ತೊಲಗಿತಾ ಓ ಲಕ್ಷ್ಮಣಾ ದಿನಂ ; ಕಳೆದುದಾ
ಓ ಲಕ್ಷ್ಮಣಾ ರಾತ್ರಿ ; ಮರುದಿನಂ ಬಿಟ್ಟರಾ
ಓ ಲಕ್ಷ್ಮಣಾ ಸ್ಮೃತಿಯ ಪಂಚವಟಿ ಧಾತ್ರಿಯಂ.
ಶಕುನಿ ವಾಣಿಯ ಶಕುನವಲ್ತೆ ? ನಡೆದರೊ ನೆಮ್ಮಿ
ನೈರುತ್ಯಮಂ. ನಡೆಯೆ, ಪಳು ನಿಬಿಡಮಾದತ್ತು ;
ಕಾಡುಗಳ್ತಲೆ ಕರಂಗಿದತ್ತು ; ಪಟುವಾದುದಯ್
ಝಿಲ್ಲಿಕಾ ಕಂಠಕೃತಿಕರ್ಕಶಂ ; ಬೆಬ್ಬಳಿಸಿ
ಬೆದರೆ ಕಿವಿ, ಘೂಗೈದುದಡವಿಯಂ ರವವಿಕೃತಿ
ಮಂಗಟ್ಟೆವಕ್ಕಿಯಾ. ಇದು ನಿರ್ಜನತೆಯಲ್ತು :
ನೈರುಶ್ಯದಾಕಳಿಕೆ ! ಇದು ಮೌನಮಲ್ತಲ್ತು :    ೧೦
ರವಶವಂ ! ಎನಲ್ ರಾಮಂಗೆ ತನ್ನ ಅಂತಃಸ್ಥಿತಿಯ
ರಣರಣಕಮಲ್ಲಿ ಬಹಿರಂಗವಾದಂತಾಗಿ
ಕಡಿದು ಕುಳಿತನ್ ಹತಾಶೆಯ ಮಂಕು ಬಡಿದಂತೆ :
“ಏತಕೆಲ್ಲಿಗೆ ಎತ್ತ ಹೋಗುತಿಹೆವಾವಿಂತು,
ಸೌಮಿತ್ರಿ ?” “ದೇವಿಯನ್ವೇಷಣೆಗೆ !” “ಆರವಳ್
ಆ ದೇವಿ ?” ಎನುತ್ತೆ ನಗೆದೋರ್ದಣ್ಣನಕ್ಷಿಯೊಳ್
ಬೆಳ್ಪನಲ್ಲದೆ ಮತ್ತೆ ಬೇರೇನುಮಂ ಕಾಣದಾ
ಲಕ್ಷ್ಮಣಂ : “ಬೇಡ, ಬೇಡಣ್ಣಯ್ಯ ; ನಿನ್ನಚಲ
ಧೈರ್ಯಮಂ ನೈರುಶ್ಯಕೌತಣಂಗೆಯ್ಯದಿರ್.
ನೆನೆ ಭರದ್ವಾಜ ಋಷ್ಯಾಶ್ರಮದ ದೃಶ್ಯಮಂ ;  ೨೦
ವಜ್ರರೋಮನ ಚಿತ್ರಕೂಟಮಂ ; ಅತ್ರಿಯಂ,
ಅನಸೂಯೆಯಂ ; ನೆನೆ ಅಗಸ್ತ್ಯ ಗುರುದೇವನಂ ;
ಬಗೆಗೆ ತಾರಯ್ಯ ವಿಶ್ವಾಮಿತ್ರ ಮಂತ್ರಮಂ !
ನಿನ್ನ ಮೈಮೆಯ ನೀನೆ ಮರೆವೆಯೇನ್ ? ತನಗೆ ತಾಂ
ನಿಂದೆಯಪ್ಪುದೆ ಕೊಂದುಕೊಂಡಂತೆ ; ನನ್ನನುಂ
ಕೊಂದಂತೆ ! ನಿನ್ನ ಮಹಿಮೆಯ ನೆನಹೆ ನನಗಿಂತು
ವಜ್ರ ಚಿತ್ತವನಿತ್ತು ಹೊರೆಯುತಿರೆ, ನೀನಿಂತು
ಕಳವಳಿಸುತಾಸೆಗೇಡಿನ ಕಿಬ್ಬಿಗುರುಳುವೆಯ,
ಚಂದ್ರಚೂಡನ ರುಂದ್ರ ಕೋದಂಡಮಂ ಮುರಿದು
ಮೈಥಿಲಿಯನೊಲಿದ ಜಗದೇಕೈಕವೀರ, ಹೇ    ೩೦
ಲೋಕ ಸಂಗ್ರಹ ಶಕ್ತಿಯವತಾರ ?”
ಲಕ್ಷ್ಮಣಂ
ನುಡಿಯುತಿರಲಿಂತು, ರಾಮಂಗಾದುದನುಭವಂ
ಮಾನಸಿಕದೊಂದದ್ಭುತಂ : ತುಂಬಿದುದು ಮಂಜು
ಕಾಡೆಲ್ಲಮಂ. ಸೃಷ್ಟಿಯಸ್ಫುಟಮಾಯ್ತು. ಭೀತಿ,
ಆಕಾರವಾಧಾರವೊಂದನರಿಯದ ಭೀತಿ ತಾಂ
ಛಾಯೆ ಛಾಯೆಗಳಾಗಿ ರಾಹುವೋಲಲೆದತ್ತು
ಕುಳಿರ್ಚಳಿಗಳಂ ಸುಯ್ದು. ನೋಡುತಿರೆ ರಾಘವಂ,
ಮೂಡಿತೊಂದಕಶೇರು ಕಶ್ಮಲ ಸರೀಸೃಪಂ,
ಮಂಜೆ ಮೈಗೊಂಡಂತೆವೋಲ್. ಶ್ಲೇಷ್ಮಚರ್ಮದಿಂ
ಭೀಕರತೆವೆತ್ತುದಾ ವಿಕೃತ ತಿರ್ಯಗ್ಯೋನಿ,     ೪೦
ಕುಕ್ಷಿಗಂ, ವ್ಯಾಳಾಕೃತಿಯ ರಾಕ್ಷಸಂ : ಇಲ್ಲ ಕಯ್,
ಇಲ್ಲ ಕಾಲ್, ಎಲ್ಲ ಮೆಯ್ ! ಹೊಟ್ಟೆ ತಾನದೆ ಮಂಡೆ !
ಕಾಲುಗಳೊ ? ತೋಳುಗಳೊ ? ಕಿವಿಗಳಿರ್ಪೆಡೆಯಿಂದೆ
ಚಾಚಿದವು ಯೋಜನಂ, ಪಂಚ ನಖ ನಿಶಿತಾಗ್ರಗಳ್
ದೀರ್ಘ ಬಾಹುದ್ವಯಂ ! ಹೊಟ್ಟೆ ಮಂಡೆಯ ಮಧ್ಯೆ
ಭೀತಿ ಭೂತಗಳೆರಡು ತೂನ್ತಿನವತಾರಮಂ
ನೋಂತುವೆನಲಾಭೀಳಮಾದುವು ಮಹಾ ಗುಹಾ
ಕುಕ್ಷಿ ಕುಹರಾಕ್ಷಿ ! ತನ್ನಾ ನಿರಾಶೆಯೆ ತನಗೆ
ಕಾಣಸಿತೆನಲ್ಕಾ ಕಬಂಧನಂ ಕಂಡೊಡನೆ
ನಡುಗಿದುದು ತನು ತಪನಕುಲಗೆ. ಹದುಗಿತು ಬಲ್ಮೆ.     ೫೦
ಹಿಮ್ಮೆಟ್ಟಿದುದು ಹೆಮ್ಮೆ ; ಹೆಡೆಮುಚ್ಚಿ ಸೆಡೆತುದಯ್
ಪೌರುಷದ ಫಣಿ. ಪಲಾಯನ ತೇಜಿಯನ್ನೇರಲ್ಕೆ
ತವಕಿಸಿತು ಜೀವಮಾ ಜಾನಕಿ ಜೀವಿತೇಶ್ವರಗೆ !
