಣ್ಮಿದುದು, ತವಕಂ ತವಿದು ತುಳಿಲ್‌ಗೆಯ್ವವೋಲ್
ತುಂಬಿದ ಸಭಾಸಂಭ್ರಮಂ. ವಾಚಿಸಿದನಿಂತು
ಸೇನಾನಿ ನೀಲನಗ್ನಿಯ ಕುಮಾರಂ, ಶ್ರೀಮನ್
ಮಹಾಮೌನಿ :
“ಯುವರಾಜ ಭಾಷಣ ಮಧುವನೀಂಟಿ ಸಭೆ
ತಣಿದಿಹುದು ತುಂಬಿ. ಆ ವೀರ ವಾಣಿಯ ಕೇಳಿ
ಮರುಕೊಳಿಸಿಹುದು ಕೆಚ್ಚು, ಕೆಚ್ಚುಗೆಟ್ಟಿರ್ದರ್ಗೆ.
ಮಿಗಿಲೆರಡರಿಂದಾವುದೆನೆ, ದೊರೆತಿರ್ಪುದೆಮಗೆ
ಗುರಿ ಮಾರ್ಗಣದ ಕಣ್ಗೆ. ಆ ಗುರಿಗೆ, ಆ ಕಣ್ಗೆ
ಪೆರತೊಂದು ತೋರ್ಬೆರಳಿನಂದದೊಂದನುಭವಂ
ಸಮನಿಸಿತ್ತೆಮಗೆ. ಪೇಳ್ದಪೆನದಂ, ನಿರಾಶೆಗೆ    ೨೫೦
ಕೋಡುಡಿದು ತಾನದುವೆ ಸೋಲ್ಬಗೆಗೆ ಬೆನ್ಬಡಿಗೆಯೆನೆ,
ಧೈರ್ಯಕಾಶಾ ಶ್ವಾಸವಾಡುವೋಲ್. ನಿಂದಲ್ಲಿ
ಪಳುವರಸಿ, ನಡೆನಡೆದು ದರಿ ಸೋಸಿ, ಗಿಡುಗಳಂ
ಮೀಂಟಿ, ಮಡುಗಳನೀಂಟಿ, ಮರುಧರೆಗಳಂ ದಾಂಟಿ
ದಾಳಿಟ್ಟು ನಡೆಯುತಿರಲೆನ್ನ ಪಡೆ, ತೊಟ್ಟನೆಯೆ
ಮುಂದೋರ್ದುದೊಂದು ರಕ್ಕಸರ ಬೇಹಿನ ಚೂಣಿ,
ಕಣ್ಬೊಲದ ಕೂಣಿಮೀನಾಗಿ. ಶೈಲಾಕೃತಿಯ
ಘೋರ ಕರ್ಮಿಗಳವರ್, ಹರ್ಯಕ್ಷಮಂ ಕಂಡ
ಕಾಳ್ಕೋಣವಿಂಡಿನೊಲ್ ಮಲೆತು, ಮೇಲ್ವಾಯ್ದರೈ,
ರಾಹುಛಾಯಾದಂಡಗಳೆ ದಂಡುಗೊಂಡಂತೆ  ೨೬೦
ಗೂನ್ಗಂಟುಗಂಟಾದ ತರು ಬೃಹನ್ಮುಂಡ ಸಮ
ದೋರ್ದಂಡಗಳನೆತ್ತಿ. ಸೊಂಟದಟ್ಟಿಯ ಬಿಗಿದು
ಕಟ್ಟಿ, ತೋಳ್ತೊಡೆಗಳಂ ಚಪ್ಪರಿಸಿ, ನೆಲ ನಡುಗೆ
ಕಾಲ್ ಕುಟ್ಟಿ ತಾಗಿದತ್ತೆಮ್ಮ ಸೈನ್ಯದ ಸಿಡಿಲ್.
ಸುಟ್ಟು ಸೀಕರಿವೋದುದರಿಸೇನೆ. ಏನೆಂಬೆನ್ ?
ಒರ್ವನುಳಿದನ್ ಮಹಾ ಮಾಯಾವಿ ! ತೋರುತಂ
ಮತ್ತೆ ಮರೆಯಾಗುತಂ ನಮ್ಮನೀಳ್ಕುಳಿಗೊಳಲ್
ನಿಟ್ಟೋಟದಿಂ ಪರಿದನಿತ್ತಣ್ಗೆ. ಪ್ರತಿಮಾಯೆಯಿಂ
ಪಿಡಿದರವನಂ ಕಡೆಗೆ ನಮ್ಮವರ್. ‘ಲಂಕೆಯಂ
ತೋರ ! ದಶರಥಸುತನ ದಯಿತೆಯಂ ಬೈತಿಟ್ಟ          ೨೭೦
ತಾಣಮಂ ತೋರ ! ನೀಚ ರಾವಣನೆಲ್ಲಿ, ಬಾ,
ತೋರ !” ಎಂದೆಂದು ಗುದ್ದಿದರಿರಿದರಕ್ಷಿಯಂ
ಕಿಳ್ತರೇನೆಂಬೆನಾ ಕಲ್ಗುಂಡಗೇಂ ಸ್ವಾಮಿಯೊಳ್
ನಿಷ್ಠೆ ! ನಾನರಿಯೆನಾನ್ ಕಾಣೆನೆಂದನಲ್ಲದೆ ಮೇಣ್
ಬೇರೆ ನುಡಿಯಂ ನಾಲಗೆಗೆ ತಂದನಿಲ್ಲೈಸೆ !
ಕಡೆಗೊಡಲನುಳಿದನೆಂತುಂ ದಕ್ಷಿಣದ ದಿಶೆಗೆ
ನಡೆದನಂತುಂ ಪೇಳ್ದನಿಲ್ಲುತ್ತರವನೆಮಗೆ !
ಕೊನೆಗೆ ನಾಮವನೋಡುವಟ್ಟೆಯನೆ ದಿಕ್‌ಸೂಚಿ
ಗೆಯ್ಯುತ್ತೆ ಬಂದೆವಿಲ್ಲಿಗೆ ಮಹೇಂದ್ರಾಚಲಕೆ.
ಇತ್ತಲೆತ್ತಲೊ ಲಂಕೆಯಿರ್ಪುದೆ ದಿಟಂ, ಶಂಕೆ    ೨೮೦
ವೇಡೆಮಗೆ,” ಎಂದುಮೊಂದೆರಳ್ ನಿಮಿಷಮುಂತಿರ್ದು,
ನಿಡುಸುಯ್ದು, “ಮೀರ್ದೆವಿತ್ತವಧಿಯಂ, ತೀರ್ಚುವಂ
ಹೊಣೆ ಹೊರೆಯನಾದೊಡಂ. ತೀರದಿರ್ದೊಡಮೆಂತೊ
ಕರ್ತವ್ಯಮಸಗುತ್ತೆ ತೀರ್ಚುವವಸರದೊಳೆಯೆ ನಾಮ್
ತೀರ್ವುದೆ ವಲಂ ಕಲಿಗೆ ಗೌರವಂ !”
ಸೇನಾನಿ ತಾಂ
ಕುಳ್ತೊಡನೆ, ಗಜನೆದ್ದನಿನಿತು ಕುಳ್ಳೊದೊಡಂ
ಗಜಗಾತ್ರದಿಂದರಿಂದಮ ಪಾತ್ರನುಜ್ವಲಂ,
ರೂಕ್ಷ ಜಿಹ್ವೆಯ ನಿಷ್ಠುರಂ, ಹಾಸ್ಯಕೋವಿದಂ.
ನರಿಮೊಗದ ನಗೆಯ ಕುಡುಗೋಲ್‌ಕೊಂಕು ನೆರಮಿರಿದು
ತುಟಿಗಳಿರ್ಕೆಲದಲ್ಲಿ ಸುಳಿಯುತಿರ್ದುದನಿರುಳ್
ಮರೆಸಿದುದು ಜೊನ್ಮಾಯೆಯಿಂ :
“ನಿಶಾ ಸಭೆಯಲ್ಲಿ”
ನಿದ್ರೆಯಧ್ಯಕ್ಷತೆಗೆ ನಮಿಸದಿರ್ಕೆಳ್ಚರಂ.
ಮಂಡೆಯಿಂದುಣ್ಮಲೇಂ ? ಜಾಣ್ಮೆಯಿಡಿದಿರ್ದೊಡೇಂ ?
ಬೆಳ್ಪುನುಡಿ ಬೆಳ್ಪೆ ಗಡಮೇಗಳುಂ : ಆಲಿಸಿಮ್,
ನಮಗುಮೊರ್ವನ್ ದೊರೆತನವನ ದುರದೃಷ್ಟದಿಂ.
ಸಿಕ್ಕೊಡನೆ ‘ರಕ್ಕಸನ್!’ ಎನುತೆ ಕೀರಿದರೆಮ್ಮವರ್
ಕಪಿಕರ್ಕಶರ್. ‘ಅಲ್ಲ!’ ಎಂದೊರಲಿದನ್ ಅವನ್.
ಕೇಳ್ವರಾರ್ ? ‘ಪೇಳೆಲ್ಲಿ ಸೀತೆ ? ತೋರ್ ಲಂಕೆಯಂ !’
ಎನುತೆನುತೆ ಬಡಿಯಲವನ್ ‘ಅಯ್ಯಯ್ಯೊ ಕಾಣೆನಾನ್ !
ದಮ್ಮಯ್ಯ, ಬಿಟ್ಟುಬಿಡಿಮ್ !’ ಎಂದೊರಲ್ದಾತಂಗೆ,         ೩೦೦
ಬಗೆಯ ಗುಟ್ಟಂ ಸೆಳೆವ ಮರ್ದ್ದೆಂದು, ಕುಡಿಸಿದರ್
ಕಳ್‌ಬಳ್ಳಿಯಂ ಪಿಂಡಿ ಗೆಯ್ದ ರಸಮದಿರೆಯಂ.
ಬಿದ್ದುದೆ ತಡಂ ಪೊಡೆಗೆ ಮದ್ದು, ನೆಗೆದುದು ನನ್ನಿ
ಪೊರಗೆ ! ಪರಿದುದು ಪುರ್ಚ್ಚುವೊಳೆಯಂತೆ : ‘ಬಲ್ಲೆನಾಂ
ಲಂಕೆಯಂ !’ ಎಂದವಗೆ ‘ಎತ್ತಲಿದೆ ?’ ಎನಲಿವರ್,
‘ಇತ್ತಲಿದೆ ! ಇತ್ತಲಿದೆ ! ಇತ್ತಲಿದೆ !’ ಎನುತವನ್
ಸತ್ತನತ್ತಿತ್ತಲೆತ್ತೆತ್ತಲೊಮ್ಮೊಮ್ಮೆ ಕೈಯನ್
ಬೀಸಿ. ಬೀಸಾಟಮನೆ ಸುಟ್ಟಿದೋರ್ಕೆಗೆ ಗೆತ್ತು ನಾಮ್
ಬಂದೆವಿಲ್ಲಿಗೆ ಮಹೇಂದ್ರಾಚಲಕೆ ! ಬೇಡೆಮಗೆ
ಶಂಕೆ ! ಇತ್ತಲೆತ್ತಲೊ ಲಂಕೆಯಿರ್ಪುದೆ ದಿಟಂ !”           ೩೧೦
ನಕ್ಕರ್ ಕೆಲರ್. ನಗೆಯ ತಡೆದರ್ ಕೆಲರ್. ಕೆಲರ್
ಮುಳಿದುರ್ಕ್ಕಿದರ್. ಮತ್ತೆ ಮಿಕ್ಕವರೇಕೊ ಏನೊ
ಸಂದೇಹದಿಂದೆ ತಮ್ಮಿರ್ಕ್ಕೆಲದೊಳಿರ್ದರಂ
ಲೆಕ್ಕಿಸಿದರೇಂ ಗೆಯ್ವುದೇಂ ನೀತಿಯೆಂಬುದಂ !
ನೆರೆದ ಸಭೆ ಬೆರಗಾಗೆ, ನೀಲನುಂ ನಗುತೆದ್ದು
ಚಪ್ಪರಿಸಿದನ್ ಗಜನ ಭುಜಮಂ ! – ಅನಂತರಂ,
ಪೇಳ್ವುದೇನೊಬ್ಬೊಬ್ಬರಾಗೆದ್ದರೆನಿತೆನಿತೊ
ಕಪಿಭಟರ್. ಪ್ರಕೃತಮಂ ಪೇಳ್ದರ್ ಕೆಲರ್ : ಪಲರ್
ಪೇಳ್ದರಪ್ರಕೃತಮಂ. ಪೇಳ್ದನಿಲ್ಲೊರ್ವನುಂ
ನೆಚ್ಚು ಮೂಡುವ ಸುದ್ದಿಯಂ ! ಭಾಷಣಧ್ವನಿಯೊ ?        ೩೨೦
ವಾಗಿಂಗಿತಮೊ ? ದನಿಯ ಹನಿ ಕೂಡುತೊಯ್ಯನೆ
ಹತಾಶೆ ಹಳ್ಳಂಬರಿದು, ದುಮುಕಿ, ಕೊಚ್ಚಿತ್ತಲ್ಲಿ
ನೆಚ್ಚಿನುತ್ತರಮುಖಿಯ ಕೆಚ್ಚಿನೋಡದ ಪುಟ್ಟು
ನುಚ್ಚುನುರಿವೋಗೆ !
ಮೈಂದಂ, ಮಹಾವಾನರಂ,
ಕಪಿಕುಲಾಂಭೋಧಿ ಚಂದ್ರಂ, ಚಂದ್ರಸುಂದರಂ,
ಕವಿ, ಚಾರುವಾಕ್ಕೋವಿದಂ, ಕಾವ್ಯ ರಸ ಹೃದಯಿ,
ಮೇಣು ವೀಣಾಕ್ವಣನ ವಾಣಿಯ ಲಸನ್ಮುಖಂ
ಮೇಲೆಳ್ದನಾಶಾಪತಾಕೆಯೋಲಾ ವಾಗ್ಮಿ.
ದಳ್ಳುರಿದುದಾವೇಶದಗ್ನಿ : ಕಿವಿಸೋಲ್ತುದಾ
ಸಮಿತಿ, ಮಂತ್ರದಿ ಮುಗ್ಧಮಾದಂತೆ, ಸೋಲಿಹುದೆ,      ೩೩೦
ಕಾಲವೆ, ಕವಿಧ್ವನಿಗೆ ? ಪರಿಷದಮರಿಯದೋಲೆ
ಸಮಯನಿಷ್ಠೆಯನುತ್ತರಿಸಿದನ್ ; ರಸಕ್ಷಣಕೆ
ಗಮಿಸುತೆ ರಸಕ್ಷಣಂ ಪೊಳ್ತುವೊಳೆ ನೆರೆವರಿಯೆ
ಬಿತ್ತರಿಸಿದನ್ ಕಥನಮಂ ಕಾವ್ಯಶೈಲಿಯಲಿ !
ಭಾವನಾತೀತಕೆ ಅಚಿಂತ್ಯಕ್ಕೆ ರಸಕ್ಕಿಹುದೆ
ಕಾಲಮಾನದ ಸೂತ್ರಸಂಕೋಲೆ ?
“ಮೆಲೆಚೆಲ್ವು
ತಾಯ್ನೆಲಂ, ಕಿಷ್ಕಿಂಧೆ ತಾಂ ಪೆತ್ತ ನಲ್ಮಕ್ಕಳಂ
ನುಂಗಲಿದೆ ದುರ್ಯಶಃಕೇತು. ಧೀರರ್ಗಿಂದು,
ಕಿಷ್ಕಿಂಧೆಯಂಬೆಯಾ ಪರ್ವತಸ್ತನಗಳಿಂ
ಪೀಯೂಷಧೈರ್ಯಮಂ ಪೀರ್ದು ಬಳೆದರ್ಗಿಂದು,        ೩೪೦
ಪೇಡಿತನಮಡಸಲಿದೆ ; ಸೋಜಿಗಂ ; ಸಂಕಟಕರಂ !
