ಕಾವ್ಯಯಾತ್ರೆಗೆ ಮುನ್ನಮಾವೇಶದುನ್ನತಿಯ
ನಾಂದಿಗೇರುವ ಕವಿಯ ಕಲ್ಪನೆಯ ಪಾಂಗಿಂದೆ
ಲಂಘನಾಘಾಥಮಂ ನಿತ್ತರಿಸುವೆತ್ತರಕೆ
ವಜ್ರತನುವೇರ್ದನ್ ಮಹೇಂದ್ರ ಮಸ್ತಕ ಕಲ್ಪಮಾ
ಶಕುನಿಶಿಲೆಗಾಂಜನೇಯಂ. ಜಂಗಮಾಚಲಂ ತಾಂ
ಸ್ಥಾವರಾಚಲಕೇರ್ವವೋಲಾ ವಿರಾಡ್ರೂಪಿ
ಸಾನುವಿಂದಡರುತಿರಲಾ ಮಲೆಯ ಪಸುರೋರೆಯಂ,
ಭವ್ಯಮಾದುದೊ ಭೀಷ್ಮದೃಶ್ಯಂ ಕಪಿಧ್ವಜರ
ಅನಿಮೇಷ ವಿಸ್ಮಯಕೆ ! ಪಳುವಾಯ್ತು ಪೆರ್ಗಾಡು ;
ಕುಸಿಯಿತ್ತು ಬಾನ್ಮಾಡು ; ಹೆದರಿ ಹದುಗುವ ತೆರದಿ       ೧೦
ಕುರ್ಗ್ಗಿ ಕುಬ್ಜತೆವೆತ್ತು ಸೆಡೆತುದಾ ಪರ್ವತದ
ಪೆರ್ವೀಡು. ಮೊಳಕಾಲಿನಾಳದಾ ಮಡುನಡುವೆ
ಪಾಯ್ವ ಪೇರಾನೆಯೊಲ್ ತೊತ್ತಳದುಳಿದು ಮೆಟ್ಟಿ
ಸಾಗುತಿರೆ, ಪೆರ್ಮರಂ ಪರೆಮುರಿದುರುಳ್ದುವಯ್,
ಕುರುಚಲಿನೊಣಗು ಕಡ್ಡಿ ಮುರಿವಂತೆ. ಗುರುಭಾರದಾ
ಪದಹತಿಗೆ ಕಾಣ್ ಓಕರಿಸಿದತ್ತದ್ರಿ ತನ್ನೊಡಲ
ಕೆಂಗಾವಿಮಣ್ವೆರಸಿದೋಕುಳಿಯ ನೀರ್ಗಳಂ,
ವ್ಯಾಗ್ರನಖಮವ್ವಳಿಸೆ ಗೂಳಿ ಹಿಣಿಲಿಂದುರ್ಕಿ
ಪೊನಲಿಡುವ ಬುಗ್ಗೆಕೆನ್ನೀರ್ಗಳೋಲ್. ಗಾರಾದ
ಪಕ್ಷಿಲಕ್ಷದ ತುಮುಲ ಚೀತ್ಕಾರದಿಂ, ಕುಣಿವ     ೨೦
ಅಣುಗನ ಕಯ್ಯ ಗಿಲಿಗಿಚ್ಚಿಯಾದುದಾ ಶೈಲ
ವನಭೂಮಿ. ಭೂಕಂಪನವೆ ಬೇಂಟೆ ಬಿನದಕ್ಕೆ
ಸೋವುತೈತಂದುದೆನೆ ಕಣ್ಗೆಟ್ಟು ಕಾಲ್ಗೆಟ್ಟು
ಕುದಿದುವಲ್ಲಿಯ ಜೀವಜಂತು. ಕಾಲ್ ಮೀಂಟಲ್ಕೆ
ಕಲ್ಗೆ ಕಲ್ ಘಟ್ಟಿಸಲ್, ಕಿಡಿಪೊಣ್ಮಿ ಮರವೊರೆಯ
ದೂದಿ ಪೊತ್ತಲ್, ಬಗನಿಯಂ ಸುತ್ತಿ ಪೆಣೆದಿರ್ದ
ಬಿದಿರಮೆಳೆಗಳ್ ಧಗಿಸಿ ಪರ್ವಿದುದು ಕಾಳ್ಗಿಚ್ಚು.
ಹೊಗೆಮುಗಿಲ ನಡುನಡುವೆ ದಳ್ಳುರಿಯ ಜಿಹ್ವೆಯಂ
ಝಳಝಳಪಿಸಿ, ಏರ್ವಡೆದ ಮರದ ಮೆಯ್ಯಿಂ ಸೋರ್ದ
ಕಂಪಿನಂಟುಗಳುರಿಯೆ ಧೂಪಿಕ್ಕಿದವೊಲಾಯ್ತು            ೩೦
ಹನುಮನಾವೇಶಕ್ಕೆ ಗಂಧಧೂಮಂ. ಕಿತ್ತು
ಸುತ್ತಿಕೊಂಡನ್ ತಲೆಗೆ ಪೆರ್ಬ್ಬಳ್ಳಿಯಂ : ಮೈಗೆ
ಪೆಣೆದುಕೊಂಡನ್ ಕೇದಗೆಯ ಪೊದೆಗಳಂ ; ಮತ್ತೆ
ಕೌಂಕುಳೊಳಗಿರುಕಿಕೊಂಡನ್ ಪೂತ ತರತರದ
ತರುಗಳಂ : ಕಾಡಡರಿದೊಂದು ಮಲೆನಾಡಾಗಿ
ನೆತ್ತಿಯ ಬಯಲ್‌ಸೀಮೆಗೇರುತಿರೆ ವಾಯುಜನ
ಕಪಿ ಮಹಾ ಕಾಯಮ್, ಇಳಿದುದು ಕಂದರದ ಕಡೆಗೆ
ಚಣಚಣಕೆ ಲಂಬಿಪಾತನ ಘೋರ ಭಯಶಂಕಿಯಾ
ಚಿದ್‌ಘನ ತನುಚ್ಛಾಯೆ. ಮಹೇಂದ್ರಮಾಗಿರೆ ಮಧ್ಯೆ,
ಲಂಕೆಯೆಡಕಿರೆ, ಬಲಕಿರಲಯೋಧ್ಯೆ, ಹನುಮನಾ         ೪೦
ವಾಮ ದಕ್ಷಿಣ ಪದನ್ಯಾಸಕೆ, ಧಟದ್ವಯಂ
ತಕ್ಕಡಿಯನೊಮ್ಮೆ ತೆಂಕಣ್ಗೊಮ್ಮೆ ಬಡಗಣ್ಗೆ
ತೂಗಿದುವೆನಲ್ ತುಲಾಭಾರಮಂ, ತೊನೆದುದಯ್
ಬೃಹತ್ ಪೃಥಿವಿ !
ಕಲ್ಪನೆಗೆ ಕೆಚ್ಚಿರಲ್ ಕಟ್ಟಿ ಕಾಣಾ
ನೀಲ ಚುಂಬಿ ಮಹೇಂದ್ರ ಕುತ್ಕೀಲ ಮಸ್ತಕದ
ಶಕುನಿಶಿಲೆಗೇರ್ದು ನಿಂದಾ ವಿರಾಡ್ರೂಪದಾ
ಭವ್ಯ ಚಿತ್ರವನಾಂಜನೇಯನಾ ! ರಸನಿಧಿಗೆ
ಧುಮುಕುವಾತ್ಮಂ ತಾಂ ರಸಸ್ವರೂಪಂಬೆತ್ತು
ತುಂಬಿದಪುದಂಬುಜಭವಾಂಡಮಂ, ಭಾವಿಸುತೆ
ಬ್ರಹ್ಮಾಸ್ಮಿಯನುಭೂತಿಯಂ : ಶರಧಿದರ್ಶನಂ ;           ೫೦
ತಾರಕಿತ ರಾತ್ರಿಯಾಕಾಶ ಸಂದರ್ಶನಂ ;
ತುಂಗ ಶೃಂಗದ ತುಹಿನ ಶೈಲವನ ಶಿವ ಉಮಾ
ದರ್ಶನಂ ; ದಂತುರ ದಿಗಂತ ಚುಂಬಿತ ಉದಯ
ಮೇಣಸ್ತರವಿ ದರ್ಶನಂ ; ವರ್ಷ ಭೈರವನ
ಸಿಡಿಲು ಮಿಂಚಿನ ರುದ್ರ ನಟನಾಟನಾಟವಿಯ
ಸಹ್ಯಾದ್ರಿ ದರ್ಶನಂ ; ಬುದ್ಧದೇವನ ಮಹತ್‌
ತ್ಯಾಗದ ತಪಸ್ಸಿದ್ಧಿ ಸಂದರ್ಶನಂ ; ಜೇಸುವಿನ
ಜನನ ಜೀವನ ಮರಣ ದರ್ಶನಂ ; ಜನಜನದ
ದಿನದಿನದ ಸಂಸಾರ ಜೀವನದ ಸತ್ಕೃತಿಯ
ಕೀರ್ತಿಕಲುಷಿತವಾಗದಿಹ ಪುಣ್ಯದರ್ಶನಂ ;     ೬೦
ಸರ್ವದರ್ಶನ ಜನ್ಯ ರಸಕೆ ತಾಂ ಪ್ರತಿ ಕಣಾ
ಹನುಮನ ವಿರಾಡ್ರೂಪ ಸಂದರ್ಶನಂ !