ಓಡಲೆಳಸಿದನಾದೊಡೇಂ ? ಕಾಲ್ ಕೀಳಲಾರದೆ
ಕೆಡೆದುರುಳ್ದನು ಬಡಿದು ಭಯಮೂರ್ಛೆ. ಮೌನದಿಂ
ದೃಢತೆಯಿಂದೆರೆಗೊಳ್ವ ರಾಹುಛಾಯೋರಗಂ
ತೆವಳಿಕೊಂಡುರುಳಿದುದು ಹೊಡೆಗಾಲಿ ತೇರಂತೆ,
ಹೆಬ್ಬಂಡೆಯಂತೆ, ದುಶ್ಶಕುನ ಕೇತುವಿನವೋಲ್.
ನೈರಾಶ್ಯರಾಕ್ಷಸ ಕಬಂಧನೊಯ್ಯನೆ ಮುಂದು
ಮುಂದಕ್ಕೆ ಗಮಿಸಿದನ್ ; ಮೊನೆಯುಗುರ್ ಬೆರಳ್ಗಳಾ   ೬೦
ತೋಳ್ಗಳಿಂದಾಕ್ರಮಿಸಿದನ್ ದಶರಥನ ಸುತನ
ದೇವ ಗಾತ್ರವನಂತೆ ಕೌಸಲೆಯ ಕಂದನಾ
ಕೋಮಲ ಶರೀರಮಂ :
“ಕೆಟ್ಟೆನಯ್, ಲಕ್ಷ್ಮಣಾ !
ಪಿಡಿದನಸುರಂ. ಕೈಯೆ ಬಾರದಯ್. ನೆಗಹಲೆಳಸಲ್
ಮೇಲೇಳದಿದೆ ಕತ್ತಿ. ಓಡಲುಮಾರೆನಯ್ಯಯ್ಯೊ
ಕೆಟ್ಟುದಯ್ ಕಾಲ್ ಬಲಂ. ದೂರ ಸಾರ್, ದೂರ ಸಾರ್ ;
ಬಾರದಿರೆನಗೆ ಹತ್ತೆ. ನಿನ್ನನುಂ ಪಿಡಿವನೀ
ರಾಕ್ಷಸಂ. ನೀನಾದಡಂ ಪೋಗಯೋಧ್ಯೆಯಂ
ಸೇರಯ್ಯ. ಸಂತಯ್ಸು ಭರತನಂ. ಮಾತೆಯಂ.
ನನಗಿದೆ ವಲಂ ಒಲಿದ ಗತಿ. ಮೈಥಿಲಿಯನುಳಿದು         ೭೦
ನನಗಿನ್ನಯೋಧ್ಯೆಯೇಂ ಮರಣಮೇಂ ? ಸಾವೆ ದಲ್
ದಿಟಮೆನಗೆ ಬಾಳ್ಕೆ !” ರಘುವರನೊರಲುತಿರಲಿಂತು
ಮೇಲ್ವಾಯ್ದನೂರ್ಮಿಳಾವಲ್ಲಭಂ. ಖಡ್ಗದಿಂ
ಕಡಿಯತೊಡಗಿದನಸುರ ಬಾಹುವಂ. ಕತ್ತರಿಸೆ
ತೋಳ್, ಇರಿದನಕ್ಷಿಯಂ, ಕುಕ್ಷಿಯಂ. ನೋಡುತಿರೆ
ರಾಮನಾ ರಕ್ಕಸಂ ಮಾಯವಾದನು ಬಿರಿದ
ದುಃಸ್ವಪ್ನದಂತೆ. ನೈರಾಶ್ಯದಿಂದುದ್ಭವಿಸಿ
ತೋರ್ಪವೋಲಾಶಾಮರೀಚಿ ತಾಂ, ಬೃಂದಾರಕಂ
ಮೈದೋರ್ದನೊರ್ವನ್ ; ಮತ್ತೆ ಕೈದೋರಿದನ್, ಶಬರಿ
ಕಾಯುತಿರ್ದಾಶ್ರಮ ದಿಶಾಶಾ ದಿಗಂತಕ್ಕೆ !    ೮೦
ಬೆಮರ್ದು ನೆಗೆದೆಳ್ದನ್ ರಘೂದ್ವಹಂ ಕಣ್ದೆರೆದು,
ಮೈತಿಳಿದಂ ಭಯಮೂರ್ಛೆಯಿಂ. ಸುಯ್ದನಿಂತೆಂದು :
“ಬದುಕಿದೆನೊ ನಿನ್ನಿಂದೆ, ಸೌಮಿತ್ರಿ.” “ತಿಳಿದವಂ
ತನ್ನ ನೆರಳಿಗೆ ತಾನೆ ಹೆದರುವನೆ” “ತಿಳಿದವಂ !
ತಿಳಿದ ಮೇಲಲ್ತೆ ?” “ಪೃಥ್ವಿಗೆ ರಾಹು ಬೇರೆಯೇಂ
ತನ್ನ ನೆಳಲಲ್ಲದೆಯೆ” “ಅದ್ರಿಯಾದೊಡಮೊರ್ಮೆ
ಭೂಮಿ ಕಂಪಿಸೆ ದೃಢತೆ ಹಿಂಗದಿರ್ಪುದೆ ? ಅಂತೆ ತಾಂ
ನಡುಗುತಿದೆ ರಾಮಧೈರ್ಯಂ, ತಮ್ಮ, ಆ ಭೂಮಿ
ಸುತೆಗಾಗಿ. ನಿಲ್ಲುವುದು ನಿನ್ನ ನೆಮ್ಮಿರಲದ್ರಿ, ಕೇಳ್,
ಸುಸ್ಥಿರಂ. ನಿನ್ನಿಂದೆ ಸತ್ತನೊ ನಿಶಾಚರಂ ;     ೯೦
ಕೊಂದೆನೊ ನಿರಾಶೆಯಂ ; ಗೆಲ್ದೆನೊ ಕಬಂಧನಂ ;
ಹತವಾದುದೊ ಹತಾಶೆ. ಕಿರಣದೋರಿದುದಾಶೆ.
ಬಾ, ನಡೆವಮಿಲ್ಲಿಂದೆ ; ಬಲ್‌ಗಜ್ಜಮಿದಿರಿರ್ಪುದಯ್
ಮುಂದೆ, ಸೌಮಿತ್ರಿ !” ಎಂದಪ್ಪಿದಣ್ಣನಪ್ಪಿದನ್ ;
ಸಂತೈಸಿದನ್ ಲಕ್ಷ್ಮಣಂ. ಮೇಲೆ ಮುಂಬರಿದು
ತೆರಳ್ದರವರಿರ್ವರುಂ, ಮೂಡಿದಾಸೆಗಳವಳಿ
ಜೋಡಿ ನಡೆವಂತೆ :
ಆ ಬೆಳ್ದಿಂಗಳಿರುಳಿನೊಳ್
ಮುಪ್ಪು ಜೌವನಗನಸು ಕಾಣ್ಬೊಂದು ಮಾಳ್ಕೆಯಿಂ
ಮುದುಕೆ ಕಂಡಳ್ ಕನಸನಾ ಶಬರಿ. ನಡುರಾತ್ರಿ
ಮುಗುಳುನಗುತೆದ್ದು ಕುಳಿತಳ್ ತನ್ನ ಮಲಗಿರ್ದ          ೧೦೦
ಪುಲ್ವಾಸಗೆಯ ಮೇಲೆ. ಗಗನ ನೀಲಾಭನಂ
ಮರಳಿ ಚಿತ್ರಿಸಿಕೊಂಡಳಾ ಸ್ವಪ್ನದರ್ಶನದ
ಶ್ರೀಮೂರ್ತಿಯಂ. ತುಂಬಿ ತುಳುಕಿತೆರ್ದೆ ಮುದಿಯಳ್ಗೆ.
