ಆಂಜನೇಯನ ಬರವಿಗಂಜಿ ಲಂಕಾರಾತ್ರಿ
ವಿಕಂಪಿಸುತೆ ಬೆಳ್ಪೇರ್ದುದಂ ತೋರ್ಪ ಮಾಳ್ಕೆಯಿಂ
ಶ್ವೇತಮಾದುದು ಮುಖಂ ಶೀತಲ ನಿಶೀಥಿನಿಗೆ
ನಾಥನೈತಹ ನಾಣಿಗೆಂಬಂತೆ. ಇಂದ್ರದಿಶೆ ತಾಂ
ನಿಶೆಯ ನೀಲಿಯ ನಯನ ನೈದಿಲೆಯನಲರಿಸಲ್
ತಗುಳಿದುದು ಮುಗಿಲಿನಂಚಿಗೆ ಬೆಳ್ಳಿನೀರ್, ಶಶಿಯ
ಚಳಿಗದಿರ್ಗಳ ಕುಳಿರ್‌ಕಾಂತಿ. ಕಿರುತಾರೆಗಳ್
ಮೆಯ್ಗರೆದುವುಳಿದ ಪೇರರಿಲುಗಳ್ ಕಳೆಗುಂದಿ
ವಿನಯದಿಂ ದೂರದೂರಕೆ ಸರಿದು ನಿಂದುವು
ನಿಶಾಕಾಂತನಾಗಮನ ಗೌರವಕೆ. ಮೂಡಿದುವು
ನಿಡುನೆಳಲುಗಳ್ ಗಿಡಕೆ, ಮರಕೆ, ಬಂಡೆಗೆ, ಮತ್ತೆ
ಭೀಮವಿಕ್ರಮಿ ಭೀಮತನು ಭೀಮಚಿತ್ತದಾ
ಭೀಮ ಭೂಜ ಸ್ಥಾಣು ಸಮ ವಾನರೋತ್ತಮನ
ಭೀಷ್ಮದೀರ್ಘತೆಗೆ. ತೂರಿ ಬಂದೋರೆಗದಿರಿಂ
ತರುಸಾಂದ್ರತೆಯನಾಶ್ರಯಿಸಿದಂಧಕಾರಮುಂ,
ಜಾಳಂದ್ರಮಾದವೋಲ್, ರಂಧ್ರರಂಧ್ರಂಗೊಂಡು
ಜರ್ಜರಿತಮಾಯ್ತು. ತಿಮಿರದ ತೆರೆಯನೆತ್ತುತ್ತೆ
ಮೈದೋರಿದನು ಶೈಲಕಾನನ ಶಿರಶ್ಚುಂಬಿ,
ಕುಳಿರ ಮಂಜಿನೊಳಿನಿತು ಪಾಲ್‌ಮರ್ಬಿನಿಂದೆಸೆವ
ಪಾದರಸ ಬಿಂಬಿ, ಶಿಶಿರ ಶಶಿ, ಚಂದ್ರರೋಚಿಗೆ ೨೦
ನಲಿದು ನರ್ತಿಸಿ ಚಂಚಲಿಸಿದವು ತರಂಗತತಿ,
ಕಾಂಚನ ಲಸತ್‌ಕೃತಿಗೆ ಮಿಂಚುವ ಮಹಾಂಬುಧಿಯ
ತೆರೆಯ ತೇಜಿಯ ಪಾಯ್ವ ದಳದಂತೆ. ಕಣ್‌ಸೆಳೆದು
ಶೋಭಿಸಿತು ಆ ಶರಧಿತೀರಮಂ ಸಿಂಗರಿಸಿ,
ಬೆಳ್ದಿಂಗಳೊಳ್ ಮಿಂದ ಶಿಖರತ್ರಯಂಗಳಂ
ತಳ್ಕೈಸಿ ನಿಂದ ಗಿರಿ ವನ ನಗರಿ, ದೈತ್ಯೇಂದ್ರ
ದಶಶಿರ ಕನಕಲಕ್ಷ್ಮಿಗಾಡುಂಬೊಲಾಗಿರ್ದ
ಲಂಕಾತ್ರಿಕೂಟಾಚಲಂ.
ನಿಂದು ನಿಡುವೊಳ್ತು
ನೋಡಿದನ್ : ಕೊಂಡನಾ ಲಂಕಾ ಸಮಷ್ಟಿಯಂ
ದೃಷ್ಟಿಯ ವಿಹಂಗಮವನಟ್ಟಿ : ಮಕುಟತ್ರಯ    ೩೦
ಮಹೋನ್ನತಿಯ ರಾಕ್ಷಸಶ್ರೀಯ ದುರ್ಗಮ ಪುರದ
ದುರ್ಗಮಂ, ಕಾಣುತೈಂದ್ರಿಯ ಸುಖಸ್ವರ್ಗಮಂ,
ನಾಗರಿಕ ಪಟ್ಟಣ ಪ್ರಥಮದರ್ಶನದಿಂದೆ
ಗ್ರಾಮೀಣತೆಯನನುಭವಿಪ ಅಸಂಸ್ಕೃತಿಯಂತೆ,
ಸುಯ್ದನು ನಿರಾಶೆಯಿಂ. ಪೊಣ್ಮಿದುದು ಬೆರಗುನುಡಿ
ನಿರ್ವಿಣ್ಣತಾ ಖೇದದಿಂ : “ಇದೆ ಕನಕಲಂಕೆ ?
ಇದೆ ದಶಗ್ರೀವ ಬಿರುದಿನ ಮಹಾ ರಾವಣನ
ದೈತ್ಯಪುರಿ ? ದಿಟಮಲ್ತೆನಗೆ ಶಂಕೆ ! ಕೇಳ್ದ ಆ
ಬಣ್ಣನೆಗೆ, ಕಾಣ್ಬ ಈ ಕಾಣಿಕೆಗೆ, ಸಮತೆಯೇಂ ?
ಪೋಂತಾನೆಯಂತರಂ ! ಕೇಳ್ದ ರೂಕ್ಷತೆಯೆಲ್ಲಿ ?          ೪೦
ನಾಂ ಕಾಣುವೀ ಕಲೆಯ ಕುಶಲತಾ ನಯಮೆಲ್ಲಿ ?
ಆ ಚಿತ್ರಿಸಿದ ರಾಕ್ಷಸರ ವಿಕೃತಿಯೆತ್ತಲೀ
ಕಣ್ಗೊಳಿಪ ನಾಗರಿಕತಾ ಪ್ರಕೃತಿಯೆತ್ತಲೇಂ
ತಪ್ಪಿದೆನೊ ? ತಪ್ಪಿ, ಲಂಕೆಯನುಳಿಯುತನ್ಯಮಂ
ಪೊಕ್ಕಿಹೆನೊ ದೇವತಾಭೂಮಿಯಂ ? – ಅಮರೆಯಂ ?