ಅನಂತರಂ
ಅರಿ ಭಯಂಕರನಾಂಜನೇಯಂ, ವಿಗುರ್ವಿಸುತೆ
ಮನುಜ ಕಲ್ಪನೆ ತತ್ತರಿಸುವೆತ್ತರಕೆ ತನ್ನಾ
ವಿಗ್ರಹದ ವಿಭವಮಂ, ನಿಂದನ್ ನೆಲಕೆ ಬಾನ್ಗೆ,
ಅನಂತತೆಯನಾಕ್ರಮಿಸಿ ನಿಶ್ಶಿಖರಮೆನಲೇರ್ದ
ಗಿರಿಯ ಸಾಹಸ ಗರ್ವಗೋಪುರಶಿಲ್ಪಕೃತಿಯಂತೆ
ನಿಮಿರಿ ! ರೋಮಾಂಚಿಸಿತು ಸೃಷ್ಟಿ ; ಘೇ ಘೋಷಮಂ
ಮೊರೆದುಕ್ಕಿದುದು ಕಡಲ್ ; ಮುಗಿಲ ವೇಷವನಾಂತು
ನಿಂದುದಲ್ಲಲ್ಲಿ ಬೃಂದಾರಕರ ವೃಂದಮಾ,       ೭೦
ಚಾರಣರ ಚರಣಚಿಹ್ನೆಯ ಚುಕ್ಕಿವಟ್ಟೆಯಿಂ
ಸಾಗರದ ದುರ್ಲಂಘ್ಯ ದೂರಮಂ ಲಂಘಿಸುವ
ಛಲಭಂಗಿಯಿಂದುರ್ಕ್ಕಿ ಸೊರ್ಕಿರ್ದ ವೀರವಪು
ವಾಯುಸುತನಂ ನೋಡಿ ನೋಡಿ. ಲಂಘನಕೆ ಸಮ
ರಂಗತಲಮಂ ಸಮೆಯುವಂತೊರಸಿದನ್ ಕಾಲ್ಗಳಿಂ
ಶಿಖರದಾ ಪೆರ್ಮರಂಗಳೆ ಕುರುಚಲಾದಡವಿ
ಪೊಡವಿಯಂ. ಚಲಿತ ಅಚಲದ ತರುಸಮೂಹದಿಂ
ಪೂವಾಲಿಗಲ್ಮಳೆಗರೆಯೆ, ತಲೆಯೆ ಬರಿದಾಗಿ,
ಮಲೆಯ ನೆಲಮಾದುದು ಕುಸುಮ ಶೋಭಿ, ಸಾಹಸಿಯ
ಆವೇಶಕೆತ್ತಿದಾರತಿಯಾಯ್ತಡವಿವೆಂಕೆ :         ೮೦
ಧೂಪಮಿಕ್ಕಿತು ಹಗಿನಗಂಪು ; ತೂರ್ಯಮಾದುದು
ವೀರಪೂಜೆಗೆ ನಗದ ಖಗಮೃಗ ಚಕಿತರಾವಂ.
ಮುಖಸೀಮೆಯಂ ಸುತ್ತಿಮುತ್ತಿ ದಿಟ್ಟಿಗೆ ತಡೆಯ
ಅಡಕಿರ್ದ ಬಾನ್ನೆತ್ತಿಯಾ ಮುಗಿಲ್ ಮೊತ್ತಮಂ
ಇರ್‌ಕಯ್ಗಳಿಂದೊತ್ತಿ ಔಂಕಿದನ್, ನೂಂಕಿದನ್ ;
ಮತ್ತೆ ಕೆದರಿದನತ್ತಲಿತ್ತಲಾ ತೂಪಿರುವ
ರೌದ್ರಪ್ರಭಂಜನೋಚ್ಛ್ವಾಸದಿಂ. ಮಹಿಮದಿಂ
ಮೇಘಮಂಡಲಕುರ್ಬ್ಬಿ ಬಳೆದ ಕಪಿಕುಂಜರಂ
ನಿಸ್ಸೀಮ ಲವಣಜಲ ನೀಲಿಮಾ ಸೀಮೆಯಂ
ಲಂಘಿಸಲ್, ತೊರೆದು ಗರಿಮದಾ ಗುರುಭಾರಮಂ,      ೯೦
ಲಘಿಮದಿಂ ಗರಿಹಗುರವಾದನಿಳಿದಾ ಹೊರೆಗೆ
ಪುಳಕಿಸಲ್ ತೃಣರೋಮಮುರ್ವರೆಗೆ. ಪೂರಕದ
ಮಾರ್ಗದಿಂ ತುಂಬಿದನ್ ಪ್ರಾಣಮಂ ; ಕುಂಭಕದಿ
ಬಂಧಿಸಿದನಂಬರವನೆಳೆದು ಪೀರ್ವಂತೆವೋಲ್
ಆ ಅಂತರಿಕ್ಷಾಂತರಂಗಿ. ಕೌಂಗಿನುದ್ದದಾ
ಪಂಚಾಸ್ಯಫಣಿಗಳೋಲಿರ್ದ ನಿಡುತೋಳ್ಗಳಂ
ಮೇಲೆತ್ತಿ ಚಾಚಿದನ್ ; ಮೇಣಳತೆ ಮೀರಿದಾ
ಲಂಬ ಲಾಂಗೂಲಮಂ ಸುರಳಿ ಬಿಚ್ಚಿದನೊಗೆದು
ಬೀಸಿದನ್, ಗಗನವನಳೆಯೆ ವಿಶ್ವಶಿಲ್ಪಿ ತಾಂ
ಬೆಚ್ಚಿಬೀಸಿದ ಮಾನಸೂತ್ರವೆಂಬಂತೆವೋಲ್ !            ೧೦೦
ಮುಂ ಪೇಳ್ವೆನೇನಾ ಅಭೌತಮಂ ?