ಹರಿಸವುಕ್ಕುವ ಮೊಗಕೆ ಸುಕ್ಕು ತೆರೆತೆರೆಯಾಗೆ
ಪುಂಡಿನಾರಿನ ತೆರನ ಬೆಳ್ನರೆ ನವಿರ್ದಲೆಯ,
ಬಚ್ಚು ಪಲ್ಲಿಲಿವಾಯ, ಕುಡುಬೆನ್ನ ಹಣ್ಮುದುಕಿ
ಶಬರಜ್ಜಿ ನಡುಗಿ ನಡೆದಳ್ ; ಗುಡಿಯ ಬಾಗಿಲಂ
ತೆರೆದು ನೋಡಿದಳು : ಆ ಚಂದ್ರಸುಂದರ ರಾತ್ರಿ
ಮುದುಕಿಯಂ ಕಂಡು ಕನಿಕರದಿಂದೆ ಕರಗಿತೆನೆ
ತಿಂಗಳ್ ಬೆಳಕು ಚೆಲ್ಲಿ, ಶಬರಿಯ ಕುಟೀರಮಂ            ೧೧೦
ಸುತ್ತಲೆತ್ತೆತ್ತಲುಂ ಹಸರಿ ಹಬ್ಬಿದ ಹಸಲೆ
ರಾಜಿಸಿತು ಮುದುಕಿಯ ತಲೆಯವೋಲೆ, ತೃಣಮೌನಿ
ತಾನಾಗಿ. ತೃಷಿತ ದೃಷ್ಟಿಯನಟ್ಟಿ, ನಿಸ್ಸೀಮ
ಘಾಸ ಸೀಮಾರ್ಣವದ ವಿಸ್ತೀರ್ಣದೊಳ್ ಮನಂ
ಲಯಮಾಗೆ ನೋಡಿ, ನಿಡುಸುಯ್ದು, ತನ್ನೊಳಗೆ ತಾಂ
ಶಬರಿ : “ನೀನೆಂದಿಗೆ ಬರುವೆಯಯ್ಯ, ಓ ನನ್ನಯ್ಯ,
ಕಂದಯ್ಯ, ರಾಮಚಂದ್ರಯ್ಯ ? ಗುರುದೇವನಾ
ಮುನಿ ಮತಂಗನ ಮಾತು ಬೀತಪುದೆ ? ನಿನಗಾಗಿ
ಕಾದಿರುವೆನೀರೈದು ವತ್ಸರಗಳಿಂ, ವತ್ಸ.
ಪಣ್ಛಲಂಗಳನೆಲ್ಲ ಬಿತ್ತಿ ಬೆಳೆದಣಿಮಾಡಿ           ೧೨೦
ಕಾಯುತಿಹುದೆನ್ನಾಶ್ರಮಂ. ನೋಯುತಿದೆ ಮನಂ,
ನನ್ನ ಓ ಇಷ್ಟಮೂರ್ತಿ, ನೀಂ ಬರ್ಪ ಮುನ್ನಮೆಯೆ
ಕಾಯವಳಿವಳ್ಕಿಂದೆ. ಹಣ್ಣುಹಣ್ಣಾದ ಈ
ಮುಪ್ಪಿನೊಡಲಿನ್ನೆನಿತು ತಾಳುವುದೊ ? ಬಾಳುವುದೊ ?
ಬಾಳ್ದೊಡೇನೀ ಒಡಲ್ ? ಕಣ್ಣಾಗಳೆಯೆ ಮಬ್ಬಾಗಿ,
ಮಂಜಾಗಿ, ಹಿಂಜರಿಯುತಿದೆ ದಿಟ್ಟಿ ! ಕಣ್ಣಳಿದ
ಮೇಲೆ ನೀ ಬಂದರಯ್ಯಯ್ಯೊ, ಕಣ್ಣಾರ್ವಿನಂ
ನಿನ್ನನೆಂತಯ್ ನೋಳ್ಪೆ ? ಕೈಯಿಂದ ಮೈಯೆಳವಿ
ಸಂತಸಂಬಡುವೆನಾದೊಡಮೆಂತು ತಣಿಸುವೆನೊ ಪೇಳ್
ಕಣ್ಗಳೀ ನೀರಳ್ಕೆಯಂ ? ಬಾರ, ಓ ಕಂದಯ್ಯ,  ೧೩೦
ಕಣ್ಕಿಡುವ ಮೊದಲೆ ; ಬಾರಯ್ಯ, ಈ ಬಾಳ್ಕೆಡುವ
ಮುನ್ನಮೆನ್ನೆರ್ದೆಗೆ ತಾರಯ್ಯ ನಿನ್ನಾ ಶಾಂತಿಯಂ !”
ನಿಶೆಯ ನಿಃಶಬ್ದತೆಗೆ ಭಂಗ ಬಾರದ ತೆರದಿ
ತನ್ನೊಳಾಳಾಪಿಸುತೆ ಗುಡಿಸಿಲೊಳಗಾದಳಾ
ಶಬರಜ್ಜಿ, ಬೇಡಿತಿ, ಮತಂಗಮುನಿವರ ಶಿಷ್ಯೆ.
ಇರುಳಳಿದುದುಷೆ ಮೂಡಿತೊಯ್ಯನೆಯೆ ಬೆಳಗಾಯ್ತು.
ಬಿಲ್ಲೆತ್ತರದ ಕರಡವುಲ್ ಬಿತ್ತರದ ಬಯಲ್
ಮಿಳಿರ್ದತ್ತು ಕುಳಿರ್ಪನಿಗಳಿಂದೆ, ತುರುಗೆಮೆಗಳಂ
ಪೋಲ್ದು. ಮಾತಂಗಿಯೊಲೆ ಪಸಲೆಯುಂ ಪಾರ್ದುದೆನೆ
ನಿಡುಬಯಸಿ, ನಿಡುಸುಯ್ದರಿರ್ವರುಮೊಂದುಗೂಡಿ.       ೧೪೦
ಮುದುಕಿಗೇಂ ಕಳವಳಂ? ಏಕೆ ತಲ್ಲಣಮೇಕೆ
ಉಲ್ಲಸಂ ? ಒಳವೊಗುವಳೆಲೆವನೆಗೆ. ಒಯ್ಯನೆಯೆ
ಹೊರಚಿಮ್ಮಿ ನಿಂತು ನೋಡುವಳೆನಿತೊ ಕಾಲಮಾ
ಬುವಿಯ ಬಯ್ತಲೆಯಂತೆ ಬಯಲ ನಡು ನಿಡುಪರಿದು
ಸಮೆದ ಕಾಲ್ದಾರಿ ಕೀಳ್ವಟ್ಟೆಯಂ. ತನ್ನೊಳಗೆ
ಗೊಣಗುವಳ್ ; ಗುಣಿಸುವಳ್ ; ಮತ್ತೆ ಮತ್ತೊಳವೊಕ್ಕು,
ತೆಂಗಿನ ಗರಿಯ ಪೊರಕೆಯಂ ತಂದು, ಮನೆ ಮುಂದೆ
ಗೋಮಯಂ ಬಳಿದ ಜಗಲಿಯ ತರಗು ಸದೆ ಗುಡಿಸಿ,
ಸೊಂಟಗೈಯಾಗಿ ನಿಲ್ವಳ್. ಮತ್ತೆ ನಿಡುನಟ್ಟು
ನಿಟ್ಟಿಪಳ್ ದೂರ ವನ ಸೀಮಾನ್ತ ಸೀಮಂತ    ೧೫೦
ರೇಖೆಯೆನಲೊಪ್ಪುವಾ ಬಟ್ಟ ಬಯಲ್ವಟ್ಟೆಯಂ.