ಯುವರಾಜನೀ ವಾಲಿಸುತನಂಗದ ಕುಮಾರನಿಂ,
ನಿಖಿಲ ಲೋಕಪ್ರಾಣ ಸುತನಾಂಜನೇಯನಿಂ
ವಹ್ನಿಜಂ ಲೋಕೈಕ ಕಲಿ ಮಹಾ ಸೇನಾನಿ
ನೀಲನಿಂ, ತನ್ನೊಂದು ಬಲ್ಪಿಂ ತ್ರಿವಿಕ್ರಮಗೆ
ಹೊಯ್‌ಕಯ್ ಪರಾಕ್ರಮದ ಬಲಿ ಜಾಂಬವಂತನಿಂ,
ಮೇಣೀತರ ಸಾಹಸಶ್ರೀಮಂತರಿಂ, ಸಮರ
ಧೀಮಂತರಿಂ ತುಂಬಿದೀ ಸಭೆಯ ತೇಜಕ್ಕೆ
ತಗದೆಂದಿಗುಂ ಪರಾಜಯ ಬುದ್ಧಿ, ಶುದ್ಧಿ ಮೇಣ್
ಶ್ರದ್ಧೆಯಿರೆ ತುದಿಗೆ ತಪ್ಪದು ಸಿದ್ಧಿ ಸಾಧನೆಗೆ…. ೩೫೦
ತನ್ನಿಷ್ಟದೇವತೆಯ ಸೇವೆಯಂ ನೊಗವೊತ್ತ
ಪೆಗಲೊಳೆಯೆ ಸತ್ತರಾ ಸಾವುಮುತ್ತಮ ಗತಿಯೆ,
ನಾಸ್ತಿಕನಲ್ಲದಾತ್ಮನಿಷ್ಠಂಗೆ. – ಕಿರಿಯನಾಂ.
ಬಿನ್ನವಿಪೆನಾ ಪೆರ್ಮೆಯೆನ್ನದಲ್ತಾದೊಡಂ,
ಪೆರ್ಮೆಯಿರ್ಪಾತನಂ ಪಿಂಬಾಲಿಪಾ ಸಯ್ಪು
ನನ್ನದಾಗಿರ್ದುದೆಂಬುದೆ ಪೆರ್ಮೆ. ಕೇಳಿಮದರಿಂ
ನಮ್ಮ ದಳದನುಭವಂ ಬೇರೆಪರಿಯಾಯಿತ್ತು.
ಬೇರೊಂದು ತೆರನಾಯ್ತು ನಮ್ಮ ನೆಚ್ಚುಂ. ಬೇರೆ
ಪರಿಯಿರ್ಪುದಾಂಜನೇಯನ ಪಡೆಯವರ ಕೆಚ್ಚು.
ನಮ್ಮ ಪಡೆ ಪಟ್ಟ ಕೋಟಲೆ ಕಿರಿದುಮಲ್ತೆಮ್ಮ   ೩೬೦
ದುಃಖದ ನಖದ ನಕ್ರಕಾಂ ಕಾಣೆ ಕರುಣೆಯಂ,
ಕನಿಕರದ ಲವವೇಶಮಂ. ನಾವುಮಡವಿಯಂ
ತೊಳಲಿದೆವು ; ನಾವುಮಲೆದೆವು ಮಳಲ್‌ಪೊಡವಿಯಂ.
ನೊಂದೆವಾವುಂ ಪಸಿವು ನೀರಡಿಕೆ ಚಳಿ ಸೆಕೆಯ
ಬಾಧೆಯಿಂ. ಕರಡಿ ಪುಲಿ ಫಣಿ ಸಿಂಹ ವಿಷಕೀಟ
ಹಿಂಸೆಯಿಂ ನಾವುಂ ನರಳ್ದೆವಾವುಂ ರೋಸಿ
ಸತ್ತು ಪುಟ್ಟಿದೆವಮಮ ಅಕ್ಷರದಿಟಂ !
“ದಾಂಟುತಾ
ಕ್ರೌಂಚಾದ್ರಿಯಂ ಕ್ರೋಶಮಂ ಕ್ರಮಿಸಿದುದೆ ತಡಂ
ನಾಮರೂಪಂಬಡೆದು ನಿಮಿರ್ದುದೊ ನಿರಾಶೆಯೆನೆ,     ೩೭೦
ಪ್ರತಿಕೃತಿಸುತೆಮ್ಮ ಸದ್ಯಃಸ್ಥಿತಯ ಚಿತ್ತಮಂ,
ಪರ್ವಿದತ್ತೊಂದು ಸೈಕತಸಮುದ್ರಂ. ಶಿವಾ,
ನೆನೆದರಾ ನೋಟಮಂ ನಡುಗುತಿಹುದೀಗಳುಂ
ಮನ್ಮನಂ ! ನಡುಗಲಿಲ್ಲಾಗಳಾ ದೃಶ್ಯಕ್ಕೆ
ನಮ್ಮೊಳಾರುಂ ; ಪೊಸತು ನೋಟಮಿನಿದಾಯ್ತಲಾ
ಸಾಹಸದ ಬೇಸತ್ತ ಕಣ್ಗೆ ! ನೈರಾಶ್ಯೆಗುಂ ದಲ್
ನೆಯ್ದಿರ್ಪುದೊಂದಂಚು ; ತನ್ನ ಪೊನ್ನೆಳೆಗಳಿಂ
ಕಣ್‌ ಸೆಳೆದು ಮನಮೋಹಿಪುದು ಮೊದಮೊದಲ್ ; ಸಿಲ್ಕಿ
ಮೋಹಕ್ಕೆ ಮುನ್‌ನಡೆಯೆ, ಕೊಂಡೊಯ್ವುದತಿಥಿಯಂ
ನರಕ ಕೇಂದ್ರಕ್ಕೆ. ಏನೆಂಬೆನೆಮಗಂತೆವೋಲ್
ಮೊದಲ ನೋಟಕೆ ಮನೋಹರಮಾಯ್ತು ಮರುಪೃಥಿವಿ :           ೩೮೦
ಬೆಳ್‌ಮಳಲ ನೆಯ್ ನುಣ್ಪು ಮುತ್ತೊತ್ತಿದುದು ಕಣ್ಗೆ,
ದಿಟ್ಟಿ ದಣಿವನ್ನೆಗಂ ಹಬ್ಬಿ, ಮೇಣ್ ತಣಿವನ್ನೆಗಂ
ತಬ್ಬಿ. ಮುತ್ತೊತ್ತಿದಂತಾದುದಂಗಾಲ್ಗೆಯುಂ :
ಮೃದುಪುಳಿನ ಮೃದುಲನಳಿನಾಧರದ ಸಾದರದ
ಸೋಂಕಿಂಗೆ ಪುಳಕಿಸಿತ್ತಡವಿವೆಟ್ಟಿನ ನೆಲದ
ಕಲ್‌ಮುಳ್ ಬಿರುಸನಲೆದ ಕಾಲ್. ಆ ಮಳಲ್ಗಡಲ್
ತಗ್ಗಿಳಿದುಮುಬ್ಬೇರ್ದುಮಲೆಯಲೆ ಪೊನಲ್ವರಿದು,
ತನ್ನನಂತತೆಯಿಂದಮಂತರಿಕ್ಷದ ಕೂಡೆ
ಸೆಣಸಿದುದು. ಮರುಭೂಮಿಯಾದೊಡೇನಾಗಸಕೆ
ಮಲೆತರದೆ ಭವ್ಯಮೈಸಲೆ, ದೇವದೇವನಂ     ೩೯೦
ಕೆಣಕಿದಸುರನ ಮೃತ್ಯುವುಂ ದಿವ್ಯಮಪ್ಪಂತೆವೋಲ್ !
ಪಿಂತಿಕ್ಕುತುರ್ವರೆಯ ಪಚ್ಚೆಯೈಶ್ವರ್ಯಮಂ
ಮುಂದುಮುಂದಕೆ ಪರಿಯಲೇಕನಾದತೆಯಾಯ್ತು
ಕಿವಿಗೆ ಸದ್ದಿಲಿತನಂ ಮಸಣದಾ ; ಮೇಣಂತೆ
ಏಕಲೋಕತೆಯಾದುದವಲೋಕನಕೆ ರುಂದ್ರ
ನಿಸ್ಸೀಮ ಸೈಕತೌರ್ವಾಲೋಕಮಾತ್ಮಕ್ಕೆ
ಮಿಳ್ತು ಬೇಸರಮುಸಿರ್ ಕಟ್ಟುವೋಲ್. ನಿರ್ಜನಂ,
ನಿರ್ಜಲಂ, ನಿರ್ಜೀವಮಂತೆ ನಿಃಶ್ಯಾಮಲಂ.
ಪಳುವಿಲ್ಲ ; ಪಸುರಿಲ್ಲ ; ಮಿಗವಕ್ಕಿವೆಸರಿಲ್ಲ ;
ತಂಗಾಳಿಯಿಲ್ಲ ; ತಿಳಿನೀರಿಲ್ಲ ; ಇಂದ್ರಿಯಕೆ     ೪೦೦
ಮನಕೆ ಜೀವಕೆ ಮಹಾಚಿತೆಯಾಯ್ತು ; ಬಿಸಿಲುರಿಯ
ಬೀಡಾಯ್ತು, ಸೆಕೆಯ ಸೂಡಾಯ್ತು, ಕಾವಲಿಯೋಡು
ತಾನಾಯ್ತು. ಬಳಲಿದರ್ ಬಲವಜ್ರರುಂ ಢಗೆಯ
ಡಾವರಕೆ: ಬೆಬ್ಬಳಿಸಿದರ್ ಭೀಮಕಲಿಗಳುಂ
ಝಳದ ರಭಸಕೆ ; ಗಂಟಲೊಣಗಿ ಬರೆ ಬಾಯಾರಿ,
ಮಾತು ಮಾಣ್ದುದು ಕೆಲರ ನಾಲಗೆಗೆ ; ಸುಡೆ ಮಳಲ್
ಬೊಕ್ಕೆಯುರ್ಬಿದುವೆನಿಬರಂಗಾಲ್ಗೆ ; ಪಸಿವಡಸಿ
ನಡೆಗೆಟ್ಟುದಿನಿಬರಿಗೆ ; ಸೆಕೆಯೆ, ನೀರಳ್ಕೆಯಂ
ತಾಳಲಾರದೆ, ಪೀರ್ದುದೊಡಲಿನರವಟ್ಟಿಗೆಯ
ಬೆಮರ ನೀರಂ ! ಸುಂಟುರುರಿಗಾಳಿಗಳ್ ಸುತ್ತಿ,           ೪೧೦
ಮಂಥಿಸಿ ಮಳಲ್ಗಳಂ, ದೂಳಿವೆಟ್ಟಂ ರಚಿಸಿ,
ತಿರ್ರನೆ ತಿರುಗಿ ತಿರುಗಿ ಮೇಲೆತ್ತಿ, ರಿಂಗಣಂ
ಕುಣಿದುವೈ, ಮರಳುಗಾಡಿನ ಮರುಳ್ಗಳೋಲಂತೆ.
ಕಣ್ಗೆ ಪುಡಿಯಂ ತೂಳ್ದು ಕಟ್ಟಿದುವು ದಿಟ್ಟಿಯಂ ;
ಮತ್ತೆ ಮೇಗಿಂದೆರಗಿ ಪೂಳ್ದುವಾಳ್ಗಳನೊತ್ತಿ
ಮುಚ್ಚಿ ; ದೂಳ್ಮುಗಿಲ ಹರಹಿಂದುರಿವ ನೇಸರಂ
ಮುಸುಗಿ ಕಳ್ತಲೆಗೈದುವುನ್ಮಾದವೇರ್ದರೋಲ್
ಚೀತ್ಕಾರಗಳನೂಳ್ದು ; ಚಿತ್ರಸ್ವನಂಗಳಿಂ
ಚಿತ್ರ ಚಿತ್ರಂ ನರ್ತಿಸುತ್ತಾ ಮರು ಪರೇತ
ನಟ ಮಂಡಳಂ ! ಕಾಲ್ಗೆಟ್ಟು ಕಣ್ಗೆಟ್ಟು ಸೇನೆ ತಾಂ          ೪೨೦
ತತ್ತರಿಸುತುತ್ತರಿಸುತಿರೆ, ಪೇಳ್ವೆನೇಂ, ಮುಂದೆ,
ಸಿಕತ ದಿಕ್‌ಚಕ್ರವಾಳಾಂತಮಂ ಸಿಂಗರಿಸಿ,
ಕಣ್‌ ಮೋಹಿಸಿತು ಮನೋಹರಂ ಮರುಸರೋವರಂ.
ಪಾರ್ದುದೆ ತಡಂ, ಗಂಟಲೊಣಗಿ ಬಾಯಾರ್ದರೆಂ,
ಮೃತರಿಗಮೃತದ ಕೃಪೆಯೆ ಕೈಸಾರ್ದುದೆಂದಾರ್ದು
ಓಡಿದೆವು, ಬಯಕೆಯ ಬಿಸಿಲ್ಗುದುರೆಗಳನೇರ್ದು,
ನೀಳ್ಕೊರಳ ನಿಟ್ಟೋಟದಿಂ. ತಣ್ಪು ನೋಟದಿಂ
ತೆರೆನಲಿದು ಕುಣಿದತ್ತು ; ತೆರೆಯ ಮೊರೆಯಿಂಪಿಂದೆ
ಕರೆಯನುಲಿದತ್ತು ; ಕರೆದುದು, ನಿರಾಶೆಯ ನಡುವೆ
ದೂರದಾಶೆಯ ತೆರದಿ, ಪಳುಕು ತಿಳಿನೀರ್ಗಳಿಂ          ೪೩೦
ಕಣ್ಗೊಳಿಸಿ ನಂಬಿಪಾ ಬಿಸಿಲಿಚ ಮಳಲ್ಗೊಳಂ.
ಎನಿತೋಡಲೇನ್ ? ಓಡಿದಂತೆಲ್ಲಮದಕೆಮಗೆ
ನಡುವೆಯಿರ್ದಂತರದ ದೂರಮಕ್ಷೀಣಮೆನೆ
ನಿಂದುದಚಲಂ. ಕುದಿದ ಸೆಕೆ. ಸುಡುಮಳಲ್. ಬೇಯೆ
ಬೀಸುವ ಬಿಸಿಲ್ಗಾಳಿ. ದಣಿವು, ದುಗುಡಂ, ಪಸಿವು,
ನೀರಡಿಕೆ. ಬೆನ್ನಟ್ಟುತಿರಲಾ ಬಯಲ್‌ಭ್ರಾಂತಿ
ಬಯಲಾದುದೈ. ಬೈಗುನೇಸರ್‌ವೆಳಗು ಪಡುವ
ಪೊಳ್ತಿನಲಿ. ಏನೊರೆವೆನಾ ಗೋಳನಯ್ಯಯ್ಯೊ,
ಪಡೆಯೊರಲಿದುದು ನಿಡು ನರಳ್ ನರಳಿ, ಮರಳ ಮೇಲ್
ಪೊರಳಿ…. ಪವನಜ ವಾಣಿ ತುಂಬಿದುದು ತೇಜಮಂ     ೪೪೦
ಮರಳಿ…. ನೆತ್ತರ್ಮುಗಿಲ ಕೊಲೆಯ ಕಲೆಯಂ ಕೆತ್ತಿ,
ರಕ್ತ ರವಿಶವಮಳ್ವುತಿರೆ, ಬಿಳ್ದುದಾ ಪಗಲ್
ಕರ್ದ್ದಿಂಗಳಿರುಳ ಮಸಣಕ್ಕೆ. ಓ ಆ ರಾತ್ರಿ,
ಏಂ ಭಯಂಕರಮಾದುದಾ ತಾರಕಿತ ರಾತ್ರಿ !
ಕ್ರೂರ ತಾರಾ ಕಾಂತಿ ತಿಮಿರಮಂ ತೋರುತಿರೆ
ಮುನ್ನಡೆದೆವನಿಬರುಂ, ಬೀಳ್ವನ್ನೆಗಂ ಪರಿವ
ಛಲದಿಂದೆ : ದೈವಕೃಪೆ, ದೈವಕೃಪೆ ದಿಟಕಣಾ,
ಮೂಡಿತು ಮೃಕಂಡು ಋಷ್ಯಾಶ್ರಮಂ. ಮರುವನದ
ಮಧ್ಯೆ ! ಮಾಯೆಯೊ ನಿಜವೊ ನಾನರಿಯೆ : ಮಗನಳಿಯೆ
ಮುನಿಯ ಸಂಕಟದುರಿಗೆ ಬೇಯಲ್ ಬೃಹದ್ವನಂ,         ೪೫೦
ಮೂಡಿತೆಂಬರ್ ಮೃತ್ಯುಮಂಚದ ಮಳಲ್ವಾಸಿನೋಲ್
ಸರ್ವಸಂಕಟಕರಂ ಮಹಾ ಮರುಪೃಥಿವಿ. ಕೃಪೆಯ
ಮನೆಯೆನಲ್, ನೀರ್ ನೆಳಲ್ ಪಣ್‌ಪಲಮ್ ತಣ್ಪಿಂಗೆ
ಬೀಡಾಗಿ, ಮೆರೆದಿರ್ದುದೊಂದು ಮರುವನಮದರ
ನಡುವೆ, ತಪಮಿರ್ದನಲ್ಲಿ ಮೃಕಂಡು ಮುನಿವರಂ.