ಕೇಳಿಮಾ
ಸಂಭ್ರಮಾಶ್ಚರ್ಯ ಭಯಚಕಿತ ಚಿಹ್ನೆಗಳಾಗಿ
ತೆರೆದ ಬಾಯ್ತೆರೆದ ಕಣ್ಣಾಗಸಕೆ ಮೊಗಮಾಗಿ
ನಟ್ಟವೋಲ್, ಮರವಟ್ಟವೋಲಿರ್ದ ಕಪಿ ಬೃಹದ್
ಧ್ವಜಿನಿಯಂ : ನೋಡುತಿರೆಯಿರೆ, ಬಿಚ್ಚಿದುದು ಬೆಸುಗೆ ಕಾಣ್
ಮಲೆಮುಡಿಗೆ ಮೇಣಂಜನೆಯ ಮಗನಡಿಗೆ ! ನಗಂ
ತೆಕ್ಕನೆಯೆ ಕೆಳಕೆಳಗಿಳಿದುರುಳ್ವ ತೆರನಾಯ್ತು,
ನಿಮಿಷಮಾತ್ರಂ ! ಪೃಥಿವಿಯಾಕರ್ಷಣೆಯ ಶಕ್ತಿ
ಗತಿಸಲ್ಕೆ ಬಾಂದಳಕೆ ಸಿಡಿವ ಪೃಥುಲಾಚಲದ
ಕೂಟದಂದದೊಳೇರ್ದುದಾಂಜನೇಯನ ಮಹಾ          ೧೧೦
ರಿಪು ಭಯಂಕರ ವಿಪುಲ ವಪುಪರ್ವತಂ ! ಕುಂಭಕಂ
ನಿರ್ಮಿಸಿದ ಶೂನ್ಯದಿಂ, ಯೋಗಿಯಾ ವೇಗದಿಂ,
ಸಂಭವಿಸಿತಾತನಂ ಪಿಂಬಾಲಿಪೊಂದುರುವ
ತಿರ್ರನೆ ತಿರಿವ ಸುಟ್ಟುರೆವೊನಲ ಭೋರಿಡುವ
ಬಿರುಗಾಳಿ ! ಹೋಹ ನಂಟನನಿನಿತು ದೂರಕ್ಕೆ
ಕಳುಹಿ ಬರಲವನೊಡನೆ ನಡೆವ ಮನೆಮಂದಿಯೆನೆ,
ನೆಗೆದ ಹನುಮನ ಕೂಡೆ ಬಂಡೆಗಿಡಮರಬಳ್ಳಿಗಳ್
ಪಾರಿದುವಿನಿತು ಗೆಂಟರ್ಗೆ. ಮತ್ತಮಂಬುಧಿಗೆ
ಗಮನಗೆಟ್ಟುರುಳಿದುವು, ಕವಿಕಲ್ಪನೆಯ ಕೂಡೆ
ಏರಲೆಳಸಿಯುಮೇರಲಾರದ ವಿಮರ್ಶಕನ     ೧೨೦
ಕಾಣ್ಮೆಯಿಲ್ಲದ ಬರಿಯ ಜಾಣ್ಮೆಯೋಲ್. ಆದೊಡಂ
ಪಲವಾತನಾ ಗಮನ ವೇಗ ಮಹಿಮೆಗೆ ಸಿಲ್ಕಿ,
ತಮ್ಮತನಮಂ ಮರುತ್ಸುತನ ತನುಗರ್ಪಿಸುತೆ,
ರಾಮದೂತನ ಮೆಯ್ಯನಪ್ಪುತಂಟುತೆ ನಭೋ
ಯಾತ್ರಿಗಳಾದುವೈ, ಕವೀಶ್ವರಾವೇಶಮಂ
ಕೊಂಕು ಬಿಂಕವನುಳಿದು ನೆಮ್ಮುವ ರಸಾಸ್ವಾದಿ
ಸಹೃದಯ ವಿನಯದಂತೆ. ಬಾಣಜವದಿಂದೇರ್ದು
ತೋರ್ಪುದನಿಲಾತ್ಮಜನ ಕುಸುಮಿತ ಕುಟಜ ಲತಾ
ರಚಿತ ರೂಪಂ, ನಭ ಸಮುದ್ರವನಲೆವ ಬೃಹದ್
ದ್ವೀಪ ಭೂಖಂಡದೋಲ್ ಅಖಚಿತಂ, ಅಸ್ಫುಟಂ,         ೧೩೦
ಭೀಮರಮ್ಯಂ, ದೈತ್ಯ ಸಂಕಟಕರಂ, ನೋಳ್ಪ
ವಾನರ ಸುಹೃಜ್ಜನರ ಹೃತ್ಕಮಲ ಸಂತೋಷ
ಘೋಷ ಸಂಭ್ರಮಕರಂ. ನೋಳ್ಪ ನೋಟದೊಳಡರಿ,
ಬರಬರುತೆ ಕಿರಿದಾಗಿ ತೋರಿ, ಮಾನುಷಮಾಗಿ,
ಮೇಲೆ ಮೆಲಕ್ಕೇರಿ, ಹಕ್ಕಿರೂಹಂ ಬೆತ್ತು,
ದೂರದೂರಕೆ ಹಾರಿ, ಚುಕ್ಕಿಯೋಲಂತಾಗಿ,
ಕೊನೆಗೆ ನೀಲವ್ಯೋಮತನುವಾದನೆಂಬಂತೆ
ವಾಯುಜಂ ಗೋಚರಾತೀತನಾಗಲ್, ದಿಟ್ಟಿ
ಸೋಲ್ತು ಹಿಮ್ಮೆಟ್ಟಿ ನೋಡಿದರೊರ್ವರೊರ್ವರಂ
ತಾಮೊರ್ವರೊರ್ವರ್ಗೆ ಪೊಸ ಪರಿಚಯಮೆನಲ್ಕೆ,         ೧೪೦
ಕೌತುಕ ಸಮಾಧಿಯಿಂದೆಳ್ಚತ್ತು ಸುಗ್ರೀವ
ಸೇನಾ ಸಮಷ್ಟಿ. ಮರುವುಟ್ಟಲಾ ಮಹಿಮೆಯಂ,
ರಸಮಂ, ಪರಾತ್ಪರವನನುಭವಿಸಿದಾತ್ಮರಿಗೆ :
ಮಹದ್‌ವ್ಯಕ್ತಿ ಸನ್ನಿಧಿಯೊ ? ಮಹತ್‌ಕಾವ್ಯ ಪರಿಚಯವೊ ?
ಮಹಾರುದ್ರವೀಣಾ ಮಹದ್‌ಗಾನದನುಭವವೊ ?
ಮಹಾ ವಾನರನ ವನಧಿ ಲಂಘನವೊ ? ಭೇದಮೇಂ ?
ಪುನರ್‌ಜನ್ಮವೈಸಲೆ ರಸಸ್ನಾತ ಚೇತನಕೆ !
ಅನಂತಾಕಾಶ ಸಂಗಿ, ಏಕಾಂಗಿ, ಅತ್ತಲಾ
ಭುವನೈಕ ಸಂಚಾರಿ ಗಮಿಸುತಿರ್ದನ್ ವಿಯದ್
ವಿಶ್ವಮಂ, ಬ್ರಹ್ಮಚರ್ಯವ್ರತಂ ಸಾರ್ಥಕಂ
ತಾನಪ್ಪವೋಲ್. ಮೇಲೆ ಸುತ್ತಲೆತ್ತೆತ್ತಲುಂ
ಕಣ್‌ಸೊಗಸಿದುದು ಅಚಂಚಲಮಂಬರದ ನೀಲಿ :
ಕೆಳಗೆ ದೂರದಿ ನೀರಧಿಯ ಚಂಚಲಾಂಚಲ
ಮೃದುಲ ನೀಲಿ ; ನಿರ್ವಿಕಲ್ಪದಿ ನಿರ್ಗುಣಾತ್ಮಮಂ         ೧೫೦
ಸಾಧಿಪದ್ವೈತಿಯೋಲೆಸೆದನನಿಲಾತ್ಮಜಂ
ಶೂನ್ಯಮಂ ಸೀಳಿ. ಗಾತ್ರಗೌರವದೆಳೆತಟಕೆ
ಸಿಲ್ಕಿದ ಸಮೀಪದ ಮುಗಿಲ್‌ಮೊತ್ತಮೊತ್ತಿತ್ತು
ಮುಮ್ಮೆಯ್ಗೆ, ಹತ್ತಿಯ ರಾಸಿ ಮಲೆಯ ನೆತ್ತಿಯಂ
ಮುತ್ತಿತೆನೆ ಮೆತ್ತಿ. ಮೇಣ್ ವಾಯುತಾಟಸ್ಥ್ಯಮಂ
ಬಿರುಗಾಳಿಗೊಳಿಸಿರ್ದುರುವ ಜವಕೆ ಚೆದರಿದುದು
ಗೆಂಟಗರೊಳಿರ್ದ ಜೀಮೂತ ಸಂದೋಹಮಳ್ಕಿ,           ೧೬೦
ತೋಳಮೆರಗಿದ ಮಂದೆಯಂತೆ. ಸಹ್ಯ ಪಂಕ್ತಿಯ
ಗಿರಿ ಗಿರಿಯ ನಡುವಣಾ ಕಂದರದ ಸಂಧಿಯೊಳ್
ಮುಂಗಾರ್ಮೊದಲ ಗಾಳಿ ನುರ್ಗ್ಗಿ ಭೋರ್ಗರೆವಂತೆ
ಘರ್ಜಿಸಿತು ಘೋರಾನಿಲಂ ಮರತ್ಸುತನೊಡಲ
ತೊಡೆಯ ಮೇಣ್ ತೋಳ್ಗಳ ಮೊದಲ ಕಣಿವೆಯಿರ್ಕಟ್ಟಿನೊಳ್
ದಾಳಿಟ್ಟು. ವೇಗ ಸಂಜಾತ ಝಂಝಾವಾತ
ಘಾತಕ್ಕೆ ತತ್ತರಿಸುತಲೆದುದಲೆಯಲೆಯುರ್ಕ್ಕಿ
ವಿಕ್ಷುಬ್ಧ ಸಾಗರದ ಘೇನಮಯ ನೀಲಿಮೆಯ
ರುಂದ್ರ ವರ್ತುಲ ವಕ್ಷ ವಿಸ್ತಾರಂ. ರಂಜಿಸಿರೆ    ೧೭೦
ಹಿಮಸಮಯದಪರಾಹ್ನ ರವಿರೋಚಿ, ಹನುಮಂತ
ದೇವನಾಯಕ ದೀರ್ಘಮಾ ಯೋಜನ ತತಿಯ ಬೃಹತ್
ತನುಚ್ಛಾಯೆ ಕಂಪಿಸುವ ಕಡಲೂರ್ಮಿಮಾಲೆಗಳೊಡಲ
ವಿಸ್ತೀರ್ಣಮಂ ಗುಡಿಸುತನುಗಮಿಸಿದುದು ತನ್ನ
ಮಾತೃಕೆಯ ಮೃತ್ಯುಜವಮಂ. ಬಡಗಣಾಸೆಯಿಂ
ತೆಂಕಣ್ಗೆರಗುವುಳ್ಕೆಯೋಲ್ ಬಾಲದುದ್ದಮಾ
ಲಂಕೆಗಂತಕ ಶಂಕೆ ತಾನಾಯ್ತು. ಹರೀಶ್ವರಂ
ತಾನೆತ್ತ ಚಲಿಸಿದೊಡತ್ತಲಳ್ಳೆ ಸೆಡೆತುದು ಕಡಲ್
ನೀರ್ಗಣಿವೆಯಪ್ಪವೋಲ್, ತೆರೆಯ ಗಿರಿಯೇಳ್ವವೋಲ್,
ವೀಚಿ ವೀಚಿಯನವ್ವಳಿಸಿ ಕಡೆದ ತುಂತುರ್ ಮಂಜು      ೧೮೦
ಸಿಡಿದು ಮುಗಿಲಾಗಿ ಮುಗಿಲೆಡೆಗೆ ಮೇಲೇಳ್ವವೋಲ್.