ಅಲಕೆಯಂ ? ಮೇಣರಿಯದಾವುದೋ ಗಂಧರ್ವ
ಲೋಕಮಂ ? ಮೇಣ್ ಕಿನ್ನರ ಪ್ರಾಂತಮಂ ? – ಛಿಃ, ಭ್ರಾಂತಿ
ನನಗಿದೇಂ ? ದಿಟಮಿದೆ ಕನಕಲಂಕೆ ? ಅಲ್ಲದಿರೆ,
ಇಂದ್ರಜಿತು ಪಿತಗಲ್ಲದೀ ವಿಭವಮಿನ್ನಾರ್ಗೆ
ಸಾಧ್ಯಂ ? ಕುಬೇರನಂ ಸೂರೆಗೆಯ್ದಂಗಿದೇಂ   ೫೦
ಬರಿಯಲ್ಪಮೈಸೆ ? ಪರಸತಿಗಳುಪುವಳಿಯಾಸೆ
ಈ ಸಿರಿಯ ಸೊರ್ಕಿಗಲ್ಲದೆ ಸಲ್ಲದಿತರತೆಗೆ : – ಚಿಃ
ಪೊಲ್ಲಮೀ ವೈಭವಂ ! ಸಲ್ಲದೀ ನಾರಕಕೆ,
ಪೊನ್ನಾದೊಡಂ, ಪೊಗಳ್ಕೆ ! – ದುರ್ಗಂ ದಿಟಂ ಲಂಕೆ !
ಮುನ್ನಮ್ ; ಇನ್ನಲ್ತು ! – ಎಮಗೆ, ಸೋಲ್ತೊಡಂ ಗೆಲ್ದೊಡಂ,
ಸ್ವರ್ಗಂ ದಿಟಂ ಲಂಕೆ ! – ಪೂಜ್ಯೆ ಸೀತಾದೇವಿ
ತಾನಿರ್ಪಳನ್ನೆಗಂ ಸ್ವರ್ಗಮೆ ದಿಟಂ ಲಂಕೆ !
ದಾನವರ ದುರ್ಗವೋ ? ದೇವತಾ ಸ್ವರ್ಗವೋ ?
ಏನಾನುಮಕ್ಕೆ ! ಪೊಕ್ಕು ನೋಳ್ಪೆಂ !”
ತರಿಸಂದು
ಗಿರಿಯನಿಳಿದನು ಸಮೀರಾತ್ಮಜಂ. ರೋಷಕ್ಕೆ,            ೬೦
ಗಜ ಘಟಾ ಗೋಷ್ಠಿಯಂ ಪುಡುಕಿ, ಗರ್ಜನೆಯುಡುಗಿ,
ಭೀಷ್ಮದೃಢ ನಿಶ್ಚಯದ ಸಿಡಿಲುಸಿರ್‌ಮೋನದಿಂ
ಬೇಂಟೆಯಾಡುವ ಸಿಂಹಮಡವಿ ಪಳುವಂ ಸೀಳ್ದು
ನುರ್ಗ್ಗಿ ನಡೆವಂತೆ, ತಿಂಗಳ್ ಬೆಳಕಿನೊಳ್ ಮುಳುಗಿ
ನಿಂದ ನಾನಾ ಮಹಾ ತರುರಾಕ್ಷಸರ ಮಧ್ಯೆ
ಚರಿಸಿದನ್, ಕಿಡಿಸಿ ಮಿಗನಿದ್ದೆಯಂ. ಕಿಬ್ಬಿಯಂ
ದರಿ ಕಂದರಂಗಳಂ ದಾಂಟಿ ನೆಗೆದೇರ್ದಿಳಿದು
ಸಾಗಿರಲ್, ಮುಂದೆ ಮಲೆತುದು, ಸಿಡಿಲ ಪುರ್ಬುಗಳ್
ಗಂಟಿಕ್ಕಿದೋಲ್, ಕೋಂಟೆ ಹೊರವಳಯದಾ. ಬೃಹದ್
ಭಿತ್ತಿಯ ಮೊದಲ್ಗೆ ಸೇರ್ದದರ ಬಾನ್‌ಮೀಂಟಿರ್ದ          ೭೦
ಕೊತ್ತಳಂಗಳನೀಕ್ಷಿಸುತ್ತೆ ಸುಯ್ದನ್ ಮೆಚ್ಚುತಾ
ದೈತ್ಯ ಕೃತಿಯಂ : “ಪುಗುವೆನೆಂತಿದಂ ?…. ಈ ನನ್ನ
ಸಾಮಾನ್ಯರೂಪದಿಂ ನೆಗೆಯಲ್ಕುಮಸದಳಂ !….
ಪ್ರಾಕೃತಂ ಸೋಲ್ತ ಮೇಲಲ್ತೆ ಅಪ್ರಾಕೃತಕೆ
ಆಹ್ವಾನಂ !…. ರಾವಣನ ಕರ್ಮಮಾರ್ಗಂ ತಗದು
ರಾಮಸತಿಯನ್ವೇಷಣೆಗೆ, ನನಗೆ, ಚೌರ್ಯದೊಲ್
ಬಟ್ಟೆಯಲ್ಲದ ಬಟ್ಟೆಗೊಲಿಯೆನ್ ಅಪಥ್ಯಮಂ :
ಬ್ರಹ್ಮಚರ್ಯಕೆ ಯೋಗ್ಯಮಸ್ತೇಯ ಪಥಮೆ ದಲ್ !….
ಸುತ್ತಿ ನೋಳ್ಪೆನ್ ಪುರದ ಪೆರ್ಬಾಗಿಲಿರ್ಕ್ಕೆಯಂ….
ಕಂಡರಾಯಿತು ; ಕಾಣದಿರೆ, ಮುಂದೆ, ನಾಂ ಕಂಡಪೆನ್ ೮೦
ಕಾಣ್ಬುದನ್ !”
ಇಂತೆನುತೆ ಮುಂಬರಿದನನುಸರಿಸುತಾ
ಸರ್ಪ ಖರ್ಪರ ದುರ್ಗಮಂ ದರ್ಪಗತಿಯಿಂದೆ
ಯುಕ್ತಿನಾಸ್ತಿಕ್ಯಮಂ ಛೇದಿಸಲದಂ ಬಳಸಿ,
ಹೊಂಚಿ, ಪುಟ್ಟುವುಟ್ಟಂ ಬಿಡದೆ ಬೆಂಬತ್ತುವಾ
ದಿವ್ಯ ಸಂಶಯದ ಛಾಯಾ ಶಕುನ ಸಂಜ್ಞೆಯೋಲ್
ಪ್ರಾಣಜಂ ಪರಿವರಿಯೆ ಬಹುದೂರಮಂ, ಮಿಥ್ಯೆ ತಾಂ
ತನ್ನ ಪುಸಿ ಸಾಸದ ಬಿಸಿಲ್ದೊರೆಯ ಬೇಂಟೆಯಿಂ
ಬೇಸತ್ತು, ಬಾಯಾರಿ, ನೀರಳ್ಕೆಗಾರದೆಯೆ
ಬಾಯ್ವಿಟ್ಟೊರಲ್‌ವಂತೆ, ಗೋಚರಿಸಿತಾ ಮುಂದೆ
ಲಂಕಾ ಪುರದ್ವಾರಮ್. ಸಾರ್ದನೆಳ್ಚರೊಳದಂ ೯೦
ನಯಕೋವಿದಂ. ನಗರ ಕೋಲಾಹಲಂ, ಕೋಡಿ
ಪರಿವಂತೆ, ದೂರ ಭೋರ್ಗರೆದತ್ತು ಸುತುಮುಲಂ.