ಶಬರಿಗಿಂತಿರೆ ನಿರೀಕ್ಷಣೆಯ ನೋಂಪಿ, ಪೊಳ್ತೇರ್ದು
ಪಗಲಾಯ್ತು. ಬಾನ್ಗಾವಲಿಯ ಮಧ್ಯೆ ಕಿರಣರವಿ ತಾಂ
ಬೆಳ್ಳಿಹನಿಯಾಗಿ ಕರೆದುದು ಬಿಸಿಲ ಕೆಂಬೇಗೆಯಂ.
ಪುಲ್ಗಾವಲಿನ ನಡುವೆ ಮುದುಕಿಯ ಕಣ್ಣಿಗಾರೊ
ಬರ್ಪವೊಲ್ ಭ್ರಾಂತಿ ! ನಿಂತಳ್ ಶಬರಿ ಡೊಂಕಾಗಿ !
ಕಟಿಗೊಂದು ಕೈಯಾಗೆ, ಪಣೆಗೊಂದು ಕೈಯೆತ್ತಿ,
ಸುರ್ಕ್ಕು ತಾಂ ಪುರ್ಬ್ಬಿನ ತೋಲ್ಗೆ ತೆರೆಗಳನೊಡರ್ಚಲ್ಕೆ
ನೋಡಿದಳ್ …. ನೋಡಿದಳ್ …. ಕಣ್ಮೊಳೆಯ ಕೀಲ್ಮಾಡಿ
ದೇಶದೇಹವನಂತೆ ತನ್ನ ಸಂದೇಹಮಂ         ೧೬೦
ಕೊರೆದಳ್, ತಿರುಪ್ಪಿ ಕೊರೆದಳ್, ಮರಳಿಮರಳಿ ! ಹಾ,
ಕಂಡರಿವಳೇಂ ಶಬರಿ ರಾಮಲಕ್ಷ್ಮಣರನಾ
ದುಃಸ್ಥಿತಿಯ ವೇಷದಲಿ ?
ಭಗವದಾಗಮನಮೇಂ
ಭಕ್ತನ ನಿರೀಕ್ಷಿಸಿದ ರೂಪದಿಂ ಬಂದಪುದೆ ?
ಸುಖದವೋಲಾಶಿಸಲ್ ದುಃಖದೊಲ್ ಮೈದೋರಿ,
ಭಕ್ತನಿತಂ ಸುಲಿದು ನೈವೇದ್ಯಮಂ ಕೊಳದೆ
ಪೇಳ್ ಅಹಂಕಾರಮಂ ದಿವ್ಯಶೂನ್ಯತೆಗದ್ದುವೊರ್
ಸಂಪೂರ್ಣತಾ ಸಿದ್ಧಿಯೋಲ್ !
ಹೊದೆಹೊದೆಗೆದರ್ದ ತಲೆ,
ಕೊಳೆ ಬೆವರ್ ಪತ್ತಿದುಡೆ, ತೇಜಂ ಮಸುಳ್ದ ಮೊಗಂ,
ಖಿನ್ನತೆಯ ಕೋರೆಯುತ್ತಿದ ಕಪೋಲದ ಪೊಲಂ           ೧೭೦
ದಯಿತಾ ವಿಯೋಗಾಗ್ನಿಯಿಂಧನ ಶರೀರನಂ,
ರೂಕ್ಷರೂಪದ ರಾಮನಂ ಕಂಡು ಮಂದಾಕ್ಷಿ,
ಶಬರಿ, ಬೇಡಂಗೆತ್ತಳೆನೆ, ಮೈಥಿಲೀಪ್ರಿಯನ
ದಾರುಣ ಸ್ಥಿತಿಗೇತಕಿನ್ ಬೇರೆ ಸಾಕ್ಷಿ ? ಆ
ಬಿಲ್ವೊತ್ತರಂ ತನ್ನ ಬಿಯದ ನಂಟರ್ಗೆತ್ತು,
ಕೋಗಿಲೆಯ ಮರಿಯೆಂದು ತುಡುಕಿದರೆ ಕಾಗೆಮರಿ
ಕೂಗಿದವೊಲಾಯ್ತೆಂದು ಬಗೆಯುಲ್ಲಸಂ ಕುಗ್ಗಿ,
ಮುದುಕಿ ಆ ಬಂದರಂ ಭೀಕರಾಕಾರರಂ
ನೋಡುತಿರೆ, ಲಕ್ಷ್ಮಣಂ :
“ದಣಿದು ಬಂದಿಹೆವಜ್ಜಿ ;
ಬಿಸಿಲಳುರುತಿದೆ ; ಗುಡಿಸಲೊಳಗಿನಿತು ತಾವಿತ್ತು,       ೧೮೦
ತಿನಲಿತ್ತು, ಕರುಣಿಸೈ ನಿನ್ನ ಈ ಪರದೇಶಿ
ಕಂದರಂ ಚಿರಋಣಿಗಳಂ !”
“ಕಂಡವರ್ಗೆಲ್ಲ,
ಬರ್ಪ ಬೇಡರ್ಗೆಲ್ಲಮುಣಿಸಿತ್ತು, ಬೀಡಿತ್ತು,
ಮೆಲ್ವಾಸನೀಯೆ ನಾನೇತು ಅಡುಗೂಳಜ್ಜಿ
ಅಲ್ಲ ಕಾಣಯ್ಯ !” ಇಂತು ನಿಷ್ಠುರವೆಂದೊಡಂ
“ಬಡವಳಿದ್ದುದನೀವೆ : ಬನ್ನಿಂ !” ಎನುತ್ತಾ ಅಜ್ಜಿ
ನಡೆದಳೊಳಯಿಂಕೆ. ಲಕ್ಷ್ಮಣನಣ್ಣನಂ ನೋಡಿ
ನಸುನಕ್ಕನಿರ್ವರುಂ ಮುದುಕಿಗೆ ಮನಂ ಕರಗಿ
ಪದೆದು ಪೊಕ್ಕರು ಪರ್ಣಶಾಲೆಯಂ.
ಉರಿಬಿಸಿಲ
ಝಳದಿಂ ಗುಡಿಸಲೊಳಗೆ ಬಂದಿನಿತನಂತರಂ            ೧೯೦
ಕಣ್‌ತಂಪು ಶಾಂತಿಯಂ ಪಡೆದ ಬೇಡಿತಿ ಮರಳಿ
ನೋಡಿದಳ್ ಬಂದತಿಥಿ ಮಕ್ಕಳಂ ; ಮೇಣ್ ಶಂಕೆಯಿಂ :
“ನೀಮೆತ್ತಣಿಂದಮೈತಂದಿರಯ್ ? ನೀಮಾರೊ,
ಕಂದರಿರ ? ನನ್ನ ಈ ಕಣ್ ಮಬ್ಬು ; ಬಗೆ ಮಂಜು ;
ತಿಳಿಯೆನೇನೊಂದುಮಂ.”