ಮಿಂದುಂಡು ಮಲಗಿ ಜೀವಂದಳೆದು, ಮರುದಿನದ
ಪಗಲನಲ್ಲಿಯೆ ಕಳೆದು, ರಾತ್ರಿ ಬರಲಾ ಮುನಿಯ
ಪೇಳ್ಕೆವೊಲರಿಲ್ವಟ್ಟೆಗಳನರಿದು, ಯಾತ್ರೆಯಂ
ಮುಂಬರಿಸಿದೆವು, ಚಂಡಕರ ತಾಪದಂಡಲೆಗೆ
ಸುರ್ಕಿ. ನಡೆದಿರುಳೆಲ್ಲಮಂ ಬೆಳಗುವೊಳ್ತಿಂಗೆ   ೪೬೦
ಕಳೆದುದಾ ಮರಣಕರ ಮರುಮಂಡಲಂ : ಮುಂದೆ
ಸೊಗಸಿತು ಪಸುರ್ಮಲೆಯ ತಣ್ಣೆದೆಯ ತಾಯ್ವರಕೆ !
“ರಾತ್ರಿಯೆಲ್ಲಂ ಮರುಧರಿತ್ರಿಯಂ ಚರಿಸಿದಾ
ತೃಷೆಗೆ ನೀರ್ದಾಣಮಂ ಪುಡುಕುತಿರಲೇನೆಂಬೆ ?
ತಿಮಿರದ ತಿಮಿಂಗಿಲಂ ತೆರೆದ ತಾಳಿಗೆಯವೋಲ್
ಅಗುರ್ವಾಯ್ತು ಗಿರಿಗುಹ ಗಹ್ವರ ಮಹಾ ಬಿಲಂ.
ಬಳಿಸಾರ್ದುನದನಚಲಕೂಟಾಭನನಿಲಜಂ
ಗುಲ್ಮವೃಕ್ಷಾಕೀರ್ಣಮಂ. ವಿಪಿನಕೋವಿದಂ,
ಸಂವೀಕ್ಷಿಸುತ್ತೆ, ಸಂಜಾತ ಪರಿಶಂಕೆಯಿಂ
ಸಂಬೋಧಿಸಿದನೆಮಗೆ ಸಲಿಲಾರ್ಥಿಗಳಿಗೆ : ‘ಹೇ          ೪೭೦
ಹೃತದಾರ ಸನ್ಮಿತ್ರ ಸುಗ್ರೀವನಾಜ್ಞೆಯಂ
ಮತ್ತೆ ಕರ್ತವ್ಯಮಂ ಪೊತ್ತ ಸಹಚರರಿರಾ,
ಸೋವಿ ಸೋಸಿದೆವೆನಿತೊ ತೆಂಕಲಂ ; ಮೈಥಿಲಿಯ
ನೆಲೆ ತೋರದಿದೆ. ಸತೀಚೋರನಾ ರಾವಣಂ
ಪೇಳಲಸದಳಮೆಲ್ಲಿ ಬೈತಿಟ್ಟಿಹನೊ ? ಬಿಲಂ
ಕಾಣ್ಬುದಿದೊ ಪಾತಾಳ ಕೂಪೋಪಮಂ. ಶಂಕೆ
ಪುಟ್ಟಿರ್ಪುದೆನಗೆ : ಲಂಕೆಗೆ, ನಿಶಾಚರ ಪುರಕೆ,
ಕುಹರಮಿದೆ ಗುಹ್ಯಮಾರ್ಗಂ. ಕಾಣಿಮದೊ ಅಲ್ಲಿ :
ವಿವರ ಮುಖದಿಂ ನಿಷ್ಕ್ರಮಿಸುತಿವೆ ಜಲಾರ್ದ್ರಮಾ
ಕ್ರೌಂಚ ಸಾರಸ ಪಂಕ್ತಿ. ತೊಯ್ದ ತೇವದ ಗರಿಗೆ            ೪೮೦
ಹೂವಿನ ಹುಡಿಯ ಹಳದಿಯಂಟಿ ಹೊಮ್ಮುತಿಹವದೊ
ಹೊಂಗೆಲಸದೆಸಕದಾ ಜಕ್ಕವಕ್ಕಿಯ ಮಾಲೆ.
ಗವಿಯ ಬಾಯಿಯ ಮರಗಳುಂ ನೀರನೀಂಟಿದಾ
ಕೊರ್ವಿನ ಪಸುರ್ಪಿಂದೆ ಸೊಗಸುತಿವೆ. ರಕ್ಷಿಸಿದೆ
ರಾಕ್ಷಸ ರಹಸ್ಯಂ ತಿಮಿರಗೂಢಂ ಬಿಲಂ.
ಬನ್ನಿಮೊಳಪುಗುವಮರಸುವಮವನಿಜಾತೆಯಂ.’
ಹನುಮದೇವನ ವಾಣಿಯಾವೇಶದಿಂ ಪೆರ್ಚಿ
ದುರ್ದರ್ಶಮತಿಘೋರಮನಚಂದ್ರಸೂರ್ಯಮನ್
ಪೊಕ್ಕೆವಾ ಋಕ್ಷಬಿಲಮಂ. ಒರ್ವರೊರ್ವರಂ
ಪಿಡಿದು, ಪೆಗಲಂ ನೆಮ್ಮಿ, ನಡೆಯುತಿರಲಕ್ಕಟಾ           ೪೯೦
ಕರಡಿ ಪುಲಿಗಳ ಕೂಗುಮೆಲರುಣಿಯ ಫಣಿಯ ಸುಯ್
ಕೇಳ್ದತ್ತು, ನೀರ್‌ದುಮುಕುದನಿವೆರಸಿ. ಪೋಗುತಿರೆ,
ಸಾಗುತಿರಲೊಯ್ಯನೆಯೆ, ಬೆಕ್ಕಸಮುಕ್ಕುವಂತೆ
ತೆಕ್ಕನೆಯೆ ಕಣ್ಬೊಲಕೆ ಸುಳಿದುದೊಂದದ್ಭುತಂ,
ಸುರಸುಂದರಂ, ವಿತಿಮಿರಂ ವನಂ ! ಪೊನ್ಮರದ
ಪೊಂದಳಿರ ಪೊನ್ನಲರ ಮಿಂಚು ಮಿರುಗುವ ಬನಂ
ಕಾಂಚನ ರಚಿತಮಾಯ್ತು. ಕತ್ತಲೆಯ ಕಂಡುಂಡು
ಕುರುಡು ಮೆತ್ತಿದ ನಮ್ಮ ಕಣ್ಗಳಿಗೆ.
“ಅದೆ ಕಣಾ
ಅಲ್ಲಿರ್ದುದಾ ಸ್ವಯಂಪ್ರಭೆಯ ದಿವ್ಯಾಶ್ರಮಂ.
ಕೃಷ್ಣಾಜಿನಾಂಬರದ ಆ ಮಹೀಯಸಿ, ತವಸಿ,   ೫೦೦
ನಮ್ಮ ಕತೆಯುಮನಂತೆ ವೆತೆಯನಾಕರ್ಣಿಸುತೆ,
ತನ್ನಾತ್ಮ ಕಥೆಯನೊರೆಯುತೆ, ತಣಿಸಿದಳು ನಮ್ಮನ್
ಅಮರ್ದುಣಿಸಿನಿಂದೆ ಪಣ್‌ ಬೇರ್ಗಳಾ. ರಚಿಸಿದನ್
ದಾನವರ ಶಿಲ್ಪಿ ಮಯನೆಂಬತುಲ ಮಾಯಾವಿ ತಾಂ
ವೈಡೂರ್ಯ ಕನಕಮಯಮಾ ಗುಹಾರಾಮಮಂ
ಹೇಮೆಯೆಂಬಪ್ಸರೆಯ ಸುಖಕೆ. ಆ ಚಾರುಮುಖಿ,
ಮಯ ಹೃದಯ ಹಾರಿಣಿ ಸುರಲತಾಂಗಿ, ತನ್ನ ಸಖಿ
ಮೇರುಸಾವರ್ಣಿಯ ಮಗಳ್ ಧರ್ಮಚಾರಿಣಿ
ಸ್ವಯಂಪ್ರಭೆಗೆ ನೀಡಿದಳದಂ ತಪಂಗೆಯ್ಯಲ್ಕೆ,
ಕೆಳೆಯ ನೆನಹಿಗೆ ಸಿರಿಕೊಡುಗೆಯಾಗಿ. ಇರ್ಪುದು ವರಂ,            ೫೧೦
ರಕ್ಷೆಯೋಲ್, ಮರ್ತ್ಯರಲ್ಲಿಗೆ ಬಂದೊಡಸುವೆರಸಿ
ಪಿಂತಿರುಗದಿರ್ಕೆಂದು. ಕಾರ್ಯದ ಸುಕೃತವಲಾ :
ಗೆಲ್ಗೆ ಕುರುಪಾಯ್ತಲಾ ; ಬರ್ದುಕಿ ಬಂದುದು ನಮ್ಮ
ಪಡೆ ! ಸಾಕ್ಷಿಯಿದಕಿಂದೆಯುಂ ಬೇರೆ ಏಕೆಮಗೆ
ಮುಂದೆ ಗುರಿ ಕೈಸಾರ್ಗುಮೆಂಬುದಕೆ ? ಆ ದೇವಿ
ಕಣ್ಮುಚ್ಚಿ ನಿಂದರಂ ನಮ್ಮಂ ತನ್ನ ಮಹಿಮೆಯಿಂ
ತಂದಳಿಲ್ಲಿಗೆ ಮಹೇಂದ್ರಾಚಲಕೆ. ರೆಪ್ಪೆಯಂ
ತೆರವನಿತರೊಳ್ !
“ಮನ್ನಿಸುವುದೆನ್ನನೀ ಮಹಾ
ಪರಿಷದಂ. ಸಮಯನಿಷ್ಠೆಯನುತ್ತರಿಸಿದೆನ್,
ಸಕಾರಣಂ. ತೊಲಗುಗೆ ನಿರಾಶೆ. ಪೇಡಿತನಮಂ         ೫೨೦
ಕೊಲ್ಗೆ ಬಗೆ. ಸಾಲ್ಗುಮಾ ಪಳವೀಡು, ಸೋಲ್ಮನಂ.
ಮೂಡುಗುರ್ಕಿಗೆ ಕೋಡು. ಬರ್ಕೆಮ ವಿಜಯಬುದ್ಧಿ.
ಕೆಟ್ಟಿರುಳ್ ಕಡೆಗಾಣ್ಬ ಮುನ್ನಮಿದೊ ಸುರಿಯುತಿದೆ
ಮಾಗಿಯೈಕಿಲ್ ಸೋನೆ, ಜಗಮೆಲ್ಲಮಂ ಮುಸುಗಿ
ಬೆಳ್ಮಂಜಿನಿಂ. ದಟ್ಟ ಕಣ್ಮುಚ್ಚಿದಂ ತನ್ನ
ಸಪ್ತ ತೇಜಿಯ ತೇರನೇರಿ ಬರ್ಪಿನರೋಚಿ
ತಪ್ತ ತೇಜದಿನಟ್ಟಿ, ಸುಪ್ತಲೋಕವನೆಂತು
ದೀಪ್ತಿಯಿಂದೆಳ್ಚರಿಸುಗುಮೊ ಅಂತೆ ನಮ್ಮೆರ್ದೆಯ
ಮುಸುಗಳಿದು ಮೂಡುಗಾಶಾಜ್ಯೋತಿ ತಾಂ ಕೀರ್ತಿಕರ
ಧೈರ್ಯಪೂರ್ವಾಚಲದ ಶೃಂಗ ಸಿಂಹಾಸನದ ೫೩೦
ತುಂಗ ಗೌರವಕೆ !”
ಆ ವಚನ ವಿದ್ಯುತ್ ಪ್ರಭಾ
ಲಹರಿ, ಕೇಳ್ದರ ಮೆಯ್ಗೆ, ಮಿಂಚುವರಿದುದು, ರೋಮ
ರೋಮಂ ನಿಮಿರಿ ಪುಲಕಮಂ ಕೈದುಗೊಳ್ವಂತೆ.
ಘೇ ಘೋಷಮಟವಿನಿಶ್ಶಬ್ದಮಂ ಮಥಿಸುತಿರೆ
ತಾರನೆದ್ದನುದಾರ ಮೂರುತಿ, ಕುಶಾಗ್ರಮತಿ,
ಸಂವಾದ ಮಧುರ ಭಾಷೆಯ ವಾದ ಮೇಧಾವಿ :
“ಕೋಕಿಲನ ಸರಗೇಳ್ದರಿಗೆ ಮಯೂರನ ಕೇಕಿ
ತಾನಿಂಪಹುದೆ ? ಮೈಂದನಿಂಬಳಿ ನುಡಿಯಲೆಳಸುವಂ
ಮೂರ್ಖನಲ್ಲದಿರೆ ಸಾಹಸಿ ದಿಟಂ. ಆದೊಡಂ,
ವಿವೇಕಿ ಗೃಹಪತಿ ಔತಣದ ಕೂಡೆ, ಓಗರದ     ೫೪೦
ನೆವದಿ, ಅತಿಥಿಗೆ ಔಷಧಿಯ ಒಳ್ಪನೆರೆವವೊಲ್,
ಒರೆವೆನೆರ್ದೆಯಂ. ದೊರೆಯ ಕೊಟ್ಟವಧಿ ಮುಗಿಯಿತ್ತು ; ಮೇಣ್
ಮೀರ್ದತ್ತು. ದೊರೆತುದಿಲ್ಲಿನ್ನುಂ ಧರಾತ್ಮಜೆಯ
ನೆಲೆ. ದೊರೆಯಬಹುದಾದೊಡಂ ದೂರಮಿರ್ಪುದಾ
ಸಂಭವಂ. ಸುಗ್ರೀವ ರಾಮಲಕ್ಷ್ಮಣರಲ್ಲಿ
ಕುದಿಯುತಿಹರೆಂಬುದಂ ಮರೆಯದಿರಿ. ಶೀಘ್ರದಿಂ
ಕಿಷ್ಕಿಂಧೆಗೆಯ್ದಿ, ನಮ್ಮನುಭವಂಗಳನೊರೆದು,
ಸರ್ವ ಕಪಿಸೇನೆಯಂ ಕೂಡಿಕೊಂಡಿತ್ತಣ್ಗೆ ಮೇಣ್
ದಾಳಿಕ್ಕುವಂ. ತಳುವಿದರೆ ಬರಿ ಕೆಲಸಗೇಡೆ,
ನಮಗುಮೆಮ್ಮಂ ನಂಬಿದವರಿಗುಂ. ಸಾಹಸಂ ೫೫೦
ಸ್ತುತ್ಯಂ. ವಿವೇಕಮದರಿಂದೆಯುಂ ಶ್ಲಾಘ್ಯಮೈ.
ಸಾಹಸಂ ವೀರರಥಿ, ಸಾರಥಿ ವಿವೇಕಮಿರೆ.
ಮತಿವಲ್ಗೆಯಿಲ್ಲದಿರೆ ಸಾಹಸಂ ಗತಿಗೆಟ್ಟ
ತೇಜಿ. ಸಾಹಸಮಲ್ತು ನಮಗೆ ಗುರಿ, ಈಯೆಡೆಗೆ ;
ನಮ್ಮ ಕೀರ್ತಿಯುಮಲ್ತು ಚರಮಲಕ್ಷ್ಯಂ. ನಮ್ಮ
ಗಮನದ ಕಣೆಗೆ ಸೀತೆಯೊಳ್ಪೆಯೆ ಗುರಿಯಕಣ್ಣು.
ಕೀರ್ತಿ ತಾನುಪಲಕ್ಷ್ಯವೆಂಬುದನಿಲ್ಲಿ ನೆನೆಯುವಂ.
ಕೀರ್ತಿಯೇಂ ? ಪೆರರ ಮೆಚ್ಚುಗೆಯಲ್ತೆ ? ತಮ್ಮೊಳಗೆ
ತಮಗೆ ನೆಚ್ಚಿಲ್ಲದವರಿಗೆ ಹೆರರ ಮೆಚ್ಚುಗೆಯ
ಕೆಚ್ಚಿರಲೆವೇಳ್ಕುಂ ದಿಟಂ. ಕಾಣೆನಾನಿಲ್ಲಿ          ೫೬೦
ಮಂದಿಯ ಪೊಗಳ್ಕೆಯನೆ ತನ್ನ ಬೀರಂಗೆತ್ತು
ಮೆರೆವಲ್ಪನಂ. ದಣಿದ ದಳಮಂ ಮಗುಳ್ಚುವಂ.