ಆ ಮುಗಿಲ್ ಇನಮರೀಚಿಯ ವರ್ಣತಂತ್ರದಿಂ
ಇಂದ್ರಚಾಪದ ಮಂಜುರಾಗದಿಂ ರಂಜಿಸುತೆ
ಸಿಂಗರಿಸಿದುದು ಯಶಃಪರಿವೇಷದೊಲ್ ವಾಯುಜನ
ರೋಮಾಂಗಮಂ : ಸುರರ್ ನಟ್ಟು ನೋಡಿದರೆನಲ್
ಪೆರ್ಚುಗೆಯದೇನಾ ಮಹತ್ಕಾರ್ಯನಿಷ್ಠಂಗೆ,
ಪೇಳ್‌, ಆಂಜನೇಯಂಗೆ ? ತಮಗೈಸಲಾ ದರ್ಶನ
ರಸಾಮೃತಂ !
ಇಂತಿಂತಿಂತು ಭೀಮ ರಮಣೀಯತೆಯ
ಆ ನಭಸ್ಸಾಗರಕ್ಷೋಭಿ ಯಾತ್ರೆಗೈದಿರೆ
ದೇಶಮಂ ಪಿಂಡುತೆ. ಕಿಮುಳ್ಚುತ್ತೆ ಕಾಲಮಂ.  ೧೯೦
ಕಂಡನೊಂದಾಶ್ಚರ್ಯಮಂ. ನಡುಗಡಲಿನಿಂದೆದ್ದ
ಗಿರಿರೂಪಿ ಮೈನಾಕನಂ. ವೈರಿಯೆಂದೆನುತೆ
ವಕ್ಷತಾಡನ ವಜ್ರದಿಂದಿಕ್ಕೆ, ಮುಳುಮುಳುಗಿ,
ತಿರ್ರನೆ ತಿರುಗಿ, ತತ್ತರಿಸಿ, ಮರಳಿ ಮೇಲೆದ್ದು
ಮೊಗದೋರಿ ಕೈಮುಗಿದು ಕರೆದನಾಹ್ವಾನಮಂ :
“ಮನ್ನಿಸೆನ್ನನ್, ಮಹಾಸತ್ತ್ವ, ಮೈನಾಕನೆಂ,
ಇಂದ್ರಕೋಪದ ಬಿರುಬಿನಿಂದೆನ್ನನುಳುಹಿದನ್
ನಿನ್ನಯ್ಯನಂದು. ನನ್ನಾತಿಥ್ಯಮಂ ಕೊಂಡು,
ನನಗೆ ಕೃಪೆಮಾಡಿ, ಮೇಣ್ ಹಸಿವು ನೀರಳ್ಕೆಯಂ
ದಣಿವಾರೆ ಕಳೆದು, ಮುಂಬರಿವುದೊಳಿತಯ್ಯ, ಗುರಿ      ೨೦೦
ದೂರಮಿದೆ ; ದಾರಿಯೊ ಮಹಾ ಸಂಕಟಾನ್ವಿತಂ ;
ನಿನ್ನ ದೌತ್ಯವನರಿತೆನನಿತಂ ಸಮುದ್ರನಿಂ ;
ಬಂದೆನಾತನ ಹಿತದ ನುಡಿಗೇಳ್ದು, ಪಿರಿಯತಿಥಿ,
ನಿನ್ನನಾದರಿಸೆ.”
ಮೈನಾಕನಂ ಮನ್ನಿಸುತೆ,
ಪಿಂತಿರುಗಿ ಬರ್ಪಾಗಳಾತಿಥ್ಯಮಂ ಕೊಳ್ವ
ಕೆಳೆವಾತನರುಹಿ, ಪಕ್ಷಿಗಾನದ, ಕಾನನದ
ಮಂಟಪದ, ಹೂ ತಳಿರ ತೋರಣದ, ನದನದಿಯ
ಕೊರಳಹಾರದ ಶೈಲಬಂಧುವಂ ಬೀಳ್ಕೊಂಡು
ಮುಂಬರಿದನಾ ವ್ಯೋಮರಥಿ, ಕರ್ತವ್ಯಕೋವಿದಂ,
ಸಿಂಧುಪಥಮಂ ಪಿಡಿದು, ಸ್ವಾಮಿಕಾರ್ಯಂ ಕುರಿತ       ೨೧೦
ಗಂತವ್ಯಕೆ.
ಬರುತಲಿರೆ, ಮಾರ್ಗದೊಳ್ ಸುರಸೆಯಂ,
ಕಡಲಿನಿಂದೆದ್ದು ಬಾಯ್ದೆರೆದಡ್ಡ ನಿಂದಳಂ,
ಮುರಿದವಳ ಶಾಪಂಗಳೆಯುತಾನಂದದಿಂ
ಬರ್ದಿಲವಟ್ಟೆಯೊಳೈತರುತಲಿರ್ದ ಹನುಮನಂ,
ದೂರದಾಕಾಶದೊಳ್ ಚುಕ್ಕಿಯೋಲಿರ್ದನಂ,
ತಿಳಿದಳಾ ಸಿಂಹಿಕೆ, ದಶಗ್ರೀವನಾಜ್ಞೆಯಿಂ
ಕಡಲ ಕಾವಲುಗಾರ್ತಿ, ಕಾಮರೂಪಿಣಿ, ಕಾಳಿ
ಛಾಯಾಗ್ರಾಹಿ ದನುಜೆ : ಬೀಸುತಿರ್ದುದು ಗಾಳಿ
ದಿಕ್ಕಲ್ಲದಾ ದಿಕ್ಕಿನಿಂದೆ ; ಅವೇಳಾನಿಲನ
ಬಿರುಬಿನುರುಬೆಗೆ ಕುದಿಯುತಿರ್ದುದು ಕಡಲ್‌ವೊಡಲ್,  ೨೨೦
ಕಡೆದವೋಲ್ ಮೇಣೊಡೆದವೋಲ್. ಪುಡುಕು ನೋಟವನಟ್ಟಿ
ಗುಡಿಸುತಿರೆ ಸಲಿಲ ವಿಸ್ತೀರ್ಣಮಂ, ಕರ್ನೆಳಲ್,
ಹನುಮನಾಯತ ದೀರ್ಘ ಬಹುಯೋಜನದ ಛಾಯೆ,
ನೊರೆವ ನೀರಂ ಕರ್ಪ್ಪುಗೈದು ಬರುತಿರ್ದುದಂ
ಕಂಡಳದ್ಭುತ ನಿಶಾಚರಿ. ಕಂಡಳೊಡನೊಡನೆ
ಕಣ್ಣಟ್ಟುತದರ ಮೂಲದ ವಿಯಚ್ಚಾರಿಯಂ.