ಊರ್ಮಿಳೇಶಂ : “ಅಜ್ಜಿ,
ಮನೆಯಿಲ್ಲ ಮಾರಿಲ್ಲ ; ಮನೆಗೆಟ್ಟು ನೆಲೆಗೆಟ್ಟು
ಕಾಡು ಬೀಡಾದರೆಂ …. ಮೀಹಕೇಂ ಕೊಳಮಿಹುದೆ
ಇಲ್ಲೆಲ್ಲಿಯಾದೊಡಂ, ತಾಯಿ ?”
ಅಚ್ಚರಿವಡುತೆ
ಶಬರಿ : “ಮೀಹಕ್ಕೆ ? (ಬೇಡರಿಗೇಕೊ ಮಜ್ಜನಂ !)
ಕೊಳಮಿರ್ಪುದಲ್ಲಿ ಆ ಪೇರಿಳೆಯ ಮರದ ಅಡಿ. –          ೨೦೦
ನಿಮ್ಮಂತೆ ಮನೆಗೆಟ್ಟು ನೆಲೆಗೆಟ್ಟು ತೊಳಲುವರ್
ಈ ನಾಡೊಳೆನಿಬರೋ ? ಏಂ ಕೇಡುಗಾಲಮೋ ?
ಅರಗುಲಿಗಳೊರ್ವನ ಸತಿಗೆ ಮತ್ತೊರ್ವನಳಪುವಂ !”
ಬೆಚ್ಚಿ ನುಡಿದನ್ ದಾಶರಥಿ ಮೊಳಗು ದನಿಯಿಂದೆ :
“ಆರ ಸತಿಗಾರಳುಪಿದರು, ಅಜ್ಜಿ ?”
“ಹೋಗು, ಮಗು,
ಮಿಂದು ಬಾ. ಕತೆವೇಳ್ವೆನುಂಡಮೇಲಾ ಹೊಲಸು
ವಾರ್ತೆಯಂ”
ಮೀಯಲೈದಲ್ಕಿರ್ವರುಂ ಕೊಳಕೆ,
ಮುದುಕಿ ಕೌತುಕಕಾಗಿ ಮುಟ್ಟಿ ನೋಡಿದಳವರ
ಪಿಟಕಮಂ, ಬಿಲ್ಗಳಂ, ಬತ್ತಳಿಕೆಯಂ, ಮತ್ತೆ
ನಾರುಡೆಗಳಂ. ವಸ್ತುವೊಂದೊಂದರಿಂದಾಕೆ
ಬೆಚ್ಚುತಚ್ಚರಿವಟ್ಟಳಾದೊಡಂ, ತನ್ನೂಹೆ
ರಚಿಸಿರ್ದ ರಾಮನಂ ಕಂಡಳಿಲ್ಲಾ ಬಂದ
ಕೈರಾತ ರೂಕ್ಷಾವತಾರರಲಿ.
ಅನಿತರೊಳ್
ಮಿಂದು ಬಂದರು ರಾಮ ಸೌಮಿತ್ರಿ. ಕರ್ಪ್ಪಿರ್ದ
ಕನಕಮಂ ಕೂರ್ಚಿಸಿದವೋಲಾಗೆ, ಸೋಜಿಗದ
ಸೂಜಿಮೊನೆ ಏರಿದತ್ತಜ್ಜಿಯ ಕುತೂಹಲಂ.
ಬೇಡರ್ಗದೆತ್ತಣಿಂದಾ ತೇಜಮಾಳ್ತನಂ, ಮೇಣ್
ನುಣ್ಪುನುಡಿ, ನಯದ ನಡೆ ? ದೊರೆಮಕ್ಕಳಿರವೇಳ್ಕುಮ್
ಎಂದಾ ಮತಂಗಮುನಿ ಶಿಷ್ಯೆ, (ಸೀತೆಯನುಳಿದು
ಬಂದನೀತಂ ರಾಮನಲ್ಲೆಂದು ತರಿಸಂದು,)    ೨೨೦
ನಳನಳಿಪ ಸುಳಿದಳಿರ ಕುಡಿವಾಳೆಯಂ ಪಾಸಿ ;
ಗೀಕುಚಾಪೆಯ ಮಣೆಗಳನು ಕುಳಿತುಕೊಳಲಿಕ್ಕಿ ;
ಪಸುರ್ದೊನ್ನೆಗಳಲಿ ತಿಳಿನೀರ್ಗಳಂ, ಸಸಿಯಡಕೆ
ಹೊಂಬಾಳೆಗಳಲಿ ಕೆನೆವಾಲ್ಗಳಂ ಜೇನ್ತುಪ್ಪಮಂ
ತಂದಿಟ್ಟು ; ನೂಲೆಗೆಣಸಂ, ಬಾಳೆವಣ್ಗಳಂ,
ಕಂದಮೂಲಂಗಳಂ, ಹಣ್ಣುಹಂಪಲ್ಗಳಂ,
ಸೌತೆ ಪಚ್ಚಡಿಗಳಂ, ಮಣಿಹೆಂಬೆಯಂ, ಮತ್ತೆ
ಹಚ್ಚನಕ್ಕಿಯ ಬೆಚ್ಚನನ್ನಮಂ ಮೊಸರುಮಂ
ಬೆಲ್ಲಮಂ ಬೆಣ್ಣೆಯಂ ಬಡಿಸಿ, ಸವಿನುಡಿ ನುಡಿಸಿ,
ಮುಗುಳುನಗುತೆಂದಳಿಂತು :
“ಆರ ಸಂಪದಮಾರ್ಗೊ ?  ೨೩೦
ನಿಮ್ಮ ಸಯ್ಪಿದನವರಿಗಾಂ ಬಡಿಸಲೇನಳವೆ ?
ತಣಿಯುಂಡು ತಣಿಯಿರಯ್, ಮಗುಗಳಿರ. ಬಂದತಿಥಿ
ಯಾರಾದರೇನಂತೆ ?”
“ಆರ ಸಂಪದಮಾರ್ಗೆ
ಹೇಳಜ್ಜಿ ? ನಾವುಣುತ್ತಿರ್ಪ ಈ ಸಯ್ಪಾರ್ಗೆ
ಮೀಸಲಾಗಿರ್ದತ್ತು ? ಪುಣ್ಯವಂತನೆ ವಲಂ
ನಿನ್ನರಕೆಯಾ ಅತಿಥಿ !”
“ದಶರಥ ಕುಮಾರನಯ್ !”
ರಾಮಲಕ್ಷ್ಮಣರೊರ್ವರೊರ್ವರಂ ದೃಷ್ಟಿಸುತೆ
ಮುದುಕಿಯಂ ನೋಡುತಿರೆ :
“ಲಕ್ಷ್ಮಣಾಗ್ರಜನವಂ
ನೆಲವೆಣ್ಮಗಳಿಗಿನಿಯನಯ್ !”