ಹಿಂಜರಿವರೆಲ್ಲ ಹೇಡಿಗಳಲ್ತು. ತುದಿ ಜಯಕೆ
ತಾನಕ್ಕುಮೋರೊರ್ಮೆ ನೀತಿ ಹಿಂದೋಟಮಂ.
ಕಿಷ್ಕಿಂಧೆಗೆಯ್ದಿ, ನಮ್ಮೊಡೆಯಂಗೆ ಸರ್ವಮಂ
ಪೇಳ್ದು, ಮುನ್ ಬೆಸನನೆಸಗುವುದೆಮಗೆ ನೀತಿಯನ್.”
ಭಾವ ರಾಹಿತ್ಯಮೆನೆ ತೋರ್ದಡಂ, ಇಂಗಿತದಿ
ಭಾವಮಯ ಬುದ್ಧಿಸಾಹಿತ್ಯಮಂ ಬೋಧಿಸುತೆ
ಕುಳಿತನಾ ತಾರನಪ್ರತಿಮ ವಾಗ್ವಿದನತುಲ
ಚಟುಲ ಜಿಹ್ವೆಯ ವಾದಮೇಧಾವಿ. ತರುಗಳೊಳ್         ೫೭೦
ಬನವಕ್ಕಿ ಪಾಡತೊಡಗಿದುವಿಲ್ಲಿ ಮೇಣಲ್ಲಿ.
ತೀಡಿದುದು ಕೊರೆಚಳಿಯ ಮಾಗಿಯ ಕುಳಿರ್ಗಾಳಿ.
ಮುಸುಗಿದಿಬ್ಬನಿಮಂಜಿನಲಿ ಕೋಲುಕೋಲಾಗಿ
ತೂರಿಬಂದುದು ಪಸುಳೆನೇಸರ ಕದಿರ್‌ಕಣೆಯ
ಬೆಳಕು ನೆಳಲಿನ ಬಿಳಿಯ ನೀಲಿಯ ಕಲೆಯ ಬಲೆಯ
ರಂಗೋಲಿ. ಕೃತಿಸಿದುದು ತರುಣಾರುಣಾತಪಂ
ವಾನರ ಮಹಾಕೃತಿಗಳಂ, ದೀರ್ಘಮುನ್ನತಮೆನಲ್
ಶೈಲಛಾಯೋಪಮಂ, ಮಂಜಿನ ಪಟದ ಮೇಲೆ.
ತಾರವಾದದ ಸಾರ ಸತ್ತ್ವದಿಂದಾ ಸಭೆಗೆ
ಕವಲಾಗಿ ಬುದ್ಧಿ, ಗುಜುಗುಜು ಮಾತು ಮೊರೆದತ್ತು.       ೫೮೦
ಹಿಂಡೆದ್ದ ಜೇನ್ಗೂಡಿನೋಲ್. ಇದ್ದಕಿದ್ದಂತಿದೇನ್ ?
ಸದ್ದು ನಿಂತಾಲಿಸಿತು ಸಭೆ : ಆ ಮಹೇಂದ್ರಗಿರಿ
ಶೃಂಗದಿಂ ದುಮುಕುತಿಳಿದೈತಂದುದಾಗಳೆಯೆ, ಕೇಳ್,
ಸಂಪಾತಿ ಚೀತ್ಕಾರಮಿರಿದು ಕಿವಿಗೊಳ್ವಿನಂ !
ಸೇನಾನಿ ನೀಲನಂಗದ ಹನುಮ ಜಾಂಬವರ
ಮಂತಣವನನುಮತಿಸಿ, ವ್ಯಾಗ್ರೋಗ್ರವೀರನಂ
ಕರೆದು ಬೆಸಸಿದನಿಂತು ಶರಗುಲ್ಮನಂ : “ಪೋಗು,
ನಡೆ, ಚೆಚ್ಚರಿಂ. ಕೂಗಿಗರಿ ನೆಲೆಯನೆಚ್ಚರಿಂ.
ಪಡೆಯ ಕೊಳ್ ನಿನ್ನಾಯ್ಕೆಬೀರರಂ.” ಏರ್ದನಾ
ಮಲ್ಲಗಾಳೆಗದ ಪುಲಿ, ತನ್ನಾಯ್ದ ಕಲಿಗಳಂ      ೫೯೦
ಕೂಡಿ, ಕಂದರಕಿಳಿದ ಮಂಜುಬೆಳ್ದೆರೆ ಮುಸುಗಿ
ಕಣ್ಗೆ ಮರೆಯಾಗಿರ್ದೊಡಂ ಪಸುಳೆವಿಸಿಲೆಸೆದಿರ್ದ
ನಿರ್ಮಲದಚಲದುನ್ನತಿಗೆ, ಕೂಗು ಕೇಳ್ದೆಡೆಗೆ.
ಬೆಟ್ಟವೇರುತೆ, ಪಿಟ್ಟುದಟ್ಟಿತಿರ್ಬ್ಬನಿಸೋನೆ
ತೆಳ್ಪನಾಂತಂತೆ, ವಿಪಿನಂ ಸಾಂದ್ರತೆಯನುಳಿದು
ವಿರಳಮಾದತ್ತಟನಸುಲಭಂ. ಸಮೀಪಿಸಲ್
ಸತ್ಯಗಿರಿ ಶಿಖರಮಂ, ಚಿತ್ರವಿಭ್ರಮಕಾರಿ
ಶಬ್ದಜಾಲಾರಣ್ಯಮುಂ ತರ್ಕ ಪಾಂಡಿತ್ಯಜಂ
ವಾದದಸ್ಪಷ್ಟತಾ ಪ್ರಾಲೇಯಮುಂ ತೊಲಗಿ
ಜ್ಯೋತಿ ಸಾಕ್ಷಾತ್ಕಾರಮಪ್ಪಂತೆ. ಏರಿಯುಂ,  ೬೦೦
ಏರಿದಂತೆಲ್ಲ ವಿರಳತೆಯಾಂತು, ಕಾಲ್‌ಸೋಲ್ತು,
ಕಡೆಗೆ ಮರಮೆರಡುಮೂರಾಗಿ ನಿಂದಡವಿಯನೆ
ನೀಹಾರಮನುಸರಿಸಲೆಸೆದುದು ಮಹೇಂದ್ರಗಿರಿ
ಶುಭ್ರ ಚೂಡಂ, ಚುಂಬಿತಾಂಬರ ಸರಸ್‌ಸ್ಫಟಿಕ
ನಿರ್ಮಲಾನಿಲವಲಯ ಸಂಶೋಭಿ.
ಕಂಡರಾ
ಕೂಟದೊಳ್ ಬಂಡೆಗಳೊಡನೆ ಬಂಡೆಯೆನೆ ತಪಂ
ಬಡುತಿರ್ದ ಖಗವೃದ್ಧನಂ, ಮಹಾಗೃಧ್ರವರನಂ,
ಶರಧಿಸಖನಂ, ಗಗನಮಿತ್ರನಂ, ವಿಪಿನ ಭೂ
ಶೈಲ ಸಂಗಾತಿಯಂ, ಸಂಪಾತಿಯಂ ! ಪರಿದ
ತಿಪ್ಪುಳಿಂದೊಡಲ ಪುಣ್ಗಳಿನೆರ್ದೆಯ ನೋವಿಂದೆಯುಂ   ೬೧೦
ಮೇಣನ್ನದಲ್ಪತೆಯ ದೆಸೆಯಿಂದೆಯುಂ ಸುರ್ಕಿ
ಸುರುಂಟಿರ್ದ ಕಂಕಾಲತಾ ಕ್ಷಾಮ ಭೀಮನಂ
ಕಂಡುದೆ ತಡಂ, ಬಡಿಯಲೆಂದರೆಗುಂಡುಗಳನೆತ್ತಿ
ಮೇಲ್ವಾಯುತಿರ್ದ ಕಪಿಶೂರರಂ ಕೈತಡೆದು,
ಮುನ್ನಡೆದು, ತಾನೆ ನುಡಿದನ್ ಮೌನಮೂರ್ತಿಯ
ಮುಖದ ಮುಂದಾ ಸಮರ್ಥ ಶರಗುಲ್ಮ :
“ನುಡಿ ನಿನ್ನ
ಪರಿಚಯವನೆಲೆ ಖಗ ಬೃಹದ್ರೂಪಿ. ತಳುವಿದಡೆ
ಹರಣಗೇಡಕ್ಕುಮದೊ ನಿಂತಿಹರ್, ನೋಡಲ್ಲಿ,
ಮಿಳ್ತುಗೈ ಬೆರಳ್ಗಳೋಲ್, ಕಲ್ವಿಡಿದು, ಸಾಲ್ಗೊಂಡು,
ಕಿಷ್ಕಿಂಧೆಯನ್ನಾಳ್ವ ವಾನರ ಮಹಾನೃಪತಿಯಾ           ೬೨೦
ಸುಗ್ರೀವನಾಳ್ !”
ಚಳಿಗೆ ಪಕ್ಕಗೂಡಾಗೊರಗಿ
ಮಾಗಿಯೆಳವಿಸಿಲ ಕಾಯಿಸುತಿರ್ದ ನರೆನವಿರ
ಗರಿಮೆಯ್ಯವ, ರೆಪ್ಪೆಯಂ ಬಿರ್ಚಿ, ನಿಡುನೋಡಿ,
ತೊದಲುನುಡಿ ನುಡಿವಣುಗನಂ ನೋಳ್ಪಜ್ಜನಂದದಿಂ
ಪರಿಚಯವನರಿತುಮೌದಾಸೀನ್ಯಮಂ ನಟಿಸಿ :
“ಪಕ್ಕಂಗೆದರ್ದನೆಂ, ಮಕ್ಕಳಿರ ; ಮುದುಕನೆಂ.
ಬನ್ನಿಮೆನ್ನಂ ನೆಗಹಿ ; ಕುಳ್ತ ಬಳಿಕೊರೆದಪೆನ್
ನಿಮ್ಮಿಷ್ಟಮನ್.”
ಒರ್ವನಲ್ತಿರ್ವನಲ್ತಾ ಪಡೆಗೆ
ಪಡೆಯೆ ತಾಂ ಕೈಗೆ ಕೈ ನೆರವಿತ್ತೊಡಂ, ಖಗಮಿರ್ಕೆ
ಹಂದಿಲಿಲ್ಲರೆಯ ಮೇಲೊರಗಿರ್ದದರ ನೀಳ್ದ     ೬೩೦
ಛಾಯೆಯುಂ ! ಗೊಣಗಿದನ್ ತನಗೆ ತಾನೆಂಬಂತೆ
ಸಂಪಾತಿ : “ಏನ್ ಮಿಳ್ತುಗೈ ಬೆರಳುಗಳೊ ಕಾಣೆ !
ಮೆಯ್ಯನಲುಗಿಸಲಾರದೆಯೆ ಬರಿದೆ ತಿಣಕುತಿವೆ,
ಶಿಥಿಲಮಂ, ಗರಿವಿಳ್ದು ಮುಪ್ಪಾದುದಂ ! ಮತ್ತೆ.
ಪ್ರಾಣವಜ್ರವ ಸೆಳೆವ ಸಾಹಸವನೊದರುತಿವೆ !”
ತನಗೆ ತಾನೆಂದುಕೊಂಡೊಡಮದಂ ಕೇಳ್ದು ತಲೆಯಂ
ಬಾಗಿದುದು ವಾನರ ಸಮಷ್ಟಿ. ಖಗಭೀಮನಂ
ಕುರಿತು ಗೌರವದಿಂದೆ ಶರಗುಲ್ಮನಿಂತು :
“ಹೇ
ಖಗಮಹಾತ್ಮಾ ಮನ್ನಿಸೆಮ್ಮನಪರಾಧಮಿರೆ.
ಪಕ್ಷಿರೂಪಂಬೆತ್ತ ರಾಕ್ಷಸಾಶಂಕೆಯಿಂ ೬೪೦
ವರ್ತಿಸಿದೆವಂತು. ನೀನಾರೊ ಸುರಸಜ್ಜನಂ,
ಧರ್ಮಸತ್ವಂ. ಧ್ವನಿಯೆ ಸಾರುತಿದೆ ಹೃದಯಮಂ.
ಕಲಿಯಾದೊಡಂ ದುಃಖಿ ನೀನಾಗಿ ತೋರುತಿಹೆ.
ನಿಗಿದೇಂ ಕಷ್ಟಮೀ ಗತಿರೋಧನಂ ? ಗ್ಲಾನಿಯದು
ನಮ್ಮಿಂದೆ ಪರಿಹಾರಮಾಗುವೊಡೆ, ಬೆಸಸೆಮಗೆ
ಮುಂಗಜ್ಜಮಂ. ನೀನಾರ್ ? ಇದೇಕೆ ತಳ್ತಿಹೆಯಿಲ್ಲಿ ?
ನೀನಾಗಳೇತರ್ಕೆ ಚೀತ್ಕರಿಸಿದಯ್ ? ಗೋಳ್ದನಿಯ
ಕೇಳ್ದೆಯೆ ಮಹಾಸೇನಾನಿ ನೀಲನಟ್ಟಿದನೆನಗೆ
ಬೆಸನಿತ್ತು. ಶರಗುಲ್ಮನೆಂಬರೆನ್ನಂ : ನಾಂ ಬಿಂದು
ಮಾತ್ರನೆಂ ; ಸಿಂಧು ತಾನಿಹುದಲ್ಲಿ ಸಭೆ ನೆರೆದ            ೬೫೦
ವಾನರಧ್ವಜಿನಿ.”
“ವಾನರ ವಿನಯಮೂರ್ತಿ, ಕೇಳ್,
ಶರಗುಲ್ಮ,” ಮೊಳಗಿದುದು ಮಂದ್ರಂ ಮೃದಂಗದೋಲ್
ಧ್ವನಿ ವಿಹಂಗೇಂದ್ರನಾ, “ಸಂಪಾತಿಯಾಂ ಶ್ಯೇನಿ
ಸುತನೆಂ. ಜಟಾಯುವವರಜನೆನಗೆ. ನಮ್ರತೆಯ
ಮಾತಿರ್ಕೆ. ದಿಟಮೊರೆವೆನೆಮಗೆಣೆಯ ಕಲಿಗಳಂ
ಕಾಣದಿರ್ದೆವೊ ಲೋಕ ಪದಿನಾಲ್ಕರೊಳ್ ! ನಾನೊರ್ಮೆ
ಬೇಂಟೆ ಬೇಳಂಬದಿಂ, ಸಾಗರದನಂತತೆಯ
ಮೇಲೆ, ದೂರಾಂತರಿಕ್ಷದಲಿ, ಬಾನಾಡಿಯೆಂ
ಕಂಡೆನ್ ಸಮುದ್ರ ಫಣಿಯಂ ಸಪ್ತಯೋಜನದಾ.
ವಜ್ರಮುಖದಿಂ ವಜ್ರನಖದಿಂ ಜವಂಜವನ      ೬೬೦
ವಜ್ರಪಾತದ ವೇಗದಿಂದೆರಗಿದೆನ್ ; ಕಡಲ್
ಕಡೆದವೋಲುಲ್ಲೋಲಕಲ್ಲೋಲವಾಗುತರಿಲಾ
ಕಡಲಪಾವಂ ತುಡುಕಿ ಪಿಡಿದೆತ್ತಿದೆನ್ ನಭೋ
ಮಂಡಲಕೆ. ಪೇಳ್ವೆನೇಂ ? ಕಚ್ಚಿಕೊಂಡಿರ್ದುದಾ
ನಾಗಭೋಗಂ ತಿಮಿಂಗಿಲವನಚಲೋಪಮಂ.