ಸಮೀಕ್ಷಿಸಿದನಾ ಸೂಕ್ಷಮತಿ ರಾಕ್ಷಸಾಕೃತಿಯ
ಶಿಲ್ಪಕೃತಿಯಂ ಬೃಹದ್‌ದ್ವಾರದಾ. ಫಣಿಮುಖಂ
ತೆರೆದವೋಲ್ ಇರ್ದತ್ತು ಕೋಂಟೆವಾಯ್, ವಿದ್ಯಾತ್ಮಕಂ
ಚಿತ್ರೋಗ್ರಮಾಗಿ. ರಕ್ಷಣಾ ರಾಹಿತ್ಯದಿಂ
ಸಂಶಯಾಸ್ಪದಮಾಗಿ ತೋರ್ದುದಾ ನಿರ್ಜನತೆ,
ಕೃತ್ರಿಮಕ್ಷೇಮ ಸಂವೇದಿ. ನೋಡುತಿರೆಯಿರೆ,
ನೋಳ್ಪನಿತರೊಳೆ, ನೋಟಕೌತಣವನೊಡರಿಸುತೆ
ಮರನೆತ್ತಿಯಂ ಮೀರ್ದುಮೇರ್ದು ಮೈದೋರ್ದುದಯ್  ೧೦೦
ಲೋಕಮಂ ಮೋಹದುಯ್ಯಲೆ ಸಿಸುವನೆಸಗುವಾ
ಆಹ್ಲಾದಕರ ಹಿಮಕರಜ್ಯೋತ್ಸ್ನೆ. ಪೇಳ್ವುದೇಂ ?
ಶಶಿ ತೋರಿದುದೆ ತಡಂ, ವಜ್ರ ವೈಡೂರ್ಯಾದಿ
ಬಹು ವರ್ಣ ಬಹು ರತ್ನಖಚಿತ ಕೋಟಾಮುಖಂ
ಝಗಝಗಿಸಿದುದು ಕಿರಣಕೋಟಿಯಿಂ ! ಮಾರುತಿಗೆ
ದಿಟ್ಟಿ ಕೋರೈಸಿದುದು ; ತಲ್ಲಣಿಸಿದುದು ಬಗೆಯ
ಸಮತೆ ; ಕಣ್ಣೆವೆ ಮುಚ್ಚಿದುದು ನಿಮಿಷಮಾತ್ರಮೆನೆ
ಬೆಚ್ಚಿ, ಬೆಳ್ಚಿದುದು ಕರ್‌ನೆಳಲ್ ತರುಸಾಂದ್ರದಾ.
ಆಶ್ಚರ್ಯಕದ್ಭುತಕೆ ಬೆರಗುವಟ್ಟುಂ ಮೆಚ್ಚಿನಿಂ
ಶ್ಲಾಘಿಸುತೆ, ಪಜ್ಜೆ ಪಜ್ಜೆಯೊಳೆಳ್ಚರದಿ ಮುಂದೆ  ೧೧೦
ಪರಿದಾಂಜನೇಯಂಗೆ ಬಾಗಿಲಿಲ್ಲದ ಬರಿಯ
ತೆರಪಿನೊಲ್ ತೋರ್ದುದಾ ಕೋಂಟೆಬಾಯ್ ! ಬಳಿ ನಿಂದು,
ಮರಳಿ ಸುತ್ತುಂ ನೋಡಿ, ಕಾಣದಾರೊರ್ವರಂ,
ತಾನೆ ತನ್ನೊಳ್ ನುಡಿದನಿಂತು :
“ಸೋಜಿಗಮಲ್ತೆ !
ನಗರ ರಕ್ಷಾಮುಖಮೆ ಅರಕ್ಷಿತಂ ! ನೂರ್ ಪಡೆಯ
ಪಗೆಗಿಂ ಮಿಗಿಲಗುರ್ಪು ಈ ನಿರ್ಜನತೆ ದಿಟಂ !
ಅತಿ ಭಯಂಕರತರಂ ಮೇಣಪಾಯ ಬಹುಳಂ
ಅಹಿತದೇಶದೀ ಅಸ್ಪಷ್ಟತೆ ! ಅಮರ್ತ್ಯ ಭೂ,
ಸುಲಭಮಲ್ತೀ ಲಂಕೆ…. ದಾಶರಥಿಗೊಳ್ಪಕ್ಕೆ !….
ಜನಕಜೆಯನಾಂ ಕಂಡೆ ಪಿಂತಿರುಗಿದೊಡಮೆಂತು        ೧೨೦
ನಮ್ಮ ಕಜ್ಜಕೆ ಗೆಲವೊ ನಾನರಿಯೆ !…. ಆ ಮಹಾ
ಮುನ್ನೀರಗಳ್ತೆಯಂ ನೆಗೆವರೆನಿತಿಹರೆಮ್ಮ
ಕಿಷ್ಕಿಂಧೆಯೊಳ್ ? ದುರ್ಗಮೀ ದೈತ್ಯ ಲಂಕೆಯಂ
ಭೇದಿಪ ಸಮರ್ಥರವರೊಳೆನಿಬರ್ ? ಅಗ್ನಿಜಂ
ನೀಲನೊರ್ವಂ ; ವಾಲಿಯ ತನೂಭವಂ ಮಹಾ
ತೇಜಶ್ಶಾಲಿ ತಾನೊರ್ವನಂಗದಂ ; ಮೇಣ್ ನೃಪಂ
ಸುಗ್ರೀವನದಟರದಟಂ, ರಿಪುಭಯಂಕರಂ ;
ಮೇಣೊರ್ವನಾಂ : ನಾಲ್ವರಲ್ಲದಿನ್ನುಳಿದರ್ಗೆ
ದುರ್ಲಂಘ್ಯಮೆ ವಲಂ ಮಹಾವಾರ್ಧಿ. ಅದಂತಿರ್ಕೆ.
ಕಡಲನೆಂತಾದೊಡಂ ದಾಂಟಿ ಬಂದೊಡಮೆಂತೊ       ೧೩೦
ಪುಗುವುದೀ ದೈತ್ಯವಿದ್ಯಾರಚಿತ ದುರ್ಗಮಂ ?