ಅತ್ತಳಾ ಶಬರಿ
ಹೆಸರ ಹೇಳುವ ಹರುಷಕುಕ್ಕಿಬರಲುಮ್ಮಳಂ : ೨೪೦
“ಕಾಯುತಿಹೆನೀರೈದು ವತ್ಸರಗಳಿಂ, ಕಂದರಿರ,
ರಾಮಲಕ್ಷ್ಮಣಸೀತೆಯರಿಗಾಗಿ, ನಿಚ್ಚಮುಂ
ನಿಮಗಿಕ್ಕಿದುಣಿಸನಣಿಮಾಡಿ. ಗುರುವಾಣಿಯುಂ
ಪುಸಿಯಪ್ಪುದೇಂ ?” ಹೇಳಿದಳು ಮತ್ತೆ ಮಾತಂಗಿ
ಮುನಿ ಮತಂಗನ ಪೇಳ್ದ ರಾಮಾಗಮನ ಪುಣ್ಯಮಂ
ವಾರ್ತಾ ಭವಿಷ್ಯಮಂ. ಕೇಳಿದಳು : “ನೀವಾರೊ
ಬಡಗರಂದದಿ ತೋರುತಿರುವಿರಿ, ಕುಮಾರರಿರ ;
ಕಂಡಿರೇ, ಕೇಳ್ದಿರೇ, ರಾಮನೆಲ್ಲಿದನೆಂದು,
ಎಂದಿಗೈತಹನೆಂದು ? ಬಾಳ್ಪಯಣಮಂ ಮುಗಿಸಿ
ಹೋಹ ಮುನ್ನಮದೊರ್ಮೆಯಾದೊಡಂ ರಾಮನಾ      ೨೫೦
ದೊರೆಕೊಳ್ಳದಿಹುದೆ ಸಿರಿಮೊಗದ ಸಂದರ್ಶನಂ ?
ಶಾಂತಿನಿಧಿಯಾತನಂ ಕಾಣ್ಬುದೆ ಪರಮಶಾಂತಿ !”
ಸಜಲ ನಯನಂ ರಾಮನಾಲಿಸಿದನಜ್ಜಿಯಂ.
ನುಡಿದನು ಸಗದ್ಗದಂ :
“ಶಾಂತಿನಿಧಿಯಾತಂಗೆ
ಶಾಂತಿಯಿಲ್ಲದೆ ತೊಳಲುತಿಹನಲ್ತೆ ? ಮನೆಗೆಟ್ಟು
ಹೇರಡವಿ ಮನೆಯಾದನಂ ಶಾಂತಿನಿಧಿಯೆಂದು
ಬರಿದೆ ಬಣ್ಣಿಪೆಯೇಕೆ, ತಾಯಿ ? ಸಾಮಾನ್ಯನಂ
ದೇವಮಾನ್ಯಂಗೆತ್ತುದಜ್ಜಿ, ನಿನ್ನಳ್ಕರೂಹೆ !”
“ತೆಗೆ ತೆಗೆ ! ಮಹಾತ್ಮನಂ ತೆಗಳದಿರ್ !”
“ಬಲ್ಲೆನಾಂ
ರಾಮನಂ !”
“ನೀನರಿಯೆಯಾತನಂ !
“ನಾನರಿಯೆನೇಂ ?           ೨೬೦
ನನ್ನನಾನರಿಯೆನೆಂದಾಡುತಿಹೆ !”
ಶಬರಜ್ಜಿ,
ಬೆರಗುಹೊಡೆದಂತೆ, ರಾಮನ ಕಣ್ಗೆ ಕಣ್ಣಿಟ್ಟು
ನೋಡಿದಳ್. ರಾಮನೊಯ್ಯನೆ ಮೊಗವನಿಳುಹುತ್ತೆ,
ಕಣ್ಣೆತ್ತದುಣತೊಡಗಿದನ್ ಮತ್ತೆ. ಮುಕ್ತಾಶ್ರುಗಳ್
ಕೈ ತುತ್ತಿಗುದುರಿದುವೆ ? ಕಾಣ್ಕೆಯೋ ? ಕಲ್ಪನೆಯೊ ?
ಮಾತನುಳಿದಳ್ ಮುದುಕಿ : ತನಗರಿಯದರ್ಥದಿಂ
ಕಾಣ್ಬುದೆಂತಿತ್ಯರ್ಥಮಂ ?
ತಣಿದನಂತರಂ
ದಣಿವಾರೆ ಮಲಗಿದರ್ ಮಧ್ಯಾಹ್ನ ವಿಶ್ರಾಂತಿಯಂ.
ಬಿಳಿಮೆಯ್ಯನೆಳ್ಚತ್ತು ಹೊರಗೆ ಹೋಗಿರೆ, ನೀಲಿ
ಮೆಯ್ಯವಂ ಕನವರಿಸಿದನ್ ‘ಸೀತೆ, ಬಾ ಇಲ್ಲಿ ; ೨೭೦
ಬಾ, ಪ್ರಿಯೆ, ಜನಕಜಾತೆ !’ ಗುಡಿಸಲೊಳಗಾ ಬಳಿಯೆ
ಬೆಲ್ಲ ಬೇಲದ ಪಣ್ಗಳಂ ಬೆರಸಿ ಪಾನಕಂ
ಗೆಯ್ಯುತಿರ್ದಜ್ಜಿ ಬಂದಳು ಓಡಿ. ಸಜ್ಜೆಯೆಡೆ
ನಟ್ಟು ನಿಂತವಧರಿಸಿದಳ್ ದೇವಗಾತ್ರನಂ,
ಕನಸಿನಲ್ಲಿಯೆ ಮುಗುಳುನಗುತಿರ್ದನಂ. ನೋಡಿ
ಬಗೆಯಿಂಪನನುಭವಿಸಿದಳ್ : ತನ್ನಾ ಸೌಮ್ಯನಂ
ಕಂಡರಿತಳಾ ಮಂದಹಸಿತ ಮುಖಕಮಲದೊಳ್ !
ಆದೊಡೇನದು ಮತ್ತೆ ? ನೋಡುತಿರೆ, ಹಿಂಗಿತಾ
ಮುಖಸೌಮ್ಯತಾ ಮುದ್ರೆ ! ಸಂಕ್ಷೋಭಿಸಿತೆ ನಿದ್ರೆ ?