ಮಂದರವೆರಸಿ ವಾಸುಕಿಯನುಯ್ವವೋಲೆತ್ತಿ
ತಿಮಿಸಹಿತಮಾ ವ್ಯಾಳಮಂ ನಭೋಗಾಮಿಯಾಂ
ಹಿಮಗಿರಿಗೆ ಹಾರುತಿರೆ, ಜಗದ್‌ಭಯಂಕರಮಾಯ್ತೊ
ದೈತ್ಯಮಾ ದೃಶ್ಯಮಾಬೀಳರಮ್ಯಂ ಪಾಪಮಯ
ಕರ್ಮ ಸಂಸ್ಕಾರಮಂ ಪೊತ್ತ ಭರಕೆ ಸಿಡಿದು    ೬೭೦
ಮಿಡಿದು ಬೇಗುದಿಗೊಳ್ವ ಜನ್ಮಜನ್ಮಾಂತರದ
ಹತ ಜೀವ ಶತಮಾನ ಸೂತ್ರದೋಲಾ ಭೋಗಿ ತಾಂ
ನನ್ನಾ ಪದಪ್ರಖರನಖ ಕಾಲಮುಷ್ಟಿಯ ಮೃತ್ಯು
ನಿಷ್ಪೀಡನಕೆ ಸಿಲ್ಕಿ ನುಲಿದುದಾದೊಡಮಯ್ಯೊ
ತೊರೆದುದಿಲ್ಲಾತ್ಮತಿಮಿರೋಪಮ ತಿಮಿಂಗಿಲದ
ಸಂಗಮಂ. ಹಾರಿ ಬರಬರಲವನಿ ಗೋಚರಿಸೆ,
ಫಣಿಯ ದೀರ್ಘತೆಯಿಂದೆ ತಿಮಿಯ ಪೀನತೆಯಿಂದೆ
ನಖದ ಹಿಂಸೆಗೆ ಮುಳಿದ ಪಾವಗಿಯೆ ಮೀನ್ ಕಾರ್ದ
ನೆತ್ತರೆಂಜಲಿನಿಂದೆ ಗಿರಿವನಗಳಿಗೆ, ಪುರಕೆ, ಮೇಣ್
ಪುಣ್ಯಾಶ್ರಮಕೆ, ಕೊಲೆಗೆ ಪೊಲೆಗೆ ಶಂಕಿಸಿ, ಮೇಲೆ         ೬೮೦
ಮೇಲೆಮೇಲೇರಿದೆನು, ಹಾರಿದೆನು, ಸೇರ್ದೆನಾ
ಮೇಘದಾಚೆಯ ಪವನ ಭುವನಕ್ಕೆ. ಪೇಳ್ವೆನೇಂ
ದುರ್ವಿಧಿಯೊ ? ಮೋಡದಾಚೆಯ ನನಗೆ ಮರೆಯಾಯ್ತೊ
ಈ ಪೃಥಿವಿ !”
ಕೇಳುತಿರ್ದವರೊಳಗೆ ನುಡಿದನೊರ್ವಂ
ಸವಿದುಂಡು ತನ್ನ ಕಲ್ಪನೆ ಕೆತ್ತಿದಾ ಚಿತ್ರಮಂ
“ನೀನುಮಂತೆಯೆ ಕಾಣದಾದೆಯಯ್ ! ಗಗನಮಂ
ಪಾಯ್ದುವಾ ಫಣಿಯರ್ಧಮಗ್ರದ ತಿಮಿಂಗಿಲಂ ಮೇಣ್ !
ನೆನೆಯಲೇನದ್ಭುತಂ ದೈತ್ಯದೃಶ್ಯಂ ! ಆಹಾ
ಘೋರ ರಮಣೀಯಂ ! ಅಹೋದ್ಭುತಂ !”
ಪೂರ್ವಮಂ
ನೆನೆದು ಪುನರನುಭವಿಸುತಿರ್ದು, ಲಘುಕ್ಷಣಂ  ೬೯೦
ಕೆಮ್ಮನಿರ್ದುಂ, ಮತ್ತೆ ಸಂಪಾತಿ: “ಇರ್ದುದಾ
ಕಾಲಮಿನ್ನೈತರ್ಪುದೇಂ ? ಬರಿದೆ ನೆನೆದೊಡೇಂ ?
ಪತನಕದೆ ಹೇತುವಾದುದನೊರೆವೆನಾಲಿಸಾ :
ಋಷಿಮನೋವೇಗದಿಂ ಸೀಳುತಾಕಾಶಮಂ,
ರೆಂಕೆವೀಸಿಂದೆಳ್ಬಿ ದಿಕ್ಕುದೆಸೆಗಟ್ಟುತೆ
ಮುಗಿಲ್ಗಳಂ, ತಿರಿಗಾಳಿ ಸುಳಿಗಾಳಿ ಭೋರ್ಗಾಳಿ
ಬಿರುಗಾಳಿಗಳನೆಬ್ಬಿಸುತೆ, ದಿಗಂತಂಬರಂ
ನೀಳ್ದ ನೆಳಲಿನ ಹಿಡಿಯ ಚವರಿಯಿ ಗುಡಿಸುತ್ತೆ
ಭೂಗೋಲ ಭೂಮವಿಸ್ತೀರ್ಣಮಂ, ಸಾಗುತಿರೆ
ಗಾಳಿವಟ್ಟೆಯೊಳಹಾ ಮುಗ್ಗರಿಸಿದಂತಾಯ್ತು ; ಮೇಣ್    ೭೦೦
ಭೋಂಕನೆ ನಭಃಸ್ಥಳಕ್ಕೆಸೆದೆತ್ತಿ ಬೀಸಿದೋಲ್
ನೂಂಕಿದನುಭವಮಾಯ್ತು ; ಮೇಣ್ ಭಾರಮೊಯ್ಕನೆ ತೊಲಗಿ
ಲಘುವಾಯ್ತು ಕಾಲ್ಗೆ ! ಬೆಕ್ಕಸವಡುತಲೇರುತಿರೆ
ತೆಕ್ಕನೆ ಹೊಳೆದುದರಿವೆನಗೆ : ಮೋಕ್ಷದ ತರಕ್ಷು ತಾಂ
ಭಗವತ್ ಕೃಪಾನಖಂಬೋಲ್, ಯುಗಯುಗಂ ಬೆಂಬತ್ತಿ
ರೋಗ ಸಂಕಟ ಮರಣ ವೈರಾಗ್ಯದಂಷ್ಟ್ರದಾ
ತನ್ನುಗ್ರದಯೆಯಿಂ ಮುಮುಕ್ಷು ಜೀವಾತ್ಮನಂ
ಪಿಡಿದಲುಬೆ ದುರಿತಕರ್ಮಂ ಕಳಚಿಬೀಳ್ವಂತೆ, ಕೇಳ್,
ನನ್ನುಗುರ ನಂಜಿಗುಸಿರಂ ತೊರೆದ ಘೋರಾಹಿಯಾ
ವದನ ರದನದ ಪಿಡಿಪು ಸಡಿಲಿದ ತಿಮಿಂಗಿಲಂ ೭೧೦
ಕೆಡೆದುದೊ ಧರಾತಳಕ್ಕೆ, ಹಾ ಕೆಡೆದುದಂತೆಯೆ ನನ್ನ
ಕೀರ್ತ್ಯುನ್ನತಿಯ ಗೋಪುರಂ !…. ಪಿಂತಿರುಗುತಾಕ್ಷಣಂ,
ಕ್ಷಣದೆ ಮುಂಚಿದ ಪಲವು ಯೋಜನದ ದೂರಮಂ
ಹಿಂಚುತಿಳಿದೆನ್, ತಿಮಿರಹಿತ ಫಣಿಸಹಿತಮಾ ನೆಲಕೆ
ನೇರಕ್ಕೆ. ಪೇಳ್ವೆನೇನಾಗಿರ್ದುದಂ ? ನುರಿನುಳ್ಗಿ
ಜರ್ಜರಿತಮಾಗಿರ್ದುದೈ ಮುನಿವರ ನಿಶಾಕರನ
ಪುಣ್ಯಾಶ್ರಮಂ ! ಪೊರಗೆ ಪೋಗಿರ್ದವಂ ಬರ್ದುಕಿದಂ
ಋಷಿ ; ಮಡಿದಿರ್ದರಾಶ್ರಮದೊಳಿರ್ದಿತರ ತಪೋ
ಜನಂ. ಪಿಂತಿರುಗಿದಾತಂಗೆ, ಕಾಲ್ವಿಡಿದು ಬೇಡಿ,
ಬಿನ್ನೈಸಿದೆನ್ ನಡೆದುದನಿತುಮಂ. ಸುಯ್ದನಾ ೭೨೦
ಚಾಗಿ. ನಿಡುವೊಳ್ತು ಜಾನಿಸಿದನಂತರಮೆನಗೆ :
‘ಶಪಿಸೆನಾಂ…. ನಿನ್ನಿಂ ಜಗತ್‌ಕ್ಷೇಮಕರಮಪ್ಪ
ಗುರುಮಹತ್ಕಾರ್ಯಮಕ್ಕುಂ…. ಅದಪ್ಪುದಾದೊಡಂ,
ತಪ್ಪದಯ್ ನಿನ್ನ ಕರ್ಮಕೆ ತಕ್ಕ ಶಿಕ್ಷಾಫಲಂ.
ನಿನಗೊದಗಿದಪುದೊಂದು ಪೇರ್‌ಬೇನೆ. ಆ ಸಂಕಟಮೆ
ಪಾಪಪರಿಹಾರಕ್ಕೆ ನಿನಗೆ ಸಾಧನಮಾಗೆ.
ಕೊನೆಗೆ ನಿನ್ನಿಂದಾಗುವಾ ಮಹತ್ಕಾರ್ಯದಿಂ
ಸಿದ್ಧಿಪುದು ನಿನಗುಮಂತೆಯೆ ನಿಖಿಲ ಲೋಕಕ್ಕೆ ಕೇಳ್
ಶೋಕಮೋಕ್ಷಂ.’ ವಂದಿಸಿದೆನಂದು ಮೊದಲಾಗುತಾ
ಗುರುವಿಗಾಂ ಶಿಷ್ಯನಾದೆನ್, ಕರ್ಮಮೋಚನಕೆ            ೭೩೦
ಕೈಕೊಳ್ವವೋಲ್ ಧರ್ಮಕೈಂಕರ್ಯಮಂ.
“ಇರಲೊರ್ಮೆ
ನಾನುಂ ಸಹೋದರ ಜಟಾಯುವುಂ ಬಿನದಕ್ಕೆ
ಗಗನಚಾರಿಗಳಾಗಿ ಪೊಕ್ಕೆವೊ ಮಹಾಗ್ರೀಷ್ಮಮಾ
ಸೂರ್ಯಪಥಮಂ. ಕ್ರೀಡೆಯುನ್ಮಾದದಿಂ ಮೇಲೆ
ಮೇಲೆಮೇಲಕ್ಕೇರುತಿರೆ, ತೆಕ್ಕನೆಯೆ ಕಂಡೆನ್
ಸೀಯುತಿರ್ದಾ ಸೋದರನ ರೆಕ್ಕೆಯಂ. ಹಾರಿ
ಮರೆವಿಡಿದೆನೆನ್ನ ಮೆಯ್‌ಗರಿಗೊಡೆಯನಯ್ಯಯ್ಯೊ !
ತಿಪ್ಪುಳೆಲ್ಲಂ ಸುಟ್ಟು ಸೀದುರುಳಿದೆನ್ ನೆಲಕೆ,
ಕಲ್ಲುರುಳ್‌ವಂತೆ. ಬಿದ್ದೆನ್ ಕಡೆಗೆ, ನಡುಗೆ ಶೈಲಂ,
ನೀಂ ನೋಡುವಿಲ್ಲಿ, ಕಾದಿಹೆನಿಂತು ಶತಶತಂ  ೭೪೦
ಸಂವತ್ಸರಂ, ನೆಮ್ಮಿ ಮುನಿವಾಣಿಯಂ. ಸುತಂ
ವಜ್ರನೆಂಬುವನೆನಗೆ ತಂದೀವನುದರಮಂ.
ಬರ್ದುಕಿಹೆನ್ ಮುಂದೆ ಬರ್ದುಕಿಹುದೆಂಬುವಾಸೆಯಿಂ.
ಹತ್ತಿರದೊಳೆತ್ತಲುಂ ಕಾಣೆನಾನುದ್ಧಾರದಾ
ಹಸ್ತ ಛಾಯಾ ಚಿಹ್ನೆಯಂ. ಸುಟ್ಟು ಪುಣ್ಗೂರ್ತನೆಂ ;
ಮೇಣ್, ಬೆಂದ ಮುಪ್ಪಿಂದೆಂತು ಮೇಣಾವುದಕ್ಕುಮೊ
ಮಹತ್ಕಾರ್ಯಂ ? ಅಯ್ಯೊ, ಇನ್ನೆನಿತು ಯುಗಮಿಂತೆ, ಪೇಳ್,
ಕಾಯವೇಳ್ಕುಮೊ ಕೃಪೆಯ ಹಾರೈಕೆಯಿಂ ? ಶಿವಾ,
ಬಲಹೀನನೆನ್ನಿಂದೆ ಲೋಕಕೆಂತಕ್ಕುಮಾ
ಗುರುವೊರೆದ ಶೋಕಮೋಕ್ಷಂ ? ನನಗುಮದರಿಂದೆ, ಕೇಳ್‌,       ೭೫೦
ಶಶಶೃಂಗ ಸದೃಶಮೀ ಶೋಕಮೋಕ್ಷಂ !”
ನರಳಿ
ಮಗುದೊಮ್ಮೆ ಕರುಳಿರಿಯುವಂತೆ ಚೀತ್ಕರಿಸಿದಾ
ಪಕ್ಷಿವೃದ್ಧಂಗೆ ಶರಗುಲ್ಮ ವಾನರನಿಂತು
ಸಂತೈಕೆಯಂ : “ಮಾಣ್ಬುದು ನಿರಾಶೆಯಂ, ಹೇ
ವಿಹಂಗಮ ತಪಸ್ವಿ, ದೈವಕೃಪೆಗೀ ಕ್ಲೇಶಮುಂ
ರೆಂಕೆಯಪ್ಪುದು ! ಶಂಕೆಯೇಕೆ ? ಋಷಿವಾಣಿಯುಂ
ಪುಸಿವುದೇಂ ? ಬಲಹೀನನಿಂದೇಂ ಮಹತ್ಕಾರ್ಯ
ಸಿದ್ಧಿಯೆಂದೇಕೆ ಸಂದೆಯಪಡುವೆ ? ಶಿವಕೃಪೆಗೆ
ತೃಣಮೆ ಖಡ್ಗಂ ; ಪನಿ ಕಡಲ್ ; ಕಿಡಿ ಸಿಡಿಲ್ ! ಶ್ರದ್ಧೆ ತಾಂ
ಸಾಣೆಯಿರೆ, ತಾಳ್ಮೆಯೆ ತಪಂ. ಧರ್ಮಶಕ್ತಿಯುಂ          ೭೬೦
ಯೋಗಗೊಂಡಿರೆ, ಕರ್ಮಿಯಯ್ ಕಾಯ್ವಾತನುಂ. ಶಿಲ್ಪಿ
ಕೈಯಿಟ್ಟರಾ ಕಾಣ್ಬ ಕಾಡುಗಲ್ಲಿಂದುಣ್ಮದೇಂ
ಕಲಾಪ್ರತಿಮೆ ? ನಿಶ್ಶಬ್ದಿಯೈ ಈಶ್ವರ ಕೃಪಾಬ್ಧಿ.
ಬರ್ಪುದನರಿಯಲಾರೆವಂತೆಯೆ ಮಹತ್ಕೃತಿ ತಾಂ
ಮಹನ್‌ಮೌನಿ. ನೀನರಿಯುವನಿತರೊಳೆ ನಿನ್ನಿಂದೆ
ಸಂಘಟಿಸಬಪ್ಪುದಘಟನ ಭಾವಿತಂ.”
“ವತ್ಸ,
ಕಣ್ಣಿಗೊರಟಾದೊಡೇಂ ನಿನ್ನ ರೂಹಂ ? ಕಿವಿಗೆ ದಲ್
ಮಂತ್ರಮಧುರಂ ನಿನ್ನ ಜಾಣ್ಬಾಣಿ ! ಸಾಲ್ಗುಮೀ
ನನ್ನ ಸಂಕಟವಾರ್ತೆ. ಪೇಳಿಮಾಲಿಪೆನಯ್ಯ
ನಿಮ್ಮ ಕಥೆಯಂ.”
ಪೇಳ್ದನಾಖ್ಯಾನಮಂ, ಶೀಘ್ರಮೆನೆ     ೭೭೦
ಸಂಕ್ಷೇಪದಿಂ, ರಾಮ ವನವಾಸ ವಾರ್ತೆಯಂ….
ಸೀತಾಪಹರಣಮಂ…. ಸುಗ್ರೀವಸಖ್ಯಮಂ….