ಸುಯತ್ನಸಾಧ್ಯಂ ಕುಮುದ ವೀರಂಗೆ ; ಮೇಣಂತೆ
ವಾನರೇಂದ್ರಂ ಸುಷೇಣಂ ಮಂತ್ರಸಾಮರ್ಥಿ ;
ಮೈಂದಂ ಮಹಾಪ್ರತಿಭನಪ್ಪೊಡಪ್ಪುದಾತಂಗೆ ;
ಋಕ್ಷ ಕುಶಪರ್ವರ್ಗೆ ಮೇಣ್ ಕೇತುಮಾಲಂಗೆ
ದುಸ್ಸಾಧ್ಯಮಲ್ತು…. ಚಿಃ ! ಏಂ ಗಳಪುತಿರ್ಪೆನಾಂ !….
ಮಹತ್ಕಾರಮದೆ ಮಹಾಶಕ್ತಿದಾಯಕಮಾಗೆ
ವಾನರರೊಳಲ್ಪರುಂ ಕಲ್ಪನೆ ಬೆದರ್ವವೋಲ್
ಬಲ್‌ಗೆಯ್ಮೆಗೆಯ್ಯರೇಂ ? ರಾಮಸೀತೆಯರುಸಿರ
ಬೇನೆವೆಂಕೆಯ ಕುಲುಮೆಯೊಳ್ ಪುಡಿಯೆ ತಾಂ ಕಿಡಿಯಾಗಿ.       ೧೪೦
ಪೇಳ್, ಪ್ರಲಯಗೈಯದೆ ಲಂಕೆಯನಧರ್ಮಶಿಥಿಲಮಂ !”
ಇಂತೆನುತೆ ಸಾಗಿದನ್, ಪಜ್ಜೆವಜ್ಜೆಗೆ ನಿಂದು,
ಕಣ್ಣಾಗಿ ಕಿವಿಯಾಗಿ ನೋಡುತಾಲಿಸಿ, ಮುಂದು
ಮುಂದಕ್ಕೆ. ಬಳಿಸಾರೆ, ಬೀಸಿದಂತಾದುದಯ್
ತಿರಿಗಾಳಿ, ಕಪಟಯಂತ್ರೋಚ್ಛ್ವಸಿತಮೆಂಬಂತೆ.
ಬಗೆಗೆ ಸಂಶಯವಿರ್ದೊಡಂ, ಕಣ್ಗೆ ತೋರುತಿರೆ
ನಿರಪಾಯಮೆಡೆಯ ಬಾಗಿಲ್ವಾಡಮಂ ದಾಂಟೆ
ಕಾಲಿಟ್ಟನಯ್ಯೊ ! ಕಾಲಿಟ್ಟುದೆ ತಡಂ, ಕವಣೆ ತಾಂ
ಕಲ್ಲಂ ಸಿಡಿಯುವಂತೆ, ಸಿಡಿದುದನಿಲಾತ್ಮಜನ
ಪೇರೊಡಲನೊಂದು ಬಿಲ್ಲೆಸೆಯ ದೂರಾಂತರಕೆ, ಕೇಳ್.            ೧೫೦
ಬಾಗಿಲಿನ ಕೀಲಣೆಯ ಬಲ್ಮೆ ! ಕಲ್ಬಂಡೆಯಂ
ನುರ್ಚ್ಚುಗೈವಾ ಪೊಡೆತಕಿನಿತು ಬೆಕ್ಕಸವಡುತೆ
ನೆಗೆದು ನಿಂದನ್ ಮತ್ತೆ ಮರುತಾತ್ಮಜಂ. ತುಡುಕಿ
ರಾಮಮುದ್ರಿಕೆಯಿರ್ದ ತನ್ನ ವಕ್ಷದ ವಜ್ರ
ದೇಶಮಂ. “ದಿಟಮಿದು ಅಮರ್ತ್ಯಭೂ, ಈ ಲಂಕೆ,
ದಶಕಂಠ ಪಾಲಿತಂ ! ಸಲ್ಲದಿಲ್ಲಿಗೆ ನನ್ನ ಈ
ಸಾಧಾರಣತೆ !” ಎನುತ್ತೌಡುಗಚ್ಚಿರೆ ಧೃಢತೆ,
ಯೌಗಿಕ ಪರಾಕ್ರಮಕೆ ತನ್ನಾತ್ಮಶಕ್ತಿಯಂ
ಆಹ್ವಾನಿಸುತೆ, ಮತ್ತೆ ಮುಂಬರಿದನಯ್ ವಜ್ರಮಯ
ವಪುವಾಗಿ, ಮುಂಬರಿದು, ಮೇರುಗಿರಿ ಭಾರದಿಂ          ೧೬೦
ಪೊಕ್ಕೊಡಾ ದ್ವಾರಯಂತ್ರದ ಶಕ್ತಿ ಸತ್ತುದಯ್ :
ತಿರುಗುಗೆಟ್ಟುದು ಚಕ್ರಮದರ ಪಲ್‌ ಮುರಿಮುರಿದು
ಕೆದರೆ ! ಹಾ, ಮತ್ತಮೇನದು ಮುಂದೆ ವಿಗ್ರಹಂ ?
ಮೊದಲಿಲ್ಲದುದು ತೆಕ್ಕನೈತಂದುದಾ ಕೃತಿಯೆ
ಈ ಕೃತಿಗೆ ಕಾರಣಮೆನಲ್ !
ಚಿನ್ನದುಡೆಯೆಸೆವ ಮೆಯ್
ರಾರಾಜಿಸಿತು ಜೊನ್ನವೆಳಗಿನೊಳ್, ಮಿರುಗಿದುದು
ಮುಡಿಯೊಳುಜ್ವಲ ಕಿರೀಟಂ. ಪೆಗಲಿಂದೆ ಸೋರ್ದು
ಸೊಗಸಿದುದು ಕೇಶದ ಪೊನಲ್‌ಕರ್ಪು. ರಾಣಿಯಂ
ಸಾರುತಿರ್ದ ಮೊಗದ ಗಂಭೀರ ದರ್ಪಕ್ಕೆ
ದೇವತ್ವಮಂ ನೀಡಿದಕ್ಷಿಗಳಮರ ಕಾಂತಿ        ೧೭೦
ವಿಗ್ರಹದ ಜೀವತ್ವಮಂ ಸಾರ್ದುದಂಜನಾ
ಸುತಗೆ. ಬಹುಭುಜಗಳಾಯುಧ ಪಾಣಿಯಂ, ದಿವ್ಯ
ರತ್ನಾಭರಣ ಪುಷ್ಪಹಾರ ಸಂಶೋಭಿಯಂ,
ಶಶಿಧೌತೆಯಾಗಿಯುಂ ನೆಳಲಿಲ್ಲದಿರ್ದಳಂ,
ಕಮನೀಯ ಭೀಷ್ಮತಾ ಭಗವತಿಯವೋಲಂತೆ
ಭವ್ಯೋನ್ನತಾಕಾರೆಯಂ ಜಗತ್‌ಪ್ರಾಣಜಂ
ದಿಟ್ಟತನದಿಂ ದಿಟ್ಟಿನಟ್ಟು ನೋಡುತಿರಲಾ
ಮಹಿಳಾ ಮಹನ್‌ಮೂರ್ತಿ ನುಡಿದುದಿಂತೆಂದು, ನಿಶೆ
ಗೌರವಕೆ ನಿಶ್ಶಬ್ದಮಪ್ಪಂತೆವೋಲ್ :
“ದಿಟಂ, ದಿಟಂ
ನೀಂ ಮಹಾಸತ್ತ್ವನಹುದಯ್. ಕಾಣೆನಿನ್ನೆಗಂ   ೧೮೦
ಈ ದ್ವಾರಯಂತ್ರಮಂ ಮುರಿದ ಮೆಯ್ಗಲಿಗಳಂ.