ತುಡುಕಿದಳ್ ; ಪಿಡಿದಳಾ ನೆಳಲ ನೇಣಂ ; ಸೇದಿ,
ಗಾಳಿಪಟಸೂತ್ರಮಂ ಸೆಳೆವಂತೆ, ಸೆಳೆದಳಾ
ವ್ಯೋಮದೂರದ ಬೃಹದ್ದೇಹಿಯಂ !
ಅತ್ತಲಾ
ಆಂಜನೇಯಂ, ಬಾನೆಡವಿ ಮುಗ್ಗರಿಸಿದಂತೆ,   ೨೩೦
ಓಡುತಿರ್ದಾತನಾ ಕಾಲ್ಗುರುಳ್‌ಗಣ್ಣಿಯಂ
ಕುಣಿಕೆಯೆಸೆದೆಳೆದಂತೆ, ತೆಕ್ಕನೆಯೆ ತತ್ತರಿಸಿ,
ಗಾಲಿಯೋಲುರುಳುರುಳುರುಳಿ, ತಿರಿತಿರಿಗಿ ಪೊರಳಿ
ಸುತ್ತಿ ತಲೆಕೆಳಗಾದನಾ ರಕ್ಕಸಿಯ ಜರ್ಗ್ಗು
ಜರ್ಗ್ಗಿಸಿದ ತಡೆಗೆ ನಡೆಗೆಡುತೆ ತಡವರಿಸಿ ! ಏನ್
ಬಣ್ಣಿಸುವೆನಾ ಭಯಂಕರದ ಶಕ್ತಿ ಸಂಸ್ಪರ್ಧೆಯಂ
ರಾವಣನ ಕಿಂಕರಿಗೆ ಮೇಣ್ ಸೀತಾನಾಥ
ದೂತಂಗೆ ? ಕಡಲಲೆವ ಪಡಗುಪಡೆ ನೀರ್‌ಸುಳಿಗೆ
ಸಿಲ್ಕಿ ತಿರ್ರನೆ ತಿರುಗುತಿರ್ದೊಡಂ, ನಾವಿಕರ
ಶಕ್ತಿಯಿಂ ಧೈರ್ಯದಿಂ ಮತ್ತೆ ಚಾತುರ್ಯದಿಂ  ೨೪೦
ಮುಳುಗಲೊಲ್ಲದೆ ನಿತ್ತರಿಸಿ, ಮರಳಿ ಸುಳಿಯೊಡನೆ
ಮಲೆತು ಹೋರಾಟಮಂ ತೊಡಗುವೋಲಂತೆ ಆ
ಭೀಮವಿಕ್ರಮಿ ಜಗತ್‌ಪ್ರಾಣಪುತ್ರಂ, ತನ್ನ
ವೇಗದ ಉಪದ್ರವಕೆ ತಾನೆ ಗುರಿಯೆಂದದಂ
ತಡೆದು, ಪಡಿಸೆಣಸುತುರವಣಿಸಿ ನಿಂದನ್, ಕುರರಿ
ನೀರ್ಗೆರಗುವಾ ಮುನ್ನಮಂಬರದಿ ನಿಶ್ಚಲಂ
ಕಣ್ಗುರಿನಟ್ಟು ನಿಲ್ಪಂತೆ. ತನ್ನ ನಡೆತಡೆಗೆ
ಕಾರಣವನರಿಯದೆಯೆ, ದೈವಿಕವೊ, ರಾಕ್ಷಸವೊ
ಪ್ರಾಕೃತವೊ ಅಪ್ರಾಕೃತವೊ ಎನುತೆ ಬೆರಗಾಗಿ,
ಶರಧಿಯಾಕಾಶಗಳನೀಕ್ಷಿಸಿರೆ ಕಂಡುದಾ        ೨೫೦
ಸಿಂಹಿಕೆಯ ಪಾತಾಳಬಿಲ ಸದೃಶ ಭೂತಿನಿಯ
ಬಾಯಿ.
ನೆಳಲೆಳೆವಸುರಿ ಸೆಳೆದಳತ್ತಲ್, ಉಸಿರ
ಸೂತ್ರಂಬಿಡಿದು ಅಸುವ ಸೆಳೆವಂತೆ. ಇತ್ತಲಾ
ವಾನರೋತ್ತಮನೊತ್ತಿ ಜರ್ಗ್ಗಿದನ್, ಸಿಂಹಿಕೆಯ
ದಂಷ್ಟ್ರಗಳಲುಗುವಂತೆ. ಪಂದಿಯೋಲ್ ಹೂಂಕರಿಸಿ,
ಔಡುಗಚ್ಚುತೆ, ತನ್ನ ರಾಕ್ಷಸಾಧ್ಭುತ ಶಕ್ತಿಯಿಂ
ಸರ್ವಸ್ವದಿಂ ಸೇದಿದಳೊ ಸಿಂಹಿಕಾ ಚಂಡಿ !
ಸಿಂಹ ಗಜ ಗರ್ಜನಾ ಘೀಂಕಾರದಿಂದಾರ್ದು
ಬಾನ್‌ಕಡಲ್ ಬೆದರ್ವವೋಲ್, ತನ್ನ ದೈವಿಕಬಲಂ
ಪೆರ್ಚುವೋಲಾತ್ಮಾನುಸಂಧಾನಮಂ ಗೆಯ್ದು, ೨೬೦
ಸಂಯಮವನಭ್ಯಾಸಿಸುವ ಸಾಧಕನದೆಂತು
ಸರ್ವೇಂದ್ರಿಯಂಗಳಂ ದಿವ್ಯಾತ್ಮನೆಡೆಗೆಳೆಯೆ
ಹೋರಿ ಹೆಣಗುವನಂತೆ, ವೀರ ಮರುತಾತ್ಮಜಂ
ರಾಕ್ಷಸಾಕರ್ಷಣೆಯ ಗರ್ತದಿಂ ಪೊರಪೊಣ್ಮೆ
ಪ್ರತಿಭಟಿಸುತಾರ್ಭಟಿಸಿದನ್ ; ಜರ್ಗ್ಗಿ ಸೇದಿದನ್ ;
ಗಂಟಲ್ ಸೆರೆಗಳುರ್ಬ್ಬೆ, ಸಂಧಿ ಸಂಧಿಯ ನರಂ
ಹೆದೆಯೇರ್ದ ನಾರಿಯೋಲ್ ಬಲಿದು ಠಂಕೃತಿಗೆಯ್ಯೆ,
ವಜ್ರರೋಮಂ ನಿಮಿರಲೀಟಿಕೋಟಿಗಳೋಲ್,
ಸುವಿಸ್ಥಾರಿಸಲ್ ನೇತ್ರವಿಸ್ತೀರ್ಣ ಮಂಡಳಂ,
ರೌದ್ರತೆಯನಾನಲ್ ಮುಖಂ, ಸಂವ್ಯಾಪಿಸಲ್ ಬೃಹದ್ ೨೭೦
ವಕ್ಷವಿಸ್ತಾರಮುಚ್ಛ್ವಾಸದಿಂದಾ ವಾಯುಜಂ
ಗಗನಾಗ್ರದತ್ತಣ್ಗೆ ಕಿತ್ತು ಪೊತ್ತೆತ್ತಲ್ಕೆ
ಪ್ರಪ್ರಯತ್ನಿಸಿದನಾ ರಾತ್ರಿಂಚರಿಯ ಮಹೀ
ಭೂತ ಶವಭಾರಮಂ. ಶರಧಿತಲ ಪೀಠದಾ
ಭೂತಿನಿಯತುಲ ಗಾತ್ರಮರ್ಧಯೋಜನ ಮಾತ್ರಮಂ
ನಟಿಸುತೇರುತೆ, ಮರಳಿ ಭೋಂಕನೆ ಕೆಳಕ್ಕೆಳೆದು
ಪೊಕ್ಕುದಂಬುಧಿ ಗರ್ಭಮಂ. ಘಕ್ಕನೆಯೆ ಗುದ್ದಿ
ಕೆಳಗೊದ್ದವೋಲಾಗಿ ಬಿದ್ದನೊಂದೈದಾರು
ಯೋಜನಗಳಂ, ಬುದ್ಧಿ ಮಂಕಾದವೋಲ್, ತನ್ನ
ಇಂದ್ರಿಯಗಳಂ ಗೆದ್ದೆನೆಂದತಿಕ್ರಮಿಸಿದಾ        ೨೮೦
ಸಾಧಕನಧಃಪತನಮಿರ್ಮಡಿಸುವೋಲನಲಸಖ
ಸೂನು : ರವಿಗಾತ್ರಮಂ ನಗುವ ತಾರಾದ್ವಯಂ,
ಸಂಖ್ಯಾತೀತಮಾ ಜ್ಯೋತಿವತ್ಸರದ ದೂರದೊಳ್,
ವಿಶ್ವಾಂತರಿಕ್ಷದೊಳ್, ಯುಗಯುಗಾಂತರಕೊರ್ಮೆ
ಲಕ್ಷಯೋಜನ ನಿಕಟಮಾಗಲ್, ಪರಸ್ಪರಂ
ಸಂಕರ್ಷಿಸಲ್ ತೊಡಗಿದಪುವಯ್. ಶಿಖಿಜ್ವಾಲೆ