ಮಾರ್ಗಿತದ ಕಥೆಯಂ…. ನಿರರ್ಥಕತೆಯಂ…. ಮತ್ತೆ
ವಾನರಪ್ರಮುಖರಂ ರಾಹುಬಾಹುಗಳಿಂದೆ
ಬಿಗಿದಿಹ ನಿರಾಶಾ ನಿಶಾಚರ ಪಿಶಾಚಮಂ. –
ತನ್ನ ತಮ್ಮನ ಮರಣಮಂ ಕೇಳುತಾ ದುಃಖಿ
ಪೋದವೊಳ್ತಿನ ಕೊಕ್ಕು ಬರ್ಪುವೊಳ್ತಂ ಪೊಕ್ಕು
ಸೀಳ್ವಂತೆ, ಬಾಲ್ಯ ಚಿತ್ರ ಸ್ಮೃತಿಯ ಶೋಕದಿಂ
ದಹಿಸಿದನ್ ರೋಷನೇತ್ರದಿ ದಕ್ಷಿಣಾಶೆಯಂ,
ಕಡುಗಗೊಕ್ಕಿಂ ರಕ್ಕಸನ ಮಂಡೆಯಂ ಕುಕ್ಕಿ    ೭೮೦
ಜಕ್ಕಿ ಪುಡಿಗೆಯ್ವವೋಲ್ ! ಮೊಳಗಿದನ್ ತನ್ನೊಳಗೆ ತಾಂ
ಧ್ವನಿ ಭಯಂಕರವಾಗಿ ಸಂಪಾತಿ : “ಎಲವೋ
ನಿಶಾಚರ ದಶಗ್ರೀವ, ಗುರುಕೃಪಾ ಮಹಿಮೆಯಿಂ
ಪುಣ್ ಮಾಣ್ದು, ಬಲ್ಪುಣ್ಮಿ, ಮತ್ತೊರ್ಮೆ ಮೆಯ್ಗೆನಗೆ
ಗರಿ ಮುಹುರ್ಭವಿಸುವೊಡೆ, ನಿನ್ನ ರಕ್ಕಸ ಮೆಯ್ಯ
ನೆತ್ತರಿಂ ತನಿಯೆರೆವೆನೆನ್ನನುಜನಾತ್ಮಕ್ಕೆ : ಕೇಳ್,
ಪೂಣ್ದೆನಿದೊ ಈ ಮಹಾ ವಾನರರೆನಗೆ ಸಾಕ್ಷಿ !”
ಪೂಣ್ದು ಮೊಗದಿರುಹಿದನ್ ಶರಗುಲ್ಮನಿರ್ದೆಡೆಗೆ
ಮತ್ತೆ ; ನುಡಿದನ್ ಭಾವದಿಂ :
“ಮಹಾ ವಾನರನೆ,
ದೇವಿಯಂ ಕಳ್ದುಯ್ದನಾ ನೀಚನೆಯ ವಲಂ !   ೭೯೦
ದಿಟಮೀಗಳರಿತೆನಾಂ ಕಂಡುದವನದೆ ರಥಂ,
ಪುಷ್ಪಕಂ. ಮಧ್ಯಾಹ್ನಮೊರ್ವನೆಯೆ ಕುಳ್ತಿರ್ದೆನ್
ಇಲ್ಲಿ. ತೆಕ್ಕನೆ ಬಿಳ್ದುದಾಕ್ರಂದನಂ ಕಿವಿಗೆ.
ಕತ್ತೆತ್ತಿ ಕಂಡೆನೊಂದಂ ಗಗನರಥಮಂ
ಸಮೀರಪಥಯಾತ್ರಿಯಂ. ನೂರು ಯೋಜನದಾಚೆ
ತೆಂಕಣದೊಳಿರ್ದುದಾ ರಾಕ್ಷಸ ಕನಕಲಂಕೆ,
ಕಡಲಗಳ್ತೆಯ ಕೋಂಟೆದೀವಿ. ಸೀತಾದೇವಿ….”
ಓ, ಏನಿದೇನಚ್ಚರಿಯೊಳಾಲಿಗಣ್ಣರಳಿ
ಮರವಟ್ಟವೋಲ್ ನಿಟ್ಟಿಸುತ್ತಿದೆ ವಾನರಶ್ರೇಣಿ
ಒರೆವ ಸಂಪಾತಿಯಂ ? ಗೂಬೆ ನವಿಲಾದಂತೆ,            ೮೦೦
ವಿಕೃತಿಯಿಂ ಸಂಸ್ಕೃತಿಯ ಚೆಲ್ವು ಮೈದೋರ್ದಂತೆ,
ಮಳೆಯ ಬಿಲ್ಗಳೆ ಮೆಯ್ಗೆ ಗರಿಯಾಗಿ ಬಂದಂತೆ
ಬಣ್ಣವಣ್ಣದ ತಿಪ್ಪುಳಗೆ ಮೊಳೆತುದಂಗಮಂ
ತುಂಬುತೆ ವಿಹಂಗೇಂದ್ರನಾ ! ಕಾಣುತಿರ್ದಂತೆ
ಸೊಗಸಿದನು ಸಂಪಾತಿ ಶಾರೀರವೀರ್ಯದಿಂ ಮೇಣ್
ಸರ್ವಾಂಗ ಸೌಂದರ್ಯದಿಂ : ಚಿನ್ನದೆಣ್ಣೆಯಿಂ
ಬಣ್ಣ ಬಳಿದಂತೆವೋಲ್ ಎಸೆದತ್ತೆರಂಕೆಗರಿ ;
ಮರಕತದ ಶಾದ್ವಲಮೆನಲ್ಕೆಸೆದು ಕಂಠದೇಶಂ
ಶೋಭಿಸಿತು ನುಣ್‌ಪಸುರ್ಪಿಂಡೆ ; ಕಣ್ಣರಿಲ್ಗೋಲ್
ಇರಿದುವೈ ಬಾನ್ನೀಲಿಯಂ ; ಕಾಯ್ದು ಕೆಂಪೇರ್ದ           ೮೧೦
ಕಡುಕಠಿಣದುರ್ಕ್ಕಿನೋಲ್ ದೇದೀಪ್ಯಮಿರ್ದುದಾ
ವಜ್ರ ಚಂಚೂಪುಟಂ ; ಮೊನೆಯುಗುರಗುರ್ವಿಂದೆ,
ಇಂಚುಬೇರ್ಗಳ ಸಿಡಿಲ ಮರವೆನೆ, ಪದದ್ವಯಂ
ರುದ್ರ ಶಂಕರಮಾಯ್ತು, ಶಶಿಬಾಲ್ಯ ಸಂಶೋಭಿ
ಫಾಲಾಕ್ಷನೋಲ್ : ಜ್ವಲಿಸಿದನ್ ತಪೋಮಯತೇಜದಿಂ
ಖಗಕುಲಾಗ್ರಣಿ, ದೇವತಾತ್ಮಂ, ಮಹಾತ್ಮನಾ
ಭವ್ಯ ಸಂಪಾತಿ !
ತನ್ನಾ ನವ್ಯತೆಗೆ ತಾನೆ
ಬೆರಗುವೋಗುತೆ, ಹಿಗ್ಗಿ, ಭಕ್ತಿಗೆ ಕೃತಜ್ಞತೆಗೆ
ಕಂಚುಗೊರಳಂ ಕೊಟ್ಟನಿಂತು : “ಏಂ ಪುಣ್ಯಮಿದೊ ?
ದಿಟಮಲಾ ಶಿವಕೃಪೆಗೆ ಪರಮಾಣುವುಂ ಪರ್ವತಂ !     ೮೨೦
ಇದೆ ಮಹತ್ಕಾರ್ಯಮೈಸಲೆ ? ದಿಟಂ : ದೇವಿಯಂ,
ಶ್ರೀರಾಮದಯಿತೆಯಂ, ಪುಡುಕುತಿರ್ಪೀ ನಿಮಗೆ
ದೈತ್ಯನಿರ್ಕೆಗೆ ದಾರಿಯಂ ತೋರ್ಪೆನದೆ ದಿಟಂ
ಲೋಕ ಕಲ್ಯಾಣಕರ ಶೋಕಮೋಕ್ಷದ ಪುಣ್ಯ
ಕೃತಿಯಕ್ಕುಮೆನಗೆ ! ಬನ್ನಿಂ; ಪೋಪಮಾ ಸಭೆಗೆ,
ಹನುಮ ಜಾಂಬವ ನೀಲ ವಾಲಿಸುತನಂಗದನೆ
ಮೊದಲಹ ಮಹಾ ಮಿತ್ರರಿರ್ಪೆಡೆಗೆ !”
ಕಳುಹಿದಾ
ಶರಗುಲ್ಮನಂ ಕಾಯುತುಬ್ಬೇಗದಿಂದಿರ್ದ
ಕಪಿಗೋಷ್ಠಿ, ಮಂಜುಳಿದ ಮಾಗಿಯೇರ್ವಿಸಿಲಲ್ಲಿ,
ಪೊನ್ನೊ ಪವಳಮೊ ಪಚ್ಚೆ ನೀಲಿ ಮೇಣ್ ಪಳದಿಗಳೊ ? ೮೩೦
ಸಪ್ತವರ್ಣದೊಳಿಂದ್ರಧನುವೊಲ್ ಪರ್ಣತನುವಾಗಿ,
ಹರಿವರ್ಯನಂ ವೆರಸಿ ಮಿರುಮಿರುಗಿ ಬರುತಿರ್ದನಂ
ಗರಿಮೆಯ್ಯನಂ ಕಂಡು ಸಂತೋಷಿಸಿತು ಶಕುನ
ಮಂಗಳಕೆ. ಸಂಕುಚಿತ ನೇಮಿಯಾದಾ ಸಭಾ
ಚಕ್ರಕ್ಕೆ ತಾಂ ಕೇಂದ್ರಮಾಗಿರಲತಿಥಿ ಸಂಪಾತಿ,
ಸಾಂದ್ರಮಾದುದು ಮಂದಿ ಸುತ್ತಣಿಂ ಸಂದಣಿಸಿ
ನುರ್ಗ್ಗಿ. ಕೇಳ್ದರ್ ಕುತೂಹಲಕೆ ರೋಮಾಂಚನಂ
ಭವಿಸಲಾ ಖಗಕುಲ ಕಿರೀಟಿಯಾದೇಶಮಂ.
ಪೇಳ್ದನಾತನುಮರಿತುದನಿತುಮಂ. ಮೇಣಂತೆ
ಗುರು ನಿಶಾಕರ ಮುನಿಯ ದುರ್ಮರಣ ವಾರ್ತೆಯಂ    ೮೪೦
ಕೇಳ್ದನತ್ಯಂತ ಚಿಂತಾಕುಲಂ. ಮುಂದೆ ತಾಂ
ರಾವಣಂಗಿದಿರಾಗಿ ರಾಮಂಗೆ ನೆರವಾಗಿ
ನಿಲ್ವೆನೆಂಬಾಶೆಯಂ ಘೋಷಿಸುತ್ತಲಿಂದೆ,
ಗುರುಗೆ ತನ್ನವರಜಗೆ ತಿಲಬಲಿಯನೀಯಲುಂ ಮೇಣ್
ಪ್ರಿಯ ಬಂಧುವರ್ಗಮಂ ಬಹುದಿನಾನಂತರಕೆ
ಕಾಣಲುಂ, ಬೀಳ್ಕೊಳುತ್ತೆಲ್ಲರ್ಗೆ ವಂದಿಸುತೆ
ಗರಿ ಮಿಂಚೆ ರೆಂಕೆಗೆದರಿದನಂತರಿಕ್ಷಕ್ಕೆ :
ಕಿರ್ತಿಗೆ ಕೃತಜ್ಞತೆಗೆ ಪೆರ್ಚಿ ವನನರಬಲಂ
ಕೊರಳೆತ್ತಿ ಕೈವೀಸಿ ಕೈವಾರಗೆಯ್ಯಲಾ ಘೇ
ಉಘೇಧ್ವನಿಗೆ, ದ್ರವಮೆನೆ ತರಂಗಿಸಿತು ಶೈಲ ಭೂ        ೮೫೦
ದ್ರುಮಮುದ್ರಿತಾದ್ರಿ !
ನವೀನಾಶಾ ಕನಕಕಾಂತಿ,
ಜನದಂತರಂಗಮಂ ವನ ಲಸದ್‌ರಂಗಮಂ
ಕೀರ್ತಿಸುವವೋಲ್, ನರ್ತಿಸಿತು ಕಿರಣ ನಾಟ್ಯಮಂ.
ತೊಲಗಿದತ್ತಾಪತ್ತು. ಮಧ್ಯಾಹ್ನ ಪೂರ್ವದಾ
ಪರಿಷತ್ತು, ಮತ್ತೆ ಮಂತ್ರಣಕಾಗಿ ನೆರೆದತ್ತು,
ಕಪಿಕೇತನರ ಚೇತನದ ಶರಧಿಸಂಪತ್ತು.
ಘೋಷಿಸಿತ್ತಿಂತು ಹರ್ಯಕ್ಷ ವಿಕ್ರಮಿಗಳಂ
ಕುರಿತು ಯುವರಾಜನಧ್ಯಕ್ಷತಾ ಕಂಠೀರವಂ :
“ಪ್ಲವಗ ಲಾಂಛನ ಪತಾಕಾ ಕೀರ್ತಿ ಪೂರ್ಣಿಮಾ
ಚಂದ್ರರಿರ, ತವಿದುದೆಮ್ಮಯ ಜಸಕೆ ಕವಿದಿರ್ದ            ೮೬೦
ಪಳಿಮುಗಿಲ್. ಸಯ್ಪಿಂದೆ ಸಮನಿಸಿತು ಸಂಪಾತಿ
ಸಂದರ್ಶನಂ. ಕೇಳ್ದಿರೆಲ್ಲರುಮಾ ವಿಹಂಗೇಂದ್ರ
ಸಂದೇಶಮಂ. ನೂರುಯೋಜನದಾಚೆ, ಲಂಕೆ,
ರಾಕ್ಷಸದ್ವೀಪಮಿದೆ ಶರಧಿಮೇಖಲೆಯಾಗಿ.
ಖಳ ದಶಗ್ರೀವನಿನಕುಲನ ಕಾಂತೆಯನಲ್ಲಿ
ಬೈತಿಟ್ಟಿಹಂ. ಕಾಣಿಮದೊ ಕರೆಯುತಿದೆ ಶರಧಿ.
ವಾನರಾಚಂದ್ರಾರ್ಕ ಕೀರ್ತಿಕರ ಸಾಹಸಕೆ
ಬಿದಿ ಸಮೆದ ನೀರ್ಗರಡಿ ! ಲಂಘಿಸುವರಾರದಂ ?
ಲೋಕಪೂಜೆಯ ಮಂಗಳಾರತಿಯ ಕಾಂತಿಯಂ
ತಮ್ಮ ಪೆಸರಿಗೆ ಬೆಳ್ಗೊಡೆಯ ಮಾಳ್ಪರಾರೇಳಿ  ೮೭೦
ಬನ್ನಿ. ನಾಮನಿಬರುಂ ಮರಳಿ ಕಿಷ್ಕಿಂಧೆಯಂ
ಪೊಕ್ಕು, ಪೆಂಡಿರ್ ಮಕ್ಕಳಂ ನಂಟರಿಷ್ಟರಂ
ಕಾಣ್ಬಂತೆ ಗೆಯ್ವ ಪುಣ್ಯಾತ್ಮರಾರಿಹರಿಲ್ಲಿ,
ಮೇಲೇಳಿ, ಬನ್ನಿ. ರಾಮನ ವಿರಹತಾಪಮಂ
ದೇವಿ ಸೀತೆಯ ಹರ್ಷಬಾಷ್ಪದಿಂ ನಂದಿಪಾ
ರಸ ಲಸತ್‌ಕೃತಿ ಮಹಾಕಾವ್ಯದ ಜಗತ್‌ಕವಿಯ
ಪಟ್ಟ ಮಹಿಮೆಗೆ ನೋಂತರಾರೇಳಿ ಬನ್ನಿ. ಓ,
ಸುಗ್ರೀವನಾಜ್ಞಾ ಕಿರೀಟಭಾರಕೆ ಬಾಗಿ
ನೆಲದಿಟ್ಟಿಯಾಗಿ ಮಣಿದಿರ್ಪಿರೇಕೆ ? ಲಂಘಿಸೆ
ಸಮುದ್ರ ದುಷ್ಪಾರಮಂ, ಬಾನ್ನೆಲಕೆ ತಲೆಯೊತ್ತಿ           ೮೮೦
ನಿಲ್ಲಿಮೇಳಿಂ ! ಪೇಳಿಮಾರೆನಿತು ದೂರಮಂ
ಲಂಘಿಸೆ ಸಮರ್ಥರೆಂಬುದನೀ ಮಹಾಸಭೆಯ
ಸನ್ನಿಧಿಗೆ.”