ಕೇಳಾದೊಡಂ ರಾವಣಪ್ರಜೆಗಳಲ್ಲದೆಯೆ
ಅನ್ಯರಾರ್ಗಂ ಲಂಕೆಯಂ ಪುಗಲ್ಕಸದಳಂ
ಜೀವಸಹಿತಂ. ಆರ್ ನೀಮ್, ಅಪರಿಚಿತ ವೇಷಿ ?”
ಧ್ವನಿಗೌರವಕೆ ಮಣಿದೊಡಂ ಮಾತಿನರ್ಥಕ್ಕೆ
ಮಲೆತು ನಿಂತುದು ಮಾರುತಿಯ ಧೃತಿಯ ಮರ್ಯಾದೆ.
ಮಾರ್ನುಡಿದನಿಂತು :
“ಇನ್ನೇನಾನುಮಕ್ಕೆ ನಾಂ,
ರಾವಣಪ್ರಜೆಯಲ್ತು !”
ಮುಳಿಸು ಮೊಗಕೇರ್ದೊಡಂ
ಕೊಂಕುನಗೆ ಬಿಂಕದಿಂದಿಂತು ಲಂಕಾದೇವಿ
ನುಡಿಯೀಟಿಯಿಂದಿರಿದಳಾಂಜನೇಯನ ಜಾಣ್ಮೆ           ೧೯೦
ಬಿಕ್ಕಳಿಸೆ : “ಓವೊ ಪೆಸರಿಲ್ಲದಿರ್ಪೊರ್ವನೇಂ
ಪರದೇಶಿ ನೀಂ ?”
ನಕ್ಕು, ನಗೆಯಿಂ ತಿರಸ್ಕರಿಸಿ,
ವಾಕ್ಕೋವಿದಂ : “ಇರ್ಕೆ, ನಾನಾರೆಂಬುದಕ್ಕೆ
ನಿನಗಿನಿತರೊಳೆ ಸಕ್ಕಿ ದೊರೆಕೊಳ್ವುದೌ. ಮೊದಲ್
ಪೇಳ್ದು ದಯೆಗೆಯ್ವೆಯೇಂ ಪರದೇಶಿಯಲ್ಲದಾ
ನಿನ್ನ ಪೆಸರಾಂತ ಪೆಸರಂ ? ಕೇಳಲಾನದಂ,
ಪರದೇಶಮಂ ಪರ್ವಿ ನಿನ್ನ ಕೀರ್ತಿಯುಮೆನಗೆ
ಹೊಯ್‌ಕಯ್ಯಾಗಿ ಪರದೇಶಿಯಪ್ಪುದಾ ಶ್ರೀಯೆ
ದೈತ್ಯದಾಸ್ಯದ ನಿನ್ನ ದಾರಿದ್ರ್ಯಮಂ ನೀಗಿ
ನಿನಗೀವುದಮೃತ ದೇವತ್ವಮಂ.”
“ಕಾಡುಡೆಯ       ೨೦೦
ಕಪಿವೇಷಿ ನೀನಾಗಿಯುಂ, ಮಿಕ್ಕಿ ಗಳಪುವಯ್
ಸೊರ್ಕುನುಡಿಯಂ ? ನೀನಾರೊಡನೆ ನುಡಿವೆಯೆಂಬುದಂ
ತಿಳಿಯೊ : ದಶಶಿರ ಕನಕಲಕ್ಷ್ಮಿ, ಲಂಕಾದೇವಿ,
ಲಂಕಿಣಿಯೆನಾಂ ! ನಾನೆ ಲಂಕೆಯೆಂದರಿ ! ನನ್ನ
ರಕ್ಷೆಯೀ ದುರ್ಗಮಂ ಪುಗುವ ಮುನ್ನಂ ದಿಟಂ
ಪುಗುವೆ ನೀಂ ಸ್ವರ್ಗಮಂ !”
ದೂರ ಸಾಗರ ಯಾತ್ರಿ,
ಗಿರಿ ತರಂಗಿಣಿ, ತನಗೆಡರ್ವಂದ ಬೆಟ್ಟಮಂ
ಕೊರೆವ ಸಾಸವನುಳಿದು ಬಳಸಿವೋಪಂದದಿಂ,
ತನ್ನ ಮುಂದಿರ್ದ ಆ ಅಲಘುಬಲಧೀರೆಯಂ     ೨೧೦
ದೇವತಾಕಾರೆಯಂ ಕೆರಳಿಸದೆ ಕಜ್ಜಮಂ
ಕಯ್ಗೂಡಿಸುವೆನೆಂದೆಳಸಿ ಪವನಸೂನು : “ಹೇ
ಭದ್ರೆ, ಕೆಮ್ಮನೆಯೇಕೆ ಮುನಿವೆಯೌ ? ಪರದೇಶಿ,
ಕಪಿವೇಷಿ, ನೀನೆಂದವೋಲಾಂ ಅನಾಗರಿಕ
ವನಚರಂ. ಸರ್ವಕಲೆಗಾರರಂ, ಸಂಪದಕೆ
ಸಾಗರಂ, ಭೋಗಕ್ಕೆ ತವರು, ನೆಲದರಿಕೆಯೀ
ಲಂಕೆಯೆಂಬುದ ಕೇಳ್ದು, ಕಣ್ಗಳ ಕುತೂಹಲಕೆ
ತಣಿಯೆರೆಯಲೈತಂದೆನಾಂ. ಅರಣ್ಯಚಾರಿಯಂ,
ಮನದಣಿಯೆ ನಗರ ಶೋಭೆಯ ನೋಡಿ ಪಿನ್ನಡೆವನಂ,
ಗ್ರಾಮೀಣನಂ ಕೊಲ್ವುದೇಂ ಬಲ್ಮೆ ? ಮೇಣಂತೆ
ತಡೆವುದೇಂ ಜಾಣ್ಮೆ ? ನನ್ನನ್ನರಿಂದೀ ಮಹಾ   ೨೨೦
ದೈತ್ಯ ದುರ್ಗಕೆ ಕೇಡೆ ? ನಗೆವಾತದಂ ಬಿಟ್ಟು
ಕಳೆ ! ಬೇಡುತಿಹೆನೆನಗೆ ದಶಶಿರನ ವೈಭವದ
ದರ್ಶನವನಿತ್ತು ಕೃಪೆಗೆಯ್ !”