ಯೋಜನ ಸಹಸ್ರಮಂ ಲಂಘಿಸುತೆ, ಜಿಹ್ವೆಯಂ
ಚಾಚುತಾಕಾಶಮಂ ನೆಕ್ಕುತಿರೆ, ಮೆಲ್ಲನೆಯೆ
ಪ್ರಳಯನುರಾಗದಿಂದೊಂದನೊಂದಂ ಸೆಳೆದು
ಬಳಿಸಾರ್ವುವಾ ಮಂಡಲದ್ವಯಂ. ಆವೊಲಾ  ೨೯೦
ಸಿಂಹಿಕೆ ಹನುಮರಿರ್ವರುಂ, ತಾವೊರ್ವರೊರ್ವರಂ
ಸೆಳೆದು, ಹೊಣರಿದರೊರ್ವರೊರ್ವರಂ ಸೋಲಿಸುವ
ಛಲದ ವೀರ್ಯದ ಗರ್ವದಿಂ. ಗಾಳಗಾರನಾ
ಕೊಂಡಿಯೆರೆಯಂ ತಿಂದ ಬಾಳೆಮೀನಂ, ಒರ್ಮೆ
ಸಡಿಲ ಬಿಡುತಂ, ಒರ್ಮೆ ಸೆಳೆಯುತಂ, ಸೋಲಿಸುವ
ಮಾಳ್ಕೆಯಿಂದಸುರಿ ತನ್ನಂ ದಣಿಸಿ ನುಂಗುವ
ಉಪಾಯದಿಂ ಬಾಯ್ದೆರೆದು, ನರಕ ಕೂಪೋಪಮಂ
ಬಳಿಸಾರುತಿರ್ದುದುಂ ಕಾಣುತೆ ಸಮೀರಜಂ
ತನ್ನೊಡಲನಿರ್ಮಡಿಸಿದನ್. ಬಳೆದುದಸುರಿಯ ಬಾಯಿ
ಹನುಮ ಗಾತ್ರಕೆ ಸಮಂ ! ಬಳೆದನಿಮ್ಮಡಿಯಾಗಿ         ೩೦೦
ಮತ್ತೆ ಹನುಮಂ, ಮತ್ತಮಾ ರಕ್ಕಸಿಯ ಕಿಬ್ಬಿವಾಯ್
ಬಳೆದತ್ತವನ ತನುಗೆ ತಕ್ಕಂತೆವೋಲ್. ಅನಿಲಜಂ
ತೃಪ್ತಿಯೊಲ್ ಬೆಳೆದು ತುಂಬಿರೆ, ಪರಮ ಲೋಭದೊಲ್
ಹಿಗ್ಗಿ ಹಬ್ಬಿತು ಬಾಯಿ ಸಿಂಹಿಕೆಯ ! ಕೊನೆಯುಂಟೆ, ಪೇಳ್,
ಬ್ರಹ್ಮಾಂಡದಾನಂತ್ಯಮಿರಲಂತು ಬೆಳೆವುದಕೆ ?
ಆ ಕಡೆಗೆ ಕಡೆಯ ಕಾಣದೆ, ಹನುಮನೊಯ್ಕನೆಯೆ
ತಾಳ್ದನಣುರೂಪಮಂ, ಸಿಲ್ಕದಸುರಿಯ ಪಲ್ಗೆ
ಪಕ್ಕನೆಯೆ ಪೊಕ್ಕನಾಕೆಯ ಹೊಡೆಯ ಗಬ್ಬಕ್ಕೆ :
ಬಳೆದು, ಕರುಳಂ ಸೀಳ್ದು, ಕೊಂದು, ಪೋಳ್ದಾಕೆಯಿಂ
ಪೊರಮಟ್ಟನೆಂತೆನೆ, ಬಹಿಃಕ್ರಾಂತಿ ಸೋಲ್ತಡೇಂ          ೩೧೦
ಗೆಲ್ವುದಂತಃಕ್ರಾಂತಿ ತುದಿಗೆ !
ಕೆನ್ನೇರಿಂದೆ,
ಮೇಣಂತೆ ಬಯ್ಗುನೇಸರ್‌ವೆಳಗುಗೆಂಪಿಂದೆ
ಓಕುಳಿಯವೋಲೆಸೆದ ಮುನ್ನೀರಿನೊಳ್ ಮಿಂದು
ತೊಳೆದು, ಮೈಲಿಗೆವೋದ ಮೆಯ್ಯಂ ವಿಗುರ್ವಿಸುತೆ
ಮುನ್ನಿನದ್ಭುತಕೆ, ಮುನ್ನೆಗೆದನಾ ದಕ್ಷಿಣ
ದಿಗಂತ ಚರ ದೃಷ್ಟಿಯಾದಾ ಮಹದ್ ವಾನರಂ.
ದ್ಯುಮಣಿಯಸ್ತಾಂಬುಧಿಯೊಳಳ್ದುವಾ ಮೊದಲೆ ನಾಂ
ದೈತ್ಯ ಲಂಕಾದ್ವೀಪ ತಟಿಗೆ ಸೇರ್ದಪೆನೆಂದು
ಸೊರ್ಕ್ಕುದವಕದೊಳೆಯ್ದುತಿರೆ, ಬಾನ್‌ಕಡಲ್ ಕರೆಯ
ಗೆರೆಯ ಪಡುವಲದಂಚಿನಿಂದೋರೆಗದಿರಾಗಿ   ೩೨೦
ನೋಡುತಿರ್ದನ್ ದಿವಸಪತಿ, ತನ್ನ ವಂಶಕ್ಕೆ
ಮಂಗಳವನೆಸಗುವಾತಂಗೆ ನೆರಮಪ್ಪವೋಲ್
ಮೋಹದಿಂ ನಿತ್ಯಕರ್ತವ್ಯದಾ ವೇಗಮಂ
ನಸು ತಡೆದಿನಿತು ತಳುವಿ ನಿಂತಂತೆ. ಕಪೀಶ್ವರಂ
ಪಾರುತಿರ್ದುದುತ್ತುಂಗದೆಳ್ತರಕೆ ತುಹಿನ ಋತು
ಸಂಧ್ಯೆಯಾ ಚಳಿಕುಳಿರ್ ಪೆರ್ಚಿರಲ್ ಮೇಣಿರುಳ
ಮೊದಲ ಮೆಟ್ಟುಂಗಾಲ ತುದಿವೆರಳಡಿಯ ಕರ್ಪು ತಾಂ
ನಡೆಯ ತೊಡಗಿರಲಿಳೆಯ ನಿಮ್ನಸ್ಥಲಂಗಳೊಳ್,
ಕಿಡಿಯರಿಲ್ಗಳ್ ಮೊಗಂದೋರಲಾರದೆ ನಾಣ್ಚಿ
ಕಾಯ್ದಿರಲಿನಾಸ್ತದ ಮುಹೂರ್ತಮಂ, ಮೌನದಿಂ          ೩೩೦
ಧ್ಯಾನಮಯಮಾಗಿರಲ್ ಪಗಲನಗಲುವ ಜಗದ
ಕಳ್ತಲೆವೆಳಗು ಸಂಧಿಸಮಯಂ, ಸಮೀರಜಂ
ಕೇಳ್ದನೊಂದತುಲ ಸಂಗೀತಮಂ, ಇಂಚರದ
ಜೇನ್‌ತೊರೆಯ ಲೀಲಾತರಂಗದುಯ್ಯಾಲೆಯೊಳ್
ಜೋಗುಳವೆರಸಿ ತೂಗುವ ತೆರದಿ ತೊಟ್ಟಿಲೊಳಿಟ್ಟು
ತನ್ನನಿತುಮಂ ! ಜೋಂಪಿಸಿತು ಮನಂ. ಜೋಲ್ದೊಡಲ್
ಮೆಲ್ಲಮೆಲ್ಲನೆ ಗರಿಹಗುರಮಾಯ್ತು. ಕಣ್ಮಲರ್
ಗೇಯದ ಸುಖಾನುಭವಕರೆಮುಚ್ಚಿದುದು : ಕನಸೊ
ನನಸೊ ? ಕಂಡುದು ಕೆಳಗೆ ಕಡಲೆದೆಯ ಮೇಲೊಂದು
ಹೊನ್ನಿನ ಚೆಲುವ ತಾವರೆಯ ದೀವಿ. ಸೊಡರುರಿಯ     ೩೪೦
ಮಿಳ್ತು ಸೊಬಗಿಂಗೆರಗಿ ಸೀಯುವ ಪತಂಗದೋಲ್
ಒಯ್ಯನಿಳಿದಿರೆ ಮಹಾಮತಿ ಅಲ್ಪಮತಿಯಂತೆ,
ಕೇಳ್ದುದೊಂದಶರೀರ ವಾಣಿ : “ಹೇ ಹನುಮಂತ
ದೇವ, ನಿನಗೇತಕೀ ಮೋಹಂ, ತಮಂ, ನಿದ್ರೆ ?