ವೈರದಿಂ ವಿಕಟ ಕರ್ಕಶಮಾಗೆ, ಕೋಪದಿಂ     ೨೮೦
ಕಾಕು ಕೂಗಿದನಳ್ಕಿ ಸರಿವಂತೆ ಶಬರಿ : ‘ನಿಲ್, ನಿಲ್,
ರಾಕ್ಷಸಾಧಮ, ನಿಲ್ ! ಪೇಳೆಲ್ಲಿಗುಯ್ದಪಯ್
ನನ್ನ ಸೀತೆಯನೆಲವೊ ನೀಚ !’ ಬದ್ಧಭ್ರುಕುಟಿ,
ಸೆರೆ ಬಿಗಿಯುವೋಲೌಡುಗಚ್ಚಿ, ನಿದ್ದೆಯನೊದ್ದು,
ಸೀಳ್ದು ದುಃಸ್ವಪ್ನಮಂ, ಕುಳಿತೆದ್ದನಬ್ಬರಿಸಿ,
ತನ್ನ ಸುತ್ತಂ ನೋಡಿ ಬೆಬ್ಬಳಿಸಿ. ಬೆದರೆದೆಯ
ಶಬರಜ್ಜಿ ಕಾಣಲೊಡಮಿಳುಹಿದನ್ ಮೋರೆಯಂ,
ನಾಣ್ಚಿ : “ತಪ್ಪಿದೆನಜ್ಜಿ. ಕಂಡ ಕನಸಂ ನನಸು
ಗೆತ್ತು, ಕೆಮ್ಮನೆ ನಿನ್ನನಂಜಿಸಿದೆ.” ದೊಪ್ಪನೆಯೆ
ಮುದುಕಿ ಬಿಳ್ದಪ್ಪಿದಳ್ ರಾಮನಂ : “ದಮ್ಮಯ್ಯ,           ೨೯೦
ಸಾಕಿನ್ನು, ಮರೆಮಾಡಬೇಡಯ್ಯ, ಓ ನನ್ನ
ಕಂದಯ್ಯ, ರಾಮಚಂದ್ರಯ್ಯ ! ಏನಾಯ್ತಯ್ಯ
ನನ್ನ ಮಗಳಿಗೆ ? ಹೇಳು ! ಸೀತೆ ಎಲ್ಲಿಹಳೆಲ್ಲಿ
ಕೇಡಾಯಿತೇನಾಯಿತಯ್ಯಯ್ಯೊ, ನನ್ನ ಈ
ಪಾಳ್ಗಣ್ಗಳರಿಯಲಾರದೆ ಹೋದುವಯ್ ! ಅಯ್ಯೊ,
ನಾನಾಗಳೆಯೆ ನಿನ್ನ ತೆರೆದ ಪಿಟಕದೊಳೊಂದು
ಸೀರೆಯಂ ಕಂಡೆನಾದೊಡಮರಿವುದೆಂತಯ್ಯ, ಪೇಳ್,
ಈ ಮುಪ್ಪುಬೆಪ್ಪು ?” ತಾಯಪ್ಪುಗೆಯ ತೊಟ್ಟಿಲೊಳ್
ಸಿಸುವಾಗುತಾ ರಾಮನಿಂತು : “ನಿರ್ಭಾಗ್ಯನೆಂ ;
ರಾಮನಾಂ ! ಸೀತೆಯನಸುರನುಯ್ದನಾಕೆಯಂ          ೩೦೦
ಹುಡುಕಲೆಂದಲೆಯುತಿಹೆನಜ್ಜಿ, ಲಕ್ಷ್ಮಣನೊಡನೆ
ತೊಳಲಿ !” ಶಬರಿಯ ತೋಳ್ಗಳಪ್ಪಿರ್ದ ತಳ್ಕೆಯೊಳ್
ಆ ದುಃಖ ಬಿಕ್ಕಿ ಬಿಕ್ಕಳ್ತನತಿ ದೈನ್ಯದಿಂ : ಕೇಳ್,
ತಾಯ್ಮಡಿಲೊಳಾರಾದೊಡೇಂ ತಾಂ ಬರಿ ಶಿಶುಗಳಲ್ತೆ !
ತಾಳಲಾರದ ಶೋಕಭಾರದಿಂ ದಾಶರಥಿ
ಏಳಲಾರದೆ ಶಯ್ಯೆಯಿಂ ಶಬರಿಶುಶ್ರೂಷೆಯಂ
ಬೇಳ್ಪತಿಥಿಯಾದನ್. ಪೇಳಲೇಂ ? ಮನೋರೋಗಕಾ
ಪ್ರೇಮವೆ ಭಿಷಗ್ವರಂ. ಪ್ರಾಣದೇರ್ಗಾ ಪ್ರೀತಿ ತಾಂ
ಪರಮೌಷಧಮೆನಲ್ಕೆ, ಪ್ರೀತಿಯಲ್ಲದೆ ಬೇರೆ
ಭೇಷಜಂ ಪೋ ಭ್ರಾಂತಿಯೆಂಬಿನಂ, ಕೇಳಾರೈಕೆ          ೩೧೦
ಮಾಡಿದಳೊ ತನ್ನಿಷ್ಪದೇವತಾ ಮೂರುತಿಗೆ
ಆ ತಪಸ್ವಿನಿ ಶಬರಿ. ಹಗಲೆನ್ನದಿರುಳೆನ್ನದೆಯೆ
ಮೇಣೆಚ್ಚರೆನ್ನದೆ ನಿದ್ದೆಯೆನ್ನದೆ ನಿರಂತರಂ
ರಾಮಸೇವಾ ಸಾಧನೆಗೆ ಸವೆಸಿದಳ್ ಮುದುಕಿ
ತನ್ನಾಯುವಂ. ಕೇಳುವಳು, ಹಾಸಗೆಯ ಬಳಿಯೆ
ಕುಳಿತು, ರಾಮನ ಮೆಯ್ಯನೆಳಪುತ್ತೆ, ವನವಾಸದಾ
ಕಥೆಯೆಲ್ಲಮಂ ; ಅಂತೆ ಸಂತೈಸುವಳು ಮನೋ
ವ್ಯಥೆಯೆಲ್ಲಮಂ ಧೈರ್ಯವಾಕ್ಯಂಗಳಿಂ. ಮತ್ತೆ
ಹೇಳುವಳು ತನ್ನ ಬಾಳಿನ ಕತೆಯ ವಿವರಮಂ,
ಕೇಳ್ವಗೆ ಕುತೂಹಲಂ ಖೇದವನಳಿಸುವಂತೆ.   ೩೨೦
ಹಿಂಗಲೊಲ್ಲದೆ ಹೋಯ್ತು ರಾಮನ ವಿಚಿತ್ರರುಜೆ.
ತೇಜಂ ಮಸುಳಿದತ್ತು. ಭೀಮವಪು ಕೃಶವಾಯ್ತು.
ದಿನದಿನಕೆ ರಾವಣನ ರಾಜತಂತ್ರದ ಬಯಕೆ
ಕೈಗೂಡಿದತ್ತೆಂಬಿನಂ ಮುರುಟಿದುದು ಮನದ
ಕೆಚ್ಚು ; ಮೊಗಂಬಾಡಿ ಬಿಳ್ದುದು ನೆಚ್ಚು. ಒರ್ದಿನಂ
ಕರ್ದಿಂಗಳಿರುಳಲ್ಲಿ ಲಕ್ಷ್ಮಣನೊರ್ವನೆಯೆ ಹೊರಗೆ
ನಡೆಯುತೊಂದರೆಯಗ್ರದೊಳ್ ಸುಯ್ದುಸುಯ್ದಳ್ತಳ್ತು
ಕುಳ್ತು, ಸಪ್ತರ್ಷಿಮಂಡಲಮೊಯ್ಯನೇಳ್ವುದಂ
ನೋಡುತಿರೆ, ಬೆನ್ಗಡೆಯೊಳಾರೊ ಬಂದಂತಾಯ್ತು !
ಕತ್ತಲೊಳ್ ಕಣ್ಣರಿಯದಿರ್ದೊಡಂ ಶಬರಿಯಂ  ೩೩೦
ತಿಳಿದನವಳುಂ ಕೈಯನಿಟ್ಟಳ್ ಪೆಗಲ್ಗೆ : “ಇದೇನ್,
ಕಂದ, ಲಕ್ಷ್ಮಣ, ನೀನುಮಿಂತೇಕೆ ಪೇಳೆರ್ದೆಗೆಟ್ಟು
ಕೊರಗುತಿಹೆ ?” ಗದ್ಗದಿಸುತೆಂದನ್ ಸುಮಿತ್ರಾತ್ಮಜಂ :
“ಅಜ್ಜಿ, ಅತ್ತಿಗೆಗಂತು ಪಾಡಾಯ್ತು. ಅಣ್ಣಂಗೆ ….
ಅಣ್ಣಂಗೆ …. ಅಣ್ಣನುಂ ….” ರೋದಿಸುವನಂ ತಡೆದು
ಕಣ್ಬನಿಯನೊರಸಿ : “ಬಾ ಒಳಗೆ, ಬಿಡು ದುಃಖಮಂ,
ಸೌಮಿತ್ರಿ. ನಿನ್ನಣ್ಣನುಸಿರಿಗಾಂ ಹೊಣೆಗಾರ್ತಿ.