“ಸಾಲ್ಗುಮೀ ಕಿತವ
ಸೌಜನ್ಯಮೆಲವೋ ವನಾಲಯಾ ! ನಿನ್ನ ದನಿ,
ನಿನ್ನ ಕಣ್‌, ನಿನ್ನ ವದನದ ವೀರತೇಜಂ ಮೇಣ್
ನಿನ್ನ ಈ ಸಿಂಹಸಮ ತನುಶೈಲಿಯುಂ ಮೇಣ್ ನಿನ್ನ
ನಿಂದ ನಿಲವಿನ ಭಗಿ, ತಾಮೊಂದೊಂದುಮುಂ ನಿನ್ನ
ಗ್ರಾಮೀಣತೆಗೆ ಘೋಷಿಸಿವೆ ಪ್ರತಿಸಾಕ್ಷಿಯಂ ! ಕಪಟಿ,
ಧೂರ್ತಲಕ್ಷಣ ವಿನಯಸಂಪನ್ನ, ಬಂದತ್ತಣ್ಗೆ
ಸಾರ್‌ ! ಪಜ್ಜೆಯೊಂದಂ, ಮುಂದಕಿಕ್ಕೆ, ಮಲಗುವಯ್   ೨೩೦
ನಿರ್ಜೀವಿ ನೀಂ !”
ಎನುತ್ತಾರ್ಭಟಿಸುತಾ ಲಂಕೆ,
ಬಹುಭುಜದ ದೇವಿ, ತನ್ನೊಂದು ಹಸ್ತದೊಳಿರ್ದ
ಮಹಾತ್ರಿಶೂಲವನೆತ್ತಿ ಹನುಮ ವಕ್ಷಕೆ ಮೋಹಿ
ಗುರಿವೀಸಿದಳ್ ! ನೆಗೆದು ತೆಕ್ಕನೆ ಪೆಡಂಮೆಟ್ಟಿ
ತಪ್ಪಿದನಲಾ ಲಂಘನಕ್ಷಮಂ ! ಕಂಡದನ್
ವ್ಯಂಗ್ಯ ವಚನದೊಳಿರಿದಳಿಂತು ಲಂಕಾಲಕ್ಷ್ಮಿ :
“ಕೆಚ್ಚಿಗೆ ಮಿಗಿಲ್ ನಿನ್ನೊಳೆಚ್ಚರಿಕೆಯಿರ್ಪುದು ಕಣಾ !”
“ಸಂಸ್ಕೃತಿಗೆ ಮೀರಿರ್ಪ ನಿನ್ನ ಈ ನಾಗರಿಕತಾ
ಬರ್ಬರತೆಯೋಲ್ !” ಎನುತೆ ಮುಂಬರಿದನಯ್ ಮರಳಿ
ಕೆರಳಿ. ಛಾಯಾ ಸಹಿತ ಶೈಲೋಪಮಂ ಆ ವೈರಿ         ೨೪೦
ವಜ್ರಭ್ರುಕುಟಿದೃಷ್ಟಿಯಿಂ ವಜ್ರಮುಷ್ಟಿಯಿಂ
ಮೇಲ್ವಾಯ್ವುದಂ ಕಂಡು, ಕಾಮರೂಪಿಣಿ ಲಂಕೆ ತಾಂ
ರೋಷಭೀಷಣೆಯಾಗಿ ಮೃತ್ಯುಬಾಹುಗ್ರಸ್ತಮಂ
ಶುಲರಾಹುವನೆತ್ತಿ, ಕೇಳ್, ಇಡುವ ಮುನ್ನಮೆ ಅದಂ
ಚಿಮ್ಮಿ ಲಂಘಿಸಿ ತುಡುಕಿ ಪಿಡಿದನೊರ್ಕಯ್ಯ ಕಲಿ,
ಕಾಡುಕೋಣನ ತಿವಿದ ಕೋಡಂ ನಖಾಗ್ರದಿಂ
ತುಡುಕಿ ಜಡಿದಪ್ಪಳಿಸಿ ಗೋಣಂ ಮುರಿವ ಪುಲಿಯ
ಓಲಂತೆ : ಶೂಲಮಳ್ಳಾಡದಂತಾಯ್ತಲಾ
ದೈತ್ಯಲಂಕಾದೇವತಾ ಕರದಿ ! ನೂಂಕಿದಳ್ ;
ಸೆಳೆದಳ್ ; ನಿಮಿರ್ಚಿದಳ್ ; ಕುತ್ತಿದಳ್ ; ಕುಲುಕಿದಳ್ ;  ೨೫೦
ಮಿಡುಕಲೆಡೆಗೊಡಲಿಲ್ಲಮನಿಲಜನ ಕಪಿಮುಷ್ಟಿಯಾ
ವಜ್ರಲೇಪಂ ! ಕಯ್ಯನಿನ್ನೊಂದನೆತ್ತಲುಂ
ಸಾಲ್ದುದಿಲ್ಲಾಯ್ತಲಾ ಶಕ್ತಿ ! ಲಂಕೆಗೆ ಶಂಕೆ
ಸಂಚರಿಸಿತೊಳಸೋರಿದಳ್ ನಡುಗಿ ಕೇಡಿಂಗೆ
ರಾಕ್ಷಸಕುಲಕ್ಕೆ. ನೆನೆವನಿತರೊಳೆ, ಆ ಮಹಾ
ಶೂಲದುರ್ಕಿನ ಭೀಮಗಾತ್ರಂ, ಸಮೀರಜನ
ಮುಷ್ಟಿದಂಷ್ಟ್ರದ ತಿರುಪಿನುಗ್ರತೆಗೆ, ನೀರವಂ
ಕೊಂಕಿದುದೊ ; ಡೊಂಕುತೆ ಮುರುಂಟಿದುದೊ ! ಕರಿಕರಕೆ
ಕಳಲೆ ಮುರಿವಂತೆ ತುಂಡುರುಳುತಿರ್ದುದೊ ಏನೊ ?