ಕೇಳ್ದರಾರೊರ್ವರೇನೊಂದುಮಂ
ಪೇಳ್ದರಿಲ್ಲಿರ್ದುದಯ್ ಸಮಿತಿ ಕಂಡರಿಸಿದೋಲ್
ನಿಶ್ಚಲಂ. ಚಣಮಾದುದೊಂದೆರಡಾದುದಿಸ್ಸಿ ! ಮೇಣ್
ಮೂರನೆಯ ಚಣಮೊ ? ಯುಗದೀರ್ಘಮಾಯಾಸಮಿರೆ.
ಛಿಃಛಿಃಛಿಃ ಎನುತ್ತೆ ಭರ್ತ್ಸನೆಗೈದ ಮೌನದ
ಕಶಾಘಾತಕೆನೆ ಗುಜುಗುಜಿಸತೊಡಗಿದುದು ಗೋಷ್ಠಿ.
ಮಾನರಕ್ಷಣೆಯಾಯಿತೆಂಬಂತೆ ತೃಪ್ತಿಗಾ
ಸಭೆ ಸುಯ್ಯೆ, ಧಿಗ್ಗನೆದ್ದನ್ ದಿಗ್ಗಜೋಪಮಂ     ೮೯೦
ಸಮ್ಮುಖ ಸಮರ ಪರಾಕ್ರಮಿ ತಾಂ ಗಜಂ :
“ನಗದಿರಿಂ.
ನನಗೆ ಲಂಘನಶಕ್ತಿಯಲ್ಪಮಾದೊಡಮಿಲ್ಲಿ
ನೆರೆದಿತರ ಪಿರಿಯರ್ಗೆ ನುಡಿದೋರಲಿಕ್ಕೊಂದು
ಪೀಠಿಕೆಯನೊರೆವೆನ್ : ಯೋಜನ ದಶವನುತ್ತರಿಸೆ
ನಾಂ ಶಕ್ಯನೆಂ !”
ಕುಳ್ತನವನನಿರೀಕ್ಷಿತಮೆನಲ್ಕೆ.
ಮೇಲೆಳ್ದನಾ ಬಳಿಕಮೊರ್ವನಿಂಬಳಿಯೊರ್ವ
ಕಲಿ. ತನ್ನಾರ್ಪಿನುದ್ದಮಂ ಪೇಳಲ್ : ಇರ್ಪತ್ತು
ಯೋಜನವನೊರೆದನಾ ಗವಯಂ. ಗವಾಕ್ಷಂ
ನಾಲ್ವತ್ತನೊರೆದನಂತೆಯೆ ಗಂಧಮಾದನಂ
ಪೇಳ್ದನೈವತ್ತನಾ ಮೈಂದನಾರ್ವತ್ತನಾ          ೯೦೦
ಜಾಂಬವಂ ಮುದುಕನೆಂಬತ್ತನೊರೆದಂ. ಕಡೆಗೆ
ವಾಲಿಸುತನಂಗದಂ : “ಕೇಳ್ದಿರ್ದೆ ಜಾಂಬವನ
ಸಾಮರ್ಥ್ಯಮಂ, ಮತ್ತೆ ವಿನಯಮಂ. ಪಿಂತವಂ
ಜವ್ವನದೊಳಿರ್ದಂದು, ನನ್ನ ತಂದೆಯೆ ನಾಣ್ಚಿ
ತಲೆವಾಗುವಂತೆ ಲಂಘಿಸುತಿರ್ದನೆಂಬುದಂ
ಕೇಳಿರ್ದೆನಯ್ಯನಿಂ. ಮುನ್ನೀರ್ಗಳಂ ಕೆರೆಗೆ
ಗೆತ್ತು ನೆಗೆದಾತನೀವೊತ್ತು ಮುಪ್ಪಿಂ ಕುರ್ಗ್ಗಿ
ನುಡಿದುದಂ ಕೇಳ್ದೆನಗೆ ಹೆಡೆಸೆಡೆಯುತಿದೆ ತರುಣತಾ
ಗರ್ವಂ. ನಿಶಾಕರ ಮುನಿಯ ಹತ್ಯೆಯಿಂದೆನಗೆ
ಕಡಿವೋದುದೆನ್ನಯ್ಯನಿತ್ತ ಮಾಂತ್ರಿಕ ಶಕ್ತಿ.      ೯೧೦
ಕೇಳಿಮಾದೊಡಮೆನಗೆ ಬಲ್ಮೆಯಿಹುದುತ್ತರಿಸೆ
ಶತಯೋಜನದ ಶರಧಿಯಂ. ಪಿಂತೆ ಮರಳಲ್ಕೆನಗೆ
ಬೇಳ್ಪದಟಿನೊಳೆ ಶಂಕೆ.”
ಮುದಿಯ ಜಾಂಬವನೆದ್ದು
ತಡೆದನ್ ಕುಮಾರನಂ : “ಬಲ್ಲೆನಾಂ ವಾಲಿಸುತ,
ನಿನ್ನದಟಿನಳವಿಯಂ. ಸಾಗರವನುತ್ತರಿಸಿ
ಪಿಂತಿರುಗಲುಂ ನೀಂ ಸಮರ್ಥನೆ ದಿಟಂ. ಶಂಕೆ
ನೀಂ ವಿನಯಕಿತ್ತ ದಕ್ಷಿಣೆಯೈಸೆ ! ಕೇಳಾದೊಡಂ
ಪೋಗಲಾಗದು ನೀಂ ; ನಯಮದಲ್ತು. ಸ್ವಾಮಿಯಂ
ಮುಂಗಳುಪಿ ಭೃತ್ಯರೆಂ ಪಿಂದುಳಿಯೆ, ಕೇಡಡಸೆ,
ಕಾರ್ಯನಾಶಂ ; ಸರ್ವನಾಶಂ ; ಅಕೀರ್ತಿಯೆ ದಿಟಂ !  ೯೨೦
ಮೂಲಮಿರ್ಪವನೀಜಕಿಂದೊ ನಾಳೆಯೊ ಫಲಂ :
ಬೇರ್ಗಡಿದರೇನುಂಟು ? ಚಿತೆಗಿಂಧನಂ ! ಕಳುಹೆ
ನಿನ್ನನದೆ ಗತಿಯಕ್ಕುಮೆಮಗೆ.”
ವಾಲಿಯ ಮಗಂ
ಕೈಮುಗಿದು, ಗೌರವಂದೋರಿ, ವೃದ್ಧವೀರಗೆ
ಜಾಂಬವಂಗಿಂತು : “ಪೂಜ್ಯನೆ, ಬೇರೆ ಬಟ್ಟೆಯಂ
ಕಾಣೆನಾಂ. ಸುಖದೊಳಾರಗ್ರಭಾಜನನವನೆ
ಕಷ್ಟದೊಳಗಗ್ರಭಾಜನನಕ್ಕುಮದೆ ನಿರತೆ ದಲ್
ಬೀರಕ್ಕೆ. ಗೌರವದೊಳಗ್ರಗಣ್ಯಗೆ ಪಾಳಿಯಯ್
ಸಾಹಸದೊಳಗ್ರೇಸರತೆ. ನಾನು ಮುಂತಿರ್ದು
ಮೇಣ್ ಬೇರೆ ಬೀರರಾರುಂ ಸಾಸಕೆಳಸದಿರೆ,   ೯೩೦
ಪ್ರಾಯೋಪವೇಶಮಲ್ಲದೆ ಕಾಣೆನಾನನ್ಯಮಂ
ಸದ್ಗತಿಯನೆಮಗೆ. ಪೇಳೆನಗಿಲ್ಲಿ ಕಜ್ಜಮಂ ;
ನೀಂ ಪಿರಿಯನಜ್ಜನಯ್ ; ನಿನ್ನ ಸನ್ಮತಿಯೆನಗೆ
ರಾಮನಾಶೀರ್ವಾದಮಂತೆ ಸುಗ್ರೀವಾಜ್ಞೆ !”
ಪೊಳ್ತಿನಿತು ಚಿಂತಿಸಿದನಂತರಂ ಜಾಂಬವಂ,
ಕೆಮ್ಮನಿರ್ದಾ ನೀಲನಿಂಗಿತವರಿತು, ನಳನ
ಕಣ್ಣರಿತು, ಸಂತೈಸಿದನು ವಾಲಿಸೂನುವಂ :
“ತೋರ್ಪೆನೊರ್ವನನಿಲ್ಲಿ ಲಂಘನ ಸಮರ್ಥನಂ.
ಪೆರರಿಂ ಪ್ರಚೋದಿತಂ ತನ್ನ ತಾನರಿಯದಯ್
ನಿಜಮಹಿಮೆ. ನೋಡಲ್ಲಿ : ಗೆಂಟರೊಳರೆಯ ಮೇಲೆ       ೯೪೦
ಕುಳಿತಿರ್ಪನೆಕ್ಕಟಿಯೊಳಾ ದಿವ್ಯ ತೇಜಸ್ವಿ,
ಕಡಲೆಡೆಗೆ ಕಣ್ಣಾಗಿ. ಕಣ್ಣೊಳಗೆ ಕಡಲಾಗಿ,
ವಾಯುಸುತನಾಂಜನೇಯಂ !”
ತನ್ನ ಕಲಿತನಕೆ
ಜಲಕಲಿ ಸರಿತ್ಪತಿಯ ವಿಸ್ತೀರ್ಣದಾ ಶೌರ್ಯಮಂ
ತೋಳ್ತೂಗಿ ನೋಳ್ಪವೋಲತ್ತಣ್ಗೆ ಕಣ್ಬೆಸೆದು,
ಕಲ್ಪಟ್ಟು, ಪಡಿಮೆಯಂತಿರ್ದನಂ ಬಳಿಸಾರ್ದು
ಜಾಂಬವಂತಂ, ಶಿಲಾಶಿಲ್ಪಿಯ ಕಲಾಕೃತಿಗೆ
ದೇವತಾಹ್ವಾನದಿಂ ಪ್ರಾಣಾಪ್ರತಿಷ್ಠೆಯಂ
ಗೆಯ್ಯೆ ಮಂತ್ರಿಸುವಾತ್ಮಸಾಧಕನವೋಲ್, ನಿಂದು,
ಫಲಸಿದ್ಧಿಯೊಳ್ ಸುದೃಢ ಬುದ್ಧಿಯಿಂ, ಶ್ರದ್ಧೆಯಿಂ           ೯೫೦
ನುಡಿದನಾವೇಶದಿಂ :
“ಕಲ್ಲಾದೆಯೇಕಿಂತು, ಪೇಳ್,
ಓ ಕಪಿಧ್ವಜದೇವತಾ ಕೀರ್ತಿಮೂರ್ತಿ ? ಅದೊ, ಕಾಣ್,
ನಿನ್ನಾಲಯದ ಗೌರವದ ಗೋಪುರದ ಸುಧಾ
ಶುಭ್ರ ಕಲಶ ಗಭಸ್ತಿ ಕಿಲುಬುತಿದೆ ದುರ್ಯಶಃ
ಕಿಲ್ಬಿಷಂ ಪತ್ತಿ. ನಿನ್ನ ಕೆಳೆಯರ ಹರಣವಿದೊ
ಏದುತಿದೆ ಹೊರೆಗಜ್ಜದರೆಯೊತ್ತಿ. ಮರುತ್ಸುತ,
ನೀಂ ಜಗತ್‌ಪ್ರಾಣ ಸಂಭವನಯ್. ಸಮೀರಣನ
ವರದ ಕೃಪೆಯಿಂದಂಜನಾದೇವಿಯಿಂ ಬಂದವನ್
ನೀಂ. ನಿನಗಲೌಕಿಕಂ ಜನ್ಮಗುಣಮಲ್ಲದೆಯೆ,
ಯೋಗಿ ನೀನಭ್ಯಾಸದಿಂದೆಯುಂ. ತಪದಿಂದೆ, ಮೇಣ್   ೯೬೦
ಬ್ರಹ್ಮಚರ್ಯಜ ಮಹಿಮೆಯಿಂದಷ್ಟಸಿದ್ಧಿಗಳ್
ನಿನಗಿಷ್ಟ ಕಿಂಕರರಲಾ, ಹನುಮಂತದೇವ. ನೀಂ
ಧ್ಯಾನದಿಂದಿಚ್ಛಿಸಿದರಾವುದಾಗದೊ ? ನಿನಗೆ,
ನಿನ್ನನ್ನರಿಗೆ, ಸೃಷ್ಟಿ ತಾಂ ದೃಷ್ಟಿಸೂತ್ರಜಮಲ್ತೆ ?
ಯೌಗಿಕವನಲ್ಪಕ್ಕೆ ಲೌಕಿಕಕೆಳೆಯಲೊಲ್ಲೆ ನೀಂ ;
ಬಲ್ಲೆನಾ ನಿಷ್ಠೆಯಂ…. ಪೇಳಲ್ಪಮೇನೆಮ್ಮೆಲ್ಲ
ಬಾಳೊಳ್ಪಿನೀ ಮಹತ್‌ಸಾಹಸಂ ? ಪ್ರೇಮಮಂ
ಕಾಮದಿಂದುದ್ಧರಿಸಿ, ಬಾಳ್ಗೆ ಬಾಳಂ ಬೆಸೆಯಲೀ
ಪೆರ್ಗಡಲ್ ನೆಗೆಯುವೀ ಸಯ್ಪು ಕಲ್ಪಾಂತರಕ್ಕೇಂ
ದೊರೆಕೊಳ್ವುದುಂ ದುರ್ಲಭಮೆ ದಿಟಂ. ಮೇಣ್ ಯೋಗಮಂ       ೯೭೦
ಧರ್ಮಸಾಧನೆಗೆ ವಿನಿಯೋಗಿಸಿದರೇನದಕೆ
ಮೈಲಿಗೆಯೆ ? ಧರ್ಮಮೇ ದೇವರೆಂಬುದೆ ಬುದ್ಧಿಯಯ್ !
ಏಳೇಳ್, ಮಹಾಯೋಗಿ, ನಿಃಸ್ವಾರ್ಥಕಾರಣಕೆ
ನಿನ್ನ ಸಿದ್ಧಿಯನಿಲ್ಲಿ ನೈವೇದ್ಯಮಂ ನೀಡಿ,
ಪಡೆ ಪರಮಸಿದ್ಧಿಯಂ. ತನ್ನಂಗುಳೀಯಮಂ
ನಿನಗಲ್ಲದನ್ಯರ್ಗೆ ಕೊಟ್ಟನೇನಾ ಮಹಾ
ಮತಿ, ದಾಶರಥಿ ? ಮುದುಕನೆಂ ; ಮುಖಸ್ತುತಿಯಲ್ತು ;
ನಿನಗೆಣೆಯನಾಂ ಕಂಡೆನಿಲ್ಲೆನ್ನ ಬರ್ದುಕಿನೊಳ್.
ಲಂಘಿಸೀ ಶರಧಿಯಂ ಪುಡುಕಿ ಬಾ ದೇವಿಯಂ
ತಾ ಪುಣ್ಯವಾರ್ತೆಯಂ, ಮೇಣೆಮಗೆ ಬಾಳ್ತೆಯಂ.”        ೯೮೦
ಕೇಳ್ದನಂತರ್ಮುಖಿ ಮರುತ್ಸುತಂ. ಮನದೊಳಗೆ
ನಿಶ್ಚಯ್ಸಿದನ್ ಸಾಗರೋಲ್ಲಂಘನಕೆ. ಯೋಗಿ
ಪೂರಕಂ ರೇಚಕಂ ಕುಂಭಕ ಪ್ರಾಣದಿಂ
ಮೂಲದಿಂದೆಳ್ಚರಿಸಿದನ್ ಕುಂಡಲಿನಿಯಂ.
ಸುಷುಮ್ನೆಯಿಂದೇರ್ದನ್ ಸಹಸ್ರಾರಕಲ್ಲಿಂದೆ ಮೇಣ್
ಮೀರ್ದನಿಂದ್ರಿಯ ಮಾನ್ಯ ಜಡಜಗನ್ಮಾಯೆಯಂ,
ಭೌತ ಸೃಷ್ಟಿಯ ಮಹನ್ನಿಯತಿಯಂ ! ಸಂಕಲ್ಪಚಿತ್
ತಾಳ್ದನಿಚ್ಛಾಸೂತ್ರದಿಂ ಕಪಿಗಾತ್ರಮಂ, ಕುಲದ
ಹಳವಿಗೆಯ ಚಿಹ್ನೆಯಾಕಾರಮಂ.