ಬಲಕೆ ಸೋಲದ ಕಲಿಗಳಂ ಕಲೆಯ ಬಲೆಯೊಡ್ಡಿ
ಕೊಲ್ವ ಕೃತ್ರಿಮವಲಾ ಈ ಪದ್ಮಲಂಕೆ ! ಕೇಳ್,
ಇಂದ್ರಿಯಸುಖಕೆ ಇಂದ್ರನಂದನದವೋಲಿದಂ,
ಪದ್ಮಲಂಕೆಯ ಪೆಸರ ಛದ್ಮನೆಯ ಸದ್ಮಮಂ,”
ಒಡ್ಡಿರುವನಿಂದ್ರಜಿತು, ರಾವಣಸುತಂ, ಮಹಾ
ಮಾಯಾವಿ, ಮೇಧಾವಿ, ಮೇಘನಾದಂ. ಯೋಗಿ          ೩೫೦
ನೀನಾದೊಡಂ ಭೋಗ ಭೋಗಿಯಪ್ಪುಗೆಯಿಂದೆ
ಮುಕ್ತನಪ್ಪುದು ಕಷ್ಟಸಾಧ್ಯಮಲಾ ! ಸುಗ್ರೀವ
ಕಾರ್ಯಮಂ ಭಂಗಿಸದಿರೀ ಪದ್ಮಲಂಕೆಯಂ
ಪೊಕ್ಕು. ಸಿಂಹಿಕೆಯಿಂದೆಯುಂ ಕಠಿನಮೀ ಶತ್ರು ;
ಏಕೆನೆ ಮಿತ್ರವೇಷಿ. ತನ್ನ ದೌರ್ಬಲ್ಯದಿಂ
ತಾನೋಡಿ ಪಾರಾಗುವಂತೆ ನೀನಿಲ್ಲಿರದೆ
ನಡೆ, ಓಡು, ಬೇಗದಿಂ. ಇಂದ್ರಿಯದ ಲೋಕದೊಳ್
ಆತ್ಮಪತನಕೆ ಸಾಹಸದ ಸೋಗುಮೋರೊರ್ಮೆ
ನೆರಮಪ್ಪುದಯ್ !” ಗಗನವಾಣಿಯೋಲೆಳ್ಚರಿಕೆಯಂ
ಪೇಳ್ದ ರವಿದೇವನಾಣತಿಗೆ, ತೆಕ್ಕನೆ ತಮಂ     ೩೬೦
ತವಿದು, ನಿದ್ದೆಗಳೆದೋಲೆದ್ದ ಮರುತಾತ್ಮಜಂ
ಪುಟನೆಗೆವ ಪೊಡೆಸೆಂಡಿನಂತೆ ಚಿಮ್ಮುತೆ ಬಾನ್ಗೆ,
ಮರಳಿ ಹುರಿಗೊಂಡು ಮುಂಬರಿದನಾ ಶೂನ್ಯಮಂ
ವೇಗವಿಕ್ರಮದಿಂದಮಾಕ್ರಮಿಸಿ.
ಅನಿತರೊಳ್
ಪಯೋಧಿ ಪಶ್ಚಿಮ ಹರಿದ್ರೇಖಾ ಚಲಜ್ಜಲಂ
ಜಾಜ್ವಲಿಸಿದುದು, ಜಾತರೂಪಂ ದ್ರವೀಭವಿಸಿ
ಸಲಿಲ ತರಳತೆಯಿಂ ಸಲೀಲತೆಯನಾಂತವೋಲ್,
ತೆರೆಯ ಮಿಂಚಿನ ಪೊರೆಯ ಕಾಂಚನ ಸರೀಸೃಪಂ
ಚಂಚಲಿಸುವಂತೆವೋಲ್. ಫಣಿಶಿರೋಮಣಿಯಂತೆ
ಪೊಳೆದುದರ್ಧ ನಿಮಗ್ನಬಿಂಬ ರವಿಮಂಡಲದ
ವರ್ತುಲಾಗ್ರಂ. ಇನಸ್ಪರ್ಧಿ ಆಂಜನೇಯಂ
ಬೇಗ ಬೇಗನೆ ಸಾಗುತಿರೆ, ಮಂಜು ಸಂಜೆಯಾ
ದಕ್ಷಿಣ ದಿಶಾ ದೂರದಪ್ರಕಟ ತಟದಲ್ಲಿ ಓ
ಈಷತ್ ಪ್ರಕಟವಾಯ್ತು ದ್ವೀಪೋರ್ವರಾ ವಿಪಿನ
ಘನಸಾಂದ್ರ ಶೈಲರಾಜಿಯ ನೀಲರಮಣೀಯ
ರೇಖೆಯಾಹ್ವಾನ ! ಹರ್ಷೋಲ್ಲಾಸದುರ್ಕಿನಿಂ
ತಾನುಮಂಬುಧಿಯಂತೆವೋಲುರ್ಕುತರ್ಕನಂ
ವಂದಿಸುತೆ, ‘ಸಲ್ಗೆ ಸುಗ್ರೀವಾಜ್ಞೆ ! ಗೆಲ್ಗೆ ರಘು
ರಾಮೇಚ್ಛೆ ! ಮಾತೆ ಸೀತಾಕ್ಷೇಮ ಶುಭವಾರ್ತೆ
ನನ್ನ ಮುಡಿಗೇರ್ಗೆ ! ಕಪಿಕುಲ ಕೀರ್ತಿ ಚಿರಮಕ್ಕೆ !’        ೩೮೦
ಎನುತಟ್ಟಹಾಸದಿಂ ಭೀಮಘೋಷಂಗೆಯ್ದು
ಮುಂಬರಿಯುತಿರೆ, ಸಾರೆಬಂದುದು ಕನಕಲಂಕೆ !
ಆರು ಬಣ್ಣಿಸ ಬಲ್ಲರಾಂಜನೇಯನ ದೃಷ್ಟಿ
ಕಂಡುದಂ, ಮೇಣ್ ಚಿತ್ತಮೊಳಕೊಂಡುದಂ ? ಹಿಗ್ಗಿ
ಕಂಡನಾಕಾಶದೆಳ್ತರದಿಂದೆ ಲಂಕೆಯಂ,
ಬೈಗುಗಪ್ಪಪ್ಪಿರ್ದುಮುಜ್ಜ್ವಲಿಸುತಿರ್ದಾ
ಸಮುದ್ರವೇಲಾಸ್ಥಗಿತ ದೈತ್ಯನೃಪ ನಗರಿಯಂ,
ಜಟಿಲಕೌಶಲ ರಚಿತ ದೀಪಸ್ತಬಕ ಖಚಿತಮಂ
ವಿಸ್ತೀರ್ಣಮಂ. ಬಾನೊ ? ಮೇಣದರ ಪಡಿನೆಳಲೊ ?