ನನ್ನ ಗುರುಕೃಪೆಯಿಂದೆ ರಾಮನ ರುಜೆಯನೆಲ್ಲಮಂ
ಹೀರಿ ಬಿಸುಡುವೆ, ನೋಡು, ಬಾ !” ನಡೆದರಿರ್ವರುಂ
ಒಳಗೆ. ತೋಲೆಲ್ವುಗೂಡಾಗಿ ಸಜ್ಜೆಯ ಮೇಲೆ  ೩೪೦
ಮಲಗಿರ್ದ ಮೂರ್ತಿಯಂ ಬಲಗೊಂಡಳಾ ಮುದುಕಿ,
ಧ್ಯಾನಿಸುತೆ ತನ್ನ ಗುರುವಂ. ತನ್ನ ಮೋಕ್ಷಕ್ಕೆ
ತನ್ನ ದೇವತೆಯಂ ಪ್ರದಕ್ಷಿಣಾಪೂರ್ವಕಂ
ಪ್ರಾರ್ಥಿಸುವಳೆಂಬಂತೆ ಮಂತ್ರಘೋಷಂ ಗೈದು
ಕೈಮುಗಿದಳಡ್ಡಬಿದ್ದಳ್ ರಾಮನಂಘ್ರಿಯಂ
ಮುಟ್ಟಿ. ಲಕ್ಷ್ಮಣನೆಡೆಗೆ ತಿರುಗಿದಳ್. ಬೆರಗಾಗಿ
ನೋಡುತಿರ್ದಾತಂಗೆ ನುಡಿದಳ್ ನಗುತೆ : “ವತ್ಸ,
ರಾಮನಿಲ್ ಸುಕ್ಷೇಮನಯ್ ! ಪತ್ತುವಿಡು ನಿನ್ನ
ದುಕ್ಕಮಂ !” ಮರುದಿನಂ ಬೆಳಗಾಗಲೇನೆಂಬೆ ?
ರಾಮನೆದ್ದನ್ ಸುದೃಢಕಾಯದಾರೋಗ್ಯದಿಂ : ೩೫೦
ಉಜ್ವಲ ಲಸನ್ನೇತ್ರನಂ, ಸುಪ್ರಸನ್ನಾನನಂ
ಶೋಭಿಸುವಮಲ ಗಾತ್ರನಂ ಕಂಡು ಸೌಮಿತ್ರಿ
ಕೆಡೆದನೊ ಕೃತಜ್ಞತೆಗೆ ಶಬರಿಯ ಚರಣತಲಕೆ !
ಹಾಸಗೆ ಹಿಡಿದಳಾ ದಿನವೆ ಶಬರಿಯುಂ. ತನ್ನ
ಶುಶ್ರೂಷೆಯಿಂ ನಿದ್ದೆಗೆಟ್ಟಳಂ, ದಣಿದಳಂ,
ಬೆಂಡಾದಳಂ ರಾಮನುಪಚರಿಸಿದನ್, ಮರೆತು
ತನ್ನಳಲಂ. “ಮಗುವೆ, ಮರುಗದಿರೆನಗೆ. ಪಸುರೆಲೆಗೆ
ವೇಳ್ಕುಮುಪಚರ್ಯೆ ; ಪಣ್ಣೆಲೆಗೇಕೆ ?” ಮಾತಂಗಿ
ಸಂತವಿಟ್ಟಳ್ “ಧನ್ಯೆಯಾಂ, ರಾಮಚಂದ್ರ, ನೀಂ
ಪ್ರೀತಿ ಪರಿಚರ್ಯೆಗೆಯ್ಯುತಿರಲಾಂ ಶಾಂತಿಯಿಂ          ೩೬೦
ಸೇರಿದಪೆನಧ್ಯಾತ್ಮಮಂ. ಮಿಗಿಲಿದಕೆ ಸಯ್ಪು ತಾಂ
ಬೇರೇನೊಳದೆ ? – ಮಾಳ್ಪ ಕಜ್ಜಂ ನಿನಗೆ ಮುಂದೆ
ಬೆಟ್ಟವಿದೆ : ಬೆಟ್ಟಿತಾಗಿದೆ. ಕನಸನಾಂ ಕಂಡೆ, ಕೇಳ್ :
ವಿತ್ತೇಶನವರಜನ ದಶಕಂಠ ರಾವಣನ
ಲಂಕೆಯುದ್ಯಾನದೊಳ್ ಸಿತೆ ಸೊರಗಿರ್ದಳಯ್,
ಮರುಗಿರ್ದಳಯ್. ಕಂದ, ನಿನಗಂದು ಪೇಳ್ದೆನಾಂ
ನಿನ್ನಂತೆ ಮನೆಮಡದಿಗೆಟ್ಟು ಕೆಳೆಯರ್ವೆರಸಿ
ಕಾಡುಪಾಲಾದನಂ ಸುಗ್ರೀವನಂ. ನೋಡು,
ಓ ಅಲ್ಲಿ, ದಿಙ್ಮೀಖಲಾ ರೇಖೆಗಿದಿರೆದ್ದು ಕಾಣ್
ಭವ್ಯಮಾಗಿಹುದೆಂತು ಋಶ್ಯಮೂಕಂ, ದಿವ್ಯಮಾ          ೩೭೦
ಪರ್ವತಂ ! ತಳ್ಪಲದಕಿರ್ಪುದು ಮತಂಗಮುನಿ
ಕಾನನಂ. ರಂಜಿಸುವುದಡವಿಯಂಚಿಂದಲ್ಲಿ
ಪಂಪಾ ಸರೋವರಂ. ತುಂಗಭದ್ರೆಯ ಮೇಲೆ
ಬಳಿಯೊಳಿದೆ ಕಿಷ್ಕಿಂಧೆ, ವಾನರ ರಾಜಧಾನಿ.
ವಾಲಿಯದನಾಳ್ವನವನಿಂದೆ ನಿರಸನವೊಂದಿ
ನೆಲೆಗೆಟ್ಟ ಸುಗ್ರೀವನಿಹನೈ, ಗುಹಾವಾಸಿ
ತಾನಾಗಿ, ಗುರು ಮತಂಗನ ಶಾಪರಕ್ಷೆಯಾ
ವಾಲಿ ದುರ್ಗಮ ಋಶ್ಯಮೂಕದಲಿ. ಪೋಗಿ ನೀಂ
ಪಡೆಯವನ ಸಖ್ಯಮಂ. ದುಃಖಿಗೆ ನೆರಂ ದುಃಖಿ.
ಗೆಲ್ಗೆ ದೈವೇಚ್ಛೆ ; ನಿನ್ನಿಚ್ಛೆಯುಂ ಸಲ್ಗೆ !” ಕೇಳ್,  ೩೮೦
ನುಡಿ ನುಡಿಯುತತಿಹರ್ಷಮುಖಿಯಾಗಿ, ಸೌಮಿತ್ರಿ
ರಾಮರಂ ಸುಖಬಾಷ್ಪನೇತ್ರದಿಂ ನೋಡುತ್ತೆ
ನೋಡುತ್ತೆ, ಕಣ್ಮುಚ್ಚಿದಳ್ ಆ ಅಮರ ಸನ್ಮಾನ್ಯೆ,
ದೇವ ಸೀತಾನಾಥ ದಿವ್ಯಾಶ್ರು ತೀರ್ಥಜಲ
ಸಂಸ್ನಾತೆ, ಸಂಪೂತೆ, ಮೇಣ್ ಶಿವಕಳೇಬರೆ, ಧನ್ಯೆ !