ಇತ್ತಲಾ
ತೋರ್ದುದೆಂತಿಂದ್ರಿಯಾತೀತೈಂದ್ರಜಾಲಿಕಂ ೯೯೦
ಸುತ್ತಣಿಂ ಮುತ್ತಿ ಗೆಂಟರೊಳಿರ್ದರಾ ಚಕಿತಾತ್ಮ
ವನ ನರ ಚಮೂ ದರ್ಶನೇಂದ್ರಿಯಕೆ ? ನೋಡುತಂ
ನೋಡುತಿರ್ದಂತೆವೋಲಾವೇಶಗೊಂಡುದೆನೆ,
ಸುಯ್ಯೇರ್ದು, ಸುಯ್ಯಿಳಿದು, ವೇಪಿಸಿತು ವಾಯುಜನ
ವಪು. ಮಿಂಚೆ ರೋಮಾಂಚನಿಸಿತೆಂಬವೋಲ್ ಮೊಗಕೆ
ತುಳ್ಕಿದುದು ತೈಜಸಂ. ಫಾಲ್ಗುಣದುದಯರವಿಯ
ಕನಕ ಕುಂಕುಮ ಬಿಂಬಕಾಂತಿ ಪರಿವೇಷಮಂ
ರಚಿಸುತಿರೆ, ಪವನಜನ ನರರೂಪಮೊಯ್ಯನೆಯೆ,
ವಾರಿ ವಿದ್ಯುತ್ಸಂಗದಿಂ ಪೊರ್ದ್ದುತನಿಲತಾ
ಸಿದ್ಧಿಯಂ ಸಾಕಾರಮಂ ವಿಸರ್ಜಿಸುವಂತೆ,     ೧೦೦೦
ತೊರೆಯುತೆ ನರಾಕೃತಿಯನೇರ್ದುದು ನಿರಾಕೃತಿಗೆ.
ಜ್ಯೋತಿಸ್ಸಲಿಲ ಶೀಕರವೊ ಚಂದ್ರ ನಕ್ಷತ್ರ
ನೀಹಾರಿಕಾ ರಜೋ ಮೇಘದಗ್ನಿಮಂಡಲವೊ
ಮೇಣಾಂಜನೇಯಾತ್ಮ ವೈಭವಶ್ರೀದ್ಯುತಿಯೊ
ಪೇಳೆಂಬಿನಂ ಜ್ವಲಜ್‌ಜ್ವಲಿಸುತಿರ್ದಾ ದೀಪ್ತಿ
ತಿರ್ರನೆ ತಿರುಗಿದುದು ಅಲಾತಚಕ್ರದ ತೆರದಿ,
ನೆರೆದ ವಾನರ ನಯನಶಕ್ತಿ ತಳ್ಳಂಕದಿಂ
ಮುಚ್ಚೆವೋಪಂತೆ ! ತೆಕ್ಕನೆ ಇಂಪು ಸುರಿದುದಯ್
ಓಂಕಾರದಿಂಚರಂ, ಸೃಷ್ಟಿಯ ಚರಾಚರದ
ಕೋಟಿ ಕಂಠಸ್ವರದ ವಿಶ್ವವೈಣಿಕ ಮಧುರ      ೧೦೧೦
ಅವ್ಯಕ್ತ ನಿತ್ಯಗಾನಂ. ಕೇಳುತಿರ್ದಂತವರ್
ತಳತಳಿಸಿತಾ ಬೆಂಕೆ ತುಂತುರ್ ಮುಗಿಲ ನಡುವೆ
ವಾನರಧ್ವಜದ ಚಿಹ್ನೆಯ ಚಿತ್ರದಾಕಾರಂ.
ಮಿಕ್ಕುವಾನಂದದಿಂದುಲಿದು ಜಯಘೋಷಮಂ,
ಸ್ತೋಮ ಸಂಗೀತದಿಂ ಸ್ತೋತ್ರಗೈಯಲ್ ತೊಡಗುತಾ
ಸ್ತೋತ್ರ ಸಂತೋಷದೊಳ್ ತೇಲಿಸಿತು ಪೃಥ್ವಿಯಂ,
ವಿಪಿನಾದ್ರಿ ಸಹಿತಮಂ, ಓಂಕಾರಸಂಗಿ ಆ
ಸಂಭ್ರಮಿತ ಕಪಿಸೈನಿಕಂ :
“ಜಯತು ಜಯತು ಹೇ
ಪವನ ಪಾವನ ಕಲಿ ಕುಮಾರ ! ಜಯತು ಜಯ ಹೇ
ವಾನರಕುಲದ ಕೀರ್ತಿಯುದ್ಧಾರ ! ಜಯತು ಹೇ           ೧೦೨೦
ಕಪಿಕೇತನರ ಮಹಾಚೈತನ್ಯ ಚೂತವನ
ಚೈತ್ರಾವತಾರ ! ಉತ್ತಿಷ್ಠ, ಓ ಧುರಧೀರ,
ಜಗದೇಕವೀರ ! ಉತ್ತಿಷ್ಠ, ಓ. ಯೋಗಿವರ,
ಯೋಗಾವತಾರ ! ಉತ್ತಿಷ್ಠ, ಓ ಉತ್ತಿಷ್ಠ,
ಸರ್ವಮಾನವ ಗರ್ವಮಾನ ಪಾರಾವಾರ !
ಪ್ರತಿಮೆಯಾಗಲಿ ನಿನ್ನ ಈ ಶರಧಿ ಲಂಘನಂ
ಮಾನವಾತ್ಮದ ಮಹತ್ಸಾಧನೆಗೆ ! ನಿನ್ನ ಈ
ಸಾಹಸಂ ಸಾಕ್ಷಿಯಾಗಲಿ ಯೋಗಮಹಿಮೆಯ
ಉದಾತ್ತತೆಗೆ ! ಬ್ರಹ್ಮಸಾಕ್ಷಾತ್ಕಾರದದ್ವೈತ
ಸಿದ್ಧಿಯಾ ಭೂಮಾನುಭೂತಿಗಾಗಲಿ ರಸದ
ಸಂಕೇತಮೀ ನಿನ್ನ ರುಂದ್ರರೂಪಂ ! ನಮೋ,
ಬ್ರಹ್ಮಚಾರಿಯೆ ! ನಮೋ, ವ್ಯೋಮಸಂಚಾರಿಯೆ,
ನಮೋ ನಮೋ ! ಕಲಿ, ನಮೋ ! ಗುರು, ನಮೋ ! ಪುನರ್ನಮೋ,
ಮುಹುರ್ನಮೋ ! ಓಂ ನಮೋ, ಹ್ರೀಂ ನಮೋ ! ನಮೋ ನಮೋ,
ನಮೋ !”
ಸ್ತೋತ್ರಗೈದಿಂತಿಂತು ಗುಣಗಾನಮಂ
ಸಂಕೀರ್ತಿಸಿರೆ, ಪಿರ್ಗಿದತ್ತಣುವನಣುಮೂರ್ತಿ :
ಕೀರ್ತಿ ತಾಂ ಸ್ಫೂರ್ತಿಯಪ್ಪೊಡೆ ಅಲ್ಪಮಣುರೂಪಿ
ತಾನಾಗನೇನ್ ಅಭ್ರಂಕಷಂ ಬೃಹನ್ಮೂರ್ತಿ ?
ಪರ್ವತಕೆ ಶಿಖರಮೆಯೆ ಹಣೆಸೆಣಸಿ ಮಲೆವಂತೆ.
ಬೆಂಕೆತುಂತುರ್ಮುಗಿಲ ನಡುವಣಾ ಕಪಿಯ ಕೃತಿ         ೧೦೪೦
ತಾನಳ್ಕರೆವೊಗಳ್ಕೆಗೆರ್ದೆಯುರ್ಕ್ಕಿ ಸೊರ್ಕುತೆ, ಉರ್ಬ್ಬಿ,
ಬಳೆಬಳೆದು, ಬಳೆಬಳೆದು, ತುಂಗತರುವರ ಶಿರಮೆ
ಜಾನುಜಂಘೋತ್ಸೇಧಮಾಗಲಾರದೆ ಸೋಲ್ತು
ಬೀರನಡಿತಡಿಗೆ ಮುಡಿಯಿಡುವ ಪಳುಗಿಡುವಾಗುವೋಲ್,
ನಿಂದುದು ಅತೀಂದ್ರಿಯದ ಆಂಜನೇಯನ ಮಹಾ
ದೈತ್ಯ ಭೀಕರದೈಂದ್ರಜಾಲಿಕ ರುಂದ್ರರೂಪಂ !
ಹೆದರಿತೆ ತರುಚ್ಛಾಯೆ ? ಪಾದಪಾದ ಪಾದಮಂ
ಪಿಡಿದುದೆ ? ತಟಿದ್ರೋಮಮಯ ವಜ್ರಕಾಯದಾ
ಮರುತಾತ್ಮಜನ ಮೆಯ್ಸಿರಿಗೆ ಕರ್ಪುಗೆಟ್ಟುದೆನೆ
ಬೆರ್ಚಿ ಬೆಳ್ಪಾಯ್ತೆ ? ಕಾಣ್ : ಈ ಕಾಂತಿಗಾ ಕಾಂತಿ        ೧೦೫೦
ಕೀಳ್ಪಟ್ಟ ತೆರದಿ, ಬಾನ್ಗಾವಲಿಯ ಕಿಡಿಯಾಗಿ
ತಪಿಸಿರ್ಪನಭಿಜಿನ್ಮುಹೂರ್ತ ದಿವಸೇಶ್ವರಂ.
ಮಧುರ ಭಯ ಸಂಭ್ರಾಂತ ಮಧ್ಯಾಹ್ನ ಮೂರ್ಛೆಯಿಂ
ಸ್ತಬ್ಧಮಾಯ್ತಾ ಪಕ್ಷಿನೀರವ ಗಿರಿಧರಿತ್ರಿ !
ಗಾತ್ರದಿಂ ಹೈಮಾಚಲಸ್ಪರ್ಧಿಯಾಯಿತೆನೆ,
ಕಪಿರೂಪಮಾದೊಡೇಂ, ಕೈಲಾಸ ಶೈಲೇಂದ್ರ
ಸಂತ್ರಾಸಕರ ಕಳೇಬರದ ಭೈರವನಂತೆ,
ಭವ್ಯಮಾಗದೆ ಮರ್ತ್ಯದಲ್ಪತೆಗೆ ? ಪಿರಿದಕತಿ
ನಿಕಟಮಿರಲದರ ಜಂಘೆಯ ರೋಮರೂಕ್ಷತೆಯ
ದರ್ಶನಮೆ ಪರಮಗತಿಯಲ್ತೆ ಲಘುಚೇತಸದ   ೧೦೬೦
ಮತಿಗಳಿಗೆನುತೆ, ದೂರದೂರಕ್ಕೆ ಸರಿದುದಾ
ಮಾರುತಿಯ ಮುಖತೇಜಸದ ದರ್ಶನಾಕಾಂಕ್ಷಿ
ಕಪಿಕುಲ ಬಲದ ಜಲಧಿ : ಕೈಮುಗಿದರದ್ಭುತಕೆ,
ಇಚ್ಛಾಯು ವಾಯುಜನ ಆ ವಿರಾಡ್ ವೈಭವದ
ಗೌರವದ ಯೌಗಿಕಶ್ರೀಗೆ !
ಗಿರಿಗಂಹರಂ
ಗುಡುಗೆ ಗರ್ಜಿಪ ಸಿಂಹಘೋಷ ಗಾಂಭೀರ್ಯದಿಂ
ಪೊಣ್ಮಿದುದು ರಾಮ ಸೀತಾ ಪ್ರೇಮ ಮಧ್ಯದಾ
ವಿರಹ ವಿಘ್ನಾಂಬುಧಿಗೆ ಚಿರ ಲಗ್ನಸೇತುವಂ
ಬೀಸೆ ಲಂಘಿಸುವನಿಲಜನ ಶುಭದಭಯ ವಾಣಿ :
“ಸಾಹಸ ಸಹೋದ್ಯೋಗಿಗಳಿರ, ವಾನರ ಸುಹೃನ್       ೧೦೭೦
ಮಣಿಗಳಿರ, ಪೂಜ್ಯ ಕಪಿಲಾಂಛನ ಪತಾಕಾತ್ಮ
ಗೌರವಪ್ರಾಣರಿರ, ತ್ರಾಣದಿಂ ರೂಪದಿಂ
ದಾರ್ಢ್ಯದಿಂದೌನ್ನತ್ಯದಿಂ ಬಿಂಬಿಸಿಪ್ಪೆನಾಂ
ನಿಮ್ಮಖಿಲ ಸಂಘಾತ್ಮಮಂ. ನಿಮ್ಮೆಲ್ಲರಾಕಾಂಕ್ಷೆ
ಮೂರ್ತಗೊಂಡಿಪ್ಪೆನಾಂ ಧನ್ಯನೆಂ. ಅಣುವನಾಂ ;
ನಿಮ್ಮೆಲ್ಲರಿಚ್ಚೆ ತಾಂ ಕೆಚ್ಚಿಂ ಕಟ್ಟಲುದಿಸಿತೀ
ಮಹತೋ ಮಹೀಯತಾ ಗೋಪುರೋಪಮ ಮೂರ್ತಿ.
ಪ್ರಾರ್ಥನಾ ಸೃಷ್ಟನಂ ಸ್ತೋತ್ರ ಸಂಪುಷ್ಟನಂ
ಪೊರೆಯುತಿರಿಮಾ ಮಾನಸಾನ್ನದಿಂ, ವಾರ್ಧಿಯಂ
ದಾಂಟಿ, ದೇವಿಯನರಸಿ ಪಿಂತಿರುಗಿ ನಾನಿಲ್ಲಿ  ೧೦೮೦
ನಿಮ್ಮೆಡೆಗೆ ಬರ್ಪನ್ನೆಗಂ. ಮರೆಯದಿರಿ : ನಿಮ್ಮಾತ್ಮ
ಯೋಗಮೆ ನನಗೆ ಶಕ್ತಿ ! – ಪೇಳ್ವೆನಾದೊಡಮಾಲಿಸಿಂ,
ಮನ್ಮಹಿಮೆಯಂ. ನಿಮ್ಮ ಧೈರ್ಯಕೆ ಪೇಳ್ವೆನಾಲಿಸಿಂ.
ನಿಮ್ಮಾತ್ಮದೂತನೆನ್ನತುಲ ಸಾಮರ್ಥ್ಯಮಂ ನೀಂ
ಕೇಳ್ವಿರಪ್ಪೊಡೆ ನಿಮ್ಮ ಯೋಗ ಯೋಗ್ಯತೆ ಪೆರ್ಚಿ
ಸಮನಿಪುದು ಶ್ರದ್ಧಾಭಿವೃದ್ಧಿ. ಬಿಂಕದಿನಲ್ತು,
ನನ್ನ ಪೆರ್ಮೆಯನೊರೆವೆನಾ ಬುದ್ಧಿಯಿಂ. – ಬೇಡ
ನಿಮಗಿನ್ ಶಂಕೆ. ಪರಿಕಾಲ್‌ಗೆತ್ತು ಸಮುದ್ರಮಂ,
ಈ ಎತ್ತರಕೆ ಕಾಣ್ಬ ಈ ಮಹಾ ನೀಲಮಂ,
ಲಂಘಿಸುವೆನಶ್ರಮಂ. ಲಂಘಿಪೆನಲಂಘ್ಯಮಂ. ೧೦೯೦
ವಿಶ್ವದೊಳಸಾಧ್ಯಮೆನಗಿಲ್ಲಮಿನ್. ಪಿಂಡದೊಡೆ
ಮುಷ್ಟಿಯೊಳೆ ಪುಡಿಯಪ್ಪುದೀ ಮಹೇಂದ್ರಾಚಲಂ !
ಕಡಲನೆಲ್ಲಂ ತುಳ್ಕಿ, ಹಿಮಗಿರಿಗೆ ಬೀಸಾಡಿ,
ವಡಬನಂ ತುಡುಕಿ ಪಿಡಿದಸುರನೂರಂ ಸುಟ್ಟು,
ಬೂದಿ ತೊಳೆಯಲ್ಕಾಂ ಸಮರ್ಥನೆಂ ! ಕೈವೀಸಿ,
ಲಾಂಗೂಲ ಚವರಿಯಿಂದಂಬರದರಿಲ್ಗಳಂ
ಗುಡಿಸಿ ಪಾತಾಳಕುದುರಿಸುವಾರ್ಪು ನನಗಣುಗಲಾ
ಲೀಲೆ !- ಬಣ್ಣಿಪುದೇಕೆ ? ಕಾಣಿಮಪರೋಕ್ಷಮಂ !”