ಶಂಕೆಗೆಡೆಗೊಡುವಂತಿರಿರ್ದುದು ಬೃಹನ್ನಗರಿ,  ೩೯೦
ಚುಕ್ಕಿಚುಕ್ಕಿಯ ಹಾಸುಹೊಕ್ಕಿಂದೆ ಕಿಕ್ಕಿರಿದ
ಅಸಂಖ್ಯ ನಕ್ಷತ್ರಮಯದಮೃತಪಥದಂತೆವೋಲ್,
ಮೇಧಾವಿಗುಂ ಭ್ರಾಂತಿ ತೋರ್ಪಂತೆ. ರೋಷಮುಂ
ಸಂತೋಷಮುಂ ಕೂಡೆ ಮೂಡುತಿರಲೆದೆಯಲ್ಲಿ,
ನೆನೆದನು ದಶಗ್ರೀವ ಪಾಪವೈಭವ ಮಧ್ಯೆ
ಸೆರೆಸಿಲ್ಕಿದವನಿಜಾತೆಯ ಪುಣ್ಯಕಾನ್ತಿಯಂ.
ತನ್ನಾಗಮನ ಶಂಕೆ ಸಂಭವಿಸದಿರ್ಕೆಂದು
ಬರಬರುತೆ ಕಿರಿದುಗೈಯುತೆ ತನ್ನ ಗಾತ್ರಮಂ
ಇಳಿದನುಲ್ಕೆಯ ವೇಗದಿಂ, ಚಕ್ರಗತಿಯಿಂದೆ :
ದೇವಪಥದಿಂ ರಾಕ್ಷಸರ ನೆಲಕ್ಕಿಳಿಯುತಿರೆ      ೪೦೦
ಪೆರ್ಚಿದುದು ತಿಮಿರಸಾಂದ್ರತೆ ಸುರುಳಿಸುರುಳಿಗುಂ. ಮೇಣ್
ದಶಶಿರಪ್ರತಿಭಟನೆ ಮೇಲ್ವಾಯೆ ನುರ್ಗ್ಗಿತೆನೆ, ಮೇಣ್
ಧರಣಿಜಾ ಪ್ರಾರ್ಥನಾಶೀರ್ವಾದಮಿದಿರುಗೊಳೆ
ಬಂದುದೆನೆ ಧಾವಿಸಿತ್ತೇರ್ದು ತನಗಭಿಮುಖಂ
ಆ ದ್ವೀಪಧಾತ್ರಿ : ನೆಲದಿಂದೆ ಬಾನ್ಮೊಗಮಾಗಿ
ರಭಸದಿಂ ಬೀಸಿದುದು ಸುಯ್ಗಾಳಿ, ತಣ್ಪೊತ್ತಿ
ಮೆಯ್ಗೆ ; ಕೆಳಕೆಳಗಿಳಿದು ಭೂಮಿ ಬಳಿಸಾರ್ದಂತೆ
ನೆಲದುಸಿರ ಬಿಸುಪು ಪೆರ್ಚುತೆ ವಾಯುಮಂಡಲಂ
ಬರಬರುತ್ತುಷ್ಣತರಮಾಯ್ತು ; ನಕ್ಷತ್ರಗಳೆ
ದಟ್ಟಯಿಸಿ ರಂಗವಲ್ಲಿಯನಿಕ್ಕಿದೋಲಿರ್ದ        ೪೧೦
ಲಂಕಾ ನಗರ ದೀಪಕುಲದ ನಿಬಿಡತೆಯಳಿದು
ಸಮನಿಸಿತು ವಿರಳತೆಯ ನಿರತೆ ; ಬಾನೆತ್ತರದ ಆ
ಸದ್ದಿಲಿತನಂ ಮಾಣ್ದು, ಬಂದುದೊಯ್ಯನೆ ಕಿವಿಗೆ
ಮರ್ತ್ಯ ನಾನಾ ನಿನದ ಗೋಷ್ಠಿಗಾನಂ ; ಹತ್ತಿರಕೆ
ಹತ್ತಿರಕೆ, ಕುದುರೆಪಡೆ ಜವದಿಂದೆ, ಗುಂಪೊತ್ತಿ
ಮೇಲ್ವಾಯ್ದುಬರೆ ಕವಿದ ಪಿಂಬಯ್ಗುಗರ್ಪಿನಾ
ಶಿಖರ ಕಂದರ ವೃಕ್ಷ ವೃಕ್ಷದ ಅವಿವಿಧತಾ
ಪೃಥಿವಿ, ಸಂಯಮಿಸಿದನ್ ತನ್ನ ಜವಮಂ ; ಮತ್ತೆ,
ನೆಲಕಿಳಿವ ಮುನ್ನಮೆಂತುಟು ಪಕ್ಕಿ ಲೆಕ್ಕಿಪುದೊ
ತನ್ನೆರಗುದಾಣಮಂ, ತಾನುಮಂತೆಯೆ ಪುಡುಕಿ           ೪೨೦
ವಿಜನಗೋಪ್ಯದ ಶೃಂಗದುನ್ನತದ ರಂಗಮಂ,
ಸುರುಳಿಸುರುಳಿಯೊಳಲೆದು ಮೆಲ್ಲನತಿಜತನದಿಂ
ಲಂಬವೆಂಬಾ ಶಿಖರಕವತರಿಸಿದನ್, ಕೇಳ್ ತನ್ನ
ನರ ರೂಪದಿಂ !
ಗೋಚರಿಸದಿರ್ದೊಡೇಂ ಕಣ್ಗೆ ?
ಘ್ರಾಣಕೈತಂದುದಯ್ ಕೇತಕಿಯಲರ ಕಂಪು ;
ನೀರ್‌ನೆಲೆಗಳಂ ಸೂಚಿಸುತೆ ತೀಡಿದುದು ತಂಪು
ಗಾಳಿ ; ಸೊಗಸಿತು ಮುಂದೆ ದೀಪಮಾಲಾಶೋಭಿ
ಲಂಕಾ ತ್ರಿಕೂಟಾದ್ರಿ; ಕೇಳ್ದುದಂತೆಯೆ ಪುರದ
ಘೋಷದ ಮಂದ್ರ ಮರ್ಮರಂ, ಮೊರೆವೆರಸಿ
ಶರಧಿಯಾ : ಶೂನ್ಯದಿಂದಿಳಿದಂಜನಾಸುತಗೆ  ೪೩೦
ಪಂಚೇಂದ್ರಿಯಂಗಳ್ ಪುನರ್ಜನ್ಮವಡೆದವೋಲ್
ಪೊಸತಾಯ್ತು ಈ ಪೃಥಿವಿ ! ನೋಡಿದನ್ ಮೊಗವೆತ್ತಿ
ತನ್ನ ಯಾತ್ರೆಯ ಮಹನ್‌ಮಾರ್ಗಮಂ : ಸಮೀಪದೊಳ್
ತಾನಿರಲ್ ನಾಣ್ಚಿ ಮರೆಯಾಗಿರ್ದ ಚುಕ್ಕಿಗಳ್,
ಕಳ್ತಲೆಯ ದೂರಕ್ಕೆ ತೊಲಗೆ ತಾಂ, ಕೆಚ್ಚುದಿಸಿದೊಲ್
ಲೆಕ್ಕದಾಚೆಗೆ ಮಿಕ್ಕು ಮೂಡಿ ಕಿಕ್ಕಿರಿಗೊಂಡು
ತುಂಬಿರ್ದುವಂಬರಕೆ ಕಿಡಿ ಕೆತ್ತಿದೋಲ್ ! ಮುನ್ ತನಗೆ
ಹದನಾವುದೆಂದು ವಿಶ್ರಾಂತಿಸುತೆ ಚಿಂತಿಸಿರೆ,
ಮೈದೋರ್ದುದಾಶಾ ದಿಗಂತದೆಡೆ, ಶಾಂತಿಮಯ
ದೇವದಯದೋಲ್, ಚಂದ್ರೋದಯದ ಕೋಕನದ ಕಾಂತಿ,        ೪೪೦
ಜಯರತಿಯ ಕೈಯಾರತಿಯ ರೋಚಿಯೋಕುಳಿಯವೋಲ್ !