ಅನಿತರೊಳ್ ಸೊರ್ಕುಡುಗಿ ಕರೆದೊರಲಿದಳೊ ಲಂಕೆ,   ೨೬೦
ತೋಳ್ ತಿರುಪಲಳುವೆಳೆಯಣುಗಿಯಂತೆ :
“ತಪ್ಪಿದೆನ್, ನಿಲ್
ನಿಲ್, ಮಹಾವೀರ, ನಿಲ್ ! ಸೋಲೊಪ್ಪಿದೆನ್ ! ನಿನಗೆ
ವಶಳಾದೆನಿದೊ ! ಮುರಿಯದಿರೊ ಶೂಲಮನ್, ಮುಂದೆ
ನಿನ್ನರ್ಗೆ ಧರ್ಮಾನುಕೂಲಮನ್ !”
ಪಿಡಿಪುಳಿದು
ಮಾತಾಡಿದನ್ : “ಭದ್ರೆ, ಪೆಣ್ ನಿನಗೆ ನೋವಾಯ್ತು.
ಮನ್ನಿಸೆನ್ನೊರಟುತನಮಂ. ಬೇರೆ ಬಟ್ಟೆಯಂ
ಕಾಣದಿಂತೆಸಗಿದನ್.”
“ನಿನ್ನ ನುಡಿನುಣ್ಪಿಂಗೆ,
ನಿನ್ನ ನಯವರ್ತನೆಗೆ, ನಾಣ್ಚುತಿಹೆನಾಂ ಆರೊ
ನೀಂ ಮಹಾತ್ಮನೆ ದಲ್ ! ಪರಾಕ್ರಮದೊಳಿನ್ನೆಗಂ
ಈ ಶೂಲಮಂ ತಾಗಿ ಬದುರ್ಕಿದರಿಲ್ಲ. ನಿನ್ನ     ೨೭೦
ಬಲ್ಮೆಯುಂ ಜಳ್ಳಾಗುತಿರ್ದುದೆಂಬುದರಲ್ಲಿ
ಶಂಕೆಯೆನಗಿನಿತಿಲ್ಲ. ನನ್ನ ಕೈಯೀ ಮಹಾ
ಶೂಲದುರ್ಕಿಗೆ ಸಾಣೆ ದಲ್ ಧರ್ಮಮಯ್. ಇಂದೇಕೊ
ಧರ್ಮದ ಹದಂಗೆಟ್ಟು ಕುಂದಿದೋಲಿದೆ ಶಕ್ತಿ.
ಅಂತಲ್ಲದಿರಲಿದಂ ಬಳುಕಿಸುವರಂ ಕಾಣೆನಾಂ
ಮೂಲೋಕದೊಳ್ ! ಪರಿಚಯವನುಸಿರ್, ನೀನಾರ್,
ಮಹಾತ್ಮಾ ?”
ಸೂತ್ರಮಾರ್ಗದೊಳೊರೆದನಾಂಜನೇಯಂ
ಕಿರಿದುಬೇಗದಿ ತನ್ನ ಪರಿಚಯವನಂತೆ ತಾಂ
ಕೈಕೊಳುತ್ತೆಯ್ತಂದ ಕಾರ್ಯದ ಗುರುತ್ವಮಂ.
ಆಲಿಸುತ್ತಾಲಿಸುತೆ ದೇವಿ ಸುಯ್ದಳ್ ಲಂಕೆ      ೨೮೦
ಬೆಂಕೆನೋವಿಂ. ಕಣ್ಗೆ ತುಳ್ಕಿ ಸಂಕಟದಶ್ರು
ಜೊನ್ನವೆಳಗಂ ಮಿರುಗಿ ಪರಿದುವು ಕಪೋಲಮಂ
ತೊಯ್ದು. ದೇವತಾದುಃಖಕನುಕಂಪಿಸುತೆ ಆ
ಸಮೀರಾತ್ಮಜಂ ಮತ್ತೆ : “ನಿನ್ನ ಸೋಲ್ಗಳಲದಿರ್,
ದೇವಿ. ರಾವಣ ಪಕ್ಷದೊಳಗಿರ್ದೊಡೆನಗುಮಾ
ಗತಿಯ ದಲ್ !”
“ಅಯ್ಯೊ, ನೀನೆಂತರಿವೆಯಯ್ ನನ್ನ
ಗೋಳಾಳಮಂ ? ನನ್ನವಳಿಯಳಲ್ ಅತ್ತಲುಮ್
ಇತ್ತಲುಮ್ ಕತ್ತರಿಪುದಿರ್ಬಾಯ ಖಡ್ಗದೋಲ್.
ನಿನ್ನಿರಿತಕಿಂ ಮಿಗಲ್ ನಿನ್ನ ಸಂತೈಕೆಯಿಂ
ಬೇಯುತಿಹುದೆನ್ನುಸಿರ್. ಒರ್ಕಡೆಗೆ ನಿನ್ನಳಲ್ ;           ೨೯೦
ನನ್ನದಿರ್ಕಡೆಗೆ. ಸೀತಾನ್ವೇಷಣಂ ನಿನಗೆ ;
ನನಗದಂ ಕೂಡಿ, ಲಂಕಾಕ್ಷೇಮ ಚಿಂತನಂ.
ನಿನಗೆ ಸೀತಾ ರಾಮ ಸಂಘಟನ ಚಿಂತನಂ ;
ನನಗದಂ ಬೆರಸು, ಲಂಕೇಶನಾತ್ಮೋದ್ಧಾರ
ಚಿಂತನಂ…. ಇರ್ಕೆ ; ಬಿದಿಮಾಳ್ಕೆಯೊಳ್ಳಿತಕ್ಕುಂ ;
ಎಂತಾದೊಡಂ !…. ತ್ರಿಕೂಟಾಚಲವನೊಲಿದಪ್ಪಿ,
ರತ್ನಮೇಖಲೆಯವೋಲ್ ಕಯ್ಗಯ್ದದಂ ಸುತ್ತಿ,
ಸಗ್ಗದಾಣ್ಮನ ಕರುಬಿಗಂಜಿಕೆಯನೊಡ್ಡಿರುವ
ಪತ್ತನಮಿದಂ, ನನ್ನ ನೈಜತನುರೂಪಿಯಂ,
ಪುಗು ನೀಂ, ಮಹಾಬಾಹು, ಪಾಪಿಯೆರ್ದೆಯಂ ಪುಗುವ ೩೦೦
ಕ್ಲೇಶರೂಪಿ ಭಗವತ್ ಕೃಪೆಯವೋಲ್. ಬಲ್ಲೆನಾಂ,
ನೀಂ ಸಮರ್ಥನೆ ವಲಂ. ಮುನಿದರೀ ಲಂಕೆಯಂ
ಸುಟ್ಟುರುಹಿ ಕಡಲೊಳಳ್ದುವ ಬಲ್ಮೆ ನಿನ್ನೊಳಿಹುದಯ್.
ಬೇಡಿದಪೆನದರಿಂದೆ : ತಾನೆನಿತು ಕೆರಳುವ ಕತಂ
ನಿನಗೊದಗಿದೊಡಮೆನಗೆ ಕೇಡೆಸಗದಿರ್, ಪೂಜ್ಯ.
ಕಲೆಯ ಬಲೆ, ಚೆಲ್ವು ನೆಲೆ ಈ ಲಂಕೆ ; – ಪಾಪದಿಂ,
ಪ್ರಾಚೀನ ಶಾಪದಿಂ, ಮೇಣ್ ಧರ್ಮಕೋಪದಿಂ
ವಿಘ್ನಕೀಡಾಗುವುದನರಿತಳೆಂ : ಈ ನನ್ನ
ಕಾಲ ಶೂಲೋಪಮಂ ಕಾಲಾಯಸಾಯುಧಂ
ಕೊಂಕಿದುದೆ ದಲ್ ತೋರ್ವೆರಳ್ ! ತೆರಳ್, ನಿನಗಕ್ಕೆ ಗೆಲ್ !”    ೩೧೦
ನೋಡುತಿರ್ದಂತೆ ಛಾಯಾರಹಿತೆಗುದಿಸಿತಯ್
ಛಾಯೆ : ಲಂಕಾಲಕ್ಷ್ಮಿ ಪೊರ್ದುತೆ ಜಡತ್ವಮಂ
ಪ್ರತಿಮೆಯಾದಳೊ ಮರಳಿ, ನಕ್ತಂಚರ ಶ್ರೀಗೆ
ಪೇಸುತೆ ವಿಮುಖಿಯಾದವೋಲ್. ಜಾವವೊಳ್ತಂ ಜಾರಿ
ಸಾಗಿರ್ದುದಾಗಳೆಯೆ ಮಾಗಿಯ ಇರುಳ್. ಬಾನ್ಗೇರ್ದು
ಜೇನ್‌ಸೋನೆ ಜೊನ್ನಮಂ ಪಾಲ್‌ಸೂಸುತಿರ್ದುದಾ
ಸೊನ್ನೆದಿಂಗಳ್. ದಾಂಟುತಾ ಕೋಂಟೆ ಪೆರ್ಬಾಗಿಲಂ,
ಲಂಕೆಯಂ ಪೊಕ್ಕೊಂದು ಬಿಂಕದ ಪೆರ್ಮೆಯಿಂ ಪೊಂಗಿ
ದಿಟ್ಟಿಸಿದನೋರೆಯಂ, ಮೂರ್‌ತಲೆಯ ಪೆ‌ರ್‌ಮಲೆಯ
ತೆಂಗು ಕೌಂಗಿನ ತೋಂಟಮಂ ಪೊದೆದ ಪತ್ತನದ        ೩೨೦
ಝರ ಸರೋವರ ಸಾನು ಕಂದರದ ಸುಂದರದ
ವನಸೀಮೆಯುದ್ಯಾನಮಂ. “ಮಾಯೆಗೆ ತವರ್‌ ಕಣಾ,
ದಿಟಮಿದು ಅಮರ್ತ್ಯ ಭೂ ! ನಾನಗೋಚರನಾಗಿ
ಯೋಗದಿಂ ಸಾಗುವುದೆ ಲೇಸಿಲ್ಲಿ ದಲ್ !” ತರಿಸಂದು
ನಿಂದಿರಲ್, ಬೆಳ್ದಿಂಗಳೊಳ್ ನೆಲದೊಳಚ್ಚಿರ್ದ
ಕಪಿಕುಲೇಂದ್ರನ ಮಹಾವಾನರನ ಮೆಯ್‌ನೆಳಲ್, ಕೇಳ್,
ಸ್ವಲ್ಪಮಾತ್ರಂ ಕರ್ಪುಗೆಟ್ಟು ನಸುಬಿಳ್ಚಿದುದು,
ಕಾಂತಿಯೊಂದಕೆ ಪುಟ್ಟಿದಾ ಛಾಯೆಯಿನ್ನೊಂದು
ಕೀಳ್ವೆಳಗಿಗಿನಿತೆ ಬೆಳ್ಪೇರ್ವವೋಲ್. ನೋಡುತಿರೆ,
ಸಾಂದ್ರತೆಯನುಳಿದ ಜಡತೆಯದೆಂತು ಚಂದ್ರಿಕೆಗೆ        ೩೩೦
ಜಾಳಂದ್ರಮಾದಪ್ಪುದಂತೆಯೆ ತನುಚ್ಛಾಯೆ ತಾಂ
ಪಳುಕುಗಾಜಿನ ನೆಳಲವೋಲಾಯ್ತು. ಮತ್ತಮಾ
ನೆಳಲುಮೊಯ್ಯನೆ, ಜೊನ್ನಮಂ ಜೇಡಿ ಬಳಿದರೆನೆ,
ಶೂನ್ಯಮಾದತ್ತು ನಯನೇಂದ್ರಿಯಕೆ ನಿರ್ವಾಣ
ನಿರ್ವಸ್ತುವಾಗಿ ! ಪವನತೆಯಾಂತ ಪವನಜಂ
ಯೋಗತನುವಿಂದಗೋಚರನಾಗಿ, ಮೆಯ್‌ನೆಳಲ್
ಕಾಣದಾದುದೆ ತನ್ನ ಕಾಣಿಲ್ಲಮೆಗೆ ಕುರುಹಾಗೆ,
ತಲೆಯೆತ್ತಿ ಕಂಡನಾಕಾಶಮಂ. ತುಂಬು ಪೆರೆ
ತೇಲಿರ್ದುದಂಚೆದುಪ್ಪುಳ್ ಮುಗಿಲನೊಲ್ಲದೆ,
ದಿಗಂಬರನವೋಲ್. ದೂರದೂರಮೆಸೆದುವು ತಾರೆ :    ೩೪೦
ಕೃತ್ತಿಕಾ ರೋಹಿಣಿಯರನುಗಾಮಿ ಮೃಗಶಿರಕೆ
ಹೊಂಚುತಿರ್ದುದು ಮೃಗವ್ಯಾಧ ಬಾಣೋಜ್ವಲ
ಗಭಸ್ತಿ. “ಬೆಳ್ದಿಂಗಳುಂ ನೆರಮೆನಗೆ, ದೇವಿಯಂ
ಪುಡುಕಿದಪೆನೀ ಲಂಕೆಯಂ ಗೋರಿವೇಂಟೆಯೊಲ್
ಸೋಸುವೆನ್ !” ನಿಚ್ಚಯ್ಸಿ, ಕೇಳ್, ಗಿರಿಪಥವನೇರ್ದನಾ
ಸುಗ್ರೀವನಾಜ್ಞಾ ದೃಢಪ್ರತಿಜ್ಞಾವೇಶಕಲಿ,
ಕರ್ಮಕೌಶಲಿ, ಯೋಗಿ ಮೇಣ್ ಕ್ಷಿಪ್ರಕ್ರಿಯಾಕಾಂಕ್ಷಿ,
ರಾಕ್ಷಸ ಧರಾ ವಕ್ಷಮಂ ತೊತ್ತಳದುಳಿವವೋಲ್ !